ಕಷ್ಟದ ದಿನಗಳು ಬರುವುದರೊಳಗೆ ಯೆಹೋವನ ಸೇವೆ ಮಾಡಿ
“ನಿನ್ನ [ಮಹಾನ್] ಸೃಷ್ಟಿಕರ್ತನನ್ನು ಸ್ಮರಿಸು.”—ಪ್ರಸಂ. 12:1.
1, 2. (1) ಸೊಲೊಮೋನನು ದೇವಪ್ರೇರಣೆಯಿಂದ ಯುವ ಜನರಿಗೆ ಯಾವ ಸಲಹೆಕೊಟ್ಟನು? (2) ಸುಮಾರು 50ರ ಹರೆಯದ ಅಥವಾ ಅದಕ್ಕಿಂತ ಹೆಚ್ಚು ಪ್ರಾಯದ ಕ್ರೈಸ್ತರೂ ಆ ಸಲಹೆಗೆ ಗಮನಕೊಡಬೇಕು ಏಕೆ?
ಅರಸ ಸೊಲೊಮೋನನು ದೇವಪ್ರೇರಣೆಯಿಂದ ಯುವ ಜನರಿಗೆ ಹೀಗೆ ಹೇಳಿದನು: ‘ಕಷ್ಟದ ದಿನಗಳು ಸಮೀಪಿಸುವದರೊಳಗಾಗಿ ಯೌವನದಲ್ಲಿಯೇ ನಿನ್ನ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸು.’ ಇಲ್ಲಿ ಸೂಚಿಸಲಾಗಿರುವ ‘ಕಷ್ಟದ ದಿನಗಳು’ ಯಾವುವು? ವೃದ್ಧಾಪ್ಯದ ದಿನಗಳೇ ಅವು. ನಡುಗುವ ಕೈಗಳು, ಅಸ್ಥಿರ ಕಾಲುಗಳು, ಹಲ್ಲುಗಳು ಬಿದ್ದುಹೋಗುವುದು, ದೃಷ್ಟಿ ಮೊಬ್ಬಾಗುವುದು, ಕಿವಿ ಮಂದವಾಗುವುದು, ಬಿಳಿ ಕೂದಲು, ಬಾಗಿದ ಬೆನ್ನು ಇಂಥ ಮುಪ್ಪಿನ ಕಷ್ಟಗಳನ್ನು ಸೊಲೊಮೋನನು ಕಾವ್ಯಾತ್ಮಕವಾಗಿ ವರ್ಣಿಸಿದ್ದಾನೆ. ಈ ಸಂಕಟದ ದಿನಗಳು ಬರುವ ಮುಂಚೆ ನಮ್ಮ ಯೌವನದಲ್ಲೇ ಯೆಹೋವನನ್ನು ಸ್ಮರಿಸುವಂತೆ ಹೇಳಿರುವುದು ಎಷ್ಟೊಂದು ತಕ್ಕದಾಗಿದೆ.—ಪ್ರಸಂಗಿ 12:1-5 ಓದಿ.
2 ನಮ್ಮಲ್ಲಿ 50ರ ಹರೆಯದಲ್ಲಿರುವ ಅಥವಾ ಅದಕ್ಕಿಂತ ಹೆಚ್ಚು ಪ್ರಾಯದ ಅನೇಕ ಕ್ರೈಸ್ತರು ಇನ್ನೂ ಸುದೃಢರಾಗಿದ್ದಾರೆ. ಅಲ್ಲಲ್ಲಿ ಬಿಳಿ ಕೂದಲು ಬಂದಿರಬಹುದಾದರೂ ಸೊಲೊಮೋನನು ಹೇಳಿದಂಥ ದುರ್ಬಲ ದೇಹಸ್ಥಿತಿ ಅವರಿಗೆ ಇರಲಿಕ್ಕಿಲ್ಲ. ಈ ಕ್ರೈಸ್ತರು ಸಹ ‘ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸುವಂತೆ’ ಯುವ ಜನರಿಗೆ ಕೊಡಲಾದ ಸಲಹೆಯನ್ನು ಅನ್ವಯಿಸಸಾಧ್ಯವೇ? ಆ ಸಲಹೆಯ ಅರ್ಥವೇನು?
3. ನಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸುವುದು ಅಂದರೇನು?
3 ವಯಸ್ಕರಾದ ನೀವು ಹಲವಾರು ದಶಕಗಳಿಂದ ಯೆಹೋವನ ಸೇವೆ ಮಾಡಿದ್ದರೂ ಆಗಿಂದಾಗ್ಗೆ ಸ್ವಲ್ಪ ಸಮಯ ತಕ್ಕೊಂಡು ನಮ್ಮ ದೇವರಾದ ಯೆಹೋವನು ಎಂಥ ಮಹಾನ್ ಸೃಷ್ಟಿಕರ್ತನು ಎಂಬುದರ ಕುರಿತು ಮನನ ಮಾಡುವುದು ಒಳ್ಳೇದು. ಆತನು ಸೃಷ್ಟಿಸಿರುವ ಜೀವರಾಶಿಯನ್ನು ನೋಡುವಾಗ ಅದು ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ ಅಲ್ಲವೆ? ಜೀವಿಗಳ ವಿನ್ಯಾಸ ಎಷ್ಟು ಸಂಕೀರ್ಣವೆಂದರೆ ಅದು ಮನುಷ್ಯನ ಗ್ರಹಿಕೆಗೆ ಮೀರಿದ್ದಾಗಿದೆ. ದೇವರು ನಮಗಾಗಿ ಒದಗಿಸಿರುವ ವಸ್ತುಗಳು ಎಷ್ಟು ವೈವಿಧ್ಯಮಯವಾಗಿವೆಯೆಂದರೆ ನಾವು ಜೀವನದಲ್ಲಿ ಕೊನೆಯೇ ಇಲ್ಲದಷ್ಟು ಆನಂದಿಸಬಹುದು. ಹೀಗೆ ಯೆಹೋವನ ಸೃಷ್ಟಿಯ ಬಗ್ಗೆ ಯೋಚಿಸುವಾಗೆಲ್ಲ ಆತನಲ್ಲಿರುವ ಪ್ರೀತಿ, ವಿವೇಕ, ಶಕ್ತಿಯ ಕುರಿತ ನಮ್ಮ ತಿಳಿವಳಿಕೆ ಇನ್ನೂ ಗಾಢವಾಗುತ್ತದೆ. (ಕೀರ್ತ. 143:5) ಯೆಹೋವನನ್ನು ಸ್ಮರಿಸುವುದೆಂದರೆ ಆತನ ಸೃಷ್ಟಿಯ ಕುರಿತಷ್ಟೇ ಅಲ್ಲ, ಆತನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬ ಕುರಿತೂ ಯೋಚಿಸುವುದಾಗಿದೆ. ಈ ರೀತಿ ಮನನ ಮಾಡುವಾಗ, ನಮ್ಮ ಸೃಷ್ಟಿಕರ್ತನಿಗೆ ಕೃತಜ್ಞತೆಯನ್ನು ಕ್ರಿಯೆಗಳಲ್ಲಿ ತೋರಿಸುವ ಇಚ್ಛೆ ನಮ್ಮಲ್ಲಿ ಇನ್ನೂ ಗಟ್ಟಿಗೊಳ್ಳುವುದು ಅಂದರೆ ಬದುಕಿರುವ ವರೆಗೂ ಆತನ ಸೇವೆಯಲ್ಲಿ ನಮ್ಮಿಂದಾಗುವುದೆಲ್ಲವನ್ನು ಮಾಡಲು ದೃಢಮನಸ್ಸು ಮಾಡುವೆವು.—ಪ್ರಸಂ. 12:13.
