ನಿಜವಾಗಿ ಅದನ್ನು ಜೋಸೀಫಸನು ಬರೆದನೇ?
ನಿಜವಾಗಿ ಅದನ್ನು ಜೋಸೀಫಸನು ಬರೆದನೇ?
ಫ್ಲೇವಿಯಸ್ ಜೋಸೀಫಸ್ ಒಂದನೇ ಶತಮಾನದ ಇತಿಹಾಸಕಾರ. ಅವನು ಜ್ಯೂವಿಷ್ ಆ್ಯಂಟಿಕ್ವಿಟಿಸ್ ಎಂಬ ತನ್ನ ಪುಸ್ತಕದ 20ನೇ ಸಂಪುಟದಲ್ಲಿ ಯಾಕೋಬನ ಮರಣದ ಬಗ್ಗೆ ಹೇಳುವಾಗ “ಕ್ರಿಸ್ತನೆಂದು ಕರೆಯಲಾದ ಯೇಸುವಿನ ತಮ್ಮ ಯಾಕೋಬ” ಎಂದು ಬರೆದಿದ್ದಾನೆ. ಇದನ್ನು ಜೋಸೀಫಸನೇ ಬರೆದದ್ದೆಂದು ಅನೇಕ ವಿದ್ವಾಂಸರು ನಂಬುತ್ತಾರೆ. ಆದರೆ ಇದೇ ಪುಸ್ತಕದಲ್ಲಿ ಯೇಸುವಿನ ಕುರಿತು ಮಾಡಿರುವ ಇನ್ನೊಂದು ಹೇಳಿಕೆಯನ್ನು ಜೋಸೀಫಸನು ಬರೆದಿರಲಿಕ್ಕಿಲ್ಲ ಎಂದು ಕೆಲವು ವಿದ್ವಾಂಸರು ಸಂದೇಹಪಡುತ್ತಾರೆ. ಆ ಹೇಳಿಕೆಯಿರುವ ಭಾಗವನ್ನು ಟೆಸ್ಟೀಮೋನ್ಯಮ್ ಫ್ಲಾವ್ಯಾನಮ್ ಎಂದು ಕರೆಯಲಾಗುತ್ತದೆ. ಅಲ್ಲಿ ಜೋಸೀಫಸನು ಹೀಗೆ ಬರೆದಿದ್ದಾನೆ:
“ಆ ಸಮಯದಲ್ಲಿ ಯೇಸು ಎಂಬ ವಿವೇಕಿಯಾದ ಒಬ್ಬ ಪುರುಷನಿದ್ದನು. ಆತನನ್ನು ಮಾನವನೆಂದು ಕರೆಯುವುದು ಯುಕ್ತವೋ ತಿಳಿಯದು. ಏಕೆಂದರೆ ಅವನು ಅದ್ಭುತಕರವಾದ ಕೆಲಸಗಳನ್ನು ಮಾಡುತ್ತಿದ್ದನು. ಸತ್ಯವನ್ನು ಪ್ರೀತಿಸುವ ಜನರಿಗೆ ಬೋಧಿಸುತ್ತಿದ್ದನು. ಅನೇಕ ಯೆಹೂದಿಗಳೂ ಅನ್ಯ ಜನಾಂಗದವರೂ ಅವನೆಡೆಗೆ ಸೆಳೆಯಲ್ಪಟ್ಟರು. ಅವನು ಕ್ರಿಸ್ತನು. ನಮ್ಮಲ್ಲಿ ಕೆಲವು ಪ್ರಧಾನ ವ್ಯಕ್ತಿಗಳ ಸಲಹೆಯಂತೆ ಪಿಲಾತನು ಆತನನ್ನು ಶಿಲುಬೆಗೇರಿಸಿದನು. ಆದರೆ ಆತನನ್ನು ಪ್ರೀತಿಸಿದ ಜನರು ಅವನ ಮೇಲಿನ ನಂಬಿಕೆ ಕಳಕೊಳ್ಳಲಿಲ್ಲ, ಯಾಕೆಂದರೆ ಅವನು ಮೂರನೇ ದಿನ ಜೀವಂತನಾಗಿ ಅವರಿಗೆ ಕಾಣಿಸಿಕೊಂಡನು. ಹೀಗೆ, ಅವನ ಮರಣ, ಪುನರುತ್ಥಾನ ಹಾಗೂ ಆತನಿಗೆ ಸಂಬಂಧಿಸಿದ ಸಾವಿರಾರು ಅದ್ಭುತಕರ ವಿಷಯಗಳ ಕುರಿತು ಪ್ರವಾದಿಗಳು ಹೇಳಿದ್ದು ನೆರವೇರಿತು. ಅವನಿಂದಲೇ ಅವನ ಹಿಂಬಾಲಕರಿಗೆ ಕ್ರೈಸ್ತರು ಎಂಬ ಹೆಸರು ಬಂತು. ಅವರು ಇಂದಿನ ವರೆಗೂ ಅಸ್ತಿತ್ವದಲ್ಲಿದ್ದಾರೆ.”—ವಿಲ್ಯಮ್ ವ್ಹಿಸ್ಟನ್ ಭಾಷಾಂತರಿಸಿದ ಜೋಸೀಫಸ್—ದ ಕಂಪ್ಲೀಟ್ ವರ್ಕ್ಸ್.
