ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ಸುಸಂಘಟನೆಯ ದೇವರು

ಯೆಹೋವನು ಸುಸಂಘಟನೆಯ ದೇವರು

“ದೇವರು ಶಾಂತಿಯ ದೇವರಾಗಿದ್ದಾನೆಯೇ ಹೊರತು ಗಲಿಬಿಲಿಯ ದೇವರಲ್ಲ.”—1 ಕೊರಿಂ. 14:33.

1, 2. (ಎ) ದೇವರ ಮೊದಲ ಸೃಷ್ಟಿ ಯಾರು? (ಬಿ) ಯೆಹೋವನು ಅವನನ್ನು ಹೇಗೆ ಬಳಸಿದನು? (ಸಿ) ದೇವದೂತರು ಸಹ ಸುಸಂಘಟಿತರಾಗಿದ್ದಾರೆ ಎಂದು ಯಾವುದು ತೋರಿಸುತ್ತದೆ?

ಸರ್ವವನ್ನೂ ಸೃಷ್ಟಿಸಿದ ಯೆಹೋವನು ಎಲ್ಲವನ್ನು ಸುಸಂಘಟಿತ ರೀತಿಯಲ್ಲಿ ಮಾಡುತ್ತಾನೆ. ಆತನು ಮೊದಲು ಸೃಷ್ಟಿಸಿದ್ದು ತನ್ನ ಏಕೈಕಜಾತ ಆತ್ಮಿಕ ಪುತ್ರನನ್ನು. ದೇವರ ಪ್ರಧಾನ ವಕ್ತಾರನಾಗಿದ್ದ ಅವನಿಗೆ “ವಾಕ್ಯ” ಎಂಬ ಹೆಸರಿದೆ. ಅವನು ಅನೇಕ ಯುಗಗಳಿಂದ ಯೆಹೋವನ ಸೇವೆಮಾಡಿದ್ದಾನೆ. ಹಾಗಾಗಿಯೇ ಬೈಬಲ್‌ ಹೇಳುತ್ತದೆ: “ಆದಿಯಲ್ಲಿ ವಾಕ್ಯ ಎಂಬವನಿದ್ದನು; ಆ ವಾಕ್ಯವೆಂಬವನು ದೇವರೊಂದಿಗಿದ್ದನು.” ಅಷ್ಟೇ ಅಲ್ಲ, “ಸಮಸ್ತವೂ ಅವನ [ಆ ವಾಕ್ಯದ] ಮೂಲಕವೇ ಅಸ್ತಿತ್ವಕ್ಕೆ ಬಂತು, ಅವನಿಲ್ಲದೆ ಒಂದಾದರೂ ಅಸ್ತಿತ್ವಕ್ಕೆ ಬರಲಿಲ್ಲ.” 2,000ಕ್ಕಿಂತ ಹೆಚ್ಚು ವರ್ಷಗಳ ಹಿಂದೆ “ವಾಕ್ಯ” ಎಂಬಾತನನ್ನು ದೇವರು ಭೂಮಿಗೆ ಕಳುಹಿಸಿದನು. ಇಲ್ಲಿ ಅವನು ಪರಿಪೂರ್ಣ ಮನುಷ್ಯನಾದ ಯೇಸು ಕ್ರಿಸ್ತನಾಗಿ ತನ್ನ ತಂದೆಯ ಚಿತ್ತವನ್ನು ನಂಬಿಗಸ್ತಿಕೆಯಿಂದ ಮಾಡಿದನು.—ಯೋಹಾ. 1:1-3, 14.

2 ಯೇಸು ಭೂಮಿಗೆ ಬರುವ ಮುಂಚೆ ದೇವರ ಬಳಿ ಕುಶಲ “ಶಿಲ್ಪಿಯಾಗಿದ್ದುಕೊಂಡು” ಆತನಿಗಾಗಿ ನಿಷ್ಠೆಯಿಂದ ಕೆಲಸಮಾಡಿದನು. (ಜ್ಞಾನೋ. 8:30) ಯೆಹೋವನು ಅವನ ಮೂಲಕವೇ ಸ್ವರ್ಗದಲ್ಲಿ ಕೋಟ್ಯಂತರ ಆತ್ಮಿಕ ಜೀವಿಗಳನ್ನು ಸೃಷ್ಟಿಸಿದನು. (ಕೊಲೊ. 1:16) ಈ ದೇವದೂತರ ಬಗ್ಗೆ ಬೈಬಲ್‌ ಹೀಗನ್ನುತ್ತದೆ: “ಲಕ್ಷೋಪಲಕ್ಷ ದೂತರು [ಯೆಹೋವನನ್ನು] ಸೇವಿಸುತ್ತಿದ್ದರು, ಕೋಟ್ಯನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು.” (ದಾನಿ. 7:10) ಬಹುಸಂಖ್ಯೆಯಲ್ಲಿರುವ ಈ ಆತ್ಮಿಕ ಜೀವಿಗಳನ್ನು ಯೆಹೋವನ ಸುಸಂಘಟಿತ “ಸೈನ್ಯ” ಎಂದು ಬೈಬಲ್‌ ಕರೆಯುತ್ತದೆ.—ಕೀರ್ತ. 103:21.

3. (ಎ) ಎಷ್ಟು ನಕ್ಷತ್ರಗಳು ಮತ್ತು ಗ್ರಹಗಳು ಇವೆ? (ಬಿ) ಅವು ಹೇಗೆ ಸಂಘಟಿಸಲ್ಪಟ್ಟಿವೆ?

