ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ತಾತ್ಕಾಲಿಕ ನಿವಾಸಿಗಳು” ಸತ್ಯಾರಾಧನೆಯಲ್ಲಿ ಐಕ್ಯರು

“ತಾತ್ಕಾಲಿಕ ನಿವಾಸಿಗಳು” ಸತ್ಯಾರಾಧನೆಯಲ್ಲಿ ಐಕ್ಯರು

“ತಾತ್ಕಾಲಿಕ ನಿವಾಸಿಗಳು” ಸತ್ಯಾರಾಧನೆಯಲ್ಲಿ ಐಕ್ಯರು

“ವಿದೇಶೀಯರು ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು, ಅನ್ಯರು ನಿಮಗೆ ಉಳುವವರೂ ತೋಟಗಾರರೂ ಆಗುವರು. ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ.” —ಯೆಶಾ. 61:5, 6.

ನಿಮ್ಮ ಉತ್ತರವೇನು?

ವಿದೇಶೀಯರ ಬಗ್ಗೆ ಕೆಲವರ ಅಭಿಪ್ರಾಯವೇನು? ಆದರೆ ಬೈಬಲ್‌ ಏನನ್ನು ಬೋಧಿಸುತ್ತದೆ?

ಎಲ್ಲ ಜನಾಂಗದವರಿಗೆ ಯಾವ ಆಮಂತ್ರಣವಿದೆ?

ಯಾವ ಅರ್ಥದಲ್ಲಿ ಈಗಾಗಲೇ ಯೆಹೋವನ ಸಾಕ್ಷಿಗಳ ಮಧ್ಯೆ ವಿದೇಶೀಯರೇ ಇಲ್ಲ ಎಂದು ಹೇಳಬಹುದು?

1. (1) ವಿದೇಶೀಯರ ಬಗ್ಗೆ ಕೆಲವರ ಅಭಿಪ್ರಾಯ ಏನು? (2) ಇದು ಸರಿಯಲ್ಲ ಏಕೆ?

ಹಿಂದಿನ ಲೇಖನದಲ್ಲಿ ತಿಳಿಸಲಾದಂತೆ ಕೆಲವರು ವಿದೇಶೀಯರನ್ನು ತುಂಬ ಕೀಳಾಗಿ, ತುಚ್ಛವಾಗಿ ನೋಡುತ್ತಾರೆ. ಅವರೊಟ್ಟಿಗೆ ಚೆನ್ನಾಗಿ ವ್ಯವಹರಿಸುವುದಿಲ್ಲ. ಆದರೆ ಇತರ ದೇಶದವರು ತಮ್ಮ ದೇಶದವರಿಗಿಂತ ಕೀಳಾದವರು ಅನ್ನೋ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ. ಎಲ್ಲರಲ್ಲೂ ಉತ್ತಮ ಅಂಶಗಳು ಇದ್ದೇ ಇರುತ್ತವೆ. ಮಾನವಕುಲದ ಜಾತಿಗಳು (ಇಂಗ್ಲಿಷ್‌) ಎಂಬ ಕಿರುಪುಸ್ತಿಕೆ ಇದರ ಕುರಿತು ಬರೆದದ್ದು: “ಮಾನವಕುಲದ ಎಲ್ಲ ಜಾತಿಗಳವರು ಬೈಬಲ್‌ ಹೇಳುವಂತೆ ಸಹೋದರರು.” ಸಾಮಾನ್ಯವಾಗಿ ಸಹೋದರರ ರೂಪ, ವ್ಯಕ್ತಿತ್ವ ಬೇರೆಬೇರೆ ರೀತಿ ಇರುತ್ತದೆ. ಆದರೂ ಅವರು ಸಹೋದರರೇ.

2, 3. ಪ್ರಾಚೀನ ಇಸ್ರಾಯೇಲಿನಲ್ಲಿದ್ದ ವಿದೇಶೀಯರನ್ನು ಯೆಹೋವನು ಹೇಗೆ ವೀಕ್ಷಿಸಿದನು?

2 ಎಲ್ಲಾ ಕಡೆ ವಿದೇಶೀಯರು ಇದ್ದೇ ಇರುತ್ತಾರೆ. ಪ್ರಾಚೀನ ಇಸ್ರಾಯೇಲ್ಯರ ಕಾಲದಲ್ಲೂ ಹೀಗೆ ಇತ್ತು. ನಿಯಮದ ಒಡಂಬಡಿಕೆಯ ಕಾರಣ ಇಸ್ರಾಯೇಲ್ಯರಿಗೆ ಯೆಹೋವ ದೇವರೊಂದಿಗೆ ಒಂದು ವಿಶೇಷ ಸಂಬಂಧವಿತ್ತು. ಇಸ್ರಾಯೇಲ್ಯರಿಗೆ ಇದ್ದಷ್ಟು ಹಕ್ಕುಗಳು ಇಸ್ರಾಯೇಲ್ಯರಲ್ಲದವರಿಗೆ ಇರಲಿಲ್ಲ. ಹಾಗಿದ್ದರೂ ಅವರೊಂದಿಗೆ ಇಸ್ರಾಯೇಲ್ಯರು ಗೌರವದಿಂದ ನಿಷ್ಪಕ್ಷಪಾತದಿಂದ ವ್ಯವಹರಿಸಬೇಕಿತ್ತು. ನಮ್ಮೆಲ್ಲರಿಗೆ ಎಂಥ ಒಳ್ಳೇ ಮಾದರಿ! ಸತ್ಯ ಕ್ರೈಸ್ತರಲ್ಲೂ ಪಕ್ಷಪಾತ ಪೂರ್ವಾಗ್ರಹಕ್ಕೆ ಆಸ್ಪದವಿಲ್ಲ. ಯಾಕೆ? ಅಪೊಸ್ತಲ ಪೇತ್ರನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ ಎಂಬುದು ನನಗೆ ನಿಶ್ಚಯವಾಗಿ ತಿಳಿದದೆ. ಆದರೆ ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.”—ಅ. ಕಾ. 10:34, 35.

