ಬಾಳಸಂಗಾತಿಯ ಸಾವಿನ ನೋವನ್ನು ನಿಭಾಯಿಸಲು ನೆರವು
ಗಂಡನು ‘ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ಹೆಂಡತಿಯನ್ನು ಪ್ರೀತಿಸಬೇಕು.’ ಹಾಗೆಯೇ ಹೆಂಡತಿಗೆ ‘ಗಂಡನ ಕಡೆಗೆ ಆಳವಾದ ಗೌರವ’ ಇರಬೇಕೆಂದು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತದೆ. ಅವರಿಬ್ಬರೂ ತಮ್ಮ ಪಾತ್ರಗಳನ್ನು “ಒಂದೇ ಶರೀರ” ಆಗಿದ್ದು ಪೂರೈಸಬೇಕು. (ಎಫೆ. 5:33; ಆದಿ. 2:23, 24) ಸಮಯ ಸಂದಂತೆ ಒಂದು ದಂಪತಿಯ ನಡುವಣ ಪ್ರೀತಿ ಹೆಚ್ಚುತ್ತಾ ಪರಸ್ಪರರನ್ನು ಬಿಟ್ಟಿರಲಾಗದಷ್ಟು ಬಲವಾದ ಬಂಧವನ್ನು ಅವರು ಬೆಳೆಸಿಕೊಳ್ಳುತ್ತಾರೆ. ಇದನ್ನು ಅಕ್ಕಪಕ್ಕದಲ್ಲಿ ಬೆಳೆಯುವ ಎರಡು ಮರಗಳ ಬೇರುಗಳಿಗೆ ಹೋಲಿಸಬಹುದು. ದಾಂಪತ್ಯದಲ್ಲಿ ಸಂತೋಷ ಕಂಡುಕೊಳ್ಳುತ್ತಿರುವ ಗಂಡಹೆಂಡತಿಯ ಭಾವನೆಗಳು ಆ ಬೇರುಗಳಂತೆಯೇ ಪರಸ್ಪರ ಹೆಣೆದುಕೊಂಡಿರುತ್ತವೆ.
ಹೀಗಿರುವಾಗ ಅವರಲ್ಲೊಬ್ಬರು ಸತ್ತರೆ ಏನಾಗುತ್ತದೆ? ಅವರು ಬದುಕಿದ್ದಾಗ ಮುರಿಯಲಾಗದಿದ್ದ ಆ ಬಂಧ ಸಾವಿನಿಂದಾಗಿ ಮುರಿದು ಹೋಗುತ್ತದೆ. ವಿಧವೆ ಇಲ್ಲವೆ ವಿಧುರನಾದ ವ್ಯಕ್ತಿಯಲ್ಲಿ ಮನೋವೇದನೆ, ಏಕಾಂಗಿತನ, ಕೆಲವೊಮ್ಮೆ ಕೋಪ ಇಲ್ಲವೆ ಅಪರಾಧಿಭಾವ ಮನೆಮಾಡಿಬಿಡುತ್ತದೆ. 58 ವರ್ಷಗಳುದ್ದದ ವೈವಾಹಿಕ ಬದುಕಿನಲ್ಲಿ ಡ್ಯಾನಿಯೇಲಾ * ಎಂಬವರಿಗೆ ಸಂಗಾತಿಯನ್ನು ಸಾವಿನಲ್ಲಿ ಕಳೆದುಕೊಂಡ ಅನೇಕರ ಪರಿಚಯವಿತ್ತು. ಹಾಗಿದ್ದರೂ “ಬಾಳಸಂಗಾತಿಯನ್ನು ಕಳೆದುಕೊಳ್ಳುವವರಿಗೆ ಹೇಗನಿಸುತ್ತದೆಂದು ನನಗೆ ಮುಂಚೆ ಅರ್ಥವೇ ಆಗುತ್ತಿರಲಿಲ್ಲ. ಅದನ್ನು ನಾನೇ ಅನುಭವಿಸಿದಾಗ ಆ ನೋವು ಏನೆಂದು ಗೊತ್ತಾಯಿತು” ಎಂದು ತಮ್ಮ ಗಂಡ ತೀರಿಹೋದ ಬಳಿಕ ಡ್ಯಾನಿಯೇಲಾ ಹೇಳಿದರು.
