‘ಆ ದಿನ ನಿಮಗೆ ಜ್ಞಾಪಕಾರ್ಥವಾಗಿರಬೇಕು’
“ಆ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು. ಅದರಲ್ಲಿ ಯೆಹೋವನ ಘನಕ್ಕಾಗಿ ಹಬ್ಬವನ್ನು ಮಾಡಬೇಕು.”—ವಿಮೋ. 12:14.
1, 2. ಯಾವ ವಾರ್ಷಿಕಾಚರಣೆಯ ಬಗ್ಗೆ ಎಲ್ಲ ಕ್ರೈಸ್ತರು ವಿಶೇಷ ಆಸಕ್ತಿ ತೋರಿಸಬೇಕು? ಏಕೆ?
ವಾರ್ಷಿಕಾಚರಣೆ ಎಂದಾಕ್ಷಣ ನಿಮಗೇನು ನೆನಪಾಗುತ್ತದೆ? ಒಬ್ಬ ವಿವಾಹಿತ ವ್ಯಕ್ತಿಗೆ ತನ್ನ ಮದುವೆ ವಾರ್ಷಿಕಾಚರಣೆ ನೆನಪಾಗಬಹುದು. ಇತರರಿಗೆ ಒಂದು ಪ್ರಸಿದ್ಧ ಐತಿಹಾಸಿಕ ಘಟನೆಯ ತಾರೀಕು ಉದಾಹರಣೆಗೆ ತಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ ಮನಸ್ಸಿಗೆ ಬರಬಹುದು. ಆದರೆ 3,500ಕ್ಕೂ ಹೆಚ್ಚು ವರ್ಷಗಳಿಂದ ಆಚರಿಸಲಾಗುತ್ತಿರುವ ಒಂದು ರಾಷ್ಟ್ರೀಯ ವಾರ್ಷಿಕಾಚರಣೆಯ ಬಗ್ಗೆ ನಿಮಗೆ ಗೊತ್ತೇ?
2 ಅದು ಪಸ್ಕದ ಆಚರಣೆ ಆಗಿದೆ. ಇದನ್ನು ಐಗುಪ್ತದ ದಾಸತ್ವದಿಂದ ಪ್ರಾಚೀನ ಇಸ್ರಾಯೇಲ್ಯರ ಬಿಡುಗಡೆಯನ್ನು ಸ್ಮರಿಸಲಿಕ್ಕಾಗಿ ಆಚರಿಸಲಾಗುತ್ತದೆ. ಈ ಆಚರಣೆ ನಿಮಗೆ ಮಹತ್ವದ್ದಾಗಿರಬೇಕು. ಏಕೆ? ಏಕೆಂದರೆ ಅದು ಅತಿ ಪ್ರಮುಖವಾದ ಕೆಲವು ವಿಧದಲ್ಲಿ ನಿಮ್ಮ ಬದುಕನ್ನು ಪ್ರಭಾವಿಸುತ್ತದೆ. ‘ಪಸ್ಕಹಬ್ಬ ಆಚರಿಸುವವರು ಯೆಹೂದ್ಯರು ಅಲ್ಲವಾ? ನಾನೇನೂ ಯೆಹೂದಿಯಲ್ಲ. ಹಾಗಾಗಿ ಆ ವಾರ್ಷಿಕಾಚರಣೆಯಲ್ಲಿ ನಾನೇಕೆ ಆಸಕ್ತಿ ತೋರಿಸಬೇಕು?’ ಎಂದು ನಿಮಗನಿಸಬಹುದು. ನಿಮ್ಮ ಪ್ರಶ್ನೆಗೆ ಉತ್ತರ, “ನಮ್ಮ ಪಸ್ಕದ ಕುರಿಯಾಗಿರುವ ಕ್ರಿಸ್ತನು ಯಜ್ಞವಾಗಿ ಅರ್ಪಿಸಲ್ಪಟ್ಟಿದ್ದಾನೆ” ಎಂಬ ಗಹನವಾದ ಹೇಳಿಕೆಯಲ್ಲಿದೆ. (1 ಕೊರಿಂ. 5:7) ಈ ಸತ್ಯಾಂಶದ ಅರ್ಥವನ್ನು ಗ್ರಹಿಸಬೇಕಾದರೆ ನಾವು ಮೊದಲು ಯೆಹೂದಿ ಪಸ್ಕಹಬ್ಬದ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಈ ಹಬ್ಬಕ್ಕೂ ಕ್ರೈಸ್ತರೆಲ್ಲರಿಗೆ ಕೊಡಲಾಗಿರುವ ಒಂದು ಆಜ್ಞೆಗೂ ಇರುವ ಸಂಬಂಧವನ್ನು ತಿಳಿದುಕೊಳ್ಳಬೇಕು.
ಪಸ್ಕವನ್ನು ಏಕೆ ಆಚರಿಸಲಾಗುತ್ತಿತ್ತು?
3, 4. ಪ್ರಥಮ ಪಸ್ಕದ ಮುಂಚೆ ಏನಾಯಿತು?
3 ಪ್ರಥಮ ಪಸ್ಕಕ್ಕೆ ಕಾರಣವಾದ ಘಟನೆಯ ಬಗ್ಗೆ ಯೆಹೂದ್ಯರಲ್ಲದ ಲಕ್ಷಾಂತರ ಜನರಿಗೂ ಅಲ್ಪಸ್ವಲ್ಪ ಗೊತ್ತಿದೆ. ಇದನ್ನು ಅವರು ವಿಮೋಚನಕಾಂಡ ಪುಸ್ತಕದಲ್ಲಿ ಓದಿರಬಹುದು, ಅದರ ಕಥೆ ಕೇಳಿರಬಹುದು ಇಲ್ಲವೆ ಆ ಘಟನೆಯಾಧರಿತ ಚಲನಚಿತ್ರ ನೋಡಿರಬಹುದು.
4 ಇಸ್ರಾಯೇಲ್ಯರು ಐಗುಪ್ತದಲ್ಲಿ ಅನೇಕ ವರ್ಷಗಳಿಂದ ದಾಸರಾಗಿದ್ದಾಗ ಅವರನ್ನು ಬಂಧಮುಕ್ತಗೊಳಿಸಲು ಫರೋಹನನ್ನು ಕೇಳಿಕೊಳ್ಳುವಂತೆ ಯೆಹೋವನು ಮೋಶೆಯನ್ನೂ ಅವನ ಅಣ್ಣ ಆರೋನನನ್ನೂ ಕಳುಹಿಸಿದನು. ಆದರೆ ಆ ಅಹಂಕಾರಿ ಐಗುಪ್ತ ಅರಸ ಇಸ್ರಾಯೇಲ್ಯರನ್ನು ತನ್ನ ಹಿಡಿತದಿಂದ ಬಿಡಲು ಸಿದ್ಧನಿರಲಿಲ್ಲ. ಹಾಗಾಗಿ ಯೆಹೋವನು ಆ ವಿಮೋ. 1:11; 3:9, 10; 5:1, 2; 11:1, 5.
