ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ಸುವರ್ಣ ನಿಯಮವನ್ನು ಪಾಲಿಸಿ

ಸೇವೆಯಲ್ಲಿ ಸುವರ್ಣ ನಿಯಮವನ್ನು ಪಾಲಿಸಿ

“ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು.”—ಮತ್ತಾ. 7:12.

1. ನಾವು ಸೇವೆಯಲ್ಲಿ ನಡೆದುಕೊಳ್ಳುವ ರೀತಿ ಜನರನ್ನು ಪ್ರಭಾವಿಸುತ್ತದಾ? ಉದಾಹರಣೆ ಕೊಡಿ. (ಮೇಲಿರುವ ಚಿತ್ರ ನೋಡಿ.)

ಕೆಲವು ವರ್ಷಗಳ ಹಿಂದೆ ಫಿಜಿ ದೇಶದ ಕ್ರೈಸ್ತ ದಂಪತಿಗಾದ ಒಂದು ಅನುಭವ ಗಮನಿಸಿ. ಅವರು ಕ್ರಿಸ್ತನ ಮರಣದ ಸ್ಮರಣೆಯ ಆಮಂತ್ರಣ ಪತ್ರವನ್ನು ಎಲ್ಲರಿಗೂ ಕೊಡುತ್ತಿದ್ದರು. ಒಬ್ಬ ಸ್ತ್ರೀಯೊಂದಿಗೆ ಆಕೆಯ ಮನೆಯ ಹೊರಗೆ ನಿಂತು ಮಾತಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಮಳೆ ಶುರುವಾಯಿತು. ಸಹೋದರನು ಒಂದು ಛತ್ರಿಯನ್ನು ಆ ಸ್ತ್ರೀಗೆ ಕೊಟ್ಟನು. ಇನ್ನೊಂದನ್ನು ಅವನೂ ಅವನ ಪತ್ನಿಯೂ ಬಳಸಿದರು. ಸ್ಮರಣೆಗೆ ಆ ಸ್ತ್ರೀ ಹಾಜರಿದ್ದಳು. ಅದನ್ನು ನೋಡಿ ದಂಪತಿಗೆ ತುಂಬ ಖುಷಿಯಾಯಿತು. ಆವತ್ತು ಸಾಕ್ಷಿಗಳು ಏನು ಮಾತಾಡಿದರೋ ಅದು ತನಗೆ ಅಷ್ಟು ನೆನಪಿಲ್ಲ, ಆದರೆ ಅವರ ದಯಾಪರತೆ ತನ್ನ ಮನಸ್ಸನ್ನು ಎಷ್ಟು ಸ್ಪರ್ಶಿಸಿತೆಂದರೆ ಸ್ಮರಣೆಗೆ ಹಾಜರಾಗಲೇಬೇಕೆಂದು ತನಗನಿಸಿತು ಎಂದಳಾಕೆ. ಈ ಒಳ್ಳೇ ಫಲಿತಾಂಶಕ್ಕೆ ಕಾರಣ ಯಾವುದು? ಆ ದಂಪತಿ ಸುವರ್ಣ ನಿಯಮ ಎಂದು ಕರೆಯಲ್ಪಡುವ ನಿಯಮವನ್ನು ಪಾಲಿಸಿದ್ದೇ.

2. (ಎ) ಸುವರ್ಣ ನಿಯಮ ಯಾವುದು? (ಬಿ) ಆ ನಿಯಮವನ್ನು ನಾವು ಪಾಲಿಸುವುದು ಹೇಗೆ?

2 ಯಾವುದು ಆ ಸುವರ್ಣ ನಿಯಮ? “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು” ಎಂದು ಯೇಸು ಕೊಟ್ಟ ಸಲಹೆಯೇ ಅದು. (ಮತ್ತಾ. 7:12) ನಾವು ಈ ಸುವರ್ಣ ನಿಯಮವನ್ನು ಪಾಲಿಸುವುದು ಹೇಗೆ? ಮುಖ್ಯವಾಗಿ ಎರಡು ಹೆಜ್ಜೆಗಳನ್ನು ತಕ್ಕೊಳ್ಳುವ ಮೂಲಕ. ಮೊದಲಾಗಿ, ‘ಆ ವ್ಯಕ್ತಿಯ ಪರಿಸ್ಥಿತಿಯಲ್ಲಿ ನಾನಿದ್ದರೆ ಆ ವ್ಯಕ್ತಿ ನನ್ನನ್ನು ಹೇಗೆ ಉಪಚರಿಸಬೇಕೆಂದು ಬಯಸುವೆ?’ ಎಂದು ಕೇಳಿಕೊಳ್ಳಬೇಕು. ಅನಂತರ ಆ ವ್ಯಕ್ತಿಯನ್ನು ಅದೇರೀತಿ ಉಪಚರಿಸಲು ನಮ್ಮಿಂದ ಆಗುವುದೆಲ್ಲವನ್ನು ಮಾಡಬೇಕು.—1 ಕೊರಿಂ. 10:24.

3, 4. (ಎ) ನಾವು ಸುವರ್ಣ ನಿಯಮವನ್ನು ಪಾಲಿಸಬೇಕಾಗಿರುವುದು ಜೊತೆವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಮಾತ್ರ ಅಲ್ಲ ಏಕೆ? ವಿವರಿಸಿ. (ಬಿ) ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

 3 ನಾವು ಸುವರ್ಣ ನಿಯಮವನ್ನು ಹೆಚ್ಚಾಗಿ ನಮ್ಮ ಜೊತೆವಿಶ್ವಾಸಿಗಳೊಂದಿಗೆ ವ್ಯವಹರಿಸುವಾಗ ಪಾಲಿಸುತ್ತೇವೆ. ಆದರೆ ಅದು ಅಷ್ಟಕ್ಕೇ ಸೀಮಿತವಾಗಿದೆಯೋ? ಇಲ್ಲ. ನಿಜವೇನೆಂದರೆ ಎಲ್ಲ ಜನರನ್ನು, ಮಾತ್ರವಲ್ಲ ವೈರಿಗಳನ್ನು ಕೂಡ ಹೇಗೆ ಉಪಚರಿಸಬೇಕೆಂದು ಹೇಳುವಾಗ ಯೇಸು ಈ ಸುವರ್ಣ ನಿಯಮವನ್ನು ತಿಳಿಸಿದನು. (ಲೂಕ 6:27, 28, 31, 35 ಓದಿ.) ವೈರಿಗಳೊಂದಿಗೆ ವ್ಯವಹರಿಸುವಾಗಲೇ ಈ ನಿಯಮವನ್ನು ನಾವು ಪಾಲಿಸಬೇಕಾದರೆ ಸುವಾರ್ತೆ ಸಾರುವಾಗ ಇದನ್ನು ಅನುಸರಿಸುವುದು ಹೆಚ್ಚು ಮಹತ್ವದ್ದಲ್ಲವೇ? ಏಕೆಂದರೆ ಆ ಜನರಲ್ಲಿ ಎಷ್ಟೋ ಮಂದಿ “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರುವವರು ಆಗಿರಬಹುದು.—ಅ. ಕಾ. 13:48.

