ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಸತ್ಯಕ್ಕೆ ಬರುವ ಮುಂಚೆ ನಾನೂ ನನ್ನ ಪತ್ನಿ, ಮಗುವನ್ನು ಪಡೆಯುವ ಆಸೆಯಿಂದ ಇನ್‌ ವಿಟ್ರೋ ಫರ್ಟಿಲೈಸೇಷನ್‌ ಚಿಕಿತ್ಸೆ ಪಡೆದೆವು. ಫಲೀಕೃತವಾದ ಎಲ್ಲ ಅಂಡಾಣುಗಳನ್ನು (ಭ್ರೂಣಗಳನ್ನು) ಆ ಸಮಯದಲ್ಲಿ ಬಳಸಲಿಲ್ಲ. ಕೆಲವನ್ನು ಶೀತಲೀಕರಿಸಿ, ಸಂಗ್ರಹಿಸಿಡಲಾಯಿತು. ಈಗ ಅವನ್ನು ಏನು ಮಾಡಬೇಕು? ಇಡಬೇಕಾ? ನಾಶಮಾಡಬೇಕಾ?

▪ ಇನ್‌ ವಿಟ್ರೋ ಫರ್ಟಿಲೈಸೇಷನ್‌ (ಐವಿಎಫ್‌) ಚಿಕಿತ್ಸೆ ಪಡೆಯುವ ದಂಪತಿಗಳಿಗೆ ಎದುರಾಗುವಂಥ ಅನೇಕ ನೈತಿಕ ಪ್ರಶ್ನೆಗಳಲ್ಲಿ ಇದು ಒಂದು. ಅವರು ಯಾವ ನಿರ್ಣಯ ತಕ್ಕೊಳ್ಳುತ್ತಾರೊ ಅದಕ್ಕೆ ಅವರವರೇ ಯೆಹೋವನ ಮುಂದೆ ಜವಾಬ್ದಾರರು. ಆದ್ದರಿಂದ ಈ ವಿಧದ ಗರ್ಭಧಾರಣೆಯ ಕುರಿತ ಒಂದು ಸ್ಥೂಲ ನೋಟ ಸ್ವಲ್ಪ ನೆರವಾದೀತು.

1978ರಲ್ಲಿ ಇಂಗ್ಲೆಂಡಿನ ಒಬ್ಬ ಮಹಿಳೆ ಈ ಕೃತಕ ಗರ್ಭಧಾರಣೆಯ ಮೂಲಕ ಒಂದು ಮಗುವನ್ನು ಹಡೆದಳು. ವಾರ್ತಾ ಮಾಧ್ಯಮ ಇದನ್ನು ‘ಪ್ರನಾಳ ಶಿಶು’ ಎಂದಿತು. ಈ ಮಹಿಳೆಯ ಅಂಡನಾಳಗಳಲ್ಲಿ ಏನೋ ಅಡಚಣೆಯಿದ್ದು, ವೀರ್ಯಾಣು ಅಂಡಾಣುವಿನೊಂದಿಗೆ ಮಿಲನವಾಗಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಆಕೆ ಗರ್ಭಧರಿಸುತ್ತಿರಲಿಲ್ಲ. ಆದ್ದರಿಂದ ವೈದ್ಯಕೀಯ ಸಿಬ್ಬಂದಿ ಶಸ್ತ್ರಕ್ರಿಯೆ ಮೂಲಕ ಆಕೆಯಿಂದ ಬಲಿತ ಅಂಡಾಣು ತೆಗೆದು, ಒಂದು ಗಾಜಿನ ಪಾತ್ರೆಯಲ್ಲಿ ಅದನ್ನು ಆಕೆಯ ಗಂಡನ ವೀರ್ಯದೊಂದಿಗೆ ಫಲೀಕರಿಸಿದರು. ಇದರಿಂದ ಉತ್ಪತ್ತಿಯಾದ ಭ್ರೂಣವನ್ನು ಸ್ವಲ್ಪ ಬೆಳೆಯುವಂತೆ ಬಿಡಲಾಯಿತು. ನಂತರ ಅದನ್ನು ಆಕೆಯ ಗರ್ಭದೊಳಕ್ಕೆ ಸೇರಿಸಲಾಯಿತು. ಮುಂದೆ ಆಕೆಗೊಂದು ಹೆಣ್ಣುಮಗು ಜನಿಸಿತು. ಈ ವಿಧಾನವನ್ನು ಮತ್ತು ಈ ವಿಧಾನದ ಸ್ವಲ್ಪ ಭಿನ್ನ ರೂಪಗಳನ್ನು ಇನ್‌ ವಿಟ್ರೋ (ಇನ್‌ ಗ್ಲಾಸ್‌) ಫರ್ಟಿಲೈಸೇಷನ್‌ ಇಲ್ಲವೆ ಐವಿಎಫ್‌ ಎಂದು ಕರೆಯಲಾಯಿತು.

ಐವಿಎಫ್‌ ಚಿಕಿತ್ಸೆ ದೇಶದಿಂದ ದೇಶಕ್ಕೆ ಸ್ವಲ್ಪ ಭಿನ್ನವಾಗಿರಬಹುದು. ಆದರೆ ಸಾಮಾನ್ಯವಾಗಿ ಅದು ಹೀಗಿರುತ್ತದೆ: ಹೆಂಡತಿಗೆ ಕೆಲವು ವಾರಗಳ ತನಕ ಫಲವಂತಿಕೆಯ ಔಷಧಗಳನ್ನು ಕೊಡಲಾಗುತ್ತದೆ. ಇದರಿಂದ ಆಕೆಯ ಅಂಡಾಶಯ ಚುರುಕುಗೊಂಡು ಹಲವಾರು ಅಂಡಾಣುಗಳನ್ನು ಉತ್ಪಾದಿಸುತ್ತದೆ. ಹಸ್ತಮೈಥುನದಿಂದ ವೀರ್ಯ ಸಂಗ್ರಹಿಸುವಂತೆ ಗಂಡನಿಗೆ ಹೇಳಲಾಗುತ್ತದೆ. ಈ ಅಂಡಾಣುಗಳನ್ನೂ ವೀರ್ಯವನ್ನೂ ಪ್ರಯೋಗಶಾಲೆಯಲ್ಲಿ ಕೂಡಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಅಂಡಾಣುಗಳು ಫಲೀಕೃತಗೊಂಡು ವಿಭಜನೆಗೊಳ್ಳಲಾರಂಭಿಸಿ, ಮಾನವ ಭ್ರೂಣಗಳಾಗಿ ಬೆಳೆಯುತ್ತವೆ. ಒಂದೆರಡು ದಿನಗಳಾದ ಬಳಿಕ ಈ ಹೊಸ ಭ್ರೂಣಗಳನ್ನು ಜಾಗ್ರತೆಯಿಂದ ಪರಿಶೀಲಿಸಲಾಗುತ್ತದೆ. ಅವುಗಳಲ್ಲಿ ದೋಷಯುಕ್ತ ಭ್ರೂಣಗಳನ್ನು, ಆರೋಗ್ಯವಂತ ಭ್ರೂಣಗಳನ್ನು ಪ್ರತ್ಯೇಕಿಸಲಾಗುತ್ತದೆ. ಮೂರನೇ ದಿನದಂದು, ಆರೋಗ್ಯವಂತವಾಗಿದ್ದು ಗರ್ಭದಲ್ಲಿ ಬೆಳೆಯಬಲ್ಲ ಭ್ರೂಣಗಳಿಂದ ಎರಡನ್ನೊ ಮೂರನ್ನೊ ಆಯ್ಕೆಮಾಡಿ ಗರ್ಭದೊಳಗೆ ಸೇರಿಸಲಾಗುತ್ತದೆ. ಸ್ತ್ರೀಯು ಗರ್ಭವತಿಯಾಗುವ ಸಾಧ್ಯತೆಯನ್ನು ಹೆಚ್ಚಿಸಲಿಕ್ಕಾಗಿ ಹೀಗೆ ಮಾಡಲಾಗುತ್ತದೆ. ಒಂದು ಅಥವಾ ಹೆಚ್ಚು ಭ್ರೂಣಗಳು ಗರ್ಭದಲ್ಲಿ ನಿಂತರೆ, ಅವಳು ಒಂದು ಮಗು/ಮಕ್ಕಳನ್ನು ಹೆರುವಳು.

