ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆರ್ಕ್ಟಿಕ್‌ ವೃತ್ತದಲ್ಲಿ ಪೂರ್ಣಸಮಯದ ಸೇವೆಯ ಐವತ್ತು ವರುಷ

ಆರ್ಕ್ಟಿಕ್‌ ವೃತ್ತದಲ್ಲಿ ಪೂರ್ಣಸಮಯದ ಸೇವೆಯ ಐವತ್ತು ವರುಷ

ಜೀವನ ಕಥೆ

ಆರ್ಕ್ಟಿಕ್‌ ವೃತ್ತದಲ್ಲಿ ಪೂರ್ಣಸಮಯದ ಸೇವೆಯ ಐವತ್ತು ವರುಷ

ಐಲೀ ಮತ್ತು ಆನೀಕೀ ಮಾಟೀಲಾ ಹೇಳಿದಂತೆ

“ಪಯನೀಯರ್‌ ಸೇವೆ ಮಾಡಲು ನಿಂಗೆ ಯಾವ ತೊಂದರೆನೂ ಇಲ್ಲ. ನಿನ್ನ ತಂದೆತಾಯಿ ಸತ್ಯದಲ್ಲಿದ್ದಾರೆ, ಅವರು ನಿಂಗೆ ಸಹಾಯ ಮಾಡ್ತಾರೆ” ಅಂತ ಪೂರ್ಣಸಮಯದ ಸೇವೆ ಮಾಡುತ್ತಿದ್ದ ನಮ್ಮ ಒಬ್ಬ ಗೆಳತಿಗೆ ಹೇಳಿದ್ವಿ. ಆಗ ಆಕೆ “ನಮಗೆಲ್ಲರಿಗೆ ತಂದೆ ಒಬ್ಬನೇ ಅಲ್ವಾ” ಎಂದಳು. ಆಕೆಯ ಮಾತಿನಲ್ಲಿ ತುಂಬ ಅರ್ಥ ಇತ್ತು. ಹೌದು ನಮ್ಮೆಲ್ಲರ ತಂದೆಯಾದ ಯೆಹೋವ ದೇವರು ತನ್ನ ಸೇವಕರನ್ನು ನೋಡಿಕೊಳ್ಳುತ್ತಾರೆ, ಬಲ ಶಕ್ತಿ ಕೊಡುತ್ತಾರೆ. ಇದನ್ನು ನಾವು ನಮ್ಮ ಬಾಳಿನುದ್ದಕ್ಕೂ ಅನುಭವಿಸಿದ್ದೇವೆ.

ನಾವು ರೈತ ಕುಟುಂಬದಲ್ಲಿ ಜನಿಸಿದೆವು. ಫಿನ್‌ಲ್ಯಾಂಡ್‌ನ ಉತ್ತರ ಆಸ್ಟ್ರೋಬೋತಾನ್ಯ ನಮ್ಮ ಊರು. ನಾವು ಒಟ್ಟು ಹತ್ತು ಮಕ್ಕಳು. 2ನೇ ಮಹಾಯುದ್ಧ ನಡಿತಿದ್ದಾಗ ನಾವೆಲ್ಲ ಚಿಕ್ಕಚಿಕ್ಕವರು. ಯುದ್ಧವಿಮಾನಗಳು ಹಾರುತ್ತಿರೋದನ್ನು ಕಂಡ ತಕ್ಷಣ ಅಡಗಿಕೊಳ್ಳಬೇಕಂತ ಅಪ್ಪಅಮ್ಮ ಕಲಿಸಿಕೊಟ್ಟಿದ್ದರು. ಕಾದಾಟಗಳು ನಮ್ಮ ಮನೆಯಿಂದ ತುಂಬ ದೂರ ನಡಿತಿದ್ದರೂ ಯುದ್ಧ ಎಷ್ಟು ಘೋರವಾಗಿ ನಡಿತಿದೆ ಅನ್ನೋದು ನಮಗೆ ಗೊತ್ತಾಗುತ್ತಿತ್ತು. ಒಮ್ಮೆ ರಾತ್ರಿ ನಮ್ಮ ಹತ್ತಿರದ ಪಟ್ಟಣಗಳಾದ ಓಲು ಮತ್ತು ಕಾಲಾಜೋಕಿ ಮೇಲೆ ಬಾಂಬ್‌ ದಾಳಿ ನಡೆಯಿತು. ಆ ರಾತ್ರಿಯಲ್ಲಿ ಇಡೀ ಆಕಾಶ ಕೆಂಪಾಗಿ ಕಾಣುತ್ತಿತ್ತು. ಒಂದಿನ ನಮ್ಮ ದೊಡ್ಡ ಅಣ್ಣ ಟೌನೋ ಇಡೀ ಭೂಮಿ ಪರದೈಸ್‌ ಆಗುತ್ತೆ, ಯಾರೂ ಅನ್ಯಾಯನೇ ಮಾಡಲ್ಲ ಅಂತ ಹೇಳಿದರು. ನಮಗೆಲ್ಲ ತುಂಬ ಖುಷಿಯಾಯ್ತು. ಅದರ ಬಗ್ಗೆ ತಿಳಿದುಕೊಳ್ಳಬೇಕಂತ ಆಸೆ ಹುಟ್ಟಿತು.

