ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವೆಲ್ಲೇ ಇದ್ದರೂ ಯೆಹೋವನ ಸ್ವರಕ್ಕೆ ಕಿವಿಗೊಡಿ

ನೀವೆಲ್ಲೇ ಇದ್ದರೂ ಯೆಹೋವನ ಸ್ವರಕ್ಕೆ ಕಿವಿಗೊಡಿ

“ಇದೇ ಮಾರ್ಗ . . . ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.”—ಯೆಶಾ. 30:21.

1, 2. ಯೆಹೋವನು ತನ್ನ ಸೇವಕರ ಜೊತೆ ಹೇಗೆ ಮಾತಾಡುತ್ತಾನೆ?

ಬೈಬಲಿನ ಇತಿಹಾಸದ ಉದ್ದಕ್ಕೂ ಯೆಹೋವನು ಜನರಿಗೆ ಬೇರೆಬೇರೆ ರೀತಿಯಲ್ಲಿ ಮಾರ್ಗದರ್ಶನವನ್ನು ನೀಡುತ್ತಾ ಬಂದಿದ್ದಾನೆ. ಕೆಲವರ ಬಳಿ ದೇವದೂತರ ಮೂಲಕ ಇನ್ನು ಕೆಲವರೊಂದಿಗೆ ದರ್ಶನ ಅಥವಾ ಕನಸುಗಳ ಮೂಲಕ ಮಾತಾಡಿದ್ದಾನೆ. ಹೀಗೆ ಭವಿಷ್ಯದಲ್ಲಿ ಏನಾಗಲಿದೆ ಎಂದು ಮುಂಚೆಯೇ ಹೇಳಿದ್ದಾನೆ. ಯೆಹೋವನು ಅವರಿಗೆ ನಿರ್ದಿಷ್ಟ ಕೆಲಸದ ನೇಮಕಗಳನ್ನೂ ಕೊಟ್ಟನು. (ಅರ. 7:89; ಯೆಹೆ. 1:1; ದಾನಿ. 2:19) ಇನ್ನು ಕೆಲವರಿಗೆ ಯೆಹೋವನು ತನ್ನ ಸಂಘಟನೆಯ ಭೂಭಾಗದ ಮಾನವ ಪ್ರತಿನಿಧಿಗಳ ಮೂಲಕ ನಿರ್ದೇಶನಗಳನ್ನು ಕೊಟ್ಟಿದ್ದಾನೆ. ಯೆಹೋವನ ಜನರಿಗೆ ಆತನ ಮಾತು ಯಾವುದೇ ಮಾಧ್ಯಮದ ಮೂಲಕ ಬಂದಿರಲಿ ಅವರು ಆತನ ಸೂಚನೆಗಳನ್ನು ಪಾಲಿಸಿದಾಗ ಆಶೀರ್ವಾದ ಖಂಡಿತ ಲಭಿಸಿತು.

2 ಇಂದು ಯೆಹೋವನು ತನ್ನ ಜನರನ್ನು ತನ್ನ ವಾಕ್ಯ, ಪವಿತ್ರಾತ್ಮ ಮತ್ತು ಸಭೆಯ ಮೂಲಕ ಮಾರ್ಗದರ್ಶಿಸುತ್ತಾನೆ. (ಅ. ಕಾ. 9:31; 15:28; 2 ತಿಮೊ. 3:16, 17) ಆ ಮಾರ್ಗದರ್ಶನ ಎಷ್ಟು ಸ್ಪಷ್ಟ ಎಂದರೆ ‘ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂಬ ಮಾತು ನಮ್ಮ ಹಿಂದಿನಿಂದಲೇ ಕಿವಿಗೆ ಬಿದ್ದ’ ಹಾಗಿರುತ್ತದೆ. (ಯೆಶಾ. 30:21) ಯೇಸು ಸಹ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಮೂಲಕ ಕ್ರೈಸ್ತ ಸಭೆಯನ್ನು ಮಾರ್ಗದರ್ಶಿಸುವಾಗ ದೇವರ ಸ್ವರ ನಮಗೆ ಕೇಳಿಬರುವಂತೆ ಮಾಡುತ್ತಿದ್ದಾನೆ. (ಮತ್ತಾ. 24:45) ಈ ಮಾರ್ಗದರ್ಶನ ನಿರ್ದೇಶನಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಯಾಕೆಂದರೆ ಇದಕ್ಕೆ ನಾವು ತೋರಿಸುವ ವಿಧೇಯತೆಯ ಮೇಲೆ ನಮ್ಮ ನಿತ್ಯಜೀವ ಹೊಂದಿಕೊಂಡಿದೆ.—ಇಬ್ರಿ. 5:9.

3. ಯೆಹೋವನ ನಿರ್ದೇಶನಕ್ಕೆ ನಾವು ಪ್ರತಿಕ್ರಿಯಿಸುವ ರೀತಿಯನ್ನು ಯಾವುದು ಪ್ರಭಾವಿಸಬಲ್ಲದು? (ಶೀರ್ಷಿಕೆ ಚಿತ್ರ ನೋಡಿ.)

3 ಯೆಹೋವನಿಂದ ಬರುವ ಜೀವರಕ್ಷಕ ಮಾರ್ಗದರ್ಶನ ನಮ್ಮ ಮೇಲೆ ಪರಿಣಾಮಬೀರದ ಹಾಗೆ ಮಾಡಲು ಸೈತಾನನು ಪಣತೊಟ್ಟಿದ್ದಾನೆ. ಇಷ್ಟೇ ಅಲ್ಲ, ನಮ್ಮ “ವಂಚಕ ಹೃದಯ” ಸಹ ಯೆಹೋವನಿಂದ ಬರುವ ನಿರ್ದೇಶನಕ್ಕೆ ನಾವು ಸರಿಯಾಗಿ ಪ್ರತಿಕ್ರಿಯೆ  ನೀಡದ ಹಾಗೆ ಪ್ರಭಾವಿಸಬಲ್ಲದು. (ಯೆರೆ. 17:9) ಆದ್ದರಿಂದಲೇ ದೇವರ ಸ್ವರಕ್ಕೆ ಕಿವಿಗೊಡುವುದನ್ನು ಕಷ್ಟಕರವನ್ನಾಗಿ ಮಾಡುವ ಅಡ್ಡಿತಡೆಗಳನ್ನು ಹೇಗೆ ದಾಟುವುದೆಂದು ಈಗ ನೋಡೋಣ. ಜೊತೆಗೆ, ನಮ್ಮ ಸನ್ನಿವೇಶ ಹೇಗೇ ಇರಲಿ ಯೆಹೋವನೊಂದಿಗೆ ಒಳ್ಳೇ ಸಂವಾದ ಇದ್ದರೆ ಅದು ಹೇಗೆ ನಮ್ಮ ಮತ್ತು ಯೆಹೋವನ ಸಂಬಂಧವನ್ನು ಬಲಗೊಳಿಸುತ್ತದೆ ಎಂದೂ ಕಲಿಯೋಣ.

