ಯೆಹೋವನ ಮರುಜ್ಞಾಪನಗಳಲ್ಲಿ ನಿಮ್ಮ ಹೃದಯ ಉಲ್ಲಾಸಿಸಲಿ
ಯೆಹೋವನ ಮರುಜ್ಞಾಪನಗಳಲ್ಲಿ ನಿಮ್ಮ ಹೃದಯ ಉಲ್ಲಾಸಿಸಲಿ
“ನಿನ್ನ ಕಟ್ಟಳೆಗಳನ್ನು ನನ್ನ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ.”—ಕೀರ್ತ. 119:111.
ನೀವು ಹೇಗೆ ಉತ್ತರಿಸುವಿರಿ?
ಯೆಹೋವನ ಮರುಜ್ಞಾಪನಗಳಲ್ಲಿ ಉಲ್ಲಾಸಿಸಲು ಯಾವ ಕಾರಣ ನಮಗಿದೆ?
ನಾವು ಯೆಹೋವನಲ್ಲಿ ಭರವಸೆಯನ್ನು ಹೇಗೆ ಬೆಳೆಸಬಲ್ಲವು?
ರಾಜ್ಯ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿರುವುದು ಏಕೆ ಪ್ರಾಮುಖ್ಯ?
1. (1) ಮಾನವರು ಮರುಜ್ಞಾಪನಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? (2) ಏಕೆ? (3) ಒಬ್ಬನು ಸಲಹೆಯನ್ನು ವೀಕ್ಷಿಸುವ ವಿಧವನ್ನು ಹೆಮ್ಮೆ ಹೇಗೆ ಬಾಧಿಸಬಹುದು?
ಜನರು ನಿರ್ದೇಶನಗಳಿಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಅಧಿಕಾರದಲ್ಲಿರುವ ಒಬ್ಬನು ಕೊಡುವ ಮರುಜ್ಞಾಪನವನ್ನು ಒಬ್ಬನು ವಿನೀತಭಾವದಿಂದ ಅಂಗೀಕರಿಸಬಹುದಾದರೂ ಸಮಾನಸ್ಥನಿಂದ ಅಥವಾ ಕೆಳಸ್ಥಾನದಲ್ಲಿರುವ ಒಬ್ಬನಿಂದ ಬರುವುದಾದರೆ ಅದನ್ನು ಒಡನೆ ತಳ್ಳಿಹಾಕಬಹುದು. ಶಿಸ್ತುಕ್ರಮ ಮತ್ತು ಸಲಹೆಗೆ ನಾವು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತೇವೆ. ಕೆಲವರಿಗೆ ದುಃಖ, ಬೇಸರ ಅಥವಾ ನಾಚಿಕೆಯಾದರೆ ಇನ್ನು ಕೆಲವರು ಪ್ರಚೋದಿಸಲ್ಪಡುತ್ತಾರೆ, ಇನ್ನೂ ಚೆನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ಯಾಕೆ ಕೆಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ? ಒಂದು ಕಾರಣ ಹೆಮ್ಮೆಯಾಗಿದೆ. ಹೌದು, ಅಹಂಭಾವವು ಒಬ್ಬನು ವಿವೇಚನೆಯನ್ನು ಬಳಸದಂತೆ ಮಾಡಬಲ್ಲದು. ಅವನು ಸಲಹೆಯನ್ನು ಅಂಗೀಕರಿಸದೆ, ಅಮೂಲ್ಯ ನಿರ್ದೇಶನಗಳನ್ನು ಕಳಕೊಳ್ಳಬಹುದು.—ಜ್ಞಾನೋ. 16:18.
2. ನಿಜ ಕ್ರೈಸ್ತರು ದೇವರ ವಾಕ್ಯದ ಬುದ್ಧಿವಾದವನ್ನು ಏಕೆ ಗಣ್ಯಮಾಡುತ್ತಾರೆ?
2 ನಿಜ ಕ್ರೈಸ್ತರಾದರೋ ಸಹಾಯಕಾರಿ ಸಲಹೆಯನ್ನು ಗಣ್ಯಮಾಡುತ್ತಾರೆ. ಅದೂ ದೇವರ ವಾಕ್ಯದ ಮೇಲೆ ಆಧರಿತವಾಗಿರುವಲ್ಲಿ ಇನ್ನೂ ಹೆಚ್ಚು ಮಹತ್ವ ಕೊಡುತ್ತಾರೆ. ಯೆಹೋವನ ಮರುಜ್ಞಾಪನಗಳು ನಮಗೆ ಅಮೂಲ್ಯ ಒಳನೋಟವನ್ನು ಕೊಡುತ್ತವೆ. ಪ್ರಾಪಂಚಿಕತೆ, ಲೈಂಗಿಕ ಅನೈತಿಕತೆ, ಅಮಲೌಷಧ, ಮದ್ಯದ ದುರ್ಬಳಕೆಯಂಥ ಅಪಾಯಗಳಿಂದ ತಪ್ಪಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. (ಜ್ಞಾನೋ. 20:1; 2 ಕೊರಿಂ. 7:1; 1 ಥೆಸ. 4:3-5; 1 ತಿಮೊ. 6:6-11) ಇದಲ್ಲದೆ, ದೇವರ ಮರುಜ್ಞಾಪನಗಳಿಗೆ ವಿಧೇಯರಾಗುವುದರಿಂದ ನಮ್ಮಲ್ಲಿ “ಒಳ್ಳೇ ಹೃದಯ ಸ್ಥಿತಿ” ಇರುತ್ತದೆ.—ಯೆಶಾ. 65:14.
3. ಕೀರ್ತನೆಗಾರನ ಯಾವ ಮನೋಭಾವವನ್ನು ನಾವು ಅನುಕರಿಸುವದು ಒಳ್ಳೆಯದು?
