ಯೆಹೋವನಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಾ ಇರಿ
ಯೆಹೋವನಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಾ ಇರಿ
“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋ. 4:8.
ವಿವರಿಸುವಿರಾ?
ಆರೋಗ್ಯ ಮತ್ತು ಎಲೆಕ್ಟ್ರಾನಿಕ್ ಸಾಧನಗಳು ನಮ್ಮನ್ನು ಯೆಹೋವನಿಂದ ದೂರಮಾಡದಂತೆ ಹೇಗೆ ನೋಡಿಕೊಳ್ಳಬಹುದು?
ಹಣ ಮತ್ತು ಹೆಮ್ಮೆ ನಮ್ಮನ್ನು ಯೆಹೋವನಿಂದ ದೂರಮಾಡದಂತೆ ಹೇಗೆ ನೋಡಿಕೊಳ್ಳಬಹುದು?
ನಾವು ಯಾವಾಗಲೂ ಯೆಹೋವನಿಗೆ ಆಪ್ತರಾಗಿ ಉಳಿಯಲು ಏನು ಮಾಡಬೇಕು?
1, 2. (1) ಸೈತಾನನು ಯಾವ ‘ಕುತಂತ್ರಗಳನ್ನು’ ಬಳಸುತ್ತಾನೆ? (2) ನಾವು ದೇವರ ಸಮೀಪಕ್ಕೆ ಬರಲು ಏನು ಮಾಡಬೇಕು?
ಯೆಹೋವ ದೇವರು ಮನುಷ್ಯರನ್ನು ಸೃಷ್ಟಿಸುವಾಗಲೇ ತನ್ನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳಬೇಕೆಂಬ ಬಯಕೆಯನ್ನು ಅವರಲ್ಲಿಟ್ಟಿದ್ದಾನೆ. ಆದರೆ ಸೈತಾನನ ಗುರಿಯೇ ಬೇರೆ. ತನ್ನಂತೆಯೇ ಮನುಷ್ಯರು ಕೂಡ ‘ಯೆಹೋವನ ಅಗತ್ಯ ತಮಗಿಲ್ಲ’ ಎಂದು ಯೋಚಿಸುವಂತೆ ಮಾಡುವುದೇ ಅವನ ಆಶೆ. ಈ ಸುಳ್ಳನ್ನು ಹೇಳಿ ಏದೆನ್ ತೋಟದಲ್ಲಿ ಹವ್ವಳನ್ನು ವಂಚಿಸಿದ. ಅಂದಿನಿಂದ ಇಂದಿಗೂ ಆ ವಂಚನೆಯ ಬಲೆಯಲ್ಲಿ ಮಾನವರೆಲ್ಲರನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾನೆ. (ಆದಿ. 3:4-6) ಇತಿಹಾಸದುದ್ದಕ್ಕೂ ಲೆಕ್ಕವಿಲ್ಲದಷ್ಟು ಜನರು ತಮಗೆ ದೇವರ ಅಗತ್ಯವಿಲ್ಲವೆಂದು ತಪ್ಪಾಗಿ ನೆನಸಿದ್ದಾರೆ.
2 ಆದರೆ ನಾವು ಸೈತಾನನ ಪಾಶಕ್ಕೆ ಬಲಿಯಾಗಬೇಕಿಲ್ಲ. ‘ಏಕೆಂದರೆ ಅವನ ಕುತಂತ್ರಗಳ ವಿಷಯದಲ್ಲಿ ನಾವು ಅಜ್ಞಾನಿಗಳಲ್ಲ.’ (2 ಕೊರಿಂ. 2:11) ತಪ್ಪು ನಿರ್ಣಯಗಳನ್ನು ಮಾಡುವಂತೆ ಪ್ರೇರೇಪಿಸುವ ಮೂಲಕ ಸೈತಾನನು ನಮ್ಮನ್ನು ಯೆಹೋವನಿಂದ ದೂರಮಾಡಲು ಪ್ರಯತ್ನಿಸುತ್ತಾನೆ. ಆದರೂ ಹಿಂದಿನ ಲೇಖನದಲ್ಲಿ ನೋಡಿದಂತೆ ಉದ್ಯೋಗ, ಮನರಂಜನೆ, ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಾವು ಸರಿಯಾದ ಆಯ್ಕೆಗಳನ್ನು ಮಾಡಸಾಧ್ಯವಿದೆ. ಎಲೆಕ್ಟ್ರಾನಿಕ್ ಸಾಧನಗಳು, ಆರೋಗ್ಯ, ಹಣ ಮತ್ತು ಹೆಮ್ಮೆ ಈ ನಾಲ್ಕು ವಿಷಯಗಳಲ್ಲಿ ನಾವು ಹೇಗೆ ತಪ್ಪು ಹೆಜ್ಜೆಯನ್ನಿಡದಂತೆ ಜಾಗ್ರತೆ ವಹಿಸಬಹುದೆಂದು ಈ ಲೇಖನ ತಿಳಿಸುತ್ತದೆ. ಸರಿಯಾದ ಆಯ್ಕೆಗಳನ್ನು ಮಾಡುವಾಗ ನಾವು “ದೇವರ ಸಮೀಪಕ್ಕೆ” ಬರುತ್ತೇವೆ.—ಯಾಕೋ. 4:8.
ಎಲೆಕ್ಟ್ರಾನಿಕ್ ಸಾಧನಗಳು
3. ಕಂಪ್ಯೂಟರ್‌ನಂಥ ಸಾಧನಗಳ ಸದ್ಬಳಕೆ ಅಥವಾ ದುರ್ಬಳಕೆಗೆ ಉದಾಹರಣೆ ಕೊಡಿ.
3 ಇಂದು ಯಾರ ಹತ್ತಿರ ನೋಡಿದರೂ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನಗಳಿವೆ. ಸದ್ಬಳಕೆಯಾದರೆ ಅವು ಉಪಯುಕ್ತ ಸಾಧನ. ದುರ್ಬಳಕೆಯಾದರೆ ನಮ್ಮ ಮತ್ತು ನಮ್ಮ ತಂದೆಯಾದ ಯೆಹೋವ ದೇವರ ಮಧ್ಯೆಯಿರುವ ಸಂಬಂಧಕ್ಕೆ ಕಂಟಕವಾಗಬಲ್ಲವು. ಕಂಪ್ಯೂಟರನ್ನು ಉದಾಹರಣೆಯಾಗಿ ತಕ್ಕೊಳ್ಳಿ. ನಿಮ್ಮ ಕೈಯಲ್ಲಿರುವ ಈ ಪತ್ರಿಕೆಯನ್ನು ರಚಿಸಿ ಮುದ್ರಿಸಿರುವುದು ಕಂಪ್ಯೂಟರ್‌ನ ಸಹಾಯದಿಂದಲೇ. ಸಂಶೋಧನೆ ಮಾಡಲು, ದೂರದಲ್ಲಿ ಇರುವವರೊಂದಿಗೆ ಸಂವಾದ ಮಾಡಲು, ಕೆಲವೊಮ್ಮೆ ಚೈತನ್ಯಕಾರಿ ಮನರಂಜನೆಗೂ ಅದು ಬಹು ಉಪಯುಕ್ತ. ಆದರೆ ಅದರ ಮುಂದೆಯೇ ಕೂತು ಸಮಯ ಪೋಲುಮಾಡುವ ಅಪಾಯಕ್ಕೂ ತುತ್ತಾಗುವ ಸಾಧ್ಯತೆಯಿದೆ. ವಿನೂತನ ಮಾದರಿಗಳನ್ನು ಕೊಂಡುಕೊಳ್ಳಲೇಬೇಕೆಂದು ಜನರು ನೆನಸುವಂತೆ ಮಾಡುವುದರಲ್ಲಿ ಜಾಹೀರಾತು ಜಗತ್ತು ವಿಜಯಿಯಾಗಿದೆ. ತರುಣನೊಬ್ಬನಿಗೆ ಹೊಸ ಮಾದರಿಯ ಒಂದು ಟ್ಯಾಬ್ಲೆಟ್ ಕಂಪ್ಯೂಟರ್ ಕೊಂಡುಕೊಳ್ಳುವ ಹುಚ್ಚು ಎಷ್ಟಿತ್ತೆಂದರೆ
ಅವನು ತನ್ನವರಿಗ್ಯಾರಿಗೂ ಹೇಳದೆ ತನ್ನ ಒಂದು ಕಿಡ್ನಿಯನ್ನೇ ಮಾರಿ ಅದನ್ನು ಖರೀದಿಸಿದ. ಎಂಥ ಬುದ್ಧಿಯಿಲ್ಲದ ಕೆಲಸ!4. ಕಂಪ್ಯೂಟರನ್ನು ಮಿತಿಮೀರಿ ಬಳಸುವ ದುರಭ್ಯಾಸದಿಂದ ಹೊರಬರಲು ಒಬ್ಬ ಸಹೋದರ ಏನು ಮಾಡಿದ?
