ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡಿರಿ’

‘ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡಿರಿ’

“ದೇವರಿಗೆ ಕೃತಜ್ಞತೆ ಸಲ್ಲಿಸಿ [ರೊಟ್ಟಿ] ಮುರಿದು, ‘ಇದು ನಿಮಗೋಸ್ಕರವಾಗಿರುವ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ’ ಎಂದು ಹೇಳಿದನು.”​—1 ಕೊರಿಂ. 11:24.

1, 2. ಯೆರೂಸಲೇಮಿಗೆ ಯೇಸುವಿನ ಕೊನೆ ಪಯಣದ ಸಮಯದ ಬಗ್ಗೆ ಅಪೊಸ್ತಲರು ಏನು ಯೋಚಿಸಿರಬಹುದು?

‘ಮೋಡಗಳು ಮರೆಯಾಗಿವೆ. ಕೋಡು ಚಂದ್ರ ಕಾಣಿಸುತ್ತಿದೆ. ಕಳೆದ ಸಂಜೆ ಯೆರೂಸಲೇಮಿನ ಕಾವಲುಗಾರರೂ ಇದನ್ನು ನೋಡಿರಬಹುದು. ಚಂದ್ರ ಕಾಣಿಸುತ್ತಿರುವ ವಿಷಯ ಹಿರೀ ಸಭೆಗೆ ಗೊತ್ತಾದ ಕೂಡಲೇ ನೈಸಾನ್‌ ತಿಂಗಳು ಆರಂಭವಾಯಿತೆಂದು ಘೋಷಿಸಿದರು. ಈ ಸುದ್ದಿಯನ್ನು ಜನರಿಗೆ ಮುಟ್ಟಿಸಲು ಬೆಂಕಿ ಹೊತ್ತಿಸಿ ಸನ್ನೆಕೊಡಲಾಯಿತು, ಕೆಲವೆಡೆ ಓಲೆಕಾರರು ಸುದ್ದಿ ತಲುಪಿಸಿದರು. ಇಲ್ಲಿಗೂ ಬಂದು ಮುಟ್ಟಿದರು. ಪಸ್ಕ ಶುರುವಾಗುವುದಕ್ಕಿಂತ ಮುಂಚೆಯೇ ಯೆರೂಸಲೇಮನ್ನು ತಲುಪಲು ಯೇಸು ಈಗ ಖಂಡಿತ ಹೊರಡುವನು.’

2 ಇಂಥ ಯೋಚನೆಗಳು ಯೊರ್ದನ್‌ ಆಚೆ ಪೆರಿಯದಲ್ಲಿ ಯೇಸುವಿನೊಂದಿಗಿದ್ದ ಕೆಲವರ ಮನಸ್ಸಲ್ಲಿ ಮೂಡಿರಬಹುದು. ಇದು ಯೆರೂಸಲೇಮಿಗೆ ಯೇಸುವಿನ ಕೊನೆ ಪಯಣವಾಗಿರಲಿತ್ತು. (ಮತ್ತಾ. 19:1; 20:17, 29; ಮಾರ್ಕ 10:1, 32, 46) ನೈಸಾನ್‌ ತಿಂಗಳ ಮೊದಲ ದಿನ ಯಾವುದೆಂದು ತಿಳಿದುಬಂದಾಗ ಯೆಹೂದ್ಯರು ನೈಸಾನ್‌ 1ರಿಂದ ಹಿಡಿದು ಸರಿಯಾಗಿ 13 ದಿನಗಳ ನಂತರ ಅಂದರೆ ನೈಸಾನ್‌ 14ರಂದು ಸೂರ್ಯಾಸ್ತದ ನಂತರ ಪಸ್ಕವನ್ನು ಆಚರಿಸುತ್ತಿದ್ದರು.

3. ಪಸ್ಕದ ತಾರೀಕಿನ ಬಗ್ಗೆ ಕ್ರೈಸ್ತರಿಗಿರುವ ಆಸಕ್ತಿ ಸೂಕ್ತವೇಕೆ?

3 ಪಸ್ಕ ಮತ್ತು ಕರ್ತನ ಸಂಧ್ಯಾ ಭೋಜನದ ದಿನ ಒಂದೇ. 2014ರಲ್ಲಿ ಈ ದಿನ ಏಪ್ರಿಲ್‌ 14 ಸೂರ್ಯಾಸ್ತದ ನಂತರ ಆರಂಭವಾಗುತ್ತದೆ. ನಿಜ ಕ್ರೈಸ್ತರಿಗೆ ಮತ್ತು ಆಸಕ್ತ ಜನರಿಗೆ ಈ ದಿನ ವಿಶೇಷವಾದದ್ದು. ಏಕೆ? 1 ಕೊರಿಂಥ 11:23-25ರಲ್ಲಿ ತಿಳಿಸಲಾಗಿರುವ ಈ ಕಾರಣಕ್ಕಾಗಿ: “ಯೇಸು ತಾನು ಹಿಡಿದುಕೊಡಲ್ಪಡಲಿಕ್ಕಿದ್ದ ರಾತ್ರಿಯಂದು ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆ ಸಲ್ಲಿಸಿ ಮುರಿದು, ‘ಇದು ನಿಮಗೋಸ್ಕರವಾಗಿರುವ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ’ ಎಂದು ಹೇಳಿದನು.” ಅವನು ಪಾತ್ರೆಯನ್ನು ತೆಗೆದುಕೊಂಡು ಅದೇ ರೀತಿಯಾಗಿ ಮಾಡಿದನು.

4. (1) ಸ್ಮರಣೆಯ ದಿನದ ವಿಷಯವಾಗಿ ಯಾವ ಪ್ರಶ್ನೆಗಳು ಏಳಬಹುದು? (2) ಸ್ಮರಣೆಯ ದಿನದ ತಾರೀಕನ್ನು ಪ್ರತಿ ವರ್ಷ ಹೇಗೆ ನಿಗದಿಪಡಿಸಲಾಗುತ್ತದೆ? ( “2014ರ ಸ್ಮರಣೆಯ ದಿನ” ಚೌಕ ನೋಡಿ.)

