ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ದೇವರನ್ನು ತಿಳಿದುಕೊಂಡ’ ಮೇಲೆ ಮುಂದೇನು?

‘ದೇವರನ್ನು ತಿಳಿದುಕೊಂಡ’ ಮೇಲೆ ಮುಂದೇನು?

‘ದೇವರನ್ನು ತಿಳಿದುಕೊಂಡ’ ಮೇಲೆ ಮುಂದೇನು?

‘ನೀವು ದೇವರನ್ನು ತಿಳಿದುಕೊಂಡಿದ್ದೀರಿ.’—ಗಲಾ. 4:9.

ನಿಮ್ಮ ಉತ್ತರವೇನು?

ಆಧ್ಯಾತ್ಮಿಕ ಪರಿಶೀಲನಾ ಪಟ್ಟಿಯನ್ನು ಆಗಾಗ ಪರೀಕ್ಷಿಸುವುದು ಒಳ್ಳೆಯದೇಕೆ?

ಆಧ್ಯಾತ್ಮಿಕವಾಗಿ ಪ್ರೌಢರಾಗಿರುವವರು ಸಹ ಪ್ರಗತಿ ಮಾಡುತ್ತಾ ಇರಬೇಕು ಏಕೆ?

ನಮ್ಮ ನಂಬಿಕೆ ಎಷ್ಟು ಬಲವಾಗಿದೆ ಎಂದು ಯೋಚಿಸುವುದು ಮತ್ತು ನಮ್ಮ ಸಮರ್ಪಣೆಯನ್ನು ಜ್ಞಾಪಿಸಿಕೊಳ್ಳುವುದು ಏಕೆ ಪ್ರಾಮುಖ್ಯ?

1. ವಿಮಾನ ಹಾರಿಸುವುದಕ್ಕಿಂತ ಮುಂಚೆ ಚಾಲಕರು ಪರಿಶೀಲನಾ ಪಟ್ಟಿಯನ್ನು ಏಕೆ ಜಾಗ್ರತೆಯಿಂದ ಗಮನಿಸಬೇಕು?

ಜಗತ್ತಿನ ಅತ್ಯುತ್ತಮ ವಿಮಾನಗಳ ಚಾಲಕರಿಗೆ ವಿಮಾನಯಾನಕ್ಕೆ ಮುಂಚೆ ಒಂದು ಪರಿಶೀಲನಾ ಪಟ್ಟಿಯನ್ನು ಕೊಡಲಾಗುತ್ತದೆ. ಅದರಲ್ಲಿ 30ಕ್ಕೂ ಹೆಚ್ಚು ವಿಷಯಗಳಿರುತ್ತವೆ. ಪ್ರತಿಸಲ ವಿಮಾನ ಹಾರಿಸುವ ಮುಂಚೆ ಆ ಎಲ್ಲ ವಿಷಯಗಳು ಸರಿಯಾಗಿವೆಯಾ ಎಂದು ಜಾಗ್ರತೆಯಿಂದ ನೋಡಿ ಚಾಲಕರು ಪಟ್ಟಿಯಲ್ಲಿ ಗುರುತು ಹಾಕಬೇಕು. ಒಂದುವೇಳೆ ಅಲಕ್ಷಿಸಿ ಹಾಗೆಯೇ ವಿಮಾನ ಉಡಾಯಿಸಿದರೆ ದುರಂತ ಸಂಭವಿಸುವ ಅಪಾಯ ಜಾಸ್ತಿ. ನಿಮಗೆ ಗೊತ್ತಾ, ಈ ಪಟ್ಟಿಯನ್ನು ಮರೆಯದೆ ಪೂರ್ಣವಾಗಿ ಪರೀಕ್ಷಿಸುವಂತೆ ಯಾರಿಗೆ ಹೇಳುತ್ತಾರೆ ಅಂತ? ಅನುಭವಿ ವಿಮಾನಚಾಲಕರಿಗೆ! ಏಕೆಂದರೆ ಅನುಭವಿ ಚಾಲಕರೇ ಈ ಪಟ್ಟಿಯಲ್ಲಿರುವ ಎಲ್ಲ ವಿಷಯಗಳನ್ನು ಪರಿಶೀಲಿಸಲು ತಪ್ಪಿಹೋಗುವುದು ಹೆಚ್ಚು.

2. ಕ್ರೈಸ್ತರು ಯಾವ ಪರಿಶೀಲನಾ ಪಟ್ಟಿಯನ್ನು ಜಾಗ್ರತೆಯಿಂದ ಪರೀಕ್ಷಿಸಬೇಕು?

2 ಸುರಕ್ಷತೆ ಕುರಿತು ಚಿಂತಿಸುವ ವಿಮಾನಚಾಲಕನು ಪರಿಶೀಲನಾ ಪಟ್ಟಿಯನ್ನು ಗಮನಿಸುವಂತೆಯೇ ನಾವು ಒಂದು ಆಧ್ಯಾತ್ಮಿಕ ಪಟ್ಟಿಯನ್ನು ಜಾಗ್ರತೆಯಿಂದ ಪರಿಶೀಲಿಸಬೇಕು. ಹಾಗೆ ಮಾಡಿದರೆ ಕಷ್ಟಕರ ಸಂದರ್ಭಗಳಲ್ಲೂ ಬಲವಾದ ನಂಬಿಕೆಯನ್ನು ತೋರಿಸಲು ಆಗುತ್ತದೆ. ನಿಮಗೆ ದೀಕ್ಷಾಸ್ನಾನವಾಗಿ ಕೆಲವೇ ದಿನಗಳಾಗಿರಲಿ, ವರ್ಷಗಳೇ ಆಗಿರಲಿ ಈ ಪರಿಶೀಲನೆಯನ್ನು ಮಾಡಬೇಕು. ಯೆಹೋವ ದೇವರ ಕಡೆಗಿನ ನಿಮ್ಮ ನಂಬಿಕೆ ಮತ್ತು ಭಕ್ತಿ ಎಷ್ಟು ಆಳವಾಗಿದೆ ಎಂದು ಮತ್ತೆ ಮತ್ತೆ ಜಾಗ್ರತೆಯಿಂದ ಪರೀಕ್ಷಿಸುತ್ತಿರಬೇಕು. ಹಾಗೆ ಮಾಡದೆ ಇದ್ದಲ್ಲಿ ನೀವು ಆಧ್ಯಾತ್ಮಿಕವಾಗಿ ದುರಂತಕ್ಕೆ ಒಳಗಾಗಬಹುದು. ಅದಕ್ಕೆ ಅಲ್ಲವೇ ಬೈಬಲ್‌ ನಮಗೆ ಹೇಳುವುದು, “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರವಾಗಿರಲಿ” ಎಂದು.—1 ಕೊರಿಂ. 10:12.

3. ಗಲಾತ್ಯದ ಕ್ರೈಸ್ತರು ಏನು ಮಾಡಬೇಕಿತ್ತು?