3 ಪ್ರಾಚೀನ ಇಸ್ರಾಯೇಲಿನಲ್ಲಿ ವಾಸಿಸುತ್ತಿದ್ದ ವಿದೇಶೀಯರಿಗೆ ಪ್ರಯೋಜನವಿತ್ತು. ಹೇಗೆ? ಯೆಹೋವನು ಅವರನ್ನು ಸ್ವೀಕರಿಸಿದನು. ತುಂಬ ವರ್ಷಗಳ ಬಳಿಕ ಯೆಹೋವ ದೇವರ ಬಗ್ಗೆ ಪೌಲನು ಹೇಳಿದ್ದು: “ಆತನು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೊ? ಆತನು ಅನ್ಯಜನಾಂಗಗಳವರಿಗೂ ದೇವರಾಗಿಲ್ಲವೆ? ಹೌದು, ಅನ್ಯಜನಾಂಗಗಳವರಿಗೂ ಆತನು ದೇವರಾಗಿದ್ದಾನೆ.”—ರೋಮ. 3:29; ಯೋವೇ. 2:32.

 4. ‘ದೇವರ ಇಸ್ರಾಯೇಲ್‌ನಲ್ಲಿ’ ಪರದೇಶೀಯರು ಇಲ್ಲ ಅಂತ ಹೇಗೆ ಹೇಳಬಹುದು?

4 ಯೆಹೋವ ದೇವರು ಅಭಿಷಿಕ್ತ ಕ್ರೈಸ್ತ ಸಭೆಯೊಂದಿಗೆ ಹೊಸ ಒಡಂಬಡಿಕೆ ಮಾಡಿದ ನಂತರ ಪ್ರಾಚೀನ ಇಸ್ರಾಯೇಲ್‌ ಜನಾಂಗಕ್ಕೆ ದೇವರೊಂದಿಗೆ ವಿಶೇಷ ಸಂಬಂಧ ಇರಲಿಲ್ಲ. ಅಂದಿನಿಂದ ಅಭಿಷಿಕ್ತ ಕ್ರೈಸ್ತರ ಸಭೆಯನ್ನು ‘ದೇವರ ಇಸ್ರಾಯೇಲ್‌’ ಎಂದು ಕರೆಯಲಾಯಿತು. (ಗಲಾ. 6:16) ಪೌಲ ಈ ಹೊಸ ಜನಾಂಗದ ಕುರಿತು ವಿವರಿಸಿದ್ದು: “ಇದರಲ್ಲಿ ಗ್ರೀಕನು ಯೆಹೂದ್ಯನು, ಸುನ್ನತಿಯಾದವನು ಸುನ್ನತಿಯಿಲ್ಲದವನು, ಪರದೇಶೀಯನು, ಅನಾಗರಿಕನು, ದಾಸನು, ಸ್ವತಂತ್ರನು ಎಂಬ ಭೇದವಿಲ್ಲ; ಆದರೆ ಕ್ರಿಸ್ತನು ಎಲ್ಲದರಲ್ಲಿಯೂ ಎಲ್ಲವೂ ಆಗಿದ್ದಾನೆ.” (ಕೊಲೊ. 3:11) ಹಾಗಾಗಿ ಕ್ರೈಸ್ತ ಸಭೆಯಲ್ಲಿ ಯಾರನ್ನೂ ವಿದೇಶೀಯರು ಅಥವಾ ಪರದೇಶೀಯರು ಅಂತ ಪರಿಗಣಿಸಲಾಗುವುದಿಲ್ಲ.

5, 6. (1) ಯೆಶಾಯ 61:5, 6ರ ಕುರಿತು ಯಾವ ಪ್ರಶ್ನೆ ಏಳುತ್ತದೆ? (2) ಯೆಶಾಯನು ತಿಳಿಸಿರುವ ‘ಯೆಹೋವನ ಯಾಜಕರು’ ಮತ್ತು “ವಿದೇಶೀಯರು” ಯಾರು? (3) ಆ ಎರಡು ಗುಂಪಿನವರು ಯಾವ ಕೆಲಸದಲ್ಲಿ ಪಾಲ್ಗೊಳ್ಳುತ್ತಾರೆ?

5 ಕೆಲವರು ಯೆಶಾಯ 61ನೇ ಅಧ್ಯಾಯಕ್ಕೆ ಬೊಟ್ಟು ಮಾಡಿ ಅದರಲ್ಲಿ ಕ್ರೈಸ್ತ ಸಭೆಯ ಬಗ್ಗೆ ಇರುವ ಪ್ರವಾದನೆ ಕುರಿತು ಪ್ರಶ್ನೆ ಎಬ್ಬಿಸಬಹುದು. ವಚನ 6ರಲ್ಲಿ “ಯೆಹೋವನ ಯಾಜಕ”ರಾಗಿ ಸೇವೆ ಸಲ್ಲಿಸುವವರ ಬಗ್ಗೆ ಹೇಳಲಾಗಿದೆ. ಆದರೆ ವಚನ 5ರಲ್ಲಿ “ವಿದೇಶೀಯರು” ಆ “ಯಾಜಕ”ರೊಂದಿಗೆ ಸಹಕರಿಸುವರು, ಕೆಲಸಮಾಡುವರು ಎಂದು ಹೇಳಿದೆ. ಇದರ ಅರ್ಥ ಏನು?

