ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ಯಶಸ್ಸು ನಿಮ್ಮದಾಗಲಿ

ನಿಜ ಯಶಸ್ಸು ನಿಮ್ಮದಾಗಲಿ

ನಿಜ ಯಶಸ್ಸು ನಿಮ್ಮದಾಗಲಿ

“ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.”​—⁠ಯೆಹೋ. 1:⁠8.

ನಿಮ್ಮ ಉತ್ತರವೇನು?

ಸೊಲೊಮೋನ ಯಾವ ವಿಧಗಳಲ್ಲಿ ಯಶಸ್ವಿಯಾಗಿದ್ದನು?

ಪೌಲ ಯಾವ ವಿಧಗಳಲ್ಲಿ ನಿಜವಾಗಿಯೂ ಯಶಸ್ವಿಯಾದನು?

ನೀವು ಹೇಗೆ ಚಿರಕಾಲ ಯಶಸ್ವಿಯಾಗಬಲ್ಲಿರಿ?

1, 2. (1) ಏನು ಮಾಡಿದರೆ ಯಶಸ್ಸು ಗಳಿಸಿದಂತೆ ಎಂದು ಅನೇಕರು ನೆನಸುತ್ತಾರೆ? (2) ಯಶಸ್ಸಿನ ಬಗ್ಗೆ ನಿಮಗೆ ಯಾವ ದೃಷ್ಟಿಕೋನವಿದೆಯೆಂದು ನೀವು ಹೇಗೆ ತಿಳಿಯಬಹುದು?

ಒಬ್ಬ ವ್ಯಕ್ತಿ ಏನು ಮಾಡಿದರೆ ಯಶಸ್ಸು ಗಳಿಸಿದಂತೆ? ಈ ಪ್ರಶ್ನೆಯನ್ನು ಜನರ ಮುಂದಿಡುವುದಾದರೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಕೊಡುತ್ತಾರೆ. ಹೆಚ್ಚು ಹಣ ಸಂಪಾದಿಸಿದರೆ, ದೊಡ್ಡ ಹುದ್ದೆ ಪಡಕೊಂಡರೆ, ತುಂಬ ಶಿಕ್ಷಣ ಪಡೆದರೆ ಯಶಸ್ಸು ಗಳಿಸಿದಂತೆ ಎಂದು ಅನೇಕರು ಹೇಳುತ್ತಾರೆ. ಇನ್ನು ಕೆಲವರು ಒಬ್ಬ ವ್ಯಕ್ತಿಯ ಯಶಸ್ಸನ್ನು ಅವನಿಗೆ ಕುಟುಂಬ, ಮಿತ್ರರು, ಸಹೋದ್ಯೋಗಿಗಳೊಂದಿಗೆ ಎಷ್ಟು ಒಳ್ಳೇ ಸಂಬಂಧವಿದೆ ಎನ್ನುವುದರಿಂದ ಅಳೆಯುತ್ತಾರೆ. ದೇವರ ಸೇವಕರಲ್ಲಿ ಕೆಲವರಿಗೆ ಬೇರೊಂದು ರೀತಿಯ ಅಭಿಪ್ರಾಯವಿರಬಹುದು. ಯಾರಿಗೆ ಸಭೆಯಲ್ಲಿ ಜವಾಬ್ದಾರಿ ಸ್ಥಾನವಿದೆಯೋ ಯಾರು ಸೇವೆಯಲ್ಲಿ ಹೆಚ್ಚು ಸಾಧನೆ ಮಾಡಿರುತ್ತಾರೋ ಅವರೇ ಯಶಸ್ವಿಗಳು ಎಂದು ನೆನಸಬಹುದು.

2 ಆದರೆ ನಿಮಗೆ ಏನನಿಸುತ್ತದೆ? ಅದನ್ನು ತಿಳಿಯಲು ಹೀಗೆ ಮಾಡಿ. ಜೀವನದಲ್ಲಿ ಯಶಸ್ಸು ಪಡೆದಿದ್ದಾರೆಂದು ನಿಮಗನಿಸುವ, ನೀವು ಗೌರವಿಸುವ, ಪ್ರಶಂಸಿಸುವ ಕೆಲವು ವ್ಯಕ್ತಿಗಳ ಹೆಸರುಗಳನ್ನು ಬರೆಯಿರಿ. ಅವರು ಎಂಥ ವ್ಯಕ್ತಿಗಳು? ಶ್ರೀಮಂತರಾ? ದೊಡ್ಡ ಹೆಸರು ಮಾಡಿದವರಾ? ಅಧಿಕಾರದಲ್ಲಿರುವವರಾ? ನಿಮ್ಮ ಉತ್ತರವು ನೀವು ಯಶಸ್ಸನ್ನು ಯಾವುದರಿಂದ ಅಳೆಯುತ್ತೀರೆಂದು ತೋರಿಸಿಕೊಡುತ್ತದೆ. ಇದು ಜೀವನದಲ್ಲಿ ನೀವು ಮಾಡುವ ಆಯ್ಕೆಗಳು ಮತ್ತು ನಿಮ್ಮ ಗುರಿಗಳ ಮೇಲೆ ತುಂಬ ಪ್ರಭಾವ ಬೀರುತ್ತದೆ.​—⁠ಲೂಕ 6:⁠45.

3. (1) ಯೆಹೋಶುವನು ತನ್ನ ಮಾರ್ಗದಲ್ಲಿ ಸಫಲನಾಗಲು ಏನು ಮಾಡಬೇಕಿತ್ತು? (2) ನಾವೀಗ ಯಾವ ವಿಷಯವನ್ನು ಚರ್ಚಿಸಲಿದ್ದೇವೆ?

