ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಸತ್ಕ್ರಿಯೆಗಳನ್ನು ಮಾಡುವ ಹುರುಪು’ ನಿಮ್ಮಲ್ಲಿದೆಯೇ?

‘ಸತ್ಕ್ರಿಯೆಗಳನ್ನು ಮಾಡುವ ಹುರುಪು’ ನಿಮ್ಮಲ್ಲಿದೆಯೇ?

‘ಸತ್ಕ್ರಿಯೆಗಳನ್ನು ಮಾಡುವ ಹುರುಪು’ ನಿಮ್ಮಲ್ಲಿದೆಯೇ?

‘ಕ್ರಿಸ್ತನು ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾದ ತನ್ನ ಸ್ವಂತ ವಿಶಿಷ್ಟ ಜನರನ್ನು ತನಗಾಗಿ ಶುದ್ಧೀಕರಿಸುವುದಕ್ಕೆ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.’—ತೀತ 2:13, 14.

ನಿಮ್ಮ ಉತ್ತರವೇನು?

ಸತ್ಕ್ರಿಯೆಗಳಲ್ಲಿ ಹುರುಪು ತೋರಿಸುವುದನ್ನು ನೀವು ಗೌರವವೆಂದು ಯಾಕೆ ವೀಕ್ಷಿಸುತ್ತೀರಿ?

ಸುವಾರ್ತೆಯನ್ನು ಹುರುಪಿನಿಂದ ಸಾರುವುದರ ಪ್ರಮುಖತೆಯನ್ನು ದಾನಿಯೇಲ 2:41-45 ಹೇಗೆ ತೋರಿಸುತ್ತೆ?

ಒಳ್ಳೆ ನಡತೆ ಜನರನ್ನು ಹೇಗೆ ಸತ್ಯಾರಾಧನೆ ಕಡೆಗೆ ಮತ್ತು ಯೆಹೋವನ ಕಡೆಗೆ ಸೆಳೆಯುತ್ತೆ ಅನ್ನುವುದನ್ನು ವಿವರಿಸಿ.

1, 2. (1) ಯೆಹೋವನ ಸಾಕ್ಷಿಗಳಿಗೆ ಮಾತ್ರ ಯಾವ ಗೌರವ ಸಿಕ್ಕಿದೆ? (2) ಆ ಸುಯೋಗದ ಬಗ್ಗೆ ನಿಮಗೆ ಹೇಗನಿಸುತ್ತೆ?

ಉತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿ ಸಿಕ್ಕಾಗ ಅದನ್ನು ದೊಡ್ಡ ಗೌರವ ಅಂದುಕೊಳ್ಳುತ್ತಾರೆ. ಉದಾಹರಣೆಗೆ, ಎರಡು ಜನಾಂಗಗಳ ಮಧ್ಯೆ ಶಾಂತಿಯನ್ನು ಸ್ಥಾಪಿಸಿದ್ದಕ್ಕೆ ನೊಬೆಲ್‌ ಪ್ರಶಸ್ತಿ ಪಡೆದ ಅನೇಕರು ಅದನ್ನು ತುಂಬ ಅಮೂಲ್ಯವೆಂದು ಎಣಿಸುತ್ತಾರೆ. ಇದೆಲ್ಲಕ್ಕಿಂತ ದೊಡ್ಡ ಗೌರವವನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ! ನಮ್ಮನ್ನು ತನ್ನ ರಾಯಭಾರಿಗಳಾಗಿ ನೇಮಿಸಿ, ಜನರು ತನ್ನೊಟ್ಟಿಗೆ ಶಾಂತಿ ಸಂಬಂಧಕ್ಕೆ ಬರಲು ಸಹಾಯ ಮಾಡುವ ನೇಮಕವನ್ನು ನಮಗೆ ಕೊಟ್ಟಿದ್ದಾನೆ.

2 ಈ ಗೌರವ ಸಿಕ್ಕಿರುವುದು ಯೆಹೋವನ ಸಾಕ್ಷಿಗಳಾದ ನಮಗೆ ಮಾತ್ರ. ದೇವರ ಮತ್ತು ಯೇಸು ಕ್ರಿಸ್ತನ ಮಾರ್ಗದರ್ಶನೆಯ ಕೆಳಗೆ ನಾವು, “ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬನ್ನಿ” ಎಂದು ಜನರನ್ನು ಬೇಡಿಕೊಳ್ಳುತ್ತೇವೆ. (2 ಕೊರಿಂ. 5:20) ಜನರನ್ನು ಸತ್ಯದ ಕಡೆಗೆ ಸೆಳೆಯಲು ದೇವರು ನಮ್ಮನ್ನು ಉಪಯೋಗಿಸುತ್ತಿದ್ದಾನೆ. ಹಾಗಾಗಿ ಇಂದು 235ಕ್ಕೂ ಹೆಚ್ಚು ದೇಶ-ದ್ವೀಪಗಳಲ್ಲಿರುವ ಲಕ್ಷಾಂತರ ಜನರು ದೇವರೊಂದಿಗೆ ಒಳ್ಳೆ ಸಂಬಂಧ ಗಳಿಸಲು ಸಾಧ್ಯವಾಗಿದೆ. ಮತ್ತು ಅವರಿಗೀಗ ಅನಂತಜೀವನದ ನಿರೀಕ್ಷೆ ಇದೆ. (ತೀತ 2:11) ನಮ್ಮ ಹೃದಯದ ತುಂಬ ಹುರುಪನ್ನು ತುಂಬಿಕೊಂಡು ನಾವು ‘ಇಷ್ಟವುಳ್ಳ ಪ್ರತಿಯೊಬ್ಬರಿಗೆ ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳುವಂತೆ’ ಆಮಂತ್ರಿಸುತ್ತಿದ್ದೇವೆ. (ಪ್ರಕ. 22:17) ನಮಗೆ “ಸತ್ಕ್ರಿಯೆಗಳಲ್ಲಿ ಹುರುಪು” ಇದೆ. ಅಂದರೆ ನಮಗೆ ಸಿಕ್ಕಿರುವ ಸುಯೋಗವನ್ನು ಅಮೂಲ್ಯವೆಂದು ಎಣಿಸುತ್ತೇವೆ. ಅದನ್ನು ಶ್ರದ್ಧೆಯಿಂದ ಮಾಡುತ್ತೇವೆ. (ತೀತ 2:14) ನಮ್ಮಲ್ಲಿರುವ ಈ ಹುರುಪು ಜನರನ್ನು ಹೇಗೆ ಯೆಹೋವನ ಕಡೆಗೆ ಸೆಳೆಯಲು ಸಹಾಯ ಮಾಡುತ್ತದೆಂದು ನಾವೀಗ ನೋಡೋಣ. ಅದರಲ್ಲಿ ಒಂದು ವಿಧ ನಮ್ಮ ಸಾರುವ ಕೆಲಸ.

