ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಷಾದಗಳಿಲ್ಲದೆ ಯೆಹೋವನ ಸೇವೆಮಾಡಿ

ವಿಷಾದಗಳಿಲ್ಲದೆ ಯೆಹೋವನ ಸೇವೆಮಾಡಿ

ವಿಷಾದಗಳಿಲ್ಲದೆ ಯೆಹೋವನ ಸೇವೆಮಾಡಿ

‘ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನ ವಿಷಯಗಳ ಕಡೆಗೆ ಮುಂದೊತ್ತಿ.’—ಫಿಲಿ. 3:13.

ಈ ಮುಖ್ಯ ಅಂಶಗಳ ಕಡೆ ಗಮನಹರಿಸಿ

ಪೌಲನಿಗೆ ತನ್ನ ವಿಷಾದಮಯ ಗತ ಜೀವನವನ್ನು ಮರೆತು ಮುನ್ನಡೆಯಲು ಯಾವುದು ಸಹಾಯಮಾಡಿತು?

ಮನಶ್ಶಾಂತಿ ಇರಬೇಕಾದರೆ ಏನು ಮಾಡಬೇಕೆಂದು ಬೈಬಲ್‌ ಹೇಳುತ್ತದೆ?

ವಿಷಾದಗಳಿಲ್ಲದೆ ದೇವರ ಸೇವೆಮಾಡಲು ನಮಗೆ ಯಾವುದು ಸಹಾಯಮಾಡುತ್ತದೆ?

1-3. (1) ವಿಷಾದಪಡುವುದು ಅಂದರೇನು? (2) ಹಿಂದೆ ಮಾಡಿರುವ ತಪ್ಪುಗಳು ನಮ್ಮನ್ನು ಹೇಗೆ ಪ್ರಭಾವಿಸಬಹುದು? (3) ವಿಷಾದಗಳಿಲ್ಲದೆ ಯೆಹೋವನ ಸೇವೆ ಮಾಡುವುದರ ಬಗ್ಗೆ ಪೌಲನಿಂದ ನಾವೇನನ್ನು ಕಲಿಯಬಹುದು?

“ದುಃಖ ತುಂಬಿದ ಮಾತುಗಳು, ಬರಹಗಳು ಅನೇಕ ಇವೆ. ಅವುಗಳಲ್ಲಿ ಅತಿ ವೇದನೆ ತರುವ ಪದಗಳೆಂದರೆ ‘ಹಾಗೆ ಮಾಡಿರದಿದ್ದರೆ. . . ’ ಅನ್ನೋದೆ” ಎಂದು ಬರೆದರು ಕವಿ ಜೆ.ಜಿ. ವಿಟ್ಟಿಯರ್‌. ಇಲ್ಲಿ ಅವರು ವಿಷಾದಕ್ಕೆ, ಅಂದರೆ ಒಮ್ಮೆ ಹಿಂದೆ ಹೋಗಿ ಸರಿ ಮಾಡಲು ಬಯಸುವ ವಿಷಯಗಳಿಗೆ ಸೂಚಿಸಿ ಮಾತಾಡುತ್ತಿದ್ದಾರೆ. ಹೌದು, “ವಿಷಾದ” ಎನ್ನುವುದು ಈ ಹಿಂದೆ ಮಾಡಿರುವ ಅಥವಾ ಮಾಡಲು ತಪ್ಪಿರುವ ವಿಷಯಕ್ಕಾಗಿ ಮನಸ್ಸಿನಲ್ಲಾಗುವ ದುಃಖ, ಮನೋವ್ಯಥೆ, ನೆನಸಿ ನೆನಸಿ ಕೊರಗುವುದಾಗಿದೆ. ‘ಹಿಂದೆಹೋಗಿ ನಡೆದದ್ದನ್ನು ಸರಿಪಡಿಸುವಂತಿದ್ದರೆ . . . ’ ಎಂದು ನಾವೆಲ್ಲರೂ ಕೆಲವೊಮ್ಮೆ ನೆನಸುತ್ತೇವೆ. ನೀವು ಯಾವುದನ್ನು ನೆನಸಿ ವಿಷಾದಪಡುತ್ತೀರಿ?

2 ಕೆಲವರು ತಮ್ಮ ಜೀವನದಲ್ಲಿ ದೊಡ್ಡ ತಪ್ಪುಗಳನ್ನು, ಕೆಲವೊಮ್ಮೆ ಗಂಭೀರ ಪಾಪಗಳನ್ನು ಮಾಡಿರುತ್ತಾರೆ. ಇನ್ನು ಕೆಲವರು ಇಂಥ ತಪ್ಪುಗಳನ್ನು ಮಾಡಿರದಿದ್ದರೂ ತಾವು ಜೀವನದಲ್ಲಿ ಮಾಡಿದ ಆಯ್ಕೆಗಳನ್ನು ನೆನಸಿ ‘ಆ ಆಯ್ಕೆ ಸರಿಯಾಗಿತ್ತಾ’ ಎಂದು ಯೋಚಿಸುತ್ತಿರುತ್ತಾರೆ. ಬೇರೆ ಕೆಲವರು ಜೀವನದಲ್ಲಿ ಏನಾಯಿತೋ ಅದು ಆಗಿ ಹೋಯಿತು ಅಂತ ಮರೆತುಬಿಟ್ಟು ಜೀವನ ಸಾಗಿಸುತ್ತಾರೆ. ಇನ್ನಿತರರು ‘ಛೆ! ನಾನು ಹಾಗೆ ಮಾಡಬಾರದಿತ್ತು!’ ಎಂದು ಜೀವನ ಪೂರ್ತಿ ಕೊರಗುತ್ತಾ ಇರುತ್ತಾರೆ. (ಕೀರ್ತ. 51:3) ಈ ಮೇಲಿನವರಲ್ಲಿ ನೀವು ಯಾರು? ನೀವು ಸಹ ಮಾಡಿರುವ ತಪ್ಪುಗಳಿಗೆ ಪರಿತಪಿಸುತ್ತಿರುವಲ್ಲಿ, ‘ಇನ್ನು ಮುಂದೆಯಾದರೂ ವಿಷಾದಪಡದೆ ಸಂತೋಷದಿಂದ ನಾನು ಯೆಹೋವನನ್ನು ಆರಾಧಿಸಬೇಕು’ ಎಂದು ಅನಿಸುತ್ತಿದೆಯಾ? ಹಾಗೆ ಮಾಡಲು ನಮಗೆ ನೆರವಾಗುವಂಥ ನೈಜ ಮಾದರಿ ಬೈಬಲಿನಲ್ಲಿದೆ. ಅದು ಅಪೊಸ್ತಲ ಪೌಲನದು.

3 ಪೌಲನು ಜೀವನದಲ್ಲಿ ಕಹಿ, ಸಿಹಿ ಎರಡನ್ನೂ ಅನುಭವಿಸಿದನು. ತಾನು ಮಾಡಿದ ಘೋರ ತಪ್ಪುಗಳಿಗಾಗಿ ಬಹಳ ವಿಷಾದಿಸಿದನು. ಆದರೂ ದೇವರ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿ ಸಂತೋಷ ಕಂಡುಕೊಂಡನು. ಅವನ ಜೀವನದ ಆಗುಹೋಗುಗಳನ್ನು ನೋಡೋಣ ಬನ್ನಿ. ವಿಷಾದಗಳಿಲ್ಲದೆ ಯೆಹೋವನ ಸೇವೆ ಮಾಡುವುದು ಹೇಗೆ ಅಂತ ನಾವು ಅವನಿಂದ ಕಲಿಯೋಣ.

