ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರಳೀಕೃತ ಕಾವಲಿನಬುರುಜು ಏಕೆ ಪರಿಚಯಿಸಲಾಯಿತು?

ಸರಳೀಕೃತ ಕಾವಲಿನಬುರುಜು ಏಕೆ ಪರಿಚಯಿಸಲಾಯಿತು?

ಸರಳೀಕೃತ ಕಾವಲಿನಬುರುಜು ಏಕೆ ಪರಿಚಯಿಸಲಾಯಿತು?

ದಶಕಗಳಿಂದ ಕಾವಲಿನಬುರುಜು ಪತ್ರಿಕೆಯ ಮೂಲಕ ಬೈಬಲಾಧರಿತ ಮಾಹಿತಿಯನ್ನು ಪ್ರಕಾಶಿಸಲಾಗುತ್ತಿದೆ. ಪ್ರಪಂಚದಾದ್ಯಂತ ಬಹು ಜನರು ಇದರಿಂದ ಪ್ರಯೋಜನ ಪಡೆದಿದ್ದಾರೆ. ಮಾತ್ರವಲ್ಲ ಅದಕ್ಕಾಗಿ ಗಣ್ಯತೆಯನ್ನೂ ವ್ಯಕ್ತಪಡಿಸಿದ್ದಾರೆ. ಜುಲೈ 2011ರಲ್ಲಿ ಈ ಪತ್ರಿಕೆಯ ಸರಳೀಕೃತ ಅಧ್ಯಯನ ಆವೃತ್ತಿಯ ಪ್ರಥಮ ಸಂಚಿಕೆಯನ್ನು ಇಂಗ್ಲಿಷ್‌ ಭಾಷೆಯಲ್ಲಿ ಹೊರತರಲಾಯಿತು. ಆ ಸಂಚಿಕೆಯಲ್ಲಿ ಹೀಗೆ ತಿಳಿಸಲಾಗಿತ್ತು: “ಈ ಹೊಸ ಆವೃತ್ತಿಯನ್ನು ಒಂದು ವರ್ಷ ಪ್ರಯೋಗಿಸಿ ನೋಡಲಾಗುವುದು. ಉಪಯುಕ್ತವೆಂದು ಕಂಡುಬಂದಲ್ಲಿ ಮುದ್ರಣವನ್ನು ಮುಂದುವರಿಸಲಾಗುವುದು.”

ಈಗ ನಮಗೆಲ್ಲರಿಗೂ ಒಂದು ಸಂತೋಷದ ಸುದ್ದಿ. ಅದೇನೆಂದರೆ ಈ ಸರಳೀಕೃತ ಆವೃತ್ತಿಯ ಮುದ್ರಣವನ್ನು ಮುಂದುವರಿಸಲು ನಾವು ನಿರ್ಧರಿಸಿದ್ದೇವೆ. ಈ ಆವೃತ್ತಿಯನ್ನು ಮುಂದಿನ ದಿನಗಳಲ್ಲಿ ಫ್ರೆಂಚ್‌, ಪೋರ್ಚುಗೀಸ್‌ ಮತ್ತು ಸ್ಪ್ಯಾನಿಷ್‌ ಭಾಷೆಗಳಲ್ಲೂ ಹೊರತರಲಾಗುವುದು.

ಯಾವ ಪ್ರಯೋಜನವಾಗಿದೆ?

ದಕ್ಷಿಣ ಪೆಸಿಫಿಕ್‌ನಲ್ಲಿ ಈ ಸರಳೀಕೃತ ಆವೃತ್ತಿಯನ್ನು ಪಡೆದುಕೊಂಡ ಅನೇಕರು ಹೀಗೆ ವರದಿಸಿದರು: “ಸಹೋದರರು ಈಗ ಕಾವಲಿನಬುರುಜು ಪತ್ರಿಕೆಯಲ್ಲಿ ಬರುವ ವಿಷಯಗಳನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ.” ಇದರ ಕುರಿತು ಇನ್ನೊಬ್ಬರು ಪತ್ರದಲ್ಲಿ ತಿಳಿಸಿದ್ದು “ಒಂದೊಮ್ಮೆ ಪದಗಳ ಮತ್ತು ವಾಕ್ಸರಣಿಗಳ ಅರ್ಥ ಗ್ರಹಿಸಲು ತುಂಬ ಸಮಯ ತಗಲುತ್ತಿತ್ತು. ಆದರೆ ಈಗ ಆ ಸಮಯವನ್ನು ಉಲ್ಲೇಖಿಸಿರುವ ವಚನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕಲಿಯುವ ವಿಷಯಕ್ಕೆ ಅದು ಹೇಗೆ ಸಂಬಂಧಿಸಿದೆ ಎಂದು ಗ್ರಹಿಸಲು ಉಪಯೋಗಿಸುತ್ತೇನೆ.”

