ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ತಕ್ಕ ಸಮಯಕ್ಕೆ ಬರುವ ಆಹಾರ’ ನಿಮಗೆ ಸಿಗುತ್ತಿದೆಯಾ?

‘ತಕ್ಕ ಸಮಯಕ್ಕೆ ಬರುವ ಆಹಾರ’ ನಿಮಗೆ ಸಿಗುತ್ತಿದೆಯಾ?

ಮಾನವ ಇತಿಹಾಸದಲ್ಲೇ ಅತ್ಯಂತ ಕಷ್ಟಕರ ಸಮಯದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. (2 ತಿಮೊ. 3:1-5) ಯೆಹೋವನ ಮೇಲೆ ನಮಗಿರುವ ಪ್ರೀತಿ ಮತ್ತು ಆತನ ನೀತಿಯುತ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವ ನಮ್ಮ ದೃಢಸಂಕಲ್ಪ ದಿನಾಲೂ ಪರೀಕ್ಷೆಗೆ ಒಳಗಾಗುತ್ತಿದೆ. ಇಂಥ ಸಂಕಷ್ಟದ ಸಮಯ ಬರುವುದೆಂದು ಯೇಸುವಿಗೆ ಮುಂಚೆಯೇ ಗೊತ್ತಿತ್ತು. ಆದರೂ ತನ್ನ ಶಿಷ್ಯರು ಕಡೇ ವರೆಗೂ ತಾಳಿಕೊಳ್ಳಲು ಬೇಕಾದ ಪ್ರೋತ್ಸಾಹ ಕೊಡುವೆನೆಂದು ಆತನು ಭರವಸೆ ಕೊಟ್ಟನು. (ಮತ್ತಾ. 24:3, 13; 28:20) ಅವರನ್ನು ಬಲಗೊಳಿಸಲೆಂದು ‘ತಕ್ಕ ಸಮಯದಲ್ಲಿ [ಆಧ್ಯಾತ್ಮಿಕ] ಆಹಾರ’ ಕೊಡಲಿಕ್ಕಾಗಿ ನಂಬಿಗಸ್ತ ಆಳನ್ನು ನೇಮಿಸಿದನು.—ಮತ್ತಾ. 24:45, 46.

1919ರಲ್ಲಿ ನಂಬಿಗಸ್ತ ಆಳಿನ ನೇಮಕವಾಯಿತು. ಅಂದಿನಿಂದ ಅನೇಕ ಭಾಷೆಗಳ ಲಕ್ಷಾಂತರ ‘ಮನೆಯವರನ್ನು’ ದೇವರ ಸಂಘಟನೆಗೆ ಸೇರಿಸಲಾಗುತ್ತಿದೆ. ಇವರಿಗೆ ಆಧ್ಯಾತ್ಮಿಕವಾಗಿ ಉಣಿಸಲಾಗುತ್ತಿದೆ. (ಮತ್ತಾ. 24:14; ಪ್ರಕ. 22:17) ಹಾಗಿದ್ದರೂ ಎಲ್ಲಾ ಭಾಷೆಗಳಲ್ಲಿ ಎಲ್ಲಾ ಸಾಹಿತ್ಯ ಸಿಗುತ್ತಿಲ್ಲ. ಅಲ್ಲದೆ ಎಲ್ಲರಿಗೆ ನಮ್ಮ ಪ್ರಕಾಶನಗಳ ಎಲೆಕ್ಟ್ರಾನಿಕ್‌ ಪ್ರತಿಗಳನ್ನು ಪಡೆಯುವ ಸೌಲಭ್ಯವಿಲ್ಲ. ಉದಾಹರಣೆಗೆ jw.org ನಲ್ಲಿ ಮಾತ್ರ ಸಿಗುವ ಲೇಖನಗಳು, ವಿಡಿಯೋಗಳು ಅನೇಕರಿಗೆ ಸಿಗುತ್ತಿಲ್ಲ. ಹಾಗೆಂದ ಮಾತ್ರಕ್ಕೆ ಆಧ್ಯಾತ್ಮಿಕವಾಗಿ ಆರೋಗ್ಯವಾಗಿರಲು ಬೇಕಾದ ಆಧ್ಯಾತ್ಮಿಕ ಆಹಾರ ಅವರಿಗೆ ಸಿಗುತ್ತಿಲ್ಲ ಎಂದಾ? ಇದರ ಬಗ್ಗೆ ಸರಿಯಾದ ನೋಟ ಪಡೆಯಲು ನಾಲ್ಕು ಪ್ರಮುಖ ಪ್ರಶ್ನೆಗಳಿಗೆ ಉತ್ತರಗಳನ್ನು ಪರಿಗಣಿಸೋಣ.

