“ತಾತ್ಕಾಲಿಕ ನಿವಾಸಿ” ಗಳಾಗಿ ಜೀವಿಸುವುದನ್ನು ಬಿಟ್ಟುಬಿಡದಿರೋಣ
“ತಾತ್ಕಾಲಿಕ ನಿವಾಸಿ” ಗಳಾಗಿ ಜೀವಿಸುವುದನ್ನು ಬಿಟ್ಟುಬಿಡದಿರೋಣ
“ಪರದೇಶೀಯರೂ ತಾತ್ಕಾಲಿಕ ನಿವಾಸಿಗಳೂ ಆಗಿರುವ ನೀವು . . . ಶಾರೀರಿಕ ಬಯಕೆಗಳಿಂದ ದೂರವಾಗಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ.” —1 ಪೇತ್ರ 2:11.
ನಿಮ್ಮ ಉತ್ತರವೇನು?
ಅಭಿಷಿಕ್ತರನ್ನು ತಾತ್ಕಾಲಿಕ ನಿವಾಸಿಗಳು ಎಂದೇಕೆ ಕರೆಯಬಹುದು?
‘ಬೇರೆ ಕುರಿಗಳು’ ತಾತ್ಕಾಲಿಕ ನಿವಾಸಿಗಳಾಗಿರುವುದು ಯಾವ ಅರ್ಥದಲ್ಲಿ?
ಯಾವ ರೀತಿಯ ಭವಿಷ್ಯತ್ತಿಗಾಗಿ ನೀವು ಹಾತೊರೆಯುತ್ತೀರಿ?
1, 2. (1) ‘ಆರಿಸಿಕೊಳ್ಳಲ್ಪಟ್ಟವರು’ ಎಂದು ಹೇಳಿದಾಗ ಪೇತ್ರ ಯಾರ ಕುರಿತು ಮಾತಾಡುತ್ತಿದ್ದನು? (2) ಅವರನ್ನು “ತಾತ್ಕಾಲಿಕ ನಿವಾಸಿ”ಗಳು ಎಂದು ಆತ ಕರೆದದ್ದೇಕೆ?
ಯೇಸು ಸ್ವರ್ಗಕ್ಕೇರಿ ಹೋಗಿ ಸುಮಾರು 30 ವರ್ಷ ಬಳಿಕ ಅಪೊಸ್ತಲ ಪೇತ್ರನು, “ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನ್ಯ ಎಂಬ ಸ್ಥಳಗಳಲ್ಲಿ ಚದರಿರುವ ತಾತ್ಕಾಲಿಕ ನಿವಾಸಿಗಳಿಗೆ, ಅಂದರೆ . . . ಆರಿಸಿಕೊಳ್ಳಲ್ಪಟ್ಟವರಿಗೆ” ಒಂದು ಪತ್ರ ಬರೆದನು. (1 ಪೇತ್ರ 1:1, 2) ‘ಆರಿಸಿಕೊಳ್ಳಲ್ಪಟ್ಟವರು’ ಎಂದು ಹೇಳಿದಾಗ ಪೇತ್ರನು ತನ್ನಂತೆ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟು, ಸ್ವರ್ಗದಲ್ಲಿ ಕ್ರಿಸ್ತನ ಜತೆ ಆಳಲು “ಜೀವಕರವಾದ ನಿರೀಕ್ಷೆಗಾಗಿ ಒಂದು ಹೊಸ ಜನನ” ಪಡೆದವರನ್ನು ಸಂಬೋಧಿಸಿ ಮಾತಾಡುತ್ತಿದ್ದನು. (1 ಪೇತ್ರ 1:3, 4 ಓದಿ.) ಆದರೆ ಮುಂದಿನ ವಚನಗಳಲ್ಲಿ ಇವರನ್ನು “ಪರದೇಶೀಯರೂ ತಾತ್ಕಾಲಿಕ ನಿವಾಸಿಗಳೂ” ಎಂದು ಏಕೆ ಕರೆದನು? (1 ಪೇತ್ರ 2:11) ನಮ್ಮೀ ಕಾಲದಲ್ಲಿ ಅಭಿಷಿಕ್ತ ಕ್ರೈಸ್ತರೆಂದು ಹೇಳಿಕೊಳ್ಳುವವರು ಸ್ವಲ್ಪವೇ ಜನ ಇರುವುದರಿಂದ ನಾವೆಲ್ಲರೂ ಯಾಕೆ ಪೇತ್ರನ ಮಾತುಗಳಲ್ಲಿ ಆಸಕ್ತಿವಹಿಸಬೇಕು?
2 ಇಂದಿರುವ ಉಳಿಕೆಯವರಂತೆ ಪ್ರಥಮ ಶತಮಾನದಲ್ಲೂ ಭೂಮಿ ಮೇಲೆ ಅಭಿಷಿಕ್ತರ ಅಸ್ತಿತ್ವ ತಾತ್ಕಾಲಿಕವಾಗಿತ್ತು. ಆದ್ದರಿಂದಲೇ ಪೇತ್ರನು ಅವರನ್ನು ‘ತಾತ್ಕಾಲಿಕ ನಿವಾಸಿಗಳು’ ಎಂದು ಕರೆದನು. ‘ಚಿಕ್ಕ ಹಿಂಡಿನ’ ಒಬ್ಬ ಸದಸ್ಯನಾದ ಅಪೊಸ್ತಲ ಪೌಲ ವಿವರಿಸಿದ್ದು: “ನಮ್ಮ ಪೌರತ್ವವು ಸ್ವರ್ಗದಲ್ಲಿದೆ; ಅದೇ ಸ್ಥಳದಿಂದ ಬರುವ ಒಬ್ಬ ರಕ್ಷಕನಿಗೆ ಅಂದರೆ ಕರ್ತನಾದ ಯೇಸು ಕ್ರಿಸ್ತನಿಗೆ ನಾವು ಆತುರದಿಂದ ಎದುರುನೋಡುತ್ತಿದ್ದೇವೆ.” (ಲೂಕ 12:32; ಫಿಲಿಪ್ಪಿ 3:20) ಅಭಿಷಿಕ್ತರ “ಪೌರತ್ವವು ಸ್ವರ್ಗದಲ್ಲಿ”ರುವ ಕಾರಣ, ಅವರು ಮೃತಪಟ್ಟಾಗ ಭೂಮಿ ಮೇಲಿನ ತಾತ್ಕಾಲಿಕ ಜೀವನಕ್ಕಿಂತ ಎಷ್ಟೋ ಉತ್ತಮವಾದ ಅಮರ ಜೀವನವನ್ನು ಸ್ವರ್ಗದಲ್ಲಿ ಪಡೆಯುವರು. (ಫಿಲಿಪ್ಪಿ 1:21-23 ಓದಿ.) ಹೀಗೆ, ಸೈತಾನನ ವಶದಲ್ಲಿರುವ ಈ ಭೂಮಿ ಮೇಲೆ ಅವರು ನಿಜವಾದ ಅರ್ಥದಲ್ಲಿ “ತಾತ್ಕಾಲಿಕ ನಿವಾಸಿ”ಗಳೇ.
