ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನ ಪ್ರಸನ್ನತೆಯನ್ನು ನೋಡಿ’

‘ಯೆಹೋವನ ಪ್ರಸನ್ನತೆಯನ್ನು ನೋಡಿ’

ನಾವು ಅನುಭವಿಸುವ ಸಂಕಷ್ಟಗಳು ಅನೇಕಬಾರಿ ನಮ್ಮ ಮೇಲೆ ತೀಕ್ಷ್ಣ ಪರಿಣಾಮ ಬೀರುತ್ತವೆ. ಅವು ನಮ್ಮ ಮನಸ್ಸನ್ನು ಯಾವಾಗಲೂ ಕಾಡಬಹುದು. ಶಕ್ತಿಯನ್ನೆಲ್ಲ ಹೀರಿಬಿಡಬಹುದು. ಜೀವನದ ಬಗ್ಗೆ ನಮಗಿರುವ ಅಭಿಪ್ರಾಯವನ್ನೇ ಬುಡಮೇಲು ಮಾಡಿಬಿಡಬಹುದು. ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನು ಸಹ ಬಹಳಷ್ಟು ಸಂಕಟಗಳನ್ನು ಅನುಭವಿಸಿದನು. ಆದರೆ ಅವುಗಳನ್ನೆಲ್ಲ ಅವನು ಹೇಗೆ ತಾಳಿಕೊಂಡನು? ಅದನ್ನವನು ಈ ಮನಮುಟ್ಟುವ ಕೀರ್ತನೆಯಲ್ಲಿ ಹೇಳಿದ್ದಾನೆ: “ನಾನು ಯೆಹೋವನಿಗೆ ಮೊರೆಯಿಡುವೆನು; ಯೆಹೋವನಿಗೆ ಕೂಗಿ ಬಿನ್ನೈಸುವೆನು. ನನ್ನ ಚಿಂತೆಗಳನ್ನು ಆತನ ಮುಂದೆ ಬಿಚ್ಚುವೆನು; ನನ್ನ ಕಷ್ಟವನ್ನು ಆತನಿಗೆ ಅರಿಕೆಮಾಡುವೆನು. ನನ್ನ ಆತ್ಮವು ಕುಂದಿಹೋಗಿದೆ; ನೀನೇ ನನ್ನ ಮಾರ್ಗವನ್ನು ಬಲ್ಲವನು.” ಹೌದು, ದಾವೀದನು ದೀನತೆಯಿಂದ ಯೆಹೋವನ ಸಹಾಯಕ್ಕಾಗಿ ಬೇಡಿದನು.—ಕೀರ್ತ. 142:1-3.

ಕಷ್ಟವನ್ನು ಸಹಿಸುತ್ತಿರುವಾಗ ದಾವೀದನು ಸಹಾಯಕ್ಕಾಗಿ ಯೆಹೋವನಲ್ಲಿ ದೀನತೆಯಿಂದ ಬೇಡಿಕೊಂಡನು

ಇನ್ನೊಂದು ಕೀರ್ತನೆಯಲ್ಲಿ ದಾವೀದನು ಹೀಗೆ ಹಾಡಿದನು: “ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.” (ಕೀರ್ತ. 27:4) ದಾವೀದನು ಲೇವಿಯನಾಗಿರಲಿಲ್ಲ. ಆದರೆ ಸತ್ಯಾರಾಧನೆಯ ಕೇಂದ್ರವಾಗಿದ್ದ ದೇವದರ್ಶನದ ಗುಡಾರದ ಹತ್ತಿರ ಪವಿತ್ರ ಅಂಗಣದ ಹೊರಗೆ ಅವನು ನಿಂತಿರುವುದನ್ನು ಊಹಿಸಿಕೊಳ್ಳಿ. ಅದರ ಕಡೆಗೆ ಅವನ ಹೃದಯದಲ್ಲಿ ಎಷ್ಟು ಗಣ್ಯತೆ ತುಂಬಿತ್ತೆಂದರೆ ತನ್ನ ಉಳಿದ ಜೀವಮಾನವೆಲ್ಲ ಅಲ್ಲೇ ಇದ್ದು ‘ಯೆಹೋವನ ಪ್ರಸನ್ನತೆಯನ್ನು ನೋಡುತ್ತಿರಲು’ ಅವನು ಬಯಸಿದನು.