ದೇಶದ ಮೇಲೆ ಒಂದಾದ ಮೇಲೆ ಒಂದರಂತೆ ವಿನಾಶಕಾರಿ ಬಾಧೆಗಳನ್ನು ಬರಮಾಡಿದನು. ಕೊನೆಯ ಅಂದರೆ ಹತ್ತನೇ ಬಾಧೆಯಲ್ಲಿ ಐಗುಪ್ತ್ಯರ ಚೊಚ್ಚಲ ಮಕ್ಕಳೆಲ್ಲರೂ ಸತ್ತರು. ಆಗ ಫರೋಹನು ಇಸ್ರಾಯೇಲ್ಯರನ್ನು ಬಿಡುಗಡೆ ಮಾಡಲೇಬೇಕಾಯಿತು.—5. ಬಿಡುಗಡೆಯ ಸಿದ್ಧತೆಯಲ್ಲಿ ಇಸ್ರಾಯೇಲ್ಯರು ಏನು ಮಾಡಬೇಕಿತ್ತು? (ಶೀರ್ಷಿಕೆ ಪಕ್ಕದ ಚಿತ್ರ ನೋಡಿ.)
5 ಆದರೆ ಇಸ್ರಾಯೇಲ್ಯರು ಬಿಡುಗಡೆಯಾಗುವ ಮುಂಚೆ ಏನು ಮಾಡಬೇಕಿತ್ತು? ಅದು ಕ್ರಿ.ಪೂ. 1513ರ ಮೇಷ (ವಸಂತ) ಸಂಕ್ರಾಂತಿಯ ಸಮಯ. ಹೀಬ್ರು ಕ್ಯಾಲೆಂಡರಿಗನುಸಾರ ಅಬೀಬ್ ತಿಂಗಳು. ಆಮೇಲೆ ಈ ಹೆಸರು ನೈಸಾನ್ ಎಂದು ಬದಲಾಯಿತು. * ಆ ತಿಂಗಳ 14ರಂದು ಒಂದು ಘಟನೆ ನಡೆಯಲಿಕ್ಕಿತ್ತು. ಅದಕ್ಕಾಗಿ ಇಸ್ರಾಯೇಲ್ಯರು ನೈಸಾನ್ 10ರಂದೇ ಸಿದ್ಧರಾಗುವಂತೆ ದೇವರು ಹೇಳಿದನು. ಅವರು ಸೂರ್ಯಾಸ್ತದಿಂದ ಮರುದಿನದ ಸೂರ್ಯಾಸ್ತದ ವರೆಗೆ ಒಂದು ದಿನವಾಗಿ ಲೆಕ್ಕಿಸುತ್ತಿದ್ದರು. ಹಾಗಾಗಿ ಸೂರ್ಯಾಸ್ತದಂದು ಆರಂಭವಾದ ನೈಸಾನ್ 14ನೇ ದಿನದಲ್ಲಿ ಪ್ರತಿಯೊಂದು ಮನೆಯವರು ಗಂಡು ಕುರಿಯನ್ನು (ಇಲ್ಲವೆ ಆಡನ್ನು) ಕೊಯ್ದು, ಅದರ ಸ್ವಲ್ಪ ರಕ್ತವನ್ನು ಮನೆಬಾಗಿಲಿನ ಮೇಲಣ ಪಟ್ಟಿ ಮತ್ತು ನಿಲುವುಕಂಬಗಳ ಮೇಲೆ ಹಚ್ಚಬೇಕಿತ್ತು. (ವಿಮೋ. 12:3-7, 22, 23) ಕುಟುಂಬದವರೆಲ್ಲರೂ ಹುಳಿಯಿಲ್ಲದ ರೊಟ್ಟಿ ಮತ್ತು ಸ್ವಲ್ಪ ಪಲ್ಯದ ಜೊತೆಗೆ ಸುಟ್ಟ ಕುರಿಮಾಂಸದ ಭೋಜನ ಮಾಡಬೇಕಿತ್ತು. ದೇವದೂತನು ದೇಶದ ನಡುವೆ ಹಾದುಹೋಗಿ ಐಗುಪ್ತ್ಯರ ಚೊಚ್ಚಲ ಪುತ್ರರನ್ನು ಹತಿಸಲಿದ್ದನು. ಆದರೆ ದೇವರ ಮಾತಿಗೆ ವಿಧೇಯರಾದ ಇಸ್ರಾಯೇಲ್ಯರಿಗೆ ಸಂರಕ್ಷಣೆ ಸಿಗಲಿಕ್ಕಿತ್ತು. ಅನಂತರ ಬಿಡುಗಡೆ ಹೊಂದಲಿಕ್ಕಿದ್ದರು.—ವಿಮೋ. 12:8-13, 29-32.
6. ದೇವಜನರು ಮುಂದಿನ ವರ್ಷಗಳಲ್ಲಿ ಪಸ್ಕದ ಬಗ್ಗೆ ಯಾವ ನೋಟ ಇಡಬೇಕಿತ್ತು?
6 ಹಾಗೆಯೇ ಆಯಿತು. ಇಸ್ರಾಯೇಲ್ಯರು ಬಿಡುಗಡೆ ಹೊಂದಿದರು ಮತ್ತು ಇದನ್ನು ಅವರು ಪ್ರತಿ ವರ್ಷ ಸ್ಮರಿಸಬೇಕಿತ್ತು. “ಆ ದಿನವು ನಿಮಗೆ ಜ್ಞಾಪಕಾರ್ಥವಾಗಿರುವದು. ಅದರಲ್ಲಿ ಯೆಹೋವನ ಘನಕ್ಕಾಗಿ ಹಬ್ಬವನ್ನು ಮಾಡಬೇಕು. ಅದನ್ನು ಶಾಶ್ವತನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು” ಎಂದು ದೇವರು ಅವರಿಗೆ ಹೇಳಿದನು. 14ನೇ ದಿನದಂದು ಪಸ್ಕವನ್ನು ಆಚರಿಸಿದ ಬಳಿಕ ಏಳು ದಿನಗಳ ಹಬ್ಬ (ಹುಳಿಯಿಲ್ಲದ ರೊಟ್ಟಿಗಳ ಹಬ್ಬ) ಇರುತ್ತಿತ್ತು. ಪಸ್ಕದ ದಿನ ನೈಸಾನ್ 14 ಆಗಿದ್ದರೂ ಪಸ್ಕಹಬ್ಬವೆಂಬ ಹೆಸರನ್ನು ಆ ಹಬ್ಬದ ಎಲ್ಲ ಎಂಟು ದಿನಗಳಿಗೆ ಅನ್ವಯಿಸಬಹುದಿತ್ತು. (ವಿಮೋ. 12:14-17; ಲೂಕ 22:1; ಯೋಹಾ. 18:28; 19:14) ಹೀಬ್ರು ಜನರು ಪ್ರತಿ ವರ್ಷ ಆಚರಿಸಬೇಕಾಗಿದ್ದ ವಾರ್ಷಿಕ ಜಾತ್ರೆಗಳಲ್ಲಿ (“ವಾರ್ಷಿಕಾಚರಣೆಗಳು,” ದ ಬೈಬಲ್ ಇನ್ ಲಿವಿಂಗ್ ಇಂಗ್ಲಿಷ್) ಪಸ್ಕವು ಒಂದಾಗಿತ್ತು.—2 ಪೂರ್ವ. 8:13.
