ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯವನ್ನು ಬಳಸಿರಿ—ಅದು ಸಜೀವವಾದದ್ದು!

ದೇವರ ವಾಕ್ಯವನ್ನು ಬಳಸಿರಿ—ಅದು ಸಜೀವವಾದದ್ದು!

‘ದೇವರ ವಾಕ್ಯವು ಸಜೀವವಾದದ್ದು ಮತ್ತು ಪ್ರಬಲವಾದದ್ದು.’—ಇಬ್ರಿ. 4:12.

1, 2. (ಎ) ಯೆಹೋವನು ಮೋಶೆಗೆ ಯಾವ ನೇಮಕ ಕೊಟ್ಟನು? (ಬಿ) ಯಾವ ಭರವಸೆಯನ್ನೂ ನೀಡಿದನು?

ಜಗತ್ತಲ್ಲೇ ಅತೀ ಶಕ್ತಿಶಾಲಿ ಅಧಿಪತಿಯ ಮುಂದೆ ಹೋಗಿ ಯೆಹೋವನ ಜನರ ಪರವಾಗಿ ನೀವು ಮಾತಾಡಲಿಕ್ಕಿದೆಯೆಂದು ನೆನಸಿ. ನಿಮಗೆ ಹೇಗನಿಸಬಹುದು? ಭಯ, ಕಳವಳ, ಅಸಮರ್ಥ ಭಾವನೆ ಮುತ್ತಿಕೊಳ್ಳಬಹುದು. ಆ ಅಧಿಪತಿಯ ಮುಂದೆ ಮಾತಾಡಲು ನೀವು ಮಾಡುವ ತಯಾರಿಗಳೇನು? ಸರ್ವಶಕ್ತ ದೇವರ ಪ್ರತಿನಿಧಿಯಾಗಿ ನೀವಾಡುವ ಒಂದೊಂದು ಮಾತೂ ಶಕ್ತಿಶಾಲಿಯಾಗಿರಲು ಏನು ಮಾಡುತ್ತೀರಿ?

2 “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕ”ನಾಗಿದ್ದ ಮೋಶೆ ಒಂದೊಮ್ಮೆ ಇಂಥದ್ದೇ ಸನ್ನಿವೇಶದಲ್ಲಿದ್ದನು. (ಅರ. 12:3) ಯೆಹೋವನು ತನ್ನ ಜನರನ್ನು ಐಗುಪ್ತದ ದಬ್ಬಾಳಿಕೆ ಮತ್ತು ದಾಸತ್ವದಿಂದ ಬಿಡಿಸಲಿಕ್ಕಾಗಿ ಅವನನ್ನು ಫರೋಹನ ಬಳಿಗೆ ಕಳುಹಿಸುವುದಾಗಿ ಹೇಳಿದನು. ಅಂತೆಯೇ ಮೋಶೆ ಫರೋಹನ ಬಳಿ ಹೋದನು. ಅಲ್ಲಿ ನಡೆದ ಘಟನೆಗಳು ಫರೋಹನು ಒರಟಾದ ಅಹಂಕಾರಿ ಮನುಷ್ಯ ಎಂದು ಸಾಬೀತುಪಡಿಸಿದವು. (ವಿಮೋ. 5:1, 2) ಇಂಥ ವ್ಯಕ್ತಿಗೆ ಅವನ 30 ಲಕ್ಷದಷ್ಟು ದಾಸರನ್ನು ದೇಶದಿಂದ ಕಳುಹಿಸಲು ಮೋಶೆ ಆಜ್ಞೆ ನೀಡುವಂತೆ ಯೆಹೋವನು ಹೇಳಿದ್ದನು! ಸಹಜವಾಗಿಯೇ ಮೋಶೆ ಯೆಹೋವನಿಗೆ, “ಫರೋಹನ ಸನ್ನಿಧಾನಕ್ಕೆ ಹೋಗುವದಕ್ಕೂ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಕರೆದುಕೊಂಡುಬರುವದಕ್ಕೂ ನಾನು ಎಷ್ಟರವನು” ಎಂದು ಕೇಳಿದ್ದನು. ಏಕೆಂದರೆ ತಾನು ಅಸಮರ್ಥನು ಎಂಬ ಭಾವನೆ ಮೋಶೆಗಿತ್ತು. ಆದರೆ ಅವನು ಒಂಟಿಯಲ್ಲ ಎಂಬ ಭರವಸೆ ಕೊಡುತ್ತಾ “ನಾನೇ ನಿನ್ನ ಸಂಗಡ ಇರುವೆನು” ಎಂದು ಯೆಹೋವನು ಹೇಳಿದ್ದನು.—ವಿಮೋ. 3:9-12.

3, 4. (ಎ) ಮೋಶೆಗೆ ಯಾವ ಭಯ ಇತ್ತು? (ಬಿ) ಮೋಶೆಗಿದ್ದ ಯಾವ ಭಾವನೆಗಳು ನಿಮಗೂ ಇರಬಹುದು?

 3 ಮೋಶೆಗೆ ಯಾವುದರ ಭಯ ಇತ್ತು? ಯೆಹೋವ ದೇವರ ಪ್ರತಿನಿಧಿಯನ್ನು ಫರೋಹನು ಬರಮಾಡಿಕೊಳ್ಳುವುದಿಲ್ಲ ಅಥವಾ ಅವನ ಮಾತಿಗೆ ಗಮನಕೊಡುವುದಿಲ್ಲ ಎಂಬ ಭಯ. ಐಗುಪ್ತದಿಂದ ಬಿಡಿಸಲು ಯೆಹೋವನು ತನ್ನನ್ನು ನೇಮಿಸಿದ್ದಾನೆಂದು ತನ್ನ ಸ್ವಜನರು ನಂಬಲಿಕ್ಕಿಲ್ಲ ಎಂಬ ಭಯವೂ ಮೋಶೆಗಿತ್ತು. ಆದ್ದರಿಂದ ಅವನು ಯೆಹೋವನಿಗೆ “ಅವರು ನನ್ನನ್ನು ನಂಬದೆ ನನ್ನ ಮಾತಿಗೆ ಕಿವಿಗೊಡದೆ ಹೋದಾರು; ‘ಯೆಹೋವನು ನಿನಗೆ ಕಾಣಿಸಿಕೊಂಡೇ ಇಲ್ಲವೆಂದು ಹೇಳಾರು’” ಎಂದು ಹೇಳಿದನು.—ವಿಮೋ. 3:15-18; 4:1.

