ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರಿಗೆ ತಮ್ಮ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ನೆರವಾಗಿ

ಇತರರಿಗೆ ತಮ್ಮ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ನೆರವಾಗಿ

“ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.”—ಕೀರ್ತ. 32:8.

1, 2. ಭೂಮಿಯಲ್ಲಿರುವ ತನ್ನ ಸೇವಕರ ಬಗ್ಗೆ ಯೆಹೋವನ ನೋಟವೇನು?

ಮಕ್ಕಳು ಆಡುತ್ತಿರುವುದನ್ನು ನೋಡುವಾಗ ಅವರಲ್ಲಿರುವ ಸಾಮರ್ಥ್ಯಗಳು ಹೆತ್ತವರಿಗೆ ಗೊತ್ತಾಗುತ್ತದೆ. ಇದನ್ನು ನೋಡಿ ಪುಳಕಗೊಳ್ಳುತ್ತಾರೆ. ನಿಮಗೂ ಹಾಗನಿಸಿದೆಯಾ? ಕೆಲವು ಮಕ್ಕಳಿಗೆ ಸ್ವಾಭಾವಿಕವಾಗಿ ತುಂಬ ಚುರುಕು ಬುದ್ಧಿ ಇರುತ್ತದೆ. ಇನ್ನು ಕೆಲವು ಮಕ್ಕಳಿಗೆ ಕ್ರೀಡಾ ಸಾಮರ್ಥ್ಯವಿರುತ್ತದೆ. ಆದರೆ ಅವರ ಒಡಹುಟ್ಟಿದವರಿಗೆ ಕೇರಮ್‌ ಬೋರ್ಡ್‌ನಂಥ ಆಟಗಳಲ್ಲಿ, ಕಲೆ ಅಥವಾ ಕರಕೌಶಲದಲ್ಲಿ ಆಸಕ್ತಿ ಇರುತ್ತದೆ. ಹೀಗೆ ತಮ್ಮ ಮಕ್ಕಳ ಸಾಮರ್ಥ್ಯ ಏನೇ ಇರಲಿ ಹೆತ್ತವರಿಗೆ ಅದು ಗೊತ್ತಾಗುತ್ತಾ ಹೋದಂತೆ ತುಂಬ ಆನಂದಪಡುತ್ತಾರೆ.

2 ಯೆಹೋವನು ಸಹ ತನ್ನ ಭೂಮಕ್ಕಳಲ್ಲಿ ತುಂಬ ಆಸಕ್ತಿ ತೋರಿಸುತ್ತಾನೆ. ಆಧುನಿಕ ದಿನದ ತನ್ನ ಸೇವಕರನ್ನು ‘ಸಮಸ್ತಜನಾಂಗಗಳ ಇಷ್ಟವಸ್ತುಗಳಂತೆ’ ನೋಡುತ್ತಾನೆ. (ಹಗ್ಗಾ. 2:7) ಅವರು ಆತನಿಗೆ ವಿಶೇಷವಾಗಿ ಇಷ್ಟವಾಗುವುದು ಅವರಲ್ಲಿರುವ ನಂಬಿಕೆ ಮತ್ತು ಭಕ್ತಿಯಿಂದಾಗಿ. ಆದರೆ ಇಂದಿರುವ ಸಾಕ್ಷಿಗಳಲ್ಲಿ ಅನೇಕ ಪ್ರತಿಭೆಗಳಿರುವುದನ್ನು ನೀವು ಗಮನಿಸಿರಬಹುದು. ಕೆಲವು ಸಹೋದರರು ಸಾರ್ವಜನಿಕವಾಗಿ ಒಳ್ಳೇ ಉಪನ್ಯಾಸ ನೀಡುತ್ತಾರೆ. ಇನ್ನು ಕೆಲವರು ಕೆಲಸಕಾರ್ಯಗಳನ್ನು ಸುಸಂಘಟಿತವಾಗಿ ಮಾಡುತ್ತಾರೆ. ಅನೇಕ ಸಹೋದರಿಯರು ಹೊಸ ಭಾಷೆಗಳನ್ನು ಕಲಿಯುವುದರಲ್ಲಿ ನಿಪುಣೆಯರು ಮತ್ತು ಈ ಕೌಶಲವನ್ನು ಶುಶ್ರೂಷೆಯಲ್ಲಿ ಬಳಸುತ್ತಾರೆ. ಇನ್ನು ಕೆಲವರು ಪ್ರೋತ್ಸಾಹದ ಅಗತ್ಯವಿದ್ದವರಿಗೆ, ಅನಾರೋಗ್ಯ ಇದ್ದವರಿಗೆ ಸಹಾಯಹಸ್ತ ಚಾಚುವುದರಲ್ಲಿ ಮುಂದು. (ರೋಮ. 16:1, 12) ನಮ್ಮ ಸಭೆಯಲ್ಲಿ ಇಂಥ ಕ್ರೈಸ್ತರ ಜೊತೆ ಇರಲು ನಮಗೆ ಖುಷಿಯಾಗುತ್ತದಲ್ಲವೇ!

3. ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುತ್ತೇವೆ?

3 ಕೆಲವು ಜೊತೆ ವಿಶ್ವಾಸಿಗಳು, ಯುವಕರು ಅಥವಾ ಹೊಸದಾಗಿ ದೀಕ್ಷಾಸ್ನಾನ ಪಡೆದಿರುವವರಿಗೆ ಸಭೆಯಲ್ಲಿ ತಮ್ಮ ಪಾತ್ರವೇನು ಎಂಬದರ ಬಗ್ಗೆ ಅನಿಶ್ಚಿತತೆ ಇರುತ್ತದೆ.  ಅವರಿಗಿರುವ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ನಾವು ಹೇಗೆ ಸಹಾಯ ಮಾಡಬಹುದು? ಯೆಹೋವನು ಮಾಡುವಂತೆ ನಾವೂ ಅವರಲ್ಲಿರುವ ಒಳ್ಳೇ ಗುಣಗಳನ್ನು ನೋಡಲು ಯಾಕೆ ಪ್ರಯತ್ನಿಸಬೇಕು?

ಯೆಹೋವನು ತನ್ನ ಸೇವಕರಲ್ಲಿ ಒಳ್ಳೇದನ್ನು ನೋಡುತ್ತಾನೆ

4, 5. ಯೆಹೋವನು ತನ್ನ ಸೇವಕರಲ್ಲಿರುವ ಸಾಮರ್ಥ್ಯಗಳನ್ನು ನೋಡುತ್ತಾನೆಂದು ನ್ಯಾಯಸ್ಥಾಪಕರು 6:11-16ರ ವೃತ್ತಾಂತದಿಂದ ಹೇಗೆ ತಿಳಿದುಬರುತ್ತದೆ?

