ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಂಪರೆಯಾಗಿ ಪಡೆದ ಆಧ್ಯಾತ್ಮಿಕ ಸ್ವತ್ತನ್ನು ನೀವು ಗಣ್ಯಮಾಡುತ್ತೀರೋ?

ಪರಂಪರೆಯಾಗಿ ಪಡೆದ ಆಧ್ಯಾತ್ಮಿಕ ಸ್ವತ್ತನ್ನು ನೀವು ಗಣ್ಯಮಾಡುತ್ತೀರೋ?

ಪರಂಪರೆಯಾಗಿ ಪಡೆದ ಆಧ್ಯಾತ್ಮಿಕ ಸ್ವತ್ತನ್ನು ನೀವು ಗಣ್ಯಮಾಡುತ್ತೀರೋ?

“ದೇವರು ಅನ್ಯಜನಾಂಗಗಳೊಳಗಿಂದ ತನ್ನ ಹೆಸರಿಗಾಗಿ ಒಂದು ಪ್ರಜೆಯನ್ನು ಆರಿಸಿಕೊಳ್ಳಲು . . . ಅವರ ಕಡೆಗೆ ಗಮನಹರಿಸಿದನು.”​—⁠ಅ. ಕಾ. 15:⁠14.

ನಿಮ್ಮ ಉತ್ತರ . . .

ಜನರು ನಂಬುವ ಸುಳ್ಳು ಬೋಧನೆಗಳಲ್ಲಿ ಒಂದನ್ನು ತಿಳಿಸಿ. ಅದರಿಂದ ನಾವು ಮೋಸಹೋಗದಂತೆ ಹೇಗೆ ಸಂರಕ್ಷಿಸಲ್ಪಟ್ಟಿದ್ದೇವೆ?

ಪಾಪ ಮತ್ತು ಮರಣದಿಂದ ನಾವು ಹೇಗೆ ಬಿಡುಗಡೆ ಹೊಂದಿದ್ದೇವೆ?

ಯೆಹೋವನ ಪರಮಾಧಿಕಾರ ಮತ್ತು ಮಾನವ ಸಮಗ್ರತೆಯ ವಿಷಯದಲ್ಲಿ ಎದ್ದಿರುವ ವಿವಾದಾಂಶದ ಬಗ್ಗೆ ನಿಮಗೆ ಹೇಗನಿಸುತ್ತದೆ?

1, 2. (1) “ದಾವೀದನ ಗುಡಾರ” ಅಂದರೇನು? (2) ಅದು ಹೇಗೆ ಪುನಃ ಕಟ್ಟಲ್ಪಡಲಿತ್ತು? (3) ಇಂದು ಯಾರು ಜೊತೆಯಾಗಿ ಯೆಹೋವನ ಸೇವೆ ಮಾಡುತ್ತಿದ್ದಾರೆ?

ಕ್ರಿಸ್ತಶಕ 49ರಲ್ಲಿ ನಡೆದ ಆಡಳಿತ ಮಂಡಳಿಯ ಮಹತ್ವಪೂರ್ಣ ಕೂಟದಲ್ಲಿ ಶಿಷ್ಯ ಯಾಕೋಬ ಹೀಗಂದನು: “ದೇವರು ಅನ್ಯಜನಾಂಗಗಳೊಳಗಿಂದ ತನ್ನ ಹೆಸರಿಗಾಗಿ ಒಂದು ಪ್ರಜೆಯನ್ನು ಆರಿಸಿಕೊಳ್ಳಲು ಹೇಗೆ ಮೊದಲ ಬಾರಿಗೆ ಅವರ ಕಡೆಗೆ ಗಮನಹರಿಸಿದನು ಎಂಬುದನ್ನು ಸಿಮೆಯೋನನು [ಪೇತ್ರನು] ಸ್ಪಷ್ಟವಾಗಿ ವಿವರಿಸಿದ್ದಾನೆ. ಪ್ರವಾದಿಗಳ ಮಾತುಗಳೂ ಇದಕ್ಕೆ ಹೊಂದಿಕೆಯಲ್ಲಿವೆ; ‘ಇದಾದ ಬಳಿಕ ನಾನು ಹಿಂದಿರುಗಿ ಬಂದು ಬಿದ್ದುಹೋಗಿರುವ ದಾವೀದನ ಗುಡಾರವನ್ನು ಪುನಃ ಕಟ್ಟುವೆನು; ಅದರಲ್ಲಿ ಹಾಳಾಗಿರುವುದನ್ನು ಕಟ್ಟಿ ಅದನ್ನು ಪುನಃ ನೆಟ್ಟಗೆ ನಿಲ್ಲಿಸುವೆನು. ಹೀಗೆ ಈ ಮನುಷ್ಯರಲ್ಲಿ ಉಳಿದವರು ನನ್ನ ಹೆಸರಿನಿಂದ ಕರೆಯಲ್ಪಡುವ ಜನರೊಂದಿಗೆ ಅಂದರೆ ಎಲ್ಲ ಜನಾಂಗಗಳ ಜನರೊಂದಿಗೆ ಸೇರಿ ಯೆಹೋವನನ್ನು ಅತ್ಯಾಸಕ್ತಿಯಿಂದ ಹುಡುಕುವರು ಎಂದು ಇದನ್ನೆಲ್ಲ ನಡಿಸುತ್ತಿರುವ ಯೆಹೋವನು ನುಡಿಯುತ್ತಾನೆ. ಇವೆಲ್ಲ ವಿಷಯಗಳು ಆದಿಯಿಂದಲೇ ತಿಳಿದಿವೆ’ ಎಂದು ಬರೆದದೆ.”​—⁠ಅ. ಕಾ. 15:​13-18.

2 ಯಾಕೋಬನು ಉಲ್ಲೇಖಿಸಿದ ಆಮೋಸನ ಪ್ರವಾದನೆಯ ಆ ಮಾತುಗಳಲ್ಲಿ “ದಾವೀದನ ಗುಡಾರ” ಅಂದರೆ ದಾವೀದನ ರಾಜ ಮನೆತನವಾಗಿದೆ. ರಾಜ ಚಿದ್ಕೀಯನು ಪಟ್ಟದಿಂದ ಉರುಳಿಸಲ್ಪಟ್ಟಾಗ ಆ ಗುಡಾರ ಬಿದ್ದುಹೋಯಿತು. (ಆಮೋ. 9:11) ಆದರೆ ಮುಂತಿಳಿಸಲಾದಂತೆ ದೇವರು ಆ ಗುಡಾರವನ್ನು ‘ಪುನಃ ಕಟ್ಟಲಿದ್ದನು.’ ಅಂದರೆ ದಾವೀದನ ವಂಶಸ್ಥನಾದ ಯೇಸು ಶಾಶ್ವತ ರಾಜನಾಗಿ ಆಳ್ವಿಕೆ ನಡೆಸಲಿದ್ದನು. (ಯೆಹೆ. 21:27; ಅ. ಕಾ. 2:​29-36) ಮಾತ್ರವಲ್ಲ ಆಮೋಸನ ಪ್ರವಾದನೆಯಲ್ಲಿ ಮುಂತಿಳಿಸಲಾದಂತೆ ಆ ರಾಜ್ಯದ ಬಾಧ್ಯಸ್ಥರಾಗಿ ಆಳ್ವಿಕೆ ನಡೆಸಲು ಯೆಹೂದ್ಯರಿಂದಲೂ ಅನ್ಯಜನಾಂಗದವರಿಂದಲೂ ಜನರನ್ನು ಒಟ್ಟುಗೂಡಿಸಲಾಗುತ್ತಿದೆ ಎಂದು ಕೂಡ ಯಾಕೋಬನು ತೋರಿಸಿಕೊಟ್ಟನು. ಇಂದು ಈ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿದವರು ಮತ್ತು ಯೇಸುವಿನ ‘ಬೇರೆ ಕುರಿಗಳಾಗಿರುವ’ ಲಕ್ಷಾಂತರ ಜನರು ಜೊತೆಸೇರಿ ಬೈಬಲ್‌ ಸತ್ಯವನ್ನು ಸಾರಿಹೇಳುತ್ತಿದ್ದಾರೆ.​—⁠ಯೋಹಾ. 10:⁠16.

