ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಪುನರುತ್ಥಾನವಾದವರು “ಮದುವೆಮಾಡಿಕೊಳ್ಳುವುದೂ ಇಲ್ಲ ಮದುವೆಮಾಡಿಕೊಡುವುದೂ ಇಲ್ಲ” ಎಂದು ಸದ್ದುಕಾಯರಿಗೆ ಯೇಸು ಹೇಳಿದನು. (ಲೂಕ 20:34-36) ಭೂಮಿಯಲ್ಲಾಗುವ ಪುನರುತ್ಥಾನದ ಬಗ್ಗೆ ಯೇಸು ಮಾತಾಡುತ್ತಿದ್ದನೇ?

ಇದೊಂದು ಪ್ರಾಮುಖ್ಯ ಪ್ರಶ್ನೆ. ಅದರಲ್ಲೂ ಸಾವಿನಲ್ಲಿ ತಮ್ಮ ಪ್ರೀತಿಯ ಬಾಳ ಸಂಗಾತಿಯನ್ನು ಕಳಕೊಂಡವರಿಗೆ ಇದು ಬಹಳ ಪ್ರಾಮುಖ್ಯ. ಇವರಿಗೆ ಹೊಸ ಲೋಕದಲ್ಲಿ ಪುನರುತ್ಥಾನವಾದ ತಮ್ಮ ಸಂಗಾತಿಯನ್ನು ಪುನಃ ಸೇರುವ ಹಂಬಲ ಇರುತ್ತದೆ. ಒಬ್ಬ ವಿಧುರ ಹೇಳಿದ್ದು: “ನಾನೂ ನನ್ನ ಪತ್ನಿ ಎಂದಿಗೂ ಅಗಲುವುದಿಲ್ಲ ಎಂದು ನೆನಸಿದ್ದೆವು. ಶಾಶ್ವತವಾಗಿ ಗಂಡ ಹೆಂಡತಿಯರಾಗಿ ಆರಾಧನೆಯಲ್ಲಿ ಐಕ್ಯರಾಗಿ ಇರಬೇಕೆನ್ನುವುದು ನಮ್ಮ ಹೃದಯದಾಳದ ಬಯಕೆಯಾಗಿತ್ತು. ಈ ಬಯಕೆ ನನ್ನಲ್ಲಿನ್ನೂ ಹಚ್ಚಹಸಿರಾಗಿದೆ.” ಪುನರುತ್ಥಾನವಾಗಿ ಬಂದವರು ಪುನಃ ಪತಿಪತ್ನಿಯಾಗಿ ಬಾಳುವರೆಂದು ನಿರೀಕ್ಷಿಸಬಹುದಾ? ನಮ್ಮಿಂದ ಹೇಳಲಿಕ್ಕಾಗುವುದಿಲ್ಲ.

ಪುನರುತ್ಥಾನ ಮತ್ತು ಮದುವೆಯ ಬಗ್ಗೆ ಯೇಸು ಆ ಸಂದರ್ಭದಲ್ಲಿ ಮಾತಾಡಿದಾಗ ಭೂಮಿಯಲ್ಲಾಗುವ ಪುನರುತ್ಥಾನಕ್ಕೆ ಸೂಚಿಸುತ್ತಿದ್ದನೆಂದು ನಮ್ಮ ಸಾಹಿತ್ಯದಲ್ಲಿ ಅನೇಕ ವರ್ಷಗಳಿಂದ ತಿಳಿಸಲಾಗಿದೆ. ಯಾರು ಪುನರುತ್ಥಾನವಾಗಿ ಬರುತ್ತಾರೊ ಅವರು ಹೊಸ ಲೋಕದಲ್ಲಿ ಮದುವೆಯಾಗಿ ಮತ್ತೆ ಪತಿಪತ್ನಿಯಾಗುವುದಿಲ್ಲ ಎಂದೂ ತಿಳಿಸಲಾಗಿದೆ. * (ಮತ್ತಾ. 22:29, 30; ಮಾರ್ಕ 12:24, 25; ಲೂಕ 20:34-36) ಯೇಸು ಏನಾದರೂ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುವವರ ಬಗ್ಗೆ ಮಾತಾಡುತ್ತಿದ್ದನಾ? ಇದನ್ನು ನಾವು ನಿಶ್ಚಯವಾಗಿ ಹೇಳಲಾಗದಿದ್ದರೂ ಅವನ ಮಾತುಗಳನ್ನು ಈಗ ಪರಿಶೀಲಿಸೋಣ.

