ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿರ್ಣಯಗಳನ್ನು ವಿವೇಕದಿಂದ ಮಾಡಿ

ನಿರ್ಣಯಗಳನ್ನು ವಿವೇಕದಿಂದ ಮಾಡಿ

ನಿರ್ಣಯಗಳನ್ನು ವಿವೇಕದಿಂದ ಮಾಡಿ

“ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು.”—ಜ್ಞಾನೋ. 3:5.

ನಿಮ್ಮ ಉತ್ತರವೇನು?

ನಿರ್ಣಯಗಳನ್ನು ಮಾಡುವಾಗ ಸ್ವಸ್ಥಬುದ್ಧಿಯನ್ನು ಬಳಸುವುದು ಎಂದರೇನು?

ವಿವೇಕಯುತ ನಿರ್ಣಯಗಳನ್ನು ಮಾಡುವ ಸಾಮರ್ಥ್ಯವನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?

ನಾವು ಮಾಡಿದ ನಿರ್ಣಯಗಳನ್ನು ಕಾರ್ಯರೂಪಕ್ಕೆ ಹಾಕಲು ಯಾವುದು ಸಹಾಯಮಾಡಬಲ್ಲದು?

1, 2. (1) ನಿರ್ಣಯಗಳನ್ನು ಮಾಡಲು ನೀವು ಇಷ್ಟಪಡುತ್ತೀರಾ? (2) ನೀವು ಮಾಡಿರುವ ಕೆಲವು ನಿರ್ಣಯಗಳ ಬಗ್ಗೆ ನಿಮಗೆ ಹೇಗನಿಸುತ್ತದೆ?

ನಿರ್ಣಯ! ಪ್ರತಿದಿನ ನಾವು ಅನೇಕ ನಿರ್ಣಯಗಳನ್ನು ಮಾಡಬೇಕಾಗುತ್ತದೆ. ನಿಮಗೆದುರಾಗುವ ನಿರ್ಣಯಗಳ ಬಗ್ಗೆ ನಿಮಗೆ ಹೇಗನಿಸುತ್ತದೆ? ಕೆಲವರಿಗೆ ಬೇರೆಯವರು ತಮಗಾಗಿ ನಿರ್ಣಯಗಳನ್ನು ಮಾಡುವುದು ಹಿಡಿಸುವುದಿಲ್ಲ, ನಿರ್ಣಯಗಳನ್ನು ಅವರೇ ಮಾಡಬೇಕೆಂದು ಬಯಸುತ್ತಾರೆ. ಸ್ವಂತ ನಿರ್ಣಯ ಮಾಡುವುದು ತಮ್ಮ ಹಕ್ಕು ಎಂದು ಅವರು ಪಟ್ಟುಹಿಡಿಯುತ್ತಾರೆ. ಇನ್ನು ಕೆಲವರು ದಿನಾಲೂ ಮಾಡುವ ವಿಷಯಗಳನ್ನು ಬಿಟ್ಟು, ಬೇರೆ ವಿಷಯಗಳ ಬಗ್ಗೆ ನಿರ್ಣಯಿಸಲು ಭಯಪಡುತ್ತಾರೆ. ಹಾಗಾಗಿ ಕೆಲವರು ಪುಸ್ತಕಗಳ ಅಥವಾ ಸಲಹೆಗಾರರ ಮೊರೆಹೋಗುತ್ತಾರೆ. ಹೀಗೆ ತಮಗೆ ಬೇಕೆನಿಸುವ ಬುದ್ಧಿವಾದ ಪಡೆಯಲಿಕ್ಕಾಗಿ ಎಷ್ಟೋ ಹಣ ಸುರಿಯುತ್ತಾರೆ.

2 ಆದರೆ ನಮ್ಮಲ್ಲಿ ಅನೇಕರು ಇದಕ್ಕಿಂತ ಭಿನ್ನರಾಗಿದ್ದೇವೆ. ಕೆಲವು ಸಂಗತಿಗಳ ಕುರಿತು ನಿರ್ಧರಿಸುವುದು ನಮ್ಮ ಕೈಯಲ್ಲಿ ಇಲ್ಲವೆಂದು ಒಪ್ಪಿಕೊಳ್ಳುತ್ತೇವೆ. ಆದರೂ ಜೀವನದ ಅನೇಕ ವಿಷಯಗಳನ್ನು ನಾವು ಸ್ವಂತ ಇಷ್ಟಕ್ಕನುಸಾರ ನಿರ್ಣಯಿಸಬಹುದು ಎಂದು ನಮಗೆ ಗೊತ್ತಿದೆ. (ಗಲಾ. 6:5) ಹಾಗಿದ್ದರೂ ನಾವು ಮಾಡುವ ಎಲ್ಲ ನಿರ್ಣಯಗಳು ಸರಿ ಇರುವುದಿಲ್ಲವೆಂದು ಅಥವಾ ಒಳ್ಳೆ ಫಲಿತಾಂಶ ತರುವುದಿಲ್ಲವೆಂದು ಒಪ್ಪುತ್ತೇವೆ.

3. (1) ನಿರ್ಣಯಗಳನ್ನು ಮಾಡಲು ನಮಗೆ ಯಾವ ಸಹಾಯವಿದೆ? (2) ಆದರೆ ಯಾವ ಸವಾಲಿದೆ?