6 “ಯೆಹೋವನ ಯಾಜಕ”ರು ಯಾರೆಂದರೆ “ಮೊದಲನೆಯ ಪುನರುತ್ಥಾನ” ಹೊಂದಿ ‘ದೇವರ ಮತ್ತು ಕ್ರಿಸ್ತನ ಯಾಜಕರಾಗಿ ಸಾವಿರ ವರ್ಷ ರಾಜರಾಗಿ’ ಆಳುವ ಅಭಿಷಿಕ್ತ ಕ್ರೈಸ್ತರು. (ಪ್ರಕ. 20:6) ವಿದೇಶೀಯರೆಂದರೆ ಇದೇ ಭೂಮಿಯಲ್ಲಿ ಸದಾಕಾಲ ಬದುಕುವ ನಿರೀಕ್ಷೆಯುಳ್ಳ ನಿಷ್ಠಾವಂತ ಕ್ರೈಸ್ತರು. ಇವರು ಸ್ವರ್ಗದಿಂದ ಆಳಲಿರುವವರೊಂದಿಗೆ ಆಪ್ತ ಸಹಾಯಕರಾಗಿ ಸಂಗಡಿಗರಾಗಿ ಕೆಲಸ ಮಾಡುತ್ತಾರಾದರೂ ‘ದೇವರ ಇಸ್ರಾಯೇಲಿನ’ ಭಾಗವಾಗಿಲ್ಲದ ಕಾರಣ ಸಾಂಕೇತಿಕ ಅರ್ಥದಲ್ಲಿ ವಿದೇಶೀಯರು. ಇವರು ಸಂತೋಷದಿಂದ “ಯೆಹೋವನ ಯಾಜಕ”ರಿಗೆ ಸಹಾಯಹಸ್ತ ಚಾಚುತ್ತಾ ಕೊಯ್ಲಿನ ಕೆಲಸದಲ್ಲಿ “ಉಳುವವರೂ ತೋಟಗಾರರೂ” ಆಗಿ ಕೆಲಸ ಮಾಡುತ್ತಾರೆ. ಜನರಿಗೆ ಸತ್ಯವನ್ನು ತಿಳಿಸುತ್ತಾ ಬೋಧಿಸುತ್ತಾ ದೇವರಿಗೆ ಮಹಿಮೆ ತರಲು ಅಭಿಷಿಕ್ತರೊಂದಿಗೆ ಜೊತೆಗೂಡುತ್ತಾರೆ. ಅಭಿಷಿಕ್ತರು ಮತ್ತು “ಬೇರೆ ಕುರಿಗಳು” ದೇವರನ್ನು ಸದಾಕಾಲಕ್ಕೂ ಆರಾಧಿಸಲು ಬಯಸುವವರನ್ನು ಹುಡುಕಿ ಕಾಳಜಿಯಿಂದ ಅವರ ಪಾಲನೆ ಮಾಡುತ್ತಾರೆ.—ಯೋಹಾ. 10:16.

ಅಬ್ರಹಾಮನಂತೆ “ತಾತ್ಕಾಲಿಕ ನಿವಾಸಿಗಳು”

7. ಇಂದಿನ ಕ್ರೈಸ್ತರು ಹೇಗೆ ಅಬ್ರಹಾಮ ಮತ್ತು ಪ್ರಾಚೀನ ಕಾಲದ ಇತರ ನಂಬಿಗಸ್ತ ದೇವಭಕ್ತರಂತಿದ್ದಾರೆ?

7 ಹಿಂದಿನ ಲೇಖನದಲ್ಲಿ ಕಲಿತಂತೆ ಸತ್ಯ ಕ್ರೈಸ್ತರು ಸೈತಾನನ ಈ ದುಷ್ಟ ಲೋಕದಲ್ಲಿ ವಿದೇಶೀಯರು ಅಥವಾ ತಾತ್ಕಾಲಿಕ ನಿವಾಸಿಗಳಂತಿದ್ದಾರೆ. ಅಬ್ರಹಾಮ ಹಾಗೂ ಪ್ರಾಚೀನ ಕಾಲದ ಇತರ ನಂಬಿಗಸ್ತ ಭಕ್ತರೂ ಅದೇ ರೀತಿ ಇದ್ದರು. ಅವರನ್ನೂ “ಅಪರಿಚಿತರೂ ತಾತ್ಕಾಲಿಕ ನಿವಾಸಿಗಳೂ” ಎಂದು ಕರೆಯಲಾಯಿತು. (ಇಬ್ರಿ. 11:13) ನಮ್ಮ ನಿರೀಕ್ಷೆ ಏನೇ ಇರಲಿ, ಅಬ್ರಹಾಮನಂತೆ ನಾವೂ ಯೆಹೋವನೊಂದಿಗೆ ಆಪ್ತ ಸಂಬಂಧ ಹೊಂದುವ ಸದವಕಾಶವಿದೆ. ಯಾಕೋಬನು ಬರೆದದ್ದು: “ಅಬ್ರಹಾಮನು ಯೆಹೋವನಲ್ಲಿ ನಂಬಿಕೆಯನ್ನಿಟ್ಟನು ಮತ್ತು ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು . . . ಮತ್ತು ಅವನು ‘ಯೆಹೋವನ ಸ್ನೇಹಿತನು’ ಎಂದು ಕರೆಯಲ್ಪಟ್ಟನು.”—ಯಾಕೋ. 2:23.

 8. (1) ಅಬ್ರಹಾಮನಿಗೆ ದೇವರು ಏನಂತ ಮಾತು ಕೊಟ್ಟನು? (2) ಅದರ ನೆರವೇರಿಕೆ ಬಗ್ಗೆ ಅಬ್ರಹಾಮನ ಮನೋಭಾವ ಹೇಗಿತ್ತು?