ಅಮೆರಿಕದ ಕಾಲೇಜು ಪದವೀಧರೆಯೊಬ್ಬಳು ಹೇಳುವುದು: “ಉನ್ನತ ಶಿಕ್ಷಣದಲ್ಲಿ ಉಪಯೋಗಿಸಲಾಗುವ ಜಟಿಲವಾದ ಇಂಗ್ಲಿಷ್‌ ಭಾಷೆಗೆ ನಾನು ಒಗ್ಗಿಹೋಗಿದ್ದೆ. ನಾನು ಮಾತಾಡೋದು ಬರೆಯೋದು ಎಲ್ಲ ಅದೇ ಆಗಿತ್ತು. ಹೀಗೆ 18 ವರ್ಷದುದ್ದಕ್ಕೂ ಸುಲಭವಾದ ವಿಷಯಗಳನ್ನ ತುಂಬ ಕ್ಲಿಷ್ಟಕರವಾಗಿ ಯೋಚಿಸುವ, ಮಾತಾಡುವ ಹವ್ಯಾಸ ಬೆಳೆಸಿಕೊಂಡೆ. ನಾನು ದೊಡ್ಡ ಬದಲಾವಣೆ ಮಾಡಿಕೊಳ್ಳಬೇಕೆಂದು ನಂತರ ಮನಗಂಡೆ.” ಈಗ ಪರಿಣಾಮಕಾರಿಯಾಗಿ ಸುವಾರ್ತೆ ಸಾರುತ್ತಿರುವ ಆಕೆ ಬರೆದದ್ದು: “ಸರಳೀಕೃತ ಕಾವಲಿನಬುರುಜು ನಿಜವಾಗಿಯೂ ಅತ್ಯುತ್ತಮ ಸಹಾಯಕ. ಇದರ ಸರಳ ಭಾಷೆ ವಿಷಯಗಳನ್ನು ಹೇಗೆ ಸರಳವಾಗಿ ಹೇಳಬಹುದು ಎನ್ನುವುದನ್ನು ನನಗೆ ಕಲಿಸಿತು.”

1972ರಲ್ಲಿ ದೀಕ್ಷಾಸ್ನಾನ ಪಡೆದ ಇಂಗ್ಲೆಂಡಿನ ಸಹೋದರಿಯೊಬ್ಬರು ಸರಳೀಕೃತ ಕಾವಲಿನಬುರುಜುವಿನ ಬಗ್ಗೆ ಬರೆದದ್ದು: “ಪ್ರಥಮ ಸಂಚಿಕೆಯನ್ನು ನಾನು ಓದಿದಾಗ, ಯೆಹೋವನು ನನ್ನ ಪಕ್ಕ ಕೂತು ನನ್ನ ಹೆಗಲ ಮೇಲೆ ಕೈ ಹಾಕ್ಕೊಂಡು ನನ್ನೊಟ್ಟಿಗೆ ಓದುತ್ತಿರುವಂತೆ ಭಾಸವಾಯಿತು. ಇದು ಒಬ್ಬ ತಂದೆ ತನ್ನ ಮಗುವಿಗೆ ಮಲಗುವಾಗ ಕಥೆ ಹೇಳುವಂತಿತ್ತು.”

