“ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು”
“ಎರಡನೆಯ ಆಜ್ಞೆಯು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ.”—ಮತ್ತಾ. 22:39.
1, 2. (ಎ) ಧರ್ಮಶಾಸ್ತ್ರದಲ್ಲಿ ಎರಡನೇ ಅತಿ ದೊಡ್ಡ ಆಜ್ಞೆ ಯಾವುದೆಂದು ಯೇಸು ಹೇಳಿದನು? (ಬಿ) ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?
ಒಬ್ಬ ಫರಿಸಾಯ ಯೇಸುವನ್ನು ಪರೀಕ್ಷಿಸುವ ಸಲುವಾಗಿ “ಬೋಧಕನೇ, ಧರ್ಮಶಾಸ್ತ್ರದಲ್ಲಿ ಅತಿ ದೊಡ್ಡ ಆಜ್ಞೆ ಯಾವುದು?” ಎಂದು ಕೇಳಿದನು. ಅದಕ್ಕೆ ಯೇಸು “‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’ ಇದೇ ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆಯಾಗಿದೆ” ಎಂದನು. ಈ ಆಜ್ಞೆಯ ಬಗ್ಗೆ ನಾವು ಹಿಂದಿನ ಲೇಖನದಲ್ಲಿ ಕಲಿತೆವು. ಯೇಸು ಮಾತು ಮುಂದುವರಿಸಿ ಹೀಗೆ ಹೇಳಿದನು: “ಇದರಂತಿರುವ ಎರಡನೆಯ ಆಜ್ಞೆಯು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ.”—ಮತ್ತಾ. 22:34-39.
2 ನಮ್ಮ ನೆರೆಯವನನ್ನು ನಮ್ಮಂತೆಯೇ ಪ್ರೀತಿಸಬೇಕು ಎಂದು ಯೇಸು ಹೇಳಿದನು. ಇದು ಎರಡು ಪ್ರಶ್ನೆಗಳನ್ನು ಎಬ್ಬಿಸುತ್ತದೆ: ನಿಜವಾಗಿಯೂ ನಮ್ಮ ನೆರೆಯವರು ಯಾರು? ನೆರೆಯವರಿಗೆ ನಾವು ಹೇಗೆ ಪ್ರೀತಿ ತೋರಿಸಬಲ್ಲೆವು?
ನಿಜವಾಗಿಯೂ ನಮ್ಮ ನೆರೆಯವರು ಯಾರು?
3, 4. (ಎ) “ನಿಜವಾಗಿಯೂ ನನ್ನ ನೆರೆಯವನು ಯಾರು?” ಎಂಬ ಪ್ರಶ್ನೆಗೆ ಯೇಸು ಯಾವ ದೃಷ್ಟಾಂತ ಕೊಟ್ಟನು? (ಬಿ) ಕಳ್ಳರು ಹಲ್ಲೆ ನಡೆಸಿ, ದೋಚಿ, ಅರೆಜೀವ ಮಾಡಿದ್ದ ವ್ಯಕ್ತಿಗೆ ಸಮಾರ್ಯದವನು ಹೇಗೆ ಸಹಾಯ ಮಾಡಿದ? (ಶೀರ್ಷಿಕೆ ಚಿತ್ರ ನೋಡಿ.)
3 ನೆರೆಯವನು ಅಂದರೆ ನಮಗೆ ಅಗತ್ಯವಿರುವಾಗ ನೆರವಾಗುವ ಪಕ್ಕದ ಮನೆಯ ವ್ಯಕ್ತಿ ಎಂದು ನಾವು ನೆನಸುತ್ತೇವೆ. (ಜ್ಞಾನೋ. 27:10) ಆದರೆ ಯೇಸು ಆ ಫರಿಸಾಯನಿಗೆ ಕೊಟ್ಟ ಉತ್ತರವನ್ನು ಗಮನಿಸಿ. ತಾನೇ ನೀತಿವಂತ ಎಂದು ನೆನಸುತ್ತಿದ್ದ ಆ ಫರಿಸಾಯ “ನಿಜವಾಗಿಯೂ ನನ್ನ ನೆರೆಯವನು ಯಾರು?” ಎಂದು ಯೇಸುವನ್ನು ಕೇಳಿದ್ದನು. ಇದಕ್ಕೆ ಉತ್ತರ ಕೊಡುತ್ತಾ ಯೇಸು ಪರೋಪಕಾರಿ ಸಮಾರ್ಯದವನ ದೃಷ್ಟಾಂತ ಕೊಟ್ಟನು. (ಲೂಕ 10:29-37 ಓದಿ.) ದಾರಿಯಲ್ಲಿ ಒಬ್ಬ ಯೆಹೂದಿ ವ್ಯಕ್ತಿಯ ಮೇಲೆ ಕಳ್ಳರು ಹಲ್ಲೆ ನಡೆಸಿ, ದೋಚಿ, ಅರೆಜೀವ ಮಾಡಿ ಹೋಗಿದ್ದರು. ಅಲ್ಲಿಂದ ಹಾದುಹೋಗುತ್ತಿದ್ದ ಇಸ್ರಾಯೇಲ್ಯರಾದ ಒಬ್ಬ ಯಾಜಕ ಮತ್ತು ಒಬ್ಬ ಲೇವಿಯನು ಅವನಿಗೆ ಸಹಾಯ ಮಾಡಬೇಕಿತ್ತು. ಆದರೆ ಅವರು ಹಾಗೆ ಮಾಡದೆ ತಮ್ಮ ಪಾಡಿಗೆ ಹೋದರು. ಅವನಿಗೆ ಸಹಾಯ ಮಾಡಿದ್ದು ಒಬ್ಬ ಸಮಾರ್ಯದವನು. ಸಮಾರ್ಯದ ಜನರು ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುತ್ತಿದ್ದರು. ಆದರೆ ಯೆಹೂದ್ಯರಿಗೆ ಅವರ ಬಗ್ಗೆ ತಿರಸ್ಕಾರವಿತ್ತು.—ಯೋಹಾ. 4:9.
