ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುರಿಮರಿಯ ವಿವಾಹ—ಹರ್ಷಿಸಿರಿ!

ಕುರಿಮರಿಯ ವಿವಾಹ—ಹರ್ಷಿಸಿರಿ!

“ಹರ್ಷಿಸೋಣ, ಆನಂದಿಸೋಣ . . . ಏಕೆಂದರೆ ಕುರಿಮರಿಯ ವಿವಾಹವು ಸಮೀಪಿಸಿದೆ.”—ಪ್ರಕ. 19:7.

1, 2. (ಎ) ಯಾರ ಮದುವೆಯು ಸ್ವರ್ಗದಲ್ಲಿ ಮಹಾ ಹರ್ಷಕ್ಕೆ ಕಾರಣವಾಗುವುದು? (ಬಿ) ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

ಮದುವೆ ಅಂದಮೇಲೆ ಎಷ್ಟೋ ತಿಂಗಳುಗಳಿಂದ ತಯಾರಿ ಶುರುವಾಗುತ್ತದೆ. ಆದರೆ ನಾವೀಗ ಗಮನಿಸುವುದು ಬಹು ವಿಶೇಷವಾದ ಒಂದು ಮದುವೆಯ ಕುರಿತು. ಅದೂ ರಾಜಮನೆತನದ ವಿವಾಹ ಸಂಭ್ರಮೋತ್ಸವ! ಅದಕ್ಕಾಗಿ ತಯಾರಿ ಶುರುವಾಗಿರುವುದು ಕೆಲವು ತಿಂಗಳುಗಳಿಂದಲ್ಲ ಸುಮಾರು ಎರಡು ಸಾವಿರ ವರ್ಷಗಳಿಂದ! ವರನು ವಧುವಿನ ಕೈಹಿಡಿಯಲಿರುವ ಸಮಯ ಈಗ ತುಂಬ ಹತ್ತಿರವಿದೆ. ಬೇಗನೆ ಅರಸನ ಅರಮನೆಯಲ್ಲಿ ಎಲ್ಲೆಲ್ಲೂ ಹರುಷದ ಸಂಗೀತ ಕೇಳಿಬರುವುದು. ಆಗ ಸ್ವರ್ಗೀಯ ಸಮೂಹವು ಹೀಗೆ ಹಾಡುವುದು: “ಯಾಹುವನ್ನು ಸ್ತುತಿಸಿರಿ, ಏಕೆಂದರೆ ಸರ್ವಶಕ್ತನಾದ ನಮ್ಮ ದೇವರಾದ ಯೆಹೋವನು ರಾಜನಾಗಿ ಆಳಲು ಆರಂಭಿಸಿದ್ದಾನೆ. ಹರ್ಷಿಸೋಣ, ಆನಂದಿಸೋಣ ಮತ್ತು ಆತನಿಗೆ ಮಹಿಮೆಯನ್ನು ಸಲ್ಲಿಸೋಣ, ಏಕೆಂದರೆ ಕುರಿಮರಿಯ ವಿವಾಹವು ಸಮೀಪಿಸಿದೆ ಹಾಗೂ ಅವನ ಪತ್ನಿಯು ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.”—ಪ್ರಕ. 19:6, 7.

2 ವರ ಯಾರು? ಅವನು ಬೇರೆ ಯಾರೂ ಅಲ್ಲ ಯೇಸು ಕ್ರಿಸ್ತನೇ. ಅವನನ್ನು “ಕುರಿಮರಿ” ಎಂದು ಸೂಚಿಸಲಾಗಿದೆ. (ಯೋಹಾ. 1:29) ಅವನ ವಿವಾಹದಿಂದ ಸ್ವರ್ಗದಲ್ಲಿ ಮಹಾ ಹರುಷದ ಹೊನಲು ಹರಿಯುವುದು. ಅವನ ಮದುವೆ ಉಡುಪು ಹೇಗಿರುತ್ತದೆ? ವಧು ಯಾರು? ಅವಳು ವಿವಾಹಕ್ಕಾಗಿ ಹೇಗೆ ಸಿದ್ಧಮಾಡಿಕೊಂಡಿರುತ್ತಾಳೆ? ಮದುವೆ ಯಾವಾಗ? ಆ ವಿವಾಹದಿಂದ ಸ್ವರ್ಗದಲ್ಲಿ ಹರ್ಷ ಉಂಟಾಗುತ್ತದೆ ನಿಜ, ಆದರೆ ಭೂಮಿಯ ಮೇಲೆ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯಿರುವವರು ಕೂಡ ಆ ಸಂತೋಷದಲ್ಲಿ  ಭಾಗಿಗಳಾಗುವರೊ? ಉತ್ತರ ತಿಳಿಯುವ ಕಾತರವನ್ನು ತಣಿಸಲು ನಾವು 45ನೇ ಕೀರ್ತನೆಯ ಅಧ್ಯಯನವನ್ನು ಮುಂದುವರಿಸೋಣ.

ರಾಜನ ವಸ್ತ್ರಗಳು ಎಷ್ಟೋ ಸುವಾಸನೆಭರಿತ

3, 4. (ಎ) ಮದುಮಗನ ಮದುವೆ ಉಡುಪಿನ ಬಗ್ಗೆ ಕೀರ್ತನೆಗಾರ ಏನು ಹೇಳಿದ್ದಾನೆ? (ಬಿ) ಯಾವುದು ರಾಜನ ಆನಂದವನ್ನು ಇನ್ನೂ ಹೆಚ್ಚಿಸುತ್ತದೆ? (ಸಿ) ಮದುಮಗನ ಆನಂದದಲ್ಲಿ ಭಾಗಿಗಳಾಗುವ ‘ರಾಜಕುಮಾರಿಯರು’ ಮತ್ತು ‘ಪಟ್ಟದ ರಾಣಿ’ ಯಾರು?

