ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಾರೆಪ್ತದ ವಿಧವೆಯ ನಂಬಿಕೆಗೆ ದೊರೆತ ಪ್ರತಿಫಲ

ಚಾರೆಪ್ತದ ವಿಧವೆಯ ನಂಬಿಕೆಗೆ ದೊರೆತ ಪ್ರತಿಫಲ

ಆಕೆ ಬಡ ವಿಧವೆ. ಅವಳಿಗಿದ್ದವನು ಒಬ್ಬನೇ ಮಗ. ಆನಂದಪರವಶಳಾಗಿ ಆಕೆ ಮಗನನ್ನು ಬಿಗಿದಪ್ಪಿಕೊಳ್ಳುತ್ತಾಳೆ. ಆಕೆಗೆ ತನ್ನ ಕಣ್ಣುಗಳನ್ನೇ ನಂಬಲಾಗುತ್ತಿಲ್ಲ. ಕೆಲವೇ ನಿಮಿಷಗಳ ಹಿಂದೆಯಷ್ಟೇ ಅವನ ಮೃತದೇಹವನ್ನು ಎದೆಗವಚಿಕೊಂಡು ಅಳುತ್ತಿದ್ದಳು. ಆದರೆ ಈಗ ಅದೇ ಮಗನು ಜೀವಂತವಾಗಿ ಮುಂದೆ ನಿಂತಿದ್ದಾನೆ. ಅವನ ನಗುಮುಖವನ್ನು ನೋಡಿ ಅವಳು ಪ್ರಫುಲ್ಲಳಾಗುತ್ತಾಳೆ. ಆಕೆಯ ಮನೆಯಲ್ಲಿರುವ ಅತಿಥಿ ಹೀಗನ್ನುತ್ತಾನೆ: “ಇಗೋ, ನೋಡು; ನಿನ್ನ ಮಗನು ಜೀವಿಸುತ್ತಾನೆ.”

ಈ ಭಾವಪ್ರಚೋದಕ ಘಟನೆ ನಡೆದದ್ದು ಸುಮಾರು 3,000 ವರ್ಷಗಳ ಹಿಂದೆ. ಇದು 1 ಅರಸುಗಳು 17ನೇ ಅಧ್ಯಾಯದಲ್ಲಿ ದಾಖಲಾಗಿದೆ. ಆ ಅತಿಥಿ ದೇವರ ಪ್ರವಾದಿಯಾದ ಎಲೀಯ. ಮಗುವಿನ ತಾಯಿ ಚಾರೆಪ್ತಾ ಊರಿನ ಒಬ್ಬ ಅನಾಮಿಕ ವಿಧವೆ. ಮಗನ ಪುನರುತ್ಥಾನ ಆಕೆಯ ಜೀವಿತದಲ್ಲಿ ನಡೆದ ನಂಬಿಕೆ ಕಟ್ಟುವ ಒಂದು ಗಮನಾರ್ಹ ಘಟನೆ! ನಾವೀಗ ಆಕೆಯ ಕುರಿತು ಇನ್ನಷ್ಟು ತಿಳಿಯೋಣ. ಆಕೆಯಿಂದ ನಾವು ಕೆಲವು ಪ್ರಾಮುಖ್ಯ ಪಾಠಗಳನ್ನು ಕಲಿಯಲಿದ್ದೇವೆ.