4 ಆ ವ್ಯಕ್ತಿಯ ಗಾಯಗಳು ವಾಸಿಯಾಗುವಂತೆ ಸಮಾರ್ಯದವನು ಅವುಗಳ ಮೇಲೆ ದ್ರಾಕ್ಷಾಮದ್ಯ ಮತ್ತು ಎಣ್ಣೆ ಹೊಯ್ದನು. ಅಷ್ಟೇ ಅಲ್ಲ, ಅವನ ಆರೈಕೆಗಾಗಿ ವಸತಿಗೃಹದವನಿಗೆ ಎರಡು ದಿನಾರುಗಳನ್ನು ಕೊಟ್ಟನು. ಎರಡು ದಿನಾರುಗಳು ಎರಡು ದಿನಗಳ ಕೂಲಿಗೆ ಸಮವಾಗಿತ್ತು. (ಮತ್ತಾ. 20:2) ಈ ದೃಷ್ಟಾಂತದಿಂದ ಯೇಸು ಕಲಿಸಿದ್ದೇನೆಂದರೆ ನಮ್ಮೆಲ್ಲಾ ಜೊತೆಮಾನವರನ್ನು ನಾವು ನೆರೆಯವರಂತೆ ಕಾಣಬೇಕು. ಅವರು ಯಾವುದೇ ದೇಶ, ಸಂಸ್ಕೃತಿಯವರಾಗಿದ್ದರೂ ಸರಿಯೇ. ಅವರಿಗೆ ಪ್ರೀತಿ, ಕರುಣೆ ತೋರಿಸುವ ಮೂಲಕ ನಾವು ಅವರ ನೆರೆಯವರಾಗಿ ಇರಬಹುದು.
5. ಸ್ಯಾ೦ಡಿ ಚಂಡಮಾರುತ ಬಡಿದಾಗ ಯೆಹೋವನ ಸೇವಕರು ಹೇಗೆ ನೆರೆಯವರಿಗೆ ಪ್ರೀತಿ ತೋರಿಸಿದರು?
5 ಪರೋಪಕಾರಿ ಸಮಾರ್ಯದವನಂಥ ಕರುಣಾಮಯಿಗಳು ಕಾಣಸಿಗುವುದು ತುಂಬ ಕಷ್ಟ. ಅದರಲ್ಲೂ ಈ “ಕಡೇ ದಿವಸಗಳಲ್ಲಿ” ಅಂಥವರು ತುಂಬ ವಿರಳ. ಸ್ವಾಭಾವಿಕ ಮಮತೆಯಿಲ್ಲದವರು, ಉಗ್ರರು ಮತ್ತು ಒಳ್ಳೇತನವನ್ನು ಪ್ರೀತಿಸದ ಜನರೇ ತುಂಬಿ ಹೋಗಿದ್ದಾರೆ. (2 ತಿಮೊ. 3:1-3) ಉದಾಹರಣೆಗೆ, ಅಕ್ಟೋಬರ್ 2012ರಲ್ಲಿ ಸ್ಯಾ೦ಡಿ ಚಂಡಮಾರುತ ಬಡಿದಾಗ ನ್ಯೂಯಾರ್ಕ್ ನಗರದಲ್ಲಿ ಏನಾಯಿತೆಂದು ನೋಡಿ. ನಗರದ ಜರ್ಜರಿತಗೊಂಡ ಒಂದು ಭಾಗದಲ್ಲಿ ಸಂತ್ರಸ್ತರು ವಿದ್ಯುತ್, ಮತ್ತಿತರ ಅಗತ್ಯ ವಸ್ತುಗಳ ಅಭಾವ ಮತ್ತು ಕೊರೆಯುವ ಚಳಿಯಿಂದ ಒಂದೆಡೆ ಕಷ್ಟಪಡುತ್ತಿದ್ದರು. ಇನ್ನೊಂದೆಡೆ ಇವರಿಂದಲೇ ಲೂಟಿಕೋರರು ಲೂಟಿ ಮಾಡುತ್ತಿದ್ದರು. ಆದರೆ ಯೆಹೋವನ ಸಾಕ್ಷಿಗಳು ಆ ಕ್ಷೇತ್ರದಲ್ಲಿದ್ದ ತಮ್ಮ ಜೊತೆ ಸಾಕ್ಷಿಗಳಿಗೆ ಮತ್ತು ಇತರರಿಗೆ ಸಹಾಯ ಮಾಡಿದರು. ಕ್ರೈಸ್ತರು ಈ ರೀತಿ ನೆರವಾಗುವುದು ಏಕೆಂದರೆ ಅವರಿಗೆ ನೆರೆಯವರ ಮೇಲೆ ಪ್ರೀತಿ ಇದೆ. ಅಂಥ ಪ್ರೀತಿ ತೋರಿಸುವ ಇನ್ನಿತರ ವಿಧಗಳು ಯಾವುವು?
ನೆರೆಯವರಿಗೆ ಪ್ರೀತಿ ತೋರಿಸುವ ಇತರ ವಿಧಗಳು
6. ಸುವಾರ್ತೆ ಸಾರುವ ಮೂಲಕ ನಾವು ಹೇಗೆ ನೆರೆಯವರಿಗೆ ಪ್ರೀತಿ ತೋರಿಸುತ್ತೇವೆ?
6 ಜನರಿಗೆ ಆಧ್ಯಾತ್ಮಿಕ ನೆರವು ನೀಡಿ. “ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನ”ವನ್ನು ಜನರಿಗೆ ಕೊಡುವುದೇ ಈ ನೆರವು. (ರೋಮ. 15:4) ಸಾರುವ ಕೆಲಸದಲ್ಲಿ ಪಾಲ್ಗೊಂಡು ಜನರಿಗೆ ಬೈಬಲ್ ಸತ್ಯ ತಿಳಿಸುವಾಗ ನಾವು ನೆರೆಯವರಿಗೆ ಪ್ರೀತಿ ತೋರಿಸುತ್ತೇವೆ. (ಮತ್ತಾ. 24:14) ಹೀಗೆ ‘ನಿರೀಕ್ಷೆಯನ್ನು ಒದಗಿಸುವ ದೇವರ’ ಸಂದೇಶವನ್ನು ಘೋಷಿಸುವಂಥ ಸದವಕಾಶ ನಮಗಿದೆ!—ರೋಮ. 15:13.
