ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನೋಡಿರಿ, ನಾನು ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ’

‘ನೋಡಿರಿ, ನಾನು ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ’

‘ನೋಡಿರಿ, ನಾನು ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ’

“ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.”—ಮತ್ತಾ. 28:20.

ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ:

ಪ್ರಥಮ ಶತಮಾನದಿಂದ ಇಂದಿನ ವರೆಗೂ ಭೂಮಿಯ ಮೇಲೆ ಅಭಿಷಿಕ್ತ ಕ್ರೈಸ್ತರು ಇದ್ದರೆಂದು ಹೇಗೆ ಹೇಳಬಹುದು?

1914ರಿಂದ ಯೇಸು ಯಾವ ಪರೀಕ್ಷೆ ನಡೆಸಿದನು?

ಗೋದಿ ಮತ್ತು ಕಳೆಗಳ ಬಗ್ಗೆ ಯೇಸು ಹೇಳಿದ ದೃಷ್ಟಾಂತದಲ್ಲಿ ಇನ್ನೂ ಯಾವ ವಿಷಯಗಳು ನಡೆಯಬೇಕಿವೆ?

1. (1) ಗೋದಿ ಮತ್ತು ಕಳೆಗಳ ದೃಷ್ಟಾಂತದ ಸಾರಾಂಶ ಹೇಳಿ. (2) ಯೇಸು ಹೇಳಿದ ಪ್ರಕಾರ ಈ ದೃಷ್ಟಾಂತದ ಅರ್ಥವೇನು?

ರಾಜ್ಯಕ್ಕೆ ಸಂಬಂಧಿಸಿದ ದೃಷ್ಟಾಂತವೊಂದನ್ನು ಯೇಸು ಹೇಳಿದನು. ಒಬ್ಬ ರೈತ ಹೊಲದಲ್ಲಿ ಗೋದಿಯನ್ನು ಬಿತ್ತುತ್ತಾನೆ. ಆದರೆ ವೈರಿಯೊಬ್ಬ ಅವುಗಳ ಮಧ್ಯೆ ಕಳೆಗಳನ್ನು ಬಿತ್ತುತ್ತಾನೆ. ಕಳೆಗಳು ಗೋದಿಗಿಂತ ಹೆಚ್ಚಾಗಿ ಬೆಳೆಯುತ್ತವೆ. ಆದರೂ “ಕೊಯ್ಲಿನ ವರೆಗೆ ಎರಡೂ ಒಟ್ಟಿಗೆ ಬೆಳೆ”ಯಲು ಬಿಡುವಂತೆ ರೈತ ತನ್ನ ಆಳುಗಳಿಗೆ ಹೇಳುತ್ತಾನೆ. ಕೊಯ್ಲಿನ ಸಮಯದಲ್ಲಿ ಕಳೆಗಳನ್ನು ನಾಶಮಾಡಿ ಗೋದಿಯನ್ನು ಒಟ್ಟುಗೂಡಿಸಲಾಯಿತು. ಇದರ ಅರ್ಥವನ್ನು ಸಹ ಯೇಸು ವಿವರಿಸಿದನು. (ಮತ್ತಾಯ 13:24-30, 37-43 ಓದಿ.) ಈ ದೃಷ್ಟಾಂತದಿಂದ ನಮಗೆ ಯಾವ ವಿಷಯ ಗೊತ್ತಾಗುತ್ತದೆ? ( “ಗೋದಿ ಮತ್ತು ಕಳೆಗಳು” ಎಂಬ ಚೌಕ ನೋಡಿ.)

2. (1) ರೈತನ ಹೊಲದಲ್ಲಿ ನಡೆಯುವ ವಿಷಯಗಳಿಂದ ಏನು ತಿಳಿದುಬರುತ್ತೆ? (2) ಮುಖ್ಯವಾಗಿ ಈ ದೃಷ್ಟಾಂತದ ಯಾವ ಭಾಗವನ್ನು ನಾವು ಕಲಿಯಲಿದ್ದೇವೆ?

2 ಗೋದಿ ವರ್ಗದ ಭಾಗವಾಗಿರುವ ಎಲ್ಲ ಅಭಿಷಿಕ್ತ ಕ್ರೈಸ್ತರು ಯೇಸುವಿನೊಂದಿಗೆ ಸಹರಾಜರಾಗಿ ಆಳುತ್ತಾರೆ. ಅವರನ್ನು ಯೇಸು ಯಾವಾಗ ಮತ್ತು ಹೇಗೆ ಒಟ್ಟುಗೂಡಿಸುವನು ಎನ್ನುವುದು ಹೊಲದಲ್ಲಿ ನಡೆಯುವ ವಿಷಯಗಳಿಂದ ತಿಳಿದುಬರುತ್ತದೆ. ಬೀಜ ಬಿತ್ತುವ ಕೆಲಸ ಕ್ರಿ.ಶ. 33ರ ಪಂಚಾಶತ್ತಮದಂದು ಆರಂಭವಾಯಿತು. ಈ ಅಭಿಷಿಕ್ತರೆಲ್ಲರ ಒಟ್ಟುಗೂಡಿಸುವಿಕೆ ಯಾವಾಗ ಮುಗಿಯುತ್ತದೆ? ದುಷ್ಟಲೋಕದ ಅಂತ್ಯದಲ್ಲಿ ಜೀವಿಸುತ್ತಿರುವ ಅಭಿಷಿಕ್ತರು ಕೊನೆ ಮುದ್ರೆಯನ್ನು ಪಡೆದು, ನಂತರ ಸ್ವರ್ಗಕ್ಕೆ ಹೋದಾಗ. (ಮತ್ತಾ. 24:31; ಪ್ರಕ. 7:1-4) ಹೇಗೆ ಒಂದು ಬೆಟ್ಟದ ಮೇಲೆ ನಿಂತು ನೋಡಿದರೆ ಇಡೀ ಊರು ಕಾಣುತ್ತೋ ಹಾಗೆಯೇ ಈ ದೃಷ್ಟಾಂತ ನಮಗೆ ಸುಮಾರು 2,000 ವರ್ಷಗಳ ಅವಧಿಯಲ್ಲಿ ಆಗುವ ಬದಲಾವಣೆಗಳ ಸಂಪೂರ್ಣ ಚಿತ್ರಣ ಕೊಡುತ್ತೆ. ದೃಷ್ಟಾಂತದಲ್ಲಿ ಬಿತ್ತುವ, ಬೆಳೆಯುವ ಮತ್ತು ಕೊಯ್ಲಿನ ಕಾಲದ ಕುರಿತು ತಿಳಿಸಲಾಗಿದೆ. ಈ ಲೇಖನದಲ್ಲಿ ನಾವು ಕೊಯ್ಲಿನ ಕಾಲದ ಕುರಿತು ಹೆಚ್ಚನ್ನು ಕಲಿಯಲಿದ್ದೇವೆ. *

ಯೇಸುವಿನ ಕಾಳಜಿಭರಿತ ನಿಗಾ

3. (1) ಒಂದನೇ ಶತಮಾನದ ನಂತರ ಯಾವ ಬದಲಾವಣೆ ಆಯಿತು? (2) ಆಗ ಮತ್ತಾಯ 13:28ರಲ್ಲಿರುವ ಯಾವ ಪ್ರಶ್ನೆಯನ್ನು ಎಬ್ಬಿಸಲಾಯಿತು? ಯಾರಿಂದ? (ಟಿಪ್ಪಣಿ ಸಹ ನೋಡಿ.)