ಯೇಸು ಆ ಮಾತುಗಳನ್ನು ಹೇಳಿದ ಸನ್ನಿವೇಶವನ್ನು ಪರಿಗಣಿಸಿ. (ಲೂಕ 20:27-33 ಓದಿ.) ಪುನರುತ್ಥಾನವನ್ನು ನಂಬದಿದ್ದ ಸದ್ದುಕಾಯರು ಯೇಸುವಿಗೆ ಒಂದು ಪ್ರಶ್ನೆ ಕೇಳಿ ಸಿಕ್ಕಿಸಿಹಾಕಲು ಪ್ರಯತ್ನಿಸಿದರು. ಅವರ ಪ್ರಶ್ನೆ, ಪುನರುತ್ಥಾನ ಮತ್ತು ಮೈದುನ ವಿವಾಹದ ಬಗ್ಗೆಯಾಗಿತ್ತು. * ಯೇಸು ಈ ಉತ್ತರ ಕೊಟ್ಟನು: “ಈ ವಿಷಯಗಳ ವ್ಯವಸ್ಥೆಯ ಮಕ್ಕಳು ಮದುವೆಮಾಡಿಕೊಳ್ಳುತ್ತಾರೆ ಮತ್ತು ಮದುವೆಮಾಡಿಕೊಡುತ್ತಾರೆ; ಆದರೆ ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ಜೀವವನ್ನು ಪಡೆದುಕೊಳ್ಳಲು ಮತ್ತು ಸತ್ತವರೊಳಗಿಂದ ಪುನರುತ್ಥಾನಹೊಂದಲು ಯೋಗ್ಯರಾಗಿ ಪರಿಗಣಿಸಲ್ಪಟ್ಟವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ; ಅವರು ಇನ್ನೆಂದೂ ಸಾಯುವುದಿಲ್ಲ. ಏಕೆಂದರೆ ಅವರು ದೇವದೂತರಂತಿದ್ದಾರೆ ಮತ್ತು ಪುನರುತ್ಥಾನ ಹೊಂದುವುದರಿಂದ ದೇವರ ಮಕ್ಕಳಾಗುತ್ತಾರೆ.”—ಲೂಕ 20:34-36.

ಯೇಸು ಬಹುಶಃ ಭೂಮಿಯಲ್ಲಾಗುವ ಪುನರುತ್ಥಾನದ ಬಗ್ಗೆ ಮಾತಾಡುತ್ತಿದ್ದನೆಂದು ಇಲ್ಲಿವರೆಗೆ ನಮ್ಮ ಸಾಹಿತ್ಯ ಹೇಳಿರುವುದೇಕೆ? ಈ ಸಮಾಪ್ತಿಗೆ ಬರಲು ಎರಡು ಕಾರಣಗಳಿದ್ದವು. ಮೊದಲನೆಯದು, ಸದ್ದುಕಾಯರು ಯೇಸುವಿಗೆ ಈ ಪ್ರಶ್ನೆಯನ್ನು ಕೇಳಿದಾಗ ಭೂಮಿಯಲ್ಲಾಗುವ ಪುನರುತ್ಥಾನ ಅವರ ಮನಸ್ಸಿನಲ್ಲಿದ್ದಿರಬೇಕು. ಆದ್ದರಿಂದ ಯೇಸು ಸಹ ಭೂಮಿಯಲ್ಲಾಗುವ ಪುನರುತ್ಥಾನದ ಬಗ್ಗೆ ಹೇಳುತ್ತಾ ಉತ್ತರ ಕೊಟ್ಟಿರಬೇಕು. ಎರಡನೆಯದು, ಯೇಸು ತನ್ನ ಉತ್ತರದ ಕೊನೆಯಲ್ಲಿ ಅಬ್ರಹಾಮ, ಇಸಾಕ, ಯಾಕೋಬರ ಬಗ್ಗೆ ಹೇಳಿದನು. ನಂಬಿಗಸ್ತರಾದ ಈ ಪುರುಷರು ಭೂಮಿಯಲ್ಲಾಗುವ ಪುನರುತ್ಥಾನದಲ್ಲಿ ಪುನಃ ಬರುವರು.—ಲೂಕ 20:37, 38.

