ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ಹೇಗೆ ನಮ್ಮ ಸಮೀಪಕ್ಕೆ ಬರುತ್ತಾನೆ?

ಯೆಹೋವನು ಹೇಗೆ ನಮ್ಮ ಸಮೀಪಕ್ಕೆ ಬರುತ್ತಾನೆ?

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋ. 4:8.

1. (ಎ) ಎಲ್ಲ ಮಾನವರಿಗೂ ಯಾವ ಅಗತ್ಯವಿದೆ? (ಬಿ) ಈ ಅಗತ್ಯವನ್ನು ಯಾರು ಪೂರೈಸಬಲ್ಲನು?

ಎಲ್ಲ ಮಾನವರಿಗೂ ಇತರರೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವ ಅಗತ್ಯ ಇದೆ. ಪರಸ್ಪರರನ್ನು ತುಂಬ ಇಷ್ಟಪಡುವ ಮತ್ತು ಚೆನ್ನಾಗಿ ತಿಳಿದುಕೊಂಡಿರುವ ವ್ಯಕ್ತಿಗಳನ್ನೇ ಆಪ್ತರು ಎಂದು ಹೇಳಬಹುದು. ನಮ್ಮನ್ನು ಪ್ರೀತಿಸುವ, ಮಾನ್ಯಮಾಡುವ, ಅರ್ಥಮಾಡಿಕೊಳ್ಳುವ ಬಂಧುಮಿತ್ರರೊಂದಿಗೆ ನಮಗಿರುವ ಸಂಬಂಧಗಳು ಸಹಜವಾಗಿಯೇ ಖುಷಿ ತರುತ್ತವೆ. ಆದರೆ ಇವೆಲ್ಲಕ್ಕಿಂತ ಹೆಚ್ಚು ಆಪ್ತವಾದ ಬಂಧ ನಮಗೆ ಸೃಷ್ಟಿಕರ್ತನೊಂದಿಗಿರಬೇಕು.—ಪ್ರಸಂ. 12:1.

2. (ಎ) ಯೆಹೋವನು ಯಾವ ಮಾತುಕೊಟ್ಟಿದ್ದಾನೆ? (ಬಿ) ಅನೇಕರು ಅದನ್ನು ನಂಬುವುದಿಲ್ಲವೇಕೆ?

2 ಯೆಹೋವನು ತನ್ನ ವಾಕ್ಯದಲ್ಲಿ, ನಾವಾತನ ಸಮೀಪಕ್ಕೆ ಬರುವಂತೆ ಆಮಂತ್ರಿಸುತ್ತಾನೆ. ನಾವು ಹಾಗೆ ಮಾಡಿದರೆ ಆತನು ನಮ್ಮ “ಸಮೀಪಕ್ಕೆ ಬರುವನು” ಎಂದು ಮಾತುಕೊಟ್ಟಿದ್ದಾನೆ. (ಯಾಕೋ. 4:8) ಈ ವಿಚಾರ ಎಷ್ಟು ಸ್ಫೂರ್ತಿದಾಯಕ! ಆದರೆ ಎಷ್ಟೋ ಜನರು ಇದು ನಿಜ ಎಂದು ನಂಬುವುದಿಲ್ಲ. ದೇವರ ಸಮೀಪಕ್ಕೆ ಹೋಗಲು ತಾವು ಅಯೋಗ್ಯರು ಅಥವಾ ಆತನು ಸ್ನೇಹಪರನಲ್ಲ ಹಾಗಾಗಿ ಆತನ ಹತ್ತಿರ ಹೋಗಲಾಗುವುದಿಲ್ಲ ಎಂದು ನೆನಸುತ್ತಾರೆ. ಯೆಹೋವನೊಟ್ಟಿಗೆ ಆಪ್ತತೆ ನಿಜವಾಗಿಯೂ ಸಾಧ್ಯವೇ?

3. ಯೆಹೋವನ ಬಗ್ಗೆ ನಾವು ಯಾವ ನಿಜಾಂಶವನ್ನು ಗ್ರಹಿಸಬೇಕು?

3 ನಿಜಾಂಶವೇನೆಂದರೆ ಯಾರು ಯೆಹೋವನಿಗಾಗಿ ಹುಡುಕಲು ಪ್ರಯತ್ನಿಸುತ್ತಾರೊ ಅಂಥವರಿಂದ ಆತನು “ಬಹಳ ದೂರವಾಗಿರುವುದಿಲ್ಲ.” ಆತನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿದೆ. (ಅ. ಕಾರ್ಯಗಳು 17:26, 27; ಕೀರ್ತನೆ 145:18 ಓದಿ.) ಮಾನವರು ಅಪರಿಪೂರ್ಣರಾಗಿದ್ದರೂ ತನಗೆ ಆಪ್ತರಾಗಿರಬೇಕು ಎನ್ನುವುದು ನಮ್ಮ ದೇವರ  ಉದ್ದೇಶ. ತನ್ನ ಆಪ್ತ ಸ್ನೇಹಿತರಾಗಿ ತನ್ನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಬಂದವರನ್ನು ಸ್ವೀಕರಿಸಲು ಆತನು ಸಿದ್ಧನಿದ್ದಾನೆ. (ಯೆಶಾ. 41:8; 55:6) ಕೀರ್ತನೆಗಾರನು ಸ್ವಂತ ಅನುಭವದಿಂದ ಯೆಹೋವನ ಬಗ್ಗೆ ಹೀಗೆ ಬರೆಯಲು ಶಕ್ತನಾಗಿದ್ದನು: “ಪ್ರಾರ್ಥನೆಯನ್ನು ಕೇಳುವಾತನೇ, ನಿನ್ನ ಬಳಿಗೆ ಎಲ್ಲಾ ಜನರು ಬರುವರು. ನೀನು ಆಯ್ದುಕೊಂಡು ನಿನ್ನ ಬಳಿಗೆ ಬರಮಾಡಿಕೊಳ್ಳುವವನು ಧನ್ಯನು.” (ಕೀರ್ತ. 65:2, 4, ಪವಿತ್ರ ಗ್ರಂಥ ಭಾಷಾಂತರ) ಯೆಹೂದದ ರಾಜನಾದ ಆಸನ ಕುರಿತು ಬೈಬಲ್‌ ತಿಳಿಸುತ್ತದೆ. ಅವನು ದೇವರ ಸಮೀಪಕ್ಕೆ ಹೋದನು. ಆಗ ಯೆಹೋವನು ಹೇಗೆ ಪ್ರತಿಕ್ರಿಯಿಸಿದನೆಂದೂ ಆ ವೃತ್ತಾಂತ ತೋರಿಸುತ್ತದೆ. *

ಪ್ರಾಚೀನ ಮಾದರಿಯಿಂದ ಕಲಿಯಿರಿ

4. ರಾಜ ಆಸ ಯೆಹೂದದ ಜನರಿಗೆ ಯಾವ ಮಾದರಿಯಿಟ್ಟನು?