3. ‘ಬೇರೆ ಕುರಿಗಳ’ ಬಗ್ಗೆ ಯಾವ ಪ್ರಶ್ನೆ ಏಳುತ್ತದೆ?
3 ಆದರೆ ‘ಬೇರೆ ಕುರಿಗಳ’ ಕುರಿತೇನು? (ಯೋಹಾ. 10:16) ಅವರಿಗೆ ಈ ಭೂಮಿ ಮೇಲೆ ಕಾಯಂ ನಿವಾಸಿಗಳಾಗುವ ಬೈಬಲಾಧರಿತ ನಿರೀಕ್ಷೆ ಇದೆಯಲ್ಲವೇ? ಹೌದು ಭೂಮಿಯೇ ಅವರ ಶಾಶ್ವತ ಬೀಡು ಆಗಿರಲಿದೆ. ಆದರೂ ಅವರು ಒಂದರ್ಥದಲ್ಲಿ ತಾತ್ಕಾಲಿಕ ನಿವಾಸಿಗಳೇ. ಹೇಗೆ?
‘ಇಡೀ ಸೃಷ್ಟಿ ನರಳುತ್ತಾ ಇದೆ’
4. ಲೋಕ ನಾಯಕರು ಏನನ್ನು ತಡೆಗಟ್ಟಲು ಸೋತುಹೋಗಿದ್ದಾರೆ?
4 ಯೆಹೋವನ ವಿರುದ್ಧ ಸೈತಾನನು ನಡೆಸಿದ ದಂಗೆಯ ದುಷ್ಪರಿಣಾಮಗಳನ್ನು ಸೈತಾನನ ಈ ದುಷ್ಟ ವ್ಯವಸ್ಥೆ ಇರುವಷ್ಟು ಸಮಯ ಕ್ರೈಸ್ತರನ್ನೂ ಸೇರಿಸಿ ಎಲ್ಲರೂ ಅನುಭವಿಸುವರು. ರೋಮನ್ನರಿಗೆ 8:22 ಹೀಗನ್ನುತ್ತದೆ: “ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ.” ಲೋಕ ನಾಯಕರು, ವಿಜ್ಞಾನಿಗಳು, ಮಾನವತಾವಾದಿಗಳು ಎಷ್ಟೇ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ ನೋವು ನರಳಾಟವನ್ನು ತಡೆಗಟ್ಟಲು ಸೋತುಹೋಗಿದ್ದಾರೆ.
5. (1) ಇಸವಿ 1914ರಿಂದ ಲಕ್ಷಾನುಗಟ್ಟಲೆ ಜನರು ಯಾವ ಹೆಜ್ಜೆ ತೆಗೆದುಕೊಂಡಿದ್ದಾರೆ? (2) ಏಕೆ?
5 ಇಸವಿ 1914ರಿಂದ ಆರಂಭಿಸಿ ಲಕ್ಷಾನುಗಟ್ಟಲೆ ಜನರು ದೇವರ ರಾಜ್ಯದ ರಾಜನಾಗಿರುವ ಕ್ರಿಸ್ತ ಯೇಸುವಿನ ಪ್ರಜೆಗಳಾಗಲು ಮುಂದೆ ಬಂದಿದ್ದಾರೆ. ಏಕೆಂದರೆ ಇವರು ಸೈತಾನನ ಈ ಲೋಕವ್ಯವಸ್ಥೆಯ ಭಾಗವಾಗಿರಲು ಇಷ್ಟಪಡುವುದಿಲ್ಲ. ಯಾವುದೇ ವಿಧದಲ್ಲಿ ಅದನ್ನು ಬೆಂಬಲಿಸುವುದೂ ಇಲ್ಲ. ಇದಕ್ಕೆ ಬದಲು ಇವರು ತಮ್ಮ ಬದುಕನ್ನೂ ಸೊತ್ತುಗಳನ್ನೂ ದೇವರ ರಾಜ್ಯವನ್ನು ಬೆಂಬಲಿಸಲಿಕ್ಕಾಗಿ, ಅದರ ಕೆಲಸವನ್ನು ಮಾಡಲಿಕ್ಕಾಗಿ ಬಳಸುತ್ತಾರೆ.—ರೋಮ. 14:7, 8.
6. ಯೆಹೋವನ ಸಾಕ್ಷಿಗಳು ಯಾವ ಅರ್ಥದಲ್ಲಿ ಪರದೇಶೀಯರು?