8 ಅಬ್ರಹಾಮ ಮತ್ತವನ ಸಂತತಿಯಿಂದ ಕೇವಲ ಒಂದು ಜನಾಂಗವಲ್ಲ, ಎಲ್ಲಾ ಜನಾಂಗಗಳು ಆಶೀರ್ವಾದ ಪಡೆಯುವವೆಂದು ದೇವರು ಮಾತು ಕೊಟ್ಟನು. (ಆದಿಕಾಂಡ 22:15-18 ಓದಿ.) ಈ ಮಾತು ಭವಿಷ್ಯದಲ್ಲಿ ನೆರವೇರಲಿದ್ದರೂ ಅದರ ನೆರವೇರಿಕೆಯ ವಿಷಯದಲ್ಲಿ ಅಬ್ರಹಾಮನಿಗೆ ಸ್ವಲ್ಪವೂ ಸಂಶಯವಿರಲಿಲ್ಲ. ಅಂಥ ಭರವಸೆ ಇದ್ದದ್ದರಿಂದಲೇ ದೇವರ ಮಾತಿಗೆ ವಿಧೇಯತೆ ತೋರಿಸುತ್ತ ಅವನೂ ಅವನ ಕುಟುಂಬವೂ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಯಿತು. ಇದರಲ್ಲಿ ಅವನ ಬದುಕಿನ ಅರ್ಧಕ್ಕಿಂತ ಹೆಚ್ಚು ಸಮಯ ಕಳೆಯಿತು. ಈ ಎಲ್ಲಾ ಸಮಯದಲ್ಲಿ ಆತನು ಯೆಹೋವನೊಂದಿಗಿನ ಸ್ನೇಹವನ್ನು ಕಾಪಾಡಿಕೊಂಡನು.

9, 10. (1) ಅಬ್ರಹಾಮನ ಮಾದರಿಯನ್ನು ನಾವು ಹೇಗೆ ಅನುಸರಿಸಬಲ್ಲೆವು? (2) ನಾವು ಇತರರಿಗೆ ಯಾವ ಆಮಂತ್ರಣ ನೀಡಬಹುದು?

9 ಅಬ್ರಹಾಮನಿಗೆ ತನ್ನ ನಿರೀಕ್ಷೆ ಕೈಗೂಡಲು ಎಷ್ಟು ಸಮಯ ಹಿಡಿಯಬಹುದೆಂದು ಗೊತ್ತಿರದಿದ್ದರೂ ಅವನಿಗೆ ದೇವರ ಮೇಲಿದ್ದ ಪ್ರೀತಿ ಭಕ್ತಿ ಸ್ವಲ್ಪವೂ ಕಡಿಮೆಯಾಗಲಿಲ್ಲ. ಅವನ ಮನಸ್ಸು ಸ್ವಲ್ಪವೂ ಅಪಕರ್ಷಿತವಾಗಲಿಲ್ಲ. ಕಾಯಂ ಆಗಿ ಒಂದೇ ಕಡೆ ನೆಲೆಸಬೇಕೆಂಬ ಯೋಚನೆ ಸಹ ಅವನಿಗೆ ಬರಲಿಲ್ಲ. (ಇಬ್ರಿ. 11:14, 15) ನಾವು ಸಹ ಅಬ್ರಹಾಮನ ಮಾದರಿಯನ್ನು ಅನುಸರಿಸಬೇಕು! ಉದ್ಯೋಗ, ಸ್ವತ್ತು, ಸ್ಥಾನ-ಮಾನಗಳ ಹಿಂದೆ ಹೋಗದೆ ಸರಳ ಬದುಕನ್ನು ನಡೆಸೋಣ. ಲೋಕದ ಜನರು ಯಾವುದನ್ನು ಸಾಮಾನ್ಯ ಜೀವನ ಎಂದು ನೆನಸುತ್ತಾರೋ ಅಂಥ ಜೀವನವನ್ನು ನಾವೇಕೆ ನಡೆಸಬೇಕು ಹೇಳಿ? ನಾಶನದ ಅಂಚಿನಲ್ಲಿರುವ ಈ ತಾತ್ಕಾಲಿಕ ವ್ಯವಸ್ಥೆಯನ್ನು ನಾವು ಯಾಕೆ ಅಷ್ಟು ಹಚ್ಚಿಕೊಳ್ಳಬೇಕು? ಇದಕ್ಕಿಂತಲೂ ಹೆಚ್ಚು ಅತ್ಯುತ್ತಮವಾದ ಜೀವನ ನಮ್ಮ ಮುಂದಿದೆ. ಅಬ್ರಹಾಮನಂತೆ ನಾವೂ ಅದಕ್ಕಾಗಿ ಎದುರುನೋಡೋಣ. ಆ ನಿರೀಕ್ಷೆ ಕೈಗೂಡುವ ತನಕ ತಾಳ್ಮೆಯ ಗುಣವನ್ನು ತೋರಿಸೋಣ.—ರೋಮನ್ನರಿಗೆ 8:25 ಓದಿ.

10 ಅಬ್ರಹಾಮನ ಸಂತತಿ ಮೂಲಕ ಸಿಗುವ ಆಶೀರ್ವಾದಗಳನ್ನು ಪಡೆಯಲು ಯೆಹೋವನು ಇಂದು ಸಹ ಜನರನ್ನು ಆಮಂತ್ರಿಸುತ್ತಿದ್ದಾನೆ. ಈ ಆಮಂತ್ರಣವನ್ನು ಅಭಿಷಿಕ್ತ ಕ್ರೈಸ್ತರಾದ ‘ಯೆಹೋವನ ಯಾಜಕರು’ ಮತ್ತು ಬೇರೆ ಕುರಿಗಳಾದ “ವಿದೇಶೀಯರು” ಪ್ರಪಂಚದಾದ್ಯಂತ 600ಕ್ಕಿಂತ ಹೆಚ್ಚು ಭಾಷೆಗಳಲ್ಲಿ ನೀಡುತ್ತಿದ್ದಾರೆ.

ರಾಷ್ಟ್ರೀಯ ಗಡಿರೇಖೆಗಳನ್ನು ಮೆಟ್ಟಿನಿಲ್ಲಿ

11. ಸೊಲೊಮೋನನು ಇಸ್ರಾಯೇಲ್ಯರ ಬಗ್ಗೆ ಅಲ್ಲದೆ ಯಾರ ಕುರಿತಾಗಿಯೂ ಪ್ರಾರ್ಥಿಸಿದನು?