7. (ಎ) ಸುವರ್ಣ ನಿಯಮ ಯಾವುದು? (ಬಿ) ಅದನ್ನು ಪಾಲಿಸುವುದರಿಂದ ಯಾವ ಆಶೀರ್ವಾದ ಸಿಗುತ್ತದೆ?
7 ಸುವರ್ಣ ನಿಯಮ ಪಾಲಿಸಿ. ಈ ನಿಯಮವನ್ನು ಯೇಸು ಪರ್ವತ ಪ್ರಸಂಗದಲ್ಲಿ ಕೊಟ್ಟನು: “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು; ವಾಸ್ತವದಲ್ಲಿ ಇದೇ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ತಾತ್ಪರ್ಯ.” (ಮತ್ತಾ. 7:12) ಯೇಸು ಹೇಳಿದಂತೆಯೇ ನಾವು ಜನರೊಂದಿಗೆ ನಡೆದುಕೊಂಡರೆ “ಧರ್ಮಶಾಸ್ತ್ರದ” (ಆದಿಕಾಂಡದಿಂದ ಧರ್ಮೋಪದೇಶಕಾಂಡ) ಮತ್ತು “ಪ್ರವಾದಿಗಳ” (ಹೀಬ್ರು ಶಾಸ್ತ್ರದಲ್ಲಿರುವ ಪ್ರವಾದನಾ ಪುಸ್ತಕಗಳು) ಇಂಗಿತಕ್ಕೆ ತಕ್ಕಂತೆ ನಡೆದುಕೊಳ್ಳುತ್ತೇವೆ. ಬೇರೆಯವರಿಗೆ ಪ್ರೀತಿ ತೋರಿಸುವವರನ್ನು ದೇವರು ಆಶೀರ್ವದಿಸುತ್ತಾನೆ ಎಂದು ಈ ಬರಹಗಳು ಸ್ಪಷ್ಟಪಡಿಸುತ್ತವೆ. ಉದಾಹರಣೆಗೆ, “ನ್ಯಾಯವನ್ನು ಅನುಸರಿಸಿರಿ, ಧರ್ಮವನ್ನು ಆಚರಿಸಿರಿ . . . ಈ ವಿಧಿಯನ್ನು ಕೈಕೊಳ್ಳುವ ಮನುಷ್ಯನು ಧನ್ಯನು” ಎಂದು ಯೆಶಾಯನ ಮೂಲಕ ಯೆಹೋವನು ಹೇಳಿದನು. (ಯೆಶಾ. 56:1, 2) ಹೌದು, ನಮ್ಮ ನೆರೆಯವರ ಜೊತೆ ಪ್ರೀತಿ, ನ್ಯಾಯದಿಂದ ನಡೆದುಕೊಂಡಾಗ ನಾವು ನಿಜವಾಗಲೂ ಧನ್ಯರು.
8. (ಎ) ವೈರಿಗಳನ್ನು ನಾವೇಕೆ ಪ್ರೀತಿಸಬೇಕು? (ಬಿ) ವೈರಿಗಳನ್ನು ಪ್ರೀತಿಸುವುದರಿಂದ ಏನಾಗಬಹುದು?
8 ವೈರಿಗಳನ್ನು ಪ್ರೀತಿಸಿ. “‘ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ದ್ವೇಷಿಸಬೇಕು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸುತ್ತಾ ಇರಿ; ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾ ಇರಿ. ಇದರಿಂದ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುವಿರಿ” ಎಂದು ಯೇಸು ಹೇಳಿದನು. (ಮತ್ತಾ. 5:43-45) ಅಪೊಸ್ತಲ ಪೌಲ ಕೂಡ ಇದೇ ವಿಷಯವನ್ನು ಹೇಳಿದನು: “ನಿನ್ನ ವೈರಿಯು ಹಸಿದಿರುವುದಾದರೆ ಅವನಿಗೆ ಊಟಕ್ಕೆ ಕೊಡು; ಅವನು ಬಾಯಾರಿದ್ದರೆ ಅವನಿಗೆ ಏನನ್ನಾದರೂ ಕುಡಿಯಲು ಕೊಡು.” (ರೋಮ. 12:20; ಜ್ಞಾನೋ. 25:21) ಮೋಶೆಯ ಧರ್ಮಶಾಸ್ತ್ರದ ಪ್ರಕಾರ, ವೈರಿಯೊಬ್ಬನ ಪ್ರಾಣಿ ಹೊರೆಯ ಭಾರದಿಂದ ಕುಸಿದುಬಿದ್ದಿರುವುದನ್ನು ಒಬ್ಬ ವ್ಯಕ್ತಿ ಕಂಡರೆ ಅದನ್ನು ಎತ್ತಲು ಸಹಾಯ ಮಾಡಲೇಬೇಕಿತ್ತು. (ವಿಮೋ. 23:5) ಹೀಗೆ ಇಬ್ಬರೂ ಕೈಜೋಡಿಸಿ ಕೆಲಸ ಮಾಡುವಾಗ ಒಂದುಕಾಲದಲ್ಲಿ ವೈರಿಗಳಾಗಿದ್ದ ಅವರು ಪುನಃ ಗೆಳೆಯರಾಗಲು ಸಾಧ್ಯವಿತ್ತು. ನಾವು ಪ್ರೀತಿ ತೋರಿಸಿದ ಪರಿಣಾಮವಾಗಿ ಎಷ್ಟೋ ವೈರಿಗಳಿಗೆ ಕ್ರೈಸ್ತರಾದ ನಮ್ಮ ಬಗ್ಗೆ ಮೊದಲಿದ್ದ ಅಭಿಪ್ರಾಯ ಬದಲಾಗಿದೆ. ನಮ್ಮನ್ನು ಹಿಂಸಿಸುವ, ಕಡುದ್ವೇಷ ಇಟ್ಟುಕೊಂಡಿರುವ ಜನರಿಗೆ ನಾವು ತೋರಿಸುವ ಪ್ರೀತಿಯ ಕಾರಣದಿಂದ ಅವರಲ್ಲಿ ಕೆಲವರಾದರೂ ಸತ್ಕ್ರೈಸ್ತರಾದರೆ ನಮಗೆ ಸಂತೋಷ ಆಗುವುದಲ್ಲವೇ?
