ಬೆಟ್ಟಗಳ ನೆರಳಿನಲ್ಲಿ ಯೆಹೋವನು ಅವರನ್ನು ಕಾಪಾಡಿದನು
ಬೆಳಗ್ಗಿನ ಜಾವ. ಸ್ತ್ರೀಯೊಬ್ಬಳು ಮನೆ ಬಾಗಿಲು ತೆರೆದು ಹೊರಬಂದು ಮೆಟ್ಟಿಲ ಮೇಲಿದ್ದ ಪ್ಯಾಕೆಟ್ ನೋಡುತ್ತಾಳೆ. ಅದನ್ನೆತ್ತಿ ಬೀದಿಯತ್ತ ಹಾಯಿಸುತ್ತಾಳೆ. ಸುತ್ತಲೂ ಯಾರ ಸುಳಿವೂ ಇಲ್ಲ. ಅಪರಿಚಿತರೊಬ್ಬರು ರಾತ್ರಿ ಅದನ್ನು ಅಲ್ಲಿ ಇಟ್ಟು ಹೋಗಿರಬಹುದು. ಅದನ್ನು ಸ್ವಲ್ಪ ತೆರೆದು ನೋಡಿದ್ದೇ ತಡ, ತಕ್ಷಣ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ! ಅದರಲ್ಲಿ ಅಂಥದ್ದೇನಿತ್ತು? ನಿಷೇಧಿತ ಬೈಬಲ್ ಸಾಹಿತ್ಯ! ಅದನ್ನು ಎದೆಗಾನಿಸಿ, ಈ ಅಮೂಲ್ಯ ಆಧ್ಯಾತ್ಮಿಕ ಆಹಾರವನ್ನು ಕೊಟ್ಟದ್ದಕ್ಕೆ ಯೆಹೋವನಿಗೆ ಧನ್ಯವಾದ ಹೇಳುತ್ತಾ ಮನಸ್ಸಲ್ಲೇ ಪ್ರಾರ್ಥಿಸುತ್ತಾಳೆ.
1930ರ ದಶಕದಲ್ಲಿ ಇಂಥ ದೃಶ್ಯಗಳು ಜರ್ಮನಿಯಲ್ಲಿ ಕಾಣಸಿಗುತ್ತಿದ್ದವು. ಏಕೆಂದರೆ 1933ರಲ್ಲಿ ನಾಜಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ದೇಶದ ಹೆಚ್ಚಿನ ಭಾಗಗಳಲ್ಲಿ ನಿಷೇಧ ಹೇರಲಾಗಿತ್ತು. ಈಗ 100 ವರ್ಷ ಪ್ರಾಯ ದಾಟಿರುವ ರಿಚರ್ಡ್ ರುಡಾಲ್ಫ್ ಎಂಬವರು “ಯೆಹೋವ ಹಾಗೂ ಆತನ ನಾಮದ ಕುರಿತ ಘೋಷಣೆಯನ್ನು ಮನುಷ್ಯರ ಇಂಥ ಕಾನೂನು ತಡೆಯಲು ಸಾಧ್ಯವೇ ಇಲ್ಲ ಎಂದು ನಮಗೆ ಚೆನ್ನಾಗಿ ಗೊತ್ತಿತ್ತು” ಎನ್ನುತ್ತಾರೆ. * “ಸುವಾರ್ತೆ ಸಾರಲು ಅಧ್ಯಯನ ಮಾಡಲು ನಮಗೆ ಮುಖ್ಯವಾಗಿ ಬೇಕಾದದ್ದೇ ಬೈಬಲ್ ಸಾಹಿತ್ಯ. ಅದನ್ನು ನಿಷೇಧಿಸಲಾಗಿದ್ದ ಕಾರಣ ಅದು ಅಷ್ಟು ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಹೀಗಿದ್ದ ಮೇಲೆ ಸಾರುವ ಕೆಲಸ ಹೇಗೆ ಮುಂದುವರಿಯುವುದೆಂಬ ಪ್ರಶ್ನೆ ನಮ್ಮ ಮುಂದಿತ್ತು.” ಆದರೆ ಯಾರೂ ಊಹಿಸಲಾರದ ವಿಧದಲ್ಲಿ ಈ ಅಗತ್ಯವನ್ನು ಪೂರೈಸುವ ಕೆಲಸದಲ್ಲಿ ರಿಚರ್ಡ್ ಬೇಗನೆ ನೆರವಾಗಲಿದ್ದರು. ಆ ಕೆಲಸ ಬೆಟ್ಟಗಳ ನೆರಳಿನಲ್ಲಿ ನಡೆಯಲಿತ್ತು.—ನ್ಯಾಯ. 9:36.