11 ಕ್ರಿ.ಪೂ. 1026ರಲ್ಲಿ ದೇವಾಲಯವನ್ನು ಪ್ರತಿಷ್ಠಾಪಿಸುವಾಗ ಸೊಲೊಮೋನನು ಮಾಡಿದ ಪ್ರಾರ್ಥನೆಯನ್ನು ಗಮನಿಸಿ. ಎಲ್ಲ ಜನಾಂಗದವರು ಯೆಹೋವನನ್ನು ಆರಾಧಿಸಲು ಬರುವರೆಂದು ಆ ಪ್ರಾರ್ಥನೆಯಲ್ಲಿ ಹೇಳಿದನು. ಇದು ಯೆಹೋವನು ಅಬ್ರಹಾಮನಿಗೆ ಕೊಟ್ಟ ಮಾತಿಗೆ ಹೊಂದಿಕೆಯಲ್ಲಿತ್ತು. ಅವನು ಪ್ರಾರ್ಥಿಸಿದ್ದು: “ನಿನ್ನ ನಾಮಮಹತ್ತು, ಭುಜಬಲ, ಶಿಕ್ಷಾಹಸ್ತ ಇವುಗಳ ವರ್ತಮಾನವು ಪರರಾಜ್ಯಗಳವರಿಗೂ ಗೊತ್ತಾಗುವದು. ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಸೇರದವನಾದ ಇಂಥ ಒಬ್ಬ ಪರದೇಶಿಯು ನಿನ್ನ ನಾಮಕ್ಕೋಸ್ಕರ ದೂರದೇಶದಿಂದ ಬಂದು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವದಾದರೆ ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು; ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮಮಹತ್ತನ್ನು ತಿಳಿದು ನಿನ್ನ ಜನರಾದ ಇಸ್ರಾಯೇಲ್ಯರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವ”ರಾಗುವರು.—1 ಅರ. 8:41-43.

12. ಯೆಹೋವನ ಸಾಕ್ಷಿಗಳು ಯಾವ ಅರ್ಥದಲ್ಲಿ ವಿದೇಶೀಯರಂತಿದ್ದಾರೆ?

12 ಬೇರೊಂದು ದೇಶಕ್ಕೆ ಬಂದು ವಾಸಿಸುವವರನ್ನು ಅಥವಾ ಬೇರೊಂದು ದೇಶವನ್ನು ಸಂದರ್ಶಿಸುವವರನ್ನು ವಿದೇಶೀಯರು ಎಂದು ಕರೆಯಲಾಗುತ್ತದೆ. ಯೆಹೋವನ ಸಾಕ್ಷಿಗಳು ಸಹ ಒಂದರ್ಥದಲ್ಲಿ ವಿದೇಶೀಯರಂತಿದ್ದಾರೆ. ಏಕೆಂದರೆ ಅವರು ಈ ಲೋಕದಲ್ಲಿ ಜೀವಿಸುವುದಾದರೂ ಸ್ವರ್ಗದಲ್ಲಿರುವ ದೇವರ ರಾಜ್ಯಕ್ಕೆ ಮತ್ತು ಆ ರಾಜ್ಯದ ರಾಜನಾದ ಯೇಸು ಕ್ರಿಸ್ತನಿಗೆ ಬೆಂಬಲ ನೀಡುತ್ತಾರೆ. ಹಾಗಾಗಿ ಅವರು ರಾಜಕೀಯ ವಿಷಯಗಳಲ್ಲಿ ತಲೆಹಾಕುವುದಿಲ್ಲ. ಸಮಾಜದಲ್ಲಿ ಜನರು ಅವರನ್ನು ಕೀಳಾಗಿ ನೋಡಿದರೂ ತಟಸ್ಥರಾಗಿ ಉಳಿಯುತ್ತಾರೆ.

13. (1) ನಾವು ಯಾರನ್ನೂ ವಿದೇಶೀಯರಂತೆ ವೀಕ್ಷಿಸಬಾರದೇಕೆ? (2) ಜನರು ಹೇಗಿರಬೇಕೆನ್ನುವುದು ಯೆಹೋವನ ಉದ್ದೇಶವಾಗಿತ್ತು?

13 ವಿದೇಶೀಯರನ್ನು ಸುಲಭವಾಗಿ ಗುರುತಿಸಬಹುದು. ಏಕೆಂದರೆ ಅವರಾಡುವ ಭಾಷೆ, ಅವರ ಬಟ್ಟೆ, ಮೈಕಟ್ಟು, ಬಣ್ಣ, ರೂಢಿಗಳು ಭಿನ್ನವಾಗಿರುತ್ತವೆ. ಆದರೆ ವಿದೇಶೀಯರಾಗಿರಲಿ ಅದೇ ಊರಿನವರಾಗಿರಲಿ ಎಲ್ಲ ಮಾನವರಲ್ಲೂ ಸಮಾನವಾದ ಅಂಶಗಳಿರುತ್ತವೆ. ಅವರ ನಡುವಿನ ವ್ಯತ್ಯಾಸಗಳಿಗಿಂತಲೂ ಈ ಸಮಾನತೆಗಳೇ ಹೆಚ್ಚಾಗಿರುತ್ತವೆ. ಇದನ್ನು ಮನಸ್ಸಿನಲ್ಲಿಡುವುದಾದರೆ ನಾವು ಯಾರನ್ನೂ ವಿದೇಶೀಯರಂತೆ ಅಥವಾ ಪರಕೀಯರಂತೆ ವೀಕ್ಷಿಸುವುದಿಲ್ಲ. ಇಡೀ ಭೂಮಿಗೆ ಒಂದೇ ಸರ್ಕಾರ ಇದ್ದಿದ್ದರೆ ಅಥವಾ ಇಡೀ ಭೂಮಿ ಒಂದೇ ದೇಶ ಆಗಿರುತ್ತಿದ್ದರೆ ವಿದೇಶೀಯರು ಅಂತ ಯಾರೂ ಇರುತ್ತಿರಲಿಲ್ಲ. ಯೆಹೋವ ದೇವರ ಉದ್ದೇಶವೂ ಇದೇ ಆಗಿತ್ತು. ಜನರೆಲ್ಲರೂ ಒಂದೇ ಆಡಳಿತ ಅಂದರೆ ತನ್ನ ಆಡಳಿತದ ಕೆಳಗೆ ಒಂದೇ ಕುಟುಂಬದಂತೆ ಒಗ್ಗಟ್ಟಿನಿಂದ ಇರಬೇಕೆಂದು ಉದ್ದೇಶಿಸಿದನು. ಆದರೆ ‘ನನ್ನ ದೇಶ ನನ್ನ ನಾಡು’ ಎಂದು ಬಡಿದಾಡುತ್ತಿರುವ ಈ ಲೋಕದಲ್ಲೂ ಜನರು ಐಕ್ಯರಾಗಿರೋದು ಸಾಧ್ಯನಾ?