ಸೈತಾನನ ತಂತ್ರಗಳನ್ನು ಮೆಟ್ಟಿನಿಲ್ಲುವುದು

4. ಸೈತಾನನು ಹೇಗೆ ಜನರ ಯೋಚನಾರೀತಿಯನ್ನು ಪ್ರಭಾವಿಸಲು ಪ್ರಯತ್ನಿಸುತ್ತಿದ್ದಾನೆ?

4 ತಪ್ಪು ಮಾಹಿತಿ ಮತ್ತು ಮೋಸಕರ ವಿಷಯದ ಪ್ರಚಾರದ ಮೂಲಕ ಸೈತಾನನು ಜನರ ಯೋಚನಾರೀತಿಯನ್ನು ಪ್ರಭಾವಿಸಲು ಪ್ರಯತ್ನಿಸುತ್ತಿದ್ದಾನೆ. (1 ಯೋಹಾನ 5:19 ಓದಿ.) ಈ ಎಲ್ಲಾ ಮಾಹಿತಿ ವಾರ್ತಾಪತ್ರಗಳು, ಪುಸ್ತಕಗಳು, ಪತ್ರಿಕೆಗಳು, ರೇಡಿಯೋ, ಟಿ.ವಿ, ಇಂಟರ್‌ನೆಟ್‌ ಮೂಲಕ ಜಗತ್ತಿನ ಮೂಲೆಮೂಲೆಗೂ ಪ್ರಸಾರವಾಗುತ್ತಿದೆ. ಇವುಗಳು ಕೆಲವೊಂದು ಸ್ವಾರಸ್ಯಕರ ವಿಷಯಗಳನ್ನು ಪ್ರಸಾರಮಾಡುವುದಾದರೂ ಅವು ಹೆಚ್ಚಾಗಿ ಯೆಹೋವನ ಮಟ್ಟಗಳಿಗೆ ವಿರುದ್ಧವಾದ ನಡತೆಯನ್ನು ಪ್ರೋತ್ಸಾಹಿಸುವಂಥ ಮಾಹಿತಿಯನ್ನು ಪ್ರಸಾರಮಾಡುತ್ತಿವೆ. (ಯೆರೆ. 2:13) ಉದಾಹರಣೆಗೆ ಸಮ ಲಿಂಗದವರು ಮದುವೆಯಾಗುವುದು ತಪ್ಪಲ್ಲ ಎಂದು ವಾರ್ತಾ ಮತ್ತು ಮನೋರಂಜನಾ ಮಾಧ್ಯಮಗಳು ಬಿಂಬಿಸುತ್ತಿವೆ. ಸಲಿಂಗಕಾಮದ ಬಗ್ಗೆ ಬೈಬಲಿನ ನೋಟ ವಿಪರೀತ ಎಂದು ಕೆಲವರು ನೆನಸುತ್ತಾರೆ.—1 ಕೊರಿಂ. 6:9, 10.

5. ಸೈತಾನನ ಪ್ರಚಾರದ ಪ್ರಭಾವಕ್ಕೆ ಒಳಗಾಗದಿರಲು ನಾವೇನು ಮಾಡಬೇಕು?

5 ಯೆಹೋವನ ನೀತಿಯನ್ನು ಪ್ರೀತಿಸುವವರು ಸೈತಾನನ ಪ್ರಚಾರದ ಪ್ರಭಾವಕ್ಕೆ ಒಳಗಾಗದಿರಲು ಏನು ಮಾಡಬೇಕು? ಅವರು ಒಳ್ಳೇದು ಯಾವುದು ಕೆಟ್ಟದ್ದು ಯಾವುದೆಂದು ತಿಳಿಯುವುದು ಹೇಗೆ? ‘ದೇವರ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ!’ (ಕೀರ್ತ. 119:9) ಮೋಸಕರ ಮಾಹಿತಿ ಯಾವುದು, ನಂಬಲರ್ಹ ಮಾಹಿತಿ ಯಾವುದೆಂದು ನಾವು ತಿಳಿಯಲು ಸಹಾಯವಾಗುವ ಅವಶ್ಯ ಮಾರ್ಗದರ್ಶನ ದೇವರ ಲಿಖಿತ ವಾಕ್ಯದಲ್ಲಿದೆ. (ಜ್ಞಾನೋ. 23:23) ಯೇಸು ವಚನವೊಂದನ್ನು ಉಲ್ಲೇಖಿಸುತ್ತಾ “ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು” ಎಂದು ಹೇಳಿದನು. (ಮತ್ತಾ. 4:4) ಬೈಬಲಲ್ಲಿರುವ ತತ್ವಗಳನ್ನು ನಮ್ಮ ಬದುಕಲ್ಲಿ ಹೇಗೆ ಅನ್ವಯಿಸಬೇಕೆಂದು ನಾವು ಕಲಿಯಬೇಕು. ಉದಾಹರಣೆಗೆ ವ್ಯಭಿಚಾರ ಮಾಡಬಾರದು ಎಂಬ ಆಜ್ಞೆಯನ್ನು ಮೋಶೆ ದಾಖಲಿಸಿಡುವ ಎಷ್ಟೋ ಮುಂಚೆಯೇ, ಅಂಥ ಕೃತ್ಯ ದೇವರ ವಿರುದ್ಧ ಪಾಪವಾಗಿದೆ ಎಂದು ಯುವ ಯೋಸೇಫನಿಗೆ ತಿಳಿದಿತ್ತು. ಆ ತಪ್ಪು ಮಾಡುವಂತೆ ಪೋಟೀಫರನ ಹೆಂಡತಿ ಮರುಳುಮಾಡಲು ಪ್ರಯತ್ನಿಸಿದಾಗ ಯೆಹೋವನಿಗೆ ಅವಿಧೇಯನಾಗುವ ಯೋಚನೆ ಒಂದೇ ಒಂದು ಕ್ಷಣಕ್ಕೂ ಯೋಸೇಫನಿಗೆ ಬರಲಿಲ್ಲ. (ಆದಿಕಾಂಡ 39:7-9 ಓದಿ.) ತುಂಬ ಸಮಯದಿಂದ ಅವಳು ಈ ಒತ್ತಡ ಹಾಕುತ್ತಾ ಇದ್ದಳು. ಹಾಗಿದ್ದರೂ ಅವನು ಕಿವಿಗೊಟ್ಟಿದ್ದು ಯೆಹೋವನ ಸ್ವರಕ್ಕೆ. ಅವಳ ಸ್ವರಕ್ಕಲ್ಲ. ನಮಗೂ ಸರಿ ಯಾವುದು ತಪ್ಪು ಯಾವುದು ಎಂದು ತಿಳಿಯಬೇಕಾದರೆ ಸೈತಾನನ ಪ್ರಚಾರದಿಂದಾಗಿ ಎದ್ದಿರುವ ಸದ್ದುಗದ್ದಲಕ್ಕೆ ಕಿವಿ ಮುಚ್ಚಿಕೊಂಡು ಯೆಹೋವನ ಸ್ವರಕ್ಕೆ ಕಿವಿಗೊಡಲೇಬೇಕು.