ಇಳಿಪ್ರಾಯದಲ್ಲಿ ಅಪೂರ್ವ ಅವಕಾಶಗಳು
4. (1) ಅನೇಕ ವರ್ಷಗಳಿಂದ ಸೇವೆಮಾಡಿರುವ ಅನುಭವಸ್ಥ ಕ್ರೈಸ್ತರು ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬಹುದು? (2) ಏಕೆ?
4 ದಶಕಗಳಿಂದ ಯೆಹೋವನ ಸೇವೆಮಾಡಿರುವ ಕ್ರೈಸ್ತರು ನೀವಾಗಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ನನ್ನಲ್ಲಿ ಇನ್ನೂ ಶಕ್ತಿಸಾಮರ್ಥ್ಯ ಇರುವುದರಿಂದ ನನ್ನ ಜೀವನವನ್ನು ದೇವರ ಸೇವೆಯಲ್ಲಿ ಹೇಗೆ ಉಪಯೋಗಿಸಬಲ್ಲೆ?’ ಒಬ್ಬ ಅನುಭವಸ್ಥ ಕ್ರೈಸ್ತರು ನೀವಾಗಿರುವುದರಿಂದ ಬೇರೆಯವರಿಗೆ ಇಲ್ಲದ ಕೆಲವು ಅಪೂರ್ವ ಅವಕಾಶಗಳು ನಿಮಗಿವೆ. ಉದಾಹರಣೆಗೆ, ಯೆಹೋವನು ನಿಮಗೆ ಕಲಿಸಿರುವ ವಿಷಯಗಳನ್ನು ನೀವು ಯುವ ಪೀಳಿಗೆಯವರಿಗೆ ದಾಟಿಸಬಲ್ಲಿರಿ. ದೇವರ ಸೇವೆಯಲ್ಲಿ ದೊರೆತ ಅನುಭವಗಳನ್ನು ಹೇಳುವ ಮೂಲಕ ಇತರರ ನಂಬಿಕೆಯನ್ನು ಬಲಪಡಿಸಬಲ್ಲಿರಿ. ಇಂಥ ಸದವಕಾಶಗಳನ್ನು ಕೊಡೆಂದು ರಾಜ ದಾವೀದನು ಪ್ರಾರ್ಥಿಸುತ್ತಾ ಅಂದದ್ದು: “ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ . . . ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ; ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು, ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು.”—ಕೀರ್ತ. 71:17, 18.
5. ವಯಸ್ಕರು ತಾವು ಕಲಿತಿರುವುದನ್ನು ಇತರರಿಗೆ ಹೇಗೆ ದಾಟಿಸಬಲ್ಲರು?
5 ಇಷ್ಟೆಲ್ಲ ವರ್ಷಗಳಲ್ಲಿ ನೀವು ಪಡೆದಿರುವ ವಿವೇಕವನ್ನು ಇತರರೊಂದಿಗೆ ಹೇಗೆ ಹಂಚಿಕೊಳ್ಳಬಹುದು? ಬಹುಶಃ ನೀವು ಯುವ ಕ್ರೈಸ್ತರನ್ನು ನಿಮ್ಮ ಮನೆಗೆ ಆಮಂತ್ರಿಸಬಹುದು. ಆಗ ಅವರೊಂದಿಗೆ ಸಹವಾಸಮಾಡುತ್ತಾ ಅವರನ್ನು ಪ್ರೋತ್ಸಾಹಿಸಬಹುದು. ಇಲ್ಲವೆ ಅವರನ್ನು ನಿಮ್ಮೊಟ್ಟಿಗೆ ಸೇವೆಗೆ ಕರೆದುಕೊಂಡು ಹೋಗಿ ಯೆಹೋವನ ಸೇವೆಯಲ್ಲಿ ನೀವೆಷ್ಟು ಆನಂದಿಸುತ್ತೀರೆಂಬುದನ್ನು ತೋರಿಸಬಹುದು. ಪ್ರಾಚೀನ ಕಾಲದ ಎಲೀಹು ಹೀಗಂದನು: “ಹೆಚ್ಚು ದಿನಗಳವರು ಮಾತಾಡಲಿ, ಬಹಳ ವರುಷದವರು ಜ್ಞಾನೋಪದೇಶಮಾಡಲಿ.” (ಯೋಬ 32:7) ಅನುಭವಸ್ಥ ಕ್ರೈಸ್ತ ಸ್ತ್ರೀಯರು ಇತರರನ್ನು ಮಾತಿನಿಂದಲೂ ಮಾದರಿಯಿಂದಲೂ ಉತ್ತೇಜಿಸುವಂತೆ ಅಪೊಸ್ತಲ ಪೌಲನು ಸಹ ಸಲಹೆಕೊಟ್ಟನು. “ವೃದ್ಧೆಯರು . . . ಒಳ್ಳೇದನ್ನು ಬೋಧಿಸುವವರಾಗಿರಲಿ” ಎಂದು ಬರೆದನು.—ತೀತ 2:3.
ಇತರರಿಗೆ ನೆರವಾಗಲು ನೀವೇನು ಮಾಡಬಹುದು?
6. ಸೇವೆಯಲ್ಲಿ ಹಲವಾರು ವರ್ಷಗಳ ಅನುಭವವಿರುವ ಕ್ರೈಸ್ತರು ತಮ್ಮಿಂದ ಇತರರಿಗಾಗುವ ಸಹಾಯವನ್ನು ಕೀಳಂದಾಜು ಮಾಡಬಾರದೇಕೆ?