ಯೆಹೋವನ ಮತ್ತು ಯೇಸುವಿನ ಹುರುಪನ್ನು ಅನುಕರಿಸಿ

3. ಯೆಹೋವನಲ್ಲಿರುವ ಹುರುಪು ನಮಗೆ ಯಾವ ಆಶ್ವಾಸನೆ ಕೊಡುತ್ತೆ?

3 ದೇವರ ಮಗನ ಆಡಳಿತವು ಸಾಧಿಸಲಿರುವ ವಿಷಯಗಳ ಕುರಿತು ತಿಳಿಸುತ್ತಾ ಯೆಶಾಯ 9:7 ಹೇಳುವುದು: “ಸೇನಾಧೀಶ್ವರನಾದ ಯೆಹೋವನ [ಹುರುಪು] ಇದನ್ನು ನೆರವೇರಿಸುವದು.” ಈ ಮಾತುಗಳು ತಿಳಿಸುವಂತೆ ನಮ್ಮ ಸ್ವರ್ಗೀಯ ತಂದೆಗೆ ಮಾನವರ ರಕ್ಷಣೆ ಬಗ್ಗೆ ಹಪಾಹಪಿ ಇದೆ. ಯೆಹೋವನ ಹುರುಪಿನ ಮಾದರಿ ಏನು ತೋರಿಸಿಕೊಡುತ್ತೆಂದರೆ, ಆತನು ಕೊಟ್ಟ ಸುವಾರ್ತೆ ಕೆಲಸಕ್ಕೆ ನಾವು ಸಂಪೂರ್ಣ ಬೆಂಬಲ, ಉತ್ಸಾಹ, ಹುರುಪನ್ನು ತೋರಿಸಬೇಕು. ಜನರಿಗೆ ದೇವರ ಬಗ್ಗೆ ತಿಳಿಸಿ ಸಹಾಯ ಮಾಡಬೇಕೆಂಬ ಕಡುಬಯಕೆ ನಮ್ಮಲ್ಲಿ ಇರುವುದಾದರೆ ನಾವು ದೇವರ ಹುರುಪನ್ನು ಪ್ರತಿಫಲಿಸಿದ ಹಾಗೆ. ದೇವರ ಜೊತೆಕೆಲಸದವರಾಗಿ ಸುವಾರ್ತೆ ಸಾರುವುದರಲ್ಲಿ ನಮ್ಮ ಪೂರ್ತಿ ಶಕ್ತಿಯನ್ನು ವಿನಿಯೋಗಿಸಲು ದೃಢಸಂಕಲ್ಪ ಮಾಡೋಣ. ನಾವು ಯಾವುದೇ ಸನ್ನಿವೇಶದಲ್ಲಿರಲಿ ನಮ್ಮಿಂದಾದಷ್ಟು ಹೆಚ್ಚು ಶ್ರಮಿಸೋಣ.—1 ಕೊರಿಂ. 3:9.

4. ಶುಶ್ರೂಷೆಯಲ್ಲಿ ಹುರುಪು ತೋರಿಸುವುದರಲ್ಲಿ ಯೇಸು ಹೇಗೆ ಮಾದರಿಯಿಟ್ಟನು?

4 ಯೇಸು ಕ್ರಿಸ್ತನ ಉದಾಹರಣೆ ಗಮನಿಸಿ. ಸುವಾರ್ತೆಯನ್ನು ಹುರುಪಿನಿಂದ ಸಾರುವುದರಲ್ಲಿ ಆತನು ಅತ್ಯುತ್ತಮ ಮಾದರಿ. ಎಷ್ಟೇ ಕಡು ವಿರೋಧ ಹಿಂಸೆ ಬಂದರೂ ಸಾಯುವವರೆಗೂ ತನ್ನಲ್ಲಿರುವ ಹುರುಪನ್ನು ಬಿಟ್ಟುಕೊಡಲಿಲ್ಲ. (ಯೋಹಾ. 18:36, 37) ತನ್ನ ಜೀವವನ್ನು ಅರ್ಪಿಸುವ ಸಮಯ ಹತ್ತಿರವಾದಾಗ ಆತನಲ್ಲಿರುವ ಹುರುಪು ಇನ್ನಷ್ಟು ತೋರಿಬಂತು.

5. ಯೇಸು ತಾನು ಹೇಳಿದ ದೃಷ್ಟಾಂತದ ಪ್ರಕಾರವೇ ಹೇಗೆ ನಡಕೊಂಡನು?

5 ಯೇಸು ತನ್ನ ಮೂರನೇ ವರ್ಷದ ಶುಶ್ರೂಷೆಯ ಕೊನೆಗೆ ಒಂದು ದೃಷ್ಟಾಂತವನ್ನು ಹೇಳಿದನು. ಒಬ್ಬ ಯಜಮಾನನು ತನ್ನ ದ್ರಾಕ್ಷಿಯ ತೋಟದಲ್ಲಿ ಅಂಜೂರದ ಮರವನ್ನು ನೆಡಿಸಿದ್ದನು. ಆ ಮರ 3 ವರ್ಷಗಳ ವರೆಗೆ ಯಾವುದೇ ಫಲವನ್ನು ಕೊಡಲಿಲ್ಲ. ಆಗ ಯಜಮಾನನು ತೋಟಗಾರನಿಗೆ ಅದನ್ನು ಕಡಿದುಹಾಕುವಂತೆ ಹೇಳಿದನು. ಆದರೆ ತೋಟಗಾರನು ತಾನು ಆ ಮರಕ್ಕೆ ಗೊಬ್ಬರ ಹಾಕುವೆನು ಎನ್ನುತ್ತಾ ಇನ್ನು ಸ್ವಲ್ಪ ಸಮಯವನ್ನು ಕೇಳಿದನು. (ಲೂಕ 13:6-9 ಓದಿ.) ಯೇಸು ಈ ದೃಷ್ಟಾಂತವನ್ನು ಹೇಳಿದ ಸಮಯದಷ್ಟಕ್ಕೆ ಆತನ ಸುವಾರ್ತೆಯನ್ನು ಕೇಳಿ ಶಿಷ್ಯರಾದವರು ಕೆಲವೇ ಮಂದಿ ಇದ್ದರು. ಆದರೂ ದೃಷ್ಟಾಂತದಲ್ಲಿ ಹೇಳಿದಂತೆ ಯೇಸು ಉಳಿದಿದ್ದ ಸ್ವಲ್ಪವೇ ಸಮಯವನ್ನು ಹೆಚ್ಚು ಪ್ರಯಾಸ ಹಾಕಿ ಸುವಾರ್ತೆ ಸಾರಲು ಬಳಸಿದನು. ಆತನ ಮರಣಕ್ಕಿಂತ ಸುಮಾರು ಆರು ತಿಂಗಳ ಮುಂಚೆ ಯೂದಾಯ ಮತ್ತು ಪೆರಿಯದಲ್ಲಿ ಹುರುಪಿನಿಂದ ಸಾರಿದನು. ಯೇಸು ಕ್ರಿಸ್ತನು ಇನ್ನೇನು ತನ್ನ ಸಾವಿಗೆ ಕೆಲವು ದಿನಗಳಿರುವಾಗ ರಾಜ್ಯ ಸಂದೇಶವನ್ನು ಕೇಳದಂತೆ ಜನರ ಕಿವಿಗಳು ಮಂದವಾಗಿರುವುದನ್ನು ನೆನಸಿ ಅತ್ತನು.—ಮತ್ತಾ. 13:15; ಲೂಕ 19:41.