ಅಣ್ಣನಿಗೆ ಈ ಬೈಬಲ್‌ ಸತ್ಯಗಳೆಲ್ಲ ಗೊತ್ತಾದಾಗ 14 ವಯಸ್ಸು. ಬೈಬಲ್‌ ವಿದ್ಯಾರ್ಥಿಗಳ ಸಾಹಿತ್ಯ ಓದಿ ತಿಳಿದುಕೊಂಡಿದ್ದ. ಬೈಬಲ್‌ ಪ್ರಕಾರ ತನ್ನ ಬದುಕನ್ನು ರೂಪಿಸಿಕೊಂಡಿದ್ದ. ಹಾಗಾಗಿ 2ನೇ ಮಹಾಯುದ್ಧ ಶುರುವಾದಾಗ ಸೇನೆ ಸೇರಿಕೊಳ್ಳಲು ನಿರಾಕರಿಸಿದ. ಅವನನ್ನು ಜೈಲಿಗೆ ಹಾಕಿದರು. ಚಿತ್ರಹಿಂಸೆ ಕೊಟ್ಟರು. ಆಗ ಅಣ್ಣ ಯೆಹೋವ ದೇವರ ಸೇವೆ ಇನ್ನೂ ಜಾಸ್ತಿ ಮಾಡಬೇಕು ಅನ್ನೋ ಸಂಕಲ್ಪ ಮಾಡಿದ. ಜೈಲಿಂದ ಬಿಡುಗಡೆಯಾಗಿ ಬಂದಾಗ ಅಣ್ಣನ ಉತ್ಸಾಹ ನೋಡಬೇಕು! ಕ್ರೈಸ್ತಕೂಟಗಳಿಗೆ ಹೋಗಲು ಅಣ್ಣನೇ ನಮಗೆ ಸ್ಫೂರ್ತಿ. ಕೂಟಗಳು ಪಕ್ಕದ ಹಳ್ಳಿಯಲ್ಲೇ ನಡಿತಿತ್ತು. ಅಧಿವೇಶನಗಳಿಗೂ ಹೋಗ್ತಿದ್ವಿ. ಅದಕ್ಕಾಗಿ ತುಂಬ ಕಷ್ಟ ಪಟ್ಟು ಹಣ ಹೊಂದಿಸುತ್ತಿದ್ವಿ. ಅಕ್ಕಪಕ್ಕ ಮನೆಯವರ ಬಟ್ಟೆಗಳನ್ನು ಹೊಲಿದು ಕೊಡುತ್ತಿದ್ವಿ, ಬೆರಿ ಹಣ್ಣು ತೋಟದಲ್ಲಿ ಕೆಲಸಮಾಡುತ್ತಿದ್ವಿ ಮತ್ತು ಈರುಳ್ಳಿ ಬೆಳೆಸುತ್ತಿದ್ವಿ. ನಮ್ಮ ಹೊಲದಲ್ಲಿ ತುಂಬ ಕೆಲಸ ಇರುತ್ತಿದ್ದರಿಂದ ಎಲ್ಲರೂ ಅಧಿವೇಶನಕ್ಕೆ ಹೋಗಕ್ಕೆ ಆಗುತ್ತಿರಲಿಲ್ಲ. ಹಾಗಾಗಿ ನಾವು ಸರದಿ ತೆಗೆದುಕೊಳ್ಳುತ್ತಿದ್ವಿ.

ಯೆಹೋವ ದೇವರ ಬಗ್ಗೆ ಮತ್ತು ಅವರ ಉದ್ದೇಶಗಳ ಬಗ್ಗೆ ತಿಳಿದುಕೊಂಡಾಗ ದೇವರ ಮೇಲೆ ಪ್ರೀತಿ ಹೆಚ್ಚಾಯಿತು. ನಮ್ಮ ಬದುಕನ್ನು ದೇವರಿಗೆ ಸಮರ್ಪಿಸಿಕೊಂಡ್ವಿ. 1947ರಲ್ಲಿ (ಆನೀಕೀಗೆ 15 ವರ್ಷ, ಐಲೀಗೆ 17) ನಾವು ದೀಕ್ಷಾಸ್ನಾನ ತಗೊಂಡ್ವಿ. ನಮ್ಮ ಅಕ್ಕ ಸೈಮಿ ಕೂಡ ಅದೇ ವರ್ಷದಲ್ಲಿ ದೀಕ್ಷಾಸ್ನಾನ ತಗೊಂಡಳು. ಇನ್ನೊಬ್ಬಳು ಅಕ್ಕ ಲಿನ್ನೇಗೆ ಮದುವೆ ಆಗಿತ್ತು. ನಾವು ಅವಳಿಗೂ ಬೈಬಲ್‌ ಕಲಿಸಿಕೊಟ್ವಿ. ಅವಳು ಅವಳ ಕುಟುಂಬ ಕೂಡ ಯೆಹೋವನ ಸಾಕ್ಷಿಗಳಾದರು. ನಮ್ಮ (ಐಲೀ ಮತ್ತು ಆನೀಕೀ) ದೀಕ್ಷಾಸ್ನಾನ ಆದ್ಮೇಲೆ ಇಬ್ಬರೂ ಪಯನೀಯರ್‌ ಸೇವೆ ಮಾಡಬೇಕು ಅನ್ನೋ ಗುರಿ ಇಟ್ವಿ. ಆಗಾಗ್ಗೆ ವೆಕೇಷನ್‌ (ಆಕ್ಸಿಲಿಯರಿ) ಪಯನೀಯರ್‌ ಸೇವೆ ಮಾಡುತ್ತಿದ್ವಿ.