ಆದರೆ ಆರೋಗ್ಯವಂತವಾಗಿ ತೋರದಿರುವ ಕಾರಣದಿಂದಲೊ ಅಥವಾ ಏನೋ ದೋಷವಿರುವ ಕಾರಣದಿಂದಲೊ ಸ್ತ್ರೀಯ ಗರ್ಭಕ್ಕೆ ವರ್ಗಾಯಿಸದಿದ್ದ ಭ್ರೂಣಗಳ ಬಗ್ಗೆ ಏನು? ಅವನ್ನು ಹಾಗೇ ಬಿಟ್ಟುಬಿಟ್ಟರೆ ಆ ಭ್ರೂಣಗಳು ಬದುಕಲಾರವು. ಹಾಗಾಗಿ ಅವುಗಳನ್ನು ಲಿಕ್ವಿಡ್‌ ​ನೈಟ್ರೊಜನ್‌ನಲ್ಲಿ ಶೀತಲೀಕರಿಸಲಾಗುತ್ತದೆ. ಯಾವ ಉದ್ದೇಶಕ್ಕೆ? ಮೊದಲ ಐವಿಎಫ್‌ ಯತ್ನ ವಿಫಲವಾದರೆ ಶೀತಲೀಕರಿಸಲಾದ ಆ ಭ್ರೂಣಗಳನ್ನು ಬಳಸಿ ಮತ್ತೆ ಪ್ರಯತ್ನಿಸಲು ಸಾಧ್ಯವಾಗುತ್ತದೆ, ಖರ್ಚೂ ಕಡಿಮೆಯಾಗುತ್ತದೆ. ಆದರೆ ಇದು ಕೆಲವೊಂದು ನೈತಿಕ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಕೆಲವರಿಗೆ ಹೆಚ್ಚು ಮಕ್ಕಳು ಬೇಕಾಗಿರುವುದಿಲ್ಲ. ಅವರ ವಯಸ್ಸು ಹೆಚ್ಚಾಗುತ್ತಿರಬಹುದು ಇಲ್ಲವೆ ಭ್ರೂಣ ವರ್ಗಾವಣೆಗೆ, ಇನ್ನೊಂದು ಮಗುವಿನ ಪಾಲನೆಪೋಷಣೆಗೆ ಸಾಕಷ್ಟು ಹಣವಿರಲಿಕ್ಕಿಲ್ಲ. ಅವಳಿ, ತ್ರಿವಳಿ, ಅಥವಾ ಇನ್ನೂ ಹೆಚ್ಚು ಶಿಶುಗಳು ಗರ್ಭದಲ್ಲಿ ಬೆಳೆದರೆ ಅದರಿಂದ ಬರುವ ಅಪಾಯದ ಬಗ್ಗೆ ಅವರಿಗೆ ಹೆದರಿಕೆ ಇರಬಹುದು. * ಇನ್ನೂ ಕೆಲವೊಮ್ಮೆ ವಿವಾಹ ಸಂಗಾತಿಗಳಲ್ಲಿ ಒಬ್ಬರು ಇಲ್ಲವೆ ಇಬ್ಬರೂ ಮರಣಪಟ್ಟರೆ ಸನ್ನಿವೇಶ ಇನ್ನಷ್ಟು ಜಟಿಲವಾಗುತ್ತದೆ. ಆದ್ದರಿಂದ ಆರಂಭದಲ್ಲಿ ತಿಳಿಸಲಾದ ದಂಪತಿಯಂತೆ, ಹೆಚ್ಚಿನವರ ಮುಂದೆ ಏಳುವ ದೊಡ್ಡ ಪ್ರಶ್ನೆಯೇನೆಂದರೆ ‘ಉಳಿದಿರುವ ಭ್ರೂಣಗಳನ್ನು ಏನು ಮಾಡುವುದು?’ ಯಾವ ನಿರ್ಣಯ ಮಾಡಬೇಕೆಂದು ಅವರಿಗೆ ತಿಳಿಯುವುದಿಲ್ಲ. ಫಲಿತಾಂಶವಾಗಿ ಕೆಲವು ದಂಪತಿಗಳು ಆ ಭ್ರೂಣಗಳನ್ನು ಸುರಕ್ಷಿತವಾಗಿಡಲು ವರ್ಷಾನುಗಟ್ಟಲೆ ಹಣ ಕಟ್ಟುತ್ತಾ ಇರುತ್ತಾರೆ.