6 ನೀವು ಅನುಭವಸ್ಥ ಕ್ರೈಸ್ತರಾಗಿರುವಲ್ಲಿ ಹಲವಾರು ವಿಧಗಳಲ್ಲಿ ಬೇರೆಯವರಿಗೆ ಸಹಾಯ ಮಾಡಬಲ್ಲಿರಿ. ನಿಮಗೆ 30-40 ವರ್ಷಗಳ ಹಿಂದೆ ತಿಳಿದಿರದ ಎಷ್ಟೋ ವಿಷಯಗಳು ಈಗ ಚೆನ್ನಾಗಿ ತಿಳಿದಿವೆ. ಉದಾಹರಣೆಗೆ, ಬೈಬಲ್ ತತ್ವಗಳನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ಅನ್ವಯಿಸುವುದು ಹೇಗೆಂದು ನಿಮಗೀಗ ಗೊತ್ತಿದೆ. ಬೈಬಲ್ ಸತ್ಯಗಳನ್ನು ಹೃದಯಕ್ಕೆ ಮುಟ್ಟುವಂಥ ರೀತಿಯಲ್ಲಿ ಬೋಧಿಸುವ ಕಲೆ ನಿಮಗೆ ಕರಗತವಾಗಿದೆ. ನೀವು ಸಭಾ ಹಿರಿಯರಾಗಿರುವಲ್ಲಿ, ತಪ್ಪು ಹೆಜ್ಜೆ ಇಟ್ಟವರಿಗೆ ಸಹಾಯಹಸ್ತ ಚಾಚುವುದು ಹೇಗೆಂದು ಗೊತ್ತಿದೆ. (ಗಲಾ. 6:1) ಸಭೆಯ ಕೆಲಸಗಳನ್ನು, ಸಮ್ಮೇಳನ ಡಿಪಾರ್ಟ್‍ಮೆಂಟ್‌ಗಳನ್ನು, ರಾಜ್ಯ ಸಭಾಗೃಹ ನಿರ್ಮಾಣ ಕೆಲಸವನ್ನು ಮೇಲ್ವಿಚಾರಣೆ ಮಾಡುವುದು ಹೇಗೆಂದೂ ನೀವು ಕಲಿತಿರಬಹುದು. ರಕ್ತರಹಿತ ಆರೋಗ್ಯಾರೈಕೆಯ ವಿಧಾನಗಳನ್ನು ಬಳಸುವಂತೆ ವೈದ್ಯರನ್ನು ಉತ್ತೇಜಿಸುವ ಪರಿ ನಿಮಗೆ ತಿಳಿದಿರಬಹುದು. ಒಂದುವೇಳೆ ಈಗಷ್ಟೇ ನೀವು ಸತ್ಯ ಕಲಿತಿರುವುದಾದರೂ ಜೀವನದಲ್ಲಿ ನಿಮಗಿರುವ ಅನುಭವ ಅತ್ಯಮೂಲ್ಯ. ಉದಾಹರಣೆಗೆ ನಿಮಗೆ ಮಕ್ಕಳಿರುವಲ್ಲಿ ಅವರನ್ನು ಬೆಳೆಸಿದ ಅನುಭವ ನಿಮಗಿದೆ. ಆ ಪ್ರಾಯೋಗಿಕ ವಿವೇಕ ಇತರರಿಗೆ ಸಹಾಯವಾಗಬಲ್ಲದು. ಹೀಗೆ ವಯಸ್ಕ ಕ್ರೈಸ್ತರು ಇತರರಿಗೆ ಬೋಧಿಸುವ, ಮಾರ್ಗದರ್ಶಿಸುವ, ಸ್ಫೂರ್ತಿ ತುಂಬುವ ಮೂಲಕ ಅವರಿಗೆ ಉತ್ತೇಜನದ ಚಿಲುಮೆಯಾಗಿರಬಲ್ಲರು! “ಮುದುಕರಲ್ಲಿ ಜ್ಞಾನವು ಇರುವುದಿಲ್ಲವೋ? ಜೀವನವು ತಿಳುವಳಿಕೆಯನ್ನು ತರುವುದಿಲ್ಲವೋ?” ಎನ್ನುತ್ತದೆ ಬೈಬಲ್.—ಯೋಬ 12:12, ಪವಿತ್ರ ಗ್ರಂಥ ಭಾಷಾಂತರ.
7. ಹಿರೀ ಕ್ರೈಸ್ತರು ತಮಗಿಂತ ಚಿಕ್ಕವರಿಗೆ ಯಾವ ಉಪಯುಕ್ತ ತರಬೇತಿ ನೀಡಬಲ್ಲರು?
7 ನಿಮ್ಮಲ್ಲಿರುವ ಕೌಶಲ, ಸಾಮರ್ಥ್ಯಗಳಿಂದ ಇತರರು ಪ್ರಯೋಜನ ಪಡೆಯಲು ನೀವೇನು ಮಾಡಬಲ್ಲಿರಿ? ಬೈಬಲ್ ಅಧ್ಯಯನ ಹೇಗೆ ಆರಂಭಿಸುವುದು, ಹೇಗೆ ನಡೆಸುವುದು ಎಂದು ಚಿಕ್ಕವರಿಗೆ ತೋರಿಸಿಕೊಡಬಹುದು. ನೀವು ಸಹೋದರಿಯಾಗಿರುವಲ್ಲಿ ಯುವ ತಾಯಂದಿರಿಗೆ ಅವರು ತಮ್ಮ ಚಿಕ್ಕ ಮಕ್ಕಳ ಆರೈಕೆ ಮಾಡುವಾಗ ಆಧ್ಯಾತ್ಮಿಕ ಚಟುವಟಿಕೆಗಳನ್ನು ಬದಿಗೊತ್ತದಂತೆ ನೋಡಿಕೊಳ್ಳುವುದು ಹೇಗೆಂದು ತಿಳಿಸಬಹುದು. ನೀವು ಸಹೋದರರಾಗಿರುವಲ್ಲಿ ಯುವಕರಿಗೆ ಉತ್ಸಾಹದಿಂದ ಭಾಷಣ ಕೊಡಲು, ಹೆಚ್ಚು ಪರಿಣಾಮಕಾರಿಯಾಗಿ ಸುವಾರ್ತೆ ಸಾರಲು ಕಲಿಸಬಹುದು. ನೀವು ವೃದ್ಧ ಸಹೋದರ ಸಹೋದರಿಯರನ್ನು ಭೇಟಿಮಾಡಿ ಹೇಗೆ ಅವರನ್ನು ಆಧ್ಯಾತ್ಮಿಕವಾಗಿ ಉತ್ತೇಜಿಸುತ್ತೀರೆಂದು ಸಹ ಅವರಿಗೆ ತೋರಿಸಬಹುದು. ನಿಮಗೆ ಮುಂಚೆ ಇದ್ದಷ್ಟು ಶಾರೀರಿಕ ಬಲವಿಲ್ಲದಿರಬಹುದು ನಿಜ. ಆದರೆ ನಿಮಗಿಂತ ಚಿಕ್ಕವರಿಗೆ ತರಬೇತಿ ಕೊಡಲು ಅನೇಕ ಸದವಕಾಶಗಳು ನಿಮಗಿವೆ. ಹೌದು, ಬೈಬಲ್ ಹೇಳುವಂತೆ “ಯುವಕರಿಗೆ ಬಲವು ಭೂಷಣ, ಮುದುಕರಿಗೆ ನರೆಯು ಒಡವೆ.”—ಜ್ಞಾನೋ. 20:29.