3 ಕ್ರಿ.ಶ. ಎರಡನೇ ಶತಮಾನದ ಆರಂಭದಲ್ಲಿ ಸುಳ್ಳು ಕ್ರೈಸ್ತರು ಕಾಣಿಸಿಕೊಂಡರು. ಹೀಗೆ ‘ಕಳೆಗಳು ಕಾಣಿಸಿಕೊಂಡವು.’ (ಮತ್ತಾ. 13:26) ನಾಲ್ಕನೇ ಶತಮಾನದಷ್ಟಕ್ಕೆ, ಕಳೆಯಂತಿರುವ ಈ ಕ್ರೈಸ್ತರ ಸಂಖ್ಯೆ ಅಭಿಷಿಕ್ತ ಕ್ರೈಸ್ತರಿಗಿಂತ ತುಂಬ ಹೆಚ್ಚಾಗಿತ್ತು. ದೃಷ್ಟಾಂತದಲ್ಲಿ, ಆಳುಗಳು ಕಳೆಗಳನ್ನು ಕಿತ್ತುಹಾಕಲು ಆಜ್ಞೆ ಕೊಡುವಂತೆ ಯಜಮಾನನನ್ನು ಕೇಳಿಕೊಂಡರು. * (ಮತ್ತಾ. 13:28) ಯಜಮಾನ ಹೇಗೆ ಪ್ರತಿಕ್ರಿಯಿಸಿದನು?

4. (1) ಯಜಮಾನನಾದ ಯೇಸು ಹೇಳಿದ ಮಾತಿನಿಂದ ನಮಗೆ ಏನು ತಿಳಿದುಬರುತ್ತೆ? (2) ಗೋದಿಯಂತಿರುವ ಕ್ರೈಸ್ತರು ಯಾವಾಗ ಕಾಣಿಸಲಾರಂಭಿಸಿದರು?

4 ಗೋದಿ ಮತ್ತು ಕಳೆಗಳ ಬಗ್ಗೆ ಮಾತಾಡುತ್ತಾ “ಕೊಯ್ಲಿನ ವರೆಗೆ ಎರಡೂ ಒಟ್ಟಿಗೆ ಬೆಳೆಯಲಿ” ಎಂದು ಯೇಸು ಹೇಳಿದನು. ಈ ಆಜ್ಞೆಯಿಂದ ನಮಗೆ ತಿಳಿಯುತ್ತದೇನೆಂದರೆ, ಒಂದನೇ ಶತಮಾನದಿಂದ ಹಿಡಿದು ಇಲ್ಲಿಯವರೆಗೆ ಗೋದಿಯಂತಿರುವ ಕೆಲವು ಅಭಿಷಿಕ್ತ ಕ್ರೈಸ್ತರು ಭೂಮಿಯಲ್ಲಿ ಇದ್ದರು. ಈ ನಿರ್ಧಾರಕ್ಕೆ ಬರಲು ಇನ್ನೊಂದು ಕಾರಣ ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತು. ಆತನು ಹೇಳಿದ್ದು: “ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:20) ಹಾಗಾಗಿ ಅಂತ್ಯದ ವರೆಗೆ ಎಲ್ಲಾ ದಿವಸ ಅಭಿಷಿಕ್ತ ಕ್ರೈಸ್ತರನ್ನು ಯೇಸು ಕಾಪಾಡಿ ಮುನ್ನಡೆಸಲಿದ್ದನು. ಆದರೂ ಕಳೆಗಳಂತಿರುವ ಕ್ರೈಸ್ತರ ಸಂಖ್ಯೆ ಹೆಚ್ಚಿದ್ದರಿಂದ ಆ ಎಲ್ಲ ವರ್ಷಗಳಲ್ಲಿ ಯಾರೆಲ್ಲ ಗೋದಿ ವರ್ಗದವರಾಗಿದ್ದರು ಎಂದು ನಮಗೆ ಗೊತ್ತಿಲ್ಲ. ಹಾಗಿದ್ದರೂ ಕೊಯ್ಲಿನ ಕಾಲ ಆರಂಭವಾಗುವ ಕೆಲವು ದಶಕಗಳ ಹಿಂದೆ ಗೋದಿ ವರ್ಗದವರು ಕಾಣಿಸಲಾರಂಭಿಸಿದರು. ಅದು ಹೇಗೆ?

‘ದಾರಿಯನ್ನು ಸರಿಮಾಡುವ’ ದೂತ

5. ಮಲಾಕಿಯನ ಪ್ರವಾದನೆ ಒಂದನೇ ಶತಮಾನದಲ್ಲಿ ಹೇಗೆ ನೆರವೇರಿತು?

5 ಗೋದಿ ಮತ್ತು ಕಳೆಗಳ ಬಗ್ಗೆ ಯೇಸು ದೃಷ್ಟಾಂತ ಕೊಡುವ ಎಷ್ಟೋ ಶತಮಾನಗಳ ಮುಂಚೆನೇ ಯೆಹೋವ ದೇವರು ಪ್ರವಾದಿ ಮಲಾಕಿಯನಿಗೆ ಯೇಸುವಿನ ದೃಷ್ಟಾಂತಕ್ಕೆ ಹೋಲುವ ಘಟನೆಗಳನ್ನು ಮುಂತಿಳಿಸುವಂತೆ ಪ್ರೇರಿಸಿದನು. (ಮಲಾಕಿಯ 3:1-4 ಓದಿ.) ‘ದಾರಿಯನ್ನು ಸರಿಮಾಡುವ ದೂತನು’ ಅಥವಾ ಸಂದೇಶವಾಹಕ ಸ್ನಾನಿಕ ಯೋಹಾನನಾಗಿದ್ದನು. (ಮತ್ತಾ. 11:10, 11) ಕ್ರಿ.ಶ. 29ರಲ್ಲಿ ಸ್ನಾನಿಕ ಯೋಹಾನನು ಬಂದಾಗ, ಇಸ್ರಾಯೇಲ್‌ ಜನಾಂಗದ ನ್ಯಾಯತೀರ್ಪಿನ ಸಮಯ ಹತ್ತಿರವಾಗಿತ್ತು. ಮಲಾಕಿಯನ ಪ್ರವಾದನೆಯಲ್ಲಿ ಹೇಳಿದ ಎರಡನೇ ಸಂದೇಶವಾಹಕನು ಯೇಸು ಆಗಿದ್ದನು. ಆತನು ಯೆರೂಸಲೇಮಿನಲ್ಲಿದ್ದ ದೇವಾಲಯವನ್ನು ಎರಡು ಬಾರಿ ಶುದ್ಧೀಕರಿಸಿದನು. ಶುಶ್ರೂಷೆಯ ಆರಂಭದ ಸಮಯದಲ್ಲಿ ಒಮ್ಮೆ, ಹಾಗೂ ಕೊನೆಕೊನೆಯಲ್ಲಿ ಒಮ್ಮೆ. (ಮತ್ತಾ. 21:12, 13; ಯೋಹಾ. 2:14-17) ಹಾಗಾದರೆ, ಯೇಸು ಮಾಡಿದ ಆಲಯದ ಶುದ್ಧೀಕರಣ ಒಂದು ಸಮಯಾವಧಿಯ ವರೆಗೆ ಮುಂದುವರಿಯಿತು.