9. ನಮ್ಮ ಸಹೋದರರೊಂದಿಗೆ ಸಮಾಧಾನ ಮಾಡಿಕೊಳ್ಳುವ ಬಗ್ಗೆ ಯೇಸು ಏನು ಹೇಳಿದ್ದಾನೆ?
9 ‘ಎಲ್ಲ ಜನರೊಂದಿಗೆ ಶಾಂತಿಯನ್ನು ಬೆನ್ನಟ್ಟಿರಿ.’ (ಇಬ್ರಿ. 12:14) ಎಲ್ಲ ಜನರು ಎಂದಾಗ ಇದರಲ್ಲಿ ನಮ್ಮ ಸಹೋದರರೂ ಸೇರಿದ್ದಾರೆ. ಅದಕ್ಕಾಗಿಯೇ ಯೇಸು ಹೇಳಿದ್ದು: “ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಮುಂದೆ ತರುತ್ತಿರುವಾಗ, ನಿನ್ನ ಸಹೋದರನಿಗೆ ನಿನ್ನ ವಿರುದ್ಧ ಏನೋ ಅಸಮಾಧಾನವಿದೆ ಎಂದು ನಿನಗೆ ಅಲ್ಲಿ ನೆನಪಾದರೆ ನಿನ್ನ ಕಾಣಿಕೆಯನ್ನು ಅಲ್ಲಿ ಯಜ್ಞವೇದಿಯ ಮುಂದೆ ಬಿಟ್ಟುಹೋಗಿ, ಮೊದಲು ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ; ಹಿಂದಿರುಗಿ ಬಂದ ಬಳಿಕ ನಿನ್ನ ಕಾಣಿಕೆಯನ್ನು ಅರ್ಪಿಸು.” (ಮತ್ತಾ. 5:23, 24) ನಮ್ಮ ಸಹೋದರರೊಂದಿಗೆ ಮನಸ್ತಾಪವಾದಾಗ ಸಮಾಧಾನ ಮಾಡಿಕೊಳ್ಳಲು ತಡಮಾಡದೆ ಹೆಜ್ಜೆ ತೆಗೆದುಕೊಳ್ಳುವ ಮೂಲಕ ಅವರಿಗೆ ಪ್ರೀತಿ ತೋರಿಸಿದರೆ ದೇವರು ನಮ್ಮನ್ನು ಆಶೀರ್ವದಿಸಿಯೇ ಆಶೀರ್ವದಿಸುತ್ತಾನೆ.
10. ನಾವೇಕೆ ತಪ್ಪು ಹುಡುಕಬಾರದು?
10 ತಪ್ಪು ಹುಡುಕಬೇಡಿ. “ತೀರ್ಪುಮಾಡುವುದನ್ನು ನಿಲ್ಲಿಸಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ನೀವು ಮಾಡುತ್ತಿರುವ ತೀರ್ಪಿನಿಂದಲೇ ನಿಮಗೂ ತೀರ್ಪಾಗುವುದು; ಮತ್ತು ನೀವು ಅಳೆಯುತ್ತಿರುವ ಅಳತೆಯಿಂದಲೇ ಅವರು ನಿಮಗೆ ಅಳೆದುಕೊಡುವರು. ಹಾಗಾದರೆ ನೀನು ನಿನ್ನ ಸ್ವಂತ ಕಣ್ಣಿನಲ್ಲಿರುವ ಮರದ ದಿಮ್ಮಿಯನ್ನು ನೋಡದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ಮರದ ಚೂರನ್ನು ನೋಡುವುದೇಕೆ? ಅಥವಾ ನಿನ್ನ ಕಣ್ಣಿನಲ್ಲೇ ಮರದ ದಿಮ್ಮಿ ಇರುವಾಗ ನೀನು ನಿನ್ನ ಸಹೋದರನಿಗೆ, ‘ನಿನ್ನ ಕಣ್ಣಿನಿಂದ ಮರದ ಚೂರನ್ನು ತೆಗೆಯುತ್ತೇನೆ ಬಾ’ ಎಂದು ಹೇಗೆ ಹೇಳಸಾಧ್ಯವಿದೆ? ಕಪಟಿಯೇ! ಮೊದಲು ನಿನ್ನ ಕಣ್ಣಿನಿಂದ ಮರದ ದಿಮ್ಮಿಯನ್ನು ತೆಗೆದುಹಾಕು; ಆಮೇಲೆ ನಿನ್ನ ಸಹೋದರನ ಕಣ್ಣಿನಿಂದ ಮರದ ಚೂರನ್ನು ತೆಗೆಯಲು ನಿನಗೆ ಕಣ್ಣು ಸ್ಪಷ್ಟವಾಗಿ ಕಾಣಿಸುವುದು” ಎಂದನು ಯೇಸು. (ಮತ್ತಾ. 7:1-5) ನಮ್ಮಲ್ಲೇ ದೊಡ್ಡ ದೊಡ್ಡ ತಪ್ಪುಗಳು ಇರುವಾಗ ಇತರರ ಚಿಕ್ಕಪುಟ್ಟ ತಪ್ಪುಗಳನ್ನು ಎತ್ತಿ ಆಡಬಾರದೆಂದು ಯೇಸು ಇಲ್ಲಿ ಕಟ್ಟುನಿಟ್ಟಾಗಿ ಹೇಳುತ್ತಿದ್ದಾನೆ!