ಗರ್ಭದಲ್ಲಿ ಬೆಳೆಯುತ್ತಿರುವ ಪಿಂಡಗೂಸಿನಲ್ಲಿ ಏನೋ ವೈಕಲ್ಯ ಇರುವಂತೆ ತೋರಿದರೆ ಇಲ್ಲವೆ ಒಂದಕ್ಕಿಂತ ಹೆಚ್ಚು ಭ್ರೂಣಗಳು ಗರ್ಭದಲ್ಲಿ ನಿಂತರೆ ಆಗೇನು ಮಾಡುವುದು? ಗರ್ಭದಿಂದ ಬೇಕುಬೇಕೆಂದೇ ಭ್ರೂಣ ತೆಗೆಸುವುದು ಗರ್ಭಪಾತ ಮಾಡಿಸಿದಂತೆ. ಐವಿಎಫ್‌ ಚಿಕಿತ್ಸೆಯಿಂದ ಒಂದಕ್ಕಿಂತ ಹೆಚ್ಚು ಶಿಶುಗಳು (ಅವಳಿ, ತ್ರಿವಳಿ ಅಥವಾ ಇನ್ನೂ ಹೆಚ್ಚು) ಹುಟ್ಟುವುದು ಸಾಮಾನ್ಯ. ಹೆಚ್ಚಿನ ಅಪಾಯಗಳು, ಉದಾಹರಣೆಗೆ ಅವಧಿಗೆ ಮುಂಚಿನ ಹೆರಿಗೆ ಆಗುವ ಇಲ್ಲವೆ ತಾಯಿಗೆ ರಕ್ತಸ್ರಾವ ಆಗುವ ಸಾಧ್ಯತೆಯಿದೆ. ಗರ್ಭದಲ್ಲಿ ಒಂದಕ್ಕಿಂತ ಹೆಚ್ಚು ಶಿಶು ಬೆಳೆಯುತ್ತಿರುವಾಗ ಒಂದನ್ನಿಟ್ಟು ಉಳಿದ ಭ್ರೂಣಗಳನ್ನು ಸಾಯಿಸುವಂತೆ ಸಲಹೆ ಕೊಡಲಾಗುತ್ತದೆ. ಆದರೆ ಇದು ಉದ್ದೇಶಪೂರ್ವಕ ಗರ್ಭಪಾತ. ಕೊಲೆಗೆ ಸಮ.​—⁠ವಿಮೋ. 21:​22, 23; ಕೀರ್ತ. 139:⁠16.

2008ರಲ್ಲಿ ಭ್ರೂಣಶಾಸ್ತ್ರಜ್ಞರೊಬ್ಬರು ದ ನ್ಯೂ ಯಾರ್ಕ್‌ ಟೈಮ್ಸ್‌ ವಾರ್ತಾಪತ್ರದಲ್ಲಿ ಹೇಳಿದ್ದೇನೆಂದರೆ ಈ ಚಿಕಿತ್ಸೆ ಪಡೆದಿರುವ ಹಲವಾರು ವ್ಯಕ್ತಿಗಳು ಉಳಿದ ಭ್ರೂಣಗಳನ್ನು ಏನು ಮಾಡುವುದೆಂಬ ಉಭಯಸಂಕಟದಲ್ಲಿ ಸಿಲುಕಿದ್ದಾರೆ. ಆ ಲೇಖನ ಹೇಳಿದ್ದು: “ದೇಶದಾದ್ಯಂತ ಕಡಿಮೆಪಕ್ಷ 4,00,000 ಭ್ರೂಣಗಳನ್ನು ಘನೀಕರಿಸಿಡಲಾಗಿದೆ. ಪ್ರತಿ ದಿನ ಇದಕ್ಕೆ ಇನ್ನಷ್ಟು ಸೇರ್ಪಡೆಯಾಗುತ್ತಿವೆ. . . . ಭ್ರೂಣಗಳನ್ನು ಸರಿಯಾದ ವಿಧದಲ್ಲಿ ಶೀತಲೀಕರಿಸಿಟ್ಟರೆ ಅವು ಒಂದು ದಶಕದ ವರೆಗೆ ಇಲ್ಲವೆ ಇನ್ನೂ ಹೆಚ್ಚು ಸಮಯ ಬದುಕುಳಿಯಬಲ್ಲವು. ಆದರೆ ಅವುಗಳನ್ನು ಫ್ರೀಜರ್‌ನಿಂದ ತೆಗೆದು ಕೋಣೆಯ ಉಷ್ಣತೆಯಲ್ಲಿ ಸಹಜ ಸ್ಥಿತಿಗೆ ತಂದ ಬಳಿಕ ಅವೆಲ್ಲವೂ ಬದುಕಿ ಉಳಿಯುವುದಿಲ್ಲ.” (ದಪ್ಪಕ್ಷರಗಳು ನಮ್ಮವು.) ಇದು ಇಂಥ ಚಿಕಿತ್ಸೆ ಪಡೆದಿರುವ ಕೆಲವು ಕ್ರೈಸ್ತರಿಗೆ ಯೋಚಿಸುವಂತೆ ಮಾಡಿದೆ. ಏಕೆ?

