ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲ”ರಾಗದಂತೆ ಎಚ್ಚರವಹಿಸಿ!

“ನಿಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲ”ರಾಗದಂತೆ ಎಚ್ಚರವಹಿಸಿ!

“ಸಹೋದರರೇ, . . . ನಾವು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ . . . ನಿಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲರಾಗಬೇಡಿ.”​—2 ಥೆಸ. 2:1, 2.

1, 2. (1) ಇಂದು ಮೋಸವಂಚನೆ ಯಾಕೆ ವ್ಯಾಪಕವಾಗಿದೆ? (2) ಈ ವಂಚನೆ ಯಾವ ವಿಷಯದಲ್ಲೂ ನಡೆಯುತ್ತಿರಬಹುದು? (ಶೀರ್ಷಿಕೆ ಪಕ್ಕದ ಚಿತ್ರ ನೋಡಿ.)

ಮೋಸ, ಹಗರಣಗಳು, ವಂಚನೆ ಇವೆಲ್ಲ ಸದ್ಯದ ವ್ಯವಸ್ಥೆಯಲ್ಲಿ ಸರ್ವೇಸಾಮಾನ್ಯ. ಇದೇನು ಅಚ್ಚರಿಯ ಸಂಗತಿಯಲ್ಲ. ಏಕೆಂದರೆ ಸೈತಾನನು ಈ ಲೋಕದ ಅಧಿಪತಿಯೆಂದೂ ಅವನೊಬ್ಬ ಕುಶಲ ವಂಚಕನೆಂದೂ ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. (1 ತಿಮೊ. 2:14; 1 ಯೋಹಾ. 5:19) ಈ ದುಷ್ಟ ವ್ಯವಸ್ಥೆಯ ಅಂತ್ಯ ಹತ್ತಿರವಾಗುತ್ತಿದ್ದಂತೆ ಸೈತಾನನ ಕೋಪ ಇನ್ನಷ್ಟು ಹೆಚ್ಚುವುದು ಏಕೆಂದರೆ ಉಳಿದಿರುವ “ಸಮಯಾವಧಿಯು ಸ್ವಲ್ಪವೆಂದು” ಅವನಿಗೆ ತಿಳಿದಿದೆ. (ಪ್ರಕ. 12:12) ಅವನ ಪ್ರಭಾವದ ಕೆಳಗಿರುವವರು ಸಹ ಈ ಕಾರಣದಿಂದಲೇ ಇನ್ನಷ್ಟು ಮೋಸದ ಕಾರ್ಯಗಳನ್ನು ನಡೆಸುವರೆಂದು ನಾವು ನಿರೀಕ್ಷಿಸಬಹುದು. ವಿಶೇಷವಾಗಿ ಅವರು ಸತ್ಯಾರಾಧಕರನ್ನು ಮೋಸಗೊಳಿಸಲು ಪ್ರಯತ್ನ ಮಾಡುವರು.

2 ಯೆಹೋವನ ಸೇವಕರ ಬಗ್ಗೆ ಮತ್ತವರ ನಂಬಿಕೆಗಳ ಬಗ್ಗೆ ದಾರಿತಪ್ಪಿಸುವ ಹೇಳಿಕೆಗಳನ್ನು ಮತ್ತು ಹಸಿ ಸುಳ್ಳುಗಳನ್ನು ವಾರ್ತಾ ಮಾಧ್ಯಮದಲ್ಲಿ ಕೆಲವೊಮ್ಮೆ ಪ್ರಸಾರಮಾಡಲಾಗುತ್ತದೆ. ವಾರ್ತಾಪತ್ರಿಕೆಗಳಲ್ಲಿ, ಟಿವಿ ಸಾಕ್ಷ್ಯಚಿತ್ರಗಳಲ್ಲಿ, ಇಂಟರ್‌ನೆಟ್‌ ವೆಬ್‌ ಪೇಜ್‌ಗಳಲ್ಲಿ ಅಸತ್ಯಗಳನ್ನು ಹಬ್ಬಿಸಲಾಗುತ್ತದೆ. ಈ ಸುಳ್ಳು ಮಾಹಿತಿಯನ್ನು ಕೆಲವರು ಸುಲಭವಾಗಿ ನಂಬಿ ಮೋಸಹೋಗುತ್ತಾರೆ. ಇದರಿಂದ ಅವರ ನೆಮ್ಮದಿ ಹಾಳಾಗುತ್ತದೆ.

3. ವಂಚನೆಯನ್ನು ಪ್ರತಿರೋಧಿಸಲು ನಮಗೆ ಯಾವುದು ಸಹಾಯಮಾಡುವುದು?

3 ನಮ್ಮ ಮನಕುಗ್ಗಿಸಲು ಶತ್ರುವಾದ ಸೈತಾನನು ಬಳಸುವ ಈ ತಂತ್ರವನ್ನು ಪ್ರತಿರೋಧಿಸಲು ನಮ್ಮ ಬಳಿ ದೇವರ ವಾಕ್ಯವಿದೆ. ಇದು ‘ವಿಷಯಗಳನ್ನು ಸರಿಪಡಿಸುವುದಕ್ಕೆ ಉಪಯುಕ್ತವಾಗಿದೆ.’ (2 ತಿಮೊ. 3:16) ಪ್ರಥಮ ಶತಮಾನದ ಥೆಸಲೊನೀಕದಲ್ಲಿನ ಕೆಲವು ಕ್ರೈಸ್ತರು ಮೋಸಹೋಗಿ ಅಸತ್ಯವನ್ನು ಸ್ವೀಕರಿಸಿದ್ದರು ಎಂದು ಅಪೊಸ್ತಲ ಪೌಲನ ಬರಹಗಳಿಂದ ನಮಗೆ ತಿಳಿದುಬರುತ್ತದೆ. ಆತನು ಅವರಿಗೆ “ನಿಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲರಾಗಬೇಡಿ” ಎಂಬ ಬುದ್ಧಿವಾದ ಕೊಟ್ಟನು. (2 ಥೆಸ. 2:1, 2) ಪೌಲನು ಪ್ರೀತಿಯಿಂದ ಕೊಟ್ಟ ಈ ಬುದ್ಧಿವಾದದಿಂದ ನಾವೇನು ಕಲಿಯಬಲ್ಲೆವು? ಅವನ ಹಿತೋಪದೇಶವನ್ನು ನಮ್ಮ ಸನ್ನಿವೇಶಕ್ಕೆ ಹೇಗೆ ಅನ್ವಯಸಿಕೊಳ್ಳಬಲ್ಲೆವು?