7. ಯೇಸು ತನ್ನ ಅಪೊಸ್ತಲರೊಂದಿಗೆ ಕೊನೆ ಬಾರಿ ಪಸ್ಕ ಆಚರಿಸಿದ ಸಂದರ್ಭದಲ್ಲಿ ಯಾವ ಹೊಸ ಆಚರಣೆ ಸ್ಥಾಪಿಸಿದನು?
7 ಯೆಹೂದ್ಯರಾದ ಯೇಸು ಮತ್ತವನ ಅಪೊಸ್ತಲರು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುತ್ತಿದ್ದ ಕಾರಣ ವಾರ್ಷಿಕ ಪಸ್ಕವನ್ನು ಆಚರಿಸಿದರು. (ಮತ್ತಾ. 26:17-19) ಆದರೆ ಅವರು ಅದನ್ನು ಒಟ್ಟಿಗೆ ಆಚರಿಸಿದ ಕೊನೆ ಸಂದರ್ಭದಲ್ಲಿ ಯೇಸು ಒಂದು ಹೊಸ ಆಚರಣೆಯನ್ನು ಸ್ಥಾಪಿಸಿದನು. ಇನ್ನು ಮುಂದಕ್ಕೆ ತನ್ನ ಹಿಂಬಾಲಕರು ಪ್ರತಿ ವರ್ಷ ‘ಕರ್ತನ ಸಂಧ್ಯಾ ಭೋಜನ’ ಆಚರಿಸಬೇಕೆಂದು ಹೇಳಿದನು. ಆದರೆ ಇದನ್ನು ಅವರು ಯಾವ ದಿನ ಮಾಡಬೇಕಿತ್ತು?
ಕರ್ತನ ಸಂಧ್ಯಾ ಭೋಜನ—ಯಾವ ದಿನ?
8. ಪಸ್ಕಹಬ್ಬ ಮತ್ತು ಕರ್ತನ ಸಂಧ್ಯಾ ಭೋಜನದ ಸಂಬಂಧದಲ್ಲಿ ಯಾವ ಪ್ರಶ್ನೆಯೇಳುತ್ತದೆ?
8 ಕರ್ತನ ಸಂಧ್ಯಾ ಭೋಜನವನ್ನು ಪಸ್ಕ ಊಟವಾದ ಕೂಡಲೇ ಯೇಸು ಸ್ಥಾಪಿಸಿದ್ದರಿಂದ ಈ ಹೊಸ ಆಚರಣೆ ಪಸ್ಕದ ದಿನವೇ ನಡೆಯಬೇಕು. ಆದರೆ ಕೆಲವು ಆಧುನಿಕ ಕ್ಯಾಲೆಂಡರುಗಳಲ್ಲಿರುವ ಯೆಹೂದಿ ಪಸ್ಕ ಹಬ್ಬದ ತಾರೀಕಿಗೂ ನಾವು ಕ್ರಿಸ್ತನ ಮರಣವನ್ನು ಸ್ಮರಿಸುವ ತಾರೀಕಿಗೂ ಒಂದು ಅಥವಾ ಹೆಚ್ಚು ದಿನಗಳ ಅಂತರವಿರುವುದನ್ನು ನೀವು ಗಮನಿಸಿರಬಹುದು. ಯಾಕೆ ಈ ವ್ಯತ್ಯಾಸ? ಇದರ ಭಾಗಶಃ ಉತ್ತರ ದೇವರು ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆಯಲ್ಲಿದೆ. ನೈಸಾನ್ 14ರಂದು “ಇಸ್ರಾಯೇಲ್ಯರ ಸಮೂಹದವರೆಲ್ಲರು” ಕುರಿಯನ್ನು ಕೊಯ್ಯಬೇಕೆಂದು ಮೋಶೆ ಹೇಳಿದಾಗ ಅದನ್ನು ಯಾವ ಹೊತ್ತಿನಲ್ಲಿ ಮಾಡಬೇಕೆಂದೂ ನಿರ್ದಿಷ್ಟವಾಗಿ ತಿಳಿಸಿದನು.—ವಿಮೋಚನಕಾಂಡ 12:5, 6 ಓದಿ.
9. ವಿಮೋಚನಕಾಂಡ 12:6ಕ್ಕನುಸಾರ ಪಸ್ಕದ ಕುರಿಯನ್ನು ಯಾವಾಗ ಕೊಯ್ಯಬೇಕಿತ್ತು?
ವಿಮೋಚನಕಾಂಡ 12:6ಕ್ಕನುಸಾರ ಕುರಿಯನ್ನು “ಸಂಜೇ ವೇಳೆಯಲ್ಲಿ” ಕೊಯ್ಯಬೇಕಿತ್ತು. ಈ ಸಮಯದ ಬಗ್ಗೆ ಯೆಹೂದಿಮತದ ಪವಿತ್ರ ಗ್ರಂಥವಾದ ಟಾನಾಕ್ ನಂಥ ಇತರ ಭಾಷಾಂತರಗಳಲ್ಲಿ “ಸಂಜೆಯ ನಸು ಬೆಳಕಿನ ಕಾಲ” ಎಂದು ಕೊಡಲಾಗಿದೆ. ಹಾಗಾದರೆ ಕುರಿಯನ್ನು ಸೂರ್ಯಾಸ್ತದ ನಂತರ ಆದರೆ ಇನ್ನೂ ಬೆಳಕಿರುವಾಗ ಅಂದರೆ ನೈಸಾನ್ 14ನೇ ದಿನದ ಆರಂಭದಲ್ಲಿ ಕೊಯ್ಯಬೇಕಿತ್ತು.
910. (1) ಕುರಿಯನ್ನು ಯಾವಾಗ ಕಡಿಯಬೇಕೆಂದು ಕೆಲವರು ನೆನಸುತ್ತಾರೆ? (2) ಆದರೆ ಇದರಿಂದ ಯಾವ ಪ್ರಶ್ನೆಯೇಳುತ್ತದೆ?