 1 ಯೆಹೋವನು ಕೊಡುತ್ತಿರುವ ಆಹಾರದಲ್ಲಿ ಮುಖ್ಯ ಸಾಮಗ್ರಿ ಯಾವುದು?

ಕಲ್ಲುಗಳನ್ನು ರೊಟ್ಟಿಯನ್ನಾಗಿ ಮಾಡುವಂತೆ ಸೈತಾನನು ಪ್ರಲೋಭನೆ ಒಡ್ಡಿದಾಗ ಯೇಸು ಹೀಗಂದನು: “ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು.” (ಮತ್ತಾ. 4:3, 4) ಯೆಹೋವನ ಮಾತುಗಳು ಬೈಬಲ್‍ನಲ್ಲಿ ದಾಖಲಾಗಿವೆ. (2 ಪೇತ್ರ 1:20, 21) ಆದ್ದರಿಂದ ಆಧ್ಯಾತ್ಮಿಕ ಆಹಾರದ ಮುಖ್ಯ ಸಾಮಗ್ರಿ ಬೈಬಲ್‌.—2 ತಿಮೊ. 3:16, 17.

ಯೆಹೋವನ ಸಂಘಟನೆ ಪವಿತ್ರ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರವನ್ನು ಪೂರ್ತಿಯಾಗಿ ಅಥವಾ ಅದರ ಒಂದು ಭಾಗವನ್ನು ಸುಮಾರು 120 ಭಾಷೆಗಳಲ್ಲಿ ಲಭ್ಯಗೊಳಿಸಿದೆ. ವರ್ಷದಿಂದ ವರ್ಷಕ್ಕೆ ಇನ್ನಷ್ಟು ಭಾಷೆಗಳಲ್ಲಿ ಅದು ಲಭ್ಯವಾಗುತ್ತಿದೆ. ನೂತನ ಲೋಕ ಭಾಷಾಂತರವಲ್ಲದೆ ಇಡೀ ಬೈಬಲ್‌ ಅಥವಾ ಬೈಬಲಿನ ಭಾಗಗಳ ಇತರ ಭಾಷಾಂತರಗಳೂ ಇವೆ. ಇವುಗಳ ಕೋಟಿಗಟ್ಟಲೆ ಪ್ರತಿಗಳು ಇತರ ಸಾವಿರಾರು ಭಾಷೆಗಳಲ್ಲಿ ಲಭ್ಯ ಇವೆ. ಬೆರಗುಗೊಳಿಸುವಂಥ ಈ ಮಹಾ ಸಾಧನೆ “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎಂಬ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿದೆ. (1 ತಿಮೊ. 2:3, 4) ‘[ಯೆಹೋವನ] ದೃಷ್ಟಿಗೆ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.’ ಆದ್ದರಿಂದ ಆತನು ‘ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರನ್ನು’ ತನ್ನ ಸಂಘಟನೆಯ ಕಡೆಗೆ ಸೆಳೆದು ಆಧ್ಯಾತ್ಮಿಕ ಆಹಾರ ಕೊಡುವನೆಂದು ಖಂಡಿತವಾಗಿ ಹೇಳಬಹುದು.—ಇಬ್ರಿ. 4:13; ಮತ್ತಾ. 5:3,6; ಯೋಹಾ. 6:44; 10:14.

2 ನಮ್ಮ ಸಾಹಿತ್ಯ ಹೇಗೆ ಆಧ್ಯಾತ್ಮಿಕ ಆಹಾರದ ಒಂದು ಪ್ರಮುಖ ಭಾಗವಾಗಿದೆ?