3 ದೇವರು ಸೃಷ್ಟಿಸಿದ ವಿಶ್ವದ ಕುರಿತೇನು? ನಮ್ಮ ವಿಶ್ವವು ಎಣಿಸಲಾಗದಷ್ಟು ನಕ್ಷತ್ರಗಳನ್ನು, ಗ್ರಹಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. ಟೆಕ್ಸಾಸ್‍ನ ಹೌಸ್ಟನ್‌  ನಗರದ ಕ್ರಾನಿಕಲ್‌ ಎಂಬ ವಾರ್ತಾಪತ್ರಿಕೆ ಹೀಗೆ ವರದಿಸಿತು: “3ರ ಮುಂದೆ 23 ಸೊನ್ನೆಗಳನ್ನು ಹಾಕಿದರೆ ಎಷ್ಟಾಗುತ್ತದೋ ಅಷ್ಟು ನಕ್ಷತ್ರಗಳು ನಮ್ಮ ವಿಶ್ವದಲ್ಲಿವೆ ಎಂದು ಕಂಡುಬಂದಿದೆ. ಅದರರ್ಥ ಈ ಮುಂಚೆ ವಿಜ್ಞಾನಿಗಳು ಹೇಳಿದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು!” ನಕ್ಷತ್ರಗಳು ವ್ಯವಸ್ಥಿತ ರೀತಿಯಲ್ಲಿ ಒಂದೊಂದು ಗುಂಪಾಗಿ ಇರುತ್ತವೆ. ಇಂಥ ಒಂದೊಂದು ಗುಂಪನ್ನು ಗ್ಯಾಲಕ್ಸಿ ಅನ್ನುತ್ತಾರೆ. ಒಂದು ಗ್ಯಾಲಕ್ಸಿಯಲ್ಲಿ 10,000 ಕೋಟಿ ಅಥವಾ 1 ಲಕ್ಷ ಕೋಟಿಗಳಷ್ಟು ನಕ್ಷತ್ರಗಳು, ಅನೇಕಾನೇಕ ಗ್ರಹಗಳು ಇರುತ್ತವೆ. ಅನೇಕಾನೇಕ ಗ್ಯಾಲಕ್ಸಿಗಳು ವ್ಯವಸ್ಥಿತ ರೀತಿಯಲ್ಲಿ ಒಂದೊಂದು ಸಮೂಹವಾಗಿರುತ್ತವೆ. ಇಂಥ ಒಂದು ಸಮೂಹವನ್ನು ಕ್ಲಸ್ಟರ್‌ ಎಂದು ಕರೆಯಲಾಗುತ್ತದೆ. ಅನೇಕ ಕ್ಲಸ್ಟರ್‌ಗಳು ಕೂಡಿ ಸೂಪರ್‌ ಕ್ಲಸ್ಟರ್‌ ಆಗುತ್ತದೆ.

4. ದೇವರು ತನ್ನ ಸೇವಕರನ್ನು ಸಂಘಟನಾತ್ಮಕ ರೀತಿಯಲ್ಲಿ ನಡೆಸುತ್ತಾನೆ ಎಂದು ಹೇಗೆ ಹೇಳಬಹುದು?

4 ಸ್ವರ್ಗದಲ್ಲಿರುವ ದೇವದೂತರಂತೆ ನಮ್ಮ ವಿಶ್ವದಲ್ಲಿರುವ ನಕ್ಷತ್ರಗಳು ಗ್ರಹಗಳು ಕೂಡ ಬೆರಗುಗೊಳಿಸುವ ರೀತಿಯಲ್ಲಿ ಸುವ್ಯವಸ್ಥಿತವಾಗಿವೆ. (ಯೆಶಾ. 40:26) ಹೀಗಿರುವಾಗ ದೇವರು ಭೂಮಿಯಲ್ಲಿರುವ ತನ್ನ ಸೇವಕರನ್ನೂ ಸಂಘಟನಾತ್ಮಕ ರೀತಿಯಲ್ಲಿ ನಡೆಸುತ್ತಾನೆ ನಿಸ್ಸಂಶಯ. ತನ್ನ ಸೇವಕರು ಎಲ್ಲವನ್ನು ಅಚ್ಚುಕಟ್ಟಾಗಿ ಸುಸಂಘಟಿತ ರೀತಿಯಲ್ಲಿ ಮಾಡಬೇಕೆನ್ನುವುದು ಯೆಹೋವನ ಬಯಕೆ. ಅವರು ಹಾಗೆ ಮಾಡಲೇಬೇಕು ಏಕೆಂದರೆ ಪ್ರಾಮುಖ್ಯವಾದ ಅನೇಕ ಕೆಲಸಗಳು ಅವರಿಗಿವೆ. ಈಗಿನ ಮತ್ತು ಮುಂಚಿನ ನಂಬಿಗಸ್ತ ಸೇವಕರ ಉದಾಹರಣೆಗಳು ಯೆಹೋವನು ತನ್ನ ಜನರೊಂದಿಗೆ ಯಾವಾಗಲೂ ಇದ್ದಾನೆ ಮತ್ತು ಆತನು “ಶಾಂತಿಯ ದೇವರಾಗಿದ್ದಾನೆಯೇ ಹೊರತು ಗಲಿಬಿಲಿಯ ದೇವರಲ್ಲ” ಎನ್ನುವುದಕ್ಕೆ ಪುರಾವೆಯನ್ನು ಕೊಡುತ್ತವೆ.—1 ಕೊರಿಂಥ 14:33, 40 ಓದಿ.

ಪ್ರಾಚೀನ ಕಾಲದಲ್ಲಿ ಯೆಹೋವನು ತನ್ನ ಜನರನ್ನು ಸಂಘಟಿಸಿದನು

5. ದೇವರು ಮನುಷ್ಯರಿಗಾಗಿ ಮಾಡಿದ ಸುವ್ಯವಸ್ಥಿತ ಏರ್ಪಾಡು ಹೇಗೆ ಸ್ವಲ್ಪ ಮಟ್ಟಿಗೆ ಹಾಳಾಯಿತು?

5 ಯೆಹೋವನು ಮೊದಲ ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸಿ ಅವರಿಗೆ ಹೀಗಂದನು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” (ಆದಿ. 1:28) ಆದಾಮಹವ್ವರು ಮಕ್ಕಳನ್ನು ಮೊಮ್ಮಕ್ಕಳನ್ನು ಪಡೆದು ಹೀಗೆ ವ್ಯವಸ್ಥಿತವಾಗಿ ಭೂಮಿಯನ್ನು ತುಂಬಬೇಕಿತ್ತು. ಇಡೀ ಭೂಮಿಯನ್ನು ಸುಂದರ ತೋಟವನ್ನಾಗಿ ಮಾಡಬೇಕಿತ್ತು. ಆದರೆ ಈ ಸುವ್ಯವಸ್ಥಿತ ಏರ್ಪಾಡು ಆದಾಮ ಮತ್ತು ಹವ್ವಳ ಅವಿಧೇಯತೆಯ ಕಾರಣ ಸ್ವಲ್ಪ ಮಟ್ಟಿಗೆ ಹಾಳಾಯಿತು. (ಆದಿ. 3:1-6) ಆದಾಮಹವ್ವರ ಸಂತತಿಯಲ್ಲಿ ಹೆಚ್ಚಿನವರು ಯೆಹೋವನಿಗೆ ವಿಧೇಯರಾಗಲಿಲ್ಲ. ಸಮಯಾನಂತರ “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿ” ಇರುವುದನ್ನೂ ಯೆಹೋವನು ಗಮನಿಸಿದನು. ಪರಿಣಾಮ “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು; ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು.” ಹಾಗಾಗಿ ದೇವರು ಭೂಮಿಯಲ್ಲಿರುವ ದುಷ್ಟತನವನ್ನು ಅಳಿಸಿಹಾಕಲಿಕ್ಕಾಗಿ ಜಲಪ್ರಳಯವನ್ನು ತರುವ ನಿರ್ಧಾರ ಮಾಡಿದನು.—ಆದಿ. 6:5, 11-13, 17.