ವಿಷಾದ ತಂದ ಗತ ಜೀವನ

4. ಅಪೊಸ್ತಲ ಪೌಲನು ತಾನು ಮಾಡಿದ ಯಾವ ಕೃತ್ಯಕ್ಕಾಗಿ ನಂತರ ವಿಷಾದಿಸಿದನು?

4 ಪೌಲನು ಯೌವನದಲ್ಲಿ ಫರಿಸಾಯನಾಗಿದ್ದಾಗ ಮಾಡಿದ ಅನೇಕ ವಿಷಯಗಳಿಗಾಗಿ ನಂತರ ಪರಿತಪಿಸಿದನು. ಉದಾಹರಣೆಗೆ, ಕ್ರಿಸ್ತನ ಶಿಷ್ಯರನ್ನು ಹಿಂಸಿಸುವ ದಂಡಯಾತ್ರೆಯನ್ನೇ ಅವನು ನಡೆಸಿದನು. ಸ್ತೆಫನನ ಕೊಲೆಯಾದ ನಂತರ “ಸೌಲನು [ಅಂದರೆ ಪೌಲನು] ಸಭೆಯೊಂದಿಗೆ ಅತಿ ದೌರ್ಜನ್ಯದಿಂದ ವರ್ತಿಸಲಾರಂಭಿಸಿದನು. ಅವನು ಮನೆಮನೆಗಳಿಗೆ ನುಗ್ಗಿ ಗಂಡಸರನ್ನೂ ಹೆಂಗಸರನ್ನೂ ಹೊರಗೆಳೆದು ಅವರನ್ನು ಸೆರೆಮನೆಗೆ ಹಾಕಿಸುತ್ತಿದ್ದನು” ಎನ್ನುತ್ತದೆ ಬೈಬಲ್‌. (ಅ. ಕಾ. 8:3) ವಿದ್ವಾಂಸ ಆಲ್ಬರ್ಟ್‌ ಬಾರ್ನ್ಸ್‌ ಹೇಳುವಂತೆ, ‘ಅತಿ ದೌರ್ಜನ್ಯದಿಂದ ವರ್ತಿಸು’ ಅನ್ನುವುದಕ್ಕೆ ಗ್ರೀಕ್‌ನಲ್ಲಿ “ರೋಷಾವೇಶದಿಂದ ಹಿಂಸೆಯಲ್ಲಿ ತೊಡಗುವುದು” ಎಂಬ ಅರ್ಥವಿದೆ. ಹಾಗಾಗಿ ಬಾರ್ನ್ಸ್‌ ಹೇಳುವುದೇನೆಂದರೆ “ಸೌಲನು ಚರ್ಚ್‌ ಮೇಲೆ ಕ್ರೋಧಗೊಂಡು ಕ್ರೂರ ಮೃಗದಂತೆ ವರ್ತಿಸಿದನು.” ಹೌದು, ಧರ್ಮನಿಷ್ಠ ಯೆಹೂದಿಯಾಗಿದ್ದ ಸೌಲನು ಕ್ರೈಸ್ತತ್ವವನ್ನು ನಿರ್ನಾಮ ಮಾಡುವುದು ದೇವರು ಕೊಟ್ಟ ಕೆಲಸವೆಂದು ನಂಬಿದನು. ಅದಕ್ಕೆ ಅವನು ಕ್ರೈಸ್ತರನ್ನು ಹಿಂಸಿಸುತ್ತಾ ಅವರ ಮೇಲೆ ಕೆಂಡಕಾರಿದನು. ಎಷ್ಟರಮಟ್ಟಿಗೆಂದರೆ ‘ಗಂಡಸರ ಹೆಂಗಸರ ವಿರುದ್ಧ ಬೆದರಿಕೆಯ ಮತ್ತು ಕೊಲೆಯ ಮಾತುಗಳನ್ನಾಡುತ್ತಾ’ ಅವರನ್ನು ಸಾಯಿಸಲು ಹೊರಟನು.—ಅ. ಕಾ. 9:1, 2; 22:4. *

5. ಯೇಸುವಿನ ಹಿಂಬಾಲಕರನ್ನು ಹಿಂಸಿಸುವ ಸೌಲ ಕ್ರಿಸ್ತನ ಕುರಿತು ಸಾರುವವನಾಗಿ ಮಾರ್ಪಟ್ಟದ್ದು ಹೇಗೆಂದು ವಿವರಿಸಿ.

5 ಈಗ ಪೌಲ ದಮಸ್ಕದ ದಾರಿಯಲ್ಲಿದ್ದಾನೆ. ಅಲ್ಲಿಗೆ ಹೋಗಿ ಯೇಸುವಿನ ಶಿಷ್ಯರನ್ನೆಲ್ಲ ಮನೆಗಳಿಂದ ಎಳೆದೊಯ್ದು ಯೆರೂಸಲೇಮ್‌ನ ಹಿರೀ ಸಭೆಯ ಮುಂದೆ ನಿಲ್ಲಿಸುವುದು ಅವನ ಗುರಿಯಾಗಿತ್ತು. ಆದರೆ ನೆನಸಿದಂತೆ ಮಾಡಲಿಕ್ಕೆ ಅವನಿಗಾಗಲಿಲ್ಲ. ಏಕೆಂದರೆ ಅವನು ಹೋರಾಡುತ್ತಿದ್ದದ್ದು ಕ್ರೈಸ್ತ ಸಭೆಯ ಶಿರಸ್ಸಿನ ವಿರುದ್ಧವಾಗಿತ್ತು. (ಎಫೆ. 5:23) ದಮಸ್ಕಕ್ಕೆ ಹೋಗುವ ದಾರಿಯಲ್ಲಿದ್ದಾಗ ಯೇಸು ಅವನಿಗೆ ಕಾಣಿಸಿಕೊಂಡನು. ಆಗ ಪ್ರಜ್ವಲಿಸಿದ ಪ್ರಕಾಶಮಾನ ಬೆಳಕಿನಿಂದಾಗಿ ಅವನ ಕಣ್ಣು ಕುರುಡಾಯಿತು. ಅನಂತರ ಯೇಸು ಅವನನ್ನು ದಮಸ್ಕಕ್ಕೆ ಹೋಗುವಂತೆ ಮತ್ತು ನಿರ್ದೇಶನ ಸಿಗುವ ವರೆಗೂ ಅಲ್ಲೇ ಉಳಿಯುವಂತೆ ಹೇಳಿದನು. ಆಮೇಲೆ ಏನಾಯಿತೆಂದು ನಮಗೆ ಗೊತ್ತಿದೆ.—ಅ. ಕಾ. 9:3-22.

6, 7. ಪೌಲ ತನ್ನ ಜೀವನದಲ್ಲಾದ ಕಹಿ ಘಟನೆಗಳನ್ನು ಮರೆತಿರಲಿಲ್ಲ ಎಂದು ಯಾವುದು ತೋರಿಸಿಕೊಡುತ್ತದೆ?