4 ಹಾಗಾಗಿ ಜನರಿಗೆ ಸುವಾರ್ತೆ ಸಾರುವಾಗ ಸುವರ್ಣ ನಿಯಮವನ್ನು ಹೇಗೆ ಅನ್ವಯಿಸಬಹುದೆಂದು ನಾವೀಗ ತಿಳಿಯೋಣ. ಅದಕ್ಕಾಗಿ ನಾಲ್ಕು ಪ್ರಶ್ನೆಗಳನ್ನು ನಾವು ಮನಸ್ಸಿನಲ್ಲಿಡಬೇಕು. ಅವು, ‘ನಾನು ಭೇಟಿಯಾಗಿರುವ ವ್ಯಕ್ತಿ ಯಾರು? ನಾನು ಅವರನ್ನು ಎಲ್ಲಿ ಭೇಟಿಮಾಡುತ್ತೇನೆ? ಜನರನ್ನು ಯಾವಾಗ ಭೇಟಿಯಾದರೆ ಅತ್ಯುತ್ತಮ? ಅವರನ್ನು ಹೇಗೆ ಮಾತಾಡಿಸಬೇಕು?’ ಈ ಪ್ರಶ್ನೆಗಳು, ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅದಕ್ಕನುಗುಣವಾಗಿ ಅವರೊಂದಿಗೆ ಮಾತಾಡಲು ನಮಗೆ ಹೇಗೆ ಸಹಾಯಮಾಡುವವು ಎಂದು ಈಗ ನೋಡೋಣ.—1 ಕೊರಿಂ. 9:19-23.

ನಾನು ಯಾರನ್ನು ಭೇಟಿಯಾಗುತ್ತಿದ್ದೇನೆ?

5. ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಂಡರೆ ಒಳ್ಳೇದು?

5 ಸೇವೆಯಲ್ಲಿ ಭೇಟಿಯಾಗುವ ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬ ವ್ಯಕ್ತಿಗೂ ಅವನದ್ದೇ ಆದ ಹಿನ್ನೆಲೆ, ಸಮಸ್ಯೆಗಳು ಇರುತ್ತವೆ. (2 ಪೂರ್ವ. 6:29) ವ್ಯಕ್ತಿಯೊಬ್ಬನಿಗೆ ಸುವಾರ್ತೆ ಸಾರಲು ಹೋದಾಗ ಹೀಗೆ ಕೇಳಿಕೊಳ್ಳಿ: ‘ಒಂದುವೇಳೆ ಈ ವ್ಯಕ್ತಿ ಸಾಕ್ಷಿಯಾಗಿದ್ದು ನಾನು ಮನೆಯವನಾಗಿದ್ದರೆ, ನನ್ನನ್ನು ಅವರು ಯಾವ ರೀತಿಯಲ್ಲಿ ಉಪಚರಿಸಬೇಕೆಂದು ಬಯಸುತ್ತೇನೆ? ಯಾರೋ ಒಬ್ಬರನ್ನು ಭೇಟಿಮಾಡಿದ್ದೇನೆ ಎಂಬಂತೆ ಮಾತಾಡಿಸಬೇಕೆಂದು ಬಯಸುತ್ತೇನಾ? ಅಥವಾ ನನ್ನಲ್ಲಿ ಆಸಕ್ತಿವಹಿಸಿ ನನ್ನ ಬಗ್ಗೆ ತಿಳಿದುಕೊಳ್ಳಬೇಕೆಂದು ಇಷ್ಟಪಡುತ್ತೇನಾ?’ ಹೀಗೆ ಆಲೋಚಿಸುವುದು ನಾವು ಭೇಟಿಯಾಗುವ ಒಬ್ಬೊಬ್ಬ ವ್ಯಕ್ತಿಯ ಕುರಿತು ಯೋಚಿಸಿ ಸುವಾರ್ತೆ ಸಾರಲು ನಮಗೆ ನೆರವಾಗುವುದು.

6, 7. ಸೇವೆಗೆ ಹೋದಾಗ ಯಾರಾದರೂ ಒರಟಾಗಿ ಮಾತಾಡುವಲ್ಲಿ ನಾವೇನು ಮಾಡಬೇಕು?