4 ತಂತ್ರಜ್ಞಾನದ ದುರ್ಬಳಕೆ ಮಾಡುತ್ತಾ ಇಲ್ಲವೆ ಮಿತಿಮೀರಿ ಬಳಸುತ್ತಾ ಯೆಹೋವನೊಂದಿಗಿರುವ ಆಪ್ತ ಬಂಧವನ್ನು ಬಲಿಕೊಡುವುದು ಅದಕ್ಕಿಂತಲೂ ಹೆಚ್ಚು ಅಪಾಯಕರ. ಇಂಟರ್‌ನೆಟ್ ವ್ಯಸನದ ವಿಷವರ್ತುಲದಿಂದ ಹೊರಬರಲು 28 ವರ್ಷ ಪ್ರಾಯದ ಯಾನ್ * ಎಂಬ ಸಹೋದರನಿಗೆ ತುಂಬ ಕಷ್ಟವಾಯಿತು. “ಆಧ್ಯಾತ್ಮಿಕ ವಿಷಯಗಳಿಗಾಗಿ ‘ಸಮಯವನ್ನು ಖರೀದಿಸಬೇಕೆಂದು’ ಬೈಬಲ್ ಹೇಳುತ್ತದೆ ಎನ್ನುವುದು ನನಗೆ ಗೊತ್ತಿದೆ. ಆದರೆ ಕಂಪ್ಯೂಟರ್ ವಿಷಯಕ್ಕೆ ಬರುವಾಗ ನನಗೆ ನಾನೇ ದೊಡ್ಡ ಶತ್ರು.” ಮಧ್ಯ ರಾತ್ರಿ ಆದರೂ ಇಂಟರ್‌ನೆಟ್ ಮುಂದಿನಿಂದ ಎದ್ದೇಳುವುದು ಅವನಿಗೆ ಕಷ್ಟವಾಗುತ್ತಿತ್ತು. “ನನಗೆಷ್ಟೇ ಸುಸ್ತಾಗಿರಲಿ ಚ್ಯಾಟ್ ಮಾಡುತ್ತಲೇ ಇರುತ್ತಿದ್ದೆ. ಒಂದು ಇನ್ನೊಂದು ಅಂತ ವಿಡಿಯೋ ತುಣುಕುಗಳನ್ನು ನೋಡುತ್ತಿರುತ್ತಿದ್ದೆ. ಕೆಲವೊಮ್ಮೆ ಕೆಟ್ಟದ್ದನ್ನು ಕೂಡ. ನಿಲ್ಲಿಸಲಿಕ್ಕಂತೂ ಆಗ್ತಾನೇ ಇರಲಿಲ್ಲ” ಎನ್ನುತ್ತಾನೆ ಅವನು. ಹಾಗಾದರೆ ಈ ಚಾಳಿಯಿಂದ ಹೊರಬರಲು ಅವನೇನು ಮಾಡಿದ? ಅವನು ಮಲಗಬೇಕಿದ್ದ ಸಮಯಕ್ಕೆ ಸರಿಯಾಗಿ ಕಂಪ್ಯೂಟರ್ ಅದರಷ್ಟಕ್ಕೆ ಆಫ್ ಆಗುವ ರೀತಿಯಲ್ಲಿ ಸೆಟ್ ಮಾಡಿದ.—ಎಫೆಸ 5:15, 16 ಓದಿ.
5, 6. (1) ಹೆತ್ತವರಿಗೆ ಮಕ್ಕಳ ವಿಷಯದಲ್ಲಿ ಯಾವ ಜವಾಬ್ದಾರಿಗಳಿವೆ? (2) ಮಕ್ಕಳು ಒಳ್ಳೇ ಸಹವಾಸದಲ್ಲಿ ಆನಂದಿಸಲು ಹೆತ್ತವರು ಏನು ಮಾಡಬಹುದು?
5 ಹೆತ್ತವರೇ ಮಕ್ಕಳ ಪ್ರತಿಯೊಂದು ಹೆಜ್ಜೆಯನ್ನು ನಿಯಂತ್ರಿಸುವುದು ಅಗತ್ಯವಿಲ್ಲವಾದರೂ ಅವರು ಕಂಪ್ಯೂಟರನ್ನು ಬಳಸುವಾಗ ನೀವು ಕಣ್ಣಿಡಲೇಬೇಕು. ನಿಮಗೇನೂ ತೊಂದರೆ ಮಾಡದೆ ಅವರ ಪಾಡಿಗೆ ಅವರಿರಲಿ ಎಂದು ಅನೈತಿಕ, ಹಿಂಸಾತ್ಮಕ ಗೇಮ್ಸ್, ಪ್ರೇತವ್ಯವಹಾರದ ವೆಬ್‌ಸೈಟ್‌ಗಳಿಗೆ ಹೋಗಲು ಅಥವಾ ಇಂಟರ್‌ನೆಟ್‌ನಲ್ಲಿ ಕೆಟ್ಟ ಜನರೊಂದಿಗೆ ಸಹವಾಸ ಮಾಡಲು ಅನುಮತಿಸಬೇಡಿ. ನೀವು ಸುಮ್ಮನಿದ್ದು ಬಿಟ್ಟರೆ ಅವರು, ‘ಅಪ್ಪ ಅಮ್ಮ ಏನೂ ಹೇಳೋದಿಲ್ಲ. ಇದರಲ್ಲೇನೂ ತಪ್ಪಿಲ್ಲವೇನೋ?’ ಎಂದು ನೆನಸುವರು. ಚಿಕ್ಕ ಮಕ್ಕಳಿರಲಿ ಹದಿವಯಸ್ಸಿನ ಮಕ್ಕಳಿರಲಿ ಯೆಹೋವನಿಂದ ದೂರ ಕೊಂಡೊಯ್ಯುವ ಯಾವುದೇ ವಿಷಯವನ್ನು ಅವರು ಮಾಡದಂತೆ ಸಂರಕ್ಷಿಸುವುದು ಹೆತ್ತವರಾದ ನಿಮ್ಮ ಹೊಣೆ. ಪುಟ್ಟ ಮರಿಗಳನ್ನು ಅಪಾಯದಿಂದ ಸಂರಕ್ಷಿಸಲು ಪ್ರಾಣಿಗಳೇ ಎಷ್ಟೊಂದು ಶ್ರಮಪಡುತ್ತವಲ್ಲ! ತಾಯಿ ಕರಡಿ ತನ್ನ ಮರಿಗಳಿಗೆ ಯಾರಾದರೂ ಹಾನಿಮಾಡಲು ಬಂದರೆ ಏನು ಮಾಡುತ್ತದೆ ಯೋಚಿಸಿ. ಅಪಾಯಕ್ಕೆ ತುತ್ತಾಗದಂತೆ ನಿಮ್ಮ ಮಕ್ಕಳನ್ನು ಸಂರಕ್ಷಿಸಿ.—ಹೋಶೇಯ 13:8 ಹೋಲಿಸಿ.
