ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಒಂದನೇ ಶತಮಾನದ ಯೆಹೂದ್ಯರಿಗೆ ಮೆಸ್ಸೀಯನನ್ನು ‘ಎದುರುನೋಡುತ್ತಾ’ ಇರಲು ಯಾವ ಆಧಾರವಿತ್ತು?

ಸ್ನಾನಿಕನಾದ ಯೋಹಾನನ ದಿನಗಳಲ್ಲಿ “ಬರಬೇಕಾಗಿದ್ದ ಕ್ರಿಸ್ತನನ್ನು ಜನರು ಎದುರುನೋಡುತ್ತಿದ್ದ ಕಾರಣ, ‘ಪ್ರಾಯಶಃ ಇವನೇ ಕ್ರಿಸ್ತನಾಗಿರಬಹುದೊ’ ಎಂದು ಯೋಹಾನನ ಕುರಿತು ಎಲ್ಲರೂ ತಮ್ಮ ಹೃದಯಗಳಲ್ಲಿ ತರ್ಕಿಸುತ್ತಿದ್ದರು.” (ಲೂಕ 3:15) ಆ ಸಮಯದಲ್ಲೇ ಮೆಸ್ಸೀಯನು ಬರಲಿದ್ದಾನೆಂದು ಯೆಹೂದ್ಯರು ಎದುರುನೋಡಿದ್ದು ಏಕಿದ್ದಿರಬಹುದು? ಅದಕ್ಕೆ ಹಲವಾರು ಕಾರಣಗಳಿವೆ.

ಯೇಸು ಹುಟ್ಟಿದ ಬಳಿಕ ಯೆಹೋವನ ದೂತನು ಬೇತ್ಲೆಹೇಮ್‌ ಸಮೀಪದ ಹೊಲಗಳಲ್ಲಿ ಮಂದೆಗಳನ್ನು ಕಾಯುತ್ತಿದ್ದ ಕುರುಬರಿಗೆ ಕಾಣಿಸಿಕೊಂಡನು. “ದಾವೀದನ ಊರಿನಲ್ಲಿ ಇಂದು ನಿಮಗಾಗಿ ಒಬ್ಬ ರಕ್ಷಕನು ಹುಟ್ಟಿದ್ದಾನೆ; ಅವನು ಕರ್ತನಾಗಿರುವ ಕ್ರಿಸ್ತನೇ” ಎಂದು ಆ ದೇವದೂತ ಘೋಷಿಸಿದನು. (ಲೂಕ 2:8-11) ಬಳಿಕ ಅವನೊಂದಿಗೆ “ಸ್ವರ್ಗೀಯ ಸೈನ್ಯದವರ ಒಂದು ಸಮೂಹವು ಕಾಣಿಸಿಕೊಂಡು ದೇವರನ್ನು ಸ್ತುತಿಸುತ್ತಾ, ‘ಅತ್ಯುನ್ನತ ಸ್ಥಳಗಳಲ್ಲಿ ದೇವರಿಗೆ ಮಹಿಮೆ ಮತ್ತು ಭೂಮಿಯಲ್ಲಿ ದೇವರ ಪ್ರಸನ್ನತೆಯಿರುವ ಜನರ ಮಧ್ಯೆ ಶಾಂತಿ’ ಎಂದು ಹೇಳಿತು.” *ಲೂಕ 2:13, 14.