6. (1) ಮಲಾಕಿಯನ ಪ್ರವಾದನೆ ದೊಡ್ಡ ಪ್ರಮಾಣದಲ್ಲಿ ನೆರವೇರಿದ್ದು ಹೇಗೆ? (2) ಯಾವ ಸಮಯಾವಧಿಯಲ್ಲಿ ಯೇಸು ಆಧ್ಯಾತ್ಮಿಕ ಆಲಯವನ್ನು ಪರೀಕ್ಷಿಸಲು ಬಂದನು? (ಟಿಪ್ಪಣಿ ಸಹ ನೋಡಿ.)

6 ಮಲಾಕಿಯನ ಪ್ರವಾದನೆ ದೊಡ್ಡ ಪ್ರಮಾಣದಲ್ಲಿ ನೆರವೇರಿದ್ದು ಹೇಗೆ? 1914ರ ಮುಂಚಿನ ದಶಕಗಳಲ್ಲಿ ಸಿ.ಟಿ. ರಸಲ್‌ ಮತ್ತು ಅವರ ಸಂಗಡಿಗರು ಸ್ನಾನಿಕನಾದ ಯೋಹಾನನಂತೆ ಕೆಲಸ ಮಾಡಿದರು. ಅದರಲ್ಲಿ ಬೈಬಲ್‌ ಸತ್ಯಗಳನ್ನು ಪುನಃಸ್ಥಾಪಿಸುವುದು ಸಹ ಸೇರಿತ್ತು. ಬೈಬಲ್‌ ವಿದ್ಯಾರ್ಥಿಗಳು ಕ್ರಿಸ್ತನ ವಿಮೋಚನಾ ಮೌಲ್ಯ ಯಜ್ಞದ ಸರಿಯಾದ ಅರ್ಥವನ್ನು, ನರಕದ ಬೋಧನೆ ಸುಳ್ಳೆಂದು ಕಲಿಸಿದರು. ಅನ್ಯಜನಾಂಗಗಳ ಸಮಯ ಮುಗಿಯುತ್ತಾ ಬರುತ್ತಿದೆ ಎಂದೂ ಸಾರಿದರು. ಆದರೆ ಆ ಸಮಯದಲ್ಲಿ ಕ್ರಿಸ್ತನ ಹಿಂಬಾಲಕರು ಎಂದು ಹೇಳಿಕೊಳ್ಳುವ ಅನೇಕ ಗುಂಪುಗಳಿದ್ದವು. ಹಾಗಾಗಿ ಆ ಗುಂಪುಗಳಲ್ಲಿ ಗೋದಿ ಯಾವುದಾಗಿತ್ತು ಎಂಬ ಪ್ರಶ್ನೆಗೆ ಉತ್ತರ ತಿಳಿಯಲೇಬೇಕಿತ್ತು. ಇದಕ್ಕಾಗಿ ಯೇಸು ಆಧ್ಯಾತ್ಮಿಕ ಆಲಯವನ್ನು 1914ರಲ್ಲಿ ಪರೀಕ್ಷಿಸಲು ಆರಂಭಿಸಿದನು. ಪರೀಕ್ಷಿಸುವ ಮತ್ತು ಶುದ್ಧೀಕರಿಸುವ ಈ ಕೆಲಸ 1914ರಿಂದ 1919ರ ಆರಂಭದ ಸಮಯಾವಧಿಯಲ್ಲಿ ನಡೆಯಿತು. *

ಪರೀಕ್ಷೆಯ ಮತ್ತು ಶುದ್ಧೀಕರಿಸುವ ವರ್ಷಗಳು

7. ಯೇಸು 1914ರಲ್ಲಿ ಪರೀಕ್ಷಿಸಲು ಬಂದಾಗ ಏನನ್ನು ಗಮನಿಸಿದನು?

7 ಯೇಸು ಆಧ್ಯಾತ್ಮಿಕ ಆಲಯವನ್ನು ಪರೀಕ್ಷಿಸಲು ಆರಂಭಿಸಿದಾಗ ಏನನ್ನು ಗಮನಿಸಿದನು? 30 ವರ್ಷಗಳಿಂದ ತಮ್ಮ ಶಕ್ತಿ ಸಂಪತ್ತನ್ನು ಸುವಾರ್ತೆಗಾಗಿ ವಿನಿಯೋಗಿಸುತ್ತಾ ಸಾರುವ ಕೆಲಸದಲ್ಲಿ ತೊಡಗಿದ್ದ ‘ಬೈಬಲ್‌ ವಿದ್ಯಾರ್ಥಿಗಳ’ ಗುಂಪೊಂದನ್ನು ಆತನು ಗಮನಿಸಿದನು. * ಸ್ವಲ್ಪವೇ ಮಂದಿಯಿದ್ದರೂ ಸೈತಾನನ ಕಳೆಗಳೊಂದಿಗೆ ಕಿಂಚಿತ್ತೂ ಬೆರೆಯದೆ ಕಾರ್ಯನಿರತರಾಗಿದ್ದ ಈ ಗುಂಪನ್ನು ನೋಡಿದಾಗ ಯೇಸು ಮತ್ತು ದೇವದೂತರಿಗೆ ಎಷ್ಟೊಂದು ಸಂತೋಷವಾಗಿರಬೇಕು! ಆದರೂ, ‘ಲೇವಿ ವಂಶದವರನ್ನು’ ಅಂದರೆ ಅಭಿಷಿಕ್ತ ಕ್ರೈಸ್ತರನ್ನು ಶುದ್ಧೀಕರಿಸುವ ಅಗತ್ಯ ಎದುರಾಯಿತು. (ಮಲಾ. 3:2, 3; 1 ಪೇತ್ರ 4:17) ಯಾಕೆ?

8. 1914ರ ನಂತರ ಏನೆಲ್ಲ ನಡೆಯಿತು?