6 ನಿಮ್ಮ ಮಕ್ಕಳು ಒಳ್ಳೇ ಸಹವಾಸದಲ್ಲಿ ಆನಂದಿಸಲು ಸಹಾಯ ಮಾಡಿ. ದೊಡ್ಡವರು ಚಿಕ್ಕವರು ಹೀಗೆ ಎಲ್ಲ ಆದರ್ಶ ಕ್ರೈಸ್ತರೊಂದಿಗೆ ಒಡನಾಟ ಮಾಡಲಿ. ಹೆತ್ತವರೇ ನೆನಪಿಡಿ, ಮಕ್ಕಳು ನಿಮ್ಮ ಜೊತೆ ಸಮಯ ಕಳೆಯಬೇಕೆಂದು ಬಯಸುತ್ತಾರೆ. ಅದು ಅವರಿಗೆ ಅಗತ್ಯ. ಆದ್ದರಿಂದ ನಿಮ್ಮ ಮಕ್ಕಳ ಜೊತೆ ಸೇರಿ ನಗಾಡಿ, ಆಟವಾಡಿ, ಕೆಲಸ ಮಾಡಿ. ಅದಕ್ಕಾಗಿ ಸಮಯ ಮಾಡಿಕೊಳ್ಳಿ. ಹೀಗೆ ಜೊತೆ ಜೊತೆಯಾಗಿ “ದೇವರ ಸಮೀಪಕ್ಕೆ ಬನ್ನಿ.” *
ಆರೋಗ್ಯ
7. ನಾವೆಲ್ಲರೂ ಆರೋಗ್ಯದಿಂದಿರಲು ಬಯಸುತ್ತೇವೆ ಏಕೆ?
7 “ಹೇಗಿದ್ದೀರಿ?” ಸಾಮಾನ್ಯವಾಗಿ ಕೇಳುವ ಈ ಪ್ರಶ್ನೆ ಒಂದು ಕಹಿ ಸತ್ಯವನ್ನು ಬಿಚ್ಚಿಡುತ್ತದೆ. ಅದೇನೆಂದರೆ, ನಮ್ಮ ಮೊದಲ ಹೆತ್ತವರು ಸೈತಾನನ ಮಾತು ಕೇಳಿ ಯೆಹೋವನಿಂದ ದೂರವಾದ ಕಾರಣ ನಾವೆಲ್ಲರೂ ಅಸ್ವಸ್ಥರಾಗುತ್ತೇವೆ. ನಮ್ಮ ಆರೋಗ್ಯ ಹಾಳಾದಾಗೆಲ್ಲ ಸೈತಾನನಿಗೆ ಸಂತೋಷ. ಏಕೆಂದರೆ ನಮಗೆ ಯೆಹೋವನ ಸೇವೆ ಮಾಡಲು ತುಂಬ ಕಷ್ಟವಾಗುತ್ತದಲ್ಲಾ ಅದಕ್ಕೆ. ನಮ್ಮ ಜೀವ ಹೋದರಂತೂ ಯೆಹೋವನ ಸೇವೆ ಮಾಡಲಿಕ್ಕೇ ಆಗುವುದಿಲ್ಲ. (ಕೀರ್ತ. 115:17) ಆದ್ದರಿಂದ ನಾವು ಆದಷ್ಟು ನಮ್ಮ ಆರೋಗ್ಯ ನೋಡಿಕೊಳ್ಳಬೇಕು. * ನಮ್ಮ ಸಹೋದರ ಸಹೋದರಿಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.
8, 9. (1) ಆರೋಗ್ಯದ ವಿಷಯದಲ್ಲಿ ಅತಿರೇಕಕ್ಕೆ ಹೋಗುವುದನ್ನು ಹೇಗೆ ತಡೆಯಬಹುದು? (2) ಹರ್ಷಾನಂದದಿಂದ ಇರುವುದರ ಪ್ರಯೋಜನವೇನು?
8 ಆದರೆ ಅತಿರೇಕಕ್ಕೆ ಹೋಗದಂತೆ ಜಾಗ್ರತೆ ವಹಿಸುವುದು ಕೂಡ ಪ್ರಾಮುಖ್ಯ. ಕೆಲವರು ಆಹಾರಪಥ್ಯ, ಚಿಕಿತ್ಸೆ, ಔಷಧ, ಸೌಂದರ್ಯ ವರ್ಧಕಗಳ ಕುರಿತು ಉತ್ಸುಕತೆಯಿಂದ ಮಾತಾಡುವುದರಲ್ಲಿ ಸಮಯ ಕಳೆಯುತ್ತಾರೆ. ಎಷ್ಟೆಂದರೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ತೋರಿಸುವ ಹುರುಪಿಗಿಂತ ಅದು ಹೆಚ್ಚಿರುತ್ತದೆ. ಬೇರೆಯವರಿಗೆ ಸಹಾಯ ಮಾಡುವ ಸದುದ್ದೇಶ ಅವರಿಗಿರಬಹುದು. ಆದರೂ ಕೂಟಗಳು, ಸಮ್ಮೇಳನ ಅಧಿವೇಶನಗಳ ಮುಂಚೆ ಇಲ್ಲವೆ ನಂತರ ಔಷಧ, ಸೌಂದರ್ಯ ವರ್ಧಕಗಳ ಬಗ್ಗೆ ಮಾತಾಡುವುದು, ಅವನ್ನು ಮಾರುವುದು ಅಥವಾ ಆ ವಿಷಯದಲ್ಲಿ ಸಲಹೆ ಕೊಡುವುದು ಯೋಗ್ಯವಲ್ಲ. ಏಕೆ?