6. ಸುವಾರ್ತೆ ಸಾರುವುದರಲ್ಲಿ ನಾವೇಕೆ ಹೆಚ್ಚು ಪ್ರಯಾಸಪಡಬೇಕು?

6 ನಾವು ಅಂತ್ಯಕ್ಕೆ ತುಂಬ ಸನಿಹವಾಗಿರುವುದರಿಂದ ಸುವಾರ್ತೆ ಸಾರುವುದರಲ್ಲಿ ಹೆಚ್ಚು ಪ್ರಯಾಸ ಪಡಬೇಕಲ್ಲವೇ? (ದಾನಿಯೇಲ 2:41-45 ಓದಿ.) ಯೆಹೋವನ ಸಾಕ್ಷಿಗಳಾಗಿರುವುದು ನಮಗಿರುವ ದೊಡ್ಡ ಸುಯೋಗವೇ! ಜನರ ಕಷ್ಟಕಾರ್ಪಣ್ಯಗಳು ಅಂತ್ಯವಾಗಲಿರುವ ಕುರಿತು ನಾವು ಮಾತ್ರ ನಿರೀಕ್ಷೆಯನ್ನು ನೀಡಬಲ್ಲೆವು. ಒಂದು ವಾರ್ತಾಪತ್ರಿಕೆಯ ಅಂಕಣಗಾರ್ತಿ ಇತ್ತೀಚೆಗೆ ಒಂದು ಪ್ರಶ್ನೆಯನ್ನು, ಉತ್ತರಿಸಲಾಗದ ಪ್ರಶ್ನೆಯೆಂದು ಕರೆದರು. ಒಳ್ಳೆ ಜನರಿಗೆ ಕೆಟ್ಟದ್ದು ಯಾಕೆ ಆಗುತ್ತೆ? ಅನ್ನೋದೆ ಅದು. ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಬಯಸುವವರಿಗೆ ಬೈಬಲಿನಿಂದ ಸತ್ಯವನ್ನು ಹಂಚಿಕೊಳ್ಳುವ ಸುಯೋಗ ಮತ್ತು ಜವಾಬ್ದಾರಿ ಕ್ರೈಸ್ತರಾದ ನಮಗಿದೆ. ಈ ದೈವಿಕ ನೇಮಕವನ್ನು ಪೂರೈಸುವಾಗ ನಾವು ‘ಪವಿತ್ರಾತ್ಮದಿಂದ ಪ್ರಜ್ವಲಿಸಬೇಕು.’ (ರೋಮ. 12:11) ದೇವರ ಆಶೀರ್ವಾದ ಪಡೆದು ಸೌವಾರ್ತಿಕ ಕೆಲಸದಲ್ಲಿ ಹುರುಪಿನಿಂದ ಮುನ್ನಡೆಯುವಾಗ ದೇವರ ಬಗ್ಗೆ ತಿಳಿಯಲು ಮತ್ತು ಪ್ರೀತಿಸಲು ಇತರರಿಗೆ ಸಹಾಯಮಾಡುತ್ತೇವೆ.

ಸ್ವತ್ಯಾಗದ ಮನೋಭಾವದಿಂದ ಯೆಹೋವನಿಗೆ ಗೌರವ

7, 8. ಸ್ವತ್ಯಾಗದ ಮನೋಭಾವ ಯೆಹೋವನಿಗೆ ಹೇಗೆ ಗೌರವ ತರುತ್ತೆ?

7 ಅಪೊಸ್ತಲ ಪೌಲನಿಗಾದಂತೆ ನಮಗೂ ಸಹ ಸುವಾರ್ತೆಯು “ನಿದ್ರಾರಹಿತ ರಾತ್ರಿ”ಗಳನ್ನು “ಆಹಾರವಿಲ್ಲದ ಸಮಯಗಳ”ನ್ನು ತರಬಹುದು. (2 ಕೊರಿಂ. 6:5) ಇಂಥ ಅನೇಕ ತ್ಯಾಗಗಳನ್ನು ನಮ್ಮ ಸಹೋದರ-ಸಹೋದರಿಯರು ಮಾಡಿದ್ದಾರೆ. ಅನೇಕ ಪಯನೀಯರರು ತಮ್ಮ ಆರ್ಥಿಕ ಅಗತ್ಯಗಳನ್ನು ತಾವೇ ಪೂರೈಸುತ್ತಾ ತಮ್ಮ ಜೀವನದಲ್ಲಿ ಸುವಾರ್ತೆಗೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ. ಮಿಷನರಿಗಳು ದೂರದೇಶಗಳಲ್ಲಿರುವ ಜನರಿಗೆ ಸುವಾರ್ತೆ ತಲುಪಿಸಲು ತಮ್ಮನ್ನೇ “ಪಾನದ್ರವ್ಯವಾಗಿ” ಅರ್ಪಿಸಿದ್ದಾರೆ. (ಫಿಲಿ. 2:17) ನಮ್ಮ ಹಿರಿಯರ ಕುರಿತೇನು? ಪರಿಪಾಲನೆ ಮಾಡಲು ಅವರು ಅನೇಕಬಾರಿ ಊಟ-ನಿದ್ದೆ ಬಿಟ್ಟು ಪ್ರಯಾಸಪಡುತ್ತಾರೆ. ನಮ್ಮಲ್ಲಿರುವ ಅನೇಕ ವೃದ್ಧರು, ಅಸ್ವಸ್ಥರು ಎಷ್ಟೇ ಕಷ್ಟವಾದರೂ ಕೂಟಗಳಿಗೆ, ಕ್ಷೇತ್ರ ಸೇವೆಗೆ ತಪ್ಪದೆ ಹಾಜರಾಗಲು ಪ್ರಯತ್ನಿಸುತ್ತಾರೆ. ಇವರೆಲ್ಲರ ಬಗ್ಗೆ ಒಂದು ಕ್ಷಣ ಯೋಚಿಸಿ ನೋಡಿ. ನಿಮ್ಮ ಹೃದಯ ಅವರ ಕಡೆಗೆ ಗಣ್ಯತೆಯಿಂದ ತುಂಬಿಬರುವುದಿಲ್ಲವೇ? ಇದೆಲ್ಲವನ್ನು ಜನರು ನೋಡುವಾಗ ಸುವಾರ್ತೆ ಕಡೆಗಿನ ಅವರ ದೃಷ್ಟಿಕೋನ ಬದಲಾಗುತ್ತೆ.