ಸಮಯೋಚಿತ ಎಚ್ಚರಿಕೆಗಳು

4. (1) ಥೆಸಲೊನೀಕದಲ್ಲಿದ್ದ ಕ್ರೈಸ್ತರಿಗೆ ‘ಯೆಹೋವನ ದಿನದ’ ಬರುವಿಕೆಯ ಬಗ್ಗೆ ಯಾವ ಎಚ್ಚರಿಕೆ ಸಿಕ್ಕಿತು? (2) ನಮಗಿಂದು ಹೇಗೆ ಎಚ್ಚರಿಕೆ ಸಿಗುತ್ತಿದೆ?

4 ಪೌಲನು ಥೆಸಲೊನೀಕದ ಸಭೆಗೆ ಬರೆದ ಮೊದಲ ಪತ್ರದಲ್ಲಿ, ‘ಯೆಹೋವನ ದಿನದ’ ಬರುವಿಕೆಯ ಕಡೆಗೆ ಅವರ ಗಮನ ಸೆಳೆದನು. ಮುಂದೆ ಆಗಲಿರುವ ಸಂಗತಿಗಳ ಬಗ್ಗೆ ತನ್ನ ಸಹೋದರರು ಕತ್ತಲಲ್ಲಿದ್ದು, ಸಿದ್ಧರಾಗಿರದೇ ಇರುವುದನ್ನು ಅವನು ಬಯಸಲಿಲ್ಲ. ಅವರು “ಬೆಳಕಿನ ಪುತ್ರ”ರಾಗಿದ್ದರು. ಆದ್ದರಿಂದ “ಎಚ್ಚರವಾಗಿಯೂ ಸ್ವಸ್ಥಚಿತ್ತರಾಗಿಯೂ” ಇರುವಂತೆ ಪ್ರೋತ್ಸಾಹಿಸಿದನು. (1 ಥೆಸಲೊನೀಕ 5:1-6 ಓದಿ.) ನಾವಿಂದು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ನಾಶನಕ್ಕಾಗಿ ಕಾಯುತ್ತಿದ್ದೇವೆ. ಈ ನಾಶನವು ಯೆಹೋವನ ಮಹಾ ದಿನದ ಆರಂಭವಾಗಿರುವುದು. ಯೆಹೋವನ ಉದ್ದೇಶದ ನೆರವೇರಿಕೆ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರುವುದಕ್ಕೆ ನಾವು ಕೃತಜ್ಞರು. ಅಲ್ಲದೆ, ಸ್ವಸ್ಥಚಿತ್ತರಾಗಿರಲು ನಮಗೆ ಸಭೆಯ ಮೂಲಕವೂ ಸಮಯಕ್ಕೆ ಸರಿಯಾಗಿ ನಿಯಮಿತವಾಗಿ ಮರುಜ್ಞಾಪನಗಳು ಸಿಗುತ್ತಿರುತ್ತವೆ. ಆಗಾಗ್ಗೆ ಸಿಗುವಂಥ ಈ ಎಚ್ಚರಿಕೆಗಳಿಗೆ ಗಮನಕೊಡುವುದು ‘ವಿವೇಚನಾಶಕ್ತಿಯೊಂದಿಗೆ ಪವಿತ್ರ ಸೇವೆ’ ಅರ್ಪಿಸಬೇಕೆಂಬ ನಮ್ಮ ದೃಢಸಂಕಲ್ಪವನ್ನು ಇನ್ನಷ್ಟು ಬಲಗೊಳಿಸುತ್ತದೆ.​—ರೋಮ. 12:1.

5, 6. (1) ಥೆಸಲೊನೀಕದವರಿಗೆ ಬರೆದ ಎರಡನೇ ಪತ್ರದಲ್ಲಿ ಪೌಲನು ಯಾವ ವಿಷಯದ ಬಗ್ಗೆ ಚರ್ಚಿಸಿದನು? (2) ಯೇಸುವಿನ ಮೂಲಕ ದೇವರು ಬೇಗನೆ ಏನು ಮಾಡಲಿದ್ದಾನೆ? (3) ನಾವು ನಮ್ಮನ್ನೇ ಏನು ಕೇಳಿಕೊಳ್ಳಬೇಕು?

5 ಪೌಲನು ಥೆಸಲೊನೀಕದ ಕ್ರೈಸ್ತರಿಗೆ ತನ್ನ ಮೊದಲ ಪತ್ರ ಕಳುಹಿಸಿದ ಸ್ವಲ್ಪದರಲ್ಲೇ ಎರಡನೇ ಪತ್ರ ಕಳುಹಿಸಿದನು. ಇದರಲ್ಲಿ, ಬರಲಿರುವ ಸಂಕಟದ ಸಮಯದಲ್ಲಿ “ದೇವರನ್ನು ಅರಿಯದವರಿಗೂ . . . ಸುವಾರ್ತೆಗೆ ವಿಧೇಯರಾಗದವರಿಗೂ” ಕರ್ತನಾದ ಯೇಸು ತರುವ ದೈವಿಕ ತೀರ್ಪಿನ ಕಡೆಗೆ ಅವನು ಗಮನಸೆಳೆದನು. (2 ಥೆಸ. 1:6-8) ಆ ಪತ್ರದಲ್ಲಿ ಈಗ 2ನೇ ಅಧ್ಯಾಯವಾಗಿರುವ ಭಾಗದಿಂದ ತಿಳಿದುಬರುವುದೇನೆಂದರೆ, ಆ ಸಭೆಯಲ್ಲಿ ಕೆಲವರು ಯೆಹೋವನ ದಿನದ ಬಗ್ಗೆ “ಭಾವೋದ್ರೇಕ”ಗೊಂಡಿದ್ದರು. ಎಷ್ಟರ ಮಟ್ಟಿಗೆಂದರೆ ಅದು ಇನ್ನೇನು ಬಂದೇಬಿಟ್ಟಿತ್ತೆಂದು ನಂಬುತ್ತಿದ್ದರು. (2 ಥೆಸಲೊನೀಕ 2:1, 2 ಓದಿ.) ಆರಂಭದ ಆ ಕ್ರೈಸ್ತರಿಗೆ ಯೆಹೋವನ ಉದ್ದೇಶದ ನೆರವೇರಿಕೆಯ ಬಗ್ಗೆ ಇದ್ದ ತಿಳಿವಳಿಕೆ ಸೀಮಿತವಾಗಿತ್ತು. “ನಮಗೆ ಅಪೂರ್ಣವಾದ ಜ್ಞಾನವಿದೆ, ನಾವು ಅಪೂರ್ಣವಾಗಿ ಪ್ರವಾದಿಸುತ್ತೇವೆ; ಆದರೆ ಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲವಾಗುವುದು” ಎಂದು ಪೌಲನು ಪ್ರವಾದನೆಯ ಸಂಬಂಧದಲ್ಲಿ ಕಾಲಾನಂತರ ಒಪ್ಪಿಕೊಂಡನು. (1 ಕೊರಿಂ. 13:9, 10) ಹಾಗಿದ್ದರೂ ಪೌಲ, ಅಪೊಸ್ತಲ ಪೇತ್ರ ಮತ್ತು ಆ ಕಾಲದ ಇತರ ನಂಬಿಗಸ್ತ ಅಭಿಷಿಕ್ತ ಸಹೋದರರು ದೈವಪ್ರೇರಣೆಯಿಂದ ಬರೆದ ಎಚ್ಚರಿಕೆಗಳು ಥೆಸಲೊನೀಕದವರು ತಮ್ಮ ನಂಬಿಕೆ ಕಾಪಾಡಿಕೊಳ್ಳುವಂತೆ ಸನ್ನದುಗೊಳಿಸಸಾಧ್ಯವಿತ್ತು.

