ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಗತಿ ಮಾಡಲು ನಿನ್ನ “ದಾರಿಯನ್ನು ಸಮಮಾಡು”

ಪ್ರಗತಿ ಮಾಡಲು ನಿನ್ನ “ದಾರಿಯನ್ನು ಸಮಮಾಡು”

ದೇವಜನರು ಕ್ರಿ.ಪೂ. 537ರಲ್ಲಿ ಬಾಬೆಲಿನಿಂದ ಹೊರನಡೆದರು. ಅಲ್ಲಿಂದ ಯೆರೂಸಲೇಮನ್ನು ತಲುಪಲು ಅವರು ಬಳಸಲಿದ್ದ ಮಾರ್ಗದ ವಿಷಯದಲ್ಲಿ ಯೆಹೋವನು ಆಸಕ್ತಿ ತೋರಿಸಿದನು. ಅವನು ಹೇಳಿದ್ದು: “ಜನರಿಗೆ ದಾರಿಯನ್ನು ಸರಿಮಾಡಿರಿ, ರಾಜಮಾರ್ಗವನ್ನು ಎತ್ತರಿಸಿರಿ, ಎತ್ತರಿಸಿರಿ, ಕಲ್ಲುಗಳನ್ನು ತೆಗೆದುಹಾಕಿರಿ.” (ಯೆಶಾ. 62:10) ಯೆಹೂದ್ಯರ ಕೆಲವು ಗುಂಪುಗಳು ಅದನ್ನು ಹೇಗೆ ಮಾಡಿರಬಹುದೆಂದು ಊಹಿಸಿ. ಅವರು ಮುಂದೆ ಹೋಗಿ ಗುಂಡಿಗಳನ್ನು ಮುಚ್ಚಿ ಮಾರ್ಗವನ್ನು ಸಮಮಾಡಿರಬಹುದು. ಹೀಗೆ ಇವರ ಹಿಂದೆ ಬರುತ್ತಿದ್ದ ಇತರ ಯೆಹೂದ್ಯರಿಗೆ ತಮ್ಮ ಸ್ವದೇಶ ತಲುಪಲು ಮಾರ್ಗ ಸುಗಮವಾಯಿತು.

ಇದನ್ನು ನಾವು ಆಧ್ಯಾತ್ಮಿಕ ಗುರಿಗಳ ಕಡೆಗೆ ನಡೆಸುವ ದಾರಿಗೆ ಹೋಲಿಸಬಹುದು. ತನ್ನೆಲ್ಲಾ ಸೇವಕರು ಅನಾವಶ್ಯಕ ತಡೆಗಳಿಲ್ಲದೆ ಆಧ್ಯಾತ್ಮಿಕ ಹಾದಿಯಲ್ಲಿ ಸಾಗಬೇಕೆಂಬುದು ಯೆಹೋವನ ಆಸೆ. ಆತನ ವಾಕ್ಯ ನಮಗನ್ನುವುದು: “ನೀನು ನಡೆಯುವ ದಾರಿಯನ್ನು ಸಮಮಾಡು; ನಿನ್ನ ಮಾರ್ಗಗಳೆಲ್ಲಾ ದೃಢವಾಗಿರಲಿ.” (ಜ್ಞಾನೋ. 4:26) ನೀವು ಯುವ ವಯಸ್ಸಿನವರಾಗಿರಲಿ ಇಲ್ಲದಿರಲಿ ಈ ದೈವಿಕ ಸಲಹೆಯಲ್ಲಿರುವ ವಿವೇಕವನ್ನು ಗ್ರಹಿಸಬಹುದು.