4 ಯೆಹೋವನು ಮೋಶೆಗೆ ಕೊಟ್ಟ ಉತ್ತರ ಮತ್ತು ತದನಂತರ ನಡೆದ ಘಟನೆಗಳು ನಮ್ಮೆಲ್ಲರಿಗೆ ಒಂದು ಪ್ರಬಲ ಪಾಠ ಕಲಿಸುತ್ತವೆ. ಒಬ್ಬ ಉನ್ನತ ಸರ್ಕಾರಿ ಅಧಿಕಾರಿಯ ಮುಂದೆ ನಿಂತು ಮಾತಾಡುವ ಸಂದರ್ಭ ನಿಮಗೆ ಬರದೇ ಇರಬಹುದು. ಆದರೆ ಪ್ರತಿದಿನ ಭೇಟಿಯಾಗುವ ಸಾಮಾನ್ಯ ಜನರೊಂದಿಗೆ ದೇವರ ಮತ್ತು ಆತನ ರಾಜ್ಯದ ಬಗ್ಗೆ ಮಾತಾಡುವುದೂ ನಿಮಗೆ ಸವಾಲಾಗಿದೆಯಾ? ಹಾಗಿದ್ದರೆ ಮೋಶೆಗಾದ ಅನುಭವದಿಂದ ಕಲಿಯಬಹುದಾದ ವಿಷಯವನ್ನು ಪರಿಗಣಿಸಿ.

“ಅದೇನು ನಿನ್ನ ಕೈಯಲ್ಲಿರುವುದು”?

5. (ಎ) ಯೆಹೋವನು ಮೋಶೆಯ ಕೈಯಲ್ಲಿ ಏನನ್ನು ಇಟ್ಟನು? (ಬಿ) ಅದು ಹೇಗೆ ಮೋಶೆಯ ಭಯವನ್ನು ನಿವಾರಿಸಿತು? (ಶೀರ್ಷಿಕೆ ಚಿತ್ರ ನೋಡಿ.)

5 ತನ್ನ ಮಾತನ್ನು ಯಾರೂ ಗಂಭೀರವಾಗಿ ತಕ್ಕೊಳ್ಳುವುದಿಲ್ಲ ಎಂಬ ಚಿಂತೆಯನ್ನು ಮೋಶೆ ಯೆಹೋವನ ಮುಂದೆ ತೋಡಿಕೊಂಡಾಗ ದೇವರು ಅವನನ್ನು ಆ ಸನ್ನಿವೇಶಕ್ಕಾಗಿ ತಯಾರು ಮಾಡಿದನು. ವಿಮೋಚನಕಾಂಡದಲ್ಲಿರುವ ವೃತ್ತಾಂತ ಹೀಗನ್ನುತ್ತದೆ: “ಯೆಹೋವನು [ಮೋಶೆಯನ್ನು]—ಅದೇನು ನಿನ್ನ ಕೈಯಲ್ಲಿರುವದು ಎಂದು ಕೇಳಿದನು. ಅವನು—ಇದು ಕೋಲು ಅಂದನು. ಯೆಹೋವನು ಅವನಿಗೆ—ಅದನ್ನು ನೆಲದಲ್ಲಿ ಬೀಸಾಡು ಎಂದು ಹೇಳಿದನು. ನೆಲದಲ್ಲಿ ಬೀಸಾಡುತ್ತಲೇ ಅದು ಹಾವಾಯಿತು; ಮೋಶೆ ಅದಕ್ಕೆ ಭಯಪಟ್ಟು ಓಡಿಹೋದನು. ಯೆಹೋವನು ಅವನಿಗೆ—ನಿನ್ನ ಕೈ ಚಾಚಿ ಅದರ ಬಾಲವನ್ನು ಹಿಡಿ ಎಂದು ಹೇಳಿದನು. ಹಿಡಿದಾಗ ಅದು ಕೋಲಾಯಿತು. ಆಗ ಯೆಹೋವನು ಅವನಿಗೆ—ಇದರಿಂದ ಅವರು . . . ಯೆಹೋವನು ನಿನಗೆ ಕಾಣಿಸಿದ್ದು ನಿಜ ಎಂಬದನ್ನು ನಂಬುವರು ಎಂದು ಹೇಳಿದನು.” (ವಿಮೋ. 4:2-5) ಮೋಶೆ ಹೇಳುವ ಸಂದೇಶ ಯೆಹೋವನಿಂದ ಬಂದದ್ದು ಎಂಬುದಕ್ಕೆ ಪುರಾವೆಯನ್ನು ಯೆಹೋವನು ಅವನ ಕೈಯಲ್ಲಿಟ್ಟನು. ಬೇರೆಯವರ ಕಣ್ಣಿಗೆ ಯಾವುದು ಬರೇ ಒಂದು ಕೋಲಾಗಿ ತೋರುತ್ತಿತ್ತೋ ಅದು ದೇವರ ಶಕ್ತಿಯಿಂದಾಗಿ ಜೀವಕ್ಕೆ ಬಂತು! ತನಗೆ ಯೆಹೋವನ ಬೆಂಬಲ ಇದೆ ಎಂದು ಮೋಶೆ ಹೇಳುವ ಮಾತಿಗೆ ಈ ಅದ್ಭುತ ಖಂಡಿತ ಪುಷ್ಟಿ ಕೊಡಲಿತ್ತು. ಆದ್ದರಿಂದಲೇ ಯೆಹೋವನು ಮೋಶೆಗೆ “ಈ ಕೋಲನ್ನು ಕೈಯಲ್ಲಿ ತೆಗೆದುಕೊಂಡು ಹೋಗಬೇಕು; ಇದರಿಂದಲೇ ಆ ಮಹತ್ಕಾರ್ಯಗಳನ್ನು ಮಾಡುವಿ” ಎಂದು ಹೇಳಿದನು. (ವಿಮೋ. 4:17) ದೇವರು ತನಗೆ ಅಧಿಕಾರ ಕೊಟ್ಟಿದ್ದಾನೆ ಎಂದು ತೋರಿಸುವ ಈ ಪುರಾವೆಯನ್ನು ಕೈಯಲ್ಲಿ ಹಿಡಿದು ಮೋಶೆ ತನ್ನ ಸ್ವಂತ ಜನರ ಮತ್ತು ಫರೋಹನ ಮುಂದೆ ಧೈರ್ಯದಿಂದ ಸತ್ಯ ದೇವರನ್ನು ಪ್ರತಿನಿಧಿಸಲು ಸಾಧ್ಯವಿತ್ತು.—ವಿಮೋ. 4:29-31; 7:8-13.

6. (ಎ) ಸಾರುವಾಗ ನಮ್ಮ ಕೈಯಲ್ಲಿ ಏನಿರಬೇಕು? ಏಕೆ? (ಬಿ) ದೇವರ ವಾಕ್ಯ ಹೇಗೆ ‘ಸಜೀವವಾದದ್ದು ಮತ್ತು ಪ್ರಬಲವಾದದ್ದು’ ಎಂದು ವಿವರಿಸಿ.