6 ಯೆಹೋವನ ಸಾಕ್ಷಿಗಳು 200ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರು ಆಯಾ ದೇಶಗಳ ನಿಯಮಪಾಲಕ ನಾಗರಿಕರು. ಹಾಗಿದ್ದರೂ ಅವರು ಪರದೇಶೀಯರಂತೆ ಇದ್ದಾರೆ. ಹೇಗೆ? ರಾಜಕೀಯ ಹಾಗೂ ಸಾಮಾಜಿಕ ವಿವಾದಾಂಶಗಳಲ್ಲಿ ಅವರದ್ದು ತಟಸ್ಥ ನಿಲುವು, ಯಾರ ಪಕ್ಷವನ್ನೂ ವಹಿಸುವುದಿಲ್ಲ. ಅವರು ಈಗಲೇ ತಮ್ಮನ್ನು ದೇವರ ಹೊಸ ಲೋಕದ ಪ್ರಜೆಗಳಾಗಿ ಭಾವಿಸುತ್ತಾರೆ. ಈ ಅಪರಿಪೂರ್ಣ ಲೋಕವ್ಯವಸ್ಥೆಯಲ್ಲಿ ತಮ್ಮ ತಾತ್ಕಾಲಿಕ ನಿವಾಸದ ಸಮಯ ಇನ್ನೇನು ಕೊನೆಗೊಳ್ಳಲಿದೆ ಎಂಬದನ್ನು ನೋಡಿ ಹರ್ಷಿಸುತ್ತಾರೆ.
7. (1) ದೇವರ ಸೇವಕರು ಹೇಗೆ ಕಾಯಂ ನಿವಾಸಿಗಳಾಗುವರು? (2) ಯಾವುದರ ಕಾಯಂ ನಿವಾಸಿಗಳಾಗುವರು?
7 ಬಲುಬೇಗನೆ ಕ್ರಿಸ್ತನು ತನ್ನ ಅಧಿಕಾರವನ್ನು ಬಳಸಿ ಸೈತಾನನ ದುಷ್ಟ ವ್ಯವಸ್ಥೆಯನ್ನು ನಾಶಗೊಳಿಸುವನು. ಕ್ರಿಸ್ತನ ಪರಿಪೂರ್ಣ ಸರ್ಕಾರವು ಭೂಮಿಯಿಂದ ಪಾಪ, ದುಃಖವನ್ನು ಅಳಿಸಿಹಾಕುವುದು. ಯೆಹೋವನ ಹಕ್ಕುಭರಿತ ಪರಮಾಧಿಕಾರದ ವಿರುದ್ಧ ದಂಗೆ ಏಳುವ ಪ್ರಕಟನೆ 21:1-5 ಓದಿ.) ಆಗ ಪೂರ್ಣ ಅರ್ಥದಲ್ಲಿ ಸೃಷ್ಟಿಯು, “ನಾಶದ ದಾಸತ್ವದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು ಹೊಂದು”ವುದು.—ರೋಮ. 8:21.
ಪ್ರತಿಯೊಬ್ಬರನ್ನು ನಾಶಮಾಡುವುದು. ಹೀಗೆ ದೇವರ ನಿಷ್ಠಾವಂತ ಸೇವಕರು, ಭೂಪರದೈಸಿನ ಕಾಯಂ ನಿವಾಸಿಗಳಾಗಬಲ್ಲರು. (ಸತ್ಯ ಕ್ರೈಸ್ತರು ಹೇಗೆ ಜೀವಿಸತಕ್ಕದ್ದು?
8, 9. ‘ಶಾರೀರಿಕ ಬಯಕೆಗಳಿಂದ ದೂರವಾಗಿರಬೇಕು’ ಎಂದು ಪೇತ್ರನು ಹೇಳಿದ ಮಾತಿನ ಅರ್ಥವೇನೆಂದು ವಿವರಿಸಿ.
8 ಕ್ರೈಸ್ತರು ಹೇಗೆ ಜೀವಿಸಬೇಕು ಎಂಬುದನ್ನು ಪೇತ್ರನು ವಿವರಿಸಿದನು. ಅವನು ಮುಂದುವರಿಸಿ ಹೇಳಿದ್ದು: “ಪ್ರಿಯರೇ, ಪರದೇಶೀಯರೂ ತಾತ್ಕಾಲಿಕ ನಿವಾಸಿಗಳೂ ಆಗಿರುವ ನೀವು ನಿಮ್ಮ ಜೀವಕ್ಕೆ ವಿರುದ್ಧವಾಗಿ ಹೋರಾಡುತ್ತಿರುವ ಶಾರೀರಿಕ ಬಯಕೆಗಳಿಂದ ದೂರವಾಗಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ.” (1 ಪೇತ್ರ 2:11) ಆ ಬುದ್ಧಿವಾದವನ್ನು ಕೊಟ್ಟದ್ದು ಅಭಿಷಿಕ್ತ ಕ್ರೈಸ್ತರಿಗಾದರೂ ಅದು ಬೇರೆ ಕುರಿಗಳಿಗೂ ಅಷ್ಟೇ ಅನ್ವಯ.