ದೇವದೂತರ ಈ ಘೋಷಣೆಯು ದೀನಭಾವದ ಆ ಕುರುಬರ ಮೇಲೆ ಖಂಡಿತ ಗಾಢ ಪ್ರಭಾವ ಬೀರಿತು. ಅವರು ತಕ್ಷಣ ಬೇತ್ಲೆಹೇಮ್‌ಗೆ ಹೊರಟುಹೋಗಿ ಯೋಸೇಫ, ಮರಿಯ ಮತ್ತು ಮಗು ಯೇಸುವನ್ನು ಕಂಡು ‘ಆ ಚಿಕ್ಕ ಮಗುವಿನ ಕುರಿತು ದೇವದೂತರು ತಮಗೆ ಹೇಳಿದ್ದನ್ನು ತಿಳಿಯಪಡಿಸಿದರು.’ ಫಲಿತಾಂಶವಾಗಿ “ಕುರುಬರು ಹೇಳಿದ ವಿಷಯಗಳನ್ನು ಕೇಳಿಸಿಕೊಂಡವರೆಲ್ಲರೂ ಅತ್ಯಾಶ್ಚರ್ಯಪಟ್ಟರು.” (ಲೂಕ 2:17, 18) “ಕೇಳಿಸಿಕೊಂಡವರೆಲ್ಲರೂ” ಎಂಬ ಪದವು ಆ ಕುರುಬರು ಯೋಸೇಫ ಮರಿಯಳಿಗಲ್ಲದೆ ಬೇರೆಯವರಿಗೂ ಆ ಸುದ್ದಿಯನ್ನು ತಿಳಿಸಿದರೆಂದು ತೋರಿಸುತ್ತದೆ. ಬಳಿಕ ಮನೆಗೆ ಹಿಂತೆರಳುವಾಗಲೂ ಆ ಕುರುಬರು “ತಮಗೆ ತಿಳಿಸಲ್ಪಟ್ಟಂತೆಯೇ ತಾವು ಕೇಳಿದ ಮತ್ತು ನೋಡಿದ ಎಲ್ಲ ವಿಷಯಗಳಿಗಾಗಿ ದೇವರನ್ನು ಮಹಿಮೆಪಡಿಸುತ್ತಾ ಸ್ತುತಿಸುತ್ತಾ” ಇದ್ದರು. (ಲೂಕ 2:20) ಹೌದು, ಈ ಕುರುಬರು ಕ್ರಿಸ್ತನ ಬಗ್ಗೆ ತಾವು ಕೇಳಿಸಿಕೊಂಡ ಶುಭ ಸಂದೇಶವನ್ನು ತಮ್ಮಲ್ಲೇ ಇಟ್ಟುಕೊಳ್ಳಲಿಲ್ಲ, ಎಲ್ಲರಿಗೂ ತಿಳಿಸಿದರು.

ಮರಿಯಳು ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಂತೆ ತನ್ನ ಚೊಚ್ಚಲ ಮಗನನ್ನು ಯೆಹೋವನಿಗೆ ಸಮರ್ಪಿಸಲಿಕ್ಕಾಗಿ ಯೆರೂಸಲೇಮಿಗೆ ತಂದಾಗ ಪ್ರವಾದಿನಿ ಹನ್ನಳು ಆ ಕೂಸನ್ನು ನೋಡಿದಳು. ಮಾತ್ರವಲ್ಲ ಆಕೆ “ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಯೆರೂಸಲೇಮಿನ ಬಿಡುಗಡೆಗಾಗಿ ಕಾಯುತ್ತಿದ್ದವರೆಲ್ಲರೊಂದಿಗೆ ಆ ಮಗುವಿನ ಕುರಿತು ಮಾತಾಡತೊಡಗಿದಳು.” (ಲೂಕ 2:36-38; ವಿಮೋ. 13:12) ಹೀಗೆ ಮೆಸ್ಸೀಯನು ಆಗಮಿಸಿರುವ ಸುದ್ದಿ ಎಲ್ಲೆಡೆ ಹಬ್ಬುತ್ತಾ ಹೋಯಿತು.

ಬಳಿಕ “ಪೂರ್ವ ಭಾಗಗಳಿಂದ ಜ್ಯೋತಿಷಿಗಳು ಯೆರೂಸಲೇಮಿಗೆ ಬಂದು, ‘ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ? ನಾವು ಪೂರ್ವಭಾಗದಲ್ಲಿದ್ದಾಗ ಅವನ ನಕ್ಷತ್ರವನ್ನು ಕಂಡೆವು; ನಾವು ಅವನಿಗೆ ಪ್ರಣಾಮಮಾಡಲು ಬಂದಿದ್ದೇವೆ’ ಎಂದರು.” (ಮತ್ತಾ. 2:1, 2) ಈ ಮಾತನ್ನು ಕೇಳಿದೊಡನೆ “ಅರಸನಾದ ಹೆರೋದನೂ ಅವನೊಂದಿಗೆ ಯೆರೂಸಲೇಮಿನವರೆಲ್ಲರೂ ಕಳವಳಗೊಂಡರು; ಅವನು ಜನರ ಎಲ್ಲ ಮುಖ್ಯ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಜನಿಸಲಿಕ್ಕಿದ್ದುದು ಎಲ್ಲಿ ಎಂಬುದರ ಬಗ್ಗೆ ಅವರನ್ನು ವಿಚಾರಿಸತೊಡಗಿದನು.”  (ಮತ್ತಾ. 2:3, 4) ಹೀಗೆ ಭಾವೀ ಮೆಸ್ಸೀಯನು ಹುಟ್ಟಿರುವ ಸುದ್ದಿಯು ಬಹು ಜನರ ಗಮನಕ್ಕೆ ಬಂತು. *