ಯೆಹೋವನ ಜನರಿಗೆ ಎದುರಾದ ಸವಾಲು

3, 4. ಬಾಬೆಲಿನಲ್ಲಿ ಆಧ್ಯಾತ್ಮಿಕವಾಗಿ ಜೀವಂತವಾಗಿ ಉಳಿಯಲು ದೇವಜನರಿಗೆ ಯಾವುದು ಸಹಾಯಮಾಡಿತು?

3 ಕ್ರಿ.ಪೂ. 607ರಲ್ಲಿ ಯೆಹೂದ್ಯರು ಬಾಬೆಲಿನ ಬಂದಿವಾಸಕ್ಕೆ ಒಯ್ಯಲ್ಪಟ್ಟಾಗ “ದಾವೀದನ ಗುಡಾರ” ಬಿದ್ದುಹೋಗಿರುವುದು ಸ್ಪಷ್ಟವಾಯಿತು. ಬಾಬೆಲಿನಲ್ಲಿ ಸುಳ್ಳು ಧರ್ಮ ಹುಲುಸಾಗಿ ಬೆಳೆದಿತ್ತು. ಅಂಥ ಸ್ಥಳದಲ್ಲಿ ದೇವಜನರು 70 ವರ್ಷ ಇದ್ದರು. ಆ ಸಮಯದಲ್ಲಿ ನಂಬಿಗಸ್ತರಾಗಿ ಉಳಿಯಲು ಅವರಿಗೆ ಯಾವುದು ಸಹಾಯಮಾಡಿತು? ಇಂದು ಸೈತಾನನ ಲೋಕದಲ್ಲಿ ಯೆಹೋವನ ಜನರಿಗೆ ನಂಬಿಗಸ್ತರಾಗಿ ಉಳಿಯಲು ಯಾವುದು ಸಹಾಯ ಮಾಡುತ್ತಿದೆಯೋ ಅದೇ. (1 ಯೋಹಾ. 5:19) ಅದು ಬೇರೆ ಯಾವುದೂ ಅಲ್ಲ, ಯೆಹೋವನ ಜನರು ಪರಂಪರೆಯಾಗಿ ಪಡೆದಿರುವ ಸಂಪದ್ಭರಿತ ಆಧ್ಯಾತ್ಮಿಕ ಸ್ವತ್ತೇ.

4 ದೇವರ ವಾಕ್ಯವಾದ ಬೈಬಲ್‌ ನಮ್ಮ ಆಧ್ಯಾತ್ಮಿಕ ಸ್ವತ್ತಿನ ಭಾಗವಾಗಿದೆ. ಬಾಬೆಲಿನಲ್ಲಿ ಬಂದಿಗಳಾಗಿದ್ದ ಯೆಹೂದ್ಯರ ಬಳಿ ಸಂಪೂರ್ಣ ಬೈಬಲ್‌ ಇರಲಿಲ್ಲ. ಆದರೆ ಮೋಶೆಯ ಧರ್ಮಶಾಸ್ತ್ರ, ದಶಾಜ್ಞೆಗಳು ಅವರಿಗೆ ತಿಳಿದಿತ್ತು. ‘ಚೀಯೋನಿನ ಗೀತೆಗಳು,’ ಅನೇಕ ಜ್ಞಾನೋಕ್ತಿಗಳು, ಈ ಹಿಂದೆ ಯೆಹೋವನಿಗೆ ನಂಬಿಗಸ್ತರಾಗಿ ಉಳಿದವರ ಮಾದರಿಗಳು ಅವರಿಗೆ ಗೊತ್ತಿದ್ದವು. ಚೀಯೋನಿನ ನೆನಪು ಬಂದಾಗೆಲ್ಲಾ ಅವರ ಕಣ್ಣಲ್ಲಿ ನೀರಿಳಿಯುತ್ತಿತ್ತು. ಯೆಹೋವನನ್ನು ಅವರು ಮರೆತುಬಿಡಲಿಲ್ಲ. (ಕೀರ್ತನೆ 137:​1-6 ಓದಿ.) ಇದೆಲ್ಲವು ಅವರ ಸುತ್ತಮುತ್ತ ಸುಳ್ಳು ಬೋಧನೆ, ಆಚಾರವಿಧಿಗಳು ತುಂಬಿದ್ದರೂ ಆಧ್ಯಾತ್ಮಿಕವಾಗಿ ಜೀವಂತವಾಗಿ ಉಳಿಯಲು ಸಹಾಯಮಾಡಿತು.

ತ್ರಿಯೇಕ ಹೊಸ ಬೋಧನೆಯಲ್ಲ

5. ಪ್ರಾಚೀನ ಬಾಬೆಲ್‌ ಮತ್ತು ಈಜಿಪ್ಟ್‌ನಲ್ಲಿ ತ್ರಿಮೂರ್ತಿ ದೇವರುಗಳನ್ನು ಆರಾಧಿಸಲಾಗುತ್ತಿತ್ತು ಎನ್ನುವುದಕ್ಕೆ ಯಾವ ಪುರಾವೆಯಿದೆ?