ಒಬ್ಬ ವ್ಯಕ್ತಿಯ ನಂಬಿಕೆ ಬಲಗೊಳ್ಳಬೇಕಾದರೆ ಅವನು ಬೈಬಲ್‌ ಓದುವುದಕ್ಕಿಂತ ಹೆಚ್ಚಿನದ್ದನ್ನು ಮಾಡಬೇಕು. ಅವನು ಓದಿದ್ದನ್ನು ಅರ್ಥಮಾಡಿಕೊಳ್ಳಬೇಕು, ಕಲಿತದ್ದನ್ನು ಅನ್ವಯಿಸಿಕೊಳ್ಳಬೇಕು. (ಯಾಕೋ. 1:22-25) ಮೊದಲನೇ ಶತಮಾನದಲ್ಲಿ ಇಥಿಯೋಪ್ಯದ ಕಂಚುಕಿ ಇದನ್ನೇ ಮಾಡಿದನು. ದೇವರ ವಾಕ್ಯವನ್ನು ಓದುತ್ತಿದ್ದ ಅವನಿಗೆ ಸೌವಾರ್ತಿಕನಾದ ಫಿಲಿಪ್ಪನು “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೊ?” ಎಂದು ಕೇಳಿದನು. ಅದಕ್ಕೆ ಕಂಚುಕಿಯು “ಯಾವನಾದರೂ ಮಾರ್ಗದರ್ಶನ ನೀಡದಿದ್ದರೆ ನನಗೆ ಹೇಗೆ ಅರ್ಥವಾದೀತು?” ಎಂದು ಉತ್ತರಿಸಿದನು. (ಅ. ಕಾ. 8:26-31) ಆಗ ಫಿಲಿಪ್ಪನು ಅವನಿಗೆ ದೇವರ ವಾಕ್ಯದ ನಿಷ್ಕೃಷ್ಟ ಜ್ಞಾನ ಪಡೆಯಲು ಸಹಾಯಮಾಡಿದನು. ಕಲಿತ ವಿಷಯಗಳಿಂದ ಕಂಚುಕಿ ಎಷ್ಟು ಪ್ರಭಾವಿತನಾದನೆಂದರೆ ಅವನು ದೀಕ್ಷಾಸ್ನಾನ ಪಡೆದನು. (ಅ. ಕಾ. 8:32-38) ಹಾಗೆಯೇ ನಮ್ಮ ಬೈಬಲಾಧರಿತ ಸಾಹಿತ್ಯ ಸಹ ನಮಗೆ ಸತ್ಯದ ಬಗ್ಗೆ ನಿಷ್ಕೃಷ್ಟ ಜ್ಞಾನ ಪಡೆಯಲು ಸಹಾಯ ಮಾಡಿದೆ. ಅದು ನಮ್ಮ ಅನಿಸಿಕೆ, ಭಾವನೆಗಳನ್ನು ತಟ್ಟಿದೆ ಮತ್ತು ನಾವೇನನ್ನು ಕಲಿಯುತ್ತೇವೊ ಅದನ್ನು ಅನ್ವಯಿಸಿಕೊಳ್ಳುವಂತೆ ಹುರಿದುಂಬಿಸಿದೆ.—ಕೊಲೊ. 1:9, 10.

