ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯಕ್ಕಾಗಿ ನೀವು ತ್ಯಾಗಗಳನ್ನು ಮಾಡುವಿರಾ?

ರಾಜ್ಯಕ್ಕಾಗಿ ನೀವು ತ್ಯಾಗಗಳನ್ನು ಮಾಡುವಿರಾ?

“ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”​—2 ಕೊರಿಂ. 9:7.

1. ಅನೇಕರು ಯಾವ ರೀತಿಯ ತ್ಯಾಗಗಳನ್ನು ಮಾಡುತ್ತಾರೆ? ಯಾಕೆ?

ಜನರು ತಮಗೆ ಮುಖ್ಯವೆಂದನಿಸುವ ವಿಷಯಗಳಿಗಾಗಿ ಸಂತೋಷದಿಂದ ತ್ಯಾಗಗಳನ್ನು ಮಾಡುತ್ತಾರೆ. ಮಕ್ಕಳ ಹಿತಕ್ಕೆಂದು ಹೆತ್ತವರು ತಮ್ಮ ಸಮಯ, ಹಣ, ಶಕ್ತಿಯನ್ನು ವ್ಯಯಿಸುತ್ತಾರೆ. ಕೆಲವು ಯುವ ಕ್ರೀಡಾಪಟುಗಳು ತಮ್ಮ ಪ್ರಾಯದ ಇತರರಂತೆ ಆಟವಾಡುತ್ತಾ ಮಜಾಮಾಡುತ್ತಾ ಇರುವ ಬದಲು ದೇಶಕ್ಕಾಗಿ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ಭಾಗವಹಿಸಲು ತಾಸುಗಟ್ಟಲೆ ಕಠಿಣ ತಾಲೀಮು ನಡೆಸುತ್ತಿರುತ್ತಾರೆ. ತನಗೆ ಮುಖ್ಯವಾಗಿದ್ದ ವಿಷಯಗಳಿಗಾಗಿ ಯೇಸು ಸಹ ತ್ಯಾಗಗಳನ್ನು ಮಾಡಿದನು. ಅವನು ಸುಖಭೋಗದ ಹಿಂದೆ ಬೀಳಲಿಲ್ಲ. ಸಂಸಾರಸ್ಥನಾಗಿ ಮಕ್ಕಳನ್ನು ಪಡೆಯಲಿಲ್ಲ. ರಾಜ್ಯದ ಕೆಲಸವನ್ನು ಹೆಚ್ಚಿಸುವುದರ ಮೇಲೆ ತನ್ನ ಗಮನ ನೆಟ್ಟನು. (ಮತ್ತಾ. 4:17; ಲೂಕ 9:58) ಅವನ ಹಿಂಬಾಲಕರು ಸಹ ರಾಜ್ಯವನ್ನು ಬೆಂಬಲಿಸಲು ತುಂಬ ವಿಷಯಗಳನ್ನು ಬಿಟ್ಟುಕೊಟ್ಟರು. ಆ ರಾಜ್ಯದ ಕೆಲಸವನ್ನು ಹೆಚ್ಚಿಸುವುದೇ ಅವರ ಜೀವನದ ಮುಖ್ಯ ಕಾರ್ಯವಾಗಿತ್ತು. ರಾಜ್ಯವನ್ನು ಬೆಂಬಲಿಸುವುದರಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ತ್ಯಾಗಗಳನ್ನು ಮಾಡಿದರು. (ಮತ್ತಾ. 4:18-22; 19:27) ನಾವು ನಮ್ಮನ್ನೇ ಹೀಗೆ ಕೇಳಿಕೊಳ್ಳಬಹುದು: ‘ನನ್ನ ಜೀವನದಲ್ಲಿ ನನಗೆ ಯಾವುದು ಪ್ರಾಮುಖ್ಯ?’

2. (1) ನಿಜ ಕ್ರೈಸ್ತರೆಲ್ಲರು ಮಾಡಲೇಬೇಕಾದ ತ್ಯಾಗಗಳು ಯಾವುವು? (2) ಕೆಲವರಿಗೆ ಯಾವ ಹೆಚ್ಚಿನ ತ್ಯಾಗಗಳನ್ನು ಮಾಡಲು ಸಾಧ್ಯವಾಗುತ್ತಿದೆ?

2 ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳಲು ಮತ್ತು ಕಾಪಾಡಿಕೊಳ್ಳಲು ನಿಜ ಕ್ರೈಸ್ತರೆಲ್ಲರು ಮಾಡಲೇಬೇಕಾದ ಕೆಲವೊಂದು ತ್ಯಾಗಗಳಿವೆ. ಪ್ರಾರ್ಥನೆ, ಕುಟುಂಬ ಆರಾಧನೆ, ಕೂಟದ ಹಾಜರಿ ಮತ್ತು ಕ್ಷೇತ್ರ ಸೇವೆಗಾಗಿ ಸಮಯ, ಶಕ್ತಿ ವ್ಯಯಿಸುವುದು ಅಂಥ ಒಂದು ತ್ಯಾಗ. * (ಯೆಹೋ. 1:8; ಮತ್ತಾ. 28:19, 20; ಇಬ್ರಿ. 10:24, 25) ನಮ್ಮ ಶ್ರಮ ಮತ್ತು ಯೆಹೋವನ ಆಶೀರ್ವಾದದ ಫಲವಾಗಿ ಸಾರುವ ಕೆಲಸ ಹೆಚ್ಚು ವೇಗವಾಗಿ ಸಾಗುತ್ತಿದೆ ಮತ್ತು ಅನೇಕರು ‘ಯೆಹೋವನ ಮಂದಿರದ ಬೆಟ್ಟಕ್ಕೆ’ ಪ್ರವಾಹದಂತೆ ಬರುತ್ತಿದ್ದಾರೆ. (ಯೆಶಾ. 2:2) ರಾಜ್ಯದ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಅನೇಕರು ತ್ಯಾಗಗಳನ್ನು ಮಾಡಿ ಬೆತೆಲಿನಲ್ಲಿ, ರಾಜ್ಯ ಸಭಾಗೃಹ ಮತ್ತು ಸಮ್ಮೇಳನ ಹಾಲ್‌ಗಳ ನಿರ್ಮಾಣದಲ್ಲಿ, ಅಧಿವೇಶನಗಳನ್ನು ಸಂಘಟಿಸುವುದರಲ್ಲಿ, ನೈಸರ್ಗಿಕ ವಿಪತ್ತಿನ ಪರಿಹಾರ ಕಾರ್ಯದಲ್ಲಿ ಕೆಲಸಮಾಡುತ್ತಾರೆ. ಈ ಹೆಚ್ಚಿನ ಕೆಲಸಗಳು ನಿತ್ಯಜೀವ ಪಡೆಯಲು ಆವಶ್ಯಕವಲ್ಲದಿದ್ದರೂ ರಾಜ್ಯದ ಕೆಲಸಗಳನ್ನು ಬೆಂಬಲಿಸಲು ಆವಶ್ಯಕ.