9 ಇಂಥ ಸಂದರ್ಭಗಳಲ್ಲಿ ನಾವು ಒಟ್ಟಾಗಿ ಕೂಡಿಬರುವುದು ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸಲಿಕ್ಕಾಗಿ ಮತ್ತು ದೇವರ ಪವಿತ್ರಾತ್ಮದಿಂದ ಉಂಟಾಗುವ ಆನಂದವನ್ನು ಪಡೆಯಲಿಕ್ಕಾಗಿ. (ಗಲಾ. 5:22) ಆದ್ದರಿಂದ ಇತರರು ಕೇಳಿಕೊಂಡಾಗ ಅಥವಾ ನಾವೇ ಸ್ವತಃ ಆರೋಗ್ಯದ ಬಗ್ಗೆ, ಚಿಕಿತ್ಸೆಯ ಬಗ್ಗೆ ಸಲಹೆ ಕೊಡುವುದು ಕೂಡಿಬಂದಿರುವುದರ ಪ್ರಾಮುಖ್ಯತೆಯನ್ನು ಕಡಿಮೆ ಮಾಡುತ್ತದೆ. ಇತರರ ಆನಂದವನ್ನೂ ಅಪಹರಿಸುತ್ತದೆ. (ರೋಮ. 14:17) ಆರೋಗ್ಯದ ಬಗ್ಗೆ ಅವರವರು ತಮ್ಮ ಸ್ವಂತ ನಿರ್ಣಯಗಳನ್ನು ಮಾಡಲಿ. ಅದಲ್ಲದೆ, ಎಲ್ಲ ಕಾಯಿಲೆಗಳಿಗೆ ಯಾರೂ ಸಂಪೂರ್ಣ ಪರಿಹಾರ ಕೊಡಲಾರರು. ನುರಿತ ವೈದ್ಯರು ಸಹ ವೃದ್ಧರಾಗುತ್ತಾರೆ, ಅಸ್ವಸ್ಥರಾಗುತ್ತಾರೆ. ಒಂದಲ್ಲಾ ಒಂದು ದಿನ ಸಾಯುತ್ತಾರೆ. ಇನ್ನೊಂದು ಏನೆಂದರೆ ನಮ್ಮ ಆರೋಗ್ಯದ ಬಗ್ಗೆ ಚಿಂತಿಸಿದಷ್ಟು ನಮ್ಮ ಆಯುಷ್ಯವೇನೂ ಹೆಚ್ಚಾಗುವುದಿಲ್ಲ. (ಲೂಕ 12:25) ‘ಹರ್ಷಹೃದಯವೇ ನಮಗೆ ಒಳ್ಳೇ ಔಷಧ.’—ಜ್ಞಾನೋ. 17:22.
10. (1) ಯೆಹೋವನ ದೃಷ್ಟಿಯಲ್ಲಿ ನಿಜ ಸೌಂದರ್ಯ ಅಂದರೆ ಯಾವುದು? (2) ನಾವು ಸಂಪೂರ್ಣ ಆರೋಗ್ಯವನ್ನು ಪಡೆಯುವುದು ಯಾವಾಗ?
10 ಅದೇ ರೀತಿ ನಮ್ಮ ಅಂದಚೆಂದದ ಬಗ್ಗೆ ಕಾಳಜಿ ವಹಿಸಬೇಕು ನಿಜ. ಆದರೆ ವಯಸ್ಸಾಗುವಾಗ ನಮ್ಮಲ್ಲಿ ಕಾಣುವ ಗುರುತುಗಳನ್ನು ಮುಚ್ಚಲು ಎಲ್ಲಿಲ್ಲದ ಪ್ರಯತ್ನ ಮಾಡಬೇಕಂತಲ್ಲ. ಅಂಥ ಗುರುತುಗಳು ಪ್ರಬುದ್ಧತೆ, ಘನತೆ, ಆಂತರಿಕ ಸೌಂದರ್ಯದ ಸಂಕೇತ. “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು” ಎನ್ನುತ್ತದೆ ಬೈಬಲ್. (ಜ್ಞಾನೋ. 16:31) ಯೆಹೋವನು ನಮ್ಮನ್ನು ಈ ರೀತಿ ವೀಕ್ಷಿಸುವಾಗ ನಮಗೂ ನಮ್ಮ ಬಗ್ಗೆ ಅದೇ ದೃಷ್ಟಿಕೋನ ಇರಬೇಕು. (1 ಪೇತ್ರ 3:3, 4 ಓದಿ.) ಸುಂದರವಾಗಿ ಕಾಣಬೇಕೆಂದು ಅನಗತ್ಯವಾದ, ಅಪಾಯ ತಂದೊಡ್ಡಬಹುದಾದ ಔಷಧೋಪಚಾರಗಳನ್ನು ಅಥವಾ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವುದು ಎಷ್ಟು ಸರಿ? “ಯೆಹೋವನ ಆನಂದ” ನಮ್ಮಲ್ಲಿದ್ದರೆ ನಿಜ ಸೌಂದರ್ಯ ತನ್ನಿಂತಾನೇ ಬರುತ್ತದೆ. ನಮ್ಮ ವಯಸ್ಸು ಎಷ್ಟೇ ಇರಲಿ ಆರೋಗ್ಯ ಹೇಗೇ ಇರಲಿ ಆಂತರ್ಯದಲ್ಲಿರುವ ಆ ಸಂತೋಷ ನಮ್ಮ ಮುಖಕ್ಕೆ ಕಾಂತಿಕೊಡುತ್ತದೆ. (ನೆಹೆ. 8:10) ಸಂಪೂರ್ಣ ಆರೋಗ್ಯ, ಯೌವನ, ಸೌಂದರ್ಯ ಸಿಗುವುದು ಹೊಸ ಲೋಕದಲ್ಲಿ ಮಾತ್ರ. (ಯೋಬ 33:25; ಯೆಶಾ. 33:24) ಅಲ್ಲಿಯ ವರೆಗೆ ವಿವೇಕಯುತ ನಿರ್ಣಯಗಳನ್ನು ಮಾಡುತ್ತಾ ಯೆಹೋವನ ವಾಗ್ದಾನಗಳಲ್ಲಿ ನಂಬಿಕೆಯಿಡೋಣ. ಇದು ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ಆನಂದ ಕಂಡುಕೊಳ್ಳಲು ಮತ್ತು ಯೆಹೋವನಿಗೆ ಆಪ್ತರಾಗಿ ಉಳಿಯಲು ಸಹಾಯ ಮಾಡುತ್ತದೆ.—1 ತಿಮೊ. 4:8.
ಹಣ
11. ಹಣ ಹೇಗೆ ಪಾಶವಾಗಬಲ್ಲದು?
11 ಹಣ ಇರೋದು ತಪ್ಪಲ್ಲ. ಪ್ರಾಮಾಣಿಕವಾಗಿ ಹಣ ಮಾಡೋದೂ ತಪ್ಪಲ್ಲ. (ಪ್ರಸಂ. 7:12; ಲೂಕ 19:12, 13) ಆದರೆ “ಹಣದ ಪ್ರೇಮ” ಇದ್ದರೆ ಅದು ನಮ್ಮನ್ನು ಯೆಹೋವನಿಂದ ದೂರ ಮಾಡಬಲ್ಲದು. (1 ತಿಮೊ. 6:9, 10) “ಈ ವಿಷಯಗಳ ವ್ಯವಸ್ಥೆಯ ಚಿಂತೆ” ಅಂದರೆ ಜೀವನಕ್ಕೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವ ಬಗ್ಗೆ ಅತಿಯಾದ ಚಿಂತೆ ನಮ್ಮಲ್ಲಿದ್ದರೆ ಅದು ನಮ್ಮ ಆಧ್ಯಾತ್ಮಿಕತೆಯನ್ನು ಅದುಮಿಹಾಕಬಲ್ಲದು. “ಐಶ್ವರ್ಯದ ಮೋಸಕರವಾದ ಪ್ರಭಾವ” ಅಂದರೆ ಐಶ್ವರ್ಯ ಇದ್ದರೆನೇ ಸಂತೋಷ, ಭದ್ರತೆ ಇರುತ್ತದೆ ಎಂಬ ನಂಬಿಕೆ ಸಹ ಯೆಹೋವನಿಂದ ನಮ್ಮನ್ನು ದೂರಮಾಡುತ್ತದೆ. (ಮತ್ತಾ. 13:22) “ಯಾವನೂ” ದೇವರಿಗೂ ಅದೇ ಸಮಯದಲ್ಲಿ ಐಶ್ವರ್ಯಕ್ಕೂ ದಾಸನಾಗಿರಲಾರನೆಂದು ಯೇಸುವೇ ಹೇಳಿದ್ದಾನಲ್ಲ.—ಮತ್ತಾ. 6:24.