6, 7. ಸೈತಾನನ ದುಷ್ಟ ಸಲಹೆಯನ್ನು ವರ್ಜಿಸಬೇಕಾದರೆ ನಾವೇನು ಮಾಡಬೇಕು?

6 ಒಂದಕ್ಕೊಂದು ವಿರುದ್ಧವಾದ ಧಾರ್ಮಿಕ ಬೋಧನೆಗಳು ಮತ್ತು ತತ್ವಗಳು ಈ ಲೋಕದಲ್ಲಿ ಎಷ್ಟು ತುಂಬಿಹೋಗಿವೆ ಎಂದರೆ ಸತ್ಯ ಧರ್ಮಕ್ಕಾಗಿ ಹುಡುಕುವುದು ವ್ಯರ್ಥಪ್ರಯತ್ನ ಎಂದು ಜನರು ನೆನಸುತ್ತಾರೆ. ಆದರೆ ಯಾರು ಯೆಹೋವನ ಮಾರ್ಗದರ್ಶನವನ್ನು ಪಡೆಯಲು ಬಯಸುತ್ತಾರೊ ಅವರಿಗಾಗಿ ಅದನ್ನು ಸ್ಪಷ್ಟವಾಗಿಸಿದ್ದಾನೆ. ಯಾರಿಗೆ ಕಿವಿಗೊಡಬೇಕು ಎನ್ನುವುದನ್ನು ನಾವು ನಿರ್ಣಯಿಸಬೇಕು. ಒಂದೇ ಸಮಯದಲ್ಲಿ ಎರಡು ಸ್ವರಗಳಿಗೆ ಕಿವಿಗೊಡಲು ಸಾಧ್ಯವಿಲ್ಲ. ಆದ್ದರಿಂದ ನಾವು ಒಂದೇ ಸ್ವರವನ್ನು ಅಂದರೆ ಯೇಸುವಿನ ‘ಸ್ವರವನ್ನು ತಿಳಿದು’ ಅದಕ್ಕೆ ಕಿವಿಗೊಡಬೇಕು. ಏಕೆಂದರೆ ಆತನನ್ನೇ ಯೆಹೋವನು  ತನ್ನ ಕುರಿಗಳ ಮೇಲೆ ನೇಮಿಸಿದ್ದಾನೆ.—ಯೋಹಾನ 10:3-5 ಓದಿ.

7 “ನೀವು ಏನನ್ನು ಕೇಳಿಸಿಕೊಳ್ಳುತ್ತಿದ್ದೀರೋ ಅದಕ್ಕೆ ಗಮನಕೊಡಿರಿ” ಎಂದನು ಯೇಸು. (ಮಾರ್ಕ 4:24) ಯೆಹೋವನ ಸಲಹೆ ಸ್ಪಷ್ಟ ಹಾಗೂ ಸರಿಯಾದದ್ದು. ಆದರೆ ಅದನ್ನು ಸ್ವೀಕರಿಸಲಿಕ್ಕಾಗಿ ನಮ್ಮ ಹೃದಯವನ್ನು ಸಿದ್ಧಪಡಿಸುವ ಮೂಲಕ ಅದಕ್ಕೆ ಗಮನಕೊಡಬೇಕು ಮತ್ತು ಕಿವಿಗೊಡಬೇಕು. ನಾವೆಲ್ಲಾದರೂ ಜಾಗ್ರತೆ ವಹಿಸದಿದ್ದರೆ ದೇವರ ಪ್ರೀತಿ ತುಂಬಿದ ಸಲಹೆಯನ್ನು ಅಲಕ್ಷಿಸಿ ಸೈತಾನನ ದುಷ್ಟ ಸಲಹೆಗೆ ಕಿವಿಗೊಡುವ ಸಾಧ್ಯತೆ ಇದೆ. ಹಾಗಾಗಿ ಲೌಕಿಕ ಸಂಗೀತ, ವಿಡಿಯೋಗಳು, ಟಿ.ವಿ. ಕಾರ್ಯಕ್ರಮಗಳು, ಪುಸ್ತಕಗಳು, ಒಡನಾಡಿಗಳು, ಶಿಕ್ಷಕರು ಮತ್ತು ಪರಿಣಿತರೆನಿಸಿಕೊಳ್ಳುವ ಜನರು ನಿಮ್ಮ ಜೀವನವನ್ನು ನಿಯಂತ್ರಿಸುವಂತೆ ಬಿಡಬೇಡಿ.—ಕೊಲೊ. 2:8.

8. (ಎ) ನಮ್ಮ ಹೃದಯ ನಾವು ಸೈತಾನನ ತಂತ್ರಗಳಿಗೆ ಬಲಿಬೀಳುವಂತೆ ಹೇಗೆ ಮಾಡಬಲ್ಲದು? (ಬಿ) ಅಪಾಯದ ಲಕ್ಷಣಗಳನ್ನು ನಾವು ಅಲಕ್ಷಿಸಿದರೆ ಏನಾಗುತ್ತದೆ?

