ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರ ಸಮೃದ್ಧಿಯು ಕೊರತೆಯನ್ನು ನೀಗಿಸಿತು

ಅವರ ಸಮೃದ್ಧಿಯು ಕೊರತೆಯನ್ನು ನೀಗಿಸಿತು

ಅವರ ಸಮೃದ್ಧಿಯು ಕೊರತೆಯನ್ನು ನೀಗಿಸಿತು

“ಸಭೆಯ ಸ್ತಂಭಗಳಾಗಿ ಹೆಸರುಗೊಂಡಿದ್ದ” ಪೇತ್ರ, ಯಾಕೋಬ, ಯೋಹಾನರು ಕ್ರಿ.ಶ. 49ರಲ್ಲಿ ಅಪೊಸ್ತಲ ಪೌಲನಿಗೂ ಅವನ ಸಂಗಡಿಗ ಬಾರ್ನಬನಿಗೂ ಒಂದು ನೇಮಕವನ್ನು ಕೊಟ್ಟರು. ಅವರು ಅನ್ಯಜನಾಂಗದವರಿಗೆ ಸುವಾರ್ತೆ ಸಾರುವಾಗ ಬಡ ಕ್ರೈಸ್ತರನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಿತ್ತು. (ಗಲಾ. 2:​9, 10) ಈ ಜವಾಬ್ದಾರಿಯನ್ನು ಹೇಗೆ ಪೂರೈಸಿದರು?

ಇದಕ್ಕೆ ಪೌಲ ಎಷ್ಟೊಂದು ಗಮನ ಕೊಟ್ಟನೆಂದು ಅವನ ಪತ್ರಗಳು ಸ್ಪಷ್ಟಪಡಿಸುತ್ತವೆ. ಉದಾಹರಣೆಗೆ, ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಅವನು ಬರೆದದ್ದು: “ಪವಿತ್ರ ಜನರಿಗೋಸ್ಕರ ಹಣವನ್ನು ಸಂಗ್ರಹಿಸುವ ವಿಷಯದಲ್ಲಿ ನಾನು ಗಲಾತ್ಯದಲ್ಲಿರುವ ಸಭೆಗಳಿಗೆ ಸೂಚನೆಗಳನ್ನು ಕೊಟ್ಟಂತೆಯೇ ನೀವೂ ಮಾಡಿರಿ. ನಾನು ಬಂದಾಗ ಹಣವನ್ನು ಸಂಗ್ರಹಿಸುವ ಅಗತ್ಯ ಬೀಳದಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತಾನು ಏಳಿಗೆಹೊಂದುತ್ತಿರುವ ಮೇರೆಗೆ ಪ್ರತಿ ವಾರದ ಮೊದಲನೆಯ ದಿನದಲ್ಲಿ ಏನನ್ನಾದರೂ ತನ್ನ ಮನೆಯಲ್ಲಿ ತೆಗೆದಿಡಲಿ. ನಾನು ಅಲ್ಲಿಗೆ ಬಂದಾಗ ಪತ್ರಗಳ ಮೂಲಕ ನೀವು ಯಾರನ್ನು ಅನುಮೋದಿಸುತ್ತೀರೋ ಅವರನ್ನು ಯೆರೂಸಲೇಮಿಗೆ ನಿಮ್ಮ ದಯಾಭರಿತ ಕಾಣಿಕೆಯನ್ನು ಕೊಂಡೊಯ್ಯಲು ಕಳುಹಿಸುವೆನು.”​—⁠1 ಕೊರಿಂ. 16:​1-3.

ಪೌಲನು ಕೊರಿಂಥದವರಿಗೆ ಬರೆದ ಎರಡನೇ ಪತ್ರದಲ್ಲಿ ಹಣ ಸಂಗ್ರಹಣೆಯ ಉದ್ದೇಶವನ್ನು ಪುನಃ ಒಮ್ಮೆ ಹೀಗೆ ತಿಳಿಸಿದನು: “ಸಮಾನತೆಯ ಮೂಲಕ ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸಬಹುದು.”​—⁠2 ಕೊರಿಂ. 8:​12-15.