4 ಬೈಬಲ್‍ನ ಅನೇಕ ವೃತ್ತಾಂತಗಳು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತವೆ. ಅದೇನೆಂದರೆ ಯೆಹೋವನು ತನ್ನ ಸೇವಕರಲ್ಲಿ ಈಗಾಗಲೇ ಇರುವ ಒಳ್ಳೇತನವನ್ನು ಮಾತ್ರವಲ್ಲ ಮುಂದೆ ಏನನ್ನೋ ಸಾಧಿಸಲು ಅವರಲ್ಲಿರುವ ಸಾಮರ್ಥ್ಯಗಳನ್ನು ಸಹ ನೋಡುತ್ತಾನೆ. ಗಿದ್ಯೋನನ ಉದಾಹರಣೆ ನೋಡಿ. ಮಿದ್ಯಾನ್ಯರ ದಬ್ಬಾಳಿಕೆಯಿಂದ ದೇವಜನರನ್ನು ಬಿಡಿಸಲು ಅವನನ್ನು ದೇವರು ಆಯ್ಕೆ ಮಾಡಿದನು. ಒಬ್ಬ ದೇವದೂತನು ಬಂದು ಅವನಿಗೆ “ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಎಂದು ವಂದಿಸಿದನು. (ನ್ಯಾಯ. 6:12) ಗಿದ್ಯೋನನಿಗೆ ಈ ಮಾತುಗಳನ್ನು ಕೇಳಿ ಒಂದು ಕ್ಷಣ ದಂಗು ಬಡಿದಂತಾಗಿರಬಹುದು. ಯಾಕೆಂದರೆ ಅವನು ಯಾವತ್ತೂ ತನ್ನನ್ನು “ಪರಾಕ್ರಮಶಾಲಿ” ಎಂದು ಎಣಿಸಿರಲಿಲ್ಲ. ತನಗಿದ್ದ ಅನುಮಾನಗಳನ್ನು ಮತ್ತು ತಾನು ಅಲ್ಪನು, ಕನಿಷ್ಠನು ಎಂದು ದೇವದೂತನಿಗೆ ಹೇಳಿದ. ಆದರೆ ಇವರ ಮಾತುಕತೆಯಿಂದ ತಿಳಿದುಬರುವುದೇನೆಂದರೆ ಗಿದ್ಯೋನನ ಬಗ್ಗೆ ಯೆಹೋವನಿಗೆ ತುಂಬ ಸಕಾರಾತ್ಮಕ ನೋಟವಿತ್ತು.—ನ್ಯಾಯಸ್ಥಾಪಕರು 6:11-16 ಓದಿ.

5 ಇಸ್ರಾಯೇಲ್ಯರನ್ನು ಗಿದ್ಯೋನ ಬಿಡಿಸುತ್ತಾನೆ ಎಂದು ಯೆಹೋವನಿಗೆ ನಂಬಿಕೆ ಇತ್ತು ಏಕೆಂದರೆ ಅವನಲ್ಲಿದ್ದ ಕೌಶಲಗಳನ್ನು ನೋಡಿದ್ದನು. ಉದಾಹರಣೆಗೆ ಗಿದ್ಯೋನನು ಹೇಗೆ ತನ್ನೆಲ್ಲಾ ಶಕ್ತಿಹಾಕಿ ಗೋದಿಯನ್ನು ಬಡಿದನು ಎಂದು ಯೆಹೋವನ ದೂತನು ಗಮನಿಸಿದ್ದನು. ಇನ್ನೊಂದು ವಿಷಯ ಸಹ ದೇವದೂತನ ಗಮನಕ್ಕೆ ಬಂದಿತು. ಬೈಬಲ್‌ ಕಾಲದಲ್ಲಿ ಧಾನ್ಯಗಳನ್ನು ತೆರೆದ ಜಾಗದಲ್ಲಿ ಬಡಿಯುತ್ತಿದ್ದರು. ಆಗ ಗಾಳಿಯಿಂದಾಗಿ ಹೊಟ್ಟು ಬೇರ್ಪಡುತ್ತಿತ್ತು. ಆದರೆ ಆಸಕ್ತಿಕರ ವಿಷಯ ಏನೆಂದರೆ ಗಿದ್ಯೋನನು ದ್ರಾಕ್ಷೆಯ ಆಲೆಯ ಮರೆಯಲ್ಲಿ ಕದ್ದುಮುಚ್ಚಿ ಗೋದಿಯನ್ನು ಬಡಿಯುತ್ತಿದ್ದನು. ಯಾಕೆ? ತನಗಿದ್ದ ಚಿಕ್ಕ ಮೊತ್ತದ ಬೆಳೆ ಮಿದ್ಯಾನ್ಯರ ಕಣ್ಣಿಗೆ ಬೀಳಬಾರದೆಂಬ ಕಾರಣಕ್ಕಾಗಿ. ಎಂಥ ಉಪಾಯವಲ್ಲವೇ! ಯೆಹೋವನ ದೃಷ್ಟಿಯಲ್ಲಿ ಗಿದ್ಯೋನನು ಜಾಗ್ರತೆವಹಿಸುವ ಸಾಮಾನ್ಯ ವ್ಯವಸಾಯಗಾರನಷ್ಟೇ ಅಲ್ಲ ಚಾಣಾಕ್ಷ ಮನುಷ್ಯ ಕೂಡ ಆಗಿದ್ದ. ಗಿದ್ಯೋನನಲ್ಲಿದ್ದ ಈ ಸಾಮರ್ಥ್ಯವನ್ನು ಯೆಹೋವನು ನೋಡಿದನು ಮತ್ತು ತರಬೇತುಗೊಳಿಸಿದನು.

6, 7. (ಎ) ಕೆಲವು ಇಸ್ರಾಯೇಲ್ಯರಿಗೆ ಆಮೋಸನ ಬಗ್ಗೆ ಇದ್ದ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಯೆಹೋವನಿಗೆ ಯಾವ ಅಭಿಪ್ರಾಯವಿತ್ತು? (ಬಿ) ಆಮೋಸ ಅಜ್ಞಾನಿಯಾಗಿರಲಿಲ್ಲ ಎಂದು ಹೇಗೆ ಹೇಳಬಹುದು?