6 ಆ ಸಭೆಯಲ್ಲಿ ವಿಷಯಗಳನ್ನು ಸರಿಪಡಿಸಲಿಕ್ಕಾಗಿ ಯೆಹೋವನ ದಿನದ ಮುಂಚೆ ನಡೆಯಲಿದ್ದ ಸಂಗತಿಗಳ ಕುರಿತು ಪೌಲನು ದೇವಪ್ರೇರಣೆಯಿಂದ ವಿವರಿಸಿದನು. * ಆ ಸಂಗತಿಗಳಾವವು? ಮಹಾ ಧರ್ಮಭ್ರಷ್ಟತೆ ನಡೆಯಲಿತ್ತು ಮತ್ತು “ನಿಯಮರಾಹಿತ್ಯದ ಪುರುಷ” ಕಾಣಿಸಿಕೊಳ್ಳಲಿದ್ದನು. ಇದರ ನಂತರ, ಕರ್ತನಾದ ಯೇಸು ತಕ್ಕ ಸಮಯದಲ್ಲಿ ಮೋಸಹೋದವರೆಲ್ಲರನ್ನೂ “ನಿರ್ನಾಮಮಾಡುವನು.” ಅವರ ಮೇಲೆ ಬರಲಿರುವ ತೀರ್ಪಿಗೆ ಕಾರಣವೇನೆಂದು ಪೌಲನು ಸ್ಪಷ್ಟವಾಗಿ ತಿಳಿಸಿದನು. ಅದೇನೆಂದರೆ “ಅವರು ಸತ್ಯದ ಪ್ರೀತಿಯನ್ನು ಸ್ವೀಕರಿಸಲಿಲ್ಲ.” (2 ಥೆಸ. 2:3, 8-10) ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ನನಗೆ ಸತ್ಯದ ಮೇಲೆ ಎಷ್ಟು ಪ್ರೀತಿಯಿದೆ? ಸತ್ಯದ ಸದ್ಯೋಚಿತ ತಿಳಿವಳಿಕೆ ಪಡೆಯಲು ನಾನು ದೇವಜನರ ಸಭೆಗಾಗಿ ಒದಗಿಸಲಾಗುವ ಈ ಪತ್ರಿಕೆ ಮತ್ತು ಇತರ ಬೈಬಲಾಧರಿತ ಪ್ರಕಾಶನಗಳ ಅಧ್ಯಯನ ಮಾಡುತ್ತೇನಾ?’

ನಿಮ್ಮ ಒಡನಾಡಿಗಳನ್ನು ಆರಿಸಿಕೊಳ್ಳುವಾಗ ವಿವೇಕ ಬಳಸಿ

7, 8. (1) ಆರಂಭದ ಕ್ರೈಸ್ತರಿಗೆ ಯಾವ ಅಪಾಯಗಳನ್ನು ಎದುರಿಸಲಿಕ್ಕಿತ್ತು? (2) ಇಂದು ಸತ್ಯ ಕ್ರೈಸ್ತರ ಮುಂದೆ ವಿಶೇಷವಾಗಿ ಯಾವ ಅಪಾಯವಿದೆ?

7 ಕ್ರೈಸ್ತರಿಗೆ ಅಪಾಯವಿದ್ದದ್ದು ಬರೀ ಧರ್ಮಭ್ರಷ್ಟರು ಮತ್ತವರ ಬೋಧನೆಗಳಿಂದ ಅಲ್ಲ. “ಹಣದ ಪ್ರೇಮವು ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ” ಎಂದು ಪೌಲನು ತಿಮೊಥೆಯನಿಗೆ ಬರೆದನು. “ಕೆಲವರು ಈ ಪ್ರೇಮವನ್ನು ಬೆನ್ನಟ್ಟುತ್ತಾ ನಂಬಿಕೆಯಿಂದ ದಾರಿತಪ್ಪಿದವರಾಗಿ ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲ ಕಡೆಗಳಲ್ಲಿ ತಿವಿಸಿಕೊಂಡಿದ್ದಾರೆ” ಎಂದು ಹೇಳಿದನು. (1 ತಿಮೊ. 6:10) ಅಷ್ಟುಮಾತ್ರವಲ್ಲ “ಶರೀರಭಾವದ ಕಾರ್ಯಗಳು” ಸಹ ಸದಾ ಇರುವಂಥ ಅಪಾಯಗಳಾಗಿದ್ದವು.​—ಗಲಾ. 5:19-21.