ಅಗತ್ಯ ಹೆಚ್ಚಿರುವ ಕಡೆ ಸೇವೆ
8. ಪೌಲನು ತನ್ನ ಇಳಿವಯಸ್ಸಿನಲ್ಲಿ ಏನು ಮಾಡಿದನು?
8 ಪೌಲನು ತನ್ನ ಇಳಿವಯಸ್ಸಿನಲ್ಲೂ ದೇವರ ಸೇವೆಯಲ್ಲಿ ಕಾರ್ಯಮಗ್ನನಾಗಿದ್ದನು. ಸುಮಾರು ಕ್ರಿ.ಶ. 61ರಲ್ಲಿ ಅವನು ರೋಮ್‍ನ ಸೆರೆಯಿಂದ ಬಿಡುಗಡೆಹೊಂದಿದ ಮೇಲೆ ರೋಮ್‍ನಲ್ಲೇ ಉಳಿದು ಆರಾಮವಾಗಿ ಜೀವನ ನಡೆಸಿ ಅಲ್ಲೇ ಸುವಾರ್ತೆ ಸಾರಲು ನಿರ್ಣಯಿಸಬಹುದಿತ್ತು. ಏಕೆಂದರೆ ಅವನು ಈಗಾಗಲೇ ಎಷ್ಟೋ ವರ್ಷ ಕಷ್ಟಗಳನ್ನು ಸಹಿಸಿಕೊಂಡು ಮಿಷನರಿ ಸೇವೆಯಲ್ಲಿ ಅವಿರತವಾಗಿ ದುಡಿದಿದ್ದನು. (2 ಕೊರಿಂ. 11:23-27) ರೋಮ್‍ನ ಸಹೋದರರು ಸಹ ಪೌಲನು ತಮ್ಮೊಂದಿಗಿದ್ದು ಬೆಂಬಲಿಸುವುದನ್ನು ಇಷ್ಟಪಡುತ್ತಿದ್ದರು. ಆದರೆ ಕಡಲಾಚೆಯ ದೇಶಗಳಲ್ಲಿ ಹೆಚ್ಚು ಸೇವೆಮಾಡುವ ಅಗತ್ಯವಿದೆಯೆಂದು ಪೌಲನಿಗೆ ಗೊತ್ತಿತ್ತು. ಹಾಗಾಗಿ ಅವನು ತಿಮೊಥೆಯ ಹಾಗೂ ತೀತನನ್ನು ತನ್ನ ಜೊತೆ ಕರಕೊಂಡು ಮಿಷನರಿ ಸೇವೆಯನ್ನು ಮತ್ತೆ ಆರಂಭಿಸಿದನು. ರೋಮ್‍ನಿಂದ ಎಫೆಸಕ್ಕೆ, ಅಲ್ಲಿಂದ ಕ್ರೇತದ್ವೀಪಕ್ಕೆ, ಬಳಿಕ ಬಹುಶಃ ಮಕೆದೋನ್ಯಕ್ಕೆ ಪ್ರಯಾಣಿಸಿದನು. (1 ತಿಮೊ. 1:3; ತೀತ 1:5) ಅನಂತರ ಅವನು ಸ್ಪೇನ್ ದೇಶಕ್ಕೆ ಹೋದನೋ ತಿಳಿದಿಲ್ಲ. ಆದರೆ ಅಲ್ಲಿಗೆ ಹೋಗುವ ಯೋಜನೆ ಅವನಿಗಿತ್ತು.—ರೋಮ. 15:24, 28.
9. ಅಗತ್ಯ ಹೆಚ್ಚಿರುವಲ್ಲಿ ಸೇವೆ ಮಾಡಲು ಹೋದಾಗ ಪೇತ್ರನಿಗೆ ಎಷ್ಟು ಪ್ರಾಯವಿದ್ದಿರಬಹುದು? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.)
9 ಅಪೊಸ್ತಲ ಪೇತ್ರನು ಅಗತ್ಯ ಹೆಚ್ಚಿರುವ ಕಡೆ ಸ್ಥಳಾಂತರಿಸುವಾಗ ಅವನಿಗೆ 50 ವರ್ಷ ದಾಟಿದ್ದಿರಬಹುದು. ಅದು ನಮಗೆ ಹೇಗೆ ಗೊತ್ತು? ಪೇತ್ರನು ಯೇಸುವಿನ ಪ್ರಾಯದವನು ಅಥವಾ ಆತನಿಗಿಂತ ಸ್ವಲ್ಪ ದೊಡ್ಡವನಾಗಿದ್ದರೆ ಕ್ರಿ.ಶ. 49ರಲ್ಲಿ ಯೆರೂಸಲೇಮಿನಲ್ಲಿ ಇತರ ಅಪೊಸ್ತಲರೊಂದಿಗೆ ಕೂಡಿಬಂದಿದ್ದಾಗ ಅವನಿಗೆ ಸುಮಾರು 50 ವರ್ಷ ಪ್ರಾಯ ಇದ್ದಿರಬೇಕು. (ಅ. ಕಾ. 15:7) ಅದರ ಸ್ವಲ್ಪ ಸಮಯದ ನಂತರ ಅವನು ಬಾಬೆಲ್‌ಗೆ ಹೋದನು. ಅಲ್ಲಿ ವಾಸಿಸುವ ಅನೇಕ ಯೆಹೂದ್ಯರಿಗೆ ಸಾರುವುದು ಅವನ ಉದ್ದೇಶವಾಗಿತ್ತೆಂಬುದು ನಿಸ್ಸಂಶಯ. (ಗಲಾ. 2:9) ಕ್ರಿ.ಶ. 62ರಲ್ಲಿ ತನ್ನ ಮೊದಲ ಪತ್ರವನ್ನು ಬರೆದಾಗಲೂ ಅವನು ಅಲ್ಲೇ ಇದ್ದನು. (1 ಪೇತ್ರ 5:13) ವಿದೇಶದಲ್ಲಿ ಸ್ಥಳಾಂತರಿಸುವುದು ಸುಲಭವಲ್ಲ, ಅನೇಕ ಸವಾಲುಗಳಿರುತ್ತವೆ. ಆದರೂ ಪೇತ್ರನು ಯೆಹೋವನ ಸೇವೆಯಲ್ಲಿ ಹೆಚ್ಚು ಆನಂದಿಸುವ ಅವಕಾಶಕ್ಕೆ ತನ್ನ ಇಳಿವಯಸ್ಸು ಅಡ್ಡಬರುವಂತೆ ಬಿಡಲಿಲ್ಲ.