3. (1) ರಾಜ್ಯಕ್ಕಾಗಿ ತ್ಯಾಗಗಳನ್ನು ಮಾಡುವುದರಿಂದ ನಮಗೆ ಯಾವ ಪ್ರಯೋಜನವಿದೆ? (2) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸತಕ್ಕದ್ದು?

3 ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ರಾಜ್ಯದ ಕೆಲಸಕ್ಕೆ ಕ್ರಿಯಾಶೀಲ ಬೆಂಬಲ ಬೇಕಾಗಿದೆ. ಅನೇಕರು ಸಂತೋಷದಿಂದ ಯೆಹೋವನಿಗಾಗಿ ಮಾಡುತ್ತಿರುವ ತ್ಯಾಗಗಳನ್ನು ನೋಡುವಾಗ ತುಂಬ ಹರ್ಷವಾಗುತ್ತದೆ. (ಕೀರ್ತನೆ 54:7 ಓದಿ.) ನಾವು ದೇವರ ರಾಜ್ಯಕ್ಕಾಗಿ ಕಾಯುತ್ತಿರುವ ಈ ಸಮಯದಲ್ಲಿ ತೋರಿಸುವ ಉದಾರಭಾವ ನಮಗೆ ತುಂಬ ಆನಂದ ತರುತ್ತದೆ. (ಧರ್ಮೋ. 16:15; ಅ. ಕಾ. 20:35) ಹಾಗಿದ್ದರೂ ರಾಜ್ಯಕ್ಕಾಗಿ ನಾವು ಇನ್ನೂ ಹೆಚ್ಚಿನ ತ್ಯಾಗಗಳನ್ನು ಮಾಡಬಹುದಾದ ವಿಧಗಳಿವೆಯಾ? ನಮ್ಮ ಸಮಯ, ಹಣ, ಶಕ್ತಿ, ಸಾಮರ್ಥ್ಯಗಳನ್ನು ಹೇಗೆ ಬಳಸುತ್ತಿದ್ದೇವೆ? ಯಾವ ಮುಂಜಾಗ್ರತೆ ವಹಿಸಬೇಕು? ಎಂದು ನಮ್ಮನ್ನೇ ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳಬೇಕು. ನಮ್ಮ ಆನಂದವನ್ನು ಹೆಚ್ಚಿಸುವಂಥ ಸ್ವಯಂಪ್ರೇರಿತ ತ್ಯಾಗಗಳನ್ನು ಮಾಡಲು ಅನುಕರಿಸಬಹುದಾದ ಒಂದು ನಮೂನೆಯನ್ನೀಗ ನೋಡೋಣ.

ಪುರಾತನ ಇಸ್ರಾಯೇಲಿನಲ್ಲಿ ಯಜ್ಞಗಳು

4. ಯಜ್ಞಗಳನ್ನು ಕೊಡುವುದರಿಂದ ಇಸ್ರಾಯೇಲ್ಯರಿಗೆ ಏನು ಪ್ರಯೋಜನವಿತ್ತು?

4 ಪಾಪಗಳಿಗೆ ಕ್ಷಮೆ ಪಡೆಯಲು ಪುರಾತನ ಇಸ್ರಾಯೇಲಿನಲ್ಲಿ ಯಜ್ಞಗಳನ್ನು ಅರ್ಪಿಸಲಾಗುತ್ತಿತ್ತು. ಜನರು ಯೆಹೋವನ ಅನುಗ್ರಹಕ್ಕೆ ಪಾತ್ರರಾಗಲು ಯಜ್ಞಗಳನ್ನು ಅರ್ಪಿಸುವುದು ತುಂಬ ಅಗತ್ಯವಾಗಿತ್ತು. ಕೆಲವು ಯಜ್ಞಗಳನ್ನು ಕೊಡಲೇಬೇಕಾಗುತ್ತಿತ್ತು. ಇನ್ನೂ ಕೆಲವನ್ನು ಜನರು ಸ್ವಯಂಪ್ರೇರಿತರಾಗಿ ಕೊಡುತ್ತಿದ್ದರು. (ಯಾಜ. 23:37, 38) ಸರ್ವಾಂಗಹೋಮಗಳನ್ನು ಅವರು ಯೆಹೋವನಿಗೆ ಸ್ವಯಂಪ್ರೇರಿತ ಕಾಣಿಕೆ ಅಥವಾ ಉಡುಗೊರೆಯಾಗಿ ಕೊಡಬಹುದಿತ್ತು. ಯೆಹೋವನಿಗೆ ಸಲ್ಲಿಸಲಾದ ಇಂಥೆಲ್ಲ ಯಜ್ಞಗಳ ಒಂದು ಉದಾಹರಣೆ ಸೊಲೊಮೋನನ ದಿನದಲ್ಲಿ ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ಸಲ್ಲಿಸಲಾದ ಯಜ್ಞಗಳಾಗಿವೆ.​—2 ಪೂರ್ವ. 7:4-6.

5. ಬಡವರು ಯಜ್ಞವನ್ನು ಅರ್ಪಿಸಲಾಗುವಂತೆ ಯೆಹೋವನು ಯಾವ ಏರ್ಪಾಡು ಮಾಡಿದ್ದನು?