ಒಳ್ಳೇ ತೀರ್ಮಾನಗಳಿಂದ ದಾರಿಯನ್ನು ಸಿದ್ಧಪಡಿಸಿ

‘ಈ ಹುಡುಗಿಗೆ ಎಷ್ಟೊಂದು ಒಳ್ಳೇ ಅವಕಾಶಗಳಿವೆ’ ಅಥವಾ ‘ಈ ಹುಡುಗನಿಗೆ ತುಂಬ ಪ್ರತಿಭೆಯಿದೆ. ಮುಂದಕ್ಕೆ ದೊಡ್ಡ ವ್ಯಕ್ತಿಯಾಗುತ್ತಾನೆ’ ಎಂದೆಲ್ಲ ಯುವಜನರ ಬಗ್ಗೆ ಜನ ಹೇಳುವುದನ್ನು ನೀವು ಕೇಳಿರಬಹುದು. ಯುವಜನರಿಗೆ ಸಾಮಾನ್ಯವಾಗಿ ಒಳ್ಳೇ ಆರೋಗ್ಯ, ಚುರುಕು ಬುದ್ಧಿ ಮತ್ತು ಏನನ್ನಾದರೂ ಸಾಧಿಸಬೇಕು ಅನ್ನೋ ಛಲ ಹೆಚ್ಚಿರುತ್ತದೆ. ಆದ್ದರಿಂದ “ಯುವಕರಿಗೆ ಬಲವು ಭೂಷಣ” ಎಂದು ಬೈಬಲ್‌ ಹೇಳಿರುವ ಮಾತು ಸರಿಯಾಗಿಯೇ ಇದೆ. (ಜ್ಞಾನೋ. 20:29) ಒಬ್ಬ ಯುವಕ ಅಥವಾ ಯುವತಿ ಯೆಹೋವನ ಸೇವೆಗಾಗಿ ತನ್ನಲ್ಲಿರುವ ಪ್ರತಿಭೆಗಳನ್ನು, ಶಕ್ತಿಯನ್ನು ಬಳಸುವಾಗ ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಸಾಧ್ಯವಾಗುತ್ತದೆ. ನಿಜ ಸಂತೋಷ ಅವರದ್ದಾಗುತ್ತದೆ.

ನಮ್ಮ ಯುವಜನರ ಕೌಶಲ ಸಾಮರ್ಥ್ಯಗಳನ್ನು ಲೋಕ ತುಂಬ ಮೆಚ್ಚುತ್ತದೆ. ಯುವ ಪ್ರಾಯದ ಸಾಕ್ಷಿ ಮಕ್ಕಳು ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದರೆ ಮಾರ್ಗದರ್ಶಕರು, ಶಿಕ್ಷಕರು, ಸಹಪಾಠಿಗಳು ಅವರಿಗೆ ಉನ್ನತ ಶಿಕ್ಷಣ ಮಾಡುವಂತೆ ಒತ್ತಡ ಹೇರಬಹುದು. ಅವರ ಪ್ರಕಾರ ಈ ಲೋಕದಲ್ಲಿ ಉನ್ನತ ಶಿಕ್ಷಣವೇ ಯಶಸ್ಸಿನ ಗುಟ್ಟು. ಕ್ರೀಡಾ  ಕೌಶಲವಿರುವ ಯುವ ಸಹೋದರ-ಸಹೋದರಿಯರಿಗೆ ಕ್ರೀಡೆಯನ್ನೇ ಜೀವನ ವೃತ್ತಿಯಾಗಿಸುವ ಆಸೆ ತೋರಿಸಬಹುದು. ನಿಮಗೂ ಇಂಥ ಸನ್ನಿವೇಶ ಎದುರಾಗಿದೆಯಾ? ಅಥವಾ ಇಂಥ ಒತ್ತಡದಲ್ಲಿರುವ ಯಾರಾದರೂ ನಿಮಗೆ ಗೊತ್ತಿದ್ದಾರಾ? ವಿವೇಕಭರಿತ ತೀರ್ಮಾನಗಳನ್ನು ಮಾಡಲು ಕ್ರೈಸ್ತರಿಗೆ ಯಾವುದು ಸಹಾಯ ಮಾಡುತ್ತದೆ?

ಬೈಬಲ್‌ ಬೋಧನೆಗಳು ಒಬ್ಬ ವ್ಯಕ್ತಿಯನ್ನು ಬದುಕಿನ ಅತ್ಯುತ್ತಮ ಹಾದಿಯಲ್ಲಿ ಸಾಗಲು ಸಿದ್ಧಗೊಳಿಸಬಲ್ಲವು. “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂದು ಪ್ರಸಂಗಿ 12:1 ಹೇಳುತ್ತದೆ. ನೀವಾಗಲಿ ನಿಮಗೆ ಗೊತ್ತಿರುವ ಒಬ್ಬ ಯುವ ವ್ಯಕ್ತಿಯಾಗಲಿ ‘ಯೌವನದಲ್ಲೇ ಸೃಷ್ಟಿಕರ್ತನನ್ನು ಸ್ಮರಿಸುವ’ ಅತ್ಯುತ್ತಮ ವಿಧ ಯಾವುದು?