6 ಪೌಲನು ಕ್ರೈಸ್ತನಾದ ತಕ್ಷಣ ಅವನ ಗುರಿಗಳು ಹೇತುಗಳು ಬದಲಾದವು. ಕ್ರೈಸ್ತತ್ವದ ಕಡು ವೈರಿಯಾಗಿದ್ದ ಅವನು ಈಗ ಕ್ರೈಸ್ತತ್ವದ ಉತ್ಸಾಹಿ ಸಮರ್ಥಕನಾದನು. ಅವನು ಹೀಗೆ ಒಪ್ಪಿಕೊಂಡನು: “ನಾನು ಮುಂಚೆ ಯೆಹೂದಿಮತದಲ್ಲಿದ್ದಾಗ ನನ್ನ ನಡತೆ ಹೇಗಿತ್ತು ಎಂಬುದರ ಕುರಿತು ನೀವು ಕೇಳಿಸಿಕೊಂಡಿದ್ದೀರಿ; ನಾನು ದೇವರ ಸಭೆಯನ್ನು ಮಿತಿಮೀರಿ ಹಿಂಸಿಸುತ್ತಾ ಅದನ್ನು ಧ್ವಂಸಗೊಳಿಸುತ್ತಾ ಇದ್ದೆನು.” (ಗಲಾ. 1:13) ಕೊರಿಂಥದವರಿಗೆ, ಫಿಲಿಪ್ಪಿ ಸಭೆಗೆ ಮತ್ತು ತಿಮೊಥೆಯನಿಗೆ ಬರೆಯುವಾಗಲೂ ತಾನು ಹಿಂದೆ ಮಾಡಿದ್ದನ್ನು ವಿಷಾದದಿಂದ ಬರೆದಿದ್ದಾನೆ. (1 ಕೊರಿಂಥ 15:9 ಓದಿ; ಫಿಲಿ. 3:6; 1 ತಿಮೊ. 1:13) ತನ್ನ ಬಗ್ಗೆ ಈ ರೀತಿ ಹೇಳಿಕೊಳ್ಳುತ್ತಾ ಅವನೇನು ಹೆಮ್ಮೆ ಪಡುತ್ತಿರಲಿಲ್ಲ. ಅದೇ ಸಮಯದಲ್ಲಿ ತನ್ನದೇನೂ ತಪ್ಪಿಲ್ಲ ಎಂದು ತನ್ನನ್ನೇ ಸಮರ್ಥಿಸಿಕೊಳ್ಳುತ್ತಿರಲಿಲ್ಲ. ತಾನು ಗಂಭೀರ ತಪ್ಪನ್ನು ಮಾಡಿದ್ದೇನೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು.—ಅ. ಕಾ. 26:9-11.

7 ಪೌಲನು ಕ್ರೈಸ್ತರನ್ನು ಎಷ್ಟರ ಮಟ್ಟಿಗೆ ಹಿಂಸಿಸಿದನು ಎಂಬುದನ್ನು ನಾವು ಮನಸ್ಸಿನಲ್ಲಿಟ್ಟರೆ ಕ್ರೈಸ್ತನಾದ ಮೇಲೆ ಅವನು ಅದನ್ನು ನೆನಸಿ ಎಷ್ಟೊಂದು ವ್ಯಥೆಪಟ್ಟಿರಬೇಕು ಮತ್ತು ಅವನ ವೈರಿಗಳು ಅದನ್ನು ಎಷ್ಟು ಎತ್ತಿ ಆಡಿರಬೇಕೆಂದು ಗೊತ್ತಾಗುತ್ತದೆ ಎನ್ನುತ್ತಾರೆ ಬೈಬಲ್‌ ವಿದ್ವಾಂಸ ಫ್ರೆಡ್ರಿಕ್‌ ಡಬ್ಲ್ಯೂ. ಫೆರಾರ್‌. ಪೌಲ ಬೇರೆಬೇರೆ ಸಭೆಗಳಿಗೆ ಭೇಟಿ ಕೊಟ್ಟಾಗ ಕೆಲವೊಮ್ಮೆ ಅವನನ್ನು ಮೊದಲ ಬಾರಿ ನೋಡಿದ ಸಹೋದರರು ಆಶ್ಚರ್ಯದಿಂದ, ‘ನಮ್ಮನ್ನು ಹಿಂಸಿಸಿದ ಆ ಪೌಲ ನೀವೇನಾ!’ ಎಂದು ಕೇಳಿರಬಹುದು.—ಅ. ಕಾ. 9:21.

8. (1) ಯೆಹೋವನು ಮತ್ತು ಯೇಸು ತನಗೆ ತೋರಿಸಿದ ಕರುಣೆ ಹಾಗೂ ಪ್ರೀತಿಯ ಕುರಿತು ಪೌಲನಿಗೆ ಹೇಗನಿಸಿತು? (2) ಇದರಿಂದ ನಾವೇನು ಕಲಿಯುತ್ತೇವೆ?

8 ಪೌಲನಿಗೆ ಒಂದು ವಿಷಯ ಚೆನ್ನಾಗಿ ಗೊತ್ತಿತ್ತು. ಅದೇನೆಂದರೆ ಯೆಹೋವನ ಅಪಾತ್ರ ದಯೆಯಿಂದಲೇ ತಾನು ಅಪೊಸ್ತಲನಾಗಿ ಸೇವೆಸಲ್ಲಿಸಲು ಸಾಧ್ಯವಾಗಿದೆ ಎಂದು. ಅದಕ್ಕೇ ಇರಬೇಕು ಅವನು ಬರೆದ 14 ಪತ್ರಗಳಲ್ಲಿ ಸುಮಾರು 90 ಬಾರಿ ದೇವರ ಕರುಣಾಭರಿತ ಗುಣದ ಕುರಿತು ಬರೆದಿದ್ದಾನೆ. ಬೈಬಲ್‌ ಲೇಖಕರಲ್ಲಿ ಬೇರೆ ಯಾರೂ ಇಷ್ಟು ಬಾರಿ ಬರೆದಿಲ್ಲ. (1 ಕೊರಿಂಥ 15:10 ಓದಿ.) ದೇವರು ತನಗೆ ತೋರಿಸಿದ ದಯೆಗಾಗಿ ಪೌಲ ಹೃದಯದಾಳದಿಂದ ಕೃತಜ್ಞನಾಗಿದ್ದನು. ಅವನಿಗೆ ತೋರಿಸಲಾದ ಈ ದಯೆ ವ್ಯರ್ಥವಾಗಬಾರದು ಎಂದು ಅವನು ಬಯಸಿದ. ಅದಕ್ಕಾಗಿ ಇತರ ಅಪೊಸ್ತಲರಿಗಿಂತ ದೇವರ ಸೇವೆಯಲ್ಲಿ ‘ಹೆಚ್ಚಾಗಿ ಪ್ರಯಾಸಪಟ್ಟನು.’ ಪೌಲನ ಈ ಮಾದರಿಯಿಂದ ನಾವೇನು ಕಲಿಯುತ್ತೇವೆ? ನಾವು ಮಾಡಿದ ಪಾಪವನ್ನು ಒಪ್ಪಿಕೊಂಡು, ತಿದ್ದಿಕೊಂಡು ನಡೆದರೆ ನಮ್ಮ ಪಾಪ ಗಂಭೀರವಾಗಿದ್ದರೂ ಯೆಹೋವನು ಅದನ್ನು ಯೇಸುವಿನ ಯಜ್ಞದ ಆಧಾರದ ಮೇಲೆ ಸಂಪೂರ್ಣವಾಗಿ ಅಳಿಸಿಬಿಡುತ್ತಾನೆ. ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದಿಂದ ಕೂಡ ಕ್ಷಮಿಸಲು ಆಗದಂಥ ಪಾಪ ಮಾಡಿದ್ದೀರೆಂದು ಒಂದುವೇಳೆ ನಿಮಗನಿಸುವುದಾದರೆ ಪೌಲನ ಉದಾಹರಣೆಯನ್ನು ನೆನಪಿಸಿಕೊಳ್ಳಿ. (1 ತಿಮೊಥೆಯ 1:15, 16 ಓದಿ.) ಒಂದುಕಾಲದಲ್ಲಿ ಕ್ರಿಸ್ತನ ಬದ್ಧವಿರೋಧಿಯಾಗಿದ್ದ ಪೌಲನು ನಂತರ ಹೀಗೆ ಬರೆದನು: “ದೇವರ ಮಗ . . . ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.” (ಗಲಾ. 2:20; ಅ. ಕಾ. 9:5) ಆದದ್ದನ್ನು ಬಿಟ್ಟುಬಿಟ್ಟು ಮುಂದೆ ತನ್ನ ಜೀವನದಲ್ಲಿ ಇನ್ನಷ್ಟು ವಿಷಾದಪಡುವ ಸಂಗತಿಗಳು ಆಗದಂತೆ ದೇವರ ಸೇವೆಯಲ್ಲಿ ತನ್ನಿಂದಾದಷ್ಟು ಹೆಚ್ಚು ಮಾಡಲು ಶ್ರಮಿಸಬೇಕೆಂದು ಪೌಲ ಅರಿತನು. ನಮಗೂ ಇದರಿಂದ ಕಲಿಯಲಿಕ್ಕಿದೆ ಅಲ್ಲವೇ?