ಕೀರ್ತನೆ 27:4ರಲ್ಲಿ “ಪ್ರಸನ್ನತೆ” ಎಂದು ಅನುವಾದಿಸಲಾಗಿರುವ ಹೀಬ್ರು ಪದವು “ಮನಸ್ಸಿಗೆ, ಭಾವನೆಗಳಿಗೆ, ಸಂವೇದನೆಗಳಿಗೆ ಹಿಡಿಸುವಂಥದ್ದು ಹಾಗೂ ಹಿತಕರವಾಗಿರುವಂಥದ್ದು” ಎಂಬರ್ಥ ಕೊಡುತ್ತದೆ. ಯೆಹೋವನು ಆರಾಧನೆಗಾಗಿ ಮಾಡಿದ್ದ ಏರ್ಪಾಡಿನ ಕುರಿತು ದಾವೀದನು ಯಾವಾಗಲೂ ಧ್ಯಾನಿಸಿದನು. ಅದು ಅವನಿಗೆ ಹಿತಕರವಾಗಿತ್ತು. ‘ದಾವೀದನಲ್ಲಿದ್ದ ಅದೇ ಮನೋಭಾವ ನನ್ನಲ್ಲೂ ಇದೆಯಾ?’ ಎಂದು ನಾವು ಕೇಳಿಕೊಳ್ಳೋಣ.

ದೇವರ ಏರ್ಪಾಡುಗಳ ಕುರಿತು ‘ಧ್ಯಾನಮಾಡುವದು’

ಇಂದು ನಾವು ಯೆಹೋವನ ಬಳಿಸಾರಲಿಕ್ಕಾಗಿ ಆತನು ಮಾಡಿರುವ ಏರ್ಪಾಡು ಒಂದು ಭೌತಿಕ ದೇವಾಲಯವಲ್ಲ. ಬದಲಿಗೆ ಇದಕ್ಕಾಗಿ ನಮಗಿರುವುದು ಮಹಾ ಆಧ್ಯಾತ್ಮಿಕ ಆಲಯ ಅಂದರೆ ಸತ್ಯಾರಾಧನೆಗಾಗಿ ದೇವರು ಮಾಡಿರುವ ಪವಿತ್ರ ಏರ್ಪಾಡು. * ಈ ಏರ್ಪಾಡಿನ ಕುರಿತು ‘ಧ್ಯಾನಿಸುವ’ ಮೂಲಕ ಗಣ್ಯತೆ ತೋರಿಸುವಲ್ಲಿ ನಾವು ಸಹ ‘ಯೆಹೋವನ ಪ್ರಸನ್ನತೆಯನ್ನು ನೋಡುವುದಕ್ಕಾಗುವುದು.’

ಯಜ್ಞಗಳನ್ನು ಅರ್ಪಿಸಲಿಕ್ಕಾಗಿ ಗುಡಾರದ ಪ್ರವೇಶದ ಮುಂಭಾಗದಲ್ಲಿದ್ದ ತಾಮ್ರದ ಯಜ್ಞವೇದಿಯನ್ನು ಪರಿಗಣಿಸಿ. (ವಿಮೋ. 38:1, 2; 40:6) ಆ ಯಜ್ಞವೇದಿಯು ಯೇಸುವಿನ ಮಾನವ ಜೀವವನ್ನು ಯಜ್ಞವಾಗಿ ಸ್ವೀಕರಿಸಲು ಯೆಹೋವನಿಗಿದ್ದ ಸಿದ್ಧಮನಸ್ಸನ್ನು ಪ್ರತಿನಿಧಿಸಿತು. (ಇಬ್ರಿ. 10:5-10) ಯೆಹೋವನ ಈ ಏರ್ಪಾಡು ನಮಗೆ ಹೇಗೆ ಪ್ರಯೋಜನ ತರುತ್ತದೆ? ಅಪೊಸ್ತಲ ಪೌಲನು ಅದನ್ನು ತಿಳಿಸುತ್ತಾನೆ: ‘ನಾವು ವೈರಿಗಳಾಗಿದ್ದಾಗಲೇ ದೇವರ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನ ಸಂಬಂಧಕ್ಕೆ ಬಂದೆವು.’ (ರೋಮ. 5:10) ಹೌದು, ಯೇಸುವಿನ ಸುರಿಸಲ್ಪಟ್ಟ ರಕ್ತದಲ್ಲಿ ನಾವು ನಂಬಿಕೆಯಿಟ್ಟರೆ ದೇವರ ಸ್ನೇಹಿತರಾಗಿ ಆತನ ಅನುಗ್ರಹ ಹಾಗೂ ಭರವಸೆಗೆ ಪಾತ್ರರಾಗುವೆವು. ಆಗ ನಾವು ಆತನೊಂದಿಗೆ ‘ಆಪ್ತ ಮಿತ್ರತ್ವವನ್ನು’ ಅನುಭವಿಸುವೆವು.—ಕೀರ್ತ. 25:14.