3 ಎಲ್ಲಕ್ಕಿಂತ ಮುಖ್ಯವಾಗಿ ನಾವು ಯೆಹೋವನ ದೃಷ್ಟಿಯಲ್ಲಿ ಯಶಸ್ವಿಗಳಾಗಿದ್ದೇವಾ ಎಂದು ತಿಳಿದುಕೊಳ್ಳಬೇಕು. ಏಕೆಂದರೆ ಆತನ ಅನುಗ್ರಹ ಪಡೆದರೆ ಮಾತ್ರ ನಾವು ನಿತ್ಯಜೀವ ಪಡೆಯುತ್ತೇವೆ. ಯೆಹೋಶುವನಿಗೆ ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ಕೊಂಡೊಯ್ಯುವ ನೇಮಕ ಕೊಟ್ಟಾಗ ಧರ್ಮಶಾಸ್ತ್ರವನ್ನು “ಹಗಲಿರುಳು” ಓದಿ ಅದರ ಪ್ರಕಾರ ನಡೆಯುವಂತೆ ಯೆಹೋವನು ಹೇಳಿದನು. ಹೀಗೆ ಮಾಡುವುದಾದರೆ “ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ” ಎಂದು ಆಶ್ವಾಸನೆಯನ್ನೂ ಕೊಟ್ಟನು. (ಯೆಹೋ. 1:​7, 8) ಹೌದು, ಯೆಹೋವ ದೇವರು ಹೇಳಿದಂತೆಯೇ ಯೆಹೋಶುವ ಮಾಡಿದನು ಮತ್ತು ಯಶಸ್ವಿಯಾದನು. ಹಾಗಾದರೆ ನಮ್ಮ ಬಗ್ಗೆ ಏನು? ಯಶಸ್ಸಿನ ಕುರಿತ ನಮ್ಮ ನೋಟ ಹಾಗೂ ದೇವರ ನೋಟ ಒಂದೇ ಆಗಿದೆಯಾ? ಅದನ್ನು ತಿಳಿದುಕೊಳ್ಳುವುದಾದರೂ ಹೇಗೆ? ಅದಕ್ಕಾಗಿ ಬೈಬಲ್‌ನಲ್ಲಿ ತಿಳಿಸಲಾಗಿರುವ ಇಬ್ಬರು ವ್ಯಕ್ತಿಗಳ ಉದಾಹರಣೆಗಳನ್ನು ನಾವೀಗ ನೋಡೋಣ.

ಸೊಲೊಮೋನ ಯಶಸ್ಸು ಪಡೆದನೇ?

4. ಸೊಲೊಮೋನ ಯಶಸ್ವಿಯಾಗಿದ್ದನೆಂದು ಏಕೆ ಹೇಳಬಹುದು?

4 ಸೊಲೊಮೋನನು ಅನೇಕ ರೀತಿಯಲ್ಲಿ ಯಶಸ್ಸು ಗಳಿಸಿದನು. ಏಕೆ? ಅವನು ಯೆಹೋವ ದೇವರಿಗೆ ಭಯಪಟ್ಟು ವಿಧೇಯನಾಗಿದ್ದ ವರ್ಷಗಳಲ್ಲೆಲ್ಲಾ ಆತನಿಂದ ಬಹಳ ಆಶೀರ್ವಾದಗಳನ್ನು ಪಡೆದನು. ಯೆಹೋವನು ಸೊಲೊಮೋನನಿಗೆ ಯಾವ ವರ ಬೇಕು ಕೇಳಿಕೊ ಎಂದಾಗ ಜನರನ್ನು ಮಾರ್ಗದರ್ಶಿಸಲು ಬೇಕಾದ ವಿವೇಕವನ್ನು ದಯಪಾಲಿಸುವಂತೆ ಅವನು ಬಿನ್ನೈಸಿದನು. ಇದನ್ನು ಮೆಚ್ಚಿ ದೇವರು ಅವನಿಗೆ ವಿವೇಕವನ್ನೂ ಜೊತೆಗೆ ಐಶ್ವರ್ಯವನ್ನೂ ಅನುಗ್ರಹಿಸಿದನು. (1 ಅರಸುಗಳು 3:​10-14 ಓದಿ.) ಅದರಿಂದಾಗಿ ಸೊಲೊಮೋನನ ವಿವೇಕ ‘ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ಮಿಗಿಲಾಗಿತ್ತು.’ ಅವನ ಪ್ರಸಿದ್ಧಿ “ಸುತ್ತಣ ಎಲ್ಲಾ ಜನಾಂಗಗಳಲ್ಲಿ” ಹಬ್ಬಿತು. (1 ಅರ. 4:​30, 31) ಸೊಲೊಮೋನನ ಐಶ್ವರ್ಯ ಎಷ್ಟಿತ್ತೆಂದರೆ ಅವನ ವಾರ್ಷಿಕ ವರಮಾನದಲ್ಲಿ ಚಿನ್ನವೊಂದೇ ಸುಮಾರು 25 ಟನ್‌ಗಳಷ್ಟಾಗಿತ್ತು! (2 ಪೂರ್ವ. 9:​13, 14) ಮಾತ್ರವಲ್ಲ ಅವನಲ್ಲಿ ಅಪಾರ ವ್ಯವಹಾರ ಜ್ಞಾನವಿತ್ತು. ರಾಷ್ಟ್ರರಾಷ್ಟ್ರಗಳ ಮಧ್ಯೆ ಒಳ್ಳೇ ವ್ಯಾಪಾರ ವಹಿವಾಟನ್ನು ನಡೆಸುತ್ತಿದ್ದನು. ಅನೇಕಾನೇಕ ಸುಂದರ ಕಟ್ಟಡಗಳನ್ನು ಕಟ್ಟಿಸಿದನು. ಹೌದು, ಯೆಹೋವನಿಗೆ ವಿಧೇಯನಾಗಿದ್ದ ಸಮಯದುದ್ದಕ್ಕೂ ಯಶಸ್ಸಿನ ಶಿಖರವನ್ನೇರಿದನು.​—⁠2 ಪೂರ್ವ. 9:​22-24.

5. ಯಾರು ನಿಜವಾಗಿಯೂ ಯಶಸ್ವಿಗಳೆಂದು ಸೊಲೊಮೋನನು ಹೇಳಿದನು?

5 ಹಾಗಾದರೆ ಸಂಪತ್ತು, ಪ್ರಖ್ಯಾತಿ ಇರುವವರು ಮಾತ್ರ ಯಶಸ್ಸು, ಸಂತೋಷ ಪಡೆಯಬಹುದೆಂದು ಸೊಲೊಮೋನ ಅಂದುಕೊಂಡಿದ್ದನೋ? ಖಂಡಿತ ಇಲ್ಲ. ಅವನು ಪ್ರಸಂಗಿ ಪುಸ್ತಕದಲ್ಲಿ ಬರೆದ ವಿಷಯಗಳಿಂದ ನಮಗಿದು ತಿಳಿದುಬರುತ್ತದೆ. ಅವನು ಬರೆದದ್ದು: “ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ.” (ಪ್ರಸಂ. 3:​12, 13) ಈ ಎಲ್ಲ ಒಳ್ಳೇ ವಿಷಯಗಳಲ್ಲಿ ಒಬ್ಬ ವ್ಯಕ್ತಿ ನಿಜ ಸಂತೋಷವನ್ನು ಪಡೆದುಕೊಳ್ಳುವುದು ಅವನಿಗೆ ದೇವರ ಅನುಗ್ರಹವಿರುವಾಗ ಮತ್ತು ದೇವರೊಂದಿಗೆ ಸುಸಂಬಂಧವಿರುವಾಗಲೇ ಎಂದು ಸೊಲೊಮೋನ ಅರಿತಿದ್ದನು. ಆದ್ದರಿಂದಲೇ ಅವನು “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ ಕರ್ತವ್ಯವು ಇದೇ” ಎಂದು ಬರೆದನು.​—⁠ಪ್ರಸಂ. 12:⁠13.