ಕೊನೆಯಾಗದೆಂದು ತೋರುವ ನೋವು
ನಲ್ಮೆಯ ಸಂಗಾತಿಯ ಸಾವಿನಿಂದಾಗಿ ಉಂಟಾಗುವ ಮಾನಸಿಕ ಒತ್ತಡಕ್ಕಿಂತ ತೀವ್ರವಾದ ಒತ್ತಡ ಇನ್ನೊಂದಿಲ್ಲ ಎನ್ನುತ್ತಾರೆ ಕೆಲವು ಸಂಶೋಧಕರು. ಇದು ನಿಜವೆಂದು ಆ ನಷ್ಟವನ್ನು ಅನುಭವಿಸಿದವರು ಒಪ್ಪುತ್ತಾರೆ. ಮಿಲಿ ಎಂಬವರ ಪತಿ ಅನೇಕ ವರ್ಷಗಳ ಹಿಂದೆ ತೀರಿಹೋದರು. ಬಾಳಹಾದಿಯಲ್ಲಿ 25 ವರ್ಷ ಜೊತೆಯಾಗಿ ಹೆಜ್ಜೆಯಿಟ್ಟ ಗಂಡನ ಸಾವು ತನಗೆ ಉಂಟುಮಾಡಿರುವ ಭಾವನಾತ್ಮಕ ನಷ್ಟದ ಬಗ್ಗೆ ಹೀಗನ್ನುತ್ತಾಳೆ: “ನನ್ನ ಕೈಕಾಲೇ ಬಿದ್ದುಹೋದಂತೆ ಅನಿಸುತ್ತದೆ.”
ಗಂಡ ಸತ್ತು ಎಷ್ಟೋ ವರ್ಷಗಳಾದರೂ ಅವರಿಗಾಗಿ ಶೋಕಿಸುತ್ತಿರುವ ವಿಧವೆಯರ ದುಃಖ ಅತಿಯಾಯಿತೆಂದು ಸೂಸನ್ರಿಗೆ ಯಾವಾಗಲೂ ಅನಿಸುತ್ತಿತ್ತು. ಆದರೆ 38 ವರ್ಷಗಳ ವೈವಾಹಿಕ ಜೀವನದ ಬಳಿಕ ಅವರ ಗಂಡ ಸಾವನ್ನಪ್ಪಿದರು. ಇದಾಗಿ 20 ವರ್ಷ ದಾಟಿದರೂ “ನಾನು ಅವರ ಬಗ್ಗೆ ನೆನಸದ ಒಂದೇ ಒಂದು ದಿನ ಇಲ್ಲ” ಎನ್ನುತ್ತಾರೆ ಅವರು. ಗಂಡನು ತನ್ನ ಜೊತೆ ಇಲ್ಲವೆಂಬ ನೋವು ಅವರನ್ನು ಎಷ್ಟು ಕಾಡುತ್ತದೆಯೆಂದರೆ ಆಗಾಗ್ಗೆ ಅಳು ಉಮ್ಮಳಿಸಿ ಬರುತ್ತದೆ.
ಸಂಗಾತಿಯ ಸಾವು ತರುವ ನೋವು ಕ್ರೂರವಾದದ್ದೂ, ಬೇಗನೆ ಮಾಸದೇ ಇರುವಂಥದ್ದೂ ಎಂದು ಬೈಬಲ್ ಸಹ ದೃಢೀಕರಿಸುತ್ತದೆ. ಸಾರಳು ತೀರಿಹೋದಾಗ ಆಕೆಯ ಗಂಡ ಅಬ್ರಹಾಮ “ಆಕೆಯ ನಿಮಿತ್ತ ಗೋಳಾಡಿ ಕಣ್ಣೀರುಸುರಿಸಿದನು.” (ಆದಿ. 23:1, 2) ಅಬ್ರಹಾಮನಿಗೆ ಪುನರುತ್ಥಾನದಲ್ಲಿ ನಂಬಿಕೆಯಿದ್ದರೂ ತನ್ನ ಪ್ರಿಯ ಪತ್ನಿಯ ಸಾವಿನಿಂದ ನಲುಗಿಹೋದನು. (ಇಬ್ರಿ. 11:17-19) ಯಾಕೋಬನ ನೆಚ್ಚಿನ ಮಡದಿ ರಾಹೇಲ ಸತ್ತುಹೋದಾಗ ಅವನು ಅವಳನ್ನು ಕೂಡಲೇ ಮರೆತುಬಿಡಲಿಲ್ಲ. ಎಷ್ಟೋ ಸಮಯದ ನಂತರವೂ ಆಕೆಯ ಬಗ್ಗೆ ತನ್ನ ಪುತ್ರರೊಂದಿಗೆ ಅಕ್ಕರೆಯ ಮಾತುಗಳನ್ನಾಡಿದನು.—ಆದಿ. 44:27; 48:7.