8 ಆದರೆ ಪೌಲನು ಥೆಸಲೊನೀಕದವರನ್ನು ವಿಶೇಷವಾಗಿ ಎಚ್ಚರಿಸಿದ್ದು ಒಂದು ಗಂಭೀರ ಅಪಾಯದ ಬಗ್ಗೆ. ಇದು, ಬೇರೆ ಕಡೆಗಳಲ್ಲಿ ಅವನು ‘ಸುಳ್ಳು ಅಪೊಸ್ತಲರು’ ಎಂದು ಕರೆದಿರುವ ಪುರುಷರಿಂದ ಬರುವಂಥ ಅಪಾಯವಾಗಿತ್ತು. “ವಕ್ರವಾದ ವಿಷಯಗಳನ್ನು ಮಾತಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವ” ಪುರುಷರು ಥೆಸಲೊನೀಕದವರ ಮಧ್ಯೆ ಇದ್ದರು. (2 ಕೊರಿಂ. 11:4, 13; ಅ. ಕಾ. 20:30) ಕಾಲಾನಂತರ ಯೇಸು ಎಫೆಸದ ಸಭೆಯವರನ್ನು ಅವರು ‘ಕೆಟ್ಟ ಜನರನ್ನು ಸಹಿಸಿಕೊಳ್ಳಲಾರರು’ ಎಂಬ ಕಾರಣಕ್ಕಾಗಿ ಶ್ಲಾಘಿಸಿದನು. ಆ ಸಭೆಯವರು ಆ ಕೆಟ್ಟ ಜನರನ್ನು ‘ಪರೀಕ್ಷೆಗೆ ಒಳಪಡಿಸಿ’ ಅವರನ್ನು ಸುಳ್ಳು ಅಪೊಸ್ತಲರು, ಸುಳ್ಳುಗಾರರೆಂದು ಸಾಬೀತುಪಡಿಸಿದರು. (ಪ್ರಕ. 2:2) ಪೌಲನು ಥೆಸಲೊನೀಕದವರಿಗೆ ಬರೆದ ಎರಡನೇ ಪತ್ರದಲ್ಲಿ “ಸಹೋದರರೇ, . . . ಅಕ್ರಮವಾಗಿ ನಡೆಯುತ್ತಿರುವ ಪ್ರತಿಯೊಬ್ಬ ಸಹೋದರನಿಂದ ದೂರವಾಗಿರಬೇಕೆಂದು ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುತ್ತೇವೆ” ಎಂದು ಹೇಳಿದನು. ನಂತರ ಅವನು “ಕೆಲಸಮಾಡಲು ಇಷ್ಟವಿಲ್ಲದ” ಕ್ರೈಸ್ತರ ಬಗ್ಗೆ ನಿರ್ದಿಷ್ಟವಾಗಿ ತಿಳಿಸಿದನು. (2 ಥೆಸ. 3:6, 10) ಅಂಥವರನ್ನೇ ಅಕ್ರಮವಾಗಿ ನಡೆಯುವವರು ಎಂದು ಕರೆಯಲಾಗಿರುವಲ್ಲಿ, ಧರ್ಮಭ್ರಷ್ಟತೆಯ ಕಡೆ ಸಾಗುತ್ತಿರುವವರಿಗೆ ಆ ಮಾತು ಇನ್ನೆಷ್ಟು ಅನ್ವಯವಾಗುತ್ತದಲ್ಲವೇ? ಇಂಥವರೊಂದಿಗಿನ ಆಪ್ತ ಒಡನಾಟ ಹಿಂದೆ ಆ ಕಾಲದಲ್ಲಿ ವಿಶೇಷವಾಗಿ ಅಪಾಯಕಾರಿ ಆಗಿತ್ತು. ಅಂಥವರಿಂದ ದೂರವಿರುವುದು ಅಗತ್ಯವಾಗಿತ್ತು. ಈ ಮಾತು ಇಂದಿಗೂ ನಿಜ.​—ಜ್ಞಾನೋ. 13:20.

9. ಯಾರಾದರೂ ಊಹಾಪೋಹಗಳನ್ನು ಮಾಡಲು ಇಲ್ಲವೇ ಟೀಕಾತ್ಮಕವಾಗಿ ಮಾತಾಡಲು ಆರಂಭಿಸಿದರೆ ನಾವೇಕೆ ಎಚ್ಚರವಹಿಸಬೇಕು?

9 ಮಹಾ ಸಂಕಟದ ಆರಂಭ ಮತ್ತು ಈ ದುಷ್ಟ ವ್ಯವಸ್ಥೆಯ ಅಂತ್ಯಕ್ಕೆ ನಾವು ಹತ್ತಿರಹತ್ತಿರ ಬರುತ್ತಾ ಇದ್ದೇವೆ. ಹಾಗಾಗಿ ಪ್ರಥಮ ಶತಮಾನದಲ್ಲಿ ಕೊಡಲಾದ ಆ ಪ್ರೇರಿತ ಎಚ್ಚರಿಕೆಗಳು ಇನ್ನಷ್ಟು ಮಹತ್ವದ್ದು. ಯೆಹೋವನ ಅಪಾತ್ರ ಕೃಪೆಯ ‘ಉದ್ದೇಶವನ್ನು ನಾವು ಕಳೆದುಕೊಳ್ಳಲು’ ಮತ್ತು ಸ್ವರ್ಗದಲ್ಲಾಗಲಿ ಭೂಮಿಯಲ್ಲಾಗಲಿ ನಿತ್ಯಜೀವ ಪಡೆಯುವ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. (2 ಕೊರಿಂ. 6:1) ಆದ್ದರಿಂದ ನಮ್ಮ ಸಭಾ ಕೂಟಗಳಿಗೆ ಹಾಜರಾಗುತ್ತಿರುವ ಯಾವುದೇ ವ್ಯಕ್ತಿ ನಮ್ಮನ್ನು ಅವರ ವೈಯಕ್ತಿಕ ಊಹಾಪೋಹಗಳ ಕುರಿತ ಚರ್ಚೆಗಳಲ್ಲಿ ಇಲ್ಲವೆ ಟೀಕಾತ್ಮಕ ಸಂಭಾಷಣೆಗಳಲ್ಲಿ ಸೆಳೆಯಲು ಪ್ರಯತ್ನಿಸಿದರೆ ನಾವು ಖಂಡಿತ ಎಚ್ಚರವಹಿಸಬೇಕು.​—2 ಥೆಸ. 3:13-15.

“ಬೋಧನೆಗಳ ಮೇಲೆ ನಿಮಗಿರುವ ಹಿಡಿತವನ್ನು ಕಾಪಾಡಿಕೊಳ್ಳಿರಿ”

10. ಥೆಸಲೊನೀಕದಲ್ಲಿದ್ದ ಕ್ರೈಸ್ತರು ಯಾವ ಬೋಧನೆಗಳಿಗೆ ಅಂಟಿಕೊಳ್ಳುವಂತೆ ಪ್ರೋತ್ಸಾಹಿಸಲಾಯಿತು?