3 ಗಲಾತ್ಯ ಸಭೆಯವರು ತಮಗೆ ಸಿಕ್ಕಿರುವ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಗಣ್ಯಮಾಡಿ ತಮ್ಮ ನಂಬಿಕೆ ಎಷ್ಟು ಬಲವಾಗಿದೆ ಎಂದು ಪರೀಕ್ಷಿಸಿಕೊಳ್ಳಬೇಕಿತ್ತು. ಯೇಸುವಿನ ಯಜ್ಞದಲ್ಲಿ ನಂಬಿಕೆಯಿಡುವ ಮೂಲಕ ಅವರು ಯೆಹೋವನೊಂದಿಗೆ ಒಂದು ವಿಶೇಷ ಸಂಬಂಧದಲ್ಲಿ ಆನಂದಿಸಬಹುದಿತ್ತು. ಅದು ದೇವರ ಪುತ್ರರಾಗುವುದೇ. (ಗಲಾ. 4:9) ಈ ವಿಶೇಷ ಸಂಬಂಧದಲ್ಲಿ ಭಾಗಿಗಳಾಗಲು ಅವರು ಯೆಹೂದಿ ಸಂಪ್ರದಾಯಗಳನ್ನು ತೊರೆಯಬೇಕಿತ್ತು. ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಿದರೆ ಮಾತ್ರ ಕ್ರೈಸ್ತರು ನಂಬಿಗಸ್ತರು ಎಂಬ ಭಾವನೆ ಸಭೆಯಲ್ಲಿನ ಕೆಲವು ಯೆಹೂದ್ಯರಲ್ಲಿತ್ತು. ಆದರೆ ಯಾವತ್ತೂ ಧರ್ಮಶಾಸ್ತ್ರವನ್ನು ಅನುಸರಿಸದ ಅನ್ಯಜನರು ಸಹ ಸಭೆಯ ಭಾಗವಾಗಿದ್ದರು. ಹಾಗಾಗಿ ಯೆಹೂದ್ಯರೂ ಅನ್ಯಜನಾಂಗದವರೂ ಆಧ್ಯಾತ್ಮಿಕ ಪ್ರಗತಿ ಮಾಡಬೇಕಿತ್ತು. ದೇವರಿಗೆ ನಂಬಿಗಸ್ತರಾಗಿರಲು ಧರ್ಮಶಾಸ್ತ್ರವನ್ನು ಅನುಸರಿಸುವ ಅಗತ್ಯವಿಲ್ಲವೆಂದು ಒಪ್ಪಿಕೊಳ್ಳಬೇಕಿತ್ತು.

ದೇವರನ್ನು ತಿಳಿದುಕೊಳ್ಳಲು ಆರಂಭದ ಹೆಜ್ಜೆಗಳು

4, 5. (1) ಪೌಲನು ಗಲಾತ್ಯ ಸಭೆಯವರಿಗೆ ಯಾವ ಸಲಹೆ ಕೊಟ್ಟನು? (2) ಆ ಸಲಹೆ ನಮಗೆ ಹೇಗೆ ಅನ್ವಯಿಸುತ್ತದೆ?

4 ಅಪೊಸ್ತಲ ಪೌಲನು ಗಲಾತ್ಯದವರಿಗೆ ಕೊಟ್ಟ ಸಲಹೆಯನ್ನು ಬೈಬಲಿನಲ್ಲಿ ದಾಖಲಿಸಿರುವುದರ ಹಿಂದೆ ಪ್ರಮುಖ ಉದ್ದೇಶವಿದೆ. ನಿಜ ಕ್ರೈಸ್ತರು ಬೈಬಲಿನ ಅಮೂಲ್ಯ ಸತ್ಯಕ್ಕೆ ಬೆನ್ನುಹಾಕಿ, ಬಿಟ್ಟುಬಂದ ವಿಷಯಗಳಿಗೆ ಮರಳಿಹೋಗದಂತೆ ಎಚ್ಚರಿಸುವುದೇ ಆ ಉದ್ದೇಶ. ಅಪೊಸ್ತಲ ಪೌಲನು ಈ ಸಲಹೆ ಕೊಡುವಂತೆ ಯೆಹೋವನು ಪ್ರೇರಿಸಿದ್ದು ಕೇವಲ ಗಲಾತ್ಯ ಸಭೆಯವರನ್ನು ಪೋತ್ಸಾಹಿಸಲಿಕ್ಕಲ್ಲ, ತನ್ನ ಎಲ್ಲ ಆರಾಧಕರು ಕೊನೆವರೆಗೂ ನಂಬಿಗಸ್ತರಾಗಿ ಉಳಿಯಲು ಸಹಾಯವಾಗಲೆಂದೇ.

5 ನಾವು ಹೇಗೆ ಆಧ್ಯಾತ್ಮಿಕ ದಾಸತ್ವದಿಂದ ಬಿಡುಗಡೆಹೊಂದಿ ಯೆಹೋವನ ಸಾಕ್ಷಿಯಾದೆವು ಎಂಬುದನ್ನು ನೆನಪಿಸಿಕೊಳ್ಳುತ್ತಾ ಇರುವುದು ಅಗತ್ಯ. ಅದನ್ನು ಮಾಡಲು ಈ ಮೂರು ಪ್ರಶ್ನೆಗಳ ಕುರಿತು ಯೋಚಿಸಿ: ದೀಕ್ಷಾಸ್ನಾನಕ್ಕೆ ಅರ್ಹರಾಗಲು ನೀವು ಯಾವೆಲ್ಲ ಹೆಜ್ಜೆಗಳನ್ನು ತಕ್ಕೊಂಡಿರಿ? ನೀವು ದೇವರನ್ನು ತಿಳಿದುಕೊಳ್ಳಲು ಹೇಗೆ ಸಾಧ್ಯವಾಯ್ತು? ದೇವರಿಂದ ನಿಮಗೆ ಒಪ್ಪಿಗೆ ಸಿಕ್ಕಿದೆ ಎಂಬ ಮನವರಿಕೆ ನಿಮಗಾದಾಗ ಹೇಗನಿಸಿತು?

6. ಯಾವ ಪರಿಶೀಲನಾ ಪಟ್ಟಿಯ ಕುರಿತು ನಾವು ಚರ್ಚಿಸಲಿದ್ದೇವೆ?

6 ಸತ್ಯವನ್ನು ಕಲಿಯಲು ಆರಂಭಿಸಿದ ಮೇಲೆ ನಾವೆಲ್ಲರೂ 9 ಹೆಜ್ಜೆಗಳನ್ನು ತಕ್ಕೊಂಡಿದ್ದೇವೆ. ಆ ಹೆಜ್ಜೆಗಳು ಪರಿಶೀಲನಾ ಪಟ್ಟಿಯಂತಿವೆ. “ದೀಕ್ಷಾಸ್ನಾನಕ್ಕಾಗಿ ತೆಗೆದುಕೊಂಡ ಹೆಜ್ಜೆಗಳು ಆಧ್ಯಾತ್ಮಿಕ ಪ್ರಗತಿಗೆ ನಡೆಸುತ್ತವೆ” ಎಂಬ ಚೌಕದಲ್ಲಿ ಅವುಗಳನ್ನು ಕೊಡಲಾಗಿದೆ. ಈ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಾ ಇರುವಲ್ಲಿ ನಾವು ಬಿಟ್ಟುಬಂದಿರುವ ವಿಷಯಗಳ ಕಡೆಗೆ ಪುನಃ ಹಿಂತಿರುಗಿ ನೋಡೆವು. ವಿಮಾನಚಾಲಕನು ಪ್ರತಿಬಾರಿ ವಿಮಾನ ಹಾರಿಸುವ ಮುಂಚೆ ಪರಿಶೀಲನಾ ಪಟ್ಟಿಯನ್ನು ಪರೀಕ್ಷಿಸುವುದರಿಂದ ಅವನ ಯಾನ ಸುರಕ್ಷಿತವಾಗಿರುತ್ತದೆ. ಹಾಗೆಯೇ ನಾವು ಆಧ್ಯಾತ್ಮಿಕ ಪರಿಶೀಲನಾ ಪಟ್ಟಿಯನ್ನು ಆಗಿಂದಾಗ್ಗೆ ಪರೀಕ್ಷಿಸುತ್ತಾ ಇರುವಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಸೇವೆಸಲ್ಲಿಸುತ್ತಾ ಇರುವೆವು.