ಪೂರ್ಣಸಮಯದ ಸೇವೆಗೆ ಪ್ರವೇಶ

1955ರಲ್ಲಿ ನಾವಿಬ್ಬರು ನಮ್ಮ ಊರಿಂದ ಉತ್ತರದಲ್ಲಿರುವ ಕೆಮಿ ಅನ್ನೋ ನಗರಕ್ಕೆ ಬಂದ್ವಿ. ಇಬ್ಬರೂ ಪೂರ್ಣಕಾಲಿಕ ಕೆಲಸಮಾಡುತ್ತಿದ್ವಿ. ಆದರೂ ಪಯನೀಯರ್‌ ಸೇವೆ ಮಾಡಬೇಕೆನ್ನುವ ಆಸೆ ಇತ್ತು. ಆದರೆ ದುಡ್ಡಿಗೆ ಏನು ಮಾಡೋದು ಅನ್ನೋ ಭಯ ಇತ್ತು. ಹಾಗಾಗಿ ಮೊದಲು ಸ್ವಲ್ಪ ಹಣ ಕೂಡಿಡೋಣ ಅಂತ ಯೋಚಿಸಿದ್ವಿ. ಆಗಲೇ ಆರಂಭದಲ್ಲಿ ಹೇಳಿದ ಆ ಪಯನೀಯರ್‌ ಸಹೋದರಿ ಜೊತೆ ನಾವು ಮಾತಾಡಿದ್ದು. ಅವರ ಜೊತೆ ಮಾತಾಡಿದ್ದರಿಂದ ನಮಗೆ ತುಂಬ ಸಹಾಯ ಆಯ್ತು. ಪೂರ್ಣಸಮಯದ ಸೇವೆ ಮಾಡಕ್ಕೆ ದುಡ್ಡಿನ ಬಗ್ಗೆ ಚಿಂತಿಸುವ ಅಥವಾ ಕುಟುಂಬದವರ ಬೆಂಬಲ ಕೋರುವ ಬದಲು ಯೆಹೋವ ದೇವರ ಮೇಲೆ ಸಂಪೂರ್ಣ ನಂಬಿಕೆ ಇಡಬೇಕು ಅಂತ ಅರ್ಥಮಾಡಿಕೊಂಡ್ವಿ.

ಆ ಸಮಯದಲ್ಲಿ ಎರಡು ತಿಂಗಳಿಗೆ ನಮ್ಮಿಬ್ಬರಿಗೆ ಸಾಕಾಗುವಷ್ಟು ಹಣ ನಮ್ಮ ಕೈಯಲ್ಲಿತ್ತು. ಸ್ವಲ್ಪ ಅಂಜಿಕೆಯಿಂದಲ್ಲೇ 1957 ಮೇ ತಿಂಗಳಿನಲ್ಲಿ ಎರಡು ತಿಂಗಳು ಪಯನೀಯರ್‌ ಸೇವೆ ಮಾಡುವುದಾಗಿ ಬರೆದುಕೊಟ್ವಿ. ಲ್ಯಾಪ್‌ಲ್ಯಾಂಡ್‌ನ ಒಂದು ನಗರವಾದ ಪೆಲೊನಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ವಿ. ಎರಡು ತಿಂಗಳು ಆದ್ಮೇಲೆನೂ ನಮ್ಮ ಕೈಯಲ್ಲಿ ಹಣ ಹಾಗೇ ಉಳಿದಿತ್ತು. ಹಾಗಾಗಿ ಇನ್ನೂ ಎರಡು ತಿಂಗಳು ಪಯನೀಯರ್‌ ಸೇವೆ ಮಾಡುವುದಾಗಿ ಬರೆದುಕೊಟ್ವಿ. ಆ ಎರಡು ತಿಂಗಳು ಆದ್ಮೇಲೆನೂ ಕೈಯಲ್ಲಿ ಹಣ ಹಾಗೇ ಇತ್ತು. ಆಗ ಗೊತ್ತಾಯ್ತು ಯೆಹೋವ ದೇವರು ಖಂಡಿತ ನಮ್ಮನ್ನು ನೋಡಿಕೊಳ್ತಾರೆ ಅಂತ. ಈಗ 50 ವರ್ಷ ಆಗಿದೆ ಇನ್ನೂ ಆ ಹಣ ಹಾಗೇ ಇದೆ! ನಮ್ಮ ಈ 50 ವರ್ಷ ಯೆಹೋವ ದೇವರೇ ನಮ್ಮ ಕೈ ಹಿಡಿದುಕೊಂಡು ‘ಭಯಪಡಬೇಡಿ, ನಾನೇ ನಿಮಗೆ ಸಹಾಯಮಾಡ್ತೇನೆ’ ಅಂತ ಹೇಳಿ ನಮ್ಮನ್ನು ನಡೆಸಿದ ಹಾಗಿದೆ.—ಯೆಶಾ. 41:13.

ಸೊಡನ್‌ಕ್ಲಾ ಅನ್ನೋ ಊರಿನಲ್ಲಿ ವಿಶೇಷ-ಪಯನೀಯರರಾಗಿ ಸೇವೆಮಾಡುವಂತೆ 1958ರಲ್ಲಿ ನಮ್ಮ ಸರ್ಕಿಟ್‌ ಮೇಲ್ವಿಚಾರಕ ಶಿಫಾರಸು ಮಾಡಿದರು. ಆ ಸಮಯದಲ್ಲಿ ಅಲ್ಲಿ ಬರೀ ಒಬ್ಬ ಸಹೋದರಿ ಮಾತ್ರ ಇದ್ದರು. ಅವರಿಗೆ ಸತ್ಯ ಸಿಕ್ಕಿದ ಕಥೆ ಒಂದು ರೀತಿ ಚೆನ್ನಾಗಿದೆ. ಅವರ ಮಗ ಫಿನ್‌ಲ್ಯಾಂಡ್‌ನ ರಾಜಧಾನಿ ಹೆಲ್ಸಿನ್ಕಿಗೆ ಶಾಲೆಯಿಂದ ಪ್ರವಾಸ ಹೋಗಿದ್ದ. ಅಲ್ಲಿ ಮಕ್ಕಳೆಲ್ಲ ಸಾಲಾಗಿ ನಡೆದುಕೊಂಡು ಹೋಗುತ್ತಿದ್ದಾಗ ಕೊನೇ ಸಾಲಿನಲ್ಲಿದ್ದ ಇವನಿಗೆ ಒಬ್ಬರು ಸಹೋದರಿ ಕಾವಲಿನಬುರುಜು ಪತ್ರಿಕೆ ಕೊಟ್ಟು ಅಮ್ಮನಿಗೆ ಕೊಡು ಅಂತ ಹೇಳಿದರು. ಅವನು ತಗೊಂಡು ಬಂದು ಅಮ್ಮನಿಗೆ ಕೊಟ್ಟ. ಆ ಪತ್ರಿಕೆ ಓದಿದಾಕ್ಷಣ ಇದು ಸತ್ಯ ಅಂತ ಅವರು ಕಂಡುಕೊಂಡರು.