6, 7. (ಎ) ನೋಹನಿಗೆ ಯೆಹೋವನ ದಯೆ ಏಕೆ ದೊರೆಯಿತು? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.) (ಬಿ) ನೋಹನ ಸಮಯದಲ್ಲಿದ್ದ ಅಪನಂಬಿಗಸ್ತ ಜನರೆಲ್ಲರಿಗೆ ಏನಾಯಿತು?

6 “ಆದರೆ ನೋಹನಿಗೆ ಯೆಹೋವನ ದಯವು ದೊರಕಿತು.” ಯಾಕೆಂದರೆ “ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು.” ನೋಹ “ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡ” ಕಾರಣ ದೇವರು ಅವನಿಗೆ ದೊಡ್ಡ ನಾವೆಯನ್ನು ಕಟ್ಟಲು ಹೇಳಿದನು. (ಆದಿ. 6:8, 9, 14-16) ಅದರ ವಿನ್ಯಾಸ ಮನುಷ್ಯರನ್ನು ಮತ್ತು ಪ್ರಾಣಿ ಸಂಕುಲವನ್ನು ಸಂರಕ್ಷಿಸಲು ತಕ್ಕದ್ದಾಗಿತ್ತು. “ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು.” ತನ್ನ ಕುಟುಂಬದ ಬೆಂಬಲದೊಂದಿಗೆ ದೇವರು ಹೇಳಿದಂತೆಯೇ ನೋಹನು ಸುವ್ಯವಸ್ಥಿತವಾಗಿ ನಾವೆಯನ್ನು ಕಟ್ಟಿಮುಗಿಸಿದನು. ಎಲ್ಲ ಪ್ರಾಣಿಗಳನ್ನು ನಾವೆಯ ಒಳತರಲಾಯಿತು. ಬಳಿಕ ಯೆಹೋವನು ‘ನಾವೆಯ ಬಾಗಿಲನ್ನು ಮುಚ್ಚಿದನು.’—ಆದಿ. 7:5, 16.

7 ಯೆಹೋವನು ಕ್ರಿ.ಪೂ. 2370ರಲ್ಲಿ ಜಲಪ್ರಳಯ ಬರಮಾಡಿ ‘ಭೂಮಿಯ ಮೇಲಿದ್ದ ಎಲ್ಲವನ್ನು ನಾಶ ಮಾಡಿದನು.’ ಆದರೆ ನೋಹ ಮತ್ತವನ ಕುಟುಂಬವನ್ನು ನಾವೆಯಲ್ಲಿಟ್ಟು ಸಂರಕ್ಷಿಸಿದನು. (ಆದಿ. 7:23) ಇವತ್ತು ಭೂಮಿಯ ಮೇಲಿರುವ ಜನರೆಲ್ಲರೂ ನೋಹ ಮತ್ತವನ ಮಕ್ಕಳ ಸಂತಾನವೇ. ಆದರೆ “ನೀತಿಯನ್ನು ಸಾರುವವನಾಗಿದ್ದ” ನೋಹನ ಮಾತು ಕೇಳದೆ ನಾವೆಯ ಒಳಗೆ ಬಾರದ ಅಪನಂಬಿಗಸ್ತ ಜನರೆಲ್ಲರೂ ನಾಶವಾದರು.—2 ಪೇತ್ರ 2:5.

ಎಲ್ಲವನ್ನು ಒಳ್ಳೇದಾಗಿ ಸಂಘಟಿಸಿದ್ದು ಎಂಟು ಮಂದಿಗೆ ಜಲಪ್ರಳಯದಿಂದ ರಕ್ಷಣೆ ಪಡೆಯಲು ನೆರವಾಯಿತು (ಪ್ಯಾರ 6, 7 ನೋಡಿ)

8. ದೇವರು ಇಸ್ರಾಯೇಲ್ಯರಿಗೆ ವಾಗ್ದತ್ತ ದೇಶವನ್ನು ಪ್ರವೇಶಿಸಲು ಹೇಳಿದಾಗ ಇಸ್ರಾಯೇಲಿನಲ್ಲಿ ಸುವ್ಯವಸ್ಥಿತ ಏರ್ಪಾಡು ಇತ್ತೆಂದು ಹೇಗೆ ಗೊತ್ತಾಗುತ್ತದೆ?