8 ಯೂರೋಪಿನ ಒಂದು ದೇಶದಲ್ಲಿ ಸಾಕ್ಷಿಯಲ್ಲದ ಒಬ್ಬ ವ್ಯಕ್ತಿ ವಾರ್ತಾಪತ್ರಿಕೆಗೆ ಹೀಗೆ ಬರೆದನು: “ಈಗೀಗ ಜನರು ಧರ್ಮದಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ . . . ಚರ್ಚ್‌ನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ದಿನವಿಡೀ ಮಾಡ್ತಿರೋದಾದರೂ ಏನು? ಯೇಸು ಕ್ರಿಸ್ತನ ಹಾಗೆ ಅವರು ಜನರಿಗೆ ಹೋಗಿ ಸುವಾರ್ತೆ ಸಾರಲ್ಲ . . . ಇದನ್ನು ಅಚ್ಚುಕಟ್ಟಾಗಿ ಮಾಡುವ ಒಂದೇ ಒಂದು ಧರ್ಮ ಯೆಹೋವನ ಸಾಕ್ಷಿಗಳು. ಜನರನ್ನು ಅವರು ಭೇಟಿಯಾಗಿ ಸತ್ಯವನ್ನು ಸಾರಲು ತಮ್ಮನ್ನೇ ನೀಡಿಕೊಂಡಿದ್ದಾರೆ.” ಸ್ವಾರ್ಥ ತುಂಬಿರುವ ಈ ಲೋಕದಲ್ಲಿ ನಮ್ಮ ಸ್ವತ್ಯಾಗದ ಮನೋಭಾವ ಯೆಹೋವನಿಗೆ ಗೌರವ ತರುತ್ತೆ.—ರೋಮ. 12:1.

9. ಸುವಾರ್ತೆಯಲ್ಲಿ ಹುರುಪನ್ನು ತೋರಿಸುತ್ತಿರಲು ಯಾವುದು ನಮ್ಮನ್ನು ಪ್ರೇರಿಸುತ್ತದೆ?

9 ಒಂದುವೇಳೆ ಸಾರುವುದರ ಕಡೆಗಿನ ನಿಮ್ಮ ಹುರುಪು ಕುಂದಿಹೋಗುತ್ತಿದೆ ಎಂದು ಅನಿಸಿದರೆ ಏನು ಮಾಡಬಹುದು? ಸುವಾರ್ತೆ ಸಾರುವುದರಿಂದ ಯೆಹೋವನು ಏನು ಸಾಧಿಸಲು ಬಯಸುತ್ತಿದ್ದಾನೆ ಅನ್ನುವುದರ ಕುರಿತು ಯೋಚಿಸಿದರೆ ಸಹಾಯವಾಗುತ್ತೆ. (ರೋಮನ್ನರಿಗೆ 10:13-15 ಓದಿ.) ನಂಬಿಕೆಯಿಂದ ದೇವರ ನಾಮದಲ್ಲಿ ಕೋರುವುದರ ಮೇಲೆ ಜನರ ರಕ್ಷಣೆ ಹೊಂದಿಕೊಂಡಿದೆ. ಆದರೆ ಅವರು ಹಾಗೆ ಮಾಡಬೇಕಾದರೆ ನಾವು ಹೋಗಿ ಅವರಿಗೆ ಸಾರಲೇಬೇಕು. ಇದನ್ನು ತಿಳಿದಿರುವುದು ಸತ್ಕ್ರಿಯೆಗಳಲ್ಲಿ ಹುರುಪನ್ನು ತೋರಿಸುವಂತೆ ನಮ್ಮನ್ನು ಹುರಿದುಂಬಿಸಬೇಕು. ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಶ್ರದ್ಧೆಯಿಂದ ಶ್ರಮಿಸುವಂತೆ ಪ್ರೇರಿಸಬೇಕು.

ಉತ್ತಮ ನಡತೆ ಜನರನ್ನು ದೇವರ ಕಡೆಗೆ ಸೆಳೆಯುತ್ತೆ

10. ನಮ್ಮ ಉತ್ತಮ ನಡತೆ ಜನರನ್ನು ಯೆಹೋವನ ಕಡೆಗೆ ಸೆಳೆಯುತ್ತೆ ಅಂತ ಹೇಗೆ ಹೇಳಬಹುದು?

10 ಜನರನ್ನು ಸತ್ಯದ ಕಡೆಗೆ ಸೆಳೆಯಲು ಸುವಾರ್ತೆ ಕಡೆಗಿನ ಹುರುಪೊಂದೇ ಸಾಕಾಗಲ್ಲ. ಉತ್ತಮ ಕ್ರೈಸ್ತ ನಡತೆಯನ್ನು ಸಹ ಪ್ರದರ್ಶಿಸಬೇಕು. ನಡತೆ ಬಗ್ಗೆ ಒತ್ತು ನೀಡುತ್ತಾ ಪೌಲ ಬರೆದದ್ದು: “ನಮ್ಮ ಶುಶ್ರೂಷೆಯು ಲೋಪವುಳ್ಳದ್ದಾಗಿ ಕಂಡುಬರದಂತೆ ನಾವು ಯಾವುದೇ ವಿಧದಲ್ಲಿ ಎಡವಲು ಯಾವುದೇ ಕಾರಣವನ್ನು ಕೊಡುತ್ತಿಲ್ಲ.” (2 ಕೊರಿಂ. 6:3) ನಮ್ಮ ಹಿತನುಡಿ ಮತ್ತು ಒಳ್ಳೆ ನಡತೆ ನಮ್ಮ ದೈವಿಕ ಬೋಧನೆಯನ್ನು ಅಲಂಕರಿಸಿ ಜನರನ್ನು ಯೆಹೋವನ ಆರಾಧನೆ ಕಡೆಗೆ ಆಕರ್ಷಿಸುತ್ತೆ. (ತೀತ 2:10) ನಮ್ಮ ಕ್ರೈಸ್ತ ನಡತೆಯನ್ನು ಗಮನಿಸಿ ಅನೇಕ ಯಥಾರ್ಥ ಜನರು ಸತ್ಯಕ್ಕೆ ಬಂದಿರುವ ಅನುಭವಗಳಿವೆ.