ನಿಮಗೂ ವಿಷಾದಗಳಿವೆಯಾ?

9, 10. (1) ಯಾವ ವಿಷಯಗಳಿಗಾಗಿ ಕೆಲವರು ವಿಷಾದಪಡಬಹುದು? (2) ಆಗಿ ಹೋದದ್ದರ ಕುರಿತು ಚಿಂತೆ ಮಾಡುತ್ತಾ ಇರುವುದು ಸರಿಯಲ್ಲ ಏಕೆ?

9 ಹಿಂದೆ ಮಾಡಿದ ಯಾವುದೋ ವಿಷಯಕ್ಕಾಗಿ ನೀವೀಗ ವಿಷಾದಿಸುತ್ತಿದ್ದೀರಾ? ಹೌದಾಗಿರುವಲ್ಲಿ ಯಾವ ವಿಷಯಕ್ಕಾಗಿ? ವ್ಯರ್ಥ ಕಾರ್ಯಗಳಲ್ಲಿ ನಿಮ್ಮ ಸಮಯ, ಶಕ್ತಿಯನ್ನು ಹಾಳು ಮಾಡಿದ್ದೀರಾ? ಇತರರಿಗೆ ದುಃಖ ತರಿಸುವಂಥ ರೀತಿಯಲ್ಲಿ ನಡೆದುಕೊಂಡಿದ್ದೀರಾ? ಇದ್ಯಾವುದೂ ಅಲ್ಲದಿದ್ದರೂ, ಬೇರೆ ಯಾವುದೋ ಒಂದು ವಿಷಯಕ್ಕಾಗಿ ನಿಮ್ಮಲ್ಲಿ ವಿಷಾದವಿರಬಹುದು. ಇರುವುದಾದರೆ ಈಗ ಏನು ಮಾಡಬಹುದು?

10 ಕೆಲವರು ಮೂರು ಹೊತ್ತು ಚಿಂತೆ ಮಾಡುತ್ತಾ ತಲೆ ಮೇಲೆ ಕೈಹೊತ್ತು ಕೂತುಕೊಳ್ಳುತ್ತಾರೆ. ಚಿಂತೆ ಮಾಡುವುದು ಅಂದರೆ ನಮಗೆ ನಾವೇ ಕಿರುಕುಳ ತಂದುಕೊಳ್ಳೋದು, ವ್ಯಥೆಪಡಿಸುವುದು, ಹಿಂಸಿಸಿಕೊಳ್ಳುವುದು ಆಗಿದೆ. ಚಿಂತೆ ನಮ್ಮ ಆತಂಕವನ್ನು ಹೆಚ್ಚಿಸುತ್ತದೆ. ಅಲ್ಲ ನೀವೇ ಹೇಳಿ ಚಿಂತೆ ಮಾಡಿ ಯಾವುದಾದರೂ ಸಮಸ್ಯೆ ಪರಿಹಾರ ಆಗುತ್ತದಾ? ಉದಾಹರಣೆಗೆ ಸ್ಟಾಂಡ್‌ ಹಾಕಿದ ಸೈಕಲ್‌ ಮೇಲೆ ಕೂತು ನೀವು ಎಷ್ಟೇ ಶ್ರಮಪಟ್ಟು ಗಂಟೆಗಟ್ಟಲೆ ತುಳಿದರೂ ಇದ್ದಲ್ಲೇ ಇರುತ್ತೀರಿ. ಸ್ವಲ್ಪವೂ ಮುಂದೆ ಚಲಿಸುವುದಿಲ್ಲ. ಹಾಗೆಯೇ ನಡೆದು ಹೋದದ್ದನ್ನು ಮತ್ತೆ ಮತ್ತೆ ಮನಸ್ಸಿಗೆ ತಂದುಕೊಂಡು ಚಿಂತೆ ಮಾಡುವುದರಿಂದ ನೀವು ಏನೂ ಸಾಧಿಸಲು ಆಗುವುದಿಲ್ಲ. ಹಾಗಾಗಿ ಚಿಂತೆಯನ್ನು ಬಿಟ್ಟು ಸಮಸ್ಯೆಯನ್ನು ಬಗೆಹರಿಸಲು ಹೆಜ್ಜೆ ತಕ್ಕೊಳ್ಳಿ. ಯಾರಿಗಾದರೂ ನೋವುಂಟುಮಾಡಿರುವಲ್ಲಿ ಅವರ ಹತ್ತಿರ ಹೋಗಿ ಕ್ಷಮೆ ಕೇಳಿ. ಅವರೊಂದಿಗೆ ಸಮಾಧಾನವಾಗಲು ಪ್ರಯತ್ನಿಸಿ. ನೀವು ಮಾಡಿದ ತಪ್ಪಿಗೆ ಕಾರಣ ಏನೆಂದು ತಿಳಿದುಕೊಳ್ಳಿ. ಆ ತಪ್ಪು ಮತ್ತೆ ಆಗದಂತೆ ಜಾಗ್ರತೆವಹಿಸಿ. ಆದರೆ ಕೆಲವು ಸನ್ನಿವೇಶಗಳಲ್ಲಿ ಏನೂ ಮಾಡಲಾಗುವುದಿಲ್ಲ. ಪರಿಣಾಮಗಳನ್ನು ಸಹಿಸಿಕೊಂಡು ಹೋಗಬೇಕಾಗಬಹುದು. ಹಾಗಂತ ಚಿಂತೆ ಮಾಡಿ ಏನೂ ಪ್ರಯೋಜನ ಇಲ್ಲ. ಚಿತೆ ದೇಹವನ್ನು ಸುಟ್ಟರೆ, ಚಿಂತೆ ಇಡೀ ಬದುಕನ್ನೇ ಸುಡುತ್ತದೆ ಎಂಬ ಮಾತು ನಿಜ. ಯೆಹೋವನ ಸೇವೆಯನ್ನು ಪೂರ್ಣವಾಗಿ ಮಾಡಲು ನಮ್ಮಲ್ಲಿ ಶಕ್ತಿ ಉಳಿದಿರುವುದಿಲ್ಲ ಅಷ್ಟೆ.