12. (1) ಇಂದು ಹಣದ ವಿಷಯದಲ್ಲಿ ಯಾವ ರೀತಿಯ ಪಾಶಗಳಿವೆ? (2) ಅವುಗಳಿಗೆ ಸಿಕ್ಕಿಕೊಳ್ಳದಿರುವುದು ಹೇಗೆ?
12 ಹಣವೇ ಸರ್ವಸ್ವ ಎಂದೆಣಿಸುವವರು ತಪ್ಪು ಮಾರ್ಗವನ್ನು ಹಿಡಿಯುವುದು ಸುಲಭ. (ಜ್ಞಾನೋ. 28:20) ರಾತ್ರೋರಾತ್ರಿ ಹಣ ಮಾಡುವ ಆಮಿಷಕ್ಕೆ ಆಕರ್ಷಿತರಾಗಿ ಕೆಲವರು ಲಾಟರಿ ಟಿಕೆಟ್‌ಗಳನ್ನು ಕೊಂಡುಕೊಂಡಿದ್ದಾರೆ. ಇನ್ನೂ ಕೆಲವರು ದಿಢೀರ್ ಶ್ರೀಮಂತಿಕೆಯನ್ನು ತಂದುಕೊಡುತ್ತವೆಂದು ಹೇಳುವ ಸ್ಕೀಂಗಳಲ್ಲಿ ಕೈಹಾಕಿದ್ದಾರೆ. ಸಭೆಯಲ್ಲಿರುವ ಇತರರನ್ನೂ ಅದರಲ್ಲಿ ಸೇರುವಂತೆ ಉತ್ತೇಜಿಸಿದ್ದಾರೆ. ಬೇರೆ ಕೆಲವರು ಸ್ವಲ್ಪ ಬಂಡವಾಳ ಹಾಕಿ ರಾಶಿ ಹಣ ಬಾಚಿಕೊಳ್ಳಬಹುದೆಂಬ ಆಮಿಷಕ್ಕೆ ಮರುಳಾಗಿ ಮೋಸಹೋಗಿದ್ದಾರೆ. ಆದರೆ ದುರಾಸೆಪಟ್ಟು ಇಂಥ ಆಮಿಷಗಳಿಗೆ ಬಲಿಯಾಗಬೇಡಿ. ಜಾಗ್ರತೆಯಿಂದ ಯೋಚಿಸಿ ಆಯ್ಕೆ ಮಾಡಿ. ನಂಬಲಿಕ್ಕೆ ಆಗದಷ್ಟು ಲಾಭ ತಂದುಕೊಡುತ್ತವೆಂದು ಹೇಳುವ ಆಫರ್‌ಗಳನ್ನು ನಂಬಬೇಡಿ. ಅವು ಹೆಚ್ಚಾಗಿ ಪೊಳ್ಳೇ ಆಗಿರುತ್ತವೆ.
13. ಹಣದ ಬಗ್ಗೆ ಲೋಕಕ್ಕಿರುವ ಮನೋಭಾವಕ್ಕೂ ಯೆಹೋವನ ದೃಷ್ಟಿಕೋನಕ್ಕೂ ಯಾವ ವ್ಯತ್ಯಾಸವಿದೆ?
13 ನಾವು ಮೊದಲು ದೇವರ “ರಾಜ್ಯವನ್ನೂ ಆತನ ನೀತಿಯನ್ನೂ” ಹುಡುಕುವಲ್ಲಿ, ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ನಾವು ಪಡುವ ಶ್ರಮವನ್ನು ಯೆಹೋವನು ಆಶೀರ್ವದಿಸುವನು. (ಮತ್ತಾ. 6:33; ಎಫೆ. 4:28) ಅದೇ ಸಮಯದಲ್ಲಿ, ಕೆಲಸ ಮಾಡಿ ಮಾಡಿ ಸುಸ್ತಾಗಿ ಕೂಟಗಳಲ್ಲಿ ನಿದ್ದೆ ಮಾಡುವುದನ್ನಾಗಲಿ ಸಭಾಗೃಹದಲ್ಲಿ ಕೂತು ಹಣದ ಬಗ್ಗೆ ಚಿಂತಿಸುವುದನ್ನಾಗಲಿ ಯೆಹೋವನು ಇಷ್ಟಪಡುವುದಿಲ್ಲ. ಆದರೆ ತುಂಬ ಜನರು ನೆನಸುವುದೇನೆಂದರೆ ‘ಈಗಲೇ ಚೆನ್ನಾಗಿ ದುಡಿದು ಸಂಪಾದಿಸಿದರೆ ಮುಂದೆ ಆರಾಮವಾಗಿ ಜೀವನ ಮಾಡಬಹುದು’ ಅಂತ. ತಮ್ಮ ಮಕ್ಕಳನ್ನು ಕೂಡ ಅದೇ ಹಾದಿಗೆ ದೂಡುತ್ತಾರೆ. ಅಂಥ ಯೋಚನೆ ವಿಚಾರಹೀನ. (ಲೂಕ 12:15-21 ಓದಿ.) ಗೇಹಜಿ ಬಗ್ಗೆ ಸ್ವಲ್ಪ ನೆನಪಿಸಿಕೊಳ್ಳಿ. ದುರಾಶೆಯಿದ್ದೂ ಯೆಹೋವನ ಮುಂದೆ ನೀತಿಯ ನಿಲುವನ್ನು ಹೊಂದಿರಲು ಸಾಧ್ಯವೆಂದು ಅವನು ನೆನಸಿದನು.—2 ಅರ. 5:20-27.
14, 15. ಹಣವು ನಮಗೆ ಭದ್ರತೆ ಕೊಡುತ್ತದೆಂದು ನಂಬಬಾರದು ಏಕೆ? ಉದಾಹರಣೆ ಕೊಡಿ.