8 ಇಸವಿ 1914ರ ಕೊನೆಗೆ ಕೆಲವು ಬೈಬಲ್‌ ವಿದ್ಯಾರ್ಥಿಗಳು ತಾವು ಸ್ವರ್ಗಕ್ಕೆ ಹೋಗಲಿಲ್ಲವೆಂದು ಬೇಸರಪಟ್ಟರು. 1915 ಮತ್ತು 1916ರಲ್ಲಿ ಸಂಘಟನೆಯ ಹೊರಗಿಂದ ವಿರೋಧ ಬಂದಾಗ ಸುವಾರ್ತೆಯ ಕೆಲಸ ನಿಧಾನವಾಯಿತು. 1916ರಲ್ಲಿ ಸಹೋದರ ರಸಲ್‌ ಮರಣಪಟ್ಟ ನಂತರವಂತೂ ಸಂಘಟನೆ ಒಳಗೆಯೇ ವಿರೋಧ ಶುರುವಾಯಿತು. ಇನ್ನುಮುಂದೆ ಸಹೋದರ ರದರ್‌ಫರ್ಡ್‌ ಮುಂದಾಳತ್ವ ವಹಿಸುವರು ಎಂಬ ನಿರ್ಣಯವನ್ನು ನಿರಾಕರಿಸಿ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಏಳು ಡೈರೆಕ್ಟರ್‌ಗಳಲ್ಲಿ ನಾಲ್ವರು ದಂಗೆಯೆದ್ದರು. ಸಹೋದರರ ಮಧ್ಯೆ ಬಿರುಕು ತರಲು ಅವರು ಪ್ರಯತ್ನಿಸಿದರು. ಆದರೆ ಅವರೇ 1917ರಲ್ಲಿ ಬೆತೆಲ್‌ ಬಿಟ್ಟು ಹೋದರು. ಇದೂ ಒಂದು ಶುದ್ಧೀಕರಣವೇ ಆಗಿತ್ತು! ಕೆಲವು ‘ಬೈಬಲ್‌ ವಿದ್ಯಾರ್ಥಿಗಳು’ ಮನುಷ್ಯರಿಗೆ ಹೆದರಿ ಸತ್ಯವನ್ನು ಬಿಟ್ಟುಕೊಟ್ಟರು. ಹಾಗಿದ್ದರೂ ಒಂದು ಗುಂಪಾಗಿ ‘ಬೈಬಲ್‌ ವಿದ್ಯಾರ್ಥಿಗಳು’ ಯೇಸು ಮಾಡಿದ ಶುದ್ಧೀಕರಿಸುವಿಕೆಯನ್ನು ಪೂರ್ಣಮನಸ್ಸಿನಿಂದ ಒಪ್ಪಿಕೊಂಡು ಬದಲಾವಣೆಗಳನ್ನು ಮಾಡಿಕೊಂಡರು. ಹಾಗಾಗಿ ಯೇಸು ಅವರನ್ನು ಗೋದಿಯೆಂದು ತೀರ್ಪು ಮಾಡಿ, ಕ್ರೈಸ್ತಪ್ರಪಂಚದ ಚರ್ಚ್‌ನವರನ್ನು ಸೇರಿಸಿ ಎಲ್ಲ ಸುಳ್ಳುಕ್ರೈಸ್ತರನ್ನು ತಿರಸ್ಕರಿಸಿದನು. (ಮಲಾ. 3:5; 2 ತಿಮೊ. 2:19) ನಂತರ ಏನಾಯಿತು? ಅದನ್ನು ತಿಳಿದುಕೊಳ್ಳಲು ಮತ್ತೆ ಗೋದಿ ಮತ್ತು ಕಳೆಗಳ ದೃಷ್ಟಾಂತವನ್ನು ಗಮನಿಸೋಣ.

ಕೊಯ್ಲಿನ ಕಾಲ ಆರಂಭವಾದ ನಂತರ ಏನಾಗುತ್ತದೆ?

9, 10. (1) ಕೊಯ್ಲಿನ ಕಾಲದ ಬಗ್ಗೆ ನಾವೀಗ ಏನನ್ನು ಕಲಿಯಲಿದ್ದೇವೆ? (2) ಕೊಯ್ಲಿನ ಕಾಲದಲ್ಲಿ ಮೊದಲು ಏನಾಯಿತು?

9 “ಕೊಯ್ಲು ಅಂದರೆ ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಎಂದನು ಯೇಸು. (ಮತ್ತಾ. 13:39) ಕೊಯ್ಲಿನ ಕಾಲ 1914ರಲ್ಲಿ ಆರಂಭವಾಯಿತು. ಆ ಸಮಯದಲ್ಲಿ ನಡೆಯಲಿದ್ದ ಐದು ವಿಷಯಗಳ ಬಗ್ಗೆ ಯೇಸು ಹೇಳಿದನು. ಅವನ್ನು ಗಮನಿಸೋಣ.

 10 ಮೊದಲು, ಕಳೆಗಳನ್ನು ಒಟ್ಟುಗೂಡಿಸುವುದು. ‘ಕೊಯ್ಲಿನ ಕಾಲದಲ್ಲಿ ನಾನು ಕೊಯ್ಯುವವರಿಗೆ ಮೊದಲು ಕಳೆಗಳನ್ನು ಒಟ್ಟುಗೂಡಿಸಿ ಸುಡುವುದಕ್ಕಾಗಿ ಅವುಗಳನ್ನು ಕಟ್ಟಿಡುವಂತೆ ಹೇಳುವೆನು’ ಎಂದನು ಯೇಸು. 1914ರ ನಂತರ ದೇವದೂತರು ಕಳೆಗಳಂಥ ಕ್ರೈಸ್ತರನ್ನು ‘ರಾಜ್ಯದ ಪುತ್ರರಾದ’ ಅಭಿಷಿಕ್ತ ಕ್ರೈಸ್ತರಿಂದ ಬೇರ್ಪಡಿಸುವ ಮೂಲಕ ಕಳೆಗಳನ್ನು ‘ಒಟ್ಟುಗೂಡಿಸುವ’ ಕೆಲಸವನ್ನು ಆರಂಭಿಸಿದರು.—ಮತ್ತಾ. 13:30, 38, 41.

11. ನಕಲಿ ಕ್ರೈಸ್ತರಿಂದ ನಿಜ ಕ್ರೈಸ್ತರನ್ನು ಬೇರ್ಪಡಿಸಿದ ಅಂಶ ಯಾವುದು?

11 ಒಟ್ಟುಗೂಡಿಸುವ ಕೆಲಸ ಮುಂದುವರಿದಂತೆ ಎರಡು ಗುಂಪುಗಳ ವ್ಯತ್ಯಾಸ ಚೆನ್ನಾಗಿ ತಿಳಿದುಬಂತು. (ಪ್ರಕ. 18:1, 4) 1919ರಷ್ಟಕ್ಕೆ ಮಹಾ ಬಾಬೆಲ್‌ ಬಿದ್ದಿದ್ದಾಳೆ ಎಂದು ಸ್ಪಷ್ಟವಾಯಿತು. ನಕಲಿ ಕ್ರೈಸ್ತರಿಂದ ನಿಜ ಕ್ರೈಸ್ತರನ್ನು ಬೇರ್ಪಡಿಸಿದ ಅಂಶ ಯಾವುದು? ಸುವಾರ್ತೆ ಸಾರುವ ಕೆಲಸ. ‘ಬೈಬಲ್‌ ವಿದ್ಯಾರ್ಥಿಗಳಲ್ಲಿ’ ಮುಂದಾಳತ್ವ ವಹಿಸಿದವರು ರಾಜ್ಯದ ಸುವಾರ್ತೆ ಸಾರುವುದಕ್ಕೆ ತುಂಬ ಮಹತ್ವ ಕೊಟ್ಟರು. ಉದಾಹರಣೆಗೆ 1919ರಲ್ಲಿ ಕೆಲಸವನ್ನು ಯಾರಿಗೆ ನಿಯೋಜಿಸಲಾಗಿದೆ (ಇಂಗ್ಲಿಷ್‌) ಎಂಬ ಕಿರುಪುಸ್ತಿಕೆಯಲ್ಲಿ ಎಲ್ಲಾ ಅಭಿಷಿಕ್ತ ಕ್ರೈಸ್ತರಿಗೆ ಮನೆಯಿಂದ ಮನೆಗೆ ಹೋಗಿ ಸುವಾರ್ತೆ ಸಾರುವಂತೆ ಪ್ರೋತ್ಸಾಹಿಸಲಾಗಿತ್ತು. ಅದರಲ್ಲಿ ಹೇಳಿದ್ದು: “ಈ ಕೆಲಸ ಮಹತ್ತರವಾದದ್ದು ಇದು ಕರ್ತನ ಕೆಲಸವಾದ್ದರಿಂದ ಆತನ ಸಹಾಯದಿಂದಲೇ ಮಾಡಲಾಗುತ್ತದೆ. ನಿಮಗೆ ಅದನ್ನು ಪೂರೈಸುವ ಸುಯೋಗವಿದೆ.” ಇದಕ್ಕೆ ಪ್ರತಿಕ್ರಿಯೆ? ಆ ಸಮಯದಿಂದ ‘ಬೈಬಲ್‌ ವಿದ್ಯಾರ್ಥಿಗಳು’ ಸುವಾರ್ತೆ ಸಾರುವುದನ್ನು ಹೆಚ್ಚಿಸಿದರು ಎಂದು ಹೇಳಿತು 1922ರಲ್ಲಿ ಒಂದು ಕಾವಲಿನಬುರುಜು ಪತ್ರಿಕೆ. ಅಂದಿನಿಂದ ಹಿಡಿದು ಇಂದಿನವರೆಗೂ ಆ ನಂಬಿಗಸ್ತ ಕ್ರೈಸ್ತರು ಮನೆಯಿಂದ ಮನೆಗೆ ಸುವಾರ್ತೆ ಸಾರುವುದರಲ್ಲಿ ತೊಡಗಿದ್ದಾರೆ. ಇದೇ ಅವರ ಗುರುತಾಗಿದೆ.