ಕಳ್ಳಸಾಗಣೆಗಾರರ ಕಾಲುದಾರಿ ಹಿಡಿದು. . .
ನೀವು ಎಲ್ಬೆ (ಅಥವಾ ಲಾಬೆ) ನದಿಯಲ್ಲಿ ಪ್ರಯಾಣಿಸುತ್ತಾ ಅದರ ಮೂಲದ ಕಡೆಗೆ ಸಾಗಿದರೆ ‘ದೈತ್ಯ ಪರ್ವತಗಳು’ ಎಂದು ಕರೆಯಲಾಗುವ ಕರ್‌ಕನೋಶಿ ಪರ್ವತಶ್ರೇಣಿ ಸಿಗುತ್ತದೆ. ಈಗಿನ ಚೆಕ್ ಗಣರಾಜ್ಯ ಮತ್ತು ಪೊಲೆಂಡ್‌ನ ಗಡಿ ಪ್ರದೇಶದಲ್ಲಿ ನೆಲೆಸಿರುವ ಈ ಪರ್ವತಗಳ ಎತ್ತರ ಸುಮಾರು 5,250 ಅಡಿ. ಎತ್ತರ ಬರೀ ಅಷ್ಟೇ ಇದ್ದರೂ ಈ ಪರ್ವತಗಳನ್ನು ಯುರೋಪಿನ ಮಧ್ಯ ಭಾಗದಲ್ಲಿರುವ ಆರ್ಕ್ಟಿಕ್ ದ್ವೀಪ ಎಂದು ಕರೆಯಲಾಗುತ್ತದೆ. ಏಕೆಂದರೆ ಆರು ತಿಂಗಳ ಕಾಲ 10 ಅಡಿಯಷ್ಟು ಎತ್ತರಕ್ಕೆ ಹಿಮ ಮುಚ್ಚಿಕೊಂಡಿರುತ್ತದೆ. ಅಲ್ಲಿಯ ಹವಾಮಾನ ಯಾವಾಗ ಹೇಗಿರುತ್ತದೆಂದು ಹೇಳಲಾಗುವುದಿಲ್ಲ. ಈ ಸಂಗತಿಯನ್ನು ಅಲಕ್ಷಿಸಿ ಅಲ್ಲಿ ಹೋದರೆ ದಿಢೀರನೆ ಪರ್ವತ ಶಿಖರಗಳನ್ನು ಆವರಿಸುವ ದಟ್ಟ ಮಂಜಿನಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ.