6 ಯೆಹೋವನು ತನ್ನ ಸೇವಕರ ಸಾಮರ್ಥ್ಯಗಳನ್ನು ಗಮನಿಸುತ್ತಾನೆಂದು ಆಮೋಸನ ಉದಾಹರಣೆಯಿಂದಲೂ ತಿಳಿಯಬಹುದು. ಅವನು ತೀರ ಸಾಧಾರಣ, ಅಲ್ಪ ವ್ಯಕ್ತಿ ಎಂದು ಅನೇಕರಿಗೆ ಅನಿಸಿದರೂ ಯೆಹೋವನು ಅವನ ಸಾಮರ್ಥ್ಯಗಳನ್ನು ಗುರುತಿಸಿದನು. ಸ್ವತಃ ಆಮೋಸನೇ ತಾನೊಬ್ಬ ಗೊಲ್ಲ ಮತ್ತು ಅತ್ತಿಹಣ್ಣು (ಸಿಕಮೋರ್‌ ಜಾತಿಯ ಅಂಜೂರ ಹಣ್ಣು) ಕೀಳುವವ ಎಂದು ಹೇಳಿದ್ದಾನೆ. ಈ ಜಾತಿಯ ಅಂಜೂರ ಹಣ್ಣನ್ನು ಬಡವರ ಆಹಾರವೆಂದೇ ಕರೆಯುತ್ತಿದ್ದರು. ಇಸ್ರಾಯೇಲಿನ ಹತ್ತು ಕುಲಗಳು ವಿಗ್ರಹಾರಾಧನೆ ಮಾಡುತ್ತಿದ್ದಾಗ ಅವರನ್ನು ಖಂಡಿಸಲು ಯೆಹೋವನು ಆಮೋಸನನ್ನು ಆರಿಸಿದನು. ಕೆಲವು ಇಸ್ರಾಯೇಲ್ಯರು ಆಮೋಸನು ಈ ನೇಮಕಕ್ಕೆ ಅನರ್ಹ ಎಂದು ಭಾವಿಸಿದ್ದರು.—ಆಮೋಸ 7:14, 15 ಓದಿ.

7 ಆಮೋಸ ಒಂದು ಕುಗ್ರಾಮದವನಾಗಿದ್ದ. ಆದರೆ ಅವನಿಗೆ ತನ್ನ ಸಮಯದಲ್ಲಿದ್ದ ರಾಜರ ಬಗ್ಗೆ ಮತ್ತು ಪದ್ಧತಿಗಳ ಬಗ್ಗೆ ತುಂಬ ಜ್ಞಾನವಿತ್ತು. ಅವನು ಅಜ್ಞಾನಿಯಾಗಿರಲಿಲ್ಲ ಎಂದು ಇದರಿಂದ ತಿಳಿದುಬರುತ್ತದೆ. ಆಮೋಸನಿಗೆ ಇಸ್ರಾಯೇಲಿನ ಸ್ಥಿತಿಗತಿಯ ಬಗ್ಗೆಯೂ ಚೆನ್ನಾಗಿ ತಿಳಿದಿತ್ತು. ಅವನು ಸಂಚಾರಿ ವರ್ತಕರೊಟ್ಟಿಗೆ ವ್ಯವಹಾರ ನಡೆಸುತ್ತಿದ್ದನು. ಬಹುಶಃ ಇದರಿಂದಾಗಿ ಸುತ್ತಮುತ್ತಲಿನ ಜನಾಂಗಗಳ ಬಗ್ಗೆಯೂ ಚೆನ್ನಾಗಿ ತಿಳಿದುಕೊಂಡಿದ್ದನು. (ಆಮೋ. 1:6, 9, 11, 13; 2:8; 6:4-6) ಕೆಲವು ಬೈಬಲ್‌ ವಿದ್ವಾಂಸರ ಪ್ರಕಾರ ಆಮೋಸನಿಗೆ ಉತ್ತಮ ಬರವಣಿಗೆ ಕೌಶಲವಿತ್ತು. ಸರಳವಾದ ಆದರೂ ಶಕ್ತಿಯುತ ಪದಗಳನ್ನು ಬಳಸಿದ. ಅಷ್ಟೇ ಅಲ್ಲ, ಹೋಲಿಕೆಗಳನ್ನು ಮತ್ತು ಅಲಂಕಾರ ಭಾಷೆಯನ್ನೂ ಬಳಸಿದ. ಭ್ರಷ್ಟ ಯಾಜಕನಾದ ಅಮಚ್ಯನಿಗೆ ದಿಟ್ಟ ಪ್ರತ್ಯುತ್ತರ ಕೊಟ್ಟ. ಆಮೋಸನು ಪ್ರವಾದನಾ ನೇಮಕಕ್ಕೆ ಅನರ್ಹ ಎಂದು ಕೆಲವರು ಭಾವಿಸಿದರೂ ಯೆಹೋವನು ಮಾಡಿದ ಆಯ್ಕೆ ಸರಿಯಾಗಿತ್ತೆಂದು ಇದು ದೃಢಪಡಿಸುತ್ತದೆ.—ಆಮೋ. 7:12, 13, 16, 17.

8. (ಎ) ಯೆಹೋವನು ದಾವೀದನಲ್ಲಿ ಯಾವ ಭರವಸೆ ತುಂಬಿದನು? (ಬಿ) ಆತ್ಮವಿಶ್ವಾಸ ಮತ್ತು ಕೌಶಲದ ಕೊರತೆ ಇರುವವರಿಗೆ ಕೀರ್ತನೆ 32:8ರಲ್ಲಿರುವ ಮಾತುಗಳು ಹೇಗೆ ಧೈರ್ಯ ತುಂಬಿಸುತ್ತವೆ?

8 ಯೆಹೋವನು ತನ್ನ ಸೇವಕರಲ್ಲಿ ಪ್ರತಿಯೊಬ್ಬನ ಸಾಮರ್ಥ್ಯಗಳನ್ನು ನೋಡುತ್ತಾನೆ. ರಾಜ ದಾವೀದನನ್ನು ‘ಕಟಾಕ್ಷಿಸಿ’ ಅಂದರೆ ಅವನ ಮೇಲೆ ಕೃಪಾದೃಷ್ಟಿಯನ್ನಿಟ್ಟು ಮುನ್ನಡೆಸುವೆನು ಎಂದು ಯೆಹೋವನು ಅವನಲ್ಲಿ ಭರವಸೆ ತುಂಬಿದನು. (ಕೀರ್ತನೆ 32:8 ಓದಿ.) ಈ ಮಾತುಗಳು ನಮ್ಮನ್ನೂ ಉತ್ತೇಜಿಸಬೇಕಲ್ಲವೇ? ನಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇರಬಹುದು. ಆದರೆ ದೇವರು  ನಮಗೆ ನಮ್ಮ ಇತಿಮಿತಿಗಳನ್ನು ಜಯಿಸಲು ಮತ್ತು ನಮ್ಮಿಂದ ಮುಟ್ಟಲು ಅಸಾಧ್ಯ ಎಂದನಿಸುವ ಗುರಿಗಳನ್ನು ಮುಟ್ಟಲು ಸಹಾಯ ಮಾಡುತ್ತಾನೆ. ಅನುಭವವಿಲ್ಲದ ಒಬ್ಬ ಪರ್ವತಾರೋಹಿ ಮೇಲೆ ಹತ್ತುತ್ತಾ ಹೋಗುವಾಗ ಅವನ ಒಂದೊಂದು ಹೆಜ್ಜೆಯನ್ನೂ ಮಾರ್ಗದರ್ಶಕನು ಜಾಗರೂಕತೆಯಿಂದ ಗಮನಿಸುತ್ತಾನೆ. ಹಾಗೆಯೇ ನಾವು ಆಧ್ಯಾತ್ಮಿಕ ಏಳಿಗೆಯತ್ತ ಹೆಜ್ಜೆ ಹಾಕುವಾಗ ಯೆಹೋವನು ನಮ್ಮ ಮೇಲೆ ದೃಷ್ಟಿ ಇಟ್ಟು ಮುನ್ನಡೆಸುತ್ತಾನೆ. ನಮ್ಮಲ್ಲಿರುವ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ನೆರವಾಗುವಂತೆ ಯೆಹೋವನು ಕೆಲವೊಮ್ಮೆ ನಮ್ಮ ಜೊತೆ ವಿಶ್ವಾಸಿಗಳನ್ನೂ ಬಳಸುತ್ತಾನೆ. ಹೇಗೆ?