6 ಬೈಬಲ್‌ ಸಂದೇಶವನ್ನು ಸಾರಲು ಹೋಗುವಾಗ ಜನರು ನಮಗೂ ಇಂಥದ್ದೇ ಪ್ರಶ್ನೆ ಕೇಳಬಹುದು. “ನಿಮ್ಮ ಕೈಯಲ್ಲಿರುವುದೇನು”? ಅನೇಕ ದೇಶಗಳಲ್ಲಿ ಸಾಕ್ಷಿಗಳು ಸಾರಲು ಹೋಗುವಾಗ ಅವರ ಕೈಯಲ್ಲಿ ಬೈಬಲಿರುತ್ತದೆ, ಬಳಸಲು ಸಿದ್ಧರಾಗಿರುತ್ತಾರೆ. * ಕೆಲವು ಜನರಿಗೆ ಬೈಬಲ್‌ ಅಂದರೆ ಒಂದು ಒಳ್ಳೇ ಪುಸ್ತಕ ಅಷ್ಟೇ. ಆದರೆ ನಿಜವಾಗಿ ಅದು ಯೆಹೋವನ ಪ್ರೇರಿತ ವಾಕ್ಯವಾಗಿದ್ದು ಅದರ ಮೂಲಕ ಆತನು ನಮ್ಮೊಂದಿಗೆ ಮಾತಾಡುತ್ತಾನೆ. (2 ಪೇತ್ರ 1:21) ಆತನ ರಾಜ್ಯದಲ್ಲಿ ನೆರವೇರುವ ಆತನ ವಾಗ್ದಾನಗಳು ಅದರಲ್ಲಿವೆ. ಆದ್ದರಿಂದಲೇ ಅಪೊಸ್ತಲ ಪೌಲ ಹೀಗೆ ಬರೆದನು: ‘ದೇವರ ವಾಕ್ಯವು ಸಜೀವವಾದದ್ದು ಮತ್ತು ಪ್ರಬಲವಾದದ್ದು.’ (ಇಬ್ರಿಯ 4:12 ಓದಿ.) ದೇವರ ವಾಕ್ಯ ಸಜೀವವಾದದ್ದು ಎಂದು ಏಕೆ ಹೇಳಬಹುದು? ಏಕೆಂದರೆ ಆತನ ಎಲ್ಲಾ ವಾಗ್ದಾನಗಳು ನೆರವೇರುವವು ಮತ್ತು ಸಂಪೂರ್ಣ ಯಶಸ್ಸು ಪಡೆಯುವವು. (ಯೆಶಾ. 46:10; 55:11) ಈ ವಿಷಯವನ್ನು ಒಬ್ಬ ವ್ಯಕ್ತಿ ಗ್ರಹಿಸುವಾಗ ಅವನು ಬೈಬಲ್‍ನಲ್ಲಿ ಓದುವಂಥ ಸಂಗತಿಗಳು ಅವನ ಜೀವನದಲ್ಲಿ ಪ್ರಬಲ ಪ್ರಭಾವ ಬೀರುತ್ತವೆ.

7. ನಾವು ಹೇಗೆ ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕು’?

7 ಸಜೀವವಾದ ತನ್ನ ಲಿಖಿತ ವಾಕ್ಯವನ್ನು ಯೆಹೋವನು ನಮ್ಮ ಕೈಗಿತ್ತಿದ್ದಾನೆ. ನಾವು ಸಾರುವ ಸಂದೇಶ ನಂಬಲರ್ಹವಾದದ್ದು ಮತ್ತು ದೇವರಿಂದ ಬಂದದ್ದು ಎಂದು ಇದರ ಮೂಲಕ ಸಾಬೀತುಪಡಿಸಬಹುದು.  ಆದ್ದರಿಂದಲೇ ಪೌಲನು ದೇವರ ಸಜೀವ ವಾಕ್ಯದ ಕುರಿತು ಇಬ್ರಿಯರಿಗೆ ಬರೆದಾದ ಮೇಲೆ, ತಾನು ತರಬೇತಿ ಕೊಡುತ್ತಿದ್ದ ತಿಮೊಥೆಯನಿಗೆ ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸು’ ಎಂದು ಪ್ರೋತ್ಸಾಹಿಸಿದನು. (2 ತಿಮೊ. 2:15) ಪೌಲನು ಹೇಳಿದ ಮಾತನ್ನು ನಾವೂ ಅನ್ವಯಿಸಿಕೊಳ್ಳಬಹುದು. ಹೇಗೆ? ನಮ್ಮ ಸಂದೇಶಕ್ಕೆ ಕಿವಿಗೊಡುವ ಜನರ ಮನಮುಟ್ಟಲಿಕ್ಕಾಗಿ ಸಂದರ್ಭಕ್ಕೆ ಸೂಕ್ತವಾದ ವಚನಗಳನ್ನು ಅವರಿಗೆ ಓದಿ ಹೇಳುವ ಮೂಲಕ. * 2013ರಲ್ಲಿ ಬಿಡುಗಡೆಯಾದ ಕರಪತ್ರಗಳನ್ನು ಈ ಉದ್ದೇಶದಿಂದಲೇ ರಚಿಸಲಾಗಿವೆ.

ಸಂದರ್ಭಕ್ಕೆ ಸೂಕ್ತ ವಚನ ಓದಿ!

8. ಕರಪತ್ರಗಳ ಬಗ್ಗೆ ಸೇವಾ ಮೇಲ್ವಿಚಾರಕರೊಬ್ಬರು ಹೇಳಿದ್ದೇನು?