3 ಸ್ವರ್ಗದಲ್ಲಿರುವ ನಮ್ಮ ತಂದೆಯಾಗಿರುವ ಯೆಹೋವನೊಂದಿಗೆ ನಮಗಿರುವ ಅಮೂಲ್ಯ ಸಂಬಂಧವನ್ನು ಕಾಪಾಡಲು, ನಾವಾತನ ವಿವೇಕಪ್ರದ ನಿರ್ದೇಶನಗಳನ್ನು ಆದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಮನೋಭಾವ ಕೀರ್ತನೆಗಾರನಂತಿರಬೇಕು. ಅವನು ಬರೆದದ್ದು: “ನಿನ್ನ ಕಟ್ಟಳೆಗಳನ್ನು [ಮರುಜ್ಞಾಪನಗಳನ್ನು, NW] ನನ್ನ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ; ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿವೆ”! (ಕೀರ್ತ. 119:111) ನಾವೂ ಹಾಗೆಯೇ ಯೆಹೋವನ ಆಜ್ಞೆಗಳಲ್ಲಿ ಆನಂದಿಸುತ್ತಿದ್ದೇವಾ? ಅಥವಾ ಅವನ್ನು ಹೊರೆ ಎಂಬಂತೆ ವೀಕ್ಷಿಸುತ್ತಿದ್ದೇವಾ? ಕೆಲವು ಸಲಹೆಗಳಿಂದ ನಾವು ಕಿರಿಕಿರಿಗೊಳ್ಳಬಹುದಾದರೂ ಹತಾಶರಾಗಬೇಕೆಂದಿಲ್ಲ. ಏಕೆಂದರೆ ನಾವು ಯೆಹೋವನ ಶ್ರೇಷ್ಠವಾದ ವಿವೇಕದಲ್ಲಿ ಅಚಲ ಭರವಸೆಯನ್ನು ಬೆಳೆಸಿಕೊಳ್ಳಲು ಸಾಧ್ಯ! ಅದು ಹೇಗೆಂದು ತಿಳಿಯಲು ಮೂರು ವಿಧಗಳನ್ನು ಪರಿಶೀಲಿಸೋಣ.
ಪ್ರಾರ್ಥನೆಯ ಮೂಲಕ ಭರವಸೆ ಹೆಚ್ಚಿಸಿ
4. ದಾವೀದನ ಜೀವನದಲ್ಲಿ ಯಾವ ಸಂಗತಿ ಸ್ಥಿರವಾಗಿತ್ತು?
4 ದಾವೀದನ ಜೀವನದಲ್ಲಿ ಅನೇಕ ಏಳುಬೀಳುಗಳಿದ್ದರೂ, ಒಂದು ಸಂಗತಿ ಸ್ಥಿರವಾಗಿತ್ತು. ಅದು ಸೃಷ್ಟಿಕರ್ತನಲ್ಲಿ ಆತನಿಗಿದ್ದ ದೃಢ ಭರವಸೆಯೇ. ಅವನಂದದ್ದು: “ಯೆಹೋವನೇ, ನಿನ್ನಲ್ಲಿ ಮನಸ್ಸಿಟ್ಟಿದ್ದೇನೆ; ನನ್ನ ದೇವರೇ, ನಿನ್ನನ್ನೇ ನಂಬಿದ್ದೇನೆ.” (ಕೀರ್ತ. 25:1) ತಂದೆಯಾದ ಯೆಹೋವನಲ್ಲಿ ಇಷ್ಟೊಂದು ಭರವಸೆಯಿಡಲು ದಾವೀದನಿಗೆ ಯಾವುದು ಸಹಾಯಮಾಡಿತು?
5, 6. ದಾವೀದನಿಗೆ ಯೆಹೋವನೊಂದಿಗಿದ್ದ ಸಂಬಂಧದ ಕುರಿತು ದೇವರ ವಾಕ್ಯ ನಮಗೇನು ತಿಳಿಸುತ್ತದೆ?
5 ಅನೇಕರು ಸಂಕಟದಲ್ಲಿರುವಾಗ ಮಾತ್ರ ದೇವರಿಗೆ ಪ್ರಾರ್ಥಿಸುತ್ತಾರೆ. ಹೀಗೆ ಯೋಚಿಸಿ. ನಿಮ್ಮ ಸ್ನೇಹಿತನೋ ಸಂಬಂಧಿಯೋ ಹಣದ ಅವಶ್ಯಕತೆ ಇದ್ದಾಗ ಅಥವಾ ಏನಾದರೂ ಸಹಾಯ ಬೇಕಿರುವಾಗ ಮಾತ್ರ ನಿಮ್ಮನ್ನು ಸಂಪರ್ಕಿಸುತ್ತಾನೆ. ಅವನು ಹೀಗೆಯೇ ಮಾಡುತ್ತಿದ್ದರೆ, ಅವನು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಾನಾ ಎಂದು ನಿಮಗೆ ಸಂಶಯ ಬರಬಹುದು. ಆದರೆ, ದಾವೀದನಿಗೆ ಯೆಹೋವನೊಂದಿಗಿದ್ದ ಸಂಬಂಧವಾದರೋ ಹೀಗಿರಲಿಲ್ಲ. ಅವನ ಜೀವನದಾದ್ಯಂತ, ಕಷ್ಟದ ಸಮಯದಲ್ಲೂ ಸುಖದ ಸಮಯದಲ್ಲೂ ಯೆಹೋವನಲ್ಲಿ ನಂಬಿಕೆ, ಪ್ರೀತಿ ತೋರಿಸಿದನು.—ಕೀರ್ತ. 40:8.
6 ಅವನು ಯೆಹೋವನಿಗೆ ಅರ್ಪಿಸಿದ ಸ್ತುತಿ ಮತ್ತು ಉಪಕಾರಸ್ಮರಣೆಯ ಮಾತುಗಳನ್ನು ಗಮನಿಸಿ: “ನಮ್ಮ ಕರ್ತನಾದ ಯೆಹೋವನೇ, ನಿನ್ನ ನಾಮವು ಭೂಲೋಕದಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದು. ಆಕಾಶಮಂಡಲದಲ್ಲಿ ನಿನ್ನ ವೈಭವವನ್ನು ಪ್ರಕಾಶಪಡಿಸಿದ್ದೀ.” (ಕೀರ್ತ. 8:1) ಇದರಿಂದ, ದಾವೀದನಿಗೆ ಸ್ವರ್ಗದಲ್ಲಿರುವ ತನ್ನ ತಂದೆಯೊಂದಿಗೆ ಎಷ್ಟು ಆಪ್ತಸಂಬಂಧ ಇತ್ತೆಂದು ನಮಗೆ ತಿಳಿದುಬರುತ್ತದೆ. ದೇವರ ಘನವೈಭವದ ಬಗ್ಗೆ ದಾವೀದನಿಗಿದ್ದ ಗಣ್ಯತೆ, ಅವನು “ದಿನವೆಲ್ಲಾ” ಯೆಹೋವನನ್ನು ಮಹಿಮೆಪಡಿಸುವಂತೆ ಪ್ರೇರಿಸಿತು.—ಕೀರ್ತ. 35:28.