ಆದರೆ ಯೇಸು ಸ್ವರ್ಗೀಯ ಪುನರುತ್ಥಾನಕ್ಕೆ ಸೂಚಿಸಿ ಮಾತಾಡುತ್ತಿದ್ದಿರಬಹುದು. ಇದನ್ನು ಯಾವ ಆಧಾರದ ಮೇಲೆ ಹೇಳಬಹುದು? ಯೇಸುವಿನ ಎರಡು ಬಹುಮುಖ್ಯ ಹೇಳಿಕೆಗಳಿಗೆ ಗಮನ ಕೊಡೋಣ.

‘ಸತ್ತವರೊಳಗಿಂದ ಪುನರುತ್ಥಾನಹೊಂದಲು ಯೋಗ್ಯರಾಗಿ ಪರಿಗಣಿಸಲ್ಪಟ್ಟವರು.’ ನಂಬಿಗಸ್ತ ಅಭಿಷಿಕ್ತರು ‘ದೇವರ ರಾಜ್ಯಕ್ಕೆ ಯೋಗ್ಯರಾಗಿ ಎಣಿಸಲ್ಪಟ್ಟಿದ್ದಾರೆ.’ (2 ಥೆಸ. 1:5, 11) ಇವರು ವಿಮೋಚನಾ ಮೌಲ್ಯದ ಆಧಾರದ ಮೇರೆಗೆ ಜೀವಕ್ಕಾಗಿ ನೀತಿವಂತರೆಂದು ನಿರ್ಣಯಿಸಲ್ಪಟ್ಟವರು. ಆದ್ದರಿಂದ ಇವರು ಖಂಡನೆಗೆ ಗುರಿಯಾದ ಪಾಪಿಗಳಾಗಿ ಸಾಯುವುದಿಲ್ಲ. (ರೋಮ. 5:1, 18; 8:1) ಇಂಥವರನ್ನು ‘ಸಂತೋಷಿತರೂ ಪವಿತ್ರರೂ’ ಎಂದು ಕರೆಯಲಾಗುತ್ತದೆ ಮತ್ತು ಸ್ವರ್ಗೀಯ ಪುನರುತ್ಥಾನಕ್ಕೆ ಯೋಗ್ಯರೆಂದು ಎಣಿಸಲಾಗುತ್ತದೆ. (ಪ್ರಕ. 20:5, 6)  ಇನ್ನೊಂದು ಕಡೆ ಭೂಮಿಯ ಮೇಲೆ ಜೀವಕ್ಕೆ ಪುನರುತ್ಥಾನವಾಗುವವರಲ್ಲಿ “ಅನೀತಿವಂತರು” ಸಹ ಸೇರಿದ್ದಾರೆ. (ಅ. ಕಾ. 24:15) ಈ ಅನೀತಿವಂತರನ್ನು ‘ಪುನರುತ್ಥಾನ ಹೊಂದಲು ಯೋಗ್ಯರೆಂದು ಪರಿಗಣಿಸಲು’ ಸಾಧ್ಯವಿಲ್ಲ ಅಲ್ಲವೇ?

“ಅವರು ಇನ್ನೆಂದೂ ಸಾಯುವುದಿಲ್ಲ.” ಬೇರೆ ಭಾಷಾಂತರಗಳು ಯೇಸುವಿನ ಈ ಮಾತನ್ನು ಹೀಗೆ ತಿಳಿಸುತ್ತವೆ: “ಅವರು ಇನ್ನು ಮುಂದೆ ಮರಣಕ್ಕೆ ಒಳಪಟ್ಟಿಲ್ಲ” ಮತ್ತು “ಅವರ ವಿರುದ್ಧ ಮರಣಕ್ಕೆ ಶಕ್ತಿಯಿಲ್ಲ.” ಕೊನೇವರೆಗೂ ಭೂಮಿ ಮೇಲೆ ನಂಬಿಗಸ್ತರಾಗಿರುವ ಅಭಿಷಿಕ್ತರು ಸ್ವರ್ಗಕ್ಕೆ ಪುನರುತ್ಥಾನವಾಗುತ್ತಾರೆ ಮತ್ತು ಅವರಿಗೆ ಅಮರತ್ವ ಕೊಡಲಾಗುತ್ತದೆ. ಅಂದರೆ ಕೊನೆಯಿಲ್ಲದ, ಲಯವಾಗದ ಜೀವ. (1 ಕೊರಿಂ. 15:53, 54) ಯಾರಿಗೆ ಸ್ವರ್ಗೀಯ ಪುನರುತ್ಥಾನವಾಗುವುದೊ ಅವರ ಮೇಲೆ ಸಾವು ತನ್ನ ಅಧಿಕಾರ ಚಲಾಯಿಸಲು ಆಗುವುದಿಲ್ಲ. *