ಇತರರಲ್ಲಿರುವ ಒಳ್ಳೇದನ್ನು ನೋಡಿ

9. ಇತರರ ವಿಷಯದಲ್ಲೂ ಆಸಕ್ತಿ ವಹಿಸುವಂತೆ ಪೌಲನು ಹೇಳಿದ ಮಾತನ್ನು ನಾವು ಹೇಗೆ ಅನ್ವಯಿಸಬಹುದು?

9 ನಮ್ಮ ಜೊತೆ ವಿಶ್ವಾಸಿಗಳ ವಿಷಯದಲ್ಲೂ ನಾವು ಆಸಕ್ತಿ ವಹಿಸಬೇಕೆಂದು ಪೌಲ ಎಲ್ಲಾ ಕ್ರೈಸ್ತರಿಗೆ ಉತ್ತೇಜಿಸಿದನು. (ಫಿಲಿಪ್ಪಿ 2:3, 4 ಓದಿ.) ಪೌಲನ ಮಾತಿನ ಒಂದರ್ಥ ಇತರರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗದನ್ನು ಹೇಳಬೇಕೆನ್ನುವುದೇ. ನಾವು ಮಾಡಿರುವ ಪ್ರಗತಿಯ ಬಗ್ಗೆ ಯಾರಾದರೂ ನಮಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಹೇಗನಿಸುತ್ತದೆ? ಇನ್ನಷ್ಟು ಹೆಚ್ಚು ಪ್ರಗತಿ ಮಾಡಲು, ನಮ್ಮಿಂದಾದ ಎಲ್ಲವನ್ನೂ ಮಾಡಲು ಸ್ಫೂರ್ತಿ ಸಿಗುತ್ತದೆ ಅಲ್ಲವೇ? ಅದೇ ರೀತಿ ನಾವು ನಮ್ಮ ಜೊತೆವಿಶ್ವಾಸಿಗಳ ಸಾಮರ್ಥ್ಯಗಳನ್ನು ಮೆಚ್ಚಿ ಅದನ್ನವರಿಗೆ ಹೇಳಿದರೆ ಆಧ್ಯಾತ್ಮಿಕವಾಗಿ ಬೆಳೆಯಲು ಸಹಾಯ ಮಾಡುತ್ತೇವೆ.

10. ಯಾರಿಗೆ ನಾವು ವಿಶೇಷ ಗಮನ ಕೊಡಬೇಕು?

10 ಯಾರಿಗೆ ನಾವು ವಿಶೇಷ ಗಮನ ಕೊಡಬೇಕು? ನಮಗೆಲ್ಲರಿಗೂ ಆಗಿಂದಾಗ್ಗೆ ಅಂಥ ಗಮನ ಬೇಕು. ಆದರೆ ಯುವಜನರು ಅಥವಾ ಹೊಸದಾಗಿ ದೀಕ್ಷಾಸ್ನಾನ ಹೊಂದಿರುವ ಸಹೋದರರಿಗೆ ಹೆಚ್ಚಾಗಿ ಬೇಕು. ಸಭಾ ಚಟುವಟಿಕೆಗಳಲ್ಲಿ ಅವರ ಪಾಲೂ ಮಹತ್ವದ್ದು ಎಂಬ ಅರಿವನ್ನು ಅವರಲ್ಲಿ ಮೂಡಿಸಬೇಕು. ಹೀಗೆ ಮಾಡುವಾಗ ಕ್ರೈಸ್ತ ಸಭೆಯಲ್ಲಿ ತಮಗೂ ಒಂದು ಪಾತ್ರವಿದೆ ಎಂದು ಅವರಿಗೆ ಅರ್ಥವಾಗುತ್ತದೆ. ಆದರೆ ಅವರು ಮಾಡುವ ಕೆಲಸಕ್ಕೆ ಪ್ರೋತ್ಸಾಹ ಸಿಗದಿದ್ದರೆ ದೇವರ ವಾಕ್ಯ ಪ್ರೋತ್ಸಾಹಿಸುವಂಥ ಹೆಚ್ಚಿನ ಜವಾಬ್ದಾರಿಗಳಿಗಾಗಿ ಎಟಕಿಸಿಕೊಳ್ಳುವ ಅವರ ಆಸೆ ಬತ್ತಿಹೋಗಬಹುದು.—1 ತಿಮೊ. 3:1.

11. (ಎ) ಹಿರಿಯರೊಬ್ಬರು ಒಬ್ಬ ಯುವಕನಿಗೆ ನಾಚಿಕೆ ಸ್ವಭಾವವನ್ನು ಮೆಟ್ಟಿನಿಲ್ಲಲು ಹೇಗೆ ಸಹಾಯ ಮಾಡಿದರು? (ಬಿ) ಜೂಲಿಯನ್‍ನ ಅನುಭವದಿಂದ ನೀವು ಯಾವ ಪಾಠ ಕಲಿಯುತ್ತೀರಿ?