16ನೇ ಶತಮಾನದ ಕೊನೆಯಿಂದಲೂ ಈ ಬರಹದ ಕುರಿತು ತೀಕ್ಷ್ಣ ವಾಗ್ವಾದ ನಡೆಯುತ್ತಲೇ ಇದೆ. ಇದನ್ನು ಜೋಸೀಫಸನೇ ಬರೆದದ್ದೆಂದು ಕೆಲವರು ನಂಬಿದರೆ ಇನ್ನಿತರರು ಅಲ್ಲ ಎನ್ನುತ್ತಾರೆ. ನಾಲ್ಕು ಶತಮಾನಗಳಿಂದಲೂ ಇದ್ದ ಈ ಗೊಂದಲವನ್ನು ಬಿಡಿಸಲು ಫ್ರೆಂಚ್ ಇತಿಹಾಸಕಾರ ಸೆರ್ಝ್ ಬಾರ್ಡೇ ಪ್ರಯತ್ನಿಸಿದರು. ಈ ಕುರಿತು ಅವರು ಮಾಡಿದ ಸಂಶೋಧನೆಯನ್ನು ತಮ್ಮ ಒಂದು ಪುಸ್ತಕದ ಮೂಲಕ ಜಗತ್ತಿನ ಮುಂದಿಟ್ಟರು.
ಜೋಸೀಫಸನು ಕ್ರೈಸ್ತ ಬರಹಗಾರನಲ್ಲ. ಅವನೊಬ್ಬ ಯೆಹೂದಿ ಇತಿಹಾಸಕಾರ. ಹಾಗಿದ್ದರೂ ಅವನು ಯೇಸುವನ್ನು “ಕ್ರಿಸ್ತನು” ಎಂದು ಕರೆದಿದ್ದು ಗೊಂದಲಕ್ಕೆ ದಾರಿಮಾಡಿಕೊಟ್ಟಿತು. ಆದರೆ ಈ ಬರಹವನ್ನು ಪರಿಶೀಲಿಸಿದ ನಂತರ ಬಾರ್ಡೇ ಹೇಳುವುದೇನೆಂದರೆ, ಜೋಸೀಫಸನು ಯೇಸುವನ್ನು “ಕ್ರಿಸ್ತನು” ಎಂದು ಖಚಿತವಾಗಿ ಹೇಳಿರುವುದು ‘ಗ್ರೀಕ್ ವ್ಯಾಕರಣಕ್ಕೆ ಅನುಗುಣವಾಗಿದೆ.’ ಯೆಹೂದಿಮತ ಮತ್ತು ಕ್ರೈಸ್ತತ್ವದ ದೃಷ್ಟಿಕೋನದಿಂದ ನೋಡುವಾಗ “ಯೇಸುವನ್ನು ಜೋಸೀಫಸನು ಗ್ರೀಕ್‌ನಲ್ಲಿ ಕ್ರಿಸ್ಟೊಸ್ [ಕ್ರಿಸ್ತ] ಎಂದು ಕರೆದಿರುವುದು ಅಸಂಭವವೇನಲ್ಲ.” ಯೇಸು ಒಬ್ಬ ಐತಿಹಾಸಿಕ ವ್ಯಕ್ತಿ ಎಂದು ತೋರಿಸುವ “ಈ ಪ್ರಾಮುಖ್ಯ ಪುರಾವೆಯನ್ನು ಗಮನಿಸಲು ವಿಮರ್ಶಕರು ತಪ್ಪಿಹೋಗಿದ್ದಾರೆ” ಎಂದರವರು.
ಜೋಸೀಫಸನ ಕಾಲಾನಂತರ, ಅವನ ಶೈಲಿಯನ್ನು ನಕಲು ಮಾಡಿ ಯಾರಾದರೂ ಈ ಮಾತುಗಳನ್ನು ಬರೆದಿರಬಹುದಾ? ಇತಿಹಾಸದ ಮತ್ತು ಆ ಬರಹಗಳ ಸಮಗ್ರ ಅಧ್ಯಯನ ಮಾಡಿದ ನಂತರ ಬಾರ್ಡೇ ಏನಂದರು? ಜೋಸೀಫಸನ ಬರಹಗಳನ್ನು ನಕಲು ಮಾಡಿರುವುದಾದರೆ, “ಅವನಂಥ ಮಹಾನ್ ನಕಲುಗಾರ ಬೇರೆ ಯಾರೂ ಇರಲು ಸಾಧ್ಯವಿಲ್ಲ.” ಇದರರ್ಥ, ಜೋಸೀಫಸನ ಬರಹ ಶೈಲಿಯನ್ನು ನಕಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ.