6. ನಿಜ ಯಶಸ್ಸನ್ನು ಅಳೆಯಲು ಸೊಲೊಮೋನನ ಉದಾಹರಣೆ ಹೇಗೆ ಸಹಾಯಮಾಡುತ್ತದೆ?

6 ಸೊಲೊಮೋನನು ಅನೇಕ ವರ್ಷಗಳ ಕಾಲ ಯೆಹೋವನಿಗೆ ಭಯಭಕ್ತಿಯಿಂದ ನಡಕೊಂಡನು. ಅವನು ‘ಯೆಹೋವನನ್ನು ಪ್ರೀತಿಸಿ ತನ್ನ ತಂದೆಯಾದ ದಾವೀದನ ವಿಧಿಗಳನ್ನು ಕೈಕೊಳ್ಳುವವನಾಗಿದ್ದನು’ ಎಂದು ಬೈಬಲ್‌ ಹೇಳುತ್ತದೆ. (1 ಅರ. 3:⁠3) ಇದೇ ಅವನ ಜೀವನದ ನಿಜ ಯಶಸ್ಸಾಗಿತ್ತು. ಅವನು ದೇವರ ಮಾರ್ಗದರ್ಶನದಡಿಯಲ್ಲಿ ಸತ್ಯಾರಾಧನೆಗಾಗಿ ವೈಭವೋಪೇತ ದೇವಾಲಯ ಕಟ್ಟಿದನು. ಬೈಬಲಿನ ಮೂರು ಪುಸ್ತಕಗಳ ಲೇಖಕನಾಗುವ ಸುಯೋಗ ಅವನಿಗೆ ಸಿಕ್ಕಿತು! ಸೊಲೊಮೋನ ಮಾಡಿದ್ದನ್ನೇ ನಮಗೆ ಮಾಡಲಾಗುವುದಿಲ್ಲ ನಿಜ. ಆದರೆ ಯೆಹೋವನಿಗೆ ನಂಬಿಗಸ್ತನಾಗಿದ್ದ ಸಮಯದಲ್ಲಿ ಅವನಿಟ್ಟ ಮಾದರಿಯು ನಿಜವಾದ ಯಶಸ್ಸನ್ನು ಅವಲೋಕಿಸುವುದು ಹೇಗೆಂದು ನಮಗೆ ತೋರಿಸುತ್ತದೆ. ಅಂಥ ಯಶಸ್ಸನ್ನು ಪಡೆಯಲು ಶ್ರಮಿಸುವಂತೆ ಸಹಾಯಮಾಡುತ್ತದೆ. ಸೊಲೊಮೋನ ಬರೆದ ಇನ್ನೊಂದು ವಿಷಯವನ್ನೂ ಗಮನಿಸಿ. ಇಂದು ಜನರು ಏನಿದ್ದರೆ ಯಶಸ್ಸು ಎಂದು ನೆನಸುತ್ತಾರೋ ಆ ಸಂಪತ್ತು, ವಿವೇಕ, ಪ್ರಖ್ಯಾತಿ, ಅಧಿಕಾರವೆಲ್ಲ ವ್ಯರ್ಥ. ಅವುಗಳನ್ನು ಪಡೆಯಲು ಶ್ರಮಿಸುವುದು “ಗಾಳಿಯನ್ನು ಹಿಂದಟ್ಟಿದ ಹಾಗೆ” ಎಂದು ಅವನು ದೇವಪ್ರೇರಣೆಯಿಂದ ಬರೆದನು. ಇದು ಎಷ್ಟು ನಿಜವಲ್ಲವೆ? ಹಣದ ಹಿಂದೆ ಬಿದ್ದಿರುವವರನ್ನು ನೋಡಿ. ರಾಶಿ ರಾಶಿ ಹಣವಿದ್ದರೂ ಇನ್ನೂ ಬೇಕೆಂಬ ಆಸೆ ಇರುವ ಅವರಿಗೆ ಯಾವಾಗಲೂ ತಮ್ಮ ಗಂಟಿನ ಬಗ್ಗೆಯೇ ಚಿಂತೆ, ಸಂತೋಷವೇ ಇಲ್ಲ. ಮಾತ್ರವಲ್ಲ ಅವರು ಸಂಪಾದಿಸಿದ್ದೆಲ್ಲ ಒಂದು ದಿನ ಬೇರೆಯವರ ಪಾಲಾಗುತ್ತದೆ.​ಪ್ರಸಂಗಿ 2:​9-11, 17; 5:​10-12 ಓದಿ.

7, 8. (1) ಸೊಲೊಮೋನ ಅಪನಂಬಿಗಸ್ತನಾದದ್ದು ಹೇಗೆ? (2) ಫಲಿತಾಂಶ ಏನಾಯಿತು?

7 ಆದರೆ ಸೊಲೊಮೋನನ ವಿಷಯದಲ್ಲಿ ನಿಮಗೆ ಗೊತ್ತೇ ಇರುವಂತೆ ಅವನು ಸಮಯಾನಂತರ ಅವಿಧೇಯನಾಗಿ ಯೆಹೋವನಿಂದ ದೂರಸರಿದನು. ದೇವರ ವಾಕ್ಯ ಹೀಗನ್ನುತ್ತದೆ: “ಅವನು ವೃದ್ಧನಾದಾಗ [ಪತ್ನಿಯರು] ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಯಥಾರ್ಥಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡಿಯಲಿಲ್ಲ. . . . ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.”​—⁠1 ಅರ. 11:​4-6.

8 ಯೆಹೋವನು ಇದನ್ನು ಮೆಚ್ಚಲಿಲ್ಲ. ಆದ್ದರಿಂದಲೇ ಅವನಿಗೆ “ನೀನು ಈ ಪ್ರಕಾರ ಮಾಡಿ ನನ್ನ ವಿಧಿನಿಬಂಧನೆಗಳನ್ನು ಮೀರಿದ್ದರಿಂದ ನಿನ್ನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ಸೇವಕನಿಗೆ ಕೊಡುವೆನು” ಎಂದು ಹೇಳಿದನು. (1 ಅರ. 11:11) ಎಷ್ಟು ವಿಷಾದಕರ! ಎಷ್ಟೆಲ್ಲ ವಿಷಯಗಳಲ್ಲಿ ಯಶಸ್ಸನ್ನು ಪಡೆದ ಸೊಲೊಮೋನ ಜೀವನದ ಅತಿ ಪ್ರಮುಖ ವಿಷಯದಲ್ಲಿ ಅಂದರೆ ಯೆಹೋವನಿಗೆ ನಂಬಿಗಸ್ತಿಕೆ ತೋರಿಸುವುದರಲ್ಲಿ ಯಶಸ್ಸು ಗಳಿಸಲಿಲ್ಲ. ಯೆಹೋವನನ್ನು ದುಃಖಪಡಿಸಿದನು. ಸೊಲೊಮೋನನ ಈ ಉದಾಹರಣೆ ನಮಗೆ ಎಚ್ಚರಿಕೆಯ ಪಾಠವಾಗಿದೆ. ನಾವು ಹೀಗೆ ಕೇಳಿಕೊಳ್ಳೋಣ: “ಸೊಲೊಮೋನನಿಂದ ನಾನು ಪಾಠ ಕಲಿತು ಯೆಹೋವನಿಗೆ ನಂಬಿಗಸ್ತನಾಗಿರುವ ಮೂಲಕ ನಿಜ ಯಶಸ್ಸು ಪಡೆಯುತ್ತೇನಾ?”