ನಂಬಿಕೆಯಿದ್ದ ವಿಧವೆಯ ಮನೆಗೆ ಎಲೀಯ ಹೋದನು

ಇಸ್ರಾಯೇಲಿನ ದುಷ್ಟ ರಾಜ ಅಹಾಬನ ರಾಜ್ಯದಲ್ಲಿ ದೀರ್ಘಕಾಲದ ಬರಗಾಲ ತರಲು ಯೆಹೋವನು ನಿಶ್ಚಯಿಸಿದ್ದನು. ಎಲೀಯನು ಬರಗಾಲ ಬರುವುದೆಂದು ಪ್ರಕಟಿಸಿದ ಬಳಿಕ ದೇವರು ಅವನನ್ನು ಅಹಾಬನ ಕೈಗೆ ಸಿಗದಂತೆ ಅಡಗಿಸಿಟ್ಟನು. ಮಾತ್ರವಲ್ಲ ಕಾಗೆಗಳು ಅವನಿಗೆ ರೊಟ್ಟಿ, ಮಾಂಸವನ್ನು ತಂದುಕೊಡುವಂತೆ ಮಾಡಿ ಅವನನ್ನು ಅದ್ಭುತಕರವಾಗಿ ಪೋಷಿಸಿದನು. ಸ್ವಲ್ಪ ಸಮಯದ ನಂತರ ಯೆಹೋವನು ಎಲೀಯನಿಗೆ, “ನೀನು ಇಲ್ಲಿಂದ ಚೀದೋನ್ಯರ ಚಾರೆಪ್ತಾ ಊರಿಗೆ ಹೊರಟುಹೋಗಿ ಅಲ್ಲಿ ವಾಸಿಸು. ನಿನ್ನನ್ನು ಸಾಕಬೇಕೆಂದು ಅಲ್ಲಿನ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ ಅಂದನು.”—1 ಅರ. 17:1-9.

ಎಲೀಯನು ಚಾರೆಪ್ತಾ ಊರಿಗೆ ಬಂದಾಗ ಒಬ್ಬ ಬಡ ವಿಧವೆ ಸೌದೆ ಕೂಡಿಸುತ್ತಿದ್ದಳು. ಎಲೀಯನಿಗೆ ಊಟ ಕೊಡಲಿಕ್ಕಿದ್ದ ಸ್ತ್ರೀ ಈಕೆಯೊ? ಆಕೆಯೇ ಬಡವಳಾಗಿರುವಾಗ ಪ್ರವಾದಿಗೆ ಊಟ ಕೊಡಲು ಅವಳಿಂದ ಹೇಗಾಗುತ್ತಿತ್ತು? ಇಂಥ ಸಂದೇಹಗಳು ಎಲೀಯನ ಮನಸ್ಸಿಗೂ ಬಂದಿರಬಹುದು. ಆದರೂ ಅವನು ಆಕೆಯ ಹತ್ತಿರ ಹೋಗಿ, “ದಯವಿಟ್ಟು ಕುಡಿಯುವದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ” ಎಂದು ಹೇಳಿದನು. ಆಕೆ ನೀರು ತರಲು ಹೋಗುತ್ತಿರುವಾಗ ಅವನು, “ನನಗೋಸ್ಕರ ಒಂದು ತುಂಡು ರೊಟ್ಟಿಯನ್ನೂ ತೆಗೆದುಕೊಂಡು ಬಾ” ಎಂದು ಹೇಳಿದನು. (1 ಅರ. 17:10, 11) ಈ ಅಪರಿಚಿತ ವ್ಯಕ್ತಿಗೆ ನೀರು ಕೊಡುವುದೇನೂ ಆಕೆಗೆ ಕಷ್ಟವಾಗಿರಲಿಲ್ಲ. ಆದರೆ ರೊಟ್ಟಿ ಕೊಡುವುದು ಆಕೆಗೆ ಕಷ್ಟವಾಗಿತ್ತು. ಏಕೆ?

 ಆಕೆ ಹೀಗಂದಳು: “ನಿನ್ನ ದೇವರಾದ ಯೆಹೋವನಾಣೆ, ನನ್ನ ಹತ್ತಿರ ರೊಟ್ಟಿಯಿರುವದಿಲ್ಲ. ಮಡಿಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವದಿಲ್ಲ. ಈಗ ಎರಡು ಕಟ್ಟಿಗೆಗಳನ್ನು ಹೆಕ್ಕಿ ನನಗೋಸ್ಕರವೂ ನನ್ನ ಮಗನಿಗೋಸ್ಕರವೂ ರೊಟ್ಟಿಮಾಡುತ್ತೇನೆ. ಅದನ್ನು ತಿಂದ ಮೇಲೆ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ.” (1 ಅರ. 17:12) ಈ ಸಂಭಾಷಣೆಯಿಂದ ನಮಗೆ ಕೆಲವು ವಿಷಯಗಳು ತಿಳಿಯುತ್ತವೆ. ಅವೇನು?