4 ಪ್ರತಿ ವರ್ಷ ಆಚರಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದ ಈ ಸಂದರ್ಭದಲ್ಲಿ ನೀವು ಹಾಜರಿರುವಿರಿ ಎನ್ನುವುದರಲ್ಲಿ ಸಂಶಯವಿಲ್ಲ. ಅದಕ್ಕಿಂತ ಮುಂಚೆ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಆ ಸಂಜೆಗಾಗಿ ನಾನು ಹೇಗೆ ತಯಾರಾಗಬೇಕು? ಆ ಸಂದರ್ಭಕ್ಕಾಗಿ ನಿರ್ದಿಷ್ಟವಾಗಿ ಏನನ್ನು ಬಳಸಲಾಗುವುದು? ಅಲ್ಲಿ ಯಾವ ಕ್ರಮವನ್ನು ಅನುಸರಿಸಲಾಗುವುದು? ಆ ಸಂದರ್ಭ ಮತ್ತು ಅಲ್ಲಿ ಬಳಸಲಾಗುವ ಕುರುಹುಗಳು ನನಗೇಕೆ ಮಹತ್ವದ್ದಾಗಿವೆ?’

ಕುರುಹುಗಳು

5. ಯೇಸು ತನ್ನ ಅಪೊಸ್ತಲರೊಂದಿಗಿನ ಕೊನೆ ಪಸ್ಕಕ್ಕಾಗಿ ಯಾವ ಸಿದ್ಧತೆಗಳನ್ನು ಮಾಡಿಸಿದನು?

5 ಪಸ್ಕದೂಟಕ್ಕಾಗಿ ಕೋಣೆಯನ್ನು ಸಿದ್ಧಪಡಿಸಲು ಯೇಸು ಅಪೊಸ್ತಲರಿಗೆ ಹೇಳಿದಾಗ ಅದನ್ನು ಆಡಂಬರವಾಗಿ ಅಲಂಕರಿಸಬೇಕೆಂದು ಹೇಳಲಿಲ್ಲ. ಬದಲಿಗೆ ಅದು ಸೂಕ್ತವಾದ, ಶುಚಿಯಾದ ಮತ್ತು ಕೂಡಿಬರುವವರಿಗೆ ಸಾಕಷ್ಟು ಸ್ಥಳವಿರುವ ಕೋಣೆ ಆಗಿರುವಂತೆ ಬಯಸಿರಬೇಕು. (ಮಾರ್ಕ 14:12-16 ಓದಿ.) ಆ ಅಪೊಸ್ತಲರು ಪಸ್ಕದೂಟಕ್ಕೆ ಬೇಕಾದ ಎಲ್ಲದರೊಂದಿಗೆ ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯವನ್ನು ಸಹ ಸಿದ್ಧಗೊಳಿಸಿದರು. ಪಸ್ಕದ ಊಟ ಮುಗಿದ ನಂತರ ಆ ಕುರುಹುಗಳ ಕಡೆಗೆ ಯೇಸು ಗಮನ ಹರಿಸಿದನು.

6. (1) ಪಸ್ಕದೂಟದ ನಂತರ ಯೇಸು ರೊಟ್ಟಿಯ ಬಗ್ಗೆ ಏನು ಹೇಳಿದನು? (2) ಸ್ಮರಣೆಯ ದಿನದಂದು ಯಾವ ರೀತಿಯ ರೊಟ್ಟಿಯನ್ನು ಬಳಸಬೇಕು?

6 ಆ ಸಂದರ್ಭದಲ್ಲಿ ಹಾಜರಿದ್ದ ಅಪೊಸ್ತಲ ಮತ್ತಾಯ ಸಮಯಾನಂತರ ಹೀಗೆ ಬರೆದನು: “ಯೇಸು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅದನ್ನು ಮುರಿದು [ಶಿಷ್ಯರಿಗೆ] ಕೊಡುತ್ತಾ, ‘ತೆಗೆದುಕೊಳ್ಳಿರಿ, ತಿನ್ನಿರಿ. ಇದು ನನ್ನ ದೇಹವನ್ನು ಸೂಚಿಸುತ್ತದೆ’ ಎಂದು ಹೇಳಿದನು.” (ಮತ್ತಾ. 26:26) ಈ ರೊಟ್ಟಿಯು ಪಸ್ಕಕ್ಕಾಗಿ ಬಳಸಲಾಗುತ್ತಿದ್ದ “ಹುಳಿಯಿಲ್ಲದ” ರೊಟ್ಟಿಯಾಗಿತ್ತು. (ವಿಮೋ. 12:8; ಧರ್ಮೋ. 16:3) ಅದನ್ನು ಗೋದಿಹಿಟ್ಟು ಮತ್ತು ನೀರು ಬೆರೆಸಿ ಮಾಡಲಾಗುತ್ತಿತ್ತು. ಹುಳಿ ಬರಿಸುವ ಅಥವಾ ರುಚಿ ಕಟ್ಟುವ ಯಾವುದನ್ನೂ, ಉಪ್ಪನ್ನು ಸಹ ಬೆರೆಸಲಾಗುತ್ತಿರಲಿಲ್ಲ. ಅದು ಹುಳಿಬೆರೆಸದ ಹಿಟ್ಟಾಗಿದ್ದದರಿಂದ ಉಬ್ಬುತ್ತಿರಲಿಲ್ಲ. ರೊಟ್ಟಿಯು ಸಾದಾ, ಒಣಗಿದ್ದು, ತೆಳ್ಳನೆಯದ್ದಾಗಿದ್ದು ಸುಲಭವಾಗಿ ಮುರಿಯಲಾಗುತ್ತಿತ್ತು. ಇಂದು ಸಹ ಸ್ಮರಣೆಯ ದಿನಕ್ಕೆ ಮುಂಚೆ ಸಭಾಹಿರಿಯರು ಯಾರಾದರೊಬ್ಬರಿಗೆ ರೊಟ್ಟಿಯನ್ನು ತಯಾರಿಸಲು ಹೇಳಬಹುದು. ಅದನ್ನು ಗೋದಿಹಿಟ್ಟು ನೀರು ಬೆರೆಸಿ ತವೆಗೆ ಸ್ವಲ್ಪ ಎಣ್ಣೆ ಹಚ್ಚಿ ಸುಡಬೇಕು. (ಗೋದಿ ಹಿಟ್ಟು ಸಿಗದೆ ಇರುವಲ್ಲಿ ರೊಟ್ಟಿಯನ್ನು ಅಕ್ಕಿ, ಜವೆಗೋದಿ, ಜೋಳ ಅಥವಾ ಬೇರೆ ಧಾನ್ಯದ ಹಿಟ್ಟಿನಿಂದ ತಯಾರಿಸಬಹುದು.)