ಸಾಹಿತ್ಯದ ಮೂಲಕ ಯೆಹೋವನ ಸೇವಕರಿಗೆ ಆಧ್ಯಾತ್ಮಿಕವಾಗಿ ಉಣ್ಣಲು, ಕುಡಿಯಲು ಸಮೃದ್ಧವಾಗಿ ಸಿಗುತ್ತಿದೆ. (ಯೆಶಾ. 65:13) ಉದಾಹರಣೆಗೆ ಕಾವಲಿನಬುರುಜು ಪತ್ರಿಕೆ 210ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಅದು ಬೈಬಲ್‌ ಪ್ರವಾದನೆಗಳ ಬಗ್ಗೆ ವಿವರಿಸುತ್ತದೆ, ಗಹನವಾದ ಆಧ್ಯಾತ್ಮಿಕ ಸತ್ಯಗಳ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಬೈಬಲ್‌ ತತ್ವಗಳಿಗೆ ತಕ್ಕಂತೆ ಬದುಕಲು ಪ್ರೇರಿಸುತ್ತದೆ. ಎಚ್ಚರ! ಪತ್ರಿಕೆ 100 ಭಾಷೆಗಳಲ್ಲಿ ಲಭ್ಯವಿದೆ. ಅದು ಯೆಹೋವನ ಸೃಷ್ಟಿಯ ಬಗ್ಗೆ ಮತ್ತು ಬೈಬಲ್‍ನಲ್ಲಿರುವ ಪ್ರಾಯೋಗಿಕ ಸಲಹೆಯನ್ನು ಅನ್ವಯಿಸುವುದು ಹೇಗೆಂಬುದರ ಬಗ್ಗೆ ತಿಳಿಸುತ್ತದೆ. (ಜ್ಞಾನೋ. 3:21-23; ರೋಮ. 1:20) ನಂಬಿಗಸ್ತ ಆಳು ಬೈಬಲ್‌ ಆಧರಿತ ಸಾಹಿತ್ಯವನ್ನು 680ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಒದಗಿಸುತ್ತಿದೆ! ಪ್ರತಿ ದಿನ ಬೈಬಲ್‌ ಓದಲು ನೀವು ಸಮಯ ಬದಿಗಿರಿಸುತ್ತಿದ್ದೀರಾ? ನಿಮ್ಮ ಭಾಷೆಯಲ್ಲೇ ಪ್ರತಿ ವರ್ಷ ಲಭ್ಯವಾಗುತ್ತಿರುವ ಪ್ರತಿಯೊಂದು ಹೊಸ ಪತ್ರಿಕೆ ಮತ್ತು ಎಲ್ಲಾ ಹೊಸ ಸಾಹಿತ್ಯವನ್ನು ಓದುತ್ತಿದ್ದೀರಾ?

ಸಾಹಿತ್ಯದ ಜೊತೆಗೆ ಯೆಹೋವನ ಸಂಘಟನೆ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಅಧಿವೇಶನಗಳಲ್ಲಿ ಕೊಡಲಾಗುವ ಭಾಷಣಗಳಿಗಾಗಿ ಬೈಬಲ್ ಆಧರಿತ ಹೊರಮೇರೆಗಳನ್ನೂ ತಯಾರಿಸುತ್ತದೆ. ಇಂಥ ಸಂದರ್ಭಗಳಲ್ಲಿ ಪ್ರಸ್ತುತಪಡಿಸಲಾಗುವ ಭಾಷಣ, ನಾಟಕ, ಪ್ರಾತ್ಯಕ್ಷಿಕೆ, ಸಂದರ್ಶನಗಳನ್ನು ನೀವು ಆನಂದಿಸುತ್ತೀರಾ? ಯೆಹೋವನು ನಮಗೆ ನಿಜವಾಗಲೂ ಆಧ್ಯಾತ್ಮಿಕ ಮೃಷ್ಟಾನ್ನ ಭೋಜನವನ್ನು ಒದಗಿಸುತ್ತಿದ್ದಾನೆ ಅಲ್ಲವೇ?—ಯೆಶಾ. 25:6.

 3 ಪ್ರಕಾಶಿಸಲಾಗುತ್ತಿರುವ ಎಲ್ಲಾ ಸಾಹಿತ್ಯ ನಿಮ್ಮ ಭಾಷೆಯಲ್ಲಿ ಲಭ್ಯವಿಲ್ಲದಿದ್ದರೆ ನಿಮಗೆ ಆಧ್ಯಾತ್ಮಿಕ ಪೋಷಣೆಯ ಕೊರತೆ ಆಗುತ್ತದಾ?

ಇಲ್ಲ. ಯೆಹೋವನ ಕೆಲವು ಸೇವಕರಿಗೆ ಇತರರಿಗಿಂತ ಹೆಚ್ಚು ಆಧ್ಯಾತ್ಮಿಕ ಆಹಾರ ಲಭ್ಯವಾಗುತ್ತಿರುವುದು ಹೊಸ ಸಂಗತಿಯೇನಲ್ಲ. ಅಪೊಸ್ತಲರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಮೊದಲನೇ ಶತಮಾನದಲ್ಲಿ ಇದ್ದ ಬೇರೆ ಶಿಷ್ಯರಿಗಿಂತ ಅಪೊಸ್ತಲರಿಗೆ ಹೆಚ್ಚು ನಿರ್ದೇಶನಗಳು ಸಿಕ್ಕಿದವು. (ಮಾರ್ಕ 4:10; 9:35-37) ಹಾಗಂತ ಬೇರೆ ಶಿಷ್ಯರಿಗೆ ಆಧ್ಯಾತ್ಮಿಕ ಪೋಷಣೆಯ ಕೊರತೆಯಾಗಲಿಲ್ಲ. ಅವರಿಗೆ ಯಾವುದರ ಅಗತ್ಯವಿತ್ತೊ ಅದನ್ನವರು ಪಡೆದರು.—ಎಫೆ. 4:20-24; 1 ಪೇತ್ರ 1:8.