4 ರಾಜ ಆಸ ಶುದ್ಧಾರಾಧನೆಗಾಗಿ ತೋರಿಸಿದ ಹುರುಪು ಅದ್ಭುತವಾದದ್ದು. ದೇಶದಲ್ಲಿ ಸರ್ವಸಾಮಾನ್ಯವಾಗಿದ್ದ ದೇವದಾಸ ದೇವದಾಸಿಯರ ಪದ್ಧತಿ ಮತ್ತು ವಿಗ್ರಹಾರಾಧನೆಯನ್ನು ನಿಲ್ಲಿಸಿಬಿಟ್ಟನು. (1 ಅರ. 15:9-13) ಹಾಗಾಗಿ ಧೈರ್ಯದಿಂದ ಯಾವುದೇ ಹಿಂಜರಿಕೆಯಿಲ್ಲದೆ ಆತನು ಜನರಿಗೆ “ನೀವು ನಿಮ್ಮ ಪಿತೃಗಳ ದೇವರಾದ ಯೆಹೋವನನ್ನೇ ಆಶ್ರಯಿಸಿಕೊಂಡು [“ಹುಡುಕಿ,” NW] ಧರ್ಮಶಾಸ್ತ್ರವಿಧಿಗಳನ್ನು ಕೈಕೊಳ್ಳಿರಿ” ಎಂದು ಉತ್ತೇಜಿಸಿದನು. ಯೆಹೋವನು ಆಸನ ಆಳ್ವಿಕೆಯ ಮೊದಲ ಹತ್ತು ವರ್ಷಗಳನ್ನು ಆಶೀರ್ವದಿಸಿದ್ದರಿಂದ ದೇಶದಲ್ಲಿ ಸಂಪೂರ್ಣ ಶಾಂತಿ ಇತ್ತು. ಆಸನು ಈ ಶಾಂತಿನೆಮ್ಮದಿಯ ಶ್ರೇಯವನ್ನು ಸಲ್ಲಿಸಿದ್ದು ಯಾರಿಗೆ? “ನಾವು ನಮ್ಮ ದೇವರಾದ ಯೆಹೋವನನ್ನು ಆಶ್ರಯಿಸಿಕೊಂಡ ಕಾರಣ ಆತನ ಅನುಗ್ರಹದಿಂದ ಸುತ್ತಣ ವೈರಿಗಳ ಭಯ ತಪ್ಪಿ ದೇಶವು ಇನ್ನೂ ನಿರಾತಂಕವಾಗಿರುತ್ತದೆ” ಎಂದು ಜನರಿಗಂದನು. (2 ಪೂರ್ವ. 14:1-7) ಮುಂದೇನಾಯಿತೆಂದು ಪರಿಗಣಿಸಿ.

5. (ಎ) ಆಸನಿಗೆ ದೇವರ ಮೇಲಿದ್ದ ಭರವಸೆ ಯಾವ ಸನ್ನಿವೇಶದಲ್ಲಿ ಪರೀಕ್ಷೆಗೊಳಗಾಯಿತು? (ಬಿ) ಫಲಿತಾಂಶ ಏನಾಗಿತ್ತು?

5 ಕೂಷ್ಯನಾದ ಜೆರಹನು 10,00,000 ಸೈನಿಕರನ್ನೂ 300 ರಥಗಳನ್ನೂ ತೆಗೆದುಕೊಂಡು ಯೆಹೂದಕ್ಕೆ ವಿರುದ್ಧವಾಗಿ ಯುದ್ಧಕ್ಕೆ ಬಂದನು. (2 ಪೂರ್ವ. 14:8-10) ನಿಮ್ಮನ್ನೇ ಆಸನ ಸನ್ನಿವೇಶದಲ್ಲಿರಿಸಿ. ಅಷ್ಟು ದೊಡ್ಡ ಸೈನ್ಯ ನಿಮ್ಮ ರಾಜ್ಯದೊಳಗೆ ಬರುತ್ತಿರುವುದನ್ನು ನೋಡಿ ನಿಮ್ಮ ಪ್ರತಿಕ್ರಿಯೆ ಏನಾಗಿರುವುದು? ನಿಮ್ಮ ಮಿಲಿಟರಿ ಪಡೆಯ ಸಂಖ್ಯೆ ಬರೀ 5,80,000! ನಿಮ್ಮ ಸೈನ್ಯಕ್ಕಿಂತ ಎರಡು ಪಟ್ಟು ದೊಡ್ಡದಾದ ಈ ಸೈನ್ಯದ ದಾಳಿಯನ್ನು ದೇವರು ಯಾಕಾದರೂ ಅನುಮತಿಸಿದನೆಂದು ಯೋಚಿಸುತ್ತಿದ್ದಿರೊ? ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ನಿಮ್ಮ ಸ್ವಂತ ಬುದ್ಧಿ, ಚಾಣಾಕ್ಷತೆಯ ಮೇಲೆ ಹೊಂದಿಕೊಳ್ಳುತ್ತಿದ್ದಿರೊ? ಆಸನ ಪ್ರತಿಕ್ರಿಯೆ ಆತನು ಯೆಹೋವನೊಟ್ಟಿಗೆ ಆಪ್ತನಾಗಿದ್ದನು ಆತನ ಮೇಲೆ ಭರವಸೆಯಿಟ್ಟಿದ್ದನೆಂದು ತೋರಿಸಿತು. ಆತನು ಕಟ್ಟಾಸಕ್ತಿಯಿಂದ ಬೇಡಿದ್ದು: “ಯೆಹೋವನೇ, ನಮ್ಮನ್ನು ರಕ್ಷಿಸು, ನಿನ್ನಲ್ಲಿ ಭರವಸವಿಟ್ಟು ನಿನ್ನ ಹೆಸರಿನಲ್ಲಿ ಈ ಮಹಾಸಮೂಹಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದೆವಲ್ಲಾ. ಯೆಹೋವನೇ, ನಮ್ಮ ದೇವರು ನೀನು. ನರರು ನಿನ್ನನ್ನು ಎದುರಿಸಿ ಗೆಲ್ಲಬಾರದು.” ಈ ಮನಃಪೂರ್ವಕ ಮೊರೆಗೆ ದೇವರ ಪ್ರತಿಕ್ರಿಯೆ ಏನಾಗಿತ್ತು? ‘ಯೆಹೋವನು ಕೂಷ್ಯರನ್ನು ಅಪಜಯಪಡಿಸಿದನು.’ ನಡೆದಂಥ ಯುದ್ಧದಲ್ಲಿ ಒಬ್ಬನೇ ಒಬ್ಬ ವೈರಿಯು ಬದುಕಿ ಉಳಿಯಲಿಲ್ಲ!—2 ಪೂರ್ವ. 14:11-13.