ಐವಿಎಫ್‌ ಚಿಕಿತ್ಸೆ ಪಡೆದಿರುವ ಕ್ರೈಸ್ತ ದಂಪತಿಗಳು ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಇನ್ನೊಂದು ವೈದ್ಯಕೀಯ ಸನ್ನಿವೇಶದಲ್ಲಿ ಏಳುವ ಸವಾಲುಗಳನ್ನು ಪರಿಗಣಿಸುವುದು ಸಹಾಯಕಾರಿ: ಕ್ರೈಸ್ತನೊಬ್ಬನಿಗೆ ತುಂಬ ಆತ್ಮೀಯನಾದ ಸಂಬಂಧಿಕನೊಬ್ಬನು ಮಾರಣಾಂತಿಕ ಸ್ಥಿತಿಯಲ್ಲಿದ್ದಾನೆಂದು ನೆನಸಿ. ಅವನು ಜೀವದಿಂದಿರುವುದು ಉಸಿರಾಟ ಉಪಕರಣದ ನೆರವಿನಿಂದಾಗಿಯೇ. ಈ ವ್ಯಕ್ತಿಯನ್ನು ಅಂಥ ಸ್ಥಿತಿಯಲ್ಲಿ ಇಡಬೇಕಾ ಇಲ್ಲವಾ ಎಂಬದನ್ನು ಆ ಕ್ರೈಸ್ತನೇ ನಿರ್ಣಯ ಮಾಡಬೇಕಾಗಬಹುದು. ಸತ್ಯ ಕ್ರೈಸ್ತರು ವೈದ್ಯಕೀಯ ವಿಷಯಗಳಲ್ಲಿ ಅಲಕ್ಷ್ಯ ತೋರಿಸುವುದಿಲ್ಲ. ಏಕೆಂದರೆ ವಿಮೋಚನಕಾಂಡ 20:13 ಮತ್ತು ಕೀರ್ತನೆ 36:9ಕ್ಕೆ ಹೊಂದಿಕೆಯಲ್ಲಿ ಅವರು ಜೀವವನ್ನು ತುಂಬ ಅಮೂಲ್ಯವೆಂದೆಣಿಸುತ್ತಾರೆ. 1974, ಮೇ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆ ಹೇಳಿದ್ದು: “ಬೈಬಲಿನ ಸೂತ್ರಗಳಿಗನುಸಾರ ಜೀವಿಸಲು ಇಚ್ಛಿಸುವವರು, ಜೀವವು ಪವಿತ್ರವೆಂಬ ದೇವರ ನೋಟವನ್ನು ಮಾನ್ಯಮಾಡುತ್ತಾರೆ, ತಮ್ಮ ಮನಸ್ಸಾಕ್ಷಿಗಳನ್ನು ಶುದ್ಧವಾಗಿಡಲು ಇಚ್ಛಿಸುತ್ತಾರೆ ಹಾಗೂ ಸರಕಾರೀ ಕಾನೂನುಗಳಿಗೆ ವಿಧೇಯತೆ ತೋರಿಸಲು ಬಯಸುತ್ತಾರೆ. ಹಾಗಾಗಿ ಅವರು ದಯಾಮರಣಕ್ಕೆ [ಜೀವವನ್ನು ಉದ್ದೇಶಪೂರ್ವಕವಾಗಿ ತೆಗೆಯುವುದು] ಯಾವತ್ತೂ ಮೊರೆಹೋಗುವುದಿಲ್ಲ.” ಆದರೆ ಒಬ್ಬ ವ್ಯಕ್ತಿಗೆ ಕೃತಕ ಜೀವಾಧಾರ ಕೊಡಲಾಗುವಂಥ ಸನ್ನಿವೇಶ ಭಿನ್ನವಾಗಿರುತ್ತದೆ. ಆ ವ್ಯಕ್ತಿ ಕೃತಕ ಉಸಿರಾಟ ಉಪಕರಣವಿಲ್ಲದೆ ಬದುಕಿರಲಾರ, ಅವನ ಜೀವ ಆ ಯಂತ್ರದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಅವನನ್ನು ಅಂಥ ಸ್ಥಿತಿಯಲ್ಲೇ ಇಡಬೇಕಾ ಇಲ್ಲವಾ ಎಂಬದನ್ನು ಕುಟುಂಬ ಸದಸ್ಯರು ನಿರ್ಣಯಿಸಬಹುದು.

ಈ ಸನ್ನಿವೇಶವು ಐವಿಎಫ್‌ ಚಿಕಿತ್ಸೆಗೆ ಒಳಪಟ್ಟು, ಭ್ರೂಣಗಳನ್ನು ಸುರಕ್ಷಿತವಾಗಿಡುವ ದಂಪತಿಯ ಸನ್ನಿವೇಶಕ್ಕೆ ಸಮವಾಗಿಲ್ಲ ನಿಜ. ಇಂಥ ದಂಪತಿಗಳ ಮುಂದಿಡಲಾಗುವ ಒಂದು ಆಯ್ಕೆಯೇನೆಂದರೆ, ನೈಟ್ರೊಜನ್‌ ಫ್ರೀಜರ್‌ನಿಂದ (ಶೀತಕ) ಉಳಿದ ಭ್ರೂಣಗಳನ್ನು ತೆಗೆದುಬಿಡುವುದು. ಈ ಭ್ರೂಣಗಳು ಫ್ರೀಜರ್‌ನಲ್ಲಿನ ಕೃತಕ ಪರಿಸರದ ನೆರವಿಲ್ಲದೆ ಬದುಕುಳಿಯುವುದಿಲ್ಲ. ಆದ್ದರಿಂದ ಇದಕ್ಕೆ ಅನುಮತಿ ಕೊಡಬೇಕೊ ಇಲ್ಲವೊ ಎಂದು ಆ ದಂಪತಿ ನಿರ್ಣಯಿಸಬೇಕು.​—⁠ಗಲಾ. 6:⁠7.

ಕೆಲವು ದಂಪತಿಗಳು ಉಳಿದ ಭ್ರೂಣಗಳನ್ನು ಶೀತಲೀಕರಿಸಿಡಲು ತಗಲುವ ಖರ್ಚನ್ನು ಭರಿಸುತ್ತಾ ಇರುವ ಆಯ್ಕೆಮಾಡುತ್ತಾರೆ ಅಥವಾ ಮಗುವನ್ನು ಪಡೆಯುವ ಮತ್ತೊಂದು ಪ್ರಯತ್ನದಲ್ಲಿ ಐವಿಎಫ್‌ ಚಿಕಿತ್ಸೆಯಲ್ಲಿ ಅವುಗಳನ್ನು ಬಳಸುವ ಆಯ್ಕೆಮಾಡುತ್ತಾರೆ. ಇನ್ನು ಕೆಲವು ದಂಪತಿಗಳು ‘ಹೇಗೂ ಈ ಭ್ರೂಣಗಳು ಬದುಕುಳಿಯುವುದು ಬರೀ ಕೃತಕ ವಿಧಾನಗಳಿಂದ’ ಎಂದು ಅವುಗಳನ್ನು ನೈಟ್ರೊಜನ್‌ ಫ್ರೀಜರ್‌ನಿಂದ ಹೊರತೆಗೆಯುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮ್ಮ ಬೈಬಲ್‌-ಶಿಕ್ಷಿತ ಮನಸ್ಸಾಕ್ಷಿಗನುಸಾರ ಯಾವ ನಿರ್ಣಯ ತಕ್ಕೊಳ್ಳುತ್ತಾರೊ ಅದಕ್ಕಾಗಿ ಆ ಕ್ರೈಸ್ತ ದಂಪತಿ ದೇವರ ಮುಂದೆ ಹೊಣೆಗಾರರು. ಅವರು ತೆಗೆದುಕೊಳ್ಳುವಂಥ ನಿರ್ಣಯ ಅವರ ಮನಸ್ಸಾಕ್ಷಿಯನ್ನೂ ಚುಚ್ಚಬಾರದು, ಅದೇ ಸಮಯದಲ್ಲಿ ಇತರರ ಮನಸ್ಸಾಕ್ಷಿಗಳನ್ನೂ ಅವರು ಅಲಕ್ಷಿಸಬಾರದು.​—⁠1 ತಿಮೊ. 1:⁠19.