9 ಕೆಲವೊಂದು ಬಯಕೆಗಳನ್ನು ಸೃಷ್ಟಿಕರ್ತನು ಇಟ್ಟಿರುವ ಮೇರೆಯೊಳಗೇ ತಣಿಸುವುದು ತಪ್ಪಲ್ಲ. ಅವು ಬದುಕಿಗೆ ಆನಂದ ತರುತ್ತವೆ. ಉದಾಹರಣೆಗೆ, ರುಚಿಕರ ಊಟ ಮಾಡಬೇಕು, ಕುಡಿಯಬೇಕು, ಚೇತೋಹಾರಿ ಚಟುವಟಿಕೆಗಳಲ್ಲಿ ತೊಡಗಬೇಕು, ಒಳ್ಳೇ ಸಹವಾಸ ಮಾಡಬೇಕು—ಇವೆಲ್ಲ ಸಹಜವಾದ ಬಯಕೆಗಳು. ವಿವಾಹ ಚೌಕಟ್ಟಿನೊಳಗಿನ ಲೈಂಗಿಕ ಸುಖಕ್ಕಾಗಿ ಬಯಸುವುದರಲ್ಲೂ ತಪ್ಪೇನಿಲ್ಲ. (1 ಕೊರಿಂ. 7:3-5) ಆದರೆ ಪೇತ್ರನು ಮಾತಾಡುತ್ತಿದ್ದದ್ದು, “ಜೀವಕ್ಕೆ ವಿರುದ್ಧವಾಗಿ ಹೋರಾಡುತ್ತಿರುವ” ಶಾರೀರಿಕ ಬಯಕೆಗಳ ಬಗ್ಗೆ. ಇದನ್ನು ಇತರ ಬೈಬಲ್ ಭಾಷಾಂತರಗಳು ಇನ್ನೂ ಸ್ಪಷ್ಟವಾಗಿ “ಶಾರೀರಿಕ ದುರಾಶೆಗಳು” (ಪವಿತ್ರ ಗ್ರಂಥ ಭಾಷಾಂತರ) ಎಂದೂ, “ಪಾಪಪೂರ್ಣ ಆಸೆಗಳು” (ನ್ಯೂ ಇಂಟರ್‌ನ್ಯಾಷನಲ್ ವರ್ಷನ್) ಎಂದೂ ಹೇಳಿವೆ. ನಮ್ಮಲ್ಲಿರುವ ಯಾವುದೇ ಆಸೆ, ಯೆಹೋವನಿಟ್ಟಿರುವ ಮೇರೆಯನ್ನು ಮೀರುವುದಾದರೆ ಮತ್ತು ಆತನೊಂದಿಗಿನ ನಮ್ಮ ಒಳ್ಳೇ ಸಂಬಂಧಕ್ಕೆ ಕಂಟಕವಾಗುವುದಾದರೆ ಅದನ್ನು ಹತ್ತಿಕ್ಕಬೇಕು. ಹಾಗೆ ಮಾಡದಿದ್ದರೆ ನಾವು ನಿತ್ಯಜೀವದ ನಿರೀಕ್ಷೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
10. ಕ್ರೈಸ್ತರನ್ನು ತನ್ನ ಲೋಕದ ಭಾಗವಾಗಿಸಲು ಸೈತಾನನು ಬಳಸುವ ಕೆಲವು ವಿಧಾನಗಳಾವುವು?
10 ಈ ವ್ಯವಸ್ಥೆಯಲ್ಲಿ ‘ತಾತ್ಕಾಲಿಕ ನಿವಾಸಿಗಳಂತೆ’ ಜೀವಿಸಬೇಕೆಂಬುದು ಸತ್ಯ ಕ್ರೈಸ್ತರ ದೃಢನಿರ್ಧಾರ. ಅವರ ಈ ದೃಢನಿರ್ಧಾರವನ್ನು ದುರ್ಬಲಗೊಳಿಸುವುದೇ ಸೈತಾನನ ಗುರಿ. ಪ್ರಾಪಂಚಿಕತೆಯ ಥಳಕುಬಳಕು, ಅನೈತಿಕತೆಯ ಮೋಡಿ, ಪ್ರಖ್ಯಾತಿಯ ವ್ಯಾಮೋಹ, ‘ನಾ ಮೊದಲು’ ಎನ್ನುವ ಮನೋಭಾವ, ‘ನಮ್ಮ ದೇಶವೇ ಶ್ರೇಷ್ಠ’ ಎಂಬ ಭಾವನೆ—ಇವೆಲ್ಲ ಸೈತಾನನ ಪಾಶಗಳು. ಈ ಎಲ್ಲ ನಕಾರಾತ್ಮಕ ಶಾರೀರಿಕ ಬಯಕೆಗಳನ್ನು ಗುರುತಿಸಿ, ತಳ್ಳಿಹಾಕಲು ದೃಢಮನಸ್ಸುಳ್ಳವರಾಗಿರಬೇಕು. ಹೀಗೆ, ನಮಗೆ ಸೈತಾನನ ದುಷ್ಟ ಲೋಕದ ಭಾಗವಾಗಿರಲು ಮನಸ್ಸಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತೇವೆ. ಅಲ್ಲದೆ, ನಾವು ಈ ಲೋಕದಲ್ಲಿ ‘ತಾತ್ಕಾಲಿಕ ನಿವಾಸಿಗಳಂತೆ’ ಜೀವಿಸುತ್ತಿದ್ದೇವೆಂದು ಸಾಕ್ಷ್ಯಕೊಡುತ್ತೇವೆ. ನಮಗೆ ನಿಜವಾಗಿ ಬೇಕಿರುವುದು ದೇವರ ನೀತಿಯ ನೂತನ ಲೋಕದಲ್ಲಿ ಶಾಶ್ವತ ನಿವಾಸ. ಆ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.
ಉತ್ತಮ ನಡತೆ
11, 12. (1) ಪರದೇಶೀಯರ ಬಗ್ಗೆ ಕೆಲವೊಮ್ಮೆ ಯಾವ ಅಭಿಪ್ರಾಯವಿರುತ್ತದೆ? (2) ಯೆಹೋವನ ಸಾಕ್ಷಿಗಳಿಗೆ ಇದು ಹೇಗೆ ಅನ್ವಯವಾಗುತ್ತದೆ?
11 ಈ ಲೋಕದಲ್ಲಿ ತಾತ್ಕಾಲಿಕ ನಿವಾಸಿಗಳಾಗಿರುವ ಕ್ರೈಸ್ತರು ಹೇಗೆ ಜೀವಿಸಬೇಕು ಎಂಬುದನ್ನು ಪೇತ್ರನು ಮುಂದಕ್ಕೆ ವಿವರಿಸುತ್ತಾನೆ. 1 ಪೇತ್ರ 2:12ರಲ್ಲಿ ಅವನನ್ನುವುದು: “ಅನ್ಯಜನಾಂಗಗಳ ಮಧ್ಯೆ ನಿಮ್ಮ ನಡತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಿರಿ; ಆಗ ಯಾವ ವಿಷಯದಲ್ಲಿ ಅವರು ನಿಮ್ಮನ್ನು ಕೆಡುಕರೆಂದು ನಿಂದಿಸುತ್ತಾರೊ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಾಣುವ ಪರಿಣಾಮವಾಗಿ ದೇವರ ವಿಚಾರಣೆಯ ದಿನದಲ್ಲಿ ಆತನನ್ನು ಮಹಿಮೆಪಡಿಸುವರು.” ಸಾಮಾನ್ಯವಾಗಿ ಪರದೇಶದಲ್ಲಿ ತಾತ್ಕಾಲಿಕ ನಿವಾಸಿಗಳಾಗಿರುವವರು ಅಲ್ಲಿನವರ ಟೀಕೆಗೆ ಗುರಿಯಾಗುತ್ತಾರೆ. ಅವರ ಮಾತಿನ ಶೈಲಿ, ವರ್ತನೆ, ಉಡುಪು, ಬಹುಶಃ ತೋರಿಕೆ ಸಹ ಆ ದೇಶದವರಿಗಿಂತ ಸ್ವಲ್ಪ ವ್ಯತ್ಯಾಸವಾಗಿದೆ ಎಂದಮಾತ್ರಕ್ಕೆ ಅವರನ್ನು ಕೆಡುಕರಂತೆಯೂ ನೋಡಲಾಗುತ್ತದೆ. ಆದರೆ ಅವರ ಒಳ್ಳೇ ಕೆಲಸಗಳು ಅಂದರೆ ಉತ್ತಮ ನಡತೆ ಅವರು ಕೆಡುಕರಲ್ಲವೆಂದು ಸಾಬೀತುಪಡಿಸುತ್ತದೆ.