ಹಾಗಾದರೆ ಈ ಎಲ್ಲ ಗೊಂದಲ ಏಕೆ? ಮೂಲಕಾರಣವನ್ನು ಕಂಡುಹಿಡಿದ ಬಾರ್ಡೇ ಹೇಳಿದ್ದು: “ಬಹುಪಾಲು ಪ್ರಾಚೀನ ಗ್ರಂಥಗಳ ಬಗ್ಗೆ ಸಂದೇಹಪಡದ ವಿಮರ್ಶಕರು ಟೆಸ್ಟೀಮೋನ್ಯಮ್ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದ್ದೇ ಈ ಗೊಂದಲಕ್ಕೆ ಕಾರಣ.” ಅವರು ಇನ್ನೂ ಹೇಳಿದ್ದು: ಈ ವಿಮರ್ಶಕರು ಆ ಬರಹವನ್ನು “ತಪ್ಪಾದ ಹೇತುವಿನಿಂದ” ನೋಡುತ್ತಿರುವುದರಿಂದ ಈ ಅಭಿಪ್ರಾಯ ತಾಳಿದ್ದಾರೆ. ತರ್ಕಬದ್ಧವಾಗಿ ವಿಶ್ಲೇಷಿಸಿ ನೋಡುವಲ್ಲಿ ಅದನ್ನು ಜೋಸೀಫಸನೇ ಬರೆದದ್ದೆಂದು ಗೊತ್ತಾಗುತ್ತದೆ.
ಬಾರ್ಡೇಯ ಈ ಸಂಶೋಧನೆ ವಿದ್ವಾಂಸರ ಮನಸ್ಸನ್ನು ಬದಲಾಯಿಸುತ್ತದೋ ಇಲ್ಲವೋ ಎಂಬುದನ್ನು ಕಾದುನೋಡಬೇಕು. ಆದರೆ ಗ್ರೀಕ್ ಸಂಸ್ಕೃತಿಯಿಂದ ಪ್ರಭಾವಿಸಲ್ಪಟ್ಟ ಯೆಹೂದಿಮತದ ಮತ್ತು ಆರಂಭದ ಕ್ರೈಸ್ತತ್ವದ ಬಗ್ಗೆ ಅಧ್ಯಯನ ಮಾಡಿದ ಪಿಯರ್ ಝೊಲ್‌ಟ್ರನ್ ತಮ್ಮ ಅಭಿಪ್ರಾಯ ಬದಲಾಯಿಸಿಕೊಂಡರು. ಎಷ್ಟೋ ಸಮಯದಿಂದ ಅವರು ಟೆಸ್ಟೀಮೋನ್ಯಮ್ ಅನ್ನು ಜೋಸೀಫಿಸನ ನಂತರ ಯಾರೋ ಬರೆದದ್ದೆಂದು ಭಾವಿಸಿದ್ದರು. ಅದನ್ನು ಜೋಸೀಫಸನೇ ಬರೆದದ್ದು ಎಂದು ನಂಬುವವರನ್ನು ಹೀಯಾಳಿಸುತ್ತಿದ್ದರು. ಆದರೆ ನಂತರ ಅಭಿಪ್ರಾಯ ಬದಲಾಯಿಸಿಕೊಂಡರು. ಅದಕ್ಕೆ ಬಾರ್ಡೇಯವರ ಸಂಶೋಧನೆಯೇ ಕಾರಣವೆಂದು ಒಪ್ಪಿಕೊಂಡರು. ಅಷ್ಟೆ ಅಲ್ಲ “ಇನ್ನು ಮೇಲೆ ಟೆಸ್ಟೀಮೋನ್ಯಮ್ ಅನ್ನು ಜೋಸೀಫಸನು ಬರೆದಿಲ್ಲ ಎಂದು ಯಾರೂ ಹೇಳಲೇಬಾರದು” ಎಂದರವರು.
ಅದೇನೇ ಇರಲಿ ಯೆಹೋವನ ಸಾಕ್ಷಿಗಳು ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಳ್ಳುತ್ತಾರೆ. ಯಾಕೆಂದರೆ ಹಾಗೆ ನಂಬಲು ಎಲ್ಲದ್ದಕ್ಕಿಂತ ಬಲವಾದ ಕಾರಣಗಳು ಬೈಬಲಿನಲ್ಲಿವೆ.—2 ತಿಮೊ. 3:16.