ಕ್ರಿ.ಶ. 56ರ ಸುಮಾರಿಗೆ ಪೌಲನು ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಪತ್ರ ಬರೆದಾಗ ಹಣ ಸಂಗ್ರಹದ ಕೆಲಸ ಹೆಚ್ಚುಕಡಿಮೆ ಮುಗಿದಿತ್ತು. ಪೌಲ ಅವರಿಗೆ “ನಾನು ಪವಿತ್ರ ಜನರಿಗೆ ಸೇವೆಮಾಡಲು ಯೆರೂಸಲೇಮಿಗೆ ಪ್ರಯಾಣಿಸಲಿದ್ದೇನೆ. ಏಕೆಂದರೆ ಮಕೆದೋನ್ಯ ಮತ್ತು ಅಖಾಯದಲ್ಲಿರುವವರು ಕಾಣಿಕೆಯನ್ನು ಕೊಡುವ ಮೂಲಕ ತಮ್ಮಲ್ಲಿರುವುದನ್ನು ಯೆರೂಸಲೇಮಿನಲ್ಲಿರುವ ಪವಿತ್ರ ಜನರೊಳಗಿನ ಬಡವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ” ಎಂದನು. (ರೋಮ. 15:​25, 26) ಸ್ವಲ್ಪದರಲ್ಲೇ, ತನಗೆ ನೇಮಿಸಲಾಗಿದ್ದ ಈ ಕೆಲಸವನ್ನು ಪೌಲ ಪೂರೈಸಿದನು. ಯೆರೂಸಲೇಮಿನಲ್ಲಿದ್ದಾಗ ಬಂಧಿತನಾದ ಅವನು ರೋಮನ್‌ ರಾಜ್ಯಪಾಲ ಫೇಲಿಕ್ಸನಿಗೆ ಹೇಳಿದ ಮಾತಿನಿಂದ ಅದು ವ್ಯಕ್ತವಾಗುತ್ತದೆ. “ನಾನು ನನ್ನ ಸ್ವದೇಶದವರಿಗೆ ದಾನಧರ್ಮಗಳನ್ನು ತರಲಿಕ್ಕಾಗಿ ಮತ್ತು ದೇವರಿಗೆ ಅರ್ಪಣೆಗಳನ್ನು ಮಾಡುವುದಕ್ಕಾಗಿ ಬಂದೆ” ಎಂದ ಪೌಲ.​—⁠ಅ. ಕಾ. 24:⁠17.

ಪ್ರಥಮ ಶತಮಾನದ ಕ್ರೈಸ್ತರಲ್ಲಿ ಎಂಥ ಮನೋಭಾವವಿತ್ತೆಂದು ಮಕೆದೋನ್ಯದವರ ಬಗ್ಗೆ ಪೌಲನು ಹೇಳಿದ ಮಾತುಗಳಿಂದ ಗೊತ್ತಾಗುತ್ತದೆ. “ದಯೆಯಿಂದ ಕೊಡುವ ಸುಯೋಗಕ್ಕಾಗಿ . . . ಅವರು ಸ್ವಂತ ಇಚ್ಛೆಯಿಂದ ನಮ್ಮನ್ನು ಬಹಳವಾಗಿ ಬೇಡಿಕೊಳ್ಳುತ್ತಾ ಇದ್ದರು” ಎಂದು ಅವನು ಹೇಳಿದನು. ಇವರ ಮಾದರಿಯನ್ನು ಅನುಕರಿಸುವಂತೆ ಕೊರಿಂಥದವರನ್ನು ಪ್ರೋತ್ಸಾಹಿಸುತ್ತಾ ಪೌಲ ಹೀಗಂದನು: “ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.” ಉದಾರ ಮನಸ್ಸಿನವರಾಗಿರುವಂತೆ ಆ ಕ್ರೈಸ್ತರನ್ನು ಪ್ರಚೋದಿಸಿದ್ದು ಯಾವುದು? ‘ಪವಿತ್ರ ಜನರ ಅಗತ್ಯಗಳನ್ನು ಹೇರಳವಾಗಿ ಪೂರೈಸುವುದೊಂದೇ’ ಅವರ ಉದ್ದೇಶವಾಗಿರಲಿಲ್ಲ. ‘ದೇವರಿಗೆ ಕೃತಜ್ಞತಾಸ್ತುತಿಯ ಅನೇಕ ಅಭಿವ್ಯಕ್ತಿಗಳನ್ನು ಉಂಟುಮಾಡುವ’ ಉತ್ಕಟ ಇಚ್ಛೆಯೇ ಅವರನ್ನು ಪ್ರಚೋದಿಸಿತು. (2 ಕೊರಿಂ. 8:4; 9:​7, 12) ನಾವು ಉದಾರಭಾವದಿಂದ ಕೊಡುವ ಕಾಣಿಕೆಯ ಉದ್ದೇಶ ಕೂಡ ಅದೇ ಆಗಿರಬೇಕು. ಅಂಥ ಉತ್ತಮ ಹಾಗೂ ನಿಸ್ವಾರ್ಥ ಮನೋಭಾವವನ್ನು ಯೆಹೋವನು ಖಂಡಿತ ಆಶೀರ್ವದಿಸುತ್ತಾನೆ. ಆತನ ಆಶೀರ್ವಾದವು ಸಮೃದ್ಧಿಯನ್ನು ತರುತ್ತದೆ.​—⁠ಜ್ಞಾನೋ. 10:⁠22.