ಪುನರುತ್ಪತ್ತಿ ಅಂತಃಸ್ರಾವಶಾಸ್ತ್ರದ ತಜ್ಞರೊಬ್ಬರು ಹೇಳಿದ್ದೇನೆಂದರೆ, ಹೆಚ್ಚಿನ ದಂಪತಿಗಳಿಗೆ “ಆ [ಶೀತಲೀಕರಿಸಿದ] ಭ್ರೂಣಗಳನ್ನು ಏನು ಮಾಡುವುದೆಂಬದರ ಬಗ್ಗೆ ಗೊಂದಲವೂ ಇದೆ, ಆ ಜವಾಬ್ದಾರಿಯ ಬಗ್ಗೆ ತುಂಬ ಚಿಂತಿತರೂ ಆಗಿದ್ದಾರೆ.” ಅವರು ಸಮಾಪ್ತಿಯಲ್ಲಿ ಹೇಳಿದ್ದು: “ಒಳ್ಳೇದೆಂದು ಹೇಳಬಹುದಾದ ನಿರ್ಣಯವೇ ಇಲ್ಲವೆಂದು ಹೆಚ್ಚಿನ ದಂಪತಿಗಳಿಗೆ ಅನಿಸುತ್ತದೆ.”

ಐವಿಎಫ್‌ ಚಿಕಿತ್ಸೆ ಪಡೆಯಲು ಯೋಚಿಸುತ್ತಿರುವ ಸತ್ಯ ಕ್ರೈಸ್ತರು ಸಹ ಆ ತಂತ್ರಜ್ಞಾನದ ಜೊತೆಗೆ ಬರುವ ಗಂಭೀರ ತೊಡಕುಗಳ ಕುರಿತು ಯೋಚಿಸಬೇಕೆಂಬುದು ಸ್ಪಷ್ಟ. ಬೈಬಲ್‌ ಕೊಡುವ ಸಲಹೆ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು, ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”​—⁠ಜ್ಞಾನೋ. 22:⁠3.

ಮದುವೆಯಾಗದೆ ಒಟ್ಟಿಗೆ ಜೀವಿಸುತ್ತಿರುವ ಒಂದು ಜೋಡಿ ಬೈಬಲ್‌ ಕಲಿಯುತ್ತಿದ್ದಾರೆ. ದೀಕ್ಷಾಸ್ನಾನ ಪಡೆಯಬೇಕೆಂದಿದ್ದಾರೆ. ಸಮಸ್ಯೆ ಏನೆಂದರೆ ಅವರಿಗೆ ಕಾನೂನುಬದ್ಧವಾಗಿ ವಿವಾಹವಾಗಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಆ ಪುರುಷನು ಕಾನೂನುಬದ್ಧವಾಗಿ ಈ ದೇಶದ ಪ್ರಜೆಯಾಗಿಲ್ಲ. ಕಾನೂನುಬದ್ಧ ಪ್ರಜೆಯಾಗಿಲ್ಲದ ಒಬ್ಬರನ್ನು ಮದುವೆಯಾಗಲು ಈ ದೇಶದ ಸರ್ಕಾರ ಅನುಮತಿ ನೀಡುವುದಿಲ್ಲ. ಈಗ ಈ ಜೋಡಿ ‘ಡಿಕ್ಲರೇಷನ್‌ ಪ್ಲೆಜಿಂಗ್‌ ಫೇತ್‌ಫುಲ್‌ನೆಸ್‌’ (ದಾಂಪತ್ಯನಿಷ್ಠೆ ಪ್ರತಿಜ್ಞೆಯ ಘೋಷಣೆ) ದಾಖಲೆಪತ್ರಕ್ಕೆ ಸಹಿಮಾಡಿ ದೀಕ್ಷಾಸ್ನಾನ ಪಡೆಯಬಹುದೇ?

▪ ಈ ದಾಖಲೆಪತ್ರಕ್ಕೆ ಸಹಿಮಾಡಿದರೆ ಸಮಸ್ಯೆ ಬಗೆಹರಿಯುವಂತೆ ತೋರಬಹುದು. ಆದರೆ ಬೈಬಲ್‌ ಪ್ರಕಾರ ಇದು ಸರಿಯಲ್ಲ. ಏಕೆಂದು ತಿಳಿಯಲು ನಾವು ಮೊದಲು ಡಿಕ್ಲರೇಷನ್‌ ಪ್ಲೆಜಿಂಗ್‌ ಫೇತ್‌ಫುಲ್‌ನೆಸ್‌ ಎಂಬ ದಾಖಲೆಪತ್ರ ಅಂದರೇನು, ಅದನ್ನು ಯಾವಾಗ ಬಳಸಲಾಗುತ್ತದೆ ಎಂದು ನೋಡೋಣ.

ಡಿಕ್ಲರೇಷನ್‌ ಪ್ಲೆಜಿಂಗ್‌ ಫೇತ್‌ಫುಲ್‌ನೆಸ್‌ ಎಂಬುದು ಕೆಲವೊಂದು ಕಾರಣಗಳಿಂದಾಗಿ (ಲೇಖನದಲ್ಲಿ ಮುಂದೆ ಕೊಡಲಾಗಿದೆ) ತಮ್ಮ ಸಂಬಂಧವನ್ನು ಕಾನೂನುಬದ್ಧಗೊಳಿಸಲು ಸಾಧ್ಯವಾಗದೇ ಇರುವ ಅವಿವಾಹಿತ ಜೋಡಿಗಳಿಗಾಗಿರುವ ದಾಖಲೆಪತ್ರವಾಗಿದೆ. ಅವರು ಈ ದಾಖಲೆಪತ್ರಕ್ಕೆ ಸಹಿಹಾಕುವ ಮೂಲಕ ತಾವು ದಾಂಪತ್ಯನಿಷ್ಠೆ ತೋರಿಸುವೆವು ಮತ್ತು ಅವಕಾಶ ಸಿಕ್ಕಿದ ಕೂಡಲೇ ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸುವೆವು ಎಂದು ದೇವರಿಗೆ ಹಾಗೂ ಅಲ್ಲಿರುವ ಸಾಕ್ಷಿಗಳಿಗೆ ಮಾತುಕೊಡುತ್ತಾರೆ. ಇದಾದ ಮೇಲೆ ಆ ವಿವಾಹವನ್ನು ಸಭೆ ಕಾನೂನುಬದ್ಧ ವಿವಾಹ ಎಂಬಂತೆ ಪರಿಗಣಿಸುತ್ತದೆ.