11. (1) ಯೆಹೋವನ ಕರುಣೆ ಮತ್ತು ಪ್ರೀತಿಪೂರ್ವಕ ದಯೆ ದೊರಕಬೇಕಾದರೆ ನಾವೇನು ಮಾಡಬೇಕು? (2) ಹಿಂದಿನ ತಪ್ಪನ್ನು ನೆನೆದು ಕೊರಗದೆ ಮನಶ್ಶಾಂತಿ ಪಡೆಯಬೇಕಾದರೆ ಏನು ಮಾಡಬೇಕೆಂದು ಬೈಬಲ್‌ ಹೇಳುತ್ತದೆ?

11 ಕೆಲವರು ತಾವು ಮಾಡಿದ ತಪ್ಪು ಎಷ್ಟು ಘೋರವೆಂದು ನೆನಸುತ್ತಾರೆಂದರೆ ತಾವು ದೇವರ ಕರುಣೆಗೆ ಅರ್ಹರೇ ಅಲ್ಲ ಎಂಬ ನಿರ್ಣಯಕ್ಕೆ ಬರುತ್ತಾರೆ. ‘ನಾನು ತುಂಬ ಗಂಭೀರ ಪಾಪ ಮಾಡಿದ್ದೇನೆ’ ಅಥವಾ ‘ಒಂದೆರಡು ಸಲ ಅಲ್ಲ ಅನೇಕ ಬಾರಿ ಪಾಪ ಮಾಡಿದ್ದೇನೆ’ ಎಂದು ಯೋಚಿಸಿ ‘ದೇವರು ಇನ್ನು ದಯೆ ತೋರಿಸಲಾರ’ ಎಂದು ನೆನಸುತ್ತಾರೆ. ಆದರೆ ಸತ್ಯಾಂಶವೇನೆಂದರೆ ತಪ್ಪು ಎಂಥದ್ದೇ ಆಗಿರಲಿ ಪಶ್ಚಾತ್ತಾಪಪಟ್ಟು, ತಮ್ಮನ್ನು ಸರಿಪಡಿಸಿಕೊಂಡು ಯೆಹೋವನ ಹತ್ತಿರ ಕ್ಷಮೆಕೋರಸಾಧ್ಯ. (ಅ. ಕಾ. 3:19) ಯೆಹೋವನು ಈಗಾಗಲೆ ಎಷ್ಟೋ ಜನರಿಗೆ ಕರುಣೆ ಪ್ರೀತಿಪೂರ್ವಕ ದಯೆ ತೋರಿಸಿದ್ದಾನೆ. ಅದೇ ರೀತಿ ಈಗಲೂ ತೋರಿಸುತ್ತಾನೆ. ದೀನರು, ಯಥಾರ್ಥರು ಮತ್ತು ನಿಜವಾಗಿ ಪಶ್ಚಾತ್ತಾಪ ಪಡುವವರನ್ನು ಆತನು ದಯೆಯಿಂದ ಕ್ಷಮಿಸುತ್ತಾನೆ. ತಾನು ಮಾಡಿದ ತಪ್ಪಿಗಾಗಿ ವಿಷಾದಿಸುತ್ತಾ “ನಾನು . . . ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ” ಎಂದ ಯೋಬನಿಗೆ ಇದರ ಅನುಭವವಾಯಿತು. (ಯೋಬ 42:6) ತಪ್ಪುಗಳಿಗಾಗಿ ಕೊರಗದೆ ಮನಶ್ಶಾಂತಿ ಪಡೆಯಲು ಬೈಬಲ್‌ ಹೇಳುವ ಒಂದು ವಿಷಯವನ್ನು ನಾವು ಮಾಡಬೇಕು: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” (ಜ್ಞಾನೋ. 28:13; ಯಾಕೋ. 5:14-16) ಇಲ್ಲಿ ಹೇಳಿದಂತೆ ದೇವರ ಹತ್ತಿರ ನಮ್ಮ ತಪ್ಪನ್ನು ಒಪ್ಪಿಕೊಂಡು, ಕ್ಷಮೆದೋರುವಂತೆ ಬೇಡಿ ತಪ್ಪನ್ನು ಸರಿಪಡಿಸಲು ಹೆಜ್ಜೆ ತಕ್ಕೊಳ್ಳಬೇಕು. (2 ಕೊರಿಂ. 7:10, 11) ಹೀಗೆ ಮಾಡಿದರೆ “ಮಹಾಕೃಪೆಯಿಂದ ಕ್ಷಮಿಸುವ” ಯೆಹೋವನ ಕರುಣೆಗೆ ನಾವು ಪಾತ್ರರಾಗುವೆವು.—ಯೆಶಾ. 55:7.

12. (1) ದಾವೀದನ ಉದಾಹರಣೆ ತೋರಿಸುವಂತೆ ದೋಷಿ ಮನಸ್ಸಾಕ್ಷಿ ಇರುವಲ್ಲಿ ನಾವೇನು ಮಾಡಬೇಕು? (2) ಯೆಹೋವನು ವಿಷಾದಪಟ್ಟದ್ದು ಯಾವ ಅರ್ಥದಲ್ಲಿ? ಮತ್ತು ಅದನ್ನು ತಿಳಿದಿರುವುದು ನಮಗೆ ಹೇಗೆ ಸಹಾಯಕಾರಿ? (ಚೌಕ ನೋಡಿ.)