5 ಬಾಬೆಲಿನಲ್ಲಿ ತ್ರಿಮೂರ್ತಿ ದೇವರುಗಳ ಆರಾಧನೆ ಎದ್ದುಕಾಣುತ್ತಿತ್ತು. ಅವರು ಆರಾಧಿಸುತ್ತಿದ್ದ ಒಂದು ತ್ರಿಮೂರ್ತಿ ದೇವರಲ್ಲಿ ಚಂದ್ರದೇವ ಸಿನ್‌, ಸೂರ್ಯದೇವ ಶೇಮಾಷ್‌, ಫಲವತ್ತತೆ ಮತ್ತು ಯುದ್ಧದ ದೇವತೆಯಾದ ಇಶಾರ್ಟ್‌ ಇದ್ದರು. ಪ್ರಾಚೀನ ಈಜಿಪ್ಟ್‌ನಲ್ಲಿ ಕೂಡ ತ್ರಿಮೂರ್ತಿ ದೇವರುಗಳನ್ನು ಆರಾಧಿಸಲಾಗುತ್ತಿತ್ತು. ಸಾಮಾನ್ಯವಾಗಿ ಅಲ್ಲಿನ ಜನರ ನಂಬಿಕೆ ಏನಾಗಿತ್ತೆಂದರೆ ಒಬ್ಬ ದೇವನು ಒಂದು ದೇವತೆಯನ್ನು ಮದುವೆಯಾಗಿ ಅವರಿಗೊಬ್ಬ ಮಗನಿರುತ್ತಿದ್ದನು. ಹೀಗೆ “ಆ ಮೂವರನ್ನು ಒಂದೇ ದೇವರೆಂದು ಆರಾಧಿಸಲಾಗುತ್ತಿತ್ತು. ಇವರಲ್ಲಿ ಹೆಚ್ಚಾಗಿ ತಂದೆ ಮುಖ್ಯಸ್ಥನಾಗಿರಲಿಲ್ಲ. ದೇವತೆಯ ಗಂಡನಾಗಿಯಷ್ಟೇ ಅವನ ಸ್ಥಾನವಿತ್ತು. ದೇವತೆಯೇ ಪ್ರಧಾನ ದೇವರು.” (ನ್ಯೂ ಲಾರೂಸ್‌ ಎನ್‌ಸೈಕ್ಲಪೀಡೀಯ ಆಫ್‌ ಮಿತಾಲಜಿ) ಇಂಥ ಒಂದು ತ್ರಿಮೂರ್ತಿಯಲ್ಲಿ ಹೋರಸ್‌ ದೇವನು, ಐಸಿಸ್‌ ದೇವತೆ ಮತ್ತು ಅವರಿಗೆ ಹುಟ್ಟಿದ ಮಗ ಓಸೆರಿಸ್‌ ಇದ್ದರು.

6. (1) ತ್ರಿಯೇಕ ಅಂದರೇನು? (2) ಅಂಥ ಸುಳ್ಳು ಬೋಧನೆಯಿಂದ ನಾವು ಮೋಸಹೋಗಿಲ್ಲ ಏಕೆ?

6 ತ್ರಿಯೇಕ ನಂಬಿಕೆ ಕ್ರೈಸ್ತ ಪ್ರಪಂಚದಲ್ಲೂ ಬೇರುಬಿಟ್ಟಿದೆ. ತಂದೆ, ಮಗ, ಪವಿತ್ರಾತ್ಮ ಮೂವರು ಸೇರಿ ಒಂದು ದೇವರೆಂದು ಪಾದ್ರಿಗಳು ಬೋಧಿಸುತ್ತಾರೆ. ಆದರೆ ಈ ಬೋಧನೆ ಯೆಹೋವ ದೇವರ ಪರಮಾಧಿಕಾರಕ್ಕೆ ಧಕ್ಕೆ ತರುತ್ತದೆ. ಏಕೆಂದರೆ ಅದು ಯೆಹೋವನನ್ನು ಸರ್ವೋನ್ನತ ದೇವರೆಂದಲ್ಲ ತ್ರಿಯೇಕ ದೇವರ ಕೇವಲ ಒಂದು ಭಾಗವಾಗಿ ಚಿತ್ರಿಸುತ್ತದೆ. ಯೆಹೋವನ ಜನರಾದರೋ ಇಂಥ ಬೋಧನೆಯಿಂದ ಮೋಸಹೋಗಿಲ್ಲ. ಏಕೆಂದರೆ ಅವರು ಬೈಬಲಿನಲ್ಲಿರುವ ಈ ಮಾತನ್ನು ಒಪ್ಪುತ್ತಾರೆ: “ಇಸ್ರಾಯೇಲ್ಯರೇ, ಕೇಳಿರಿ; ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು.” (ಧರ್ಮೋ. 6:⁠4) ಇದೇ ಮಾತನ್ನು ಯೇಸು ಕೂಡ ಉಲ್ಲೇಖಿಸಿದನು. ಸತ್ಯ ಕ್ರೈಸ್ತರಲ್ಲಿ ಯಾರಾದರೂ ಯೇಸುವಿನ ಆ ಮಾತನ್ನು ತಳ್ಳಿಹಾಕಲಿಕ್ಕೆ ಸಾಧ್ಯವೇ?​—⁠ಮಾರ್ಕ 12:⁠29.

7. ತ್ರಿಯೇಕವನ್ನು ನಂಬುವ ವ್ಯಕ್ತಿ ದೀಕ್ಷಾಸ್ನಾನ ಹೊಂದಲು ಸಾಧ್ಯವಿಲ್ಲವೇಕೆ?

7 ಯೇಸು ತನ್ನ ಹಿಂಬಾಲಕರಿಗೆ, “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ” ಎಂದು ಆಜ್ಞೆ ಕೊಟ್ಟನು. (ಮತ್ತಾ. 28:19) ತ್ರಿಯೇಕ ಬೋಧನೆಯು ಈ ಆಜ್ಞೆಗೆ ಪೂರಾ ವಿರುದ್ಧವಾಗಿದೆ. ಒಬ್ಬ ವ್ಯಕ್ತಿ ನಿಜ ಕ್ರೈಸ್ತನಾಗಿ ಮತ್ತು ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಹೊಂದಬೇಕಾದರೆ ತಂದೆಯಾದ ಯೆಹೋವನ ಸರ್ವಶ್ರೇಷ್ಠ ಸ್ಥಾನವನ್ನು ಅಂಗೀಕರಿಸಬೇಕು. ದೇವರ ಮಗನಾದ ಯೇಸುವಿನ ಸ್ಥಾನ ಮತ್ತು ಅಧಿಕಾರವನ್ನು ಒಪ್ಪಿಕೊಳ್ಳಬೇಕು. ಪವಿತ್ರಾತ್ಮವು ತ್ರಿಯೇಕದ ಭಾಗವಲ್ಲ, ದೇವರ ಕ್ರಿಯಾಶೀಲ ಶಕ್ತಿಯಾಗಿದೆ ಎಂದು ನಂಬಬೇಕು. (ಅ. ಕಾ. 2:​1-4) ತ್ರಿಯೇಕವನ್ನು ನಂಬುವ ವ್ಯಕ್ತಿ ದೀಕ್ಷಾಸ್ನಾನ ಹೊಂದಲು ಸಾಧ್ಯವಿಲ್ಲ. ಏಕೆಂದರೆ ಅವನ ಸಮರ್ಪಣೆಯನ್ನು ಯೆಹೋವನು ಸ್ವೀಕರಿಸುವುದಿಲ್ಲ. ಆದರೆ ನಾವು ಆಧ್ಯಾತ್ಮಿಕ ಸ್ವತ್ತಾಗಿ ಪಡೆದಿರುವ ಬೈಬಲ್‌ ಸತ್ಯವು ದೇವರಿಗೆ ಅಗೌರವ ತರುವ ಇಂಥ ಬೋಧನೆಯನ್ನು ನಂಬದಂತೆ ನಮ್ಮನ್ನು ಕಾಪಾಡಿದೆ. ಇದಕ್ಕಾಗಿ ನಾವು ನಿಜಕ್ಕೂ ಆಭಾರಿಗಳು!