3 ಕೀರ್ತನೆ 45:8, 9 ಓದಿ. ಮದುಮಗನಾದ ಯೇಸು ಕ್ರಿಸ್ತನು ತನ್ನ ರಾಜಮನೆತನದ ವಿವಾಹಕ್ಕಾಗಿ ‘ದಿವ್ಯಾ೦ಬರಗಳನ್ನು’ ಅಂದರೆ ವೈಭವದ ಶ್ರೇಷ್ಠ ಉಡುಪನ್ನು ಧರಿಸುತ್ತಾನೆ. ಅವನ ಆ ದಿರಿಸು ರಕ್ತಬೋಳ, ದಾಲ್ಚಿನ್ನಿ ಇತ್ಯಾದಿ ‘ಸುಗಂಧದ್ರವ್ಯಗಳಿಗೆ’ ಇರುವಂಥ ಆಹ್ಲಾದಕರ ಕಂಪನ್ನು ಸೂಸುತ್ತದೆ. ಇಸ್ರಾಯೇಲಿನಲ್ಲಿ ಪವಿತ್ರ ಅಭಿಷೇಕತೈಲದ ತಯಾರಿಯಲ್ಲಿ ಆ ಸಾಮಾಗ್ರಿಗಳನ್ನು ಬಳಸಲಾಗುತ್ತಿತ್ತು.—ವಿಮೋ. 30:23-25.

4 ಮದುವೆ ದಿನ ಹತ್ತಿರವಾಗುತ್ತಿದ್ದಂತೆ ಅರಮನೆಯಲ್ಲಿ ಕೇಳಿಬರುತ್ತಿರುವ ಆ ಸುಮಧುರ ಸಂಗೀತವು ವರನ ಸಂತೋಷವನ್ನು ಇನ್ನೂ ಹೆಚ್ಚಿಸುತ್ತದೆ. ಅವನಂತೆ “ಪಟ್ಟದ ರಾಣಿ” ಕೂಡ ಹರ್ಷಿಸುತ್ತಾಳೆ. ಈಕೆ ಯಾರು? ದೇವರ ಸಂಘಟನೆಯ ಸ್ವರ್ಗೀಯ ಭಾಗ. ಇದರಲ್ಲಿ “ರಾಜಕುಮಾರಿಯರೂ” ಅಂದರೆ ಪವಿತ್ರ ದೇವದೂತರೂ ಇದ್ದಾರೆ. “ಹರ್ಷಿಸೋಣ, ಆನಂದಿಸೋಣ . . . ಏಕೆಂದರೆ ಕುರಿಮರಿಯ ವಿವಾಹವು ಸಮೀಪಿಸಿದೆ” ಎಂಬ ಘೋಷಣೆ ಸ್ವರ್ಗದಲ್ಲಿ ಕೇಳಿಬಂದಾಗ ಮದುಮಗನಿಗೆ ರೋಮಾಂಚನವಾಗುತ್ತದೆ.

ಮದುಮಗಳು ಮದುವೆಗೆ ಸಿದ್ಧಪಡಿಸಿಕೊಂಡಿದ್ದಾಳೆ

5. “ಕುರಿಮರಿಯ ಪತ್ನಿ” ಯಾರು?

5 ಕೀರ್ತನೆ 45:10, 11 ಓದಿ. ವರನು ಯಾರೆಂದು ನಮಗೀಗ ಗೊತ್ತಾಯಿತು. ಹಾಗಾದರೆ ಅವನು ವರಿಸಲಿರುವ ವಧು ಯಾರು? ಆಕೆ 1,44,000 ಅಭಿಷಿಕ್ತ ಕ್ರೈಸ್ತರ ಇಡೀ ಗುಂಪನ್ನು ಸೂಚಿಸುತ್ತಾಳೆ. ಈ ಅಭಿಷಿಕ್ತ ಸಭೆಗೆ ಯೇಸು ಕ್ರಿಸ್ತನು ಶಿರಸ್ಸಾಗಿದ್ದಾನೆ. (ಎಫೆಸ 5:23, 24 ಓದಿ.) ಆ ಅಭಿಷಿಕ್ತರು ಮೆಸ್ಸೀಯ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಆಳ್ವಿಕೆ ನಡೆಸುವರು. (ಲೂಕ 12:32) ಮಾತ್ರವಲ್ಲ “ಕುರಿಮರಿಯು ಎಲ್ಲಿ ಹೋದರೂ ಇವರು ಅವನನ್ನು ಹಿಂಬಾಲಿಸುತ್ತಾ ಹೋಗುತ್ತಾರೆ.” (ಪ್ರಕ. 14:1-4) ಅವರು “ಕುರಿಮರಿಯ ಪತ್ನಿ” ಆಗುವರು ಮತ್ತು ಅವನ ಸ್ವರ್ಗೀಯ ವಾಸಸ್ಥಳದಲ್ಲಿ ಅವನೊಂದಿಗಿರುವರು.—ಪ್ರಕ. 21:9; ಯೋಹಾ. 14:2, 3.

6. (ಎ) ಅಭಿಷಿಕ್ತ ಕ್ರೈಸ್ತರನ್ನು ‘ರಾಜನ ಕುಮಾರಿ’ ಎಂದು ಏಕೆ ಕರೆಯಲಾಗಿದೆ? (ಬಿ) ‘ಸ್ವಜನರನ್ನು ಮರೆತುಬಿಡುವಂತೆ’ ಅವರಿಗೆ ಏಕೆ ಹೇಳಲಾಗಿದೆ?

6 ಈ ಮದುವಣಗಿತ್ತಿಯನ್ನು “ಎಲೌ ಕುಮಾರಿಯೇ” ಎಂದು ಮಾತ್ರವಲ್ಲ ‘ರಾಜನ ಕುಮಾರಿ’ ಎಂದು ಕೂಡ ಕರೆಯಲಾಗಿದೆ. (ಕೀರ್ತ. 45:13) ಈ “ರಾಜ” ಯಾರು? ಆತನು ಯೆಹೋವ ದೇವರೇ. ಏಕೆಂದರೆ ಆತನು ಅಭಿಷಿಕ್ತ ಕ್ರೈಸ್ತರನ್ನು ತನ್ನ “ಮಕ್ಕಳಾಗಿ” ದತ್ತು ತೆಗೆದುಕೊಂಡಿದ್ದಾನೆ. (ರೋಮ. 8:15-17) ಈ ಅಭಿಷಿಕ್ತ ಕ್ರೈಸ್ತರು ಸ್ವರ್ಗದಲ್ಲಿ ವಧುವಾಗಲಿರುವ ಕಾರಣ ಅವರಿಗೆ “ಸ್ವಜನರನ್ನೂ ತೌರಮನೆಯನ್ನೂ ಮರೆತುಬಿಡು” ಎಂದು ಹೇಳಲಾಗಿದೆ. ಆದ್ದರಿಂದ ಅವರು “ಭೂಸಂಬಂಧವಾದವುಗಳ ಮೇಲೆ ಅಲ್ಲ, ಮೇಲಿನವುಗಳ ಮೇಲೆ” ತಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕಾಗಿದೆ.—ಕೊಲೊ. 3:1-4.