ಎಲೀಯನೊಬ್ಬ ದೇವಭಕ್ತ ಇಸ್ರಾಯೇಲ್ಯನೆಂದು ಆ ವಿಧವೆ ತಿಳಿದುಕೊಂಡಳು. ಅದು ಆಕೆ ಹೇಳಿದ “ನಿನ್ನ ದೇವರಾದ ಯೆಹೋವನಾಣೆ” ಎಂಬ ಮಾತಿನಿಂದ ತಿಳಿಯುತ್ತದೆ. ಆಕೆಗೆ ಇಸ್ರಾಯೇಲ್ಯರ ದೇವರ ಕುರಿತು ಸ್ವಲ್ಪಮಟ್ಟಿಗೆ ತಿಳಿದಿದ್ದಿರಬೇಕು. ಆದರೆ ಆತನನ್ನು ‘ನನ್ನ ದೇವರು’ ಎಂದು ಕರೆಯುವಷ್ಟರ ಮಟ್ಟಿಗೆ ಆಕೆ ತಿಳಿದುಕೊಂಡಿರಲಿಲ್ಲ. ಆಕೆ ವಾಸಿಸುತ್ತಿದ್ದ ಚಾರೆಪ್ತಾ ಊರು ಫೊಯಿನಿಕೆ ಪ್ರಾಂತದ ‘ಚೀದೋನ್‌ ನಗರಕ್ಕೆ ಸೇರಿದ್ದು’ ಅಥವಾ ಅದನ್ನು ಅವಲಂಬಿಸಿದ್ದ ಪಟ್ಟಣವಾಗಿದ್ದಿರಬೇಕು. ಹಾಗಾಗಿ ಚಾರೆಪ್ತಾ ಊರಿನವರು ಬಾಳನ ಆರಾಧಕರಾಗಿದ್ದಿರಬೇಕು. ಆದರೂ ಯೆಹೋವನು ಈ ವಿಧವೆಯಲ್ಲಿ ಯಾವುದೋ ಒಂದು ಉತ್ಕೃಷ್ಟ ಗುಣವನ್ನು ನೋಡಿದ್ದನು.

ಈ ಬಡ ವಿಧವೆ ವಿಗ್ರಹಾರಾಧಕ ಜನರ ಮಧ್ಯೆಯಿದ್ದರೂ ನಂಬಿಕೆ ತೋರಿಸಿದಳು. ಹಾಗಾಗಿ ಯೆಹೋವನು ಆ ವಿಧವೆಗೂ ಅದೇ ಸಮಯದಲ್ಲಿ ಎಲೀಯನಿಗೂ ಸಹಾಯ ಮಾಡುವ ಉದ್ದೇಶದಿಂದ ಅವನನ್ನು ಅಲ್ಲಿಗೆ ಕಳುಹಿಸಿದನು. ಇದರಿಂದ ನಾವೊಂದು ಬಹು ಮುಖ್ಯ ಪಾಠ ಕಲಿಯುತ್ತೇವೆ.

ಬಾಳನ ಆರಾಧನೆ ನಡೆಯುತ್ತಿದ್ದ ಚಾರೆಪ್ತದಲ್ಲಿ ಎಲ್ಲರೂ ಪೂರ್ತಿ ಕೆಟ್ಟವರಾಗಿರಲಿಲ್ಲ. ಯೆಹೋವನು ಎಲೀಯನನ್ನು ಆ ಊರಿನ ವಿಧವೆಯ ಮನೆಗೆ ಕಳುಹಿಸುವ ಮೂಲಕ ಏನು ತೋರಿಸಿಕೊಟ್ಟನು? ತನ್ನನ್ನು ಆರಾಧಿಸದ ಜನರಲ್ಲಿ ಒಳ್ಳೇ ಹೃದಯಸ್ಥಿತಿಯಿರುವವರ ಕಡೆಗೆ ಆತನು ಗಮನ ಕೊಡುತ್ತಾನೆಂದೇ. ಹೌದು, “ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.”—ಅ. ಕಾ. 10:35.