8 ಜಲಪ್ರಳಯವಾಗಿ 800ಕ್ಕಿಂತ ಹೆಚ್ಚು ವರ್ಷಗಳ ನಂತರ ದೇವರು ಇಸ್ರಾಯೇಲ್ಯರನ್ನು ಒಂದು ಜನಾಂಗವಾಗಿ ಸಂಘಟಿಸಿದನು. ಅವರ ಜೀವನದ ಪ್ರತಿಯೊಂದು  ಕ್ಷೇತ್ರದಲ್ಲಿ ಆತನು ಸುವ್ಯವಸ್ಥೆಯನ್ನು ಸ್ಥಾಪಿಸಿದನು. ಮುಖ್ಯವಾಗಿ ಅವರ ಆರಾಧನೆಯ ವಿಷಯದಲ್ಲಿ. ಉದಾಹರಣೆಗೆ, ದೇವರು ಅನೇಕರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ನೇಮಿಸಿದನು. “ದೇವದರ್ಶನದ ಗುಡಾರದ ಬಾಗಲಲ್ಲಿ ಸೇವೆ” ಮಾಡಲು ಸ್ತ್ರೀಯರನ್ನೂ ನೇಮಿಸಿದನು. (ವಿಮೋ. 38:8) ಯೆಹೋವನು ಇಸ್ರಾಯೇಲ್ಯರಿಗೆ ಕಾನಾನ್‌ ದೇಶವನ್ನು ಪ್ರವೇಶಿಸುವಂತೆ ಹೇಳಿದಾಗ ಹೆಚ್ಚಿನವರು ಕೇಳದೆ ಅಪನಂಬಿಗಸ್ತರಾದರು. ಆದರೆ ಯೆಹೋಶುವ ಮತ್ತು ಕಾಲೇಬ್ ಮಾತ್ರ ವಾಗ್ದತ್ತ ದೇಶದ ಕುರಿತು ಒಳ್ಳೇ ವರದಿ ತಂದರು. ಹಾಗಾಗಿ ಯೆಹೋವನು ಇಸ್ರಾಯೇಲ್ಯರಿಗೆ, “ಯೆಫುನ್ನೆಯ ಮಗನಾದ ಕಾಲೇಬ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಯಾರೂ ನಿಮ್ಮ ನಿವಾಸಕ್ಕಾಗಿ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಸೇರುವದಿಲ್ಲ” ಎಂದು ಹೇಳಿದನು. (ಅರ. 14:30, 37, 38) ದೇವರ ಮಾರ್ಗದರ್ಶನದ ಮೇರೆಗೆ ಮೋಶೆ ಯೆಹೋಶುವನನ್ನು ಮುಂದಿನ ನಾಯಕನನ್ನಾಗಿ ನೇಮಿಸಿದನು. (ಅರ. 27:18-23) ಯೆಹೋಶುವನು ಇಸ್ರಾಯೇಲ್ಯರನ್ನು ಕಾನಾನ್‌ ದೇಶಕ್ಕೆ ಇನ್ನೇನು ಕರೆದೊಯ್ಯಲಿದ್ದಾಗ ಯೆಹೋವನು ಅವನಿಗೆ ಹೀಗೆ ಹೇಳಿದನು: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.”—ಯೆಹೋ. 1:9.

9. ಯೆಹೋವನ ಬಗ್ಗೆ ಮತ್ತು ಆತನ ಜನರ ಬಗ್ಗೆ ರಾಹಾಬಳಿಗೆ ಯಾವ ಅಭಿಪ್ರಾಯವಿತ್ತು?

9 ಯೆಹೋಶುವನು ಹೋದಲ್ಲೆಲ್ಲ ಯೆಹೋವ ದೇವರು ನಿಜವಾಗಿಯೂ ಅವನೊಂದಿಗಿದ್ದನು. ಉದಾಹರಣೆಗೆ, ಕಾನಾನಿನ ಯೆರಿಕೋ ಪಟ್ಟಣದ ಹತ್ತಿರ ಇಸ್ರಾಯೇಲ್ಯರು ಪಾಳೆಯ ಹೂಡಿದಾಗ ಏನಾಯಿತು ಗಮನಿಸಿ. ಅದು ಕ್ರಿ.ಪೂ. 1473. ಯೆರಿಕೋ ಪಟ್ಟಣವನ್ನು ನೋಡಿಕೊಂಡು ಬರಲು ಯೆಹೋಶುವನು ಇಬ್ಬರು ಗೂಢಚಾರರನ್ನು ಕಳುಹಿಸಿದನು. ಅಲ್ಲಿ ರಾಹಾಬಳೆಂಬ ವೇಶ್ಯೆಯ ಮನೆಗೆ ಆ ಗೂಢಚಾರರು ಹೋದರು. ಅವರನ್ನು ಸೆರೆ ಹಿಡಿಯಲಿಕ್ಕಾಗಿ ಯೆರಿಕೋವಿನ ರಾಜನು ಜನರನ್ನು ಕಳುಹಿಸಿದ್ದರಿಂದ ರಾಹಾಬಳು ಆ ಗೂಢಚಾರರನ್ನು ತನ್ನ ಮನೆಯ ಮಾಳಿಗೆಯ ಮೇಲೆ ಬಚ್ಚಿಟ್ಟು ಕಾಪಾಡಿದಳು. ಅವಳು ಅವರಿಗೆ, “ಯೆಹೋವನು ಈ ದೇಶವನ್ನು ನಿಮಗೆ ಕೊಟ್ಟಿರುವದನ್ನು ಬಲ್ಲೆನು . . . ಯೆಹೋವನು ನಿಮ್ಮ ಮುಂದೆ ಕೆಂಪುಸಮುದ್ರವನ್ನು ಬತ್ತಿಸಿಬಿಟ್ಟದ್ದನ್ನೂ . . . ಅಮೋರಿಯರ ಅರಸರಿಬ್ಬರನ್ನು ನಿರ್ಮೂಲಮಾಡಿದ್ದನ್ನೂ” ಕೇಳಿಸಿಕೊಂಡಿದ್ದೇವೆ ಎಂದು ಹೇಳಿದಳು. ಮಾತ್ರವಲ್ಲ, “ನಿಮ್ಮ ದೇವರಾದ ಯೆಹೋವನೊಬ್ಬನೇ ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ದೇವರು” ಎಂದು ಹೇಳಿದಳು. (ಯೆಹೋ. 2:9-11) ರಾಹಾಬಳು ಅಂದಿನ ಯೆಹೋವನ ಸಂಘಟನೆಯನ್ನು ಬೆಂಬಲಿಸಿದ್ದರಿಂದ ಯೆರಿಕೋ ಪಟ್ಟಣ ನಾಶವಾದಾಗ ಆತನು ಅವಳನ್ನೂ ಅವಳ ಕುಟುಂಬವನ್ನೂ ರಕ್ಷಿಸಿದನು.  (ಯೆಹೋ. 6:25) ರಾಹಾಬಳು ನಂಬಿಕೆ ತೋರಿಸಿದಳು. ಯೆಹೋವನಲ್ಲಿ ಭಕ್ತಿ ಅವಳಿಗಿತ್ತು ಮತ್ತು ಆತನ ಜನರಿಗೆ ಗೌರವ ತೋರಿಸಿದಳು.

ಒಂದನೇ ಶತಮಾನದಲ್ಲಿ ಭರದಿಂದ ಮುಂದೆ ಸಾಗಿದ ಸಂಘಟನೆ

10. (ಎ) ಯೇಸು ತನ್ನ ಸಮಯದ ಯೆಹೂದಿ ಧಾರ್ಮಿಕ ಮುಖಂಡರಿಗೆ ಏನಂದನು? (ಬಿ) ಆತನು ಹಾಗೆ ಹೇಳಿದ್ದೇಕೆ?