10 ಇತಿಹಾಸಕ್ಕನುಸಾರ ಸಮಯಾನಂತರ ಪಸ್ಕದ ಕುರಿಗಳನ್ನು ಆಲಯಕ್ಕೆ ತಂದು ಕಡಿಯಲಾಗುತ್ತಿತ್ತು. ಎಲ್ಲ ಯಜ್ಞಗಳನ್ನು ಅರ್ಪಿಸಲು ತುಂಬ ಸಮಯ ಹಿಡಿಯುತ್ತಿತ್ತು. ಆದ್ದರಿಂದಲೇ ವಿಮೋಚನಕಾಂಡ 12:6 ನೈಸಾನ್ 14ನೇ ದಿನದ ಅಂತ್ಯಭಾಗಕ್ಕೆ ಸೂಚಿಸುತ್ತದೆಂದು ಶತಮಾನಗಳ ನಂತರ ಕೆಲವು ಯೆಹೂದ್ಯರು ನೆನಸಿದರು. ಅಂದರೆ ಸೂರ್ಯನ ಬೆಳಕು ಕುಗ್ಗಲು ಆರಂಭವಾಗುವ (ಮಧ್ಯಾಹ್ನ ನಂತರ) ಮತ್ತು ಸೂರ್ಯಾಸ್ತದಲ್ಲಿ ದಿನ ಕೊನೆಗೊಳ್ಳುವ ನಡುವಿನ ಸಮಯ ಕುರಿ ಕಡಿಯಬೇಕೆಂದು ನೆನಸುತ್ತಿದ್ದರು. ಹಾಗಿದ್ದರೆ ಪಸ್ಕದೂಟ ಯಾವಾಗ ಮಾಡುತ್ತಿದ್ದರು? ಪ್ರಾಚೀನ ಯೆಹೂದಿಮತದ ತಜ್ಞ ಪ್ರೊಫೆಸರ್ ಜಾನತನ್ ಕ್ಲವಾನ್ಸ್ ಹೇಳಿದ್ದು: “ಸೂರ್ಯಾಸ್ತದ ನಂತರ ಹೊಸ ದಿನದ ಆರಂಭ. ಹೀಗಿರುವಾಗ 14ನೇ ದಿನದಂದು ಯಜ್ಞ ಅರ್ಪಿಸಲಾಗುತ್ತಿತ್ತಾದರೂ ಪಸ್ಕ ಮತ್ತು ಊಟ ಆರಂಭವಾಗುತ್ತಿದ್ದದ್ದು ಮಾತ್ರ 15ನೇ ದಿನದಂದು. ಆದರೆ ವಿಮೋಚನಕಾಂಡದಲ್ಲಿ ತಾರೀಕುಗಳ ಈ ಕ್ರಮವನ್ನು ನಿರ್ದಿಷ್ಟವಾಗಿ ಕೊಡಲಾಗಿಲ್ಲ.” ಅವರು ಹೀಗೂ ಬರೆದರು: ಕ್ರಿ.ಶ. 70ರಲ್ಲಿ “ಆಲಯವು ನಾಶವಾಗುವುದಕ್ಕಿಂತ ಮುಂಚೆ ಸೆಡೆರ್ [ಪಸ್ಕದೂಟ] ಅನ್ನು ಹೇಗೆ ಆಚರಿಸಲಾಗುತ್ತಿತ್ತೆಂದು ರಬ್ಬಿಗಳ ಸಾಹಿತ್ಯದಲ್ಲಿ ತಿಳಿಸಲಾಗಿಲ್ಲ.”
11. (1) ಕ್ರಿ.ಶ. 33ರ ಪಸ್ಕದ ದಿನದಂದು ಯೇಸು ಏನೇನು ಅನುಭವಿಸಿದನು? (2) ಕ್ರಿ.ಶ. 33ರ ನೈಸಾನ್ 15 ಏಕೆ “ವಿಶೇಷ” ಸಬ್ಬತ್ ಆಗಿತ್ತು? (ಪಾದಟಿಪ್ಪಣಿ ನೋಡಿ.)
11 ‘ಕ್ರಿ.ಶ. 33ರಲ್ಲಿನ ಪಸ್ಕ ಹೇಗಿತ್ತು?’ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ‘ಪಸ್ಕದ ಪ್ರಾಣಿಯನ್ನು ಯಜ್ಞವಾಗಿ ಅರ್ಪಿಸಬೇಕಾದ ದಿನ’ ಹತ್ತಿರವಾಗುತ್ತಿದ್ದಂತೆ ಅಂದರೆ ನೈಸಾನ್ 13ರಂದು ಕ್ರಿಸ್ತನು ಪೇತ್ರ ಯೋಹಾನರಿಗೆ “ಹೋಗಿ . . . ನಮಗೋಸ್ಕರ ಪಸ್ಕವನ್ನು ಸಿದ್ಧಮಾಡಿರಿ” ಎಂದು ಹೇಳಿದನು. (ಲೂಕ 22:7, 8) ನೈಸಾನ್ 14ರ ಸೂರ್ಯಾಸ್ತದ ನಂತರ ಅಂದರೆ ಗುರುವಾರ ಸಾಯಂಕಾಲ ಪಸ್ಕದೂಟದ “ಆ ಗಳಿಗೆ ಬಂದಾಗ” ಯೇಸು ತನ್ನ ಅಪೊಸ್ತಲರೊಂದಿಗೆ ಪಸ್ಕದೂಟ ಮಾಡಿದನು. ನಂತರ ಕರ್ತನ ಸಂಧ್ಯಾ ಭೋಜನವನ್ನು ಆರಂಭಿಸಿದನು. (ಲೂಕ 22:14, 15) ಅದೇ ರಾತ್ರಿ ಅವನನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಲಾಯಿತು. ನೈಸಾನ್ 14ರ ಮಧ್ಯಾಹ್ನ ಹತ್ತಿರವಾಗುತ್ತಿದ್ದಾಗ ಯೇಸುವನ್ನು ಕಂಬಕ್ಕೇರಿಸಲಾಯಿತು. ಅದೇ ಮಧ್ಯಾಹ್ನ ಅವನು ಸತ್ತುಹೋದನು. (ಯೋಹಾ. 19:14) ಹೀಗೆ “ನಮ್ಮ ಪಸ್ಕದ ಕುರಿಯಾಗಿರುವ ಕ್ರಿಸ್ತನು ಯಜ್ಞವಾಗಿ ಅರ್ಪಿಸ”ಲ್ಪಟ್ಟದ್ದು ಇಸ್ರಾಯೇಲ್ಯರು ಪಸ್ಕದ ಕುರಿಯನ್ನು ಕೊಯ್ದ ಅದೇ ದಿನದಂದು. (1 ಕೊರಿಂ. 5:7; 11:23; ಮತ್ತಾ. 26:2) ಆ ಯೆಹೂದಿ ದಿನ ಕೊನೆಯಾಗುತ್ತಿದ್ದಂತೆ ಅಂದರೆ ನೈಸಾನ್ 15 ಆರಂಭವಾಗುವ ಮುಂಚೆಯೇ ಯೇಸುವನ್ನು ಹೂಳಿಡಲಾಯಿತು. *—ಯಾಜ. 23:5-7; ಲೂಕ 23:54.