ಪ್ರಗತಿ ಮಾಡುತ್ತಾ ಇರಿ

7. (1) ನಾವು ಯಾವ ನಮೂನೆಯನ್ನು ಅನುಸರಿಸಬೇಕು? (2) ಏಕೆ?

7 ವಿಮಾನಚಾಲಕನಿಗೆ ಪರಿಶೀಲನಾ ಪಟ್ಟಿ ನೋಡಿದಾಕ್ಷಣ, ಪ್ರತಿ ವಿಮಾನಯಾನದ ಮೊದಲು ಮಾಡಬೇಕಾದ ಒಂದು ರೂಢಿ ನೆನಪಾಗುತ್ತದೆ. ಅದೇರೀತಿ ನಾವು ನಮ್ಮ ಆಧ್ಯಾತ್ಮಿಕತೆಯನ್ನು ಆಗಿಂದಾಗ್ಗೆ ಪರೀಕ್ಷಿಸಿಕೊಳ್ಳುವಾಗ ದೀಕ್ಷಾಸ್ನಾನದ ಸಮಯದಲ್ಲಿದ್ದ ರೂಢಿಗಳು ಈಗಲೂ ನಮ್ಮಲ್ಲಿವೆಯಾ ಎಂದು ಯೋಚಿಸಬೇಕು. ಪೌಲನು ತಿಮೊಥೆಯನಿಗೆ ಹೀಗೆ ಬರೆದನು: “ಕ್ರಿಸ್ತ ಯೇಸುವಿನ ಸಂಬಂಧದಲ್ಲಿನ ನಂಬಿಕೆ ಮತ್ತು ಪ್ರೀತಿಯೊಂದಿಗೆ ನೀನು ನನ್ನಿಂದ ಕೇಳಿಸಿಕೊಂಡ ಸ್ವಸ್ಥಕರವಾದ ಮಾತುಗಳ ನಮೂನೆಯನ್ನು ಭದ್ರವಾಗಿ ಹಿಡಿದುಕೊಂಡಿರು.” (2 ತಿಮೊ. 1:13) ಆ ‘ಸ್ವಸ್ಥಕರವಾದ ಮಾತುಗಳು’ ಬೈಬಲಿನಲ್ಲಿವೆ. (1 ತಿಮೊ. 6:3) ಉದಾಹರಣೆಗೆ, ಒಬ್ಬ ಚಿತ್ರಕಾರನು ಚಿತ್ರ ಬಿಡಿಸಲು ಆರಂಭಿಸುವಾಗ ಹಾಕುವ ರೇಖಾಚಿತ್ರದಿಂದಲೇ ಅವನು ಯಾವುದರ ಚಿತ್ರ ಬಿಡಿಸಲಿದ್ದಾನೆ ಎನ್ನುವುದು ಗೊತ್ತಾಗುತ್ತದೆ. ಹಾಗೆಯೇ ‘ಸತ್ಯದ ನಮೂನೆಯು’ ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂದು ತಿಳಿದುಕೊಳ್ಳಲು, ಅದರಂತೆ ನಡೆಯಲು ಸಹಾಯಮಾಡುತ್ತದೆ. ಈ ಸತ್ಯದ ನಮೂನೆಯನ್ನು ನಾವು ಎಷ್ಟು ನಿಖರವಾಗಿ ಪಾಲಿಸುತ್ತಿದ್ದೇವೆಂದು ಪರೀಕ್ಷಿಸಲಿಕ್ಕಾಗಿ ದೀಕ್ಷಾಸ್ನಾನದ ವರೆಗೆ ನಾವು ತೆಗೆದುಕೊಂಡ 9 ಹೆಜ್ಜೆಗಳನ್ನು ಚರ್ಚಿಸೋಣ.

8, 9. (1) ನಾವು ನಂಬಿಕೆಯಲ್ಲಿಯೂ ಜ್ಞಾನದಲ್ಲಿಯೂ ಬೆಳೆಯುತ್ತಲೇ ಇರಬೇಕು ಏಕೆ? (2) ಆಧ್ಯಾತ್ಮಿಕ ಪ್ರಗತಿಯ ಪ್ರಮುಖತೆಯನ್ನು ಮತ್ತು ಅದನ್ನು ಏಕೆ ಮುಂದುವರಿಸುತ್ತಾ ಇರಬೇಕು ಎನ್ನುವುದನ್ನು ದೃಷ್ಟಾಂತದ ಮೂಲಕ ತಿಳಿಸಿ.

8 ಪರಿಶೀಲನಾ ಪಟ್ಟಿಯಲ್ಲಿ ಮೊದಲು ಬರುವ ವಿಷಯ ಜ್ಞಾನ ಪಡೆದುಕೊಳ್ಳುವುದು. ನಂತರ ನಂಬಿಕೆ ಬೆಳೆಸಿಕೊಳ್ಳುವುದು. ಈ ಎರಡೂ ಅಂಶಗಳಲ್ಲಿ ನಾವು ಪ್ರಗತಿ ಮಾಡುತ್ತಲೇ ಇರಬೇಕು. (2 ಥೆಸ. 1:3) ಪ್ರಗತಿ ಎಂದು ಹೇಳುವಾಗ, ಒಂದರ ನಂತರ ಒಂದು ಬದಲಾವಣೆ ಮಾಡುವುದನ್ನು ಕೇಳಿಕೊಳ್ಳುತ್ತದೆ. “ಬೆಳೆಯುವುದು” ಅಥವಾ ಪ್ರಗತಿಯಾಗುವುದು ಅಭಿವೃದ್ಧಿಯನ್ನು ಹಾಗೂ ವಿಸ್ತರಿಸುವುದನ್ನು ಸೂಚಿಸುತ್ತದೆ. ಹಾಗಾಗಿ ದೀಕ್ಷಾಸ್ನಾನದ ನಂತರ ನಮ್ಮ ಪ್ರಗತಿ ನಿಂತ ನೀರಿನಂತೆ ಇರಬಾರದು, ಮುಂದೆ ಸಾಗುತ್ತಾ ಇರಬೇಕು.