ಪಶ್ಚಿಮ ಆಫ್ರಿಕಾದಲ್ಲಿರುವ ಎರಿಕ್‌ * ಎಂಬವನ ಉದಾಹರಣೆಯನ್ನು ಗಮನಿಸೋಣ. ಎರಿಕ್‍ಗೆ ಫುಟ್‌ಬಾಲ್‌ ಆಡುವುದೆಂದರೆ ತುಂಬ ಇಷ್ಟ. ಅವನು 15 ವರ್ಷದವನಾದಾಗ ರಾಷ್ಟ್ರೀಯ ತಂಡದಲ್ಲಿ ಆಡಲು ಆಯ್ಕೆಯಾದ. ಆದಷ್ಟು ಬೇಗನೆ ಯುರೋಪಿನ ಉನ್ನತ ಕ್ರೀಡಾ ತರಬೇತಿ ಕೂಡ ಸಿಗಲಿಕ್ಕಿತ್ತು. ಇದನ್ನು ಅವನು ಜೀವನವೃತ್ತಿಯಾಗಿಯೂ ಮಾಡಬಹುದಿತ್ತು. ಆದರೆ ‘ಯೌವನದಲ್ಲೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು’ ಎಂಬ ಮಾತು ಎರಿಕ್‍ನ ಬದುಕನ್ನು ಹೇಗೆ ಪ್ರಭಾವಿಸಿತು? ಇದರಿಂದ ನಿಮಗೆ ಮತ್ತು ನಿಮ್ಮ ಯುವ ಪ್ರಾಯದ ಸ್ನೇಹಿತರಿಗೆ ಏನಾದರೂ ಪಾಠ ಇದೆಯಾ?

ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲಿ ಎರಿಕ್‌ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್‌ ಅಧ್ಯಯನ ಆರಂಭಿಸಿದ. ಸೃಷ್ಟಿಕರ್ತನಿಂದ ಮಾತ್ರ ಮನುಜರ ಸಮಸ್ಯೆಗಳಿಗೆ ಕಾಯಂ ನಿವಾರಣೆ ಎಂದು ಕಲಿತ. ದೇವರ ಚಿತ್ತಕ್ಕಾಗಿ ತನ್ನ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸುವುದು ಎಷ್ಟು ಪ್ರಾಮುಖ್ಯ ಎಂದು ತಿಳಿದ. ಈ ವಿವೇಕಭರಿತ ನಿಜತ್ವಕ್ಕೆ ಮಹತ್ವ ಕೊಟ್ಟ. ಕ್ರೀಡೆಯನ್ನು ಜೀವನವೃತ್ತಿಯಾಗಿ ಮಾಡುವ ಪ್ರಯತ್ನಗಳನ್ನು ನಿಲ್ಲಿಸಿದ. ಅದಕ್ಕೆ ಬದಲಾಗಿ ದೀಕ್ಷಾಸ್ನಾನ ಹೊಂದಿ ಆಧ್ಯಾತ್ಮಿಕ ವಿಷಯಗಳತ್ತ ವಾಲಿದ. ಸಮಯಾನಂತರ ಶುಶ್ರೂಷಾ ಸೇವಕನಾದ. ನಂತರ ಅವನಿಗೆ ‘ಅವಿವಾಹಿತ ಸಹೋದರರಿಗಾಗಿ ಬೈಬಲ್‌ ಶಾಲೆ’ಗೆ ಬರಲು ಆಹ್ವಾನ ಸಿಕ್ಕಿತು.

ಎರಿಕ್‌ ಕ್ರೀಡಾವೃತ್ತಿಯನ್ನು ಕೈಗೆತ್ತಿದ್ದರೆ ಹೆಸರು, ಹಣ ಬರುತ್ತಿತ್ತು. ಆದರೆ “ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದೂ ಎತ್ತರವಾದ ಗೋಡೆಯೆಂದೂ ಭಾವಿಸಿಕೊಳ್ಳುತ್ತಾನೆ” ಎಂಬ ಬೈಬಲ್‌ ತತ್ವದ ಸತ್ಯವನ್ನು ಚೆನ್ನಾಗಿ ಅರಿತಿದ್ದ. (ಜ್ಞಾನೋ. 18:11) ಹಣ ಆಸ್ತಿಪಾಸ್ತಿಗಳಿಂದ ಭದ್ರತೆ ಸಿಗುತ್ತದೆ ಎಂದು ಒಬ್ಬ ನೆನಸಿದರೆ ಅದೊಂದು ಭ್ರಮೆ. ಅಷ್ಟೇ ಅಲ್ಲ, ಹಣದ ಹಿಂದೆ ಓಡುವವರು ಹೆಚ್ಚಾಗಿ ‘ಅನೇಕ ವೇದನೆಗಳಿಂದ ಎಲ್ಲ ಕಡೆಗಳಲ್ಲಿ ತಿವಿಸಿಕೊಳ್ಳುತ್ತಾರೆ.’—1 ತಿಮೊ. 6:9, 10.