ಚಾರೆಪ್ತದ ವಿಧವೆಯಂತೆ ಒಳ್ಳೇ ಹೃದಯಸ್ಥಿತಿಯಿರುವವರು ನಿಮ್ಮ ಟೆರಿಟೊರಿಯಲ್ಲೂ ಇರಬಹುದಲ್ಲವೇ? ಅವರು ಸುಳ್ಳುಧರ್ಮಕ್ಕೆ ಸೇರಿದವರ ಮಧ್ಯೆಯಿದ್ದರೂ ಅದಕ್ಕಿಂತ ಉತ್ತಮವಾದದ್ದಕ್ಕಾಗಿ ಹಾತೊರೆಯುತ್ತಿರಬಹುದು. ಅವರಿಗೆ ಯೆಹೋವನ ಬಗ್ಗೆ ಕೊಂಚ ತಿಳಿದಿರಬಹುದು ಅಥವಾ ಏನೂ ತಿಳಿದಿರಲಿಕ್ಕಿಲ್ಲ. ಹಾಗಾಗಿ ಸತ್ಯಾರಾಧನೆಯನ್ನು ಸ್ವೀಕರಿಸಬೇಕಾದರೆ ಅವರಿಗೆ ನೆರವು ಬೇಕು. ಇಂಥ ವ್ಯಕ್ತಿಗಳಿಗಾಗಿ ನೀವು ಹುಡುಕುತ್ತಿದ್ದೀರಾ? ಅವರಿಗೆ ನೆರವಾಗುತ್ತಿದ್ದೀರಾ?

‘ಮೊದಲು ನನಗೋಸ್ಕರ ಒಂದು ಚಿಕ್ಕ ರೊಟ್ಟಿ ಮಾಡು’

ಆ ಬಡ ವಿಧವೆ, ತನ್ನಲ್ಲಿರುವ ಹಿಟ್ಟಿನಿಂದ ತನಗಾಗಿಯೂ ಮಗನಿಗಾಗಿಯೂ ಒಂದು ಹೊತ್ತಿನ ಊಟವನ್ನಷ್ಟೇ ತಯಾರಿಸಲು ಆಗುವುದು, ಅದನ್ನು ತಿಂದ ಮೇಲೆ ಇಬ್ಬರೂ ಸಾಯಬೇಕು ಎಂದು ಎಲೀಯನಿಗೆ ಹೇಳಿದಳು. ಆದರೂ ಎಲೀಯನು ಏನು ಮಾಡುವಂತೆ ಆಕೆಗೆ ಹೇಳಿದನೆಂದು ಗಮನಿಸಿ. “ಹೆದರಬೇಡ; ನೀನು ಹೇಳಿದಂತೆ ಮಾಡು, ಆದರೆ ಮೊದಲು ಅದರಿಂದ ನನಗೋಸ್ಕರ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ; ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. ಇಸ್ರಾಯೇಲ್‌ ದೇವರಾದ ಯೆಹೋವನು ನಿನಗೆ—ನಾನು ದೇಶಕ್ಕೆ ಮಳೆಯನ್ನು ಕಳುಹಿಸುವ ವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ, ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವದಿಲ್ಲ ಎಂದು ಹೇಳುತ್ತಾನೆ ಅಂದನು.”—1 ಅರ. 17:11-14.

ಇಂಥ ಸನ್ನಿವೇಶದಲ್ಲಿ ಕೆಲವರು, ‘ಇರೋ ಒಂದು ಹೊತ್ತಿನ ಊಟವನ್ನೂ ಕೊಟ್ಟುಬಿಡುವುದೇ? ತಮಾಷೆ ಮಾಡ್ತಿದ್ದೀರಾ?’ ಎಂದು ಹೇಳಿರುತ್ತಿದ್ದರು. ಆದರೆ ಆಕೆ ಹಾಗೆ ಹೇಳಲಿಲ್ಲ. ಆಕೆಗೆ ಯೆಹೋವನ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದರೂ ಎಲೀಯನ ಮಾತಿನಲ್ಲಿ ನಂಬಿಕೆಯಿಟ್ಟಳು. ಅವನು ಹೇಳಿದಂತೆಯೇ ಮಾಡಿದಳು. ಆಕೆಯ ನಂಬಿಕೆಗೆ ಎಂಥ ದೊಡ್ಡ ಪರೀಕ್ಷೆ! ಆಕೆ ವಿವೇಕಯುತ ನಿರ್ಣಯ ಮಾಡಿದಳು!