ಈ ಜ್ಞಾಪಕಾರ್ಥ ಸಂದರ್ಭದಿಂದ ನಮಗಿರುವ ಪಾಠಗಳು
12, 13. ಇಸ್ರಾಯೇಲ್ಯರ ಮಕ್ಕಳು ಪಸ್ಕದ ಆಚರಣೆಯಲ್ಲಿ ಹೇಗೆ ಒಳಗೂಡಿರುತ್ತಿದ್ದರು?
12 ನಾವೀಗ ಐಗುಪ್ತದಲ್ಲಿ ನಡೆದ ಪಸ್ಕದ ಸಮಯಕ್ಕೆ ಹಿಂತೆರಳೋಣ. ಇನ್ನು ಮುಂದೆ ದೇವಜನರು ಪಸ್ಕವನ್ನು ಆಚರಿಸಬೇಕೆಂದು ಮೋಶೆ ಹೇಳಿದನು. ಇದೊಂದು “ಶಾಶ್ವತವಾದ ನಿಯಮ” ಆಗಿರಲಿತ್ತು. ಆ ವಾರ್ಷಿಕ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದ ಮಕ್ಕಳು ಅದಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಹೆತ್ತವರಿಗೆ ಕೇಳುತ್ತಿದ್ದರು. (ವಿಮೋಚನಕಾಂಡ 12:24-27 ಓದಿ; ಧರ್ಮೋ. 6:20-23) ಹೀಗೆ “ಜ್ಞಾಪಕಾರ್ಥವಾಗಿ” ಆಚರಿಸಲಾಗುತ್ತಿದ್ದ ಪಸ್ಕದಿಂದ ಮಕ್ಕಳೂ ಪಾಠಗಳನ್ನು ಕಲಿಯಸಾಧ್ಯವಿತ್ತು.—ವಿಮೋ. 12:14.
13 ಇಸ್ರಾಯೇಲ್ಯರು ತಮ್ಮ ಮಕ್ಕಳಿಗೆ ಪಸ್ಕದ
ಮಹತ್ವಪೂರ್ಣ ಪಾಠಗಳನ್ನು ಕಲಿಸುವ ಮೂಲಕ ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತಿದ್ದರು. ಆ ಪಾಠಗಳಲ್ಲಿ ಒಂದು ಯಾವುದೆಂದರೆ, ಯೆಹೋವನು ತನ್ನ ಆರಾಧಕರನ್ನು ಸಂರಕ್ಷಿಸಶಕ್ತನು ಎಂದೇ. ಯೆಹೋವನು ಯಾರಿಗೂ ಅರ್ಥವಾಗದ, ಭಾವರಹಿತ ದೇವರಲ್ಲ ಬದಲಾಗಿ ನೈಜ, ಜೀವಂತ ದೇವರಾಗಿದ್ದು ತನ್ನ ಜನರ ಬಗ್ಗೆ ಆಸಕ್ತಿತೋರಿಸಿ ಅವರಿಗಾಗಿ ಕ್ರಿಯೆಗೈಯುವಾತನು. ಇದನ್ನು ಆತನು ರುಜುಪಡಿಸಿದ್ದು “ಐಗುಪ್ತ್ಯರನ್ನು ಸಂಹರಿಸಿ” ಇಸ್ರಾಯೇಲ್ಯರ ಚೊಚ್ಚಲು ಮಕ್ಕಳನ್ನು ಸಂರಕ್ಷಿಸಿ, ಜೀವಂತವಾಗಿಡುವ ಮೂಲಕ. ಇದನ್ನು ಮಕ್ಕಳಿಗೆ ಕಲಿಸಲಾಯಿತು.14. ಕ್ರೈಸ್ತ ಹೆತ್ತವರು ಪಸ್ಕದ ವೃತ್ತಾಂತ ಬಳಸಿ ತಮ್ಮ ಮಕ್ಕಳು ಏನನ್ನು ಮಾನ್ಯಮಾಡುವಂತೆ ನೆರವಾಗಬಲ್ಲರು?
14 ಇಂದು ಕ್ರೈಸ್ತ ಹೆತ್ತವರು ಪ್ರತಿ ವರ್ಷ ತಮ್ಮ ಮಕ್ಕಳಿಗೆ ಆ ಪಸ್ಕ ಅಂದರೇನು ಎಂಬದನ್ನು ನೆನಪುಹುಟ್ಟಿಸುವುದಿಲ್ಲ. ಆದರೆ ಆ ಪಾಠವನ್ನು ಅಂದರೆ ದೇವರು ತನ್ನ ಜನರನ್ನು ಸಂರಕ್ಷಿಸುತ್ತಾನೆ ಎಂಬದನ್ನು ನಿಮ್ಮ ಮಕ್ಕಳಿಗೆ ಕಲಿಸುತ್ತೀರೊ? ಯೆಹೋವನು ಈಗಲೂ ತನ್ನ ಜನರ ಸಂರಕ್ಷಕನೆಂಬ ನಿಮ್ಮ ದೃಢ ನಿಶ್ಚಿತಾಭಿಪ್ರಾಯವನ್ನು ಅವರಿಗೆ ತೋರಿಸುತ್ತೀರೊ? (ಕೀರ್ತ. 27:11; ಯೆಶಾ. 12:2) ಇದನ್ನು ದೊಡ್ಡ ಭಾಷಣ ಬಿಗಿದು ಅಲ್ಲ ಬದಲಾಗಿ ಮಕ್ಕಳ ಜೊತೆ ಹರ್ಷಭರಿತ ಸಂಭಾಷಣೆಯ ರೂಪದಲ್ಲಿ ಮಾಡುತ್ತೀರೊ? ನಿಮ್ಮ ಕುಟುಂಬದ ಆಧ್ಯಾತ್ಮಿಕ ಬೆಳವಣಿಗೆಯನ್ನು ಹೆಚ್ಚಿಸುವ ಸಲುವಾಗಿ ಆ ಪಾಠವನ್ನು ಅವರಿಗೆ ಕಲಿಸಲು ಪ್ರಯತ್ನ ಮಾಡಿ.
15, 16. ಪಸ್ಕ ಮತ್ತು ಇಸ್ರಾಯೇಲ್ಯರ ಬಿಡುಗಡೆಯ ಕುರಿತ ವೃತ್ತಾಂತಗಳನ್ನು ಬಳಸಿ ಯೆಹೋವನ ಬಗ್ಗೆ ಏನನ್ನು ಎತ್ತಿಹೇಳಬಹುದು?