5 ಇಸ್ರಾಯೇಲ್ಯರೆಲ್ಲರಿಗೆ ಒಂದೇ ತರದ ಯಜ್ಞಗಳನ್ನು ಕೊಡಲಾಗುವುದಿಲ್ಲ ಎಂದು ಪ್ರೀತಿಯಿಂದ ಅರ್ಥಮಾಡಿಕೊಂಡ ಯೆಹೋವನು ಪ್ರತಿಯೊಬ್ಬನು ತನ್ನತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುವಂತೆ ಹೇಳಿದನು. ಪ್ರಾಣಿ ಯಜ್ಞಗಳನ್ನು ಕೊಡುವಾಗ ಅದರ ರಕ್ತ ಸುರಿಸುವಂತೆ ಆಜ್ಞೆ ಕೊಟ್ಟಿದ್ದನು. ಈ ಯಜ್ಞಗಳು ತನ್ನ ಮಗನಾದ ಯೇಸು ಮೂಲಕ “ಬರಲಿರುವ ಒಳ್ಳೆಯ ವಿಷಯಗಳ ಛಾಯೆ” ಆಗಿತ್ತು. (ಇಬ್ರಿ. 10:1-4) ಹಾಗಿದ್ದರೂ ಯಾವ ವಿಧದ ಪ್ರಾಣಿಯನ್ನು ಬಲಿ ಕೊಡಬೇಕೆಂಬುದರ ಬಗ್ಗೆ ಯೆಹೋವನು ಅತಿಯಾಗಿ ಕಟ್ಟುನಿಟ್ಟಾಗಿರಲಿಲ್ಲ. ಉದಾಹರಣೆಗೆ, ಒಬ್ಬ ಇಸ್ರಾಯೇಲ್ಯನಿಗೆ ಕುರಿ ಅಥವಾ ಆಡನ್ನು ಯಜ್ಞವಾಗಿ ಅರ್ಪಿಸುವಷ್ಟು ಸಾಮರ್ಥ್ಯವಿಲ್ಲದಿದ್ದರೆ ಅವನು ಬೆಳವಕ್ಕಿಯನ್ನು ಅರ್ಪಿಸಿದರೂ ಯೆಹೋವನು ಅದನ್ನು ಸ್ವೀಕರಿಸುತ್ತಿದ್ದನು. ಹೀಗೆ ಬಡವರು ಸಹ ಸಂತೋಷದಿಂದ ಯೆಹೋವನಿಗೆ ಯಜ್ಞವನ್ನು ಅರ್ಪಿಸಬಹುದಿತ್ತು. (ಯಾಜ. 1:3, 10, 14; 5:7) ಪ್ರತಿಯೊಬ್ಬರು ಬೇರೆಬೇರೆ ರೀತಿಯ ಪ್ರಾಣಿಯನ್ನು ಯಜ್ಞವಾಗಿ ಅರ್ಪಿಸಿದರೂ ಅದನ್ನು ಸ್ವಯಂಪ್ರೇರಿತರಾಗಿ ಕೊಡುವಾಗ ಪಾಲಿಸಬೇಕಾದ ಎರಡು ವಿಷಯಗಳನ್ನು ಯೆಹೋವನು ಹೇಳಿದನು.

6. (1) ಯಜ್ಞಗಳ ಸಂಬಂಧದಲ್ಲಿ ಪ್ರತಿಯೊಬ್ಬನಿಂದ ಏನನ್ನು ಅವಶ್ಯಪಡಿಸಲಾಗಿತ್ತು? (2) ಈ ಆವಶ್ಯಕತೆಗಳನ್ನು ಪೂರೈಸುವುದು ಎಷ್ಟು ಮಹತ್ವದ್ದಾಗಿತ್ತು?

6 ಮೊದಲನೇದಾಗಿ ಒಬ್ಬ ವ್ಯಕ್ತಿ ತನ್ನ ಬಳಿ ಇದ್ದದ್ದರಲ್ಲೇ ಸರ್ವೋತ್ತಮವಾದದ್ದನ್ನು ಕೊಡಬೇಕಿತ್ತು. ಯಾವುದೇ ಯಜ್ಞ “ಸಮರ್ಪಕ” ಆಗಿರಬೇಕಿದ್ದರೆ ಅಂದರೆ ಯೆಹೋವನಿಂದ ಅಂಗೀಕಾರ ಪಡೆಯಬೇಕಿದ್ದರೆ ಅದು ಪೂರ್ಣಾಂಗದ್ದಾಗಿರಬೇಕು ಎಂದು ಇಡೀ ಜನಾಂಗಕ್ಕೆ ಯೆಹೋವನು ಹೇಳಿದ್ದನು. (ಯಾಜ. 22:18-20) ಪ್ರಾಣಿಯಲ್ಲಿ ಯಾವುದೇ ಕುಂದು ಇದ್ದಲ್ಲಿ ಅದನ್ನು ಆತನು ಸ್ವೀಕರಿಸುತ್ತಿರಲಿಲ್ಲ. ಎರಡನೇದಾಗಿ, ಯಜ್ಞ ಅರ್ಪಿಸುತ್ತಿರುವ ವ್ಯಕ್ತಿ ಶುದ್ಧನೂ ನಿರ್ದೋಷಿಯೂ ಆಗಿರಬೇಕಿತ್ತು. ಅವನು ಅಶುದ್ಧನಾಗಿದ್ದರೆ ಯೆಹೋವನ ಅಂಗೀಕಾರ ಪಡೆಯಲು ಮೊದಲು ದೋಷಪ್ರಾಯಶ್ಚಿತ್ತ ಅಥವಾ ಅಪರಾಧಪ್ರಾಯಶ್ಚಿತ್ತಕ್ಕಾಗಿ ಯಜ್ಞ ಅರ್ಪಿಸಬೇಕಿತ್ತು. ನಂತರವೇ ಸ್ವಯಂಪ್ರೇರಿತ ಯಜ್ಞವನ್ನು ಅರ್ಪಿಸಬಹುದಿತ್ತು. (ಯಾಜ. 5:5, 6, 15) ಇದೊಂದು ಗಂಭೀರ ವಿಷಯವಾಗಿತ್ತು. ಯಾರಾದರೂ ಅಶುದ್ಧ ಸ್ಥಿತಿಯಲ್ಲಿದ್ದು ಸಮಾಧಾನಯಜ್ಞದಲ್ಲಾಗಲಿ ಬೇರಾವುದೇ ಸ್ವಯಂಪ್ರೇರಿತ ಕಾಣಿಕೆಗಳಲ್ಲಿ ಪಾಲ್ಗೊಂಡರೆ ಅಂಥವನನ್ನು ದೇವಜನರ ಮಧ್ಯದಿಂದ ತೆಗೆದುಹಾಕಬೇಕೆಂದು ಯೆಹೋವನು ವಿಧಿಸಿದ್ದನು. (ಯಾಜ. 7:20, 21) ಯಜ್ಞವನ್ನು ಅರ್ಪಿಸುವ ವ್ಯಕ್ತಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧವಿದ್ದಲ್ಲಿ ಮತ್ತು ಅವನು ಕೊಡುತ್ತಿರುವ ಯಜ್ಞದಲ್ಲಿ ಯಾವ ಕುಂದೂ ಇಲ್ಲದಿರುವಲ್ಲಿ ಅವನಿಗೆ ಸಂತೃಪ್ತಿ-ಸಂತೋಷ ಸಿಗುತ್ತಿತ್ತು.​—1 ಪೂರ್ವಕಾಲವೃತ್ತಾಂತ 29:9 ಓದಿ.