6. ಆಸನ ಬಗ್ಗೆ ನಾವು ಯಾವ ವಿಷಯವನ್ನು ಅನುಕರಿಸಬೇಕು?

6 ಆಸನು ದೇವರ ಮಾರ್ಗದರ್ಶನ ಹಾಗೂ ಸಂರಕ್ಷಣೆಯಲ್ಲಿ ಪೂರ್ಣ ಭರವಸೆಯನ್ನಿಡಲು ಶಕ್ತನಾದದ್ದು ಹೇಗೆ? ಅವನು “ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು” ಮತ್ತು “ಯಥಾರ್ಥಮನಸ್ಸಿನಿಂದ ಯೆಹೋವನಿಗೆ ನಡೆದುಕೊಂಡನು” ಎನ್ನುತ್ತದೆ ಬೈಬಲ್‌. (1 ಅರ. 15:11, 14) ನಾವು ಸಹ ಯಥಾರ್ಥಮನಸ್ಸಿನಿಂದ ಯೆಹೋವನ ಸೇವೆಮಾಡಬೇಕು. ಇದು ಅತ್ಯಗತ್ಯ. ಏಕೆಂದರೆ ಹಾಗೆ ಮಾಡಿದರೆ ಮಾತ್ರ ನಾವು ಈಗಲೂ ಭವಿಷ್ಯದಲ್ಲೂ ಆತನೊಟ್ಟಿಗೆ ಆಪ್ತ ಸಂಬಂಧವಿಡಬಹುದು. ಯೆಹೋವನು ನಮ್ಮನ್ನು ಆತನೆಡೆಗೆ ಸೆಳೆಯಲು ಮೊದಲ ಹೆಜ್ಜೆ ತೆಗೆದುಕೊಂಡದ್ದಕ್ಕೆ ಮತ್ತು ಆತನೊಂದಿಗೆ ಆಪ್ತ ಬಂಧವನ್ನು ಬೆಸೆಯಲು ಹಾಗೂ ಕಾಪಾಡಿಕೊಳ್ಳಲು ಸಹಾಯ ಮಾಡುತ್ತಿರುವುದಕ್ಕೆ ನಾವೆಷ್ಟು ಆಭಾರಿಗಳು! ದೇವರು ನಮ್ಮನ್ನು ತನ್ನ ಸಮೀಪಕ್ಕೆ ಸೆಳೆದಿರುವ ಎರಡು ವಿಧಗಳನ್ನು ಪರಿಗಣಿಸಿ.

ವಿಮೋಚನಾ ಮೌಲ್ಯದ ಮೂಲಕ

7. (ಎ) ಯೆಹೋವನು ಮಾಡಿರುವ ಯಾವ ಸಂಗತಿಗಳು ನಮ್ಮನ್ನು ಆತನೆಡೆಗೆ ಸೆಳೆಯುತ್ತವೆ? (ಬಿ) ದೇವರು ನಮ್ಮನ್ನು ಆತನೆಡೆಗೆ ಸೆಳೆಯುವಂಥ ಅತಿ ಪ್ರಧಾನ ವಿಧ ಯಾವುದು?

7 ಈ ಸುಂದರ ಭೂಮಿಯನ್ನು ಸೃಷ್ಟಿಸುವ ಮೂಲಕ ಯೆಹೋವನು ಮಾನವ ಕುಟುಂಬದ ಮೇಲೆ ತನಗಿರುವ ಪ್ರೀತಿಯನ್ನು ತೋರಿಸಿದನು. ನಮ್ಮ ಜೀವವನ್ನು ಪೋಷಿಸಲು ಅದ್ಭುತಕರವಾದ ಶಾರೀರಿಕ ಒದಗಿಸುವಿಕೆಗಳನ್ನು ಮಾಡುವ ಮೂಲಕ ಈ ಪ್ರೀತಿಯನ್ನು ಈಗಲೂ ತೋರಿಸುತ್ತಿದ್ದಾನೆ. (ಅ. ಕಾ. 17:28; ಪ್ರಕ. 4:11) ಅದಕ್ಕಿಂತಲೂ ಮುಖ್ಯವಾಗಿ ಯೆಹೋವನು ನಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದಾನೆ. (ಲೂಕ 12:42) ಅಲ್ಲದೆ, ನಾವಾತನಿಗೆ ಪ್ರಾರ್ಥಿಸುವಾಗ ಸ್ವತಃ ಆತನೇ ಕಿವಿಗೊಡುತ್ತಾನೆ  ಎಂಬ ಆಶ್ವಾಸನೆಯನ್ನೂ ಕೊಟ್ಟಿದ್ದಾನೆ. (1 ಯೋಹಾ. 5:14) ಹಾಗಿದ್ದರೂ ಆತನು ನಮ್ಮನ್ನು ತನ್ನೆಡೆಗೆ ಸೆಳೆಯುವ ಮತ್ತು ನಾವು ಆತನೆಡೆಗೆ ಸೆಳೆಯಲ್ಪಡುವ ಅತಿ ಪ್ರಧಾನ ವಿಧ, ಪ್ರೀತಿಯಿಂದ ಆತನು ಕೊಟ್ಟಿರುವ ವಿಮೋಚನಾ ಮೌಲ್ಯವೇ. (1 ಯೋಹಾನ 4:9, 10, 19 ಓದಿ.) ನಮ್ಮನ್ನು ಪಾಪ ಮರಣದಿಂದ ರಕ್ಷಿಸಲಿಕ್ಕಾಗಿಯೇ ಯೆಹೋವನು ತನ್ನ “ಏಕೈಕಜಾತ ಪುತ್ರನನ್ನು” ಭೂಮಿಗೆ ಕಳುಹಿಸಿದನು.—ಯೋಹಾ. 3:16.