10 ಪೌಲನು ಥೆಸಲೊನೀಕದಲ್ಲಿದ್ದ ತನ್ನ ಸಹೋದರರಿಗೆ ‘ದೃಢವಾಗಿ ನಿಲ್ಲಲು’ ಮತ್ತು ತಾವು ಕಲಿತಿರುವ ಸಂಗತಿಗಳಿಗೆ ಅಂಟಿಕೊಳ್ಳಲು ಪ್ರೇರಿಸಿದನು. (2 ಥೆಸಲೊನೀಕ 2:15 ಓದಿ.) ಅವರಿಗೆ ಕಲಿಸಲಾಗಿದ್ದ “ಬೋಧನೆಗಳು” ಯಾವುವು? ಸುಳ್ಳು ಧರ್ಮವು ಬೈಬಲಿನ ಬೋಧನೆಗಳಷ್ಟು ಅಮೂಲ್ಯವೆಂಬಂತೆ ಕಲಿಸುವ ಬೋಧನೆಗಳಂತೂ ಅಲ್ಲ. ಬದಲಾಗಿ ಅವು ಪೌಲನು ಮತ್ತು ಇತರರು ಯೇಸುವಿನಿಂದ ಹಾಗೂ ದೇವಪ್ರೇರಣೆಯಿಂದ ಪಡೆದಂಥ ಬೋಧನೆಗಳಾಗಿದ್ದವು. ಇವುಗಳಲ್ಲಿ ಹೆಚ್ಚಿನವು ಪ್ರೇರಿತ ಶಾಸ್ತ್ರಗ್ರಂಥದ ಭಾಗವಾದವು. ಪೌಲನು ಕೊರಿಂಥದ ಸಭೆಯಲ್ಲಿನ ತನ್ನ ಸಹೋದರರಿಗೆ ಹೇಳಿದ್ದು: “ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ತಿಳಿಸಿಕೊಟ್ಟ ಕಟ್ಟಳೆಗಳನ್ನು [ಬೋಧನೆಗಳನ್ನು] ಅನುಸರಿಸಿ ನಡಿಯು”ತ್ತೀರಿ. ಇದಕ್ಕಾಗಿ ಅವರನ್ನು ಶ್ಲಾಘಿಸಿದನು. (1 ಕೊರಿಂ. 11:2) ಆ ಬೋಧನೆಗಳ ಮೂಲ ವಿಶ್ವಾಸಾರ್ಹವಾಗಿತ್ತು. ಆದ್ದರಿಂದ ಅವುಗಳನ್ನು ಖಂಡಿತವಾಗಿಯೂ ನಂಬಸಾಧ್ಯವಿತ್ತು.

11. ಮೋಸಕ್ಕೆ ಬಲಿಬೀಳುವ ಕೆಲವರಿಗೆ ಏನಾಗುತ್ತದೆ?

11 ಇಬ್ರಿಯರಿಗೆ ಬರೆದ ಪತ್ರದಲ್ಲಿ ಪೌಲನು, ಕ್ರೈಸ್ತನೊಬ್ಬನು ನಂಬಿಕೆಯನ್ನು ಕಳೆದುಕೊಂಡು ಸ್ಥಿರವಾಗಿ ನಿಲ್ಲಲು ತಪ್ಪಿಹೋಗುವ ಎರಡು ವಿಧಗಳ ಕಡೆಗೆ ಗಮನಸೆಳೆದನು. (ಇಬ್ರಿಯ 2:1; 3:12 ಓದಿ.) ‘ತೇಲಿಹೋಗುವುದರ’ ಮತ್ತು ‘ದೂರಹೋಗುವುದರ’ ಬಗ್ಗೆ ಅವನು ಮಾತಾಡಿದನು. ನದಿಯ ದಡದಿಂದ ಒಂದು ದೋಣಿ ತೇಲಿಹೋಗಲಾರಂಭಿಸುವಾಗ ಮೊದಮೊದಲು ಗೊತ್ತಾಗುವುದಿಲ್ಲ. ಕ್ರಮೇಣ ಅದು ದೂರ ಹೋಗಿರುತ್ತದೆ. ಆದರೆ ಒಬ್ಬ ವ್ಯಕ್ತಿ ತನ್ನ ದೋಣಿಯನ್ನು ದಡದಿಂದ ದೂರ ತಳ್ಳಿಕೊಂಡು ಹೋಗುತ್ತಿದ್ದಾನೆಂದು ನೆನಸಿ. ತನ್ನ ಸ್ವಂತ ಕ್ರಿಯೆಗಳಿಂದ ಅದನ್ನು ದೂರ ಸರಿಸುತ್ತಿದ್ದಾನೆ. ಮೋಸಕ್ಕೆ ಬಲಿಬಿದ್ದು ಸತ್ಯದಲ್ಲಿನ ತಮ್ಮ ಭರವಸೆ ಬಲಹೀನವಾಗುವಂತೆ ಬಿಟ್ಟುಕೊಡುವವರ ಪರಿಸ್ಥಿತಿ ಏನಾಗುತ್ತದೆಂದು ಇದು ಚೆನ್ನಾಗಿ ದೃಷ್ಟಾಂತಿಸುತ್ತದೆ.

12. ಯಾವ ಆಧುನಿಕ ಚಟುವಟಿಕೆಗಳು ನಮ್ಮ ಆಧ್ಯಾತ್ಮಿಕತೆಗೆ ಹಾನಿಮಾಡಬಲ್ಲವು?