10, 11. ಹೆಚ್ಚು ಅಗತ್ಯವಿರುವಲ್ಲಿ ಸೇವೆ ಮಾಡಲು ಇಳಿವಯಸ್ಸಿನಲ್ಲಿ ಸ್ಥಳಾಂತರಿಸಿದವರ ಅನುಭವ ತಿಳಿಸಿ.
10 ಇಂದು ಸಹ 50ರ ಹರೆಯದಲ್ಲಿರುವ ಅಥವಾ ಅದನ್ನು ದಾಟಿರುವ ಅನೇಕ ಕ್ರೈಸ್ತರು ಇದನ್ನೇ ಮಾಡಿದ್ದಾರೆ. ಅವರ ಜೀವನದ ಸನ್ನಿವೇಶಗಳು ಬದಲಾಗಿರುವುದರಿಂದ ಯೆಹೋವನ ಸೇವೆ ಮಾಡುವ ಹೊಸ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಕೆಲವರು ಹೆಚ್ಚು ಅಗತ್ಯವಿರುವ ಸ್ಥಳಗಳಿಗೆ ವಾಸ ಬದಲಾಯಿಸಿದ್ದಾರೆ. ಉದಾಹರಣೆಗೆ ಸಹೋದರ ರಾಬರ್ಟ್ ತಾವು ಮಾಡಿಕೊಂಡ ಬದಲಾವಣೆಯನ್ನು ಹೀಗೆ ವಿವರಿಸುತ್ತಾರೆ: “ನಾನೂ ನನ್ನ ಹೆಂಡತಿ 55ರ ಆಸುಪಾಸಿನಲ್ಲಿದ್ದಾಗ ಸೇವೆಯನ್ನು ಹೆಚ್ಚಿಸುವ ಒಳ್ಳೇ ಅವಕಾಶ ನಮಗೆ ಸಿಕ್ಕಿತು. ಏಕೆಂದರೆ ನಮಗೆ ಇರುವವನು ಒಬ್ಬನೇ ಮಗ. ಅವನು ಬೇರೆ ಕಡೆ ವಾಸವಾಗಿದ್ದ. ನಮ್ಮ ಹೆತ್ತವರು ತೀರಿಕೊಂಡಿದ್ದರಿಂದ ಅವರ ಆರೈಕೆ ಮಾಡುವ ಜವಾಬ್ದಾರಿ ನಮಗಿರಲಿಲ್ಲ. ಪಿತ್ರಾರ್ಜಿತವಾಗಿ ಸಿಕ್ಕಿದ ಸ್ವಲ್ಪ ಆಸ್ತಿಯೂ ನಮಗಿತ್ತು. ನಮ್ಮ ಮನೆ ಮಾರಿದರೆ ಇರುವ ಸಾಲ ತೀರಿಸಲು ಆಗುತ್ತದೆ ಮತ್ತು ನನಗೆ ನಿವೃತ್ತಿ ಪಿಂಚಣಿ ಸಿಗುವ ವರೆಗೂ ಜೀವನ ಸಾಗಿಸಲು ಕೈಯಲ್ಲಿ ಹಣವಿರುತ್ತದೆ ಎಂದು ಲೆಕ್ಕಹಾಕಿದೆ. ಆ ಸಮಯದಲ್ಲೇ ಬೊಲಿವಿಯದಲ್ಲಿ ಹೆಚ್ಚೆಚ್ಚು ಜನರು ಸತ್ಯ ಕಲಿಯಲು ಆಸಕ್ತಿ ತೋರಿಸುತ್ತಿದ್ದಾರೆ ಮತ್ತು ಅಲ್ಲಿ ಜೀವನವೆಚ್ಚ ಕಡಿಮೆ ಎಂದು ನಮಗೆ ತಿಳಿದುಬಂತು. ಹಾಗಾಗಿ ಅಲ್ಲಿಗೆ ಸ್ಥಳಾಂತರಿಸುವ ನಿರ್ಧಾರ ಮಾಡಿದೆವು. ಹೊಸ ಜಾಗಕ್ಕೆ ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ. ನಾವು ಒಗ್ಗಿಹೋಗಿದ್ದ ಉತ್ತರ ಅಮೆರಿಕಕ್ಕಿಂತ ಇಲ್ಲಿ ಎಲ್ಲವೂ ವ್ಯತ್ಯಾಸವಾಗಿತ್ತು. ಆದರೆ ನಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿತು.”
11 ರಾಬರ್ಟ್ ಮುಂದುವರಿಸಿದ್ದು: “ಈಗ ನಾವು ಯಾವಾಗಲೂ ಸಭಾ ಚಟುವಟಿಕೆಗಳಲ್ಲೇ ನಿರತರಾಗಿರುತ್ತೇವೆ. ನಾವು ಬೈಬಲ್ ಅಧ್ಯಯನ ನಡೆಸಿದ ಕೆಲವು ಮಂದಿ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ತುಂಬ ಬಡವರಾಗಿದ್ದ ಒಂದು ಕುಟುಂಬದೊಂದಿಗೆ ನಾವು ಅಧ್ಯಯನ ನಡೆಸುತ್ತಿದ್ದೆವು. ಅವರು ಅನೇಕ ಮೈಲಿ ದೂರದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದರು. ಆದರೂ ಪ್ರತಿ ವಾರ ಅವರೆಲ್ಲರೂ ಆ ದೂರದ ಹಳ್ಳಿಯಿಂದ ಕಷ್ಟಕರ ಪ್ರಯಾಣ ಬೆಳೆಸಿ ಕೂಟಗಳಿಗಾಗಿ ಪಟ್ಟಣಕ್ಕೆ ಬರುತ್ತಿದ್ದರು. ಆ ಕುಟುಂಬ ಒಳ್ಳೇ ಪ್ರಗತಿ ಮಾಡಿದಾಗ, ಮಾತ್ರವಲ್ಲ ಅವರಲ್ಲಿ ಹಿರಿಯ ಮಗ ಪಯನೀಯರ್ ಸೇವೆ ಆರಂಭಿಸಿದಾಗಲಂತೂ ನಮಗಾದ ಸಂತೋಷ ಹೇಳತೀರದು.”
