ಕುಟುಂಬ ಆರಾಧನೆ —ಇನ್ನಷ್ಟು ಆನಂದದಾಯಕವಾಗಿ ಮಾಡಬಲ್ಲಿರೋ?
“ಕುಟುಂಬ ಆರಾಧನೆಯ ಸಂಜೆ ನಾವು ವಿಷಯಗಳನ್ನು ಚರ್ಚಿಸುವುದರಲ್ಲಿ ಎಷ್ಟು ಮುಳುಗಿ ಹೋಗುತ್ತೇವೆಂದರೆ ಸಮಯ ಹೋದದ್ದೇ ಗೊತ್ತಾಗುವುದಿಲ್ಲ. ನಾನೇ ಸಾಕು ಎಂದು ಹೇಳದಿದ್ದರೆ ಮಧ್ಯರಾತ್ರಿ ಆದರೂ ಅದು ನಿಲ್ಲುವುದೇ ಇಲ್ಲ” ಎನ್ನುತ್ತಾರೆ ಬ್ರಸಿಲ್ ದೇಶದ ಒಬ್ಬ ತಂದೆ. ಕುಟುಂಬದ ತಲೆಯಾಗಿರುವ ಜಪಾನಿನ ಸಹೋದರರೊಬ್ಬರು ಹೇಳುವ ಪ್ರಕಾರ ಅವರ ಹತ್ತು ವರ್ಷದ ಮಗ ಕುಟುಂಬ ಆರಾಧನೆಯ ಸಮಯದಲ್ಲಿ ಗಂಟೆ ಎಷ್ಟಾಯಿತೆಂದು ನೋಡುವುದೇ ಇಲ್ಲ. ಇನ್ನೂ ಮಾಡೋಣ, ಇನ್ನೂ ಮಾಡೋಣ ಎನ್ನುತ್ತಾನೆ. ಏಕೆಂದು ಆ ತಂದೆ ಹೇಳುತ್ತಾರೆ: “ಕುಟುಂಬ ಆರಾಧನೆ ಮಾಡುವಾಗ ಅವನಲ್ಲಿ ಎಲ್ಲಿಲ್ಲದ ಹುಮ್ಮಸ್ಸು. ಹಾಗಾಗಿ ಅವನು ತುಂಬ ಖುಷಿಪಡುತ್ತಾನೆ.”
ಆದರೆ ಎಲ್ಲ ಮಕ್ಕಳಿಗೂ ಹಾಗೆ ಅನಿಸುವುದಿಲ್ಲ. ನಿಜ ಹೇಳಬೇಕೆಂದರೆ ಕೆಲವು ಮಕ್ಕಳಿಗಂತೂ ಕುಟುಂಬ ಆರಾಧನೆ ಅಂದೊಡನೆ ಮುಖ ಮುದುಡಿಹೋಗುತ್ತದೆ. ಯಾಕೆ? ಟೋಗೊದ ಒಬ್ಬ ತಂದೆ ಗಮನಿಸಿ ಹೇಳಿದ ಮಾತಿನಲ್ಲಿ ಉತ್ತರವಿದೆ: “ಯೆಹೋವನ ಆರಾಧನೆ ಬೋರ್ ಅನಿಸುವ ಹಾಗೆ ಇರಬಾರದು.” ಯಾಕೆ ಬೋರ್ ಅನಿಸುತ್ತದೆ? ಇದಕ್ಕೆ ಕಾರಣ ಕುಟುಂಬ ಆರಾಧನೆ ನಡೆಸುತ್ತಿರುವ ರೀತಿ ಆಗಿರಬಹುದಾ? ಆದರೆ ಯೆಶಾಯನು ಸಬ್ಬತ್ ಕುರಿತು ಹೇಳಿದಂತೆ ಕುಟುಂಬ ಆರಾಧನೆ ಸಹ “ಉಲ್ಲಾಸಕರ” ಆಗಿರಸಾಧ್ಯ ಎಂದು ಅನೇಕ ಕುಟುಂಬಗಳು ಕಂಡುಕೊಂಡಿವೆ!—ಯೆಶಾ. 58:13, 14.