ಇಂದು ಮಾಡಲಾಗುವ ತ್ಯಾಗಗಳು

7, 8. (1) ರಾಜ್ಯಕ್ಕಾಗಿ ತ್ಯಾಗಗಳನ್ನು ಮಾಡುವುದರಿಂದ ಅನೇಕರಿಗೆ ಯಾವ ಆನಂದ ಸಿಕ್ಕಿದೆ? (2) ಯೆಹೋವನಿಗಾಗಿ ತ್ಯಾಗ ಮಾಡಲು ನಮ್ಮ ಬಳಿ ಯಾವ ಸಂಪನ್ಮೂಲಗಳಿವೆ?

7 ಇಂದು ಸಹ ಅನೇಕರು ಸಿದ್ಧಮನಸ್ಸಿನಿಂದ ಯೆಹೋವನ ಸೇವೆಗಾಗಿ ತಮ್ಮನ್ನೇ ನೀಡಿಕೊಳ್ಳುತ್ತಾರೆ. ಇದರಿಂದ ಆತನಿಗೆ ತುಂಬ ಸಂತೋಷವಾಗುತ್ತದೆ. ಸಹೋದರರಿಗಾಗಿ ಕೆಲಸಮಾಡುವುದು ಪ್ರತಿಫಲದಾಯಕ. ಸಭಾಗೃಹ ನಿರ್ಮಾಣಕಾರ್ಯ ಮತ್ತು ನೈಸರ್ಗಿಕ ವಿಪತ್ತು ಸಂತ್ರಸ್ತರಿಗೆ ನೆರವಾಗುವುದರಲ್ಲಿ ಪಾಲ್ಗೊಳ್ಳುವ ಸಹೋದರನೊಬ್ಬನು ತನಗೆ ಸಿಗುವ ಸಂತೃಪ್ತಿ ವರ್ಣಿಸಲಸಾಧ್ಯ ಎಂದೆನ್ನುತ್ತಾರೆ. “ಸ್ಥಳೀಯ ಸಹೋದರ ಸಹೋದರಿಯರು ತಮ್ಮ ಹೊಸ ರಾಜ್ಯ ಸಭಾಗೃಹದಲ್ಲಿ ನಿಂತಾಗ ಅಥವಾ ನೈಸರ್ಗಿಕ ವಿಪತ್ತಿಗೆ ಒಳಗಾದವರು ಸಹಾಯ ಪಡೆದಾಗ ಅವರ ಮುಖದಲ್ಲಿ ಕಾಣುವ ಹರ್ಷ ಮತ್ತು ಕೃತಜ್ಞತಾಭಾವ ನಾವು ಪಟ್ಟ ಶ್ರಮ ಸಾರ್ಥಕ ಎಂಬ ಭಾವನೆಯನ್ನು ಮೂಡಿಸುತ್ತದೆ” ಎಂದೂ ಹೇಳುತ್ತಾರೆ.

8 ಯೆಹೋವನ ಆಧುನಿಕ ದಿನದ ಸಂಘಟನೆ ಆತನ ಕೆಲಸವನ್ನು ಬೆಂಬಲಿಸಲು ಯಾವಾಗಲೂ ಅವಕಾಶಗಳಿಗಾಗಿ ಹುಡುಕಿದೆ. ‘ನಮ್ಮ ಸಮಯ, ಅಧಿಕಾರ, ಹಣ ಇತ್ಯಾದಿಗಳನ್ನು ನೋಡಿಕೊಳ್ಳಲು ಕರ್ತನು ನಮ್ಮನ್ನೇ ಮನೆವಾರ್ತೆಯಾಗಿ ನೇಮಿಸಿದ್ದಾನೆ. ಈ ಸಂಪನ್ಮೂಲಗಳನ್ನು ನಮ್ಮ ಯಜಮಾನನಿಗೆ ಮಹಿಮೆ ತರಲು ನಮ್ಮಿಂದಾದಷ್ಟು ಉತ್ತಮ ರೀತಿಯಲ್ಲಿ ಬಳಸಬೇಕು’ ಎಂದು 1904ರಲ್ಲಿ ಸಹೋದರ ಸಿ.ಟಿ. ರಸಲ್‌ ಬರೆದರು. ಯೆಹೋವನಿಗಾಗಿ ತ್ಯಾಗಗಳನ್ನು ಮಾಡುವಾಗ ಅನೇಕ ಆಶೀರ್ವಾದಗಳು ಸಿಗಬಹುದಾದರೂ ನಮಗೆ ಸೇರಿದ್ದೇನನ್ನೋ ಬಿಟ್ಟುಕೊಡಬೇಕಾಗುತ್ತದೆ. (2 ಸಮು. 24:21-24) ನಮ್ಮಲ್ಲಿರುವ ಸಂಪನ್ಮೂಲಗಳನ್ನು ಇನ್ನೂ ಹೆಚ್ಚು ಉತ್ತಮವಾಗಿ ಬಳಸುವ ವಿಧಗಳಿವೆಯಾ?

9. ಲೂಕ 10:2-4ರಲ್ಲಿ ಯೇಸು ತಿಳಿಸಿದ ಯಾವ ತತ್ವವನ್ನು ಸಮಯದ ಬಳಕೆಯ ವಿಷಯದಲ್ಲಿ ನಾವು ಅನ್ವಯಿಸಿಕೊಳ್ಳಬಹುದು?