ಇಲ್ಲಿವರೆಗೂ ಕಲಿತ ವಿಷಯಗಳ ಪ್ರಕಾರ ನಾವು ಯಾವ ಸಮಾಪ್ತಿಗೆ ಬರಬಹುದು? ಪುನರುತ್ಥಾನ ಮತ್ತು ಮದುವೆಯ ಬಗ್ಗೆ ಯೇಸು ಹೇಳಿದಾಗ ಅವನು ಸ್ವರ್ಗೀಯ ಪುನರುತ್ಥಾನಕ್ಕೆ ಸೂಚಿಸುತ್ತಿದ್ದಿರಬಹುದು. ಹಾಗಿದ್ದರೆ ಸ್ವರ್ಗಕ್ಕೆ ಪುನರುತ್ಥಾನವಾಗುವವರ ಬಗ್ಗೆ ಅನೇಕ ವಿಷಯಗಳನ್ನು ಇದು ತಿಳಿಸುತ್ತದೆ: ಅವರು ಮದುವೆ ಮಾಡಿಕೊಳ್ಳುವುದಿಲ್ಲ. ಅವರ ಜೀವಕ್ಕೆ ಅಂತ್ಯವಿಲ್ಲ. ಅವರು ಕೆಲವೊಂದು ವಿಷಯಗಳಲ್ಲಿ ದೇವದೂತರಂತಿದ್ದಾರೆ. ಆದರೆ ಈ ಸಮಾಪ್ತಿಯಿಂದ ಇನ್ನೂ ಕೆಲವು ಪ್ರಶ್ನೆಗಳು ಹುಟ್ಟುತ್ತವೆ.

ಮೊದಲನೇದು, ಬಹುಶಃ ಭೂಮಿಯಲ್ಲಾಗುವ ಪುನರುತ್ಥಾನದ ಬಗ್ಗೆ ಯೋಚಿಸುತ್ತಿದ್ದ ಸದ್ದುಕಾಯರೊಂದಿಗೆ ಯೇಸು ಏಕೆ ಸ್ವರ್ಗೀಯ ಪುನರುತ್ಥಾನದ ಬಗ್ಗೆ ಮಾತಾಡಿದನು? ಯೇಸು ತನ್ನನ್ನು ವಿರೋಧಿಸಿದವರಿಗೆ ಉತ್ತರ ಕೊಟ್ಟಾಗ ಯಾವಾಗಲೂ ಅವರೇನನ್ನು ಯೋಚಿಸುತ್ತಿದ್ದರೊ ಅದಕ್ಕೆ ಹೊಂದಿಕೆಯಲ್ಲೇ ಉತ್ತರಿಸುತ್ತಿರಲಿಲ್ಲ. ಉದಾಹರಣೆಗೆ, ಯೇಸುವಿನ ಬಳಿ ಬಂದು ತಮಗೆ ಸೂಚಕಕಾರ್ಯ ತೋರಿಸು ಎಂದು ಕೇಳಿದ ಯೆಹೂದ್ಯರಿಗೆ ಆತನ ಉತ್ತರ “ಈ ಆಲಯವನ್ನು ಕೆಡವಿರಿ, ಮೂರೇ ದಿನಗಳಲ್ಲಿ ನಾನು ಅದನ್ನು ಎಬ್ಬಿಸುವೆನು” ಎಂದಾಗಿತ್ತು. ಆ ಯೆಹೂದ್ಯರು ದೇವಾಲಯದ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಯೇಸುವಿಗೆ ಗೊತ್ತಿದ್ದಿರಬೇಕು. ಆದರೆ ಅವನು “ತನ್ನ ದೇಹವೆಂಬ ಆಲಯದ ಕುರಿತು ಮಾತಾಡುತ್ತಿದ್ದನು.” (ಯೋಹಾ. 2:18-21) ಪುನರುತ್ಥಾನವನ್ನಾಗಲಿ ಅಥವಾ ದೇವದೂತರನ್ನಾಗಲಿ ನಂಬದ ಕಪಟ ಸದ್ದುಕಾಯರಿಗೆ ಉತ್ತರಿಸಲೇಬೇಕು ಎಂದು ಯೇಸುವಿಗೆ ಅನಿಸಿರಲಿಕ್ಕಿಲ್ಲ. (ಜ್ಞಾನೋ. 23:9; ಮತ್ತಾ. 7:6; ಅ. ಕಾ. 23:8) ಬದಲಿಗೆ ಯೇಸು ತನ್ನ ಯಥಾರ್ಥ ಶಿಷ್ಯರಿಗೆ ಸ್ವರ್ಗೀಯ ಪುನರುತ್ಥಾನದ ಸತ್ಯಗಳನ್ನು ಹೇಳಬಯಸಿದ್ದಿರಬೇಕು. ಏಕೆಂದರೆ ಅವರು ಮುಂದೊಂದು ದಿನ ಸ್ವರ್ಗೀಯ ಪುನರುತ್ಥಾನಕ್ಕೆ ಅರ್ಹರಾಗಲಿದ್ದರು.