3 ಯೆಹೋವನು ತನ್ನ ಸೇವಕರಾದ ನಮಗೆ ನಮ್ಮ ಜೀವನದ ಅನೇಕ ಪ್ರಮುಖ ವಿಷಯಗಳ ಬಗ್ಗೆ ಸ್ಪಷ್ಟ ನಿರ್ದೇಶನಗಳನ್ನು ಕೊಟ್ಟಿದ್ದಾನೆ. ಅದಕ್ಕಾಗಿ ನಾವು ಸಂತೋಷಪಡುತ್ತೇವೆ. ಆ ನಿರ್ದೇಶನಗಳನ್ನು ಅನುಸರಿಸುವಲ್ಲಿ ಯೆಹೋವನನ್ನು ಮೆಚ್ಚಿಸುವ ಮತ್ತು ನಮಗೆ ಪ್ರಯೋಜನವಾಗುವಂಥ ನಿರ್ಣಯಗಳನ್ನು ನಾವು ಮಾಡಬಲ್ಲೆವು. ಹೀಗಿದ್ದರೂ, ದೇವರ ವಾಕ್ಯದಲ್ಲಿ ನಿರ್ದಿಷ್ಟವಾಗಿ ಕೊಡಲ್ಪಟ್ಟಿರದ ಕೆಲವು ವಿಷಯಗಳು ಮತ್ತು ಪರಿಸ್ಥಿತಿಗಳು ನಮಗೆ ಎದುರಾಗಬಹುದು. ಅಂಥ ಸಂದರ್ಭದಲ್ಲಿ ಹೇಗೆ ನಿರ್ಣಯಿಸುವುದು? ಉದಾಹರಣೆಗೆ, ಕದಿಯಬಾರದೆಂದು ನಮಗೆ ಗೊತ್ತು. (ಎಫೆ. 4:28) ಆದರೆ ‘ಕಳ್ಳತನ’ ಎಂದು ಯಾವುದನ್ನು ಹೇಳಬಹುದು? ಕದ್ದ ವಸ್ತುವಿನ ಬೆಲೆ, ಅದನ್ನು ತಕ್ಕೊಂಡದ್ದರ ಉದ್ದೇಶ ಅಥವಾ ಇನ್ಯಾವುದೋ ವಿಷಯದ ಮೇಲೆ ಹೊಂದಿಕೊಂಡು ಇದನ್ನು ನಿರ್ಣಯಿಸಲಾಗುತ್ತದಾ? ಏನು ಮಾಡಬೇಕೆಂದು ಸ್ಪಷ್ಟವಾಗಿಲ್ಲದ ವಿಷಯಗಳ ಕುರಿತು ನಿರ್ಣಯಿಸುವುದು ಹೇಗೆ? ಇಂಥ ಸಂದರ್ಭಗಳಲ್ಲಿ ಯಾವುದು ನಮ್ಮನ್ನು ಮಾರ್ಗದರ್ಶಿಸುತ್ತದೆ?

ಸ್ವಸ್ಥಬುದ್ಧಿಯುಳ್ಳವರಾಗಿರುವುದು

4. ನಿರ್ಣಯವನ್ನು ಮಾಡಲಿದ್ದಾಗ ನಮಗೆ ಯಾವ ಸಲಹೆ ಸಿಕ್ಕಿರಬಹುದು?

4 ನಾವು ಒಂದು ಪ್ರಮುಖ ನಿರ್ಣಯವನ್ನು ಮಾಡಲಿದ್ದೇವೆ ಎಂದು ಜೊತೆಕ್ರೈಸ್ತರೊಬ್ಬರಿಗೆ ಹೇಳುವಲ್ಲಿ ಅದನ್ನು ಚೆನ್ನಾಗಿ ಯೋಚಿಸಿ ಅಥವಾ ಸ್ವಸ್ಥಬುದ್ಧಿಯಿಂದ ಮಾಡುವಂತೆ ಅವರು ನಮಗೆ ಸಲಹೆ ಕೊಡಬಹುದು. ಅದು ಒಳ್ಳೆಯ ಬುದ್ಧಿವಾದವೇ. ಏಕೆಂದರೆ, ದುಡುಕಿ ಮಾಡುವ ಕೆಲಸದ ಬಗ್ಗೆ ಬೈಬಲ್‌ ಸಹ ನಮಗೆ ಎಚ್ಚರಿಕೆ ಕೊಡುವುದು: “ಆತುರಪಡುವವರಿಗೆಲ್ಲಾ ಕೊರತೆಯೇ.” (ಜ್ಞಾನೋ. 21:5) ಸ್ವಸ್ಥಬುದ್ಧಿಯನ್ನು ಬಳಸುವುದರ ಅರ್ಥವೇನು? ಕೇವಲ ಸಮಯ ತಕ್ಕೊಂಡು, ವಿಷಯವನ್ನು ಜಾಗ್ರತೆಯಿಂದ ಪರಿಶೀಲಿಸಿ, ವಿವೇಚಿಸಿ, ಉತ್ತಮ ತೀರ್ಮಾನಶಕ್ತಿ ಉಪಯೋಗಿಸಬೇಕು ಅಷ್ಟೇನಾ? ಇವೆಲ್ಲವೂ ಉತ್ತಮ ನಿರ್ಣಯ ಮಾಡಲು ಸಹಾಯಕರವೆಂಬುದೇನೋ ನಿಜ. ಆದರೆ ಸ್ವಸ್ಥಬುದ್ಧಿಯನ್ನು ಬಳಸುವುದರಲ್ಲಿ ಇನ್ನೂ ಹೆಚ್ಚಿನದ್ದು ಸೇರಿದೆ.—ರೋಮ. 12:3; 1 ಪೇತ್ರ 4:7.

5. ನಮಗೆ ಹುಟ್ಟಿನಿಂದಲೇ ಪರಿಪೂರ್ಣ ಸ್ವಸ್ಥಬುದ್ಧಿ ಇಲ್ಲವೇಕೆ?

5 ನಮ್ಮಲ್ಲಿ ಯಾರೂ ಪರಿಪೂರ್ಣ ಸ್ವಸ್ಥಬುದ್ಧಿಯಿಂದ ಹುಟ್ಟಿಲ್ಲ. ಏಕೆ? ಏಕೆಂದರೆ ಹುಟ್ಟಿನಿಂದಲೇ ನಮ್ಮಲ್ಲಿ ಪಾಪ, ಅಪರಿಪೂರ್ಣತೆ ಇರುವುದರಿಂದ ನಮ್ಮ ದೇಹ ಅಥವಾ ಮನಸ್ಸು ಪರಿಪೂರ್ಣತೆಗೆ ತುಂಬ ದೂರದಲ್ಲಿದೆ. (ಕೀರ್ತ. 51:5; ರೋಮ. 3:23) ಇದಲ್ಲದೆ, ಒಂದು ಕಾಲದಲ್ಲಿ ನಮ್ಮಲ್ಲಿ ಅನೇಕರು ಸೈತಾನನಿಂದ “ಕುರುಡು” ಮಾಡಲ್ಪಟ್ಟವರ ಮಧ್ಯೆ ಇದ್ದೆವು. ಯೆಹೋವನ ಮತ್ತು ಆತನ ನೀತಿಯ ಮಟ್ಟಗಳ ಬಗ್ಗೆ ನಮಗೆ ಏನೂ ಗೊತ್ತಿರಲಿಲ್ಲ. (2 ಕೊರಿಂ. 4:4; ತೀತ 3:3) ಹಾಗಾಗಿ, ನಾವೆಷ್ಟೇ ಯೋಚಿಸಿ ನಿರ್ಣಯ ಮಾಡಿರಲಿ, ನಮಗೆ ಯಾವುದು ಸರಿ ಮತ್ತು ಉತ್ತಮವೆಂದು ಅನಿಸುತ್ತದೋ ಅದಕ್ಕೆ ಅನುಗುಣವಾಗಿ ನಿರ್ಣಯಗಳನ್ನು ಮಾಡುವಲ್ಲಿ ನಮ್ಮನ್ನೇ ಮೋಸಗೊಳಿಸಿಕೊಳ್ಳುವ ಸಾಧ್ಯತೆಯಿದೆ.—ಜ್ಞಾನೋ. 14:12.