14 ಸಮುದ್ರದ ಮೀನನ್ನು ಬೇಟೆಯಾಡುವ ಕೆಲವು ಹದ್ದುಗಳು ಉಗುರುಗಳಲ್ಲಿ ಹಿಡಿದುಕೊಂಡ ಭಾರವಾದ ಮೀನನ್ನು ಬಿಟ್ಟುಬಿಡದ ಕಾರಣ ನೀರಲ್ಲಿ ಮುಳುಗಿಹೋಗಿವೆಯಂತೆ. ಇಂಥ ಹದ್ದುಗಳಿಗಾದ ಸ್ಥಿತಿ ಒಬ್ಬ ಕ್ರೈಸ್ತನಿಗೂ ಬರಬಹುದೇ? ಸಭಾ ಹಿರಿಯರಾಗಿರುವ ಅಲಿಕ್ಸ್ ವಿಷಯದಲ್ಲಿ ಹೀಗಾಯಿತು. “ನಾನು ಯಾವಾಗಲೂ ಹಿಂದೆ ಮುಂದೆ ನೋಡಿ ಖರ್ಚು ಮಾಡುವವನು. ಎಷ್ಟೆಂದರೆ ಸ್ವಲ್ಪ ಹೆಚ್ಚು ಶ್ಯಾಂಪೂ ಕೈಯಲ್ಲಿ ಸುರಿದುಬಿಟ್ಟರೆ ಅದನ್ನು ವಾಪಸ್ಸು ಬಾಟಲಿಗೆ ಹಾಕುತ್ತೇನೆ” ಎನ್ನುವ ಅವರಿಗೆ ಒಮ್ಮೆ ಹೇಗೋ ಬಂಡವಾಳ ಮಾರುಕಟ್ಟೆಯಲ್ಲಿ ಹಣ ಹೂಡುವ ಯೋಚನೆ ಬಂತು. ಒಳ್ಳೇ ಲಾಭ ಬರುವುದಾದರೆ ತಾನು ಕೆಲಸ ಬಿಟ್ಟು ಪಯನೀಯರ್ ಸೇವೆ ಮಾಡಬಹುದು ಎಂದೆಲ್ಲ ಕನಸುಕಂಡರು. ಆದರೆ ಆದದ್ದೇ ಬೇರೆ. ಷೇರು ಮಾರುಕಟ್ಟೆಯ ಏರಿಳಿತಗಳ ಬಗ್ಗೆ, ಹೊಸ ಷೇರುಗಳ ಬಗ್ಗೆ ಮಾಹಿತಿಯನ್ನು ಓದುವುದರಲ್ಲೇ ಅವನ ಸಮಯ ಹಾಳಾಯಿತು. ತುಂಬ ಲಾಭ ಸಿಗಬಹುದೆಂದು ಹೇಳಲಾದ ಷೇರುಗಳನ್ನು ಕೊಂಡುಕೊಳ್ಳಲು ತನ್ನ ಬಳಿಯಿದ್ದ ಹಣವನ್ನೆಲ್ಲ ಸುರಿದದ್ದಲ್ಲದೆ ಮಧ್ಯವರ್ತಿಗಳಿಂದ ಸಾಲವನ್ನೂ ಪಡೆದರು. ಆದರೆ ಅವರು ನೆನಸಿದಂತೆ ಆಗಲಿಲ್ಲ. ಷೇರುಗಳ ಬೆಲೆ ಕುಸಿಯಿತು. ಅಲಿಕ್ಸ್ ಏನು ಮಾಡಿದರು? “ಹೇಗಾದರೂ ಮಾಡಿ ನನ್ನ ಹಣವನ್ನು ನಾನು ವಾಪಸ್ಸು ಪಡಕೊಳ್ಳಲು ಬಯಸಿದೆ. ಸ್ವಲ್ಪ ಸಮಯದಲ್ಲಿ ಲಾಭ ಬರಬಹುದು ಎಂದು ಕಾಯುತ್ತಿದ್ದೆ.”
15 ತಿಂಗಳುಗಳ ಕಾಲ ಅಲಿಕ್ಸ್‌ಗೆ ಷೇರುಗಳದ್ದೇ ಚಿಂತೆಯಾಗಿಬಿಟ್ಟಿತು. ಆಧ್ಯಾತ್ಮಿಕ ವಿಷಯಗಳಿಗೂ ಮನಸ್ಸು ಕೊಡಲು ಕಷ್ಟವಾಗುತ್ತಿತ್ತು. ರಾತ್ರಿ ನಿದ್ರೆ ಬರುತ್ತಿರಲಿಲ್ಲ. ಕೊನೆಗೂ ಷೇರುಗಳ ಮೌಲ್ಯ ಏರಲೇ ಇಲ್ಲ. ಅಲಿಕ್ಸ್‌ರ ಹಣವೆಲ್ಲಾ ಹೋಯಿತು. ಮನೆಯನ್ನೂ ಮಾರಬೇಕಾಯಿತು. “ನನ್ನ ಕುಟುಂಬಕ್ಕೆ ತುಂಬ ನೋವು ಕೊಟ್ಟು ಬಿಟ್ಟೆ” ಎಂದು ನೊಂದುಕೊಳ್ಳುತ್ತಾರೆ ಅವರು. ಆದರೆ ಈ ಅನುಭವದಿಂದ ಅವರೊಂದು ಪ್ರಾಮುಖ್ಯ ಪಾಠ ಕಲಿತರು. ಅದೇನೆಂದರೆ “ಸೈತಾನನ ಲೋಕದ ಮೇಲೆ ಯಾರು ಭರವಸೆಯಿಡುತ್ತಾರೋ ಅವರು ನಿರಾಶೆಯನ್ನು ಅನುಭವಿಸೇ ಅನುಭವಿಸುತ್ತಾರೆ.” (ಜ್ಞಾನೋ. 11:28) ಹೌದು, ನಮ್ಮ ಹಣದ ಮೇಲೆ, ಹಣ ಮಾಡಲು ನಮಗಿರುವ ಸಾಮರ್ಥ್ಯದ ಮೇಲೆಯೇ ನಂಬಿಕೆಯಿಟ್ಟರೆ ‘ಈ ವಿಷಯಗಳ ವ್ಯವಸ್ಥೆಯ ದೇವನಾದ’ ಸೈತಾನನ ಮೇಲೆ ನಂಬಿಕೆ ಇಟ್ಟಂತೆ. (2 ಕೊರಿಂ. 4:4; 1 ತಿಮೊ. 6:17) ಅಲಿಕ್ಸ್ ಈಗ ಬದಲಾವಣೆ ಮಾಡಿಕೊಂಡಿದ್ದಾರೆ. ‘ಸುವಾರ್ತೆಗೆ’ ಹೆಚ್ಚು ಸಮಯ ಕೊಡಲು ತಮ್ಮ ಜೀವನವನ್ನು ಸರಳಗೊಳಿಸಿದ್ದಾರೆ. ಇದು ಅವರನ್ನೂ ಅವರ ಕುಟುಂಬವನ್ನೂ ಯೆಹೋವ ದೇವರಿಗೆ ತುಂಬ ಆಪ್ತರನ್ನಾಗಿ ಮಾಡಿದೆ ಎನ್ನುತ್ತಾರವರು.—ಮಾರ್ಕ 10:29, 30 ಓದಿ.
ಹೆಮ್ಮೆ
16. (1) ಕೆಲವು ವಿಷಯಗಳಲ್ಲಿ ಹೆಮ್ಮೆಪಡುವುದು ಸರಿಯಾಗಿದೆ ಏಕೆ? (2) ಅದು ಅತಿಯಾದರೆ ಪರಿಣಾಮ ಏನಾಗಬಹುದು?