ಸೊಡನ್‌ಕ್ಲಾ ಊರಲ್ಲಿದ್ದ ಒಂದು ಮರದ ಕಾರ್ಖಾನೆಯ ಮೇಲಿನ ಮನೆ ನಮಗೆ ಬಾಡಿಗೆಗೆ ಸಿಕ್ತು. ಅಲ್ಲಿ ನಾವು ಕೂಟಗಳನ್ನೂ ನಡೆಸುತ್ತಿದ್ವಿ. ಮೊದಮೊದಲು ನಾವಿಬ್ಬರು, ಆ ಸಹೋದರಿ ಮತ್ತು ಅವಳ ಮಗಳು ಇಷ್ಟೆ ಜನ ಇದ್ದದ್ದು. ನಾವೆಲ್ಲ ಒಟ್ಟಿಗೆ ಕೂತು ಆ ವಾರದ ಅಧ್ಯಯನ ಲೇಖನಗಳನ್ನು ಓದುತ್ತಿದ್ವಿ. ಸ್ವಲ್ಪ ದಿನದ ನಂತರ ಒಬ್ಬ ವ್ಯಕ್ತಿ ಕೆಳಗಿದ್ದ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಂಡರು. ಆ ವ್ಯಕ್ತಿ ಸ್ವಲ್ಪ ವರ್ಷಗಳ ಹಿಂದೆ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಕಲಿಯುತ್ತಿದ್ದರು. ಅವರು, ಅವರ ಕುಟುಂಬದವರು ಸಹ ನಮ್ಮ ಕೂಟಕ್ಕೆ ಬರಲು ಆರಂಭಿಸಿದರು. ಸ್ವಲ್ಪ ದಿನದಲ್ಲೇ ಅವರು ಅವರ ಹೆಂಡತಿ ದೀಕ್ಷಾಸ್ನಾನ ತಕ್ಕೊಂಡರು. ಆಮೇಲಿಂದ ಈ ಸಹೋದರ ನಮ್ಮ ಕೂಟಗಳನ್ನು ನಡೆಸುತ್ತಿದ್ದರು. ಕಾರ್ಖಾನೆಗೆ ಬರುತ್ತಿದ್ದ ಕೆಲವು ಗಂಡಸರು ಸಹ ಕೂಟಗಳಿಗೆ ಬರಲು ಆರಂಭಿಸಿದರು ಮತ್ತು ಸತ್ಯ ಕಲಿತರು. ಎರಡು ವರ್ಷಗಳಲ್ಲಿ ಈ ಗುಂಪು ಎಷ್ಟು ಬೆಳೆಯಿತ್ತೆಂದರೆ ಅಲ್ಲೊಂದು ಸಭೆಯೇ ಆರಂಭವಾಯ್ತು.

ಸವಾಲುಗಳು

ಸೇವಾಕ್ಷೇತ್ರಗಳ ಅಂತರ ನಮಗೊಂದು ಸವಾಲಾಗಿತ್ತು. ಬೇಸಿಗೆಯಲ್ಲಿ ನಡೆದುಕೊಂಡು ಅಥವಾ ಸೈಕಲ್‌ನಲ್ಲಿ ಹೋಗುತ್ತಿದ್ವಿ, ಕೆಲವೊಂದು ಸೇವಾಕ್ಷೇತ್ರಕ್ಕೆ ದೋಣಿಯಲ್ಲೂ ಹೋಗಿದ್ದುಂಟು. ಹೆಚ್ಚಾಗಿ ಸೈಕಲ್‌ಗಳೇ ನಮ್ಮ ಸಾಥಿಯಾಗಿದ್ದವು. ಅಧಿವೇಶನಗಳಿಗೆ ಹೋಗುವಾಗ ಮತ್ತು ನೂರಾರು ಮೈಲು ದೂರವಿರೋ ನಮ್ಮ ಅಪ್ಪಅಮ್ಮನನ್ನು ನೋಡಕ್ಕೆ ಹೋಗುವಾಗ ಸೈಕಲೇ ನಮಗೆ ನೆರವಾಗುತ್ತಿತ್ತು. ಚಳಿಗಾಲದಲ್ಲಿ ಬೆಳಿಗ್ಗೆನೇ ಬಸ್‌ ಹಿಡಿದು ಯಾವುದಾದರೂ ಹಳ್ಳಿಗೆ ಹೋಗಿ ಮನೆಮನೆ ಸೇವೆ ಮಾಡುತ್ತಿದ್ವಿ. ಒಂದು ಹಳ್ಳಿ ಮುಗಿದ ನಂತರ ಮತ್ತೊಂದು ಹಳ್ಳಿಗೆ ನಡೆದುಕೊಂಡು ಹೋಗ್ತಿದ್ವಿ. ಕೆಲವೊಂದು ಸಲ ತುಂಬ ಮಂಜು ಬಿದ್ದಿರುತ್ತೆ. ರಸ್ತೆನೇ ಕಾಣಲ್ಲ. ಬೇರೆಯವರು ನಡೆದುಹೋದ ಹೆಜ್ಜೆಗುರುತಿನಲ್ಲಿ ನಡೆಯುತ್ತಿದ್ವಿ. ಮತ್ತೆ ಮಂಜು ಬಿದ್ದರೆ ಗುರುತೆಲ್ಲ ಮುಚ್ಚೋಗುತ್ತೆ. ವಸಂತಕಾಲದಲ್ಲಂತೂ ನಡೆಯಕ್ಕೇ ಆಗಲ್ಲ ಕಾಲು ಹೂತು ಹೋಗುತ್ತಿತ್ತು.