7. ಪ್ರಾರ್ಥನೆಯ ಮೂಲಕ ದೇವರ ಸಮೀಪಕ್ಕೆ ಬರುವುದರಿಂದ ನಾವು ಯಾವ ಪ್ರಯೋಜನ ಪಡೆಯುತ್ತೇವೆ?
7 ನಾವು ಯೆಹೋವನಲ್ಲಿ ಭರವಸೆಯನ್ನು ಬೆಳೆಸಬೇಕಾದರೆ ದಾವೀದನಂತೆಯೇ ಯೆಹೋವನೊಂದಿಗೆ ಕ್ರಮವಾಗಿ ಸಂವಾದ ಮಾಡುವುದು ಅಗತ್ಯ. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎನ್ನುತ್ತದೆ ಬೈಬಲ್. (ಯಾಕೋ. 4:8) ಪವಿತ್ರಾತ್ಮವನ್ನು ಪಡೆಯಲು ಇರುವ ಒಂದು ಪ್ರಮುಖ ವಿಧ ಸಹ ಪ್ರಾರ್ಥನೆಯ ಮೂಲಕ ದೇವರ ಸಮೀಪಕ್ಕೆ ಬರುವುದಾಗಿದೆ. —1 ಯೋಹಾನ 3:22 ಓದಿ.
8. ಪ್ರಾರ್ಥನೆ ಮಾಡುವಾಗ ನಾವು ಹೇಳಿದ್ದನ್ನೇ ಹೇಳಬಾರದೇಕೆ?
8 ಪ್ರಾರ್ಥಿಸುವಾಗ ಹೇಳಿದ ಪದಗಳನ್ನೇ, ಅಭಿವ್ಯಕ್ತಿಗಳನ್ನೇ ಪುನಃ ಪುನಃ ಹೇಳುವ ಪ್ರವೃತ್ತಿ ನಿಮಗಿದೆಯೇ? ಹಾಗಿರುವಲ್ಲಿ, ಪ್ರಾರ್ಥಿಸುವ ಮೊದಲು ಏನು ಹೇಳಬೇಕೆನ್ನುವುದರ ಬಗ್ಗೆ ಒಂದು ಕ್ಷಣ ಯೋಚಿಸಿ. ನಾವು ನಮ್ಮ ಸ್ನೇಹಿತನ ಅಥವಾ ಸಂಬಂಧಿಯ ಹತ್ತಿರ ಮಾತಾಡುವಾಗ ಹೇಳಿದ್ದನ್ನೇ ಪುನಃ ಪುನಃ ಹೇಳುವಲ್ಲಿ ಅದು ಅವನಿಗೆ ಇಷ್ಟವಾಗುತ್ತದಾ? ನಿಮಗೆ ಅವನು ಕಿವಿಗೊಡಲಿಕ್ಕಿಲ್ಲ. ಯೆಹೋವನಾದರೋ ತನ್ನ ನಿಷ್ಠಾವಂತ ಸೇವಕರ ಯಥಾರ್ಥ ಪ್ರಾರ್ಥನೆಗೆ ಕಿವಿಮುಚ್ಚಿಕೊಳ್ಳುವುದಿಲ್ಲ ನಿಜ. ಆದರೆ ನಾವು ಆತನೊಂದಿಗೆ ಸಂವಾದಿಸುವಾಗ ರೂಢಿಯೆಂಬಂತೆ ಹೇಳಿದ್ದನ್ನೇ ಹೇಳದಿರುವುದು ಉತ್ತಮ.
9, 10. (1) ನಮ್ಮ ಪ್ರಾರ್ಥನೆಗಳಲ್ಲಿ ನಾವು ಯಾವ ವಿಷಯಗಳನ್ನು ಸೇರಿಸಬಹುದು? (2) ಹೃತ್ಪೂರ್ವಕ ಪ್ರಾರ್ಥನೆಗಳನ್ನು ಅರ್ಪಿಸಲು ನಮಗೆ ಯಾವುದು ನೆರವಾಗಬಲ್ಲದು?
9 ನಾವು ದೇವರ ಸಮೀಪಕ್ಕೆ ಹೋಗಬಯಸುವುದಾದರೆ ನಮ್ಮ ಪ್ರಾರ್ಥನೆಗಳು ಕಾಟಾಚಾರದ್ದಾಗಿರಬಾರದು. ಯೆಹೋವನಿಗೆ ನಮ್ಮ ಹೃದಯದಲ್ಲಿರುವುದನ್ನು ಎಷ್ಟು ಹೆಚ್ಚಾಗಿ ತೋಡಿಕೊಳ್ಳುತ್ತೇವೋ ಅಷ್ಟು ಹೆಚ್ಚು ನಾವಾತನಿಗೆ ಆಪ್ತರಾಗುತ್ತೇವೆ ಮತ್ತು ಆತನಲ್ಲಿ ಹೆಚ್ಚು ಭರವಸೆಯಿಡುತ್ತೇವೆ. ಆದರೆ, ನಮ್ಮ ಪ್ರಾರ್ಥನೆಗಳಲ್ಲಿ ನಾವು ಯಾವ ವಿಷಯಗಳನ್ನು ಸೇರಿಸಬೇಕು? ದೇವರ ವಾಕ್ಯ ಉತ್ತರಿಸುವುದು: “ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ.” (ಫಿಲಿ. 4:6) ನಿಜತ್ವವೆಂದರೆ, ನಮ್ಮ ಜೀವನವನ್ನು ಮತ್ತು ದೇವರೊಂದಿಗಿನ ನಮ್ಮ ಸಂಬಂಧವನ್ನು ಪ್ರಭಾವಿಸುವ ಯಾವುದೇ ವಿಷಯದ ಕುರಿತು ನಾವು ಪ್ರಾರ್ಥಿಸಬಹುದು.