6. ಸ್ವಸ್ಥಬುದ್ಧಿಯನ್ನು ಬೆಳೆಸಿಕೊಳ್ಳಲು ನಮಗೆ ಯಾವುದು ಸಹಾಯಮಾಡಬಲ್ಲದು?

6 ನಾವು ಅಪರಿಪೂರ್ಣರಾಗಿದ್ದರೂ ನಮ್ಮ ದೇವರಾದ ಯೆಹೋವನು ಎಲ್ಲ ವಿಷಯಗಳಲ್ಲಿಯೂ ಪರಿಪೂರ್ಣನು. (ಧರ್ಮೋ. 32:4) ನಾವು ನಮ್ಮ ಮನಸ್ಸನ್ನು ಉತ್ತಮಗೊಳಿಸಿ, ಸ್ವಸ್ಥಬುದ್ಧಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುವಂತೆ ಆತನು ಮಾಡಿದ್ದಾನೆ. (2 ತಿಮೊಥೆಯ 1:7 ಓದಿ.) ಕ್ರೈಸ್ತರಾಗಿರುವ ನಾವು ಸರಿಯಾಗಿ ಯೋಚಿಸಿ, ವಿವೇಚಿಸಿ, ಅದರಂತೆ ನಡೆಯಬೇಕು. ನಾವು ನಮ್ಮ ಯೋಚನೆ ಮತ್ತು ಅನಿಸಿಕೆಗಳನ್ನು ನಿಯಂತ್ರಿಸಿಕೊಂಡು ಯೆಹೋವನ ಯೋಚನೆ, ಅನಿಸಿಕೆ ಮತ್ತು ಕಾರ್ಯಗಳನ್ನು ಅನುಕರಿಸಬೇಕು.

7, 8. ಒತ್ತಡ ಅಥವಾ ಕಷ್ಟಗಳ ಮಧ್ಯೆಯೂ ಸ್ವಸ್ಥ ನಿರ್ಣಯವನ್ನು ಹೇಗೆ ಮಾಡಬಹುದು ಎಂದು ತೋರಿಸುವ ಒಂದು ಅನುಭವವನ್ನು ಹೇಳಿರಿ.

7 ಈ ಉದಾಹರಣೆ ಪರಿಗಣಿಸಿ. ಕೆಲವು ವಲಸಿಗರಲ್ಲಿ ಒಂದು ವಾಡಿಕೆಯಿದೆ. ತಮ್ಮ ನವಜಾತ ಶಿಶುವನ್ನು ಅವರು ತಮ್ಮ ದೇಶದಲ್ಲಿರುವ ಸಂಬಂಧಿಗಳ ಹತ್ತಿರ ಬಿಡುತ್ತಾರೆ. ಹೀಗೆ, ಸಂಬಂಧಿಕರು ಆ ಮಗುವನ್ನು ನೋಡಿಕೊಳ್ಳುತ್ತಾರೆ. ವಲಸಿಗ ಹೆತ್ತವರು ಕೆಲಸ ಮಾಡುತ್ತಾ ಹಣ ಸಂಪಾದಿಸುತ್ತಾರೆ. * ಇಂಥ ಒಬ್ಬಾಕೆ ಸ್ತ್ರೀ ಒಂದು ಮುದ್ದಾದ ಗಂಡುಮಗುವನ್ನು ಹೆತ್ತಳು. ಆ ಸಮಯದಲ್ಲಿ ಆಕೆ ಬೈಬಲ್‌ ಅಧ್ಯಯನ ಆರಂಭಿಸಿ ಆಧ್ಯಾತ್ಮಿಕವಾಗಿ ಉತ್ತಮ ಪ್ರಗತಿ ಮಾಡುತ್ತಿದ್ದಳು. ಮಿತ್ರರೂ ಸಂಬಂಧಿಕರೂ ಆ ಮಗುವನ್ನು ಅಜ್ಜಅಜ್ಜಿಯ ಮನೆಗೆ ಕಳುಹಿಸುವಂತೆ ಅವಳಿಗೂ ಅವಳ ಗಂಡನಿಗೂ ಒತ್ತಾಯಿಸತೊಡಗಿದರು. ಆದರೂ ಅಧ್ಯಯನದಿಂದಾಗಿ ಆಕೆಗೆ, ಮಗುವನ್ನು ಬೆಳೆಸುವುದು ತನ್ನ ದೇವದತ್ತ ಜವಾಬ್ದಾರಿ ಎಂದು ತಿಳಿದುಬಂತು. (ಕೀರ್ತ. 127:3; ಎಫೆ. 6:4) ಈಗ ಪ್ರಶ್ನೆ ಏನೆಂದರೆ, ಅನೇಕರಿಗೆ ಯೋಗ್ಯವೆಂದೆಣಿಸಿದ ವಾಡಿಕೆಯನ್ನು ಈಕೆ ಅನುಸರಿಸಬೇಕಾ? ಇಲ್ಲವೆ, ತಾನು ಬೈಬಲಿಂದ ಕಲಿತಿದ್ದನ್ನು ಅನುಸರಿಸಿ ಬರಸಾಧ್ಯವಿರುವ ಆರ್ಥಿಕ ಸಮಸ್ಯೆ ಹಾಗೂ ಕೆಲವರ ತುಚ್ಛೀಕಾರವನ್ನು ಸಹಿಸಿಕೊಳ್ಳಬೇಕಾ? ನೀವು ಆಕೆಯ ಸ್ಥಾನದಲ್ಲಿ ಇರುತ್ತಿದ್ದಲ್ಲಿ ಏನು ಮಾಡುತ್ತಿದ್ದಿರಿ?