12 ಪ್ರಾರ್ಥನೆಗೆ ತುಂಬ ಶಕ್ತಿಯಿದೆ. ಅದರ ಮೂಲಕ ನಾವು ಯೆಹೋವನಿಂದ ಸಹಾಯ ಪಡೆಯಬಹುದು. ದಾವೀದನು ಸಹ ಹೀಗೆ ಸಹಾಯ ಪಡೆದನು. ತನ್ನನ್ನು ಯೆಹೋವನು ಕ್ಷಮಿಸಿದ್ದಾನೆ ಎಂಬ ನಂಬಿಕೆಯನ್ನು ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿದನು. ಆ ಸುಂದರ ಪ್ರಾರ್ಥನೆ ಕೀರ್ತನೆಗಳಲ್ಲಿದೆ. (ಕೀರ್ತನೆ 32:1-5 ಓದಿ.) ದೋಷಿ ಮನಸ್ಸಾಕ್ಷಿಯನ್ನು ಅದುಮಿಡಲು ಪ್ರಯತ್ನಿಸುವುದು ನಮ್ಮನ್ನು ಬಳಲಿಸುತ್ತದೆ ಎಂದು ದಾವೀದನೇ ಒಪ್ಪಿಕೊಂಡನು. ತಪ್ಪನ್ನು ನಿವೇದಿಸಿಕೊಳ್ಳದ ಕಾರಣ ಅವನು ಮಾನಸಿಕವಾಗಿಯೂ ಶಾರೀರಿಕವಾಗಿಯೂ ಕುಗ್ಗಿಹೋಗಿ ಸಂತೋಷ ಕಳೆದುಕೊಂಡಿದ್ದಿರಬೇಕು. ತಪ್ಪನ್ನು ಒಪ್ಪಿಕೊಂಡು ದೇವರಿಗೆ ಅದನ್ನು ಅರಿಕೆಮಾಡಿದಾಗಲೇ ಅವನಿಗೆ ಕ್ಷಮೆದೊರೆತು ನೆಮ್ಮದಿ ಅನುಭವಿಸಿದನು. ದಾವೀದನ ಪ್ರಾರ್ಥನೆಯನ್ನು ದೇವರು ಕೇಳಿದನು ಮತ್ತು ಅವನು ಹಿಂದಿನದ್ದನ್ನು ಮರೆತು ಸರಿಯಾದದ್ದನ್ನು ಮಾಡುತ್ತಾ ಮುಂದೆಸಾಗುವಂತೆ ಸಹಾಯಮಾಡಿದನು. ತದ್ರೀತಿ, ನಾವು ಯಥಾರ್ಥ ಹೃದಯದಿಂದ ಯೆಹೋವನಿಗೆ ಪ್ರಾರ್ಥಿಸುವಲ್ಲಿ ಆತನು ಆಲಿಸುವನು. ಹಿಂದೆ ಮಾಡಿರುವ ತಪ್ಪು ನಿಮ್ಮನ್ನು ಚುಚ್ಚುತ್ತಾ ಇರುವಲ್ಲಿ ತಪ್ಪನ್ನು ಸರಿಪಡಿಸಲು ನಿಮ್ಮಿಂದ ಸಾಧ್ಯವಿರುವುದನ್ನೆಲ್ಲ ಮಾಡಿರಿ. ಅನಂತರ ಯೆಹೋವನು ನಿಮ್ಮನ್ನು ಕ್ಷಮಿಸಿದ್ದಾನೆಂಬ ನಂಬಿಕೆಯಿಂದ ನೆಮ್ಮದಿಯಿಂದಿರಿ.—ಕೀರ್ತ. 86:5.

ಮುಂದೆ ದೃಷ್ಟಿನೆಡಿ

13, 14. (1) ಯಾವುದರ ಕುರಿತು ನಾವು ಗಂಭೀರವಾಗಿ ಯೋಚಿಸಬೇಕು? (2) ನಮ್ಮ ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸಲು ಯಾವ ಪ್ರಶ್ನೆಗಳು ನೆರವಾಗುತ್ತವೆ?

13 ಜೀವನ ಪಾಠ ಕಲಿಸುತ್ತದೆ ಎಂಬ ಮಾತು ನಿಜವಾದರೂ ಹಿಂದೆ ಮಾಡಿದ್ದರ ಕುರಿತೇ ಯೋಚಿಸುತ್ತಾ ಇರದೆ ನಾವು ಮುಂದೆ ದೃಷ್ಟಿಯಿಟ್ಟು ಸಾಗಬೇಕು. ಆಗಿಹೋದ ವಿಷಯಕ್ಕೆ ಚಿಂತಿಸದೆ ಈಗ ಮಾಡುತ್ತಿರುವ ಹಾಗೂ ಮುಂದೆ ಮಾಡಬೇಕಾಗಿರುವ ವಿಷಯಗಳ ಕುರಿತು ಯೋಚಿಸಬೇಕು. ಹೀಗೆ ಕೇಳಿಕೊಳ್ಳಿ: ‘ಈಗ ನಾನೇನು ಮಾಡುತ್ತಿದ್ದೇನೋ ಅದಕ್ಕಾಗಿ ಕೆಲವು ವರ್ಷಗಳ ನಂತರ “ಹಾಗೆ ಮಾಡಬಾರದಿತ್ತು” ಎಂದು ವಿಷಾದಪಡಬೇಕಾಗುತ್ತದಾ? ಮುಂದೆ ಅಂಥ ಸ್ಥಿತಿ ಬಾರದಂತೆ ಈಗ ನಾನು ನಂಬಿಗಸ್ತಿಕೆಯಿಂದ ದೇವರ ಸೇವೆ ಮಾಡುತ್ತಿದ್ದೇನಾ?’

14 ಮಹಾ ಸಂಕಟ ತುಂಬ ನಿಕಟವಿದೆ. ಇನ್ನೇನು ಅದು ಬರಲಿರುವಾಗ ನಾವು ಈ ರೀತಿ ಯೋಚಿಸುತ್ತಾ ಕೊರಗುವಂತಾದರೆ . . . ‘ನಾನು ದೇವರ ಸೇವೆಯನ್ನು ಇನ್ನು ಹೆಚ್ಚು ಮಾಡಬಹುದಿತ್ತೇನೋ? ಅವಕಾಶ ಇರುವಾಗ ನಾನು ಯಾಕೆ ಪಯನೀಯರ್‌ ಸೇವೆ ಮಾಡಲಿಲ್ಲ? ಯಾಕೆ ನಾನು ಶುಶ್ರೂಷಾ ಸೇವಕನಾಗಲು ಪ್ರಯತ್ನ ಹಾಕಲಿಲ್ಲ? ಹೊಸ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ನಾನು ನಿಜವಾಗಿಯೂ ಪ್ರಯತ್ನ ಮಾಡಿದ್ದೇನಾ? ಹೊಸಲೋಕದಲ್ಲಿ ಯಾವ ರೀತಿಯ ವ್ಯಕ್ತಿಗಳು ಇರಬೇಕೆಂದು ಯೆಹೋವನು ಬಯಸುತ್ತಾನೋ ಅಂಥ ವ್ಯಕ್ತಿ ನಾನಾಗಿದ್ದೇನಾ?’ ಈ ಪ್ರಶ್ನೆಗಳ ಕುರಿತು ನಾವು ಯೋಚಿಸಬೇಕು. ಹಾಗಂತ ಚಿಂತಿಸುತ್ತಾ ಕೂರುವುದಲ್ಲ. ಈ ಪ್ರಶ್ನೆಗಳ ಮೂಲಕ ಸ್ವಪರೀಕ್ಷೆ ಮಾಡಿಕೊಳ್ಳೋಣ ಮತ್ತು ದೇವರ ಸೇವೆಯಲ್ಲಿ ನಮ್ಮಿಂದಾದಷ್ಟು ಹೆಚ್ಚನ್ನು ಮಾಡೋಣ. ಹೀಗೆ ಮಾಡದಿದ್ದರೆ ಮುಂದೊಂದು ದಿನ ಇನ್ನೂ ಹೆಚ್ಚು ವಿಷಾದಪಡುವಂತಾಗುವುದು.—2 ತಿಮೊ. 2:15.