ಚಳಿಯಿರುವಾಗ ಮತ್ತು ಮಂಜು ಬೀಳುವಾಗ ಬೆಚ್ಚಗಿನ ಬಟ್ಟೆಗಳನ್ನು ಹಾಕಿಕೊಳ್ಳಲು ಶುರುಮಾಡಿದ್ವಿ. ಮಂಡಿವರೆಗೂ ಬರುವ ಉದ್ದನೆಯ ಸಾಕ್ಸ್‌ಗಳನ್ನು ಹಾಕಿಕೊಳ್ತಿದ್ವಿ. ಅದರ ಮೇಲೆ ಎರಡು ಅಥವಾ ಮೂರು ಸಾಕ್ಸ್‌ಗಳನ್ನು ಹಾಕಿ ದೊಡ್ಡ ಬೂಟ್ಸ್‌ಗಳನ್ನು ಹಾಕಿಕೊಳ್ತಿದ್ವಿ. ಆದರೂ ಬೂಟ್ಸ್‌ ಪೂರ್ತಿ ಮಂಜು ತುಂಬಿಕೊಳ್ಳುತ್ತಿತ್ತು. ಪ್ರತಿಯೊಂದು ಮನೆಯ ಮೆಟ್ಟಿಲ ಹತ್ತಿರ ಹೋಗಿ ಬೂಟ್ಸ್‌ ಬಿಚ್ಚಿ ಒದರಿ ಅದನ್ನೆಲ್ಲ ತೆಗೆಯುತ್ತಿದ್ವಿ. ನಮ್ಮ ಉದ್ದನೆಯ ಕೋಟುಗಳು ಸಹ ಪೂರ್ತಿ ಒದ್ದೆ ಆಗಿಬಿಡುತ್ತೆ. ಮಂಜು ಬಿದ್ದು ಬಿದ್ದು ಗಟ್ಟಿಯಾಗಿಬಿಡುತ್ತೆ ಒಂಥರ ತಗಡು ತರ ಆಗ್ಬಿಡುತ್ತೆ. ಒಂದು ಮನೆಯ ಹೆಂಗಸು ಹೇಳಿದ್ರು “ಇಂಥ ಕೊರೆಯುವ ಚಳಿಯಲ್ಲೂ ಹೊರಗೆ ಬಂದಿದ್ದೀರಲ್ಲ ನಿಮಗೆ ನಿಜವಾಗ್ಲೂ ತುಂಬ ನಂಬಿಕೆ ಇರಬೇಕು” ಅಂತ. ಯಾಕೆಂದರೆ ಅಲ್ಲಿಗೆ ಹೋಗಕ್ಕೆ ನಾವು 11 ಕಿ.ಮೀ. ದೂರ ನಡಿತಿದ್ವಿ.

ಸೇವಾಕ್ಷೇತ್ರಗಳು ತುಂಬ ದೂರ ಇರೋದರಿಂದ ಅಲ್ಲೇ ಯಾರದಾದ್ರೂ ಮನೆಯಲ್ಲಿ ಉಳಿಯಬೇಕಾಗುತ್ತಿತ್ತು. ಕತ್ತಲು ಕವಿಯುತ್ತಿದ್ದಂತೆ ತಮ್ಮ ಮನೇಲಿ ಉಳಿಯಬಹುದಾ ಅಂತ ಜನರ ಹತ್ತಿರ ಕೇಳುತ್ತಿದ್ವಿ. ಅಲ್ಲಿ ಹೆಚ್ಚಾಗಿ ಎಲ್ಲಾ ಚಿಕ್ಕಚಿಕ್ಕ ಮನೆ. ಆದರೆ ಜನರು ತುಂಬ ಸ್ನೇಹಭಾವದವರು. ಮಲಗಕ್ಕೆ ಜಾಗ ಕೊಡೋರು ಜೊತೆಗೆ ತಿನ್ನಕ್ಕೂ ಏನಾದರೂ ಕೊಡುತ್ತಿದ್ದರು. ಕೆಲವೊಮ್ಮೆ ಬೇರೆಬೇರೆ ಪ್ರಾಣಿಗಳ ಚರ್ಮವೇ ನಮ್ಮ ಹಾಸಿಗೆ. ಕೆಲವೊಂದು ಸಲ ಐಷಾರಾಮಿ ಮನೆಗಳು ಸಿಗುತ್ತಿದ್ವು. ಒಮ್ಮೆ ಒಬ್ಬ ಮಹಿಳೆ ತಮ್ಮ ದೊಡ್ಡ ಮನೆಯ ಮಹಡಿಗೆ ಕರೆದುಕೊಂಡು ಹೋದರು. ಮೇಲೆ ಹೋಗಿ ನೋಡಿದ್ರೆ ಸುಂದರವಾದ ಹಾಸಿಗೆ ಅದರ ಮೇಲೆ ಶುದ್ಧ ಬಿಳುಪು ಬಣ್ಣದ ಚಾದರ ನಮಗೋಸ್ಕರ ಕಾಯುತ್ತಿತ್ತು. ತುಂಬ ಸಲ ಅವರ ಜೊತೆ ಸಂಜೆ ವರೆಗೂ ಬೈಬಲ್‌ ಬಗ್ಗೆ ಮಾತಾಡಿದ್ದುಂಟು. ಇನ್ನೊಂದು ಸಲ ಒಂದು ದಂಪತಿಯ ಮನೆಯಲ್ಲಿ ಉಳಿದುಕೊಂಡಿದ್ವಿ. ಆ ಗಂಡಹೆಂಡತಿ ಕೋಣೆಯ ಒಂದು ಮಗ್ಗುಲಲ್ಲಿ ಮಲಗುತ್ತಿದ್ದರು ನಾವು ಮತ್ತೊಂದು ಕಡೆ. ಅವರಿಬ್ಬರು ಒಬ್ಬರಾದ ಮೇಲೆ ಒಬ್ಬರು ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾವು ಬೈಬಲ್‌ನಿಂದ ಉತ್ತರಿಸುತ್ತಿದ್ವಿ. ಹೀಗೆ ಬೆಳಗಿನ ಜಾವದ ವರೆಗೂ ಮಾತಾಡಿದ್ದೀವಿ.