ಕುಟುಂಬ ಆರಾಧನೆಯಲ್ಲಿ ಎಲ್ಲರು ಆನಂದಿಸಬೇಕಾದರೆ ಅದು ಔಪಚಾರಿಕವಾಗಿ ಗಂಭೀರವಾಗಿ ಇರಬಾರದು. ಎಲ್ಲರು ನಿರಾತಂಕವಾಗಿ ಇರುವಂಥ ವಾತಾವರಣವಿರಬೇಕು ಎಂದು ಕ್ರೈಸ್ತ ತಂದೆಯರು ಮನಗಂಡಿದ್ದಾರೆ. ಮೂವರು ಹೆಣ್ಣುಮಕ್ಕಳು, ಒಬ್ಬ ಮಗನಿರುವ ಸಹೋದರ ರಾಲ್ಫ್ರವರು, ತಮ್ಮ ಕುಟುಂಬ ಆರಾಧನೆಯಲ್ಲಿ ಎಲ್ಲರೂ ಒಳಗೂಡಿರುತ್ತಾರೆ, ಅದು ಒಂದು ಅಧ್ಯಯನದ ಹಾಗೆ ಇರುವುದಿಲ್ಲ, ಕೂತು ಮಾತಾಡುತ್ತಿರುವಂತೆ ಇರುತ್ತದೆ ಎಂದು ಹೇಳುತ್ತಾರೆ. ಆದರೆ ಹೀಗೆ ಕುಟುಂಬದ ಎಲ್ಲರ ಆಸಕ್ತಿಯನ್ನು ಹಿಡಿದಿಡುವುದು, ಎಲ್ಲರೂ ಭಾಗವಹಿಸುವಂತೆ ಮಾಡುವುದು ಕೆಲವೊಮ್ಮೆ ಕಷ್ಟದ ವಿಷಯ. ಒಬ್ಬ ತಾಯಿ ಹೀಗನ್ನುತ್ತಾರೆ: “ಕುಟುಂಬ ಆರಾಧನೆಯನ್ನು ತುಂಬ ಆಸಕ್ತಿಯದ್ದಾಗಿ ಮಾಡಬೇಕೆಂದು ಇಷ್ಟವಿರುತ್ತದೆ. ಆದರೆ ಹಾಗೆ ಯಾವಾಗಲೂ ಮಾಡಲು ನನಗೆ ಶಕ್ತಿಯಿರುವುದಿಲ್ಲ.” ಇಂಥ ಸಮಸ್ಯೆಗಳನ್ನು ಜಯಿಸಬಹುದೇ?
ಹೊಂದಿಸಿಕೊಳ್ಳಿ, ವೈವಿಧ್ಯವಿರಲಿ
ಇಬ್ಬರು ಮಕ್ಕಳಿರುವ ಜರ್ಮನಿಯ ಸಹೋದರರೊಬ್ಬರು ಹೀಗೆ ಹೇಳುತ್ತಾರೆ: “ನಾವು ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬೇಕು.” ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿರುವ ನಟಾಲ್ಯ ಹೇಳುವುದೇನೆಂದರೆ, “ನಮ್ಮ ಕುಟುಂಬ ಆರಾಧನೆಗೆ ಮುಖ್ಯವಾಗಿ ಬೇಕಾಗಿರುವುದು ವಿವಿಧತೆ. ಆದಷ್ಟು ನಾನಾ ರೀತಿಯಲ್ಲಿ ವಿಧವಿಧವಾಗಿ ನಡೆಸಬೇಕು.” ಅನೇಕರು ಕುಟುಂಬ ಆರಾಧನೆಯಲ್ಲಿ ಬೇರೆಬೇರೆ ಭಾಗಗಳಿರುವಂತೆ ನೋಡಿಕೊಳ್ಳುತ್ತಾರೆ. “ಇದರಿಂದ ಅಧ್ಯಯನ ತುಂಬ ಲವಲವಿಕೆಯಿಂದ ಕೂಡಿರುತ್ತದೆ. ಎಲ್ಲರೂ ಒಳಗೂಡಲು ಆಗುತ್ತದೆ” ಎನ್ನುತ್ತಾರೆ ಹದಿಪ್ರಾಯದ ಇಬ್ಬರು ಮಕ್ಕಳಿರುವ ಬ್ರಸಿಲ್‍ನ ಕ್ಲೇಟಾನ್ ಎಂಬ ಸಹೋದರ. ಮಕ್ಕಳ ವಯಸ್ಸಿನಲ್ಲಿ ತುಂಬ ಅಂತರವಿರುವಲ್ಲಿ ಕುಟುಂಬ ಆರಾಧನೆಯಲ್ಲಿ ಬೇರೆ ಬೇರೆ ವಿಷಯಗಳನ್ನು ಒಳಗೂಡಿಸುವುದರಿಂದ ಪ್ರತಿಯೊಂದು ಮಗುವಿನ ಅಗತ್ಯಗಳಿಗೆ ಹೆತ್ತವರು ಗಮನ ಕೊಡಲು ಆಗುತ್ತದೆ. ಹೆತ್ತವರು ಕುಟುಂಬದ ಪ್ರತಿಯೊಬ್ಬರ ಅಗತ್ಯದ ಕುರಿತು ಚರ್ಚಿಸಲು, ಆ ಅಗತ್ಯಕ್ಕೆ ಅನುಗುಣವಾಗಿ ವಿಷಯಗಳನ್ನು ಆರಿಸಿಕೊಳ್ಳಲು, ಕುಟುಂಬ ಆರಾಧನೆಯ ವಿಧಾನವನ್ನೂ ಹೊಂದಿಸಿಕೊಳ್ಳಲು ಆಗುತ್ತದೆ.