ನೂರಾರು ವರ್ಷಗಳಿಂದ ಈ ಪರ್ವತ ಶ್ರೇಣಿ ಪ್ರಾಂತಗಳಿಗೆ ರಾಜ್ಯಗಳಿಗೆ ಮತ್ತು ದೇಶಗಳಿಗೆ ನೈಸರ್ಗಿಕ ಗಡಿಯಾಗಿ ನಿಂತಿದೆ. ಈ ಅಪಾಯಕಾರಿ ಭೂಕ್ಷೇತ್ರದಲ್ಲಿ ಕಾವಲುದಳವನ್ನಿಡುವುದೂ ಕಷ್ಟವಾಗಿರುತ್ತಿತ್ತು. ಹಾಗಾಗಿ ಹಿಂದಿನ ಕಾಲದಲ್ಲಿ ಆ ಸ್ಥಳದಲ್ಲಿದ್ದ ಅನೇಕ ಜನರು ಕಳ್ಳಸಾಗಣೆ
ಮಾಡುತ್ತಿದ್ದರು. 1930ರ ದಶಕದಲ್ಲಿ ಈ ದೈತ್ಯ ಪರ್ವತಗಳು ಚೆಕೊಸ್ಲೊವಾಕಿಯ ಮತ್ತು ಜರ್ಮನಿಗೂ ಗಡಿರೇಖೆಯಂತಿದ್ದವು. ಆ ಕಾಲದ ಸಾಕ್ಷಿಗಳು ಹಿಂದೆ ಕಳ್ಳಸಾಗಣೆಗಾರರು ಬಳಸುತ್ತಿದ್ದಂಥ ಕಾಲುದಾರಿಗಳನ್ನು ಬಳಸಲಾರಂಭಿಸಿದರು. ಯಾಕೆ? ಎಲ್ಲಿ ಅಮೂಲ್ಯ ಬೈಬಲ್ ಸಾಹಿತ್ಯ ಹೆಚ್ಚು ಸುಲಭವಾಗಿ ಸಿಗುತ್ತಿತ್ತೋ ಅಲ್ಲಿಂದ ಅದನ್ನು ಜರ್ಮನಿಯೊಳಗೆ ತರಲಿಕ್ಕಾಗಿ. ಇದನ್ನು ಮಾಡುತ್ತಿದ್ದ ದೃಢಮನಸ್ಸಿನ ಸಾಕ್ಷಿಗಳಲ್ಲಿ ಯುವ ಪ್ರಾಯದ ರಿಚರ್ಡ್ ಸಹ ಒಬ್ಬರಾಗಿದ್ದರು.ಅಪಾಯಕಾರಿ “ಚಾರಣ”
“ಯುವ ಸಹೋದರರಾದ ನಾವು ವಾರಾಂತ್ಯಗಳಲ್ಲಿ ಚಾರಣಿಗರಂಥ ಉಡುಗೆ-ತೊಡುಗೆ ತೊಟ್ಟು ಆ ಪರ್ವತಗಳತ್ತ ನಡೆಯುತ್ತಿದ್ದೆವು. ಹೆಚ್ಚುಕಮ್ಮಿ ಏಳು ಮಂದಿಯ ಗುಂಪುಗಳಾಗಿ ಹೋಗುತ್ತಿದ್ದೆವು” ಎಂದು ನೆನಪಿಸಿಕೊಳ್ಳುತ್ತಾರೆ ರಿಚರ್ಡ್. “ಜರ್ಮನಿಯ ಕಡೆಯಿಂದ ಪರ್ವತಗಳನ್ನು ಹತ್ತಿ ದಾಟಿ ಚೆಕ್ ದೇಶಕ್ಕೆ ಕಾಲಿಡುತ್ತಿದ್ದೆವು. ಈ ಪರ್ವತಗಳಿಂದ ಷ್ಪಿಂಡಲ್-ರಾವ್-ಮಲಿನ್ ಪ್ರವಾಸಧಾಮಕ್ಕೆ [16.5 ಕಿ.