ನೆರೆಯವರಿಗೆ ಪ್ರೀತಿ ತೋರಿಸುವ ವಿಶೇಷ ವಿಧ
11, 12. ನೆರೆಯವರಿಗಾಗಿ ಪ್ರೀತಿ ತೋರಿಸುವ ಅತ್ಯುತ್ತಮ ವಿಧ ಯಾವುದು?
11 ನೆರೆಯವರಿಗೆ ಪ್ರೀತಿ ತೋರಿಸುವ ಅತ್ಯುತ್ತಮ ವಿಧವೊಂದಿದೆ. ಯೇಸು ಮಾಡಿದಂತೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದೇ ಆ ವಿಧ. (ಲೂಕ 8:1) ಯೇಸು ತನ್ನ ಹಿಂಬಾಲಕರಿಗೆ “ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿ” ಎಂಬ ಆಜ್ಞೆ ಕೊಟ್ಟನು. (ಮತ್ತಾ. 28:19, 20) ಈ ಆಜ್ಞೆಯನ್ನು ಪಾಲಿಸುವಾಗ, ನೆರೆಯವರು ನಾಶನದ ಅಗಲವಾದ ದೊಡ್ಡ ದಾರಿಯನ್ನು ಬಿಟ್ಟು ನಿತ್ಯಜೀವದ ಬಿಕ್ಕಟ್ಟಾದ ದಾರಿಯಲ್ಲಿ ನಡೆಯಲು ನಾವು ನೆರವಾಗುತ್ತೇವೆ. (ಮತ್ತಾ. 7:13, 14) ಈ ನಮ್ಮ ಪ್ರಯತ್ನಗಳನ್ನೆಲ್ಲ ಯೆಹೋವನು ಖಂಡಿತ ಆಶೀರ್ವದಿಸುವನು.
12 ಯೇಸು ಮಾಡಿದಂತೆ ನಾವು ಜನರಿಗೆ ಅವರ ಆಧ್ಯಾತ್ಮಿಕ ಅಗತ್ಯವನ್ನು ಅರಿಯಲು ನೆರವು ನೀಡುತ್ತೇವೆ. (ಮತ್ತಾ. 5:3) ನಮ್ಮೀ ಪ್ರಯತ್ನಕ್ಕೆ ಸ್ಪಂದಿಸುವವರಿಗೆ “ದೇವರ ಸುವಾರ್ತೆ”ಯನ್ನು ತಿಳಿಸುವ ಮೂಲಕ ಅವರ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಿಕೊಳ್ಳಲು ಸಹಾಯ ಮಾಡುತ್ತೇವೆ. (ರೋಮ. 1:1) ರಾಜ್ಯ ಸಂದೇಶವನ್ನು ಸ್ವೀಕರಿಸುವ ಜನರು ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರುತ್ತಾರೆ. (2 ಕೊರಿಂ. 5:18, 19) ಹೀಗೆ ಸುವಾರ್ತೆ ಸಾರುವ ಮೂಲಕ ಅತೀ ಪ್ರಾಮುಖ್ಯ ವಿಧದಲ್ಲಿ ನಾವು ನೆರೆಯವರಿಗಾಗಿ ಪ್ರೀತಿ ತೋರಿಸುತ್ತೇವೆ.
13. ರಾಜ್ಯ ಘೋಷಕರಾಗಿ ನೀವು ಮಾಡುತ್ತಿರುವ ಕೆಲಸದ ಬಗ್ಗೆ ನಿಮಗೆ ಹೇಗನಿಸುತ್ತದೆ?
13 ಪುನರ್ಭೇಟಿಗಳನ್ನು ಮತ್ತು ಬೈಬಲ್ ಅಧ್ಯಯನಗಳನ್ನು ಪರಿಣಾಮಕಾರಿಯಾಗಿ ಮಾಡುವ ಮೂಲಕ ಜನರಿಗೆ ದೇವರ ನೀತಿಯ ನಿಯಮಗಳನ್ನು ಪಾಲಿಸಲು ಸಹಾಯ ಮಾಡುತ್ತೇವೆ. ಇದರಿಂದ ಕೆಲವು ಬೈಬಲ್ ವಿದ್ಯಾರ್ಥಿಗಳು ತಮ್ಮ ಜೀವನ ಶೈಲಿಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. (1 ಕೊರಿಂ. 6:9-11) “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ”ವಿರುವ ಜನರು ಬದಲಾವಣೆಗಳನ್ನು ಮಾಡಲು ಮತ್ತು ತನ್ನೊಂದಿಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ದೇವರು ಸಹಾಯ ಮಾಡುವುದನ್ನು ನೋಡಿ ಎಷ್ಟೊಂದು ಸಂತೋಷವಾಗುತ್ತದೆ! (ಅ. ಕಾ. 13:48) ಹೀಗೆ ಅನೇಕ ಜನರಲ್ಲಿ ನಿರಾಶೆಯ ಬದಲಿಗೆ ಆನಂದ ತುಂಬಿಕೊಂಡಿದೆ. ಅನಗತ್ಯ ಚಿಂತೆ ಬದಲಿಗೆ ಸ್ವರ್ಗೀಯ ತಂದೆಯ ಮೇಲೆ ಭರವಸೆ ತುಂಬಿಕೊಂಡಿದೆ. ಹೊಸಬರು ಆಧ್ಯಾತ್ಮಿಕ ಪ್ರಗತಿ ಮಾಡುವುದನ್ನು ನೋಡುವಾಗ ಆಗುವ ಆನಂದಕ್ಕೆ ಪಾರವೇ ಇಲ್ಲ! ರಾಜ್ಯ ಘೋಷಕರಾಗಿರುವ ಮೂಲಕ ಈ ವಿಶೇಷ ವಿಧದಲ್ಲಿ ನೆರೆಯವರಿಗೆ ಪ್ರೀತಿ ತೋರಿಸುವುದು ನಮಗೆ ಸಿಕ್ಕಿದ ಆಶೀರ್ವಾದ ಎಂದು ನೀವು ಒಪ್ಪಿಕೊಳ್ಳುವುದಿಲ್ಲವೇ?
