ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಇಸ್ರಾಯೇಲ್ಯರು ತಪ್ಪಿತಸ್ಥರನ್ನು ಕಂಬದ ಮೇಲೆ ತೂಗುಹಾಕಿ ಕೊಲ್ಲುತ್ತಿದ್ದರಾ?

▪ ಪ್ರಾಚೀನಕಾಲದಲ್ಲಿ ಅನೇಕ ದೇಶಗಳವರು ದುಷ್ಕರ್ಮಿಗಳನ್ನು ಮರದ ದಿಮ್ಮಿ ಅಥವಾ ಕಂಬಕ್ಕೆ ಜಡಿದು ಕೊಂದಿದ್ದಾರೆ. ರೋಮನ್ನರು ತಪ್ಪಿತಸ್ಥನನ್ನು ಮರಕ್ಕೆ ಬಿಗಿದು ಕಟ್ಟುತ್ತಿದ್ದರು ಅಥವಾ ಮೊಳೆಗಳಿಂದ ಜಡಿಯುತ್ತಿದ್ದರು. ಹೀಗೆ ಅವನು ಕೆಲವು ದಿನಗಳ ವರೆಗೆ ಹಸಿವು-ಬಾಯಾರಿಕೆಯಿಂದ, ನೋವಿನಿಂದ, ವಿಪರೀತ ಬಿಸಿಲು ಅಥವಾ ಚಳಿಯಿಂದ ಬಳಲಿ ಸತ್ತುಹೋಗುತ್ತಿದ್ದನು. ಇಂಥ ಮರಣವನ್ನು ರೋಮನ್ನರು ತುಂಬ ಕೀಳಾಗಿ ನೋಡುತ್ತಿದ್ದರು.

ಇಸ್ರಾಯೇಲ್ಯರ ಬಗ್ಗೆ ಏನು? ಅವರೂ ತಪ್ಪಿತಸ್ಥರನ್ನು ಮರಕ್ಕೆ ಜಡಿದು ಸಾಯಿಸುತ್ತಿದ್ದರಾ? ಮೋಶೆಯ ಧರ್ಮಶಾಸ್ತ್ರದಲ್ಲಿ ಈ ಆಜ್ಞೆಯಿತ್ತು: “ಅಪರಾಧಮಾಡಿದವನು ಮರಣಶಿಕ್ಷೆಯನ್ನು ಹೊಂದಿದ ಮೇಲೆ ನೀವು ಅವನ ಶವವನ್ನು ಮರಕ್ಕೆ ತೂಗಹಾಕಿದರೆ ಅದು ರಾತ್ರಿಯಲ್ಲಿಯೂ ಮರದ ಮೇಲೆ ಇರಬಾರದು; ಅದೇ ದಿನದಲ್ಲಿ ಅದನ್ನು ನೆಲದಲ್ಲಿ ಹೂಣಬೇಕು.” (ಧರ್ಮೋ. 21:22, 23) ಹಾಗಾದರೆ ಪ್ರಾಚೀನ ಇಸ್ರಾಯೇಲ್ಯರ ಕಾಲದಲ್ಲಿ, ಮರಣದಂಡನೆ ಪಡೆದ ವ್ಯಕ್ತಿಯನ್ನು ಮೊದಲು ಸಾಯಿಸಿ ನಂತರ ಮರದ ದಿಮ್ಮಿಗೆ ಅಥವಾ ಕಂಬಕ್ಕೆ ಜಡಿಯುತ್ತಿದ್ದರು.

ಇದರ ಸಂಬಂಧವಾಗಿ ಯಾಜಕಕಾಂಡ 20:2 ಹೇಳುವುದು: “ಇಸ್ರಾಯೇಲ್ಯರಲ್ಲಾಗಲಿ ಅವರ ನಡುವೆ ಇಳುಕೊಂಡಿರುವ ಪರದೇಶದವರಲ್ಲಾಗಲಿ ಯಾವನಾದರೂ ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟರೆ ಅವನಿಗೆ ಮರಣಶಿಕ್ಷೆಯಾಗಬೇಕು; ದೇಶದ ಜನರು ಅವನನ್ನು ಕಲ್ಲೆಸೆದು ಕೊಲ್ಲಬೇಕು.” ಅಷ್ಟೆ ಅಲ್ಲದೆ ಯಾರು “ಸತ್ತವರಲ್ಲಿ ವಿಚಾರಿಸುವವರೂ ಬೇತಾಳಿಕರೂ” ಆಗಿರುತ್ತಾರೋ ಅವರಿಗೆ ಸಹ ಶಿಕ್ಷೆ ವಿಧಿಸಲಾಗುತ್ತಿತ್ತು. ಹೇಗೆ? ‘ಅವರನ್ನು ಕಲ್ಲೆಸೆದು ಕೊಲ್ಲಲಾಗುತಿತ್ತು.’—ಯಾಜ. 20:27.