12 ಹಾಗೆಯೇ ಸತ್ಯ ಕ್ರೈಸ್ತರು ಸಹ ಮಾತು, ಮನೋರಂಜನೆ ಹೀಗೆ ಕೆಲವೊಂದು ವಿಷಯಗಳಲ್ಲಿ ತಮ್ಮ ಸಮಾಜದಲ್ಲಿರುವ ಹೆಚ್ಚಿನ ಜನರಿಗಿಂತ ಭಿನ್ನರಾಗಿದ್ದಾರೆ. ಅವರ ಉಡುಪು, ತೋರಿಕೆಯಿಂದಲೂ ಅವರು ಭಿನ್ನರಾಗಿ ತೋರಿಬರುತ್ತಾರೆ. ಕೆಲವರು ಇದನ್ನು ಅಪಾರ್ಥ ಮಾಡಿಕೊಂಡು ಅವರು ಕೆಡುಕರೊ ಎಂಬಂತೆ ಆರೋಪಗಳನ್ನು ಹಾಕುತ್ತಾರೆ. ಆದರೆ ಇನ್ನೂ ಕೆಲವರು ಸತ್ಯ ಕ್ರೈಸ್ತರ ಜೀವನರೀತಿ ನೋಡಿ ಹಾಡಿಹೊಗಳುತ್ತಾರೆ.
13, 14. “ವಿವೇಕವು ತನ್ನ ಕ್ರಿಯೆಗಳ ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ” ಹೇಗೆ? ದೃಷ್ಟಾಂತಿಸಿ.
13 ಹೌದು, ಅನ್ಯಾಯದ ಟೀಕೆಗಳಿಗೆ ಉತ್ತಮ ನಡತೆಯೇ ಅತ್ಯುತ್ತಮ ಪ್ರತ್ಯುತ್ತರ. ದೇವರಿಗೆ ಪರಿಪೂರ್ಣ ಮಟ್ಟದ ನಂಬಿಗಸ್ತಿಕೆ ತೋರಿಸಿದ ಏಕೈಕ ವ್ಯಕ್ತಿ ಯೇಸು. ಅವನ ಮೇಲೂ ಸುಳ್ಳಾರೋಪಗಳನ್ನು ಹಾಕಲಾಯಿತು. ಕೆಲವರು “ಇವನು ಹೊಟ್ಟೆಬಾಕನು, ದ್ರಾಕ್ಷಾಮದ್ಯ ಕುಡಿತದ ಚಟಕ್ಕೆ ಬಿದ್ದಿರುವವನು, ತೆರಿಗೆ ವಸೂಲಿಗಾರರ ಮತ್ತು ಪಾಪಿಗಳ ಸ್ನೇಹಿತನು” ಎಂದೆಲ್ಲ ಹೇಳಿದರು. ಆದರೆ ಅವನು ಅಂಥವನಲ್ಲವೆಂದು ತನ್ನ ಒಳ್ಳೇ ನಡತೆಯಿಂದ ತೋರಿಸಿಕೊಟ್ಟನು. “ವಿವೇಕವು ತನ್ನ ಕ್ರಿಯೆಗಳ ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ” ಎಂದನಾತ. (ಮತ್ತಾ. 11:19) ಇದು ಇಂದಿಗೂ ಸತ್ಯ. ಉದಾಹರಣೆಗೆ, ಜರ್ಮನಿಯ ಸೆಲ್ಟರ್ಸ್‌ನಲ್ಲಿರುವ ಬೆತೆಲ್ ಸುತ್ತಲಿರುವ ಜನರಿಗೆ ಬೆತೆಲಲ್ಲಿ ಸೇವೆಮಾಡುತ್ತಿರುವ ಸಹೋದರ ಸಹೋದರಿಯರು ವಿಚಿತ್ರ ಜನರೆಂಬ ಅಭಿಪ್ರಾಯವಿದೆ. ಆದರೆ ಅಲ್ಲಿನ ನಗರಾಧ್ಯಕ್ಷರು ಈ ಕ್ರೈಸ್ತರ ಪಕ್ಷವಹಿಸಿ ತರ್ಕಿಸಿದ್ದು: “ಅಲ್ಲಿ ಸೇವೆಮಾಡುತ್ತಿರುವ ಸಾಕ್ಷಿಗಳಿಗೆ ತಮ್ಮದೇ ಆದ ಜೀವನ ರೀತಿಯಿದೆ ನಿಜ. ಆದರೆ ಅದರಿಂದ ಸಮಾಜದಲ್ಲಿರುವ ಬೇರಾರ ಬದುಕಿಗೂ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.”