11. ನಮ್ಮ ನಡತೆ ಬಗ್ಗೆ ನಾವೇಕೆ ಪ್ರಾರ್ಥನಾಪೂರ್ವಕವಾಗಿ ಆಲೋಚಿಸಬೇಕು?

11 ನಮ್ಮ ಉತ್ತಮ ನಡತೆ ಹೇಗೆ ಜನರನ್ನು ದೇವರ ಕಡೆಗೆ ಸೆಳೆಯುತ್ತೋ ಹಾಗೇ ನಮ್ಮ ತಪ್ಪು ನಡತೆ ಜನರನ್ನು ದೇವರ ಹತ್ತಿರ ಬರದಂತೆ ತಡೆಯುತ್ತೆ. ಹಾಗಾಗಿ ನಾವು ಕೆಲಸ ಸ್ಥಳದಲ್ಲಿರಲಿ, ಮನೆಯಲ್ಲಿರಲಿ, ಶಾಲೆ-ಕಾಲೇಜಿನಲ್ಲಿರಲಿ ಜನರಿಗೆ ನಮ್ಮ ನಡತೆಯಲ್ಲಾಗಲಿ ನಮ್ಮ ಸುವಾರ್ತೆಯಲ್ಲಾಗಲಿ ಯಾವುದೇ ತಪ್ಪು ಕಂಡುಬರಬಾರದು. ನಾವು “ಬೇಕುಬೇಕೆಂದೇ ಪಾಪವನ್ನು ಪರಿಪಾಠವಾಗಿ” ಮಾಡಿಕೊಂಡಿರುವುದಾದರೆ ಅದರ ಪ್ರತಿಫಲ ತುಂಬ ಗಂಭೀರವಾಗಿರುತ್ತೆ. (ಇಬ್ರಿ. 10:26, 27) ಆದ್ದರಿಂದ ನಾವು ಹೇಗೆ ನಡಕೊಳ್ಳುತ್ತಿದ್ದೇವೆ, ಅದು ಬೇರೆಯವರಿಗೆ ನಮ್ಮ ಬಗ್ಗೆ ಏನನ್ನು ತಿಳಿಸುತ್ತೆ ಎಂದು ಪ್ರಾರ್ಥನಾಪೂರ್ವಕವಾಗಿ ಪರೀಕ್ಷಿಸಿಕೊಳ್ಳಬೇಕು. ಲೋಕದಲ್ಲಿ ನೈತಿಕತೆಯ ಮಟ್ಟ ತಳಕ್ಕೆ ಮುಟ್ಟುತ್ತಿರುವುದರಿಂದ, “ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯ” ಯಥಾರ್ಥ ಜನರಿಗೆ ಸ್ಪಷ್ಟವಾಗಿ ಕಂಡುಬರುತ್ತದೆ. (ಮಲಾ. 3:18) ಹೌದು, ನಮ್ಮ ಕ್ರೈಸ್ತ ನಡತೆ ಜನರನ್ನು ದೇವರೊಂದಿಗೆ ಶಾಂತಿಸಂಬಂಧಕ್ಕೆ ತರುವುದರಲ್ಲಿ ಮಹತ್ವದ ಪಾತ್ರವಹಿಸುತ್ತೆ.

12-14. ನಾವು ವಿರೋಧವನ್ನು ತಾಳಿಕೊಳ್ಳುವ ವಿಧದಿಂದ ಜನರು ಸುವಾರ್ತೆ ಕಡೆಗೆ ಯಾವ ಮನೋಭಾವ ತಾಳಬಹುದು? ಉದಾಹರಣೆ ಕೊಡಿ.

12 ಸುವಾರ್ತೆ ಸಾರುವಾಗ ಜನರು ತನ್ನನ್ನು ವಿರೋಧಿಸಿ ಹಿಂಸಿಸಿದ್ದನ್ನು, ಹೊಡೆದದ್ದನ್ನು, ಸೆರೆಮನೆಗೆ ಹಾಕಿದ್ದನ್ನು ಪೌಲ ಕೊರಿಂಥದವರಿಗೆ ಬರೆದ ಎರಡನೇ ಪತ್ರದಲ್ಲಿ ವಿವರಿಸಿದನು. (2 ಕೊರಿಂಥ 6:4, 5 ಓದಿ.) ನಾವು ಸಹ ನಮ್ಮ ನಂಬಿಕೆಯ ನಿಮಿತ್ತ ವಿರೋಧಕ್ಕೆ ಒಳಗಾಗುತ್ತೇವೆ. ಆಗ ನಾವು ತೋರಿಸುವ ತಾಳ್ಮೆಯನ್ನು ಇತರರು ಗಮನಿಸಿ ಸತ್ಯವನ್ನು ಸ್ವೀಕರಿಸಬಹುದು. ಉದಾಹರಣೆಗೆ, ಕೆಲವು ವರ್ಷಗಳ ಹಿಂದೆ ಅಂಗೋಲ ಅನ್ನುವ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳನ್ನು ನಿರ್ನಾಮ ಮಾಡಲು ಪ್ರಯತ್ನ ನಡೆಯಿತು. ಇಬ್ಬರು ಸಾಕ್ಷಿಗಳನ್ನು ಮತ್ತು ಕೂಟಗಳಿಗೆ ಬರುತ್ತಿದ್ದ 30 ಆಸಕ್ತರನ್ನು ವಿರೋಧಿಗಳು ಸುತ್ತುವರಿದರು. ಅದನ್ನು ಗಮನಿಸಲು ಸ್ಥಳೀಯ ಜನರು ಕೂಡ ಸೇರಿದರು. ಇವರನ್ನು ವಿರೋಧಿಗಳು ರಕ್ತಮಯವಾಗುವ ವರೆಗೆ ಹೊಡೆಯುತ್ತಿರುವುದನ್ನು ಜನರು ನೋಡಿದರು. ಸ್ತ್ರೀಯರು ಮಕ್ಕಳು ಎಂದು ನೋಡದೆ ಎಲ್ಲರೊಟ್ಟಿಗೆ ಕ್ರೂರವಾಗಿ ವರ್ತಿಸಿದರು. ಇದನ್ನು ನೋಡಿಯಾದರೂ ಜನರು ಯೆಹೋವನ ಸಾಕ್ಷಿಗಳ ಸಂದೇಶವನ್ನು ಕೇಳಲು ಹೆದರಬೇಕೆಂಬುದು ಅವರ ಉದ್ದೇಶವಾಗಿತ್ತು. ಆದರೆ ಈ ರೀತಿಯ ಸಾರ್ವಜನಿಕ ಹಿಂಸಾಕಾಂಡದ ನಂತರ ಅನೇಕ ಜನರು ತಾವಾಗಿಯೇ ಯೆಹೋವನ ಸಾಕ್ಷಿಗಳ ಹತ್ತಿರ ಬಂದು ಬೈಬಲ್‌ ಅಧ್ಯಯನಕ್ಕಾಗಿ ಕೇಳಿಕೊಂಡರು. ಹೀಗೆ, ಸಾರುವ ಕೆಲಸ ಇನ್ನಷ್ಟು ಪ್ರಗತಿಯಾಗಿ ಹೆಚ್ಚೆಚ್ಚು ಜನರು ಸತ್ಯಕ್ಕೆ ಬಂದರು. ಎಂಥ ಆಶೀರ್ವಾದ ಅಲ್ವಾ!