8, 9. ಯೆಹೋವನ ಉದ್ದೇಶದಲ್ಲಿ ಯೇಸುವಿನ ಪಾತ್ರವೇನು?

8 ಕ್ರಿಸ್ತನ ಸಮಯದ ಮುಂಚೆ ಜೀವಿಸಿದ ಜನರಿಗೂ ವಿಮೋಚನಾ ಮೌಲ್ಯದಿಂದ ಪ್ರಯೋಜನವಾಗುವಂತೆ ಯೆಹೋವನು ಸಾಧ್ಯಗೊಳಿಸಿದನು. ಭವಿಷ್ಯದಲ್ಲಿ ಮಾನವಕುಲದ ವಿಮೋಚಕನು ಬರಲಿದ್ದಾನೆಂದು ಯೆಹೋವನು ಪ್ರವಾದಿಸಿದ ಕ್ಷಣದಿಂದಲೇ ಆತನ ದೃಷ್ಟಿಯಲ್ಲಿ ವಿಮೋಚನಾ ಮೌಲ್ಯವು ಕೊಡಲ್ಪಟ್ಟಂತ್ತಿತ್ತು. ಏಕೆಂದರೆ ತನ್ನ ಉದ್ದೇಶ ಖಂಡಿತ ನೆರವೇರುವುದೆಂದು ಆತನಿಗೆ ಗೊತ್ತಿತ್ತು. (ಆದಿ. 3:15) ಶತಮಾನಗಳ ನಂತರ ಅಪೊಸ್ತಲ ಪೌಲನು ‘ಕ್ರಿಸ್ತ ಯೇಸು ನೀಡಿದ ವಿಮೋಚನಾ ಮೌಲ್ಯದಿಂದ ಸಿಗುವ ಬಿಡುಗಡೆ’ಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಅವನು ಕೂಡಿಸಿ ಹೇಳಿದ್ದು: “ದೇವರು ಸಹನಶೀಲತೆಯನ್ನು ತೋರಿಸುತ್ತಿದ್ದಾಗ ಪೂರ್ವದಲ್ಲಿ ಸಂಭವಿಸಿದ ಪಾಪಗಳನ್ನು ಕ್ಷಮಿಸುತ್ತಿದ್ದನು.” (ರೋಮ. 3:21-26) ನಾವು ದೇವರಿಗೆ ಆಪ್ತರಾಗಿರುವುದರಲ್ಲಿ ಯೇಸುವಿನ ಪಾತ್ರ ಎಷ್ಟು ಪ್ರಾಮುಖ್ಯವಾದದ್ದು!

9 ಯೇಸುವಿನ ಮೂಲಕ ಮಾತ್ರ ನಮ್ರ ಜನರು ಯೆಹೋವನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿದೆ ಮತ್ತು ಆತನೊಟ್ಟಿಗೆ ಆಪ್ತತೆಯನ್ನು ಆನಂದಿಸಸಾಧ್ಯವಿದೆ. ಈ ಸತ್ಯವನ್ನು ಶಾಸ್ತ್ರವಚನಗಳು ಹೇಗೆ ಎತ್ತಿತೋರಿಸುತ್ತವೆ? ಪೌಲನು ಬರೆದದ್ದು: “ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಸತ್ತದ್ದರಲ್ಲಿ ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ.” (ರೋಮ. 5:6-8) ಯೇಸುವಿನ ಯಜ್ಞದ ಏರ್ಪಾಡನ್ನು ಯೆಹೋವನು ಮಾಡಿದ್ದು ನಾವು ಅದಕ್ಕೆ ಯೋಗ್ಯರು ಅಂತಲ್ಲ. ಬದಲಾಗಿ ಆತನು ನಮ್ಮನ್ನು ಬಹಳಷ್ಟು ಪ್ರೀತಿಸಿದ್ದರಿಂದಲೇ. “ನನ್ನನ್ನು ಕಳುಹಿಸಿದ ತಂದೆಯು ಸೆಳೆದ ಹೊರತು ಯಾರೊಬ್ಬನೂ ನನ್ನ ಬಳಿಗೆ ಬರಲಾರನು” ಎಂದನು ಯೇಸು. ಇನ್ನೊಂದು ಸಂದರ್ಭದಲ್ಲಿ ಆತನಂದದ್ದು: “ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ.” (ಯೋಹಾ. 6:44; 14:6) ಯೆಹೋವನು ಪವಿತ್ರಾತ್ಮವನ್ನು ಬಳಸಿ ಜನರನ್ನು ಯೇಸುವಿನ ಮೂಲಕ ತನ್ನತ್ತ ಸೆಳೆಯುತ್ತಾನೆ ಮತ್ತು ತನ್ನ ಪ್ರೀತಿಯಲ್ಲಿ ಉಳಿಯುವಂತೆ ಸಹಾಯಮಾಡುತ್ತಾನೆ. ಇಂಥವರಿಗೆ ನಿತ್ಯಜೀವದ ನಿರೀಕ್ಷೆಯಿದೆ. (ಯೂದ 20, 21 ಓದಿ.) ಯೆಹೋವನು ನಮ್ಮನ್ನು ತನ್ನೆಡೆಗೆ ಸೆಳೆಯುವಂಥ ಇನ್ನೊಂದು ವಿಧವನ್ನೂ ಪರಿಗಣಿಸಿ.

ತನ್ನ ಲಿಖಿತ ವಾಕ್ಯದ ಮೂಲಕ

10. ನಾವು ಯೆಹೋವನ ಸಮೀಪ ಹೋಗುವಂತೆ ಸಹಾಯಮಾಡುವ ಯಾವ ವಿಷಯಗಳನ್ನು ಬೈಬಲು ನಮಗೆ ಕಲಿಸುತ್ತದೆ?