ಆರಂಭದಲ್ಲಿ ಉಲ್ಲೇಖಿಸಲಾದ ಲೂಕ 3:15ಕ್ಕನುಸಾರ ಕೆಲವು ಮಂದಿ ಯೆಹೂದ್ಯರು ಸ್ನಾನಿಕನಾದ ಯೋಹಾನನನ್ನು ಕ್ರಿಸ್ತನೆಂದು ಭಾವಿಸಿದರು. ಆದರೆ ಅವರ ಅನಿಸಿಕೆಗಳು ತಪ್ಪೆಂದು ಯೋಹಾನನು ಸ್ಪಷ್ಟಪಡಿಸಿದನು. ಅವನಂದದ್ದು: “ನನ್ನ ಬಳಿಕ ಬರುವವನು ನನಗಿಂತ ಹೆಚ್ಚು ಬಲಶಾಲಿಯಾಗಿದ್ದಾನೆ; ಅವನ ಕೆರಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಅವನು ನಿಮಗೆ ಪವಿತ್ರಾತ್ಮದಿಂದಲೂ ಬೆಂಕಿಯಿಂದಲೂ ದೀಕ್ಷಾಸ್ನಾನ ಮಾಡಿಸುವನು.” (ಮತ್ತಾ. 3:11) ವಿನಮ್ರನಾಗಿ ಯೋಹಾನನು ಹೇಳಿದ ಈ ಮಾತು ಮೆಸ್ಸೀಯನನ್ನು ಎದುರುನೋಡುತ್ತಿದ್ದವರ ಕಾತರವನ್ನು ಇನ್ನೂ ಹೆಚ್ಚಿಸಿರಬೇಕು.

ಒಂದನೇ ಶತಮಾನದ ಯೆಹೂದ್ಯರು ದಾನಿಯೇಲ 9:24-27ರಲ್ಲಿರುವ 70 ವಾರಗಳ ಪ್ರವಾದನೆಯನ್ನು ಆಧಾರವಾಗಿಟ್ಟು ಮೆಸ್ಸೀಯನ ಬರೋಣದ ಸರಿಯಾದ ಸಮಯವನ್ನು ಲೆಕ್ಕಹಾಕಿರುವ ಸಾಧ್ಯತೆ ಇದೆಯೇ? ಇಲ್ಲವೇ ಇಲ್ಲವೆಂದು ನಾವು ಹೇಳಲಾಗದು, ಆದರೂ ಹಾಗೆ ಲೆಕ್ಕ ಹಾಕಿದ್ದಾರೆಂಬುದಕ್ಕೆ ಕೂಡ ಪುರಾವೆಯಿಲ್ಲ. ಏಕೆಂದರೆ 70 ವಾರಗಳ ಕುರಿತು ಯೇಸುವಿನ ದಿನದಲ್ಲಿ ಅನೇಕ ಅರ್ಥವಿವರಣೆಗಳು ಇದ್ದವಾದರೂ ಅವು ಒಂದಕ್ಕೊಂದು ಹೊಂದಿಕೆಯಲ್ಲಿರಲಿಲ್ಲ. ಮಾತ್ರವಲ್ಲ ಆ ಪ್ರವಾದನೆಯ ಕುರಿತು ಈಗ ನಮಗಿರುವ ತಿಳಿವಳಿಕೆಗೆ ಅವು ಸ್ವಲ್ಪವೂ ಹೋಲುವುದಿಲ್ಲ. *