12. ಗೋದಿ ವರ್ಗದವರ ಒಟ್ಟುಗೂಡಿಸುವಿಕೆ ಯಾವಾಗಿಂದ ಆರಂಭವಾಯಿತು?

 12 ಎರಡನೆಯದು, ಗೋದಿಯನ್ನು ಒಟ್ಟುಗೂಡಿಸುವುದು. ‘ಹೋಗಿ ಗೋದಿಯನ್ನು ತನ್ನ ಕಣಜಕ್ಕೆ ತುಂಬಿಸುವಂತೆ’ ಯೇಸು ದೇವದೂತರಿಗೆ ಆಜ್ಞೆ ಕೊಟ್ಟನು. (ಮತ್ತಾ. 13:30) 1919ರಿಂದ, ಅಭಿಷಿಕ್ತ ಕ್ರೈಸ್ತರನ್ನು ಪುನಃಸ್ಥಾಪಿಸಲಾದ ಕ್ರೈಸ್ತ ಸಭೆಯಲ್ಲಿ ಒಟ್ಟುಗೂಡಿಸಲಾಗುತ್ತಿದೆ. ವಿಷಯಗಳ ವ್ಯವಸ್ಥೆಯ ಸಮಾಪ್ತಿಯವರೆಗೆ ಬದುಕುಳಿಯುವ ಅಭಿಷಿಕ್ತ ಕ್ರೈಸ್ತರನ್ನು ಕೊನೇದಾಗಿ ಒಟ್ಟುಗೂಡಿಸುವ ಕೆಲಸ, ಅವರಿಗೆ ಸ್ವರ್ಗೀಯ ಬಹುಮಾನ ಲಭಿಸಿದಾಗ ನೆರವೇರುವುದು.—ದಾನಿ. 7:18, 22, 27.

13. ಕ್ರೈಸ್ತಪ್ರಪಂಚವನ್ನೂ ಸೇರಿಸಿ, ಮಹಾ ಬಾಬೆಲಿನ ಅಥವಾ ವೇಶ್ಯೆಯ ಮನೋಭಾವದ ಬಗ್ಗೆ ಪ್ರಕಟನೆ 18:7 ಏನನ್ನು ತಿಳಿಸುತ್ತದೆ?

 13 ಮೂರನೆಯದು ಗೋಳಾಟ ಮತ್ತು ಹಲ್ಲುಕಡಿಯೋಣ. ದೇವದೂತರು ಕಳೆಗಳನ್ನು ಕಟ್ಟಿಟ್ಟ ನಂತರ ಏನಾಗುವುದು? ಕಳೆಗಳಂತಿರುವವರಿಗೆ ಬರಲಿರುವ ಗತಿಯ ಬಗ್ಗೆ ಯೇಸು ಹೀಗೆ ಹೇಳಿದನು: “ಅಲ್ಲಿ ಅವರ ಗೋಳಾಟವೂ ಹಲ್ಲುಕಡಿಯೋಣವೂ ಇರುವುದು.” (ಮತ್ತಾ. 13:42) ಅದು ಈಗ ಸಂಭವಿಸುತ್ತಿದೆಯಾ? ಇಲ್ಲ. ಇಂದು ವೇಶ್ಯೆಯ ಭಾಗವಾಗಿರುವ ಕ್ರೈಸ್ತಪ್ರಪಂಚ ತನ್ನ ಬಗ್ಗೆ ಹೀಗೆ ಹೇಳಿಕೊಳ್ಳುತ್ತಿದೆ: “ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ; ನಾನು ವಿಧವೆಯಲ್ಲ ಮತ್ತು ನಾನು ಶೋಕವನ್ನು ಎಂದಿಗೂ ಕಾಣುವುದೇ ಇಲ್ಲ.” (ಪ್ರಕ. 18:7) ಕ್ರೈಸ್ತಪ್ರಪಂಚ ಇಂದು, ರಾಜಕೀಯ ಧುರೀಣರ ಮೇಲೆ ‘ರಾಣಿಯಾಗಿ ಕುಳಿತುಕೊಂಡು’ ತನಗೆ ಎಲ್ಲಾ ಅಧಿಕಾರ ಇದೆ ಎಂದು ಮೆರೆಯುತ್ತಿದೆ. ಸದ್ಯಕ್ಕೆ ಕಳೆಗಳನ್ನು ಪ್ರತಿನಿಧಿಸುವವರು ಗೋಳಾಡುತ್ತಿಲ್ಲ, ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಇದು ಅತಿ ಬೇಗನೆ ಬದಲಾಗುತ್ತೆ.

14. (1) ಕ್ರೈಸ್ತರೆಂದು ಹೇಳಿಕೊಳ್ಳುವವರು ಯಾವಾಗ ಮತ್ತು ಯಾಕೆ ‘ಹಲ್ಲುಕಡಿಯುವರು’? (2) ಮತ್ತಾಯ 13:42ರ ಹೊಸ ತಿಳಿವಳಿಕೆ ಕೀರ್ತನೆ 112:10ರಲ್ಲಿ ಹೇಳಿರುವ ವಿಷಯಕ್ಕೆ ಹೇಗೆ ಹೊಂದಿಕೆಯಲ್ಲಿದೆ? (ಟಿಪ್ಪಣಿ ನೋಡಿ.)

14 ಮಹಾ ಸಂಕಟದ ಸಮಯದಲ್ಲಿ ಎಲ್ಲಾ ಸುಳ್ಳು ಧರ್ಮಗಳು ನಾಶವಾದಾಗ ಅದನ್ನೇ ನಂಬಿಕೊಂಡಿದ್ದವರು ಅಡಗಿಕೊಳ್ಳಲು ಸುರಕ್ಷಿತ ಸ್ಥಳ ಹುಡುಕಿದರೂ ಸಿಗುವುದಿಲ್ಲ. (ಲೂಕ 23:30; ಪ್ರಕ. 6:15-17) ನಾಶನದಿಂದ ತಮ್ಮನ್ನು ಯಾವುದೂ ತಪ್ಪಿಸಲ್ಲ ಅಂತ ತಿಳಿದಾಗ ಹತಾಶೆಯಿಂದ ಗೋಳಾಡುವರು, ಕೋಪದಿಂದ ‘ಹಲ್ಲು ಕಡಿಯುವರು.’ ಮಹಾ ಸಂಕಟದ ಸಮಯದ ಬಗ್ಗೆ ಯೇಸು ಪ್ರವಾದಿಸಿದಂತೆ, ದಿಕ್ಕುತೋಚದ ಆ ಸಮಯದಲ್ಲಿ ‘ಅವರು ಗೋಳಾಡುತ್ತಾ ಎದೆಬಡಿದುಕೊಳ್ಳುವರು.’ *ಮತ್ತಾ. 24:30; ಪ್ರಕ. 1:7.