ವಿದೇಶೀ ಭಾಷಾ ಕ್ಷೇತ್ರದಲ್ಲಿ ಸೇವೆ
12, 13. ನಿವೃತ್ತಿಯ ನಂತರ ಯೆಹೋವನ ಸೇವೆ ಹೆಚ್ಚಿಸಲು ಹೊಸ ವಿಧಾನವನ್ನು ಕಂಡುಕೊಂಡ ಸಹೋದರರೊಬ್ಬರ ಅನುಭವ ತಿಳಿಸಿ.
12 ವಯಸ್ಕ ಸಹೋದರ ಸಹೋದರಿಯರು ವಿದೇಶೀ ಭಾಷಾ ಸಭೆಗಳಲ್ಲಿ ಮತ್ತು ಗುಂಪುಗಳಲ್ಲಿ ಸೇವೆ ಮಾಡುವ ಮೂಲಕ ಅಲ್ಲಿರುವವರಿಗೆ ತಮ್ಮ ಮಾದರಿಯಿಂದ ಪ್ರಯೋಜನ ತರಬಲ್ಲರು. ಅಂಥ ಟೆರಿಟೊರಿಗಳಲ್ಲಿ ಸೇವೆ ಮಾಡುವುದೂ ತುಂಬ ಆಹ್ಲಾದಕರ. ಉದಾಹರಣೆಗೆ, ಸಹೋದರ ಬ್ರೈಯನ್ ಹೀಗೆ ಬರೆದರು: “65 ವರ್ಷವಾದಾಗ ನಾನು ನಿವೃತ್ತಿಯಾದೆ. ಅದರ ನಂತರ ನನಗೂ ನನ್ನ ಹೆಂಡತಿಗೂ ಜೀವನ ನೀರಸವೆನಿಸತೊಡಗಿತು. ನಮ್ಮ ಮಕ್ಕಳು ದೊಡ್ಡವರಾಗಿ ಬೇರೆ ಕಡೆ ವಾಸವಾಗಿದ್ದರು. ಸೇವೆಯಲ್ಲಿ ಆಸಕ್ತ ಜನರು, ಬೈಬಲ್ ಅಧ್ಯಯನಗಳು ಸಿಗುವುದು ತುಂಬ ಕಡಿಮೆ. ಆದರೆ ಒಂದು ದಿನ ನನಗೆ ಇಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡುತ್ತಿದ್ದ ಒಬ್ಬ ಚೈನೀಸ್ ಯುವಕ ಸಿಕ್ಕಿದ. ಅವನನ್ನು ಕೂಟಕ್ಕೆ ಕರೆದಾಗ ಕೂಟಕ್ಕೆ ಬಂದ. ಅವನೊಂದಿಗೆ ಬೈಬಲ್ ಅಧ್ಯಯನ ಆರಂಭಿಸಿದೆ. ಕೆಲವು ವಾರಗಳ ನಂತರ ಅವನು ಒಬ್ಬ ಚೈನೀಸ್ ಸಹೋದ್ಯೋಗಿಯನ್ನು ಬೈಬಲ್ ಅಧ್ಯಯನಕ್ಕೆ ಕರಕೊಂಡು ಬರಲಾರಂಭಿಸಿದ. ಇನ್ನೆರಡು ವಾರಗಳ ನಂತರ ಇನ್ನೊಬ್ಬನನ್ನು, ನಂತರ ಮತ್ತೊಬ್ಬನನ್ನು ಕರಕೊಂಡು ಬಂದ. ಹೀಗೆ ಒಟ್ಟು ನಾಲ್ಕು ಚೈನೀಸ್ ಯುವಕರು ಕೂಟಕ್ಕೆ ಬರಲಾರಂಭಿಸಿದರು.
13 “ಅನಂತರ ಇನ್ನೊಬ್ಬ ಚೈನೀಸ್ ಸಂಶೋಧಕ ಬಂದು ಬೈಬಲ್ ಅಧ್ಯಯನಕ್ಕಾಗಿ ಕೇಳಿಕೊಂಡ. ಆಗ ನಾನು, ‘ನನಗೆ ನಿವೃತ್ತಿ ಸಿಕ್ಕಿರುವುದು ನೌಕರಿಯಿಂದ, ಯೆಹೋವನ ಸೇವೆಯಿಂದ ಅಲ್ಲ’ ಎಂದು ಆಲೋಚಿಸಿದೆ. ಬಳಿಕ ನನಗಿಂತ ಎರಡು ವರ್ಷ ಚಿಕ್ಕವಳಾದ ನನ್ನ ಹೆಂಡತಿಯ ಹತ್ತಿರ, ನಾವಿಬ್ಬರೂ ಚೈನೀಸ್ ಭಾಷೆ ಕಲಿಯೋಣವೇ ಎಂದು ಕೇಳಿದೆ. ನಾವು ರೆಕಾರ್ಡ್ ಮಾಡಲಾದ ಭಾಷಾ ಕೋರ್ಸ್ ಮೂಲಕ ಚೈನೀಸ್ ಕಲಿತೆವು. ಅದಾಗಿ ಈಗ 10 ವರ್ಷಗಳು ಕಳೆದಿವೆ. ವಿದೇಶೀ ಭಾಷಾ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವುದರಿಂದ ನಮಗೆ ಯೌವನ ಮರಳಿ ಬಂದಂತಿದೆ. ಇಷ್ಟರ ವರೆಗೆ ನಾವು 112 ಚೈನೀಸ್ ವ್ಯಕ್ತಿಗಳೊಂದಿಗೆ ಬೈಬಲ್ ಅಧ್ಯಯನ ನಡೆಸಿದ್ದೇವೆ. ಹೆಚ್ಚಿನವರು ಕೂಟಗಳಿಗೆ ಹಾಜರಾಗಿದ್ದಾರೆ. ಒಬ್ಬಳು ಈಗ ಪಯನೀಯರ್ ಸೇವೆ ಮಾಡುತ್ತಿದ್ದಾಳೆ.”
ನಿಮ್ಮಿಂದಾಗುವುದನ್ನು ಮಾಡುವುದರಲ್ಲಿ ಸಂತೋಷಿಸಿ
14. (1) ಹಿರೀ ಕ್ರೈಸ್ತರು ಯಾವುದನ್ನು ನೆನಪಿನಲ್ಲಿಡಬೇಕು? (2) ಪೌಲನ ಉದಾಹರಣೆ ಅವರಿಗೆ ಹೇಗೆ ಉತ್ತೇಜನಕಾರಿ?