ಕುಟುಂಬ ಆರಾಧನೆ ಹೆಚ್ಚು ವೈವಿಧ್ಯದ್ದಾಗಿರಲಿಕ್ಕಾಗಿ ಕೆಲವರು ಏನು ಮಾಡುತ್ತಿದ್ದಾರೆ? ಯೆಹೋವನಿಗೆ ರಾಜ್ಯ ಗೀತೆಗಳನ್ನು ಹಾಡುವ ಮೂಲಕ ಕುಟುಂಬ ಆರಾಧನೆಯನ್ನು ಆರಂಭಿಸುತ್ತಾರೆ. “ಇದು ಒಳ್ಳೇ ವಾತಾವರಣವನ್ನು ಉಂಟುಮಾಡುತ್ತದೆ. ಚರ್ಚಿಸಲಿರುವ ವಿಷಯಕ್ಕೆ ಮನಸ್ಸನ್ನು ಸಿದ್ಧಗೊಳಿಸುತ್ತದೆ” ಎನ್ನುತ್ತಾರೆ ಮೆಕ್ಸಿಕೊದ ಕ್ವಾನ್ ಎಂಬವರು. ಕುಟುಂಬ ಆರಾಧನೆಗಾಗಿ ಆರಿಸಿಕೊಂಡಿರುವ ವಿಷಯಗಳಲ್ಲಿ ಯಾವುದಕ್ಕಾದರೂ ಸಂಬಂಧಿಸಿದ ಗೀತೆಗಳನ್ನು ಆತನ ಕುಟುಂಬದವರೇ ಆಯ್ಕೆ ಮಾಡುತ್ತಾರೆ.
ಎಷ್ಟೋ ಕುಟುಂಬಗಳು ಬೈಬಲಿನ ಒಂದು ಭಾಗವನ್ನು ಒಟ್ಟಾಗಿ ಓದುತ್ತವೆ. ವೈವಿಧ್ಯಕ್ಕಾಗಿ ಆ ಭಾಗದಲ್ಲಿ ಕೊಡಲಾಗಿರುವ ಬೇರೆ ಬೇರೆ ವ್ಯಕ್ತಿಗಳ ಪಾತ್ರವನ್ನು ಒಬ್ಬೊಬ್ಬ ಕುಟುಂಬ ಸದಸ್ಯನು ತೆಗೆದುಕೊಂಡು ಓದುತ್ತಾನೆ. “ಈ ರೀತಿ ಓದಲು ಮೊದಮೊದಲು ನನಗೆ ಒಂಥರಾ ಅನಿಸುತ್ತಿತ್ತು” ಎನ್ನುತ್ತಾರೆ ಜಪಾನ್ ದೇಶದ ಒಬ್ಬ ತಂದೆ. ಆದರೆ ಅವರ ಇಬ್ಬರು ಗಂಡುಮಕ್ಕಳು ತಮ್ಮ ಅಪ್ಪಅಮ್ಮ ತಮ್ಮೊಂದಿಗೆ ಈ ರೀತಿ ಸಂತೋಷದಿಂದ ಕಾಲ ಕಳೆಯುವುದನ್ನು ಇಷ್ಟಪಟ್ಟರು. ಕೆಲವು ಕುಟುಂಬಗಳು ಬೈಬಲಿನಲ್ಲಿರುವ ಕಥೆಗಳನ್ನು ಅಭಿನಯಿಸುತ್ತವೆ ಸಹ. ‘ಒಂದು ಬೈಬಲ್ ಕಥೆಯಲ್ಲಿ ನಮ್ಮ ಗಮನಕ್ಕೆ ಬಾರದ ಕೆಲವು ವಿಷಯಗಳನ್ನು ಮಕ್ಕಳು ಕಂಡುಹಿಡಿದಿರುತ್ತಾರೆ’ ಎಂದರು ಇಬ್ಬರು ಗಂಡುಮಕ್ಕಳಿರುವ ದಕ್ಷಿಣ ಆಫ್ರಿಕದ ರಾಜರ್.