ದೇವರ ಸೇವೆ ಮಾಡಿದ್ದಕ್ಕಾಗಿ ಎಂದೂ ವಿಷಾದಿಸದಿರಿ

15, 16. (1) ದೇವರ ಸೇವೆಗೆ ಆದ್ಯತೆ ಕೊಡಲು ಅನೇಕರು ಯಾವ ತ್ಯಾಗಗಳನ್ನು ಮಾಡಿದ್ದಾರೆ? (2) ಅಂಥ ಯಾವುದೇ ತ್ಯಾಗಗಳ ವಿಷಯದಲ್ಲಿ ನಾವು ವಿಷಾದಪಡಬಾರದೇಕೆ?

15 ಪೂರ್ಣ ಸಮಯ ಸೇವೆ ಮಾಡುವುದಕ್ಕಾಗಿ ನೀವು ತ್ಯಾಗಗಳನ್ನು ಮಾಡಿದ್ದೀರಾ? ನೀವು ಕೈತುಂಬ ಸಂಬಳ ಬರುವ ಉದ್ಯೋಗವನ್ನೋ ದೊಡ್ಡ ವ್ಯಾಪಾರ ವಹಿವಾಟನ್ನೋ ಬಿಟ್ಟು ಸರಳ ಜೀವನ ನಡೆಸುತ್ತಿರಬಹುದು. ಅವಿವಾಹಿತರಾಗಿಯೇ ಉಳಿದಿರಬಹುದು ಅಥವಾ ವಿವಾಹವಾದರೂ ಮಕ್ಕಳು ಬೇಡ ಎಂದು ನಿರ್ಧರಿಸಿರಬಹುದು. ಈ ಎಲ್ಲ ತ್ಯಾಗಗಳನ್ನು ಬೆತೆಲ್‌ ಸೇವೆ, ಅಂತಾರಾಷ್ಟ್ರೀಯ ನಿರ್ಮಾಣ ಕೆಲಸ, ಸರ್ಕಿಟ್‌ ಸೇವೆ, ಮಿಷನರಿ ಸೇವೆಯಂಥ ಪೂರ್ಣ ಸಮಯದ ಸೇವೆಗೆ ನಿಮ್ಮನ್ನೇ ಕೊಟ್ಟುಕೊಳ್ಳಲಿಕ್ಕಾಗಿ ಮಾಡಿರಬಹುದು. ಈಗ ತುಂಬ ವರ್ಷ ಸೇವೆ ಮಾಡಿದ ನಂತರ ನಿಮಗೆ ಹೇಗನಿಸುತ್ತದೆ? ನೀವು ಮಾಡಿದ ತ್ಯಾಗಗಳ ವಿಷಯದಲ್ಲಿ ವಿಷಾದವಿದೆಯಾ? ಅಷ್ಟೆಲ್ಲ ತ್ಯಾಗ ಮಾಡುವ ಅಗತ್ಯವಿರಲಿಲ್ಲ ಎಂದನಿಸುತ್ತದಾ? ಅಂತ್ಯ ಹೇಗೂ ಬರಲಿಲ್ಲ ಅಲ್ವಾ, ಜೀವನದಲ್ಲಿ ನೆಲೆಕಂಡು ನಂತರ ಪೂರ್ಣ ಸಮಯ ಸೇವೆ ಆರಂಭಿಸಬಹುದಿತ್ತು ಎಂದು ನೆನಸುತ್ತೀರಾ? ಖಂಡಿತ ಹಾಗೆ ನೆನಸಬೇಡಿ.

16 ಏಕೆಂದರೆ ನೀವು ಮಾಡಿದ ತ್ಯಾಗಗಳು ಯೆಹೋವನ ಮೇಲೆ ನಿಮಗಿರುವ ಪ್ರೀತಿಯಿಂದ ಹಾಗೂ ಆತನ ಬಗ್ಗೆ ಇತರರಿಗೆ ತಿಳಿಸುವ ಕಡುಬಯಕೆಯಿಂದ ಅಲ್ಲವೆ? ಹಾಗಾಗಿ ‘ಈ ತ್ಯಾಗಗಳನ್ನು ಮಾಡಿರದಿದ್ದರೆ ನಾನು ಹೆಚ್ಚು ಚೆನ್ನಾಗಿರುತ್ತಿದ್ದೆ’ ಎಂದು ನೆನಸಬೇಡಿ. ಸರಿಯಾದದ್ದನ್ನೇ ಮಾಡಿದ್ದೀರಿ ಎಂಬ ಸಂತೃಪ್ತಿ ನಿಮಗಿರಲಿ. ಯೆಹೋವನ ಸೇವೆಯಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಮಾಡಲು ಶ್ರಮಪಟ್ಟಿದ್ದಕ್ಕಾಗಿ ಸಂತೋಷಪಡಿರಿ. ನಿಮ್ಮ ಸ್ವತ್ಯಾಗದ ಜೀವನವನ್ನು ಆತನೆಂದೂ ಮರೆಯನು. ಮುಂದೆ ಆತನು ನಿಮಗೆ ವಾಸ್ತವವಾದ ಜೀವನವನ್ನು ಕೊಡುವನು. ಆತನ ಸೇವೆಯಲ್ಲಿ ಪಟ್ಟ ಶ್ರಮಕ್ಕೆ ಪ್ರತಿಫಲವಾಗಿ ನೀವು ಊಹಿಸಲು ಸಾಧ್ಯವಿಲ್ಲದಷ್ಟು ಆಶೀರ್ವಾದಗಳನ್ನು ಕೊಡುವನು!—ಕೀರ್ತ. 145:16; 1 ತಿಮೊ. 6:19.

ವಿಷಾದಗಳಿಲ್ಲದೆ ಸೇವೆ ಮಾಡಲು ಬಯಸುತ್ತೀರಾ?

17, 18. (1) ವಿಷಾದಗಳಿಲ್ಲದೆ ದೇವರ ಸೇವೆ ಮಾಡಲು ಪೌಲನಿಗೆ ಯಾವುದು ಸಹಾಯಮಾಡಿತು? (2) ಆಗಿಹೋದ, ಈಗ ಮಾಡುತ್ತಿರುವ ಹಾಗೂ ಮುಂದೆ ಮಾಡಲಿರುವ ವಿಷಯಗಳ ಬಗ್ಗೆ ನಿಮ್ಮ ಸಂಕಲ್ಪವೇನು?