6 ‘ಇವನು ಕೆಟ್ಟವನು’ ‘ಇವನು ಒಳ್ಳೆಯವನಲ್ಲ’ ಎಂಬ ಹಣೆಪಟ್ಟಿಯನ್ನು ಬೇರೆಯವರು ತಮಗೆ ಹಚ್ಚುವುದು ಯಾರಿಗೂ ಇಷ್ಟವಿರುವುದಿಲ್ಲ. ನಮ್ಮ ಬಗ್ಗೆಯೇ ಒಂದು ಉದಾಹರಣೆ ತಕ್ಕೊಳ್ಳೋಣ. ‘ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿರಲಿ’ ಎಂಬ ಬೈಬಲ್‌ ಸಲಹೆಗನುಸಾರ ನಡೆದುಕೊಳ್ಳಲು ಕ್ರೈಸ್ತರಾದ ನಾವೆಲ್ಲರೂ ಪ್ರಯತ್ನಿಸುತ್ತೇವೆ. (ಕೊಲೊ. 4:6) ಆದರೂ ಅಪರಿಪೂರ್ಣರಾಗಿರುವ ಕಾರಣ ಕೆಲವೊಮ್ಮೆ ತಪ್ಪಾಗಿ ಮಾತಾಡಿ ನಂತರ ಪರಿತಪಿಸುತ್ತೇವೆ. (ಯಾಕೋ. 3:2) ಒಂದು ದಿನ ಏನೋ ಬೇಸರದಲ್ಲಿರುವ ಕಾರಣ ಅಥವಾ ಯಾವುದೋ ಸಮಸ್ಯೆಯಿರುವ ಕಾರಣ ಯಾರ ಮೇಲಾದರೂ ರೇಗಾಡಿಬಿಡಬಹುದು. ಆಗ ಅವರು ನಮಗೆ ‘ಇವನೊಬ್ಬ ಸಿಡುಕ’ ‘ಒಂಚೂರೂ ದಯೆದಾಕ್ಷಿಣ್ಯ ಇವನಿಗಿಲ್ಲ’ ಎಂದು ಹೇಳುವಲ್ಲಿ ಹೇಗನಿಸಬಹುದು? ಆ ವ್ಯಕ್ತಿ ನಮ್ಮನ್ನು ಅರ್ಥಮಾಡಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಅದೇ ರೀತಿ ನಾವೂ ಬೇರೆಯವರನ್ನು ಅರ್ಥಮಾಡಿಕೊಳ್ಳಬೇಕು ಅಲ್ಲವೇ?

7 ಸೇವೆಯಲ್ಲಿ ಮನೆಯವರು ಒರಟಾಗಿ ಮಾತಾಡಿದಾಗ ಅವನು ಯಾಕೆ ಆ ರೀತಿ ವರ್ತಿಸುತ್ತಿದ್ದಾನೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೇದು. ಅವನಿಗೆ ಆ ದಿನ ಶಾಲೆ-ಕಾಲೇಜಿನಲ್ಲೋ ಕೆಲಸದ ಸ್ಥಳದಲ್ಲೋ ತುಂಬ ಒತ್ತಡ ಇದ್ದಿರಬೇಕು ಅಥವಾ ಅವನು ಗಂಭೀರ ಕಾಯಿಲೆಯಿಂದ ಬಳಲುತ್ತಿರಬಹುದು. ಮೊದಲು ಸಿಟ್ಟಿನಿಂದ ಮಾತಾಡಿದವರು, ಸಾಕ್ಷಿಗಳು ಸೌಮ್ಯಭಾವದಿಂದ, ಗೌರವದಿಂದ ಪ್ರತಿಕ್ರಿಯಿಸಿದ ಮೇಲೆ ಸುವಾರ್ತೆಗೆ ಕಿವಿಗೊಟ್ಟಿರುವ ಸಂದರ್ಭಗಳು ಅನೇಕ.—ಜ್ಞಾನೋ. 15:1; 1 ಪೇತ್ರ 3:15.

8. ನಾವು “ಎಲ್ಲ ರೀತಿಯ ಜನರಿಗೆ” ಸುವಾರ್ತೆ ಸಾರಲು ಹಿಂಜರಿಯಬಾರದು ಏಕೆ?

8 ಸುವಾರ್ತೆಯು ಬೇರೆ ಬೇರೆ ಹಿನ್ನೆಲೆಯ ಜನರಿಗೆ ತಲಪುತ್ತಿದೆ. ಉದಾಹರಣೆಗೆ, ಕಾವಲಿನಬುರುಜು ಪತ್ರಿಕೆಯಲ್ಲಿ ಮೂಡಿಬಂದ “ಬದುಕನ್ನೇ ಬದಲಾಯಿಸಿತು ಬೈಬಲ್‌” ಎಂಬ ಲೇಖನ ಸರಣಿಯಲ್ಲಿ ಕಳೆದ ಕೆಲವೇ ವರ್ಷಗಳಲ್ಲಿ 60ಕ್ಕಿಂತ ಹೆಚ್ಚು ಮಂದಿಯ ಅನುಭವಗಳನ್ನು ಪ್ರಕಟಿಸಲಾಯಿತು. ಅವರಲ್ಲಿ ಕೆಲವರು ಈ ಮೊದಲು ಕಳ್ಳರು, ಕುಡುಕರು, ಗೂಂಡಾಗಳು, ಅಮಲೌಷಧ ವ್ಯಸನಿಗಳು ಆಗಿದ್ದರು. ಇನ್ನು ಕೆಲವರು ರಾಜಕಾರಣಿಗಳು, ಧಾರ್ಮಿಕ ಮುಖಂಡರು, ತಮ್ಮ ವೃತ್ತಿಯನ್ನೇ ಬದುಕಾಗಿ ಮಾಡಿಕೊಂಡವರು ಆಗಿದ್ದರು. ಕೆಲವರು ಅನೈತಿಕ ಜೀವನ ನಡೆಸುತ್ತಿದ್ದರು. ಹಾಗಿದ್ದರೂ ಅವರೆಲ್ಲರೂ ಸುವಾರ್ತೆಗೆ ಕಿವಿಗೊಟ್ಟರು; ಬೈಬಲ್‌ ಅಧ್ಯಯನ ಮಾಡತೊಡಗಿದರು;  ಜೀವನದಲ್ಲಿ ಬದಲಾವಣೆ ಮಾಡಿದರು; ಸತ್ಯವನ್ನು ತಮ್ಮದಾಗಿ ಮಾಡಿಕೊಂಡರು. ಹಾಗಾಗಿ ನಾವು ಯಾವತ್ತೂ ಯಾರ ಬಗ್ಗೆಯೂ ‘ಇವರು ಸುವಾರ್ತೆಗೆ ಕಿವಿಗೊಡುವುದಿಲ್ಲ’ ಎಂದು ನೆನಸಬಾರದು. (1 ಕೊರಿಂಥ 6:9-11 ಓದಿ.) ಬದಲಿಗೆ, ‘ಎಲ್ಲ ರೀತಿಯ ಜನರು’ ಸತ್ಯವನ್ನು ಸ್ವೀಕರಿಸಲು ಸಾಧ್ಯವಿದೆ ಎನ್ನುವುದನ್ನು ಮನಸ್ಸಿನಲ್ಲಿಡಬೇಕು.—1 ಕೊರಿಂ. 9:22.