ಎರಡನೇದು, ಯೇಸು ಸ್ವರ್ಗೀಯ ಪುನರುತ್ಥಾನಕ್ಕೆ ಸೂಚಿಸುತ್ತಿರುವುದಾದರೆ ಭೂಮಿಯಲ್ಲಿ ಪುನರುತ್ಥಾನವಾಗಲಿರುವ ಅಬ್ರಹಾಮ, ಇಸಾಕ, ಯಾಕೋಬರ ಬಗ್ಗೆ ಹೇಳುತ್ತಾ ತನ್ನ ಚರ್ಚೆ ಮುಗಿಸಿದ್ದೇಕೆ? (ಮತ್ತಾಯ 22:31, 32 ಓದಿ.) ಇವರ ಬಗ್ಗೆ ಹೇಳುವ ಮುಂಚೆ ಯೇಸು “ಆದರೆ ಸತ್ತವರ ಪುನರುತ್ಥಾನದ ವಿಷಯದಲ್ಲಿ” ಎಂದು ಹೇಳಿದ್ದನ್ನು ಗಮನಿಸಿ. ಇದು ಚರ್ಚೆಯನ್ನು ಬೇರೊಂದು ವಿಷಯದೆಡೆಗೆ ಸಾಗಿಸಿತು. ಸದ್ದುಕಾಯರು ಮೋಶೆಯ ಬರಹಗಳನ್ನು ನಂಬುತ್ತಿದ್ದರು. ಆದ್ದರಿಂದ ಯೇಸು ಅದನ್ನೇ ಉಪಯೋಗಿಸಿ ಯೆಹೋವನು ಮೋಶೆಯೊಂದಿಗೆ ಉರಿಯುವ ಪೊದೆಯ ಬಳಿ ಹೇಳಿದ ಮಾತನ್ನು ಆಧಾರವಾಗಿಟ್ಟುಕೊಂಡು ಭೂಮಿಯಲ್ಲಿ ಪುನರುತ್ಥಾನವಾಗುವುದು ದೇವರ ಉದ್ದೇಶ ಎಂದು ಸಾಬೀತುಪಡಿಸಿದನು.—ವಿಮೋ. 3:1-6.

ಮೂರನೇದು, ಪುನರುತ್ಥಾನ ಮತ್ತು ಮದುವೆಯ ಬಗ್ಗೆ ಯೇಸುವಿನ ಮಾತುಗಳು ಸ್ವರ್ಗೀಯ ಪುನರುತ್ಥಾನಕ್ಕೆ ಸೂಚಿಸಿದ್ದೇ ಆದಲ್ಲಿ, ಭೂಮಿಯಲ್ಲಿ ಪುನರುತ್ಥಾನ ಆಗುವವರು ಮದುವೆಯಾಗುತ್ತಾರೆ ಎಂದು ಅರ್ಥವೊ? ದೇವರ ವಾಕ್ಯ ಈ ಪ್ರಶ್ನೆಗೆ ನೇರ ಉತ್ತರ ಕೊಡುವುದಿಲ್ಲ. ಯೇಸು ಸ್ವರ್ಗೀಯ ಪುನರುತ್ಥಾನದ ಬಗ್ಗೆಯೇ ಮಾತಾಡಿರುವುದಾದರೆ, ಹೊಸ ಲೋಕದಲ್ಲಿ ಪುನರುತ್ಥಾನವಾದವರು ಮದುವೆಯಾಗಿ ಪುನಃ ಪತಿಪತ್ನಿಯಾಗಿ ಜೀವಿಸುವರೇ ಎಂಬ ವಿಷಯದ ಮೇಲೆ ಯಾವುದೇ ಬೆಳಕು ಚೆಲ್ಲುವುದಿಲ್ಲ.