8 ನಮ್ಮಲ್ಲಿ ಪಾಪಪೂರ್ಣ ಆಸೆಗಳು ಇವೆ ಎಂದು ಸೈತಾನನಿಗೆ ಗೊತ್ತಿರುವುದರಿಂದ ಅವುಗಳನ್ನು ತಣಿಸುವ ಪಾಶಕ್ಕೆ ಬೀಳುವಂತೆ ಮಾಡುತ್ತಾನೆ. ಈ ತಂತ್ರವನ್ನು ಅವನು ಬಳಸುವಾಗ ನಮ್ಮ ಸಮಗ್ರತೆ ಕಾಪಾಡಿಕೊಳ್ಳುವುದು ಒಂದು ಕಷ್ಟಕರ ಸವಾಲಾಗಿರುತ್ತದೆ. (ಯೋಹಾ. 8:44-47) ಈ ಸವಾಲನ್ನು ಎದುರಿಸುವುದು ಹೇಗೆ? ತಪ್ಪು ಮಾಡಿರುವ ವ್ಯಕ್ತಿಯೊಬ್ಬನ ಉದಾಹರಣೆ ತೆಗೆದುಕೊಳ್ಳಿ. ಅವನು ಯಾವತ್ತೂ ಮಾಡುವುದಿಲ್ಲ ಎಂದುಕೊಂಡಿದ್ದ ತಪ್ಪನ್ನು ಕ್ಷಣಿಕ ಸುಖಕ್ಕಾಗಿ ಮಾಡಿರುತ್ತಾನೆ. (ರೋಮ. 7:15) ಈ ದುಃಖಕರ ಸನ್ನಿವೇಶಕ್ಕೆ ಅವನು ತಲಪಿದ್ದು ಹೇಗೆ? ಬಹುಶಃ ಯೆಹೋವನ ಸ್ವರಕ್ಕೆ ಕಿವಿಗೊಡುವುದನ್ನು ಕ್ರಮೇಣ ನಿಲ್ಲಿಸಿದ್ದನು. ತನ್ನ ಹೃದಯ ದಾರಿತಪ್ಪುತ್ತಿದೆ ಎಂಬ ಈ ಅಪಾಯದ ಲಕ್ಷಣಗಳನ್ನು ಅವನು ಗುರುತಿಸಿರಲಿಲ್ಲ ಅಥವಾ ಗುರುತಿಸಿದ್ದರೂ ಅಲಕ್ಷಿಸಿದ್ದನು. ಉದಾಹರಣೆಗೆ ಅವನು ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿರಬಹುದು, ಸೇವೆಗೆ ಹೋಗುವುದನ್ನು ಕಡಿಮೆಮಾಡಿರಬಹುದು ಅಥವಾ ಕೂಟಗಳನ್ನು ತಪ್ಪಿಸುತ್ತಿದ್ದಿರಬಹುದು. ಕೊನೆಗೆ, ತಪ್ಪೆಂದು ಅವನಿಗೆ ಗೊತ್ತಿದ್ದ ಆ ಆಸೆಗೆ ಮಣಿದನು. ನಮಗೂ ಇಂಥ ಅಪಾಯ ಎದುರಾಗಬಹುದು. ಅದರಿಂದ ದೂರವಿರಬೇಕಾದರೆ ನಮ್ಮಲ್ಲಿ ಕಂಡುಬರುವ ಅಪಾಯದ ಲಕ್ಷಣಗಳನ್ನು ಕೂಡಲೇ ಗುರುತಿಸಿ ನಮ್ಮನ್ನೇ ಸರಿಪಡಿಸಿಕೊಳ್ಳಲು ತಕ್ಷಣ ಕ್ರಮಗೈಯಬೇಕು. ಅಷ್ಟುಮಾತ್ರವಲ್ಲ ಧರ್ಮಭ್ರಷ್ಟ ವಿಚಾರಗಳಿಂದಲೂ ದೂರವಿರಬೇಕು. ಹೀಗೆ ನಾವು ಯೆಹೋವನ ಸ್ವರಕ್ಕೆ ಕಿವಿಗೊಡುತ್ತಾ ಇರಬಹುದು.—ಜ್ಞಾನೋ. 11:9.

9. ಪಾಪಪೂರ್ಣ ಪ್ರವೃತ್ತಿಗಳನ್ನು ಆದಷ್ಟು ಬೇಗ ಗುರುತಿಸುವುದು ಬಹಳ ಪ್ರಾಮುಖ್ಯ ಏಕೆ?

9 ರೋಗವನ್ನು ಬೇಗ ಪತ್ತೆ ಹಚ್ಚಿದರೆ ಒಬ್ಬನ ಜೀವ ಉಳಿಯುತ್ತದೆ. ಹಾಗೇ ತಪ್ಪು ಕೃತ್ಯಗಳ ಕಡೆಗೆ ತಳ್ಳುವಂಥ ಪ್ರವೃತ್ತಿಗಳು ನಮ್ಮಲ್ಲಿರುವುದನ್ನು ತಡಮಾಡದೆ ಗುರುತಿಸಿದರೆ ಆಪತ್ತನ್ನು ತಪ್ಪಿಸಬಹುದು. ಆ ಪ್ರವೃತ್ತಿಗಳನ್ನು ನಾವು ಗುರುತಿಸಿದ ಕೂಡಲೆ ನಾವು ತಕ್ಷಣ ಕ್ರಿಯೆಗೈಯಬೇಕು. ಇಲ್ಲದಿದ್ದಲ್ಲಿ ‘ಸೈತಾನನು ತನ್ನ ಚಿತ್ತಕ್ಕಾಗಿ ನಮ್ಮನ್ನು ಸಜೀವವಾಗಿ ಹಿಡಿಯುವನು.’ (2 ತಿಮೊ. 2:26) ಯೆಹೋವನು ನಮ್ಮಿಂದ ಕೇಳಿಕೊಳ್ಳುವಂಥ ವಿಷಯಗಳಿಗೆ ಹೊಂದಿಕೆಯಲ್ಲಿ ನಮ್ಮ ಯೋಚನೆ, ಬಯಕೆಗಳು ಇಲ್ಲ ಎಂದು ತಿಳಿದಾಗ ನಾವೇನು ಮಾಡಬೇಕು? ತಡಮಾಡದೆ ದೀನತೆಯಿಂದ ಆತನ ಕಡೆಗೆ ತಿರುಗಬೇಕು. ಆತನ ಮಾರ್ಗದರ್ಶನವನ್ನು ಪಡೆಯಬೇಕು. ಹೃದಯಾಳದಿಂದ ಅದನ್ನು ಪಾಲಿಸಬೇಕು. (ಯೆಶಾ. 44:22) ಒಂದು ತಪ್ಪು ನಿರ್ಣಯದಿಂದಾಗಿ ಈ ವಿಷಯಗಳ ವ್ಯವಸ್ಥೆಯಲ್ಲಿ ನಾವು ಗಂಭೀರ ಪರಿಣಾಮಗಳನ್ನು ಅನುಭವಿಸಿ ನೋವುಣ್ಣಬೇಕಾದೀತು. ಇದೆಲ್ಲವನ್ನು ಅನುಭವಿಸುವುದರ ಬದಲು  ಗಂಭೀರ ತಪ್ಪು ಮಾಡದಿರಲು ತಡಮಾಡದೆ ಕ್ರಮಗೈಯುವುದು ಹೆಚ್ಚು ಉತ್ತಮ ಅಲ್ಲವೇ!