13 ಈ ಉದಾಹರಣೆಯಿಂದ ತಿಳಿದುಬರುವುದೇನೆಂದರೆ, ವಿರೋಧದ ಮಧ್ಯೆಯೂ ಬೈಬಲ್‌ ಮಟ್ಟಗಳನ್ನು ಬಿಟ್ಟುಕೊಡದೆ ಧೈರ್ಯದ ನಿಲುವನ್ನು ತೋರಿಸುವುದು ಜನರು ಸತ್ಯ ಸ್ವೀಕರಿಸುವಂತೆ ಮಾಡುತ್ತೆ. ಪೇತ್ರ ಮತ್ತು ಇತರ ಅಪೊಸ್ತಲರ ಧೈರ್ಯದ ನಿಲುವು ಅನೇಕರನ್ನು ದೇವರೊಂದಿಗೆ ಶಾಂತಿಸಂಬಂಧಕ್ಕೆ ಬರುವಂತೆ ಮಾಡಿತು. (ಅ. ಕಾ. 5:17-29) ನಮ್ಮ ವಿಷಯದಲ್ಲೂ ಹಾಗೇ ಆಗಬಹುದು. ಸರಿಯಾದದ್ದನ್ನು ಮಾಡಲು ನಮ್ಮಲ್ಲಿರುವ ದೃಢಸಂಕಲ್ಪವನ್ನು ನೋಡಿ ನಮ್ಮ ಜೊತೆ ಓದುತ್ತಿರುವವರು, ಕೆಲಸ ಮಾಡುತ್ತಿರುವವರು, ಕುಟುಂಬದವರು ಬದಲಾಗಬಹುದು.

14 ನಮ್ಮ ಕೆಲವು ಸಹೋದರರು ಹಿಂಸೆಯನ್ನು ಯಾವಾಗಲೂ ಎದುರಿಸುತ್ತಾರೆ. ಉದಾಹರಣೆಗೆ, ಅರ್ಮೇನಿಯದಲ್ಲಿ ಸುಮಾರು 40 ಸಹೋದರರು ಮಿಲಿಟರಿ ಸೇರದ ಕಾರಣ ಜೈಲಿನಲ್ಲಿದ್ದಾರೆ. ಬರುವ ದಿನಗಳಲ್ಲಿ ಇನ್ನು ಅನೇಕ ಸಹೋದರರು ಜೈಲಿಗೆ ಹೋಗುವ ಸಾಧ್ಯತೆ ಇದೆ. ಎರಿಟ್ರೀಯದಲ್ಲಿ 55 ಜನರನ್ನು ಜೈಲಿಗೆ ಹಾಕಲಾಗಿದೆ. ಅವರಲ್ಲಿ ಕೆಲವರು 60 ವರ್ಷದವರು. ದಕ್ಷಿಣ ಕೊರಿಯಾದಲ್ಲಿ ಹೆಚ್ಚುಕಡಿಮೆ 700 ಸಾಕ್ಷಿಗಳು ತಮ್ಮ ನಂಬಿಕೆಯ ನಿಮಿತ್ತ ಜೈಲಿನಲ್ಲಿದ್ದಾರೆ. 60 ವರ್ಷಗಳಿಂದಲೂ ಈ ದೇಶದಲ್ಲಿ ಹೀಗೆ ನಡೆಯುತ್ತಾ ಇದೆ. ಹೀಗೆ ಬೇರೆ ಬೇರೆ ದೇಶಗಳಲ್ಲಿ ಹಿಂಸೆಗೆ ಗುರಿಯಾಗಿರುವ ನಮ್ಮ ಸಹೋದರರ ನಿಲುವು ದೇವರ ನಾಮಕ್ಕೆ ಘನ-ಮಾನವನ್ನು ತರಲಿ ಎಂದು ಪ್ರಾರ್ಥಿಸೋಣ. ನೀತಿಯನ್ನು ಪ್ರೀತಿಸುವ ಜನರು ಇದನ್ನು ಗಮನಿಸಿ ಸತ್ಯಾರಾಧನೆ ಕಡೆ ನಿಲುವು ತೆಗೆದುಕೊಳ್ಳಲಿ.—ಕೀರ್ತ. 76:8-10.

15. ನಮ್ಮ ಪ್ರಾಮಾಣಿಕತೆ ಜನರನ್ನು ಸತ್ಯದ ಕಡೆಗೆ ಆಕರ್ಷಿಸುತ್ತೆ ಅನ್ನೋದಕ್ಕೆ ಉದಾಹರಣೆ ಕೊಡಿ.