10 ಈ ಲೇಖನದಲ್ಲಿ ಇಲ್ಲಿ ವರೆಗೆ ನಾವು ಬೈಬಲಿನ 14 ಪುಸ್ತಕಗಳಿಂದ ವಚನಗಳನ್ನು ಉಲ್ಲೇಖಿಸಿದ್ದೇವೆ ಅಥವಾ ಅದಕ್ಕೆ ಸೂಚಿಸಿದ್ದೇವೆ. ಬೈಬಲ್‌ ಇಲ್ಲದಿರುತ್ತಿದ್ದಲ್ಲಿ ಸೃಷ್ಟಿಕರ್ತನೊಟ್ಟಿಗೆ ಆಪ್ತರಾಗಬಲ್ಲೆವೆಂದು ನಮಗೆ ಹೇಗೆ ತಿಳಿಯುತ್ತಿತ್ತು? ಅದಿಲ್ಲದಿದ್ದರೆ, ನಾವು ವಿಮೋಚನಾ ಮೌಲ್ಯದ ಬಗ್ಗೆ ಮತ್ತು ಯೇಸುವಿನ ಮೂಲಕ ಯೆಹೋವನೆಡೆಗೆ ಸೆಳೆಯಲ್ಪಡುವ ವಿಷಯದ ಬಗ್ಗೆ ಹೇಗೆ ತಿಳಿದುಕೊಳ್ಳಸಾಧ್ಯವಿತ್ತು? ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಬೈಬಲಿನ ಬರಹವನ್ನು ಪ್ರೇರಿಸಿದನು. ಬೈಬಲ್‌ ನಮಗೆ ಆತನ ಆಕರ್ಷಕ ವ್ಯಕ್ತಿತ್ವ ಹಾಗೂ ಭವ್ಯ ಉದ್ದೇಶಗಳನ್ನು ಪ್ರಕಟಪಡಿಸುತ್ತದೆ. ಉದಾಹರಣೆಗೆ ವಿಮೋಚನಕಾಂಡ 34:6, 7ರಲ್ಲಿ ಯೆಹೋವನು ತನ್ನ ಬಗ್ಗೆಯೇ ಮೋಶೆಗೆ ಹೀಗೆ ವರ್ಣಿಸಿದನು: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು.” ಇಂಥ ಗುಣಗಳಿರುವ ವ್ಯಕ್ತಿಯೆಡೆಗೆ ಯಾರಾದರೂ ಆಕರ್ಷಿತರಾಗದೆ ಇರುತ್ತಾರಾ? ನಾವು ಬೈಬಲಿನ ಪುಟಗಳ ಮೂಲಕ ಆತನ ಬಗ್ಗೆ ಹೆಚ್ಚನ್ನು ತಿಳಿದುಕೊಂಡಾಗ ಆತನು ನಮಗೆ ಹೆಚ್ಚು ನೈಜನಾಗುತ್ತಾನೆ ಮತ್ತು ನಾವಾತನಿಗೆ ಹೆಚ್ಚು ಆಪ್ತರಾಗುವೆವೆಂದು ಯೆಹೋವನಿಗೆ ತಿಳಿದಿದೆ.

11. ದೇವರ ಗುಣಗಳ ಮತ್ತು ಮಾರ್ಗಗಳ ಬಗ್ಗೆ ಕಲಿಯಲು ನಾವೇಕೆ ಪ್ರಯತ್ನಿಸಬೇಕು? (ಶೀರ್ಷಿಕೆ ಚಿತ್ರ ನೋಡಿ.)

11 ದೇವರೊಟ್ಟಿಗೆ ಒಂದು ಆಪ್ತ ಸಂಬಂಧ ಬೆಳೆಸಲಿಕ್ಕಾಗಿ ನಾವೇನು ಮಾಡಬೇಕೆಂದು ವಿವರಿಸುತ್ತಾ, ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಮುನ್ನುಡಿ ಹೀಗನ್ನುತ್ತದೆ: “ನಾವು ಬೆಳೆಸುವಂತಹ ಯಾವುದೇ ಸ್ನೇಹ ಸಂಬಂಧದಲ್ಲಿ ಒಬ್ಬ ವ್ಯಕ್ತಿಯನ್ನು ತಿಳಿದುಕೊಳ್ಳುವುದೂ ಆ ವ್ಯಕ್ತಿಯ ಅಪೂರ್ವ ಗುಣಲಕ್ಷಣಗಳನ್ನು ಮೆಚ್ಚಿ ಅವುಗಳನ್ನು ಅಮೂಲ್ಯವಾಗಿ ಎಣಿಸುವುದೂ ಆ ಬಂಧದ ತಳಪಾಯವಾಗಿ ಪರಿಣಮಿಸುತ್ತದೆ. ಆದುದರಿಂದಲೇ, ಬೈಬಲಿನಲ್ಲಿ ಪ್ರಕಟಿಸಲ್ಪಟ್ಟಿರುವಂಥ ದೇವರ ಗುಣಗಳು ಮತ್ತು ಆತನು ಕ್ರಿಯೆಗೈಯುವ ವಿಧಾನವು ಅಧ್ಯಯನಮಾಡಲಿಕ್ಕಾಗಿ ಒಂದು ಪ್ರಾಮುಖ್ಯ ವಿಷಯವಾಗಿದೆ.” ಹೀಗಿರಲಾಗಿ ಯೆಹೋವನು ತನ್ನ ವಾಕ್ಯವನ್ನು ಮಾನವರು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂಥ ವಿಧದಲ್ಲಿ ಬರೆಸಿರುವುದಕ್ಕೆ ನಾವೆಷ್ಟು ಕೃತಜ್ಞರು ಅಲ್ಲವೇ?

12. ಬೈಬಲನ್ನು ಬರೆಯಲಿಕ್ಕಾಗಿ ಯೆಹೋವನು ಮನುಷ್ಯರನ್ನು ಉಪಯೋಗಿಸಿದ್ದೇಕೆ?