ಒಳ್ಳೇ ಆಧ್ಯಾತ್ಮಿಕ ರೂಢಿ ನಿಮ್ಮನ್ನು ಸೈತಾನನ ತಂತ್ರಗಳಿಂದ ಕಾಪಾಡಬಲ್ಲದು ಹೇಗೆ? (ಪ್ಯಾರ 4-9 ನೋಡಿ)

ಅಹಂಕಾರ, ಅತಿಯಾಸೆಗಳನ್ನು ಮೆಟ್ಟಿನಿಲ್ಲುವುದು

10, 11. (ಎ) ಒಬ್ಬ ವ್ಯಕ್ತಿಯ ಅಹಂಕಾರ ಹೇಗೆ ತೋರಿಬರುತ್ತದೆ? (ಬಿ) ಕೋರಹ ದಾತಾನ್‌ ಅಬೀರಾಮರ ದಂಗೆಯಿಂದ ಯಾವ ಪಾಠ ಕಲಿಯುತ್ತೇವೆ?

10 ನೆನಪಿಡಿ, ನಮ್ಮ ಹೃದಯ ನಮ್ಮನ್ನು ದಾರಿತಪ್ಪಿಸಬಹುದು. ನಮ್ಮ ಪಾಪಪೂರ್ಣ ಪ್ರವೃತ್ತಿಗಳು ನಮ್ಮ ಮೇಲೆ ಎಷ್ಟು ಪ್ರಭಾವ ಬೀರುತ್ತವೆ! ಉದಾಹರಣೆಗೆ ಅಹಂಕಾರ, ಅತಿಯಾಸೆಯನ್ನೇ ತೆಗೆದುಕೊಳ್ಳಿ. ನಾವು ಯೆಹೋವನ ಸ್ವರವನ್ನು ಕೇಳದಂತೆ ಈ ದುರ್ಗುಣಗಳು ಹೇಗೆ ತಡೆಗಟ್ಟಬಲ್ಲವು ಮತ್ತು ನಮ್ಮನ್ನು ವಿನಾಶಕ ಹಾದಿಗೆ ತಳ್ಳಬಹುದೆಂದು ನೋಡಿ. ಒಬ್ಬ ಅಹಂಕಾರಿಗೆ ‘ತಾನೇ ಮೇಲು, ತಾನು ಬಿಟ್ಟರೆ ಬೇರೆ ಯಾರೂ ಇಲ್ಲ’ ಎಂಬ ಅಭಿಪ್ರಾಯ ಇರುತ್ತದೆ. ತನಗೇನು ಬೇಕೊ ಅದನ್ನು ಮಾಡುವ ಹಕ್ಕಿದೆ, ಬೇರೆಯವರು ತನಗೇನು ಹೇಳುವ ಅಗತ್ಯ ಇಲ್ಲ ಎಂದು ನೆನಸುತ್ತಾನೆ. ಹಾಗಾಗಿ ಜೊತೆ ಕ್ರೈಸ್ತರಿಂದ, ಹಿರಿಯರಿಂದ ಅಥವಾ ದೇವರ ಸಂಘಟನೆಯಿಂದಲೂ ಬರುವ ನಿರ್ದೇಶನ, ಸಲಹೆ ತನಗೆ ಬೇಕಿಲ್ಲ ಎಂಬ ಭಾವನೆ ಅವನಿಗಿರುತ್ತದೆ. ಇಂಥ ವ್ಯಕ್ತಿಯೊಬ್ಬನಿಗೆ ಯೆಹೋವನ ಸ್ವರ ಎಲ್ಲೋ ದೂರದಲ್ಲಿ ಅಸ್ಪಷ್ಟವಾಗಿ ಕೇಳಿಸಿದ ಹಾಗಿರುತ್ತದೆ.

11 ಇಸ್ರಾಯೇಲ್ಯರು ಅರಣ್ಯದಲ್ಲಿ ಪ್ರಯಾಣಿಸುತ್ತಿರುವಾಗ ಕೋರಹ ದಾತಾನ್‌ ಅಬೀರಾಮರು ಮೋಶೆ ಆರೋನರ ಅಧಿಕಾರದ ವಿರುದ್ಧ ದಂಗೆಯೆದ್ದರು. ಈ ದಂಗೆಕೋರರು ಯೆಹೋವನ ಆರಾಧನೆಗಾಗಿ ತಮ್ಮದೇ ಆದ ಸ್ವಂತ ಏರ್ಪಾಡುಗಳನ್ನು ಮಾಡಿಕೊಂಡದ್ದು ಅಹಂಕಾರದಿಂದಲೇ. ಇದಕ್ಕೆ ಯೆಹೋವನ ಪ್ರತಿಕ್ರಿಯೆ? ಅವರನ್ನು ನಾಶಮಾಡಿದನು. (ಅರ. 26:8-10) ಈ ಐತಿಹಾಸಿಕ ವೃತ್ತಾಂತ ಬಹುಮುಖ್ಯ ಪಾಠವೊಂದನ್ನು ಕಲಿಸುತ್ತದೆ! ಯೆಹೋವನ ವಿರುದ್ಧ ದಂಗೆ ಎದ್ದರೆ ಅದು ಅಂತ್ಯಗೊಳ್ಳುವುದು ವಿನಾಶದಲ್ಲೇ. ಇದರ ಜೊತೆಗೆ “ಗರ್ವದಿಂದ ಭಂಗ” ಎಂಬ ಮಾತನ್ನೂ ನೆನಪಿಡೋಣ.—ಜ್ಞಾನೋ. 16:18; ಯೆಶಾ. 13:11.

12, 13. (ಎ) ಅತಿಯಾಸೆ ನಮ್ಮನ್ನು ಆಪತ್ತಿಗೆ ತಳ್ಳಬಹುದು ಎಂಬುದಕ್ಕೆ ಉದಾಹರಣೆ ಕೊಡಿ. (ಬಿ) ಅತಿಯಾಸೆಯನ್ನು ನಿಗ್ರಹಿಸದಿದ್ದರೆ ಏನಾಗಬಹುದೆಂದು ವಿವರಿಸಿ.