15. (1) ಕಳೆಗಳಿಗೆ ಏನಾಗುವುದು? (2) ಯಾವಾಗ?

 15 ನಾಲ್ಕನೆಯದು ಬೆಂಕಿಯ ಕುಲುಮೆಗೆ ಹಾಕುವುದು. ಕಟ್ಟಿಟ್ಟ ಕಳೆಗಳಿಗೆ ಏನಾಗುವುದು? ದೇವದೂತರು ‘ಅವುಗಳನ್ನು ಬೆಂಕಿಯ ಕುಲುಮೆಗೆ ಹಾಕಿಬಿಡುವರು.’ (ಮತ್ತಾ. 13:42) ಅಂದರೆ ಸಂಪೂರ್ಣ ನಾಶನ. ಸುಳ್ಳು ಧರ್ಮಗಳ ಸಂಘಟನೆಗಳನ್ನು ನಂಬಿಕೊಂಡಿದ್ದವರು ಮಹಾ ಸಂಕಟದ ಕೊನೆಯಲ್ಲಿ ಅಂದರೆ ಅರ್ಮಗೆದೋನ್‌ನಲ್ಲಿ ನಾಶವಾಗುವರು.—ಮಲಾ. 4:1.

16, 17. (1) ಯೇಸು ತನ್ನ ದೃಷ್ಟಾಂತದಲ್ಲಿ ಹೇಳಿದ ಅಂತಿಮ ಘಟನೆ ಯಾವುದು? (2) ಅದರ ನೆರವೇರಿಕೆ ಭವಿಷ್ಯತ್ತಿನಲ್ಲಿ ಆಗುವುದೆಂದು ನಾವು ಹೇಗೆ ಹೇಳಬಹುದು?

 16 ಐದನೆಯದು ಪ್ರಕಾಶಮಾನವಾಗಿ ಹೊಳೆಯುವುದು. “ಆ ಸಮಯದಲ್ಲಿ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು” ಎಂಬ ಮಾತುಗಳೊಂದಿಗೆ ಯೇಸು ತನ್ನ ಪ್ರವಾದನೆಯನ್ನು ಮುಗಿಸುತ್ತಾನೆ. (ಮತ್ತಾ. 13:43) ಇದು ಯಾವಾಗ ಮತ್ತು ಎಲ್ಲಿ ನಡೆಯುವುದು? ಈ ಮಾತುಗಳ ನೆರವೇರಿಕೆ ಭವಿಷ್ಯತ್ತಿನಲ್ಲಿ ಆಗಲಿದೆ. ಈಗ ಭೂಮಿಯ ಮೇಲೆ ನಡೆಯುತ್ತಿರುವ ವಿಷಯದ ಬಗ್ಗೆ ಯೇಸು ಮಾತಾಡುತ್ತಿರಲಿಲ್ಲ. ಬದಲಿಗೆ ಭವಿಷ್ಯತ್ತಿನಲ್ಲಿ ಸ್ವರ್ಗದಲ್ಲಿ ನಡೆಯುವ ವಿಷಯವನ್ನು ಅವನು ಹೇಳುತ್ತಿದ್ದನು. * ಹೀಗೆ ಹೇಳಲು ಇರುವ ಎರಡು ಕಾರಣಗಳನ್ನು ನೋಡೋಣ.

17 ಮೊದಲು “ಯಾವಾಗ” ಎನ್ನುವುದನ್ನು ನೋಡೋಣ. ಯೇಸು ಹೇಳಿದನು: ‘ಆ ಸಮಯದಲ್ಲಿ ನೀತಿವಂತರು ಹೊಳೆಯುವರು.’ “ಆ ಸಮಯದಲ್ಲಿ” ಎಂದಾಗ ಯೇಸು ಹಿಂದೆ ಹೇಳಿದ ಘಟನೆಗೆ ಅಂದರೆ ‘ಬೆಂಕಿಯ ಕುಲುಮೆಗೆ ಹಾಕಿಬಿಡುವ’ ಸಮಯಕ್ಕೆ ಸೂಚಿಸುತ್ತಿದ್ದನು. ಇದು ನಡೆಯುವುದು ಮಹಾ ಸಂಕಟದ ಕೊನೆಯ ಘಟ್ಟದಲ್ಲಿ. ಆದ್ದರಿಂದ ಅಭಿಷಿಕ್ತರು ‘ಪ್ರಕಾಶಮಾನವಾಗಿ ಹೊಳೆಯುವುದು’ ಸಹ ಭವಿಷ್ಯತ್ತಿನ ಆ ಸಮಯದಲ್ಲೇ. ಎರಡನೆಯದಾಗಿ, “ಎಲ್ಲಿ” ಎಂದು ನೋಡೋಣ. ಯೇಸು ಹೇಳಿದ್ದು ನೀತಿವಂತರು ‘ರಾಜ್ಯದಲ್ಲಿ ಹೊಳೆಯುವರು’ ಎಂದು. ಹಾಗೆಂದರೇನು? ಮಹಾ ಸಂಕಟದ ಆರಂಭ ಘಟ್ಟ ಮುಗಿದ ನಂತರ ಇನ್ನೂ ಭೂಮಿಯ ಮೇಲೆ ಇರುವ ಅಭಿಷಿಕ್ತರು ಈಗಾಗಲೇ ಕೊನೆಯ ಮುದ್ರೆಯನ್ನು ಪಡೆದಿರುತ್ತಾರೆ. ನಂತರ ಅವರನ್ನು, ಯೇಸು ಹೇಳಿದ ಪ್ರವಾದನೆಯಂತೆ ಸ್ವರ್ಗಕ್ಕೆ ಒಟ್ಟುಗೂಡಿಸಲಾಗುವುದು. (ಮತ್ತಾ. 24:31) ಅಲ್ಲಿ ಅವರು “ತಂದೆಯ ರಾಜ್ಯದಲ್ಲಿ” ಹೊಳೆಯುವರು ಮತ್ತು ಅರ್ಮಗೆದೋನ್‌ ಯುದ್ಧದ ನಂತರ ಯೇಸುವಿನ ವಧುವಾಗಿದ್ದು ‘ಕುರಿಮರಿಯ ವಿವಾಹದಲ್ಲಿ’ ಸಂತೋಷಿಸುವರು.—ಪ್ರಕ. 19:6-9.

ನಮಗೆ ಪ್ರಯೋಜನ

18, 19. ಗೋದಿ ಮತ್ತು ಕಳೆಗಳ ದೃಷ್ಟಾಂತವನ್ನು ಅರ್ಥಮಾಡಿಕೊಳ್ಳುವುದರಿಂದ ನಮಗೆ ಯಾವ ಪ್ರಯೋಜನಗಳಿವೆ?