ನಿಜ ಯಶಸ್ಸು ಪಡೆದವನು

9. ಲೋಕದ ಜನರ ದೃಷ್ಟಿಯಲ್ಲಿ ಪೌಲನು ಯಶಸ್ಸು ಗಳಿಸಿದ್ದನೋ? ವಿವರಿಸಿ.

9 ರಾಜ ಸೊಲೊಮೋನನಿದ್ದ ಪರಿಸ್ಥಿತಿಗೂ ಅಪೊಸ್ತಲ ಪೌಲನಿದ್ದ ಪರಿಸ್ಥಿತಿಗೂ ಅಜಗಜಾಂತರ. ಪೌಲನು ಅರಮನೆಯಲ್ಲಿ ಐಷಾರಾಮದ ಜೀವನ ನಡೆಸಲಿಲ್ಲ. ರಾಜರೊಂದಿಗೆ ಮೃಷ್ಟಾನ್ನ ಭೋಜನ ಸವಿಯಲಿಲ್ಲ. ಅವನು ಕೆಲವೊಮ್ಮೆ ಹಸಿವೆ, ಬಾಯಾರಿಕೆ, ಚಳಿ, ಬೆತ್ತಲೆ ಸ್ಥಿತಿಯಲ್ಲೂ ಇದ್ದದ್ದುಂಟು. (2 ಕೊರಿಂ. 11:​24-27) ಯೇಸುವನ್ನು ಮೆಸ್ಸೀಯನೆಂದು ಅಂಗೀಕರಿಸಿದ ಮೇಲೆ ಯೆಹೂದಿ ಧರ್ಮದಲ್ಲಿ ಅವನಿಗಿದ್ದ ಸ್ಥಾನಮಾನವನ್ನೆಲ್ಲ ಕಳಕೊಂಡನು. ಅಷ್ಟೇ ಅಲ್ಲ ಯೆಹೂದಿ ಧಾರ್ಮಿಕ ಮುಖಂಡರ ದ್ವೇಷಕ್ಕೆ ಗುರಿಯಾದನು. ಅವನನ್ನು ಸೆರೆಮನೆಗೆ ಹಾಕಲಾಯಿತು, ಚಾವಟಿಯೇಟು ಕೊಡಲಾಯಿತು, ದೊಣ್ಣೆಗಳಿಂದ ಹೊಡೆಯಲಾಯಿತು, ಕಲ್ಲೆಸೆದು ಕೊಲ್ಲಲು ಪ್ರಯತ್ನಿಸಲಾಯಿತು. ಪೌಲನೇ ಹೇಳಿದಂತೆ ಅವನೂ ಜೊತೆಕ್ರೈಸ್ತರೂ ಬಯ್ಗುಳ, ಹಿಂಸೆ, ಅವಮಾನವನ್ನು ತಾಳಿಕೊಂಡರು. “ನಾವು ಇಂದಿನ ವರೆಗೂ ಲೋಕದ ಕಸವೋ ಎಲ್ಲ ಸಂಗತಿಗಳ ಹೊಲಸೋ ಎಂಬಂತಾಗಿದ್ದೇವೆ” ಎಂದು ಬರೆದನು ಪೌಲ.​—⁠1 ಕೊರಿಂ. 4:​11-13.

10. ಪೌಲನು ಯಶಸ್ಸನ್ನು ಕೈಬಿಟ್ಟನು ಎಂಬಂತೆ ತೋರಿದ್ದಿರಬಹುದೇಕೆ?

10 ಅಪೊಸ್ತಲ ಪೌಲನಿಗೆ ಮೊದಲು ಸೌಲನೆಂಬ ಹೆಸರಿತ್ತು. ಪ್ರತಿಭಾವಂತನಾಗಿದ್ದ ಆ ಯುವಕನಿಗೆ ದೊಡ್ಡ ಹೆಸರು ಗಳಿಸುವ ಅವಕಾಶಗಳಿದ್ದಂತೆ ತೋರಿದ್ದಿರಬೇಕು. ಪ್ರತಿಷ್ಠಿತ ಕುಟುಂಬದಿಂದ ಬಂದಿರಬಹುದಾದ ಅವನು ಗೌರವಾನ್ವಿತ ಶಿಕ್ಷಕನಾಗಿದ್ದ ಗಮಲಿಯೇಲನಿಂದ ಶಿಕ್ಷಣ ಪಡೆದಿದ್ದನು. “ನನ್ನ ಸಮಪ್ರಾಯದವರಲ್ಲಿ ಅನೇಕರಿಗಿಂತಲೂ ನಾನು ಯೆಹೂದಿಮತದಲ್ಲಿ ಹೆಚ್ಚು ಪ್ರಗತಿಯನ್ನು ಮಾಡುತ್ತಾ ಇದ್ದೆನು” ಎಂದು ಪೌಲನೇ ಹೇಳಿದ್ದಾನೆ. (ಗಲಾ. 1:14) ಹೀಬ್ರು, ಗ್ರೀಕ್‌ ಭಾಷೆಯನ್ನು ಸರಾಗವಾಗಿ ಮಾತಾಡುತ್ತಿದ್ದನು. ರೋಮ್‌ನ ಪೌರತ್ವ ಪಡೆದುಕೊಂಡಿದ್ದನು. ಹಾಗಾಗಿ ಬಹುಮಂದಿ ಆಸೆಪಡುತ್ತಿದ್ದ ಅವಕಾಶಗಳು, ಹಕ್ಕುಗಳು ಅವನಿಗೆ ಸಿಕ್ಕಿದ್ದವು. ಲೌಕಿಕ ಯಶಸ್ಸನ್ನು ಗಳಿಸಲು ಪ್ರಯತ್ನಿಸಿದ್ದರೆ ಅವನಿಗೆ ಪ್ರಖ್ಯಾತಿ, ಶ್ರೀಮಂತಿಕೆ ಸಿಗುತ್ತಿತ್ತೇನೋ. ಆದರೆ ಅವನು ಅದನ್ನೆಲ್ಲ ಕೈಬಿಟ್ಟು ಬೇರೆಯೇ ಆಯ್ಕೆ ಮಾಡಿದನು. ಇತರ ಜನರಿಗೆ, ಅವನ ಸಂಬಂಧಿಕರಲ್ಲೂ ಕೆಲವರಿಗೆ ಅವನ ಆಯ್ಕೆ ಶುದ್ಧ ಮೂರ್ಖತನವೆನಿಸಿದ್ದಿರಬೇಕು. ಏಕೆ?