15 ಪಸ್ಕದಿಂದ ಕಲಿಯಬಹುದಾದ ಇನ್ನೊಂದು ಸಂಗತಿಯೇನೆಂದರೆ ಯೆಹೋವನಿಗೆ ತನ್ನ ಜನರನ್ನು ಸಂರಕ್ಷಿಸಲು ಮಾತ್ರವಲ್ಲ ಅವರನ್ನು ಬಿಡುಗಡೆಗೊಳಿಸಲು ಕೂಡ ಸಾಮರ್ಥ್ಯವಿದೆ ಎಂದೇ. ಅವರನ್ನು ಐಗುಪ್ತದೇಶದೊಳಗಿಂದ ಬಿಡಿಸುವುದರಲ್ಲಿ ಏನೆಲ್ಲ ಒಳಗೂಡಿತ್ತೆಂದು ಸ್ವಲ್ಪ ಯೋಚಿಸಿ. ಅವರಿಗೆ ಮಾರ್ಗ ತೋರಿಸಲು ಮೇಘ ಮತ್ತು ಅಗ್ನಿಸ್ತಂಭವನ್ನು ಬಳಸಿದನು. ಕೆಂಪು ಸಮುದ್ರದ ನೀರನ್ನು ಅವರ ಎಡ ಬಲ ಬದಿಗಳಲ್ಲಿ ಎತ್ತರಕ್ಕೆ ಗೋಡೆಯಂತೆ ನಿಲ್ಲಿಸಿ ಸಮುದ್ರ ಮಧ್ಯದಲ್ಲಿ ನಡೆಸಿದನು. ಅವರು ಸುರಕ್ಷಿತವಾಗಿ ಆಚೆ ದಡ ತಲಪಿದ ಬಳಿಕ ಆ ನೀರು ಐಗುಪ್ತದ ಮಿಲಿಟರಿ ಪಡೆಯ ಮೇಲೆ ಬೀಳುವಂತೆ ಮಾಡಿದನು. ತಮ್ಮನ್ನು ಬಿಡುಗಡೆ ಮಾಡಿದ್ದಕ್ಕಾಗಿ ಇಸ್ರಾಯೇಲ್ಯರು ಧ್ವನಿಯೆತ್ತಿ ಹೀಗೆ ಹಾಡಿದರು: “ಯೆಹೋವನ ಸ್ತೋತ್ರವನ್ನು ಗಾನಮಾಡೋಣ; . . . ಕುದುರೆಗಳನ್ನೂ ರಾಹುತರನ್ನೂ ಸಮುದ್ರದಲ್ಲಿ ಕೆಡವಿ ನಾಶಮಾಡಿದ್ದಾನೆ. ನನ್ನ ಬಲವೂ ಕೀರ್ತನೆಯೂ ಯಾಹುವೇ ಆತನಿಂದ ನನಗೆ ರಕ್ಷಣೆಯುಂಟಾಯಿತು.”—ವಿಮೋ. 13:14, 21, 22; 15:1, 2; ಕೀರ್ತ. 136:11-15.
16 ನಿಮಗೆ ಮಕ್ಕಳಿರುವಲ್ಲಿ ಯೆಹೋವನು ರಕ್ಷಕನು ಎಂಬ ಭರವಸೆಯನ್ನಿಡುವಂತೆ ಅವರಿಗೆ ಸಹಾಯಮಾಡುತ್ತಿದ್ದೀರೊ? ನಿಮ್ಮಲ್ಲೇ ಆ ದೃಢನಿಶ್ಚಯವಿರುವುದನ್ನು ನಿಮ್ಮ ಮಾತುಕತೆಗಳಲ್ಲಿ, ನಿರ್ಣಯಗಳಲ್ಲಿ ಅವರು ಕಾಣಶಕ್ತರೊ? ವಿಮೋಚನಕಾಂಡ 12-15ನೇ ಅಧ್ಯಾಯಗಳಲ್ಲಿನ ವಿಷಯವನ್ನು ಖಂಡಿತವಾಗಿ ನಿಮ್ಮ ಕುಟುಂಬ ಆರಾಧನಾ ಚರ್ಚೆಯಲ್ಲಿ ಸೇರಿಸಿ, ಯೆಹೋವನು ತನ್ನ ಜನರನ್ನು ಹೇಗೆ ಬಿಡಿಸಿದನು ಎಂಬದನ್ನು ಒತ್ತಿ ಹೇಳಬಹುದು. ಇನ್ನಿತರ ಸಮಯಗಳಲ್ಲಿ ನೀವು ಅದೇ ಅಂಶವನ್ನು ತಿಳಿಸಲಿಕ್ಕಾಗಿ ಅ. ಕಾರ್ಯಗಳು 7:30-36 ಇಲ್ಲವೆ ದಾನಿಯೇಲ 3:16-18, 26-28ನ್ನು ಚರ್ಚಿಸಬಹುದು. ಹೌದು, ಯೆಹೋವನು ರಕ್ಷಕನು ಎಂಬ ಭರವಸೆ ಆಬಾಲವೃದ್ಧರೆಲ್ಲರಿಗೂ ಇರಬೇಕು. ಆತನು ಹಿಂದೆ ಮೋಶೆಯ ದಿನದಲ್ಲಿ ಮಾತ್ರ ತನ್ನ ಜನರನ್ನು ಬಿಡುಗಡೆಗೊಳಿಸಿದ್ದಲ್ಲ. ಭವಿಷ್ಯದಲ್ಲಿ ನಮ್ಮನ್ನೂ ಖಂಡಿತ ಬಿಡುಗಡೆಗೊಳಿಸುವನು.—1 ಥೆಸಲೊನೀಕ 1:9, 10 ಓದಿ.
ನಾವು ನೆನಪಿಡಬೇಕಾದ ಸಂಗತಿಗಳು
17, 18. ಪ್ರಥಮ ಪಸ್ಕದಲ್ಲಿ ರಕ್ತವನ್ನು ಬಳಸಿದ್ದರ ಕುರಿತು ಯೋಚಿಸುವಾಗ ನಮಗೇನು ನೆನಪಾಗಬೇಕು?