14, 15. ಒಂದು ಗುಂಪಾಗಿ ಯೆಹೋವನ ಸಾಕ್ಷಿಗಳು ಇತರ ರಾಷ್ಟ್ರದವರ ಜೊತೆ ಹೇಗೆ ವರ್ತಿಸುತ್ತಾರೆ?

14 ರಾಷ್ಟ್ರಾಭಿಮಾನ ಮತ್ತು ಸ್ವಾರ್ಥತೆ ತುಂಬಿತುಳುಕುತ್ತಿರುವ ಈ ಲೋಕದಲ್ಲಿ ಪೂರ್ವಾಗ್ರಹಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಅಷ್ಟು ಸುಲಭವಲ್ಲ. ಆದರೂ ಇಂಥ ಜನರ ಮಧ್ಯೆಯೂ ರಾಷ್ಟ್ರೀಯ ಗಡಿರೇಖೆಗಳನ್ನು ಲೆಕ್ಕಿಸದ ಕೆಲವರು ಇದ್ದಾರೆ. ವಿಭಿನ್ನ ದೇಶದ ಪ್ರತಿಭಾನ್ವಿತ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ ಸಿಎನ್‌ಎನ್‌ ಟಿವಿ ನೆಟ್‌ವರ್ಕ್‌ ಸ್ಥಾಪಕ ಟೆಡ್‌ ಟರ್ನರ್‌ ಹೇಳಿದ್ದನ್ನು ಗಮನಿಸಿ: “ಬೇರೆಬೇರೆ ದೇಶದ ಜನರೊಂದಿಗೆ ಕೆಲಸ ಮಾಡುವುದು ನಿಜವಾಗಲೂ ಒಂದು ಒಳ್ಳೇ ಅನುಭವ. ನಾನು ಅವರನ್ನು ವಿದೇಶೀಯರಂತೆ ನೋಡದೇ ಒಂದೇ ಭೂಗ್ರಹದಲ್ಲಿ ಜೀವಿಸುವ ಜೊತೆ ನಾಗರಿಕರಂತೆ ನೋಡ್ತೇನೆ. ನನಗನಿಸೋ ಮಟ್ಟಿಗೆ ‘ವಿದೇಶೀಯರು’ ಅನ್ನೋ ಪದ ಅವಹೇಳನ ಪದ. ಅದಕ್ಕೆ ನಮ್ಮ ಚಾನೆಲ್‌ನಲ್ಲಿ ಆಗಲಿ ಆಫೀಸ್‌ನಲ್ಲಿ ಮಾತಾಡುತ್ತಿರುವಾಗ ಆಗಲಿ ಯಾರೂ ‘ವಿದೇಶೀ’ ಎಂಬ ಪದ ಬಳಸಬಾರದು ಅದಕ್ಕೆ ಬದಲು ‘ಅಂತಾರಾಷ್ಟ್ರೀಯ’ ಅಂತ ಬಳಸಬೇಕು ಅನ್ನೋ ನಿಯಮ ಮಾಡಿದೆ.”

15 ಜನರ ಕುರಿತು ದೇವರ ನೋಟವನ್ನು ತಮ್ಮದಾಗಿಸಿಕೊಂಡಿರುವ ಏಕೈಕ ಗುಂಪು ಯೆಹೋವನ ಸಾಕ್ಷಿಗಳು. ಯೆಹೋವನು ವಿಷಯಗಳನ್ನು ಹೇಗೆ ವೀಕ್ಷಿಸುತ್ತಾನೋ ಅದೇ ರೀತಿ ವೀಕ್ಷಿಸುತ್ತಾ ಮಾನಸಿಕವಾಗಿಯೂ ಭಾವನಾತ್ಮಕವಾಗಿಯೂ ರಾಷ್ಟ್ರೀಯ ಗಡಿರೇಖೆಗಳನ್ನು ಮೆಟ್ಟಿನಿಂತಿದ್ದಾರೆ. ಅವರು ಇತರ ರಾಷ್ಟ್ರೀಯ ಗುಂಪಿನ ಜನರನ್ನು ಅಪನಂಬಿಕೆ, ಅನುಮಾನದ ದೃಷ್ಟಿಯಿಂದ ನೋಡುವುದಿಲ್ಲ ಇಲ್ಲವೇ ದ್ವೇಷಿಸುವುದಿಲ್ಲ. ಬದಲಿಗೆ ಆ ಗುಂಪುಗಳ ಜನರಲ್ಲಿರುವ ಸುಂದರ ಸಾಮರ್ಥ್ಯಗಳು ಹಾಗೂ ವೈಶಿಷ್ಟ್ಯಗಳ ವೈವಿಧ್ಯದಲ್ಲಿ ಆನಂದಿಸುತ್ತಾರೆ. ಯೆಹೋವನ ಸಾಕ್ಷಿಗಳಾದ ನಮ್ಮಲ್ಲಿರುವ ಈ ವಿಶೇಷತೆಯ ಕುರಿತು ಯೋಚಿಸಿದ್ದೀರಾ? ಇದು ನೀವು ಇತರರೊಂದಿಗೆ ನಡಕೊಳ್ಳುವ ವಿಧವನ್ನು ಪ್ರಭಾವಿಸಿದೆ ಅಲ್ಲವೇ?