14 ರಷ್ಯದ ಮಾಸ್ಕೋದಲ್ಲಿ ಜೀವಿಸುತ್ತಿರುವ ಯೆಹೋವನ ಸಾಕ್ಷಿಗಳ ಬಗ್ಗೆಯೂ ಇತ್ತೀಚೆಗೆ ಇದೇ ರೀತಿಯ ತೀರ್ಮಾನಕ್ಕೆ ಬರಲಾಯಿತು. ಸಾಕ್ಷಿಗಳು ಕುಟುಂಬಗಳನ್ನು ಒಡೆದುಹಾಕುತ್ತಾರೆ, ಆತ್ಮಹತ್ಯೆಗಳಿಗೆ ಕುಮ್ಮಕ್ಕುಕೊಡುತ್ತಾರೆ, ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುತ್ತಾರೆ ಎಂಬಂಥ ತಪ್ಪಾರೋಪಗಳನ್ನು ಹೇರಲಾಯಿತು. ಆದರೆ 2010ರ ಜೂನ್ ತಿಂಗಳಲ್ಲಿ ಫ್ರಾನ್ಸ್‌ನ ‘ಮಾನವ ಹಕ್ಕುಗಳ ಯುರೋಪಿಯನ್ ಕೋರ್ಟ್’ ಮಾಸ್ಕೋ ನಗರವನ್ನು ಖಂಡಿಸಿ ತೀರ್ಪನ್ನು ಹೊರಡಿಸಿತು. ಅದು ಯೆಹೋವನ ಸಾಕ್ಷಿಗಳ ಆರಾಧನೆ ವಿಷಯದಲ್ಲಿ ತಲೆಹಾಕಿದ್ದು ತಪ್ಪು ಮತ್ತು ಸಭೆಸೇರುವುದನ್ನು ನಿಲ್ಲಿಸುವ ಹಕ್ಕು ಅದಕ್ಕಿರಲಿಲ್ಲವೆಂದು ಕೋರ್ಟ್ ಹೇಳಿತು. ಯೆಹೋವನ ಸಾಕ್ಷಿಗಳ ಮೇಲೆ ಹೇರಲಾದ ತಪ್ಪಾರೋಪಗಳನ್ನು ರಷ್ಯದ ಕೋರ್ಟ್‌ಗಳು ರುಜುಪಡಿಸಲಾಗಲಿಲ್ಲ. ಮಾಸ್ಕೋ ನಗರದ ಕಾನೂನುಗಳನ್ನು ಯೆಹೋವನ ಸಾಕ್ಷಿಗಳಿಗೆ ಅನ್ಯಾಯವಾಗುವಂಥ ರೀತಿಯಲ್ಲಿ ಈ ಕೋರ್ಟ್‌ಗಳು ದುರ್ಬಳಕೆ ಮಾಡಿವೆಯೆಂದು ಯುರೋಪಿಯನ್ ಕೋರ್ಟ್ ಹೇಳಿತು.
ಸೂಕ್ತ ಅಧೀನತೆ
15. ಲೋಕದಾದ್ಯಂತ ಸತ್ಯ ಕ್ರೈಸ್ತರು ಯಾವ ಬೈಬಲ್ ತತ್ವವನ್ನು ಪಾಲಿಸುತ್ತಾರೆ?
15 ಕ್ರೈಸ್ತರು ಪಾಲಿಸಬೇಕಾದ ಇನ್ನೊಂದು ತತ್ವವನ್ನು ಮಾಸ್ಕೋದಲ್ಲಿರುವ ಮತ್ತು ಲೋಕದಾದ್ಯಂತ ಇರುವ ಯೆಹೋವನ ಸಾಕ್ಷಿಗಳು ಪಾಲಿಸುತ್ತಾರೆ. ಪೇತ್ರನು ಅದರ ಕುರಿತು ಬರೆದದ್ದು: ‘ಕರ್ತನ ನಿಮಿತ್ತವಾಗಿ ಪ್ರತಿಯೊಂದು ಮಾನವ ಸೃಷ್ಟಿಗೆ ನಿಮ್ಮನ್ನು ಅಧೀನಪಡಿಸಿಕೊಳ್ಳಿರಿ. ಅರಸನಿಗೆ, ಅಧಿಪತಿಗಳಿಗೆ ಅಧೀನರಾಗಿರಿ.’ (1 ಪೇತ್ರ 2:13, 14) ಸತ್ಯ ಕ್ರೈಸ್ತರು ಈ ದುಷ್ಟ ಲೋಕದ ಭಾಗವಾಗಿರದಿದ್ದರೂ, ಪೌಲನು ಹೇಳಿರುವಂತೆ “ಸಾಪೇಕ್ಷ ಸ್ಥಾನಗಳಲ್ಲಿ” ಇರುವ ಸರಕಾರಿ ಅಧಿಕಾರಿಗಳಿಗೆ ಸಿದ್ಧಮನಸ್ಸಿನಿಂದ ಅಧೀನರಾಗುತ್ತಾರೆ.—ರೋಮನ್ನರಿಗೆ 13:1, 5-7 ಓದಿ.
16, 17. (1) ನಾವು ಸರ್ಕಾರದ ವಿರೋಧಿಗಳಲ್ಲ ಎಂದು ಯಾವುದು ತೋರಿಸುತ್ತದೆ? (2) ಕೆಲವು ರಾಜಕೀಯ ನಾಯಕರು ಏನನ್ನು ಅಂಗೀಕರಿಸಿದ್ದಾರೆ?