7. (ಎ) ಕ್ರಿಸ್ತನು ತನ್ನ ಭಾವೀ ವಧುವನ್ನು ಹೇಗೆ ಸಿದ್ಧಪಡಿಸುತ್ತಾ ಬಂದಿದ್ದಾನೆ? (ಬಿ) ವಧು ತನ್ನ ಭಾವೀ ಪತಿಯನ್ನು ಹೇಗೆ ವೀಕ್ಷಿಸುತ್ತಾಳೆ?

7 ಕ್ರಿಸ್ತನು ತಾನು ಕೈಹಿಡಿಯಲಿರುವ ವಧುವನ್ನು ಸ್ವರ್ಗೀಯ ವಿವಾಹಕ್ಕಾಗಿ ಅನೇಕ ಶತಮಾನಗಳಿಂದ ಸಿದ್ಧಮಾಡುತ್ತಿದ್ದಾನೆ. ಇದನ್ನು ಅಪೊಸ್ತಲ ಪೌಲ ಹೀಗೆ ವಿವರಿಸಿದನು: ‘ಕ್ರಿಸ್ತನು ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು. ಅವನು ಸಭೆಯನ್ನು ವಾಕ್ಯದ ಮೂಲಕ ಜಲಸ್ನಾನದಿಂದ ಶುದ್ಧೀಕರಿಸುವ ಮುಖಾಂತರ ಅದನ್ನು ಪವಿತ್ರೀಕರಿಸಿ ಕಳಂಕ, ಸುಕ್ಕು ಅಥವಾ ಇಂಥದ್ದು ಯಾವುದೂ ಇಲ್ಲದೆ ಪವಿತ್ರವೂ ದೋಷವಿಲ್ಲದ್ದೂ ಆಗಿರುವ ಸಭೆಯಾಗಿ ಅದರ ವೈಭವದಲ್ಲಿ ತನಗೇ ಅರ್ಪಿಸಿಕೊಳ್ಳುವಂತೆ ಹೀಗೆ ಮಾಡಿದನು.’ (ಎಫೆ. 5:25-27) ಪ್ರಾಚೀನ ಕೊರಿಂಥದಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೆ ಪೌಲನು ಹೀಗಂದನು: “ದೇವರು ನಿಮ್ಮ ವಿಷಯದಲ್ಲಿ ತೀವ್ರಾಸಕ್ತಿಯುಳ್ಳವನಾಗಿರುವಂತೆಯೇ ನಾನೂ ತೀವ್ರಾಸಕ್ತಿಯುಳ್ಳವನಾಗಿದ್ದೇನೆ, ಏಕೆಂದರೆ ನಾನು ಖುದ್ದಾಗಿ ನಿಮ್ಮನ್ನು ಒಬ್ಬ ಗಂಡನಿಗೆ, ಕ್ರಿಸ್ತನಿಗೆ ಶುದ್ಧ ಕನ್ಯೆಯನ್ನಾಗಿ ಒಪ್ಪಿಸಿಕೊಡಲು ವಿವಾಹ ವಾಗ್ದಾನ ಮಾಡಿದೆನು.” (2 ಕೊರಿಂ. 11:2) ಈ ಭಾವೀ ವಧುವಿನ ಆರಾಧನೆ ಶುದ್ಧವೂ ದೇವರಿಗೆ ಸ್ವೀಕರಣೀಯವೂ ಆಗಿರುವುದೇ ಆಕೆಯ “ಲಾವಣ್ಯ”ವಾಗಿದೆ. ಇದನ್ನು ಮದುಮಗನಾದ ಅರಸ ಯೇಸು ಕ್ರಿಸ್ತನು ತುಂಬ ಮೆಚ್ಚುತ್ತಾನೆ. ವಧು ಕೂಡ ತನ್ನ ಭಾವೀ ಪತಿಯಾದ ಅವನನ್ನು ‘ಒಡೆಯನೆಂದು’ ಅಂಗೀಕರಿಸುತ್ತಾಳೆ ಮತ್ತು ಅವನಿಗೆ ‘ನಮಸ್ಕರಿಸುತ್ತಾಳೆ.’

ವಧುವನ್ನು “ಅರಸನ ಬಳಿಗೆ” ಕರೆತರಲಾಗುತ್ತದೆ

8. ವಧು “ವೈಭವದಿಂದಿದ್ದಾಳೆ” ಎಂದು ವರ್ಣಿಸಿರುವುದು ಸೂಕ್ತವೇಕೆ?