10 ಬೈಬಲಿನಲ್ಲಿ ದಾಖಲಾಗಿರುವ ನಂಬಿಗಸ್ತ ಪುರುಷ ಮತ್ತು ಸ್ತ್ರೀಯರ ಪ್ರಾರ್ಥನೆಗಳನ್ನು ಪರಿಶೀಲಿಸುವುದರಿಂದ ನಾವು ಅನೇಕ ವಿಷಯಗಳನ್ನು ಕಲಿಯಬಹುದು. (1 ಸಮು. 1:10, 11; ಅ. ಕಾ. 4:24-31) ಹೃತ್ಪೂರ್ವಕ ಪ್ರಾರ್ಥನೆಗಳ ಮತ್ತು ಯೆಹೋವನಿಗೆ ಹಾಡಿದ ಗೀತೆಗಳ ಸಮುಚ್ಚಯ ಕೀರ್ತನೆಗಳಲ್ಲಿದೆ. ಈ ಪ್ರಾರ್ಥನೆ ಮತ್ತು ಗೀತೆಗಳಲ್ಲಿ ವೇದನೆಯಿಂದ ಹಿಡಿದು ಅಪ್ಪಟ ಸಂತೋಷದವರೆಗೆ ಎಲ್ಲ ರೀತಿಯ ಮಾನವ ಭಾವನೆಗಳು ಅಡಗಿವೆ. ನಿಷ್ಠಾವಂತ ಸೇವಕರ ಇಂಥ ಅಭಿವ್ಯಕ್ತಿಗಳನ್ನು ವಿಶ್ಲೇಷಿಸುವುದು ನಾವು ಯೆಹೋವನಿಗೆ ಅರ್ಥಗರ್ಭಿತ ಪ್ರಾರ್ಥನೆಗಳನ್ನು ಅರ್ಪಿಸಲು ಸಹಾಯ ಮಾಡಬಲ್ಲದು.
ಯೆಹೋವನ ಮರುಜ್ಞಾಪನಗಳನ್ನು ಮನನಮಾಡಿ
11. ದೇವರ ಬುದ್ಧಿವಾದವನ್ನು ಮನನ ಮಾಡುವುದು ಏಕೆ ಅಗತ್ಯ?
11 ದಾವೀದ ಹೇಳಿದನು: “ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ.” (ಕೀರ್ತ. 19:7) ಹೌದು, ದೇವರ ಆಜ್ಞೆಗಳನ್ನು ಪಾಲಿಸುವಾಗ, ನಾವು ಬುದ್ಧಿಹೀನರು ಅಥವಾ ಅನನುಭವಿಗಳಾಗಿದ್ದರೂ ವಿವೇಕಿಗಳಾಗುವೆವು. ಆದರೆ ಬೈಬಲಿನಲ್ಲಿರುವ ಕೆಲವು ಬುದ್ಧಿವಾದಗಳಿಂದ ನಾವು ಪೂರ್ಣ ಪ್ರಯೋಜನ ಪಡೆಯಬೇಕಾದರೆ ಅವುಗಳ ಕುರಿತು ಮನನ ಮಾಡಲೇಬೇಕು. ಶಾಲೆಯ ಮತ್ತು ಕೆಲಸದ ಒತ್ತಡದ ಮಧ್ಯೆಯೂ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು, ರಕ್ತದ ಬಗ್ಗೆ ದೇವರ ಮಟ್ಟಕ್ಕೆ ಅಂಟಿಕೊಂಡಿರುವುದು, ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವುದು, ಉಡುಪು ಮತ್ತು ಕೇಶಾಲಂಕಾರದ ಬಗ್ಗೆ ಬೈಬಲ್ ತತ್ವಗಳನ್ನು ಅನುಸರಿಸುವುದು ಆ ಬುದ್ಧಿವಾದಗಳಲ್ಲಿ ಕೆಲವು. ಇಂಥ ವಿಷಯಗಳ ಕುರಿತು ದೇವರ ಅಭಿಪ್ರಾಯವನ್ನು ತಿಳಿದುಕೊಳ್ಳುವುದು ಸಮಸ್ಯೆಗಳನ್ನು ಎದುರಿಸಲು ನಮ್ಮನ್ನು ಸಿದ್ಧವಾಗಿಡುತ್ತದೆ. ಸಮಸ್ಯೆ ಬಂದಾಗ ಅದನ್ನು ಹೇಗೆ ನಿಭಾಯಿಸಬೇಕೆಂದು ಮನಸ್ಸಿನಲ್ಲೇ ತೀರ್ಮಾನಿಸಿರುತ್ತೇವೆ. ಇಂಥ ಮುಂದಾಲೋಚನೆ ಮತ್ತು ಮುಂತಯಾರಿ ಮುಂದೆ ಹೆಚ್ಚು ವೇದನೆಯನ್ನು ಅನುಭವಿಸದಂತೆ ತಡೆಯುತ್ತದೆ.—ಜ್ಞಾನೋ. 15:28.
12. ಯಾವುದರ ಬಗ್ಗೆ ಯೋಚಿಸುವುದು ದೇವರ ಮರುಜ್ಞಾಪನಗಳನ್ನು ಪಾಲಿಸಲು ಸಹಾಯ ಮಾಡಬಲ್ಲದು?
12 ದೇವರ ವಾಗ್ದಾನಗಳು ನಿಜವಾಗುವುದನ್ನು ಕಾಯುತ್ತಿರುವ ಈ ಸಮಯದಲ್ಲಿ ನಮ್ಮ ಜೀವನರೀತಿ ಹೇಗಿದೆ? ನಾವು ಆಧ್ಯಾತ್ಮಿಕವಾಗಿ ಎಚ್ಚರವಾಗಿದ್ದೇವೆಂದು ತೋರಿಸುತ್ತಿದ್ದೇವಾ? ಉದಾಹರಣೆಗೆ, ಮಹಾ ಬಾಬೆಲ್ ಬೇಗನೇ ನಾಶವಾಗುವುದೆಂದು ನಿಜವಾಗಿ ನಾವು ನಂಬುತ್ತೇವೋ? ಭೂಪರದೈಸಿನಲ್ಲಿ ನಿತ್ಯಜೀವದಂತಹ ಭಾವೀ ಆಶೀರ್ವಾದಗಳ ಕುರಿತು ನಾವು ಮೊದಲ ಬಾರಿ ಕಲಿತಾಗ ಅವು ಎಷ್ಟು ನೈಜವಾಗಿದ್ದವೋ ಈಗಲೂ ಅಷ್ಟೇ ನೈಜವಾಗಿವೆಯಾ? ಸೇವೆಯಲ್ಲಿರುವ ಹುರುಪನ್ನು ನಾವು ಕಾಪಾಡಿಕೊಂಡಿದ್ದೇವೊ? ಅಥವಾ ಜೀವನದ ಸ್ವಂತ ವಿಚಾರಗಳಿಗೆ ಆದ್ಯತೆ ಕೊಡುತ್ತಿದ್ದೇವೋ? ಪುನರುತ್ಥಾನದ ನಿರೀಕ್ಷೆ, ಯೆಹೋವನ ನಾಮದ ಪವಿತ್ರೀಕರಣ, ಆತನ ಪರಮಾಧಿಕಾರದ ನಿರ್ದೋಷೀಕರಣ, ಇವುಗಳ ಬಗ್ಗೆ ನಮ್ಮ ಅಭಿಪ್ರಾಯವೇನು? ಇನ್ನೂ ಅವು ನಮಗೆ ಮಹತ್ವದ ವಿಷಯಗಳಾಗಿವೆಯಾ? ಇಂಥ ಪ್ರಶ್ನೆಗಳ ಕುರಿತಾಗಿ ಮನನ ಮಾಡುವುದು ಕೀರ್ತನೆಗಾರನು ಹೇಳಿದಂತೆ ದೇವರ ‘ಮರುಜ್ಞಾಪನಗಳನ್ನು ನಮ್ಮ ನಿತ್ಯಸ್ವಾಸ್ತ್ಯವನ್ನಾಗಿ’ ಮಾಡಿಕೊಳ್ಳಲು ಸಹಾಯಮಾಡುತ್ತದೆ.—ಕೀರ್ತ. 119:111.