14 ಐವತ್ತರ ಹರೆಯದ ಅನೇಕ ಕ್ರೈಸ್ತರಿಗೆ ಯೆಹೋವನ ಸೇವೆಯನ್ನು ಹೆಚ್ಚಿಸಲು ನಾನಾ ಅವಕಾಶಗಳಿರುತ್ತವಾದರೂ ಎಲ್ಲರಿಗೆ ಅದು ಸಾಧ್ಯವಿಲ್ಲ. ಏಕೆಂದರೆ ಕೆಲವರಿಗೆ ಆರೋಗ್ಯ ಚೆನ್ನಾಗಿರಲಿಕ್ಕಿಲ್ಲ. ವೃದ್ಧ ಹೆತ್ತವರನ್ನು ನೋಡಿಕೊಳ್ಳಲಿಕ್ಕಿರಬಹುದು. ಅವರನ್ನೇ ಅವಲಂಬಿಸಿರುವ ಮಕ್ಕಳಿರಬಹುದು. ನೀವು ಅಂಥ ಪರಿಸ್ಥಿತಿಯಲ್ಲಿರುವಲ್ಲಿ, ನೀವೆಷ್ಟನ್ನು ಮಾಡುತ್ತಿದ್ದೀರೋ ಅದನ್ನು ಯೆಹೋವನು ತುಂಬ ಗಣ್ಯಮಾಡುತ್ತಾನೆಂದು ನೆನಪಿನಲ್ಲಿಡಿ. ನಿಮ್ಮಿಂದ ಮಾಡಲಾಗದ್ದನ್ನು ನೆನಸಿ ನಿರಾಶೆ ಹೊಂದುವ ಬದಲು ನಿಮ್ಮಿಂದಾಗುವುದನ್ನು ಮಾಡುವುದರಲ್ಲಿ ಸಂತೋಷಪಡಿ. ಅಪೊಸ್ತಲ ಪೌಲನ ಉದಾಹರಣೆ ಗಮನಿಸಿ. ಅನೇಕ ವರ್ಷಗಳ ವರೆಗೆ ಅವನನ್ನು ಗೃಹಬಂಧನದಲ್ಲಿ ಇಡಲಾಗಿತ್ತು. ಹಾಗಾಗಿ ಅವನಿಗೆ ಮಿಷನರಿ ಪ್ರಯಾಣವನ್ನು ಮುಂದುವರಿಸಲು ಆಗಲಿಲ್ಲ. ಆದರೆ ಜನರು ತನ್ನನ್ನು ಭೇಟಿಮಾಡುತ್ತಿದ್ದಾಗಲೆಲ್ಲ ಅವನು ಶಾಸ್ತ್ರಗ್ರಂಥದ ವಿಷಯಗಳ ಕುರಿತು ಮಾತಾಡಿ ಅವರ ನಂಬಿಕೆಯನ್ನು ಬಲಪಡಿಸುತ್ತಿದ್ದನು.—ಅ. ಕಾ. 28:16, 30, 31.
15. ವೃದ್ಧ ಕ್ರೈಸ್ತರು ಏಕೆ ತುಂಬ ಅಮೂಲ್ಯರು?
15 ವೃದ್ಧರು ಮಾಡುವ ಸೇವೆಯನ್ನು ಸಹ ಯೆಹೋವನು ತುಂಬ ಅಮೂಲ್ಯವೆಂದೆಣಿಸುತ್ತಾನೆ. ಸೊಲೊಮೋನನು ಹೇಳಿದಂತೆ ವೃದ್ಧಾಪ್ಯದ ಕಷ್ಟಕರ ದಿನಗಳು ಜೀವನದ ಅತ್ಯುತ್ತಮ ಸಮಯವಲ್ಲ. ಆದರೂ ವೃದ್ಧ ಸೇವಕರು ತನ್ನನ್ನು ಸ್ತುತಿಸಲಿಕ್ಕಾಗಿ ಮಾಡುವುದೆಲ್ಲವನ್ನು ಯೆಹೋವನು ಗಣ್ಯಮಾಡುತ್ತಾನೆ. (ಲೂಕ 21:2-4) ಸಭೆಯಲ್ಲಿರುವವರಿಗೆ ಕೂಡ ತಮ್ಮ ಮಧ್ಯೆಯಿರುವ ಈ ಸಹೋದರ ಸಹೋದರಿಯರ ಅನೇಕ ವರ್ಷಗಳ ನಂಬಿಗಸ್ತ ಮಾದರಿ ಅತ್ಯಮೂಲ್ಯ.
16. (1) ವೃದ್ಧಳಾಗಿದ್ದ ಅನ್ನಳಿಗೆ ಯಾವ ಸುಯೋಗಗಳಲ್ಲಿ ಆನಂದಿಸಲು ಆಗಿರಲಿಕ್ಕಿಲ್ಲ? (2) ಆದರೆ ದೇವಾರಾಧನೆಯಲ್ಲಿ ಆಕೆಗೆ ಏನೆಲ್ಲ ಮಾಡಲಿಕ್ಕಾಯಿತು?
16 ವೃದ್ಧಾಪ್ಯದಲ್ಲೂ ನಂಬಿಗಸ್ತಿಕೆಯಿಂದ ಯೆಹೋವನನ್ನು ಸ್ತುತಿಸುತ್ತಿದ್ದ ಒಬ್ಬಾಕೆ ಸ್ತ್ರೀಯ ಕುರಿತು ಬೈಬಲಿನಲ್ಲಿ ಹೇಳಲಾಗಿದೆ. ಆಕೆಯ ಹೆಸರು ಅನ್ನ. ವಿಧವೆಯಾಗಿದ್ದ ಆಕೆಗೆ ಯೇಸು ಜನಿಸಿದಾಗ 84 ವರ್ಷ ಪ್ರಾಯ. ಅದರ ನಂತರ ಹೆಚ್ಚು ವರ್ಷ ಜೀವಿಸದ ಆಕೆಗೆ ಯೇಸುವಿನ ಹಿಂಬಾಲಕಳಾಗಲು, ಪವಿತ್ರಾತ್ಮದಿಂದ ಅಭಿಷೇಕ ಹೊಂದಲು, ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಅವಕಾಶ ಸಿಕ್ಕಿರಲಿಕ್ಕಿಲ್ಲ. ಆದರೂ ಆಕೆ ತನ್ನಿಂದ ಏನನ್ನು ಮಾಡಲು ಸಾಧ್ಯವಿತ್ತೋ ಅದನ್ನು ಮಾಡಿದಳು. “ಅವಳು ದೇವಾಲಯವನ್ನು ಬಿಟ್ಟುಹೋಗದೆ ಹಗಲಿರುಳು . . . ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಳು.” (ಲೂಕ 2:36, 37) ಯಾಜಕರು ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ಧೂಪವನ್ನು ಅರ್ಪಿಸುತ್ತಿದ್ದಾಗ ಅನ್ನಳು ದೇವಾಲಯದ ಪ್ರಾಕಾರದಲ್ಲಿ ಸೇರಿಬರುತ್ತಿದ್ದ ಜನರೊಂದಿಗೆ ಇರುತ್ತಿದ್ದಳು ಮತ್ತು ಬಹುಶಃ ಅರ್ಧ ತಾಸು ಮೌನ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ಇಂಥ ಒಂದು ಸಂದರ್ಭದಲ್ಲೇ ಕೂಸಾಗಿದ್ದ ಯೇಸುವನ್ನು ಆಕೆ ನೋಡಿದಳು ಮತ್ತು “ಯೆರೂಸಲೇಮಿನ ಬಿಡುಗಡೆಗಾಗಿ ಕಾಯುತ್ತಿದ್ದವರೆಲ್ಲರೊಂದಿಗೆ ಆ ಮಗುವಿನ ಕುರಿತು ಮಾತಾಡತೊಡಗಿದಳು.”—ಲೂಕ 2:38.