8 ಕೀರ್ತನೆ 45:13, 14 ಓದಿ. ಮದುವೆಗಾಗಿ  ಚೆನ್ನಾಗಿ ಸಿಂಗರಿಸಿಕೊಂಡಿರುವ ಮದುಮಗಳು “ವೈಭವದಿಂದಿದ್ದಾಳೆ.” ಪ್ರಕಟನೆ 21:2ರಲ್ಲಿ ಆಕೆಯನ್ನು ಒಂದು ನಗರಕ್ಕೆ ‘ಅಂದರೆ ಹೊಸ ಯೆರೂಸಲೇಮ್‌ಗೆ’ ಹೋಲಿಸಲಾಗಿದೆ. ಆಕೆ ‘ತನ್ನ ಗಂಡನಿಗಾಗಿ ಅಲಂಕರಿಸಿಕೊಂಡಿದ್ದಾಳೆ’ ಎಂದು ಹೇಳಲಾಗಿದೆ. ಈ ಸ್ವರ್ಗೀಯ ನಗರ “ದೇವರ ಮಹಿಮೆಯನ್ನು” ಹೊಂದಿದೆ. ಮಾತ್ರವಲ್ಲ ನಗರದ ತೇಜಸ್ಸು ‘ಅತ್ಯಮೂಲ್ಯ ರತ್ನದ ಹೊಳಪಿನಂತೆ, ಸ್ಫಟಿಕದಂತೆ ಸ್ವಚ್ಛವಾಗಿ ಥಳಥಳಿಸುವ ಸೂರ್ಯಕಾಂತ ಮಣಿಯಂತೆ’ ಇದೆ. (ಪ್ರಕ. 21:10, 11) ಹೊಸ ಯೆರೂಸಲೇಮಿನ ಸೌಂದರ್ಯದ ಉಜ್ವಲತೆಯನ್ನು ಪ್ರಕಟನೆ ಪುಸ್ತಕದಲ್ಲಿ ಸೊಗಸಾಗಿ ವರ್ಣಿಸಲಾಗಿದೆ. (ಪ್ರಕ. 21:18-21) ವಧು “ವೈಭವದಿಂದಿದ್ದಾಳೆ” ಎಂದು ಕೀರ್ತನೆಗಾರನು ವರ್ಣಿಸಿರುವುದು ನಿಜಕ್ಕೂ ತಕ್ಕದ್ದಾಗಿದೆ. ಎಷ್ಟೆಂದರೂ ಇದು ಸ್ವರ್ಗದಲ್ಲಿ ನಡೆಯುವ ರಾಜಮನೆತನದ ವಿವಾಹ ಅಲ್ಲವೇ?

9. (ಎ) ಮದುಮಗಳನ್ನು ಯಾರ ಬಳಿಗೆ ಕರೆತರಲಾಗುತ್ತದೆ? (ಬಿ) ಆಕೆ ಯಾವ ರೀತಿಯ ಉಡುಪು ಧರಿಸಿದ್ದಾಳೆ?

9 ಮದುಮಗಳನ್ನು ಮದುಮಗನ ಬಳಿ ಅಂದರೆ ಮೆಸ್ಸೀಯ ರಾಜನ ಬಳಿ ಕರೆತರಲಾಗುತ್ತದೆ. ಅವನು ತನ್ನ ವಧುವನ್ನು ‘ವಾಕ್ಯದ ಮೂಲಕ ಜಲಸ್ನಾನದಿಂದ ಶುದ್ಧೀಕರಿಸುತ್ತಾ’ ಸಿದ್ಧಗೊಳಿಸಿದ್ದಾನೆ. ಆಕೆ ‘ಪವಿತ್ರಳೂ ದೋಷವಿಲ್ಲದವಳೂ’ ಆಗಿದ್ದಾಳೆ. (ಎಫೆ. 5:26, 27) ಮದುಮಗಳು ವಿವಾಹಕ್ಕಾಗಿ ಯೋಗ್ಯ ಉಡುಪನ್ನು ಕೂಡ ಧರಿಸಿರಬೇಕಲ್ಲವೇ? ಹೌದು, ಅಂಥ ಉಡುಪನ್ನೇ ಆಕೆ ಧರಿಸಿದ್ದಾಳೆ. ‘ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ ಮತ್ತು ಬೂಟೇದಾರೀ ಕಸೂತಿಕೆಲಸದ ವಸ್ತ್ರಗಳನ್ನು ಧರಿಸಿಕೊಂಡ ಆಕೆಯನ್ನು ಅರಸನ ಬಳಿಗೆ’ ಕರೆತರಲಾಗುತ್ತದೆ. ಕುರಿಮರಿಯ ವಿವಾಹಕ್ಕಾಗಿ “ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳಲು ಅವಳಿಗೆ ಅನುಗ್ರಹಿಸಲ್ಪಟ್ಟಿದೆ, ಏಕೆಂದರೆ ಆ ನಯವಾದ ನಾರುಮಡಿಯು ಪವಿತ್ರ ಜನರ ನೀತಿಯ ಕಾರ್ಯಗಳನ್ನು ಸೂಚಿಸುತ್ತದೆ.”—ಪ್ರಕ. 19:8.

“ವಿವಾಹವು ಸಮೀಪಿಸಿದೆ”

10. ಕುರಿಮರಿಯ ವಿವಾಹ ಯಾವಾಗ ನಡೆಯುತ್ತದೆ?

10 ಪ್ರಕಟನೆ 19:7 ಓದಿ. ಕುರಿಮರಿಯ ವಿವಾಹ ಯಾವಾಗ ನಡೆಯುತ್ತದೆ? ಅವನ “ಪತ್ನಿಯು ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ” ಎಂದು ಪ್ರಕಟನೆ 19:7ರಲ್ಲಿ ಹೇಳಿರುವುದಾದರೂ ನಂತರದ ವಚನಗಳು ಮದುವೆ ಬಗ್ಗೆ ಏನೂ ತಿಳಿಸುವುದಿಲ್ಲ. ಬದಲಿಗೆ ಮಹಾ ಸಂಕಟದ ಅಂತಿಮ ಘಟ್ಟವನ್ನು ವಿವರವಾಗಿ ವರ್ಣಿಸುತ್ತವೆ. (ಪ್ರಕ. 19:11-21) ಹಾಗಾದರೆ ಮದುಮಗನಾಗಿರುವ ಅರಸನ ವಿವಾಹವು ಅವನು ತನ್ನ ವಿಜಯವನ್ನು ಪೂರ್ಣಗೊಳಿಸುವುದಕ್ಕೆ ಮುಂಚೆಯೇ ನಡೆಯುವುದೆಂದು ಇದರ ಅರ್ಥವೊ? ಇಲ್ಲ. ಪ್ರಕಟನೆ ಪುಸ್ತಕದಲ್ಲಿ ದರ್ಶನಗಳನ್ನು ಕಾಲಾನುಕ್ರಮವಾಗಿ ಒಂದರ ನಂತರ ಒಂದರಂತೆ ಕೊಡಲಾಗಿಲ್ಲ. ಆದರೆ 45ನೇ ಕೀರ್ತನೆಯಲ್ಲಿ ಹೇಳಿರುವಂತೆ ಅರಸನಾದ ಯೇಸು ಕ್ರಿಸ್ತನು ತನ್ನ ಪಟ್ಟದ ಕತ್ತಿಯನ್ನು ಕಟ್ಟಿಕೊಂಡು ವಿರೋಧಿಗಳ ಮೇಲೆ ಮೊದಲು ಜಯ ಸಾಧಿಸುತ್ತಾನೆ, ಅನಂತರವೇ ಅವನ ವಿವಾಹ ಜರುಗುತ್ತದೆ.—ಕೀರ್ತ. 45:3, 4.