ಮೀ.] ದೂರ ಹೋಗುತ್ತಿದ್ದೆವು. ಈ ಇಡೀ ಪ್ರವಾಸಕ್ಕೆ ಮೂರು ತಾಸಾದರೂ ಬೇಕಾಗುತ್ತಿತ್ತು.” ಆವಾಗೆಲ್ಲ ಚೆಕ್ ದೇಶದ ಆ ಪ್ರದೇಶದಲ್ಲಿ ಅನೇಕ ಜರ್ಮನರು ವಾಸಿಸುತ್ತಿದ್ದರು. ಅವರಲ್ಲಿ ಒಬ್ಬ ರೈತ ನಮಗೆ ಸಹಾಯ ಮಾಡಲು ಒಪ್ಪಿಕೊಂಡ. ಪ್ರಾಗ್ ನಗರದಿಂದ ರೈಲಿನಲ್ಲಿ ಸಹೋದರರು ಸಾಹಿತ್ಯದ ಬಾಕ್ಸ್‌ಗಳನ್ನು ಹತ್ತಿರದ ಒಂದು ಪಟ್ಟಣಕ್ಕೆ ಕಳುಹಿಸುತ್ತಿದ್ದರು. ಅಲ್ಲಿಂದ ಈ ರೈತನು ಸಾಮಾನ್ಯವಾಗಿ ಪ್ರವಾಸಿಗರನ್ನು ಕರೆದೊಯ್ಯುವ ಕುದುರೆಗಾಡಿಯಲ್ಲಿ ಅವುಗಳನ್ನು ತರುತ್ತಿದ್ದ. ಈ ಬಾಕ್ಸ್‌ಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಕುದುರೆಲಾಯದ ಅಟ್ಟದಲ್ಲಿ ಹುಲ್ಲಿನ ಮಧ್ಯೆ ಬಚ್ಚಿಡುತ್ತಿದ್ದ. ಜರ್ಮನಿಗೆ ಸಾಹಿತ್ಯವನ್ನು ತೆಗೆದುಕೊಂಡು ಹೋಗುವವರು ಬರುವ ತನಕ ಅವು ಅಲ್ಲೇ ಇರುತ್ತಿದ್ದವು.
ರಿಚರ್ಡ್ ಮುಂದುವರಿಸುವುದು: “ಆ ರೈತನ ಮನೆಗೆ ಹೋದ ನಂತರ ನಮ್ಮ ಬೆನ್ನುಚೀಲಗಳಲ್ಲಿ ಸಾಹಿತ್ಯವನ್ನು ತುಂಬಿಸುತ್ತಿದ್ದೆವು. ಈ ಬೆನ್ನುಚೀಲಗಳನ್ನು ಭಾರದ ವಸ್ತುಗಳನ್ನು ಹೊರಲೆಂದೇ ತಯಾರಿಸಲಾಗಿರುತ್ತಿತ್ತು. ನಮ್ಮಲ್ಲಿ ಒಬ್ಬೊಬ್ಬರು 100 ಪೌಂಡ್‌ಗಳಷ್ಟು (50 ಕೆ.ಜಿ.) ತೂಕ ಹೊರುತ್ತಿದ್ದೆವು.” ತಮ್ಮನ್ನು ಯಾರೂ ಹಿಡಿಯಬಾರದೆಂಬ ಕಾರಣಕ್ಕೆ ಈ ಸಹೋದರರು ಕತ್ತಲಲ್ಲಿ ನಡೆಯುತ್ತಿದ್ದರು. ಸೂರ್ಯ ಮುಳುಗಿದ ನಂತರ ಹೊರಟು ಬೆಳಗಾಗುವುದರೊಳಗೆ ಮನೆ ತಲುಪುತ್ತಿದ್ದರು. ಆ ಕಾಲದಲ್ಲಿ ಜರ್ಮನಿಯ ಸರ್ಕಿಟ್ ಮೇಲ್ವಿಚಾರಕರಾಗಿದ್ದ ಅರ್ನ್‌ಸ್ಟ್ ವೀಸ್ನರ್‌ರವರು ಸಹೋದರರು