ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹರುಷಗೊಂಡ ಅರಸ!

ಹರುಷಗೊಂಡ ಅರಸ!

ನಮ್ಮ ಸಂಗ್ರಹಾಲಯ

ಹರುಷಗೊಂಡ ಅರಸ!

ಅದು 1936ರ ಆಗಸ್ಟ್‌. ಸ್ಥಳ ಸ್ವಾಸೀಲೆಂಡ್‌ನ ರಾಜನ ಆಡಳಿತ ಕೇಂದ್ರ. ರಾಬರ್ಟ್‌ ನಿಸ್‌ಬಟ್‌ ಮತ್ತು ಜಾರ್ಜ್‌ ನಿಸ್‌ಬಟ್‌ ಅಲ್ಲಿದ್ದರು. ಅವರು ಸ್ವಲ್ಪ ಮುಂಚೆ ಸೌಂಡ್‌ ಕಾರ್‌ನಿಂದ ಸುಶ್ರಾವ್ಯ ಸಂಗೀತ ನುಡಿಸಿ ನಂತರ ಸಹೋದರ ಜೆ. ಎಫ್‌. ರದರ್‌ಫರ್ಡ್‌ರ ಧ್ವನಿಮುದ್ರಿತ ಭಾಷಣಗಳನ್ನು ಪ್ರಸಾರ ಮಾಡಿದ್ದರು. ಸ್ವಾಸೀಲೆಂಡ್‌ನ ರಾಜನಾದ ಎರಡನೆಯ ಸೋಬೂಜಗೆ ಅದನ್ನು ಕೇಳಿ ತುಂಬ ಖುಷಿಯಾಗಿತ್ತು. ರಾಜನ ಆಡಳಿತ ಕೇಂದ್ರದಲ್ಲಿ ನಡೆದ ಘಟನೆಯನ್ನು ಜಾರ್ಜ್‌ ಈ ರೀತಿ ವಿವರಿಸುತ್ತಾರೆ: “ರಾಜನು ಆ ಟ್ರಾನ್‌ಸ್ಕ್ರಿಪ್ಶನ್‌ ಯಂತ್ರ, ಧ್ವನಿಸುರುಳಿಗಳು, ಧ್ವನಿವರ್ಧಕವನ್ನು ನಮ್ಮಿಂದ ಖರೀದಿಸಲು ಬಯಸಿದನು. ಏನು ಮಾಡಬೇಕೆಂದು ನಮಗೆ ಗೊತ್ತಾಗಲಿಲ್ಲ, ಕಸಿವಿಸಿಯಾಯಿತು.”

ರಾಬರ್ಟ್‌ ಕ್ಷಮೆ ಕೇಳುತ್ತಾ ಆ ವಸ್ತುಗಳು ಮಾರಾಟಕ್ಕಾಗಿ ಇಲ್ಲ ಏಕೆಂದರೆ ಅವು ಇನ್ನೊಬ್ಬರಿಗೆ ಸೇರಿದ ಸ್ವತ್ತು ಎಂದು ಹೇಳಿದರು. ಆ ವ್ಯಕ್ತಿ ಯಾರೆಂದು ರಾಜ ತಿಳಿಯಬಯಸಿದ.

“ಅವನು ಇನ್ನೊಬ್ಬ ರಾಜ” ಎಂದರು ರಾಬರ್ಟ್‌. ಅದಕ್ಕೆ ಸೋಬೂಜ ‘ರಾಜನಾ! ಅವನ್ಯಾರು?’ ಎಂದು ಪ್ರಶ್ನಿಸಿದನು. “ಯೇಸು ಕ್ರಿಸ್ತ. ದೇವರ ರಾಜ್ಯದ ಅರಸ” ಎಂದ ರಾಬರ್ಟ್‌.