8 ಒತ್ತಡ ಮತ್ತು ಒತ್ತಾಯಕ್ಕೊಳಗಾಗಿದ್ದ ಈ ಯುವ ಸ್ತ್ರೀ ತನ್ನ ಹೃದಯದಲ್ಲಿರುವುದನ್ನು ಯೆಹೋವನಿಗೆ ತೋಡಿಕೊಂಡು ಮಾರ್ಗದರ್ಶನೆಗಾಗಿ ಯಾಚಿಸಿದಳು. ತನ್ನ ಬೈಬಲ್‌ ಶಿಕ್ಷಕಿ ಹಾಗೂ ಸಭೆಯಲ್ಲಿರುವ ಇತರರೊಂದಿಗೆ ಮಾತಾಡಿ ಈ ವಿಷಯದಲ್ಲಿ ಯೆಹೋವನ ದೃಷ್ಟಿಕೋನವನ್ನು ಅರಿತುಕೊಂಡಳು. ಮಕ್ಕಳು ಬೆಳೆಯುತ್ತಿರುವಾಗ ಹೆತ್ತವರಿಂದ ದೂರವಿರುವಲ್ಲಿ ಅವರಿಗಾಗಬಹುದಾದ ಭಾವನಾತ್ಮಕ ಹಾನಿಯ ಕುರಿತು ಯೋಚಿಸಿದಳು. ಈ ವಿಷಯದ ಕುರಿತು ಬೈಬಲ್‌ ಏನನ್ನುತ್ತದೆಂದು ಪರಿಶೀಲಿಸಿ ಮಗುವನ್ನು ಕಳುಹಿಸಿಕೊಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಳು. ಸಭಾ ಸದಸ್ಯರೆಲ್ಲರೂ ಸಹಾಯ ಮಾಡಿದ ವಿಧವನ್ನು ಮತ್ತು ಮಗುವು ಸಂತೋಷ ಮತ್ತು ಆರೋಗ್ಯದಿಂದ ಬೆಳೆಯುತ್ತಿರುವುದನ್ನು ನೋಡಿ ಆಕೆಯ ಗಂಡನು ಬೈಬಲ್‌ ಅಧ್ಯಯನವನ್ನು ಅಂಗೀಕರಿಸಿ ಪತ್ನಿಯೊಂದಿಗೆ ಕೂಟಗಳಿಗೆ ಹಾಜರಾಗತೊಡಗಿದನು.

9, 10. (1) ಸ್ವಸ್ಥಬುದ್ಧಿಯನ್ನು ಬಳಸುವುದರ ಅರ್ಥವೇನು? (2) ಅದನ್ನು ಹೇಗೆ ಮಾಡಬಲ್ಲೆವು?

9 ಇಲ್ಲಿ ಕೇವಲ ಒಂದು ಘಟನೆಯನ್ನು ಕೊಟ್ಟಿರುವುದಾದರೂ ಇಂತಹದ್ದೇ ಬೇರೆಬೇರೆ ಸವಾಲುಗಳನ್ನು ಅನೇಕರು ಎದುರಿಸುತ್ತಾರೆ. ಸ್ವಸ್ಥಬುದ್ಧಿಯನ್ನು ಬಳಸುವುದೆಂದರೆ ನಮಗೆ ಅಥವಾ ಇತರರಿಗೆ ಯೋಗ್ಯವೆಂದು ಅಥವಾ ಸಮಯೋಚಿತವೆಂದು ಅನಿಸುವ ಪ್ರಕಾರ ನಡೆಯುವುದಲ್ಲವೆಂಬುದನ್ನು ಈ ಘಟನೆ ಚಿತ್ರಿಸುತ್ತದೆ. ನಮ್ಮ ಅಪರಿಪೂರ್ಣ ಮನಸ್ಸು ಹಾಗೂ ಹೃದಯ ಅತಿವೇಗವಾಗಿ ಅಥವಾ ತೀರ ನಿಧಾನವಾಗಿ ಚಲಿಸುವ ಗಡಿಯಾರದಂತಿದೆ. ಅದರ ಮಾರ್ಗದರ್ಶನೆಯಂತೆ ನಡೆಯುವುದು ನಮ್ಮನ್ನು ಗಂಭೀರ ತೊಂದರೆಗೆ ನಡೆಸಬಲ್ಲದು. (ಯೆರೆ. 17:9) ಆದುದರಿಂದ ನಾವು ನಮ್ಮ ಮನಸ್ಸು ಮತ್ತು ಹೃದಯವನ್ನು ದೇವರ ಭರವಸಾರ್ಹ ಮಟ್ಟಗಳಿಗನುಸಾರ ಹೊಂದಿಸಿಕೊಳ್ಳುವುದು ಅಗತ್ಯ.ಯೆಶಾಯ 55:8, 9 ಓದಿ.

10 ಆದ್ದರಿಂದಲೇ ಬೈಬಲ್‌ ನಮಗೆ ಬುದ್ಧಿಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋ. 3:5, 6) ‘ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಯೆಹೋವನ ಚಿತ್ತಕ್ಕೆ ವಿಧೇಯನಾಗಿರು’ ಎಂದು ಹೇಳಲಾಗಿದೆ. ಏಕೆಂದರೆ ಆತನೊಬ್ಬನೇ ಪರಿಪೂರ್ಣ ಸ್ವಸ್ಥಬುದ್ಧಿಯಿರುವವನು. ಹಾಗಾಗಿ ನಿರ್ಣಯ ಮಾಡುವಾಗ ದೇವರ ದೃಷ್ಟಿಕೋನವೇನೆಂದು ತಿಳಿದುಕೊಳ್ಳಲು ನಾವು ಬೈಬಲನ್ನು ಪರಿಶೀಲಿಸಬೇಕು ಮತ್ತು ಅದರ ಆಧಾರದಲ್ಲಿ ನಿರ್ಣಯವನ್ನು ಮಾಡಬೇಕು. ಹೀಗೆ ನಾವು ಯೆಹೋವನ ಮನಸ್ಸನ್ನು ಅನುಕರಿಸುತ್ತೇವೆ. ಇದೇ ಸ್ವಸ್ಥಬುದ್ಧಿಯನ್ನು ಬಳಸುವುದರ ನಿಜಾರ್ಥ.