10 ಯೆಹೋಶುವನ ನೇತೃತ್ವದಲ್ಲಿ ಇಸ್ರಾಯೇಲ್ಯರು ಒಂದರ ನಂತರ ಇನ್ನೊಂದು ಪಟ್ಟಣವನ್ನು ವಶಮಾಡುತ್ತಾ ಕಾನಾನ್‌ ದೇಶವನ್ನು ಸ್ವಾಧೀನಮಾಡಿಕೊಂಡರು. ಆದರೆ ಸಮಯಾನಂತರ ಏನಾಯಿತು? ಸುಮಾರು 1,500 ವರ್ಷಗಳ ಅವಧಿಯಲ್ಲಿ ಇಸ್ರಾಯೇಲ್ಯರು ಪದೇ ಪದೇ ದೇವರಿಗೆ ಅವಿಧೇಯರಾಗುತ್ತಾ ಇದ್ದರು. ಯೆಹೋವನು ತನ್ನ ಮಗನನ್ನು ಭೂಮಿಗೆ ಕಳುಹಿಸುವ ಹೊತ್ತಿಗೆ ಇಸ್ರಾಯೇಲ್ಯರ ಅವಿಧೇಯತೆ ಹಾಗೂ ಆತನ ಪ್ರವಾದಿಗಳಿಗೆ ಅವರು ತೋರಿಸುವ ಅಸಡ್ಡೆ ಎಷ್ಟರ ಮಟ್ಟಿಗೆ ಮುಂದುವರಿದಿತ್ತೆಂದರೆ ಯೇಸು ಯೆರೂಸಲೇಮನ್ನು ‘ಪ್ರವಾದಿಗಳನ್ನು ಕೊಲ್ಲುವವಳೇ’ ಎಂದು ಕರೆದನು. (ಮತ್ತಾಯ 23:37, 38 ಓದಿ.) ಯೆಹೂದಿ ಧಾರ್ಮಿಕ ಮುಖಂಡರು ಅಪನಂಬಿಗಸ್ತರಾದದ್ದರಿಂದ ಅವರನ್ನು ಯೆಹೋವನು ತಿರಸ್ಕರಿಸಿಬಿಟ್ಟನು. ಹಾಗಾಗಿ, “ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಾಂಗಕ್ಕೆ ಕೊಡಲ್ಪಡುವುದು” ಎಂದು ಯೇಸು ಹೇಳಿದನು.—ಮತ್ತಾ. 21:43.

11, 12. (ಎ) ಒಂದನೇ ಶತಮಾನದಲ್ಲಿ ಯೆಹೋವನು ತನ್ನ ಅನುಗ್ರಹವನ್ನು ಇಸ್ರಾಯೇಲ್‌ ಜನಾಂಗದಿಂದ ತೆಗೆದು ಇನ್ನೊಂದು ಸಂಘಟನೆಗೆ ಕೊಟ್ಟನೆಂದು ಯಾವುದು ತೋರಿಸುತ್ತದೆ? (ಬಿ) ದೇವರ ಅನುಗ್ರಹವಿದ್ದ ಈ ಹೊಸ ಸಂಘಟನೆಯಲ್ಲಿ ಯಾರೆಲ್ಲ ಇದ್ದರು?

11 ಕ್ರಿ.ಶ. ಒಂದನೇ ಶತಮಾನದಲ್ಲಿ ಯೆಹೋವನು ಅಪನಂಬಿಗಸ್ತ ಇಸ್ರಾಯೇಲ್‌ ಜನಾಂಗವನ್ನು ತಳ್ಳಿಬಿಟ್ಟನು. ಹಾಗಾದರೆ ಅದರ ನಂತರ ಯೆಹೋವನಿಗೆ ಈ ಭೂಮಿಯಲ್ಲಿ ನಿಷ್ಠಾವಂತ ಸೇವಕರ ಒಂದು ಸಂಘಟಿತ ಗುಂಪಿರಲಿಲ್ಲವೇ? ಖಂಡಿತ ಇತ್ತು. ಏಕೆಂದರೆ ಯೆಹೋವನು ಇಸ್ರಾಯೇಲ್ಯರಿಂದ ತನ್ನ ಅನುಗ್ರಹವನ್ನು ತೆಗೆದು ಅದನ್ನು ಒಂದು ಹೊಸ ಸಂಘಟನೆಗೆ ದಯಪಾಲಿಸಿದನು. ಅದು ಯೇಸು ಕ್ರಿಸ್ತ ಹಾಗೂ ಆತನ ಬೋಧನೆಗಳ ಮೇಲೆ ಕೇಂದ್ರಿತವಾಗಿದ್ದು ಭರದಿಂದ ಮುಂದೆ ಸಾಗಿತು. ಈ ಸಂಘಟನೆ ಕ್ರಿ.ಶ. 33ರ ಪಂಚಾಶತ್ತಮ ದಿನದಂದು ಆರಂಭಗೊಂಡಿತು. ಆ ದಿನ ಯೆರೂಸಲೇಮಿನ ಒಂದು ಸ್ಥಳದಲ್ಲಿ ಸುಮಾರು 120 ಮಂದಿ ಶಿಷ್ಯರು ಕೂಡಿಬಂದಿದ್ದರು. ಆಗ “ರಭಸವಾಗಿ ಗಾಳಿಯು ಬೀಸುತ್ತಿದೆಯೋ ಎಂಬಂತೆ ಒಂದು ಶಬ್ದವು ಆಕಾಶದಿಂದ ಥಟ್ಟನೆ ಉಂಟಾಗಿ ಅವರು ಕುಳಿತುಕೊಂಡಿದ್ದ ಮನೆಯನ್ನೆಲ್ಲ ತುಂಬಿಕೊಂಡಿತು.” ಅನಂತರ “ಬೆಂಕಿಯ ಉರಿಯಂತಿದ್ದ ನಾಲಿಗೆಗಳು ಅವರಿಗೆ ಕಾಣಿಸಿಕೊಂಡವು ಮತ್ತು ಅವು ವಿಂಗಡವಾಗಿ ಅವರಲ್ಲಿ ಪ್ರತಿಯೊಬ್ಬರ ಮೇಲೆ ಒಂದೊಂದಾಗಿ ಕುಳಿತುಕೊಂಡವು. ಆಗ ಅವರೆಲ್ಲರೂ ಪವಿತ್ರಾತ್ಮದಿಂದ ತುಂಬಿದವರಾಗಿ, ಆ ಆತ್ಮವು ತಮಗೆ ಮಾತಾಡಲು ಶಕ್ತಿಯನ್ನು ಕೊಡುತ್ತಿದ್ದ ಪ್ರಕಾರ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಲಾರಂಭಿಸಿದರು.” (ಅ. ಕಾ. 2:1-4) ಈ ವಿಸ್ಮಯಕಾರಿ ಘಟನೆಯು ಕ್ರಿಸ್ತನ ಶಿಷ್ಯರಿರುವ ಈ ಹೊಸ ಸಂಘಟನೆಯನ್ನು ಯೆಹೋವನು ಬೆಂಬಲಿಸುತ್ತಿದ್ದಾನೆ ಎಂಬುದಕ್ಕೆ ಅಲ್ಲಗಳೆಯಲಾಗದ ರುಜುವಾತಾಗಿತ್ತು.