11 ಲುಡೊವಿಕ್‌ ಎಂಬವರು ಚಿಕ್ಕವರಿದ್ದಾಗ ಬೇರೆ ಸಹೋದರರು ಅವರಲ್ಲಿ ಆಸಕ್ತಿ ತೋರಿಸಿದ್ದರಿಂದ ಪ್ರಯೋಜನ ಪಡೆದರು. ಈಗ ಅವರೂ ಅದನ್ನೇ ಮಾಡುತ್ತಿದ್ದಾರೆ. ಹಿರಿಯರಾಗಿರುವ ಅವರನ್ನುವುದು: “ಒಬ್ಬ ಸಹೋದರನಲ್ಲಿ ನಾನು ನಿಜವಾದ ಆಸಕ್ತಿ ತೋರಿಸುವಾಗ ಬೇಗನೆ ಪ್ರಗತಿ ಮಾಡುತ್ತಾನೆ.” ನಾಚಿಕೆ ಸ್ವಭಾವದ ಜೂಲಿಯನ್‌ ಎಂಬ ಯುವಕನ ಬಗ್ಗೆ ಹೇಳುತ್ತಾ ಅವರು ಮುಂದುವರಿಸುವುದು: “ಜೂಲಿಯನ್‌ ಏನಾದರು ಹೇಳಲು ಅಥವಾ ಮಾಡಲು ಬಯಸುತ್ತಿದ್ದಾಗಲೆಲ್ಲ ಅದನ್ನು ಒಡ್ಡೊಡ್ಡಾಗಿ ಮಾಡುತ್ತಿದ್ದ. ಅವನು ಮಾಡುತ್ತಿದ್ದದ್ದು ತುಂಬ ಅಸಹಜವಾಗಿತ್ತು. ಆದರೆ ಅವನಲ್ಲಿ ತುಂಬ ದಯಾಗುಣವಿದೆ, ಸಭೆಯಲ್ಲಿದ್ದವರಿಗೆ ನಿಜವಾಗಲೂ ಸಹಾಯ ಮಾಡುವ ಮನಸ್ಸಿದೆ ಎಂದು ಅರಿತೆ. ಆದ್ದರಿಂದ ಅವನ ಹೇತುಗಳನ್ನು ಪ್ರಶ್ನಿಸುವ ಬದಲು ಅವನಲ್ಲಿರುವ ಸಕಾರಾತ್ಮಕ ಗುಣಗಳಿಗೆ ಗಮನಕೊಟ್ಟೆ. ಅವನನ್ನು ಪ್ರೋತ್ಸಾಹಿಸಿದೆ.” ಸಮಯ ದಾಟಿದಂತೆ ಜೂಲಿಯನ್‌ ಒಬ್ಬ ಶುಶ್ರೂಷಾ ಸೇವಕನಾದ ಮತ್ತು ಈಗ ಅವನೊಬ್ಬ ರೆಗ್ಯುಲರ್‌ ಪಯನೀಯರ್‌.

ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ಸಹಾಯಮಾಡಿ

12. ಒಬ್ಬ ವ್ಯಕ್ತಿಗೆ ತನ್ನ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ನಾವು ಸಹಾಯ ಮಾಡಬೇಕಾದರೆ ನಮಗೆ ಯಾವ ಗುಣ ಅವಶ್ಯ? ಉದಾಹರಣೆ ಕೊಡಿ.

12 ಒಬ್ಬ ವ್ಯಕ್ತಿಗೆ ತನ್ನ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ಸಹಾಯ ಮಾಡಬೇಕಾದರೆ ನಾವು ವಿವೇಚಿಸುವವರಾಗಿರಬೇಕು. ಜೂಲಿಯನ್‍ನ ಉದಾಹರಣೆ ತೋರಿಸಿದಂತೆ ಒಬ್ಬ ವ್ಯಕ್ತಿಯ ಬಲಹೀನತೆಗಳ ಮರೆಯಲ್ಲಿ ಒಳ್ಳೇ ಗುಣಗಳು ಮತ್ತು ಕೌಶಲಗಳು ಅಡಗಿರಬಹುದು. ಅವುಗಳನ್ನು ನಾವು ವಿವೇಚಿಸಿ ತಿಳಿದುಕೊಂಡು ಇನ್ನಷ್ಟು ಹರಿತಗೊಳಿಸಬೇಕು. ಅಪೊಸ್ತಲ ಪೇತ್ರನ ವಿಷಯದಲ್ಲಿ ಯೇಸು ಇದನ್ನೇ ಮಾಡಿದನು. ಆಗಾಗ ಪೇತ್ರನು ಅಸ್ಥಿರನಂತೆ ತೋರಿಬಂದರೂ ಬಂಡೆಯಂತೆ ಸ್ಥಿರನಾಗುವನು ಎಂದು ಯೇಸು ಅವನ ಬಗ್ಗೆ ಮುಂಚೆಯೇ ಹೇಳಿದ್ದನು.—ಯೋಹಾ. 1:42.

13, 14. (ಎ) ಯುವ ಮಾರ್ಕನ ವಿಷಯದಲ್ಲಿ ಬಾರ್ನಬ ಹೇಗೆ ನಡೆದುಕೊಂಡ? (ಬಿ) ಒಬ್ಬ ಯುವ ಸಹೋದರನಿಗೆ ಮಾರ್ಕನಂತೆ ಯಾವ ಸಹಾಯ ಸಿಕ್ಕಿತು? (ಶೀರ್ಷಿಕೆ ಚಿತ್ರ ನೋಡಿ.)