ನಾನು ಜನರನ್ನು ಎಲ್ಲಿ ಭೇಟಿಮಾಡುತ್ತೇನೆ?

9. ಬೇರೆಯವರ ಮನೆಯನ್ನು ಗೌರವದಿಂದ ಕಾಣಬೇಕು ಏಕೆ?

9 ಜನರಿಗೆ ಸುವಾರ್ತೆ ಸಾರಲು ನಾವು ಹೆಚ್ಚಾಗಿ ಅವರನ್ನು ಎಲ್ಲಿ ಭೇಟಿಮಾಡುತ್ತೇವೆ? ಅವರ ಮನೆಗಳಲ್ಲಿ. (ಮತ್ತಾ. 10:11-13) ನಮ್ಮ ಮನೆಯ ಬಗ್ಗೆ ನಮಗೆ ಹೇಗನಿಸುತ್ತದೆ? ನಮ್ಮ ಮನೆ ನಮಗೆ ಪ್ರಾಮುಖ್ಯ. ನಮಗಲ್ಲಿ ಏಕಾಂತತೆ, ಸುರಕ್ಷೆ ಸಿಗಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ ಬೇರೆಯವರು ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಜಾಗವನ್ನು ಗೌರವದಿಂದ ಕಾಣಬೇಕು ಎಂಬುದು ನಮ್ಮ ಇಚ್ಛೆ. ಅದೇ ರೀತಿ, ಮನೆ-ಮನೆ ಸೇವೆಯಲ್ಲಿ ತೊಡಗಿರುವಾಗ ನಾವು ಸಹ ಇತರರ ಮನೆಯನ್ನು ಗೌರವದಿಂದ ಕಾಣಬೇಕು. ಬೇರೆಯವರ ಮನೆಬಾಗಿಲಲ್ಲಿ ನಿಂತಿರುವಾಗ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದಕ್ಕೆ ಗಮನಕೊಡುವುದು ಉತ್ತಮ.—ಅ. ಕಾ. 5:42.

10. ನಾವು ಟೆರಿಟೊರಿಯಲ್ಲಿರುವ ಜನರ ಮನನೋಯಿಸದಿರುವುದು ಹೇಗೆ?

10 ಇಂದು ಲೋಕದಲ್ಲಿ ಪಾತಕಗಳು ತುಂಬಿಹೋಗಿರುವುದರಿಂದ ಮನೆಗೆ ಅಪರಿಚಿತರು ಬಂದರೆ ಅನೇಕ ಜನರು ಅನುಮಾನದಿಂದ ನೋಡುತ್ತಾರೆ. (2 ತಿಮೊ. 3:1-5) ನಾವು ನಡೆದುಕೊಳ್ಳುವ ರೀತಿ ಅವರ ಅನುಮಾನವನ್ನು ಇನ್ನೂ ಹೆಚ್ಚಿಸುವಂತಿರಬಾರದು. ಉದಾಹರಣೆಗೆ, ನಾವು ಒಂದು ಮನೆಗೆ ಹೋಗಿ ಬಾಗಿಲು ತಟ್ಟುತ್ತೇವೆ ಅಂದುಕೊಳ್ಳಿ. ಯಾರೂ ಬಾಗಿಲು ತೆರೆಯುವುದಿಲ್ಲ. ಆಗ ಒಳಗೆ ಯಾರಾದರೂ ಇದ್ದಾರಾ ಎಂದು ತಿಳಿದುಕೊಳ್ಳಲು ಕಿಟಕಿಯಿಂದ ಇಣುಕಿ ನೋಡಿದರೆ? ಅಥವಾ ಮನೆಯವರು ಆಚೀಚೆ ಎಲ್ಲಾದರೂ ಇದ್ದಾರಾ ಎಂದು ನೋಡಲು ಮನೆಯ ಒಂದು ಸುತ್ತು ಹೋಗಿ ಬಂದರೆ? ನೀವು ಹೀಗೆ ಮಾಡುವುದಾದರೆ ಮನೆಯವನಿಗೆ ಕೋಪ ಬರಬಹುದಲ್ಲವೇ? ಅಕ್ಕಪಕ್ಕದವರು ನಮ್ಮನ್ನು ನೋಡಿದರೆ ಏನು ಅಂದುಕೊಳ್ಳಬಹುದು? ನಾವು ಕೂಲಂಕಷವಾಗಿ ಸಾಕ್ಷಿ ನೀಡಬೇಕು ಎನ್ನುವುದು ನಿಜ. (ಅ. ಕಾ. 10:42) ಸುವಾರ್ತೆಯನ್ನು ಜನರಿಗೆ ತಿಳಿಸುವ ತವಕವೂ ನಮಗಿದೆ. ಮಾತ್ರವಲ್ಲ ನಮಗೇನೂ ಕೆಟ್ಟ ಉದ್ದೇಶವಿಲ್ಲ. (ರೋಮ. 1:14, 15) ಹಾಗಿದ್ದರೂ ನಾವು ವಿವೇಚನೆಯಿಂದ ನಡೆದುಕೊಳ್ಳಬೇಕು. ಟೆರಿಟೊರಿಯಲ್ಲಿರುವ ಜನರ ಮನನೋಯಿಸುವ ಯಾವುದೇ ವಿಷಯವನ್ನು ಮಾಡದಿರಲು ನಾವು ಜಾಗ್ರತೆವಹಿಸಬೇಕು. ಅಪೊಸ್ತಲ ಪೌಲ ಅದನ್ನೇ ಬರೆದನು: “ನಮ್ಮ ಶುಶ್ರೂಷೆಯು ಲೋಪವುಳ್ಳದ್ದಾಗಿ ಕಂಡುಬರದಂತೆ ನಾವು ಯಾವುದೇ ವಿಧದಲ್ಲಿ ಎಡವಲು ಯಾವುದೇ ಕಾರಣವನ್ನು ಕೊಡುತ್ತಿಲ್ಲ.” (2 ಕೊರಿಂ. 6:3) ನಾವು ಜನರ ಮನೆ-ಆಸ್ತಿಯನ್ನು ಗೌರವದಿಂದ ಕಾಣುವಲ್ಲಿ ನಮ್ಮ ನಡತೆ ನೋಡಿಯೇ ಅವರು ಸತ್ಯವನ್ನು ಕಲಿಯಲು ಮನಸ್ಸುಮಾಡಬಹುದು.—1 ಪೇತ್ರ 2:12 ಓದಿ.