ತೆಗೆದುಕೊಳ್ಳುತ್ತಿದ್ದ ಮುಂಜಾಗ್ರತಾ ಕ್ರಮದ ಬಗ್ಗೆ ಹೀಗಂದರು: “ಇಬ್ಬರು ಸಹೋದರರು ಮುಂದೆ ಹೋಗುತ್ತಿದ್ದರು. ಅವರಿಗೆ ಯಾರಾದರು ಸಿಕ್ಕಿದರೆ ಕೂಡಲೇ ತಮ್ಮ ಟಾರ್ಚ್ ಬೆಳಕಿಂದ ಸನ್ನೆ ಮಾಡುತ್ತಿದ್ದರು. ಆಗ ಹೆಚ್ಚುಕಮ್ಮಿ 100 ಮೀಟರ್ [328 ಅಡಿ] ಹಿಂದೆ ಭಾರವಾದ ಬೆನ್ನುಚೀಲಗಳನ್ನು ಹೊತ್ತು ಬರುತ್ತಿದ್ದ ಸಹೋದರರಿಗೆ ಪೊದೆಗಳಲ್ಲಿ ಅಡಗಿಕೊಳ್ಳಲು ಆಗುತ್ತಿತ್ತು. ಆ ಇಬ್ಬರು ಸಹೋದರರು ಮತ್ತೆ ಹಿಂದೆ ಬಂದು ಗುಪ್ತಪದವೊಂದನ್ನು ಹೇಳುತ್ತಿದ್ದರು. ಆಗ ಅಡಗಿಕೊಂಡಿದ್ದವರಿಗೆ ಅಪಾಯ ಇನ್ನಿಲ್ಲ ಎಂದು ಗೊತ್ತಾಗುತ್ತಿತ್ತು. ಗುಪ್ತಪದಗಳನ್ನು ಪ್ರತಿ ವಾರ ಬದಲಾಯಿಸಲಾಗುತ್ತಿತ್ತು.” ಸಹೋದರರಿಗೆ ನೀಲಿ ಸಮವಸ್ತ್ರಧಾರಿ ಜರ್ಮನ್ ಪೊಲೀಸರಿಂದ ಮಾತ್ರ ಅಪಾಯವಿರಲಿಲ್ಲ. ಬೇರೆ ಅಪಾಯಗಳೂ ಇದ್ದವು.
ರಿಚರ್ಡ್ ನೆನಪಿಸಿಕೊಳ್ಳುವುದು: “ಒಂದು ಸಂಜೆ ಕೆಲಸದ ಕಡೆ ತುಂಬ ಹೊತ್ತು ಇರಬೇಕಾದದರಿಂದ ನಾನು ಹೊರಡುವಾಗ ತಡವಾಗಿತ್ತು. ಬೇರೆ ಸಹೋದರರು ಆಗಲೇ ಚೆಕ್‌ಗೆ ಹೊರಟಿದ್ದರು. ನಾನು ಹೊರಟಾಗ ಕತ್ತಲು ಕವಿದಿತ್ತು. ಎಲ್ಲಾ ಮಂಜುಮಂಜಾಗಿತ್ತು. ತಣ್ಣಗಿನ ಮಳೆಯಲ್ಲಿ ನಡೆಯುತ್ತಾ ಚಳಿಯಿಂದ ನಡಗುತ್ತಿದ್ದೆ. ಕುಬ್ಜ ಪೈನ್ ಮರಗಳ ಮಧ್ಯೆ ನಾನು ದಾರಿ ತಪ್ಪಿದೆ. ಈ ಜಾಗದಲ್ಲಿ ಅನೇಕ ಚಾರಣಿಗರು ಹೀಗೆ ದಾರಿತಪ್ಪಿ ಜೀವ ಕಳೆದುಕೊಂಡಿದ್ದಾರೆ. ನನಗೆ ಸಹೋದರರು ಸಿಕ್ಕಿದ್ದು ಮರುದಿನ ಮುಂಜಾನೆ ವಾಪಸ್ ಬರುತ್ತಿದ್ದಾಗಲೇ.”