13 ಇದನ್ನೇ ಮಾರ್ಕ ಎಂಬ ರೋಮನ್‌ ಉಪನಾಮವಿದ್ದ ಯೋಹಾನನ ವಿಷಯದಲ್ಲಿ ಬಾರ್ನಬ ಮಾಡಿದನು. (ಅ. ಕಾ. 12:25) ಬಾರ್ನಬನ ಜೊತೆ ಪೌಲ ತನ್ನ ಮೊದಲನೆಯ ಮಿಷನರಿ ಸಂಚಾರಕ್ಕೆ ಹೊರಟಾಗ ಅವರೊಟ್ಟಿಗೆ ಮಾರ್ಕನು “ಪರಿಚಾರಕನಾಗಿ” ಅಂದರೆ ಬಹುಶಃ ಅವರ ಭೌತಿಕ ಅಗತ್ಯಗಳನ್ನು ನೋಡಿಕೊಳ್ಳುವವನಾಗಿ ಹೋದನು. ಆದರೆ ಪಂಫುಲ್ಯಕ್ಕೆ ತಲುಪಿದ ಮೇಲೆ ಮಾರ್ಕ ಅವರನ್ನು ಇದ್ದಕ್ಕಿದ್ದಂತೆ ಬಿಟ್ಟು ಹೋದನು. ಅಲ್ಲಿಂದ ಉತ್ತರ ದಿಕ್ಕಿನೆಡೆಗೆ ಪ್ರಯಾಣಮಾಡಬೇಕಿದ್ದ  ಪೌಲ ಮತ್ತು ಬಾರ್ನಬರು ಡಕಾಯಿತರ ಹಾವಳಿ ಹೆಚ್ಚಿರುತ್ತಿದ್ದ ಜಾಗವನ್ನು ಹಾದುಹೋಗಬೇಕಿತ್ತು. ಈ ಪ್ರಯಾಣವನ್ನು ಮಾರ್ಕನ ಸಹಾಯವಿಲ್ಲದೆ ಮಾಡಬೇಕಾಯಿತು. (ಅ. ಕಾ. 13:5, 13) ಹಾಗಿದ್ದರೂ ಬಾರ್ನಬನು ಮಾರ್ಕನ ಚಂಚಲ ಗುಣಕ್ಕಲ್ಲ ಬದಲಿಗೆ ಅವನಲ್ಲಿದ್ದ ಒಳ್ಳೇ ಗುಣಗಳಿಗೆ ಗಮನ ಕೊಟ್ಟನೆಂದು ತೋರುತ್ತದೆ. ಮುಂದೆ, ಅವನಿಗೆ ಬೇಕಾದ ತರಬೇತಿ ನೀಡಿದನು. (ಅ. ಕಾ. 15:37-39) ಇದರ ಫಲಿತಾಂಶವಾಗಿ ಮಾರ್ಕ ಯೆಹೋವನ ಪ್ರೌಢ ಸೇವಕನಾದ. ಆಸಕ್ತಿಕರ ವಿಷಯ ಏನೆಂದರೆ ಸಮಯಾನಂತರ ರೋಮ್‍ನಲ್ಲಿ ಪೌಲ ಬಂಧಿಯಾಗಿದ್ದಾಗ ಅವನ ಸಹಾಯಕ್ಕೆ ಮಾರ್ಕನಿದ್ದ. ಪೌಲನು ಅಲ್ಲಿಂದ ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಮಾರ್ಕನ ವಂದನೆಗಳನ್ನೂ ಸೇರಿಸಿದನು. ಅಲ್ಲದೆ ಮಾರ್ಕನ ಬಗ್ಗೆ ಸಕಾರಾತ್ಮಕವಾಗಿ ಬರೆದನು. (ಕೊಲೊ. 4:10) ಪೌಲನೇ ಮಾರ್ಕನ ಸಹಾಯವನ್ನು ಕೇಳಿಕೊಂಡಾಗ ಬಾರ್ನಬನಿಗೆ ಎಷ್ಟು ನೆಮ್ಮದಿ ಅನಿಸಿರಬಹುದೆಂದು ಊಹಿಸಿ.—2 ತಿಮೊ. 4:11.

14 ಹೊಸದಾಗಿ ಹಿರಿಯನಾಗಿ ನೇಮಕಗೊಂಡಿರುವ ಅಲೆಕ್ಸಾಂಡ್ರೆ ಎಂಬವರ ಅನುಭವ ಗಮನಿಸಿ. ಒಬ್ಬ ಸಹೋದರ ಅವರ ಬಗ್ಗೆ ತೋರಿಸಿದ ಒಳನೋಟದಿಂದ ಪ್ರಯೋಜನ ಪಡೆದರು. ಅಲೆಕ್ಸಾಂಡ್ರೆ ಹೇಳುವುದು: “ನಾನು ಯುವಕನಾಗಿದ್ದಾಗ ಸಾರ್ವಜನಿಕವಾಗಿ ಪ್ರಾರ್ಥನೆ ಮಾಡಲು ತುಂಬ ಕಷ್ಟಪಡುತ್ತಿದ್ದೆ. ಆದರೆ ಪ್ರಾರ್ಥನೆಯನ್ನು ಮೊದಲೇ ತಯಾರಿಸುವುದು ಹೇಗೆ, ನಿರಾಳವಾಗಿ ಇರುವುದು ಹೇಗೆ ಎಂದು ಒಬ್ಬ ಹಿರಿಯರು ನನಗೆ ಹೇಳಿಕೊಟ್ಟರು. ಪ್ರಾರ್ಥನೆ ಮಾಡುವ ಅವಕಾಶವನ್ನೇ ಕೊಡದಿರುವ ಬದಲು ಕ್ಷೇತ್ರ ಸೇವಾ ಕೂಟಗಳಲ್ಲಿ ಪ್ರಾರ್ಥನೆ ಮಾಡುವ ಅವಕಾಶವನ್ನು ನನಗೆ ಆಗಾಗ್ಗೆ ಕೊಡುತ್ತಿದ್ದರು. ಸಮಯದಾಟಿದಂತೆ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು.”

15. ಪೌಲ ತನ್ನ ಜೊತೆ ವಿಶ್ವಾಸಿಗಳ ಬಗ್ಗೆ ಹೇಗೆ ಮೆಚ್ಚುಗೆ ವ್ಯಕ್ತಪಡಿಸಿದ?

15 ಒಬ್ಬ ಕ್ರೈಸ್ತನಲ್ಲಿರುವ ಒಳ್ಳೇ ಗುಣ ನಮ್ಮ ಗಮನಕ್ಕೆ ಬಂದರೆ ನಾವದನ್ನು ಇಷ್ಟಪಡುತ್ತೇವೆಂದು ಅವರ ಬಳಿ ಹೋಗಿ ಹೇಳುತ್ತೇವಾ? ರೋಮನ್ನರಿಗೆ 12ನೇ ಅಧ್ಯಾಯದಲ್ಲಿ ಪೌಲನು ಸುಮಾರು 20 ಜೊತೆ ವಿಶ್ವಾಸಿಗಳ ಒಳ್ಳೇ ಗುಣಗಳ ಬಗ್ಗೆ ತಿಳಿಸುತ್ತಾನೆ. ಪೌಲ ಇವರನ್ನು ಇಷ್ಟಪಟ್ಟದ್ದು ಈ ಗುಣಗಳಿಂದಾಗಿಯೇ. (ರೋಮ. 16:3-7, 13) ಉದಾಹರಣೆಗೆ ಆಂದ್ರೋನಿಕ ಮತ್ತು ಯೂನ್ಯ ಕ್ರೈಸ್ತರಾಗಿ ತಾಳಿಕೊಂಡಿರುವುದನ್ನು ಒತ್ತಿಹೇಳುತ್ತಾ ಅವರು ತನಗಿಂತ ಹೆಚ್ಚು ಸಮಯದಿಂದ ಕ್ರಿಸ್ತನ ಸೇವೆ ಮಾಡುತ್ತಿದ್ದಾರೆಂದು ಪೌಲ ಒಪ್ಪಿಕೊಂಡ. ರೂಫನ ತಾಯಿ ಪೌಲನನ್ನು ಪ್ರೀತಿಯಿಂದ ನೋಡಿಕೊಂಡಿದ್ದಿರಬಹುದು. ಅದಕ್ಕಾಗಿ ಅವಳ ಬಗ್ಗೆ ಅಕ್ಕರೆ ತುಂಬಿದ ಮಾತುಗಳನ್ನಾಡುತ್ತಾನೆ.