13. ಒಂದನೇ ಶತಮಾನದ ಕ್ರೈಸ್ತರಿಗೆ ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಯಿತೇಕೆ? ಒಂದು ಉದಾಹರಣೆ ಕೊಡಿ.
13 ಬೈಬಲಿನಲ್ಲಿರುವ ಕೆಲವು ವಿಷಯಗಳು ನಮಗೆ ಪೂರ್ತಿಯಾಗಿ ಅರ್ಥವಾಗಲಿಕ್ಕಿಲ್ಲ. ಏಕೆಂದರೆ ಯೆಹೋವನು ಅವನ್ನು ಸ್ಪಷ್ಟಗೊಳಿಸುವ ಸಮಯ ಇನ್ನೂ ಬಂದಿರಲಿಕ್ಕಿಲ್ಲ. ಉದಾಹರಣೆಗೆ, ಯೇಸು ತನ್ನ ಅಪೊಸ್ತಲರಿಗೆ ತಾನು ಬಾಧೆಪಟ್ಟು ಸಾಯುವುದು ಅಗತ್ಯವೆಂದು ಪದೇ ಪದೇ ಹೇಳಿದನು. (ಮತ್ತಾಯ 12:40; 16:21 ಓದಿ.) ಆದರೆ ಅಪೊಸ್ತಲರಿಗೆ ಅವನು ಏನು ಹೇಳುತ್ತಿದ್ದನೆಂದು ಅರ್ಥವಾಗಲಿಲ್ಲ. ಅವನು ಮರಣಪಟ್ಟು ಪುನರುತ್ಥಾನವಾಗಿ ಮಾನವ ದೇಹ ಧರಿಸಿ ಅನೇಕ ಶಿಷ್ಯರಿಗೆ ಕಾಣಿಸಿಕೊಂಡು, “ಶಾಸ್ತ್ರಗ್ರಂಥದ ಅರ್ಥವನ್ನು ಗ್ರಹಿಸುವಂತೆ ಅವರ ಮನಸ್ಸುಗಳನ್ನು ಪೂರ್ಣವಾಗಿ” ತೆರೆದಾಗ ಅವರಿಗೆ ಇದರ ಅರ್ಥ ತಿಳಿಯಿತು. (ಲೂಕ 24:44-46; ಅ. ಕಾ. 1:3) ಅದೇ ರೀತಿ, ದೇವರ ರಾಜ್ಯ ಸ್ವರ್ಗದಲ್ಲಿ ಸ್ಥಾಪನೆಯಾಗುವುದು ಎಂದು ಕ್ರಿಸ್ತನ ಹಿಂಬಾಲಕರಿಗೆ ಅರ್ಥವಾಗಿರಲಿಲ್ಲ. ಕ್ರಿ.ಶ. 33ರ ಪಂಚಾಶತ್ತಮದಂದು ಪವಿತ್ರಾತ್ಮ ಸುರಿಸಲ್ಪಟ್ಟಾಗಲೇ ಅವರಿಗದು ಅರ್ಥವಾಯಿತು. —ಅ. ಕಾ. 1:6-8.
14. 20ನೇ ಶತಮಾನದ ಆರಂಭದಲ್ಲಿದ್ದ ಅನೇಕ ಸಹೋದರರಿಗೆ ಕಡೇ ದಿವಸಗಳ ಬಗ್ಗೆ ತಪ್ಪು ತಿಳಿವಳಿಕೆ ಇದ್ದರೂ ಯಾವ ಉತ್ತಮ ಮಾದರಿಯಿಟ್ಟರು?
14 ಇದೇ ರೀತಿ 20ನೇ ಶತಮಾನದ ಆರಂಭದಲ್ಲಿ “ಕಡೇ ದಿವಸಗಳ” ಬಗ್ಗೆ ಸತ್ಯಕ್ರೈಸ್ತರ ಮಧ್ಯೆ ಅನೇಕ ತಪ್ಪಾದ ನಿರೀಕ್ಷೆಗಳಿದ್ದವು. (2 ತಿಮೊ. 3:1) ಉದಾಹರಣೆಗೆ, 1914ನೆಯ ವರ್ಷದಲ್ಲಿ ತಾವು ಬೇಗನೆ ಸ್ವರ್ಗಕ್ಕೆ ಹೋಗಲಿದ್ದೇವೆಂದು ಕೆಲವರು ನೆನಸಿದರು. ಆದರೆ ಅವರ ನಿರೀಕ್ಷೆ ನಿಜವಾಗದಿದ್ದಾಗ ಶಾಸ್ತ್ರಗ್ರಂಥವನ್ನು ಶೃದ್ಧಾಪೂರ್ವಕವಾಗಿ ಮರುಪರೀಕ್ಷೆ ಮಾಡಿದರು. ಅದರಿಂದ, ಸಾರುವ ಮಹಾ ಕಾರ್ಯಾಚರಣೆ ಮುಂದಿದೆ ಎಂದು ಅವರಿಗೆ ತಿಳಿದುಬಂತು. (ಮಾರ್ಕ 13:10) ಆದಕಾರಣ 1922ರಲ್ಲಿ ಅಮೆರಿಕದ ಒಹಾಯೋದ ಸೀಡರ್ ಪಾಯಿಂಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ, ಆಗ ಸಾರುವ ಕೆಲಸದ ನಾಯಕತ್ವ ವಹಿಸಿದ್ದ ಜೆ.ಎಫ್. ರದರ್‌ಫರ್ಡ್ ನೆರೆದು ಬಂದವರಿಗೆ ಹೀಗಂದರು: “ನೋಡಿ, ರಾಜನು ಆಳುತ್ತಾನೆ! ಅವನ ಬಗ್ಗೆ ಪ್ರಚುರಪಡಿಸುವ ಪ್ರತಿನಿಧಿಗಳು ನೀವು. ಆದಕಾರಣ ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ.” ಅಂದಿನಿಂದ ಹಿಡಿದು ‘ರಾಜ್ಯದ ಸುವಾರ್ತೆಯನ್ನು’ ಪ್ರಚುರಪಡಿಸುವುದು ಯೆಹೋವನ ಆಧುನಿಕ ಸೇವಕರ ಮುಖ್ಯ ಗುರುತಾಗಿದೆ.—ಮತ್ತಾ. 4:23; 24:14.
15. ದೇವರು ತನ್ನ ಜನರೊಂದಿಗೆ ವ್ಯವಹರಿಸಿದ ವಿಧದ ಕುರಿತು ಧ್ಯಾನಿಸುವುದರಿಂದ ನಾವು ಹೇಗೆ ಪ್ರಯೋಜನ ಹೊಂದುತ್ತೇವೆ?
15 ಯೆಹೋವನು ಈ ಹಿಂದೆ ಮತ್ತು ಈಗ ತನ್ನ ಜನರೊಂದಿಗೆ ವ್ಯವಹರಿಸಿದ ಆಶ್ಚರ್ಯಕರ ವಿಧದ ಕುರಿತು ಧ್ಯಾನಿಸುವುದರಿಂದ ತುಂಬ ಪ್ರಯೋಜನವಿದೆ. ಭವಿಷ್ಯತ್ತಿನಲ್ಲಿ ತನ್ನ ಚಿತ್ತವನ್ನು ಮತ್ತು ಉದ್ದೇಶವನ್ನು ನೆರವೇರಿಸಲು ಆತನಿಗೆ ಸಾಮರ್ಥ್ಯವಿದೆ ಎಂದು ನಾವು ಪೂರ್ಣ ಭರವಸೆ ಇಡುತ್ತೇವೆ. ಅದೇ ಸಮಯದಲ್ಲಿ ಆತನು ಕೊಡುವ ಮರುಜ್ಞಾಪನಗಳು, ಮುಂದೆ ನೆರವೇರಲಿರುವ ಪ್ರವಾದನೆಗಳನ್ನು ನಮ್ಮ ಮನಸ್ಸಿನಲ್ಲಿ ಹಚ್ಚಹಸುರಾಗಿಡಲು ಮತ್ತು ಆತನ ವಾಗ್ದಾನಗಳಲ್ಲಿ ಭರವಸೆಯನ್ನು ಬೆಳೆಸಲು ಸಹಾಯಮಾಡುತ್ತವೆ.
ಆರಾಧನಾ ಕ್ರಿಯೆಗಳ ಮೂಲಕ ಭರವಸೆ ಬೆಳೆಸಿರಿ
16. ಶುಶ್ರೂಷೆಯಲ್ಲಿ ಕ್ರಿಯಾಶೀಲರಾಗಿರುವುದರಿಂದ ಯಾವ ಆಶೀರ್ವಾದಗಳು ದೊರೆಯುತ್ತವೆ?
16 ನಮ್ಮ ದೇವರಾದ ಯೆಹೋವನು ಶಕ್ತಿವಂತ, ಕ್ರಿಯಾಶೀಲ ದೇವರು. ಹಾಗಾಗಿ ಕೀರ್ತನೆಗಾರನು ಹೀಗೆ ಹೇಳಿದನು: “ದೇವರೇ, ನಿನಗೆ ಸಮಾನರು ಯಾರು?” ಹೌದು, “ನಿನ್ನ ಹಸ್ತವು ಶಕ್ತಿಯುಳ್ಳದ್ದು; ನಿನ್ನ ಬಲಗೈ ಮಹತ್ತುಗಳನ್ನು ನಡಿಸುತ್ತದೆ.” (ಕೀರ್ತ. 89:8, 13) ಇದಕ್ಕೆ ಹೊಂದಿಕೆಯಲ್ಲಿ, ನಾವು ಸೇವೆಯಲ್ಲಿ ಮಾಡುವ ಪ್ರಯತ್ನಗಳೆಲ್ಲವನ್ನು ಯೆಹೋವನು ಮಾನ್ಯಮಾಡಿ ಆಶೀರ್ವದಿಸುತ್ತಾನೆ. ತನ್ನ ಸೇವಕರು, ಸ್ತ್ರೀಯರಾಗಲಿ ಪುರುಷರಾಗಲಿ, ಚಿಕ್ಕವರಾಗಲಿ ದೊಡ್ಡವರಾಗಲಿ, “ಸೋಮಾರಿತನದ ಅನ್ನ”ವನ್ನು ತಿನ್ನದೆ ಶ್ರಮವಹಿಸಿ ಕೆಲಸಮಾಡಬೇಕೆಂದು ಬಯಸುತ್ತಾನೆ. (ಜ್ಞಾನೋ. 31:27) ನಾವು ನಮ್ಮ ಸೃಷ್ಟಿಕರ್ತನನ್ನು ಅನುಕರಿಸುತ್ತಾ ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿರುತ್ತೇವೆ. ಪೂರ್ಣ ಹೃದಯದಿಂದ ದೇವರ ಸೇವೆಮಾಡುವುದು ನಮಗೆ ವೈಯಕ್ತಿಕ ಪ್ರತಿಫಲವನ್ನು ತರುತ್ತದೆ. ಆಗ ನಮ್ಮ ಶುಶ್ರೂಷೆಯನ್ನು ಆಶೀರ್ವದಿಸಲು ಯೆಹೋವನು ತುಂಬ ಸಂತೋಷಪಡುತ್ತಾನೆ.—ಕೀರ್ತನೆ 62:12 ಓದಿ.