9 ನಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ಮರದ ಬೆಳವಣಿಗೆಗೆ ಹೋಲಿಸಬಹುದು. ಮರದ ಬೇರುಗಳು ಭೂಮಿಯ ಆಳಕ್ಕಿಳಿದು ಬಲವಾದ ಹಿಡಿತವನ್ನು ಸಾಧಿಸುತ್ತಾ ಹೋದಂತೆ ಮರ ಬೃಹದಾಕಾರವಾಗಿ ಬೆಳೆಯುತ್ತದೆ. ಉದಾಹರಣೆಗೆ ಲೆಬನೋನಿನ ಕೆಲವು ದೇವದಾರು ವೃಕ್ಷಗಳು 12 ಅಂತಸ್ತಿನ ಕಟ್ಟಡದಷ್ಟು ಎತ್ತರಕ್ಕೆ ಬೆಳೆಯುತ್ತವೆ. ಅವುಗಳ ಬೇರುಗಳು ಗಟ್ಟಿಯಾಗಿದ್ದು ಆಳಕ್ಕೆ ಇಳಿದಿರುತ್ತವೆ. ಕಾಂಡದ ಸುತ್ತಲೂ ಒಂದು ಹಗ್ಗವನ್ನು ಕಟ್ಟಬೇಕಾದರೆ 12 ಮೀಟರ್‌ ಉದ್ದದ ಹಗ್ಗ ಬೇಕು. (ಪರಮ. 5:15) ಚಿಕ್ಕ ಸಸಿಯಾಗಿದ್ದ ಈ ಮರವು ಬೇಗನೆ ಎತ್ತರಕ್ಕೆ ಬೆಳೆಯುತ್ತದೆ. ಆದರೆ ನಂತರದ ವರ್ಷಗಳಲ್ಲಿ ಅದರ ಬೆಳವಣಿಗೆ ನಮಗೆ ಕಾಣಿಸದಿರಬಹುದು. ಹಾಗಿದ್ದರೂ ವರ್ಷಗಳು ಸಂದಂತೆ ಅದರ ಬೇರುಗಳು ವಿಶಾಲವಾಗಿ ಹರಡುತ್ತವೆ, ಭೂಮಿಯೊಳಗೆ ಇಳಿದು ಆಳವಾಗಿ ನೆಲೆಯೂರುತ್ತವೆ. ಅದರ ಕಾಂಡ ಇನ್ನಷ್ಟು ವಿಸ್ತರಿಸುತ್ತಾ ಮರ ಗಟ್ಟಿಮುಟ್ಟಾಗುತ್ತದೆ. ಅದೇ ರೀತಿ ನಮ್ಮ ಆಧ್ಯಾತ್ಮಿಕ ಬೆಳವಣಿಗೆ ಸಹ. ನಾವು ಬೈಬಲ್‌ ಅಧ್ಯಯನ ಪಡೆದು ಬೇಗನೆ ಪ್ರಗತಿ ಮಾಡಿ ದೀಕ್ಷಾಸ್ನಾನ ಪಡೆದುಕೊಳ್ಳುತ್ತೇವೆ. ನಂತರ ಇನ್ನಷ್ಟು ಪ್ರಗತಿ ಮಾಡುತ್ತಾ ಪಯನೀಯರ್‌ ಆಗಬಹುದು ಅಥವಾ ಬೇರೆ ಸುಯೋಗಗಳನ್ನೂ ಪಡೆಯಬಹುದು. ನಮ್ಮ ಈ ಪ್ರಗತಿ ಸಭೆಯಲ್ಲಿರುವವರೆಲ್ಲರ ಗಮನಕ್ಕೆ ಬರುತ್ತದೆ. ಆದರೆ ನಂತರದ ವರ್ಷಗಳಲ್ಲಿ ನಾವು ಮಾಡುವ ಪ್ರಗತಿ ಇತರರ ಗಮನಕ್ಕೆ ಬಾರದಿರಬಹುದು. ಹಾಗಿದ್ದರೂ ನಾವು ನಮ್ಮ ನಂಬಿಕೆಯಲ್ಲಿ ಮತ್ತು ಜ್ಞಾನದಲ್ಲಿ ಪ್ರಗತಿಯಾಗುತ್ತಲೇ ಇರಬೇಕು. ಅಂದರೆ “ಪೂರ್ಣವಾಗಿ ಬೆಳೆದ ಮನುಷ್ಯರಾಗಿ ಕ್ರಿಸ್ತನ ಸಂಪೂರ್ಣತೆಗೆ ಸೇರಿರುವ ಪರಿಪಕ್ವತೆಯ ಪ್ರಮಾಣವನ್ನು ಮುಟ್ಟುವ ತನಕ” ಪ್ರಗತಿ ಮಾಡುತ್ತಲೇ ಇರಬೇಕು. (ಎಫೆ. 4:13) ಹಾಗೆ ಮಾಡುವಾಗ, ಚಿಕ್ಕ ಸಸಿಯಂತಿದ್ದ ನಾವು ಗಟ್ಟಿಮುಟ್ಟಾದ ಮರವಾಗಿ ಅಂದರೆ ಪ್ರೌಢ ಕ್ರೈಸ್ತರಾಗಿ ಬೆಳೆಯುತ್ತೇವೆ.

10. ಪ್ರೌಢ ಕ್ರೈಸ್ತರು ಸಹ ಏಕೆ ಪ್ರಗತಿ ಮಾಡುತ್ತಲೇ ಇರಬೇಕು?

10 ಪ್ರೌಢ ಕ್ರೈಸ್ತರಾದ ಮೇಲೆ ನಮ್ಮ ಆಧ್ಯಾತ್ಮಿಕ ಬೆಳವಣಿಗೆ ನಿಲ್ಲಬೇಕಂತಲ್ಲ. ನಮ್ಮ ಜ್ಞಾನ ಇನ್ನೂ ವಿಸ್ತಾರವಾಗಬೇಕು, ನಂಬಿಕೆ ಆಳಗೊಳ್ಳಬೇಕು. ಆಗ ದೇವರ ವಾಕ್ಯವೆಂಬ ನೆಲದಲ್ಲಿ ನಾವು ಇನ್ನೂ ಸ್ಥಿರವಾಗಿ ಬೇರೂರುತ್ತೇವೆ. (ಜ್ಞಾನೋ. 12:3) ಇದನ್ನು ಮಾಡಿರುವ ಅನೇಕ ಸಹೋದರ ಸಹೋದರಿಯರು ನಮ್ಮ ಸಭೆಗಳಲ್ಲಿದ್ದಾರೆ. ಒಬ್ಬ ಸಹೋದರನ ಉದಾಹರಣೆ ತಕ್ಕೊಳ್ಳಿ. 30ಕ್ಕಿಂತ ಹೆಚ್ಚು ವರ್ಷಗಳಿಂದ ಹಿರಿಯರಾಗಿರುವ ಅವರು ಇನ್ನೂ ಆಧ್ಯಾತ್ಮಿಕ ಪ್ರಗತಿ ಮಾಡುತ್ತಲೇ ಇದ್ದೇನೆ ಎನ್ನುತ್ತಾರೆ. ಇದನ್ನು ಅವರ ಮಾತಲ್ಲೇ ಕೇಳಿ: “ಬೈಬಲ್‌ ಕಡೆಗಿನ ನನ್ನ ಗಣ್ಯತೆ ಇನ್ನೂ ಹೆಚ್ಚಾಗಿದೆ. ಅದರಲ್ಲಿರುವ ತತ್ವಗಳನ್ನು ನಿಯಮಗಳನ್ನು ಅನ್ವಯಿಸಿಕೊಳ್ಳಬೇಕಾದ ಹೊಸ ಹೊಸ ಕ್ಷೇತ್ರ, ವಿಧಗಳನ್ನು ಕಲಿಯುತ್ತಾ ಇದ್ದೇನೆ. ಸೇವೆಯ ಕಡೆಗೂ ನನ್ನ ಗಣ್ಯತೆ ದಿನೇದಿನೇ ಹೆಚ್ಚುತ್ತಲೇ ಇದೆ.”