 12 ಬೈಬಲನ್ನು ಬರೆಸಲು ಯೆಹೋವನು ದೇವದೂತರನ್ನು ಉಪಯೋಗಿಸಬಹುದಿತ್ತು. ಹೇಗಿದ್ದರೂ ಅವರಿಗೆ ಹಿಂದಿನಿಂದಲೂ ಮಾನವರಲ್ಲಿ ಮತ್ತವರ ಚಟುವಟಿಕೆಗಳಲ್ಲಿ ಅತೀವ ಆಸಕ್ತಿ ಇದೆಯಲ್ಲವೇ? (1 ಪೇತ್ರ 1:12) ದೇವರು ಮಾನವಕುಲಕ್ಕೆ ಕೊಟ್ಟಿರುವ ಸಂದೇಶವನ್ನು ಅವರಿಂದ ಬರೆಯಲು ಖಂಡಿತ ಆಗುತ್ತಿತ್ತು. ಆದರೆ ಅವರು ವಿಷಯಗಳನ್ನು ಮಾನವ ದೃಷ್ಟಿಕೋನದಿಂದ ನೋಡಲು ಸಾಧ್ಯವಿತ್ತಾ? ನಮ್ಮ ಅಗತ್ಯಗಳು, ಬಲಹೀನತೆಗಳು, ಆಸೆಆಕಾಂಕ್ಷೆಗಳನ್ನು ಅವರು ಅರ್ಥಮಾಡಿಕೊಳ್ಳಲು ಆಗುತ್ತಿತ್ತಾ? ಇಲ್ಲ. ಅವರ ಈ ಇತಿಮಿತಿ ಯೆಹೋವನಿಗೆ ಗೊತ್ತಿತ್ತು. ಬೈಬಲನ್ನು ಬರೆಸಲು ಮನುಷ್ಯರನ್ನು ಉಪಯೋಗಿಸುವ ಮೂಲಕ ಯೆಹೋವನು ಅದು ನಮಗಾಗಿಯೇ ಬರೆಯಲಾಗಿದೆ ಎಂಬ ಭಾವನೆಯನ್ನು ಹುಟ್ಟಿಸಿದನು. ಬೈಬಲಿನ ಬರಹಗಾರರ ಮತ್ತು ಬೈಬಲಿನಲ್ಲಿರುವ ಇತರರ ಯೋಚನಾರೀತಿ ಹಾಗೂ ಭಾವನೆಗಳು ನಮಗೆ ಅರ್ಥವಾಗುತ್ತದೆ. ಅವರಿಗಿದ್ದ ನಿರಾಶೆ, ಭಯ, ಸಂದೇಹ, ಕುಂದುಕೊರತೆ ಬಗ್ಗೆ ಓದುವಾಗ ಅವರ ಆ ಭಾವನೆಗಳನ್ನು ಸ್ವತಃ ನಾವೇ ಅನುಭವಿಸಿದಷ್ಟರ ಮಟ್ಟಿಗೆ ಅರ್ಥವಾಗುತ್ತದೆ. ಅವರ ಆನಂದ, ಯಶಸ್ಸಿನ ಬಗ್ಗೆ ಓದುವಾಗ ಸ್ವತಃ ನಮಗೇ ಸಿಕ್ಕಿದಷ್ಟು ಸಂತೋಷವಾಗುತ್ತದೆ. ಪ್ರವಾದಿ ಎಲೀಯನಂತೆ ಬೈಬಲಿನ ಎಲ್ಲ ಬರಹಗಾರರೂ ‘ನಮ್ಮಂಥ ಭಾವನೆಗಳಿದ್ದ ಮನುಷ್ಯರಾಗಿದ್ದರು.’—ಯಾಕೋ. 5:17.

ಯೋನ ಮತ್ತು ಪೇತ್ರನೊಟ್ಟಿಗೆ ಯೆಹೋವನು ನಡೆದುಕೊಂಡ ರೀತಿ ನಿಮ್ಮನ್ನು ಹೇಗೆ ಆತನ ಸಮೀಪಕ್ಕೆ ಸೆಳೆಯುತ್ತದೆ? (ಪ್ಯಾರ 13, 15 ನೋಡಿ)

13. ಯೋನನ ಪ್ರಾರ್ಥನೆ ಏಕೆ ನಿಮ್ಮ ಮನಮುಟ್ಟುತ್ತದೆ?

13 ಉದಾಹರಣೆಗೆ, ದೇವರು ಕೊಟ್ಟ ನೇಮಕದಿಂದ ಪ್ರವಾದಿ ಯೋನ ಓಡಿಹೋದಾಗ ಅವನಲ್ಲಿದ್ದ ಭಾವನೆಗಳ ಕುರಿತು ನೆನಸಿ. ಅವುಗಳನ್ನು ಚೆನ್ನಾಗಿ ವರ್ಣಿಸಲು ಒಬ್ಬ ದೇವದೂತನಿಂದ ಆಗುತ್ತಿತ್ತಾ? ಇಲ್ಲ. ಹಾಗಾಗಿ ಯೋನನೇ ತನ್ನ ಕಥೆಯನ್ನು ಬರೆಯುವಂತೆ ಯೆಹೋವನು ಮಾಡಿದ್ದು ಹೆಚ್ಚು ಉತ್ತಮವಾಗಿತ್ತು. ಅವನು ಸಮುದ್ರದ ಆಳದಲ್ಲಿದ್ದಾಗ ದೇವರಿಗೆ ಮಾಡಿದ ಮನಃಪೂರ್ವಕ ಪ್ರಾರ್ಥನೆಯನ್ನೂ ಬರೆಯಲು ಸಾಧ್ಯವಾಯಿತು. ಯೋನನು ಹೀಗಂದಿದ್ದನು: “ನನ್ನ ಆತ್ಮವು ನನ್ನಲ್ಲಿ ಕುಂದಿದಾಗ ಯೆಹೋವನಾದ ನಿನ್ನನ್ನು ಸ್ಮರಿಸಿದೆನು.”—ಯೋನ 1:3, 10; 2:1-9.

14. ಯೆಶಾಯನು ತನ್ನ ಬಗ್ಗೆ ಬರೆದ ವಿಷಯ ನಿಮಗೇಕೆ ಅರ್ಥವಾಗುತ್ತದೆ?