17 ಜೀವನದಲ್ಲಿ ಮುಂದೆ ವಿಷಾದಪಡುವ ಸಂದರ್ಭ ಬಾರದಂತೆ ನೋಡಿಕೊಳ್ಳಲು ಪೌಲನಿಗೆ ಯಾವುದು ಸಹಾಯಮಾಡಿತು? ಪರಿಶುದ್ಧ ಬೈಬಲ್‌ ಭಾಷಾಂತರದಲ್ಲಿ * ಅವನ ಮಾತುಗಳನ್ನು ಹೀಗೆ ಓದುತ್ತೇವೆ: “ನಾನು ಯಾವಾಗಲೂ ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ನನ್ನ ಮುಂದಿರುವ ಗುರಿಯನ್ನು ಮುಟ್ಟಲು ನನ್ನಿಂದಾದಷ್ಟರ ಮಟ್ಟಿಗೆ ಓಡುತ್ತಿದ್ದೇನೆ.” (ಫಿಲಿಪ್ಪಿ 3:13, 14 ಓದಿ.) ಹೌದು, ಯೆಹೂದಿ ಮತಾವಲಂಬಿಯಾಗಿದ್ದಾಗ ಮಾಡಿದ ತಪ್ಪುಗಳನ್ನೇ ಪೌಲನು ಮನಸ್ಸಿನಲ್ಲಿ ಜಗಿಯುತ್ತಾ ಇರಲಿಲ್ಲ. ಬದಲಿಗೆ ತನ್ನ ಮುಂದಿದ್ದ ನಿತ್ಯಜೀವದ ಬಹುಮಾನವನ್ನು ಪಡೆದುಕೊಳ್ಳಲು ಏನು ಮಾಡಬೇಕೋ ಅದಕ್ಕಾಗಿ ತನ್ನೆಲ್ಲ ಶಕ್ತಿಯನ್ನು ಉಪಯೋಗಿಸಿದನು.

18 ಪೌಲನ ಮಾತುಗಳಲ್ಲಿರುವ ತತ್ವವನ್ನು ನಾವೂ ಅನ್ವಯಿಸಿಕೊಳ್ಳಬಹುದು. ಗಡಿಯಾರದ ಮುಳ್ಳನ್ನು ಹಿಂದೆ ತಿರುಗಿಸಿ ನಡೆದದ್ದನ್ನು ಸರಿಮಾಡಲು ಆಗುವುದಿಲ್ಲವಲ್ಲಾ. ಆದ್ದರಿಂದ ಹಳೆ ನೆನಪುಗಳನ್ನು ಮೆಲುಕುಹಾಕುತ್ತಾ ನೋವಿನಲ್ಲಿ ಬೇಯುವ ಬದಲು ನಮ್ಮ ಮುಂದೆ ಏನಿದೆಯೋ ಅದರ ಮೇಲೆ ಗಮನ ಕೇಂದ್ರೀಕರಿಸೋಣ. ತಪ್ಪನ್ನು ಮರೆತುಬಿಡಲು ಸಾಧ್ಯವಿಲ್ಲ ನಿಜ. ಹಾಗಂತ ಅದನ್ನೇ ನೆನೆ ನೆನೆದು ಕೊರಗುವ ಅಗತ್ಯವಿಲ್ಲ. ಆಗಿ ಹೋದದ್ದನ್ನು ಬೆನ್ನ ಹಿಂದೆ ಹಾಕುತ್ತಾ ಮುಂದೆ ಸಾಗೋಣ. ಶಕ್ತಿಯಿದ್ದಷ್ಟು ಯೆಹೋವನ ಸೇವೆ ಮಾಡುತ್ತಾ ಆತನಿಟ್ಟಿರುವ ಭವ್ಯ ಭವಿಷ್ಯತ್ತಿನ ಮೇಲೆ ದೃಷ್ಟಿನೆಡೋಣ!

[ಪಾದಟಿಪ್ಪಣಿಗಳು]

^ ಪ್ಯಾರ. 4 ಪೌಲನಿಂದ ಹಿಂಸೆಯನ್ನು ಅನುಭವಿಸಿದವರಲ್ಲಿ ಸ್ತ್ರೀಯರು ಇದ್ದರು ಎಂದು ಅನೇಕಬಾರಿ ಬೈಬಲ್‌ ಹೇಳುತ್ತದೆ. ಇದು ಇಂದಿನಂತೆ ಅಂದು ಕೂಡ ಸ್ತ್ರೀಯರು ಕ್ರೈಸ್ತತ್ವವನ್ನು ಹಬ್ಬಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರೆಂದು ತೋರಿಸುತ್ತದೆ.—ಕೀರ್ತ. 68:11.

^ ಪ್ಯಾರ. 17 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಅಧ್ಯಯನ ಪ್ರಶ್ನೆಗಳು]

[ಪುಟ 25ರಲ್ಲಿರುವ ಚೌಕ]

ಯೆಹೋವನು ವಿಷಾದಿಸಿದ್ದು ಯಾವ ಅರ್ಥದಲ್ಲಿ?

ಯೆಹೋವನು ‘ಪಶ್ಚಾತ್ತಾಪಪಟ್ಟನು’ ಎಂದು ಬೈಬಲಿನಲ್ಲಿ ಅನೇಕ ಬಾರಿ ಹೇಳಲಾಗಿದೆ. (ಯೋನ 3:10; ಆದಿ. 6:6, 7; 1 ಸಮು. 15:10) ಈ ವಚನಗಳಲ್ಲಿರುವ ‘ಪಶ್ಚಾತ್ತಾಪಪಡು’ ಎಂಬ ಪದಕ್ಕೆ ಮೂಲ ಹೀಬ್ರುವಿನಲ್ಲಿ “ವಿಷಾದಿಸು” ಎಂಬ ಪದವನ್ನು ಬಳಸಲಾಗಿದೆ. ದೇವರು ಪರಿಪೂರ್ಣನಾಗಿರುವುದರಿಂದ ಆತನು ತಪ್ಪು ಮಾಡಿ ಪಶ್ಚಾತ್ತಾಪಪಡಲು ಅಥವಾ ವಿಷಾದಿಸಲು ಸಾಧ್ಯವೇ ಇಲ್ಲ. (ಅರ. 23:19; ಧರ್ಮೋ. 32:4) ಹೀಬ್ರು ಭಾಷೆಯಲ್ಲಿ “ವಿಷಾದಿಸು” ಎಂಬುದಕ್ಕೆ ಮನಸ್ಸನ್ನು ಬದಲಾಯಿಸು, ಯೋಜನೆಯನ್ನು ಬದಲಾಯಿಸು ಎಂಬ ಅರ್ಥವೂ ಇದೆ. ಉದಾಹರಣೆಗೆ, ತಪ್ಪುಮಾಡಿದವರನ್ನು ಶಿಕ್ಷಿಸಲು ಯೆಹೋವನು ನಿರ್ಣಯಿಸಿರಬಹುದು. ಆದರೆ ಆತನು ನ್ಯಾಯಬದ್ಧನು, ಹೊಂದಿಸಿಕೊಳ್ಳುವವನು, ಕರುಣಾಮಯಿ ಆಗಿರುವುದರಿಂದ ತಪ್ಪಿತಸ್ಥರು ಪಶ್ಚಾತ್ತಾಪಪಟ್ಟು ಸರಿದಾರಿ ಹಿಡಿದಾಗ ತಾನು ನೆನಸಿದಂತೆ ಅವರನ್ನು ಶಿಕ್ಷಿಸದೆ ಮನ್ನಿಸಲು ಸಿದ್ಧನಾಗಿರುತ್ತಾನೆ.—ಯೆರೆ. 18:7-10.

[ಪುಟ 22ರಲ್ಲಿರುವ ಚಿತ್ರ]

[ಪುಟ 24ರಲ್ಲಿರುವ ಚಿತ್ರ]

ಪೌಲನು ಆಗಿ ಹೋದದ್ದಕ್ಕಾಗಿ ಕೊರಗದೆ ದೇವರ ಸೇವೆ ಮೇಲೆ ಗಮನನೆಟ್ಟನು