ಆಶೀರ್ವಾದಭರಿತ ಸೇವೆ

ಲ್ಯಾಪ್‌ಲ್ಯಾಂಡ್‌ ಬರಡು ಆದರೆ ತುಂಬ ಸುಂದರ ಪ್ರದೇಶ. ಆಯಾ ಋತುಗೆ ಅದರದ್ದೇ ಸೊಬಗು, ಆಕರ್ಷಣೆ. ಆದರೆ ನಮಗೆ ಯೆಹೋವ ದೇವರ ಸಂದೇಶ ಕೇಳುವವರೇ ಆಕರ್ಷಣೀಯ. ಆ ಲ್ಯಾಪ್‌ಲ್ಯಾಂಡ್‌ಗೆ ಮರ ಕಡಿಯುವವರು ಬರುತ್ತಿದ್ದರು. ಇವರು ಡೇರೆಗಳನ್ನು ಮಾಡಿಕೊಂಡು ವಾಸಿಸುತ್ತಿದ್ದರು. ಕೆಲವೊಂದು ಸಲ ಒಂದೇ ಮನೆಯಲ್ಲಿ ಹನ್ನೆರಡು ಜನರು ಇರ್ತಿದ್ದರು. ಆ ಕಟ್ಟುಮಸ್ತಿನ ವ್ಯಕ್ತಿಗಳ ಮಧ್ಯೆ ನಾವಿಬ್ಬರೇ. ಆದರೆ ಅವರು ಬೈಬಲ್‌ನಲ್ಲಿರೋ ವಿಷಯಗಳನ್ನು ಚೆನ್ನಾಗಿ ಕೇಳುತ್ತಿದ್ದರು. ನಮ್ಮ ಪ್ರಕಾಶನಗಳನ್ನೂ ಓದುತ್ತಿದ್ದರು.

ಇಲ್ಲಿ ನಡೆದ ಎಷ್ಟೋ ಸಂಗತಿಗಳನ್ನು ಮರೆಯಕ್ಕೇ ಆಗಲ್ಲ. ಒಂದು ದಿನ ಬಸ್‌ ನಿಲ್ದಾಣದಲ್ಲಿರೋ ಗಡಿಯಾರದ ಸಮಯ ಐದು ನಿಮಿಷ ಮುಂದಿದ್ದರಿಂದ ನಮಗೆ ಬಸ್‌ ತಪ್ಪಿಹೋಯ್ತು. ಹಾಗಾಗಿ ಬೇರೆ ಬಸ್‌ ಹಿಡಿದು ಬೇರೆ ಹಳ್ಳಿಗೆ ಹೋಗೋಣ ಅಂತ ನಿರ್ಣಯಿಸಿದ್ವಿ. ನಾವಲ್ಲಿಗೆ ಹೋಗೋದು ಇದೇ ಮೊದಲ ಬಾರಿ. ಮೊದಲ ಮನೆಗೆ ಹೋದಾಗ ಅಲ್ಲಿರೋ ಹುಡುಗಿಯೊಬ್ಬಳು ನಮ್ಮನ್ನು ನೋಡಿ “ನೀವು ಬಂದೇ ಬರ್ತೀರ ಅಂತ ನಂಗೊತ್ತಿತ್ತು” ಅಂದಳು. ನಾವು ಅವಳ ಅಕ್ಕನಿಗೆ ಬೈಬಲ್‌ ಕಲಿಸಿಕೊಡುತ್ತಿದ್ವಿ. ನಮ್ಮ ಮನೆಗೂ ಬರಕ್ಕೆ ಹೇಳು ಅಂತ ಈ ಹುಡುಗಿ ಅವಳ ಅಕ್ಕನ ಹತ್ತಿರ ಹೇಳಿದ್ದಳು. ಅದನ್ನು ನಮ್ಮ ಹತ್ರ ಹೇಳಕ್ಕೆ ಅವಳ ಅಕ್ಕ ಮರೆತುಹೋಗಿದ್ದಳು. ಆದರೆ ಆ ಹುಡುಗಿ ನಮ್ಮನ್ನು ಯಾವ ದಿನ ಬರಕ್ಕೆ ಹೇಳಿದ್ದಳೋ ಅದೇ ದಿನ ನಾವಲ್ಲಿಗೆ ಹೋಗಿದ್ವಿ. ಅವಳಿಗೆ ಮತ್ತು ಅಲ್ಲೆ ಅಕ್ಕಪಕ್ಕ ಇದ್ದ ಅವಳ ನೆಂಟರಿಗೆ ಬೈಬಲ್‌ ಕಲಿಸಿಕೊಡಲು ಆರಂಭಿಸಿದ್ವಿ. ಸ್ವಲ್ಪ ದಿನಗಳಲ್ಲೇ ಈ ಎಲ್ಲರಿಗೂ ಒಟ್ಟಿಗೆ ಕಲಿಸಲು ಆರಂಭಿಸಿದ್ವಿ. 12 ಜನರಿಗೆ ಒಟ್ಟಿಗೆ ಕಲಿಸುತ್ತಿದ್ವಿ. ಅವರ ಕುಟುಂಬದಲ್ಲಿ ತುಂಬ ಜನ ಯೆಹೋವನ ಸಾಕ್ಷಿಗಳಾದರು.