17. ವೃದ್ಧ ಅಥವಾ ಅಸ್ವಸ್ಥ ಕ್ರೈಸ್ತರು ಸತ್ಯಾರಾಧನೆಯಲ್ಲಿ ಭಾಗಿಗಳಾಗುವಂತೆ ನಾವು ಹೇಗೆ ಸಹಾಯ ಮಾಡಬಹುದು?
17 ನಾವಿಂದು ವೃದ್ಧ ಅಥವಾ ಅಸ್ವಸ್ಥ ಕ್ರೈಸ್ತರಿಗೆ ಯಾವ ಸಹಾಯ ಬೇಕಿದೆ ಎಂದು ಯಾವಾಗಲೂ ಗಮನಕೊಡುತ್ತಾ ಅದನ್ನು ಮಾಡಲು ಸಿದ್ಧರಿರಬೇಕು. ಕೆಲವರು ಕೂಟ, ಸಮ್ಮೇಳನಗಳಿಗೆ ಬರಲು ಹಾತೊರೆಯುತ್ತಾರಾದರೂ ಅನೇಕವೇಳೆ ಬರಲು ಅವರಿಂದಾಗುವುದಿಲ್ಲ. ಕೆಲವು ಕಡೆಗಳಲ್ಲಿ ಇಂಥವರಿಗಾಗಿ ಟೆಲಿಫೋನಿನ ಮೂಲಕ ಕೂಟಗಳನ್ನು ಕೇಳಿಸಿಕೊಳ್ಳುವ ಏರ್ಪಾಡನ್ನು ಪ್ರೀತಿಯಿಂದ ಮಾಡಲಾಗಿದೆ. ಬೇರೆ ಕೆಲವೆಡೆ ಹಾಗೆ ಮಾಡಲು ಸಾಧ್ಯವಿರಲಿಕ್ಕಿಲ್ಲ. ಹಾಗಿದ್ದರೂ ಕೂಟಗಳಿಗೆ ಹಾಜರಾಗಲು ಆಗದ ವೃದ್ಧ ಕ್ರೈಸ್ತರು ಸತ್ಯಾರಾಧನೆಗೆ ಬೆಂಬಲ ನೀಡಬಲ್ಲರು. ಉದಾಹರಣೆಗೆ, ಕ್ರೈಸ್ತ ಸಭೆಯ ಅಭಿವೃದ್ಧಿಗಾಗಿ ಅವರು ಪ್ರಾರ್ಥನೆ ಮಾಡಬಲ್ಲರು.—ಕೀರ್ತನೆ 92:13, 14 ಓದಿ.
18, 19. (1) ವೃದ್ಧ ಕ್ರೈಸ್ತರಿಂದ ಇತರರಿಗೆ ಹೇಗೆ ಉತ್ತೇಜನ ದೊರಕುತ್ತದೆ? (2) ‘ನಿನ್ನ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸು’ ಎಂಬ ಸಲಹೆಯನ್ನು ಯಾರು ಅನ್ವಯಿಸಿಕೊಳ್ಳಬಹುದು?
18 ವೃದ್ಧ ಕ್ರೈಸ್ತರು ತಮ್ಮಿಂದ ಇತರರಿಗೆ ಎಷ್ಟೊಂದು ಉತ್ತೇಜನ ದೊರೆಯುತ್ತದೆ ಎನ್ನುವುದನ್ನು ಅರಿಯದಿರಬಹುದು. ಉದಾಹರಣೆಗೆ, ಅನೇಕ ವರ್ಷಗಳ ಕಾಲ ದೇವಾಲಯಕ್ಕೆ ನಂಬಿಗಸ್ತಿಕೆಯಿಂದ ಹೋಗುತ್ತಿದ್ದ ಅನ್ನಳ ಕುರಿತೇ ಯೋಚಿಸಿ. ತನ್ನ ಈ ಮಾದರಿ ಅನೇಕ ಶತಮಾನಗಳ ನಂತರವೂ ಇತರರನ್ನು ಉತ್ತೇಜಿಸುವುದು ಎಂದು ಆಕೆಗೆ ತಿಳಿದಿರಲಿಕ್ಕಿಲ್ಲ. ಆದರೆ ಆಕೆಗೆ ಯೆಹೋವನ ಮೇಲಿದ್ದ ಪ್ರೀತಿ ಬೈಬಲಿನಲ್ಲಿ ದಾಖಲಾಗಿದೆ. ನಿಮಗೆ ದೇವರ ಮೇಲಿರುವ ಪ್ರೀತಿ ಜೊತೆ ವಿಶ್ವಾಸಿಗಳ ಹೃದಯದಲ್ಲಿ ಲಿಖಿತವಾಗಿದೆ. ಹಾಗಾಗಿಯೇ ಬೈಬಲ್ ಹೇಳುತ್ತದೆ: “ನರೆಗೂದಲೇ ಸುಂದರ ಕಿರೀಟವು, ಅದು ಧರ್ಮಮಾರ್ಗದಲ್ಲಿ ದೊರಕುವದು.”—ಜ್ಞಾನೋ. 16:31.
19 ಯೆಹೋವನ ಸೇವೆಯನ್ನು ಮಾಡುವುದರಲ್ಲಿ ನಮ್ಮೆಲ್ಲರಿಗೆ ನಮ್ಮದೇ ಆದ ಇತಿಮಿತಿಗಳಿವೆ. ಆದರೂ ಯಾರಲ್ಲಿ ಇನ್ನೂ ಶಕ್ತಿ ಸಾಮರ್ಥ್ಯವಿದೆಯೋ ಅವರು ಈ ಪ್ರೇರಿತ ಮಾತುಗಳನ್ನು ಹೃದಯಕ್ಕೆ ತಕ್ಕೊಳ್ಳಬೇಕು: ‘ಕಷ್ಟದ ದಿನಗಳು ಸಮೀಪಿಸುವದರೊಳಗಾಗಿ ನಿನ್ನ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸು.’—ಪ್ರಸಂ. 12:1.