ದೇವರು ಈ ಬಡ ವಿಧವೆಯ ಕೈಬಿಡಲಿಲ್ಲ. ಎಲೀಯನು ಅವಳಿಗೆ ಮಾತುಕೊಟ್ಟಂತೆಯೇ ಯೆಹೋವನು ಆಕೆಯ ಹತ್ತಿರವಿದ್ದ ಹಿಟ್ಟು ಮತ್ತು ಎಣ್ಣೆಯನ್ನು ಹೆಚ್ಚಿಸಿದನು. ಹೀಗೆ ಎಲೀಯನನ್ನು, ಆ ವಿಧವೆಯನ್ನು ಮತ್ತು ಆಕೆಯ ಮಗನನ್ನು ಬರಗಾಲ ಮುಗಿಯುವ ವರೆಗೂ ದೇವರು ಪೋಷಿಸಿದನು. “ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ; ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ.” (1 ಅರ. 17:16; 18:1) ಆಕೆ ಎಲೀಯನು ಹೇಳಿದಂತೆ ಮಾಡದೇ ಹೋಗಿದ್ದಲ್ಲಿ, ಇದ್ದ ಒಂದಿಷ್ಟು ಹಿಟ್ಟು ಮತ್ತು ಎಣ್ಣೆಯಿಂದ ಆಕೆ ಮಾಡಿದ  ಒಂದು ರೊಟ್ಟಿಯೇ ಆಕೆಗೂ ಆಕೆಯ ಮಗನಿಗೂ ಕೊನೆಯ ಊಟವಾಗುತ್ತಿತ್ತು. ಆಕೆ ನಂಬಿಕೆ ತೋರಿಸಿದಳು. ಯೆಹೋವನಲ್ಲಿ ಭರವಸೆಯಿಟ್ಟಳು ಮತ್ತು ಮೊದಲು ಎಲೀಯನಿಗೆ ಊಟ ಕೊಟ್ಟಳು.

ಚಾರೆಪ್ತದ ವಿಧವೆ ಎಲೀಯನ ದೇವರಾದ ಯೆಹೋವನಲ್ಲಿ ನಂಬಿಕೆ ತೋರಿಸಿದ್ದರಿಂದ ಆಕೆಯೂ ಆಕೆಯ ಮಗನೂ ಜೀವದಿಂದುಳಿದರು

ಇದರಿಂದ ನಾವು ಕಲಿಯುವ ಒಂದು ಪಾಠ ಯಾವುದು? ನಂಬಿಕೆ ತೋರಿಸುವವರನ್ನು ಯೆಹೋವನು ಆಶೀರ್ವದಿಸುತ್ತಾನೆ ಎಂಬುದೇ. ನಿಮ್ಮ ಸಮಗ್ರತೆಗೆ ಪರೀಕ್ಷೆ ಬಂದಾಗ ಯೆಹೋವನಲ್ಲಿ ನಂಬಿಕೆಯಿಟ್ಟರೆ ಆತನು ನಿಮಗೆ ಸಹಾಯಹಸ್ತ ಚಾಚುವನು. ಆ ಪರೀಕ್ಷೆಯನ್ನು ನಿಭಾಯಿಸಲು ನಿಮಗೆ ನೆರವಾಗಲಿಕ್ಕಾಗಿ ಯೆಹೋವನು ನಿಮ್ಮ ಪೋಷಕ, ಸಂರಕ್ಷಕ ಹಾಗೂ ಮಿತ್ರನಾಗುವನು.—ವಿಮೋ. 3:13-15.

1898ರ ಝಯನ್ಸ್‌ ವಾಚ್‌ ಟವರ್‌ನಲ್ಲಿ ಒಂದು ಲೇಖನವು ಈ ವಿಧವೆಯ ಕಥೆಯಿಂದ ನಮಗಿರುವ ಪಾಠವನ್ನು ಹೀಗೆ ವಿವರಿಸಿತು: “ವಿಧೇಯತೆ ತೋರಿಸುವಷ್ಟು ನಂಬಿಕೆ ಆ ವಿಧವೆಯಲ್ಲಿದ್ದ ಕಾರಣ, ಪ್ರವಾದಿಯ ಮೂಲಕ ಕರ್ತನ ಸಹಾಯವನ್ನು ಪಡೆಯಲು ಆಕೆ ಅರ್ಹಳೆಂದು ಪರಿಗಣಿಸಲ್ಪಟ್ಟಳು. ಒಂದುವೇಳೆ ಆಕೆ ನಂಬಿಕೆಯನ್ನು ತೋರಿಸಿರದಿದ್ದರೆ ಅಂಥ ನಂಬಿಕೆ ತೋರಿಸುವ ಇನ್ನೊಬ್ಬ ವಿಧವೆಯನ್ನು ಯೆಹೋವನು ಬಹುಶಃ ಕಂಡುಕೊಳ್ಳುತ್ತಿದ್ದನು. ನಮ್ಮ ಕುರಿತೂ ಹಾಗೆಯೇ. ಜೀವನವೆಂಬ ಪಯಣದ ಅನೇಕ ಹಂತಗಳಲ್ಲಿ ಕರ್ತನು ನಮ್ಮ ನಂಬಿಕೆಯನ್ನು ಪರೀಕ್ಷಿಸಲಿಕ್ಕಾಗಿ ಕೆಲವೊಂದು ಸನ್ನಿವೇಶಗಳಿಗೆ ನಮ್ಮನ್ನು ತರಬಹುದು. ನಾವು ನಂಬಿಕೆ ತೋರಿಸಿದರೆ ಆಶೀರ್ವಾದ ಪಡೆಯುವೆವು. ಇಲ್ಲದಿದ್ದರೆ ಆ ಆಶೀರ್ವಾದ ನಮ್ಮ ಕೈತಪ್ಪಿ ಹೋಗುವುದು.”