14 ಯೆಶಾಯನು ಸ್ವತಃ ತನ್ನ ಕುರಿತು ಏನನ್ನು ಬರೆಯುವಂತೆ ಯೆಹೋವನು ಮಾಡಿದನೊ ಅದರ ಬಗ್ಗೆಯೂ ಯೋಚಿಸಿ. “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ನಾಶವಾದೆನಲ್ಲಾ; ನಾನು ಹೊಲಸುತುಟಿಯವನು, ಹೊಲಸುತುಟಿಯವರ ಮಧ್ಯದಲ್ಲಿ ವಾಸಿಸುವವನು;  ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡವು.” (ಯೆಶಾ. 6:5) ದೇವರ ಮಹಿಮೆಯ ದರ್ಶನ ನೋಡಿದ ಬಳಿಕ ತನ್ನ ಸ್ವಂತ ಪಾಪಪೂರ್ಣತೆಯ ಬಗ್ಗೆ ಆ ಪ್ರವಾದಿಯಿಂದ ಹೊರಹೊಮ್ಮಿದ ಮಾತುಗಳಿವು. ಒಬ್ಬ ದೇವದೂತನಿಗೆ ಈ ರೀತಿಯ ಮಾತುಗಳನ್ನಾಡಲು ಸಾಧ್ಯವಾಗುತ್ತಿರಲಿಲ್ಲ ಅಲ್ಲವೇ? ಆದರೆ ಯೆಶಾಯನಿಗೆ ಸಾಧ್ಯವಿತ್ತು. ಆದ್ದರಿಂದ ಆತನಿಗೆ ಹೇಗನಿಸಿರಬೇಕೆಂದು ನಮಗೆ ಅರ್ಥವಾಗುತ್ತದೆ.

15, 16. (ಎ) ಜೊತೆ ಮಾನವರ ಭಾವನೆಗಳನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವೇಕೆ? ಉದಾಹರಣೆಗಳನ್ನು ಕೊಡಿ. (ಬಿ) ನಾವು ಯೆಹೋವನಿಗೆ ಇನ್ನಷ್ಟು ಹತ್ತಿರ ಬರುವಂತೆ ಯಾವುದು ಸಹಾಯಮಾಡುವುದು?

15 ಯಾಕೋಬನು ತನ್ನನ್ನೇ “ಅಪಾತ್ರ” ಎಂದು ಹೇಳಿಕೊಂಡನು. ಪೇತ್ರನಿಗೆ ತಾನು “ಪಾಪಿಷ್ಠ” ಎಂದನಿಸಿತು. ಒಬ್ಬ ದೇವದೂತನಿಗೆ ಹೀಗೆಲ್ಲ ಹೇಳಲು ಆಗುತ್ತಿತ್ತಾ? (ಆದಿ. 32:10; ಲೂಕ 5:8) ಯೇಸುವಿನ ಶಿಷ್ಯರು ‘ಭಯಭೀತರಾದರು.’ ದೇವದೂತರಿಗೆ ಹೀಗನಿಸಲು ಸಾಧ್ಯವಿತ್ತಾ? ಪೌಲನು ಮತ್ತು ಇತರರು ವಿರೋಧದ ಮಧ್ಯೆಯೂ ಸುವಾರ್ತೆ ಸಾರಲು ‘ಧೈರ್ಯವನ್ನು ಪಡೆದುಕೊಳ್ಳಬೇಕಾಯಿತು.’ ನೀತಿವಂತ ದೇವದೂತರಿಗೆ ಇದರ ಅಗತ್ಯಬೀಳುತ್ತಿತ್ತಾ? (ಯೋಹಾ. 6:19; 1 ಥೆಸ. 2:2) ಖಂಡಿತ ಇಲ್ಲ. ಏಕೆಂದರೆ ದೇವದೂತರು ಪ್ರತಿಯೊಂದು ವಿಷಯದಲ್ಲೂ ಪರಿಪೂರ್ಣರು. ಮಾನವರಿಗಿಂತ ಎಷ್ಟೋ ಶ್ರೇಷ್ಠರು. ಆದರೆ ಬೈಬಲನ್ನು ಬರೆದವರು ನಮ್ಮಂತೆಯೇ ಅಪರಿಪೂರ್ಣ ಮಾನವರು ಆಗಿದ್ದದರಿಂದ ಅವರು ವ್ಯಕ್ತಪಡಿಸಿದ ಆ ಭಾವನೆಗಳು ನಮಗೆ ಕೂಡಲೇ ಅರ್ಥವಾಗುತ್ತವೆ. ದೇವರ ವಾಕ್ಯವನ್ನು ಓದುವಾಗ ನಾವು ‘ಆನಂದಿಸುವವರೊಂದಿಗೆ ಆನಂದಿಸಿ, ಅಳುವವರೊಂದಿಗೆ ಅಳಲು’ ನಿಜವಾಗಿ ಸಾಧ್ಯವಾಗುತ್ತದೆ.—ರೋಮ. 12:15.

16 ಗತಕಾಲದಲ್ಲಿ ಯೆಹೋವನು ತನ್ನ ನಂಬಿಗಸ್ತ ಸೇವಕರೊಂದಿಗೆ ತಾಳ್ಮೆ, ಪ್ರೀತಿಯಿಂದ ನಡೆದುಕೊಂಡು ಆಪ್ತನಾದದ್ದರ ಬಗ್ಗೆ ಬೈಬಲಿನಲ್ಲಿದೆ. ಈ ವಿಷಯಗಳ ಕುರಿತು ಯೋಚಿಸಿದರೆ ನಮ್ಮ ದೇವರ ಬಗ್ಗೆ ಲೆಕ್ಕವಿಲ್ಲದಷ್ಟು ಸಂಗತಿಗಳನ್ನು ಕಲಿಯಬಹುದು. ಹೀಗೆ ನಾವಾತನನ್ನು ಚೆನ್ನಾಗಿ ತಿಳಿದುಕೊಳ್ಳಲು ಮತ್ತು ಗಾಢವಾಗಿ ಪ್ರೀತಿಸಲು ಆಗುತ್ತದೆ. ಫಲಿತಾಂಶ? ಆತನಿಗೆ ಇನ್ನಷ್ಟು ಹತ್ತಿರವಾಗಬಲ್ಲೆವು.—ಕೀರ್ತನೆ 25:14 ಓದಿ.

ಮುರಿಯಲಾಗದ ಬಂಧವನ್ನು ದೇವರೊಟ್ಟಿಗೆ ಬೆಸೆಯಿರಿ

17. (ಎ) ಅಜರ್ಯನು ಆಸನಿಗೆ ಯಾವ ಒಳ್ಳೇ ಸಲಹೆ ಕೊಟ್ಟನು? (ಬಿ) ಅದನ್ನು ಆಸನು ಅಲಕ್ಷಿಸಿದ್ದು ಹೇಗೆ? (ಸಿ) ಅದರ ಫಲಿತಾಂಶವೇನಾಗಿತ್ತು?