ಈ ಶಾಸ್ತ್ರಾಧಾರಿತ ಉದಾಹರಣೆಗಳಿಂದ ನಾವೇನು ಕಲಿಯಬಹುದು? ವಿಧವೆಯರು, ವಿಧುರರು ತಮ್ಮ ಸಂಗಾತಿಯನ್ನು ಕಳೆದುಕೊಂಡ ನೋವು ಅನೇಕ ವರ್ಷಗಳ ತನಕ ಅವರಲ್ಲಿ ಹಸಿಯಾಗಿರುತ್ತದೆ. ಆದ್ದರಿಂದ ಅವರು ಕಣ್ಣೀರು ಹಾಕುವುದನ್ನು, ದುಃಖದಲ್ಲಿರುವುದನ್ನು ನೋಡುವಾಗ ಅದನ್ನು ಅವರ ದೌರ್ಬಲ್ಯವೆಂದೆಣಿಸದಿರೋಣ. ಅದು ಅವರಿಗಾಗಿರುವ ಮಹಾ ನಷ್ಟದಿಂದಾಗಿ ಸಹಜವಾಗಿ ಆಗುವ ಪರಿಣಾಮವೆಂದು ಅರ್ಥಮಾಡಿಕೊಳ್ಳೋಣ. ಅವರಿಗೆ ನಮ್ಮ ಸಹಾನುಭೂತಿ ಮತ್ತು ಬೆಂಬಲ ತುಂಬ ಸಮಯದ ವರೆಗೆ ಬೇಕಾದೀತು.
ಇವತ್ತಿನ ದುಃಖ ಇವತ್ತು ನಿಭಾಯಿಸಿ
ಸಂಗಾತಿಯನ್ನು ಕಳೆದುಕೊಂಡ ನಂತರ ಒಂಟಿ ಜೀವನಕ್ಕೆ ಮರಳುವುದು ಹೇಳಿದಷ್ಟು ಸುಲಭವಲ್ಲ. ಮದುವೆಯಾಗಿ ಅನೇಕ ವರ್ಷಗಳಾಗಿರುವ ಗಂಡನಿಗೆ, ತನ್ನ ಹೆಂಡತಿ ಹತಾಶೆಯಿಂದ ಕುಗ್ಗಿಹೋದರೆ ಇಲ್ಲವೆ ಬೇಜಾರಿನಿಂದಿದ್ದರೆ ಅವಳ ಮುಖದಲ್ಲಿ ಪುನಃ ನಗು ಮೂಡಿಸುವುದು ಹೇಗೆಂದು ತಿಳಿದಿರುತ್ತದೆ. ಅವನೇ ಇಲ್ಲವಾದರೆ ಆಕೆಗಿದ್ದ ಪ್ರೀತಿ ಮತ್ತು ಸಾಂತ್ವನದ ಚಿಲುಮೆ ಇಲ್ಲವಾಗುತ್ತದೆ. ಅದೇ ರೀತಿಯಲ್ಲಿ ಮದುವೆಯಾಗಿ ಸಮಯ ಉರುಳಿದಂತೆ ಹೆಂಡತಿಯೊಬ್ಬಳು ತನ್ನ ಗಂಡನ ಚಿಂತೆ-ಭಯಗಳನ್ನು ನಿವಾರಿಸಿ ನಿರಾಳಭಾವ ಮೂಡಿಸುವುದು, ಖುಷಿಪಡಿಸುವುದು ಹೇಗೆಂದು ಕಲಿಯುತ್ತಾಳೆ. ಆಕೆಯ ಸೌಮ್ಯ ಸ್ಪರ್ಶ, ಹಿತವಾದ ನುಡಿ ಮತ್ತು ಅವನ ಅಭಿರುಚಿಗಳಿಗೆ, ಬೇಕುಬೇಡಗಳಿಗೆ ಕೊಡುವ ಗಮನ ಇನ್ಯಾರಿಂದಲೂ ಸಿಗುವುದಿಲ್ಲ. ಅವಳು ಇಲ್ಲವಾದರೆ ಗಂಡನ ಬದುಕಿನಲ್ಲಿ ಶೂನ್ಯ ಆವರಿಸಿಬಿಡುತ್ತದೆ. ಆದ್ದರಿಂದಲೇ ಸಂಗಾತಿಗಳನ್ನು ಕಳೆದುಕೊಂಡಿರುವ ಕೆಲವರಿಗೆ ಭವಿಷ್ಯದ ಬಗ್ಗೆ ಯೋಚಿಸುವಾಗ ಅನಿಶ್ಚಿತತೆ, ಭಯ ಕಾಡುತ್ತದೆ. ಇಂಥವರ ಮನಸ್ಸಿಂದ ಈ ರೀತಿಯ ಚಿಂತೆಭಯವನ್ನು ಕಿತ್ತೆಸೆದು ನೆಮ್ಮದಿಯನ್ನು ಚಿಗುರಿಸಬಲ್ಲ ಬೈಬಲ್ ತತ್ವ ಯಾವುದು?
“ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು. ಪ್ರತಿದಿನಕ್ಕೆ ಅದಕ್ಕಿರುವ ಕೆಡುಕೇ ಸಾಕು.” (ಮತ್ತಾ. 6:34) ಯೇಸುವಿನ ಆ ಮಾತುಗಳು ಭೌತಿಕ ಅಗತ್ಯಗಳನ್ನು ಪೂರೈಸುವ ವಿಷಯಕ್ಕೆ ಅನ್ವಯವಾಗುತ್ತವಾದರೂ, ಪ್ರಿಯರನ್ನು ಮರಣದಲ್ಲಿ ಕಳೆದುಕೊಂಡ ನೋವನ್ನು ಸಹಿಸಲೂ ಅನೇಕರಿಗೆ ಸಹಾಯಮಾಡಿವೆ. ಹೆಂಡತಿಯ ಸಾವಿನ ಕೆಲವು ತಿಂಗಳ ಬಳಿಕ ಚಾರ್ಲ್ಸ್ ಎಂಬ ವಿಧುರ ಬರೆದದ್ದು: “ಮೊನೀಕ್ ನನಗೆ ಈಗಲೂ ಎಷ್ಟು ನೆನಪಾಗುತ್ತಾಳೆಂದರೆ ಅವಳಿಲ್ಲ ಎಂಬ ದುಃಖ ಕಡಿಮೆಯಾಗುವ ಬದಲು ಒಮ್ಮೊಮ್ಮೆ ಜಾಸ್ತಿಯೇ ಆಗುತ್ತಿರುವಂತೆ ಅನಿಸುತ್ತದೆ. ಆದರೆ ಇದು ಸಹಜ ಮತ್ತು ಸಮಯ ಕಳೆದಂತೆ ಕ್ರಮೇಣ ಆ ನೋವು ಸ್ವಲ್ಪಮಟ್ಟಿಗೆ ತಗ್ಗುವುದೆಂದು ನನಗೆ ಗೊತ್ತಿದೆ.”
ಹೌದು ಚಾರ್ಲ್ಸ್ ಸಮಯ ಕಳೆಯುವಂತೆ ಬಿಡಬೇಕಾಯಿತು. ಸಹಿಸಬೇಕಾಯಿತು. ಅದನ್ನು ಮಾಡಲು ಶಕ್ತನಾದದ್ದು ಹೇಗೆ? ಅವನಂದದ್ದು: “ಇವತ್ತಿನ ದುಃಖ ಇವತ್ತೇ ನಿಭಾಯಿಸಲು ಯೆಹೋವನು ನನಗೆ ಸಹಾಯಮಾಡಿದನು.” ಚಾರ್ಲ್ಸ್ ದುಃಖದಲ್ಲಿ ಮುಳುಗಿಹೋಗಲಿಲ್ಲ. ಅವನ ನೋವು ರಾತ್ರಿಬೆಳಗಾಗುವುದರೊಳಗೆ ಮಾಯವಾಗಲಿಲ್ಲ, ಅವನನ್ನು ಕಬಳಿಸಿಬಿಡಲೂ ಇಲ್ಲ. ನಿಮ್ಮ ಸಂಗಾತಿ ಅಸುನೀಗಿರುವಲ್ಲಿ ನಿಮ್ಮ ಈ ನಷ್ಟವನ್ನು ಭವಿಷ್ಯದಲ್ಲಿ ಹೇಗೆ ನಿಭಾಯಿಸುವುದೆಂದು ಚಿಂತಿಸುವುದರ ಬದಲು ಇವತ್ತು ಅದನ್ನು ನಿಭಾಯಿಸಲು ಪ್ರಯತ್ನಿಸಿರಿ. ಬಹುಶಃ ನಾಳಿನ ದಿನ ನಿಮಗೆ ಬೇಕಾದ ಉತ್ತೇಜನ ಇಲ್ಲವೆ ಪ್ರೋತ್ಸಾಹ ಸಿಗುವುದು.