[ಪುಟ 9ರಲ್ಲಿರುವ ಚೌಕ]

ಲೋಕವ್ಯಾಪಕ ಕೆಲಸಕ್ಕಾಗಿ ದಾನಕೊಡುವ ಕೆಲವು ವಿಧಗಳು

ಅಪೊಸ್ತಲ ಪೌಲನ ದಿನಗಳಲ್ಲಿ ಮಾಡಿದಂತೆಯೇ ಇಂದು ಅನೇಕರು ಇಂತಿಷ್ಟು ಹಣವನ್ನು ‘ತೆಗೆದಿಟ್ಟು’ ಅದನ್ನು ಸಭೆಯಲ್ಲಿ “ಲೋಕವ್ಯಾಪಕ ಕೆಲಸ” ಎಂಬ ಗುರುತಿರುವ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುತ್ತಾರೆ. (1ಕೊರಿಂ. 16:⁠2) ಆ ಹಣವನ್ನು ಸಭೆಗಳು ಪ್ರತಿ ತಿಂಗಳು ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಕಳುಹಿಸುತ್ತವೆ. ನೀವು ಬಯಸುವಲ್ಲಿ ಕಾಣಿಕೆಯಾಗಿ ಕೊಡಲಿಚ್ಛಿಸುವ ಹಣವನ್ನು ನೇರವಾಗಿ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳು ಉಪಯೋಗಿಸುವ ಒಂದು ಶಾಸನಬದ್ಧ ಅಸ್ತಿತ್ವಕ್ಕೆ (Legal Entity) ಸಹ ಕಳುಹಿಸಬಹುದು. * ನೀವು ನೇರವಾಗಿ ದಾನ ಕೊಡಬಹುದಾದ ಕೆಲವು ವಿಧಗಳು:

ನೇರವಾಗಿ ಕೊಡಬಹುದಾದ ದಾನಗಳು

• ನಗದು ಹಣ, ಆಭರಣ ಅಥವಾ ಇತರ ಬೆಲೆಬಾಳುವ ಸ್ವತ್ತನ್ನು ದಾನವಾಗಿ ನೀಡಬಹುದು.

• ಈ ರೀತಿ ದಾನ ನೀಡುವಾಗ, ಇದು ನೇರವಾಗಿ ಕೊಡುತ್ತಿರುವ ದಾನವೆಂದು ಸೂಚಿಸುವ ಒಂದು ಪತ್ರವನ್ನು ಜೊತೆಗೆ ಕಳುಹಿಸಿ.

ಷರತ್ತುಬದ್ಧ ದಾನ

• ದಾನಿಯು ಒಂದು ಷರತ್ತಿನ ಮೇರೆಗೆ ಹಣವನ್ನು ಕಾಣಿಕೆಯಾಗಿ ಕೊಡಬಹುದು. ಆ ಷರತ್ತು ಏನೆಂದರೆ ತನಗೆ ಅಗತ್ಯವಿದ್ದಾಗ ದಾನಿಯು ಆ ಹಣವನ್ನು ಹಿಂದೆ ಪಡೆಯುವುದೇ.