ಜನರ ಮನೆಯನ್ನು ಗೌರವದಿಂದ ಕಾಣಿರಿ; ಅವರ ಏಕಾಂತತೆಯನ್ನು ಮಾನ್ಯಮಾಡಿ (ಪ್ಯಾರ 10 ನೋಡಿ)

ನಾನು ಜನರನ್ನು ಯಾವಾಗ ಭೇಟಿಯಾಗುತ್ತೇನೆ?

11. ಇತರರು ನಮ್ಮ ಸಮಯವನ್ನು ಹಾಳುಮಾಡಬಾರದೆಂದು ನಾವೇಕೆ ಬಯಸುತ್ತೇವೆ?

11 ನಮ್ಮಲ್ಲಿ ಹೆಚ್ಚಿನವರು ತುಂಬ ಕಾರ್ಯನಿರತರಾಗಿರುತ್ತೇವೆ. ನಮ್ಮೆಲ್ಲ ಜವಾಬ್ದಾರಿಗಳನ್ನು ಪೂರೈಸಲು ಆದ್ಯತೆಗಳನ್ನಿಟ್ಟಿರುತ್ತೇವೆ. ಯಾವಾಗ ಏನೇನು ಮಾಡಬೇಕೆಂದು ಯೋಚಿಸಿರುತ್ತೇವೆ. (ಎಫೆ. 5:16; ಫಿಲಿ. 1:10) ಮಧ್ಯೆ ಏನಾದರೂ ಬಂದು ಮಾಡಬೇಕಾದದ್ದು ಆಗದೆ ಹೋದರೆ ಬೇಸರವಾಗುತ್ತದೆ. ಹಾಗಾಗಿ ಬೇರೆಯವರು ನಮ್ಮ ಸಮಯವನ್ನು ಹಾಳುಮಾಡಬಾರದೆಂದು ನಾವು ಬಯಸುತ್ತೇವೆ. ಅವರು ನಮ್ಮನ್ನು ಅರ್ಥಮಾಡಿಕೊಂಡು ಹೆಚ್ಚು ಸಮಯ ತಕ್ಕೊಳ್ಳದಿದ್ದರೆ ಒಳ್ಳೇದು ಅಂದುಕೊಳ್ಳುತ್ತೇವೆ. ಹಾಗಾದರೆ ಸುವಾರ್ತೆ ಸಾರುವಾಗ ಸುವರ್ಣ ನಿಯಮಕ್ಕನುಸಾರ ನಾವು ಸಹ ಇತರರ ಸಮಯವನ್ನು ಅಮೂಲ್ಯವೆಂದೆಣಿಸಬೇಕಲ್ಲವೇ? ಅದನ್ನು ಹೇಗೆ ಮಾಡಬಹುದು?

12. ಜನರಿಗೆ ಸುವಾರ್ತೆ ಸಾರಲು ಉತ್ತಮ ಸಮಯ ಯಾವುದೆಂದು ಕಂಡುಹಿಡಿಯುವುದು ಹೇಗೆ?

12 ಜನರನ್ನು ಭೇಟಿಮಾಡಲು ಯಾವುದು ಒಳ್ಳೆಯ ಸಮಯವೆಂದು ನಾವು ತಿಳಿದುಕೊಳ್ಳಬೇಕು. ಹೆಚ್ಚಾಗಿ ಯಾವಾಗ ಅವರು ಮನೆಯಲ್ಲಿರುತ್ತಾರೆ? ಯಾವ ಸಮಯದಲ್ಲಿ ಸುವಾರ್ತೆ ಕೇಳಲು ಮನಸ್ಸು ಮಾಡುತ್ತಾರೆ? ಅದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ನಾವು ಸಮಯಮಾಡಿಕೊಂಡು ಸುವಾರ್ತೆ ಸಾರಲು ಹೋಗುವುದು ಉತ್ತಮ. ಕೆಲವೊಂದು ಸ್ಥಳಗಳಲ್ಲಿ ಮಧ್ಯಾಹ್ನದ ನಂತರ ಅಥವಾ ಸಂಜೆ ಹೊತ್ತಿನಲ್ಲಿ ಮನೆ-ಮನೆ ಸೇವೆ ಚೆನ್ನಾಗಿ ಆಗುತ್ತದೆ. ನಿಮ್ಮ ಸೇವಾ ಕ್ಷೇತ್ರದಲ್ಲೂ ಈ ಸಮಯ ಸೂಕ್ತವಾಗಿದ್ದರೆ ಸ್ವಲ್ಪ ಹೊತ್ತಾದರೂ ಮನೆ-ಮನೆ ಸೇವೆ ಮಾಡಲು ಯೋಜನೆ ಮಾಡಬಹುದೇ? (1 ಕೊರಿಂಥ 10:24 ಓದಿ.) ಜನರಿಗೆ ಸೂಕ್ತವಾಗಿರುವ ಸಮಯದಲ್ಲಿ ಸುವಾರ್ತೆ ಸಾರಲಿಕ್ಕಾಗಿ ನೀವು ಏನೇ ತ್ಯಾಗ ಮಾಡಿದರೂ ಅದನ್ನು ಯೆಹೋವನು ಆಶೀರ್ವದಿಸುತ್ತಾನೆ ಎಂಬ ಭರವಸೆ ನಿಮಗಿರಲಿ.

13. ನಾವು ಮನೆಯವನಿಗೆ ಹೇಗೆ ಗೌರವ ತೋರಿಸಬಹುದು?