1 ಯೋಹಾ. 3:8; ರೋಮ. 6:23) ಮರಣ ಮತ್ತು ಅದು ಹುಟ್ಟಿಸುವ ಭಯವನ್ನು ಬಳಸಿ ಸೈತಾನನು ಜನರನ್ನು ದಾಸತ್ವದಲ್ಲಿ ಮತ್ತು ನಿರೀಕ್ಷೆಯಿಲ್ಲದ ಸ್ಥಿತಿಯಲ್ಲಿಡುತ್ತಾನೆ. (ಇಬ್ರಿ. 2:14, 15) ಯಾರಾದರೂ ನಿಜ ಆನಂದ ಮತ್ತು ತೃಪ್ತಿ ತನಗೆ ಸಿಗಲಾರದು, ದೇವರ ಹೊಸ ಲೋಕದಲ್ಲೂ ಸಿಗಲಾರದೆಂದು ನೆನಸಿ ಹತಾಶರಾದಾಗ ಸೈತಾನನಿಗಂತೂ ಖುಷಿಯೋ ಖುಷಿ. ಪತಿ ಇಲ್ಲವೆ ಪತ್ನಿಯ ಸಾವಿಗಾಗಿ ಶೋಕಿಸುತ್ತಿರುವಾಗ ಒಬ್ಬರಿಗಾಗುವ ಸಂಕಟ, ಆದಾಮನ ಪಾಪ ಹಾಗೂ ಸೈತಾನನ ತಂತ್ರಗಳ ಪರಿಣಾಮವಾಗಿದೆ. (ರೋಮ. 5:12) ಸೈತಾನನಿಂದ ಆಗಿರುವ ಈ ಹಾನಿಯನ್ನು ಯೆಹೋವನು ಪೂರ್ತಿಯಾಗಿ ಸರಿಪಡಿಸುವನು. ಹೇಗೆ? ಸೈತಾನನು ಬಳಸುತ್ತಿರುವ ಅಸ್ತ್ರವಾದ ಮರಣವನ್ನೇ ತೆಗೆದುಹಾಕುವ ಮೂಲಕ. ಇದನ್ನು ತಿಳಿದುಕೊಂಡಿರುವ ಅನೇಕರು ಸೈತಾನನು ಹುಟ್ಟುಹಾಕುತ್ತಿರುವ ಭಯದಿಂದ ಬಿಡಿಸಲ್ಪಟ್ಟಿದ್ದಾರೆ. ನಿಮ್ಮಂತೆಯೇ ಸಂಗಾತಿಯನ್ನು ಕಳೆದುಕೊಂಡಿರುವ ಅನೇಕರೂ ಅವರಲ್ಲಿ ಸೇರಿದ್ದಾರೆ.
ಸಾವು ಯೆಹೋವನ ಮೂಲ ಉದ್ದೇಶದ ಭಾಗವಾಗಿರಲಿಲ್ಲ. ಬದಲಾಗಿ ಅದು “ಪಿಶಾಚನ ಕೆಲಸಗಳ” ಭಾಗವಾಗಿದೆ. (ಭೂಮಿಯ ಮೇಲೆ ಮೃತರ ಪುನರುತ್ಥಾನವಾಗುವಾಗ ಮಾನವ ಸಂಬಂಧಗಳಲ್ಲಿ ಅನೇಕ ಬದಲಾವಣೆಗಳಿರುವವು. ಪುನಃ ಜೀವಕ್ಕೆ ಬರುವ ಹೆತ್ತವರು, ಅಜ್ಜಅಜ್ಜಿಯರು ಮತ್ತು ಇತರ ಪೂರ್ವಜರ ಬಗ್ಗೆ ಯೋಚಿಸಿ. ಅವರೆಲ್ಲರೂ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ನಿಧಾನವಾಗಿ ಪರಿಪೂರ್ಣತೆಗೇರುವರು. ವೃದ್ಧಾಪ್ಯದ ಪರಿಣಾಮಗಳು ಅಳಿದುಹೋಗುವವು. ಯುವ ತಲೆಮಾರಿನವರಿಗೆ ತಮ್ಮ ಪೂರ್ವಜರ ಬಗ್ಗೆ ಇಂದಿರುವ ನೋಟವನ್ನು ಬಹುಶಃ ಅಲ್ಲಿ ಬದಲಾಯಿಸಬೇಕಾದೀತೇನೊ? ಬದಲಾವಣೆಗಳು ಏನೇ ಇರಲಿ ಅವು ಮಾನವ ಕುಟುಂಬದ ಏಳಿಗೆಗಾಗಿಯೇ ಇರುವವು.