1965ರಲ್ಲಿ ನಮ್ಮನ್ನು ಕುಸಾಮೊ ಸಭೆಗೆ ನೇಮಿಸಲಾಯಿತು. ಇದು ಆರ್ಕ್ಟಿಕ್‌ ವೃತ್ತದಿಂದ ಸ್ವಲ್ಪ ಕೆಳಗಿದೆ. ಆ ಸಮಯದಲ್ಲಿ ಸಭೆಯಲ್ಲಿ ಕೆಲವೇ ಪ್ರಚಾರಕರಿದ್ದರು. ಆರಂಭದಲ್ಲಿ ಈ ಹೊಸ ಸೇವಾಕ್ಷೇತ್ರದಲ್ಲಿ ಕೆಲಸಮಾಡೋದು ಸ್ವಲ್ಪ ಕಷ್ಟ ಅನಿಸುತ್ತಿತ್ತು. ಇಲ್ಲಿನ ಜನರಿಗೆ ದೇವರ ಮೇಲೆ ತುಂಬ ಭಕ್ತಿ ಆದರೆ ನಮ್ಮ ಬಗ್ಗೆ ತಪ್ಪಾದ ಅಭಿಪ್ರಾಯಗಳೂ ಇದ್ವು. ಬೈಬಲ್‌ನಲ್ಲಿರೋ ವಿಷಯಗಳನ್ನು ಗೌರವಿಸುತ್ತಿದ್ದ ಅನೇಕ ಜನರೂ ಅಲ್ಲಿದ್ದರು. ಅವರನ್ನೆಲ್ಲ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ವಿ. ಎರಡು ವರ್ಷಗಳಲ್ಲಿ ಬೈಬಲ್‌ ಅಧ್ಯಯನ ಆರಂಭಿಸೋದು ನೀರು ಕುಡಿದಷ್ಟು ಸುಲಭವಾಯ್ತು.

ಇನ್ನೂ ದೇವರ ಸೇವೆಯಲ್ಲಿ ಕಾರ್ಯನಿರತ

ಈಗ ನಮಗೆ ಮುಂಚೆ ತರ ಇಡೀ ದಿನ ಕ್ಷೇತ್ರಸೇವೆ ಮಾಡುವಷ್ಟು ಶಕ್ತಿಯಿಲ್ಲ. ಆದರೂ ದಿನಾಲೂ ಸೇವೆಗೆ ಹೋಗೆ ಹೋಗ್ತೀವಿ. ಐಲೀ ನಮ್ಮ ಅತ್ತಿಗೆಯ ಸಲಹೆ ಮೇರೆಗೆ ವಾಹನ ಚಲಾಯಿಸಲು ಕಲಿತು 1987ರಲ್ಲಿ (ಆಗ ಐಲೀಗೆ ವಯಸ್ಸು 56) ಡ್ರೈವಿಂಗ್‌ ಲೈಸೆನ್ಸ್‌ ಪಡೆದುಕೊಂಡದ್ದರಿಂದ ಈ ದೊಡ್ಡ ಸೇವಾಕ್ಷೇತ್ರದಲ್ಲಿ ಸುವಾರ್ತೆ ಸಾರಕ್ಕೆ ಸ್ವಲ್ಪ ಸಹಾಯವಾಯ್ತು. ಹೊಸ ರಾಜ್ಯ ಸಭಾಗೃಹದಲ್ಲಿರೋ ಮನೆ ನಮಗೆ ಕೊಟ್ಟಾಗ ಇನ್ನೂ ನೆರವಾಯ್ತು.

ಹೆಚ್ಚಿನ ಜನರು ಸತ್ಯವನ್ನು ಸ್ವೀಕರಿಸಿರುವುದನ್ನು ನೋಡ್ವಾಗ ತುಂಬಾನೇ ಖುಷಿಯಾಗುತ್ತೆ. ನಾವು ಮೊದಮೊದಲು ಉತ್ತರ ಫಿನ್‌ಲ್ಯಾಂಡ್‌ನಲ್ಲಿ ಪೂರ್ಣಸಮಯದ ಸೇವೆ ಆರಂಭಿಸಿದಾಗ ಕೆಲವೇ ಪ್ರಚಾರಕರಿದ್ದರು. ಈಗ ಇಲ್ಲಿ ಅನೇಕ ಸಭೆಗಳಿವೆ, ಒಂದು ಸರ್ಕಿಟ್‌ ಇದೆ. ಸಮ್ಮೇಳನ ಅಧಿವೇಶನಗಳಿಗೆ ಹೋದಾಗ ತುಂಬ ಸಲ ಕೆಲವೊಬ್ಬರು ತಮ್ಮನ್ನು ಪರಿಚಯ ಮಾಡಿಕೊಂಡು ನಮ್ಮ ನೆನಪಿದ್ಯಾ ಅಂತ ಕೇಳುತ್ತಾರೆ. ಅವರು ಚಿಕ್ಕವರಿದ್ದಾಗ ನಾವು ಅವರ ಮನೆಯಲ್ಲಿ ಬೈಬಲ್‌ ಅಧ್ಯಯನಗಳನ್ನು ಮಾಡಿರುತ್ತೀವಿ. ಎಷ್ಟೋ ವರ್ಷಗಳು ದಶಕಗಳ ಹಿಂದೆ ಹಾಕಿದ ಬೀಜ ಮೊಳಕೆಯೊಡೆದು ಫಲ ಕೊಟ್ಟಿರುತ್ತೆ.—1 ಕೊರಿಂ. 3:6.