ಸುಮಾರು ಮೂರು ವರ್ಷಗಳ ವರೆಗೆ ಈ ಗಟ್ಟಿಗುಂಡಿಗೆಯ ಸಹೋದರರು ಪ್ರತಿ ವಾರ ಪರ್ವತಗಳಿಗೆ ಹೋಗುತ್ತಿದ್ದರು. ಚಳಿಗಾಲದಲ್ಲಿ ಸ್ಕೀಗಳನ್ನು ಬಳಸಿ ಪ್ರಯಾಣಿಸುತ್ತಾ ಅಥವಾ ಹಿಮ ಜಾರುಬಂಡಿಯನ್ನು ಬಳಸುತ್ತಾ ತಮ್ಮ ಅಮೂಲ್ಯ ಸರಕನ್ನು ಸಾಗಿಸುತ್ತಿದ್ದರು. ಆಗಾಗ್ಗೆ ಸುಮಾರು 20 ಮಂದಿ ಸಹೋದರರಿರುವ ಗುಂಪುಗಳು ಚಾರಣಿಗರಿಗೆಂದು ಗುರುತುಮಾಡಲಾಗಿರುವ ಹಾದಿಗಳಲ್ಲಿ ಹಗಲಲ್ಲೂ ಗಡಿಯನ್ನು ದಾಟಿದ್ದುಂಟು. ತಾವು ಸಾಮಾನ್ಯ ಚಾರಣಿಗರ ಗುಂಪೆಂದು ತೋರಿಸಿಕೊಡಲು ಅವರ ಜತೆ ಕೆಲವೊಮ್ಮೆ ಸಹೋದರಿಯರೂ ಹೋಗುತ್ತಿದ್ದರು. ಇವರಲ್ಲಿ ಕೆಲವರು ಮುಂದೆಮುಂದೆ ನಡೆಯುತ್ತಿದ್ದರು. ಏನಾದರು ಅಪಾಯ ಇದೆ ಎಂಬ ಸಂಶಯ ಬಂದಾಗೆಲ್ಲ ತಮ್ಮ ಹ್ಯಾಟ್‌ಗಳನ್ನು ಮೇಲೆಸೆದು ಸನ್ನೆ ಮಾಡುತ್ತಿದ್ದರು.
ಸಹೋದರರು ರಾತ್ರಿಯೆಲ್ಲ ಪ್ರಯಾಣ ಮಾಡಿ ಬಂದ ನಂತರ ಮುಂದೇನು? ಆದಷ್ಟು ಬೇಗನೆ ಸಾಹಿತ್ಯ ವಿತರಿಸುವ ಏರ್ಪಾಡು ಮಾಡಲಾಗುತ್ತಿತ್ತು. ಹೇಗೆ? ಸಾಹಿತ್ಯವನ್ನು ಸಾಬೂನಿನ ಮೂಟೆಗಳಂತೆ ಪ್ಯಾಕ್ ಮಾಡಿ ಹರ್ಷ್‌ಬರ್ಕ್‌ನ ರೈಲ್ವೇ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಅಲ್ಲಿಂದ ಅದು ಜರ್ಮನಿಯ ಬೇರೆಬೇರೆ ಭಾಗಗಳಿಗೆ ಹೋಗುತ್ತಿತ್ತು. ನಂತರ ಸಹೋದರ ಸಹೋದರಿಯರು ಹುಷಾರಾಗಿ ಯಾರಿಗೂ ಗೊತ್ತಾಗದಂತೆ ಆ ಮೂಟೆಗಳನ್ನು ಮೊದಲನೇ ಪ್ಯಾರದಲ್ಲಿ ತಿಳಿಸಿದಂತೆ ತಮ್ಮ ಜೊತೆ ಸಾಕ್ಷಿಗಳಿಗೆ ತಲುಪಿಸುತ್ತಿದ್ದರು. ರಹಸ್ಯವಾಗಿ ನಡೆಯುತ್ತಿದ್ದ ಈ ವಿತರಣೆಯು ಒಂದು ಜಾಲದಂತೆ ಹೆಣೆದುಕೊಂಡಿತ್ತು. ಆದ್ದರಿಂದ ಅದರಲ್ಲಿನ ಯಾವುದೇ ಒಂದು ಸಂಪರ್ಕದ ಮಾಹಿತಿ ಹೊರಬಿದ್ದರೂ ಫಲಿತಾಂಶ ತುಂಬ ಭೀಕರವಾಗಿರಸಾಧ್ಯವಿತ್ತು. ಒಂದು ದಿನ ನೆನಸದ ಕಡೆಯಿಂದ ನಮ್ಮ ಕೆಲಸಕ್ಕೆ ಹೊಡೆತ ಬಿತ್ತು.