ಗಮನ ಕೊಡಬೇಕಾದ ಇನ್ನೊಂದು ಅಂಶ ಯಾವುದೆಂದರೆ ಯೇಸು ಭೂಮಿಯಲ್ಲಿದ್ದಾಗ ಹೇಳಿದ ಮತ್ತು ಮಾಡಿದ ಹೆಚ್ಚಿನ ವಿಷಯಗಳು ಸುವಾರ್ತಾ ಪುಸ್ತಕಗಳಲ್ಲಿ ದಾಖಲಾಗಿಲ್ಲ. ಅಪೊಸ್ತಲ ಯೋಹಾನ ಬರೆದದ್ದು: “ಯೇಸು ಮಾಡಿದ ಇನ್ನೂ ಅನೇಕ ಸಂಗತಿಗಳಿವೆ; ಒಂದುವೇಳೆ ಅವುಗಳನ್ನು ಸವಿವರವಾಗಿ ಬರೆಯುವುದಾದರೆ ಬರೆಯಲ್ಪಟ್ಟ ಸುರುಳಿಗಳನ್ನು ಶೇಖರಿಸಿಡಲು ಲೋಕವೇ ಸಾಕಾಗದು ಎಂದು ನಾನು ನೆನಸುತ್ತೇನೆ.” (ಯೋಹಾ. 21:25) ಪರಿಪೂರ್ಣ ಮನುಷ್ಯನಾಗಿದ್ದ ಯೇಸುವಿನ ಮೊದಲನೇ ಶತಮಾನದ ಹಿಂಬಾಲಕರಿಗೆ ಆತನ ಬಗ್ಗೆ ಹೆಚ್ಚು ವಿಷಯ ಗೊತ್ತಿತ್ತು. ನಮಗೆ ಅಷ್ಟು ಗೊತ್ತಿಲ್ಲ. ಹಾಗೆಂದು ನಾವೇನು ವಂಚಿತರಲ್ಲ. ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವವರಾಗಿರಲು ನಮಗೆ ಎಷ್ಟು ತಿಳಿದಿರಬೇಕೊ ಅಷ್ಟು ತಿಳಿದಿರುವಂತೆ ಯೆಹೋವನು ನೋಡಿಕೊಂಡಿದ್ದಾನೆ.—1 ಪೇತ್ರ 2:21.

ಮೊದಲನೇ ಶತಮಾನದ ಸಭೆಗಳಿಗೆ ಅಪೊಸ್ತಲರು ಬರೆದ ಪತ್ರಗಳ ಬಗ್ಗೆಯೂ ಯೋಚಿಸಿ. ಪೌಲ ಬರೆದ ಪತ್ರಗಳಲ್ಲಿ ಕಡಿಮೆಪಕ್ಷ ಒಂದು ಪತ್ರ ಬೈಬಲ್‍ನಲ್ಲಿ ಇಲ್ಲ. (ಕೊಲೊ. 4:16) ಆ ಪತ್ರ ಬೈಬಲಲ್ಲಿ ಇಲ್ಲ ಎಂದಮಾತ್ರಕ್ಕೆ ನಮಗೆ ಸಿಗಬೇಕಾದ ಆಧ್ಯಾತ್ಮಿಕ ಆಹಾರ ಕಡಿಮೆಯಾಗಿದೆಯಾ? ನಮಗೇನು ಬೇಕು ಎನ್ನುವುದು ಯೆಹೋವನಿಗೆ ಚೆನ್ನಾಗಿ ಗೊತ್ತು. ಆಧ್ಯಾತ್ಮಿಕವಾಗಿ ಬಲವಾಗಿರಲು ನಮಗೆಷ್ಟು ಆಹಾರ ಬೇಕೊ ಅಷ್ಟನ್ನು ಆತನು ಒದಗಿಸಿದ್ದಾನೆ.—ಮತ್ತಾ. 6:8.