ಪ್ರೀತಿಯ ದೇವಪ್ರೇರಿತ ವರ್ಣನೆ
14. ಪೌಲನು 1 ಕೊರಿಂಥ 13:4-8ರಲ್ಲಿ ಪ್ರೀತಿಯ ಬಗ್ಗೆ ಯಾವ ವರ್ಣನೆ ಕೊಟ್ಟಿದ್ದಾನೆ?
14 ನಾವು ನೆರೆಯವರ ಜೊತೆ ವ್ಯವಹರಿಸುವಾಗ ಪೌಲನು ಪ್ರೀತಿಯ ಬಗ್ಗೆ ಬರೆದಿರುವ ವಿಷಯಗಳನ್ನು ಪಾಲಿಸಿದರೆ ಅದೆಷ್ಟೋ ಸಮಸ್ಯೆಗಳನ್ನು ತಡೆಗಟ್ಟಬಹುದು. ಆನಂದ, ದೈವಾನುಗ್ರಹವೂ ನಮ್ಮದಾಗುವುದು. (1 ಕೊರಿಂಥ 13:4-8 ಓದಿ.) ಪ್ರೀತಿಯ ಬಗ್ಗೆ ಪೌಲ ಏನು ಹೇಳಿದ್ದಾನೆ? ಅವನ ಮಾತುಗಳನ್ನು ನೆರೆಯವರೊಂದಿಗಿನ ವರ್ತನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು? ಇವನ್ನು ಈಗ ಚರ್ಚಿಸೋಣ.
15. (ಎ) ನಾವೇಕೆ ತಾಳ್ಮೆ, ದಯೆ ತೋರಿಸಬೇಕು? (ಬಿ) ನಾವೇಕೆ ಹೊಟ್ಟೆಕಿಚ್ಚುಪಡಬಾರದು, ಜಂಬಕೊಚ್ಚಿಕೊಳ್ಳಬಾರದು?
15 “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ.” ದೇವರು ಅಪರಿಪೂರ್ಣ ಮಾನವರಾದ ನಮಗೆ ದೀರ್ಘಸಹನೆ ಅಂದರೆ ತಾಳ್ಮೆ ಮತ್ತು ದಯೆ ತೋರಿಸಿದ್ದಾನೆ. ಅದೇ ರೀತಿ ನಾವಿರಬೇಕು. ಬೇರೆಯವರು ತಪ್ಪುಗಳನ್ನು ಮಾಡಿದಾಗ, ನಿರ್ದಯೆಯಿಂದ ಒರಟಾಗಿ ನಡೆದುಕೊಂಡಾಗ ನಾವು ಅವರೊಂದಿಗೆ ತಾಳ್ಮೆ, ದಯೆಯಿಂದ ನಡೆದುಕೊಳ್ಳಬೇಕು. “ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ.” ಹಾಗಾಗಿ ಬೇರೆಯವರ ವಸ್ತುಗಳನ್ನಾಗಲಿ ಸಭೆಯಲ್ಲಿ ಅವರಿಗಿರುವ ಸುಯೋಗಗಳನ್ನಾಗಲಿ ನಾವು ಆಶಿಸುವುದಿಲ್ಲ. ಅಷ್ಟೇ ಅಲ್ಲ ಪ್ರೀತಿ ಇದ್ದರೆ ನಾವು ಜಂಬಕೊಚ್ಚಿಕೊಳ್ಳುವುದಿಲ್ಲ, ಅಹಂಕಾರದಿಂದ ಉಬ್ಬಿಕೊಳ್ಳುವುದಿಲ್ಲ. ಇಷ್ಟಕ್ಕೂ, “ಗರ್ವದ ದೃಷ್ಟಿ, ಕೊಬ್ಬಿದ ಹೃದಯ . . . ಇವು ಧರ್ಮವಿರುದ್ಧ.”—ಜ್ಞಾನೋ. 21:4.
16, 17. ನಾವು 1 ಕೊರಿಂಥ 13:5, 6ನ್ನು ಬದುಕಲ್ಲಿ ಹೇಗೆ ಅಳವಡಿಸಿಕೊಳ್ಳಬಲ್ಲೆವು?
16 ನೆರೆಯವರ ಜೊತೆ ಸಭ್ಯವಾಗಿ ವರ್ತಿಸುವಂತೆ ಪ್ರೀತಿ ನಮ್ಮನ್ನು ಪ್ರೇರಿಸುತ್ತದೆ. ಹಾಗಾಗಿ ನಾವು ಸುಳ್ಳು ಹೇಳುವುದಿಲ್ಲ, ಕದಿಯುವುದಿಲ್ಲ, ಯೆಹೋವನ ನೀತಿನಿಯಮಗಳನ್ನು ಉಲ್ಲಂಘಿಸುವಂಥ ಯಾವ ಕೆಲಸಕ್ಕೂ ಕೈಹಾಕುವುದಿಲ್ಲ. ಪ್ರೀತಿ ಇರುವುದಾದರೆ ಇತರರ ಬಗ್ಗೆ ಆಸಕ್ತಿ ವಹಿಸುತ್ತೇವೆ. ಬರೇ ನಮ್ಮ ವಿಷಯಗಳಲ್ಲೇ ನಾವು ಮುಳುಗಿರುವುದಿಲ್ಲ.—ಫಿಲಿ. 2:4.