12 ಥೆಸಲೊನೀಕದಲ್ಲಿದ್ದ ಕೆಲವರಿಗೆ ಹಾಗೇ ಆಗಿದ್ದಿರಬಹುದು. ಇಂದಿನ ಕುರಿತು ಏನು? ಸಮಯ ಪೋಲುಮಾಡುವ ಚಟುವಟಿಕೆಗಳು ಹೆಚ್ಚೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಇತರರೊಂದಿಗೆ ಸಂವಾದಿಸುವುದು, ಎಲೆಕ್ಟ್ರಾನಿಕ್‌ ಸಂದೇಶಗಳನ್ನು ಓದಿ ಉತ್ತರಿಸುವುದು, ಹವ್ಯಾಸಗಳಲ್ಲಿ ವಿಪರೀತವಾಗಿ ಮುಳುಗುವುದು, ಕ್ರೀಡೆಗಳ ತಾಜಾ ಸುದ್ದಿಗಳನ್ನು ತಿಳಿದುಕೊಳ್ಳುವುದು​—ಇವೆಲ್ಲದ್ದರಲ್ಲಿ ಎಷ್ಟು ತಾಸುಗಳು ಕಳೆದುಹೋಗುತ್ತವೆಂದು ಸ್ವಲ್ಪ ಯೋಚಿಸಿ. ಇವುಗಳಲ್ಲಿ ಯಾವುದೇ ಒಂದು ಚಟುವಟಿಕೆ ಸಹ ಕ್ರೈಸ್ತನೊಬ್ಬನನ್ನು ಅಪಕರ್ಷಿಸಿ ಅವನ ಹುರುಪನ್ನು ತಗ್ಗಿಸಬಲ್ಲದು. ಫಲಿತಾಂಶ? ಮನದಾಳದ ಪ್ರಾರ್ಥನೆ, ದೇವರ ವಾಕ್ಯದ ಅಧ್ಯಯನ, ಕೂಟದ ಹಾಜರಿ, ಸುವಾರ್ತೆ ಸಾರುವ ಕೆಲಸ ಇವೆಲ್ಲಕ್ಕೆ ಪೆಟ್ಟುಬೀಳುತ್ತದೆ. ಈ ರೀತಿಯಲ್ಲಿ ನಮ್ಮ ತರ್ಕಶಕ್ತಿಯನ್ನು ಬೇಗನೆ ಕಳೆದುಕೊಂಡು ಚಂಚಲರಾಗದಂತೆ ನಾವೇನು ಮಾಡಬಲ್ಲೆವು?

ಚಂಚಲರಾಗದಂತೆ ಸಂರಕ್ಷಣೆ

13. (1) ಮುಂತಿಳಿಸಲಾದಂತೆಯೇ ಇಂದು ಅನೇಕರ ಮನೋಭಾವ ಹೇಗಿದೆ? (2) ನಮ್ಮ ನಂಬಿಕೆ ಬಲಹೀನವಾಗದಂತೆ ಯಾವುದು ತಡೆಯುವುದು?

13 ನಾವು ಮಾಡಲೇಬೇಕಾದ ಒಂದು ಸಂಗತಿಯಿದೆ. ಅದೇನೆಂದರೆ ನಾವು ಜೀವಿಸುತ್ತಿರುವ ಸಮಯವನ್ನು ಸದಾ ಮನಸ್ಸಿನಲ್ಲಿಡಬೇಕು. ಮಾತ್ರವಲ್ಲ ನಮ್ಮೀ ಕಾಲ “ಕಡೇ ದಿವಸಗಳು” ಎಂದು ನಂಬದವರ ಸಹವಾಸ ಬೀರಬಲ್ಲ ಪರಿಣಾಮದ ಬಗ್ಗೆಯೂ ಎಚ್ಚರದಿಂದಿರಬೇಕು. ಅಪೊಸ್ತಲ ಪೇತ್ರನು ಕಡೇ ದಿವಸಗಳ ಕುರಿತು ಬರೆದದ್ದು: “ಕುಚೋದ್ಯಗಾರರು ತಮ್ಮ ಕುಚೋದ್ಯದ ಮಾತುಗಳೊಂದಿಗೆ ಬರುವರು . . . ಅವರು ತಮ್ಮ ಸ್ವಂತ ಇಚ್ಛೆಗಳಿಗನುಸಾರ ನಡೆಯುತ್ತಾ ‘ಅವನ ವಾಗ್ದತ್ತ ಸಾನ್ನಿಧ್ಯವು ಎಲ್ಲಿದೆ? ನಮ್ಮ ಪೂರ್ವಜರು ಮರಣದಲ್ಲಿ ನಿದ್ರೆಹೋದ ದಿನದಿಂದ ಎಲ್ಲವೂ ಸೃಷ್ಟಿಯ ಆರಂಭದಿಂದಿದ್ದ ಹಾಗೆಯೇ ಮುಂದುವರಿಯುತ್ತಿದೆಯಲ್ಲಾ’ ಎಂದು ಹೇಳುವರು.” (2 ಪೇತ್ರ 3:3, 4) ದೈನಂದಿನ ಬೈಬಲ್‌ ವಾಚನ ಹಾಗೂ ನಿಯಮಿತ ಅಧ್ಯಯನವು ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ ಎಂಬ ಸಂಗತಿಯ ಮೇಲೆ ಗಮನ ನೆಡುವಂತೆ ನೆರವಾಗುವುದು. ಮುಂತಿಳಿಸಲಾಗಿದ್ದ ಧರ್ಮಭ್ರಷ್ಟತೆಯು ಎಷ್ಟೋ ಸಮಯದ ಹಿಂದೆ ಕಾಣಿಸಿಕೊಂಡಿತು ಮತ್ತು ಅದು ಈ ದಿನದ ವರೆಗೂ ಉಳಿದಿದೆ. “ನಿಯಮರಾಹಿತ್ಯದ ಪುರುಷ” ಈಗಲೂ ಇದ್ದಾನೆ, ದೇವರ ಸೇವಕರನ್ನು ವಿರೋಧಿಸುತ್ತಾ ಇದ್ದಾನೆ. ಆದ್ದರಿಂದಲೇ ನಾವು ಯೆಹೋವನ ದಿನದ ಸಾಮೀಪ್ಯದ ಬಗ್ಗೆ ಸದಾ ಎಚ್ಚರದಿಂದಿರಬೇಕು.​—ಚೆಫ. 1:7.

14. ದೇವರ ಸೇವೆಯಲ್ಲಿ ಕಾರ್ಯಮಗ್ನರಾಗಿರುವುದು ಹೇಗೆ ಸಂರಕ್ಷಣೆಯಾಗಿದೆ?