ನಮಗೇನು ಬೇಕೆನ್ನುವುದು ಯೆಹೋವನಿಗೆ ಗೊತ್ತಿರುವುದರಿಂದ ನಾವು ಆಧ್ಯಾತ್ಮಿಕವಾಗಿ ಬಲವಾಗಿರಲು ಏನು ಬೇಕೊ ಅದನ್ನು ಕೊಟ್ಟಿದ್ದಾನೆ

ಇಂದು ಯೆಹೋವನ ಸೇವಕರಲ್ಲಿ ಕೆಲವು ಭಾಷೆಯವರಿಗೆ ಬೇರೆ ಭಾಷೆಯವರಿಗಿಂತ ಹೆಚ್ಚು ಆಧ್ಯಾತ್ಮಿಕ ಆಹಾರ ಲಭ್ಯವಾಗುತ್ತಿದೆ. ನಿಮ್ಮ ಭಾಷೆಯಲ್ಲಿ ಕೆಲವೇ ಪ್ರಕಾಶನಗಳು ದೊರೆಯುತ್ತಿವೆಯಾ? ಹಾಗಿದ್ದರೂ ಯೆಹೋವನಿಗೆ ನಿಮ್ಮ ಬಗ್ಗೆಯೂ ಕಾಳಜಿಯಿದೆ. ನಿಮಗೆ ಲಭ್ಯವಿರುವ ಸಾಹಿತ್ಯದ ಅಧ್ಯಯನ ಮಾಡಿ. ನಿಮಗೆ ಅರ್ಥವಾಗುವ ಭಾಷೆಯಲ್ಲಿ ನಡೆಯುವ ಕೂಟಗಳಿಗೆ ಸಾಧ್ಯವಿದ್ದರೆ ಹಾಜರಾಗಿ. ಯೆಹೋವನು ನಿಮ್ಮನ್ನು ಆಧ್ಯಾತ್ಮಿಕವಾಗಿ ಬಲವಾಗಿರಿಸುವನು ಎಂದು ಧೈರ್ಯದಿಂದಿರಿ.—ಕೀರ್ತ. 1:2; ಇಬ್ರಿ. 10:24, 25.

4 ನಿಮಗೆ jw.org ನಲ್ಲಿರುವ ಮಾಹಿತಿಯನ್ನು ಪಡೆಯುವ ಸೌಕರ್ಯ ಇಲ್ಲದಿದ್ದರೆ ಆಧ್ಯಾತ್ಮಿಕವಾಗಿ ಬಲಹೀನರಾಗುವಿರಾ?

ನಮ್ಮ ವೆಬ್ಸೈಟ್‍ನಲ್ಲಿ ನಮ್ಮ ಪತ್ರಿಕೆಗಳ ಮತ್ತು ಬೈಬಲ್‌ ಅಧ್ಯಯನಕ್ಕೆ ಬೇಕಾದ ಸಾಹಿತ್ಯದ ಪ್ರತಿಗಳನ್ನು ಪ್ರಕಟಿಸುತ್ತೇವೆ. ಇದರ ಜೊತೆಗೆ ದಂಪತಿಗಳಿಗೆ, ಹದಿವಯಸ್ಕರಿಗೆ, ಚಿಕ್ಕ ಮಕ್ಕಳಿರುವವರಿಗೆ ಬೇಕಾದ ವಿಷಯಗಳು ಸಹ ವೆಬ್ಸೈಟ್‍ನಲ್ಲಿವೆ. ಈ ಮಾಹಿತಿಯನ್ನು ಕುಟುಂಬ ಆರಾಧನಾ ಸಂಜೆಯಲ್ಲಿ ಚರ್ಚಿಸುವ ಮೂಲಕ ಕುಟುಂಬಗಳಿಗೆ ಪ್ರಯೋಜನವಾಗುತ್ತಿದೆ. ಗಿಲ್ಯಡ್ ಪದವಿಪ್ರಾಪ್ತಿ ಸಮಾರಂಭ, ವಾರ್ಷಿಕ ಕೂಟದಂಥ ವಿಶೇಷ ಕಾರ್ಯಕ್ರಮಗಳ ಬಗ್ಗೆ, ನೈಸರ್ಗಿಕ ವಿಪತ್ತುಗಳು ಅಥವಾ ಯಾವುದೇ ಕಾನೂನು ಬೆಳವಣಿಗೆಗಳು ಯೆಹೋವನ ಸಾಕ್ಷಿಗಳ ಮೇಲೆ ಬೀರಿರುವ ಪರಿಣಾಮದ ಬಗ್ಗೆ ವೆಬ್ಸೈಟ್‌ ವರದಿಸುತ್ತದೆ. (1 ಪೇತ್ರ 5:8, 9) ಸಾರುವ ಕೆಲಸದಲ್ಲೂ ನಮ್ಮ ವೆಬ್ಸೈಟ್‌ ತುಂಬ ಪ್ರಭಾವಶಾಲಿ ಸಲಕರಣೆ. ನಿಷೇಧ ಅಥವಾ ಪ್ರತಿಬಂಧ ಇರುವಂಥ ದೇಶಗಳಲ್ಲೂ ಸುವಾರ್ತೆ ತಲುಪಿಸಲು ಇದು ಸಹಾಯಮಾಡಿದೆ.