“ವಿದೇಶೀಯರು” ಇಲ್ಲದ ಲೋಕ

16, 17. ಪ್ರಕಟನೆ 16:16 ಮತ್ತು ದಾನಿಯೇಲ 2:44ರ ಪ್ರವಾದನೆಗಳ ನೆರವೇರಿಕೆ ವೈಯಕ್ತಿಕವಾಗಿ ನಿಮ್ಮನ್ನು ಹೇಗೆ ಪ್ರಭಾವಿಸಲಿದೆಯೆಂದು ವಿವರಿಸಿ.

16 ದೇವರ ಆಳ್ವಿಕೆಯ ವಿರುದ್ಧ ಬಲುಬೇಗನೆ ನಡೆಯಲಿರುವ ಕೊನೆಯ ಕದನದಲ್ಲಿ ಇಂದಿನ ಎಲ್ಲ ಜನಾಂಗಗಳು ಯೇಸು ಕ್ರಿಸ್ತ ಹಾಗೂ ಆತನ ಸ್ವರ್ಗೀಯ ಸೇನೆಯ ವಿರುದ್ಧ ಹೋರಾಡುವವು. ಆ ಯುದ್ಧವನ್ನು “ಹೀಬ್ರು ಭಾಷೆಯಲ್ಲಿ ಹರ್ಮಗೆದೋನ್‌” ಎಂದು ಕರೆಯಲಾಗಿದೆ. (ಪ್ರಕ. 16:14, 16; 19:11-16) ದೇವರ ಉದ್ದೇಶಕ್ಕೆ ವಿರೋಧದಲ್ಲಿರುವ ಮಾನವ ಸರ್ಕಾರಗಳಿಗೆ ಏನಾಗಲಿದೆ ಎಂದು 2,500 ವರ್ಷಗಳ ಹಿಂದೆ ಪ್ರವಾದಿ ದಾನಿಯೇಲನು ಬರೆದದ್ದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿ. 2:44.

17 ಈ ಪ್ರವಾದನೆಯ ನೆರವೇರಿಕೆ ವೈಯಕ್ತಿಕವಾಗಿ ನಿಮ್ಮನ್ನು ಹೇಗೆ ಪ್ರಭಾವಿಸಲಿದೆಯೆಂದು ಸ್ವಲ್ಪ ಊಹಿಸಬಲ್ಲಿರಾ? ಇಂದು ರಾಷ್ಟ್ರ-ರಾಷ್ಟ್ರಗಳ ಮಧ್ಯೆ ದೇಶ-ದೇಶಗಳ ಮಧ್ಯೆ ಗಡಿರೇಖೆಗಳಿರುವುದರಿಂದ ನಾವು ಇನ್ನೊಂದು ದೇಶಕ್ಕೆ ಹೋದರೆ ವಿದೇಶೀಯರಾಗುತ್ತೇವೆ. ಆದರೆ ಅರ್ಮಗೆದೋನ್‌ ಬಳಿಕ ಇಂಥ ಯಾವ ಗಡಿರೇಖೆಗಳೂ ಇರುವುದಿಲ್ಲ. ನಮ್ಮ ಮೈಕಟ್ಟು, ಬಣ್ಣ, ರೂಪ-ಲಕ್ಷಣಗಳಲ್ಲಿರುವ ಯಾವುದೇ ವ್ಯತ್ಯಾಸಗಳು ದೇವರ ಸೃಷ್ಟಿಯಲ್ಲಿನ ಅದ್ಭುತ ವೈವಿಧ್ಯವನ್ನು ಎತ್ತಿತೋರಿಸುವವು ಅಷ್ಟೇ! ಎಷ್ಟು ಚೆನ್ನಾಗಿರುತ್ತೆ ಅಲ್ವಾ! ಈ ನಿರೀಕ್ಷೆ ಸೃಷ್ಟಿಕರ್ತನಾದ ಯೆಹೋವ ದೇವರನ್ನು ಆದಷ್ಟು ಉತ್ತಮವಾಗಿ ಸ್ತುತಿಸುತ್ತಾ, ಘನಪಡಿಸುತ್ತಾ ಇರುವಂತೆ ನಮ್ಮೆಲ್ಲರನ್ನು ಹುರಿದುಂಬಿಸಲಿ.

18. ‘ವಿದೇಶೀಯರೇ’ ಇಲ್ಲದ ಲೋಕ ಸಾಧ್ಯವೆಂದು ಇತ್ತೀಚಿನ ಯಾವ ಬೆಳವಣಿಗೆಗಳು ತೋರಿಸುತ್ತವೆ?