11. ಕ್ರಿಸ್ತನು ಯಾವ ಕ್ರಮದಲ್ಲಿ ತನ್ನ ವಿಜಯವನ್ನು ಪೂರ್ಣಗೊಳಿಸುವನು?

11 ಬೈಬಲಿನಲ್ಲಿ ಹೇಳಿರುವ ಪ್ರಕಾರ ಮುಂದೆ ಘಟನೆಗಳು ಈ ಅನುಕ್ರಮದಲ್ಲಿ ಸಂಭವಿಸಲಿವೆ: ಮೊದಲು ‘ಮಹಾ ವೇಶ್ಯೆಯಾಗಿರುವ’ ಮಹಾ ಬಾಬೆಲಿನ ಅಂದರೆ ಸುಳ್ಳು ಧರ್ಮ ಲೋಕ ಸಾಮ್ರಾಜ್ಯದ ನಾಶನ. (ಪ್ರಕ. 17:1, 5, 16, 17; 19:1, 2) ಅನಂತರ ಕ್ರಿಸ್ತನು ‘ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧದಲ್ಲಿ’ ಅಂದರೆ ಅರ್ಮಗೆದೋನ್‌ ಯುದ್ಧದಲ್ಲಿ ಸೈತಾನನ ದುಷ್ಟ ವ್ಯವಸ್ಥೆಯ ಇನ್ನುಳಿದ ಭಾಗದ ಮೇಲೆ ದೇವರ ನ್ಯಾಯತೀರ್ಪುಗಳನ್ನು ಜಾರಿಗೊಳಿಸುವನು ಅಂದರೆ ಅದನ್ನು ನಾಶಮಾಡುವನು. (ಪ್ರಕ. 16:14-16; 19:19-21) ಕೊನೆಯಲ್ಲಿ ರಣವೀರ ಅರಸನು ಸೈತಾನನನ್ನು ಮತ್ತು ಅವನ ದೆವ್ವಗಳನ್ನು ಅಗಾಧ ಸ್ಥಳಕ್ಕೆ ದೊಬ್ಬುವ ಮೂಲಕ ತನ್ನ ವಿಜಯವನ್ನು ಪೂರ್ಣಗೊಳಿಸುವನು. ಅವರು ಅಲ್ಲಿ ಮೃತಸ್ಥಿತಿಯಲ್ಲಿರುವಂತೆ ನಿಷ್ಕ್ರಿಯರಾಗಿರುವರು. —ಪ್ರಕ. 20:1-3.

12, 13. (ಎ) ಕುರಿಮರಿಯ ವಿವಾಹ ಯಾವಾಗ ನಡೆಯುವುದು? (ಬಿ) ಕುರಿಮರಿಯ ವಿವಾಹಕ್ಕಾಗಿ ಸ್ವರ್ಗದಲ್ಲಿ ಯಾರು ಹರ್ಷಿಸುವರು?

12 ಕ್ರಿಸ್ತನ ಸಾನಿಧ್ಯದ ಸಮಯದಾದ್ಯಂತ ಅಭಿಷಿಕ್ತ ಕ್ರೈಸ್ತರಲ್ಲಿ ಯಾರು ತಮ್ಮ ಭೂಜೀವಿತವನ್ನು ಮುಗಿಸುತ್ತಾರೊ ಅವರು ಸ್ವರ್ಗೀಯ ಜೀವನಕ್ಕಾಗಿ ಪುನರುತ್ಥಾನಗೊಳಿಸಲ್ಪಡುತ್ತಾರೆ. ಮಹಾ ಬಾಬೆಲಿನ ನಾಶನವಾಗಿ ಸ್ವಲ್ಪ ಸಮಯದ ನಂತರ ಯೇಸು ವಧುವರ್ಗದ ಉಳಿದಿರುವ ಸದಸ್ಯರನ್ನೆಲ್ಲ ತನ್ನೊಂದಿಗಿರಲಿಕ್ಕಾಗಿ ಒಟ್ಟುಗೂಡಿಸುವನು. (1 ಥೆಸ. 4:16, 17) ಹಾಗಾಗಿ ಅರ್ಮಗೆದೋನ್‌ ಯುದ್ಧ ಆರಂಭವಾಗುವುದಕ್ಕೆ ಮುಂಚೆ “ವಧು” ವರ್ಗದ ಎಲ್ಲ ಸದಸ್ಯರು ಸ್ವರ್ಗದಲ್ಲಿರುವರು. ಆ ಯುದ್ಧದ ಬಳಿಕವೇ ಕುರಿಮರಿಯ ವಿವಾಹವು ನಡೆಯಸಾಧ್ಯ. ಅದೆಷ್ಟು ಸಂತೋಷ ಸಂಭ್ರಮದ ಸಮಯವಾಗಿರುವುದು! “ಕುರಿಮರಿಯ ವಿವಾಹದ ಸಂಧ್ಯಾ ಭೋಜನಕ್ಕೆ ಆಮಂತ್ರಿಸಲ್ಪಟ್ಟವರು ಸಂತೋಷಿತರು” ಎನ್ನುತ್ತದೆ ಪ್ರಕಟನೆ 19:9. ವಧುವರ್ಗದ 1,44,000 ಮಂದಿ ನಿಜಕ್ಕೂ ಹರ್ಷೋಲ್ಲಾಸದಿಂದಿರುವರು. ಮದುಮಗನಾದ ಅರಸನು ಕೂಡ ತನ್ನ ಜೊತೆ ತನ್ನೆಲ್ಲಾ ಸಹರಾಜರು ‘ತನ್ನ ಮೇಜಿನ ಬಳಿಯಲ್ಲಿ ಕುಳಿತುಕೊಂಡು ಊಟಮಾಡುತ್ತಾ, ಕುಡಿಯುತ್ತಿರುವುದರಿಂದ’  ಬಹಳ ಸಂತೋಷಿಸುವನು. (ಲೂಕ 22:18, 28-30) ಹಾಗಿದ್ದರೂ ಈ ವಿವಾಹ ಮಹೋತ್ಸವದಲ್ಲಿ ಆನಂದಿಸುವವರು ಕೇವಲ ವಧು-ವರರಷ್ಟೇ ಅಲ್ಲ.