18 ಈ ದೃಷ್ಟಾಂತದಿಂದ ನಾವು ಪಡೆದ ವಿಸ್ತಾರ ನೋಟ ನಮಗೆ ಹೇಗೆ ಪ್ರಯೋಜನ ತರುತ್ತೆ? ಮೂರು ರೀತಿಯಲ್ಲಿ. ಮೊದಲು, ನಮ್ಮ ಒಳನೋಟವನ್ನು ಹೆಚ್ಚಿಸುತ್ತೆ. ಈ ದೃಷ್ಟಾಂತ, ಯೆಹೋವನು ಏಕೆ ದುಷ್ಟತನವನ್ನು ಅನುಮತಿಸಿದ್ದಾನೆ ಎನ್ನುವುದಕ್ಕೆ ಬಲವಾದ ಕಾರಣ ಕೊಡುತ್ತೆ. ‘ಕರುಣೆಯ ಪಾತ್ರೆಗಳನ್ನು ಸಿದ್ಧಗೊಳಿಸುವುದಕ್ಕಾಗಿ’ ಅಂದರೆ ಗೋದಿಯ ವರ್ಗದವರನ್ನು ಒಟ್ಟುಗೂಡಿಸಲಿಕ್ಕಾಗಿ ‘ಆತನು ಕ್ರೋಧದ ಪಾತ್ರೆಗಳನ್ನು ತಾಳಿಕೊಂಡಿದ್ದಾನೆ.’ * (ರೋಮ. 9:22-24) ಎರಡನೇದಾಗಿ, ನಮ್ಮ ಭರವಸೆಯನ್ನು ಹೆಚ್ಚಿಸುತ್ತೆ. ಅಂತ್ಯವು ಸಮೀಪಿಸುತ್ತಿರುವುದರಿಂದ ನಮ್ಮ ಎದುರಾಳಿಗಳು ನಮ್ಮ ವಿರುದ್ಧ ಹೋರಾಟವನ್ನು ಹೆಚ್ಚು ತೀವ್ರಗೊಳಿಸುತ್ತಾರೆ. ‘ಆದರೆ ನಮ್ಮನ್ನು ಸೋಲಿಸಲಾಗುವದಿಲ್ಲ.’ (ಯೆರೆಮೀಯ 1:19 ಓದಿ.) ಅನೇಕ ವರ್ಷಗಳಿಂದ ಗೋದಿ ವರ್ಗದವರನ್ನು ಯೆಹೋವನು ಕಾಪಾಡುತ್ತಾ ಬಂದಿರುವ ಹಾಗೆಯೇ, ನಮ್ಮನ್ನೂ ಮುಂದೆ ಬರಲಿರುವ “ಎಲ್ಲಾ ದಿವಸ”ಗಳಲ್ಲಿ ಯೇಸುವಿನ ಮತ್ತು ದೇವದೂತರ ಮೂಲಕ ಕಾಪಾಡುವನು.—ಮತ್ತಾ. 28:20.

19 ಮೂರನೇದಾಗಿ, ಈ ದೃಷ್ಟಾಂತ ಗೋದಿ ವರ್ಗದವರು ಯಾರೆಂದು ಗುರುತಿಸಲು ಸಹಾಯ ಮಾಡಿತು. ಅದು ಅಷ್ಟೊಂದು ಪ್ರಾಮುಖ್ಯ ಯಾಕೆ? ಗೋದಿ ವರ್ಗಕ್ಕೆ ಸೇರಿದ ಕ್ರೈಸ್ತರು ಯಾರೆಂದು ತಿಳಿಯುವುದರಿಂದ, ಕಡೇ ದಿವಸಗಳಿಗೆ ಸಂಬಂಧಿಸಿದ ಪ್ರವಾದನೆಯಲ್ಲಿ ಯೇಸು ಕೇಳಿದ ಪ್ರಾಮುಖ್ಯ ಪ್ರಶ್ನೆಗೆ ಉತ್ತರ ಸಿಗುತ್ತೆ. ಅವನು ಕೇಳಿದ್ದು: “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?” (ಮತ್ತಾ. 24:45) ಮುಂದಿನ ಎರಡು ಲೇಖನಗಳು ಈ ಪ್ರಶ್ನೆಗೆ ಉತ್ತರ ಕೊಡುವವು.

ENDNOTES: (ಆಯಾ ಪ್ಯಾರಗಳೊಂದಿಗೆ ಪಾದಟಿಪ್ಪಣಿಯಾಗಿ ಓದಬೇಕು.)

[Footnotes]

^ ಪ್ಯಾರ. 2 ಪ್ಯಾರ 2: ಈ ದೃಷ್ಟಾಂತದ ಇತರ ಭಾಗಗಳ ಅರ್ಥವನ್ನು ನೆನಪಿಸಿಕೊಳ್ಳಲು 2010, ಮಾರ್ಚ್‌ 15ರ ಕಾವಲಿನಬುರುಜುವಿನಲ್ಲಿರುವ “ನೀತಿವಂತರು . . . ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು” ಎಂಬ ಲೇಖನ ಓದಿ.

^ ಪ್ಯಾರ. 3 ಪ್ಯಾರ 3: ಯೇಸುವಿನ ಅಪೊಸ್ತಲರು ಸತ್ತು ಹೋಗಿದ್ದರಿಂದ ಮತ್ತು ಭೂಮಿಯಲ್ಲಿ ಉಳಿದಿದ್ದ ಅಭಿಷಿಕ್ತ ಕ್ರೈಸ್ತರನ್ನು ಗೋದಿಯು ಸೂಚಿಸುವುದರಿಂದ ಅವರು ಆಳುಗಳಾಗಿರಲು ಸಾಧ್ಯವಿಲ್ಲ. ಆಳುಗಳು ದೇವದೂತರನ್ನು ಸೂಚಿಸುತ್ತಾರೆ. ದೃಷ್ಟಾಂತದ ಮುಂದಿನ ಭಾಗದಲ್ಲಿ ಕಳೆಗಳನ್ನು ಕೊಯ್ಯುವವರು ದೇವದೂತರೇ.—ಮತ್ತಾ. 13:39.

^ ಪ್ಯಾರ. 6 ಪ್ಯಾರ 6: ಇದು ಹೊಸ ತಿಳಿವಳಿಕೆ. ಮೊದಲು ನಾವು ಯೇಸು 1918ರಲ್ಲಿ ಪರೀಕ್ಷೆ ಮಾಡಲು ಬಂದಿದ್ದನು ಎಂದು ನೆನಸಿದ್ದೆವು.

^ ಪ್ಯಾರ. 7 ಪ್ಯಾರ 7: 1910ರಿಂದ 1914ರವರೆಗೆ ‘ಬೈಬಲ್‌ ವಿದ್ಯಾರ್ಥಿಗಳು’ ಸುಮಾರು 40 ಲಕ್ಷ ಪುಸ್ತಕಗಳನ್ನು ಮತ್ತು 20 ಕೋಟಿಗೂ ಹೆಚ್ಚು ಕರಪತ್ರಗಳನ್ನು ಮತ್ತು ಭಿತ್ತಿಪತ್ರಗಳನ್ನು ವಿತರಿಸಿದ್ದಾರೆ.