7. (1) ಯೇಸು ಯಾವ ರೀತಿಯ ದ್ರಾಕ್ಷಾಮದ್ಯದ ಬಗ್ಗೆ ಮಾತಾಡಿದನು? (2) ಇಂದು ಸ್ಮರಣೆಯ ದಿನದಂದು ಯಾವ ರೀತಿಯ ದ್ರಾಕ್ಷಾಮದ್ಯವನ್ನು ಬಳಸಬೇಕು?

7 ಮತ್ತಾಯನು ಮುಂದುವರಿಸಿ ಬರೆದದ್ದು: “[ಯೇಸು] ಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತೆ ಸಲ್ಲಿಸಿ ಅದನ್ನು ಅವರಿಗೆ ಕೊಡುತ್ತಾ, ‘ನೀವೆಲ್ಲರೂ ಇದರಲ್ಲಿರುವುದನ್ನು ಕುಡಿಯಿರಿ’” ಎಂದು ಹೇಳಿದನು. (ಮತ್ತಾ. 26:27, 28) ಯೇಸುವಿನ ಕೈಯಲ್ಲಿದ್ದ ಪಾತ್ರೆಯಲ್ಲಿ ಕೆಂಪು ದ್ರಾಕ್ಷಾಮದ್ಯವಿತ್ತು. (ತಾಜಾ ದ್ರಾಕ್ಷಾರಸ ಅಲ್ಲ ಏಕೆಂದರೆ ಆ ಸಮಯದಷ್ಟಕ್ಕೆ ದ್ರಾಕ್ಷೆ ಹಣ್ಣಿನ ಕಟಾವು ಮುಗಿದು ತುಂಬ ಸಮಯ ಕಳೆದಿತ್ತು.) ಐಗುಪ್ತದಲ್ಲಿ ಮಾಡಲಾದ ಪ್ರಥಮ ಪಸ್ಕದೂಟದಲ್ಲಿ ದ್ರಾಕ್ಷಾಮದ್ಯ ಇರಲಿಲ್ಲ. ಆದರೆ ಯೇಸುವಿನ ಸಮಯದಷ್ಟಕ್ಕೆ ಅದು ರೂಢಿಯಲ್ಲಿತ್ತು ಮತ್ತು ಅದನ್ನು ಬಳಸುವ ವಿಷಯದಲ್ಲಿ ಆತನು ಆಕ್ಷೇಪಿಸಲಿಲ್ಲ. ಕರ್ತನ ಸಂಧ್ಯಾ ಭೋಜನಕ್ಕಾಗಿಯೂ ಅದನ್ನು ಬಳಸಿದನು. ಆದ್ದರಿಂದ ಇಂದು ಸ್ಮರಣೆಯ ದಿನದಂದು ಕ್ರೈಸ್ತರು ದ್ರಾಕ್ಷಾಮದ್ಯವನ್ನು ಇಡುತ್ತಾರೆ. ಯೇಸುವಿನ ರಕ್ತದ ಮೌಲ್ಯವನ್ನು ಹೆಚ್ಚಿಸುವ ಅಗತ್ಯವಿಲ್ಲ, ಹಾಗಾಗಿ ರುಚಿ ಅಥವಾ ಗುಣಮಟ್ಟವನ್ನು ಹೆಚ್ಚಿಸಲೆಂದು ಬ್ರಾಂಡಿ ಇಲ್ಲವೆ ಬೇರೆ ಮಸಾಲೆ ಪದಾರ್ಥಗಳು ಬೆರೆಸಿರುವ ದ್ರಾಕ್ಷಾಮದ್ಯವನ್ನು ಬಳಸಲಾಗುವುದಿಲ್ಲ. ಮನೆಯಲ್ಲೇ ಮಾಡಿದ ಸಾದಾ ಕೆಂಪು ದ್ರಾಕ್ಷಾಮದ್ಯ ಅಥವಾ ಅಂಗಡಿಗಳಲ್ಲಿ ಸಿಗುವ ಬೋಷಲೆ, ಬರ್ಗಂಡಿ ಅಥವಾ ಕೀಯಾಂಟಿ ದ್ರಾಕ್ಷಾಮದ್ಯವನ್ನು ಬಳಸಬಹುದು.

ಅರ್ಥಭರಿತ ಕುರುಹುಗಳು

8. ರೊಟ್ಟಿ ಮತ್ತು ದ್ರಾಕ್ಷಾಮದ್ಯ ಏನನ್ನು ಸೂಚಿಸುತ್ತದೊ ಅದರಲ್ಲಿ ಕ್ರೈಸ್ತರಿಗೆ ಏಕೆ ಆಸಕ್ತರಾಗಿದ್ದಾರೆ?

8 ಅಪೊಸ್ತಲರಲ್ಲದೆ ಬೇರೆ ಕ್ರೈಸ್ತರೂ ಕರ್ತನ ಸಂಧ್ಯಾ ಭೋಜನವನ್ನು ಆಚರಿಸಬೇಕೆಂದು ಅಪೊಸ್ತಲ ಪೌಲನು ಸ್ಪಷ್ಟಪಡಿಸಿದನು. ಕೊರಿಂಥದ ಜೊತೆ ಕ್ರೈಸ್ತರಿಗೆ ಅವನು ಬರೆದದ್ದು: “ನಾನು ಕರ್ತನಿಂದ ಹೊಂದಿದ್ದನ್ನು ನಿಮ್ಮ ವಶಕ್ಕೂ ಒಪ್ಪಿಸಿದ್ದೇನೆ; ಕರ್ತನಾದ ಯೇಸು . . . ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತೆ ಸಲ್ಲಿಸಿ ಮುರಿದು, ‘ಇದು ನಿಮಗೋಸ್ಕರವಾಗಿರುವ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ’ ಎಂದು ಹೇಳಿದನು.” (1 ಕೊರಿಂ. 11:23, 24) ಈ ಕಾರಣಕ್ಕಾಗಿಯೇ ಕ್ರೈಸ್ತರು ಇಂದಿನವರೆಗೂ ಈ ವಿಶೇಷ ಆಚರಣೆಯನ್ನು ಪ್ರತಿ ವರ್ಷ ಮಾಡುತ್ತಾರೆ ಮತ್ತು ರೊಟ್ಟಿ, ದ್ರಾಕ್ಷಾಮದ್ಯ ಏನನ್ನು ಸೂಚಿಸುತ್ತವೊ ಅದರಲ್ಲಿ ಆಸಕ್ತರಾಗಿದ್ದಾರೆ.