 13 ಭೇಟಿಯಾಗಿರುವ ವ್ಯಕ್ತಿಯ ಸಮಯವನ್ನು ನಾವು ಅಮೂಲ್ಯವೆಂದೆಣಿಸುತ್ತೇವೆಂದು ಇನ್ನು ಯಾವ ವಿಧದಲ್ಲಿ ತೋರಿಸಬಹುದು? ಯಾರಾದರೂ ನಮ್ಮ ಸಂದೇಶಕ್ಕೆ ಕಿವಿಗೊಟ್ಟರೆ ಅವರಿಗೆ ಒಳ್ಳೇ ಸಾಕ್ಷಿ ಕೊಡಬೇಕು ನಿಜ. ಆದರೆ ತುಂಬ ಸಮಯ ಮಾತಾಡುತ್ತಾ ಇರಬಾರದು. ಏಕೆಂದರೆ, ಆ ಸಮಯವನ್ನು ಆ ವ್ಯಕ್ತಿ ಬೇರೆ ಯಾವುದೋ ಪ್ರಮುಖ ಕೆಲಸಕ್ಕಾಗಿ ಬದಿಗಿಟ್ಟಿರಬಹುದು. ಅವರು ಸಮಯವಿಲ್ಲವೆಂದು ಹೇಳುವಲ್ಲಿ ನಾವು ಸಂಕ್ಷಿಪ್ತವಾಗಿ ತಿಳಿಸುತ್ತೇವೆ ಎನ್ನಬಹುದು. ಅನಂತರ ಕೊಟ್ಟ ಮಾತಿನಂತೆ ನಡೆಯಬೇಕು. (ಮತ್ತಾ. 5:37) ಸಂಭಾಷಣೆಯ ಕೊನೆಯಲ್ಲಿ ನಾವು ಪುನಃ ಯಾವ ಸಮಯದಲ್ಲಿ ಬಂದರೆ ಉತ್ತಮವೆಂದು ಕೇಳಬಹುದು. ಕೆಲವು ಪ್ರಚಾರಕರು ಹೀಗನ್ನುತ್ತಾರೆ: “ಪುನಃ ಬಂದು ನಿಮ್ಮೊಟ್ಟಿಗೆ ಮಾತಾಡಲು ಇಷ್ಟಪಡ್ತೇನೆ. ನಾನು ಬರುವ ಮುಂಚೆ ನಿಮಗೆ ಫೋನ್‌ ಮಾಡಬಹುದಾ ಅಥವಾ ಮೆಸೇಜ್‌ ಕಳುಹಿಸಬಹುದಾ?” ಇದು ಒಳ್ಳೇ ಫಲಿತಾಂಶ ತಂದಿದೆ. ನಮ್ಮ ಟೆರಿಟೊರಿಯಲ್ಲಿರುವ ಜನರ ಅನುಕೂಲ ನೋಡಿಕೊಂಡು ನಮ್ಮ ಸಮಯವನ್ನು ಹೊಂದಿಸಿಕೊಳ್ಳುವಲ್ಲಿ ನಾವು ಪೌಲನನ್ನು ಅನುಸರಿಸುತ್ತೇವೆ. ಅವನು ‘ಸ್ವಪ್ರಯೋಜನವನ್ನು ಚಿಂತಿಸದೆ ಅನೇಕರಿಗೆ ರಕ್ಷಣೆಯಾಗಬೇಕೆಂದು ಅವರ ಪ್ರಯೋಜನವನ್ನು ಚಿಂತಿಸುವವನಾಗಿದ್ದನು.’—1 ಕೊರಿಂ. 10:33.

ಜನರನ್ನು ಹೇಗೆ ಮಾತಾಡಿಸಬೇಕು?

14-16. (ಎ) ನಾವು ಬಂದ ಉದ್ದೇಶವನ್ನು ಮನೆಯವನಿಗೆ ಸ್ಪಷ್ಟಪಡಿಸಬೇಕು ಏಕೆ? ಉದಾಹರಣೆ ಕೊಟ್ಟು ವಿವರಿಸಿ. (ಬಿ) ಸಂಚರಣ ಮೇಲ್ವಿಚಾರಕರೊಬ್ಬರು ಯಾವ ವಿಧಾನ ಬಳಸಿ ಒಳ್ಳೇ ಫಲಿತಾಂಶ ಪಡೆದಿದ್ದಾರೆ?

14 ನೆನಸಿ, ಒಂದು ದಿನ ನಮಗೊಂದು ಫೋನ್‌ ಕರೆ ಬರುತ್ತದೆ. ಅಪರಿಚಿತ ಧ್ವನಿ. ‘ನಿಮಗೆ ಬ್ಯಾಂಕ್‌ ಖಾತೆಯಿದೆಯಾ? ಯಾವ ಬ್ಯಾಂಕಿನಲ್ಲಿದೆ?’ ಎಂದೆಲ್ಲ ಕೇಳತೊಡಗುತ್ತಾನೆ. ಆಗ ನಮಗೆ ಹೇಗನಿಸಬಹುದು? ಯಾರಿವನು, ಯಾಕೆ ಇದನ್ನೆಲ್ಲ ಕೇಳುತ್ತಿದ್ದಾನೆ ಎಂದು ನಾವು ಹುಬ್ಬೇರಿಸುತ್ತೇವೆ ಖಂಡಿತ. ಶಿಷ್ಟಾಚಾರಕ್ಕೆಂದು ಸ್ವಲ್ಪ ಮಾತಾಡಬಹುದಾದರೂ ನಂತರ ನಮ್ಮ ಸಂಭಾಷಣೆಯನ್ನು ನಿಲ್ಲಿಸುತ್ತೇವೆ. ಆದರೆ ಆ ವ್ಯಕ್ತಿ ತನ್ನ ಪರಿಚಯ  ಮಾಡಿಕೊಂಡು, ಬ್ಯಾಂಕ್‍ನ ಕೆಲವು ಆಫರ್‌ ಬಗ್ಗೆ ಮಾಹಿತಿ ಕೊಡುತ್ತಿದ್ದೇನೆ ಎಂದು ಮೊದಲೇ ಹೇಳುವಲ್ಲಿ ಪ್ರಾಯಶಃ ನಾವು ಅವನೊಂದಿಗೆ ಮಾತಾಡುತ್ತೇವೆ. ಜನರು ವಿಷಯವನ್ನು ನೇರವಾಗಿ ಅದೇ ಸಮಯದಲ್ಲಿ ಜಾಣ್ಮೆಯಿಂದ ಹೇಳುವಲ್ಲಿ ನಾವು ಇಷ್ಟಪಡುತ್ತೇವೆ. ಹಾಗಾದರೆ ಜನರಿಗೆ ಸುವಾರ್ತೆ ಸಾರುವಾಗ ನಾವು ಸಹ ಅದೇ ಸೌಜನ್ಯವನ್ನು ತೋರಿಸಬೇಕಲ್ಲವೆ?