13 ನಾವು ಆರಂಭದಲ್ಲೇ ಗಮನಿಸಿರುವಂತೆ ಸ್ವರ್ಗೀಯ ಸಮೂಹವು ಜೊತೆಯಾಗಿ ಹೀಗೆ ಹಾಡುವುದು: “ಹರ್ಷಿಸೋಣ, ಆನಂದಿಸೋಣ ಮತ್ತು ಆತನಿಗೆ [ಯೆಹೋವನಿಗೆ] ಮಹಿಮೆಯನ್ನು ಸಲ್ಲಿಸೋಣ, ಏಕೆಂದರೆ ಕುರಿಮರಿಯ ವಿವಾಹವು ಸಮೀಪಿಸಿದೆ ಹಾಗೂ ಅವನ ಪತ್ನಿಯು ತನ್ನನ್ನು ಸಿದ್ಧಪಡಿಸಿಕೊಂಡಿದ್ದಾಳೆ.” (ಪ್ರಕ. 19:6, 7) ಯೆಹೋವನ ಭೂಸೇವಕರ ಕುರಿತೇನು? ಈ ವಿವಾಹ ಮಹೋತ್ಸವದ ಸಂತೋಷದಲ್ಲಿ ಅವರೂ ಭಾಗಿಗಳಾಗಿರುವರೊ?

‘ಅವರು ಸಂಭ್ರಮೋತ್ಸವದಿಂದ ಬರುವರು’

14. ಕೀರ್ತನೆ 45ರಲ್ಲಿ ತಿಳಿಸಲಾಗಿರುವ ವಧುವಿನ ‘ಸಖಿಯರಾದ ಕನ್ಯೆಯರು’ ಯಾರು?

14 ಕೀರ್ತನೆ 45:12, 14, 15 ಓದಿ. ಅಂತ್ಯಕಾಲದಲ್ಲಿ ಜನಾಂಗಗಳ ಜನರು ಆಧ್ಯಾತ್ಮಿಕ ಇಸ್ರಾಯೇಲಿನಲ್ಲಿ ಉಳಿದವರೊಂದಿಗೆ ಕೃತಜ್ಞತಾಭಾವದಿಂದ ಸಹವಾಸಿಸುವರೆಂದು ಪ್ರವಾದಿ ಜೆಕರ್ಯನು ಮುಂತಿಳಿಸಿದನು. ಅವನು ಬರೆದದ್ದು: “ಆ ಕಾಲದಲ್ಲಿ ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕ. 8:23) ಇಲ್ಲಿ ತಿಳಿಸಲಾಗಿರುವ ‘ಹತ್ತು ಜನರನ್ನು’ ಕೀರ್ತನೆ 45:12ರಲ್ಲಿ ಸಾಂಕೇತಿಕವಾಗಿ “ತೂರ್‌ ಸಂಸ್ಥಾನದವರು” ಮತ್ತು “ಸ್ಥಿತಿವಂತರು” ಎಂದು ಹೇಳಲಾಗಿದೆ. ಅವರು ಅಭಿಷಿಕ್ತರಲ್ಲಿ ಉಳಿದವರ ಬಳಿಗೆ ಬಂದು ಅವರಿಗೆ ಬೆಂಬಲವನ್ನು ಕೊಡುತ್ತಾರೆ ಮತ್ತು ಯೆಹೋವನ ಸೇವೆಮಾಡಲು ಅವರ ಸಹಾಯವನ್ನು ಕೋರುತ್ತಾರೆ. ಅಭಿಷಿಕ್ತರಲ್ಲಿ ಉಳಿದವರು 1935ರಿಂದ ಇಂಥ ಲಕ್ಷಾಂತರ ಜನರನ್ನು ‘ಸದ್ಧರ್ಮಿಗಳನ್ನಾಗಿ ಮಾಡಿದ್ದಾರೆ.’ (ದಾನಿ. 12:3) ಅಭಿಷಿಕ್ತ ಕ್ರೈಸ್ತರ ಈ ನಿಷ್ಠಾವಂತ ಸಂಗಡಿಗರು ತಮ್ಮ ಜೀವನವನ್ನು ಶುದ್ಧೀಕರಿಸಿಕೊಂಡು ಆಧ್ಯಾತ್ಮಿಕ ಕನ್ಯೆಯರಾಗಿದ್ದಾರೆ. ವಧುವಿನ ಈ ‘ಸಖಿಯರಾದ ಕನ್ಯೆಯರು’ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದಾರೆ ಮತ್ತು ಮದುಮಗನಾದ ಅರಸ ಕ್ರಿಸ್ತನಿಗೆ ನಂಬಿಗಸ್ತ ಪ್ರಜೆಗಳೆಂದು ತೋರಿಸಿಕೊಟ್ಟಿದ್ದಾರೆ.

15. ಇನ್ನೂ ಭೂಮಿಯ ಮೇಲಿರುವ ವಧುವರ್ಗದವರೊಂದಿಗೆ ‘ಸಖಿಯರಾದ ಕನ್ಯೆಯರು’ ಹೇಗೆ ಕೈಜೋಡಿಸಿದ್ದಾರೆ?