12 ಅತಿಯಾಸೆಯನ್ನು ಪರಿಗಣಿಸಿ. ಈ ಗುಣ ಇರುವ ವ್ಯಕ್ತಿ ಸಾಮಾನ್ಯವಾಗಿ ತನ್ನಿಷ್ಟದಂತೆ ವರ್ತಿಸಲು ಯೋಗ್ಯ ನಡವಳಿಕೆಯ ಮೇರೆಯನ್ನು ದಾಟಿಹೋಗುತ್ತಾನೆ. ಸಿರಿಯಾದ ಸೇನಾಪತಿ ನಾಮಾನನು ಕುಷ್ಠದಿಂದ ಗುಣಮುಖನಾದ ನಂತರ ಪ್ರವಾದಿ ಎಲೀಷನಿಗೆ ಉಡುಗೊರೆಗಳನ್ನು ನೀಡಿದನು. ಆದರೆ ಎಲೀಷ ಅವುಗಳನ್ನು ಸ್ವೀಕರಿಸಲಿಲ್ಲ. ಇವನ ಸೇವಕನಾಗಿದ್ದ ಗೇಹಜಿಗೆ ಆ ಉಡುಗೊರೆಗಳ ಮೇಲೆ ಕಣ್ಣು ಬಿತ್ತು. ಅದಕ್ಕಾಗಿ ಆಶಿಸಿದನು. “ಯೆಹೋವನಾಣೆ, ನಾನು [ನಾಮಾನನ] ಹಿಂದೆ ಓಡುತ್ತಾ ಹೋಗಿ ಅವನಿಂದ ಸ್ವಲ್ಪವನ್ನಾದರೂ ಬಾಚಿಕೊಂಡು ಬರುವೆನು” ಎಂದು ಗೇಹಜಿ ತನ್ನಲ್ಲೇ ಹೇಳಿಕೊಂಡನು. ಎಲೀಷನಿಗೆ ಗೊತ್ತಾಗದಂತೆ ನಾಮಾನನ ಹಿಂದೆ ಹೋಗಿ ಅವನಿಗೆ ಹಸಿಹಸಿ ಸುಳ್ಳುಗಳನ್ನು ಹೇಳಿ “ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತು ಬಟ್ಟೆಗಳನ್ನೂ” ಕೊಡಬೇಕೆಂದು ಕೇಳಿದನು. ಯೆಹೋವನ ಪ್ರವಾದಿಗೆ ಸುಳ್ಳು ಹೇಳಿ ಹೀಗೆ ಮಾಡಿದ್ದರಿಂದ ಗೇಹಜಿಗೆ ಏನಾಯಿತು? ಅತಿಯಾಸೆಪಟ್ಟ ಅವನಿಗೆ ನಾಮಾನನ ಕುಷ್ಠ ಹತ್ತಿತು!—2 ಅರ. 5:20-27.

13 ಅತಿಯಾಸೆಯು ಚಿಕ್ಕ ಚಿಕ್ಕ ವಿಷಯಗಳಿಂದ ಆರಂಭಿಸಬಹುದು. ಅದನ್ನು ನಿಗ್ರಹಿಸಲಿಲ್ಲ ಎಂದರೆ ಹೆಮ್ಮರವಾಗಿ ಬೆಳೆದು ನಿಲ್ಲಬಹುದು. ಅತಿಯಾಸೆಗಿರುವ ಶಕ್ತಿ ಎಷ್ಟೆಂದು ಆಕಾನನ ಕುರಿತ ಬೈಬಲ್ ವೃತ್ತಾಂತ ತೋರಿಸುತ್ತದೆ. ಅದು ಎಷ್ಟು ಬೇಗ ಅವನಲ್ಲಿ ಬೆಳೆದುಬಿಟ್ಟಿತೆಂದು ನೋಡಿ. ಅವನು ಹೇಳಿದ್ದು: “ನಾನು ಕೊಳ್ಳೆಯಲ್ಲಿ ಶಿನಾರ್‌ ದೇಶದ ಒಂದು ಉತ್ತಮವಾದ ನಿಲುವಂಗಿಯನ್ನೂ ಇನ್ನೂರು ರೂಪಾಯಿ ತೂಕದ ಬೆಳ್ಳಿಯನ್ನೂ ಐವತ್ತು ರೂಪಾಯಿ ತೂಕದ ಬಂಗಾರದ ಗಟ್ಟಿಯನ್ನೂ ಕಂಡು ಅದನ್ನು ಆಶೆಯಿಂದ ತೆಗೆದುಕೊಂಡೆನು.” ಪವಿತ್ರ ಗ್ರಂಥ ಭಾಷಾಂತರ ಹೇಳುವಂತೆ ಅವನದನ್ನು ‘ಕಂಡು ಆಶಿಸಿ ತೆಗೆದುಕೊಂಡನು.’ ಈ ತಪ್ಪು ಆಸೆಯನ್ನು ಕಿತ್ತೆಗೆಯುವ ಬದಲು ಆ ವಸ್ತುಗಳನ್ನು ಕದ್ದು ತನ್ನ ಗುಡಾರದಲ್ಲಿ ಬಚ್ಚಿಟ್ಟನು. ಅವನ ಈ ತಪ್ಪು ಕೃತ್ಯ ಯಾವಾಗ ಬೆಳಕಿಗೆ ಬಂತೊ ಆಗ, ಯೆಹೋವನು ಅವನನ್ನು ಆಪತ್ತಿಗೆ ಗುರಿಮಾಡುವನೆಂದು ಯೆಹೋಶುವನು ಹೇಳಿದನು. ಅದೇ ದಿನದಂದು ಅವನನ್ನು ಅವನ ಕುಟುಂಬದವರನ್ನು ಕಲ್ಲೆಸೆದು ಕೊಲ್ಲಲಾಯಿತು. (ಯೆಹೋ. 7:11, 20, 21, 24, 25) ಅತಿಯಾಸೆ ಯಾವ ಸಮಯದಲ್ಲಾದರೂ ನಮ್ಮನ್ನು ಅಂಟಿಕೊಂಡು ನುಂಗಿಹಾಕುವಂಥ ಅಪಾಯ ಇದೆ. ಆದ್ದರಿಂದ ‘ಪ್ರತಿಯೊಂದು ರೀತಿಯ ದುರಾಶೆಯಿಂದ ನಮ್ಮನ್ನು ಕಾಪಾಡಿಕೊಳ್ಳೋಣ.’ (ಲೂಕ 12:15) ಅನೈತಿಕತೆ ಸಹ ಒಂದು ರೀತಿಯ ಅತಿಯಾಸೆಯೇ. ಒಮ್ಮೊಮ್ಮೆ ಕೆಟ್ಟ ಆಲೋಚನೆಗಳು ನಮ್ಮ ಮನಸ್ಸಲ್ಲಿ ಮೂಡಬಹುದು. ಆದರೆ ಅಂಥ ತಪ್ಪು ಆಲೋಚನೆಗಳು ಬೆಳೆದು ನಮ್ಮನ್ನು ಪಾಪ ಮಾಡುವುದಕ್ಕೆ ತಳ್ಳದಂತೆ ಎಚ್ಚರವಹಿಸಬೇಕು.ಯಾಕೋಬ 1:14, 15 ಓದಿ.

14. ನಮ್ಮಲ್ಲಿ ಅಹಂಕಾರ, ಅತಿಯಾಸೆ ಬೆಳೆಯುತ್ತಿದೆ ಎಂದು ತಿಳಿದುಬಂದಾಗ ಏನು ಮಾಡಬೇಕು?