17, 18. ನಂಬಿಕೆಯ ಕ್ರಿಯೆಗಳು ಯೆಹೋವನ ಸಲಹೆಗಳಲ್ಲಿ ಭರವಸೆಯನ್ನು ಬೆಳೆಸಲು ನೆರವಾಗುತ್ತವೆಂದು ನಾವು ಹೇಗೆ ಹೇಳಬಲ್ಲೆವು? ಒಂದು ಉದಾಹರಣೆ ಕೊಡಿ.
ಯೆಹೋ. 3:12-17) ರಭಸದಿಂದ ಹರಿಯುವ ನೀರು ನಿಂತದ್ದನ್ನು ನೋಡಿ ಇಸ್ರಾಯೇಲ್ಯರು ಎಷ್ಟು ರೋಮಾಂಚನಗೊಂಡಿರಬೇಕು ಎಂದು ಊಹಿಸಿ! ಹೌದು, ಇಸ್ರಾಯೇಲ್ಯರು ಯೆಹೋವನ ನಿರ್ದೇಶನದಂತೆಯೇ ನಡೆದದ್ದರಿಂದ ಆತನಲ್ಲಿ ಅವರ ನಂಬಿಕೆ ಬಲಗೊಂಡಿತು.
17 ಯೆಹೋವನಲ್ಲಿ ಭರವಸೆಯನ್ನು ಬೆಳೆಸಲು ನಮಗೆ ನಂಬಿಕೆಯ ಕ್ರಿಯೆಗಳು ಯಾವ ರೀತಿಯಲ್ಲಿ ಸಹಾಯಮಾಡುತ್ತವೆ? ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದ ವೃತ್ತಾಂತವನ್ನು ಪರಿಗಣಿಸಿ. ಒಡಂಬಡಿಕೆಯ ಮಂಜೂಷವನ್ನು ಹೊತ್ತಿದ್ದ ಯಾಜಕರು ನೇರವಾಗಿ ಯೊರ್ದನ್ ನದಿಗಿಳಿಯಬೇಕೆಂದು ಯೆಹೋವನು ಆಜ್ಞಾಪಿಸಿದ್ದನು. ಆದರೂ ಜನರು ನದಿಯ ಹತ್ತಿರ ಹೋದಾಗ ವಸಂತ ಋತುವಿನ ಮಳೆಯಿಂದಾಗಿ ನದಿಯ ನೀರು ನೆರೆಯ ಮಟ್ಟಕ್ಕೆ ಏರಿತ್ತು. ಇಸ್ರಾಯೇಲ್ಯರು ಏನು ಮಾಡಿದರು? ನದೀತೀರದಲ್ಲಿ ಡೇರೆಗಳನ್ನು ಹಾಕಿ ನೆರೆಯ ನೀರು ಇಳಿಯುವ ತನಕ ವಾರಗಟ್ಟಲೆ ಅಥವಾ ಅದಕ್ಕೂ ಹೆಚ್ಚು ಕಾಲ ಕಾದರೋ? ಇಲ್ಲ. ಅವರು ಯೆಹೋವನಲ್ಲಿ ಪೂರ್ಣ ಭರವಸೆಯಿಟ್ಟು ಆತನು ಹೇಳಿದ್ದಂತೆಯೇ ಮಾಡಿದರು. ಫಲಿತಾಂಶ? ವೃತ್ತಾಂತ ಹೀಗೆ ಹೇಳುತ್ತದೆ: “ಯಾಜಕರು ಯೊರ್ದನಿಗೆ ಬಂದು ನೀರಿನಲ್ಲಿ ತಮ್ಮ ಕಾಲುಗಳನ್ನು ಅದ್ದುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುವ ಯೊರ್ದನ್ ಹೊಳೆಯ ನೀರು ನಿಂತುಹೋಯಿತು. . . . ಯಾಜಕರು ಯೊರ್ದನಿನ ಮಧ್ಯದಲ್ಲಿ ಒಣನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದುಹೋದರು.” (18 ಯೆಹೋವನು ಇಂದು ತನ್ನ ಜನರ ಪರವಾಗಿ ಅಂಥ ಅದ್ಭುತಗಳನ್ನು ಮಾಡುವುದಿಲ್ಲ ಎನ್ನುವುದೇನೋ ನಿಜ. ಆದರೆ ಆತನು ಅವರ ನಂಬಿಕೆಯ ಕ್ರಿಯೆಗಳನ್ನು ಆಶೀರ್ವದಿಸುತ್ತಾನೆ. ರಾಜ್ಯ ಸಂದೇಶವನ್ನು ಲೋಕವ್ಯಾಪಕವಾಗಿ ಸಾರುವ ಕೆಲಸವನ್ನು ಮುಂದುವರಿಸಲು ದೇವರ ಕ್ರಿಯಾಶೀಲ ಶಕ್ತಿ ಅವರನ್ನು ಬಲಪಡಿಸುತ್ತದೆ. ಯೆಹೋವನ ಅಗ್ರಗಣ್ಯ ಸಾಕ್ಷಿಯಾದ ಪುನರುತ್ಥಿತ ಕ್ರಿಸ್ತ ಯೇಸು ಸಹ ಈ ಪ್ರಮುಖ ಕೆಲಸದಲ್ಲಿ ಶಿಷ್ಯರಿಗೆ ಬೆಂಬಲವಾಗಿದ್ದಾನೆ. ಆತನು ಹೀಗೆ ಆಶ್ವಾಸನೆ ಕೊಟ್ಟಿದ್ದಾನೆ: “ಆದುದರಿಂದ ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:19, 20) ನಾಚಿಕೆ ಸ್ವಭಾವವಿದ್ದ ಅಥವಾ ಧೈರ್ಯದ ಕೊರತೆಯಿದ್ದ ಅನೇಕ ಸಾಕ್ಷಿಗಳು ತಮಗೆ ಕ್ಷೇತ್ರ ಸೇವೆಯಲ್ಲಿ ಅಪರಿಚಿತರೊಂದಿಗೆ ಮಾತಾಡಲು ದೇವರ ಪವಿತ್ರಾತ್ಮವು ಧೈರ್ಯ ಕೊಟ್ಟಿದೆ ಎನ್ನುತ್ತಾರೆ.—ಕೀರ್ತನೆ 119:46; 2 ಕೊರಿಂಥ 4:7 ಓದಿ.
19. ನಮಗೆ ಇತಿಮಿತಿಗಳಿದ್ದರೂ ಯಾವ ಆಶ್ವಾಸನೆಯಿದೆ?