ಕುಟುಂಬ ಆರಾಧನೆಯನ್ನು ವೈವಿಧ್ಯಮಯವನ್ನಾಗಿ ಮಾಡುವ ಇನ್ನೊಂದು ವಿಧ, ಒಟ್ಟಾಗಿ ಪ್ರಾಜೆಕ್ಟ್‌ಗಳನ್ನು ಮಾಡುವುದು. ಉದಾಹರಣೆಗೆ ನೋಹನ ನಾವೆ ಅಥವಾ ಸೊಲೊಮೋನನು ಕಟ್ಟಿಸಿದ ದೇವಾಲಯದ ನಮೂನೆಯನ್ನು ಮಾಡಬಹುದು. ಇದಕ್ಕಾಗಿ ಸಂಶೋಧನೆಯನ್ನೂ ಮಾಡಬೇಕಾಗುತ್ತದೆ. ಈ ಸಂಶೋಧನೆ ಕೂಡ ತುಂಬ ಆಸಕ್ತಿಕರವಾಗಿರುತ್ತದೆ. ಏಷ್ಯಾದ ಒಂದು ಕುಟುಂಬದ ಐದು ವರ್ಷದ ಬಾಲೆ ಮತ್ತು ಅವಳ ಅಪ್ಪ, ಅಮ್ಮ, ಅಜ್ಜಿ ಒಟ್ಟಾಗಿ ಅಪೊಸ್ತಲ ಪೌಲನ ಮಿಷನರಿ ಪ್ರಯಾಣವನ್ನು ಆಧರಿಸಿದ ಆಟದ ಬೋರ್ಡನ್ನು (ಬೋರ್ಡ್ ಗೇಮ್) ತಯಾರಿಸಿದರು. ಬೇರೆ ಕೆಲವು ಕುಟುಂಬಗಳು ವಿಮೋಚನಕಾಂಡ ಪುಸ್ತಕದಲ್ಲಿರುವ ವೃತ್ತಾಂತಗಳನ್ನು ಆಧರಿಸಿದ ಇಂಥದ್ದೇ ಆಟದ ಬೋರ್ಡ್‌ಗಳನ್ನು ತಯಾರಿಸಿದ್ದಾರೆ. ವೈವಿಧ್ಯ “ನಮ್ಮ ಕುಟುಂಬ ಆರಾಧನೆಯಲ್ಲಿ, ಮಾತ್ರವಲ್ಲ ನಮ್ಮ ಕುಟುಂಬದಲ್ಲೂ ಹೊಸ ಕಳೆ ತಂದಿದೆ” ಎನ್ನುತ್ತಾನೆ ಟೋಗೊದ 19 ವರ್ಷ ಪ್ರಾಯದ ಡಾನಲ್ಡ್. ನೀವು ಸಹ ಕುಟುಂಬ ಆರಾಧನೆಯಲ್ಲಿ ಎಲ್ಲರೂ ಇನ್ನಷ್ಟು ಆನಂದಿಸುವಂತೆ ಯಾವುದಾದರೂ ಪ್ರಾಜೆಕ್ಟನ್ನು ಯೋಜಿಸಬಹುದಲ್ಲವೇ?