^ ಪ್ಯಾರ. 14 ಪ್ಯಾರ 14: ಮತ್ತಾಯ 13:42ರ ಹೊಸ ತಿಳಿವಳಿಕೆಯಿದು. ಈ ಮುಂಚೆ ನಮ್ಮ ಪ್ರಕಾಶನಗಳಲ್ಲಿ ತಿಳಿಸಿದ್ದು ಏನೆಂದರೆ, “ರಾಜ್ಯದ ಪುತ್ರರು” ನಕಲಿ ಕ್ರೈಸ್ತರನ್ನು ‘ಕೆಡುಕನ ಪುತ್ರರೆಂದು’ ಬಯಲು ಮಾಡಿರುವುದರಿಂದ ಅವರು ದಶಕಗಳಿಂದ ಈಗಾಗಲೇ ‘ಗೋಳಾಡುತ್ತಾ ಹಲ್ಲು ಕಡಿಯುತ್ತಾ’ ಇದ್ದಾರೆ ಎಂದು. (ಮತ್ತಾ. 13:38) ಆದರೆ ಹೊಸ ತಿಳಿವಳಿಕೆ ಏನೆಂದರೆ ಹಲ್ಲು ಕಡಿಯುವುದು ಅವರ ನಾಶನಕ್ಕೆ ಸಂಬಂಧಿಸಿದೆ.—ಕೀರ್ತ. 112:10.

^ ಪ್ಯಾರ. 16 ಪ್ಯಾರ 16: “ಜ್ಞಾನಿಗಳು [ಅಭಿಷಿಕ್ತ ಕ್ರೈಸ್ತರು] ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು” ಎಂದು ಹೇಳುತ್ತೆ ದಾನಿಯೇಲ 12:3. ಭೂಮಿಯಲ್ಲಿರುವಾಗ ಅವರು ಸುವಾರ್ತೆ ಸಾರುವ ಮೂಲಕ ಪ್ರಕಾಶಿಸುವರು. ಇದರ ಜತೆಗೆ ಮತ್ತಾಯ 13:43ರಲ್ಲಿ ಅವರು ಸ್ವರ್ಗದ ರಾಜ್ಯದಲ್ಲಿ ಪ್ರಕಾಶಮಾನವಾಗಿ ಹೊಳೆಯುವುದರ ಕುರಿತು ತಿಳಿಸುತ್ತೆ. ಆದರೆ, ಈ ಎರಡು ವಚನಗಳೂ ಸುವಾರ್ತೆ ಸಾರುವುದರ ಬಗ್ಗೆ ತಿಳಿಸುತ್ತಿವೆ ಎನ್ನುವುದು ನಮ್ಮ ಮುಂಚಿನ ತಿಳಿವಳಿಕೆಯಾಗಿತ್ತು.

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

[ಪುಟ 10, 11ರಲ್ಲಿರುವ ಚಾರ್ಟು]

 ಗೋದಿ ಮತ್ತು ಕಳೆಗಳು

ಕ್ರಿ.ಶ. 33 ಬಿತ್ತನೆ ಆರಂಭ

ಬಿತ್ತುವವನು: ಯೇಸು

ಒಳ್ಳೇ ಬೀಜವನ್ನು ಬಿತ್ತಿದ್ದು: ಪವಿತ್ರಾತ್ಮದ ಮೂಲಕ ಅಭಿಷೇಕ

ಹೊಲ: ಮಾನವ ಲೋಕ

‘ಒಬ್ಬ ಮನುಷ್ಯನು ಒಳ್ಳೇ ಬೀಜವನ್ನು ಬಿತ್ತಿದನು’ (ಮತ್ತಾ. 13:24)

ವೈರಿ: ಪಿಶಾಚ

ಜನರು ನಿದ್ರೆ ಮಾಡಿದ್ದು: ಅಪೊಸ್ತಲರ ಮರಣ

‘ಜನರು ನಿದ್ರೆಮಾಡುತ್ತಿದ್ದಾಗ ವೈರಿಯು ಬಂದು ಕಳೆಯನ್ನು ಬಿತ್ತಿ ಹೋದನು’ (ಮತ್ತಾ. 13:25)

ಗೋದಿ: ಅಭಿಷಿಕ್ತ ಕ್ರೈಸ್ತರು

ಕಳೆಗಳು: ನಕಲಿ ಕ್ರೈಸ್ತರು

“ಕೊಯ್ಲಿನ ವರೆಗೆ ಎರಡೂ ಒಟ್ಟಿಗೆ ಬೆಳೆಯಲಿ” (ಮತ್ತಾ. 13:30)

1914 ಕೊಯ್ಲಿನ ಆರಂಭ

ಆಳುಗಳು/ಕೊಯ್ಯುವವರು: ದೇವದೂತರು

ಕಳೆಗಳಂಥ ಕ್ರೈಸ್ತರನ್ನು “ರಾಜ್ಯದ ಪುತ್ರ”ರಿಂದ ಬೇರ್ಪಡಿಸಲಾಯಿತು

ಕಳೆಗಳನ್ನು ಒಟ್ಟುಗೂಡಿಸಿ ಕಟ್ಟಿಡಲಾಗಿದೆ (ಮತ್ತಾ. 13:30)

(ಪ್ಯಾರ  10, 11)

1919 ಕಣಜಕ್ಕೆ ತುಂಬಿಸುವುದು: ಅಭಿಷಿಕ್ತ ಕ್ರೈಸ್ತರನ್ನು ಪುನಃಸ್ಥಾಪಿಸಲಾದ ಸಭೆಯಲ್ಲಿ ಒಟ್ಟುಸೇರಿಸಲಾಯಿತು

ಕೊಯ್ಲಿನಕಾಲ

‘ಗೋದಿಯನ್ನು ಕಣಜಕ್ಕೆ ತುಂಬಿಸುವುದು’ (ಮತ್ತಾ. 13:30)

( ಪ್ಯಾರ 12)

ಅರ್ಮಗೆದೋನ್‌

ಅರ್ಮಗೆದೋನ್‌ನಲ್ಲಿ ಕಳೆಗಳನ್ನು ಬೆಂಕಿಗೆ ಹಾಕಲಾಗುವುದು

ಪ್ರಕಾಶಮಾನವಾಗಿ ಹೊಳೆಯುವುದು

ಅರ್ಮಗೆದೋನ್‌ಗಿಂತ ಸ್ವಲ್ಪ ಮುಂಚೆ ನಂಬಿಗಸ್ತ ಅಭಿಷಿಕ್ತರಲ್ಲಿ ಉಳಿದವರನ್ನು ಸ್ವರ್ಗಕ್ಕೆ ಕೂಡಿಸಲಾಗುವುದು

ನೀತಿವಂತರು ರಾಜ್ಯದಲ್ಲಿ ಪ್ರಕಾಶಮಾನವಾಗಿ ಹೊಳೆಯುವರು (ಮತ್ತಾ. 13:43) ( ಪ್ಯಾರ 16, 17)

ಕಳೆಗಳನ್ನು ಬೆಂಕಿಯ ಕುಲುಮೆಗೆ ಹಾಕಲಾಗುವುದು (ಮತ್ತಾ. 13:42) ( ಪ್ಯಾರ 15)

[ಚಿತ್ರ]

[ಚಿತ್ರ]

[ಚಿತ್ರ]

[ಚಿತ್ರ]

[ಚಿತ್ರ]

[ಚಿತ್ರ]

[ಚಿತ್ರ]

[ಚಿತ್ರ]

[ಚಿತ್ರ]

[ಚಿತ್ರ]

[ಪುಟ 13ರಲ್ಲಿರುವ ಚಿತ್ರ]

ರಾಜಕೀಯ ಧುರೀಣರ ಜತೆಗಿನ ಕ್ರೈಸ್ತ ಪ್ರಪಂಚದ ನಿಕಟ ಸಹವಾಸ ಬೇಗನೆ ಅಂತ್ಯ ಕಾಣುವುದು (ಪ್ಯಾರ  13)