ಯಾವುದಾದರೂ ಕಷ್ಟಪರೀಕ್ಷೆ ಬಂದಾಗ ನಾವು ಬೈಬಲಿನಲ್ಲಿ ಹಾಗೂ ಬೈಬಲ್‌ ಆಧರಿತ ಪ್ರಕಾಶನಗಳಲ್ಲಿ ಯೆಹೋವನ ಮಾರ್ಗದರ್ಶನೆಗಾಗಿ ಹುಡುಕಬೇಕು. ಅನಂತರ ಆ ಮಾರ್ಗದರ್ಶನೆ ಅನುಸರಿಸಲು ಎಷ್ಟೇ ಕಷ್ಟವೆಂದು ತೋರಲಿ ಅದರ ಪ್ರಕಾರ ನಡೆಯಬೇಕು. “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು” ಎಂಬ ಜ್ಞಾನೋಕ್ತಿಗನುಸಾರ ನಡೆದರೆ ಯೆಹೋವನು ನಮ್ಮನ್ನು ಖಂಡಿತ ಆಶೀರ್ವದಿಸುವನು.—ಜ್ಞಾನೋ. 3:5, 6.

“ನನ್ನ ಮಗನನ್ನು ಸಾಯಿಸುವದಕ್ಕೆ ಬಂದಿಯೋ”

ಈ ವಿಧವೆಯ ನಂಬಿಕೆಗೆ ಇನ್ನೊಂದು ದೊಡ್ಡ ಪರೀಕ್ಷೆ ಬಂತು. ಬೈಬಲ್‌ ಅದನ್ನು ಹೀಗೆ ವಿವರಿಸುತ್ತದೆ: “ಕೆಲವು ದಿನಗಳಾದನಂತರ ಮನೆಯ ಯಜಮಾನಿಯಾದ ಆ ಸ್ತ್ರೀಯ ಮಗನು ಅಸ್ವಸ್ಥನಾದನು; ಹುಡುಗನಿಗೆ ರೋಗವು ಹೆಚ್ಚಾದದರಿಂದ ಉಸಿರಾಡುವುದು ನಿಂತುಹೋಯಿತು.” ಮಗನಿಗಾಗಿ ರೋದಿಸುತ್ತಿದ್ದ ಆ ಸ್ತ್ರೀ ಹೀಗೇಕಾಯಿತು ಎಂಬ ಕಳವಳದಲ್ಲಿ “ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು ನನ್ನ ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವದಕ್ಕೆ ಬಂದಿಯೋ” ಎಂದು ಕೇಳಿದಳು. (1 ಅರ. 17:17, 18, NW) ನೋವಿನಿಂದ ಕೂಡಿದ ಈ ಮಾತುಗಳ ಅರ್ಥವೇನು?