ನಮ್ಮ ‘ಪಾಪಗಳು ಅಳಿಸಿಬಿಡಲ್ಪಡುವುದರಿಂದ’ ‘ಯೆಹೋವನ ಸಮ್ಮುಖದಿಂದ ಚೈತನ್ಯದಾಯಕ ಸಮಯಗಳನ್ನು’ ಅನುಭವಿಸುತ್ತೇವೆ. (ಅ. ಕಾ. 3:19) ಇದನ್ನು ಒಂದು ಉದಾಹರಣೆಯಿಂದ ಅರ್ಥಮಾಡಿಕೊಳ್ಳಬಹುದು. ಮರಣದಂಡನೆ ಪಡೆಯಲಿರುವ ಒಬ್ಬ ಕೈದಿಯು ತಾನು ಹಿಂದೆ ಮಾಡಿದ ಕೆಟ್ಟ ಕೃತ್ಯಗಳಿಗಾಗಿ ಮನನೊಂದು ವಿಷಾದಿಸುತ್ತಾ ತನ್ನ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ. ಇದನ್ನು ನೋಡಿ ದಯಾಭರಿತ ನ್ಯಾಯಾಧೀಶನೊಬ್ಬನು ಅವನ ಅಪರಾಧಗಳ ದಾಖಲೆಯನ್ನೇ ಅಳಿಸಿಹಾಕಿ ಮರಣದಂಡನೆಯನ್ನು ರದ್ದುಗೊಳಿಸುತ್ತಾನೆ. ಆಗ ಆ ಕೈದಿಗಾಗುವ ನೆಮ್ಮದಿ, ಆನಂದವನ್ನು ಊಹಿಸಿಕೊಳ್ಳಿ! ನಾವು ಕೂಡ ಈ ಕೈದಿಯಂತೆ ಮರಣದಂಡನೆಗೆ ಅರ್ಹರಾಗಿದ್ದೇವೆ. ಆದರೆ ಆ ದಯಾಭರಿತ ನ್ಯಾಯಾಧೀಶನಂತೆ ಯೆಹೋವನು ಪಶ್ಚಾತ್ತಾಪಪಟ್ಟ ಮಾನವರಿಗೆ ಅನುಗ್ರಹ ತೋರಿಸಿ ಮರಣದಂಡನೆಯಿಂದ ಮುಕ್ತಗೊಳಿಸುತ್ತಾನೆ.

ಸತ್ಯಾರಾಧನೆಯಲ್ಲಿ ಆನಂದಿಸಿ

ಯೆಹೋವನ ಮನೆಯಲ್ಲಿ ದಾವೀದನು ಗಮನಿಸಸಾಧ್ಯವಿದ್ದ ಸತ್ಯಾರಾಧನೆಯ  ಕೆಲವು ಅಂಶಗಳು ಯಾವುವೆಂದರೆ ಜೊತೆ ಇಸ್ರಾಯೇಲ್ಯರು ಸಮೂಹವಾಗಿ ಕೂಡಿಬಂದಿರುವುದು, ಜನಸಮೂಹದ ಮುಂದೆ ಧರ್ಮಶಾಸ್ತ್ರವನ್ನು ಓದಿ ಅರ್ಥವಿವರಿಸುವುದು, ಧೂಪ ಸುಡುವುದು, ಯಾಜಕರೂ ಲೇವಿಯರೂ ಪವಿತ್ರ ಸೇವೆಯನ್ನು ಸಲ್ಲಿಸುವುದು. (ವಿಮೋ. 30:34-38; ಅರ. 3:5-8; ಧರ್ಮೋ. 31:9-12) ಸತ್ಯಾರಾಧನೆಯ ಅಂದಿನ ಈ ವೈಶಿಷ್ಟ್ಯಗಳಿಗೆ ಆಧುನಿಕ ದಿನದಲ್ಲಿ ಹೋಲಿಕೆಯಿದೆ.