11. (1) ಯಾವ ವಿಷಯಗಳು ಮತ್ತು ಗುರಿ ಪೌಲನಿಗೆ ಅತ್ಯಮೂಲ್ಯವಾಗಿತ್ತು? (2) ಏಕೆ?

11 ಪೌಲನಿಗೆ ಯೆಹೋವನ ಮೇಲೆ ಪ್ರೀತಿಯಿತ್ತು. ಐಶ್ವರ್ಯ, ಸ್ಥಾನಮಾನಕ್ಕಿಂತ ಯೆಹೋವನ ಒಪ್ಪಿಗೆಯನ್ನು ಪಡೆಯುವುದೇ ಅವನಿಗೆ ಮುಖ್ಯವಾಗಿತ್ತು. ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದ ನಂತರ ಅವನು ವಿಮೋಚನಾ ಮೌಲ್ಯ ಯಜ್ಞ, ಕ್ರೈಸ್ತ ಶುಶ್ರೂಷೆ, ಸ್ವರ್ಗೀಯ ನಿರೀಕ್ಷೆಯ ಮೌಲ್ಯ ಅರಿತನು. ಲೋಕದ ಜನರು ಈ ವಿಷಯಗಳಿಗೆ ಲಕ್ಷ್ಯವನ್ನೇ ಕೊಡುವದಿಲ್ಲವಾದರೂ ಪೌಲನಿಗೆ ಅವು ಬಹು ಅಮೂಲ್ಯ ವಿಷಯಗಳಾಗಿದ್ದವು. ಮಾತ್ರವಲ್ಲ ಸೈತಾನನು ಎಬ್ಬಿಸಿದ ವಿವಾದಾಂಶ ಬಗೆಹರಿಯಲ್ಪಡಬೇಕಿದೆ ಎಂದೂ ಅವನು ಅರಿತನು. ಸೈತಾನನು ಯಾರನ್ನೇ ಆಗಲಿ ದೇವರಿಂದ ದೂರಮಾಡಲು ತನ್ನಿಂದ ಸಾಧ್ಯ ಎಂದು ದೇವರಿಗೆ ಸವಾಲು ಹಾಕಿದ್ದನು. (ಯೋಬ 1:​9-11; 2:​3-5) ಆದ್ದರಿಂದ ಎಷ್ಟೇ ಕಷ್ಟ ಬಂದರೂ ಪೌಲ ಯೆಹೋವನಿಗೆ ನಂಬಿಗಸ್ತನಾಗಿ ಉಳಿಯಲು, ಸತ್ಯಾರಾಧನೆಯಿಂದ ದೂರ ಸರಿಯದಿರಲು ನಿಶ್ಚಯದಿಂದಿದ್ದನು. ಲೋಕದ ಜನರಿಗಾದರೋ ಯಶಸ್ಸು ಗಳಿಸಬೇಕಾದರೆ ಇದು ಅವಶ್ಯ ಎಂದು ತಿಳಿದೇ ಇಲ್ಲ.

12. ದೇವರ ಮೇಲೆ ನಿರೀಕ್ಷೆಯನ್ನಿಡುವ ನಿರ್ಧಾರವನ್ನು ನೀವೇಕೆ ಮಾಡಿದ್ದೀರಿ?

12 ಪೌಲನಂತೆ ನೀವೂ ದೃಢನಿಶ್ಚಯ ಮಾಡಿದ್ದೀರಾ? ನಂಬಿಗಸ್ತರಾಗಿ ಉಳಿಯುವುದು ಯಾವಾಗಲೂ ಸುಲಭವಲ್ಲ. ಆದರೆ ನಂಬಿಗಸ್ತರಾಗಿ ಉಳಿಯುವುದರಿಂದ ನಮಗೆ ಯೆಹೋವನ ಮೆಚ್ಚುಗೆ ಮತ್ತು ಆಶೀರ್ವಾದ ಸಿಗುತ್ತದೆ. ಅದಿದ್ದರೆ ಮಾತ್ರ ನಾವು ನಿಜ ಯಶಸ್ಸು ಪಡೆಯುತ್ತೇವೆ. (ಜ್ಞಾನೋ. 10:22) ಇದರಿಂದ ನಮಗೆ ಈಗ ಮಾತ್ರವಲ್ಲ ಭವಿಷ್ಯತ್ತಿನಲ್ಲೂ ಆಶೀರ್ವಾದಗಳು ದೊರೆಯುತ್ತವೆ. (ಮಾರ್ಕ 10:​29, 30 ಓದಿ.) ಆದಕಾರಣ “ಅನಿಶ್ಚಿತವಾದ ಐಶ್ವರ್ಯದ ಮೇಲಲ್ಲ, ನಮ್ಮ ಆನಂದಕ್ಕಾಗಿ ನಮಗೆ ಎಲ್ಲವನ್ನೂ ಹೇರಳವಾಗಿ ಒದಗಿಸುವ ದೇವರ ಮೇಲೆ” ನಾವು ನಿರೀಕ್ಷೆಯನ್ನಿಡುತ್ತೇವೆ. ‘ವಾಸ್ತವವಾದ ಜೀವನವನ್ನು ಭದ್ರವಾಗಿ ಹಿಡಿಯುವಂತಾಗಲು ಭವಿಷ್ಯತ್ತಿಗಾಗಿ ಒಳ್ಳೇ ಅಸ್ತಿವಾರವನ್ನು ನಮಗಾಗಿ ಜಾಗರೂಕತೆಯಿಂದ ಶೇಖರಿಸಿಟ್ಟುಕೊಳ್ಳುತ್ತೇವೆ.’ (1 ತಿಮೊ. 6:​17-19) ಹೀಗೆ ಮಾಡುವುದಾದರೆ ಇಂದಿನಿಂದ ನೂರು ವರ್ಷ, ಸಾವಿರ ವರ್ಷ, ಅಷ್ಟೇಕೆ ಯುಗಯುಗಗಳು ಕಳೆದರೂ ನಾವು ಹೀಗೆ ಹೇಳುವೆವು ಖರೆ: “ನಾನು ಸರಿಯಾದ ಆಯ್ಕೆಯನ್ನೇ ಮಾಡಿ ಯಶಸ್ವಿಯಾದೆ.”