ತಯಾರಿ ಬೇಕೇಬೇಕು
ವೈವಿಧ್ಯ ಇರುವುದರಿಂದ ಮತ್ತು ಅಗತ್ಯಕ್ಕೆ ತಕ್ಕಂತೆ ಹೊಂದಿಸಿಕೊಳ್ಳುವುದರಿಂದ ಕುಟುಂಬ ಆರಾಧನೆ ಸ್ವಾರಸ್ಯಕರವಾಗಿ ಇರುತ್ತದಾದರೂ ಅದರಿಂದ ನಿಜವಾಗಿ ಪ್ರಯೋಜನ ಸಿಗಬೇಕಾದರೆ ಎಲ್ಲರೂ ತಯಾರಿ ಮಾಡಲೇಬೇಕು. ಕೆಲವೊಮ್ಮೆ ಚಿಕ್ಕ ಮಕ್ಕಳು ಬೇಗನೆ ಸುಸ್ತಾಗಿಬಿಡುತ್ತಾರೆ. ಹಾಗಾಗಿ ತಂದೆಯು ಮೊದಲೇ ಆಲೋಚಿಸಿ ತಕ್ಕ ವಿಷಯವನ್ನು ಆರಿಸಿಕೊಳ್ಳಬೇಕು. ಸಮಯ ತಕ್ಕೊಂಡು ಚೆನ್ನಾಗಿ ತಯಾರಿ ಮಾಡಬೇಕು. ಒಬ್ಬ ತಂದೆ ಹೀಗನ್ನುತ್ತಾರೆ: “ನಾನು ತಯಾರಿ ಮಾಡಿರುವಾಗ ಅಧ್ಯಯನವು ಎಲ್ಲರಿಗೆ ಹೆಚ್ಚು ಪ್ರಯೋಜನಕರವಾಗಿರುತ್ತದೆ.” ಜರ್ಮನಿಯ ಒಬ್ಬ ತಂದೆ ಏನು ಮಾಡುತ್ತಾರೆ ಗೊತ್ತೆ? ಮುಂದಿನ ಕೆಲವು ವಾರಗಳಲ್ಲಿ ಕುಟುಂಬ ಆರಾಧನೆಯಲ್ಲಿ ಏನು ಮಾಡಲಿದ್ದೇವೆಂದು ಮೊದಲೇ ಕುಟುಂಬಕ್ಕೆ ಹೇಳುತ್ತಾರೆ. ಬೆನಿನ್ ದೇಶದ ಒಬ್ಬ ತಂದೆಗೆ ಆರು ಚಿಕ್ಕ ಮಕ್ಕಳಿದ್ದಾರೆ. ಕುಟುಂಬ ಆರಾಧನೆಯಲ್ಲಿ ಒಂದು ಡಿವಿಡಿಯನ್ನು ನೋಡಲು ನಿರ್ಧರಿಸಿರುವುದಾದರೆ ಆ ತಂದೆಯು ಮುಂಚಿತವಾಗಿ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ತಯಾರಿಸಿ ಕೊಡುತ್ತಾರೆ. ಹೌದು, ತಯಾರಿಯು ಕುಟುಂಬ ಆರಾಧನೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ನಿಸ್ಸಂಶಯ.
ಕುಟುಂಬ ಆರಾಧನೆಯಲ್ಲಿ ಏನನ್ನು ಪರಿಗಣಿಸಲಾಗುತ್ತದೆ ಎಂದು ಮೊದಲೇ ಎಲ್ಲರಿಗೆ ತಿಳಿದಿರುವಲ್ಲಿ ಆ ವಾರವಿಡೀ ಅವರು ಅದರ ಕುರಿತು ಮಾತಾಡಲು ಆಗುತ್ತದೆ. ಹೀಗೆ ಆಸಕ್ತಿ ಹೆಚ್ಚುತ್ತದೆ. ಎಲ್ಲರಿಗೂ ಒಂದೊಂದು ನೇಮಕವಿರುವುದು ಕೂಡ ಒಳ್ಳೇದು. ಆಗ ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೆ ಅದು ತನ್ನ ಕುಟುಂಬ ಆರಾಧನೆ ಎಂಬ ಭಾವನೆ ಮೂಡುತ್ತದೆ.
ತಪ್ಪಿಸದಿರಲು ಸರ್ವಪ್ರಯತ್ನ ಮಾಡಿ
ಕುಟುಂಬ ಆರಾಧನೆಯನ್ನು ಪ್ರತಿವಾರ ತಪ್ಪದೇ ಮಾಡುವುದು ಅನೇಕ ಕುಟುಂಬಗಳಿಗೆ ಒಂದು ಸವಾಲೇ ಆಗಿದೆ.