16 ಈ ಸದ್ಯದ ವ್ಯವಸ್ಥೆಯಲ್ಲಿ ಯೆಹೋವನ ಸಾಕ್ಷಿಗಳು ‘ತಾತ್ಕಾಲಿಕ ನಿವಾಸಿಗಳಂತೆ’ ಜೀವಿಸುತ್ತಿರುವುದರ ಅರ್ಥ, ಅವರು ಸರ್ಕಾರಗಳ ವಿರುದ್ಧ ಏನೋ ಒಂದು ಮೌನ ಪ್ರತಿಭಟನೆ ಮಾಡುತ್ತಿದ್ದಾರೆ ಅಂತಲ್ಲ. ಇತರರ ರಾಜಕೀಯ ಇಲ್ಲವೆ ಸಾಮಾಜಿಕ ನಿರ್ಣಯಗಳಲ್ಲಿ ಅವರು ಮೂಗು ತೂರಿಸುವುದಿಲ್ಲ, ಅವನ್ನು ವಿರೋಧಿಸುವುದೂ ಇಲ್ಲ. ಬೇರೆ ಕೆಲವು ಧಾರ್ಮಿಕ ಗುಂಪುಗಳು ರಾಜಕೀಯದಲ್ಲಿ ಕೈಹಾಕುತ್ತವೆ, ಆದರೆ ಯೆಹೋವನ ಸಾಕ್ಷಿಗಳು ಹಾಗೆ ಮಾಡುವುದಿಲ್ಲ. ಹೇಗೆ ಆಡಳಿತ ನಡೆಸಬೇಕೆಂದು ಪೌರ ಅಧಿಕಾರಿಗಳಿಗೆ ಸಲಹೆಗಳನ್ನು ಅವರು ಕೊಡುವುದಿಲ್ಲ. ಜನಜೀವನ ಅಸ್ತವ್ಯಸ್ಥಗೊಳಿಸಲು ಇಲ್ಲವೆ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಾರೆಂಬ ಮಾತಿನಲ್ಲಿ ಎಳ್ಳಷ್ಟು ಸತ್ಯವಿಲ್ಲ!
17 “ಅರಸನನ್ನು ಸನ್ಮಾನಿಸಿರಿ” ಎಂಬ ಪೇತ್ರನ ಮಾತುಗಳಿಗೆ ಹೊಂದಿಕೆಯಲ್ಲಿ ಕ್ರೈಸ್ತರು ಸಾರ್ವಜನಿಕ ಅಧಿಕಾರಿಗಳಿಗೆ ವಿಧೇಯತೆ ತೋರಿಸುತ್ತಾರೆ. ಹೀಗೆ, ಆ ಅಧಿಕಾರಿಗಳ ಹುದ್ದೆಗಳಿಗೆ ಸಲ್ಲತಕ್ಕ ಮಾನಮರ್ಯಾದೆ ಸಲ್ಲಿಸುತ್ತಾರೆ. (1 ಪೇತ್ರ 2:17) ಕೆಲವೊಮ್ಮೆ ಅಧಿಕಾರಿಗಳೇ ‘ಯೆಹೋವನ ಸಾಕ್ಷಿಗಳಿಂದ ನಮಗೇನೂ ತೊಂದರೆ ಇಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಉದಾಹರಣೆಗೆ, ಜರ್ಮನಿಯ ಬ್ರಾಂಡೆನ್‌ಬರ್ಗ್ ರಾಜ್ಯದ ಮಾಜಿ ಸಂಪುಟ ಸಚಿವ ಮತ್ತು ನಂತರ ಜರ್ಮನಿಯ ಪಾರ್ಲಿಮೆಂಟ್ ಸದಸ್ಯರಾದ ಸ್ಟೇಫಾನ್ ರೀಕಾ ಹೇಳಿದ್ದೇನೆಂದರೆ, ನಾಸಿಗಳು ಯೆಹೋವನ ಸಾಕ್ಷಿಗಳನ್ನು ಹಿಂಸಿಸುತ್ತಿದ್ದ ಸಮಯದಲ್ಲಿ ಸಾಕ್ಷಿಗಳು ಒಳ್ಳೇ ನಡತೆ ತೋರಿಸಿದ್ದರು. ಹಿಂಸಿಸಲ್ಪಟ್ಟರೂ ತಮ್ಮ ನಂಬಿಕೆಗಳನ್ನು ಬಿಟ್ಟುಕೊಡಲಿಲ್ಲ ಮತ್ತು ಜೊತೆ ಸೆರೆಯಾಳುಗಳೊಂದಿಗೆ ದಯೆಯಿಂದ ನಡಕೊಂಡರು. ಅಂಥ ಸದ್ಗುಣಗಳು ಜರ್ಮನಿಯಂಥ ದೇಶಕ್ಕೆ ತುಂಬ ಪ್ರಾಮುಖ್ಯ. ಏಕೆಂದರೆ ಈಗಿನ ಕಾಲದಲ್ಲಿ ಕೆಲವು ಜನರು ಬೇರೆ ದೇಶಗಳಿಂದ ಬಂದವರ ಇಲ್ಲವೆ ಭಿನ್ನವಾದ ರಾಜಕೀಯ, ಸೈದ್ಧಾಂತಿಕ ಅಭಿಪ್ರಾಯಗಳಿರುವ ವ್ಯಕ್ತಿಗಳ ಜೊತೆಗೆ ಹೆಚ್ಚೆಚ್ಚು ಪಾಶವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಅಂತ ಹೇಳಿದರು.
ಪ್ರೀತಿ ತೋರಿಸುತ್ತಾರೆ
18. (1) ಲೋಕವ್ಯಾಪಕ ಸಹೋದರ ಬಳಗವನ್ನು ನಾವು ಪ್ರೀತಿಸುತ್ತೇವೆ ಏಕೆ? (2) ಸಾಕ್ಷಿಗಳಲ್ಲದವರು ಏನನ್ನು ಗಮನಿಸಿದ್ದಾರೆ?