ದೇವರಿಗೆ ಹೆಚ್ಚೆಚ್ಚು ಆಪ್ತರಾಗಿ

11. ನಾವು ಯೆಹೋವನಿಗೆ ಹೇಗೆ ಹೆಚ್ಚೆಚ್ಚು ಆಪ್ತರಾಗಬಲ್ಲೆವು?

11 ನಮ್ಮ ಆಧ್ಯಾತ್ಮಿಕ ಪ್ರಗತಿಯಲ್ಲಿ ಯೆಹೋವನೊಂದಿಗೆ ಆಪ್ತರಾಗುವುದು ಸಹ ಸೇರಿದೆ. ಯೆಹೋವನು ಒಬ್ಬ ಸ್ನೇಹಿತನಂತೆ, ತಂದೆಯಂತೆ ನಮಗೆ ಆಪ್ತನಾಗಿರಬೇಕು. ನಮ್ಮನ್ನು ಆತನು ಮೆಚ್ಚುತ್ತಾನೆ ಎಂಬ ಭರವಸೆ ನಮಗಿರಬೇಕೆಂಬುದೇ ಆತನ ಇಷ್ಟ. ಆತನಿಂದ ಪ್ರೀತಿಯನ್ನು ಸುರಕ್ಷೆಯನ್ನು ಅನುಭವಿಸಬೇಕೆಂಬುದು ಆತನ ಬಯಕೆ. ಪ್ರೀತಿಪರ ತಂದೆಯ ಅಪ್ಪುಗೆಯಲ್ಲಿ ಪುಟ್ಟ ಮಗುವಿಗೆ ಹೇಗನಿಸುತ್ತದೆ? ನಿಷ್ಠಾವಂತ ನಿಜ ಸ್ನೇಹಿತನ ಜೊತೆಯಿರುವಾಗ ನಿಮಗೆ ಹೇಗನಿಸುತ್ತದೆ? ಅದೇ ರೀತಿಯ ಪ್ರೀತಿ ಹಾಗೂ ಸುಭದ್ರ ಅನಿಸಿಕೆಯನ್ನು ಯೆಹೋವನೊಂದಿಗಿನ ಸಂಬಂಧದಲ್ಲಿ ನಾವು ಅನುಭವಿಸಬೇಕು. ಆದರೆ ಇಂಥ ಆಪ್ತತೆ ರಾತ್ರಿ ಬೆಳಗಾಗುವುದರೊಳಗೆ ಬಂದುಬಿಡುವುದಿಲ್ಲ. ಅದಕ್ಕೆ ಸಮಯ ಹಿಡಿಯುತ್ತದೆ. ಹಾಗಾಗಿ ಯೆಹೋವನು ಯಾವ ರೀತಿಯ ವ್ಯಕ್ತಿ ಎಂದು ತಿಳಿದುಕೊಳ್ಳಲು ಸಮಯ ಬದಿಗಿರಿಸುವ ನಿರ್ಧಾರ ಮಾಡಿ. ಬೈಬಲನ್ನು ಓದಿ. ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಯ ಪ್ರತಿ ಸಂಚಿಕೆಯನ್ನು, ಇತರ ಪ್ರಕಾಶನಗಳನ್ನು ಓದಿ.

12. ಯೆಹೋವನಿಗೆ ಹೆಚ್ಚು ಆಪ್ತರಾಗಲು ಇನ್ನೇನು ಮಾಡಬೇಕು?

12 ದೇವರ ಸ್ನೇಹಿತರು ಮನಸಾರೆ ಪ್ರಾರ್ಥಿಸುವುದರಿಂದ ಮತ್ತು ಒಳ್ಳೆ ಒಡನಾಟ ಮಾಡುವುದರಿಂದ ಆಧ್ಯಾತ್ಮಿಕವಾಗಿ ಬೆಳೆಯುತ್ತಾರೆ. (ಮಲಾಕಿಯ 3:16 ಓದಿ.) ಯೆಹೋವನ ‘ಕಿವಿಗಳು ಅವರ ಯಾಚನೆಗಳ ಕಡೆಗೆ ಯಾವಾಗಲೂ ಇರುತ್ತವೆ.’ (1 ಪೇತ್ರ 3:12) ಪ್ರೀತಿಯ ಹೆತ್ತವರಂತೆ ಯೆಹೋವನು, ನಾವು ಸಹಾಯಕ್ಕಾಗಿ ಮೊರೆಯಿಡುವಾಗ ಗಮನವಿಟ್ಟು ಕೇಳುತ್ತಾನೆ. ಆದರೆ ಅದಕ್ಕಾಗಿ ನಾವೇನು ಮಾಡಬೇಕು? “ಪಟ್ಟುಹಿಡಿದು” ಪ್ರಾರ್ಥಿಸಬೇಕು. (ರೋಮ. 12:12) ದೇವರ ಸಹಾಯ ಬೆಂಬಲ ಇಲ್ಲದೆ ನಾವು ಆತನ ಸ್ನೇಹಿತರಾಗಿರಲು ಮತ್ತು ಪ್ರಗತಿ ಹೊಂದಲು ಸಾಧ್ಯ ಇಲ್ಲ. ಈ ಲೋಕದ ಒತ್ತಡ ಎಷ್ಟಿದೆ ಅಂದರೆ ಅದನ್ನು ನಮ್ಮ ಸ್ವಂತ ಶಕ್ತಿಯಿಂದ ಎದುರಿಸಲು ಅಥವಾ ಜಯಿಸಲು ಆಗಲ್ಲ. ಒಂದುವೇಳೆ ನಾವು ಪಟ್ಟುಹಿಡಿದು ಪ್ರಾರ್ಥಿಸದಿದ್ದಲ್ಲಿ, ನಮಗೆ ಅಗತ್ಯವಿರುವ ಬಲವನ್ನು ದೇವರು ಕೊಡಲು ತಯಾರಿರುವಾಗ ನಾವೇ ಬೇಡ ಅಂತ ಹೇಳಿದ ಹಾಗೆ. ಅದಕ್ಕೆ ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ: ‘ನನ್ನ ಪ್ರಾರ್ಥನೆ ಬಗ್ಗೆ ನನಗೆ ಹೇಗನಿಸುತ್ತದೆ? ಎಲ್ಲಾದರೂ ಪ್ರಗತಿ ಮಾಡಬೇಕಾ?’—ಯೆರೆ. 16:19.

13. ಆಧ್ಯಾತ್ಮಿಕ ಪ್ರಗತಿಗೂ ಕ್ರೈಸ್ತ ಒಡನಾಟಕ್ಕೂ ಏನು ಸಂಬಂಧ?