12 ಆ ರೋಮಾಂಚಕ ದಿನದಂದು, ಯೇಸುವಿನ ಅನುಯಾಯಿಗಳ ಸಂಖ್ಯೆಗೆ “ಸುಮಾರು ಮೂರು ಸಾವಿರ ಜನರು ಕೂಡಿಸಲ್ಪಟ್ಟರು.” ಅಲ್ಲದೆ “ರಕ್ಷಿಸಲ್ಪಡುತ್ತಿದ್ದವರನ್ನು ಯೆಹೋವನು ಪ್ರತಿದಿನವೂ ಅವರೊಂದಿಗೆ ಸೇರಿಸುತ್ತಾ ಇದ್ದನು.” (ಅ. ಕಾ. 2:41, 47) ಒಂದನೇ ಶತಮಾನದಲ್ಲಿ ಸಾರುವ ಕೆಲಸ ಎಷ್ಟು ಯಶಸ್ವಿಯಾಯಿತೆಂದರೆ, “ದೇವರ ವಾಕ್ಯವು ಅಭಿವೃದ್ಧಿಹೊಂದುತ್ತಾ ಮತ್ತು ಯೆರೂಸಲೇಮಿನಲ್ಲಿ ಶಿಷ್ಯರ ಸಂಖ್ಯೆಯು ಬಹಳವಾಗಿ ಹೆಚ್ಚುತ್ತಾ ಹೋಯಿತು.” ಅಷ್ಟೇ ಅಲ್ಲದೆ, “ಯಾಜಕರಲ್ಲಿಯೂ ಬಹು ಜನರು ಕ್ರಿಸ್ತನಂಬಿಕೆಗೆ ವಿಧೇಯರಾಗಲಾರಂಭಿಸಿದರು.” (ಅ. ಕಾ. 6:7) ಈ ಹೊಸ ಸಂಘಟನೆಯ ಭಾಗವಾದವರು ಸಾರಿದ ಸತ್ಯಗಳನ್ನು ಅನೇಕ ಯಥಾರ್ಥ ಜನರು ಸ್ವೀಕರಿಸಿದರು. ಅನಂತರ ಯೆಹೋವನು ತಾನು ಈ ಹೊಸ ಸಂಘಟನೆಯೊಂದಿಗಿದ್ದೇನೆ ಎನ್ನುವುದನ್ನು ಪುನಃ ಒಮ್ಮೆ ರುಜುಪಡಿಸಿದನು. ಹೇಗೆ? ‘ಅನ್ಯಜನಾಂಗಗಳ ಜನರನ್ನು’ ಕ್ರೈಸ್ತ ಸಭೆಗೆ ಕೂಡಿಸುವ ಮೂಲಕವೇ.—ಅಪೊಸ್ತಲರ ಕಾರ್ಯಗಳು 10:44, 45 ಓದಿ.

13. ದೇವರು ಹೊಸ ಸಂಘಟನೆಗೆ ಯಾವ ನೇಮಕವನ್ನು ಕೊಟ್ಟನು?

13 ತಮಗೆ ಯಾವ ದೇವದತ್ತ ನೇಮಕ ಇದೆ ಎನ್ನುವುದರಲ್ಲಿ ಕ್ರಿಸ್ತನ ಹಿಂಬಾಲಕರಿಗೆ ಯಾವುದೇ ಸಂಶಯವಿರಲಿಲ್ಲ. ಸ್ವತಃ ಯೇಸುವೇ ಅವರಿಗೆ ಮಾದರಿಯಿಟ್ಟಿದ್ದನು. ದೀಕ್ಷಾಸ್ನಾನವಾದ ಬಳಿಕ ಅವನು ಕೂಡಲೇ, “ಸ್ವರ್ಗದ ರಾಜ್ಯವು ಸಮೀಪಿಸಿದೆ” ಎಂದು ಸಾರಿಹೇಳಲು ಆರಂಭಿಸಿದನು. (ಮತ್ತಾ. 4:17) ಅದನ್ನೇ ಮಾಡಲು ತನ್ನ ಶಿಷ್ಯರಿಗೆ ಕಲಿಸಿದನು. “ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದು ಹೇಳಿದನು. (ಅ. ಕಾ. 1:8) ಆರಂಭದ ಕ್ರೈಸ್ತರಿಗೆ ತಾವು ಏನು ಮಾಡಬೇಕಿದೆ ಎಂದು ಅರ್ಥವಾಗಿತ್ತೇ? ಹೌದು. ಇದು ಹೇಗೆ ತಿಳಿಯುತ್ತದೆಂದರೆ, ಪೌಲ ಮತ್ತು ಬಾರ್ನಬರು ಪಿಸಿದ್ಯದ ಅಂತಿಯೋಕ್ಯಕ್ಕೆ ಬಂದಾಗ ತಮ್ಮನ್ನು ವಿರೋಧಿಸುತ್ತಿದ್ದ ಯೆಹೂದ್ಯರಿಗೆ ಧೈರ್ಯದಿಂದ ಹೀಗೆ ಹೇಳಿದರು: “ದೇವರ ವಾಕ್ಯವನ್ನು ಮೊದಲು ನಿಮಗೆ ತಿಳಿಸುವುದು ಅವಶ್ಯವಾಗಿತ್ತು. ಆದರೆ ನೀವು ಅದನ್ನು ತಿರಸ್ಕರಿಸಿ  ನಿಮ್ಮನ್ನು ನಿತ್ಯಜೀವಕ್ಕೆ ಯೋಗ್ಯರೆಂದು ತೀರ್ಪುಮಾಡಿಕೊಳ್ಳದೇ ಹೋದುದರಿಂದ ನಾವು ಅನ್ಯಜನಾಂಗಗಳ ಕಡೆಗೆ ತಿರುಗುತ್ತೇವೆ. ಸತ್ಯಾಂಶವೇನೆಂದರೆ ಯೆಹೋವನು ನಮಗೆ, ‘ನೀನು ಭೂಮಿಯ ಕಟ್ಟಕಡೆಯ ವರೆಗೂ ರಕ್ಷಣೆಯ ಸಾಧನವಾಗಿರುವಂತೆ ನಾನು ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ನೇಮಿಸಿದ್ದೇನೆ’ ಎಂದು ಅಪ್ಪಣೆಕೊಟ್ಟಿದ್ದಾನೆ.” (ಅ. ಕಾ. 13:14, 45-47) ಹೀಗೆ ಒಂದನೇ ಶತಮಾನದಿಂದಲೂ ಯೆಹೋವನ ಸಂಘಟನೆಯ ಭೂಭಾಗವು ರಕ್ಷಣೆಗಾಗಿ ಆತನು ಮಾಡಿರುವ ಏರ್ಪಾಡನ್ನು ಸಾರಿಹೇಳುತ್ತಿದೆ.

