ನಿಮಗೆ ನೆನಪಿದೆಯೇ?
ನಿಮಗೆ ನೆನಪಿದೆಯೇ?
ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:
ಬೆಂಕಿಯಂತಿರುವ ಲಂಗುಲಗಾಮಿಲ್ಲದ ಮಾತನ್ನು ನಂದಿಸುವುದು ಹೇಗೆ?
ನಾವು ನಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಬೇಕು. ಇನ್ನೊಬ್ಬರನ್ನು ಟೀಕಿಸುವುದರ ಬದಲು ನಮಗೇಕೆ ಹಾಗನಿಸುತ್ತದೆಂದು ಆಲೋಚಿಸಬೇಕು. ನಾವು ಇತರರ ಮುಂದೆ ಅವರಿಗಿಂತ ಒಳ್ಳೆಯವರೆಂದು ಕಾಣಬೇಕಂತ ಅವರನ್ನು ಟೀಕಿಸುತ್ತಿದ್ದೇವಾ? ಅಷ್ಟೆ ಅಲ್ಲ, ಟೀಕಿಸುವುದರಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ ಎನ್ನುವುದನ್ನು ಮನಸ್ಸಿನಲ್ಲಿಡಬೇಕು.—8/15, ಪುಟ 21.
ಮನುಷ್ಯರು ಭೂಮಿಯನ್ನು ನಾಶಮಾಡುವಂತೆ ದೇವರು ಬಿಡುತ್ತಾನೋ?
ಭೂಲೋಕ ಮಾನವನ ಕಪಿಮುಷ್ಟಿಗೆ ಸಿಕ್ಕಿ ವಾಸಕ್ಕೆ ಯೋಗ್ಯವಲ್ಲದ ಸ್ಥಳವಾಗುವಂತೆ ಯೆಹೋವ ದೇವರು ಬಿಡುವುದಿಲ್ಲ. ಈ ಆಶ್ವಾಸನೆ ನಮಗೆ ಬೈಬಲಿನಲ್ಲಿದೆ: “ದೇವರು . . . ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ‘ಭೂಮಿಯನ್ನು ನಾಶಮಾಡುತ್ತಿರುವವರನ್ನು ಆತನು ನಾಶಗೊಳಿಸುವನು.’—ಪ್ರಕಟನೆ 11:18.—07/01, ಪುಟ 4.
ಯೆಹೋವನ ದಿನ ಆರಂಭವಾಗುವುದಕ್ಕೆ ಮುಂಚೆ ಯಾವೆಲ್ಲ ಘಟನೆಗಳು ನಡೆಯಲಿವೆ?
“ಶಾಂತಿ ಮತ್ತು ಭದ್ರತೆ” ಎಂದು ಘೋಷಿಸಲಾಗುವುದು. ಸರ್ಕಾರಗಳು “ಮಹಾ ಬಾಬೆಲ್” ಮೇಲೆ ಆಕ್ರಮಣ ಮಾಡಿ ಅದನ್ನು ನಾಶಮಾಡುವವು. ಯೆಹೋವನ ಜನರ ಮೇಲೆ ಆಕ್ರಮಣ ಮಾಡಲಾಗುವುದು. ಅರ್ಮಗೆದೋನ್ ಯುದ್ಧ ನಡೆಯುವುದು. ಅನಂತರ ಸೈತಾನ ಮತ್ತು ಅವನ ದೆವ್ವಗಳು ಅಗಾಧ ಸ್ಥಳಕ್ಕೆ ದೊಬ್ಬಲ್ಪಡುವವು.—9/15, ಪುಟ 4.
ಅಂತ್ಯ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲದೆ ಇರುವುದರಿಂದ ನಮಗೆ ಯಾವ ಪ್ರಯೋಜನಗಳಿವೆ?