ಗ್ರಹಣ ಶಕ್ತಿಯನ್ನು ತರಬೇತುಗೊಳಿಸಿ

11. ವಿವೇಕಯುತ ನಿರ್ಣಯಗಳನ್ನು ಮಾಡುವುದಕ್ಕಿರುವ ಕೀಲಿಕೈ ಯಾವುದು?

11 ವಿವೇಕಯುತ ನಿರ್ಣಯಗಳನ್ನು ಮಾಡುವುದು ಮತ್ತು ಅವನ್ನು ಕಾರ್ಯರೂಪಕ್ಕೆ ಹಾಕುವುದು ಅಷ್ಟು ಸುಲಭವಲ್ಲ. ಹೊಸದಾಗಿ ಸತ್ಯಕ್ಕೆ ಬಂದಿರುವವರಿಗೆ ಇಲ್ಲವೆ ಆಧ್ಯಾತ್ಮಿಕ ಪ್ರೌಢತೆಯ ಕಡೆಗೆ ಹೆಜ್ಜೆಯಿಡುತ್ತಿರುವವರಿಗೆ ಇದು ಇನ್ನೂ ದೊಡ್ಡ ಸವಾಲಾಗಿರಬಲ್ಲದು. ಬೈಬಲ್‌ ಯಾರನ್ನು ಆಧ್ಯಾತ್ಮಿಕ ಕೂಸುಗಳೆಂದು ಕರೆಯುತ್ತದೋ ಅವರಿಂದಲೂ ಪ್ರಗತಿಮಾಡಲು ಆಗುತ್ತದೆ. ಒಂದು ಮಗು ಬೀಳದೆ ನಡೆಯಲು ಹೇಗೆ ಕಲಿಯುತ್ತೆಂಬುದನ್ನು ಯೋಚಿಸಿ. ಪುಟ್ಟಪುಟ್ಟ ಹೆಜ್ಜೆಗಳನ್ನು ಇಡುವುದು ಮತ್ತು ಅದನ್ನು ಪದೇಪದೇ ಮಾಡುವುದೇ ಯಶಸ್ಸಿಗೆ ಮುಖ್ಯ ಕಾರಣ. ಆಧ್ಯಾತ್ಮಿಕವಾಗಿ ಮಗುವಿನಂತೆ ಇರುವವರು ವಿವೇಕಯುತ ನಿರ್ಣಯಗಳನ್ನು ಮಾಡುವ ವಿಷಯದಲ್ಲೂ ಇದು ಸತ್ಯ. ಅಪೊಸ್ತಲ ಪೌಲನು ಪ್ರೌಢತೆಯುಳ್ಳವರನ್ನು “ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಉಪಯೋಗದ ಮೂಲಕ ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿಕೊಂಡವ”ರು ಎಂದು ವರ್ಣಿಸುತ್ತಾನೆ. ಅಲ್ಲಿರುವ “ಉಪಯೋಗದ ಮೂಲಕ” ಮತ್ತು “ತರಬೇತು” ಎಂಬ ಎರಡೂ ಪದಗಳು ಪ್ರಯತ್ನವನ್ನು ಮುಂದುವರಿಸುವುದನ್ನು ಮತ್ತು ಪುನರಾವರ್ತಿಸುವುದನ್ನು ಸೂಚಿಸುತ್ತವೆ. ಹೊಸಬರು ಇದನ್ನೇ ಮಾಡಬೇಕು.ಇಬ್ರಿಯ 5:13, 14 ಓದಿ.

12. ವಿವೇಕಯುತ ನಿರ್ಣಯಗಳನ್ನು ಮಾಡುವ ಸಾಮರ್ಥ್ಯವನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?

12 ಮೊದಲೇ ಹೇಳಿರುವಂತೆ, ನಾವು ಪ್ರತಿದಿನ ಅನೇಕ ಚಿಕ್ಕ-ದೊಡ್ಡ ನಿರ್ಣಯಗಳನ್ನು ಮಾಡಬೇಕಾಗುತ್ತದೆ. ಒಂದು ಅಧ್ಯಯನಕ್ಕನುಸಾರ, ನಾವು ಮಾಡುವ ಕ್ರಿಯೆಗಳಲ್ಲಿ 40ಕ್ಕೂ ಹೆಚ್ಚು ಪ್ರತಿಶತ ಕ್ರಿಯೆಗಳನ್ನು ಮೊದಲೇ ಯೋಚಿಸಿ ಮಾಡಿರುವುದಿಲ್ಲ. ಬದಲಿಗೆ ನಮ್ಮಲ್ಲಿ ಆಳವಾಗಿ ಬೇರುಬಿಟ್ಟಿರುವ ರೂಢಿಯ ಕಾರಣದಿಂದಾಗಿ ಮಾಡುತ್ತೇವೆ. ಉದಾಹರಣೆಗೆ, ಪ್ರತಿದಿನ ಬೆಳಗ್ಗೆ ನಾವು ಯಾವ ಬಟ್ಟೆ ಧರಿಸಬೇಕು ಎಂಬುದನ್ನು ನಿರ್ಣಯಿಸಬೇಕು. ಇದು ಒಂದು ಚಿಕ್ಕ ವಿಷಯವೆಂದು ನಿಮಗೆ ಅನಿಸುವುದರಿಂದ ಹೆಚ್ಚು ಯೋಚಿಸದೆ ನಿರ್ಣಯಿಸುತ್ತೀರಿ. ಆದರೆ ನೀವು ಧರಿಸುವ ಉಡುಪು ಯೆಹೋವನ ಸೇವಕರಿಗೆ ಯೋಗ್ಯವಾಗಿದೆಯಾ ಎಂದು ಯೋಚಿಸುವುದು ಪ್ರಾಮುಖ್ಯ. (2 ಕೊರಿಂ. 6:3, 4) ನೀವು ಬಟ್ಟೆ ಖರೀದಿಸುವಾಗ ಫ್ಯಾಶನ್‌ ಮತ್ತು ಶೈಲಿ ಬಗ್ಗೆ ಯೋಚಿಸಬಹುದು. ಆದರೆ ಸಭ್ಯತೆ ಮತ್ತು ಬೆಲೆ ಬಗ್ಗೆ ಮರೆತುಬಿಡುತ್ತೀರಾ? ಇಂಥ ಚಿಕ್ಕ ವಿಷಯಗಳಲ್ಲಿ ನಾವು ಸರಿಯಾದ ನಿರ್ಣಯಗಳನ್ನು ಮಾಡುವ ಮೂಲಕ ನಮ್ಮ ಗ್ರಹಣ ಶಕ್ತಿಯನ್ನು ತರಬೇತುಗೊಳಿಸುತ್ತೇವೆ. ಹೀಗೆ ದೊಡ್ಡ ವಿಷಯಗಳಲ್ಲೂ ಸರಿಯಾದ ನಿರ್ಣಯಗಳನ್ನು ಮಾಡಲು ಸಹಾಯವಾಗುತ್ತದೆ.—ಲೂಕ 16:10; 1 ಕೊರಿಂ. 10:31.