1936ರಲ್ಲಿ ಬರ್ಲಿನ್‌ನ ಹತ್ತಿರದಲ್ಲಿದ್ದ ಸಾಹಿತ್ಯದ ಡಿಪೋ ಬಯಲಾಯಿತು. ಅಲ್ಲಿ ಸಿಕ್ಕಿದ ವಸ್ತುಗಳಲ್ಲಿ ಅನಾಮಿಕರೊಬ್ಬರು ಹರ್ಷ್‌ಬರ್ಕ್‌ನಿಂದ ಕಳುಹಿಸಿದ ಮೂರು ಮೂಟೆಗಳು ಸಿಕ್ಕಿದವು. ಪೊಲೀಸರು ಆ ಮೂಟೆಗಳ ಮೇಲಿನ ಹಸ್ತಾಕ್ಷರ ವಿಶ್ಲೇಷಣೆ ಮಾಡಿದರು. ಹೀಗೆ ಸಾಹಿತ್ಯವನ್ನು ಗುಪ್ತವಾಗಿ ತರುತ್ತಿದ್ದ ಗುಂಪಿನ ಒಬ್ಬ ಮುಖ್ಯ ವ್ಯಕ್ತಿಯನ್ನು ಗುರುತಿಸಿ ಬಂಧಿಸಿದರು. ಸ್ವಲ್ಪ ಸಮಯದಲ್ಲೇ ಇನ್ನಿಬ್ಬರನ್ನು ಬಂಧಿಸಲಾಯಿತು. ಅವರಲ್ಲಿ ರಿಚರ್ಡ್ ರುಡಾಲ್ಫ್ ಸಹ ಒಬ್ಬರು. ಪೊಲೀಸರು ವಿಚಾರಿಸಿದಾಗ ಈ ಸಹೋದರರು ತಾವೇ ಈ ಎಲ್ಲಾ ಕೆಲಸ ಮಾಡುತ್ತಿದ್ದೇವೆಂದು ಹೇಳಿಕೊಂಡರು. ಇದರಿಂದಾಗಿ ಉಳಿದ ಸಹೋದರರು ಹೆಚ್ಚೆಚ್ಚು ಅಪಾಯಕಾರಿಯಾಗುತ್ತಿದ್ದ ಈ ಪ್ರಯಾಣಗಳನ್ನು ಇನ್ನಷ್ಟು ಸಮಯ ಮುಂದುವರಿಸಲು ಸಾಧ್ಯವಾಯಿತು.
ನಮಗಿರುವ ಪಾಠ
ಸ್ವಲ್ಪ ಸಮಯದ ವರೆಗೆ ಜರ್ಮನಿಯಲ್ಲಿದ್ದ ಸಾಕ್ಷಿಗಳಿಗಾಗಿ ಬೈಬಲ್ ಸಾಹಿತ್ಯವನ್ನು ತರುವ ಒಂದು ಮುಖ್ಯ ವಿಧಾನ ಈ ದೈತ್ಯ ಪರ್ವತಗಳ ಮಾರ್ಗವಾಗಿ ಬೆನ್ನುಚೀಲದಲ್ಲಿ ಅದನ್ನು ಹೊತ್ತು ತರುವುದೇ ಆಗಿತ್ತು. ಆದರೆ ಈ ಪರ್ವತಗಳ ಮಾರ್ಗವೊಂದನ್ನೇ ಬಳಸಲಾಗುತ್ತಿರಲಿಲ್ಲ. 1939ರಲ್ಲಿ ಜರ್ಮನ್ ಪಡೆಗಳು ಚೆಕೊಸ್ಲೊವಾಕಿಯವನ್ನು ವಶಪಡಿಸಿಕೊಳ್ಳುವ ತನಕ ಈ ಎರಡು ದೇಶಗಳ ಗಡಿಯುದ್ದಕ್ಕೂ ಇಂಥದ್ದೇ ಹಲವಾರು ಮಾರ್ಗಗಳನ್ನು ಬಳಸಲಾಯಿತು. ಜರ್ಮನಿಯ ಗಡಿಯಲ್ಲಿ ಫ್ರಾನ್ಸ್, ನೆದರ್ಲೆಂಡ್ಸ್ ಮತ್ತು ಸ್ವಿಟ್ಜರ್ಲೆಂಡ್‌ನಂಥ ಇನ್ನಿತರ ದೇಶಗಳಿವೆ. ಅಲ್ಲಿನ ಹಾಗೂ ಜರ್ಮನಿಯಲ್ಲಿನ ಸಾಕ್ಷಿಗಳು ಹಿಂಸೆಗೊಳಗಾಗಿರುವ ಜೊತೆ ವಿಶ್ವಾಸಿಗಳಿಗೆ ಆಧ್ಯಾತ್ಮಿಕ ಆಹಾರವನ್ನು ತಲುಪಿಸಲು ಹಲವು ಅಪಾಯಗಳಿಗೆ ತಲೆಯೊಡ್ಡಲು ಸಿದ್ಧರಿದ್ದರು.
ಇಂದು ನಮ್ಮಲ್ಲಿ ಅನೇಕರಿಗೆ ಬೈಬಲ್ ಸಾಹಿತ್ಯ ಮುದ್ರಿತ, ಆಡಿಯೋ, ವಿಡಿಯೋ ಮತ್ತು ಇಲೆಕ್ಟ್ರಾನಿಕ್ ರೂಪದಲ್ಲಿ ಎಷ್ಟು ಬೇಕೊ ಅಷ್ಟು ಸಿಗುತ್ತಿದೆ. ರಾಜ್ಯ ಸಭಾಗೃಹದಲ್ಲಿ ಹೊಸ ಪ್ರಕಾಶನ ಸಿಗುವಾಗ, jw.orgನಿಂದ ಡೌನ್‌ಲೋಡ್ ಮಾಡಿಕೊಳ್ಳುವಾಗ ಅದನ್ನು ನಿಮಗಾಗಿ ಲಭ್ಯಗೊಳಿಸಲು ಎಷ್ಟು ಶ್ರಮ ವ್ಯಯಿಸಲಾಗಿದೆ ಎಂದು ಒಂದು ಕ್ಷಣ ಯೋಚಿಸಿ ನೋಡಿದ್ದೀರಾ? ಬಹುಶಃ ಹಿಮಾವೃತ ಪರ್ವತ ಶಿಖರಗಳನ್ನು ದಾಟಿ ಬರುವಂಥ ಸಾಹಸಮಯ ಕೆಲಸ ಅದರಲ್ಲಿ ಒಳಗೂಡಿರಲಿಕ್ಕಿಲ್ಲ. ಆದರೆ ಒಂದಂತೂ ನಿಜ. ನಿಸ್ವಾರ್ಥ ಭಾವದಿಂದ ನಿಮಗಾಗಿ ಸೇವೆಸಲ್ಲಿಸುವ ಅನೇಕ ಜೊತೆ ವಿಶ್ವಾಸಿಗಳ ಕಠಿಣ ಶ್ರಮ ಅದರಲ್ಲಿ ಒಳಗೂಡಿದೆ.
^ ಪ್ಯಾರ. 3 ಸೈಲೀಸಿಯದ ಹರ್ಷ್‌ಬರ್ಕ್ ಸಭೆಯಲ್ಲಿ ಇವರು ಸೇವೆ ಸಲ್ಲಿಸಿದರು. ಹರ್ಷ್‌ಬರ್ಕ್ ನಗರ ಇಂದು ನೈಋತ್ಯ ಪೊಲೆಂಡ್‌ನ ಯೆಲೆನ್ಯ ಗೂರಾದಲ್ಲಿದೆ.