40ಕ್ಕಿಂತ ಹೆಚ್ಚು ವರ್ಷಗಳ ಹಿಂದೆ ದೀಕ್ಷಾಸ್ನಾನ ಪಡೆದಿದ್ದ ಅಮೆರಿಕದ ಬೆತೆಲ್‌ ಸಹೋದರಿಯೊಬ್ಬರು ಸರಳೀಕೃತ ಆವೃತ್ತಿ ಒಂದು ಹೊಸ ಒಳನೋಟವನ್ನು ಕೊಟ್ಟಿತೆಂದು ಹೇಳುತ್ತಾರೆ. ಉದಾಹರಣೆಗೆ, 2011 ಸೆಪ್ಟೆಂಬರ್‌ 15ರ ಸಂಚಿಕೆಯ “ಕೆಲವು ವಾಕ್ಸರಣಿಗಳ ಅರ್ಥ” ಎಂಬ ಚೌಕದಲ್ಲಿ ಇಬ್ರಿಯ 12:1ರಲ್ಲಿರುವ ‘ಸಾಕ್ಷಿಗಳ ಮೇಘ’ ಎಂಬ ವಾಕ್ಸರಣಿಯನ್ನು ವಿವರಿಸಲಾಗಿತ್ತು. “ಅವರು ತುಂಬಾ ಜನರು. ಎಣಿಸಲು ಸಾಧ್ಯವಿಲ್ಲ” ಎಂದು ಅದರಲ್ಲಿ ಕೊಡಲಾಗಿತ್ತು. ಆಕೆ ಹೇಳಿದ್ದು: “ಇದು ಆ ವಚನದ ಕುರಿತ ನನ್ನ ಜ್ಞಾನವನ್ನು ಹರಿತಗೊಳಿಸಿತು.” ಕೂಟದ ಬಗ್ಗೆ ಆಕೆ ಹೇಳಿದ್ದು: “ಸರಳೀಕೃತ ಆವೃತ್ತಿಯಲ್ಲಿ ಇರುವ ಪದಗಳು ಮೂಲ ಆವೃತ್ತಿಯಲ್ಲಿ ಇದ್ದ ಹಾಗೆ ಇರೋದಿಲ್ಲ. ಹಾಗಾಗಿ ಚಿಕ್ಕ ಮಕ್ಕಳು ಸರಳೀಕೃತ ಆವೃತ್ತಿಯಿಂದ ಓದಿ ಉತ್ತರ ಕೊಟ್ಟಾಗಲೂ ಅದು ಸಭಿಕರಿಗೆ ಮಕ್ಕಳು ಸ್ವಂತ ಮಾತುಗಳಲ್ಲಿ ಹೇಳಿದ ಹಾಗೆ ಇರುತ್ತದೆ.”

ಬೆತೆಲ್‌ನ ಇನ್ನೊಬ್ಬ ಸಹೋದರಿ ಹೇಳಿದ್ದು: “ಸಭೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಉತ್ತರ ಕೊಡುವುದನ್ನೇ ನಾನು ಕಾತರದಿಂದ ಎದುರು ನೋಡುತ್ತೇನೆ. ಮಕ್ಕಳು ಉತ್ತರಗಳನ್ನು ದೃಢನಿಶ್ಚಯದಿಂದ ಕೊಡಲು ಸರಳೀಕೃತ ಕಾವಲಿನಬುರುಜು ಸಹಾಯಮಾಡಿದೆ. ಅವರ ಉತ್ತರಗಳನ್ನು ಕೇಳಿ ನನ್ನಲ್ಲಿ ಉತ್ಸಾಹ ಪುಟಿಯುತ್ತದೆ.”

1984ರಲ್ಲಿ ದೀಕ್ಷಾಸ್ನಾನ ಹೊಂದಿದ ಸಹೋದರಿಯೊಬ್ಬರು ಸರಳೀಕೃತ ಆವೃತ್ತಿಗೆ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಹೇಳಿದ್ದು: “ಇದು ನನಗಾಗಿಯೇ ಬರೆದಂತಿದೆ. ನಾನು ಓದುವ ವಿಷಯವನ್ನು ಸುಲಭವಾಗಿ ಅರ್ಥಮಾಡಿಸುತ್ತದೆ. ಕಾವಲಿನಬುರುಜು ಅಧ್ಯಯನದಲ್ಲಿ ಉತ್ತರ ಕೊಡಲು ನನ್ನಿಂದ ಆಗುತ್ತದೆ ಎಂಬ ವಿಶ್ವಾಸ ತುಂಬಿದೆ.”