 15 ದೇವರ ‘ರಾಜ್ಯದ ಸುವಾರ್ತೆಯನ್ನು’ ಭೂಮಿಯೆಲ್ಲೆಡೆ ಸಾರುವುದರಲ್ಲಿ ‘ಸಖಿಯರಾದ ಕನ್ಯೆಯರು’ ಹುರುಪಿನಿಂದ ಸಹಾಯ ಮಾಡುತ್ತಿರುವುದಕ್ಕಾಗಿ ವಧುವರ್ಗದಲ್ಲಿ ಉಳಿದಿರುವವರು ತುಂಬ ಕೃತಜ್ಞರಾಗಿದ್ದಾರೆ. (ಮತ್ತಾ. 24:14) ಪ್ರಕಟನೆಯಲ್ಲಿ ತಿಳಿಸಲಾದಂತೆ, ಪವಿತ್ರಾತ್ಮ ಮತ್ತು ವಧು ಮಾತ್ರವೇ “ಬಾ!” ಎಂದು ಹೇಳುತ್ತಿಲ್ಲ ಅದನ್ನು ಕೇಳಿಸಿಕೊಳ್ಳುತ್ತಿರುವವರು ಕೂಡ “ಬಾ!” ಎಂದು ಹೇಳುತ್ತಿದ್ದಾರೆ. (ಪ್ರಕ. 22:17) ಅಭಿಷಿಕ್ತ ವಧುವರ್ಗದ ಸದಸ್ಯರು “ಬಾ!” ಎಂದು ಹೇಳುತ್ತಿರುವುದನ್ನು ‘ಬೇರೆ ಕುರಿಗಳು’ ಕೇಳಿಸಿಕೊಂಡಿದ್ದಾರೆ ಮತ್ತು ಲೋಕದ ಜನರಿಗೆಲ್ಲ “ಬಾ!” ಎಂದು ಹೇಳುವುದರಲ್ಲಿ ಅವರೂ ವಧುವಿನೊಂದಿಗೆ ಜೊತೆಗೂಡಿದ್ದಾರೆ.—ಯೋಹಾ. 10:16.

16. ಯೆಹೋವನು ಬೇರೆ ಕುರಿಗಳಿಗೆ ಯಾವ ಸದವಕಾಶವನ್ನು ಕೊಟ್ಟಿದ್ದಾನೆ?

16 ಅಭಿಷಿಕ್ತರಲ್ಲಿ ಉಳಿದವರು ತಮ್ಮ ಸಂಗಡಿಗರಾದ ಬೇರೆ ಕುರಿಗಳನ್ನು ತುಂಬ ಪ್ರೀತಿಸುತ್ತಾರೆ. ಮಾತ್ರವಲ್ಲ ವರನ ತಂದೆ ಯೆಹೋವನು ಕುರಿಮರಿಯ ವಿವಾಹದ ಸಂತೋಷದಲ್ಲಿ ಪಾಲಿಗರಾಗುವ ಭಾಗ್ಯವನ್ನು ಈ ಬೇರೆ ಕುರಿಗಳಿಗೆ ಕೊಟ್ಟಿರುವುದಕ್ಕಾಗಿಯೂ ಅವರು ಬಹಳ ಹರ್ಷಿಸುತ್ತಾರೆ. ‘ಸಖಿಯರಾದ ಈ ಕನ್ಯೆಯರು’ “ಸಂಭ್ರಮೋತ್ಸವದಿಂದ” ಬರುವರೆಂದು ಮುಂತಿಳಿಸಲಾಗಿತ್ತು. ಹೌದು, ಭೂಮಿಯ ಮೇಲೆ ಶಾಶ್ವತವಾಗಿ ಜೀವಿಸುವ ನಿರೀಕ್ಷೆಯಿರುವ ಬೇರೆ ಕುರಿಗಳು ಸ್ವರ್ಗದಲ್ಲಿ ಕುರಿಮರಿಯ ವಿವಾಹ ನಡೆಯುವಾಗ ಯೆಹೋವನ ವಿಶ್ವ ಕುಟುಂಬದೊಂದಿಗೆ ಕೂಡಿ ಹರ್ಷಿಸುವರು. ಸೂಕ್ತವಾಗಿಯೇ ಪ್ರಕಟನೆ ಪುಸ್ತಕದಲ್ಲಿ, ‘ಮಹಾ ಸಮೂಹದವರು ಸಿಂಹಾಸನದ ಮುಂದೆಯೂ ಕುರಿಮರಿಯ ಮುಂದೆಯೂ ನಿಂತಿದ್ದಾರೆ’ ಎಂದು ವರ್ಣಿಸಲಾಗಿದೆ. ಅವರು ಯೆಹೋವನ ಆಧ್ಯಾತ್ಮಿಕ ಆಲಯದ ಭೂಅಂಗಣದಲ್ಲಿ ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಾರೆ.—ಪ್ರಕ. 7:9, 15.

ಕುರಿಮರಿಯ ವಿವಾಹವಾಗುವಾಗ ವಧುವಿನ ‘ಸಖಿಯರಾದ ಕನ್ಯೆಯರು’ ಹರ್ಷಿಸುವರು (ಪ್ಯಾರ 16 ನೋಡಿ)

“ನಿನ್ನ ಪಿತೃಗಳ ಸ್ಥಳಗಳನ್ನು ನಿನ್ನ ಮಕ್ಕಳು ತೆಗೆದುಕೊಳ್ಳುವರು”

17, 18. (ಎ) ಕುರಿಮರಿಯ ವಿವಾಹ ಹೇಗೆ ಫಲಪ್ರದವಾಗುತ್ತದೆ? (ಬಿ) ಕ್ರಿಸ್ತನು ತನ್ನ ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಯಾರಿಗೆ ತಂದೆಯಾಗುವನು?

17 ಕೀರ್ತನೆ 45:16 ಓದಿ (ಪವಿತ್ರ ಗ್ರಂಥ ಭಾಷಾಂತರ). * ವಧುವಿನ ‘ಸಖಿಯರಾದ ಕನ್ಯೆಯರು’ ಸ್ವರ್ಗದಲ್ಲಿ ನಡೆಯುವ ವಿವಾಹ ಮಹೋತ್ಸವವು ಹೊಸಲೋಕದಲ್ಲಿ ತಮಗೆ ಪ್ರಯೋಜನ ತರುವುದನ್ನು ನೋಡುವಾಗ ಇನ್ನೂ ಹೆಚ್ಚು ಉಲ್ಲಾಸಪಡುವರು. ಮದುಮಗ ಅರಸನು ಭೂಮಿಯಲ್ಲಿ ಜೀವಿಸಿದ್ದ ತನ್ನ ‘ಮೂಲಪಿತೃಗಳನ್ನು’ ಪುನರುತ್ಥಾನಗೊಳಿಸುವನು. ಆ ಮೂಲಪಿತೃಗಳು ಆಗ ಅವನಿಗೆ ‘ಭೂಮಕ್ಕಳಾಗುವರು.’ (ಯೋಹಾ. 5:25-29; ಇಬ್ರಿ. 11:35) ಇವರಲ್ಲಿ ಕೆಲವರನ್ನು ಆತನು “ಭೂಮಿಯ ಮೇಲೆಲ್ಲಾ ಪ್ರಧಾನರಾಗಿ” ಅಥವಾ ಅಧಿಪತಿಗಳಾಗಿ ನೇಮಿಸುವನು. ಈಗಿರುವ ನಂಬಿಗಸ್ತ ಹಿರಿಯರಲ್ಲಿ ಕೆಲವರನ್ನು ಕೂಡ ಕ್ರಿಸ್ತನು ಹೊಸಲೋಕದಲ್ಲಿ ಮುಂದಾಳತ್ವ ವಹಿಸಲು ನೇಮಿಸುವನೆಂಬುದು ನಿಸ್ಸಂಶಯ.—ಯೆಶಾ. 32:1.