ಇಸವಿ 2008ಕ್ಕೆ ನಾವು ವಿಶೇಷ ಪಯನೀಯರ್‌ ಸೇವೆ ಆರಂಭಿಸಿ 50 ವರ್ಷವಾಯ್ತು. ಈ ಅತ್ಯದ್ಭುತ ಕೆಲಸದಲ್ಲಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ, ಹುರಿದುಂಬಿಸುತ್ತಾ ಇಲ್ಲಿವರೆಗೆ ಬಂದದ್ದಕ್ಕೆ ನಾವು ಯೆಹೋವ ದೇವರಿಗೆ ಆಭಾರಿ. ಸರಳದಲ್ಲಿ ಸರಳ ಬದುಕು ಬಾಳಿದ್ವಿ ಆದರೆ ಯಾವತ್ತೂ ಯಾವುದಕ್ಕೂ ಕೊರತೆ ಆಗಲಿಲ್ಲ. (ಕೀರ್ತ. 23:1) ಆರಂಭದಲ್ಲಿ ನಾವು ಅಂಜಿದ್ದು ಹಿಂಜರಿದಿದ್ದು ಎಂಥ ಮೂರ್ಖತನ ಅಂತ ಈಗ ಅನಿಸ್ತಿದೆ. ಈ 50 ವರ್ಷ ಯೆಹೋವ ದೇವರು ಯೆಶಾಯ 41:10ರಲ್ಲಿರುವ ತನ್ನ ಮಾತಿನಂತೆ ‘ನಮ್ಮನ್ನು ಬಲಪಡಿಸಿದ್ದಾನೆ; ಹೌದು, ನಮಗೆ ಸಹಾಯಕೊಟ್ಟಿದ್ದಾನೆ; ತನ್ನ ಧರ್ಮದ ಬಲಗೈಯನ್ನು ನಮಗೆ ಆಧಾರಮಾಡಿದ್ದಾನೆ.’

[ಪುಟ 17ರಲ್ಲಿರುವ ಚಿತ್ರ]

ಈಗ ತಮ್ಮ ನೇಮಕದಲ್ಲಿ ಆನೀಕೀ ಮತ್ತು ಐಲೀ

[ಪುಟ 17ರಲ್ಲಿರುವ ಚಿತ್ರ]

[ಪುಟ 17ರಲ್ಲಿರುವ ಭೂಪಟಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಫಿನ್‌ಲ್ಯಾಂಡ್‌

ಹೆಲ್ಸಿನ್ಕಿ

ಸೊಡನ್‌ಕ್ಲಾ

ಪೆಲೊ

ಆರ್ಕ್ಟಿಕ್‌ ವೃತ್ತ

ಕುಸಾಮೊ

ಕೆಮಿ

ಓಲು

ಕಾಲಾಜೋಕಿ

[ಪುಟ 18ರಲ್ಲಿರುವ ಚಿತ್ರ]

1935ರ ಚಿತ್ರ. ಎಡದಿಂದ: ಮಟ್ಟಿ (ತಂದೆ), ಟೌನೋ, ಸಾಯ್ಮಿ, ಮರಿಯ ಎಮಿಲಿಯಾ (ತಾಯಿ), ವಾಯ್ನೋ (ಮಗು), ಐಲೀ ಮತ್ತು ಆನೀಕೀ

[ಪುಟ 18ರಲ್ಲಿರುವ ಚಿತ್ರ]

1949ರ ಚಿತ್ರ. ಎಡದಿಂದ: ಈವಾ ಕಾಲಿಯೋ, ಸಾಯ್ಮಿ ಮಟ್ಟಿಲಾ-ಸಿಯ್ರ್‌ಜಾಲ, ಐಲೀ, ಆನೀಕೀ ಮತ್ತು ಸಾರ ನೊಪೊನೆನ್‌

[ಪುಟ 19ರಲ್ಲಿರುವ ಚಿತ್ರ]

1952ರಲ್ಲಿ ಅಧಿವೇಶನಕ್ಕಾಗಿ ಕೋಪ್ಯೊಗೆ ಪ್ರಯಾಣ. ಎಡದಿಂದ: ಆನೀಕೀ, ಐಲೀ, ಈವಾ ಕ್ಯಾಲಿಯೋ

[ಪುಟ 19ರಲ್ಲಿರುವ ಚಿತ್ರ]

ಕೆಯ್ಸು ರೀಕೋ ಮತ್ತು ಐಲೀ ಕ್ಷೇತ್ರಸೇವೆಯಲ್ಲಿ

[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]

ಈಗ 50 ವರ್ಷ ಆಗಿದೆ ಇನ್ನೂ ಆ ಹಣ ಹಾಗೇ ಇದೆ!

[ಪುಟ 20ರಲ್ಲಿರುವ ಚಿತ್ರ]

ಚಳಿಗಾಲದಲ್ಲಿ ಒಟ್ಟಿಗೆ ಸೇವೆ ಮಾಡುತ್ತಿರುವ ದೃಶ್ಯ

[ಪುಟ 20ರಲ್ಲಿರುವ ಚಿತ್ರ]

ನಾವು ಬೈಬಲ್‌ ಕಲಿಸಿಕೊಟ್ಟ ಕೆಲವೊಬ್ಬರು

[ಪುಟ 21ರಲ್ಲಿರುವ ಚಿತ್ರ]

ಮಳೆ ಬರುತ್ತಿದ್ದರೂ ನಾವು ಕ್ಷೇತ್ರಸೇವೆಯನ್ನು ಆನಂದಿಸುತ್ತೇವೆ