ಹೆತ್ತವರ ಅಮೂಲ್ಯ ಸಾಧನ

ಏಳು ವರ್ಷದ ಹುಡುಗನ ತಾಯಿ ಹೀಗೆ ಹೇಳುತ್ತಾಳೆ: “ಕಾವಲಿನಬುರುಜು ಅಧ್ಯಯನಕ್ಕಾಗಿ ತಯಾರಿ ಮಾಡುವಾಗ ಅನೇಕ ವಾಕ್ಯಗಳನ್ನು ಅವನಿಗೆ ವಿವರಿಸಿ ಹೇಳಲು ನನಗೆ ಬಹಳ ಸಮಯ ಬೇಕಾಗ್ತಿತ್ತು. ಸಾಕುಸಾಕಾಗಿ ಹೋಗ್ತಿತ್ತು.” ಸರಳೀಕೃತ ಆವೃತ್ತಿ ಹೇಗೆ ಸಹಾಯಮಾಡಿತು? ಆಕೆ ಬರೆದದ್ದು: “ತಯಾರಿ ಮಾಡುವಾಗ ಈಗ ಅವನು ಕೂಡ ಪ್ಯಾರಗ್ರಾಫ್‌ಗಳನ್ನು ಓದುತ್ತಾನೆ. ಅರ್ಥಮಾಡಿಕೊಳ್ಳುತ್ತಾನೆ ಸಹ. ಅದನ್ನು ನೋಡಿ ನನಗೇ ಆಶ್ಚರ್ಯ! ಸರಳ ಪದಗಳು, ಚಿಕ್ಕ ಚಿಕ್ಕ ವಾಕ್ಯಗಳು ಇರುವುದರಿಂದ ಅವನಿಗೆ ಸುಲಭವಾಗುತ್ತದೆ. ಉತ್ತರಗಳನ್ನು ಅವನೇ ಸ್ವತಃ ತಯಾರಿಮಾಡಲು ಶುರುಮಾಡಿದ್ದಾನೆ. ಅಧ್ಯಯನದ ಸಮಯದಲ್ಲಿ ಅವನ ಗಮನ ಪತ್ರಿಕೆಯಿಂದ ಅತ್ತಿತ್ತ ಹರಿಯುವುದಿಲ್ಲ.”

ಒಂಬತ್ತು ವರ್ಷದ ಹುಡುಗಿಯ ತಾಯಿ ಬರೆದದ್ದು: “ಮುಂಚೆಯಾದರೆ ನಮ್ಮ ಮಗಳಿಗೆ ಉತ್ತರಗಳನ್ನು ಕೊಡಲು ನಾವು ಸಹಾಯ ಮಾಡಬೇಕಿತ್ತು. ಆದರೆ ಈಗ ಅವಳೇ ತಯಾರಿ ಮಾಡುತ್ತಾಳೆ. ಅವಳಿಗೆ ವಿಷಯಗಳನ್ನು ಬಿಡಿಬಿಡಿಯಾಗಿ ಹೇಳಿಕೊಡಬೇಕಾದ ಸಂದರ್ಭ ತೀರ ಕಡಿಮೆ. ಏಕೆಂದರೆ ಅದು ಅವಳೇ ಅರ್ಥಮಾಡಿಕೊಳ್ಳುವಷ್ಟು ಸರಳವಾಗಿದೆ. ಈಗ ಅವಳು ಕಾವಲಿನಬುರುಜು ಅಧ್ಯಯನವನ್ನು ತುಂಬ ಆನಂದಿಸುತ್ತಾಳೆ.”

ಮಕ್ಕಳು ಏನು ನೆನಸುತ್ತಾರೆ?

ಸರಳೀಕೃತ ಕಾವಲಿನಬುರುಜು ತಮಗಾಗಿಯೇ ಸಿದ್ಧಮಾಡಿದಂತಿದೆ ಎಂದು ಅನೇಕ ಮಕ್ಕಳಿಗೆ ಅನಿಸಿದೆ. ಹನ್ನೆರಡು ವರ್ಷದ ರೆಬೆಕ್ಕ “ಈ ಹೊಸ ಆವೃತ್ತಿಯನ್ನು ದಯವಿಟ್ಟು ನಿಲ್ಲಿಸಬೇಡಿ!” ಎಂದು ಕೇಳಿಕೊಂಡಳು. ಅವಳು ಕೂಡಿಸಿ ಹೇಳಿದ್ದು: “‘ಕೆಲವು ವಾಕ್ಸರಣಿಗಳ ಅರ್ಥ’ ಎಂಬ ಚೌಕ ನನಗೆ ತುಂಬ ಇಷ್ಟ. ಇದು ಪುಟಾಣಿಗಳಿಗೆ ತುಂಬ ಸಹಾಯ ಮಾಡುತ್ತೆ.”