18 ಅಪೊಸ್ತಲ ಪೇತ್ರನು ಬರೆದದ್ದು: “ಸಹೋದರರ ಇಡೀ ಬಳಗವನ್ನು ಪ್ರೀತಿಸಿರಿ, ದೇವರಿಗೆ ಭಯಪಡಿರಿ.” (1 ಪೇತ್ರ 2:17) ದೇವರನ್ನು ಅಸಂತೋಷಪಡಿಸಬಾರದು ಎಂಬ ಹಿತಕರ ಭಯ ಯೆಹೋವನ ಸಾಕ್ಷಿಗಳಿಗಿದೆ. ಇಂಥ ಭಯ ಅವರಿಗೆ ಆತನ ಚಿತ್ತ ಮಾಡಲು ಹೆಚ್ಚಿನ ಪ್ರೇರಣೆ ಕೊಡುತ್ತದೆ. ದೇವರ ಚಿತ್ತ ಮಾಡುವ ಅಪೇಕ್ಷೆಯುಳ್ಳ ಲೋಕವ್ಯಾಪಕ ಸಹೋದರ ಸಹೋದರಿಯರ ಬಳಗದ ಭಾಗವಾಗಿ ಆತನ ಸೇವೆಮಾಡಲು ಅವರು ಸಂತೋಷಪಡುತ್ತಾರೆ. ಹಾಗಾಗಿ ಅವರು ಸಹಜವಾಗಿಯೇ ‘ಸಹೋದರರ ಇಡೀ ಬಳಗವನ್ನು ಪ್ರೀತಿಸುತ್ತಾರೆ.’ ಇಂದಿನ ಸ್ವಾರ್ಥಪರ ಸಮಾಜದಲ್ಲಿ ತುಂಬ ವಿರಳವಾಗಿರುವ ಇಂಥ ಪ್ರೀತಿಯನ್ನು ನೋಡಿ ಸಾಕ್ಷಿ ಅಲ್ಲದವರು ಒಮ್ಮೊಮ್ಮೆ ಅಚ್ಚರಿಪಡುತ್ತಾರೆ. ಉದಾಹರಣೆಗೆ, ಜರ್ಮನಿಯಲ್ಲಿ 2009ರಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ವಿದೇಶಗಳಿಂದ ಸಾಕ್ಷಿಗಳು ಬಂದಿದ್ದರು. ಜರ್ಮನಿಯಲ್ಲಿನ ಸಾಕ್ಷಿಗಳು ಅವರಿಗೆ ತೋರಿಸುತ್ತಿದ್ದ ಪ್ರೀತಿವಾತ್ಸಲ್ಯ ಮತ್ತು ಕೊಟ್ಟ ನೆರವನ್ನು ನೋಡಿ, ಅಮೆರಿಕನ್ ಟ್ರ್ಯಾವಲ್ ಏಜೆನ್ಸಿಯಲ್ಲಿ ಕೆಲಸಮಾಡುತ್ತಿದ್ದ ಗೈಡ್‌ಗೆ ಅಚ್ಚರಿಯೊ ಅಚ್ಚರಿ. ಅವಳು ತುಂಬ ವರ್ಷ ಗೈಡ್ ಆಗಿ ಕೆಲಸಮಾಡಿದ್ದರೂ ಈ ತರದ ಪ್ರೀತಿಯನ್ನು ಬೇರಾರೂ ತೋರಿಸಿದ್ದನ್ನು ನೋಡಿಲ್ಲವೆಂದು ಹೇಳಿದಳು. ಕಾಲಾನಂತರ ಸಾಕ್ಷಿಗಳಲ್ಲೊಬ್ಬರು ಹೇಳಿದ್ದು: “ಆಕೆ ನಮ್ಮ ಬಗ್ಗೆ ಮಾತಾಡಿದ ಪ್ರತಿಯೊಂದು ಮಾತಿನಲ್ಲಿ ವಿಸ್ಮಯ, ಉತ್ಸಾಹ ಜಿನುಗುತ್ತಿತ್ತು.” ನೀವು ಹಾಜರಾಗಿರುವ ಅಧಿವೇಶನದಲ್ಲಿ ಸಾಕ್ಷಿಗಳನ್ನು ಗಮನಿಸುತ್ತಿದ್ದ ಜನರು ಈ ರೀತಿ ಪ್ರತಿಕ್ರಿಯಿಸಿದ್ದನ್ನು ಕೇಳಿದ್ದೀರಾ?
19. (1) ಯಾವ ದೃಢಸಂಕಲ್ಪ ನಮಗಿರಬೇಕು? (2) ಏಕೆ?
19 ಮೇಲೆ ತಿಳಿಸಲಾದ ವಿಧಗಳಲ್ಲದೆ ಇನ್ನೂ ಅನೇಕ ವಿಧಗಳಲ್ಲಿ ಯೆಹೋವನ ಸಾಕ್ಷಿಗಳು ತಾವು ನಿಜವಾಗಿಯೂ ಸೈತಾನನ ಈ ವ್ಯವಸ್ಥೆಯಲ್ಲಿ ‘ತಾತ್ಕಾಲಿಕ ನಿವಾಸಿಗಳು’ ಎಂದು ತೋರಿಸುತ್ತಾರೆ. ಹಾಗೆಯೇ ತಾತ್ಕಾಲಿಕ ನಿವಾಸಿಗಳಾಗಿ ಉಳಿಯಬೇಕೆಂಬ ದೃಢಸಂಕಲ್ಪವೂ ಅವರಿಗಿದೆ. ಬಲುಬೇಗನೆ ತಾವು ದೇವರ ನೀತಿಯ ಹೊಸ ಲೋಕದ ಶಾಶ್ವತ ನಿವಾಸಿಗಳು ಆಗುವೆವೆಂಬ ಬಲವಾದ ನಿರೀಕ್ಷೆ ಅವರಿಗಿದೆ. ಆ ನಿರೀಕ್ಷೆಗೆ ಭದ್ರ ಆಧಾರವೂ ಇದೆ. ಆ ಲೋಕಕ್ಕಾಗಿ ನೀವು ಎದುರುನೋಡುತ್ತೀರಲ್ಲವೇ?
[ಅಧ್ಯಯನ ಪ್ರಶ್ನೆಗಳು]
[ಪುಟ 12ರಲ್ಲಿರುವ ಚಿತ್ರ]
ಸೈತಾನನ ಲೋಕವನ್ನು ಉಳಿಸಲು ನಾವು ಹೋರಾಡುವುದಿಲ್ಲ
[ಪುಟ 12ರಲ್ಲಿರುವ ಚಿತ್ರ]
ದೇವರ ನೂತನ ಲೋಕದ ಬಗ್ಗೆ ಸಾರುತ್ತೇವೆ
[ಪುಟ 12ರಲ್ಲಿರುವ ಚಿತ್ರ]
ಬೈಬಲ್ ಸತ್ಯವು ಈ ರಷ್ಯನ್ ಕುಟುಂಬವನ್ನು ಐಕ್ಯಗೊಳಿಸಿದೆ