ಆಕೆ ಯಾವುದೋ ಪಾಪವನ್ನು ಮಾಡಿ ಅದು ಆಕೆಯ ಮನಸ್ಸನ್ನು ಚುಚ್ಚುತ್ತಿದ್ದು ಆಗ ಆಕೆಗೆ ನೆನಪಿಗೆ ಬಂದಿರಬಹುದೋ? ಮಗನ ಸಾವು ಆ ಪಾಪಕ್ಕೆ ದೇವರು ಕೊಟ್ಟ ಶಿಕ್ಷೆ ಹಾಗೂ ಎಲೀಯನು ತನಗೆ ಶಿಕ್ಷೆ ನೀಡಲು ದೇವರಿಂದ ಕಳುಹಿಸಲ್ಪಟ್ಟ ವ್ಯಕ್ತಿಯೆಂದು ಆಕೆ ನೆನಸಿದಳೋ? ಅದರ ಬಗ್ಗೆ ಬೈಬಲ್‌ ಏನೂ ಹೇಳುವುದಿಲ್ಲ. ಆದರೆ ಒಂದಂತೂ ಸ್ಪಷ್ಟ ಏನೆಂದರೆ, ದೇವರು ತನಗೆ ಅನ್ಯಾಯ ಮಾಡಿದ್ದಾನೆಂದು ಆ ವಿಧವೆ ದೂರಲಿಲ್ಲ.

ಹುಡುಗನ ಸಾವು ಎಲೀಯನಿಗೆ ಆಘಾತ ತಂದಿರಬೇಕು. ಅಲ್ಲದೆ ಆ ವಿಧವೆಯು ತನ್ನ ಎದೆಯೊಡೆಯುವಂಥ ದುಃಖಕ್ಕೆ ಪ್ರವಾದಿ ತನ್ನ ಮನೆಯಲ್ಲಿರುವುದೇ ಕಾರಣವೆಂದು ನೆನಸಿದ್ದರಿಂದ ಎಲೀಯನಿಗೆ ಧಕ್ಕೆಯಾಗಿದ್ದಿರಬೇಕು. ಅವನು ಹುಡುಗನ ಮೃತದೇಹವನ್ನು ಮೇಲಿನ ಕೋಣೆಗೆ ತೆಗೆದುಕೊಂಡು ಹೋಗಿ “ನನ್ನ ದೇವರಾದ ಯೆಹೋವನೇ, ನನಗೆ ಸ್ಥಳಕೊಟ್ಟ ಈ ವಿಧವೆಯ ಮಗನನ್ನು ನೀನು ಸಾಯಿಸಿ ಆಕೆಗೂ ಕೇಡನ್ನುಂಟುಮಾಡಿದ್ದೇನು” ಎಂದು ಮೊರೆಯಿಟ್ಟನು. ದಯೆ ಹಾಗೂ ಅತಿಥಿಸತ್ಕಾರ ತೋರಿಸಿದ ಈ ವಿಧವೆಯು ಇನ್ನೂ ದುಃಖದಲ್ಲಿ ನೊಂದುಹೋಗುವಂತೆ ದೇವರು ಅನುಮತಿಸಿದರೆ ಅದು ಆತನ ನಾಮಕ್ಕೆ ಕಳಂಕ ತರುವುದೆಂಬ ಯೋಚನೆಯನ್ನೇ ಎಲೀಯನಿಗೆ ಸಹಿಸಿಕೊಳ್ಳಲಾಗಲಿಲ್ಲ. ಹಾಗಾಗಿ “ನನ್ನ ದೇವರಾದ ಯೆಹೋವನೇ, ಈ ಹುಡುಗನ ಪ್ರಾಣವು ತಿರಿಗಿ ಬರುವಂತೆ ಮಾಡು” ಎಂದು ಅಂಗಲಾಚಿದನು.—1 ಅರ. 17:20, 21.

“ನೋಡು, ನಿನ್ನ ಮಗನು ಜೀವಿಸುತ್ತಾನೆ”