ಸರಿಯಾದುದನ್ನು ಮಾಡುವ ಇಚ್ಛೆಯನ್ನು ಬೆಳೆಸಿಕೊಳ್ಳಿ

13. ನಾವು ಮಾಡಿರುವ ನಿರ್ಣಯಗಳನ್ನು ಕಾರ್ಯರೂಪಕ್ಕೆ ಹಾಕಬೇಕಾದರೆ ಏನು ಅಗತ್ಯ?

13 ನಾವು ಸರಿಯಾದ ನಿರ್ಣಯ ಮಾಡುವುದಾದರೂ ಅದರಂತೆ ನಡೆಯುವುದು ಯಾವಾಗಲೂ ಸುಲಭವಾಗಿರಲ್ಲ. ಉದಾಹರಣೆಗೆ, ಧೂಮಪಾನ ಬಿಟ್ಟುಬಿಡಬೇಕೆಂದು ಕೆಲವರು ಬಯಸುವುದಾದರೂ ಆ ಇಚ್ಛೆ ಅವರಲ್ಲಿ ತುಂಬ ಬಲವಾಗಿರದ ಕಾರಣ ಸೋತುಹೋಗುತ್ತಿರುತ್ತಾರೆ. ಹಾಗಾಗಿ ಮಾಡಿದ ನಿರ್ಣಯವನ್ನು ಅನುಸರಿಸಲು ದೃಢನಿರ್ಧಾರ ಅವಶ್ಯ. ಕೆಲವರು ಹೇಳುವ ಪ್ರಕಾರ, ನಮ್ಮ ಮನೋಬಲ ಒಂದು ಸ್ನಾಯುವಿನಂತಿದೆ. ಅದನ್ನು ಎಷ್ಟು ಹೆಚ್ಚು ಬಳಸುತ್ತೇವೊ ಅಥವಾ ವ್ಯಾಯಾಮ ಮಾಡುತ್ತೇವೊ ಅಷ್ಟೇ ಹೆಚ್ಚು ಬಲಗೊಳ್ಳುತ್ತದೆ. ಬಳಸದಿದ್ದಲ್ಲಿ ಅದು ಬಲಹೀನಗೊಳ್ಳುತ್ತದೆ ಅಥವಾ ಕೃಶವಾಗುತ್ತದೆ. ಹಾಗಾದರೆ ನಮ್ಮ ನಿರ್ಣಯಕ್ಕೆ ಅಂಟಿಕೊಂಡು ಅದರಂತೆ ನಡೆಯಲು ಬೇಕಾದ ಮನೋಬಲವನ್ನು ಹೆಚ್ಚಿಸಲು ನಮಗೆ ಯಾವುದು ಸಹಾಯಮಾಡುತ್ತದೆ? ಯೆಹೋವನ ಕಡೆಗೆ ತಿರುಗುವುದೇ.ಫಿಲಿಪ್ಪಿ 2:13 ಓದಿ.

14. ಮಾಡಬೇಕಾದದ್ದನ್ನು ಮಾಡಲು ಪೌಲನಿಗೆ ಹೇಗೆ ಸಾಧ್ಯವಾಯಿತು?

14 ಪೌಲನು ಇದನ್ನು ಸ್ವತಃ ಅನುಭವಿಸಿ ನೋಡಿದನು. ದುಃಖದಿಂದ ಅವನು ಒಮ್ಮೆ ಹೀಗೆ ಹೇಳಿದನು: “ಒಳ್ಳೇದನ್ನು ಬಯಸುವ ಸಾಮರ್ಥ್ಯವು ನನ್ನಲ್ಲಿದೆ, ಆದರೆ ಒಳ್ಳೇದನ್ನು ಮಾಡುವ ಸಾಮರ್ಥ್ಯ ನನ್ನಲ್ಲಿಲ್ಲ.” ಪೌಲನಿಗೆ ತಾನು ಏನು ಮಾಡಬೇಕೆಂದು ಗೊತ್ತಿತ್ತು, ಅದನ್ನು ಮಾಡಬೇಕೆನ್ನುವ ಆಸೆಯೂ ಇತ್ತು. ಆದರೆ ಯಾವುದೋ ಒಂದು ವಿಷಯ ಅವನನ್ನು ತಡೆಯುತ್ತಿತ್ತು. ಅವನು ಒಪ್ಪಿಕೊಂಡದ್ದು: “ನನ್ನ ಹೃದಯದೊಳಗೆ ನಾನು ದೇವರ ನಿಯಮದಲ್ಲಿ ನಿಜವಾಗಿಯೂ ಆನಂದಿಸುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಇನ್ನೊಂದು ನಿಯಮವಿರುವುದನ್ನು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನ ನಿಯಮಕ್ಕೆ ವಿರುದ್ಧವಾಗಿ ಹೋರಾಡಿ ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಸೆರೆಯವನನ್ನಾಗಿ ಮಾಡುತ್ತಿದೆ.” ಹಾಗಾದರೆ ಅವನ ಈ ಸ್ಥಿತಿಗೆ ಪರಿಹಾರವೇ ಇರಲಿಲ್ಲವಾ? ಖಂಡಿತ ಇತ್ತು. ತನಗೆ ಯಾರು ಸಹಾಯಮಾಡಿದರೆಂದು ಪೌಲನು ತಿಳಿಯಪಡಿಸಿದನು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೇ!” (ರೋಮ. 7:18, 22-25) ಇನ್ನೊಂದು ಕಡೆಯಲ್ಲಿ ಅವನು ಬರೆದುದು: “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ.”—ಫಿಲಿ. 4:13.