8 ಈ ಎಲ್ಲಾ ಹೊಸ ಕರಪತ್ರಗಳ ವಿನ್ಯಾಸ ಒಂದೇ ರೀತಿಯದ್ದಾಗಿದೆ. ಆದ್ದರಿಂದ ಒಂದನ್ನು ಬಳಸಲು ಕಲಿತರೆ ಉಳಿದದ್ದನ್ನು ಕಲಿತ ಹಾಗೆ. ಅದನ್ನು ಬಳಸುವುದು ಸುಲಭವೇ? ಅಮೆರಿಕದ ಹವಾಯಿಯಲ್ಲಿನ ಸೇವಾ ಮೇಲ್ವಿಚಾರಕರೊಬ್ಬರು ಬರೆದದ್ದು: “ಈ ಹೊಸ ಸಾಧನಗಳು ಮನೆಮನೆ ಸೇವೆಯಲ್ಲಿ ಮತ್ತು ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಇಷ್ಟು ಪರಿಣಾಮಕಾರಿ ಆಗಿರುವವೆಂದು ನಾವು ನೆನಸಿರಲಿಲ್ಲ.” ಈ ಕರಪತ್ರಗಳ ವಿನ್ಯಾಸ ಹೇಗಿದೆ ಎಂದರೆ ಜನರು ತಕ್ಷಣ ಪ್ರತಿಕ್ರಿಯಿಸುತ್ತಾರೆ ಮತ್ತು ಇದು ಹೆಚ್ಚಾಗಿ ಒಳ್ಳೇ ಸಂಭಾಷಣೆಗೆ ನಡೆಸುತ್ತದೆಂದು ಈ ಸಹೋದರ ಹೇಳುತ್ತಾರೆ. ಕರಪತ್ರದ ಮುಂಭಾಗದಲ್ಲೇ ಪ್ರಶ್ನೆ ಮತ್ತು ಒಂದಕ್ಕಿಂತ ಹೆಚ್ಚು ಉತ್ತರಗಳಿವೆ. ಹಾಗಾಗಿ ತಾನು ಹೇಳುವ ಉತ್ತರ ತಪ್ಪಾಗಿಬಿಟ್ಟರೆ ಎಂದು ಮನೆಯವನು ಹಿಂಜರಿಯಬೇಕಾಗಿಲ್ಲ ಎನ್ನುವುದು ಇವರ ಅಭಿಪ್ರಾಯ.

9, 10. (ಎ) ಬೈಬಲನ್ನು ಬಳಸುವಂತೆ ನಮ್ಮ ಕರಪತ್ರಗಳು ಹೇಗೆ ಪ್ರೋತ್ಸಾಹಿಸುತ್ತವೆ? (ಬಿ) ಯಾವ ಕರಪತ್ರಗಳನ್ನು ಬಳಸಿ ನಿಮಗೆ ಒಳ್ಳೇ ಫಲಿತಾಂಶ ಸಿಕ್ಕಿದೆ? ಏಕೆ?

9 ಸಂದರ್ಭಕ್ಕೆ ಸೂಕ್ತವಾದ ವಚನ ಓದುವಂತೆ ಪ್ರತಿಯೊಂದು ಕರಪತ್ರ ಪ್ರೋತ್ಸಾಹಿಸುತ್ತದೆ. ಉದಾಹರಣೆಗೆ ನಿಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಕರಪತ್ರವನ್ನು ನೋಡಿ. ಈ ಪ್ರಶ್ನೆಗೆ ಮನೆಯವನು “ಹೌದು” “ಇಲ್ಲ” “ಇರಬಹುದೇನೊ” ಎಂಬ ಯಾವ ಉತ್ತರವನ್ನಾದರೂ ಕೊಡಬಹುದು. ಆಗ ನೀವು ಬೇರೇನೂ ಹೇಳದೆ ಪುಟ ತಿರುಗಿಸಿ “ಪವಿತ್ರ ಗ್ರಂಥ ಏನು ಹೇಳುತ್ತದೆ?” ಎಂದು ಕೇಳಿ ಪ್ರಕಟನೆ 21:3, 4 ಓದಿ.

10 ಹಾಗೇ ಬೈಬಲ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕರಪತ್ರವನ್ನು ಬಳಸುವಾಗ ಮನೆಯವರು ಮೂರರಲ್ಲಿ ಯಾವ ಉತ್ತರವನ್ನು ಕೊಟ್ಟರೂ ಪುಟ ತಿರುಗಿಸಿ “‘ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ’ ಎಂದು ಬೈಬಲ್‌ ತಿಳಿಸುತ್ತದೆ” ಎಂದು ಹೇಳಿ. ಇದಕ್ಕೆ ಕೂಡಿಸಿ “ಈ ವಚನದ ಉಳಿದ ಭಾಗ ಹೀಗಿದೆ” ಎನ್ನುತ್ತಾ ನಿಮ್ಮ ಬೈಬಲನ್ನು ತೆರೆದು 2 ತಿಮೊಥೆಯ 3:16, 17ನ್ನು ಪೂರ್ತಿ ಓದಿ.

11, 12. (ಎ) ಸುವಾರ್ತೆ ಸಾರುವುದರಿಂದ ನಿಮಗೆ ಯಾವ ತೃಪ್ತಿ ಸಿಗುತ್ತದೆ? (ಬಿ) ಪುನರ್ಭೇಟಿಗಳನ್ನು ಮಾಡಲು ಕರಪತ್ರಗಳು ಹೇಗೆ ನೆರವಾಗುತ್ತವೆ?

11 ಮನೆಯವರ ಪ್ರತಿಕ್ರಿಯೆ ನೋಡಿ ನೀವು ಕರಪತ್ರದ ಇನ್ನೆಷ್ಟು ಭಾಗವನ್ನು ಓದಿ ಚರ್ಚಿಸಬೇಕೆಂದು ನಿರ್ಧರಿಸಬಹುದು. ಜನರ ಕೈಗೆ ಕರಪತ್ರವನ್ನು  ಕೊಡುವುದರ ಜೊತೆಗೆ ಅವರಿಗೆ ದೇವರ ವಾಕ್ಯದಿಂದ ಓದಿ ಹೇಳಿರುವ ತೃಪ್ತಿ ನಿಮಗಿರುತ್ತದೆ. ಮೊದಲ ಭೇಟಿಯಲ್ಲಿ ಒಂದೆರೆಡು ವಚನಗಳನ್ನು ಓದಿದರೂ ಸರಿಯೇ ನಿಮಗೆ ಆ ತೃಪ್ತಿ ಇರುತ್ತದೆ. ಮುಂದಿನ ಭೇಟಿಗಳಲ್ಲಿ ನೀವು ಚರ್ಚೆಯನ್ನು ಮುಂದುವರಿಸಬಹುದು.

12 ಪ್ರತಿ ಕರಪತ್ರದ ಹಿಂಬದಿಯಲ್ಲಿ “ಯೋಚಿಸಿ” ಎಂಬ ಶೀರ್ಷಿಕೆಯಡಿ ಒಂದು ಪ್ರಶ್ನೆ ಮತ್ತು ವಚನಗಳನ್ನು ಕೊಡಲಾಗಿದೆ. ಪುನರ್ಭೇಟಿಯಲ್ಲಿ ಇದನ್ನು ಚರ್ಚಿಸಬಹುದು. ಮುಂದೆ ಈ ಲೋಕ ಹೇಗಿರುತ್ತದೆ? ಕರಪತ್ರದಲ್ಲಿರುವ ಪ್ರಶ್ನೆ “ದೇವರು ಈ ಲೋಕವನ್ನು ಹೇಗೆ ಸರಿಮಾಡಬಹುದು?” ಎಂದಾಗಿದೆ. ಅಲ್ಲಿ ಕೊಡಲಾಗಿರುವ ವಚನ ಮತ್ತಾಯ 6:9, 10 ಮತ್ತು ದಾನಿಯೇಲ 2:44. ಸತ್ತವರು ಮತ್ತೆ ಬದುಕಿ ಬರುತ್ತಾರಾ? ಕರಪತ್ರದಲ್ಲಿ “ನಮಗೆ ಯಾಕೆ ವಯಸ್ಸಾಗುತ್ತೆ? ನಾವು ಯಾಕೆ ಸಾಯುತ್ತೇವೆ?” ಎಂಬ ಪ್ರಶ್ನೆಗಳಿವೆ. ಅಲ್ಲಿ ಆದಿಕಾಂಡ 3:17-19 ಮತ್ತು ರೋಮನ್ನರಿಗೆ 5:12 ವಚನಗಳನ್ನು ಕೊಡಲಾಗಿದೆ.