16 ಕೆಲವು ವಿಷಯಗಳಲ್ಲಿ ಹೆಮ್ಮೆಪಡುವುದು ಒಳ್ಳೇದೇ. ಉದಾಹರಣೆಗೆ, ನಾವು ಯೆಹೋವನ ಸಾಕ್ಷಿಗಳಾಗಿರುವುದಕ್ಕೆ ಹೆಮ್ಮೆಪಡಬೇಕು. (ಯೆರೆ. 9:24) ತಕ್ಕ ಮಟ್ಟಿಗಿನ ಆತ್ಮಗೌರವ ಅಥವಾ ಸ್ವಾಭಿಮಾನವಿದ್ದರೆ ಅದು ಸರಿಯಾದ ನಿರ್ಣಯಗಳನ್ನು ಮಾಡಲು, ಬೇರೆಯವರಿಗಾಗಿ ನಮ್ಮ ನೈತಿಕ ನಿಲುವನ್ನು ಬಿಟ್ಟುಕೊಡದಿರಲು ಸಹಾಯಮಾಡುತ್ತದೆ. ಆದರೆ ಅದು ಅತಿಯಾಗಬಾರದು. ನಮ್ಮ ಅನಿಸಿಕೆಗಳಿಗೆ, ಸ್ಥಾನಮಾನಕ್ಕೇ ಹೆಚ್ಚು ಪ್ರಾಧಾನ್ಯತೆ ಕೊಟ್ಟರೆ ನಾವು ಯೆಹೋವನಿಂದ ದೂರವಾಗುತ್ತೇವಷ್ಟೆ.—ಕೀರ್ತ. 138:6; ರೋಮ. 12:3.
17, 18. (1) ಬೈಬಲ್‌ನಲ್ಲಿ ಹೇಳಿರುವ ದೀನ ವ್ಯಕ್ತಿಗಳ ಮತ್ತು ಅಹಂಕಾರವಿದ್ದ ವ್ಯಕ್ತಿಗಳ ಉದಾಹರಣೆ ಕೊಡಿ. (2) ಅಹಂಕಾರವು ತನ್ನನ್ನು ಯೆಹೋವನಿಂದ ದೂರಮಾಡದಂತೆ ಒಬ್ಬ ಸಹೋದರನು ಹೇಗೆ ನೋಡಿಕೊಂಡನು?
17 ಬೈಬಲಿನಲ್ಲಿ ಹೆಮ್ಮೆ, ದರ್ಪ ತೋರಿಸಿದವರ ಹಾಗೂ ದೀನತೆ ತೋರಿಸಿದವರ ಉದಾಹರಣೆಗಳು ಇವೆ. ರಾಜ ದಾವೀದ ದೀನತೆಯಿಂದ ದೇವರ ಮಾರ್ಗದರ್ಶನವನ್ನು ಕೋರಿ ಅದರಂತೆ ನಡೆದು ಆಶೀರ್ವಾದ ಪಡೆದನು. (ಕೀರ್ತ. 131:1-3) ಆದರೆ ರಾಜರಾದ ನೆಬೂಕದ್ನೆಚ್ಚರ ಮತ್ತು ಬೇಲ್ಶಚ್ಚರ ಅಹಂಕಾರ ತೋರಿಸಿದರು. ದೇವರು ಅವರ ಅಹಂಕಾರವನ್ನು ಅಣಗಿಸಿದನು. (ದಾನಿ. 4:30-37; 5:22-30) ಇಂದು ನಮಗೂ ಕೆಲವೊಂದು ಸನ್ನಿವೇಶಗಳಲ್ಲಿ ದೀನತೆ ತೋರಿಸಲು ಕಷ್ಟವಾಗಬಹುದು. 32 ವರ್ಷದ ರೈಯನ್ ಎಂಬ ಸಹೋದರನಿಗೂ ಇಂಥದ್ದೇ ಸನ್ನಿವೇಶ ಎದುರಾಯಿತು. ಶುಶ್ರೂಷಾ ಸೇವಕರಾಗಿ ಸೇವೆಸಲ್ಲಿಸುತ್ತಿದ್ದ ಅವರು ತಮ್ಮ ಸಭೆಯಿಂದ ಬೇರೊಂದು ಸಭೆಗೆ ಸ್ಥಳಾಂತರಿಸಿದರು. “ಈ ಸಭೆಯಲ್ಲಿ ಬೇಗನೆ ನನ್ನನ್ನು ಹಿರಿಯನನ್ನಾಗಿ ಮಾಡುತ್ತಾರೆಂದು ನೆನಸಿದ್ದೆ. ಆದರೆ ಒಂದು ವರ್ಷವಾದರೂ ಏನೂ ಆಗಲಿಲ್ಲ” ಎನ್ನುತ್ತಾರವರು. ಇದರಿಂದ ರೈಯನ್ ಸಿಟ್ಟುಗೊಂಡರೋ? ಹಿರಿಯರು ತನಗೆ ಗೌರವ ತೋರಿಸಲಿಲ್ಲ ಎಂದು ಕಹಿಭಾವನೆ ತಾಳಿದರೋ? ಕೂಟಗಳಿಗೆ ಬರುವುದನ್ನು ಬಿಟ್ಟು ಯೆಹೋವನಿಂದ, ಆತನ ಜನರಿಂದ ದೂರವಾದರೋ? ಅಹಂಕಾರ ತಮ್ಮ ಮೇಲೆ ಜಯಸಾಧಿಸುವಂತೆ ಬಿಟ್ಟರೋ? ನೀವಾಗಿದ್ದರೆ ಏನು ಮಾಡುತ್ತಿದ್ದಿರಿ?
18 “ಇಂಥ ಸನ್ನಿವೇಶದ ಕುರಿತು ಬೈಬಲ್ ಸಾಹಿತ್ಯದಲ್ಲಿರುವ ಎಲ್ಲ ಮಾಹಿತಿಯನ್ನು ಓದಿದೆ” ಎನ್ನುತ್ತಾರೆ ರೈಯನ್. (ಜ್ಞಾನೋ. 13:12) ಅವರು ಮುಂದುವರಿಸುವುದು: “ನಾನು ತಾಳ್ಮೆ, ದೀನತೆ ತೋರಿಸುವುದರಲ್ಲಿ ಇನ್ನೂ ಪ್ರಗತಿ ಮಾಡಬೇಕು, ಯೆಹೋವ ದೇವರು ನನ್ನನ್ನು ಸರಿಪಡಿಸುವಂತೆ ಬಿಟ್ಟುಕೊಡಬೇಕು ಎಂದು ತಿಳಿದುಕೊಂಡೆ.” ತಮ್ಮ ಬಗ್ಗೆಯೇ ಚಿಂತಿಸುವುದನ್ನು ಬಿಟ್ಟು ರೈಯನ್ ಸಭೆಯಲ್ಲಿರುವ ಹಾಗೂ ಕ್ಷೇತ್ರದಲ್ಲಿರುವ ಜನರಿಗೆ ಸಹಾಯಮಾಡುವುದರ ಕಡೆಗೆ ಗಮನಹರಿಸಿದರು. ಸ್ವಲ್ಪವೇ ಸಮಯದಲ್ಲಿ ಅವರಿಗೆ ಅನೇಕ ಬೈಬಲ್ ಅಧ್ಯಯನಗಳು ಸಿಕ್ಕಿದವು. ಬೈಬಲ್ ವಿದ್ಯಾರ್ಥಿಗಳು ಒಳ್ಳೇ ಪ್ರಗತಿಯನ್ನೂ ಮಾಡಿದರು. “ನಾನು ಸೇವೆಯಲ್ಲಿ ಎಷ್ಟು ಆನಂದಿಸುತ್ತಿದ್ದೆನೆಂದರೆ ಹಿರಿಯನಾಗಿ ನೇಮಕ ಪಡೆಯುವ ಬಗ್ಗೆ ಚಿಂತಿಸುವುದನ್ನೇ ಬಿಟ್ಟಿದ್ದೆ. ಒಂದೂವರೆ ವರ್ಷದ ನಂತರ ನನಗೊಂದು ಆಶ್ಚರ್ಯ ಕಾದಿತ್ತು. ನನ್ನನ್ನು ಹಿರಿಯನಾಗಿ ನೇಮಿಸಲಾಯಿತು.”—ಕೀರ್ತನೆ 37:3, 4 ಓದಿ.