ಪ್ರೇತವ್ಯವಹಾರ ತಲೆಯೆತ್ತಿತು

8. ದೇವರುಗಳ ಮತ್ತು ದೆವ್ವಗಳ ಬಗ್ಗೆ ಬಾಬೆಲಿನವರಿಗೆ ಯಾವ ನಂಬಿಕೆಯಿತ್ತು?

8 ಬಾಬೆಲಿನ ಜನರಿಗೆ ಸುಳ್ಳು ಬೋಧನೆಗಳಲ್ಲಿ, ದೇವ-ದೇವತೆ, ದೆವ್ವಗಳಲ್ಲಿ ಮತ್ತು ಪ್ರೇತಾತ್ಮವಾದದಲ್ಲಿ ತುಂಬ ನಂಬಿಕೆಯಿತ್ತು. ಒಂದು ವಿಶ್ವಕೋಶ ಹೇಳುವಂತೆ “ಬಾಬೆಲಿನವರ ಧರ್ಮದಲ್ಲಿ ದೇವರ ನಂತರ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದದ್ದು ದೆವ್ವಗಳಿಗೆ. ಮಾನವನ ಮೈಮನಸ್ಸನ್ನು ನಾನಾ ರೋಗಗಳಿಂದ ಬಾಧಿಸುವ ಶಕ್ತಿ ದೆವ್ವಗಳಿಗಿದೆಯೆಂದು ಅವರು ನಂಬುತ್ತಿದ್ದರು. ಬಹುತೇಕ ಜನರು ಈ ದೆವ್ವಗಳಿಂದಾಗಿ ವೇದನೆಯಲ್ಲಿ ನರಳುತ್ತಿದ್ದರು. ದೆವ್ವಗಳಿಂದ ತಮ್ಮನ್ನು ರಕ್ಷಿಸುವಂತೆ ಎಲ್ಲೆಡೆ ಜನರು ನಾನಾ ದೇವರುಗಳ ಮೊರೆಹೋಗುತ್ತಿದ್ದರು.”​—⁠ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲಪೀಡಿಯ.

9. (1) ಬಾಬೆಲಿಗೆ ಗಡಿಪಾರಾದ ಬಳಿಕ ಅನೇಕ ಯೆಹೂದ್ಯರು ಸುಳ್ಳು ಬೋಧನೆಗಳ ಪಾಶಕ್ಕೆ ಬಲಿಯಾದದ್ದು ಹೇಗೆ? (2) ಪ್ರೇತಾತ್ಮವಾದದಿಂದ ಬರುವ ಅಪಾಯಗಳಿಂದ ನಾವು ಹೇಗೆ ಸಂರಕ್ಷಿಸಲ್ಪಟ್ಟಿದ್ದೇವೆ?

9 ಬಾಬೆಲಿನಲ್ಲಿದ್ದಾಗ ಅನೇಕ ಯೆಹೂದ್ಯರು ಸುಳ್ಳು ಬೋಧನೆಗಳ ಪ್ರಭಾವಕ್ಕೆ ಒಳಗಾದರು. ಸಮಯಾನಂತರ ಅನೇಕ ಯೆಹೂದ್ಯರು ತಮಗೆ ದೆವ್ವಗಳು ಕೆಟ್ಟದ್ದನ್ನು ಇಲ್ಲವೆ ಒಳ್ಳೇದನ್ನು ಮಾಡಬಲ್ಲವು ಎಂಬ ಗ್ರೀಕ್‌ ಬೋಧನೆಯನ್ನು ನಂಬತೊಡಗಿದರು. ಆದರೆ ನಮಗೆ ಗೊತ್ತಿದೆ ಏನೆಂದರೆ ಪ್ರೇತವ್ಯವಹಾರವು ನಮಗೆ ಅಪಾಯಕರ ಮಾತ್ರವಲ್ಲ ದೇವರು ಅದನ್ನು ದ್ವೇಷಿಸುತ್ತಾನೆ. ಈ ಸತ್ಯವು ನಮ್ಮ ಆಧ್ಯಾತ್ಮಿಕ ಸ್ವತ್ತಿನ ಭಾಗವಾಗಿದೆ. (ಯೆಶಾ. 47:​1, 12-15) ಯೆಹೋವನ ದೃಷ್ಟಿಕೋನವನ್ನು ನಾವು ತಿಳಿದು ಪ್ರೇತವ್ಯವಹಾರವನ್ನು ತೊರೆದಿರುವುದು ನಮ್ಮನ್ನು ಸುರಕ್ಷಿತವಾಗಿರಿಸಿದೆ.​ಧರ್ಮೋಪದೇಶಕಾಂಡ 18:​10-12; ಪ್ರಕಟನೆ 21:8 ಓದಿ.

10. ಮಹಾ ಬಾಬೆಲಿನ ನಂಬಿಕೆಗಳ ಮತ್ತು ಕೃತ್ಯಗಳ ಮೂಲ ಯಾವುದು?

10 ಪ್ರಾಚೀನ ಬಾಬೆಲಿನ ಜನರಂತೆ ಇಂದು ಮಹಾ ಬಾಬೆಲಿನ ಬೆಂಬಲಿಗರು ಕೂಡ ಪ್ರೇತವ್ಯವಹಾರದಲ್ಲಿ ನಂಬಿಕೆಯಿಡುತ್ತಾರೆ. ಲೋಕದಲ್ಲಿರುವ ಎಲ್ಲ ಸುಳ್ಳು ಧರ್ಮಗಳನ್ನು ಒಟ್ಟಾಗಿ ಬೈಬಲಿನಲ್ಲಿ ‘ಮಹಾ ಬಾಬೆಲ್‌’ ಎಂದು ಕರೆಯಲಾಗಿದೆ. (ಪ್ರಕ. 18:​21-24) “[ಮಹಾ] ಬಾಬೆಲ್‌ ಒಂದು ಸಾಮ್ರಾಜ್ಯವನ್ನಾಗಲಿ ಸಂಸ್ಕೃತಿಯನ್ನಾಗಲಿ ಸೂಚಿಸುವುದಿಲ್ಲ. ಭೌಗೋಳಿಕ ಅಥವಾ ಕಾಲದ ಗಡಿರೇಖೆ ಅದಕ್ಕಿಲ್ಲ. ಎಲ್ಲ ಪ್ರಧಾನ ವಿಗ್ರಹಾರಾಧಕ ಧರ್ಮಗಳನ್ನು ಅದು ಸೂಚಿಸುತ್ತದೆ” ಎನ್ನುತ್ತದೆ ಒಂದು ಪುಸ್ತಕ. (ದಿ ಇಂಟರ್‌ಪ್ರಿಟರ್ಸ್‌ ಡಿಕ್ಷನರಿ ಆಫ್‌ ದ ಬೈಬಲ್‌ ಸಂಪುಟ 1, ಪುಟ 338) ಪ್ರೇತವ್ಯವಹಾರ, ವಿಗ್ರಹಾರಾಧನೆ ಮತ್ತಿತರ ಪಾಪಕೃತ್ಯಗಳನ್ನು ಮಾಡುತ್ತ ಮಹಾ ಬಾಬೆಲ್‌ ಇನ್ನೂ ಅಸ್ತಿತ್ವದಲ್ಲಿದೆಯಾದರೂ ಅದು ಹೆಚ್ಚು ಸಮಯ ಜೀವಂತವಾಗಿರದು.​ಪ್ರಕಟನೆ 18:​1-5 ಓದಿ.