ಹಿಂದಿನ ಸಮಯದಂತೆ ಈಗಲೂ “ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು” ಆಗಿದೆ! (ಕೀರ್ತ. 133:1) ನಮ್ಮ ಲೋಕವ್ಯಾಪಕ ‘ಸಹೋದರರ ಬಳಗದಲ್ಲಿ’ ಈಗ ಭಾರಿ ಬೆಳವಣಿಗೆಯಾಗಿದೆ. (1 ಪೇತ್ರ 2:17) ಕೂಟಗಳಲ್ಲಿ ದೇವರ ವಾಕ್ಯವನ್ನು ಓದಿ ವಿವರಿಸಲಾಗುತ್ತದೆ. ಯೆಹೋವನು ನಮಗೆ ಬೋಧಿಸಲಿಕ್ಕಾಗಿ ತನ್ನ ಸಂಘಟನೆಯ ಮೂಲಕ ಹೇರಳ ಏರ್ಪಾಡುಗಳನ್ನು ಮಾಡಿದ್ದಾನೆ. ಮಾತ್ರವಲ್ಲ ನಮ್ಮ ವೈಯಕ್ತಿಕ ಹಾಗೂ ಕುಟುಂಬ ಅಧ್ಯಯನಕ್ಕಾಗಿ ಆಧ್ಯಾತ್ಮಿಕ ಆಹಾರವನ್ನು ಮುದ್ರಿತ ಪುಟಗಳಲ್ಲೂ ಸಮೃದ್ಧವಾಗಿ ಒದಗಿಸಿದ್ದಾನೆ. ಆಡಳಿತ ಮಂಡಲಿಯ ಒಬ್ಬ ಸದಸ್ಯರು ಹೀಗಂದರು: “ಯೆಹೋವನ ವಾಕ್ಯದಲ್ಲಿರುವ ವಿಷಯಗಳ ಕುರಿತು ಧ್ಯಾನಿಸುವುದರಿಂದ, ಅದರ ಅರ್ಥದ ಕುರಿತು ಪರ್ಯಾಲೋಚಿಸುವುದರಿಂದ, ಒಳನೋಟ ಹಾಗೂ ತಿಳಿವಳಿಕೆಗಾಗಿ ಹುಡುಕುವುದರಿಂದ ನನ್ನ ಇಡೀ ದಿನವು ಆಧ್ಯಾತ್ಮಿಕವಾಗಿ ಸಮೃದ್ಧವಾಗಿರುತ್ತದೆ ಹಾಗೂ ಸಂತೃಪ್ತಿ ನನ್ನದಾಗುತ್ತದೆ.” ಹೌದು, ‘ಜ್ಞಾನವು ನಮ್ಮ ಆತ್ಮಕ್ಕೆ ಅಂದವಾಗಿರುವದು.’—ಜ್ಞಾನೋ. 2:10.

ಇಂದು ದೇವಸೇವಕರ ಸ್ವೀಕಾರಾರ್ಹ ಪ್ರಾರ್ಥನೆಗಳು ಪ್ರತಿದಿನವೂ ಯೆಹೋವನಿಗೆ ಸಲ್ಲುತ್ತಿವೆ. ಅಂಥ ಪ್ರಾರ್ಥನೆಗಳು ಯೆಹೋವನಿಗೆ ಪರಿಮಳಭರಿತ ಧೂಪದ ಸುಗಂಧದಂತಿವೆ. (ಕೀರ್ತ. 141:2) ನಾವು ದೀನತೆಯಿಂದ ಮಾಡುವ ಪ್ರಾರ್ಥನೆಗಳು ಆತನ ಹೃದಯಕ್ಕೆ ಹರ್ಷವನ್ನು ತರುತ್ತವೆಂದು ತಿಳಿಯುವಾಗ ನಮ್ಮ ಮನಸ್ಸು ಉಲ್ಲಾಸದಿಂದ ತುಂಬುತ್ತದೆ!