ನಿಮ್ಮ ಸಂಪತ್ತು ಎಲ್ಲಿದೆ?

13. ಸಂಪತ್ತನ್ನು ಕೂಡಿಸಿಡುವುದರ ಬಗ್ಗೆ ಯೇಸು ಯಾವ ಸಲಹೆ ಕೊಟ್ಟನು?

13 ಸಂಪತ್ತು ಕೂಡಿಸಿಡುವುದರ ಬಗ್ಗೆ ಯೇಸು ಹೇಳಿದ್ದು: “ಭೂಮಿಯಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವುದನ್ನು ನಿಲ್ಲಿಸಿರಿ; ಇಲ್ಲಿ ನುಸಿ ಮತ್ತು ಕಿಲುಬು ಅದನ್ನು ಹಾಳುಮಾಡಿಬಿಡುತ್ತದೆ; ಕಳ್ಳರು ಒಳನುಗ್ಗಿ ಕದಿಯುತ್ತಾರೆ. ಆದರೆ ಸ್ವರ್ಗದಲ್ಲಿ ನಿಮಗಾಗಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ; ಅಲ್ಲಿ ನುಸಿಯಾಗಲಿ ಕಿಲುಬಾಗಲಿ ಅದನ್ನು ಹಾಳುಮಾಡುವುದಿಲ್ಲ ; ಕಳ್ಳರು ಒಳನುಗ್ಗಿ ಕದಿಯುವುದೂ ಇಲ್ಲ. ನಿನ್ನ ಸಂಪತ್ತು ಇರುವಲ್ಲಿಯೇ ನಿನ್ನ ಹೃದಯವು ಸಹ ಇರುವುದು.”​—⁠ಮತ್ತಾ. 6:​19-21.

14. ಲೋಕದ ಸಂಪತ್ತನ್ನು ಗಳಿಸಲು ಶ್ರಮಿಸುವುದು ಅವಿವೇಕತನ ಏಕೆ?

14 ಸಂಪತ್ತೆಂದರೆ ಹಣವೇ ಆಗಿರಬೇಕೆಂದಿಲ್ಲ. ಅದು ಸೊಲೊಮೋನ ಯಾವುದರ ಕುರಿತು ಬರೆದನೋ ಮತ್ತು ಲೋಕದ ಜನರು ಯಾವುದನ್ನು ಯಶಸ್ಸೆಂದು ಕಾಣುತ್ತಾರೋ ಆ ಘನತೆ-ಗೌರವ, ಪ್ರಸಿದ್ಧಿ, ಅಧಿಕಾರವೂ ಆಗಿರುತ್ತದೆ. ಸೊಲೊಮೋನನು ಪ್ರಸಂಗಿ ಪುಸ್ತಕದಲ್ಲಿ ಲೌಕಿಕ ಸಂಪತ್ತು ಕ್ಷಣಿಕ ಎಂಬ ಅಂಶವನ್ನು ಹೇಳಿದನು. ಯೇಸು ಮೇಲಿನ ಮಾತುಗಳಲ್ಲಿ ಹೇಳಿದ ಅಂಶ ಕೂಡ ಅದೇ ಆಗಿತ್ತು. ಈ ಮಾತುಗಳ ಸತ್ಯತೆಯನ್ನು ನಿಮ್ಮ ಸುತ್ತಮುತ್ತ ಕಾಣಬಹುದು. ಸಂಪತ್ತು ಬೇಗನೆ ಹಾಳಾಗಿ ಹೋಗುತ್ತದೆ ಅಥವಾ ಅದನ್ನು ಕಳೆದುಕೊಳ್ಳಸಾಧ್ಯವಿದೆ. ಇಂಥ ಕ್ಷಣಿಕ ಸಂಪತ್ತಿನ ಕುರಿತು ಪ್ರೊಫೆಸರ್‌ ಎಫ್‌. ಡೇಲ್‌ ಬ್ರೂನರ್‌ ಹೀಗೆ ಬರೆದಿದ್ದಾರೆ: “ಪ್ರಖ್ಯಾತಿ ಒಂದು ಕ್ಷಣದಲ್ಲಿ ಇದ್ದರೆ ಇನ್ನೊಂದು ಕ್ಷಣದಲ್ಲಿ ಇಲ್ಲದೇ ಹೋಗುತ್ತದೆ. ಇವತ್ತು ಯಾರನ್ನು ಹೀರೋ ಎಂದು ಜನರು ನೆನಸುತ್ತಾರೋ ಸ್ವಲ್ಪ ದಿನದಲ್ಲಿ ಅವನ ಹೆಸರೇ ಮರೆಯಾಗಿ ಹೋಗುತ್ತದೆ. ಈ ವರ್ಷ ಬಂಪರ್‌ ಲಾಭವಾದರೆ ಮರುವರ್ಷ ದಿವಾಳಿತನ. . . . [ಯೇಸುವಿಗೆ] ಮನುಷ್ಯರ ಮೇಲೆ ಪ್ರೀತಿ ಇದೆ. ಆದ್ದರಿಂದಲೇ ಕ್ಷಣಮಾತ್ರವೇ ಇದ್ದು ನಂತರ ಕಣ್ಮರೆಯಾಗುವ ಪ್ರಖ್ಯಾತಿಯ ಹಿಂದೆ ಹೋಗದಂತೆ ಎಚ್ಚರಿಸಿದ್ದಾನೆ. ಏಕೆಂದರೆ ಅದು ನಮ್ಮನ್ನು ಹತಾಶೆಯಲ್ಲಿ ಮುಳುಗಿಸುತ್ತದೆ. ತನ್ನ ಶಿಷ್ಯರು ನಿರಾಶೆ ಹೊಂದುವುದನ್ನು ಯೇಸು ಇಷ್ಟಪಡುವುದಿಲ್ಲ. ‘ಈ ಲೋಕವು ಪ್ರಖ್ಯಾತಿಯ ಉತ್ತುಂಗಕ್ಕೇರಿದವರನ್ನು ಪ್ರತಿದಿನ ಕೆಳಕ್ಕುರುಳಿಸುತ್ತದೆ.’” ಈ ಮೇಲಿನ ಮಾತುಗಳನ್ನು ಹೆಚ್ಚಿನ ಜನರು ಒಪ್ಪುತ್ತಾರೆ. ಆದರೆ ಅದರ ಪ್ರಕಾರ ನಡೆಯುವವರು ಎಷ್ಟು ಮಂದಿ? ನೀವು ನಡೆಯುತ್ತೀರಾ?