ಪುನರುತ್ಥಾನವಾಗುವವರ ಬಗ್ಗೆ ನೂರೆಂಟು ಪ್ರಶ್ನೆಗಳು ಏಳಬಹುದು. ಉದಾಹರಣೆಗೆ, ಎರಡು ಮೂರು ಸಲ ಮದುವೆಯಾದವರ ಬಗ್ಗೆ ಏನು? ಸದ್ದುಕಾಯರು ಒಬ್ಬ ಸ್ತ್ರೀಯ ಬಗ್ಗೆ ಯೇಸುವಿಗೆ ಇಂಥದ್ದೇ ಪ್ರಶ್ನೆಯನ್ನು ಕೇಳಿದರು. ಆಕೆಯ ಮೊದಲ ಗಂಡ, ಎರಡನೆಯ ಗಂಡ ಮತ್ತು ಮುಂದಿನ ಐದು ಗಂಡಂದಿರು ಒಬ್ಬೊಬ್ಬರಾಗಿ ತೀರಿಹೋಗಿದ್ದರು. ಲೂಕ 20:27-33) ಪುನರುತ್ಥಾನವಾದಾಗ ಇಂಥವರ ಸಂಬಂಧ ಏನಾಗಿರುವುದು? ಆ ಬಗ್ಗೆ ನಮಗೆ ಸ್ವಲ್ಪವೂ ತಿಳಿದಿಲ್ಲ. ಆದರೆ ನಮಗೆ ತಿಳಿದಿಲ್ಲದ ಸಂಗತಿಗಳ ಬಗ್ಗೆ ಈಗ ಊಹಿಸಿಕೊಳ್ಳುತ್ತಾ ತಲೆಕೆಡಿಸಿಕೊಳ್ಳುತ್ತಾ ಇರುವುದರಲ್ಲಿ ಅರ್ಥವಿಲ್ಲ. ಈ ಹಂತದಲ್ಲಿ ನಾವು ದೇವರಲ್ಲಿ ಭರವಸೆ ಇಡಬೇಕು. ಒಂದಂತೂ ನಿಜ, ಭವಿಷ್ಯದಲ್ಲಿ ಯೆಹೋವನು ಏನೇ ಮಾಡಲಿ ಅದು ಒಳ್ಳೇದೇ ಆಗಿರುವುದು. ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಬದಲಾಗಿ ಅದನ್ನು ನಾವು ಎದುರುನೋಡಬಲ್ಲೆವು.
(ಪುನರುತ್ಥಾನ ನಿರೀಕ್ಷೆ—ಸಾಂತ್ವನದ ಮೂಲ
ದೇವರ ವಾಕ್ಯದಲ್ಲಿರುವ ಅತಿ ಸ್ಪಷ್ಟವಾದ ಬೋಧನೆಗಳಲ್ಲೊಂದು, ಸತ್ತುಹೋಗಿರುವ ಪ್ರಿಯ ಜನರು ಜೀವಕ್ಕೆ ಬರುವರೆಂಬುದೇ. ಹಿಂದೆ ನಡೆದಿರುವ ಪುನರುತ್ಥಾನಗಳ ಕುರಿತ ಬೈಬಲ್ ವೃತ್ತಾಂತಗಳು “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ [ಯೇಸುವಿನ] ಸ್ವರವನ್ನು ಕೇಳಿ ಹೊರಗೆ ಬರುವ”ರೆಂಬ ಖಾತರಿ ಕೊಡುತ್ತವೆ. (ಯೋಹಾ. 5:28, 29) ಆ ಸಮಯದಲ್ಲಿ ಬದುಕಿರುವವರು ಮರಣದ ಬಿಗಿಮುಷ್ಠಿಯಿಂದ ಹೊರಬರುವವರನ್ನು ಭೇಟಿಯಾಗಿ ಸಂತೋಷಪಡುವರು. ಇನ್ನೊಂದು ಕಡೆ, ಪುನರುತ್ಥಾನವಾಗಿ ಬರುವವರ ಸಂತೋಷ ನಮ್ಮ ಊಹೆಗೂ ನಿಲುಕದ್ದು.
ಸತ್ತವರು ಪುನಃ ಜೀವಿತರಾಗುವಾಗ ಭೂಮಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಹರ್ಷ ತುಂಬಿಕೊಂಡಿರುವುದು. ಪುನಃ ಜೀವಕ್ಕೆ ಬರುವ ಮಾನವರ ಸಂಖ್ಯೆ ಕೋಟಿಗಟ್ಟಲೆ ಆಗಿರುವುದು. (ಮಾರ್ಕ 5:39-42; ಪ್ರಕ. 20:13) ಭವಿಷ್ಯದ ಈ ಅದ್ಭುತಕಾರ್ಯದ ಕುರಿತು ಧ್ಯಾನಿಸುವಾಗ ಮರಣದಲ್ಲಿ ಪ್ರಿಯರನ್ನು ಕಳೆದುಕೊಂಡವರೆಲ್ಲರಿಗೆ ಸಾಂತ್ವನ ಸಿಗುತ್ತದೆ.