ಅಂತ್ಯ ಬರುವ ಸರಿಯಾದ ದಿನ ಅಥವಾ ಗಳಿಗೆ ನಮಗೆ ಗೊತ್ತಿಲ್ಲದಿರುವುದರಿಂದ ನಮ್ಮ ಹೃದಯದಲ್ಲಿ ನಿಜವಾಗಿಯೂ ಏನಿದೆ ಎಂದು ತೋರಿಸಿಕೊಡಲು ಆಗುತ್ತದೆ. ಯೆಹೋವನ ಹೃದಯವನ್ನು ಸಂತೋಷಪಡಿಸುವ ಅವಕಾಶವೂ ನಮಗಿದೆ. ಸ್ವತ್ಯಾಗದ ಜೀವನ ನಡೆಸುವಂತೆ ನಮ್ಮನ್ನು ಉತ್ತೇಜಿಸುತ್ತದೆ. ಯೆಹೋವನ ಮೇಲೆ ಮತ್ತು ಆತನ ವಾಕ್ಯವಾದ ಬೈಬಲಿನ ಮೇಲೆ ಹೆಚ್ಚು ಅವಲಂಬಿಸಲು ನೆರವಾಗುತ್ತದೆ. ಮಾತ್ರವಲ್ಲ ನಮಗೆ ಎದುರಾಗುವ ಸಂಕಷ್ಟಗಳಿಂದ ಒಳ್ಳೇ ಪಾಠಗಳನ್ನು ಕಲಿತು ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಅನುವು ಮಾಡುತ್ತದೆ.—9/15, ಪುಟ 24-25.
ದೇವರ ನಿಯಮ ನಮಗೆ ಹೇಗೆ ಸಂರಕ್ಷಣೆ ಕೊಡುತ್ತದೆ?
ವಿವಾಹದ ಚೌಕಟ್ಟಿನ ಹೊರಗಿನ ಲೈಂಗಿಕ ಸಂಬಂಧವನ್ನು ದೇವರ ನಿಯಮ ಖಂಡಿಸುತ್ತದೆ. (ಇಬ್ರಿಯ 13:4) ಈ ನಿಯಮ ಪಾಲಿಸುವಂಥ ಪತಿಪತ್ನಿಯರ ವಿವಾಹಬಂಧ ಸುಭದ್ರವಾಗಿರುತ್ತದೆ. ಅವರ ಮಕ್ಕಳೂ ಸಂತೋಷದ, ಉತ್ತಮ ವಾತಾವರಣದಲ್ಲಿ ಬೆಳೆಯುತ್ತಾರೆ. ಆದರೆ ಈ ನಿಯಮ ಪಾಲಿಸದಿರುವಾಗ ರೋಗ, ವಿವಾಹವಿಚ್ಛೇದ, ಒಂಟಿ-ಹೆತ್ತವರು, ಹಿಂಸಾಚಾರ, ಭಾವನಾತ್ಮಕ ನೋವು ಇಂಥ ಸಮಸ್ಯೆಗಳು ತಲೆದೋರಬಹುದು.—ಜ್ಞಾನೋಕ್ತಿ 5:1-9 ಓದಿ.—07/01, ಪುಟ 16.
ಪ್ರಕಟನೆ 1: 16, 20ರಲ್ಲಿ ತಿಳಿಸಲಾದ ಯೇಸುವಿನ ಬಲಗೈಯಲ್ಲಿರುವ “ಏಳು ನಕ್ಷತ್ರಗಳು” ಯಾರನ್ನು ಸೂಚಿಸುತ್ತವೆ?
ಅವು ಸಭೆಗಳಲ್ಲಿರುವ ಅಭಿಷಿಕ್ತ ಮೇಲ್ವಿಚಾರಕರನ್ನು ಸೂಚಿಸುತ್ತವೆ. ವಿಶಾಲಾರ್ಥದಲ್ಲಿ ಎಲ್ಲ ಹಿರಿಯರನ್ನು ಸೂಚಿಸುತ್ತವೆ.—10/15, ಪುಟ 14.