15. ಎಂಥ ರೀತಿಯ ಯಶಸ್ಸನ್ನು ಪಡೆಯಲು ನಾವು ಶ್ರಮಿಸಬೇಕು?

15 ಯಶಸ್ಸು ಪಡೆಯಲು ಶ್ರಮಿಸುವುದು ತಪ್ಪು, ಅದಕ್ಕಾಗಿ ಪ್ರಯತ್ನ ಮಾಡಬಾರದು ಎಂದು ಕೆಲವು ಧಾರ್ಮಿಕ ಮುಖಂಡರು ಸಾರಿದ್ದಾರೆ. ಆದರೆ ಗಮನಿಸಿ, ಯಶಸ್ಸನ್ನು ಪಡೆಯಲು ಪ್ರಯತ್ನ ಮಾಡಬೇಡಿ ಎಂದು ಯೇಸು ಹೇಳಲಿಲ್ಲ. ಬದಲಿಗೆ ತನ್ನ ಶಿಷ್ಯರು ನಿಜ ಯಶಸ್ಸನ್ನು ಪಡೆಯಲು ಶ್ರಮಿಸುವಂತೆ ಅಂದರೆ ಎಂದೂ ಹಾಳಾಗದಂಥ ‘ಸಂಪತ್ತನ್ನು ಸ್ವರ್ಗದಲ್ಲಿ’ ಕೂಡಿಸಿಟ್ಟುಕೊಳ್ಳುವಂತೆ ಪ್ರೋತ್ಸಾಹಿಸಿದನು. ಯೆಹೋವನ ದೃಷ್ಟಿಯಲ್ಲಿ ಯಶಸ್ವಿಗಳಾಗುವಂತೆ ಶ್ರಮಿಸುವುದೇ ನಮ್ಮೆಲ್ಲರ ಬಲವಾದ ಇಚ್ಛೆಯಾಗಿರಬೇಕು. ಒಂದೋ ಭೂಮಿಯಲ್ಲಿ, ಇಲ್ಲವೆ ಸ್ವರ್ಗದಲ್ಲಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳುವ ಆಯ್ಕೆ ಪ್ರತಿಯೊಬ್ಬರ ಮುಂದಿದೆ ಎಂದು ಯೇಸುವಿನ ಮಾತುಗಳು ನಮಗೆ ನೆನಪಿಸುತ್ತವೆ. ಸತ್ಯ ಏನೆಂದರೆ, ನಮ್ಮ ಹೃದಯದಲ್ಲಿ ಏನಿದೆಯೋ ಯಾವುದಕ್ಕೆ ಹೆಚ್ಚು ಬೆಲೆಕೊಡುತ್ತೇವೋ ಅದನ್ನು ಪಡೆಯಲು ನಾವು ಬಹಳವಾಗಿ ಶ್ರಮಿಸುತ್ತೇವೆ.

16. ಯಾವುದರ ಕುರಿತು ನಾವು ದೃಢಭರವಸೆಯಿಂದ ಇರಬಹುದು?

16 ಯೆಹೋವನನ್ನು ಮೆಚ್ಚಿಸುವ ಇಚ್ಛೆ ನಮಗಿರುವುದಾದರೆ ಆತನು ನಮ್ಮ ಅಗತ್ಯಗಳನ್ನು ಪೂರೈಸುವನೆಂದು ದೃಢಭರವಸೆಯಿಂದ ಇರಬಲ್ಲೆವು. ಅಪೊಸ್ತಲ ಪೌಲನಂತೆ ನಾವು ಕೆಲವೊಮ್ಮೆ ತಾತ್ಕಾಲಿಕವಾಗಿ ಹಸಿವೆಯಿಂದಿರುವಂತೆ, ಬಾಯಾರಿಕೆಯಿಂದಿರುವಂತೆ ಯೆಹೋವನು ಅನುಮತಿಸಬಹುದು. (1 ಕೊರಿಂ. 4:11) ಹಾಗಿದ್ದರೂ ಯೇಸುವಿನ ವಿವೇಕಯುತ ಬುದ್ಧಿವಾದದಲ್ಲಿ ಸಂಪೂರ್ಣ ಭರವಸೆಯಿಡಸಾಧ್ಯವಿದೆ. ಆತನು ಹೇಳಿದ್ದು: “ಆದುದರಿಂದ ಏನು ಊಟಮಾಡಬೇಕು ಏನು ಕುಡಿಯಬೇಕು ಏನು ಧರಿಸಬೇಕೆಂದು ಎಂದಿಗೂ ಚಿಂತೆಮಾಡಬೇಡಿ. ಏಕೆಂದರೆ ಅನ್ಯಜನಾಂಗಗಳವರು ಇವುಗಳನ್ನು ತವಕದಿಂದ ಬೆನ್ನಟ್ಟುತ್ತಾರೆ. ಇವು ನಿಮಗೆ ಬೇಕಾಗಿವೆ ಎಂಬುದು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ತಿಳಿದಿದೆ. ಆದುದರಿಂದ ಮೊದಲು ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕುತ್ತಾ ಇರಿ; ಆಗ ಈ ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು.”​—⁠ಮತ್ತಾ. 6:​31-33.

ಯೆಹೋವನ ದೃಷ್ಟಿಯಲ್ಲಿ ಯಶಸ್ವಿಗಳಾಗಿ

17, 18. (1) ನಿಜವಾದ ಯಶಸ್ಸು ಯಾವುದರ ಮೇಲೆ ಹೊಂದಿಕೊಂಡಿದೆ? (2) ಯಶಸ್ಸು ಯಾವುದರ ಮೇಲೆ ಹೊಂದಿಕೊಂಡಿಲ್ಲ?