ಯೆಹೋವನ ಸೇವೆಮಾಡುವ ದೃಢನಿರ್ಧಾರವನ್ನು ರಿಕೊ ಬಿಟ್ಟುಕೊಡದಂತೆ ಫ್ರೆಡ್ರಿಕ್‌ (ಎಡಗಡೆ) ಪ್ರೋತ್ಸಾಹಿಸಿದರು (ಪ್ಯಾರ 16 ನೋಡಿ)

16. ಯುವ ವ್ಯಕ್ತಿಯನ್ನು ಶ್ಲಾಘಿಸುವುದರಿಂದ ಯಾವ ಫಲಿತಾಂಶ ಸಿಗಬಹುದು?

16 ಮನಸಾರೆ ಮಾಡುವ ಶ್ಲಾಘನೆ ಉತ್ತಮ ಫಲಿತಾಂಶ ತರಬಲ್ಲದು. ಫ್ರಾನ್ಸ್‌ನ ರಿಕೊ ಎಂಬ ಹುಡುಗನ ಉದಾಹರಣೆ ಗಮನಿಸಿ. ಇವನ ತಂದೆ ಯೆಹೋವನ ಆರಾಧಕನಾಗಿರಲಿಲ್ಲ. ದೀಕ್ಷಾಸ್ನಾನ ತೆಗೆದುಕೊಳ್ಳಬಾರದೆಂದು ಅವನನ್ನು ವಿರೋಧಿಸುತ್ತಿದ್ದ. ಇದರಿಂದಾಗಿ ರಿಕೊ ತುಂಬ ನಿರುತ್ಸಾಹಗೊಂಡಿದ್ದ. ದೀಕ್ಷಾಸ್ನಾನ ಪಡೆಯಲು ತಾನು ಪ್ರಾಪ್ತ ವಯಸ್ಸಿಗೆ ಬರುವ ತನಕ ಕಾಯಬೇಕು ಎಂದು ನೆನಸಿದ್ದ. ಶಾಲೆಯಲ್ಲೂ ಗೇಲಿಗೆ ಗುರಿಯಾಗುತ್ತಿದ್ದ. ಇದರಿಂದಾಗಿ ತುಂಬ ಮನನೊಂದಿದ್ದ. ಅವನ ಜೊತೆ ಬೈಬಲ್‌ ಅಧ್ಯಯನ ಮಾಡುತ್ತಿದ್ದ ಸಭಾ ಹಿರಿಯ ಫ್ರೆಡ್ರಿಕ್‌ ಹೇಳುವುದು: “ನಾನು ಅವನನ್ನು ಶ್ಲಾಘಿಸುತ್ತಾ, ‘ಇಷ್ಟೆಲ್ಲಾ ವಿರೋಧ ಬರುತ್ತಿರುವುದು ನಿನ್ನಲ್ಲಿ ನಂಬಿಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸುವಷ್ಟು ಧೈರ್ಯ ಇದೆಯೆಂದು ತೋರಿಸುತ್ತದೆ’ ಅಂತ ಹೇಳಿದೆ.” ಶ್ಲಾಘನೆಯ ಈ ಮಾತುಗಳು ರಿಕೊ ಪ್ರಗತಿ ಮಾಡುತ್ತಾ ಇರುವಂತೆ ಪ್ರೋತ್ಸಾಹಿಸಿದವು ಮತ್ತು ಅವನ ತಂದೆಯೊಟ್ಟಿಗೆ ಹೆಚ್ಚು ಆಪ್ತನಾಗಲು ಸಹಾಯಮಾಡಿದವು. ಹೀಗೆ 12 ವರ್ಷ ಪ್ರಾಯದಲ್ಲೇ ಅವನು ದೀಕ್ಷಾಸ್ನಾನ ಪಡೆಯಲು ಶಕ್ತನಾದ.

ರಾಯನ್‌ಗೆ ಮಿಷನರಿಯಾಗಲು ಜೆರೋಮ್‌ (ಬಲಗಡೆ) ಸಹಾಯ ಮಾಡಿದರು (ಪ್ಯಾರ 17 ನೋಡಿ)

17. (ಎ) ನಮ್ಮ ಸಹೋದರರು ಹೆಚ್ಚು ಪ್ರಗತಿ ಮಾಡುವಂತೆ ನಾವು ಹೇಗೆ ಸಹಾಯ ಮಾಡಬಹುದು? (ಬಿ) ಯುವ ಸಹೋದರರಲ್ಲಿ ಒಬ್ಬ ಮಿಷನರಿ ಹೇಗೆ ವೈಯಕ್ತಿಕ ಆಸಕ್ತಿ ತೋರಿಸಿದರು? (ಸಿ) ಇದು ಯಾವ ಫಲಿತಾಂಶ ತಂದಿತು?

17 ಜೊತೆ ವಿಶ್ವಾಸಿಗಳು ಚೆನ್ನಾಗಿ ನೇಮಕಗಳನ್ನು ನಿರ್ವಹಿಸಿದ್ದಕ್ಕೆ ಅಥವಾ ಅವರ ಪರಿಶ್ರಮಕ್ಕೆ ನಾವು ಮೆಚ್ಚುಗೆ ವ್ಯಕ್ತಪಡಿಸುವಾಗ ಯೆಹೋವನ ಸೇವೆಯನ್ನು ಹೆಚ್ಚು ಮಾಡಲು  ಅವರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಸಿಲ್ವಿ * ಎಂಬ ಸಹೋದರಿ ಫ್ರಾನ್ಸ್‌ನ ಬೆತೆಲಿನಲ್ಲಿ ಹಲವಾರು ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ಸಹೋದರರನ್ನು ಶ್ಲಾಘಿಸುವುದರಲ್ಲಿ ಸಹೋದರಿಯರ ಪಾತ್ರದ ಬಗ್ಗೆ ಅವರು ಹೇಳುತ್ತಾರೆ. ಸಹೋದರಿಯರು ಗಮನಿಸುವ ಅಂಶಗಳು ಸಹೋದರರು ಗಮನಿಸುವ ಅಂಶಗಳಿಗಿಂತ ಭಿನ್ನವಾಗಿರುತ್ತದೆ ಎಂದವರು ಹೇಳುತ್ತಾರೆ. ಹೀಗೆ ಸಹೋದರಿಯರು ಆಡುವ “ಶ್ಲಾಘನೆಯ ಮಾತುಗಳು ಅನುಭವೀ ಸಹೋದರರ ಹೇಳಿಕೆಗಳಿಗೆ ಪೂರಕವಾಗಿರುತ್ತದೆ.” ಅಲ್ಲದೆ “ಶ್ಲಾಘಿಸುವುದನ್ನು ನನ್ನ ಕರ್ತವ್ಯ ಎಂದೆಣಿಸುತ್ತೇನೆ” ಎನ್ನುತ್ತಾರೆ ಸಿಲ್ವಿ. (ಜ್ಞಾನೋ. 3:27) ಫ್ರೆಂಚ್‌ ಗಯಾನ ದೇಶದಲ್ಲಿ ಮಿಷನರಿಯಾಗಿರುವ ಜೆರೋಮ್‌ ಅನೇಕ ಯುವ ಸಹೋದರರಿಗೆ ಮಿಷನರಿಗಳಾಗಲು ಸಹಾಯ ಮಾಡಿದ್ದಾರೆ. “ನಾನು ಯುವ ಸಹೋದರರಿಗೆ ಕ್ಷೇತ್ರ ಸೇವೆಯಲ್ಲಿ ಯಾವುದೊ ಒಂದು ನಿರ್ದಿಷ್ಟ ಅಂಶಕ್ಕಾಗಿ ಅಥವಾ ಅವರು ಚೆನ್ನಾಗಿ ಯೋಚಿಸಿ ಕೂಟಗಳಲ್ಲಿ ಕೊಟ್ಟ ಉತ್ತರಗಳಿಗಾಗಿ ಶ್ಲಾಘಿಸುತ್ತೇನೆ. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ತಮ್ಮ ಸಾಮರ್ಥ್ಯಗಳನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳುವುದನ್ನು ಗಮನಿಸಿದ್ದೇನೆ” ಎನ್ನುತ್ತಾರೆ ಜೆರೋಮ್‌.