15. ದೃಢತೆಯಿಂದ ನಿರ್ಣಯಮಾಡುವುದು ಅಥವಾ ಮಾಡದಿರುವುದು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

15 ದೇವರನ್ನು ಮೆಚ್ಚಿಸಲು ದೃಢತೆಯಿಂದ ಕ್ರಿಯೆಗೈಯುವುದು ಅಗತ್ಯ. ಎಲೀಯನು ಕರ್ಮೆಲ್‌ ಬೆಟ್ಟದಲ್ಲಿ ಬಾಳನ ಆರಾಧಕರಿಗೂ ಧರ್ಮಭ್ರಷ್ಟ ಇಸ್ರಾಯೇಲ್ಯರಿಗೂ ಹೇಳಿದ ಮಾತುಗಳನ್ನು ಜ್ಞಾಪಿಸಿಕೊಳ್ಳಿ: “ನೀವು ಎಷ್ಟರ ವರೆಗೆ ಎರಡು ಮನಸ್ಸುಳ್ಳವರಾಗಿರುವಿರಿ? ಯೆಹೋವನು ದೇವರಾಗಿದ್ದರೆ ಆತನನ್ನೇ ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನೇ ಹಿಂಬಾಲಿಸಿರಿ.” (1 ಅರ. 18:21) ಏನು ಮಾಡಬೇಕೆಂಬುದು ಇಸ್ರಾಯೇಲ್ಯರಿಗೆ ಗೊತ್ತಿದ್ದರೂ ಅವರು ಅನಿಶ್ಚಿತತೆಯಿಂದ “ಎರಡು ಮನಸ್ಸು” ಉಳ್ಳವರಾಗಿದ್ದರು. ಆದರೆ ಅನೇಕ ವರ್ಷಗಳ ಮುಂಚೆ ಜೀವಿಸಿದ್ದ ಯೆಹೋಶುವನು ಹಾಗೆ ಮಾಡದೆ ಉತ್ತಮ ಮಾದರಿಯನ್ನಿಟ್ಟನು. ಅವನು ಇಸ್ರಾಯೇಲ್ಯರಿಗೆ ಹೇಳಿದ್ದು: “ಯೆಹೋವನನ್ನು ಸೇವಿಸುವದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರಿ? ಈ ಹೊತ್ತೇ ಆರಿಸಿಕೊಳ್ಳಿರಿ. . . . ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು.” (ಯೆಹೋ. 24:15) ಈ ದೃಢನಿರ್ಣಯದ ಪರಿಣಾಮವೇನಾಯಿತು? ಯೆಹೋಶುವನೂ ಅವನೊಂದಿಗಿದ್ದವರೂ “ಹಾಲೂ ಜೇನೂ ಹರಿಯುವ” ವಾಗ್ದತ್ತ ದೇಶದಲ್ಲಿ ನೆಲೆಸಿದರು.—ಯೆಹೋ. 5:6.

ವಿವೇಕದ ನಿರ್ಣಯಗಳನ್ನು ಮಾಡಿ ಆಶೀರ್ವಾದ ಪಡೆಯಿರಿ

16, 17. ದೇವರ ಚಿತ್ತಾನುಸಾರ ನಿರ್ಣಯಗಳನ್ನು ಮಾಡುವುದರಿಂದ ಬರುವ ಪ್ರಯೋಜನಗಳನ್ನು ಉದಾಹರಿಸಿ.

16 ಈಗಿನ ದಿನಗಳ ಒಂದು ಸನ್ನಿವೇಶವನ್ನು ಪರಿಗಣಿಸಿ. ಒಬ್ಬ ಸಹೋದರನು ಹೊಸದಾಗಿ ದೀಕ್ಷಾಸ್ನಾನ ಪಡೆದಿದ್ದಾನೆ. ಅವನು ವಿವಾಹಿತನಾಗಿದ್ದು ಮೂವರು ಚಿಕ್ಕ ಮಕ್ಕಳ ತಂದೆ. ಒಂದು ದಿನ ಆ ಸಹೋದರನಿಗೆ ಜೊತೆ ಕಾರ್ಮಿಕನೊಬ್ಬನು ಬಂದು ‘ನಾವಿಬ್ಬರೂ ಇನ್ನೊಂದು ಕಂಪನಿಗೆ ಸೇರುವುದಾದರೆ ಅಲ್ಲಿ ಹೆಚ್ಚು ಸಂಬಳ ಮತ್ತು ಪ್ರಯೋಜನಗಳು ಸಿಗುತ್ತವೆಂದು’ ಹೇಳಿದನು. ನಮ್ಮ ಸಹೋದರನು ಅದರ ಬಗ್ಗೆ ಯೋಚಿಸಿ, ಪ್ರಾರ್ಥಿಸಿದನು. ಅವನು ಈಗ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಹೆಚ್ಚು ಸಂಬಳ ಕೊಡುತ್ತಿರಲಿಲ್ಲ. ಆದರೆ ವಾರಾಂತ್ಯದಲ್ಲಿ ರಜೆ ಸಿಗುತ್ತಿದ್ದ ಕಾರಣ ಅವನು ಆ ಕೆಲಸವನ್ನು ಆರಿಸಿಕೊಂಡಿದ್ದನು. ಹಾಗಾಗಿ ಕೂಟಗಳಿಗೆ ಹಾಜರಾಗಲು ಮತ್ತು ಕುಟುಂಬದೊಂದಿಗೆ ಸೇವೆಮಾಡಲು ಸಮಯ ಸಿಗುತ್ತಿತ್ತು. ಆದರೆ ಹೊಸ ಕೆಲಸಕ್ಕೆ ಸೇರಿದರೆ ಸ್ವಲ್ಪ ಸಮಯವಾದರೂ ವಾರಂತ್ಯದ ರಜೆ ಸಿಗದೆ ಹೋಗಬಹುದು ಎನ್ನುವುದು ಅವನಿಗೆ ಗೊತ್ತಾಯಿತು. ನೀವಾಗಿದ್ದರೆ ಏನು ಮಾಡುತ್ತಿದ್ದಿರಿ?