“ಓಹ್‌. . . ಆತನು ನಿಜಕ್ಕೂ ಮಹಾ ರಾಜ” ಎಂದು ಆಳವಾದ ಗೌರವದಿಂದ ಒಪ್ಪಿದ ಸೋಬೂಜ, “ಆತನಿಗೆ ಸೇರಿದ್ದೇನನ್ನೂ ನಾನು ತೆಗೆದುಕೊಳ್ಳುವುದಿಲ್ಲ” ಎಂದನು.

ರಾಜ ಸೋಬೂಜನ ಕುರಿತು ರಾಬರ್ಟ್‌ ಬರೆದದ್ದೇನಂದರೆ, ‘ಆ ಪ್ರಧಾನ ಮುಖ್ಯಸ್ಥನ [ರಾಜ ಸೋಬೂಜನ] ಗುಣ ಕಂಡು ನಾನು ಬೆರಗಾದೆ. ತುಂಬ ಒಳ್ಳೇ ಇಂಗ್ಲಿಷ್‌ ಮಾತಾಡಿದರು. ಸ್ವಲ್ಪ ಕೂಡ ಗರ್ವ, ಅಹಂಕಾರ ಅವರಲ್ಲಿರಲಿಲ್ಲ. ಮುಚ್ಚುಮರೆಯಿಲ್ಲದ ನೇರ ನುಡಿ. ಯಾರು ಕೂಡ ಅಳುಕಿಲ್ಲದೆ ಹೋಗಿ ಮಾತಾಡಬಹುದಾದಷ್ಟು ಸ್ನೇಹಮಯಿ. ಹೆಚ್ಚುಕಡಿಮೆ 45 ನಿಮಿಷ ಅವರೊಂದಿಗೆ ಕೂತು ಮಾತಾಡಿದೆ. ಜಾರ್ಜ್‌ ಹೊರಗಿದ್ದ. ರೆಕಾರ್ಡರ್‌ನಿಂದ ಸಂಗೀತ ಹಾಕಿದ್ದ.

‘ಆವತ್ತು ನಂತರ ನಾವು ಸ್ವಾಸೀ ನ್ಯಾಷನಲ್‌ ಸ್ಕೂಲ್‌ಗೆ ಭೇಟಿ ನೀಡಿದೆವು. ಅದೊಂದು ಸ್ವಾರಸ್ಯಕರ ಅನುಭವ. ಮೊದಲು ಪ್ರಾಂಶುಪಾಲರಿಗೆ ಸಾಕ್ಷಿ ನೀಡಿದೆವು. ಅವರು ಗಮನಕೊಟ್ಟು ಕೇಳಿದರು. ಟ್ರಾನ್‌ಸ್ಕ್ರಿಪ್ಶನ್‌ ಯಂತ್ರದಿಂದ ಧ್ವನಿಸುರುಳಿಗಳನ್ನು ಶಾಲೆಯ ಮಕ್ಕಳೆಲ್ಲರಿಗೆ ಕೇಳಿಸಲು ಬಯಸುತ್ತೇವೆಂದು ಹೇಳಿದಾಗ ಅವರಿಗೆ ಸಂತೋಷವಾಯಿತು. ಎಲ್ಲರನ್ನು ಕರೆದರು. ಸುಮಾರು ನೂರು ವಿದ್ಯಾರ್ಥಿಗಳು ಹುಲ್ಲುಹಾಸಿನ ಮೇಲೆ ಕೂತು ಧ್ವನಿಸುರುಳಿಗಳನ್ನು ಕೇಳಿದರು. ಇದು ಮುಗಿದ ಮೇಲೆ ಶಾಲೆ ಬಗ್ಗೆ ನಮಗೆ ತಿಳಿಸಲಾಯಿತು. ಪ್ರೌಢ ಶಾಲೆಯ ಹುಡುಗರಿಗೆ ಕೃಷಿ, ತೋಟಗಾರಿಕೆ, ಮರಗೆಲಸ, ಕಟ್ಟಡ ನಿರ್ಮಾಣ ಕೆಲಸ ಹೇಳಿಕೊಡಲಾಗುತ್ತಿತ್ತು, ಇಂಗ್ಲಿಷ್‌ ಮತ್ತು ಅಂಕಗಣಿತ ಕಲಿಸಲಾಗುತ್ತಿತ್ತು. ಹುಡುಗಿಯರಿಗೆ ನರ್ಸಿಂಗ್‌, ಮನೆಗೆಲಸ ಇತ್ಯಾದಿ ಉಪಯುಕ್ತ ಕಸುಬುಗಳಲ್ಲಿ ತರಬೇತಿ ಕೊಡಲಾಗುತ್ತಿತ್ತು.’ ಆ ಶಾಲೆಯ ಸ್ಥಾಪಕರು ಸ್ವಾಸೀಲ್ಯಾಂಡ್‌ನ ಆ ಪ್ರಧಾನ ಮುಖ್ಯಸ್ಥನ ಅಜ್ಜಿಯೇ ಆಗಿದ್ದರು. *