ಯೆಹೋವನಿಂದ ಸ್ವಲ್ಪವೂ ದೂರ ಸರಿಯದಿರಿ
19, 20. (1) ನಾವು ದಿನನಿತ್ಯ ಮಾಡುವ ಯಾವ ಚಟುವಟಿಕೆಗಳೂ ನಮ್ಮನ್ನು ಯೆಹೋವನಿಂದ ದೂರಮಾಡದಂತೆ ಹೇಗೆ ನೋಡಿಕೊಳ್ಳಬಹುದು? (2) ಯೆಹೋವನಿಗೆ ಆಪ್ತರಾಗಿ ಉಳಿದ ಯಾರ ಮಾದರಿಯನ್ನು ನಾವು ಅನುಕರಿಸಬಹುದು?
19 ಈ ಲೇಖನದಲ್ಲಿ ಹಾಗೂ ಹಿಂದಿನ ಲೇಖನದಲ್ಲಿ ಚರ್ಚಿಸಿದ ಏಳು ವಿಷಯಗಳನ್ನೂ ತಕ್ಕ ಸ್ಥಾನದಲ್ಲಿಟ್ಟರೆ ಅವು ಕೆಟ್ಟದೇನಲ್ಲ. ನಾವು ಯೆಹೋವನ ಸೇವಕರೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇವೆ. ಸಂತೋಷಭರಿತ ಕುಟುಂಬ ಮತ್ತು ಒಳ್ಳೇ ಆರೋಗ್ಯ ಯೆಹೋವ ದೇವರ ಅತ್ಯುತ್ತಮ ಕೊಡುಗೆಗಳು. ಉದ್ಯೋಗ ಮತ್ತು ಹಣ ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತವೆ. ಮನರಂಜನೆ ಚೈತನ್ಯ ಕೊಡುತ್ತದೆ. ಎಲೆಕ್ಟ್ರಾನಿಕ್ ಸಾಧನಗಳಿಂದ ಪ್ರಯೋಜನವಿದೆ. ಆದರೆ ಇವುಗಳಲ್ಲಿ ಯಾವುದನ್ನಾದರೂ ನಮ್ಮ ಆರಾಧನೆಗೆ ಅಡ್ಡಬರುವಂಥ ರೀತಿಯಲ್ಲಿ, ತಪ್ಪಾದ ಸಮಯದಲ್ಲಿ ಅಥವಾ ಮಿತಿಮೀರಿ ಬಳಸುವುದಾದರೆ ನಮ್ಮನ್ನು ಯೆಹೋವನಿಂದ ದೂರ ಮಾಡಿಕೊಳ್ಳುತ್ತೇವೆ.
20 ಹೀಗಾಗಬೇಕೆಂಬುದೇ ಸೈತಾನನ ಕಡುಬಯಕೆ. ಹಾಗಿದ್ದರೂ ದೇವರಿಂದ ದೂರಹೋಗುವ ದುಸ್ಥಿತಿ ನಿಮಗೂ ನಿಮ್ಮ ಕುಟುಂಬಕ್ಕೂ ಬಾರದಂತೆ ನೀವು ನೋಡಿಕೊಳ್ಳಬಲ್ಲಿರಿ. (ಜ್ಞಾನೋ. 22:3) ಯೆಹೋವನಿಗೆ ಸಮೀಪವಾಗಿರಿ. ಆತನಿಂದ ಸ್ವಲ್ಪವೂ ದೂರ ಸರಿಯದಿರಿ. ಹೀಗೆ ಮಾಡಿದ ಅನೇಕರ ಉದಾಹರಣೆ ಬೈಬಲಿನಲ್ಲಿದೆ. ಹನೋಕ ಮತ್ತು ನೋಹ ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದರು.’ (ಆದಿ. 5:22; 6:9) ಮೋಶೆ “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿ. 11:27) ಯೇಸು ತನ್ನ ತಂದೆಗೆ ಮೆಚ್ಚಿಕೆಯಾಗಿರುವುದನ್ನೇ ಯಾವಾಗಲೂ ಮಾಡಿದನು. ಹಾಗಾಗಿ ದೇವರ ಸಹಾಯ ಅವನಿಗೆ ಯಾವಾಗಲೂ ಇತ್ತು. (ಯೋಹಾ. 8:29) ಇವರ ಮಾದರಿಯನ್ನು ಅನುಕರಿಸಿ. “ಯಾವಾಗಲೂ ಹರ್ಷಿಸುತ್ತಾ ಇರಿ. ಎಡೆಬಿಡದೆ ಪ್ರಾರ್ಥನೆಮಾಡಿರಿ. ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ.” (1 ಥೆಸ. 5:16-18) ಯಾವುದೂ ನಿಮ್ಮನ್ನು ಯೆಹೋವನಿಂದ ದೂರಮಾಡುವಂತೆ ಬಿಡಬೇಡಿ.
[ಪಾದಟಿಪ್ಪಣಿಗಳು]
^ ಪ್ಯಾರ. 4 ಹೆಸರುಗಳನ್ನು ಬದಲಾಯಿಸಲಾಗಿದೆ.
^ ಪ್ಯಾರ. 6 “ನಿಮ್ಮ ಮಕ್ಕಳು ಜವಾಬ್ದಾರಿಯುತ ವ್ಯಕ್ತಿಗಳಾಗುವರೋ?” ಎಂಬ ಶೀರ್ಷಿಕೆಯುಳ್ಳ 2011ರ ಅಕ್ಟೋಬರ್-ಡಿಸೆಂಬರ್ ಎಚ್ಚರ! ಪತ್ರಿಕೆಯನ್ನು ನೋಡಿ.
^ ಪ್ಯಾರ. 7 2011, ಜುಲೈ-ಸೆಪ್ಟೆಂಬರ್ ತಿಂಗಳ ಎಚ್ಚರ! ಪತ್ರಿಕೆಯ “ಉತ್ತಮ ಆರೋಗ್ಯಕ್ಕೆ ಐದು ಸಲಹೆಗಳು” ಎಂಬ ಮುಖಪುಟ ಲೇಖನ ನೋಡಿ.
[ಅಧ್ಯಯನ ಪ್ರಶ್ನೆಗಳು]
[ಪುಟ 17ರಲ್ಲಿರುವ ಚಿತ್ರ]
[ಪುಟ 18ರಲ್ಲಿರುವ ಚಿತ್ರ]
ಹೆತ್ತವರೇ, ಎಲೆಕ್ಟ್ರಾನಿಕ್ ಸಾಧನಗಳನ್ನು ವಿವೇಚನೆಯಿಂದ ಉಪಯೋಗಿಸುವಂತೆ ಮಕ್ಕಳಿಗೆ ಕಲಿಸಿ
[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]
ಯಾವುದೂ ನಿಮ್ಮನ್ನು ಯೆಹೋವನಿಂದ ದೂರಮಾಡುವಂತೆ ಬಿಡಬೇಡಿ
[ಪುಟ 21ರಲ್ಲಿರುವ ಚಿತ್ರ]
ಸಭೆಯಲ್ಲಿ ಜವಾಬ್ದಾರಿಗಾಗಿ ಹಾತೊರೆಯುವ ಬದಲಿಗೆ ಸೇವೆಯಲ್ಲಿ ಆನಂದಿಸಿ