ಈ ದಾಖಲೆಪತ್ರವನ್ನು ಯಾವಾಗ ಬಳಸಲಾಗುತ್ತದೆ? ಇದನ್ನು ಉತ್ತರಿಸಲು ವಿವಾಹ ಮತ್ತು ವಿಚ್ಛೇದನದ ಕಡೆಗಿರುವ ಯೆಹೋವನ ನೋಟವನ್ನು ಅರ್ಥಮಾಡಿಕೊಳ್ಳೋಣ. ವಿವಾಹದ ಏರ್ಪಾಡನ್ನು ಸ್ಥಾಪಿಸಿದವನು ಯೆಹೋವನು. ಅದನ್ನು ಗಂಭೀರವಾಗಿ ಪರಿಗಣಿಸುತ್ತಾನೆ. ಆತನ ಮಗನು ವಿವಾಹದ ಬಗ್ಗೆ ಹೇಳಿದ್ದು: “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” (ಮತ್ತಾ. 19:​5, 6; ಆದಿ. 2:​22-24) “ಹಾದರದ ಕಾರಣದಿಂದಲ್ಲದೆ [ಲೈಂಗಿಕ ಅನೈತಿಕತೆ] ತನ್ನ ಹೆಂಡತಿಗೆ ವಿಚ್ಛೇದನ ನೀಡಿ ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ” ಎಂದೂ ಹೇಳಿದನು ಯೇಸು. (ಮತ್ತಾ. 19:⁠9) ಹಾಗಾಗಿ “ಹಾದರ” ಅಂದರೆ ಲೈಂಗಿಕ ಅನೈತಿಕತೆಯ ಆಧಾರದ ಮೇಲೆ ಮಾತ್ರ ವಿಚ್ಛೇದನ ಪಡೆಯಲು ಬೈಬಲ್‌ ಅನುಮತಿ ಕೊಡುತ್ತದೆ. ಉದಾ: ಹಾದರಮಾಡಿದ ಪತಿಗೆ ವಿಚ್ಛೇದನ ನೀಡಬೇಕಾ ಬೇಡವಾ ಎಂದು ಪತ್ನಿ ನಿರ್ಣಯ ಮಾಡಬಹುದು. ಆಕೆ ವಿಚ್ಛೇದನ ನೀಡಿದರೆ ಮರುವಿವಾಹ ಆಗಬಹುದು.

ವಿಚ್ಛೇದನದ ಬಗ್ಗೆ ಬೈಬಲಿನ ಈ ದೃಷ್ಟಿಕೋನವನ್ನು ಹಿಂದೆ ಕೆಲವು ದೇಶಗಳ ಪ್ರಧಾನಧರ್ಮ ಒಪ್ಪಿಕೊಳ್ಳುತ್ತಿರಲಿಲ್ಲ. ಯಾವ ಕಾರಣಕ್ಕೂ ವಿಚ್ಛೇದನ ಕೊಡಬಾರದು, ವಿಚ್ಛೇದನ ಮಹಾಪಾಪ ಎಂದು ಕಲಿಸುತ್ತಿತ್ತು. ಇಂದು ಕೂಡ ಧರ್ಮಗುರುಗಳ ಪ್ರಭಾವದಿಂದಾಗಿ ಕೆಲವು ದೇಶಗಳ ಕಾನೂನು ವಿಚ್ಛೇದನ ನೀಡಲು ಅನುಮತಿ ನೀಡುತ್ತಿಲ್ಲ. ಅದು ಹಾದರದ ಕಾರಣವಿದ್ದರೂ ಸರಿಯೇ. ಇನ್ನು ಕೆಲವು ದೇಶಗಳ ಕಾನೂನು ವಿಚ್ಛೇದನಕ್ಕೆ ಅನುಮತಿ ನೀಡಿದರೂ ವಿಚ್ಛೇದನ ಪಡೆದುಕೊಳ್ಳುವುದು ಸುಲಭದ ಮಾತೇನಲ್ಲ. ವರ್ಷಾನುಗಟ್ಟಲೆ ಹಿಡಿಯುತ್ತದೆ. ಈ ದೇಶಗಳ ಪರಿಸ್ಥಿತಿ ‘ದೇವರು ಕೊಟ್ರೂ ಪೂಜಾರಿ ಕೊಡಲ್ಲ’ ಎಂಬ ಗಾದೆಯಂತಿದೆ. ದೇವರು ಅನುಮತಿಸಿರುವ ಕಾರಣಕ್ಕೆ ವಿಚ್ಛೇದನ ಪಡೆಯಲು ಈ ದೇಶಗಳ ಸರ್ಕಾರ ಇಲ್ಲವೆ ಧರ್ಮಗುರುಗಳು ಅನುಮತಿ ನೀಡುವುದಿಲ್ಲ.​​—⁠ಅ. ಕಾ. 11:⁠17.

ವಿಚ್ಛೇದನ ಪಡೆಯಲು ಬಹುಕಷ್ಟ ಅಥವಾ ಅಸಾಧ್ಯವಾಗಿರುವ ಇಂಥ ದೇಶಗಳಲ್ಲಿನ ಕ್ರೈಸ್ತರಿಗಾಗಿ ಯೆಹೋವನ ಸಂಘಟನೆ ಪ್ರೀತಿಯಿಂದ ಮಾಡಿರುವ ಏರ್ಪಾಡೇ ಡಿಕ್ಲರೇಷನ್‌ ಪ್ಲೆಜಿಂಗ್‌ ಫೇತ್‌ಫುಲ್‌ನೆಸ್‌ ದಾಖಲೆಪತ್ರ. ಮದುವೆಯಾಗಲಿಚ್ಛಿಸುವ ಜೋಡಿಯಲ್ಲಿ ಒಬ್ಬರು ತಮ್ಮ ಸಂಗಾತಿಯ ಹಾದರದ ಕಾರಣ ವಿಚ್ಛೇದನ ಪಡೆಯಲು ಪ್ರಯತ್ನಿಸಿದರೂ ಸಿಗುವುದಿಲ್ಲ. ಆಗ ಈ ಜೋಡಿ ದಾಖಲೆಪತ್ರಕ್ಕೆ ಸಹಿಹಾಕಿ ಒಟ್ಟಿಗೆ ಜೀವಿಸಬಹುದು. ಕೆಲವು ದೇಶಗಳಲ್ಲಿ ವಿಚ್ಛೇದನ ಸಿಗುತ್ತದೆ, ಆದರೆ ಅದು ಸ್ವಲ್ಪ ದುಬಾರಿ ಅಥವಾ ಕ್ಲಿಷ್ಟಕರ ಆಗಿರಬಹುದು. ಅಲ್ಲೆಲ್ಲ ಈ ದಾಖಲೆಪತ್ರ ಬಳಸುವಂತಿಲ್ಲ.