ದೆವ್ವಗಳ ಪ್ರಭಾವದಿಂದ ಮುಕ್ತರಾಗುವುದು ಹೇಗೆ?
ಯೆಹೋವನ ಆಶೀರ್ವಾದ ಪಡೆಯಬೇಕಾದರೆ ನಾವೇನು ಮಾಡಬೇಕೆನ್ನುವುದನ್ನು ಬೈಬಲ್ ಹೇಳುತ್ತದೆ. ಅದು ಹೇಳುವುದು: “ದೇವರಿಗೆ ನಿಮ್ಮನ್ನು ಅಧೀನಪಡಿಸಿಕೊಳ್ಳಿರಿ; ಆದರೆ ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು. ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:7, 8) ದೆವ್ವಗಳ ಪ್ರಭಾವದಿಂದ ಮುಕ್ತರಾಗಲು ಯೆಹೋವನು ಸಹಾಯಮಾಡಶಕ್ತನು ಮತ್ತು ಸಹಾಯಮಾಡುವನು ಸಹ. ಆದರೆ ನಮಗೆ ಮನಸ್ಸಿರಬೇಕು.—10/01, ಪುಟ 28.
ಯೆಶಾಯ 50: 4, 5ರಲ್ಲಿ ಹೇಳಿದಂಥ ದೀನತೆಯನ್ನು ಯೇಸು ಹೇಗೆ ತೋರಿಸಿದನು?
“ಶಿಕ್ಷಿತರ ನಾಲಿಗೆ” ಇರುವವನು ‘ವಿಮುಖನಾಗುವುದಿಲ್ಲ’ ಎಂದು ಆ ವಚನಗಳು ಹೇಳುತ್ತವೆ. ಯೇಸು ಅಂಥ ದೀನತೆಯನ್ನು ತೋರಿಸಿದನು. ತಂದೆಯು ಕಲಿಸುವಾಗ ಗಮನಕೊಟ್ಟು ಕೇಳಿದನು. ಯೆಹೋವನಿಂದ ಕಲಿಯಲು ಅವನಲ್ಲಿ ಉತ್ಕಟ ಬಯಕೆಯಿತ್ತು. ಯೆಹೋವನು ದೀನತೆಯಿಂದ ಪಾಪಿ ಮಾನವರಿಗೆ ಕರುಣೆ ತೋರಿಸುತ್ತಾ ಇದ್ದಾಗ ಅದನ್ನು ತದೇಕಚಿತ್ತದಿಂದ ಯೇಸು ಗಮನಿಸಿದನು.—11/15, ಪುಟ 11.
ನಿಜ ಸಂತೋಷದ ಮೂಲ ಯಾವುದು?
ನಾವು ಬಯಸಿದ್ದೆಲ್ಲವನ್ನು ಕೂಡಿಸಿಡುವುದರಿಂದ ಇಲ್ಲವೇ ಆರಾಮದ, ಸಂಪದ್ಭರಿತ ಬದುಕನ್ನು ಬಾಳುವುದರಿಂದ ನಿಜ ಸಂತೋಷ ದಕ್ಕುವುದಿಲ್ಲ. ಸ್ವತಃ ಯೇಸು ಒಮ್ಮೆ ಹೇಳಿದ್ದು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” ನಮ್ಮ ಬಳಿ ಏನಿದೆಯೊ ಅದರಿಂದ ಇತರರಿಗೆ ಸಹಾಯಮಾಡುವ ಮೂಲಕ ಹಾಗೂ ಪ್ರೋತ್ಸಾಹದ ಮಾತುಗಳನ್ನಾಡುವ ಮೂಲಕ ನಮಗೆ ಸಂತೋಷತೃಪ್ತಿ ಲಭಿಸುತ್ತದೆ.—ಅಪೊಸ್ತಲರ ಕಾರ್ಯಗಳು 20:35.—10/01, ಪುಟ 32.