9ನಮ್ಮ ಸಮಯ. ಸಾಹಿತ್ಯವನ್ನು ಅನುವಾದಿಸಿ ಮುದ್ರಿಸಲು, ಆರಾಧನೆಗಾಗಿ ಕಟ್ಟಡಗಳನ್ನು ಕಟ್ಟಲು, ಅಧಿವೇಶನಗಳನ್ನು ಸಂಘಟಿಸಲು, ವಿಪತ್ತು ಪರಿಹಾರ ಯೋಜನೆಗಳಲ್ಲಿ ನೆರವು ನೀಡಲು ಮತ್ತು ಇತರ ಅಗತ್ಯ ಕೆಲಸಗಳಲ್ಲಿ ತೊಡಗಲು ತುಂಬ ಸಮಯ, ಶ್ರಮ ವ್ಯಯಿಸಬೇಕಾಗುತ್ತದೆ. ಒಂದು ದಿನಕ್ಕೆ ನಮ್ಮೆಲ್ಲರಿಗಿರುವುದು 24 ತಾಸು ಮಾತ್ರ. ಹಾಗಾಗಿ ಯೇಸು ಹೇಳಿದ ತತ್ವವೊಂದು ಇಲ್ಲಿ ತುಂಬ ಸಹಾಯಕಾರಿ. ಶಿಷ್ಯರನ್ನು ಸುವಾರ್ತೆ ಸಾರಲು ಕಳುಹಿಸುವ ಮೊದಲು “ಯಾರಿಗೂ ವಂದನೆಯಲ್ಲಿ ಅಪ್ಪಿಕೊಳ್ಳಬೇಡಿ” ಎಂದು ಹೇಳಿದನು. (ಲೂಕ 10:2-4) ಯೇಸು ಇಂಥ ಸೂಚನೆಕೊಟ್ಟದ್ದೇಕೆ? ಒಬ್ಬ ಬೈಬಲ್‌ ವಿದ್ವಾಂಸ ಹೇಳಿದ್ದು: “ಮೂಡಲ ದೇಶಗಳಲ್ಲಿ ಜನರು ಪರಸ್ಪರರನ್ನು ವಂದಿಸಲು ನಮ್ಮ ಹಾಗೆ ಬರೇ ಕೈಕುಲುಕುತ್ತಿರಲಿಲ್ಲ ಅಥವಾ ತಲೆ ಸ್ವಲ್ಪ ಬಗ್ಗಿಸಿ ನಮಸ್ಕರಿಸುತ್ತಿರಲಿಲ್ಲ. ತುಂಬ ಸಲ ಅಪ್ಪಿಕೊಳ್ಳುತ್ತಿದ್ದರು, ಬಗ್ಗಿಬಗ್ಗಿ ನಮಸ್ಕರಿಸುತ್ತಿದ್ದರು, ಸಾಷ್ಟಾಂಗ ನಮಸ್ಕಾರ ಸಹ ಮಾಡುತ್ತಿದ್ದರು. ಇಷ್ಟೆಲ್ಲ ಮಾಡಲು ತುಂಬ ಸಮಯ ಹಿಡಿಯುತ್ತಿತ್ತು.” ಹಾಗಾಗಿ ಯೇಸು ತನ್ನ ಶಿಷ್ಯರಿಗೆ ಕೊಟ್ಟ ಸೂಚನೆಯ ಅರ್ಥ ಅವರು ಅಸಭ್ಯವಾಗಿ ವರ್ತಿಸಬೇಕೆಂದಲ್ಲ. ಬದಲಿಗೆ ತಮಗಿದ್ದದ್ದು ಸೀಮಿತ ಸಮಯ ಮತ್ತು ಆ ಸಮಯವನ್ನು ಹೆಚ್ಚು ಪ್ರಾಮುಖ್ಯ ವಿಷಯಗಳಿಗಾಗಿ ಬಳಸಬೇಕೆಂದು ಗ್ರಹಿಸಲು ಅವರಿಗೆ ಸಹಾಯ ಮಾಡುತ್ತಿದ್ದನು. (ಎಫೆ. 5:16) ರಾಜ್ಯದ ಕೆಲಸಕ್ಕಾಗಿ ನಮಗೂ ಹೆಚ್ಚು ಸಮಯ ಸಿಗುವಂತೆ ಈ ತತ್ವವನ್ನು ಅನ್ವಯಿಸಬಹುದಲ್ಲವೇ?

10, 11. (1) ಯಾವ ಕೆಲವು ವಿಧಗಳಲ್ಲಿ ನಮ್ಮ ದಾನಗಳನ್ನು ಲೋಕವ್ಯಾಪಕ ಕೆಲಸಕ್ಕಾಗಿ ಬಳಸಲಾಗುತ್ತಿದೆ? (2) ಒಂದನೇ ಕೊರಿಂಥ 16:1, 2ರಲ್ಲಿರುವ ಯಾವ ತತ್ವ ನಮಗೆ ಸಹಾಯ ಮಾಡಬಲ್ಲದು?

10ನಮ್ಮ ಹಣ. ಲೋಕವ್ಯಾಪಕವಾಗಿ ರಾಜ್ಯಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಬೆಂಬಲಿಸಲು ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಪ್ರತಿ ವರ್ಷ ಸಂಚರಣ ಮೇಲ್ವಿಚಾರಕರು, ವಿಶೇಷ ಪಯನೀಯರರು, ಮಿಷನರಿಗಳ ಖರ್ಚುವೆಚ್ಚಗಳಿಗಾಗಿ ಮಿಲಿಯಗಟ್ಟಲೆ ಡಾಲರ್‌ ಹಣ ವ್ಯಯಿಸಲಾಗುತ್ತಿದೆ. 1999ರಿಂದ ಹಿಡಿದು ಇಲ್ಲಿಯವರೆಗೆ ಬಡ ದೇಶಗಳಲ್ಲಿ 24,500ಕ್ಕಿಂತ ಹೆಚ್ಚು ರಾಜ್ಯ ಸಭಾಗೃಹಗಳನ್ನು ಕಟ್ಟಲಾಗಿದೆ. ಇನ್ನೂ 6,400 ರಾಜ್ಯ ಸಭಾಗೃಹಗಳ ಅಗತ್ಯವಿದೆ. ಪ್ರತಿ ತಿಂಗಳು 100 ಮಿಲಿಯ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಮುದ್ರಿಸಲಾಗುತ್ತಿದೆ! ಈ ಎಲ್ಲ ಕೆಲಸಗಳು ನೀವು ಸ್ವಯಂ ಪ್ರೇರಣೆಯಿಂದ ಕೊಡುತ್ತಿರುವ ದಾನಗಳಿಂದ ಬೆಂಬಲಿಸಲ್ಪಡುತ್ತಿದೆ.