ಅನೇಕರು ನಾಶವಾದರು, ದೇವರ ಸೇವಕರಾದರೋ ಸಂರಕ್ಷಿಸಲ್ಪಟ್ಟರು

14. (ಎ) ಒಂದನೇ ಶತಮಾನದಲ್ಲಿ ಯೆರೂಸಲೇಮಿಗೆ ಏನಾಯಿತು? (ಬಿ) ಆದರೆ ಯಾರು ಪಾರಾದರು?

14 ಹೆಚ್ಚಿನ ಯೆಹೂದ್ಯರು ಸುವಾರ್ತೆಗೆ ಕಿವಿಗೊಡಲಿಲ್ಲ. ಅವರ ಮೇಲೆ ಬರಲಿದ್ದ ದೊಡ್ಡ ವಿಪತ್ತಿನ ಕುರಿತು ಯೇಸು ಎಚ್ಚರಿಸಿದಾಗಲೂ ಅವರು ಕೇಳಲಿಲ್ಲ. ಯೇಸು ತನ್ನ ಶಿಷ್ಯರಿಗೆ ಹೀಗೆ ಎಚ್ಚರಿಸಿದ್ದನು: “ಯೆರೂಸಲೇಮ್‌ ಪಟ್ಟಣವು ಶಿಬಿರ ಹೂಡಿರುವ ಸೈನ್ಯಗಳಿಂದ ಸುತ್ತುವರಿಯಲ್ಪಟ್ಟಿರುವುದನ್ನು ನೀವು ನೋಡುವಾಗ ಅದರ ಹಾಳುಗೆಡಹುವಿಕೆ ಸಮೀಪಿಸಿದೆ ಎಂದು ತಿಳಿದುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗತೊಡಗಲಿ, ಯೆರೂಸಲೇಮ್‌ ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ ಮತ್ತು ಹಳ್ಳಿ ಪ್ರದೇಶಗಳಲ್ಲಿರುವವರು ಅದರೊಳಗೆ ಪ್ರವೇಶಿಸದಿರಲಿ.” (ಲೂಕ 21:20, 21) ಯೇಸು ಮುಂತಿಳಿಸಿದಂತೆಯೇ ಆಯಿತು. ಕ್ರಿ.ಶ. 66ರಲ್ಲಿ ಯೆಹೂದ್ಯರು ರೋಮ್‍ನ ವಿರುದ್ಧ ದಂಗೆಯೆದ್ದಾಗ ಸೆಸ್ಟಿಯಸ್‌ ಗ್ಯಾಲಸನು ರೋಮಿನ ಸೈನ್ಯದೊಂದಿಗೆ ಬಂದು ಯೆರೂಸಲೇಮ್‌ ಪಟ್ಟಣವನ್ನು ಸುತ್ತುವರಿದನು. ಆದರೆ ರೋಮಿನ ಸೈನ್ಯ ಇದ್ದಕ್ಕಿದ್ದಂತೆ ಮರಳಿಹೋಯಿತು. ಇದು ಯೇಸುವಿನ ಹಿಂಬಾಲಕರಿಗೆ ಯೆರೂಸಲೇಮ್‌ ಮತ್ತು ಯೂದಾಯದಿಂದ ಓಡಿಹೋಗಲು ಅವಕಾಶ ಮಾಡಿಕೊಟ್ಟಿತು. ಇತಿಹಾಸಕಾರ ಯುಸೀಬಿಯಸ್‌ ಪ್ರಕಾರ, ಅನೇಕರು ಯೊರ್ದನ್‌ ನದಿಯಾಚೆ ಇರುವ ಪೆರಿಯದ ಪೆಲ ಎಂಬಲ್ಲಿಗೆ ಓಡಿಹೋದರು. ಕ್ರಿ.ಶ. 70ರಲ್ಲಿ ಜನರಲ್‌ ಟೈಟಸ್‌ ನೇತೃತ್ವದಲ್ಲಿ ರೋಮಿನ ಸೈನ್ಯ ಪುನಃ ಯೆರೂಸಲೇಮನ್ನು ಮುತ್ತಿಗೆ ಹಾಕಿ ಅದನ್ನು ಸಂಪೂರ್ಣವಾಗಿ ನಾಶಮಾಡಿತು. ಆದರೆ ನಂಬಿಗಸ್ತ ಕ್ರೈಸ್ತರು ಯೇಸುವಿನ ಎಚ್ಚರಿಕೆಗೆ ಕಿವಿಗೊಟ್ಟ ಕಾರಣ ಜೀವ ಉಳಿಸಿಕೊಂಡರು.

15. ಯಾವುದರ ಹೊರತಾಗಿಯೂ ಕ್ರೈಸ್ತರ ಸಂಖ್ಯೆ ಹೆಚ್ಚುತ್ತಾ ಹೋಯಿತು?