13. ಬೈಬಲ್‌ ಅಧ್ಯಯನ ಆರಂಭಿಸುವ ನಿಟ್ಟಿನಲ್ಲಿ ಕರಪತ್ರಗಳನ್ನು ಬಳಸುವುದು ಹೇಗೆಂದು ವಿವರಿಸಿ.

13 ಈ ಕರಪತ್ರಗಳನ್ನು ಬೈಬಲ್‌ ಅಧ್ಯಯನ ಆರಂಭಿಸಲು ಮೆಟ್ಟಿಲುಗಳಾಗಿ ಬಳಸಿ. ಆಸಕ್ತರು ಕರಪತ್ರದ ಹಿಂಬದಿಯಲ್ಲಿರುವ ಕ್ಯು.ಆರ್‌. (QR) ಕೋಡ್ * ಅನ್ನು ಸ್ಕಾ್ಯನ್‌ ಮಾಡಿದರೆ ಅದು ನೇರವಾಗಿ ನಮ್ಮ ವೆಬ್ಸೈಟಿಗೆ ಕೊಂಡೊಯ್ಯುತ್ತದೆ. ಅಲ್ಲಿರುವ ವಿಷಯ ಅವರನ್ನು ಬೈಬಲ್‌ ಅಧ್ಯಯನ ಮಾಡಲು ಪ್ರೋತ್ಸಾಹಿಸಬಹುದು. ಈ ಕರಪತ್ರಗಳು ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆ ಮತ್ತು ಅದರಲ್ಲಿರುವ ನಿರ್ದಿಷ್ಟ ಪಾಠಕ್ಕೆ ಸಹ ಬೊಟ್ಟುಮಾಡುತ್ತವೆ. ಉದಾಹರಣೆಗೆ ಈ ಲೋಕ ಯಾರ ಕೈಯಲ್ಲಿದೆ? ಕರಪತ್ರ ಆ ಕಿರುಹೊತ್ತಗೆಯಲ್ಲಿರುವ ಪಾಠ 5ಕ್ಕೆ ಮತ್ತು ಸುಖ ಸಂಸಾರಕ್ಕೆ ಏನು ಅವಶ್ಯ? ಕರಪತ್ರ ಪಾಠ 9ಕ್ಕೆ ನಡೆಸುತ್ತದೆ. ಮೊದಲ ಭೇಟಿಯಲ್ಲಿ ಮತ್ತು ಪುನರ್ಭೇಟಿಗಳಲ್ಲಿ ಬೈಬಲನ್ನು ಬಳಸುವಂಥ ರೀತಿಯಲ್ಲಿ ಈ ಕರಪತ್ರಗಳನ್ನು ರಚಿಸಲಾಗಿದೆ. ಇದರಿಂದಾಗಿ ಅನೇಕ ಬೈಬಲ್‌ ಅಧ್ಯಯನಗಳನ್ನು ಆರಂಭಿಸಬಹುದು. ಕ್ಷೇತ್ರಸೇವೆಯಲ್ಲಿ ದೇವರ ವಾಕ್ಯವನ್ನು ಪರಿಣಾಮಕಾರಿಯಾಗಿ ಬಳಸಲು ನೀವು ಇನ್ನೇನು ಮಾಡಬಹುದು?

ಜನರು ಚಿಂತಿಸುವಂಥ ವಿಷಯಗಳನ್ನು ಚರ್ಚಿಸಿ

14, 15. ಸೇವೆಯ ಕುರಿತು ಪೌಲನಿಗಿದ್ದ ಮನೋಭಾವವನ್ನು ನೀವು ಹೇಗೆ ಅನುಕರಿಸಬಹುದು?

14 ಪೌಲನಿಗೆ ತನ್ನ ಸೇವೆಯಲ್ಲಿ ಸಿಗುವ ಜನರಲ್ಲಿ ಸಾಧ್ಯವಾದಷ್ಟು ಹೆಚ್ಚಿನವರ ಯೋಚನಾ ರೀತಿಯನ್ನು ಅರ್ಥಮಾಡಿಕೊಳ್ಳುವ ವಿಷಯದಲ್ಲಿ ತುಂಬ ಆಸಕ್ತಿವಹಿಸಿದನು. (1 ಕೊರಿಂಥ 9:19-23 ಓದಿ.) ‘ಯೆಹೂದ್ಯರನ್ನು . . . ಧರ್ಮಶಾಸ್ತ್ರದ ಕೆಳಗಿದ್ದವರನ್ನು . . . ನಿಯಮವಿಲ್ಲದವರನ್ನು . . . ಬಲವಿಲ್ಲದವರನ್ನು ಗಳಿಸಬೇಕೆನ್ನುವುದು’ ಪೌಲನ ಆಸೆಯಾಗಿತ್ತು. ‘ಎಲ್ಲ ರೀತಿಯ ಜನರಿಗೆ ಎಲ್ಲವೂ ಆಗಿ’ ಅವರಿಗೆ ಸುವಾರ್ತೆ ತಲುಪಿಸಲು ಬಯಸಿದನು. (ಅ. ಕಾ. 20:21) ನಮ್ಮ ಸೇವಾಕ್ಷೇತ್ರದಲ್ಲಿರುವ “ಎಲ್ಲಾ ರೀತಿಯ” ಜನರಿಗೆ ಸತ್ಯವನ್ನು ತಿಳಿಸಲು ನಾವು ತಯಾರಾಗುವಾಗ ಪೌಲನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?—1 ತಿಮೊ. 2:3, 4.