ಯೆಹೂದಿ ಸನ್ಯಾಸಿಗಳ ಪಂಗಡ ಎಂದು ವ್ಯಾಪಕವಾಗಿ ಎಣಿಸಲಾಗಿದ್ದ ಎಸ್ಸೀನ್‌ ಪಂಗಡವು ಇಬ್ಬರು ಮೆಸ್ಸೀಯರು 490 ವರ್ಷಗಳ ಕೊನೆಕೊನೆಯಲ್ಲಿ ತೋರಿಬರುವರೆಂದು ಬೋಧಿಸುತ್ತಿತ್ತು. ಆದರೆ ಈ ಎಸ್ಸೀನ್‌ಗಳು ತಮ್ಮ ಲೆಕ್ಕಾಚಾರವನ್ನು ದಾನಿಯೇಲ ಪ್ರವಾದನೆಯ ಮೇಲೆ ಆಧರಿಸಿದ್ದರೆಂದು ಖಚಿತವಾಗಿ ಹೇಳಸಾಧ್ಯವಿಲ್ಲ. ಒಂದುವೇಳೆ ಅವರು ದಾನಿಯೇಲನ ಪ್ರವಾದನೆ ಆಧರಿಸಿಯೇ ಲೆಕ್ಕಿಸಿದರೆಂದು ಇಟ್ಟುಕೊಂಡರೂ ಸರ್ವಸಂಗವನ್ನು ತೊರೆದಿದ್ದ ಆ ಪಂಗಡದವರು ಹಾಕಿದ ಲೆಕ್ಕಾಚಾರವನ್ನು ಸಾಮಾನ್ಯ ಯೆಹೂದ್ಯರು ಹೇಗೆ ಅಂಗೀಕರಿಸಿದರೆಂದು ಊಹಿಸುವುದೂ ಕಷ್ಟ.

ಆ 70 ವಾರಗಳು, ಮೊದಲನೇ ದೇವಾಲಯ ಕ್ರಿ.ಪೂ. 607ರಲ್ಲಿ ನಾಶವಾದಂದಿನಿಂದ ಹಿಡಿದು ಎರಡನೇ ದೇವಾಲಯ ಕ್ರಿ.ಶ. 70ರಲ್ಲಿ ನಾಶವಾದ ಸಮಯಾವಧಿಯಾಗಿದೆ ಎಂದು ಕ್ರಿ.ಶ. 2ನೇ ಶತಮಾನದಲ್ಲಿ ಕೆಲವು ಯೆಹೂದ್ಯರು ನಂಬಿದರು. ಆದರೆ ಇನ್ನು ಕೆಲವು ಯೆಹೂದ್ಯರು ಕ್ರಿ.ಪೂ. ಎರಡನೇ ಶತಮಾನದಲ್ಲಿದ್ದ ಮಕಬೀಯರ ಕಾಲವು ಆ 70 ವಾರಗಳಾಗಿವೆ ಎಂದೆಣಿಸಿದರು. ಹೀಗೆ, ಪ್ರವಾದನೆಯಲ್ಲಿ ತಿಳಿಸಲಾದ 70 ವಾರಗಳನ್ನು ಹೇಗೆ ಲೆಕ್ಕಿಸಬೇಕೆಂಬ ವಿಷಯದಲ್ಲಿ ಬೇರೆ ಬೇರೆ ಅಭಿಪ್ರಾಯಗಳಿದ್ದವು.

ಒಂದುವೇಳೆ 70 ವಾರಗಳ ಪ್ರವಾದನೆಯನ್ನು ಒಂದನೇ ಶತಮಾನದ ಯೆಹೂದ್ಯರು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಅಪೊಸ್ತಲರಾಗಲಿ ಒಂದನೇ ಶತಮಾನದಲ್ಲಿದ್ದ ಇತರ ಕ್ರೈಸ್ತರಾಗಲಿ ಅದಕ್ಕೆ ಸೂಚಿಸಿ ಮಾತಾಡುತ್ತಿದ್ದರು. ವಾಗ್ದತ್ತ ಮೆಸ್ಸೀಯನು ಯೇಸು ಕ್ರಿಸ್ತನಾಗಿ ಸರಿಯಾದ ಸಮಯಕ್ಕೆ ಆಗಮಿಸಿದ್ದಾನೆ ಎಂಬುದಕ್ಕೆ ರುಜುವಾತಾಗಿ ಆ ಪ್ರವಾದನೆಯನ್ನು ಉಪಯೋಗಿಸುತ್ತಿದ್ದರು. ಆದರೆ ಆರಂಭದ ಕ್ರೈಸ್ತರು ಹಾಗೆ ಉಲ್ಲೇಖಿಸಿರುವುದಕ್ಕೆ ಯಾವ ಸಾಕ್ಷ್ಯವೂ ಇಲ್ಲ.