15 ಒಂದನೇ ಶತಮಾನದಲ್ಲಿದ್ದ ಕ್ರಿಸ್ತನ ಹಿಂಬಾಲಕರು ಸಂಕಷ್ಟ, ಹಿಂಸೆಯಂಥ ನಂಬಿಕೆಯ ಪರೀಕ್ಷೆಗಳನ್ನು ಎದುರಿಸಿದರಾದರೂ ಕ್ರೈಸ್ತರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. (ಅ. ಕಾ. 11:19-21; 19:1, 19, 20) ಆರಂಭದ ಆ ಕ್ರೈಸ್ತರು ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದಲು ಕಾರಣವೇನು? ಕ್ರೈಸ್ತ ಸಭೆಯ ಮೇಲೆ ಯೆಹೋವ ದೇವರ ಆಶೀರ್ವಾದವಿದ್ದದ್ದೇ!—ಜ್ಞಾನೋ. 10:22.

16. ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಪ್ರತಿಯೊಬ್ಬ ಕ್ರೈಸ್ತನು ಏನು ಮಾಡಬೇಕಿತ್ತು?

16 ಆದರೆ ಸಭೆಯಲ್ಲಿದ್ದ ಪ್ರತಿಯೊಬ್ಬ ಕ್ರೈಸ್ತನು ಆಧ್ಯಾತ್ಮಿಕವಾಗಿ ಅಭಿವೃದ್ಧಿ ಹೊಂದಲು ಸ್ವಂತ ಪ್ರಯತ್ನ ಹಾಕಬೇಕಿತ್ತು. ಶಾಸ್ತ್ರಗ್ರಂಥವನ್ನು ಶ್ರದ್ಧೆಯಿಂದ ಅಧ್ಯಯನ ಮಾಡುವುದು, ಆರಾಧನೆಗಾಗಿ ಕೂಟಗಳಿಗೆ ನಿಯತವಾಗಿ ಕೂಡಿಬರುವುದು ಮತ್ತು ಹುರುಪಿನಿಂದ ರಾಜ್ಯದ ಸುವಾರ್ತೆಯನ್ನು ಸಾರುವುದು ತುಂಬ ಪ್ರಾಮುಖ್ಯವಾಗಿತ್ತು. ಈ ಎಲ್ಲ ಚಟುವಟಿಕೆಗಳು ಆ ಸಮಯದ ದೇವಸೇವಕರ ಆಧ್ಯಾತ್ಮಿಕ ಆರೋಗ್ಯವನ್ನು ವರ್ಧಿಸಿದವು ಮತ್ತು ಅವರ ಐಕ್ಯತೆಗೆ ಇಂಬು ಕೊಟ್ಟವು. ಈ ಮಾತು ಇಂದಿಗೂ ನಿಜ. ಸುವ್ಯವಸ್ಥಿತವಾಗಿದ್ದ ಆಗಿನ ಕ್ರೈಸ್ತ ಸಭೆಯೊಂದಿಗೆ ಸಹವಾಸ ಮಾಡಿದ ಎಲ್ಲರು, ಸಹಾಯ ಮಾಡಲು ಸದಾ ಸಿದ್ಧರಿದ್ದ ಮೇಲ್ವಿಚಾರಕರಿಂದ ಮತ್ತು ಶುಶ್ರೂಷಾ ಸೇವಕರಿಂದ ತುಂಬ ಪ್ರಯೋಜನ ಪಡೆದರು. (ಫಿಲಿ. 1:1; 1 ಪೇತ್ರ 5:1-4) ಸಂಚರಣ ಮೇಲ್ವಿಚಾರಕರಾದ ಪೌಲ ಮತ್ತು ಇತರರು ಸಭೆಗಳಿಗೆ ಭೇಟಿಕೊಟ್ಟಾಗ ಆ ಕ್ರೈಸ್ತರಿಗೆ ಇನ್ನೆಷ್ಟು ಖುಷಿಯಾಗಿರಬೇಕೆಂದು ಊಹಿಸಿಕೊಳ್ಳಿ! (ಅ. ಕಾ. 15:36, 40, 41) ಒಂದನೇ ಶತಮಾನದ ಕ್ರೈಸ್ತರ ಆರಾಧನೆ ಮತ್ತು ನಮ್ಮ ಆರಾಧನೆ ಮಧ್ಯೆ ಎಷ್ಟೋ ಸಮಾನತೆಗಳಿವೆ. ಅಂದು ಮತ್ತು ಇಂದು ಯೆಹೋವನು ಇಂಥ ಒಂದು ಸುವ್ಯವಸ್ಥಿತ ಏರ್ಪಾಡನ್ನು ಮಾಡಿರುವುದಕ್ಕಾಗಿ ನಾವೆಷ್ಟೋ ಕೃತಜ್ಞರು! *

17. ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಿದ್ದೇವೆ?

17 ಸೈತಾನನ ಈ ದುಷ್ಟ ಲೋಕವು ಇನ್ನೇನು ಕೊನೆಯುಸಿರು ಎಳೆಯಲಿದೆ. ಆದರೆ ಯೆಹೋವನ ವಿಶ್ವವ್ಯಾಪಿ ಸಂಘಟನೆಯ ಭೂಭಾಗವು ಹಿಂದೆಂದಿಗಿಂತಲೂ ವೇಗದಿಂದ ಮುಂದೆ ಸಾಗುತ್ತಿದೆ. ಅದರೊಂದಿಗೆ ನೀವೂ ವೇಗವಾಗಿ ಮುಂದೆ ಸಾಗುತ್ತಿದ್ದೀರೋ? ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಿದ್ದೀರೋ? ಅದನ್ನು ಮಾಡುವುದು ಹೇಗೆಂದು ಮುಂದಿನ ಲೇಖನ ತಿಳಿಸುವುದು.

^ ಪ್ಯಾರ. 16 2002, ಜುಲೈ 15ರ ಕಾವಲಿನಬುರುಜುವಿನಲ್ಲಿರುವ “ಕ್ರೈಸ್ತರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುತ್ತಾರೆ” ಮತ್ತು “ಅವರು ಸತ್ಯವನ್ನು ಅನುಸರಿಸಿ ನಡೆಯುತ್ತಿದ್ದಾರೆ” ಎಂಬ ಲೇಖನಗಳನ್ನು ನೋಡಿ. ಯೆಹೋವನ ಸಂಘಟನೆಯ ಭೂಭಾಗದ ಕುರಿತು ಸವಿವರ ಮಾಹಿತಿಗಾಗಿ ಪ್ರೊಕ್ಲೇಮರ್ಸ್‌ ಪುಸ್ತಕ ಮತ್ತು ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ ಎಂಬ ಕಿರುಹೊತ್ತಗೆ ನೋಡಿ.