17 ಹೆಚ್ಚು ಆದಾಯ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ನಡುವೆ ತುಲನೆ ಮಾಡಿ ಸಹೋದರನು ಹೊಸ ಕೆಲಸ ಬೇಡವೆಂದು ನಿರ್ಣಯಿಸಿದನು. ಈ ನಿರ್ಣಯದ ನಂತರ ಅವನು ವಿಷಾದಪಟ್ಟನೆಂದು ನೆನಸ್ತೀರಾ? ಇಲ್ಲವೇ ಇಲ್ಲ. ತನಗೂ ತನ್ನ ಕುಟುಂಬಕ್ಕೂ ಹೆಚ್ಚು ಸಂಬಳಕ್ಕಿಂತ ಆಧ್ಯಾತ್ಮಿಕ ಆಶೀರ್ವಾದಗಳೇ ಹೆಚ್ಚು ಪ್ರಯೋಜನಕರವೆಂದು ಅವನಿಗೆ ಅನಿಸಿತು. ಅವರ 10 ವರ್ಷದ ಹಿರೀಮಗಳು, ತಾನು ತನ್ನ ಹೆತ್ತವರನ್ನು, ಸೋದರ ಸೋದರಿಯರನ್ನು ಮತ್ತು ಯೆಹೋವನನ್ನು ತುಂಬ ಪ್ರೀತಿಸುತ್ತೇನೆಂದು ಹೇಳಿದಾಗಲಂತೂ ತಂದೆತಾಯಿಗೆ ತುಂಬ ಖುಷಿಯಾಯಿತು. ಯೆಹೋವನಿಗೆ ತನ್ನ ಜೀವನವನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯುವುದೇ ತನ್ನ ಬಯಕೆ ಎಂದವಳು ಹೇಳಿದಳು. ಆಕೆಯ ತಂದೆ ಯೆಹೋವನ ಆರಾಧನೆಯನ್ನು ಜೀವನದಲ್ಲಿ ಪ್ರಥಮವಾಗಿಡುವ ಮೂಲಕ ತೋರಿಸಿದ ಉತ್ತಮ ಮಾದರಿಯನ್ನು ಅವಳೆಷ್ಟು ಮಾನ್ಯಮಾಡಿದ್ದಿರಬೇಕು!

18. ಪ್ರತಿದಿನ ವಿವೇಕಯುತ ವೈಯಕ್ತಿಕ ನಿರ್ಣಯಗಳನ್ನು ಮಾಡುವುದು ಪ್ರಾಮುಖ್ಯವೇಕೆ?

18 ಮಹಾ ಮೋಶೆಯಾದ ಯೇಸು ಕ್ರಿಸ್ತನು ಯೆಹೋವನ ಸತ್ಯಾರಾಧಕರನ್ನು ಅನೇಕ ದಶಕಗಳಿಂದ ಅರಣ್ಯದಂತಿರುವ ಸೈತಾನನ ಲೋಕದಲ್ಲಿ ನಡೆಸಿಕೊಂಡು ಬರುತ್ತಿದ್ದಾನೆ. ಮಹಾ ಯೆಹೋಶುವನಾಗಿ ಯೇಸುಕ್ರಿಸ್ತನು ಈ ಭ್ರಷ್ಟ ವ್ಯವಸ್ಥೆಯನ್ನು ಅಂತ್ಯಗೊಳಿಸಿ ತನ್ನ ಹಿಂಬಾಲಕರನ್ನು ವಾಗ್ದಾನಿಸಲಾದ ನೀತಿಯ ನೂತನ ಲೋಕಕ್ಕೆ ನಡೆಸಲು ಸಿದ್ಧನಾಗಿ ನಿಂತಿದ್ದಾನೆ. (2 ಪೇತ್ರ 3:13) ಈ ಕಾರಣದಿಂದ ನಮ್ಮ ಹಳೇ ಯೋಚನಾ ರೀತಿಗಳಿಗೆ, ನಮ್ಮ ಹಳೇ ಸ್ವಭಾವಕ್ಕೆ, ಮೌಲ್ಯ-ಆಕಾಂಕ್ಷೆಗಳಿಗೆ ಹಿಂದಿರುಗಿ ಹೋಗುವ ಸಮಯ ಇದಲ್ಲ. ಯೆಹೋವನು ನಮ್ಮಿಂದ ಏನು ಬಯಸುತ್ತಾನೆ ಎನ್ನುವುದನ್ನು ಇನ್ನೂ ಹೆಚ್ಚು ತಿಳಿದುಕೊಳ್ಳುವ ಸಮಯ ಇದಾಗಿದೆ. (ರೋಮ. 12:2; 2 ಕೊರಿಂ. 13:5) ನೀವು ಪ್ರತಿದಿನ ಮಾಡುವ ನಿರ್ಣಯಗಳು ಮತ್ತು ಆಯ್ಕೆಗಳು ನೀವು ದೇವರ ನಿತ್ಯಾಶೀರ್ವಾದಗಳಿಗೆ ಯೋಗ್ಯವಾಗಿರುವ ವ್ಯಕ್ತಿ ಎಂಬುದನ್ನು ಪ್ರತಿಬಿಂಬಿಸಲಿ.ಇಬ್ರಿಯ 10:38, 39 ಓದಿ.

[ಪಾದಟಿಪ್ಪಣಿ]

^ ಪ್ಯಾರ. 7 ಈ ಪದ್ಧತಿಯ ಹಿಂದಿರುವ ಇನ್ನೊಂದು ಕಾರಣ, ಅಜ್ಜಅಜ್ಜಿ ತಮ್ಮ ಮೊಮ್ಮಕ್ಕಳನ್ನು ಸಂಬಂಧಿಗಳಿಗೆ ಮತ್ತು ಸ್ನೇಹಿತರಿಗೆ ಹೆಮ್ಮೆಯಿಂದ ತೋರಿಸಬಹುದು.

[ಅಧ್ಯಯನ ಪ್ರಶ್ನೆಗಳು]

[ಪುಟ 22ರಲ್ಲಿರುವ ಚಿತ್ರ]

[ಪುಟ 24ರಲ್ಲಿರುವ ಚಿತ್ರ]

ದೈನಂದಿನ ವಿಷಯಗಳಲ್ಲಿ ಸರಿಯಾದ ಆಯ್ಕೆ ಮಾಡುವಾಗ ನಾವು ನಮ್ಮ ಗ್ರಹಣ ಶಕ್ತಿಯನ್ನು ತರಬೇತುಗೊಳಿಸುತ್ತೇವೆ (ಪ್ಯಾರ 11)

[ಪುಟ 26ರಲ್ಲಿರುವ ಚಿತ್ರ]

ವಿವೇಕಯುತ ನಿರ್ಣಯಗಳನ್ನು ಮಾಡಿ ದೇವಜನರ ಮಧ್ಯೆ ಸಂತೋಷ ಅನುಭವಿಸಿ (ಪ್ಯಾರ 18)