14 ಅಹಂಕಾರ, ಅತಿಯಾಸೆ ದುರಂತಕ್ಕೆ ನಡೆಸುತ್ತವೆ. ತಪ್ಪು ಕೆಲಸ ಮಾಡುವ ಮುಂಚೆ ಅದರ ದುಷ್ಪರಿಣಾಮಗಳ ಬಗ್ಗೆ ಯೋಚಿಸಿದರೆ, ಯೆಹೋವನ ಸ್ವರಕ್ಕೆ  ಮಾತ್ರ ಕಿವಿಗೊಡುತ್ತಾ ಇರಲು ನಮಗೆ ಸಹಾಯವಾಗುವುದು. (ಧರ್ಮೋ. 32:29) ಸತ್ಯ ದೇವರು ಬೈಬಲಿನಲ್ಲಿ ಸರಿಯಾದ ಮಾರ್ಗ ಯಾವುದೆಂದು ತಿಳಿಸಿರುವುದು ಮಾತ್ರವಲ್ಲ ಸರಿಯಾದದ್ದನ್ನು ಮಾಡುವುದರ ಪ್ರಯೋಜನಗಳು ಮತ್ತು ತಪ್ಪು ಮಾಡುವುದರ ಪರಿಣಾಮಗಳ ಬಗ್ಗೆಯೂ ತಿಳಿಸಿದ್ದಾನೆ. ಅಹಂಕಾರ, ಅತಿಯಾಸೆಯಿಂದ ಯಾವುದೊ ಕೆಲಸವನ್ನು ಮಾಡುವ ಯೋಚನೆ ಬಂದಾಗ ಆ ಕೆಲಸದ ಪರಿಣಾಮಗಳ ಬಗ್ಗೆ ಯೋಚಿಸುವುದು ವಿವೇಕಯುತ. ಆ ತಪ್ಪು ಕೆಲಸ ನಮ್ಮನ್ನು, ನಮ್ಮ ಪ್ರೀತಿಪಾತ್ರರನ್ನು, ವಿಶೇಷವಾಗಿ ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹೇಗೆ ಬಾಧಿಸಬಹುದೆಂದು ಯೋಚಿಸಬೇಕು.

ಯೆಹೋವನೊಟ್ಟಿಗೆ ಒಳ್ಳೇ ಸಂವಾದ ಇಟ್ಟುಕೊಳ್ಳಿ

15. ದೇವರೊಟ್ಟಿಗಿನ ಸಂವಾದದ ಕುರಿತು ಯೇಸುವಿನ ಮಾದರಿಯಿಂದ ನಾವೇನು ಕಲಿಯಬಹುದು?

15 ಯೆಹೋವನು ಯಾವಾಗಲೂ ನಮ್ಮ ಹಿತವನ್ನೇ ಬಯಸುತ್ತಾನೆ. (ಕೀರ್ತ. 1:1-3) ನಮಗೆ ಅಗತ್ಯವಿರುವ ಸಮಯದಲ್ಲೇ ಸಾಕಷ್ಟು ಮಾರ್ಗದರ್ಶನ ನೀಡುತ್ತಾನೆ. (ಇಬ್ರಿಯ 4:16 ಓದಿ.) ಯೇಸು ಪರಿಪೂರ್ಣನಾಗಿದ್ದನು. ಆದರೂ ನಿಯಮಿತವಾಗಿ ತನ್ನ ತಂದೆಯೊಂದಿಗೆ ಪ್ರಾರ್ಥನೆ ಮಾಡುವ ಮೂಲಕ ಸಂವಾದಿಸುತ್ತಿದ್ದನು. ಹಾಗಾಗಿ ಯೆಹೋವನು ಯೇಸುವನ್ನು ಅನೇಕ ವಿಧಗಳಲ್ಲಿ ಬೆಂಬಲಿಸಿದನು, ನಿರ್ದೇಶಿಸಿದನು. ಆತನ ಉಪಚಾರ ಮಾಡಲು ದೇವದೂತರನ್ನು ಕಳುಹಿಸಿದನು, ಸಹಾಯ ಮಾಡಲು ಪವಿತ್ರಾತ್ಮ ಕೊಟ್ಟನು. 12 ಮಂದಿ ಅಪೊಸ್ತಲರ ಆಯ್ಕೆ ಮಾಡಲು ಮಾರ್ಗದರ್ಶನ ನೀಡಿದನು. ತನ್ನ ಒಪ್ಪಿಗೆ ಮತ್ತು ಬೆಂಬಲ ಯೇಸುವಿಗಿದೆ ಎಂದು ಸೂಚಿಸಲು ಯೆಹೋವನ ಸ್ವರ ಸ್ವರ್ಗದಿಂದ ಕೇಳಿಬಂತು. (ಮತ್ತಾ. 3:17; 17:5; ಮಾರ್ಕ 1:12, 13; ಲೂಕ 6:12, 13; ಯೋಹಾ. 12:28) ಯೇಸುವಿನಂತೆಯೇ ನಾವು ದೇವರಿಗೆ ಪ್ರಾರ್ಥನೆಯಲ್ಲಿ ನಮ್ಮ ಹೃದಯವನ್ನು ಬಿಚ್ಚಬೇಕು. (ಕೀರ್ತ. 62:7, 8; ಇಬ್ರಿ. 5:7) ಪ್ರಾರ್ಥನೆಯ ಮೂಲಕ ನಾವೂ ಯೆಹೋವನೊಟ್ಟಿಗೆ ಆಪ್ತ ಸಂವಾದ ಮಾಡಬಹುದು ಮತ್ತು ಆತನಿಗೆ ಘನ ತರುವಂಥ ರೀತಿಯಲ್ಲಿ ಬದುಕಬಹುದು.

16. ಯೆಹೋವನ ಸ್ವರವನ್ನು ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಲು ಆತನ ಸಹಾಯ ಪಡೆಯುವುದು ಹೇಗೆ?