1933ರ ಆರಂಭದಲ್ಲಿ ರಾಜ ಸೋಬೂಜನ ಆಡಳಿತ ಕೇಂದ್ರಕ್ಕೆ ಪಯನೀಯರರು ಭೇಟಿನೀಡಿದ್ದರು. ಆ ಸಮಯದಲ್ಲಿ ಸಾಕ್ಷಿಗಳು ಹೇಳುತ್ತಿದ್ದ ವಿಷಯಗಳನ್ನು ರಾಜ ಖುಷಿಯಿಂದ ಕೇಳಿದನು. ಒಮ್ಮೆ ತನ್ನ 100 ಮಂದಿ ಅಂಗರಕ್ಷಕರನ್ನು ಒಟ್ಟುಗೂಡಿಸಿ ರಾಜ್ಯ ಸಂದೇಶದ ಧ್ವನಿಮುದ್ರಣವನ್ನು ಕೇಳುವಂತೆ ಸಹ ಏರ್ಪಡಿಸಿದನು. ಅವನು ನಮ್ಮ ಪತ್ರಿಕೆಗಳ ಚಂದಾದಾರನಾದನು. ಸಾಹಿತ್ಯವನ್ನು ಸಹ ಸ್ವೀಕರಿಸಿದನು. ಸ್ವಲ್ಪದರಲ್ಲೇ ರಾಜನ ಹತ್ತಿರ ನಮ್ಮ ಸಂಸ್ಥೆಯ ಹೆಚ್ಚುಕಡಿಮೆ ಎಲ್ಲ ಪ್ರಕಾಶನಗಳ ಒಂದು ಗ್ರಂಥಾಲಯವಿತ್ತು! ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್‌ ವಸಾಹತು ಸರ್ಕಾರ ನಮ್ಮ ಸಾಹಿತ್ಯದ ಮೇಲೆ ನಿಷೇಧ ಹೇರಿತ್ತಾದರೂ ಅವುಗಳಿಗೆ ಹಾನಿಯಾಗದಂತೆ ರಾಜ ನೋಡಿಕೊಂಡದ್ದು ವಿಶೇಷ!