9. ಯೇಸು ಬಳಸಿದ ರೊಟ್ಟಿಯ ಬಗ್ಗೆ ಕೆಲವರಿಗೆ ಯಾವ ತಪ್ಪು ನೋಟವಿದೆ?

9 ಈ ಸಂದರ್ಭದಲ್ಲಿ ಯೇಸು ‘ಇದು ನನ್ನ ದೇಹ’ ಎಂದು ಅಕ್ಷರಾರ್ಥವಾಗಿ ಹೇಳಿದನೆಂದು ಚರ್ಚ್‌ಗೆ ಹೋಗುವವರಲ್ಲಿ ಕೆಲವರು ಅನ್ನುತ್ತಾರೆ. ಆದ್ದರಿಂದ ರೊಟ್ಟಿಯು ಅದ್ಭುತಕರವಾಗಿ ಯೇಸುವಿನ ದೇಹವಾಗಿ ಮಾರ್ಪಟ್ಟಿತೆಂಬುದು ಅವರ ನಂಬಿಕೆ. ಆದರೆ ಇದು ನಿಜಾಂಶವಲ್ಲ. * ಯೇಸುವಿನ ದೇಹ ಆತನ ನಂಬಿಗಸ್ತ ಅಪೊಸ್ತಲರ ಕಣ್ಮುಂದೆಯೇ ಇತ್ತು. ಜೊತೆಗೆ ಅವರು ಸೇವಿಸಲಿದ್ದ ಹುಳಿಯಿಲ್ಲದ ರೊಟ್ಟಿಯೂ ಅಲ್ಲೇ ಇತ್ತು. ಯೇಸು ಎಷ್ಟೋ ಸಂದರ್ಭಗಳಲ್ಲಿ ಸಾಂಕೇತಿಕ ಅರ್ಥದಲ್ಲಿ ಮಾತಾಡಿದಂತೇ ಈ ಸಂದರ್ಭದಲ್ಲೂ ಮಾತಾಡುತ್ತಿದ್ದನು.​—ಯೋಹಾ. 2:19-21; 4:13, 14; 10:7; 15:1.

10. ಕರ್ತನ ಸಂಧ್ಯಾ ಭೋಜನದಲ್ಲಿ ಬಳಸಲಾಗುವ ರೊಟ್ಟಿ ಏನನ್ನು ಪ್ರತಿನಿಧಿಸುತ್ತದೆ?

10 ಅಪೊಸ್ತಲರ ಕಣ್ಮುಂದೆ ಇದ್ದ ಮತ್ತು ಸ್ವಲ್ಪ ಸಮಯದಲ್ಲೇ ಸೇವಿಸಲಿದ್ದ ರೊಟ್ಟಿಯು ಯೇಸುವಿನ ದೇಹವನ್ನು ಸೂಚಿಸಿತು. ಯಾವ ದೇಹ? ಒಂದೊಮ್ಮೆ ದೇವರ ಸೇವಕರು “ಕ್ರಿಸ್ತನ ದೇಹ” ಅಂದರೆ ಅಭಿಷಿಕ್ತ ಕ್ರೈಸ್ತರ ಸಭೆ ಎಂದು ಅರ್ಥಮಾಡಿಕೊಂಡಿದ್ದರು. ಯೇಸು ಸಂಧ್ಯಾ ಭೋಜನದಲ್ಲಿ ರೊಟ್ಟಿ ಮುರಿದಿದ್ದನು ಆದರೆ ಅವನ ಮರಣದ ಸಮಯದಲ್ಲಿ ಎಲುಬುಗಳು ಮುರಿಯಲ್ಪಟ್ಟಿರದಿದ್ದ ಕಾರಣ ಅವರು ಹಾಗೆ ಎಣಿಸಿದ್ದರು. (ಎಫೆ. 4:12; ರೋಮ. 12:4, 5; 1 ಕೊರಿಂ. 10:16, 17; 12:27) ಆದರೆ ಸಮಯಾನಂತರ ತರ್ಕಬದ್ಧವಾಗಿ ಯೋಚಿಸಿ, ಬೈಬಲ್‌ನಿಂದ ಅವರು ಕಂಡುಕೊಂಡದ್ದೇನೆಂದರೆ ರೊಟ್ಟಿಯು ಯೇಸುವಿನ ಮಾನವ ದೇಹವನ್ನು ಸೂಚಿಸುತ್ತದೆ. ಅವನು “ಶರೀರದಲ್ಲಿ ಬಾಧೆಪಟ್ಟನು.” ಅವನನ್ನು ಯಾತನಾ ಕಂಬಕ್ಕೂ ಜಡಿಯಲಾಯಿತು. ಆದ್ದರಿಂದ ಕರ್ತನ ಸಂಧ್ಯಾ ಭೋಜನದಲ್ಲಿ ಬಳಸಲಾಗುವ ರೊಟ್ಟಿ ನಮ್ಮ ‘ಪಾಪಗಳನ್ನು ಹೊತ್ತುಕೊಂಡ’ ಯೇಸುವಿನ ಭೌತಿಕ ದೇಹವನ್ನು ಸೂಚಿಸುತ್ತದೆ.​—1 ಪೇತ್ರ 2:21-24; 4:1; ಯೋಹಾ. 19:33-36; ಇಬ್ರಿ. 10:5-7.

11, 12. (1) ದ್ರಾಕ್ಷಾಮದ್ಯದ ಬಗ್ಗೆ ಯೇಸು ಏನು ಹೇಳಿದನು? (2) ಕರ್ತನ ಸಂಧ್ಯಾ ಭೋಜನದಲ್ಲಿ ಬಳಸಲಾಗುವ ದ್ರಾಕ್ಷಾಮದ್ಯ ಏನನ್ನು ಸೂಚಿಸುತ್ತದೆ?