17 ನೆನಪಿನಲ್ಲಿಡಬೇಕಾದ ಮುಖ್ಯ ಅಂಶವೇನೆಂದರೆ ಲೋಕದಲ್ಲಿ ನಾವು ಮಾಡಿರುವ ಸಾಧನೆ ಅಥವಾ ನಮಗಿರುವ ಸ್ಥಾನಮಾನದ ಮೇಲೆ ನಿಜ ಯಶಸ್ಸು ಹೊಂದಿಕೊಂಡಿಲ್ಲ. ಕ್ರೈಸ್ತ ಸಭೆಯಲ್ಲಿ ನಮಗೆ ಎಷ್ಟು ಜವಾಬ್ದಾರಿಗಳಿವೆ ಅನ್ನುವುದರಿಂದಲೂ ನಿಜ ಯಶಸ್ಸನ್ನು ಅಳೆಯಲಾಗುವುದಿಲ್ಲ. ಬದಲಿಗೆ ನಾವು ಯೆಹೋವನಿಗೆ ತೋರಿಸುವ ವಿಧೇಯತೆ ಮತ್ತು ನಂಬಿಗಸ್ತಿಕೆಗೆ ಸಿಗುವ ಆಶೀರ್ವಾದವೇ ನಿಜವಾದ ಯಶಸ್ಸಾಗಿದೆ. “ಮನೆವಾರ್ತೆಗಾರರಲ್ಲಿ ಅವರು ನಂಬಿಗಸ್ತರಾಗಿ ಕಂಡುಬರುವುದನ್ನೇ ಅಪೇಕ್ಷಿಸಲಾಗುತ್ತದೆ” ಎಂದು ಯೆಹೋವನು ಹೇಳುತ್ತಾನೆ. (1 ಕೊರಿಂ. 4:⁠2) ಹಾಗಾಗಿ ನಾವು ಸದಾ ನಂಬಿಗಸ್ತರಾಗಿರಬೇಕು. ಯೇಸು ಹೇಳಿದ್ದು: “ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.” (ಮತ್ತಾ. 10:22) ನಂಬಿಗಸ್ತರು ರಕ್ಷಿಸಲ್ಪಡುವಾಗ ಅವರು ನಿಜವಾದ ಯಶಸ್ಸನ್ನು ಗಳಿಸಿದ್ದಾರೆನ್ನುವುದು ಸ್ಪಷ್ಟ!

18 ಈಗಾಗಲೇ ಗಮನಿಸಿದಂತೆ ನಂಬಿಗಸ್ತರಾಗಿರೋದು ಪ್ರಖ್ಯಾತಿ, ವಿದ್ಯಾಭ್ಯಾಸ, ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಾನಮಾನದ ಮೇಲೆ ಹೊಂದಿಕೊಂಡಿಲ್ಲ. ಅಥವಾ ಜಾಣತನ, ಪ್ರತಿಭೆ, ಸಾಮರ್ಥ್ಯದ ಮೇಲೂ ಆಧರಿಸಿಲ್ಲ. ನಾವು ಯಾವುದೇ ಸನ್ನಿವೇಶದಲ್ಲಿರಲಿ ಯೆಹೋವನಿಗೆ ನಂಬಿಗಸ್ತರಾಗಿ ನಡೆಯಸಾಧ್ಯವಿದೆ. ಪ್ರಥಮ ಶತಮಾನದ ದೇವಜನರಲ್ಲಿ ಕೆಲವರು ಶ್ರೀಮಂತರಾಗಿದ್ದರು, ಇನ್ನು ಕೆಲವರು ಬಡವರಾಗಿದ್ದರು. ಶ್ರೀಮಂತ ಕ್ರೈಸ್ತರು “ಒಳ್ಳೇದನ್ನು ಮಾಡುವವರಾಗಿರುವಂತೆಯೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರುವಂತೆಯೂ ಉದಾರಿಗಳಾಗಿರುವಂತೆಯೂ ಹಂಚಿಕೊಳ್ಳಲು ಸಿದ್ಧರಾಗಿರುವಂತೆಯೂ” ಪೌಲನು ಬುದ್ಧಿಹೇಳಿದನು. ಅದರರ್ಥ ಬಡವರಾಗಿರಲಿ ಶ್ರೀಮಂತರಾಗಿರಲಿ ಎಲ್ಲ ಕ್ರೈಸ್ತರು ‘ವಾಸ್ತವವಾದ ಜೀವನವನ್ನು ಭದ್ರವಾಗಿ ಹಿಡಿದುಕೊಳ್ಳಲು’ ಆಗುತ್ತಿತ್ತು. (1 ತಿಮೊ. 6:​17-19) ಇದು ಇಂದು ಕೂಡ ಸತ್ಯ. ದೇವರಿಗೆ ನಂಬಿಗಸ್ತರಾಗಿರುವ ಮತ್ತು ‘ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರುವ’ ಅದೇ ಅವಕಾಶ ಮತ್ತು ಜವಾಬ್ದಾರಿ ನಮಗೆಲ್ಲರಿಗೂ ಇದೆ. ಹಾಗೆ ಮಾಡಿದರೆ ಯೆಹೋವನ ದೃಷ್ಟಿಯಲ್ಲಿ ಯಶಸ್ವಿಗಳಾಗುತ್ತೇವೆ. ಮಾತ್ರವಲ್ಲ ಆತನನ್ನು ಸಂತೋಷಪಡಿಸುತ್ತಿದ್ದೇವೆಂದು ತಿಳಿದು ನಾವೂ ಕೂಡ ಖುಷಿಪಡುತ್ತೇವೆ.​—⁠ಜ್ಞಾನೋ. 27:⁠11.

19. ಯಶಸ್ವಿಯಾಗಲು ನೀವೇನು ಮಾಡುವಿರಿ?

19 ಲೋಕ ನಮ್ಮನ್ನು ನೋಡುವ ರೀತಿಯನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಮ್ಮ ಪರಿಸ್ಥಿತಿಯ ಬಗ್ಗೆ ನಮಗಿರುವ ನೋಟವನ್ನು ಬದಲಾಯಿಸಿಕೊಳ್ಳಸಾಧ್ಯವಿದೆ. ನಿಮ್ಮ ಸನ್ನಿವೇಶ ಎಂಥದ್ದೇ ಆಗಿರಲಿ ನಂಬಿಗಸ್ತರಾಗಿರಲು ಶ್ರಮಿಸಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಗ್ಯಾರಂಟಿ. ಈಗ ಮತ್ತು ಅನಂತಕಾಲದುದ್ದಕ್ಕೂ ಯೆಹೋವನು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುತ್ತಾನೆಂಬ ಭರವಸೆಯಿರಲಿ. ಅಭಿಷಿಕ್ತ ಕ್ರೈಸ್ತರಿಗೆ ಯೇಸು ಹೇಳಿದ ಮಾತುಗಳನ್ನು ಎಂದಿಗೂ ಮರೆಯದಿರಿ. “ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ​ಜೀವವೆಂಬ ಜಯಮಾಲೆಯನ್ನು ಕೊಡುವೆನು.” (ಪ್ರಕ. 2:10) ನಿತ್ಯಜೀವ ಪಡೆಯುವುದೇ ನಿಜವಾದ ಯಶಸ್ಸು!

[ಅಧ್ಯಯನ ಪ್ರಶ್ನೆಗಳು]

[ಪುಟ 6ರಲ್ಲಿರುವ ಚಿತ್ರ]

ಜನರ ದೃಷ್ಟಿಯಲ್ಲಿ ಸೌಲ ಯಶಸ್ಸಿನ ಹಾದಿಯಲ್ಲಿದ್ದನು

[ಪುಟ 7ರಲ್ಲಿರುವ ಚಿತ್ರ]

ಪೌಲ ನಿಜ ಯಶಸ್ಸು ಪಡೆದನು