15 ನಮ್ಮ ರಾಜ್ಯ ಸೇವೆಯಲ್ಲಿ ಮಾದರಿ ನಿರೂಪಣೆಗಳು ಪ್ರತಿ ತಿಂಗಳು ಬರುತ್ತವೆ. ಅವನ್ನು ಉಪಯೋಗಿಸಿ. ಆದರೆ ನಿಮ್ಮ ಸೇವಾಕ್ಷೇತ್ರದಲ್ಲಿ ಜನರು ಬೇರೆ ವಿಷಯಗಳ ಕುರಿತು ಚಿಂತಿತರಾಗಿದ್ದರೆ ಅದರ ಬಗ್ಗೆ ಆಸಕ್ತಿ ಕೆರಳಿಸುವಂಥ ನಿರೂಪಣೆಗಳನ್ನು ತಯಾರುಮಾಡಿ. ನೀವು ವಾಸಿಸುತ್ತಿರುವಲ್ಲಿನ ಪರಿಸ್ಥಿತಿಗಳ ಬಗ್ಗೆ, ಅಲ್ಲಿನ ಜನರ ಬಗ್ಗೆ, ಅವರನ್ನು ಚಿಂತಿತರನ್ನಾಗಿ ಮಾಡುವ ವಿಷಯಗಳ ಬಗ್ಗೆ ಯೋಚಿಸಿ. ನಂತರ ಆ ವಿಷಯಕ್ಕೆ ಸಂಬಂಧಪಟ್ಟ ವಚನವೊಂದನ್ನು ಆಯ್ಕೆ ಮಾಡಿ. ಒಬ್ಬ ಸರ್ಕಿಟ್‌ ಮೇಲ್ವಿಚಾರಕ ಮತ್ತವರ ಪತ್ನಿ ಬೈಬಲ್‌ ಕಡೆಗೆ ಜನರ ಗಮನ ಸೆಳೆಯುವಂಥ ಈ ಒಂದು ವಿಧಾನವನ್ನು ತಿಳಿಸುತ್ತಾರೆ: “ನಾವು ವಿಷಯವನ್ನು ಚುಟುಕಾಗಿ, ನೇರವಾಗಿ ಹೇಳುವಾಗ ಒಂದು ವಚನವನ್ನಾದರೂ ಓದಿ ಹೇಳುವಂತೆ ಹೆಚ್ಚಿನ ಮನೆಯವರು ಅನುಮತಿಸುತ್ತಾರೆ. ತೆರೆದಿಟ್ಟ ಬೈಬಲನ್ನು ಕೈಯಲ್ಲಿ ಹಿಡಿದುಕೊಂಡೇ ಅವರನ್ನು ವಂದಿಸಿ ನಂತರ ವಚನವನ್ನು ಓದುತ್ತೇವೆ.” ಕ್ಷೇತ್ರದಲ್ಲಿ ಪ್ರಯೋಗಿಸಿ ಪರೀಕ್ಷಿಸಲಾದ ವಿಷಯಗಳನ್ನು, ಪ್ರಶ್ನೆಗಳನ್ನು, ವಚನಗಳನ್ನು ಈ ಮುಂದೆ ಕೊಡಲಾಗಿದೆ. ಇವನ್ನು ಪರಿಗಣಿಸಿ ನಿಮ್ಮ ಕ್ಷೇತ್ರದಲ್ಲೂ ಬಳಸಿ ನೋಡಬಹುದು.

ನಿಮ್ಮ ಸೇವೆಯಲ್ಲಿ ಬೈಬಲ್‌ ಮತ್ತು ಕರಪತ್ರಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದೀರಾ? (ಪ್ಯಾರ 8-13 ನೋಡಿ)

16. ಮೀಕ 4:4ನ್ನು ಸೇವೆಯಲ್ಲಿ ಹೇಗೆ ಬಳಸಬಹುದೆಂದು ವಿವರಿಸಿ.

16 ಪಾತಕ, ಹಿಂಸಾಚಾರಗಳಿರುವ ಸ್ಥಳದಲ್ಲಿ ನೀವಿರುವುದಾದರೆ ಮನೆಯವರನ್ನು ಹೀಗೆ ಕೇಳಬಹುದು: “‘ಈಗ ಇಡೀ ಲೋಕ ಪಾತಕಮುಕ್ತ. ಜನಜೀವನ ಸುರಕ್ಷಿತ’ ಎಂಬ ಸುದ್ದಿ ಒಂದು ದಿನ ವಾರ್ತಾಪತ್ರಿಕೆಯ ಮುಖಪುಟದಲ್ಲಿ ಬಂದರೆ ನಿಮಗೆ ಹೇಗನಿಸಬಹುದು? ಇದನ್ನೇ ಬೈಬಲ್‌ ಮೀಕ 4:4ರಲ್ಲಿ ಹೇಳುತ್ತದೆ. ಅಷ್ಟೇ ಅಲ್ಲ ಮುಂದಕ್ಕೆ ಭೂಮಿ ಮೇಲೆ ಶಾಂತಿಭರಿತ ಸಮಯ ಬರಲಿದೆಯೆಂದು ದೇವರು ಮಾಡಿರುವ ಅನೇಕ ಭವಿಷ್ಯವಾಣಿಗಳು ಬೈಬಲಲ್ಲಿ ದಾಖಲಾಗಿವೆ.” ನಂತರ ಬೈಬಲ್‍ನಿಂದ ಅಂಥ ವಾಗ್ದಾನವೊಂದನ್ನು ಓದಿ ಹೇಳಬಹುದಾ ಎಂದು ಕೇಳಿ.

17. ನಿಮ್ಮ ಸಂಭಾಷಣೆಯಲ್ಲಿ ಮತ್ತಾಯ 5:3ನ್ನು ಹೇಗೆ ಪರಿಚಯಿಸಬಹುದು?

 17 ನಿಮ್ಮ ಸೇವಾಕ್ಷೇತ್ರದಲ್ಲಿರುವ ಪುರುಷರು ಹೊಟ್ಟೆಪಾಡಿಗಾಗಿ ತುಂಬ ಕಷ್ಟಪಡುತ್ತಾರಾ? ಹಾಗಿದ್ದರೆ ಹೀಗೆ ಕೇಳಿ ಸಂಭಾಷಣೆ ಆರಂಭಿಸಿ: “ಕುಟುಂಬವನ್ನು ಸುಖವಾಗಿಡಲು ಒಬ್ಬ ವ್ಯಕ್ತಿ ಎಷ್ಟು ಹಣ ಸಂಪಾದಿಸಬೇಕು?” ಅವರ ಪ್ರತಿಕ್ರಿಯೆಯ ನಂತರ “ಅನೇಕರು ಅದಕ್ಕಿಂತಲೂ ಹೆಚ್ಚು ಸಂಪಾದನೆ ಮಾಡುತ್ತಾರೆ. ಆದರೂ ಅವರ ಕುಟುಂಬದಲ್ಲಿ ಸಂತೋಷವಿಲ್ಲ. ಹಾಗಾದರೆ ಸಂತೋಷವಾಗಿರಲು ನಿಜವಾಗಲೂ ಏನು ಅಗತ್ಯ?” ಎಂದು ಕೇಳಿ. ಆಮೇಲೆ ಮತ್ತಾಯ 5:3ನ್ನು ಓದಿ ಬೈಬಲ್‌ ಅಧ್ಯಯನದ ಬಗ್ಗೆ ತಿಳಿಸಿ.