18 ಕ್ರಿಸ್ತನು ತನ್ನ ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಇತರರಿಗೂ ಒಬ್ಬ ತಂದೆಯಾಗುವನು. ವಾಸ್ತವದಲ್ಲಿ ಭೂಮಿಯ ನಿವಾಸಿಗಳೆಲ್ಲರು ಶಾಶ್ವತವಾಗಿ ಜೀವಿಸುವ ಆಶೀರ್ವಾದವನ್ನು ಪಡೆಯುವುದು ಯೇಸುವಿನ ವಿಮೋಚನಾ ಮೌಲ್ಯ ಯಜ್ಞದಲ್ಲಿ ನಂಬಿಕೆಯಿಟ್ಟದ್ದರಿಂದಲೇ. (ಯೋಹಾ. 3:16) ಆದ್ದರಿಂದ ಯೇಸು ಅವರ “ನಿತ್ಯನಾದ ತಂದೆ” ಆಗುವನು.—ಯೆಶಾ. 9:6, 7.

‘ಅರಸನ ಹೆಸರನ್ನು ಪ್ರಖ್ಯಾತಿಪಡಿಸಲು’ ಪ್ರಚೋದಿಸಲ್ಪಡುವರು

19, 20. ಕೀರ್ತನೆ 45ರಲ್ಲಿ ತಿಳಿಸಲಾಗಿರುವ ರೋಮಾಂಚಕ ಘಟನೆಗಳು ಇಂದು ನಿಜ ಕ್ರೈಸ್ತರೆಲ್ಲರನ್ನು ಹೇಗೆ ಪ್ರಭಾವಿಸುತ್ತವೆ?

19 ಕೀರ್ತನೆ 45:17 ಓದಿ * (ಪರಿಶುದ್ಧ ಬೈಬಲ್‌). * 45ನೇ ಕೀರ್ತನೆಯಲ್ಲಿ ತಿಳಿಸಲಾಗಿರುವ ಘಟನೆಗಳು ನಿಶ್ಚಯವಾಗಿಯೂ ಎಲ್ಲ ಕ್ರೈಸ್ತರಿಗೂ ಸಂಬಂಧಿಸಿವೆ. ಭೂಮಿಯ ಮೇಲಿರುವ ಅಭಿಷಿಕ್ತರು ಸ್ವರ್ಗದಲ್ಲಿರುವ ತಮ್ಮ ಸಹೋದರರೊಂದಿಗೆ ಮತ್ತು ತಮ್ಮ ವರನೊಂದಿಗೆ ಅತಿ ಶೀಘ್ರದಲ್ಲಿ ಜೊತೆಗೂಡುವ ಪ್ರತೀಕ್ಷೆಯಿಂದ ಪುಳಕಿತರಾಗಿದ್ದಾರೆ. ಬೇರೆ ಕುರಿಗಳು ತಮ್ಮ ಮಹಿಮಾನ್ವಿತ ರಾಜನಿಗೆ ಹೆಚ್ಚೆಚ್ಚು ಅಧೀನರಾಗಿರುವಂತೆ ಪ್ರಚೋದಿಸಲ್ಪಟ್ಟಿದ್ದಾರೆ ಮತ್ತು ಭೂಮಿಯಲ್ಲಿರುವ ವಧುವರ್ಗದ ಸದಸ್ಯರೊಂದಿಗೆ ಸಹವಾಸಿಸಲು ಇರುವ ಸದವಕಾಶಕ್ಕಾಗಿ ತುಂಬ ಕೃತಜ್ಞರಾಗಿದ್ದಾರೆ. ಕ್ರಿಸ್ತನು ಮತ್ತು ಅವನ ವಧು ತಮ್ಮ ವಿವಾಹದ ಬಳಿಕ ಭೂನಿವಾಸಿಗಳ ಮೇಲೆ ಅಪಾರ ಆಶೀರ್ವಾದಗಳನ್ನು ಸುರಿಸುವರು.—ಪ್ರಕ. 7:17; 21:1-4.

20 ಮೆಸ್ಸೀಯ ರಾಜನಿಗೆ ಸಂಬಂಧಿಸಿದ “ಒಂದು ದಿವ್ಯ ವಿಷಯ” ಅಂದರೆ ಒಳ್ಳೇ ವಿಷಯದ ನೆರವೇರಿಕೆಗಾಗಿ ನಾವು ಎದುರುನೋಡುತ್ತಿರುವಾಗ ಅವನ ಹೆಸರನ್ನು ಪ್ರಖ್ಯಾತಿಪಡಿಸಲು ನಮಗೆ ಪ್ರಚೋದನೆಯಾಗುತ್ತಿದೆ ಅಲ್ಲವೇ? (ಕೀರ್ತ. 45:1) ‘ಅರಸನನ್ನು ಸದಾಕಾಲ ಕೊಂಡಾಡುವವರಲ್ಲಿ’ ನಾವೂ ಒಬ್ಬರಾಗಿರೋಣ.

^ ಪ್ಯಾರ. 17 “ನಿನ್ನ ಪಿತೃಗಳ ಸ್ಥಳಗಳನ್ನು ನಿನ್ನ ಮಕ್ಕಳು ತೆಗೆದುಕೊಳ್ಳುವರು. ಅವರನ್ನು ಭೂಮಿಯ ಮೇಲೆಲ್ಲಾ ಪ್ರಧಾನರಾಗಿ ಇರಿಸುವೆ.”

^ ಪ್ಯಾರ. 19 “ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು; ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು.”

^ ಪ್ಯಾರ. 19 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.