17 ನಿಜ ಕ್ರೈಸ್ತರಾದ ನಾವು ಯೆಹೂದಿ ಪಸ್ಕವನ್ನು ಆಚರಿಸುವುದಿಲ್ಲ. ಏಕೆಂದರೆ ಆ ವಾರ್ಷಿಕೋತ್ಸವವು ಮೋಶೆಯ ಧರ್ಮಶಾಸ್ತ್ರದ ಭಾಗವಾಗಿತ್ತು ಮತ್ತು ಕ್ರೈಸ್ತರು ಆ ಧರ್ಮಶಾಸ್ತ್ರದ ಕೆಳಗಿಲ್ಲ. (ರೋಮ. 10:4; ಕೊಲೊ. 2:13-16) ಆದರೆ ಇನ್ನೊಂದು ಘಟನೆಯನ್ನು ಅಂದರೆ ದೇವರ ಪುತ್ರನ ಮರಣವನ್ನು ಸ್ಮರಿಸುತ್ತೇವೆ. ಹಾಗಿದ್ದರೂ ಹಿಂದೆ ಐಗುಪ್ತದಲ್ಲಿ ಸ್ಥಾಪಿಸಲಾಗಿದ್ದ ಪಸ್ಕದ ಆಚರಣೆಯ ವೈಶಿಷ್ಟ್ಯಗಳಿಂದ ನಾವು ಹಲವಾರು ಸಂಗತಿಗಳನ್ನು ಕಲಿಯಬಲ್ಲೆವು.
18 ಮನೆಬಾಗಿಲಿನ ಮೇಲಣ ಪಟ್ಟಿ ಮತ್ತು ನಿಲುವುಕಂಬಗಳ ಮೇಲೆ ಚಿಮುಕಿಸಲಾದ ಕುರಿರಕ್ತವು ಜೀವವನ್ನು ಉಳಿಸಿಕೊಳ್ಳಲು ಅತ್ಯಗತ್ಯವಾಗಿತ್ತು. ನಾವಿಂದು ದೇವರಿಗೆ ಪ್ರಾಣಿ ಯಜ್ಞಗಳನ್ನು ಅರ್ಪಿಸುವುದಿಲ್ಲ. ಪಸ್ಕದ ತಾರೀಕಿನಂದು ಆಗಲಿ, ಬೇರಾವುದೇ ಸಮಯದಲ್ಲಾಗಲಿ ಅದನ್ನು ಮಾಡುವುದಿಲ್ಲ. ಆದರೆ ಜೀವವನ್ನು ಕಾಯಂ ಆಗಿ ಉಳಿಸಬಲ್ಲ ಇನ್ನೂ ಉತ್ತಮವಾದ ಯಜ್ಞವೊಂದಿದೆ. “ಸ್ವರ್ಗದಲ್ಲಿ ಹೆಸರು ಬರೆಸಿಕೊಂಡಿರುವ ಚೊಚ್ಚಲಮಕ್ಕಳ ಸಭೆ” ಬಗ್ಗೆ ಅಪೊಸ್ತಲ ಪೌಲನು ಬರೆದನು. ಈ ಅಭಿಷಿಕ್ತ ಕ್ರೈಸ್ತರ ಜೀವವನ್ನು ಉಳಿಸುವ ಸಾಧನವು “ಪ್ರೋಕ್ಷಣೆಯ ರಕ್ತ” ಅಂದರೆ ಯೇಸುವಿನ ರಕ್ತವಾಗಿದೆ. (ಇಬ್ರಿ. 12:23, 24) ಈ ರಕ್ತದಿಂದಾಗಿಯೇ ಇತರ ಕ್ರೈಸ್ತರಿಗೂ ಭೂಮಿಯ ಮೇಲೆ ಸದಾ ಜೀವಿಸುವ ನಿರೀಕ್ಷೆ ಇದೆ. ಅವರು ಆಗಾಗ್ಗೆ ಈ ಆಶ್ವಾಸನೆಯನ್ನು ನೆನಪಿಸಿಕೊಳ್ಳಬೇಕು: “ಅವನ ಮೂಲಕ ಅಂದರೆ ಆ ಒಬ್ಬನ ರಕ್ತದ ಮೂಲಕ ದೊರೆತ ವಿಮೋಚನಾ ಮೌಲ್ಯದ ಮುಖಾಂತರ ನಮಗೆ ಬಿಡುಗಡೆಯಾಯಿತು; ಹೌದು, ದೇವರ ಅಪಾತ್ರ ದಯೆಯ ಔದಾರ್ಯದಿಂದ ನಮ್ಮ ಅಪರಾಧಗಳು ಕ್ಷಮಿಸಲ್ಪಟ್ಟವು.”—ಎಫೆ. 1:7.
19. ಯೇಸು ಮರಣಪಟ್ಟ ವಿಧವು ಬೈಬಲ್ ಪ್ರವಾದನೆಯಲ್ಲಿ ನಮ್ಮ ಭರವಸೆಯನ್ನು ಹೇಗೆ ಹೆಚ್ಚಿಸುತ್ತದೆ?
19 ಪಸ್ಕದೂಟಕ್ಕಾಗಿ ಕುರಿಯನ್ನು ಕಡಿಯುವಾಗ ಇಸ್ರಾಯೇಲ್ಯರು ಅದರ ಯಾವುದೇ ಎಲುಬನ್ನು ಮುರಿಯಬಾರದಿತ್ತು. (ವಿಮೋ. 12:46; ಅರ. 9:11, 12) ವಿಮೋಚನಾ ಮೌಲ್ಯ ಕೊಡಲು ಬಂದ “ದೇವರ ಕುರಿಮರಿ”ಯಾದ ಯೇಸುವಿನ ಬಗ್ಗೆ ಏನು? (ಯೋಹಾ. 1:29) ಅವನ ಎರಡೂ ಬದಿ ಒಬ್ಬೊಬ್ಬ ಅಪರಾಧಿಯನ್ನು ಕಂಬಕ್ಕೇರಿಸಲಾಗಿತ್ತು. ಈ ಮೂವರ ಎಲುಬುಗಳನ್ನೂ ಮುರಿಯುವಂತೆ ಯೆಹೂದ್ಯರು ಪಿಲಾತನನ್ನು ಕೇಳಿಕೊಂಡರು. ಮರುದಿನ ನೈಸಾನ್ 15 ಆಗಿದ್ದು ಅದೊಂದು ಜೋಡಿ-ಸಬ್ಬತ್ ದಿನವಾಗಿತ್ತು. ಆ ದಿನದಂದು ಶವಗಳು ಕಂಬದ ಮೇಲೆ ನೇತಾಡಿಕೊಂಡು ಇರಬಾರದಿತ್ತು. ಆದ್ದರಿಂದ ಅವರು ಬೇಗ ಸತ್ತುಹೋಗುವಂತೆ ಅವರ ಎಲುಬುಗಳನ್ನು ಮುರಿಯುವಂತೆ ಕೇಳಿಕೊಂಡರು. ಸೈನಿಕರು ಬಂದು ಆ ಇಬ್ಬರು ದುಷ್ಕರ್ಮಿಗಳ ಕಾಲು ಮುರಿದರು. “ಆದರೆ ಯೇಸುವಿನ ಬಳಿಗೆ ಬಂದಾಗ ಅವನು ಈಗಾಗಲೇ ಸತ್ತಿರುವುದನ್ನು ನೋಡಿ ಅವರು ಅವನ ಕಾಲುಗಳನ್ನು ಮುರಿಯಲಿಲ್ಲ.” (ಯೋಹಾ. 19:31-34) ಇದು ಪಸ್ಕದ ಕುರಿಯ ಎಲುಬುಗಳನ್ನು ಮುರಿಯದೇ ಇದ್ದ ಸಂಗತಿಗೆ ಹೋಲುತ್ತಿತ್ತು. ಈ ಅರ್ಥದಲ್ಲಿ ಪಸ್ಕದ ಕುರಿ ಕ್ರಿ.ಶ. 33ರ ನೈಸಾನ್ 14ರಂದು ನಡೆಯಲಿದ್ದ ಸಂಗತಿಯ “ಛಾಯೆ” ಆಗಿತ್ತು. (ಇಬ್ರಿ. 10:1) ಅಷ್ಟುಮಾತ್ರವಲ್ಲ ಇದು ಕೀರ್ತನೆ 34:20ರ ಮಾತುಗಳನ್ನೂ ನೆರವೇರಿಸಿತು. ಇದು ಪ್ರವಾದನೆಗಳಲ್ಲಿ ನಮ್ಮ ಭರವಸೆಯನ್ನು ಹೆಚ್ಚಿಸಬೇಕು.