11. ಪ್ರೇತವ್ಯವಹಾರದ ಕುರಿತು ನಮ್ಮ ಪ್ರಕಾಶನದಲ್ಲಿ ಯಾವ ಎಚ್ಚರಿಕೆಗಳನ್ನು ಕೊಡಲಾಗಿದೆ?

11 “ಅಧರ್ಮದಿಂದ [ಅಲೌಕಿಕ ಶಕ್ತಿಯಿಂದ, NW] ಕೂಡಿದ ಸಂಘವನ್ನು ನಾನು ಸಹಿಸಲಾರೆನು” ಎಂದು ಯೆಹೋವನು ಹೇಳಿದ್ದಾನೆ. (ಯೆಶಾ. 1:13) ಪ್ರೇತಸಂಪರ್ಕವು 19ನೇ ಶತಮಾನದಲ್ಲಿ ವ್ಯಾಪಕವಾಗಿತ್ತು. ಮೇ 1885ರ ಝಯನ್ಸ್‌ ವಾಚ್‌ ಟವರ್‌ ಹೀಗಂದಿತು: “ಸತ್ತವರು ಬೇರೊಂದು ಲೋಕದಲ್ಲಿರುತ್ತಾರೆ ಅಥವಾ ಬದುಕಿರುತ್ತಾರೆ ಎಂಬ ವಿಚಾರ ಹೊಸದೇನಲ್ಲ. ಪ್ರಾಚೀನ ಧರ್ಮಗಳಲ್ಲೂ ಅಂಥ ನಂಬಿಕೆಗಳಿದ್ದವು. ಅವು ಹುಟ್ಟಿಬಂದದ್ದು ಪುರಾಣ ಕಥೆಗಳಿಂದ.” ಮೃತರು ಬದುಕಿರುವವರೊಂದಿಗೆ ಮಾತಾಡುತ್ತಾರೆಂಬ ಬೈಬಲ್‌ ಆಧಾರವಿಲ್ಲದ ನಂಬಿಕೆಯಿಂದಾಗಿ “ದೆವ್ವಗಳು ಸತ್ತವರ ಆತ್ಮದಂತೆ ನಟಿಸುತ್ತಾ ತೆರೆಮರೆಯಲ್ಲಿದ್ದು ತಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳಲು ಇನ್ನೂ ಸುಲಭವಾಯಿತು. ತಮ್ಮ ನಿಜಸ್ವರೂಪವನ್ನು ಮರೆಮಾಡುವ ಈ ವಿಧಾನದ ಮೂಲಕ ದೆವ್ವಗಳು ಬಹು ಜನರ ಮನಸ್ಸು ಮತ್ತು ಬದುಕಿನ ಮೇಲೆ ಪ್ರಭಾವಬೀರುತ್ತಾ ಇವೆ” ಎಂದು ಸಹ ಆ ಪತ್ರಿಕೆ ತಿಳಿಸಿತು. ಆರಂಭದಲ್ಲಿ ಹೊರತರಲಾದ, ಪ್ರೇತವ್ಯವಹಾರದ ಸಂಬಂಧದಲ್ಲಿ ಬೈಬಲ್‌ ಏನು ಹೇಳುತ್ತದೆ? (ಇಂಗ್ಲಿಷ್‌) ಎಂಬ ಕಿರುಪುಸ್ತಿಕೆಯಲ್ಲಿ ಈ ವಿಷಯದ ಬಗ್ಗೆ ಎಚ್ಚರಿಕೆಯಿತ್ತು. ಇತ್ತೀಚಿನ ನಮ್ಮ ಪ್ರಕಾಶನಗಳು ಕೂಡ ಅಂಥ ಎಚ್ಚರಿಕೆಗಳನ್ನು ಕೊಡುತ್ತಿವೆ.

ಆತ್ಮಗಳು ಅಧೋಲೋಕದಲ್ಲಿ ನರಳುತ್ತಿವೆಯೇ?

12. ಸತ್ತವರ ಸ್ಥಿತಿಯ ಕುರಿತು ಸೊಲೊಮೋನನು ದೇವಪ್ರೇರಣೆಯಿಂದ ಏನು ಹೇಳಿದನು?

12 ಈ ಪ್ರಶ್ನೆಗೆ ಉತ್ತರ ‘ಸತ್ಯವನ್ನು ತಿಳಿದುಕೊಂಡಿರುವವರೆಲ್ಲರಿಗೂ’ ಗೊತ್ತಿದೆ. (2 ಯೋಹಾ. 1) ಸೊಲೊಮೋನ ಬರೆದದ್ದು: “ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು. ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; . . . ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ [ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿ] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”​—⁠ಪ್ರಸಂ. 9:​4, 5, 10.

13. ಗ್ರೀಕ್‌ ಧರ್ಮ ಮತ್ತು ಸಂಸ್ಕೃತಿಯು ಯೆಹೂದ್ಯರ ಮೇಲೆ ಹೇಗೆ ಪ್ರಭಾವಬೀರಿತು?