ಅನೇಕ ಯುವಜನರು ಪೂರ್ಣ ಸಮಯದ ಸೇವೆ ಮಾಡುವ ಮೂಲಕ ಸಂತೋಷ ಮತ್ತು ಅನಂತ ಭದ್ರತೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಎರಿಕ್‌ ಹೇಳುವುದು: “ನಾನೀಗ ಯೆಹೋವನ ಪೂರ್ಣ ಸಮಯದ ಸೇವಕರ ದೊಡ್ಡ ‘ತಂಡಕ್ಕೆ’ ಸೇರಿದ್ದೇನೆ. ಇದಕ್ಕಿಂತ ಒಳ್ಳೇ ತಂಡ ಇರಲು ಸಾಧ್ಯವೇ ಇಲ್ಲ. ಬದುಕಲ್ಲಿ ನಿಜ ಸಂತೋಷ ಮತ್ತು ಯಶಸ್ಸು ತರುವ ಏಕೈಕ ದಾರಿಯನ್ನು ನನಗೆ ತೋರಿಸಿಕೊಟ್ಟದ್ದಕ್ಕಾಗಿ ಯೆಹೋವನಿಗೆ ಧನ್ಯವಾದ ಹೇಳುತ್ತೇನೆ.”

ನಿಮ್ಮ ಬಗ್ಗೆ ಏನು? ಲೋಕ ಹೇಳುವ ಗುರಿಗಳನ್ನು ಇಡುವ ಬದಲು ಪಯನೀಯರ್‌ ಸೇವೆಯನ್ನು ಮಾಡುವ ಮೂಲಕ ‘ನಿಮ್ಮ ಮಾರ್ಗಗಳನ್ನು’ ಯೆಹೋವನ ಮುಂದೆ ಯಾಕೆ ದೃಢವಾಗಿ ಸ್ಥಾಪಿಸಬಾರದು?—“ ವಿಶ್ವವಿದ್ಯಾನಿಲಯದಲ್ಲಿ ಸಿಗಲಾರದ ಪ್ರಯೋಜನಗಳು” ಎಂಬ ಚೌಕ ನೋಡಿ.

ನಿಮ್ಮ ದಾರಿಯಿಂದ ಅಡಚಣೆಗಳನ್ನು ತೆಗೆಯಿರಿ

ಒಂದು ದಂಪತಿ ಅಮೆರಿಕದ ಬ್ರಾಂಚ್‌ ಆಫೀಸಿಗೆ ಭೇಟಿ ನೀಡಿದರು. ಬೆತೆಲ್‌ ಕುಟುಂಬದಲ್ಲಿ ಯೆಹೋವನಿಗೆ ಸೇವೆ ಸಲ್ಲಿಸುತ್ತಾ ಇದ್ದವರ ಸಂತೋಷವನ್ನು ನೋಡಿದರು. ನಂತರ ಸಹೋದರಿ ಬರೆದದ್ದು: “ನಾವು ಬೆತೆಲ್‌ಗೆ ಭೇಟಿ ಮಾಡುವ ವರೆಗೆ ನಮ್ಮ ದಿನಚರಿಯಲ್ಲೇ ತೃಪ್ತರಾಗಿ ಹಾಯಾಗಿದ್ದೆವು.” ಆದರೆ ಅವರ ಈ ಭೇಟಿಯ ನಂತರ ಯೆಹೋವನ ಸೇವೆಯನ್ನು ಹೆಚ್ಚಿಸಲಿಕ್ಕಾಗಿ ಇನ್ನಷ್ಟು ಸಮಯ ಶಕ್ತಿಯನ್ನು ವಿನಿಯೋಗಿಸಲು ತೀರ್ಮಾನ ಮಾಡಿದರು. ಅದಕ್ಕಾಗಿ ಬೇರೆ ಕೆಲಸಕಾರ್ಯಗಳನ್ನು ಕಡಿಮೆ ಮಾಡಿದರು.