14 ಅನುಭವದಿಂದ ತಿಳಿದುಬಂದಿರುವ ಸಂಗತಿಯೇನೆಂದರೆ ಎಚ್ಚರವಾಗಿರಲು ಮತ್ತು ಚಂಚಲರಾಗದಿರಲು ಮಾಡಬೇಕಾದ ಒಂದು ಪ್ರಧಾನ ವಿಷಯ ನಿಯಮಿತವಾಗಿ ರಾಜ್ಯದ ಸುವಾರ್ತೆ ಸಾರುವುದರಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದೇ. ಸಭೆಯ ಶಿರಸ್ಸಾದ ಕ್ರಿಸ್ತ ಯೇಸು ತನ್ನ ಹಿಂಬಾಲಕರಿಗೆ ಎಲ್ಲಾ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡುವ ಮತ್ತು ತಾನು ಕಲಿಸಿದ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸುವ ಆಜ್ಞೆ ಕೊಟ್ಟನು. ಇದು ಆತನ ಹಿಂಬಾಲಕರನ್ನು ಸಂರಕ್ಷಿಸಲಿದ್ದ ಒಂದು ಸಲಹೆಯಾಗಿತ್ತು. (ಮತ್ತಾ. 28:19, 20) ಆತನ ನಿರ್ದೇಶನಕ್ಕನುಸಾರ ಕ್ರಿಯೆಗೈಯಬೇಕಾದರೆ ನಾವು ಸಾರುವ ಕೆಲಸದಲ್ಲಿ ಹುರುಪುಳ್ಳವರಾಗಿರಬೇಕು. ಥೆಸಲೊನೀಕದಲ್ಲಿದ್ದ ನಿಮ್ಮ ಸಹೋದರರು ಸಾರುವ ಮತ್ತು ಬೋಧಿಸುವ ಕೆಲಸವನ್ನು ಯಾಂತ್ರಿಕವಾಗಿ, ಏನೋ ಕರ್ತವ್ಯ ಪೂರೈಸಬೇಕೆಂದು ಆಸಕ್ತಿಯಿಲ್ಲದೆ ಮಾಡಿದ್ದರೆಂದು ನೆನಸುತ್ತೀರೊ? ಪೌಲನು ಅವರಿಗೆ ಹೇಳಿದ್ದನ್ನು ಜ್ಞಾಪಿಸಿಕೊಳ್ಳಿ: “ಪವಿತ್ರಾತ್ಮದ ಬೆಂಕಿಯನ್ನು ನಂದಿಸಬೇಡಿರಿ. ಪ್ರವಾದಿಸುವಿಕೆಗಳನ್ನು ಅಲಕ್ಷ್ಯಭಾವದಿಂದ ಕಾಣಬೇಡಿರಿ.” (1 ಥೆಸ. 5:19, 20) ನಾವು ಅಧ್ಯಯನಮಾಡುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಪ್ರವಾದನೆಗಳು ಎಷ್ಟೊಂದು ರೋಮಾಂಚಕಾರಿ ಆಗಿವೆಯಲ್ಲವೇ?

15. ಕುಟುಂಬ ಆರಾಧನೆಯ ಸಮಯದಲ್ಲಿ ಯಾವ ಸಹಾಯಕಾರಿ ವಿಷಯಗಳನ್ನು ಚರ್ಚಿಸಬಲ್ಲೆವು?

15 ನಮ್ಮ ಕುಟುಂಬದವರು ಸಹ ಕ್ಷೇತ್ರ ಸೇವೆಗೆ ಸಂಬಂಧಪಟ್ಟ ಸಾಮರ್ಥ್ಯಗಳನ್ನು ಉತ್ತಮಗೊಳಿಸಬೇಕೆಂದು ಬಯಸುತ್ತೇವೆ. ಇದಕ್ಕಾಗಿ ಅನೇಕ ಸಹೋದರ ಸಹೋದರಿಯರು ತಮ್ಮ ಕುಟುಂಬ ಆರಾಧನೆಯ ಒಂದು ಭಾಗವನ್ನು ಶುಶ್ರೂಷೆಗಾಗಿ ಮೀಸಲಿಡುತ್ತಾರೆ. ಕುಟುಂಬ ಸದಸ್ಯರು ಭೇಟಿಯಾದ ಜನರ ಆಸಕ್ತಿಗೆ ಹೇಗೆ ನೀರೆರೆಯುವರೆಂದು ತಿಳಿಯಲು ಈ ಪ್ರಶ್ನೆಗಳನ್ನು ಚರ್ಚಿಸುವುದು ಸಹಾಯಕಾರಿ: ಮುಂದಿನ ಭೇಟಿಯಲ್ಲಿ ಅವರೇನು ಮಾತಾಡುವರು? ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗಲು ಯಾವ ವಿಷಯಗಳನ್ನು ಚರ್ಚಿಸಬಹುದು? ಪುನರ್ಭೇಟಿಗಳನ್ನು ಮಾಡುವ ಅತ್ಯುತ್ತಮ ಸಮಯ ಯಾವುದು? ಅನೇಕರು ಕುಟುಂಬ ಆರಾಧನೆಯಲ್ಲಿ ಸ್ವಲ್ಪ ಸಮಯ ಸಭಾ ಕೂಟಗಳ ತಯಾರಿಯನ್ನೂ ಮಾಡುತ್ತಾರೆ. ಹೀಗೆ ಕೂಟಗಳಲ್ಲಿ ಏನನ್ನು ಚರ್ಚಿಸಲಾಗುವುದೆಂದು ಕುಟುಂಬದಲ್ಲಿರುವವರೆಲ್ಲರಿಗೆ ತಿಳಿದಿರುತ್ತದೆ. ಕೂಟಗಳಲ್ಲಿ ಭಾಗವಹಿಸಲಿಕ್ಕಾಗಿ ನೀವು ಹೆಚ್ಚಿನ ತಯಾರಿ ಮಾಡಬಹುದೇ? ಭಾಗವಹಿಸುವುದು ನಿಮ್ಮ ನಂಬಿಕೆಯನ್ನು ಬಲಗೊಳಿಸುತ್ತದೆ ಹಾಗೂ ಚಂಚಲರಾಗದಂತೆ ನೆರವಾಗುತ್ತದೆ. (ಕೀರ್ತ. 35:18) ಕುಟುಂಬ ಆರಾಧನೆಯಲ್ಲಿ ಪಾಲ್ಗೊಳ್ಳುವುದು, ಊಹಾಪೋಹ ಮತ್ತು ಸಂದೇಹಗಳ ವಿರುದ್ಧ ರಕ್ಷಣೆಯಾಗಿರುವುದು.

16. ತಮ್ಮ ತರ್ಕಶಕ್ತಿಯನ್ನು ಕಾಪಾಡಿಕೊಳ್ಳಲು ಅಭಿಷಿಕ್ತ ಕ್ರೈಸ್ತರಿಗಿರುವ ಪ್ರೇರಣೆ ಏನು?