17 ನಿಜ ಪ್ರೀತಿಯಿದ್ದರೆ ನಾವು ಚಿಕ್ಕಚಿಕ್ಕ ಕಾರಣಕ್ಕೆಲ್ಲ ಸಿಟ್ಟುಗೊಳ್ಳುವುದಿಲ್ಲ. ನಾವು “ಅನ್ಯಾಯದ ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ” ಅಂದರೆ ಬೇರೆಯವರು ನಮ್ಮನ್ನು ನೋಯಿಸಿದ ಪ್ರತಿಯೊಂದು ಸಂದರ್ಭವನ್ನು ಲೆಕ್ಕಪುಸ್ತಕದಲ್ಲೋ ಎಂಬಂತೆ ಬರೆದಿಡುವುದಿಲ್ಲ. (1 ಥೆಸ. 5:15) ಮನಸ್ಸಿನಲ್ಲಿ ದ್ವೇಷ ಇಟ್ಟುಕೊಳ್ಳುವುದನ್ನು ದೇವರು ಮೆಚ್ಚುವುದಿಲ್ಲ. ಅಂಥ ದ್ವೇಷ ಹೊಗೆಯಾಡುತ್ತಾ ಇದ್ದು ಮುಂದೊಂದು ದಿನ ಭುಗ್ಗನೆ ಹೊತ್ತಿಕೊಂಡು ನಮ್ಮನ್ನೂ ಬೇರೆಯವರನ್ನೂ ಸುಟ್ಟುಹಾಕಬಲ್ಲದು. (ಯಾಜ. 19:18) ನಮ್ಮಲ್ಲಿ ಪ್ರೀತಿ ಇರುವುದಾದರೆ ಸತ್ಯದಲ್ಲಿ ಹರ್ಷಿಸುತ್ತೇವೆ; “ಅನೀತಿಯನ್ನು ಕಂಡು ಹರ್ಷಿಸುವುದಿಲ್ಲ.” ನಮ್ಮನ್ನು ನೋಯಿಸಿದ ವ್ಯಕ್ತಿಗೆ ಅನ್ಯಾಯವಾದಾಗ ಅಥವಾ ಕಷ್ಟಬಂದಾಗ ನಾವು ಸಂತೋಷಪಡುವುದಿಲ್ಲ.—ಜ್ಞಾನೋಕ್ತಿ 24:17, 18 ಓದಿ.
18. ಪ್ರೀತಿಯ ಬಗ್ಗೆ 1 ಕೊರಿಂಥ 13:7, 8ರಿಂದ ಏನು ಕಲಿಯುತ್ತೇವೆ?
18 ಪ್ರೀತಿಯ ಬಗ್ಗೆ ಪೌಲ ಮುಂದೇನು ಹೇಳುತ್ತಾನೆಂದು ಗಮನಿಸಿ. ಪ್ರೀತಿ “ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.” ಒಬ್ಬರು ನಮ್ಮ ಮನನೋಯಿಸಿ ನಂತರ ಕ್ಷಮೆ ಕೇಳುವಲ್ಲಿ ನಾವು ಅವರನ್ನು ಕ್ಷಮಿಸುತ್ತೇವೆ. ನಮ್ಮಲ್ಲಿ ಪ್ರೀತಿ ಇದ್ದರೆ ದೇವರ ವಾಕ್ಯ ಹೇಳುವ ‘ಎಲ್ಲವನ್ನೂ ನಂಬುತ್ತೇವೆ,’ ಆಧ್ಯಾತ್ಮಿಕ ಆಹಾರಕ್ಕಾಗಿ ಕೃತಜ್ಞತಾಭಾವ ತೋರಿಸುತ್ತೇವೆ. ಪ್ರೀತಿಯು ಬೈಬಲಲ್ಲಿ ತಿಳಿಸಿರುವ “ಎಲ್ಲವನ್ನೂ ನಿರೀಕ್ಷಿಸುತ್ತದೆ.” ನಮ್ಮ ನಿರೀಕ್ಷೆಗೆ ಕಾರಣಗಳನ್ನು ಬೇರೆಯವರಿಗೆ ತಿಳಿಸಲು ನಮ್ಮನ್ನು ಪ್ರೇರಿಸುತ್ತದೆ. (1 ಪೇತ್ರ 3:15) ಯಾವುದೇ ಕಷ್ಟ ಬಂದರೂ ಪ್ರಾರ್ಥಿಸುತ್ತೇವೆ ಮತ್ತು ಅದರಿಂದ ಒಳ್ಳೇ ಫಲಿತಾಂಶವೇ ಸಿಗುವುದೆಂದು ನಿರೀಕ್ಷೆ ಇಡುತ್ತೇವೆ. ಪ್ರೀತಿ “ಎಲ್ಲವನ್ನೂ ತಾಳಿಕೊಳ್ಳುತ್ತದೆ.” ಇತರರು ನಮ್ಮ ವಿರುದ್ಧ ಗಂಭೀರ ತಪ್ಪು ಮಾಡಲಿ, ಹಿಂಸೆ ಬರಲಿ, ಇನ್ನೆಂಥ ಕಷ್ಟವೇ ಬರಲಿ ಸಹಿಸಿಕೊಳ್ಳುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ “ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.” ಇದೇ ಪ್ರೀತಿಯನ್ನು ಮುಂದೆ ವಿಧೇಯ ಮಾನವರು ನಿತ್ಯನಿರಂತರಕ್ಕೂ ತೋರಿಸುತ್ತಾ ಇರುವರು.
ನಿಮ್ಮ ನೆರೆಯವರನ್ನು ನಿಮ್ಮಂತೆ ಪ್ರೀತಿಸುತ್ತಾ ಇರಿ
19, 20. ಬೈಬಲಿನ ಯಾವ ವಚನಗಳು ನೆರೆಯವರಿಗೆ ಪ್ರೀತಿ ತೋರಿಸುತ್ತಾ ಇರಲು ನಮ್ಮನ್ನು ಪ್ರೇರಿಸುತ್ತವೆ?