13 ಸತ್ತವರ ಸ್ಥಿತಿಯ ಕುರಿತ ಸತ್ಯ ಯೆಹೂದ್ಯರಿಗೆ ತಿಳಿದಿತ್ತು. ಆದರೆ ಗ್ರೀಸ್‌ ಸಾಮ್ರಾಜ್ಯವು ಮಹಾ ಅಲೆಗ್ಸಾಂಡರ್‌ನ ಸೇನಾಪತಿಗಳಿಗೆ ಹಂಚಿಹೋದಾಗ ಸನ್ನಿವೇಶ ಬದಲಾಯಿತು. ಗ್ರೀಕ್‌ ಧರ್ಮ ಮತ್ತು ಸಂಸ್ಕೃತಿಯನ್ನು ಜನರು ಸ್ವೀಕರಿಸುವಂತೆ ಒತ್ತಡಹೇರುವ ಮೂಲಕ ಯೆಹೂದ ಮತ್ತು ಸಿರಿಯವನ್ನು ಒಟ್ಟುಸೇರಿಸಲು ಪ್ರಯತ್ನಿಸಲಾಯಿತು. ಇದರ ಪರಿಣಾಮವಾಗಿ ಆತ್ಮ ಅಮರವಾಗಿದೆ ಮತ್ತು ಅಧೋಲೋಕ ಎಂಬ ಸ್ಥಳವಿದೆ, ಅಲ್ಲಿ ಚಿತ್ರಹಿಂಸೆ ಕೊಡಲಾಗುತ್ತದೆ ಎಂಬ ಸುಳ್ಳು ಬೋಧನೆಗಳನ್ನು ಯೆಹೂದ್ಯರು ಸ್ವೀಕರಿಸಿದರು. ಆದರೆ ಆತ್ಮಗಳು ಅಧೋಲೋಕದಲ್ಲಿ ನರಳುತ್ತವೆ ಎಂಬ ನಂಬಿಕೆ ಮೊದಲು ಹುಟ್ಟಿಕೊಂಡದ್ದು ಗ್ರೀಸ್‌ನಲ್ಲಲ್ಲ, ಬಾಬೆಲ್‌ನಲ್ಲಿಯೇ. ‘ನರಕ ಎನ್ನುವುದು ಅತಿ ಭಯಾನಕವಾದ ಸ್ಥಳ. ಬಲಿಷ್ಠ ದೇವರುಗಳು, ದೆವ್ವಗಳು ಜನರಿಗೆ ಕ್ರೂರ ಹಿಂಸೆ ಕೊಡುತ್ತವೆ’ ಎಂದು ಬಾಬೆಲಿನವರು ನಂಬಿದ್ದರು. (ಬಬಿಲೋನಿಯ ಮತ್ತು ಅಸ್ಸೀರಿಯದ ಧರ್ಮ ಎಂಬ ಪುಸ್ತಕ, ಇಂಗ್ಲಿಷ್‌) ಹಾಗಾಗಿ ‘ಆತ್ಮ ಅಮರ’ ಎಂಬ ನಂಬಿಕೆಯ ಮೂಲ ಬಾಬೆಲ್‌ ಆಗಿದೆ.

14. ಮರಣ ಮತ್ತು ಪುನರುತ್ಥಾನದ ಕುರಿತು ಯೋಬ ಮತ್ತು ಅಬ್ರಹಾಮನಿಗೆ ಏನು ತಿಳಿದಿತ್ತು?

14 ನೀತಿವಂತ ಪುರುಷನಾದ ಯೋಬನ ಬಳಿ ಬೈಬಲ್‌ ಇರಲಿಲ್ಲವಾದರೂ ಸತ್ತ ನಂತರ ಏನಾಗುತ್ತದೆಂದು ಅವನಿಗೆ ಗೊತ್ತಿತ್ತು. ಒಂದುವೇಳೆ ತಾನು ಸತ್ತರೆ ತನ್ನನ್ನು ಪುನರುತ್ಥಾನ ಮಾಡಲು ಪ್ರೀತಿಯ ದೇವರಾದ ಯೆಹೋವನು ಹಂಬಲಿಸುತ್ತಾನೆಂದು ಅವನು ತಿಳಿದಿದ್ದನು. (ಯೋಬ 14:​13-15) ಅಬ್ರಹಾಮನಿಗೂ ಪುನರುತ್ಥಾನದಲ್ಲಿ ನಂಬಿಕೆಯಿತ್ತು. (ಇಬ್ರಿಯ 11:​17-19 ಓದಿ.) ಸಾಯದೇ ಅಮರವಾಗಿರುವ ಒಬ್ಬ ವ್ಯಕ್ತಿಯನ್ನು ಪುನರುತ್ಥಾನ ಮಾಡಲು ಅಸಾಧ್ಯವಾಗಿರುವ ಕಾರಣ ‘ಆತ್ಮ ಅಮರ’ ಎಂಬ ಸುಳ್ಳು ಬೋಧನೆಯನ್ನು ಆ ದೇವಭಕ್ತ ಪುರುಷರು ನಂಬಲಿಲ್ಲ. ಸತ್ತವರ ಸ್ಥಿತಿಯ ಕುರಿತು ಅರ್ಥಮಾಡಿಕೊಳ್ಳಲು ಮತ್ತು ಪುನರುತ್ಥಾನದಲ್ಲಿ ನಂಬಿಕೆಯಿಡಲು ಅಬ್ರಹಾಮ ಮತ್ತು ಯೋಬನಿಗೆ ದೇವರ ಪವಿತ್ರಾತ್ಮವು ಸಹಾಯ ಮಾಡಿತು ಎಂಬುದು ನಿಸ್ಸಂಶಯ. ಈ ಸತ್ಯಗಳು ಕೂಡ ನಾವು ಪರಂಪರೆಯಾಗಿ ಪಡೆದ ಆಧ್ಯಾತ್ಮಿಕ ಸ್ವತ್ತಿನ ಭಾಗವಾಗಿವೆ.

ವಿಮೋಚನಾ ಮೌಲ್ಯದ ಮೂಲಕ ಬಿಡುಗಡೆ’ ನಮಗೆ ಅತ್ಯಗತ್ಯ

15, 16. ಯೆಹೋವನು ನಮ್ಮನ್ನು ಪಾಪ ಮತ್ತು ಮರಣದಿಂದ ಹೇಗೆ ಬಿಡುಗಡೆ ಮಾಡಿದ್ದಾನೆ?

15 ಆದಾಮನಿಂದ ಬಾಧ್ಯತೆಯಾಗಿ ಪಡೆದ ಪಾಪ ಮತ್ತು ಮರಣದಿಂದ ಯೆಹೋವನು ನಮ್ಮನ್ನು ಬಿಡುಗಡೆ ಮಾಡುತ್ತಾನೆ. ಅದನ್ನು ಹೇಗೆ ಮಾಡುತ್ತಾನೆ ಎಂಬುದರ ಸತ್ಯವನ್ನು ಯೆಹೋವನು ತಿಳಿಸಿರುವುದಕ್ಕಾಗಿ ಕೂಡ ನಾವು ಕೃತಜ್ಞರು. (ರೋಮ. 5:12) ಯೇಸು “ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಸೇವೆಮಾಡುವುದಕ್ಕೂ ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೂ ಬಂದನು” ಎಂದು ನಾವು ತಿಳಿದಿದ್ದೇವೆ. (ಮಾರ್ಕ 10:45) ‘ಕ್ರಿಸ್ತ ಯೇಸು ನೀಡಿದ ವಿಮೋಚನಾ ಮೌಲ್ಯದ ಮೂಲಕ ಬಿಡುಗಡೆಯನ್ನು ಹೊಂದುವ’ ಕುರಿತು ತಿಳಿದಿರುವುದು ಎಷ್ಟೊಂದು ನೆಮ್ಮದಿ ತರುತ್ತದೆ!​—⁠ರೋಮ. 3:​22-24.