16 ವರ್ಷಗಳಿಂದ ಯೆಹೋವನು ತನ್ನ ಜನರಿಗೆ ಬೈಬಲ್‌ ಪ್ರವಾದನೆಯ ಹೆಚ್ಚಿನ ತಿಳಿವಳಿಕೆಯನ್ನು ಕೊಟ್ಟು ಆಶೀರ್ವದಿಸಿರುವ ರೀತಿಯ ಕುರಿತು ಮನನ ಮಾಡುವಾಗ, ಮುಂದೆ ಕಾದಿರುವ ಪ್ರತಿಫಲ ಎಷ್ಟು ಅದ್ಭುತವೆಂದು ನಾವು ಗ್ರಹಿಸುವೆವು. ಅಭಿಷಿಕ್ತರಿಗೆ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಜೊತೆಗೂಡುವ ಪ್ರತೀಕ್ಷೆಯಿದೆ. ಅವರಿಗೆ ತಮ್ಮ ತರ್ಕಶಕ್ತಿಯನ್ನು ಕಾಪಾಡಿಕೊಳ್ಳಲು ಇದೆಂಥ ಪ್ರೇರಣೆಯಲ್ಲವೇ! ಪೌಲನು ಥೆಸಲೊನೀಕದವರಿಗೆ ಬರೆದ ಮಾತುಗಳನ್ನು ಖಂಡಿತವಾಗಿ ಅವರಿಗೆ ಅನ್ವಯಿಸಬಲ್ಲೆವು: “ಯೆಹೋವನಿಂದ ಪ್ರೀತಿಸಲ್ಪಡುವ ಸಹೋದರರೇ, ನಿಮ್ಮ ಪರವಾಗಿ ನಾವು ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುವ ಹಂಗಿನಲ್ಲಿದ್ದೇವೆ; ಏಕೆಂದರೆ ದೇವರು ನಿಮ್ಮನ್ನು ತನ್ನ ಪವಿತ್ರಾತ್ಮದಿಂದ ಪವಿತ್ರೀಕರಿಸುವ ಮೂಲಕ ಮತ್ತು ಸತ್ಯದಲ್ಲಿನ ನಿಮ್ಮ ನಂಬಿಕೆಯ ಮೂಲಕ . . . ಆರಿಸಿಕೊಂಡನು.”​—2 ಥೆಸ. 2:13.

17. ಎರಡನೇ ಥೆಸಲೊನೀಕ 3:1-5ರ ಮಾತುಗಳಿಂದ ನಿಮಗೆ ಯಾವ ಪ್ರೋತ್ಸಾಹ ಸಿಗುತ್ತದೆ?

17 ಭೂಮಿ ಮೇಲೆ ಅನಂತಕಾಲಕ್ಕೂ ಜೀವಿಸಲು ನಿರೀಕ್ಷಿಸುವವರು ಸಹ ಚಂಚಲರಾಗದಿರಲು ಅದೇ ರೀತಿಯಲ್ಲಿ ಪ್ರಯಾಸಪಡಬೇಕು. ನಿಮಗೂ ಇದೇ ನಿರೀಕ್ಷೆ ಇರುವಲ್ಲಿ, ಪೌಲನು ಥೆಸಲೊನೀಕದಲ್ಲಿದ್ದ ಜೊತೆ ಅಭಿಷಿಕ್ತರಿಗೆ ಕೊಟ್ಟ ಪ್ರೀತಿತುಂಬಿದ ಪ್ರೋತ್ಸಾಹವನ್ನು ಮನಸ್ಸಿಗೆ ತಕ್ಕೊಳ್ಳಿ. (2 ಥೆಸಲೊನೀಕ 3:1-5 ಓದಿ.) ಆ ಪ್ರೀತಿಭರಿತ ಮಾತುಗಳನ್ನು ನಮ್ಮಲ್ಲಿ ಪ್ರತಿಯೊಬ್ಬರು ಗಾಢವಾಗಿ ಮಾನ್ಯಮಾಡಬೇಕು. ಥೆಸಲೊನೀಕದವರಿಗೆ ಬರೆಯಲಾದ ಪತ್ರಗಳು ಊಹಾಪೋಹಗಳು ಇಲ್ಲವೆ ಸಂದೇಹಾಸ್ಪದ ವಿಚಾರಗಳ ಕುರಿತು ಅತ್ಯಾವಶ್ಯಕ ಎಚ್ಚರಿಕೆಗಳನ್ನು ಕೊಡುತ್ತವೆ. ಅಂತ್ಯಕ್ಕೆ ಬಹಳ ಹತ್ತಿರದಲ್ಲಿ ಜೀವಿಸುತ್ತಿರುವ ಇಂದಿನ ಕ್ರೈಸ್ತರು ತುಂಬ ಮಾನ್ಯಮಾಡುವಂಥ ಎಚ್ಚರಿಕೆಗಳಿವು.

^ ಪ್ಯಾರ. 6 ಅಪೊಸ್ತಲರ ಕಾರ್ಯಗಳು 20:29, 30ರಲ್ಲಿ ಪೌಲನು ಹೇಳಿದ್ದೇನೆಂದರೆ ಕ್ರೈಸ್ತ ಸಭೆಗಳೊಳಗಿಂದಲೇ “ಕೆಲವರು ಎದ್ದು ವಕ್ರವಾದ ವಿಷಯಗಳನ್ನು ಮಾತಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು.” ಈ ಮಾತು ನಿಜವಾಯಿತೆಂದು ಇತಿಹಾಸ ಸಾಕ್ಷ್ಯಕೊಡುತ್ತದೆ. ಕಾಲಾನಂತರ ಪಾದ್ರಿಗಳು ಮತ್ತು ಲೌಕಿಕ ಜನರು ಎಂಬ ಭೇದ ಹುಟ್ಟಿಕೊಂಡಿತು. ಕ್ರಿ.ಶ. ಮೂರನೇ ಶತಮಾನದೊಳಗೆ ‘ನಿಯಮರಾಹಿತ್ಯದ ಪುರುಷ’ ಕಾಣಿಸಿಕೊಂಡಿದ್ದನು. ಕ್ರೈಸ್ತಪ್ರಪಂಚದ ಪಾದ್ರಿವರ್ಗವೇ ಈ ‘ನಿಯಮರಾಹಿತ್ಯದ ಪುರುಷ.’​—1990, ಸೆಪ್ಟೆಂಬರ್‌ 1ರ ಕಾವಲಿನಬುರುಜು ಪುಟ 12-16 ನೋಡಿ.