ಹೀಗೆ ಅವರು ಮಾಡಿದ ಬದಲಾವಣೆಗಳಲ್ಲಿ ಕೆಲವೊಂದನ್ನು ಮಾಡುವುದು ಕಷ್ಟವಾಗಿತ್ತು. ಆದರೆ ಒಂದು ದಿನ ಅವರು ಓದಿದ ದಿನದ ವಚನದ ಬಗ್ಗೆ ಗಂಭೀರವಾಗಿ ಯೋಚಿಸಿದರು. ಆ ವಚನ ಯೋಹಾನ 8:31. ಅದರಲ್ಲಿ ಯೇಸು “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿರುವುದಾದರೆ ನಿಜವಾಗಿಯೂ ನನ್ನ ಶಿಷ್ಯರಾಗಿರುವಿರಿ” ಎಂದು ಹೇಳಿದ್ದಾನೆ. ಇದನ್ನು ಮನಸ್ಸಿನಲ್ಲಿಟ್ಟು ಈ ದಂಪತಿ “ನಮ್ಮ ಜೀವನವನ್ನು ಸರಳೀಕರಿಸಲು ಏನೇ ತ್ಯಾಗ ಮಾಡಿದರೂ ಅದು ಸಾರ್ಥಕ” ಎಂದು ಯೋಚಿಸಿದರು. ಅವರಿಗಿದ್ದ ದೊಡ್ಡ ಮನೆಯನ್ನು ಮಾರಿದರು, ಬೇರೆ ಅನಗತ್ಯ ಹೊರೆಗಳನ್ನು ತೆಗೆದುಹಾಕಿದರು ಮತ್ತು ಸಹಾಯದ ಅಗತ್ಯವಿದ್ದ ಸಭೆಗೆ ಸ್ಥಳಾಂತರಿಸಿದರು. ಈಗ ಈ ದಂಪತಿ ಪಯನೀಯರರಾಗಿದ್ದಾರೆ. ಜೊತೆಗೆ ರಾಜ್ಯ ಸಭಾಗೃಹ ಕಟ್ಟುವುದರಲ್ಲಿ ಮತ್ತು ಜಿಲ್ಲಾ ಅಧಿವೇಶನಗಳಲ್ಲಿ ಸ್ವಯಂ ಸೇವಕರಾಗಿ ಕೆಲಸಮಾಡುತ್ತಾರೆ. ಈಗ ಇವರಿಗೆ ಹೇಗನಿಸುತ್ತದೆ? “ಸರಳ ಜೀವನ ನಡೆಸುತ್ತಾ ಯೆಹೋವನ ಸಂಘಟನೆ ಹೇಳಿದಂತೆ ಮಾಡುವುದರಿಂದ ಸಿಗುತ್ತಿರುವ ಸಂತೋಷ ನಮಗೆ ಅಚ್ಚರಿ ಮೂಡಿಸುತ್ತಿದೆ” ಎನ್ನುತ್ತಾರವರು.

ಆಧ್ಯಾತ್ಮಿಕ ಪ್ರಗತಿಯ ಮಾರ್ಗದಲ್ಲೇ ಉಳಿಯಿರಿ

ಸೊಲೊಮೋನನು ಬರೆದದ್ದು: “ನೆಟ್ಟಗೆ ದೃಷ್ಟಿಸು; ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ.” (ಜ್ಞಾನೋ. 4:25) ತನ್ನ ಮುಂದಿರುವ ರಸ್ತೆ ಮೇಲೆ ದೃಷ್ಟಿ ನೆಟ್ಟಿರುವ ವಾಹನ ಚಾಲಕನಂತೆ ನಾವಿರಬೇಕು. ಆಧ್ಯಾತ್ಮಿಕ ಗುರಿಗಳನ್ನಿಟ್ಟು ಅವನ್ನು ಮುಟ್ಟುವುದರಿಂದ ನಮ್ಮನ್ನು ಅಪಕರ್ಷಿಸುವ ವಿಷಯಗಳಿಂದ ದೂರವಿರಬೇಕು.