ರಾಜ ಸೋಬೂಜ ಲೊಬಾಂಬದ ತನ್ನ ಆಡಳಿತ ಕೇಂದ್ರಕ್ಕೆ ಸಾಕ್ಷಿಗಳನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದನು. ಅವರ ಬೈಬಲ್‌ ಭಾಷಣಗಳನ್ನು ಕೇಳುವಂತೆ ಪಾದ್ರಿಗಳನ್ನು ಕೂಡ ಕರೆಯುತ್ತಿದ್ದನು. ಸ್ಥಳೀಯ ಸಹೋದರ ಹಲ್‌ವೀ ಮಶಾಜೀ, ಮತ್ತಾಯ 23ನೇ ಅಧ್ಯಾಯವನ್ನು ಚರ್ಚಿಸುತ್ತಿದ್ದಾಗ ಕೆಲವು ಪಾದ್ರಿಗಳು ಕೋಪದಿಂದ ಸಿಡಿದೆದ್ದರು. ಅವನು ಇನ್ನೇನೂ ಮಾತಾಡದೆ ಸುಮ್ಮನೆ ಕುಳಿತುಕೊಳ್ಳುವಂತೆ ಮಾಡಲು ತುಂಬ ಪ್ರಯತ್ನಿಸಿದರು. ಆದರೆ ರಾಜ ಸೋಬೂಜ ಮಧ್ಯೆಪ್ರವೇಶಿಸಿ ಸಹೋದರ ಮಶಾಜೀಗೆ ಚರ್ಚೆ ಮುಂದುವರಿಸುವಂತೆ ಹೇಳಿದನು. ಮಾತ್ರವಲ್ಲ ಭಾಷಣದಲ್ಲಿ ತಿಳಿಸಲಾಗುವ ಎಲ್ಲ ಬೈಬಲ್‌ ವಚನಗಳನ್ನು ಬರೆದುಕೊಳ್ಳುವಂತೆ ಸಭಿಕರಿಗೆ ಹೇಳಿದನು!

ಇನ್ನೊಮ್ಮೆ ಪಯನೀಯರ್‌ ಸಹೋದರ ನೀಡಿದ ಭಾಷಣವನ್ನು ಆಲಿಸಿದ ನಾಲ್ಕು ಪಾದ್ರಿಗಳು ಒಳ್ಳೇ ರೀತಿ ಪ್ರತಿಕ್ರಿಯಿಸಿದರು. ತಾವು ಪಾದ್ರಿಗಳೆಂದು ತೋರಿಸಿಕೊಳ್ಳಲು ಸಾಮಾನ್ಯವಾಗಿ ಹೊರಗೆ ಕಾಣುವಂತೆ ಬಿಡುತ್ತಿದ್ದ ಶರ್ಟ್‌ನ ಕೊರಳಪಟ್ಟಿಯನ್ನು ಕಾಣದಂತೆ ಒಳಗೆ ತುರುಕಿಸಿ “ಈಗಿನಿಂದ ನಾವು ಪಾದ್ರಿಗಳಲ್ಲ ಯೆಹೋವನ ಸಾಕ್ಷಿಗಳು” ಎಂದು ಗಟ್ಟಿಯಾಗಿ ಹೇಳಿದರು. ಬಳಿಕ ರಾಜನ ಬಳಿಯಿರುವ ಪುಸ್ತಕಗಳು ತಮಗೂ ಬೇಕೆಂದು ಆ ಪಯನೀಯರನನ್ನು ಕೇಳಿಕೊಂಡರು.

ಆ ಪ್ರಧಾನ ಮುಖ್ಯಸ್ಥ 1930ರ ನಂತರದ ಸಮಯದಿಂದ 1982ರಲ್ಲಿ ಮರಣಹೊಂದುವ ವರೆಗೆ ಸ್ವಾಸೀಲೆಂಡ್‌ನ ಯೆಹೋವನ ಸಾಕ್ಷಿಗಳನ್ನು ಆದರಾಭಿಮಾನದಿಂದ ಕಾಣುತ್ತಿದ್ದನು. ಸಾಕ್ಷಿಗಳು ಸ್ವಾಸೀಯಲ್ಲಿನ ಧರ್ಮವಿಧಿಗಳನ್ನು ಪಾಲಿಸದ ಕಾರಣ ಹಿಂಸೆಗೆ ಒಳಗಾಗುವ ಸಾಧ್ಯತೆಯಿತ್ತು. ಆದರೆ ಅವರಿಗೆ ಯಾವುದೇ ಹಿಂಸೆಯ ದಾಳಿಯಾಗದಂತೆ ರಾಜ ನೋಡಿಕೊಂಡನು. ಹಾಗಾಗಿ ಯೆಹೋವನ ಸಾಕ್ಷಿಗಳು ಆ ರಾಜನಿಗೆ ಚಿರಋಣಿಗಳಾಗಿದ್ದರು. ಅವನು ತೀರಿಹೋದಾಗ ಅಲ್ಲಿನ ಸಾಕ್ಷಿಗಳು ಮನದಾಳದಿಂದ ಸಂತಾಪ ವ್ಯಕ್ತಪಡಿಸಿದರು.