18. ಇತರರಿಗೆ ಸಾಂತ್ವನ ನೀಡಲು ನೀವು ಹೇಗೆ ಯೆರೆಮಿಾಯ 29:11ನ್ನು ಬಳಸಬಹುದು?

18 ನೀವಿರುವಂಥ ಸ್ಥಳದಲ್ಲಿ ಇತ್ತೀಚಿಗೆ ನಡೆದ ಯಾವುದಾದರೂ ದುರಂತದಿಂದ ಜನರು ಬಾಧಿತರಾಗಿದ್ದಾರಾ? ನಿಮ್ಮ ನಿರೂಪಣೆಯನ್ನು ಹೀಗೆ ಆರಂಭಿಸಬಹುದು: “ನಿಮ್ಮನ್ನು ಭೇಟಿಯಾಗಿ ಸಾಂತ್ವನದ ಮಾತುಗಳನ್ನಾಡಿ ಹೋಗೋಣ ಎಂದು ಬಂದೆ. (ಯೆರೆಮಿಾಯ 29:11 ಓದಿ.) ನಮಗಾಗಿ ದೇವರು ಬಯಸುವ ಎರಡು ವಿಷಯಗಳನ್ನು ನೀವಿಲ್ಲಿ ಗಮನಿಸಿದಿರಾ? ‘ನಿರೀಕ್ಷೆ’ ಹಾಗೂ ‘ಹಿತ.’ ನಮ್ಮ ಜೀವನ ಚೆನ್ನಾಗಿರಬೇಕೆಂದು ದೇವರು ಬಯಸುತ್ತಾನೆಂದು ತಿಳಿದು ಎಷ್ಟು ಸಂತೋಷವಾಗುತ್ತದಲ್ಲ? ಆದರೆ ಅಂಥ ಜೀವನ ಹೇಗೆ ಸಾಧ್ಯ?” ನಂತರ ಸಿಹಿಸುದ್ದಿ ಕಿರುಹೊತ್ತಗೆಯ ಸೂಕ್ತ ಪಾಠದೆಡೆಗೆ ಅವರ ಗಮನ ತಿರುಗಿಸಿ.

19. ಕ್ರೈಸ್ತ ಅಥವಾ ಮುಸ್ಲಿ೦ ವ್ಯಕ್ತಿಯೊಂದಿಗೆ ಮಾತಾಡುವಾಗ ಪ್ರಕಟನೆ 14:6, 7ನ್ನು ಹೇಗೆ ಬಳಸಬಹುದೆಂದು ವಿವರಿಸಿ.

19 ಒಬ್ಬ ಕ್ರೈಸ್ತ ಅಥವಾ ಮುಸ್ಲಿ೦ ವ್ಯಕ್ತಿಯನ್ನು ನೀವು ಭೇಟಿಯಾದರೆ ಸಂಭಾಷಣೆಯನ್ನು ಹೀಗೆ ಆರಂಭಿಸಬಹುದು: “ಒಬ್ಬ ದೇವದೂತ ಬಂದು ನಿಮ್ಮೊಟ್ಟಿಗೆ ಮಾತಾಡಿದರೆ ಅವನು ಹೇಳಿದ್ದನ್ನು ನೀವು ಕೇಳುತ್ತೀರಾ? (ಪ್ರಕಟನೆ 14:6, 7 ಓದಿ.) ಈ ದೇವದೂತ ‘ದೇವರಿಗೆ ಭಯಪಡಿರಿ’ ಎಂದು ಹೇಳುವುದರಿಂದ ಅವನು ಯಾವ ದೇವರ ಬಗ್ಗೆ ಹೇಳುತ್ತಿದ್ದಾನೆ ಎಂದು ತಿಳಿದುಕೊಳ್ಳುವುದು ಪ್ರಾಮುಖ್ಯವಲ್ಲವೇ? ಅದನ್ನು ತಿಳಿಯಲು ಈ ದೇವದೂತನೇ ನಮಗೊಂದು ಸುಳಿವು ಕೊಡುತ್ತಾನೆ. ‘ಸ್ವರ್ಗವನ್ನೂ ಭೂಮಿಯನ್ನೂ ಉಂಟುಮಾಡಿದವನು’ ಎಂದು ಹೇಳುತ್ತಾನೆ. ಅದು ಯಾರು?” ನಂತರ ಕೀರ್ತನೆ 124:8ನ್ನು ಓದಿ: “ಭೂಮ್ಯಾಕಾಶಗಳನ್ನು ಉಂಟುಮಾಡಿದ ಯೆಹೋವನ ನಾಮದಲ್ಲಿ ನಮಗೆ ರಕ್ಷಣೆಯಾಗುವದು.” ಯೆಹೋವ ದೇವರ ಬಗ್ಗೆ ಹೆಚ್ಚನ್ನು ತಿಳಿಸಲು ಇನ್ನೊಮ್ಮೆ ಭೇಟಿ ಮಾಡುತ್ತೇನೆಂದು ಹೇಳಿ.

20. (ಎ) ದೇವರ ಹೆಸರಿನ ಬಗ್ಗೆ ಕಲಿಸಲು ಜ್ಞಾನೋಕ್ತಿ 30:4ನ್ನು ಹೇಗೆ ಬಳಸಬಹುದು? (ಬಿ) ನೀವು ಬಳಸುತ್ತಿರುವ ಯಾವ ನಿರ್ದಿಷ್ಟ ವಚನ ಒಳ್ಳೇ ಫಲಿತಾಂಶಗಳನ್ನು ತಂದಿದೆ?

20 ಒಬ್ಬ ಯುವ ವ್ಯಕ್ತಿಯೊಂದಿಗೆ ಹೀಗೆ ಸಂಭಾಷಣೆ ಆರಂಭಿಸಬಹುದು: “ತುಂಬ ಪ್ರಾಮುಖ್ಯ ಪ್ರಶ್ನೆ ಇರುವ ಒಂದು ವಚನವನ್ನು ಓದಲು ಇಷ್ಟಪಡುತ್ತೇನೆ. (ಜ್ಞಾನೋಕ್ತಿ 30:4 ಓದಿ.) ಇಲ್ಲಿ ತಿಳಿಸಿರುವ ವಿಷಯಗಳನ್ನು ಯಾವ ಮನುಷ್ಯನಿಂದಲೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ಅದು ನಮ್ಮ ಸೃಷ್ಟಿಕರ್ತನ ಬಗ್ಗೆಯೇ ಹೇಳುತ್ತಿರಬೇಕು. ಆತನ ಹೆಸರೇನೆಂದು ಹೇಗೆ ತಿಳಿಯಬಹುದು? ಅದನ್ನು ಬೈಬಲ್‍ನಿಂದ ನಿಮಗೆ ತೋರಿಸಲು ಇಷ್ಟಪಡುತ್ತೇನೆ.”