11 ಇದು ಯೇಸು ದ್ರಾಕ್ಷಾಮದ್ಯದ ಬಗ್ಗೆ ಮುಂದಕ್ಕೆ ಏನು ಹೇಳಿದನೊ ಅದನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ವಚನವು ಹೀಗನ್ನುತ್ತದೆ: “ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, ‘ಈ ಪಾತ್ರೆಯು ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ’ . . . ಎಂದು ಹೇಳಿದನು.” (1 ಕೊರಿಂ. 11:25) ಅನೇಕ ಬೈಬಲ್‌ಗಳಲ್ಲಿ ರಾಬರ್ಟ್‌ ಯಂಗ್‌ರವರ ಅಕ್ಷರಾರ್ಥ ಭಾಷಾಂತರದಲ್ಲಿರುವ ಈ ಮಾತುಗಳಿವೆ: “ಈ ಪಾತ್ರೆಯು ನನ್ನ ರಕ್ತದಲ್ಲಿರುವ ಹೊಸ ಒಡಂಬಡಿಕೆ ಆಗಿದೆ.” ಯೇಸು ಕೈಯಲ್ಲಿ ಹಿಡಿದಿದ್ದ ಪಾತ್ರೆಯೇ ಹೊಸ ಒಡಂಬಡಿಕೆ ಆಗಿತ್ತಾ? ಇಲ್ಲ. “ಪಾತ್ರೆ” ಎಂಬ ಪದ ಅದರೊಳಗಿದ್ದ ದ್ರಾಕ್ಷಾಮದ್ಯವನ್ನು ಸೂಚಿಸುತ್ತಿತ್ತು. ದ್ರಾಕ್ಷಾಮದ್ಯ ಏನು ಸೂಚಿಸುತ್ತದೆ ಎಂದು ಯೇಸು ಹೇಳಿದನು? ಸುರಿಸಲ್ಪಡಲಿದ್ದ ಆತನ ರಕ್ತವನ್ನು.

12 “ಇದು ಅನೇಕರಿಗೋಸ್ಕರ ಸುರಿಸಲ್ಪಡಲಿರುವ ನನ್ನ ‘ಒಡಂಬಡಿಕೆಯ ರಕ್ತವನ್ನು’ ಸೂಚಿಸುತ್ತದೆ” ಎಂದು ಯೇಸು ಹೇಳಿದ ಮಾತು ಮಾರ್ಕನ ಸುವಾರ್ತೆಯಲ್ಲಿದೆ. (ಮಾರ್ಕ 14:24) ಹೌದು, ಯೇಸುವಿನ ರಕ್ತ ‘ಪಾಪಗಳ ಕ್ಷಮಾಪಣೆಗಾಗಿ ಅನೇಕರಿಗೋಸ್ಕರ ಸುರಿಸಲ್ಪಡಲಿಕ್ಕಿತ್ತು.’ (ಮತ್ತಾ. 26:28) ಹಾಗಾಗಿ ಕೆಂಪು ದ್ರಾಕ್ಷಾಮದ್ಯ ಸೂಕ್ತವಾಗಿಯೇ ಯೇಸುವಿನ ರಕ್ತವನ್ನು ಸೂಚಿಸುತ್ತದೆ. ಆ ರಕ್ತ ನಮಗೆ ವಿಮೋಚನಾ ಮೌಲ್ಯವನ್ನು ಒದಗಿಸುತ್ತದೆ ಮತ್ತು ಇದರಿಂದ ನಮ್ಮ ‘ಅಪರಾಧಗಳು ಕ್ಷಮಿಸಲ್ಪಡುವವು.’​—ಎಫೆಸ 1:7 ಓದಿ.

ಕ್ರಿಸ್ತನ ಮರಣವನ್ನು ಸ್ಮರಿಸುವುದು

13. ಕ್ರಿಸ್ತನ ಮರಣದ ವಾರ್ಷಿಕ ಸ್ಮರಣೆಯನ್ನು ಹೇಗೆ ಮಾಡಲಾಗುತ್ತದೆಂದು ವರ್ಣಿಸಿ.

13 ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಪ್ರಥಮ ಬಾರಿಗೆ ನೀವು ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗಲಿದ್ದೀರಾ? ಹಾಗಿದ್ದರೆ ಅಲ್ಲಿ ಏನು ನಡೆಯಲಿದೆಯೆಂದು ತಿಳಿಯಲಿಚ್ಛಿಸುತ್ತೀರಾ? ಹೆಚ್ಚಾಗಿ ಈ ಕೂಟವು ಆಕರ್ಷಕವಾದ, ಸ್ವಚ್ಛವಾದ ಮತ್ತು ಎಲ್ಲರೂ ಆರಾಮವಾಗಿ ಕೂತು ಕೇಳುವಂತಹ ಸ್ಥಳದಲ್ಲಿ ನಡೆಯುತ್ತದೆ. ಬಹುಶಃ ಹೂವುಗಳಿಂದ ಸರಳವಾದ ಅಲಂಕಾರ ಮಾಡಲಾಗಿರುತ್ತದೆ. ಆದರೆ ಗಮನಭಂಗ ಮಾಡುವಂಥ ಜಗಮಗಿಸುವ ಅಲಂಕಾರ ವಸ್ತುಗಳಾಗಲಿ ಪಾರ್ಟಿಯಂಥ ವಾತಾವರಣವಾಗಲಿ ಅಲ್ಲಿರುವುದಿಲ್ಲ. ಅರ್ಹ ಹಿರಿಯನೊಬ್ಬನು ಈ ಆಚರಣೆಯ ಬಗ್ಗೆ ಬೈಬಲ್‌ ಏನು ಹೇಳುತ್ತದೊ ಅದನ್ನು ಘನಗಾಂಭೀರ್ಯದಿಂದ ಸ್ಪಷ್ಟವಾಗಿ ಒಂದು ಭಾಷಣದಲ್ಲಿ ತಿಳಿಸುವನು. ಕ್ರಿಸ್ತನು ನಮಗಾಗಿ ಏನು ಮಾಡಿದ್ದಾನೊ ಅದನ್ನು ಅಂದರೆ ನಾವು ಬದುಕಬೇಕೆಂದು ವಿಮೋಚನಾ ಮೌಲ್ಯವಾಗಿ ತನ್ನ ಜೀವವನ್ನು ಅರ್ಪಿಸಿದ್ದನ್ನು ಮಾನ್ಯಮಾಡುವಂತೆ ಭಾಷಣಕಾರ ಸಹಾಯ ಮಾಡುವನು.​—ರೋಮನ್ನರಿಗೆ 5:8-10 ಓದಿ.