ವಿಚ್ಛೇದನ ಸಿಗುವಂಥ ದೇಶಗಳಲ್ಲಿ ವಾಸಿಸುವ ಕೆಲವರು ಈ ದಾಖಲೆಪತ್ರಕ್ಕೆ ಸಹಿಹಾಕಲು ಮುಂದಾಗಿದ್ದಾರೆ. ವಿಚ್ಛೇದನ ಪಡೆಯುವ ರಗಳೆಯನ್ನು ತಪ್ಪಿಸಲು ಈ ದಾಖಲೆಪತ್ರವನ್ನು ಬಳಸುವುದು ಸರಿಯಲ್ಲ.

ಲೇಖನದ ಆರಂಭದಲ್ಲಿ ಎದ್ದ ಪ್ರಶ್ನೆಗೆ ಬರೋಣ. ಒಂದೇ ಸೂರಿನಡಿ ಸಂಸಾರ ಮಾಡುತ್ತಿದ್ದ ಆ ಜೋಡಿ ಮದುವೆ ಆಗಬೇಕೆಂದಿದ್ದಾರೆ. ಈ ಮುಂಚೆ ಅವರಿಬ್ಬರು ಯಾರನ್ನೂ ಮದುವೆಯಾಗಿಲ್ಲ. ಹಾಗಾಗಿ ಬೈಬಲಿಗನುಸಾರ ಅವರು ಮದುವೆಯಾಗಲು ಅಡ್ಡಿಯೇನಿಲ್ಲ. ಇದು ವಿಚ್ಛೇದನ ಪಡೆಯುವ ಪ್ರಕರಣವೂ ಅಲ್ಲ, ವಿಚ್ಛೇದನ ಕೊಡಲು ಸರ್ಕಾರ ನಿರಾಕರಿಸುತ್ತಿರುವ ಸಂಗತಿಯೂ ಅಲ್ಲ. ಆದ್ದರಿಂದ ಡಿಕ್ಲರೇಷನ್‌ ಪ್ಲೆಜಿಂಗ್‌ ಫೇತ್‌ಫುಲ್‌ನೆಸ್‌ ಎಂಬ ದಾಖಲೆಪತ್ರವನ್ನು ಈ ಜೋಡಿ ಬಳಸುವಂತಿಲ್ಲ. ಅವರ ಸಮಸ್ಯೆ ಏನೆಂದರೆ ಆ ಪುರುಷ ಕಾನೂನುಬದ್ಧವಾಗಿ ಆ ದೇಶದ ಪ್ರಜೆಯಾಗಿಲ್ಲ. ಈ ಕಾರಣದಿಂದ ಅಲ್ಲಿನ ಸರ್ಕಾರ ಆತನಿಗೆ ಮದುವೆಯಾಗಲು ಒಪ್ಪಿಗೆ ನೀಡುತ್ತಿಲ್ಲ. (ಕೆಲವು ದೇಶಗಳಲ್ಲಿ ಗಂಡು ಅಥವಾ ಹೆಣ್ಣು ಅಥವಾ ಇಬ್ಬರೂ ಆ ದೇಶದ ಕಾನೂನುಬದ್ಧ ಪ್ರಜೆಯಾಗಿಲ್ಲವಾದರೂ ಮದುವೆಯಾಗಲು ಅಲ್ಲಿನ ಅಧಿಕಾರಿಗಳು ಅನುಮತಿ ನೀಡುತ್ತಾರೆ.) ಈ ಜೋಡಿ ಈಗೇನು ಮಾಡಬೇಕು? ಯಾವ ದೇಶದಲ್ಲಿ ಅವರ ಮದುವೆಗೆ ಅನುಮತಿ ಇದೆಯೋ ಅಲ್ಲಿ ಹೋಗಿ ಮದುವೆ ಆಗಬಹುದು. ಅಥವಾ ಅವರಿರುವ ದೇಶದಲ್ಲೇ ಆ ಪುರುಷನು ಕಾನೂನುಬದ್ಧ ಪ್ರಜೆಯಾಗಲು ಏನು ಮಾಡಬೇಕೋ ಅದನ್ನು ಮಾಡಿ ಅಲ್ಲಿಯೇ ಮದುವೆಯಾಗಬಹುದು.

ಹೀಗೆ ಆ ಜೋಡಿ ದೇವರ ಮತ್ತು ಕೈಸರನ ಆಜ್ಞೆಗಳನ್ನು ಪಾಲಿಸಬೇಕು. (ಮಾರ್ಕ 12:17; ರೋಮ. 13:⁠1) ಅವರು ಕಾನೂನುಬದ್ಧವಾಗಿ ವಿವಾಹವಾಗುವಲ್ಲಿ ದೀಕ್ಷಾಸ್ನಾನ ಪಡೆಯಲು ಅರ್ಹರಾಗುವರು.​​—⁠ಇಬ್ರಿ. 13:⁠4.

[ಪಾದಟಿಪ್ಪಣಿ]

^ ಪ್ಯಾರ. 6 ಗರ್ಭದಲ್ಲಿ ಬೆಳೆಯುತ್ತಿರುವ ಪಿಂಡಗೂಸಿನಲ್ಲಿ ಏನೋ ವೈಕಲ್ಯ ಇರುವಂತೆ ತೋರಿದರೆ ಇಲ್ಲವೆ ಒಂದಕ್ಕಿಂತ ಹೆಚ್ಚು ಭ್ರೂಣಗಳು ಗರ್ಭದಲ್ಲಿ ನಿಂತರೆ ಆಗೇನು ಮಾಡುವುದು? ಗರ್ಭದಿಂದ ಬೇಕುಬೇಕೆಂದೇ ಭ್ರೂಣ ತೆಗೆಸುವುದು ಗರ್ಭಪಾತ ಮಾಡಿಸಿದಂತೆ. ಐವಿಎಫ್‌ ಚಿಕಿತ್ಸೆಯಿಂದ ಒಂದಕ್ಕಿಂತ ಹೆಚ್ಚು ಶಿಶುಗಳು (ಅವಳಿ, ತ್ರಿವಳಿ ಅಥವಾ ಇನ್ನೂ ಹೆಚ್ಚು) ಹುಟ್ಟುವುದು ಸಾಮಾನ್ಯ. ಹೆಚ್ಚಿನ ಅಪಾಯಗಳು, ಉದಾಹರಣೆಗೆ ಅವಧಿಗೆ ಮುಂಚಿನ ಹೆರಿಗೆ ಆಗುವ ಇಲ್ಲವೆ ತಾಯಿಗೆ ರಕ್ತಸ್ರಾವ ಆಗುವ ಸಾಧ್ಯತೆಯಿದೆ. ಗರ್ಭದಲ್ಲಿ ಒಂದಕ್ಕಿಂತ ಹೆಚ್ಚು ಶಿಶು ಬೆಳೆಯುತ್ತಿರುವಾಗ ಒಂದನ್ನಿಟ್ಟು ಉಳಿದ ಭ್ರೂಣಗಳನ್ನು ಸಾಯಿಸುವಂತೆ ಸಲಹೆ ಕೊಡಲಾಗುತ್ತದೆ. ಆದರೆ ಇದು ಉದ್ದೇಶಪೂರ್ವಕ ಗರ್ಭಪಾತ. ಕೊಲೆಗೆ ಸಮ.​—⁠ವಿಮೋ. 21:​22, 23; ಕೀರ್ತ. 139:⁠16.