• ಈ ರೀತಿ ದಾನ ನೀಡುವಾಗ, ಇದು ಷರತ್ತುಬದ್ಧ ದಾನವೆಂದು ಸೂಚಿಸುವ ಒಂದು ಪತ್ರವನ್ನು ಜೊತೆಗೆ ಕಳುಹಿಸಿ.

ಚ್ಯಾರಿಟಬಲ್‌ ಯೋಜನೆ *

ಹಣ ಮತ್ತು ಬೆಲೆಬಾಳುವ ಸ್ವತ್ತುಗಳ ದಾನವಲ್ಲದೆ ಲೋಕವ್ಯಾಪಕ ರಾಜ್ಯ ಚಟುವಟಿಕೆಗೆ ಸಹಾಯಮಾಡಲು ಬೇರೆ ವಿಧಗಳಲ್ಲೂ ದಾನ ಕೊಡಬಹುದು. ಅವುಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ. ನೀವು ಯಾವುದೇ ವಿಧದಲ್ಲಿ ದಾನಕೊಡಲು ಇಚ್ಛಿಸುವಲ್ಲಿ ಸ್ಥಳೀಯ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ ಯಾವ ವಿಧಗಳು ನಮ್ಮ ದೇಶದಲ್ಲಿ ಲಭ್ಯ ಇವೆಯೆಂದು ತಿಳಿದುಕೊಳ್ಳಿ. ಆಯಾ ದೇಶದಲ್ಲಿ ಕಾನೂನು ಮತ್ತು ತೆರಿಗೆ ನಿಯಮಗಳು ಬೇರೆ ಬೇರೆಯಾಗಿರುವುದರಿಂದ ಯಾವುದೇ ವಿಧದಲ್ಲಿ ದಾನ ಮಾಡುವ ಮೊದಲು ತೆರಿಗೆ ಮತ್ತು ಕಾನೂನು ಸಲಹೆಗಾರರನ್ನು ಸಂಪರ್ಕಿಸುವುದು ಬಹು ಮುಖ್ಯ.

ವಿಮೆ: ಯೆಹೋವನ ಸಾಕ್ಷಿಗಳು ಉಪಯೋಗಿಸುವ ಒಂದು ಶಾಸನಬದ್ಧ ಅಸ್ತಿತ್ವವನ್ನು ಜೀವ ವಿಮಾ ಪಾಲಿಸಿಯ ಅಥವಾ ನಿವೃತ್ತಿ/ಪಿಂಚಣಿ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.

ಬ್ಯಾಂಕ್‌ ಖಾತೆಗಳು: ದಾನಿಯು ಬ್ಯಾಂಕ್‌ ಖಾತೆ, ಡಿಪಾಸಿಟ್‌ ಸರ್ಟಿಫಿಕೇಟ್‌ ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳೀಯ ಬ್ಯಾಂಕ್‌ ನಿಯಮಗಳಿಗೆ ಹೊಂದಿಕೆಯಲ್ಲಿ ಯೆಹೋವನ ಸಾಕ್ಷಿಗಳು ಉಪಯೋಗಿಸುವ ಒಂದು ಶಾಸನಬದ್ಧ ಅಸ್ತಿತ್ವಕ್ಕೆ ವರ್ಗಾಯಿಸಬಹುದು ಅಥವಾ ತನ್ನ ಮರಣಾನಂತರ ಅವು ಅದಕ್ಕೆ ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ ಮತ್ತು ಬಾಂಡ್‌ಗಳನ್ನು ಯೆಹೋವನ ಸಾಕ್ಷಿಗಳು ಉಪಯೋಗಿಸುವ ಒಂದು ಶಾಸನಬದ್ಧ ಅಸ್ತಿತ್ವಕ್ಕೆ ನೇರವಾದ ಕೊಡುಗೆಯಾಗಿ ದಾನಮಾಡಬಹುದು. ಅಥವಾ ಮರಣಾನಂತರ ಅದಕ್ಕೆ ಸಲ್ಲುವಂತೆ ಶಾಸನಬದ್ಧ ಉಯಿಲಿನಲ್ಲಿ ಫಲಾನುಭವಿಯಾಗಿ ಹೆಸರಿಸಬಹುದು.

ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ಯೆಹೋವನ ಸಾಕ್ಷಿಗಳು ಉಪಯೋಗಿಸುವ ಒಂದು ಶಾಸನಬದ್ಧ ಅಸ್ತಿತ್ವಕ್ಕೆ ನೇರವಾದ ಕೊಡುಗೆಯಾಗಿ ದಾನಮಾಡಬಹುದು. ವಾಸದ ಮನೆಯಾಗಿರುವಲ್ಲಿ ದಾನಿ ಜೀವದಿಂದಿರುವ ವರೆಗೆ ಅದರಲ್ಲಿ ವಾಸಿಸುವ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ದಾನಮಾಡಬಹುದು.

ವರ್ಷಾಶನ ದಾನ: ವರ್ಷಾಶನ ದಾನ ಎಂದರೆ ಒಬ್ಬನು ತನ್ನಲ್ಲಿರುವ ಹಣವನ್ನು ಅಥವಾ ಬಂಡವಾಳ ಪತ್ರಗಳನ್ನು ಯೆಹೋವನ ಸಾಕ್ಷಿಗಳು ಉಪಯೋಗಿಸುವ ಒಂದು ಶಾಸನಬದ್ಧ ಅಸ್ತಿತ್ವಕ್ಕೆ ವರ್ಗಾಯಿಸುವ ಏರ್ಪಾಡಾಗಿದೆ. ಈ ಏರ್ಪಾಡಿನ ಕೆಳಗೆ ದಾನಿ ಅಥವಾ ಅವನು ಸೂಚಿಸಿರುವ ವ್ಯಕ್ತಿ ತನ್ನ ಜೀವಮಾನವಿಡೀ ಪ್ರತಿ ವರ್ಷ ನಿರ್ದಿಷ್ಟ ಮೊತ್ತದ ಹಣವನ್ನು ಪಡೆಯುತ್ತಾನೆ. ವರ್ಷಾಶನ ದಾನ ಏರ್ಪಡಿಸಿದ ವರ್ಷದಲ್ಲಿ ದಾನಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗುತ್ತದೆ.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ಯೆಹೋವನ ಸಾಕ್ಷಿಗಳು ಉಪಯೋಗಿಸುವ ಒಂದು ಶಾಸನಬದ್ಧ ಅಸ್ತಿತ್ವಕ್ಕೆ ಕಾನೂನುಬದ್ಧವಾಗಿ ಉಯಿಲು ಬರೆಯಬಹುದು. ಅಥವಾ ಯೆಹೋವನ ಸಾಕ್ಷಿಗಳು ಉಪಯೋಗಿಸುವ ಶಾಸನಬದ್ಧ ಅಸ್ತಿತ್ವವನ್ನು ಒಂದು ಟ್ರಸ್ಟ್‌ ಅಗ್ರೀಮಂಟ್‌ನ ಫಲಾನುಭವಿಯಾಗಿ ಹೆಸರಿಸಬಹುದು. ಈ ಏರ್ಪಾಡಿನಲ್ಲಿ ಕೆಲವೊಂದು ತೆರಿಗೆ ವಿನಾಯಿತಿ ಸಿಗಬಹುದು.