14. ಸ್ಮರಣೆಯ ದಿನದ ಭಾಷಣದಲ್ಲಿ ಯಾವ ಎರಡು ನಿರೀಕ್ಷೆಗಳ ಬಗ್ಗೆ ಭಾಷಣಕಾರನು ವಿವರಿಸುವನು?

14 ಕ್ರೈಸ್ತರಿಗಾಗಿ ಇರುವ ಎರಡು ರೀತಿಯ ನಿರೀಕ್ಷೆಗಳ ಬಗ್ಗೆ ಬೈಬಲ್‌ ಮಾತಾಡುತ್ತದೆ. ಅದನ್ನೂ ಭಾಷಣಕಾರನು ವಿವರಿಸುವನು. ಒಂದು ನಿರೀಕ್ಷೆ, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳುವುದು. ಈ ನಿರೀಕ್ಷೆ ಕೆಲವೇ ಕ್ರೈಸ್ತರಿಗಿದೆ. ಇವರಲ್ಲಿ ಯೇಸುವಿನ ನಂಬಿಗಸ್ತ ಅಪೊಸ್ತಲರೂ ಸೇರಿದ್ದಾರೆ. (ಲೂಕ 12:32; 22:19, 20; ಪ್ರಕ. 14:1) ಇನ್ನೊಂದು ನಿರೀಕ್ಷೆ, ಇದೇ ಭೂಮಿಯಲ್ಲಿ ಪುನಃಸ್ಥಾಪಿತ ಪರದೈಸ್‌ನಲ್ಲಿ ಅನಂತಕಾಲಕ್ಕೂ ಬದುಕುವುದು. ಇಂದು ನಿಷ್ಠೆಯಿಂದ ದೇವರನ್ನು ಆರಾಧಿಸುತ್ತಿರುವ ಅನೇಕ ಕ್ರೈಸ್ತರಿಗೆ ಈ ನಿರೀಕ್ಷೆಯಿದೆ. ಭೂಮಿ ಪರದೈಸಾದಾಗ ಕ್ರೈಸ್ತರು ಎಷ್ಟೋ ಸಮಯದಿಂದ ಪ್ರಾರ್ಥಿಸಿರುವಂತೆ ಸ್ವರ್ಗದಲ್ಲಿ ಹೇಗೊ ಹಾಗೇ ಭೂಮಿಯಲ್ಲಿ ಸಹ ದೇವರ ಚಿತ್ತ ನೆರವೇರುವುದು. (ಮತ್ತಾ. 6:10) ಅಲ್ಲಿ ಅವರು ಎಂದೆಂದಿಗೂ ಆನಂದಿಸಲಿರುವ ಅದ್ಭುತಕರ ಪರಿಸ್ಥಿತಿಗಳ ಬಗ್ಗೆ ಬೈಬಲ್‌ ತಿಳಿಸುತ್ತದೆ.​—ಯೆಶಾ. 11:6-9; 35:5, 6; 65:21-23.

15, 16. ಕರ್ತನ ಸಂಧ್ಯಾ ಭೋಜನದ ಸಮಯದಲ್ಲಿ ರೊಟ್ಟಿಯನ್ನು ಹೇಗೆ ಬಳಸಲಾಗುತ್ತದೆ?

15 ಭಾಷಣಕಾರನು ಆ ಭಾಷಣದ ಕೊನೆಯ ಭಾಗದಲ್ಲಿ ಯೇಸು ತನ್ನ ಶಿಷ್ಯರಿಗೆ ಏನನ್ನು ಮಾಡಲು ಹೇಳಿದ್ದನೋ ಅದನ್ನು ಮಾಡುವ ಸಮಯ ಬಂದಿದೆ ಎಂದು ಹೇಳುವನು. ಈಗಾಗಲೇ ತಿಳಿಸಲಾದ ಎರಡು ಕುರುಹುಗಳನ್ನು ಅಂದರೆ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯವನ್ನು ಬಳಸಲಾಗುವುದು. ಈ ಕುರುಹುಗಳು ಭಾಷಣಕಾರನ ಹತ್ತಿರ ಮೇಜಿನ ಮೇಲೆ ಇರುವವು. ಯೇಸು ಈ ಆಚರಣೆಯನ್ನು ಆರಂಭಿಸಿದಾಗ ಏನು ಹೇಳಿದನು ಮತ್ತು ಮಾಡಿದನು ಎಂಬುದನ್ನು ತಿಳಿಸುವ ಬೈಬಲ್‌ ದಾಖಲೆಯ ಕಡೆಗೆ ಭಾಷಣಕಾರನು ಸಭಿಕರ ಗಮನ ಸೆಳೆಯುವನು. ಉದಾಹರಣೆಗೆ ಅವನು ಮತ್ತಾಯನ ವೃತ್ತಾಂತದಿಂದ ಈ ಭಾಗ ಓದಬಹುದು: “ಯೇಸು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಡುತ್ತಾ, ‘ತೆಗೆದುಕೊಳ್ಳಿರಿ, ತಿನ್ನಿರಿ. ಇದು ನನ್ನ ದೇಹವನ್ನು ಸೂಚಿಸುತ್ತದೆ’ ಎಂದು ಹೇಳಿದನು.” (ಮತ್ತಾ. 26:26) ಯೇಸು ತನ್ನ ಎರಡೂ ಬದಿಗಳಲ್ಲಿ ಕೂತುಕೊಂಡಿದ್ದ ಅಪೊಸ್ತಲರಿಗೆ ಹುಳಿಯಿಲ್ಲದ ರೊಟ್ಟಿಯನ್ನು ದಾಟಿಸಲಾಗುವಂತೆ ಅದನ್ನು ಮುರಿದನು. ಏಪ್ರಿಲ್‌ 14ರಂದು ನಡೆಯುವ ಕೂಟದಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನು ಕೆಲವು ಚೂರು ಮಾಡಿ ತಟ್ಟೆಗಳಲ್ಲಿ ಇಟ್ಟಿರುವುದನ್ನು ನೀವು ನೋಡುವಿರಿ.