13 ಯೆಹೋವನು ‘ತನ್ನ ಮರೆಹೊಕ್ಕವರೆಲ್ಲರನ್ನು’ ಮೆಚ್ಚುತ್ತಾನೆ. ಹಾಗಾಗಿ ನಾವು ಆತನನ್ನು ತಿಳಿದುಕೊಂಡ ಮೇಲೂ ಆತನ ಬಗ್ಗೆ ತಿಳಿದಿರುವ ಇತರರೊಂದಿಗೆ ಕೂಡಿಬರುವುದನ್ನು ನಿಲ್ಲಿಸಬಾರದು. (ನಹೂ. 1:7) ನಾವಿರುವ ಲೋಕ ನಮಗೆ ಸದಾ ನಿರುತ್ತೇಜನ ತರುತ್ತದೆ. ಆದ್ದರಿಂದ ಉತ್ತೇಜನದ ಚಿಲುಮೆಯಂತಿರುವ ನಮ್ಮ ಪ್ರಿಯ ಸಹೋದರ ಸಹೋದರಿಯರ ನಡುವೆ ಇರುವುದೇ ಚೆನ್ನ. ಇದರಿಂದ ನಮಗೇನು ಪ್ರಯೋಜನ ಗೊತ್ತಾ? ಸಭೆಯಲ್ಲಿ ನಮಗೆ ಅನೇಕರು ‘ಪ್ರೀತಿ ತೋರಿಸುವಂತೆ ಸತ್ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸುತ್ತಾರೆ.’ (ಇಬ್ರಿ. 10:24, 25) ಪೌಲ ಇಬ್ರಿಯರಿಗೆ ಹೇಳಿದಂತೆ ಪರಸ್ಪರ ಪ್ರೀತಿಯನ್ನು ನಾವು ತೋರಿಸಬೇಕಾದರೆ ಒಂದೇ ಮನಸ್ಸುಳ್ಳವರಾದ ಸಹೋದರ ಸಹೋದರಿಯರ ಜೊತೆ ಸಮಯ ಕಳೆಯಬೇಕು. ಹಾಗಾಗಿ ಕೂಟಗಳಿಗೆ ಹಾಜರಾಗುವುದನ್ನು ರೂಢಿ ಮಾಡಿಕೊಳ್ಳೋಣ. ಎಲ್ಲರೊಂದಿಗೆ ಮುಕ್ತವಾಗಿ ಮಾತಾಡೋಣ. ನಮ್ಮ ಉತ್ತರಗಳಿಂದ ಒಬ್ಬರನ್ನೊಬ್ಬರು ಬಲಪಡಿಸೋಣ. ನಮ್ಮ ಆಧ್ಯಾತ್ಮಿಕ ಪರಿಶೀಲನಾ ಪಟ್ಟಿಯಲ್ಲಿ ಈ ವಿಷಯಗಳು ಯಾವಾಗಲೂ (✔) ಗುರುತು ಮಾಡಿರಬೇಕು.

14. ಪಶ್ಚಾತ್ತಾಪ ಮತ್ತು ಪಾಪಗಳಿಂದ ತಿರುಗಿಕೊಳ್ಳುವುದು ಒಂದು ದಿನದ ಕೆಲಸವಲ್ಲವೇಕೆ?

14 ನಾವು ಕ್ರೈಸ್ತರಾಗುವಾಗ ಪಾಪಗಳಿಂದ ಕೂಡಿದ್ದ ಜೀವನರೀತಿಗಾಗಿ ಪಶ್ಚಾತ್ತಾಪ ಪಟ್ಟು ಅದರಿಂದ ತಿರುಗಿಕೊಂಡೆವು. ಹಾಗಿದ್ದರೂ ಕೇವಲ ಒಮ್ಮೆ ಪಶ್ಚಾತ್ತಾಪಪಟ್ಟರೆ ಸಾಕಾಗದು. ಅದು ನಿರಂತರ ಪ್ರಕ್ರಿಯೆ. ಏಕೆಂದರೆ ನಮ್ಮೊಳಗೆ ಹುದುಗಿರುವ ಪಾಪವು ಯಾವಾಗ ದಾಳಿ ಮಾಡಲಿ ಎಂದು ಕಾಯುತ್ತಿರುವ ಹಾವಿನಂತಿದೆ. (ರೋಮ. 3:9, 10; 6:12-14) ಹಾಗಾಗಿ ನಮ್ಮ ತಪ್ಪುಗಳನ್ನು ಅಲಕ್ಷಿಸದೆ ಯಾವಾಗಲೂ ನಿಗಾ ಇಡಬೇಕು. ಭರವಸೆ ಕೊಡುವ ವಿಷಯ ಏನೆಂದರೆ ನಾವು ನಮ್ಮ ಬಲಹೀನತೆಗಳನ್ನು ಜಯಿಸಲು ಪ್ರಯಾಸಪಡುವಾಗ ಮತ್ತು ಬದಲಾವಣೆ ಮಾಡಿಕೊಳ್ಳುವಾಗ ಯೆಹೋವನು ತಾಳ್ಮೆಯಿಂದ ಕಾಯುತ್ತಾನೆ. (ಫಿಲಿ. 2:12; 2 ಪೇತ್ರ 3:9) ನಮ್ಮ ಸಮಯ ಶಕ್ತಿ ಹಣವನ್ನು ಸ್ವಾರ್ಥ ಬಯಕೆಗಳಿಗಾಗಿ ಬಳಸದೆ ಯೆಹೋವನ ಸೇವೆಗಾಗಿ ಬಳಸುವುದು ಬಲಹೀನತೆಗಳನ್ನು ಜಯಿಸಲು ಸಹಾಯಮಾಡುತ್ತದೆ. ಒಬ್ಬ ಸಹೋದರಿ ಬರೆದದ್ದು: “ನಾನು ಸತ್ಯದಲ್ಲೇ ಬೆಳೆದೆನಾದರೂ ಎಲ್ಲರ ಹಾಗೆ ಯೋಚಿಸುತ್ತಿರಲಿಲ್ಲ. ಯೆಹೋವನ ಬಗ್ಗೆ ಏನೇನೋ ವಿಚಿತ್ರ ನೋಟ ಇತ್ತು. ಆತನಿಗೆ ನಾವು ಹೆದರಿ ನಡುಗಬೇಕು. ಆತನಿಗೆ ಮೆಚ್ಚಿಸಲಿಕ್ಕೆ ನನ್ನಿಂದ ಸಾಧ್ಯನೇ ಇಲ್ಲ ಅಂತೆಲ್ಲ ನೆನಸಿದ್ದೆ.” ಆಕೆಗೆ ಯೆಹೋವನೊಂದಿಗೆ ಆಪ್ತ ಸಂಬಂಧವಿರಲಿಲ್ಲ. ಮತ್ತು ಅನೇಕ ತಪ್ಪುಗಳನ್ನು ಮಾಡಿದಳು. ಆಕೆ ಮುಂದುವರಿಸಿ ಹೇಳಿದ್ದು: “ನನ್ನಲ್ಲಿ ಯೆಹೋವನ ಮೇಲೆ ಪ್ರೀತಿಯಿರಲಿಲ್ಲ ಅಂತಲ್ಲ, ಆತನನ್ನು ನಾನು ತಿಳಿದುಕೊಂಡಿರಲಿಲ್ಲ. ಯೆಹೋವನಲ್ಲಿ ಪಟ್ಟುಹಿಡಿದು ಪ್ರಾರ್ಥನೆ ಮಾಡಿದೆ. ನನ್ನನ್ನು ತಿದ್ದಿಕೊಳ್ಳಲು ಸಾಧ್ಯ ಆಯ್ತು. ಚಿಕ್ಕ ಮಗುವನ್ನು ಕೈಹಿಡಿದು ನಡೆಸಿದಂತೆ ಯೆಹೋವನು ನನ್ನನ್ನು ನಡೆಸಿದನು. ಆತನೇ ಪಕ್ಕದಲ್ಲಿದ್ದು ನಾನು ಏನು ಮಾಡಬೇಕೆಂದು ಹೇಳುತ್ತಾ ಎದುರಾದ ಎಲ್ಲ ಎಡವುಗಲ್ಲುಗಳನ್ನು ಒಂದೊಂದಾಗಿ ದಾಟಿಸಿದನು.”