ಮೃತರು ಈ ರೀತಿಯಲ್ಲಿ ಜೀವಕ್ಕೆ ಬರುವಾಗ ಯಾರಿಗಾದರೂ ದುಃಖವಾಗುವುದೇ? ಇಲ್ಲ ಎಂಬ ಉತ್ತರ ಬೈಬಲಿಂದ ಸಿಗುತ್ತದೆ. ಯೆಶಾಯ 25:8ಕ್ಕನುಸಾರ ಯೆಹೋವನು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು.” ಮರಣವು ಉಂಟುಮಾಡುವ ಹೃದಯವಿದ್ರಾವಕ ಪರಿಣಾಮವನ್ನೂ ಪೂರ್ಣವಾಗಿ ಅಳಿಸಿಹಾಕಲಾಗುವುದು. ಅದೇ ಪ್ರವಾದನೆ ಮುಂದುವರಿಸಿ ಹೇಳುವುದು: “ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” ನಿಮ್ಮ ಬಾಳಸಂಗಾತಿ ಮೃತಪಟ್ಟಿರುವುದಕ್ಕೆ ನೀವೀಗಲೂ ದುಃಖದಿಂದಿರುವುದಾದರೆ ಪುನರುತ್ಥಾನದ ನಿರೀಕ್ಷೆ ನಿಮಗೆ ಸಂತೋಷಪಡಲು ಕಾರಣ ಕೊಡುತ್ತದೆ.
“ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ” ಎನ್ನುತ್ತಾನೆ ಯೆಹೋವನು. (ಯೆಶಾ. 55:9) ದೇವರು ಹೊಸ ಲೋಕದಲ್ಲಿ ಏನೆಲ್ಲ ಮಾಡಲಿದ್ದಾನೆ ಎಂಬದನ್ನು ಯಾವ ಮಾನವನೂ ಪೂರ್ಣವಾಗಿ ಗ್ರಹಿಸಲಾರನು. ಹಾಗಾಗಿ ಮುಂದೆ ನಡೆಯಲಿರುವ ಪುನರುತ್ಥಾನದ ಬಗ್ಗೆ ಯೇಸು ಕೊಟ್ಟ ವಾಗ್ದಾನವು ಅಬ್ರಹಾಮನಂತೆಯೇ ನಾವು ಯೆಹೋವನಲ್ಲಿ ಭರವಸೆಯಿಡಲು ಅವಕಾಶ ಕೊಡುತ್ತದೆ. ಮುಖ್ಯವಾಗಿ ಈಗ ಪ್ರತಿಯೊಬ್ಬ ಕ್ರೈಸ್ತನು ದೇವರು ಕೇಳಿಕೊಳ್ಳುವಂಥ ಸಂಗತಿಗಳನ್ನು ಮಾಡಬೇಕು. ಹೀಗೆ ಪುನರುತ್ಥಾನವಾಗುವವರ ಸಂಗಡ ನಾವು ‘ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ಜೀವವನ್ನು ಪಡೆದುಕೊಳ್ಳಲು ಯೋಗ್ಯರಾಗಿ ಪರಿಗಣಿಸಲ್ಪಡುವೆವು.’—ಲೂಕ 20:35.