17 ರಾಜ ಆಸನು ಕೂಷ್ಯರ ಸೈನ್ಯದ ಮೇಲೆ ಮಹಾ ಜಯ ಗಳಿಸಿದಾಗ ದೇವರ ಪ್ರವಾದಿ ಅಜರ್ಯನು ಆಸನಿಗೂ ಅವನ ಜನರಿಗೂ ಈ ಬುದ್ಧಿಮಾತನ್ನು ಹೇಳಿದನು: “ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.” (2 ಪೂರ್ವ. 15:1, 2) ಆದರೆ ಕಾಲಾನಂತರ ಆಸನು ಆ ಒಳ್ಳೇ ಸಲಹೆಯನ್ನು ಪಾಲಿಸಲು ತಪ್ಪಿಹೋದನು. ಉತ್ತರದ ಇಸ್ರಾಯೇಲ್‌ ರಾಜ್ಯವು ಬೆದರಿಕೆಯೊಡ್ಡಿದಾಗ ಆಸನು ಅರಾಮ್ಯರ ಬಳಿ ನೆರವಿಗಾಗಿ ಕೈಯೊಡ್ಡಿದನು. ಪುನಃ ಯೆಹೋವನ ಬಳಿಯೇ ಸಹಾಯ ಕೇಳುವ ಬದಲು ಆ ವಿಧರ್ಮಿಗಳೊಟ್ಟಿಗೆ ಮೈತ್ರಿಮಾಡಿದನು. ಸೂಕ್ತವಾಗಿಯೇ ಯೆಹೋವನು ಅವನಿಗೆ ಹೀಗಂದನು: “ನೀನು ಈ ಕಾರ್ಯದಲ್ಲಿ ಬುದ್ಧಿಹೀನನಾಗಿ ನಡೆದುಕೊಂಡಿದ್ದೀ; ಇಂದಿನಿಂದ ನಿನಗೆ ಯುದ್ಧಗಳು ಇದ್ದೇ ಇರುವವು.” ಅಂತೆಯೇ ಆಸನ ಆಳ್ವಿಕೆಯ ಉಳಿದ ವರ್ಷಗಳಾದ್ಯಂತ ನಿರಂತರ ಯುದ್ಧಗಳು ನಡೆಯುತ್ತಾ ಇದ್ದವು. (2 ಪೂರ್ವ. 16:1-9) ಇದರಿಂದ ನಮಗೇನು ಪಾಠವಿದೆ?

18, 19. (ಎ) ದೇವರಿಂದ ನಾವು ಸ್ವಲ್ಪ ದೂರ ಹೋಗಿರುವುದಾದರೂ ಏನು ಮಾಡಬೇಕು? (ಬಿ) ನಾವು ಹೇಗೆ ಯೆಹೋವನಿಗೆ ಹೆಚ್ಚು ಆಪ್ತರಾಗಬಲ್ಲೆವು?

18 ನಾವು ಯಾವತ್ತೂ ಯೆಹೋವನಿಂದ ದೂರ ಸರಿಯಬಾರದು. ಆತನಿಂದ ನಾವು ಸ್ವಲ್ಪ ದೂರ ಹೋಗಿರುವುದಾದರೂ ಹೋಶೇಯ 12:6ರಲ್ಲಿರುವ ಮಾತಿಗನುಸಾರ ಕ್ರಮಗೈಯಬೇಕು. ಅದು ಹೀಗನ್ನುತ್ತದೆ: “ನೀನು ನಿನ್ನ ದೇವರ ಕಡೆಗೆ ತಿರುಗಿಕೋ. ಪ್ರೀತಿಯನ್ನೂ ನ್ಯಾಯವನ್ನೂ ಪಾಲಿಸು ಮತ್ತು ನಿನ್ನ ದೇವರಿಗಾಗಿ ಯಾವಾಗಲೂ ಕಾದುಕೊಂಡಿರು.” (ಪವಿತ್ರ ಗ್ರಂಥ ಭಾಷಾಂತರ) ಆದ್ದರಿಂದ ವಿಮೋಚನಾ ಮೌಲ್ಯದ ಬಗ್ಗೆ ಕೃತಜ್ಞತಾಭಾವದಿಂದ ಯೋಚಿಸುತ್ತಿರೋಣ ಮತ್ತು ಆತನ ವಾಕ್ಯವಾದ ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡುತ್ತಿರೋಣ. ಹೀಗೆ ನಾವು ಯೆಹೋವನಿಗೆ ಹೆಚ್ಚೆಚ್ಚು ಹತ್ತಿರ ಬರುತ್ತಾ ಇರುವೆವು.—ಧರ್ಮೋಪದೇಶಕಾಂಡ 13:4 ಓದಿ.

19 “ನನಗಾದರೊ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದಾಗಿದೆ” ಎಂದು ಕೀರ್ತನೆಗಾರನು ಬರೆದನು. (ಕೀರ್ತ. 73:28, ಪವಿತ್ರ ಗ್ರಂಥ ಭಾಷಾಂತರ) ನಾವೆಲ್ಲರೂ ಯೆಹೋವನ ಬಗ್ಗೆ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ ಇದ್ದು ಆತನನ್ನು ಪ್ರೀತಿಸಲು ಇನ್ನೂ ಅನೇಕ ಕಾರಣಗಳನ್ನು ಪಡೆದುಕೊಳ್ಳೋಣ. ಅಲ್ಲದೆ, ಯೆಹೋವನು ಇಂದಿಗೂ ಎಂದೆಂದಿಗೂ ನಮ್ಮ ಸಮೀಪಕ್ಕೆ ಬರುತ್ತಾ ಇರುವಂತಾಗಲಿ!

^ ಪ್ಯಾರ. 3 ಆಸನ ಬಗ್ಗೆ ತಿಳಿಸುವ ಕಾವಲಿನಬುರುಜು ಆಗಸ್ಟ್‌ 15, 2012ರ ಸಂಚಿಕೆಯಲ್ಲಿ “ನಿಮ್ಮ ಪ್ರಯತ್ನಕ್ಕೆ ಫಲತಪ್ಪದು” ಎಂಬ ಲೇಖನ ನೋಡಿ.