16 ಎಲ್ಲರಿಗೂ ಸ್ವಲ್ಪ ಸಮಯದಲ್ಲೇ ರೊಟ್ಟಿ ದಾಟಿಸಲು ಸುಲಭವಾಗುವಂತೆ ಸಾಕಷ್ಟು ತಟ್ಟೆಗಳನ್ನು ಬಳಸಲಾಗುವುದು. ರೊಟ್ಟಿಯಿರುವ ತಟ್ಟೆಗಳನ್ನು ದಾಟಿಸುವ ಸಮಯದಲ್ಲಿ ಯಾವುದೇ ವಿಶೇಷ ವಿಧಿವಿಧಾನಗಳನ್ನು ಅನುಸರಿಸಲಾಗುವುದಿಲ್ಲ. ಆದರೆ ತಟ್ಟೆಗಳನ್ನು ದಾಟಿಸುವುದಕ್ಕೆ ಮುಂಚೆ ಚಿಕ್ಕ ಪ್ರಾರ್ಥನೆ ಮಾಡಲಾಗುವುದು. ಅನಂತರ ಈ ತಟ್ಟೆಗಳನ್ನು ಸಭಿಕರಿಗೆ ಕ್ರಮಬದ್ಧವಾಗಿ ದಾಟಿಸಲಾಗುವುದು. ಸ್ಥಳೀಯವಾಗಿ ಪ್ರಾಯೋಗಿಕವಾದ ರೀತಿಯಲ್ಲಿ ಇದನ್ನು ಮಾಡಲಾಗುವುದು. 2013ರಲ್ಲಿ ಈ ಆಚರಣೆಯಲ್ಲಿ ನಡೆದಂತೆ ಕೆಲವರು ಮಾತ್ರ ಈ ರೊಟ್ಟಿಯನ್ನು ಸೇವಿಸುವರು. ಕೆಲವು ಸಭೆಗಳಲ್ಲಿ ಯಾರೂ ಸೇವಿಸುವುದಿಲ್ಲ.

17. ಸ್ಮರಣೆಯ ಸಮಯದಲ್ಲಿ ದ್ರಾಕ್ಷಾಮದ್ಯದ ಕುರಿತ ಯೇಸುವಿನ ನಿರ್ದೇಶನವನ್ನು ಹೇಗೆ ಪಾಲಿಸಲಾಗುತ್ತದೆ?

17 ಅನಂತರ ಭಾಷಣಕಾರನು ಸಭಿಕರ ಗಮನವನ್ನು ಮತ್ತಾಯನು ಮುಂದುವರಿಸಿ ಹೇಳಿದ ಈ ವಿಷಯದ ಕಡೆಗೆ ಸೆಳೆಯುವನು: “[ಯೇಸು] ಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತೆ ಸಲ್ಲಿಸಿ ಅದನ್ನು ಅವರಿಗೆ ಕೊಡುತ್ತಾ, ‘ನೀವೆಲ್ಲರೂ ಇದರಲ್ಲಿರುವುದನ್ನು ಕುಡಿಯಿರಿ; ಏಕೆಂದರೆ ಇದು ಪಾಪಗಳ ಕ್ಷಮಾಪಣೆಗಾಗಿ ಅನೇಕರಿಗೋಸ್ಕರ ಸುರಿಸಲ್ಪಡಲಿರುವ ನನ್ನ ‘ಒಡಂಬಡಿಕೆಯ ರಕ್ತವನ್ನು’ ಸೂಚಿಸುತ್ತದೆ.” (ಮತ್ತಾ. 26:27, 28) ಯೇಸು ಮಾಡಿದಂತೆಯೇ ಇನ್ನೊಂದು ಪ್ರಾರ್ಥನೆಯನ್ನು ಮಾಡಲಾಗುವುದು. ಬಳಿಕ ಸಭಿಕರಿಗೆ ಕೆಂಪು ದ್ರಾಕ್ಷಾಮದ್ಯದ ‘ಪಾತ್ರೆಗಳನ್ನು’ ದಾಟಿಸಲಾಗುವುದು.

18. ಕುರುಹುಗಳನ್ನು ಸೇವಿಸುವವರು ಕೆಲವರೇ ಇರಲಿ ಅಥವಾ ಯಾರೂ ಇಲ್ಲದಿರಲಿ ಅಲ್ಲಿ ಉಪಸ್ಥಿತರಿರುವುದು ಪ್ರಾಮುಖ್ಯ ಏಕೆ?

18 ಕೂಡಿಬಂದವರಲ್ಲಿ ಹೆಚ್ಚಿನವರು ಅಲ್ಲಿ ದಾಟಿಸಲಾಗುವ ರೊಟ್ಟಿ, ದ್ರಾಕ್ಷಾಮದ್ಯವನ್ನು ಸೇವಿಸುವುದಿಲ್ಲ. ಏಕೆಂದರೆ ಯೇಸು ಹೇಳಿದಂತೆ ಸ್ವರ್ಗದ ರಾಜ್ಯದಲ್ಲಿ ಆಳುವವರು ಮಾತ್ರ ಅವನ್ನು ಸೇವಿಸಬೇಕು. (ಲೂಕ 22:28-30 ಓದಿ; 2 ತಿಮೊ. 4:18) ಕೂಡಿಬಂದಿರುವ ಇತರರೆಲ್ಲರೂ ಗೌರವಪೂರ್ವಕ ಪ್ರೇಕ್ಷಕರಾಗಿರುತ್ತಾರೆ. ಅವರು ಕುರುಹುಗಳನ್ನು ಸೇವಿಸದಿದ್ದರೂ ಕರ್ತನ ಸಂಧ್ಯಾ ಭೋಜನದಲ್ಲಿ ಉಪಸ್ಥಿತರಿರುವುದು ತುಂಬ ಮುಖ್ಯ. ಏಕೆಂದರೆ ಇದು ಯೇಸುವಿನ ಯಜ್ಞವನ್ನು ಅವರೆಷ್ಟು ಮಾನ್ಯಮಾಡುತ್ತಾರೆಂದು ತೋರಿಸಿಕೊಡುತ್ತದೆ. ಯೇಸುವಿನ ವಿಮೋಚನಾ ಮೌಲ್ಯದಿಂದ ತಮಗೆ ಸಿಗಬಹುದಾದ ಆಶೀರ್ವಾದಗಳ ಬಗ್ಗೆ ಅವರು ಆಗ ಯೋಚಿಸಬಹುದು. ಬರಲಿರುವ “ಮಹಾ ಸಂಕಟ”ದಿಂದ ಪಾರಾಗುವಂಥ ಮಹಾ ಸಮೂಹದ ಭಾಗವಾಗುವ ಸದವಕಾಶ ಅವರಿಗಿದೆ. ಈ ಮಹಾ ಸಮೂಹದವರು ‘ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿ’ಕೊಂಡಿರುವ ಆರಾಧಕರು.​—ಪ್ರಕ. 7:9, 14-17.