ದೇವರ ವಾಕ್ಯದ ಶಕ್ತಿಯನ್ನು ನಿಮ್ಮ ಸೇವೆಯಲ್ಲಿ ಬಳಸಿ

21, 22. (ಎ) ಸಂದರ್ಭಕ್ಕೆ ಸೂಕ್ತವಾದ ವಚನ ಬಳಸುವುದು ಒಬ್ಬ ವ್ಯಕ್ತಿಯ ಬದುಕನ್ನೇ ಹೇಗೆ ಬದಲಾಯಿಸಬಹುದು? (ಬಿ) ಸೇವೆಯಲ್ಲಿರುವಾಗ ಏನು ಮಾಡಲು ನೀವು ದೃಢನಿಶ್ಚಯದಿಂದಿದ್ದೀರಿ?

21 ಸಂದರ್ಭಕ್ಕೆ ಸೂಕ್ತವಾದ ವಚನ ಬಳಸಿದಾಗ ಜನರು ತೋರಿಸುವ ಪ್ರತಿಕ್ರಿಯೆ ನಮ್ಮನ್ನು ಬೆರಗುಗೊಳಿಸಬಹುದು. ಉದಾಹರಣೆಗೆ ಆಸ್ಟ್ರೇಲಿಯದಲ್ಲಿ ಇಬ್ಬರು ಸಾಕ್ಷಿಗಳು ಯುವ ಸ್ತ್ರೀಯೊಬ್ಬಳ ಮನೆಗೆ ಹೋದರು. ಅವರಲ್ಲೊಬ್ಬರು “ದೇವರ ಹೆಸರು ನಿಮಗೆ ಗೊತ್ತಾ?” ಎಂದು ಕೇಳಿ ನಂತರ ಕೀರ್ತನೆ 83:18ನ್ನು ಓದಿದರು. “ನಾನು ದಂಗಾಗಿಬಿಟ್ಟೆ. ಮಾತೇ ಹೊರಡಲಿಲ್ಲ!” ಎನ್ನುತ್ತಾಳೆ ಆ ಸ್ತ್ರೀ. “ಅವರು ಹೊರಟ ಮೇಲೆ ನಾನು 56 ಕಿ.ಮೀ. ದೂರ ಇರುವ ಒಂದು ಪುಸ್ತಕದ ಅಂಗಡಿಗೆ ಹೋಗಿ ಬೇರೆ ಬೇರೆ ಬೈಬಲ್‌ ಭಾಷಾಂತರಗಳಲ್ಲಿ ಆ ಹೆಸರನ್ನು ಹುಡುಕಿ ಖಚಿತಪಡಿಸಿಕೊಂಡೆ. ಒಂದು ಶಬ್ದಕೋಶದಲ್ಲೂ ಆ ಹೆಸರು ಸಿಕ್ಕಿತು. ದೇವರ ಹೆಸರು ಯೆಹೋವ ಎಂದು ತಿಳಿದ ನಂತರ ನನಗಿನ್ನೂ ತಿಳಿಯದ ವಿಷಯಗಳು ಎಷ್ಟಿವೆಯೊ ಎಂದು ಯೋಚಿಸಿದೆ.” ಸ್ವಲ್ಪ ದಿನಗಳಾದ ಮೇಲೆ ಈ ಸ್ತ್ರೀ ಮತ್ತವಳ ಭಾವೀ ಗಂಡ ಬೈಬಲ್‌ ಕಲಿಯಲು ಆರಂಭಿಸಿದರು. ನಂತರ ದೀಕ್ಷಾಸ್ನಾನ ಪಡೆದರು.

22 ದೇವರ ವಾಕ್ಯವನ್ನು ಓದಿ ಯೆಹೋವನ ಸಜೀವ ವಾಗ್ದಾನಗಳ ಮೇಲೆ ನಂಬಿಕೆ ಬೆಳೆಸಿಕೊಳ್ಳುವವರ ಬದುಕನ್ನು ದೇವರ ವಾಕ್ಯ ಬದಲಾಯಿಸುತ್ತದೆ. (1 ಥೆಸಲೊನೀಕ 2:13 ಓದಿ.) ಒಬ್ಬ ವ್ಯಕ್ತಿಯ ಹೃದಯವನ್ನು ತಲುಪಲು ನಾವೇನೇ ಹೇಳಿದರೂ ಅದು ಬೈಬಲ್‌ ಸಂದೇಶದಷ್ಟು ಶಕ್ತಿಶಾಲಿಯಾಗಿರಲು ಸಾಧ್ಯವಿಲ್ಲ. ಆದ್ದರಿಂದಲೇ ಸಾಧ್ಯವಿರುವಂಥ ಪ್ರತಿಯೊಂದು ಸಂದರ್ಭದಲ್ಲಿ ದೇವರ ವಾಕ್ಯವನ್ನು ಬಳಸೋಣ. ಏಕೆಂದರೆ ಅದು ಸಜೀವವಾದದ್ದು!

^ ಪ್ಯಾರ. 6 ಕೆಲವು ದೇಶಗಳಲ್ಲಿ ಸ್ಥಳೀಯ ಸನ್ನಿವೇಶದಿಂದಾಗಿ ಕೈಯಲ್ಲಿ ಹಿಡಿಯದಿದ್ದರೂ ಬ್ಯಾಗಲ್ಲಿ ಕೊಂಡೊಯ್ಯುತ್ತಾರೆ.

^ ಪ್ಯಾರ. 7 ಈ ವಿಧಾನವನ್ನು ನಿಮ್ಮ ಸೇವಾಕ್ಷೇತ್ರದಲ್ಲಿ ಬಳಸುವಾಗ ದಯವಿಟ್ಟು ವಿವೇಚನೆ ಬಳಸಿ.

^ ಪ್ಯಾರ. 13 ಕ್ಯೂ. ಆರ್‌. ಕೋಡ್ ಡೆನ್ಸೊ ವೇವ್‌ ಇನ್ಕಾರ್‍ಪರೇಟೆಡ್ ಸಂಸ್ಥೆಯ ನೊಂದಾಯಿತ ವ್ಯಾಪಾರ ಮುದ್ರೆ.