ಕೆಲವು ತಂದೆಯಂದಿರು ಕುಟುಂಬವನ್ನು ನೋಡಿಕೊಳ್ಳಲಿಕ್ಕಾಗಿ ಇಡೀ ದಿನ ದುಡಿಯಬೇಕಾಗುತ್ತದೆ. ಉದಾಹರಣೆಗೆ, ಮೆಕ್ಸಿಕೊ ದೇಶದ ಒಬ್ಬ ತಂದೆ ಬೆಳಗ್ಗೆ 6 ಗಂಟೆಗೆ ಮನೆಬಿಟ್ಟರೆ ವಾಪಸ್ಸು ಬರುವುದು ರಾತ್ರಿ 8ಕ್ಕೆ. ಇನ್ನು ಕೆಲವೊಮ್ಮೆ ಬೇರೆ ಯಾವುದಾದರೂ ಆಧ್ಯಾತ್ಮಿಕ ಕಾರ್ಯಕ್ರಮವಿದ್ದರೆ ಕುಟುಂಬ ಆರಾಧನೆಯ ಅವಧಿಯನ್ನು ಹೆಚ್ಚುಕಡಿಮೆ ಮಾಡಬೇಕಾಗುತ್ತದೆ.
ಹಾಗಿದ್ದರೂ ಕುಟುಂಬ ಆರಾಧನೆಯನ್ನಂತೂ ತಪ್ಪದೆ ಮಾಡುವ ಸಂಕಲ್ಪ ನಮಗಿರಬೇಕು. ಟೋಗೊದ ಹನ್ನೊಂದು ವರ್ಷದ ಲೋಯಸ್ ತನ್ನ ಕುಟುಂಬದ ದೃಢನಿಲುವನ್ನು ಹೀಗೆ ವಿವರಿಸುತ್ತಾಳೆ: “ಕೆಲವೊಮ್ಮೆ ಯಾವುದಾದರೂ ಕಾರಣದಿಂದ ಕುಟುಂಬ ಆರಾಧನೆಯನ್ನು ಸಮಯಕ್ಕೆ ಸರಿಯಾಗಿ ಆರಂಭಿಸಲು ಆಗುವುದಿಲ್ಲ. ಆದರೆ ತಡವಾದರೂ ನಾವು ಕುಟುಂಬ ಆರಾಧನೆಯನ್ನು ಮಾಡೇ ಮಾಡ್ತೇವೆ, ತಪ್ಪಿಸುವುದಿಲ್ಲ.” ಕೆಲವರು ಕುಟುಂಬ ಆರಾಧನೆಯನ್ನು ವಾರದ ಆರಂಭದಲ್ಲೇ ಮಾಡಲು ಯೋಜಿಸುತ್ತಾರೆ. ಒಂದುವೇಳೆ ಅನಿರೀಕ್ಷಿತವಾಗಿ ಏನಾದರೂ ಬಂದರೆ ಅದೇ ವಾರದ ಬೇರೆ ದಿನದಂದು ಮಾಡಲು ಆಗುತ್ತದೆ ಎಂಬ ಕಾರಣದಿಂದ.
“ಕುಟುಂಬ ಆರಾಧನೆ” ಎಂಬ ಹೆಸರೇ ಹೇಳುವಂತೆ ಇದು ಯೆಹೋವನಿಗೆ ನೀವು ಸಲ್ಲಿಸುವ ಆರಾಧನೆಯ ಭಾಗವಾಗಿದೆ. ಆದುದರಿಂದ ನಿಮ್ಮ ಕುಟುಂಬದ ಎಲ್ಲ ಸದಸ್ಯರು ವಾರವಾರವೂ ಯೆಹೋವನಿಗೆ ತಮ್ಮ “ಸ್ತೋತ್ರಗಳೆಂಬ [ಎಳೆಯ, NW] ಹೋರಿಗಳನ್ನು” ತೆಗೆದುಕೊಂಡು ಬರಲಿ. (ಹೋಶೇ. 14:2) ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಕುಟುಂಬ ಆರಾಧನೆ ಆನಂದದ ಸಮಯವಾಗಿರಲಿ. ಏಕೆಂದರೆ “ಯೆಹೋವನ ಆನಂದವೇ ನಿಮ್ಮ ಆಶ್ರಯವಾಗಿದೆ.”—ನೆಹೆ. 8:9, 10.