15. ಯೇಸು ಹಾಗೂ ಯೆಹೋವನು ಏನನ್ನು ಗಮನಿಸುತ್ತಾರೆ?

15 ರಾಜ್ಯದ ಕುರಿತಾದ ಸುವಾರ್ತೆಯನ್ನು “ಜನರಿಗೆ ತಿಳಿಸುತ್ತಾ ಇರಿ.” ಈ ಮಾತುಗಳನ್ನು ಒಬ್ಬ ದೇವದೂತನು ಪೇತ್ರನನ್ನೂ ಇನ್ನಿತರ ಅಪೊಸ್ತಲರನ್ನೂ ಅದ್ಭುತಕರವಾಗಿ ಸೆರೆಮನೆಯಿಂದ ಬಿಡಿಸಿದ ತಕ್ಷಣ ಹೇಳಿದನು. (ಅ. ಕಾ. 5:19-21) ನಾವು ಕ್ಷೇತ್ರ ಸೇವೆಯಲ್ಲಿ ಪ್ರತಿವಾರ ಭಾಗವಹಿಸುತ್ತಿದ್ದೇವಾ ಎಂದು ಪರೀಕ್ಷಿಸಿಕೊಳ್ಳುವುದು ನಮ್ಮ ಆಧ್ಯಾತ್ಮಿಕ ಪರಿಶೀಲನಾ ಪಟ್ಟಿಯಲ್ಲಿರುವ ಇನ್ನೊಂದು ವಿಷಯ. ನಮ್ಮ ನಂಬಿಕೆಯನ್ನು ಮತ್ತು ನಾವು ಸೇವೆಯಲ್ಲಿ ಭಾಗವಹಿಸುವುದನ್ನು ಯೇಸು ಮತ್ತು ಯೆಹೋವನು ಗಮನಿಸುತ್ತಾರೆ. (ಪ್ರಕ. 2:19) ಹಿಂದಿನ ಪ್ಯಾರಗಳಲ್ಲಿ ಅನುಭವ ಹಂಚಿಕೊಂಡ ಹಿರಿಯನು ಹೇಳಿದ್ದು: “ನಾವಿರುವುದೇ ಸುವಾರ್ತೆ ಸಾರಲಿಕ್ಕಾಗಿ.”

16. ಯೆಹೋವನಿಗೆ ಮಾಡಿರುವ ಸಮರ್ಪಣೆಯನ್ನು ಯಾಕೆ ನೆನಪಿಸಿಕೊಳ್ಳುತ್ತಾ ಇರಬೇಕು?

16 ನಿಮ್ಮನ್ನೇ ಯೆಹೋವನಿಗೆ ಸಮರ್ಪಿಸಿಕೊಂಡದ್ದನ್ನು ನೆನಪಿಸಿಕೊಳ್ಳಿ. ಯೆಹೋವನೊಂದಿಗೆ ಆಪ್ತ ಸಂಬಂಧ ಹೊಂದಿರುವುದಕ್ಕಿಂತ ದೊಡ್ಡದು ನಮ್ಮ ಜೀವನದಲ್ಲಿ ಯಾವುದೂ ಇಲ್ಲ. ಆತನಿಗೆ ತನ್ನವರು ಯಾರು ಅಂತ ಚೆನ್ನಾಗಿ ಗೊತ್ತು. (ಯೆಶಾಯ 44:5 ಓದಿ.) ಆದ್ದರಿಂದ ಆತನೊಂದಿಗಿನ ನಿಮ್ಮ ಸಂಬಂಧ ಹೇಗಿದೆ, ಎಷ್ಟು ಗಾಢವಾಗಿದೆ ಎಂದು ಪ್ರಾರ್ಥನಾಪೂರ್ವಕವಾಗಿ ಪರೀಕ್ಷಿಸಿ. ನೀವು ಆತನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದ ದಿನಾಂಕವನ್ನು ಎಂದೂ ಮರೆಯಬೇಡಿ. ಹೀಗೆ, ಜೀವನದಲ್ಲಿ ನೀವು ಮಾಡಿರುವ ಅತ್ಯುತ್ತಮ ನಿರ್ಧಾರ ನಿಮ್ಮ ಮನಸ್ಸಿನಲ್ಲಿ ಹಚ್ಚಹಸುರಾಗಿರುವುದು.

ಏನೇ ಆದರೂ ತಾಳಿಕೊಂಡಿದ್ದು ಯೆಹೋವನಿಗೆ ಆಪ್ತರಾಗಿರಿ

17. ಯೆಹೋವನಿಗೆ ಸದಾ ಆಪ್ತರಾಗಿ ಉಳಿಯಲು ನಮಗೆ ತಾಳ್ಮೆ ಏಕೆ ಬೇಕು?

17 ತಾಳ್ಮೆ ತುಂಬ ಪ್ರಾಮುಖ್ಯ ಎಂದು ಪೌಲ ಗಲಾತ್ಯದವರಿಗೆ ಬರೆದನು. (ಗಲಾ. 6:9) ಇಂದಿನ ಕ್ರೈಸ್ತರಿಗೂ ಅದು ಪ್ರಾಮುಖ್ಯ. ನಮಗೆ ಕಷ್ಟಗಳು ಬಂದೆರಗುವುದು ಖಂಡಿತ. ಆದರೂ ಯೆಹೋವನ ಸಹಾಯಹಸ್ತ ನಮ್ಮ ಜೊತೆ ಇದ್ದೇ ಇರುತ್ತದೆ. ಪವಿತ್ರಾತ್ಮಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸುತ್ತಾ ಇರಿ. ಆತನು ನಿಮ್ಮ ದುಃಖ-ವೇದನೆಗೆ ಬದಲಾಗಿ ಸಂತೋಷವನ್ನು, ದುಗುಡಕ್ಕೆ ಬದಲಾಗಿ ಶಾಂತಿಯನ್ನು ತುಂಬಿಸುವಾಗ ಮನಸ್ಸು ಹಗುರವಾಗುತ್ತದೆ. (ಮತ್ತಾ. 7:7-11) ಯೆಹೋವನು ಚಿಕ್ಕ ಪಕ್ಷಿಗಳ ಬಗ್ಗೆಯೇ ಅಷ್ಟು ಕಾಳಜಿ ವಹಿಸುವಾಗ, ಆತನನ್ನು ಪ್ರೀತಿಸುವ ಮತ್ತು ಜೀವನವನ್ನೇ ಆತನಿಗೆ ಸಮರ್ಪಿಸಿಕೊಂಡಿರುವ ನಿಮ್ಮ ಬಗ್ಗೆ ಇನ್ನೆಷ್ಟು ಕಾಳಜಿ ವಹಿಸುತ್ತಾನೆಂದು ಯೋಚಿಸಿ. (ಮತ್ತಾ. 10:29-31) ಯೆಹೋವನ ಮೆಚ್ಚಿಕೆಗೆ ಪಾತ್ರರಾಗುವುದರಿಂದ ಸಿಗುವ ಆಶೀರ್ವಾದಗಳೋ ಅಪಾರ! ಹಾಗಾಗಿ ಎಷ್ಟೇ ಒತ್ತಡ ಬಂದರೂ ಬಿಟ್ಟುಕೊಡಬೇಡಿ, ಹಿಂದಿರುಗಿ ನೋಡಬೇಡಿ.