ನಮ್ಮ ವೆಬ್ಸೈಟ್‍ನ ಸೌಕರ್ಯ ನಿಮಗೆ ಇರಲಿ ಇಲ್ಲದಿರಲಿ ನೀವು ಆಧ್ಯಾತ್ಮಿಕವಾಗಿ ಬಲವುಳ್ಳವರಾಗಿರಲು ಸಾಧ್ಯ. ‘ಮನೆಯವರಲ್ಲಿ’ ಪ್ರತಿಯೊಬ್ಬನಿಗೂ ಸಮೃದ್ಧ ಆಧ್ಯಾತ್ಮಿಕ ಆಹಾರ ಸಿಗುವಂತೆ ನಂಬಿಗಸ್ತ ಆಳು ಸಾಕಷ್ಟು ಮಾಹಿತಿಯನ್ನು ಮುದ್ರಿತ ರೂಪದಲ್ಲಿ ಲಭ್ಯಗೊಳಿಸಿದೆ. ಇದಕ್ಕಾಗಿ ತುಂಬ ಶ್ರಮಿಸಿದೆ ಸಹ. ಹಾಗಾಗಿ jw.org ವೆಬ್ಸೈಟ್‌ ನೋಡಲಿಕ್ಕೆಂದೇ ಹೊಸ ಎಲೆಕ್ಟ್ರಾನಿಕ್‌ ಸಾಧನವನ್ನು ಖರೀದಿಸುವ ಅಗತ್ಯವೇನಿಲ್ಲ. ಯಾರಿಗೆ ಇಂಟರ್‌ನೆಟ್‌ ಸೌಲಭ್ಯವಿಲ್ಲವೊ ಅವರಿಗೆ ಬೇಕಾದ ಮಾಹಿತಿಯನ್ನು ನಮ್ಮ ವೆಬ್ಸೈಟ್‍ನಿಂದ ಮುದ್ರಿಸಿ ಕೊಡಲು ವೈಯಕ್ತಿಕ ಏರ್ಪಾಡು ಮಾಡಬಹುದು. ಆದರೆ ಈ ರೀತಿ ಮುದ್ರಿಸಿ ಕೊಡುವ ಏರ್ಪಾಡನ್ನು ಸಭೆ ಮಾಡಬೇಕೆಂದಿಲ್ಲ.

ನಿಮ್ಮ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸುತ್ತೇನೆ ಎಂದು ಯೇಸು ಕೊಟ್ಟ ಮಾತನ್ನು ಆತನು ಪಾಲಿಸುತ್ತಿರುವದಕ್ಕೆ ನಾವಾತನಿಗೆ ಕೃತಜ್ಞರು. ಬೇಗನೆ ಅಂತ್ಯವಾಗಲಿರುವ ಈ ತೊಂದರೆಭರಿತ ಕಡೇ ದಿವಸಗಳಲ್ಲಿ ಯೆಹೋವನು ನಮಗೆ “ತಕ್ಕ ಸಮಯಕ್ಕೆ [ಆಧ್ಯಾತ್ಮಿಕ] ಆಹಾರ” ಕೊಡುವುದನ್ನು ಮುಂದುವರಿಸುವನೆಂದು ಭರವಸೆಯಿಂದಿರಬಲ್ಲೆವು.