ನೀವು ಯಾವ ಆಧ್ಯಾತ್ಮಿಕ ಗುರಿಗಳನ್ನು ಇಟ್ಟು ಮುಟ್ಟಬಹುದು? ಪೂರ್ಣಸಮಯದ ಸೇವೆ ಒಂದು ಉತ್ತಮ ಗುರಿ. ದೊಡ್ಡ ಸೇವಾ  ಕ್ಷೇತ್ರವನ್ನು ಆವರಿಸಲು ಅನುಭವಸ್ಥ ಸೌವಾರ್ತಿಕರ ಅಗತ್ಯವಿರುವ ಹತ್ತಿರದ ಸಭೆಗೆ ಸಹಾಯ ಮಾಡುವುದು ಇನ್ನೊಂದು ಗುರಿ. ಅಥವಾ ಕೆಲವು ಸಭೆಗಳಲ್ಲಿ ಉತ್ತಮ ಪ್ರಚಾರಕರಿದ್ದರೂ ಹಿರಿಯರ, ಶುಶ್ರೂಷಾ ಸೇವಕರ ಅಗತ್ಯವಿರಬಹುದು. ಇಲ್ಲಿ ಕೊಡಲಾಗಿರುವ ಯಾವ ವಿಧದಲ್ಲಿ ನೀವು ಸಹಾಯ ಮಾಡಲು ಬಯಸುತ್ತೀರಾ? ನಿಮ್ಮ ಸಹಾಯದ ಅಗತ್ಯ ಯಾವ ಕ್ಷೇತ್ರದಲ್ಲಿದೆ ಎಂದು ತಿಳಿಯಲು ಸರ್ಕಿಟ್‌ ಮೇಲ್ವಿಚಾರಕರನ್ನು ಕೇಳಬಾರದೇಕೆ? ನಿಮ್ಮ ಸೇವೆಯನ್ನು ಇನ್ನೂ ವಿಸ್ತರಿಸುವ ಬಯಕೆ ಇರುವಲ್ಲಿ ಸಹಾಯದ ಅಗತ್ಯವಿರುವ ದೂರದ ಸಭೆಗಳ ಬಗ್ಗೆ ಮಾಹಿತಿಯನ್ನು ಕೇಳಿ ಪಡೆಯಿರಿ. *

ಯೆಶಾಯ 62:10ರಲ್ಲಿರುವ ದೃಶ್ಯಕ್ಕೆ ಮತ್ತೆ ಹೋಗೋಣ. ಮುಂದಾಗಿ ಬಂದ ಕೆಲವು ಯೆಹೂದ್ಯರು ಮಾರ್ಗವನ್ನು ಸಮತಟ್ಟುಗೊಳಿಸಿ ಸರಾಗಮಾಡುವುದರಲ್ಲಿ ಕಠಿಣ ಶ್ರಮಪಟ್ಟಿರಬಹುದು. ಹೀಗೆ ದೇವಜನರು ಸ್ವದೇಶವನ್ನು ಮುಟ್ಟಲು ಸಹಾಯಮಾಡಿದರು. ಆಧ್ಯಾತ್ಮಿಕ ಗುರಿಗಳನ್ನು ತಲುಪಲು ನೀವು ಕಠಿಣ ಶ್ರಮಪಡುತ್ತಿರುವುದಾದರೆ ಬಿಟ್ಟುಕೊಡಬೇಡಿ. ದೇವರ ಸಹಾಯದಿಂದ ನೀವೂ ನಿಮ್ಮ ಗುರಿಗಳನ್ನು ಮುಟ್ಟಬಹುದು. ನಿಮ್ಮ ಮುಂದಿರುವ ಅಡೆತಡೆಗಳನ್ನು ತೆಗೆಯಲು ಪ್ರಯತ್ನಿಸುತ್ತಿರುವಾಗ ವಿವೇಕಕ್ಕಾಗಿ ಯೆಹೋವನಲ್ಲಿ ಬೇಡಿಕೊಳ್ಳಿ. ತಕ್ಕ ಸಮಯದಲ್ಲಿ ‘ನೀವು ನಡೆಯುವ ದಾರಿಯನ್ನು ಸಮಮಾಡಲು’ ಯೆಹೋವನು ಹೇಗೆ ಸಹಾಯ ಮಾಡುತ್ತಾನೆಂದು ನೋಡುವಿರಿ.—ಜ್ಞಾನೋ. 4:26.

^ ಪ್ಯಾರ. 8 ಹೆಸರನ್ನು ಬದಲಾಯಿಸಲಾಗಿದೆ.

^ ಪ್ಯಾರ. 18 ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟ 111-112 ನೋಡಿ.