16 ಮೊದಲನೇ ಶತಮಾನದಲ್ಲಿ ಯೆಹೂದ್ಯರು ಮತ್ತು ಬೇರೆ ಜನಾಂಗದ ಜನರು ತಮ್ಮ ಪಾಪಗಳಿಗಾಗಿ ದೇವರಿಂದ ಕ್ಷಮೆ ಪಡೆಯಲು ಪಶ್ಚಾತ್ತಾಪಪಡಬೇಕಿತ್ತು ಮತ್ತು ಯೇಸುವಿನ ವಿಮೋಚನಾ ಮೌಲ್ಯದಲ್ಲಿ ನಂಬಿಕೆಯಿಡಬೇಕಿತ್ತು. ನಾವು ಕೂಡ ಪಾಪಗಳಿಗೆ ಕ್ಷಮೆ ಪಡೆಯಲು ಅದನ್ನೇ ಮಾಡಬೇಕು. (ಯೋಹಾ. 3:​16, 36) ತ್ರಿಯೇಕ, ಆತ್ಮದ ಅಮರತ್ವ ಮೊದಲಾದ ಸುಳ್ಳು ಬೋಧನೆಗಳಲ್ಲಿ ನಂಬಿಕೆಯಿಡುವವರು ವಿಮೋಚನಾ ಮೌಲ್ಯದಿಂದ ಪ್ರಯೋಜನ ಹೊಂದಲು ಸಾಧ್ಯವಿಲ್ಲ. ನಾವಾದರೋ ಯಾರ “ವಿಮೋಚನಾ ಮೌಲ್ಯದ ಮೂಲಕ ನಮ್ಮ ಪಾಪಗಳಿಗೆ ಕ್ಷಮಾಪಣೆ” ದೊರೆಯುತ್ತದೋ ಆ ದೇವರ “ಪ್ರೀತಿಯ ಮಗನ” ಕುರಿತು ಸತ್ಯವನ್ನು ತಿಳಿದಿದ್ದೇವೆ. ಹಾಗಾಗಿ ವಿಮೋಚನಾ ಮೌಲ್ಯದಿಂದ ಪ್ರಯೋಜನ ಹೊಂದಬಲ್ಲೆವು.​—⁠ಕೊಲೊ. 1:​13, 14.

ಯೆಹೋವನ ಹೆಸರಿಗಾಗಿರುವ ಜನರಾಗಿ ಮುಂದುವರಿಯಿರಿ

17, 18. (1) ಯೆಹೋವನ ಜನರ ಇತಿಹಾಸದ ಕುರಿತ ಮಾಹಿತಿ ನಮಗೆ ಎಲ್ಲಿ ಸಿಗುತ್ತದೆ? (2) ಅದನ್ನು ತಿಳಿದುಕೊಳ್ಳುವುದರಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?

17 ನಮ್ಮ ಆಧ್ಯಾತ್ಮಿಕ ಸ್ವತ್ತಿನಲ್ಲಿ ಇನ್ನೂ ಅನೇಕ ವಿಷಯಗಳು ಒಳಗೂಡಿವೆ. ದೇವರು ನಮಗೆ ಕಲಿಸಿರುವ ಇತರ ಸತ್ಯ ಬೋಧನೆಗಳು, ದೇವರ ಸೇವಕರಾಗಿ ನಮಗೆ ಸಿಕ್ಕಿರುವ ಅನುಭವಗಳು, ಆಧ್ಯಾತ್ಮಿಕ ಮತ್ತು ಭೌತಿಕ ಆಶೀರ್ವಾದಗಳು ಇತ್ಯಾದಿ. ಭೂಸುತ್ತಲು ನಮ್ಮ ಚಟುವಟಿಕೆಗಳು ಹೇಗೆ ನಡೆಯುತ್ತಿವೆ ಎಂಬುದರ ರೋಮಾಂಚಕ ವರದಿಗಳು ದಶಕಗಳಿಂದ ಯಿಯರ್‌ಬುಕ್‌ನಲ್ಲಿ ಬರುತ್ತಿವೆ. ಯೆಹೋವನ ಸಾಕ್ಷಿಗಳು ಮತ್ತವರ ಸಜೀವ ನಂಬಿಕೆ, ಭಾಗ 1 ಮತ್ತು ಭಾಗ 2 (ಇಂಗ್ಲಿಷ್‌) ವಿಡಿಯೋಗಳ ಮತ್ತು ಯೆಹೋವನ ಸಾಕ್ಷಿಗಳು​—⁠ದೇವರ ರಾಜ್ಯದ ಘೋಷಕರು (ಇಂಗ್ಲಿಷ್‌) ಪುಸ್ತಕದ ಮೂಲಕ ಯೆಹೋವನ ಸಾಕ್ಷಿಗಳ ಇತಿಹಾಸದ ಕುರಿತು ಕಲಿಯಸಾಧ್ಯವಿದೆ. ಮಾತ್ರವಲ್ಲ ನಮ್ಮ ಪತ್ರಿಕೆಗಳಲ್ಲಿ ಆಗಾಗ್ಗೆ ನಮ್ಮ ಪ್ರಿಯ ಜೊತೆ ವಿಶ್ವಾಸಿಗಳು ಹಂಚಿಕೊಂಡಿರುವ ಅನುಭವಗಳನ್ನು ಸಹ ನಾವು ಓದಬಹುದು.

18 ಯೆಹೋವನ ಸಂಘಟನೆಯ ಇತಿಹಾಸವನ್ನು ಪರಿಗಣಿಸುವುದು ತುಂಬ ಉಪಯುಕ್ತ. ಇಸ್ರಾಯೇಲ್ಯರು ಕೂಡ ಈಜಿಪ್ಟ್‌ನ ದಾಸತ್ವದಿಂದ ದೇವರು ತಮ್ಮನ್ನು ಬಿಡುಗಡೆಮಾಡಿದ ವಿಧವನ್ನು ಆಗಾಗ್ಗೆ ಮನಸ್ಸಿಗೆ ತಂದುಕೊಂಡದ್ದರಿಂದ ಪ್ರಯೋಜನ ಪಡೆದರು. (ವಿಮೋ. 12:​26, 27) ದೇವರ ಅದ್ಭುತ ಕಾರ್ಯಗಳನ್ನು ಕಣ್ಣಾರೆ ಕಂಡಿದ್ದ ಮೋಶೆ ಇಸ್ರಾಯೇಲ್ಯರಿಗೆ ಹೀಗೆ ಉತ್ತೇಜಿಸಿದನು: “ಪೂರ್ವಕಾಲವನ್ನು ನೆನಪಿಗೆ ತಂದುಕೊಳ್ಳಿರಿ; ಪೂರ್ವಿಕರ ಚರಿತ್ರೆಯನ್ನು ಆಲೋಚಿಸಿರಿ. ನಿಮ್ಮ ನಿಮ್ಮ ತಂದೆಗಳನ್ನು ವಿಚಾರಿಸಿದರೆ ಅವರು ತಿಳಿಸುವರು; ಹಿರಿಯರನ್ನು ಕೇಳಿದರೆ ಅವರು ವಿವರಿಸುವರು.” (ಧರ್ಮೋ. 32:⁠7) ‘ಯೆಹೋವನ ಪ್ರಜೆಯೂ ಆತನು ಪಾಲಿಸುವ ಮಂದೆಯೂ ಆಗಿರುವ’ ನಾವು ಹರ್ಷದಿಂದ ಆತನ ಮಹತ್ತನ್ನು ವರ್ಣಿಸುತ್ತಾ ಇರೋಣ, ಆತನ ಮಹತ್ಕಾರ್ಯಗಳನ್ನು ಎಲ್ಲರಿಗೆ ಪ್ರಕಟಿಸೋಣ. (ಕೀರ್ತ. 79:13) ಯೆಹೋವನ ಜನರ ಇತಿಹಾಸವನ್ನು ಓದಿ, ತಿಳಿದು, ಯೆಹೋವನ ಸೇವೆ ಮಾಡುತ್ತಾ ಮುಂದುವರಿಯಲು ಯೋಜನೆಗಳನ್ನು ಮಾಡೋಣ.