11 ದಾನಗಳನ್ನು ನೀಡುವ ವಿಷಯದಲ್ಲಿ ಅನುಸರಿಸಲಿಕ್ಕಾಗಿ ಅಪೊಸ್ತಲ ಪೌಲನು ಒಂದು ತತ್ವವನ್ನು ಕೊಟ್ಟನು. (1 ಕೊರಿಂಥ 16:1, 2 ಓದಿ.) ಕೊರಿಂಥದ ಸಹೋದರರು ವಾರದ ಕೊನೆಯಲ್ಲಿ ಎಷ್ಟು ಹಣ ಉಳಿದಿದೆ ಎಂದು ನೋಡಿ ಕಾಣಿಕೆ ಕೊಡುವ ಬದಲು ಪ್ರತಿವಾರದ ಮೊದಲ ದಿನದಂದೇ ಹಣ ತೆಗೆದಿಡಲು ಉತ್ತೇಜಿಸಿದನು. ಅವನಿದನ್ನು ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದನು. ಮೊದಲ ಶತಮಾನದಲ್ಲಿದ್ದವರಂತೆ ಇಂದು ನಮ್ಮ ಸಹೋದರ ಸಹೋದರಿಯರು ಸಹ ತಮ್ಮ ಪರಿಸ್ಥಿತಿಗೆ ತಕ್ಕಂತೆ ಉದಾರವಾಗಿ ಕೊಡಲು ಯೋಜಿಸುತ್ತಾರೆ. (ಲೂಕ 21:1-4; ಅ. ಕಾ. 4:32-35) ಕೊಡುವಂಥ ಈ ಮನೋಭಾವವನ್ನು ಯೆಹೋವನು ಮಾನ್ಯಮಾಡುತ್ತಾನೆ.

12, 13. (1) ತಮ್ಮ ಶಕ್ತಿ, ಸಾಮರ್ಥ್ಯಗಳನ್ನು ರಾಜ್ಯಕ್ಕಾಗಿ ಕೊಡಲು ಕೆಲವರನ್ನು ಯಾವುದು ತಡೆಯುತ್ತಿರಬಹುದು? (2) ಯೆಹೋವನು ಅವರಿಗೆ ಹೇಗೆ ಸಹಾಯ ಮಾಡುವನು?

12ನಮ್ಮ ಶಕ್ತಿ ಮತ್ತು ಸಾಮರ್ಥ್ಯ. ನಾವು ರಾಜ್ಯಕ್ಕಾಗಿ ನಮ್ಮ ಶಕ್ತಿ, ಸಾಮರ್ಥ್ಯಗಳನ್ನು ಬಳಸುವಾಗ ಯೆಹೋವನು ಬೆಂಬಲಿಸುತ್ತಾನೆ. ನಾವು ಬಳಲಿ ಹೋದಾಗ ಸಹಾಯ ಮಾಡುವೆನೆಂದು ಮಾತು ಕೊಟ್ಟಿದ್ದಾನೆ. (ಯೆಶಾ. 40:29-31) ರಾಜ್ಯದ ಕೆಲಸ ಮಾಡಲು ಬೇಕಾದ ಕೌಶಲಗಳಿಲ್ಲವಲ್ಲಾ ಎಂದು ನಿಮಗನಿಸುತ್ತದಾ? ನಮಗಿಂತ ಹೆಚ್ಚು ಅರ್ಹತೆಯುಳ್ಳವರು ಇದ್ದಾರೆಂದು ನೆನಸುತ್ತೀರಾ? ನೆನಪಿಡಿ, ಬೆಚಲೇಲ ಮತ್ತು ಒಹೊಲೀಯಾಬರಿಗೆ ಮಾಡಿದಂತೆ ಯೆಹೋವನು ಒಬ್ಬನಿಗಿರುವ ಹುಟ್ಟು ಸಾಮರ್ಥ್ಯಗಳನ್ನು ವರ್ಧಿಸಶಕ್ತನು.​—ವಿಮೋ. 31:1-6; ಶೀರ್ಷಿಕೆ ಪಕ್ಕದ ಚಿತ್ರ ನೋಡಿ.

13 ನಾವು ಸರ್ವೋತ್ತಮವಾದದ್ದನ್ನು ಕೊಡುವುದನ್ನು ತಪ್ಪಿಸದಂತೆ ಯೆಹೋವನು ಪ್ರೋತ್ಸಾಹಿಸುತ್ತಾನೆ. (ಜ್ಞಾನೋ. 3:27) ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದ್ದಾಗ ಯೆರೂಸಲೇಮಿನಲ್ಲಿದ್ದ ಯೆಹೂದ್ಯರು ನಿರ್ಮಾಣ ಕೆಲಸಕ್ಕಾಗಿ ತಾವೇನು ಮಾಡುತ್ತಿದ್ದೇವೆಂದು ಯೋಚಿಸುವಂತೆ ಯೆಹೋವನು ಹೇಳಿದನು. (ಹಗ್ಗಾ. 1:2-5) ಅವರು ಅಪಕರ್ಷಿತರಾಗಿ, ಮಾಡಬೇಕಾದ ಕೆಲಸವನ್ನು ಬಿಟ್ಟು ಗಮನವನ್ನು ಬೇರೆ ಕಡೆ ಹರಿಸಿದ್ದರು. ನಾವು ಸಹ ನಮ್ಮ ಆದ್ಯತೆಗಳು ಯೆಹೋವನು ಇಟ್ಟಿರುವ ಆದ್ಯತೆಗಳಿಗೆ ಸಮವಾಗಿವೆಯಾ ಎಂದು ಪರಿಗಣಿಸಬೇಕು. ನಮ್ಮ ಬದುಕಿನ ಬಗ್ಗೆ ಇನ್ನಷ್ಟು ಗಂಭೀರವಾಗಿ ಯೋಚಿಸಿ ಈ ಕಡೇ ದಿವಸಗಳಲ್ಲಿ ರಾಜ್ಯವನ್ನು ಬೆಂಬಲಿಸಲಿಕ್ಕಾಗಿ ಹೆಚ್ಚನ್ನು ಮಾಡಲು ಯೋಜನೆಗಳನ್ನು ಮಾಡಬಲ್ಲೆವಾ?