ಏಳು ವರ್ಷದ ನಿಕಲೆಟ್‌ಗೆ ಸಹ ಹೀಗೆಯೇ ಅನಿಸುತ್ತದೆ. ಅವಳು ಹೇಳಿದ್ದು: “ಮೊದಲೆಲ್ಲಾ ಕಾವಲಿನಬುರುಜು ಅರ್ಥನೇ ಆಗ್ತಿರ್ಲಿಲ್ಲ. ಆದರೆ ಈಗ ನಾನಾಗಿಯೇ ಹೆಚ್ಚು ಉತ್ತರಗಳನ್ನು ಕೊಡ್ತೇನೆ.” ಒಂಬತ್ತು ವರ್ಷದ ಹುಡುಗಿ ಎಮ ಬರೆದದ್ದು: “ಇದರಿಂದ ನನಗೆ ಮತ್ತು ನನ್ನ ಆರು ವರ್ಷದ ತಮ್ಮನಿಗೆ ತುಂಬ ಸಹಾಯವಾಗಿದೆ. ಮುಂಚಿಗಿಂತ ತುಂಬ ಚೆನ್ನಾಗಿ ಅರ್ಥಮಾಡಿಕೊಳ್ಳಲು ಆಗ್ತದೆ. ನಿಮಗೆ ತುಂಬ ಧನ್ಯವಾದ!

ಸರಳ ಪದಗಳು ಮತ್ತು ಸರಳ ವಾಕ್ಯಗಳಿಂದ ಕೂಡಿದ ಈ ಕಾವಲಿನಬುರುಜುವಿನಿಂದ ಅನೇಕ ಜನರು ಪ್ರಯೋಜನ ಪಡೆಯುತ್ತಿದ್ದಾರೆ ಎನ್ನುವುದು ತೋರಿಬಂದಿದೆ. ಖಂಡಿತವಾಗಿಯೂ ಸರಳೀಕೃತ ಆವೃತ್ತಿ ಇಂದು ಅಗತ್ಯ. ಆದುದರಿಂದ 1879ರಿಂದ ಅತ್ಯಮೂಲ್ಯ ಕೊಡುಗೆಯಾಗಿರುವ ಕಾವಲಿನಬುರುಜುವಿನ ಮೂಲ ಆವೃತ್ತಿಯೊಂದಿಗೆ ಸರಳೀಕೃತ ಆವೃತ್ತಿಯೂ ಮುಂದುವರಿಯುವುದು.

[ಪುಟ 30ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಒಂದೊಮ್ಮೆ ಪದಗಳ ಮತ್ತು ವಾಕ್ಸರಣಿಗಳ ಅರ್ಥ ಗ್ರಹಿಸಲು ತುಂಬ ಸಮಯ ತಗಲುತ್ತಿತ್ತು. ಆದರೆ ಈಗ ಆ ಸಮಯವನ್ನು ಉಲ್ಲೇಖಿಸಿರುವ ವಚನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಕಲಿಯುವ ವಿಷಯಕ್ಕೆ ಅದು ಹೇಗೆ ಸಂಬಂಧಿಸಿದೆ ಎಂದು ಗ್ರಹಿಸಲು ಉಪಯೋಗಿಸುತ್ತೇನೆ”

[ಪುಟ 31ರಲ್ಲಿರುವ ಸಂಕ್ಷಿಪ್ತ ವಿವರಣೆ]

“ತಯಾರಿ ಮಾಡುವಾಗ ಈಗ ಅವನು ಕೂಡ ಪ್ಯಾರಗ್ರಾಫ್‌ಗಳನ್ನು ಓದುತ್ತಾನೆ. ಅರ್ಥಮಾಡಿ ಕೊಳ್ಳುತ್ತಾನೆ ಸಹ. ಅದನ್ನು ನೋಡಿ ನನಗೇ ಆಶ್ಚರ್ಯ!”