18 ‘ಏನು? ವಿದೇಶೀಯರಿಲ್ಲದ ಲೋಕನಾ? ಅದು ಸಾಧ್ಯನಾ?’ ಎಂದು ಅನೇಕರು ಹುಬ್ಬೇರಿಸಬಹುದು. ಇದು ಸಾಧ್ಯವೆಂದು ನಂಬಲು ಕಾರಣ ಇದೆ. ಏಕೆಂದರೆ ಈಗಾಗಲೇ ಯೆಹೋವನ ಸಾಕ್ಷಿಗಳು ಯಾರನ್ನೂ ವಿದೇಶೀಯರಂತೆ ಕಾಣುವುದಿಲ್ಲ. ತಮ್ಮ ಮಧ್ಯೆ ಇರುವವರು ಯಾವುದೇ ರಾಷ್ಟ್ರದವರಾಗಿರಲಿ ಅದಕ್ಕೆ ಲಕ್ಷ್ಯ ಕೊಡದೆ, ಒಗ್ಗಟ್ಟಿನಿಂದ ಇರುತ್ತಾರೆ. ಉದಾಹರಣೆಗೆ, ಇತ್ತೀಚಿಗೆ ಹಲವಾರು ಚಿಕ್ಕ ಬ್ರಾಂಚ್‌ಗಳನ್ನು ಬೇರೆ ದೇಶದಲ್ಲಿರುವ ಬ್ರಾಂಚ್‌ಗಳೊಟ್ಟಿಗೆ ವಿಲೀನ ಮಾಡಲಾಯಿತು. ಇದರ ಉದ್ದೇಶ ಮೇಲ್ವಿಚಾರಣೆಯ ಕೆಲಸವನ್ನು ಸರಳೀಕರಿಸುವುದು ಮತ್ತು ಸುವಾರ್ತೆ ಸಾರುವ ಕೆಲಸವನ್ನು ಹೆಚ್ಚು ದಕ್ಷ ರೀತಿಯಲ್ಲಿ ಮಾಡುವುದೇ ಆಗಿತ್ತು. (ಮತ್ತಾ. 24:14) ಬ್ರಾಂಚ್‌ ಆಫೀಸುಗಳನ್ನು ವಿಲೀನಗೊಳಿಸುವಾಗ ರಾಷ್ಟ್ರೀಯ ಭಿನ್ನತೆಗಳನ್ನು ಅಲಕ್ಷಿಸಲಾಯಿತು. ಆದರೆ ಅದೇ ಸಮಯ ಆಯಾ ದೇಶದ ಕಾನೂನನ್ನು ಮನಸ್ಸಿನಲ್ಲಿಡಲಾಯಿತು. ರಾಷ್ಟ್ರೀಯ ಗಡಿರೇಖೆಗಳು ಯೆಹೋವನ ಸಾಕ್ಷಿಗಳನ್ನು ವಿಭಾಗಿಸದಂತೆ ದೇವರ ರಾಜ್ಯದ ರಾಜ ಯೇಸು ಕ್ರಿಸ್ತ ಸಹಾಯ ಮಾಡುತ್ತಿದ್ದಾನೆ. ಶೀಘ್ರದಲ್ಲೇ ಆತನು ‘ತನ್ನ ವಿಜಯವನ್ನು ಪೂರ್ಣಗೊಳಿಸುತ್ತಾ’ ಗಡಿರೇಖೆಗಳನ್ನು ತೆಗೆದುಹಾಕುವನು.—ಪ್ರಕ. 6:2.

19. ಸತ್ಯವೆಂಬ ಶುದ್ಧ ಭಾಷೆ ಏನನ್ನು ಸಾಧ್ಯಗೊಳಿಸಿದೆ?

19 ಯೆಹೋವನ ಸಾಕ್ಷಿಗಳು ಬೇರೆ ಬೇರೆ ದೇಶಗಳವರು ಬೇರೆ ಬೇರೆ ಭಾಷೆಗಳವರು. ಆದರೂ ಅವರೆಲ್ಲರೂ ಸತ್ಯವೆಂಬ ಶುದ್ಧ ಭಾಷೆಯನ್ನಾಡುತ್ತಾರೆ. ಇದರಿಂದಾಗಿ ಅವರ ಮಧ್ಯೆ ಮುರಿಯಲಾಗದ ಐಕ್ಯ ಬಂಧವಿದೆ. (ಚೆಫನ್ಯ 3:9 ಓದಿ.) ಅವರದ್ದು ಅಂತಾರಾಷ್ಟ್ರೀಯವಾದ ಕುಟುಂಬ. ಈ ದುಷ್ಟ ಲೋಕದಲ್ಲೇ ಇರುವುದಾದರೂ ಅವರು ಲೋಕದ ಭಾಗವಾಗಿರುವುದಿಲ್ಲ. ಈ ಒಗ್ಗಟ್ಟಿನ ಕುಟುಂಬ ಮುಂಬರಲಿರುವ ಲೋಕದ ಅಂದರೆ ವಿದೇಶೀಯರೇ ಇಲ್ಲದ ಲೋಕದ ಮುನ್‌ಛಾಯೆಯಾಗಿದೆ. ಆಗ ಭೂಮಿಯಲ್ಲಿರುವ ಪ್ರತಿಯೊಬ್ಬರೂ ಈ ಲೇಖನದ ಮೊದಲಲ್ಲಿ ತಿಳಿಸಿರುವ ಮಾತುಗಳನ್ನು ಪ್ರತಿಧ್ವನಿಸುವರು. “ಮಾನವಕುಲದ ಎಲ್ಲ ಜಾತಿಗಳವರು ಬೈಬಲ್‌ ಹೇಳುವಂತೆ ಸಹೋದರರು.”—ಮಾನವಕುಲದ ಜಾತಿಗಳು (ಇಂಗ್ಲಿಷ್‌).

[ಅಧ್ಯಯನ ಪ್ರಶ್ನೆಗಳು]

[ಪುಟ 28ರಲ್ಲಿರುವ ಸಂಕ್ಷಿಪ್ತ ವಿವರ]

ರಾಷ್ಟ್ರೀಯ ಗಡಿರೇಖೆಗಳು ತೆಗೆದುಹಾಕಲ್ಪಡುವ ಕಾರಣ ‘ವಿದೇಶೀಯರೇ’ ಇಲ್ಲದ ಸಮಯ ಬರಲಿದೆ. ಅದಕ್ಕಾಗಿ ಎದುರುನೋಡುತ್ತೀರಾ?

[ಪುಟ 25ರಲ್ಲಿರುವ ಚಿತ್ರ]

ನಿಮ್ಮ ಗಮನ ಅಬ್ರಹಾಮನಂತೆ ಯೆಹೋವನ ವಾಗ್ದಾನಗಳ ನೆರವೇರಿಕೆ ಮೇಲೆ ಇದೆಯಾ?

[ಪುಟ 27ರಲ್ಲಿರುವ ಚಿತ್ರ]

ಯೆಹೋವನು ಯಾರನ್ನೂ ವಿದೇಶೀಯರೆಂದು ನೆನಸುವುದಿಲ್ಲ