16 ಯೆಹೋವನು ಮಾರ್ಗದರ್ಶನವನ್ನು ಧಾರಾಳವಾಗಿ ಕೊಡುವುದಾದರೂ ಅದನ್ನು ಪಾಲಿಸಲೇಬೇಕೆಂದು ಯೆಹೋವನು ಯಾರನ್ನೂ ಒತ್ತಾಯಿಸುವುದಿಲ್ಲ. ನಾವು ಪವಿತ್ರಾತ್ಮಕ್ಕಾಗಿ ಕೇಳಿಕೊಳ್ಳಬೇಕು. ಆಗ ಮಾತ್ರ ಅದನ್ನು ನಮಗೆ ಹೇರಳವಾಗಿ ಕೊಡುತ್ತಾನೆ. (ಲೂಕ 11:10-13 ಓದಿ.) ಹಾಗಿದ್ದರೂ ‘ನಾವು ಹೇಗೆ ಕಿವಿಗೊಡುತ್ತೇವೆ’ ಎಂಬುದಕ್ಕೆ ಲಕ್ಷ್ಯಕೊಡುವುದು ಪ್ರಾಮುಖ್ಯ. (ಲೂಕ 8:18) ಉದಾಹರಣೆಗೆ ಅನೈತಿಕ ಆಲೋಚನೆಗಳನ್ನು ಮೆಟ್ಟಿನಿಲ್ಲಲು ಯೆಹೋವನ ಬಳಿ ಸಹಾಯಕ್ಕಾಗಿ ಬೇಡುತ್ತಿರುವಾಗ ಅದೇ ಸಮಯದಲ್ಲಿ ಅಶ್ಲೀಲ ಸಾಹಿತ್ಯ ಅಥವಾ ಅನೈತಿಕ ಚಲನಚಿತ್ರಗಳನ್ನು ನೋಡುತ್ತಾ ಇದ್ದರೆ ಪ್ರಯೋಜನವಾಗದು. ಯೆಹೋವನ ಸಹಾಯ ಬೇಕಿದ್ದರೆ ಆತನ ಪವಿತ್ರಾತ್ಮ ಇರುವಂಥ ಸ್ಥಳಗಳಲ್ಲಿ ಅಥವಾ ಸನ್ನಿವೇಶಗಳಲ್ಲಿ ನಾವಿರುವಂತೆ ಯಾವಾಗಲೂ ಖಚಿತಪಡಿಸಿಕೊಳ್ಳಬೇಕು. ಸಭಾಕೂಟಗಳಲ್ಲಿ ಆತನ ಪವಿತ್ರಾತ್ಮ ಇದೆ ಎಂದು ನಮಗೆ ಗೊತ್ತು. ಅನೇಕರು ತಮ್ಮ ಹೃದಯದಲ್ಲಿ ಬೆಳೆಯುತ್ತಿದ್ದ ತಪ್ಪು ಆಸೆಗಳನ್ನು ಗುರುತಿಸಿ ತಮ್ಮನ್ನು ತಿದ್ದಿಕೊಳ್ಳಲು ಸಾಧ್ಯವಾಗಿರುವುದು ಕೂಟಗಳಿಗೆ ಹಾಜರಾಗಿ ಕಿವಿಗೊಟ್ಟಿದ್ದರಿಂದಲೇ. ಹೀಗೆ ಆಧ್ಯಾತ್ಮಿಕ ದುರಂತವನ್ನು ಅವರು ತಪ್ಪಿಸಿಕೊಂಡಿದ್ದಾರೆ.—ಕೀರ್ತ. 73:12-17; 143:10.

ಯೆಹೋವನ ಸ್ವರಕ್ಕೆ ಗಮನಕೊಟ್ಟು ಕಿವಿಗೊಡುವುದನ್ನು ಮುಂದುವರಿಸಿ

17. ನಮ್ಮ ಮೇಲೆಯೇ ಆತುಕೊಳ್ಳುವುದು ಅಪಾಯಕಾರಿ ಯಾಕೆ?

17 ಪುರಾತನ ಇಸ್ರಾಯೇಲಿನ ರಾಜ ದಾವೀದನನ್ನು ಪರಿಗಣಿಸಿ. ಅವನು ಯುವಕನಾಗಿದ್ದಾಗ ಫಿಲಿಷ್ಟಿ ದೈತ್ಯ ಗೊಲ್ಯಾತನ ವಿರುದ್ಧ ವಿಜಯ ಸಾಧಿಸಿದನು. ದಾವೀದನು ಒಬ್ಬ ಸೈನಿಕನಾದನು, ಆಮೇಲೆ ರಾಜನಾದನು. ಅವನು ಜನಾಂಗದ ಸಂರಕ್ಷಕನಾಗಿ, ಅದರ ಹಿತಕ್ಕಾಗಿ ನಿರ್ಣಯಗಳನ್ನು ಮಾಡಿದನು. ಆದರೆ ಯಾವಾಗ ಅವನು ತನ್ನ ಮೇಲೆಯೇ ಆತುಕೊಂಡನೊ ಆಗ ಅವನ ಹೃದಯ ಅವನನ್ನು ವಂಚಿಸಿತು. ಹಾಗಾಗಿ ಬತ್ಷೆಬೆಯೊಂದಿಗೆ ಗಂಭೀರ ಪಾಪ ಮಾಡಿದನು. ಅವಳ ಗಂಡನಾದ ಊರೀಯನನ್ನು ಕೊಲ್ಲಿಸಿದನು. ಶಿಸ್ತು ಕೊಡಲಾದಾಗ ದೀನತೆಯಿಂದ ತನ್ನ ತಪ್ಪನ್ನು ಒಪ್ಪಿಕೊಂಡನು ಮತ್ತು ಯೆಹೋವನೊಂದಿಗಿದ್ದ ತನ್ನ ಸಂಬಂಧವನ್ನು ಪುನಃ ಸ್ಥಾಪಿಸಿದನು.—ಕೀರ್ತ. 51:4, 6, 10, 11.

18. ಯೆಹೋವನ ಸ್ವರಕ್ಕೆ ಕಿವಿಗೊಡುತ್ತಾ ಇರಲು ನಮಗೆ ಯಾವುದು ಸಹಾಯ ಮಾಡುವುದು?

18 ಯಾವಾಗಲೂ 1 ಕೊರಿಂಥ 10:12 ರಲ್ಲಿರುವ ಸಲಹೆಯನ್ನು ಮನಸ್ಸಿನಲ್ಲಿಟ್ಟು ಅತಿಯಾದ ಆತ್ಮವಿಶ್ವಾಸ ತೋರಿಸದಿರೋಣ. ನಾವು ‘ನಮ್ಮ ಹೆಜ್ಜೆಯನ್ನೇ ಸರಿಯಾಗಿ ಇಡಲಾರೆವು.’ ಒಂದೊ ನಾವು ಯೆಹೋವನ ಸ್ವರಕ್ಕೆ ತಕ್ಕಂತೆ ಹೆಜ್ಜೆ ಇಡುತ್ತೇವೆ ಇಲ್ಲವೆ ಆತನ ವೈರಿಯ ಸ್ವರಕ್ಕೆ ತಕ್ಕಂತೆ ಹೆಜ್ಜೆಯಿಡುತ್ತೇವೆ. (ಯೆರೆ. 10:23) ಹಾಗಾಗಿ ಎಡೆಬಿಡದೆ ಪ್ರಾರ್ಥಿಸೋಣ, ಪವಿತ್ರಾತ್ಮದ ಮಾರ್ಗದರ್ಶನವನ್ನು ಪಾಲಿಸೋಣ ಮತ್ತು ಯಾವಾಗಲೂ ಯೆಹೋವನ ಸ್ವರಕ್ಕೇ ಗಮನಕೊಟ್ಟು ಕಿವಿಗೊಡೋಣ.