ನಮ್ಮ ಹತ್ತಿರ ಏನಿದೆಯೋ ಅದರಿಂದ ತ್ಯಾಗಗಳನ್ನು ಮಾಡುವುದು

14, 15. (1) ನಮ್ಮ ಬಡ ಸಹೋದರರ ಮಾದರಿಯಿಂದ ನಮಗೆ ಯಾವ ಪ್ರೋತ್ಸಾಹ ಸಿಗುತ್ತದೆ? (2) ನಮ್ಮ ಆಸೆ ಏನಾಗಿರಬೇಕು?

14 ಅನೇಕರು ಜೀವಿಸುವ ಪ್ರದೇಶಗಳಲ್ಲಿ ಕಷ್ಟ ಬಡತನ ಸರ್ವೇಸಾಮಾನ್ಯ. ಅಂಥ ಸ್ಥಳಗಳಲ್ಲಿರುವ ನಮ್ಮ ಸಹೋದರರ ಕೊರತೆಯನ್ನು ‘ನೀಗಿಸಲು’ ನಮ್ಮ ಸಂಘಟನೆ ಕೆಲಸಮಾಡುತ್ತದೆ. (2 ಕೊರಿಂ. 8:14) ಹಾಗಿದ್ದರೂ ಬಡ ರಾಷ್ಟ್ರಗಳಲ್ಲಿನ ಸಹೋದರರು ‘ಕೊಡುವುದನ್ನು’ ಸುಯೋಗವಾಗಿ ಎಣಿಸುತ್ತಾರೆ. ಬಡವರೂ ಸಂತೋಷದಿಂದ ಕೊಡುವುದನ್ನು ಯೆಹೋವನು ಮೆಚ್ಚುತ್ತಾನೆ.​—2 ಕೊರಿಂ. 9:7.

15 ಆಫ್ರಿಕಾದ ಕಡುಬಡ ದೇಶವೊಂದರಲ್ಲಿ ಕೆಲವು ಸಹೋದರರು ತಮ್ಮ ತೋಟದಲ್ಲಿ ಸ್ವಲ್ಪ ಜಾಗವನ್ನು ಗುರುತು ಮಾಡಿ ಅಲ್ಲಿ ಬೆಳೆಯುವ ಫಸಲನ್ನು ಮಾರಿ ಹಣವನ್ನು ರಾಜ್ಯದ ಕೆಲಸಕ್ಕಾಗಿ ಕೊಡುತ್ತಾರೆ. ಒಮ್ಮೆ ಅದೇ ದೇಶದಲ್ಲಿ ಒಂದು ಕಡೆ ರಾಜ್ಯ ಸಭಾಗೃಹದ ತುಂಬ ಅವಶ್ಯಕತೆಯಿದ್ದ ಕಾರಣ ಅದನ್ನು ಕಟ್ಟಲು ಯೋಜಿಸಲಾಗಿತ್ತು. ಸ್ಥಳೀಯ ಸಹೋದರ ಸಹೋದರಿಯರಿಗೆ ಈ ಕೆಲಸದಲ್ಲಿ ಕೈಜೋಡಿಸಲು ಆಸೆ. ಆದರೆ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡುವ ಸಮಯ ಸಹ ಅದೇ ಆಗಿತ್ತು. ಹಾಗಿದ್ದರೂ ಅವರಿಗೆ ನಿರ್ಮಾಣ ಕೆಲಸದಲ್ಲಿ ಪಾಲ್ಗೊಳ್ಳುವ ಆಸೆ ಎಷ್ಟು ಬಲವಾಗಿತ್ತೆಂದರೆ ಬೆಳಗ್ಗೆ ಅಲ್ಲಿ ಸಹಾಯಮಾಡಿ, ಸಂಜೆ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದರು. ಎಂಥ ಸ್ವತ್ಯಾಗದ ಮನೋಭಾವ! ಇದು ನಮಗೆ ಪ್ರಥಮ ಶತಮಾನದಲ್ಲಿದ್ದ ಮಕೆದೋನ್ಯದ ಸಹೋದರರ ನೆನಪು ಹುಟ್ಟಿಸುತ್ತದೆ. ಇವರು “ಕಡುಬಡತನ”ದಲ್ಲಿದ್ದರೂ ತಮ್ಮ ಸಹೋದರರಿಗೆ ತಮ್ಮಿಂದಾದ ಸಹಾಯ ಮಾಡುವ ಸುಯೋಗಕ್ಕಾಗಿ ಪೌಲನನ್ನು ಬೇಡಿಕೊಂಡರು. (2 ಕೊರಿಂ. 8:1-4) ನಾವು ಸಹ ‘ಯೆಹೋವನು ಅನುಗ್ರಹಿಸಿದ ಆದಾಯದ ಮೇರೆಗೆ ನಮ್ಮ ಶಕ್ತ್ಯನುಸಾರ ಕೊಡುವವರಾಗಿರೋಣ.’​—ಧರ್ಮೋಪದೇಶಕಾಂಡ 16:17 ಓದಿ.

16. ನಮ್ಮ ತ್ಯಾಗಗಳು ಯೆಹೋವನಿಗೆ ಸ್ವೀಕಾರಾರ್ಹವಾಗಿರುವಂತೆ ಹೇಗೆ ಖಚಿತಪಡಿಸಿಕೊಳ್ಳಬಲ್ಲೆವು?