ನಿರೀಕ್ಷೆಗೆ ಕಾರಣ
ಮುಂದೇನೊ ಎಂದು ಹೆದರುವ ಬದಲು, ನಿರೀಕ್ಷೆಯಿಟ್ಟುಕೊಳ್ಳಿ. ಮಾನವ ದೃಷ್ಟಿಕೋನದಿಂದ ನೋಡುವಾಗ ಭವಿಷ್ಯತ್ತು ಕರಾಳವಾಗಿ ತೋರುತ್ತದೆ. ಆದರೆ ಯೆಹೋವನು ನಮಗೆ ಉತ್ತಮವಾದ ಸಂಗತಿಗಳ ನಿರೀಕ್ಷೆ ಕೊಡುತ್ತಾನೆ. ಆತನು ನಮ್ಮೆಲ್ಲ ಅಗತ್ಯಗಳನ್ನೂ ಆಸೆಗಳನ್ನೂ ಹೇಗೆ ಪೂರೈಸುವನೆಂದು ನಿಖರವಾಗಿ ತಿಳಿದುಕೊಳ್ಳಲಾಗದಿದ್ದರೂ ಅದನ್ನು ಖಂಡಿತ ಪೂರೈಸುವನೆಂಬ ವಿಷಯದಲ್ಲಿ ನಮಗೆ ಸಂಶಯವಿರಬಾರದು. ಅಪೊಸ್ತಲ ಪೌಲನು ಬರೆದದ್ದು: “ಕಣ್ಣಿಗೆ ಕಾಣುವ ನಿರೀಕ್ಷೆಯು ನಿರೀಕ್ಷೆಯಲ್ಲ. ಒಬ್ಬ ಮನುಷ್ಯನು ಒಂದು ವಿಷಯವನ್ನು ನೋಡುವಾಗ ಅವನು ಅದಕ್ಕಾಗಿ ನಿರೀಕ್ಷಿಸುತ್ತಾನೊ? ನಾವು ಕಾಣದಿರುವುದಕ್ಕಾಗಿ ನಿರೀಕ್ಷಿಸುವುದಾದರೆ ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತಾ ಇರುತ್ತೇವೆ.” (ರೋಮ. 8:24, 25) ದೇವರ ವಾಗ್ದಾನಗಳಲ್ಲಿ ಬಲವಾದ ನಿರೀಕ್ಷೆ ನಿಮಗೆ ತಾಳಿಕೊಳ್ಳಲು ಸಹಾಯಮಾಡುವುದು. ಹೀಗೆ ತಾಳ್ಮೆ ತೋರಿಸುತ್ತಾ ಹೋದರೆ ಯೆಹೋವನು ‘ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸುವ’ ಆ ಭವ್ಯ ಭವಿಷ್ಯದಲ್ಲಿ ಆನಂದಿಸಬಲ್ಲಿರಿ. ಆಗ ಆತನು ‘ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುವನು.’—ಕೀರ್ತ. 37:4; 145:16; ಲೂಕ 21:19.
ಯೇಸುವಿನ ಮರಣವು ಹತ್ತಿರವಾಗುತ್ತಿದ್ದಂತೆ ಅಪೊಸ್ತಲರು ತುಂಬ ಗಾಬರಿಗೊಂಡಿದ್ದರು. ಯೇಸು ಅವರನ್ನು ಈ ಮಾತುಗಳಲ್ಲಿ ಸಂತೈಸಿದನು: “ನಿಮ್ಮ ಹೃದಯಗಳು ಕಳವಳಗೊಳ್ಳುವಂತೆ ಬಿಡಬೇಡಿರಿ. ದೇವರಲ್ಲಿ ನಂಬಿಕೆಯಿಡಿರಿ, ನನ್ನಲ್ಲಿಯೂ ನಂಬಿಕೆಯಿಡಿರಿ.” ಆತನು ಇದನ್ನೂ ಹೇಳಿದನು: “ನಾನು ನಿಮ್ಮನ್ನು ವಿಯೋಗಾವಸ್ಥೆಯಲ್ಲಿ ಬಿಡುವುದಿಲ್ಲ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ.” (ಯೋಹಾ. 14:1-4, 18, 27) ಆತನ ಮಾತುಗಳು ಶತಮಾನಗಳುದ್ದಕ್ಕೂ ಆತನ ಅಭಿಷಿಕ್ತ ಹಿಂಬಾಲಕರಿಗೆ ನಿರೀಕ್ಷೆ ಹಾಗೂ ತಾಳ್ಮೆ ತೋರಿಸಲು ಆಧಾರವಾಗಿರಲಿದ್ದವು. ತಮ್ಮ ಪ್ರಿಯ ವ್ಯಕ್ತಿಗಳ ಪುನರುತ್ಥಾನಕ್ಕಾಗಿ ಹಾತೊರೆಯುವವರು ಸಹ ಹತಾಶೆಯಿಂದ ಕುಗ್ಗಿಹೋಗಬೇಕಾಗಿಲ್ಲ. ಯೆಹೋವನು ಮತ್ತು ಆತನ ಪುತ್ರನು ಅವರನ್ನು ವಿಯೋಗಾವಸ್ಥೆಯಲ್ಲೇ ಬಿಡುವುದಿಲ್ಲ. ಆ ಮಾತಂತೂ ನಿಶ್ಚಿತ!
^ ಪ್ಯಾರ. 3 ಹೆಸರುಗಳನ್ನು ಬದಲಾಯಿಸಲಾಗಿದೆ.