ಯೆಹೋವನು ಎಲೀಯನ ಪ್ರಾರ್ಥನೆಯನ್ನು ಆಲಿಸುತ್ತಿದ್ದನು. ಆ ವಿಧವೆ ಯೆಹೋವನಲ್ಲಿ ನಂಬಿಕೆ ತೋರಿಸಿದ್ದಳು ಮತ್ತು ಆತನ ಪ್ರವಾದಿಗೆ ಸಹಾಯ ಮಾಡಿದ್ದಳು. ದೇವರು ಆಕೆಯ ಮಗನ ಕಾಯಿಲೆ ಉಲ್ಬಣಗೊಳ್ಳಲು ಅನುಮತಿಸಿದ್ದೇಕೆ? ಆ ಮಗುವನ್ನು ನಂತರ ತಾನು ಪುನರುತ್ಥಾನಗೊಳಿಸಲಿದ್ದೇನೆ ಮತ್ತು ಈ ಪುನರುತ್ಥಾನ ಮುಂದಿನ ಪೀಳಿಗೆಯವರಿಗೆ ನಿರೀಕ್ಷೆಯನ್ನು ಕೊಡುತ್ತದೆಂದು ಯೆಹೋವನಿಗೆ ತಿಳಿದಿತ್ತು. ಹಾಗಾಗಿ ಅದನ್ನು ಅನುಮತಿಸಿದನೆಂದು ವ್ಯಕ್ತವಾಗುತ್ತದೆ. ಬೈಬಲಿನಲ್ಲಿ ದಾಖಲಾಗಿರುವ ಮೊತ್ತಮೊದಲ ಪುನರುತ್ಥಾನ ಇದಾಗಿದೆ. ದೇವರು ಎಲೀಯನ ಬಿನ್ನಹವನ್ನು ಲಾಲಿಸಿ ಮಗುವಿಗೆ ಪುನಃ ಜೀವಕೊಟ್ಟನು. “ಇಗೋ, ನೋಡು; ನಿನ್ನ ಮಗನು ಜೀವಿಸುತ್ತಾನೆ” ಎಂದು ಎಲೀಯನು ಹೇಳಿದಾಗ ಆ ತಾಯಿಗಾದ ಅತ್ಯಾನಂದವನ್ನು ಊಹಿಸಿಕೊಳ್ಳಿ! ಆಗ ಆ ವಿಧವೆ ಎಲೀಯನಿಗೆ ಹೇಳಿದ್ದು: “ನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಂದ ಬಂದ ಯೆಹೋವನ ಮಾತು ಸತ್ಯವೆಂದೂ ಈಗ ನನಗೆ ಗೊತ್ತಾಯಿತು.”—1 ಅರ. 17:22-24.

1 ಅರಸುಗಳು 17ನೇ ಅಧ್ಯಾಯದಲ್ಲಿ ಈ ವಿಧವೆಯ ಕುರಿತು ಇನ್ನೇನೂ ತಿಳಿಸಲಾಗಿಲ್ಲ. ಆದರೆ ಯೇಸು ಈಕೆಯ ಕುರಿತು ಒಳ್ಳೆ ಮಾತುಗಳನ್ನಾಡಿರುವುದನ್ನು ನೋಡುವಾಗ, ಈಕೆ ಮುಂದೆ ಯೆಹೋವನ ನಂಬಿಗಸ್ತ ಆರಾಧಕಳಾಗಿ ಜೀವಿಸಿದ್ದಿರಬೇಕು ಎಂದು ಗೊತ್ತಾಗುತ್ತದೆ. (ಲೂಕ 4:25, 26) ಆಕೆಯ ಕುರಿತ ವೃತ್ತಾಂತವು, ಯೆಹೋವನು ತನ್ನ ಸೇವಕರಿಗೆ ಸಹಾಯ ಮಾಡುವವರನ್ನು ಆಶೀರ್ವದಿಸುತ್ತಾನೆ ಎಂದು ನಮಗೆ ಕಲಿಸುತ್ತದೆ. (ಮತ್ತಾ. 25:34-40) ತನ್ನ ನಂಬಿಗಸ್ತ ಸೇವಕರು ಎಷ್ಟೇ ಸಂಕಷ್ಟದಲ್ಲಿರಲಿ ಯೆಹೋವನು ಅವರನ್ನು ಪೋಷಿಸುತ್ತಾನೆ ಎಂದು ತೋರಿಸಿಕೊಡುತ್ತದೆ. (ಮತ್ತಾ. 6:25-34) ಮಾತ್ರವಲ್ಲ ಮೃತರನ್ನು ಪುನರುತ್ಥಾನಗೊಳಿಸುವ ಬಯಕೆ ಹಾಗೂ ಸಾಮರ್ಥ್ಯ ಯೆಹೋವನಿಗಿದೆ ಎಂಬುದಕ್ಕೆ ಈ ಘಟನೆ ರುಜುವಾತಾಗಿದೆ. (ಅ. ಕಾ. 24:15) ನಾವು ಚಾರೆಪ್ತದ ವಿಧವೆಯನ್ನು ಸ್ಮರಿಸಲು ಇವು ಅತ್ಯುತ್ತಮ ಕಾರಣಗಳಾಗಿವೆ.