“ಯೆಹೋವದೇವರ ಪ್ರಸನ್ನತೆಯು [ಅನುಗ್ರಹವು, NW] ನಮ್ಮ ಮೇಲೆ ಇರಲಿ. ನಾವು ಕೈಹಾಕಿದ ಕೆಲಸವನ್ನು ನಮಗೆ ಸಫಲಪಡಿಸು” ಎಂದು ಮೋಶೆ ಪ್ರಾರ್ಥಿಸಿದನು. (ಕೀರ್ತ. 90:17) ಹೌದು, ನಾವು ಹುರುಪಿನಿಂದ ಸೇವೆ ಮಾಡುವಾಗ ಯೆಹೋವನು ಅದನ್ನು ಆಶೀರ್ವದಿಸುತ್ತಾನೆ. (ಜ್ಞಾನೋ. 10:22) ನಾವು ಸತ್ಯವನ್ನು ಕಲಿಯುವಂತೆ ಕೆಲವರಿಗೆ ಸಹಾಯ ಮಾಡಿರಬಹುದು ಅಥವಾ ಕ್ಷೇತ್ರದಲ್ಲಿ ಜನರ ನಿರಾಸಕ್ತಿಯನ್ನು ತಾಳಿಕೊಂಡಿರಬಹುದು. ಅನಾರೋಗ್ಯ, ಭಾವನಾತ್ಮಕ ನೋವು ಇಲ್ಲವೆ ಹಿಂಸೆಯ ಮಧ್ಯೆಯೂ ಅನೇಕ ವರ್ಷಗಳಿಂದ ಸೇವೆಯನ್ನು ಮುಂದುವರಿಸಿರಬಹುದು. (1 ಥೆಸ. 2:2) ಇಂಥ ಪರಿಸ್ಥಿತಿಗಳಲ್ಲೂ ನಾವು ‘ಯೆಹೋವನ ಪ್ರಸನ್ನತೆಯನ್ನು ನೋಡಿದ್ದೇವೆ’ ಮತ್ತು ನಮ್ಮ ಪ್ರಯತ್ನಗಳನ್ನು ಯೆಹೋವನು ತುಂಬ ಮೆಚ್ಚುತ್ತಾನೆ ಎಂದು ನಮಗೆ ತಿಳಿದಿದೆ.

“ನನ್ನ ಪಾಲೂ ಪಾನವೂ ಯೆಹೋವನೇ; ನೀನೇ ನನ್ನ ಸ್ವಾಸ್ತ್ಯವನ್ನು ಭದ್ರಗೊಳಿಸುತ್ತೀ. ನನಗೆ ಪ್ರಾಪ್ತವಾಗಿರುವ ಸ್ವಾಸ್ತ್ಯವು ರಮಣೀಯವಾದದ್ದು” ಎಂದು ದಾವೀದ ಹಾಡಿದನು. (ಕೀರ್ತ. 16:5, 6) ದಾವೀದನು ತನಗೆ ದೊರಕಿದ ‘ಸ್ವಾಸ್ತ್ಯಕ್ಕಾಗಿ’ ಅಂದರೆ ಯೆಹೋವನೊಂದಿಗೆ ತನಗಿರುವ ಸುಸಂಬಂಧ ಹಾಗೂ ಆತನ ಸೇವೆಮಾಡುವ ಸದವಕಾಶಕ್ಕಾಗಿ ಕೃತಜ್ಞನಾಗಿದ್ದನು. ದಾವೀದನಂತೆಯೇ, ನಾವು ಕಷ್ಟಗಳನ್ನು ಸಹಿಸಿಕೊಳ್ಳುತ್ತಿರುವ ಸಮಯದಲ್ಲೂ ಅನೇಕ ಆಧ್ಯಾತ್ಮಿಕ ಆಶೀರ್ವಾದಗಳನ್ನು ಅನುಭವಿಸುತ್ತಿರುತ್ತೇವೆ! ಆದ್ದರಿಂದ ಸತ್ಯಾರಾಧನೆಯಲ್ಲಿ ಆನಂದಿಸುತ್ತಿರೋಣ ಹಾಗೂ ಯೆಹೋವನ ಆಧ್ಯಾತ್ಮಿಕ ಆಲಯದ ಕುರಿತು ಯಾವಾಗಲೂ ಗಣ್ಯತೆಯಿಂದ ‘ಧ್ಯಾನಿಸುತ್ತಿರೋಣ.’

^ ಪ್ಯಾರ. 6 1996, ಜುಲೈ 1ರ ಕಾವಲಿನಬುರುಜು, ಪುಟ 14-24 ನೋಡಿ.