“ಚ್ಯಾರಿಟಬಲ್‌ ಯೋಜನೆ” ಎಂಬ ಪದ ಸೂಚಿಸುವಂತೆ, ಈ ರೀತಿಯ ದಾನವನ್ನು ಕೊಡುವಾಗ ಸ್ವಲ್ಪ ಯೋಜನೆ ಮಾಡಬೇಕಾಗುತ್ತದೆ. ಚ್ಯಾರಿಟಬಲ್‌ ಯೋಜನೆಯ ಮೂಲಕ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕೆ ದಾನ ಕೊಡಲಿಚ್ಛಿಸುವ ವ್ಯಕ್ತಿಗಳಿಗೆ ನೆರವಾಗುವಂತೆ, “ಲೋಕವ್ಯಾಪಕ ರಾಜ್ಯ ಸೇವೆಯನ್ನು ಬೆಂಬಲಿಸಲು ಚ್ಯಾರಿಟಬಲ್‌ ಯೋಜನೆ” ಎಂಬ ಬ್ರೋಷರನ್ನು ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ರಚಿಸಲಾಗಿದೆ. * ಈ ಬ್ರೋಷರಿನಲ್ಲಿ, ಯಾವೆಲ್ಲ ರೀತಿಯಲ್ಲಿ ಈಗ ಅಥವಾ ಅಂತಿಮ ಉಯಿಲಿನ ಮೂಲಕ ದಾನಗಳನ್ನು ನೀಡಬಹುದು ಎಂಬ ಮಾಹಿತಿ ಇದೆ. ಈ ಬ್ರೋಷರಿನಲ್ಲಿ ನೀಡಲಾಗಿರುವ ಎಲ್ಲ ಮಾಹಿತಿ ನಿಮಗೆ ಅನ್ವಯಿಸಲಿಕ್ಕಿಲ್ಲ. ಏಕೆಂದರೆ ನಿಮ್ಮ ದೇಶದ ತೆರಿಗೆ ಅಥವಾ ಕಾನೂನು ನಿಯಮಗಳು ಬೇರೆ ಇರಬಹುದು. ಆದ್ದರಿಂದ ನೀವು ಈ ಬ್ರೋಷರನ್ನು ಓದಿದ ಮೇಲೆ ನಿಮ್ಮ ಕಾನೂನು ಅಥವಾ ತೆರಿಗೆ ಸಲಹೆಗಾರರೊಂದಿಗೆ ಚರ್ಚಿಸಿರಿ. ಅನೇಕರು ಈ ರೀತಿಯಲ್ಲಿ ನಮ್ಮ ಲೋಕವ್ಯಾಪಕ ಧಾರ್ಮಿಕ ಹಾಗೂ ಮಾನವೋಪಕಾರಿ ಚಟುವಟಿಕೆಗಳಿಗೆ ಸಹಾಯ ನೀಡಿದ್ದಾರೆ ಮತ್ತು ತೆರಿಗೆ ವಿನಾಯಿತಿ ಪಡೆದುಕೊಂಡಿದ್ದಾರೆ. ಈ ಬ್ರೋಷರ್‌ ನಿಮ್ಮ ದೇಶದಲ್ಲಿ ಲಭ್ಯವಿರುವಲ್ಲಿ ಅದನ್ನು ಸಭಾ ಸೆಕ್ರಿಟರಿಯ ಬಳಿ ಕೇಳಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ, ಕೆಳಗೆ ನೀಡಲಾಗಿರುವ ವಿಳಾಸದಲ್ಲಿ ಯೆಹೋವನ ಸಾಕ್ಷಿಗಳಿಗೆ ಪತ್ರ ಬರೆಯಿರಿ ಅಥವಾ ಫೋನ್‌ ಮೂಲಕ ಸಂಪರ್ಕಿಸಿ. ಅಥವಾ ನಿಮ್ಮ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ.

[ಪಾದಟಿಪ್ಪಣಿಗಳು]

^ ಪ್ಯಾರ. 9 ಭಾರತದಲ್ಲಾದರೆ, “Jehovah’s Witnesses of India”ಗೆ ಸಂದಾಯವಾಗಬೇಕೆಂದು ನಮೂದಿಸಿ.

^ ಪ್ಯಾರ. 16 ಅಂತಿಮ ನಿರ್ಣಯ ಮಾಡುವ ಮುಂಚೆ ದಯವಿಟ್ಟು ಸ್ಥಳೀಯ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ.

^ ಪ್ಯಾರ. 24 “ಚ್ಯಾರಿಟಬಲ್‌ ಪ್ಲಾನಿಂಗ್‌ ಲೀಫ್‌ಲೆಟ್‌” ಭಾರತದಲ್ಲಿ ಶೀಘ್ರದಲ್ಲೇ ಅಸ್ಸಾಮಿ, ಇಂಗ್ಲಿಷ್‌, ಕನ್ನಡ, ಕೊಂಕಣಿ, ಗುಜರಾತಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಳಿ, ಮರಾಠಿ, ಮಲೆಯಾಳಂ, ಮೀಸೊ, ಹಿಂದಿ ಭಾಷೆಗಳಲ್ಲಿ ಲಭ್ಯವಾಗಲಿದೆ.

Jehovah’s Witnesses of India

Post Box 6440,

Yelahanka,

Bangalore 560 064

Karnataka.

Telephone: (080) 28468072