16 ಆದರೆ ಎಚ್ಚರಿಕೆಯ ಒಂದು ಮಾತು. ನಾವು ಸ್ವಯಂಪ್ರೇರಿತರಾಗಿ ಮಾಡುವ ತ್ಯಾಗಗಳು ಯೆಹೋವನಿಗೆ ಸ್ವೀಕಾರಾರ್ಹವಾಗಿವೆಯಾ ಎಂದು ಪ್ರಾಚೀನ ಇಸ್ರಾಯೇಲ್ಯರಂತೆ ಖಚಿತಪಡಿಸಿಕೊಳ್ಳಬೇಕು. ನಮ್ಮ ಪ್ರಾಥಮಿಕ ಜವಾಬ್ದಾರಿಗಳಾದ ಕೌಟುಂಬಿಕ ಹಾಗೂ ಯೆಹೋವನ ಆರಾಧನೆಗೆ ಸಂಬಂಧಪಟ್ಟ ಜವಾಬ್ದಾರಿಗಳನ್ನು ಕಡೆಗಣಿಸದೇ ಸಮತೋಲನ ಕಾಪಾಡಿಕೊಳ್ಳಬೇಕು. ನಮ್ಮ ಸಮಯ, ಶಕ್ತಿಯನ್ನು ಇತರರಿಗಾಗಿ ಕೊಡುವಾಗ ನಾವು ನಮ್ಮ ಕುಟುಂಬದ ಶಾರೀರಿಕ ಅಥವಾ ಆಧ್ಯಾತ್ಮಿಕ ಜವಾಬ್ದಾರಿಯನ್ನು ಅಲಕ್ಷಿಸಬಾರದು. ಹಾಗೆ ಮಾಡಿದರೆ ಅದು ನಮ್ಮಲ್ಲಿ ಇಲ್ಲದ್ದನ್ನು ಕೊಡುವುದಕ್ಕೆ ಸಮ. (2 ಕೊರಿಂಥ 8:12 ಓದಿ.) ಅಲ್ಲದೆ ನಮ್ಮ ವೈಯಕ್ತಿಕ ಆಧ್ಯಾತ್ಮಿಕತೆಯನ್ನು ಸಹ ಕಾಪಾಡಿಕೊಳ್ಳಬೇಕು. (1 ಕೊರಿಂ. 9:26, 27) ಬೈಬಲ್‌ ಮಟ್ಟಗಳಿಗೆ ಅನುಸಾರವಾಗಿ ಜೀವಿಸಿದರೆ ನಮ್ಮ ತ್ಯಾಗಗಳು ನಮಗೆ ಸಂತೋಷ ತೃಪ್ತಿ ತರುತ್ತವೆ ಮತ್ತು ಅವು ಯೆಹೋವನಿಗೆ “ವಿಶೇಷವಾಗಿ ಸ್ವೀಕಾರಾರ್ಹ”ವಾಗಿವೆ ಎಂಬ ಖಾತ್ರಿ ನಮಗಿರಬಲ್ಲದು.

ನಾವು ಮಾಡುವ ತ್ಯಾಗಗಳು ತುಂಬ ಬೆಲೆಯುಳ್ಳದ್ದು

17, 18. (1) ರಾಜ್ಯಕ್ಕಾಗಿ ತ್ಯಾಗಗಳನ್ನು ಮಾಡುವವರೆಲ್ಲರ ಬಗ್ಗೆ ನಮಗೆ ಹೇಗನಿಸುತ್ತದೆ? (2) ನಾವೆಲ್ಲರೂ ಯಾವುದನ್ನು ಪರಿಗಣಿಸಬೇಕು?

17 ರಾಜ್ಯಕ್ಕೆ ಸಂಬಂಧಪಟ್ಟ ಅವಶ್ಯ ಕೆಲಸಗಳಿಗೆ ಬೆಂಬಲ ನೀಡುವ ಮೂಲಕ ನಮ್ಮ ಸಹೋದರ ಸಹೋದರಿಯರಲ್ಲಿ ಅನೇಕರು ‘ಪಾನದ್ರವ್ಯವಾಗಿ’ ತಮ್ಮನ್ನೇ ಅರ್ಪಿಸಿಕೊಳ್ಳುತ್ತಿದ್ದಾರೆ. (ಫಿಲಿ. 2:17) ಇಂಥ ತ್ಯಾಗದ ಮನೋಭಾವ ತೋರಿಸುತ್ತಿರುವವರನ್ನು ನಾವು ಮನಃಪೂರ್ವಕವಾಗಿ ಮಾನ್ಯಮಾಡುತ್ತೇವೆ. ರಾಜ್ಯದ ಚಟುವಟಿಕೆಯಲ್ಲಿ ಮುಂದಾಳತ್ವ ವಹಿಸುವ ಸಹೋದರರಿಗೆ ಬೆಂಬಲ ನೀಡುವ ಮೂಲಕ ಅವರ ಹೆಂಡತಿ, ಮಕ್ಕಳು ಉದಾರಭಾವ ಮತ್ತು ಸ್ವತ್ಯಾಗದ ಮನೋಭಾವ ತೋರಿಸುತ್ತಾರೆ. ಇದಕ್ಕಾಗಿ ಅವರು ಪ್ರಶಂಸಾರ್ಹರು.

18 ರಾಜ್ಯದ ಕೆಲಸಗಳಿಗಾಗಿ ತುಂಬ ಶ್ರಮ ಅಗತ್ಯ. ನಮ್ಮಿಂದಾದಷ್ಟು ಹೆಚ್ಚು ಬೆಂಬಲ ಹೇಗೆ ನೀಡಬಹುದೆಂದು ನಾವೆಲ್ಲರೂ ಪ್ರಾರ್ಥನಾಪೂರ್ವಕವಾಗಿ ಪರಿಗಣಿಸೋಣ. ಹೀಗೆ ಮಾಡಿದರೆ ನಮಗೆ ಈಗ ತುಂಬ ಪ್ರತಿಫಲಗಳು ಸಿಗುತ್ತವೆ ಮಾತ್ರವಲ್ಲ “ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ” ಅದಕ್ಕಿಂತಲೂ ಹೆಚ್ಚು ಪ್ರತಿಫಲಗಳು ಸಿಗುವವು.​—ಮಾರ್ಕ 10:28-30.

^ ಪ್ಯಾರ. 2 ಜನವರಿ 15, 2012 ಕಾವಲಿನಬುರುಜು ಪತ್ರಿಕೆಯ ಪುಟ 21-25ರಲ್ಲಿ “ಯೆಹೋವನಿಗೆ ಪೂರ್ಣ ಹೃದಯದಿಂದ ಯಜ್ಞಗಳನ್ನು ಅರ್ಪಿಸಿರಿ” ಲೇಖನ ನೋಡಿ.