19. ನಾವು ಆಧ್ಯಾತ್ಮಿಕ ಬೆಳಕಿನಲ್ಲಿ ನಡೆಯುತ್ತಿರುವುದರಿಂದ ಏನು ಮಾಡಬೇಕು?

19 ನಾವು ಕತ್ತಲೆಯಲ್ಲಿ ತಡಕಾಡುತ್ತ ನಡೆಯದೆ ದೇವರು ಒದಗಿಸಿರುವ ಆಧ್ಯಾತ್ಮಿಕ ಬೆಳಕಿನಲ್ಲಿ ನಡೆಯುತ್ತಿರುವುದಕ್ಕಾಗಿ ತುಂಬ ಆಭಾರಿಗಳು. (ಜ್ಞಾನೋ. 4:​18, 19) ಆದ್ದರಿಂದ ನಾವು ಶ್ರದ್ಧೆಯಿಂದ ದೇವರ ವಾಕ್ಯವನ್ನು ಅಧ್ಯಯನ ಮಾಡೋಣ. ಸತ್ಯವನ್ನು ಇತರರಿಗೆ ಹುರುಪಿನಿಂದ ಸಾರೋಣ. ಕೀರ್ತನೆಗಾರನಿಗಿದ್ದ ಭಾವನೆ ನಮ್ಮಲ್ಲೂ ಹೊಮ್ಮಲಿ: “ನಿನ್ನೊಬ್ಬನ ನೀತಿಯನ್ನೇ ಪ್ರಕಟಪಡಿಸುವೆನು. ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ; ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ. ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.”​—⁠ಕೀರ್ತ. 71:​16-18.

20. (1) ಯಾವ ವಿವಾದಾಂಶಗಳು ಎದ್ದಿವೆ? (2) ಆ ವಿವಾದಾಂಶಗಳ ಬಗ್ಗೆ ನಿಮಗೆ ಹೇಗನಿಸುತ್ತದೆ?

20 ಯೆಹೋವನ ಸಮರ್ಪಿತ ಜನರಾದ ನಾವು ಆತನ ಪರಮಾಧಿಕಾರದ ವಿಷಯದಲ್ಲಿ ಹಾಗೂ ಮಾನವನ ಸಮಗ್ರತೆಯ ವಿಷಯದಲ್ಲಿ ಎದ್ದಿರುವ ವಿವಾದಾಂಶವನ್ನು ಅರಿತಿದ್ದೇವೆ. ಅಷ್ಟೇ ಅಲ್ಲ ಯೆಹೋವನೇ ವಿಶ್ವದ ಪರಮಾಧಿಕಾರಿ, ನಮ್ಮ ಹೃತ್ಪೂರ್ವಕ ಭಕ್ತಿಗೆ ಆತನು ಮಾತ್ರ ಅರ್ಹನು ಎಂಬ ಅಲ್ಲಗಳೆಯಲಾಗದ ಸತ್ಯವೂ ನಮಗೆ ತಿಳಿದಿದೆ ಮತ್ತು ಅದನ್ನು ಎಲ್ಲರಿಗೆ ಸಾರಿಹೇಳುತ್ತೇವೆ. (ಪ್ರಕ. 4:11) ಯೆಹೋವನ ಆತ್ಮವು ನಮ್ಮ ಮೇಲಿರುವುದರಿಂದ ನಾವು ಬಡವರಿಗೆ ಶುಭವರ್ತಮಾನವನ್ನು ಸಹ ಸಾರುತ್ತೇವೆ, ಮನಮುರಿದವರನ್ನು ಕಟ್ಟಿ ವಾಸಿಮಾಡುತ್ತೇವೆ. ದುಃಖಿತರೆಲ್ಲರನ್ನು ಸಂತೈಸುತ್ತೇವೆ. (ಯೆಶಾ. 61:​1, 2) ದೇವಜನರ ಮತ್ತು ಮಾನವರೆಲ್ಲರ ಮೇಲೆ ಆಳ್ವಿಕೆ ನಡೆಸಲು ಸೈತಾನನು ವಿಫಲ ಪ್ರಯತ್ನ ನಡೆಸುತ್ತಿರುವುದಾದರೂ ನಾವು ನಮ್ಮ ಆಧ್ಯಾತ್ಮಿಕ ಪರಂಪರೆಯನ್ನು ಆಳವಾಗಿ ಗಣ್ಯಮಾಡುತ್ತಾ ಯೆಹೋವನಿಗೆ ಸಮಗ್ರತೆ ಕಾಪಾಡಿಕೊಳ್ಳಲು ಮತ್ತು ಆತನನ್ನು ಎಂದೆಂದಿಗೂ ಕೊಂಡಾಡಲು ದೃಢನಿಶ್ಚಯದಿಂದಿದ್ದೇವೆ.​ಕೀರ್ತನೆ 26:11; 86:12 ಓದಿ.

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರ]

[ಪುಟ 11ರಲ್ಲಿರುವ ಚೌಕ]

ಸುಳ್ಳು ಬೋಧನೆಗಳಿಂದ ಮೋಸಹೋಗದಂತೆ ನಾವು ಹೇಗೆ ಸಂರಕ್ಷಿಸಲ್ಪಟ್ಟಿದ್ದೇವೆ?

“ಇಸ್ರಾಯೇಲ್ಯರೇ, ಕೇಳಿರಿ; ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು.”​—⁠ಧರ್ಮೋ. 6:4

“ಅಲೌಕಿಕ ಶಕ್ತಿಯಿಂದ ಕೂಡಿದ ಸಂಘವನ್ನು ನಾನು ಸಹಿಸಲಾರೆ.”​—⁠ಯೆಶಾ. 1:13, NW

“ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.”​—⁠ಪ್ರಸಂ. 9:​5, 10

[ಚಿತ್ರ]

[ಚಿತ್ರ]

[ಚಿತ್ರ]