19 ಕೆಲವು ಸಹೋದರ ಸಹೋದರಿಯರಿಗೆ ಅಸ್ವಸ್ಥತೆ ಅಥವಾ ವೃದ್ಧಾಪ್ಯದ ಕಾರಣ ಅನೇಕ ಶಾರೀರಿಕ ಇತಿಮಿತಿಗಳಿವೆ. ಹಾಗಿದ್ದರೂ “ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ” ಆಗಿರುವ ಯೆಹೋವನು ತಮ್ಮ ಪರಿಸ್ಥಿತಿಯನ್ನು ಅರಿತಿದ್ದಾನೆ ಎಂದು ಅವರು ಭರವಸೆ ಇಡಬಲ್ಲರು. (2 ಕೊರಿಂ. 1:3) ನಾವು ಆತನ ಸೇವೆಯಲ್ಲಿ ಮಾಡುವ ಎಲ್ಲವನ್ನೂ ಆತನು ಗಣ್ಯಮಾಡುತ್ತಾನೆ. ನಮ್ಮ ಪರಿಸ್ಥಿತಿ ಅನುಮತಿಸುವ ಎಲ್ಲವನ್ನೂ ಮಾಡುತ್ತಿರುವಾಗ ಈ ವಿಷಯವನ್ನು ಮನಸ್ಸಿನಲ್ಲಿಡೋಣ, ಏನೆಂದರೆ, ನಮ್ಮ ರಕ್ಷಣೆ ಪ್ರಧಾನವಾಗಿ ಕ್ರಿಸ್ತನ ವಿಮೋಚನಾ ಮೌಲ್ಯದ ಏರ್ಪಾಡಿನಲ್ಲಿ ನಮಗಿರುವ ನಂಬಿಕೆ ಮೇಲೆ ಆಧರಿಸಿದೆ.—ಇಬ್ರಿ. 10:39.
20, 21. ಯೆಹೋವನಲ್ಲಿ ಭರವಸೆ ಇದೆಯೆಂದು ತೋರಿಸುವ ಕೆಲವು ವಿಧಗಳು ಯಾವುವು?
20 ನಮ್ಮ ಸಮಯ, ಶಕ್ತಿ ಮತ್ತು ಸಂಪತ್ತನ್ನು ನಮ್ಮಿಂದ ಸಾಧ್ಯವಾದಷ್ಟು ವಿನಿಯೋಗಿಸುವುದು ನಮ್ಮ ಆರಾಧನೆಯ ಭಾಗವಾಗಿದೆ. “ಸೌವಾರ್ತಿಕನ ಕೆಲಸವನ್ನು” ಹೃತ್ಪೂರ್ವಕವಾಗಿ ಮಾಡಲು ನಾವು ಬಯಸುತ್ತೇವೆ. (2 ತಿಮೊ. 4:5) ಹಾಗೆ ಮಾಡುವುದು ನಮಗೆ ಸಂತೋಷ ತರುತ್ತದೆ. ಏಕೆಂದರೆ ಇತರರು “ಸತ್ಯದ ನಿಷ್ಕೃಷ್ಟ ಜ್ಞಾನವನ್ನು” ಪಡೆಯಲು ಇದು ಸಹಾಯಮಾಡುತ್ತದೆ. (1 ತಿಮೊ. 2:4) ಯೆಹೋವ ದೇವರನ್ನು ಗೌರವಿಸಿ ಸ್ತುತಿಸುವುದು ನಮ್ಮನ್ನು ಆಧ್ಯಾತ್ಮಿಕವಾಗಿ ಐಶ್ವರ್ಯವಂತರನ್ನಾಗಿಸುತ್ತದೆ. (ಜ್ಞಾನೋ. 10:22) ನಮ್ಮ ಸೃಷ್ಟಿಕರ್ತನೊಂದಿಗೆ ಮುರಿಯಲಾಗದ ಭರವಸೆಯ ಬಂಧವನ್ನು ಕಟ್ಟಲು ಸಹಾಯಮಾಡುತ್ತದೆ.—ರೋಮ. 8:35-39.
21 ನಾವು ಚರ್ಚಿಸಿದಂತೆ, ಯೆಹೋವನಲ್ಲಿ ಭರವಸೆಯಿಟ್ಟು ವಿವೇಕಯುತ ಮಾರ್ಗದರ್ಶನಕ್ಕಾಗಿ ಆತನ ಕಡೆ ನೋಡುವ ಗುಣ ತನ್ನಿಂತಾನೆ ಬರುವುದಿಲ್ಲ. ಅಂಥ ಭರವಸೆ ನಮ್ಮಲ್ಲಿ ಬೆಳೆಯಬೇಕಾದರೆ ಪ್ರಯಾಸಪಡಬೇಕು. ಆದಕಾರಣ, ಪ್ರಾರ್ಥನೆಯ ಮೂಲಕ ಯೆಹೋವನನ್ನು ಅವಲಂಬಿಸಿ. ಯೆಹೋವನು ತನ್ನ ಚಿತ್ತವನ್ನು ಈ ಹಿಂದೆ ಹೇಗೆ ಪೂರೈಸಿದ್ದಾನೆ ಮತ್ತು ಮುಂದಕ್ಕೆ ಹೇಗೆ ಪೂರೈಸಲಿದ್ದಾನೆ ಎಂಬುದನ್ನು ಮನನಮಾಡಿರಿ. ಆರಾಧನಾ ಕ್ರಿಯೆಗಳ ಮೂಲಕ ಯೆಹೋವನಲ್ಲಿ ಭರವಸೆಯನ್ನು ಕಟ್ಟುತ್ತಾ ಮುಂದುವರಿಯಿರಿ. ಯೆಹೋವನ ಮರುಜ್ಞಾಪನಗಳು ಅನಂತಕಾಲ ಬಾಳುವವು. ನೀವೂ ಬಾಳಬಲ್ಲಿರಿ!
[ಅಧ್ಯಯನ ಪ್ರಶ್ನೆಗಳು]
[ಪುಟ 12ರಲ್ಲಿರುವ ಚಿತ್ರ]
[ಪುಟ 15ರಲ್ಲಿರುವ ಚಿತ್ರ]
ಯೆಹೋಶುವನ ಕಾಲದಲ್ಲಿದ್ದ ದೇವಜನರು ಯೆಹೋವನಲ್ಲಿ ಸಂಪೂರ್ಣ ಭರವಸೆಯಿಟ್ಟರು. ನೀವೂ ಇಡುತ್ತೀರಾ? (ಪ್ಯಾರ 17, 18)