2013ರ ಆರಂಭದಷ್ಟಕ್ಕೆ ಸ್ವಾಸೀಲೆಂಡ್‌ನಲ್ಲಿ 3,000ಕ್ಕಿಂತ ಹೆಚ್ಚು ರಾಜ್ಯ ಪ್ರಚಾರಕರಿದ್ದರು. ಅಲ್ಲಿನ ಜನಸಂಖ್ಯೆ ಹತ್ತುಲಕ್ಷಕ್ಕಿಂತ ಹೆಚ್ಚು. ಅಂದರೆ ಪ್ರತಿ 384 ಮಂದಿಗೆ ಒಬ್ಬ ಪ್ರಚಾರಕ. ಅಲ್ಲಿನ 90 ಸಭೆಗಳಲ್ಲಿ 260ಕ್ಕಿಂತ ಹೆಚ್ಚು ಪಯನೀಯರರು ಸೇವೆಯಲ್ಲಿ ನಿರತರಾಗಿದ್ದಾರೆ. 2012ರಲ್ಲಿ ಕ್ರಿಸ್ತನ ಮರಣದ ಸ್ಮರಣೆಗೆ 7,496 ಮಂದಿ ಹಾಜರಾದದ್ದು ಗಮನಾರ್ಹ. ಇವೆಲ್ಲವೂ ಹೆಚ್ಚಿನ ಅಭಿವೃದ್ಧಿಯೆಡೆಗೆ ಕೈತೋರಿಸುತ್ತದೆ. ಇದೆಲ್ಲವೂ ಸಾಧ್ಯವಾದದ್ದು 1930ರುಗಳ ದಶಕದಲ್ಲಿ ಸ್ವಾಸೀಲೆಂಡನ್ನು ಸಾಕ್ಷಿಗಳು ಮೊದಮೊದಲು ಭೇಟಿಯಾದಾಗ ದೃಢವಾದ ಅಸ್ತಿವಾರವನ್ನು ಹಾಕಿದ್ದರಿಂದಲೇ.—ದಕ್ಷಿಣ ಆಫ್ರಿಕದ ನಮ್ಮ ಸಂಗ್ರಹಾಲಯದಿಂದ.

[ಪಾದಟಿಪ್ಪಣಿ]

^ ಪ್ಯಾರ. 8 ದ ಗೋಲ್ಡನ್‌ ಏಜ್‌, ಜೂನ್‌ 30, 1937, ಪುಟ 629.

[ಪುಟ 31ರಲ್ಲಿರುವ ಚಿತ್ರ]

[ಕೃಪೆ]

King Sobhuza II taken in 1936 by Robert Nisbet and bequeathed to the Watch Tower Society

[ಪುಟ 32ರಲ್ಲಿರುವ ಚಿತ್ರ]

ಸ್ವಾಸೀಲೆಂಡ್‌ನಲ್ಲಿ ಒಂದು ಸಾರ್ವಜನಿಕ ಭಾಷಣಕ್ಕೆ ಬಂದ ಪ್ರೌಢಶಾಲಾ ವಿದ್ಯಾರ್ಥಿಗಳು (1936)

[ಪುಟ 32ರಲ್ಲಿರುವ ಚಿತ್ರ]

ತನ್ನ ಸೌಂಡ್‌ ಕಾರ್‌ ಹತ್ತಿರ ಜಾರ್ಜ್‌ ನಿಸ್‌ಬಟ್‌