15 ನಮ್ಮ ಪ್ರಾಮಾಣಿಕ ಜೀವನರೀತಿ ಸಹ ಜನರನ್ನು ಸತ್ಯದ ಕಡೆಗೆ ಆಕರ್ಷಿಸಬಹುದು. (2 ಕೊರಿಂಥ 6:4, 7 ಓದಿ.) ಉದಾಹರಣೆಗೆ ಈ ಅನುಭವ ಗಮನಿಸಿ. “ಒಬ್ಬ ಸಹೋದರಿ ಬಸ್‌ನಲ್ಲಿ ಟಿಕೆಟ್‌ ತೆಗೆದುಕೊಳ್ಳಲು ದುಡ್ಡು ತೆಗೆಯುತ್ತಿದ್ದರು. ಪಕ್ಕದಲ್ಲಿ ಕುಳಿತ ಪರಿಚಯಸ್ಥ ಸ್ತ್ರೀ, ‘ಒಂದೇ ಸ್ಟಾಪ್‌ ತಾನೇ, ಟಿಕೆಟ್‌ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ’ ಅಂದರು. ಆಗ ಸಹೋದರಿ, ಒಂದು ಸ್ಟಾಪ್‌ ಇದ್ದರೂ ಟಿಕೆಟ್‌ ತೆಗೆದುಕೊಳ್ಳುವುದು ಯಾಕೆ ಸರಿಯೆಂದು ಅವರಿಗೆ ವಿವರಿಸಿದರು. ಆ ಸ್ತ್ರೀ ಮುಂದಿನ ಸ್ಟಾಪ್‌ನಲ್ಲಿ ಇಳಿದು ಹೋದರು. ಆಗ ಬಸ್‌ ಡ್ರೈವರ್‌ ಸಹೋದರಿ ಕಡೆಗೆ ತಿರುಗಿ “ನೀವು ಯೆಹೋವನ ಸಾಕ್ಷಿನಾ?” ಎಂದು ಕೇಳಿದರು. “ಹೌದು” ಎಂದ ಸಹೋದರಿ “ಯಾಕೆ ಹಾಗೆ ಕೇಳಿದಿರಿ?” ಎಂದಾಗ, “ಟಿಕೆಟ್‌ ತೆಗೆದುಕೊಳ್ಳುವುದರ ಬಗ್ಗೆ ನೀವು ಅವರೊಟ್ಟಿಗೆ ಮಾತಾಡುವಾಗ ನಾನು ಕೇಳಿಸಿಕೊಂಡೆ. ಹಾಗೆ ಮಾಡುವ ಕೆಲವೇ ಪ್ರಾಮಾಣಿಕ ಜನರಲ್ಲಿ ಯೆಹೋವನ ಸಾಕ್ಷಿಗಳು ಒಬ್ಬರೆಂದು ನನಗೆ ಗೊತ್ತು” ಎಂದರು. ಕೆಲವು ತಿಂಗಳ ನಂತರ ಆ ವ್ಯಕ್ತಿ ನಮ್ಮ ಕೂಟಕ್ಕೆ ಬಂದು ಆ ಸಹೋದರಿಗೆ, “ನನ್ನ ಗುರುತು ಸಿಕ್ಕಿತಾ? ನಾನು ಆ ಬಸ್‌ ಡ್ರೈವರ್‌. ಟಿಕೆಟ್‌ ತೆಗೆದುಕೊಳ್ಳುವುದರ ಬಗ್ಗೆ ನಾವು ಮಾತಾಡಿದ್ವಲ್ಲಾ. ನಿಮ್ಮ ಪ್ರಾಮಾಣಿಕತೆ ನೋಡಿ ನಾನು ಯೆಹೋವನ ಸಾಕ್ಷಿಗಳೊಟ್ಟಿಗೆ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡೆ” ಅಂದರು. ಹೌದು ನಮ್ಮ ಪ್ರಾಮಾಣಿಕತೆ ಜನರು ಸುವಾರ್ತೆಯನ್ನು ನಂಬುವಂತೆ ಮಾಡುತ್ತೆ.

ದೇವರಿಗೆ ಗೌರವ ತರುವ ಗುಣಗಳನ್ನು ಪ್ರದರ್ಶಿಸಿ

16. (1) ದೀರ್ಘ ಸಹನೆ, ದಯೆ, ಪ್ರೀತಿ ಎಂಬಂಥ ಗುಣಗಳು ಜನರ ಹೃದಯಗಳನ್ನು ಹೇಗೆ ಸ್ಪರ್ಶಿಸುತ್ತವೆ? (2) ಸುಳ್ಳುಧರ್ಮದ ಮುಖಂಡರು ಏನು ಮಾಡುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ ಕೊಡಿ.

16 ದೀರ್ಘ ಸಹನೆ, ದಯೆ, ಪ್ರೀತಿ ಎಂಬಂಥ ಗುಣಗಳನ್ನು ನಾವು ತೋರಿಸುವಾಗ ಜನರು ಯೆಹೋವನ ಗೆಳೆಯರಾಗುವಂತೆ ನೆರವಾಗುತ್ತೇವೆ. ನಮ್ಮನ್ನು ಗಮನಿಸುವವರು ದೇವರ ಬಗ್ಗೆ, ಅವರ ಉದ್ದೇಶಗಳ ಬಗ್ಗೆ, ದೇವಜನರ ಬಗ್ಗೆ ತಿಳುಕೊಳ್ಳಲು ಬಯಸಬಹುದು. ಆದರೆ ಸತ್ಯ ಕ್ರೈಸ್ತರ ನಡತೆ ಮನೋಭಾವಕ್ಕೂ ಹೊರತೋರಿಕೆಗೆಂದು ಮಾಡುವ ಧಾರ್ಮಿಕ ಮುಖಂಡರ ಕಪಟ ಭಕ್ತಿಗೂ ಅಜಗಜಾಂತರ. ಕೆಲವು ಧಾರ್ಮಿಕ ಮುಖಂಡರು ಕಪಟ ಭಕ್ತಿಯಿಂದ ಜನರನ್ನು ಮೋಸ ಮಾಡುತ್ತಿದ್ದಾರೆ. ಅವರಿಂದ ಹಣ ಬಾಚಿಕೊಂಡು ಆ ದುಡ್ಡನ್ನು ಕಾರು-ಬಂಗಲೆ ಖರೀದಿಸಲು ಬಳಸುತ್ತಿದ್ದಾರೆ. ಒಬ್ಬರು ತಮ್ಮ ನಾಯಿಗೆ ಹವಾನಿಯಂತ್ರಿತ ಮನೆ ಕಟ್ಟಿಸಿದರಂತೆ. ಹೀಗೆ ಅನೇಕರು ಯೇಸುವಿನ ಶಿಷ್ಯರೆಂದು ಹೇಳಿಕೊಳ್ಳುತ್ತಾರೆ ಆದರೆ “ಉಚಿತವಾಗಿ ಕೊಡಿರಿ” ಅನ್ನುವ ಆಜ್ಞೆನ ಪಾಲಿಸಲ್ಲ. (ಮತ್ತಾ. 10:8) ಪ್ರಾಚೀನ ಇಸ್ರಾಯೇಲ್ಯರಲ್ಲಿದ್ದ ಕೆಲವು ಸ್ವಾರ್ಥಿ ಯಾಜಕರಂತೆ ಇವರು ಸಹ “ಸಂಬಳಕ್ಕಾಗಿ ಉಪದೇಶಿಸುತ್ತಾರೆ” ಮತ್ತು ಅವರ ಬೋಧನೆಗೆ ಬೈಬಲ್‌ನ ಆಧಾರವಿರಲ್ಲ. (ಮೀಕ 3:11) ಇಂತಹ ಕಪಟ ನಡತೆ ಜನರನ್ನು ಯೆಹೋವನೊಂದಿಗೆ ಶಾಂತಿ ಸಂಬಂಧಕ್ಕೆ ತರಲ್ಲ.