[ಪುಟ 14ರಲ್ಲಿರುವ ಸಂಕ್ಷಿಪ್ತ ವಿವರಣೆ]

ತಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಗನುಸಾರ ಮಾಡುವ ನಿರ್ಣಯಕ್ಕಾಗಿ ಕ್ರೈಸ್ತರು ದೇವರ ಮುಂದೆ ಜವಾಬ್ದಾರರು

[ಪುಟ 15ರಲ್ಲಿರುವ ಚೌಕ]

ಇತರ ಐವಿಎಫ್‌ ವಿಧಾನಗಳು

ಐವಿಎಫ್‌ ತಂತ್ರಜ್ಞಾನ ಅಭಿವೃದ್ಧಿಗೊಂಡು ಅದರಲ್ಲೇ ಇನ್ನಿತರ ವಿಧಾನಗಳೂ ಆವಿಷ್ಕಾರಗೊಂಡವು. ಆದರೆ ಈ ವಿಧಾನಗಳು ದೇವರ ನೋಟಕ್ಕೆ ತದ್ವಿರುದ್ಧವಾಗಿವೆ. ಉದಾಹರಣೆಗೆ, ಸ್ತ್ರೀಯೊಬ್ಬಳ ಅಂಡಾಣುಗಳನ್ನು ಬೇರೆ ಗಂಡಸಿನ ವೀರ್ಯದಿಂದ ಫಲೀಕರಿಸಲಾಗುತ್ತದೆ. ಆಮೇಲೆ ಆ ಭ್ರೂಣಗಳನ್ನು ಅವಳ ಗರ್ಭಕ್ಕೆ ವರ್ಗಾಯಿಸಲಾಗುತ್ತದೆ. (ಕೆಲವೊಮ್ಮೆ ಸ್ತ್ರೀ ಸಲಿಂಗಿ ದಂಪತಿಗಳು ಈ ವಿಧಾನವನ್ನು ಬಳಸುತ್ತಾರೆ.) ಇಲ್ಲವೆ, ಗಂಡನ ವೀರ್ಯದಿಂದ ಬೇರೊಬ್ಬಾಕೆಯ ಅಂಡಾಣುಗಳನ್ನು ಫಲೀಕರಿಸಿ ಆ ಭ್ರೂಣಗಳನ್ನು ಅವನ ಹೆಂಡತಿಯ ಗರ್ಭಕ್ಕೆ ವರ್ಗಾಯಿಸಲಾಗುತ್ತದೆ.

ಇನ್ನೊಂದು ವಿಧಾನವನ್ನು “ಭ್ರೂಣ ದತ್ತುಸ್ವೀಕಾರ” ಎಂದು ಕರೆಯಲಾಗುತ್ತದೆ. ಅಂದರೆ, ಹೆಂಡತಿಯ ಗರ್ಭಕ್ಕೆ ವರ್ಗಾಯಿಸಲಾಗಿರುವ ಭ್ರೂಣದಲ್ಲಿ ಆಕೆಯ ಅಂಡಾಣುಗಳಾಗಲಿ, ಆಕೆಯ ಗಂಡನ ವೀರ್ಯವಾಗಲಿ ಇರುವುದಿಲ್ಲ. ಮತ್ತೊಂದು ವಿಧಾನವೇನೆಂದರೆ, ಪತಿಪತ್ನಿಯ ಅಂಡಾಣು ಹಾಗೂ ವೀರ್ಯವನ್ನು ಐವಿಎಫ್‌ ವಿಧಾನದಿಂದ ಗರ್ಭದ ಹೊರಗೆ ಫಲೀಕರಿಸಿ ಆ ಭ್ರೂಣಗಳನ್ನು ‘ಬಾಡಿಗೆ ತಾಯಿಯ’ ಗರ್ಭಕ್ಕೆ ವರ್ಗಾಯಿಸಲಾಗುತ್ತದೆ. ಈ ಸ್ತ್ರೀ ಅವರಿಗಾಗಿ ಮಗುವನ್ನು ಹೊತ್ತು, ಹೆತ್ತು ಕೊಡುತ್ತಾಳೆ. *

ಈ ಪ್ರಜನನ ವಿಧಾನಗಳನ್ನು ದೇವರ ಸೇವಕರು ಬಳಸಬಾರದು. ಏಕೆಂದರೆ ದೇವರ ನಿರ್ದೇಶನ ಹೀಗಿದೆ: ‘ನಿನ್ನ ವೀರ್ಯವನ್ನು ಬೇರೊಬ್ಬನ ಪತ್ನಿಗೆ ಕೊಟ್ಟು ಅಶುದ್ಧನಾಗಬೇಡ.’ (ಯಾಜ. 18:​20, 29, NW; ಜ್ಞಾನೋ. 6:29) ವಿವಾಹ ಬಂಧದ ಹೊರಗಿನ ವ್ಯಕ್ತಿಯಿಂದ ಅಂಡಾಣುಗಳನ್ನಾಗಲಿ, ವೀರ್ಯವನ್ನಾಗಲಿ (ಅಥವಾ ಎರಡನ್ನೂ) ತಕ್ಕೊಂಡು ಫಲೀಕರಿಸಿದರೆ ಅದು ಬೈಬಲಿಗನುಸಾರ ಪೋರ್ನಿಯ ಅಂದರೆ ಲೈಂಗಿಕ ಅನೈತಿಕತೆಗೆ ಸಮ. ಇಂಥ ಐವಿಎಫ್‌ ವಿಧಾನಗಳು ಜನನಾಂಗಗಳ ಘೋರ ದುರ್ಬಳಕೆ ಆಗಿವೆ.​—⁠ಮತ್ತಾ. 5:32; 1 ಕೊರಿಂ. 5:11; 6:​9, 18; ಇಬ್ರಿ. 13:⁠4.

[ಪಾದಟಿಪ್ಪಣಿ]

^ ಪ್ಯಾರ. 30 1993, ಜೂನ್‌ 8ರ ಎಚ್ಚರ! ಪತ್ರಿಕೆಯ ಪುಟ 27-28ರಲ್ಲಿ ಹೆಚ್ಚಿನ ಮಾಹಿತಿಯಿದೆ.