18. ‘ಯೆಹೋವನನ್ನು ತಿಳಿದುಕೊಂಡಿರುವ’ ನೀವು ಮುಂದೇನು ಮಾಡಲು ನಿರ್ಧಾರ ಮಾಡಿದ್ದೀರಿ?

18 ನೀವು ಇತ್ತೀಚೆಗೆ ದೇವರ ಬಗ್ಗೆ ಕಲಿತು ದೀಕ್ಷಾಸ್ನಾನ ಪಡೆದಿರುವಲ್ಲಿ ಮುಂದೇನು? ಯೆಹೋವನ ಕುರಿತು ಚೆನ್ನಾಗಿ ತಿಳಿದುಕೊಳ್ಳುವುದನ್ನು ಮುಂದುವರಿಸಿ. ಆಧ್ಯಾತ್ಮಿಕವಾಗಿ ಬಲಗೊಳ್ಳಿ. ದೀಕ್ಷಾಸ್ನಾನವಾಗಿ ಅನೇಕ ವರ್ಷ ಆಗಿರುವಲ್ಲಿ ಆಗೇನು? ನೀವು ಸಹ ಯೆಹೋವನ ಕುರಿತು ಕಲಿಯುವುದನ್ನು ಮುಂದುವರಿಸಬೇಕು. ಆತನ ಕುರಿತಾದ ನಿಮ್ಮ ಜ್ಞಾನವನ್ನು ಇನ್ನಷ್ಟು ವಿಸ್ತಾರಗೊಳಿಸಿ ಆಳಗೊಳಿಸಬೇಕು. ಯೆಹೋವನೊಂದಿಗೆ ಈಗಿರುವ ಸಂಬಂಧವೇ ಸಾಕು, ಆತನ ಕುರಿತು ಸಾಕಷ್ಟು ತಿಳಿದುಕೊಂಡಾಗಿದೆ ಅಂತ ಯಾವತ್ತೂ ನೆನಸಬೇಡಿ. ಅದರ ಬದಲು ನಾವೆಲ್ಲರೂ ಆಗಿಂದಾಗ್ಗೆ ನಮ್ಮ ಆಧ್ಯಾತ್ಮಿಕ ಪರಿಶೀಲನಾ ಪಟ್ಟಿಯನ್ನು ಪರೀಕ್ಷಿಸುತ್ತಾ ಇರೋಣ. ನಮ್ಮ ತಂದೆ, ಮಿತ್ರ, ದೇವರಾಗಿರುವ ಯೆಹೋವನೊಂದಿಗಿನ ಸಂಬಂಧವನ್ನು ಗಟ್ಟಿ ಮಾಡುತ್ತಾ ಇರೋಣ.2 ಕೊರಿಂಥ 13:5, 6 ಓದಿ.

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

[ಪುಟ 15ರಲ್ಲಿರುವ ಚಿತ್ರ]

ಮರವು ಬೆಳೆಯುತ್ತಾ ಇರುತ್ತದೆ. ಆಧ್ಯಾತ್ಮಿಕವಾಗಿ ನಾವೂ ಬೆಳೆಯುತ್ತಿರಬೇಕು

[ಪುಟ 17ರಲ್ಲಿರುವ ಚೌಕ]

ದೀಕ್ಷಾಸ್ನಾನಕ್ಕಾಗಿ ತೆಗೆದುಕೊಳ್ಳುವ ಹೆಜ್ಜೆಗಳು ಆಧ್ಯಾತ್ಮಿಕ ಪ್ರಗತಿಗೆ ನಡೆಸುತ್ತವೆ

1 ಮೊಟ್ಟಮೊದಲು ಯೆಹೋವನ ಕುರಿತು ಮತ್ತು ಯೇಸು ಕ್ರಿಸ್ತನ ಕುರಿತು ‘ಜ್ಞಾನ ಪಡೆದುಕೊಳ್ಳುತ್ತೇವೆ.’—ಯೋಹಾ. 17:3

2 ಜ್ಞಾನ ಪಡೆದುಕೊಳ್ಳುತ್ತಾ ಹೋದಂತೆ ನಮ್ಮ ನಂಬಿಕೆ ಬಲಗೊಳ್ಳುತ್ತದೆ.—ಯೋಹಾ. 3:16

3 ಯೆಹೋವನಲ್ಲಿ ಯಾವಾಗಲೂ ಮನಬಿಚ್ಚಿ ಪ್ರಾರ್ಥನೆ ಮಾಡುತ್ತೇವೆ.—ಅ. ಕಾ. 2:21

4 ಒಂದೇ ನಂಬಿಕೆಯನ್ನು ಹೊಂದಿರುವ ಇತರರೊಂದಿಗೆ ಕೂಡಿಬರುವುದನ್ನು ರೂಢಿ ಮಾಡಿಕೊಳ್ಳುತ್ತೇವೆ. —ಇಬ್ರಿ. 10:24, 25

5 ಪಾಪಗಳಿಗಾಗಿ ಪಶ್ಚಾತ್ತಾಪಪಡುತ್ತೇವೆ.ಅ. ಕಾ. 17:30

6 ಕೆಟ್ಟ ರೂಢಿಗಳನ್ನು ಬಿಟ್ಟು ಸರಿಯಾದ ಮಾರ್ಗದ ಕಡೆಗೆ ತಿರುಗಿಕೊಳ್ಳುತ್ತೇವೆ.ಅ. ಕಾ. 3:19

7 ಕಲಿತ ವಿಷಯಗಳನ್ನು ಇತರರೊಂದಿಗೆ ಮಾತಾಡುವಂತೆ ನಂಬಿಕೆ ನಮ್ಮನ್ನು ಪ್ರೇರಿಸುತ್ತದೆ.—2 ಕೊರಿಂ. 4:13

8 ಯೇಸುವಿಟ್ಟ ಮಾದರಿಗೆ ಅನುಗುಣವಾಗಿ ನಾವು ಯೆಹೋವನಿಗೆ ಸಮರ್ಪಿಸಿಕೊಳ್ಳುತ್ತೇವೆ.1 ಪೇತ್ರ 4:2

9 ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ಬಹಿರಂಗಪಡಿಸುತ್ತೇವೆ.—1 ಪೇತ್ರ 3:21