15 ಅನೇಕ ಟೆರಿಟೊರಿಗಳಲ್ಲಿ, ನಾವು ಯಾರನ್ನಾದರೂ ಭೇಟಿಮಾಡುವಾಗ ಮೊದಲು ನಾವು ಯಾಕೆ ಬಂದಿದ್ದೇವೆಂದು ಸ್ಪಷ್ಟಪಡಿಸಬೇಕಾಗುತ್ತದೆ. ಮನೆಯವರಿಗೆ ತಿಳಿದಿರದ ಒಂದು ಪ್ರಾಮುಖ್ಯ ಮಾಹಿತಿ ನಮ್ಮಲ್ಲಿದೆ ನಿಜ. ಆದರೆ ನಾವು ಯಾರು, ಏಕೆ ಬಂದಿದ್ದೇವೆ ಎಂದು ಹೇಳದೆ ನೇರವಾಗಿ “ನಿಮಗೆ ಈ ಪ್ರಪಂಚದಲ್ಲಿರುವ ಸಮಸ್ಯೆಯನ್ನು ಸರಿಪಡಿಸುವ ಸಾಮರ್ಥ್ಯವಿದ್ದರೆ ಮೊದಲು ಯಾವುದನ್ನು ಸರಿಪಡಿಸುತ್ತೀರಿ?” ಎಂದು ಕೇಳಿದರೆ ಅವರಿಗೆ ಹೇಗನಿಸಬಹುದು? ಆ ಮನೆಯವನ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಂಡು ಬೈಬಲಿನ ಸಂದೇಶದ ಕಡೆಗೆ ಅವನ ಗಮನಸೆಳೆಯಲಿಕ್ಕಾಗಿ ಆ ಪ್ರಶ್ನೆ ಕೇಳಿರುತ್ತೇವೆ ನಿಜ. ಆದರೆ ಮನೆಯವನ ಮನಸ್ಸಿನಲ್ಲಿ, ‘ಯಾರಿವರು? ನನಗೆ ಯಾಕೆ ಈ ಪ್ರಶ್ನೆ ಕೇಳುತ್ತಿದ್ದಾರೆ? ಇವರ ಉದ್ದೇಶ ಏನಿರಬಹುದು?’ ಎಂಬ ಯೋಚನೆ ಓಡುತ್ತಿರಬಹುದು. ಹಾಗಾಗಿ ಮನೆಯವನು ಯಾವುದೇ ಗೊಂದಲಕ್ಕೆ ಒಳಗಾಗದಂತೆ ನಾವು ಮೊದಲು ನೋಡಿಕೊಳ್ಳಬೇಕು. (ಫಿಲಿ. 2:3, 4) ಇದನ್ನು ಮಾಡುವುದು ಹೇಗೆ?

16 ಸಂಚರಣ ಮೇಲ್ವಿಚಾರಕರೊಬ್ಬರು ಹೀಗೆ ಮಾಡುತ್ತಾರೆ: ಅವರು ಮನೆಯವನನ್ನು ವಂದಿಸಿದ ತಮ್ಮನ್ನು ಪರಿಚಯಿಸಿಕೊಂಡ ನಂತರ ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಕರಪತ್ರವನ್ನು ಕೊಡುತ್ತಾರೆ. ಆ ನಂತರ “ನಾವು ಎಲ್ಲರಿಗೆ ಇದನ್ನು ಕೊಡುತ್ತಿದ್ದೇವೆ. ಅನೇಕ ಜನರ ಮನಸ್ಸಲ್ಲಿ ಬರುವಂಥ ಆರು ಪ್ರಶ್ನೆಗಳಿಗೆ ಉತ್ತರವನ್ನು ಇದರಲ್ಲಿ ಕೊಡಲಾಗಿದೆ. ಇದು ನಿಮಗಾಗಿ.” ಈ ವಿಧಾನದಿಂದ ಒಳ್ಳೇ ಫಲಿತಾಂಶ ಪಡೆದುಕೊಂಡ ಅವರು ಹೇಳುವುದೇನೆಂದರೆ, ‘ನಾವು ಯಾಕೆ ಬಂದಿದ್ದೇವೆಂದು ತಿಳಿದರೆ ಜನರು ನಿರಾಳವಾಗಿರುತ್ತಾರೆ. ಆಗ ಸಂಭಾಷಣೆಯನ್ನು ಮುಂದುವರಿಸಲು ಸುಲಭವಾಗುತ್ತದೆ.’ ತದನಂತರ ಆ ಸಹೋದರ ಮನೆಯವನಿಗೆ ಹೀಗೆ ಕೇಳುತ್ತಾರೆ: “ಇದರಲ್ಲಿ ಯಾವ ಪ್ರಶ್ನೆ ನಿಮ್ಮ ಮನಸ್ಸಿಗೆ ಬಂದಿದೆ?” ಮನೆಯವನು ಯಾವುದಾದರೂ ಪ್ರಶ್ನೆಯನ್ನು ಆರಿಸುವಲ್ಲಿ ಕರಪತ್ರವನ್ನು ತೆರೆದು ಆ ಪ್ರಶ್ನೆಗೆ ಬೈಬಲ್‌ ಕೊಡುವ ಉತ್ತರವನ್ನು ಓದಿ ಚರ್ಚಿಸುತ್ತಾರೆ. ಮನೆಯವನು ಪ್ರಶ್ನೆಯನ್ನು ಆರಿಸಲು ಹಿಂಜರಿಯುವಲ್ಲಿ ಅವನನ್ನು ಮುಜುಗರಕ್ಕೊಳಪಡಿಸದೆ ಅವರೇ ಒಂದು ಪ್ರಶ್ನೆ ಆಯ್ಕೆಮಾಡಿ ಚರ್ಚಿಸುತ್ತಾರೆ. ಈ ವಿಧಾನ ಮಾತ್ರವಲ್ಲ ಇನ್ನೂ ಅನೇಕ ವಿಧಾನಗಳನ್ನು ಬಳಸಬಹುದು. ಕೆಲವು ಸ್ಥಳಗಳಲ್ಲಿ, ನಾವು ಬಂದ ವಿಷಯವನ್ನು ವಿವರಿಸುವ ಮೊದಲು ಕೆಲವು ಪದ್ಧತಿಗಳನ್ನು ಅನುಸರಿಸಬೇಕಾಗಬಹುದು. ಪ್ರಾಮುಖ್ಯ ವಿಷಯವೇನೆಂದರೆ, ಜನರು ಬಯಸುವಂಥ ರೀತಿಯಲ್ಲಿ ನಾವು ನಮ್ಮ ನಿರೂಪಣೆಯನ್ನು ಹೊಂದಿಸಿಕೊಳ್ಳಬೇಕು.