ಧರ್ಮೋಪದೇಶಕಾಂಡ 22:23, 24 ಹೀಗೆ ಹೇಳುತ್ತದೆ: “ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಯಾವನಾದರೂ ಊರೊಳಗೆ ಮರುಳುಗೊಳಿಸಿ ಸಂಗಮಿಸಿದರೆ ನೀವು ಅವರಿಬ್ಬರನ್ನೂ ಊರುಬಾಗಲಿನ ಹೊರಕ್ಕೆ ತರಿಸಿ ಕಲ್ಲೆಸೆದು ಕೊಲ್ಲಬೇಕು. ಒಬ್ಬನಿಗೆ ನಿಶ್ಚಿತಳಾದ ಸ್ತ್ರೀಯನ್ನು ಕೆಡಿಸಿದ್ದರಿಂದ ಆ ಪುರುಷನಿಗೂ ಊರಲ್ಲಿದ್ದು ಕೂಗಿಕೊಳ್ಳದೆಹೋದದರಿಂದ ಆ ಸ್ತ್ರೀಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” ಇದರಿಂದ ನಮಗೇನು ಗೊತ್ತಾಗುತ್ತದೆಂದರೆ ಆರಂಭದ ಇಸ್ರಾಯೇಲ್ಯರಲ್ಲಿ ಯಾರಾದರೂ ಘೋರ ತಪ್ಪನ್ನು ಮಾಡಿದರೆ ಅವರನ್ನು ಶಿಕ್ಷಿಸುವ ಮುಖ್ಯ ವಿಧ ಕಲ್ಲೆಸೆದು ಕೊಲ್ಲುವುದಾಗಿತ್ತು. *

“ಮರಕ್ಕೆ ತೂಗಹಾಕಲ್ಪಟ್ಟವನು ದೇವರ ಶಾಪವನ್ನು ಹೊಂದಿದವ”ನೆಂದು ಧರ್ಮೋಪದೇಶಕಾಂಡ 21:23 ಹೇಳುತ್ತೆ. ಹಾಗಾದರೆ “ದೇವರ ಶಾಪ”ಕ್ಕೆ ಗುರಿಯಾದ ಒಬ್ಬ ದುಷ್ಕರ್ಮಿಯ ಹೆಣವನ್ನು ಎಲ್ಲರೂ ನೋಡುವಂತೆ ಮರಕ್ಕೆ ಅಥವಾ ಕಂಬಕ್ಕೆ ತೂಗುಹಾಕುವುದು ಇಸ್ರಾಯೇಲ್ಯರ ಮೇಲೆ ಪ್ರಭಾವ ಬೀರಿರಬೇಕು. ಹೀಗೆ, ತಪ್ಪು ಮಾಡಿದವನನ್ನು ಮರಕ್ಕೆ ನೇತಾಡಿಸುವುದು ಇತರರಿಗೆ ಒಂದು ಎಚ್ಚರಿಕೆಯಾಗಿ ಇರುತ್ತಿತ್ತು.

[ಪಾದಟಿಪ್ಪಣಿ]

^ ಪ್ಯಾರ. 6 ಧರ್ಮಶಾಸ್ತ್ರಕ್ಕನುಸಾರ ದುಷ್ಕರ್ಮಿಗಳನ್ನು ಮೊದಲು ಸಾಯಿಸಿ ನಂತರ ಕಂಬದ ಮೇಲೆ ತೂಗುಹಾಕುತ್ತಿದ್ದರು ಎನ್ನುವದನ್ನು ಅನೇಕ ವಿದ್ವಾಂಸರು ಒಪ್ಪುತ್ತಾರೆ. ಆದರೆ ಒಂದನೇ ಶತಮಾನದಷ್ಟಕ್ಕೆ ಕೆಲವು ದುಷ್ಕರ್ಮಿಗಳನ್ನು ಯೆಹೂದಿಗಳು ಕಂಬದ ಮೇಲೆ ಜೀವಂತವಾಗಿ ತೂಗುಹಾಕಿ ಸಾಯಲು ಬಿಡುತ್ತಿದ್ದರು ಎನ್ನುವುದಕ್ಕೆ ಪುರಾವೆ ಇದೆ.

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]

ಪ್ರಾಚೀನ ಇಸ್ರಾಯೇಲ್ಯರ ಕಾಲದಲ್ಲಿ, ಮರಣದಂಡನೆ ಪಡೆದ ವ್ಯಕ್ತಿಯನ್ನು ಮೊದಲು ಸಾಯಿಸಿ ನಂತರ ಮರದ ದಿಮ್ಮಿಗೆ ಅಥವಾ ಕಂಬಕ್ಕೆ ಜಡಿಯುತ್ತಿದ್ದರು