19 ಬೈಬಲಿನ ಬುದ್ಧಿವಾದವನ್ನು ಅಳವಡಿಸಿಕೊಂಡಲ್ಲಿ ನೆರೆಯವರ ಮೇಲೆ ಇರುವ ನಮ್ಮ ಪ್ರೀತಿ ಎಂದೂ ಬತ್ತಿಹೋಗುವುದಿಲ್ಲ. ಪ್ರೀತಿ ಇದ್ದರೆ ಮಾತ್ರ ನಾವು ಎಲ್ಲ ಜನಾಂಗದ ಜನರನ್ನು ಸ್ವೀಕರಿಸುತ್ತೇವೆ. “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಯೇಸುವಿನ ಮಾತನ್ನು ಸದಾ ನೆನಪಿನಲ್ಲಿಡಬೇಕು. (ಮತ್ತಾ. 22:39) ದೇವರು ಮತ್ತು ಕ್ರಿಸ್ತ ಇಬ್ಬರೂ ನಾವು ಇದನ್ನು ಪಾಲಿಸಬೇಕೆಂದು ನಿರೀಕ್ಷಿಸುತ್ತಾರೆ. ಕೆಲವೊಂದು ಸಂದರ್ಭದಲ್ಲಿ ನೆರೆಯವರಿಗೆ ಪ್ರೀತಿ ತೋರಿಸಲು ಕಷ್ಟವಾಗುವಾಗ ಪವಿತ್ರಾತ್ಮದ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸೋಣ. ಇದರಿಂದ ನಮಗೆ ದೇವರ ಆಶೀರ್ವಾದ ಮಾತ್ರವಲ್ಲ ಪ್ರೀತಿಯಿಂದ ನಡೆದುಕೊಳ್ಳಲೂ ಸಹಾಯ ಸಿಗುತ್ತದೆ.—ರೋಮ. 8:26, 27.
20 ನೆರೆಯವರನ್ನು ಪ್ರೀತಿಸಬೇಕೆಂಬ ಆಜ್ಞೆಯನ್ನು “ರಾಜಯೋಗ್ಯ ಆಜ್ಞೆ” ಎನ್ನಲಾಗಿದೆ. (ಯಾಕೋ. 2:8) ಮೋಶೆಯ ಧರ್ಮಶಾಸ್ತ್ರದ ಕೆಲವು ಆಜ್ಞೆಗಳ ಬಗ್ಗೆ ಹೇಳಿದ ನಂತರ ಪೌಲ ಹೀಗಂದನು: “ಇತರ ಯಾವುದೇ ಆಜ್ಞೆಯು ‘ನನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬ ಒಂದೇ ಮಾತಿನಲ್ಲಿ ಅಡಕವಾಗಿದೆ. ಪ್ರೀತಿಯು ಒಬ್ಬನ ನೆರೆಯವನಿಗೆ ಕೆಡುಕನ್ನು ಮಾಡುವುದಿಲ್ಲ, ಆದುದರಿಂದ ಪ್ರೀತಿಯು ಧರ್ಮಶಾಸ್ತ್ರದ ನೆರವೇರಿಕೆಯಾಗಿದೆ.” (ರೋಮ. 13:8-10) ಹಾಗಾಗಿ ನೆರೆಯವರನ್ನು ಪ್ರೀತಿಸುತ್ತಾ ಇರುವ ಹಂಗು ನಮಗಿದೆ.
21, 22. ದೇವರನ್ನು ಮತ್ತು ನೆರೆಯವರನ್ನು ನಾವು ಯಾಕೆ ಪ್ರೀತಿಸಬೇಕು?
21 ನೆರೆಯವರಿಗೆ ನಾವೇಕೆ ಪ್ರೀತಿ ತೋರಿಸಬೇಕೆಂದು ಕಲಿತಿದ್ದೇವೆ. ನಾವಿಲ್ಲಿ ಯೇಸು ತನ್ನ ತಂದೆಯ ಬಗ್ಗೆ ಹೇಳಿದ ಮಾತನ್ನು ನೆನಪಿಸಿಕೊಳ್ಳುವುದು ಸೂಕ್ತ: ದೇವರು “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾ. 5:43-45) ನಮ್ಮ ನೆರೆಯವರು ನೀತಿವಂತರಿರಲಿ ಅನೀತಿವಂತರಿರಲಿ ನಾವು ಪ್ರೀತಿ ತೋರಿಸಲೇಬೇಕು. ಈಗಾಗಲೇ ನಾವು ಕಲಿತಂತೆ ರಾಜ್ಯ ಸಂದೇಶವನ್ನು ಸಾರುವುದು ಪ್ರೀತಿ ತೋರಿಸುವ ಒಂದು ಪ್ರಮುಖ ವಿಧಾನ. ಸುವಾರ್ತೆಗೆ ಒಳ್ಳೇ ಪ್ರತಿಕ್ರಿಯೆ ತೋರಿಸಿದರೆ ಆ ನಮ್ಮ ನೆರೆಯವರಿಗೆ ಸಿಗುವ ಆಶೀರ್ವಾದಗಳು ಅಪಾರ!
22 ಯಾವುದೇ ಮಿತಿಯಿಲ್ಲದೆ ಸಂಪೂರ್ಣವಾಗಿ ಯೆಹೋವನನ್ನು ಪ್ರೀತಿಸಲು ನಮಗೆ ಹಲವಾರು ಕಾರಣಗಳಿವೆಯೆಂದು ಕಲಿತೆವು. ನೆರೆಯವರನ್ನು ಪ್ರೀತಿಸುವ ಹಲವಾರು ವಿಧಗಳನ್ನು ಕೂಡ ಚರ್ಚಿಸಿದೆವು. ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸಿದರೆ ನಾವು ಯೇಸುವಿನ ಮಾತಿಗೆ ವಿಧೇಯತೆ ತೋರಿಸುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪ್ರೀತಿಯ ತಂದೆಯಾದ ಯೆಹೋವನನ್ನು ಸಂತೋಷಪಡಿಸುತ್ತೇವೆ.