ಸೇವೆಯಲ್ಲಿ ಸುವರ್ಣ ನಿಯಮ ಪಾಲಿಸುತ್ತಾ ಇರಿ

17. ಈ ಲೇಖನದಲ್ಲಿ ಕಲಿತಂತೆ ಸುವಾರ್ತೆ ಸಾರುವಾಗ ನಾವು ಸುವರ್ಣ ನಿಯಮವನ್ನು ಪಾಲಿಸುವ ಕೆಲವು ವಿಧಗಳು ಯಾವುವು?

17 ಹಾಗಾದರೆ, ಸುವಾರ್ತೆ ಸಾರುವಾಗ ನಾವು ಸುವರ್ಣ ನಿಯಮವನ್ನು ಪಾಲಿಸುವ ಕೆಲವು ವಿಧಗಳು ಯಾವುವು? ಪ್ರತಿಯೊಬ್ಬ ವ್ಯಕ್ತಿ ಬೇರೆಯವರಿಗಿಂತ ಭಿನ್ನ ಎಂಬುದನ್ನು ಮನಸ್ಸಿನಲ್ಲಿಟ್ಟು ಸುವಾರ್ತೆ ಸಾರಬೇಕು. ಭೇಟಿಯಾದ ವ್ಯಕ್ತಿಯ ಮನೆ ಹಾಗೂ ಆಸ್ತಿಯನ್ನು ಗೌರವದಿಂದ ಕಾಣಬೇಕು. ಜನರು ಮನೆಯಲ್ಲಿರುವಾಗ ಹಾಗೂ ಕೇಳಲು ಅವರಿಗೆ ಸಮಯವಿರುವಾಗ ಸುವಾರ್ತೆ ಸಾರಬೇಕು. ನಮ್ಮ ಟೆರಿಟೊರಿಯ ಜನರು ಇಷ್ಟಪಡುವಂಥ ರೀತಿಗೆ ತಕ್ಕಂತೆ ಸಂಭಾಷಣೆಯನ್ನು ಹೊಂದಿಸಿಕೊಳ್ಳಬೇಕು.

18. ಇತರರು ನಮ್ಮನ್ನು ಹೇಗೆ ಉಪಚರಿಸಬೇಕೆಂದು ಬಯಸುತ್ತೇವೋ ಅದೇ ವಿಧದಲ್ಲಿ ನಮ್ಮ ಟೆರಿಟೊರಿಯಲ್ಲಿರುವ ಜನರನ್ನು ಉಪಚರಿಸುವಾಗ ಯಾವ ಪ್ರಯೋಜನಗಳು ಸಿಗುತ್ತವೆ?

18 ನಮ್ಮನ್ನು ಇತರರು ಹೇಗೆ ಉಪಚರಿಸಬೇಕೆಂದು ಬಯಸುತ್ತೇವೋ ಅದೇ ವಿಧದಲ್ಲಿ ಟೆರಿಟೊರಿಯಲ್ಲಿರುವ ಜನರನ್ನು ನಾವು ಉಪಚರಿಸುವಾಗ ಅನೇಕ ಪ್ರಯೋಜನಗಳು ದೊರಕುತ್ತವೆ. ಜನರಿಗೆ ದಯಾಭಾವ ತೋರಿಸುವಾಗ, ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವಾಗ ನಾವು ನಮ್ಮ ಬೆಳಕನ್ನು ಪ್ರಕಾಶಿಸುತ್ತೇವೆ, ಬೈಬಲ್‌ ತತ್ವಗಳನ್ನು ಅನುಸರಿಸುತ್ತೇವೆಂದು ತೋರಿಸಿಕೊಡುತ್ತೇವೆ. ಮಾತ್ರವಲ್ಲ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ಯೆಹೋವನಿಗೆ ಮಹಿಮೆಯನ್ನು ಸಲ್ಲಿಸುತ್ತೇವೆ. (ಮತ್ತಾ. 5:16) ನಾವು ಜನರನ್ನು ಗೌರವದಿಂದ ಉಪಚರಿಸುವಾಗ ಅನೇಕರು ಸತ್ಯ ಕಲಿಯಲು ಪ್ರಚೋದಿಸಲ್ಪಡಬಹುದು. (1 ತಿಮೊ. 4:16) ಜನರು ಒಂದುವೇಳೆ ಸತ್ಯವನ್ನು ಸ್ವೀಕರಿಸದಿದ್ದರೂ ನಾವು ಶುಶ್ರೂಷೆಯನ್ನು ನೆರವೇರಿಸಲು ಸಾಧ್ಯವಾಗುವುದೆಲ್ಲವನ್ನು ಮಾಡಿದ್ದೇವೆಂಬ ಸಂತೃಪ್ತಿ ನಮಗಿರುವುದು. (2 ತಿಮೊ. 4:5) ಅಪೊಸ್ತಲ ಪೌಲನಲ್ಲಿದ್ದ ಮನೋಭಾವ ನಮ್ಮಲ್ಲೂ ಇರಲಿ. ಅವನಂದದ್ದು: “ನಾನು ಇತರರೊಂದಿಗೆ ಸುವಾರ್ತೆಯಲ್ಲಿ ಪಾಲುಗಾರನಾಗಲಿಕ್ಕಾಗಿ ಎಲ್ಲವನ್ನೂ ಸುವಾರ್ತೆಗೋಸ್ಕರವೇ ಮಾಡುತ್ತೇನೆ.” (1 ಕೊರಿಂ. 9:23) ಹಾಗಾಗಿ ನಾವೆಲ್ಲರೂ ಸೇವೆಯಲ್ಲಿ ಯಾವಾಗಲೂ ಸುವರ್ಣ ನಿಯಮವನ್ನು ಪಾಲಿಸೋಣ.