18. ಯುವ ಸಹೋದರರೊಂದಿಗೆ ಕೆಲಸ ಮಾಡುವುದು ಏಕೆ ಪ್ರಯೋಜನಕಾರಿ?

18 ಜೊತೆ ವಿಶ್ವಾಸಿಗಳೊಟ್ಟಿಗೆ ಕೆಲಸ ಮಾಡುವ ಮೂಲಕ ಸಹ ಆಧ್ಯಾತ್ಮಿಕ ಪ್ರಗತಿಮಾಡಲು ನಾವು ಪ್ರಚೋದಿಸುತ್ತೇವೆ. ಉದಾಹರಣೆಗೆ, ಕಂಪ್ಯೂಟರ್‌ ಸೌಲಭ್ಯವಿಲ್ಲದ ವೃದ್ಧರಿಗಾಗಿ jw.org ವೆಬ್ಸೈಟ್‍ನಿಂದ ಪ್ರೋತ್ಸಾಹದಾಯಕ ಮಾಹಿತಿ ಮುದ್ರಿಸಿ ಹಿರಿಯನೊಬ್ಬ ಕೊಡಬೇಕಾಗಿದೆ. ಇದಕ್ಕಾಗಿ ಅವನು ಕಂಪ್ಯೂಟರ್‌ ಬಳಕೆಯಲ್ಲಿ ನಿಪುಣನಾಗಿರುವ ಯುವ ಸಹೋದರನ ಸಹಾಯ ಕೇಳಬಹುದು. ರಾಜ್ಯ ಸಭಾಗೃಹದಲ್ಲಿ ಶುಚಿತ್ವ ಮಾಡುವ ಕೆಲಸ ಅಥವಾ ರಿಪೇರಿ ಕೆಲಸ ಇದ್ದರೆ ಒಬ್ಬ ಯುವ ಸಹೋದರನನ್ನು ನಿಮ್ಮ ಜೊತೆ ಕೆಲಸ ಮಾಡಲು ಯಾಕೆ ಕರೆಯಬಾರದು? ಇಂಥ ಅವಕಾಶಗಳು ಯುವಕರನ್ನು ಗಮನಿಸಿ ಅವರನ್ನು ಪ್ರಶಂಸಿಸಲು ಮತ್ತು ಫಲಿತಾಂಶಗಳನ್ನು ನೋಡಲು ನಿಮಗೆ ನೆರವಾಗುತ್ತವೆ.—ಜ್ಞಾನೋ. 15:23.

ಭವಿಷ್ಯತ್ತಿಗಾಗಿ ಕಟ್ಟೋಣ

19, 20. ಪ್ರಗತಿ ಮಾಡುವಂತೆ ನಾವು ಇತರರಿಗೆ ಸಹಾಯ ಮಾಡಬೇಕು ಏಕೆ?

19 ಇಸ್ರಾಯೇಲ್ಯರನ್ನು ಮುನ್ನಡೆಸಲು ಯೆಹೋಶುವನನ್ನು ಯೆಹೋವನು ನೇಮಿಸಿದಾಗ “ದೃಢನಾಗುವಂತೆ ಅವನನ್ನು ಧೈರ್ಯಪಡಿಸಬೇಕೆಂದು” ಮೋಶೆಗೆ ಆಜ್ಞಾಪಿಸಿದನು. (ಧರ್ಮೋಪದೇಶಕಾಂಡ 3:28 ಓದಿ.) ಇಂದು ಸಹ ನಮ್ಮ ಭೂವ್ಯಾಪಕ ಸಭೆಗೆ ಅನೇಕ ಜನರು ಸೇರುತ್ತಿದ್ದಾರೆ. ಯುವ ಸಹೋದರರಿಗೆ ಮತ್ತು ಹೊಸಬರಿಗೆ ತಮ್ಮ ಸಾಮರ್ಥ್ಯಗಳನ್ನು ಪೂರ್ತಿಯಾಗಿ ಬಳಸಲು ಹಿರಿಯರು ಮಾತ್ರವಲ್ಲ ಅನುಭವಸ್ಥ ಕ್ರೈಸ್ತರು ಸಹಾಯಮಾಡಬಲ್ಲರು. ಹೀಗೆ ಮಾಡಿದರೆ ಹೆಚ್ಚೆಚ್ಚು ಮಂದಿ ಪೂರ್ಣಸಮಯ ಸೇವೆಯಲ್ಲಿ ತೊಡಗುವರು ಮತ್ತು ಹೆಚ್ಚೆಚ್ಚು ಮಂದಿ ‘ಇತರರಿಗೆ ಬೋಧಿಸಲು ಅರ್ಹರಾಗುವರು.’—2 ತಿಮೊ. 2:2.

20 ನಾವು ಒಂದು ದೊಡ್ಡ ಸಭೆಯಲ್ಲಿರಲಿ ಅಥವಾ ಮುಂದಕ್ಕೆ ಸಭೆಯಾಗಲಿರುವ ಚಿಕ್ಕ ಗುಂಪಿನಲ್ಲೇ ಇರಲಿ ಭವಿಷ್ಯತ್ತಿಗಾಗಿ ಕಟ್ಟೋಣ. ಈ ನಿಟ್ಟಿನಲ್ಲಿ ನಾವು, ತನ್ನ ಸೇವಕರಲ್ಲಿ ಒಳ್ಳೇದನ್ನೇ ನೋಡುವ ಯೆಹೋವನನ್ನು ಅನುಕರಿಸೋಣ.

^ ಪ್ಯಾರ. 17 ಹೆಸರನ್ನು ಬದಲಾಯಿಸಲಾಗಿದೆ.