19. ಕರ್ತನ ಸಂಧ್ಯಾ ಭೋಜನಕ್ಕೆ ತಯಾರಿ ನಡೆಸಲು ಮತ್ತು ಅದರಿಂದ ಪ್ರಯೋಜನ ಪಡೆಯಲು ನೀವೇನು ಮಾಡಬಹುದು?

19 ಪ್ರಪಂಚದಾದ್ಯಂತ ಯೆಹೋವನ ಸಾಕ್ಷಿಗಳಾದ ನಾವು ಈ ವಿಶೇಷ ಕೂಟಕ್ಕಾಗಿ ವಿಶೇಷ ತಯಾರಿಯನ್ನು ಮಾಡುತ್ತೇವೆ. ಈ ಕೂಟಕ್ಕೆ ಹಾಜರಾಗುವಂತೆ ಆದಷ್ಟು ಜನರನ್ನು ಆಮಂತ್ರಿಸಲಿಕ್ಕೆ ಅನೇಕ ವಾರಗಳ ಮುಂಚೆಯೇ ಶುರುಮಾಡುತ್ತೇವೆ. ಕ್ರಿ.ಶ. 33ರಲ್ಲಿ ಕರ್ತನ ಸಂಧ್ಯಾ ಭೋಜನದ ಕೆಲವು ದಿನಗಳ ಹಿಂದೆ ಏನೇನಾಯಿತು, ಯೇಸು ಏನೇನು ಮಾಡಿದನು ಎಂಬದನ್ನು ತಿಳಿಸುವ ಬೈಬಲ್‌ ವೃತ್ತಾಂತಗಳನ್ನು ಓದುತ್ತೇವೆ. ಆ ದಿನದ ಕೂಟದ ಉಪಸ್ಥಿತಿಗೆ ನಮ್ಮ ಯಾವ ಕೆಲಸಗಳೂ ಅಡ್ಡಿಯಾಗದಂತೆ ನೋಡಿಕೊಳ್ಳುವೆವು. ಆರಂಭದ ಗೀತೆ ಮತ್ತು ಪ್ರಾರ್ಥನೆ ಶುರುವಾಗುವುದಕ್ಕಿಂತ ಸಾಕಷ್ಟು ಸಮಯದ ಮುಂಚೆ ಅಲ್ಲಿ ಬರುವುದು ಒಳ್ಳೇದು. ಹೊಸಬರನ್ನು ಸ್ವಾಗತಿಸಲು ಹಾಗೂ ನಂತರ ಇಡೀ ಕಾರ್ಯಕ್ರಮಕ್ಕೆ ಹಾಜರಾಗಲು ಇದು ಸಹಾಯ ಮಾಡುತ್ತದೆ. ನಾವು ಸಭಾ ಸದಸ್ಯರಾಗಿರಲಿ, ಹೊಸಬರಾಗಿರಲಿ ಭಾಷಣಕಾರನು ವಚನಗಳನ್ನು ಓದಿ ವಿವರಿಸುವಾಗ ಅದನ್ನು ನಮ್ಮ ಬೈಬಲ್‌ನಲ್ಲಿ ತೆರೆದು ಓದುವುದರಿಂದ ತುಂಬ ಪ್ರಯೋಜನ ಪಡೆಯುವೆವು. ಕ್ರಿಸ್ತನ ಮರಣದ ಸ್ಮರಣೆಗೆ ಉಪಸ್ಥಿತರಿರುವ ಮೂಲಕ ಮುಖ್ಯವಾಗಿ ನಾವು ಆತನ ಯಜ್ಞಕ್ಕಾಗಿ ಹೃದಯದಾಳದಿಂದ ಕೃತಜ್ಞತೆ ತೋರಿಸುತ್ತೇವೆ ಮತ್ತು “ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ” ಎಂಬ ಆತನ ಆಜ್ಞೆಗೆ ವಿಧೇಯತೆ ತೋರಿಸುತ್ತೇವೆ.​—1 ಕೊರಿಂ. 11:24.

^ ಪ್ಯಾರ. 9 ಜರ್ಮನ್‌ ವಿದ್ವಾಂಸ ಹೈನ್ರಿಕ್‌ ಮಯರ್‌ ಹೇಳಿದ್ದು: “ಯೇಸುವಿನ ದೇಹ ಇನ್ನೂ ಮುರಿಯಲ್ಪಟ್ಟಿರಲಿಲ್ಲ (ಇನ್ನೂ ಜೀವಂತವಾಗಿತ್ತು), ಮತ್ತು ಅವನ ರಕ್ತ ಇನ್ನೂ ಸುರಿಸಲ್ಪಟ್ಟಿರಲಿಲ್ಲ. ಈ ಕಾರಣದಿಂದ ಅವನ ಅತಿಥಿಗಳಲ್ಲಿ ಯಾರೂ [ಅಪೊಸ್ತಲರು] . . . ತಾವು ಕರ್ತನ ದೇಹವನ್ನು ನಿಜವಾಗಿ ತಿನ್ನುತ್ತಿದ್ದೇವೆ, ರಕ್ತವನ್ನು ನಿಜವಾಗಿ ಕುಡಿಯುತ್ತಿದ್ದೇವೆಂದು ನೆನಸಿರಲು ಸಾಧ್ಯವಿಲ್ಲ. ತಾನು ಆಡಿದಂಥ ಸರಳ ಮಾತುಗಳನ್ನು ತನ್ನ ಅಪೊಸ್ತಲರು ಆ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕೆಂದೂ ಯೇಸು ಉದ್ದೇಶಿಸಿರಲು ಸಾಧ್ಯವಿಲ್ಲ.”