17, 18. (1) ಯೆಹೋವನ ಗುಣಗಳನ್ನು ನಮ್ಮ ಜೀವನದಲ್ಲಿ ತೋರಿಸುವಾಗ ಅವರಿಗೆ ಹೇಗೆ ಘನಮಾನ ತರುತ್ತೇವೆ? (2) ಸತ್ಕ್ರಿಯೆಗಳನ್ನು ಮಾಡಲು ದೃಢಸಂಕಲ್ಪ ಮಾಡುವಂತೆ ನಿಮ್ಮನ್ನು ಯಾವುದು ಪ್ರಚೋದಿಸುತ್ತೆ?

17 ಯೆಹೋವನ ಸಾಕ್ಷಿಗಳ ಬೈಬಲ್‌ ಆಧರಿತ ಬೋಧನೆಗಳಷ್ಟೆ ಅಲ್ಲ ಅವರು ನೆರೆಹೊರೆಯವರಿಗೆ ತೋರಿಸುವ ಪ್ರೀತಿ ಸಹ ಅನೇಕರ ಹೃದಯ ತಲಪುತ್ತೆ. ಉದಾಹರಣೆಗೆ, ಒಬ್ಬ ಪಯನೀಯರ್‌ ಸಹೋದರ ಸೇವೆಗೆ ಹೋದಾಗ ವೃದ್ಧ ವಿಧವೆಯೊಬ್ಬರು ಅವರ ಸಂದೇಶವನ್ನು ಕೇಳಲು ನಿರಾಕರಿಸಿದರು. ಸಹೋದರ ಕರೆಘಂಟೆ ಬಾರಿಸಿದಾಗ ತಾನು ಅಡುಗೆಮನೆಯಲ್ಲಿ ಬಲ್ಬನ್ನು ಬದಲಾಯಿಸಲು ಏಣಿ ಮೇಲೆ ನಿಂತಿದ್ದೆ ಎಂದು ಆ ಸ್ತ್ರೀ ಹೇಳಿದರು. “ಈ ಕೆಲಸ ನೀವೊಬ್ಬರೇ ಮಾಡುವುದು ಒಳ್ಳೇದಲ್ಲ” ಎಂದು ಸಹೋದರ ಹೇಳಿ, ಅವರೇ ಬಲ್ಬನ್ನು ಬದಲಾಯಿಸಿಕೊಟ್ಟು ಹೋದರು. ಆ ಸ್ತ್ರೀಯ ಮಗ ಬಂದಾಗ ನಡೆದದ್ದನ್ನು ತಿಳಿದು ಖುಷಿಯಾಗಿ ಆ ಸಹೋದರರನ್ನು ಹುಡುಕಿಕೊಂಡು ಹೋಗಿ ಅವರಿಗೆ ಕೃತಜ್ಞತೆ ಹೇಳಿದರು. ಅನಂತರ ಆ ವ್ಯಕ್ತಿ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡರು.

18 ಸತ್ಕ್ರಿಯೆಗಳನ್ನು ಮಾಡುತ್ತಿರಲು ನೀವು ಯಾಕೆ ಬಯಸ್ತೀರಾ? ಸುವಾರ್ತೆ ಸಾರಲು ಹುರುಪನ್ನು ತೋರಿಸುವಾಗ ಮತ್ತು ದೇವರ ಚಿತ್ತಕ್ಕನುಸಾರ ವಿಷಯಗಳನ್ನು ಮಾಡುವಾಗ ನಾವು ಯೆಹೋವನನ್ನು ಘನಪಡಿಸುತ್ತೇವೆ ಮತ್ತು ಇತರರು ರಕ್ಷಣೆ ಪಡೆಯುವಂತೆ ಸಹಾಯ ಮಾಡುತ್ತೇವೆ. (1 ಕೊರಿಂಥ 10:31-33 ಓದಿ.) ಸುವಾರ್ತೆಯಲ್ಲಿ ಹುರುಪನ್ನು ಮತ್ತು ಉತ್ತಮ ನಡತೆಯನ್ನು ತೋರಿಸಲು ಇನ್ನೊಂದು ಪ್ರಮುಖ ಕಾರಣ ದೇವರ ಕಡೆಗೆ ಮತ್ತು ಜೊತೆಮಾನವರ ಕಡೆಗೆ ನಮಗಿರುವ ನಿಜ ಪ್ರೀತಿಯೇ. (ಮತ್ತಾ. 22:37-39) ನಮ್ಮನ್ನು ನಾವು ಹುರುಪಿನ ಸತ್ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವಾಗ ಬೇರೆ ಯಾವುದರಲ್ಲೂ ಸಿಗದಷ್ಟು ಖುಷಿ ತೃಪ್ತಿ ಇದರಿಂದ ಸಿಗುತ್ತೆ. ಅಷ್ಟೇ ಅಲ್ಲದೆ ಭೂಮಿಯ ಮೇಲಿರುವ ಎಲ್ಲರೂ ಹುರುಪಿನಿಂದ ಸತ್ಯಾರಾಧನೆ ಸಲ್ಲಿಸುತ್ತಾ ಸೃಷ್ಟಿಕರ್ತನಾದ ಯೆಹೋವನಿಗೆ ಸ್ತುತಿ, ಘನ, ಮಾನ ತರುವ ದಿನವನ್ನು ನಾವು ಎದುರುನೋಡಬಹುದು.

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರ]

[ಪುಟ 10ರಲ್ಲಿರುವ ಚಿತ್ರಗಳು]

ನೀವು ಸುವಾರ್ತೆ ಸಾರಲು ಹೋಗಿರುವುದೇ ಜನರಿಗೆ ಒಳ್ಳೆ ಸಾಕ್ಷಿ ಕೊಡುತ್ತೆ

[ಪುಟ 12ರಲ್ಲಿರುವ ಚಿತ್ರ]

ನಿಮ್ಮ ಪ್ರಾಮಾಣಿಕತೆ ಮತ್ತು ಪ್ರಯಾಸ ಗಮನಕ್ಕೆ ಬಾರದೆ ಹೋಗುವುದಿಲ್ಲ