20. ಪಸ್ಕ ಮತ್ತು ಕರ್ತನ ಸಂಧ್ಯಾ ಭೋಜನದ ನಡುವೆ ಯಾವ ಗಮನಾರ್ಹ ವ್ಯತ್ಯಾಸವಿದೆ?
20 ಆದರೆ ಪಸ್ಕಕ್ಕೂ ಕರ್ತನ ಸಂಧ್ಯಾ ಭೋಜನಕ್ಕೂ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳು ಯೆಹೂದ್ಯರು ಮಾಡುತ್ತಿದ್ದ ಪಸ್ಕವು, ಕ್ರಿಸ್ತನು ತನ್ನ ಮರಣದ ಸ್ಮರಣೆಯಲ್ಲಿ ಮಾಡುವಂತೆ ಹೇಳಿದ ಸಂಗತಿಗಳ ಮುನ್‌ಛಾಯೆ ಅಲ್ಲವೆಂದು ತೋರಿಸುತ್ತವೆ. ಹಿಂದೆ ಐಗುಪ್ತದಲ್ಲಿ ಇಸ್ರಾಯೇಲ್ಯರು ಪಸ್ಕದ ಕುರಿಮಾಂಸವನ್ನು ಸೇವಿಸಿದರು ಆದರೆ ರಕ್ತವನ್ನು ಸೇವಿಸಲಿಲ್ಲ. ಇದು ಯೇಸು ಕೊಟ್ಟ ನಿರ್ದೇಶನಕ್ಕಿಂತ ಭಿನ್ನವಾಗಿದೆ. “ದೇವರ ರಾಜ್ಯದಲ್ಲಿ” ಆಳುವವರು ತನ್ನ ಮಾಂಸ ಹಾಗೂ ರಕ್ತದ ಕುರುಹುಗಳಾಗಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ಎರಡನ್ನೂ ಸೇವಿಸಬೇಕೆಂದು ಆತನು ಹೇಳಿದನು. ಈ ವಿಷಯವನ್ನು ಮುಂದಿನ ಲೇಖನದಲ್ಲಿ ಇನ್ನಷ್ಟು ಸವಿವರವಾಗಿ ಚರ್ಚಿಸಲಿದ್ದೇವೆ.—ಮಾರ್ಕ 14:22-25.
21. ಪಸ್ಕದ ಕುರಿತು ತಿಳಿದುಕೊಳ್ಳುವುದು ಏಕೆ ಉಪಯುಕ್ತ?
21 ಹೀಗಿದ್ದರೂ, ಪಸ್ಕವು ದೇವಜನರ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆ ಆಗಿತ್ತು ಎಂಬದು ನಿಸ್ಸಂಶಯ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಅದರಿಂದ ಉಪಯುಕ್ತ ಪಾಠಗಳಿವೆ. ಹಾಗಾಗಿ ಯೆಹೂದ್ಯರು ‘ಜ್ಞಾಪಕಾರ್ಥವಾಗಿ’ ಮಾಡಬೇಕಾದ ಪಸ್ಕವನ್ನು ಕ್ರೈಸ್ತರಾದ ನಾವು ಆಚರಿಸಬೇಕಾಗಿಲ್ಲದಿದ್ದರೂ ಅದರ ಬಗ್ಗೆ ನಮಗೆ ತಿಳಿದಿರಬೇಕು. ‘ದೇವರಿಂದ ಪ್ರೇರಿತವಾದ ಇಡೀ ಶಾಸ್ತ್ರಗ್ರಂಥದ’ ಭಾಗವಾಗಿರುವ ಪಸ್ಕದಿಂದ ಸಿಗುವ ಅಮೂಲ್ಯ ಪಾಠಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು.—2 ತಿಮೊ. 3:16.
^ ಪ್ಯಾರ. 5 ನೈಸಾನ್ ಎಂಬದು ಬಾಬೆಲಿಗೆ ಗಡೀಪಾರಾದ ಯೆಹೂದ್ಯರು ಹಿಂತೆರಳಿದ ನಂತರ ಬಂದ ಹೆಸರು. ಆದರೆ ಈ ಲೇಖನದಲ್ಲಿ ಯೆಹೂದ್ಯರ ಹೀಬ್ರು ಕ್ಯಾಲೆಂಡರ್‌ನ ಪ್ರಥಮ ತಿಂಗಳನ್ನು ನೈಸಾನ್ ಎಂದೇ ಕರೆಯುವೆವು.
^ ಪ್ಯಾರ. 11 ಸೂರ್ಯಾಸ್ತವಾದಾಗ ನೈಸಾನ್ 15 ಆರಂಭವಾಯಿತು. ಇದರಿಂದಾಗಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ಮೊದಲನೇ ದಿನ ಮತ್ತು ಪ್ರತಿ ವಾರದ ಸಬ್ಬತ್ ದಿನ (ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆ ವರೆಗೆ) ಆ ವರ್ಷ ಒಂದೇ ದಿನದಲ್ಲಿ ಬಿತ್ತು. ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ಮೊದಲ ದಿನ ವಾರದ ಯಾವುದೇ ದಿನ ಬರಲಿ ಅದನ್ನು ಸಬ್ಬತ್ ಎಂದು ಪರಿಗಣಿಸಲಾಗುತ್ತಿತ್ತು. ಹೀಗೆ ಎರಡೂ ಸಬ್ಬತ್‌ಗಳು ಒಂದೇ ದಿನ ನಡೆದದ್ದರಿಂದ ಅದು “ವಿಶೇಷ” ಸಬ್ಬತ್ ಆಯಿತು.—ಯೋಹಾನ 19:31, 42 ಓದಿ.