ಗಮನಿಸಬೇಕಾದ ಇನ್ನೊಂದು ಅಂಶವೂ ಇದೆ. ಸುವಾರ್ತಾ ಲೇಖಕರು ಹೀಬ್ರು ಶಾಸ್ತ್ರಗ್ರಂಥದಲ್ಲಿರುವ ನಿರ್ದಿಷ್ಟ ಪ್ರವಾದನೆಗಳು ಯೇಸು ಕ್ರಿಸ್ತನಲ್ಲಿ ಹೇಗೆ ನೆರವೇರಿದವು ಎಂಬುದಕ್ಕೆ ಅನೇಕವೇಳೆ ಸೂಚಿಸಿ ಮಾತಾಡಿದರು. (ಮತ್ತಾ. 1:22, 23; 2:13-15; 4:13-16) ಆದರೆ ಅವರಲ್ಲಿ ಯಾರೊಬ್ಬರೂ ಭೂಮಿಯ ಮೇಲೆ ಯೇಸುವಿನ ಆಗಮನವನ್ನು 70 ವಾರಗಳ ಪ್ರವಾದನೆಯೊಂದಿಗೆ ಜೋಡಿಸಿಲ್ಲ.

ಸಾರಾಂಶ ಏನೆಂದರೆ ಯೇಸುವಿನ ದಿನದಲ್ಲಿದ್ದ ಜನರು 70 ವಾರಗಳ ಪ್ರವಾದನೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆಂದು ನಿಶ್ಚಿತವಾಗಿ ಹೇಳಸಾಧ್ಯವಿಲ್ಲ. ಆದರೆ ನಾವೀಗ ಚರ್ಚಿಸಿದಂತೆ, ಜನರು ಆ ಸಮಯದಲ್ಲಿ ಮೆಸ್ಸೀಯನನ್ನು ಏಕೆ ‘ಎದುರುನೋಡುತ್ತಾ’ ಇದ್ದರೆಂಬುದಕ್ಕೆ ಸುವಾರ್ತಾ ಪುಸ್ತಕಗಳು ಬಲವಾದ ಕಾರಣಗಳನ್ನು ಕೊಡುತ್ತವೆ.

^ ಪ್ಯಾರ. 4 ಯೇಸು ಜನಿಸಿದಾಗ ದೇವದೂತರು ಹಾಡಿದರು ಎಂದು ಬೈಬಲ್‌ ಹೇಳುವುದಿಲ್ಲ.

^ ಪ್ಯಾರ. 7 ಪೂರ್ವಭಾಗದಲ್ಲಿ “ನಕ್ಷತ್ರ” ಕಂಡದ್ದಕ್ಕೂ ‘ಯೆಹೂದ್ಯರ ಅರಸ’ ಹುಟ್ಟಿದ ವಿಷಯಕ್ಕೂ ಆ ಜ್ಯೋತಿಷಿಗಳು ಸಂಬಂಧ ಕಲ್ಪಿಸಿದ್ದು ಹೇಗೆ? ಎಂಬ ಪ್ರಶ್ನೆ ಬರಬಹುದು. ಅವರು ನಕ್ಷತ್ರವನ್ನು ಹಿಂಬಾಲಿಸಿಕೊಂಡು ಇಸ್ರಾಯೇಲ್‍ನ ಮಾರ್ಗವಾಗಿ ಹೋಗುತ್ತಿದ್ದಾಗ ಯೇಸುವಿನ ಜನನದ ಸುದ್ದಿಯನ್ನು ಕೇಳಿಸಿಕೊಂಡಿದ್ದರಿಂದ ಇರಬಹುದೇ?

^ ಪ್ಯಾರ. 9 70 ವಾರಗಳ ಕುರಿತ ಪ್ರವಾದನೆಯ ಸದ್ಯದ ಅರ್ಥವಿವರಣೆಗಾಗಿ ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ ಅಧ್ಯಾಯ 11 ನೋಡಿ.