ಸಾವು ಮದುವೆಬಂಧವನ್ನು ಅಂತ್ಯಗೊಳಿಸುತ್ತದೆಂದು ದೇವರ ವಾಕ್ಯ ಹೇಳುತ್ತದೆ. ಇದು ನಮಗೆ ಖಚಿತವಾಗಿ ಗೊತ್ತು. ಆದ್ದರಿಂದ ಒಬ್ಬ ವಿಧುರ ಅಥವಾ ವಿಧವೆ ಪುನಃ ಮದುವೆಯಾದರೆ ಅದಕ್ಕಾಗಿ ಅವರು ಅಪರಾಧಿ ಪ್ರಜ್ಞೆ ತಾಳಬೇಕೆಂದಿಲ್ಲ. ಮರುಮದುವೆ ಅವರ ವೈಯಕ್ತಿಕ ನಿರ್ಧಾರ. ಗಂಡ/ಹೆಂಡತಿಯ ಸಾಂಗತ್ಯವನ್ನು ಬಯಸುವ ಅವರ ನಿರ್ಧಾರವನ್ನು ಯಾರೂ ಟೀಕಿಸಬಾರದು.—ರೋಮ. 7:2, 3; 1 ಕೊರಿಂ. 7:39.

ಹೊಸ ಲೋಕದಲ್ಲಿ ಜೀವನ ಹೇಗಿರುತ್ತದೆ ಎಂಬುದರ ಬಗ್ಗೆ ನಮಗೆ ಅನೇಕ ಪ್ರಶ್ನೆಗಳು ಬರುವುದು ಸಹಜ. ಉತ್ತರಗಳ ಬಗ್ಗೆ ಸುಮ್ಮನೆ ಊಹಾಪೋಹ ಮಾಡುತ್ತಾ ಇರುವ ಬದಲು ಕಾದು ನೋಡೋಣ. ಒಂದಂತೂ ಖಂಡಿತ: ವಿಧೇಯ ಮಾನವರು ಸಂತೋಷವಾಗಿರುತ್ತಾರೆ. ಏಕೆಂದರೆ ಸಾಧ್ಯವಿರುವುದರಲ್ಲೇ ಉತ್ತಮ ರೀತಿಯಲ್ಲಿ ಯೆಹೋವನು ಅವರ ಅಗತ್ಯಗಳನ್ನು, ಇಷ್ಟವನ್ನು ನೆರವೇರಿಸುವನು.—ಕೀರ್ತ. 145:16.

^ ಪ್ಯಾರ. 4 ಜೂನ್‌ 1, 1987ರ ಕಾವಲಿನಬುರುಜು (ಇಂಗ್ಲಿಷ್‌) ಪುಟ 30-31 ನೋಡಿ.

^ ಪ್ಯಾರ. 5 ಬೈಬಲ್‌ ಸಮಯದಲ್ಲಿ ಮೈದುನ ಮದುವೆ ಅಥವಾ ಮೈದುನಧರ್ಮದ ಏರ್ಪಾಡಿತ್ತು. ಅಂದರೆ ಅಣ್ಣನು ಮಗನಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಮೈದುನ ಮದುವೆಯಾಗುವ ಪದ್ಧತಿ ಇತ್ತು. ಹೀಗೆ ಅವನ ಅಣ್ಣನ ವಂಶವನ್ನು ಬೆಳೆಸಲು ಸಾಧ್ಯವಾಗುತ್ತಿತ್ತು.—ಆದಿ. 38:8; ಧರ್ಮೋ 25:5, 6.

^ ಪ್ಯಾರ. 9 ಭೂಮಿಯಲ್ಲಿ ಪುನರುತ್ಥಾನವಾಗುವವರಿಗೆ ನಿತ್ಯಜೀವ ಕೊಡಲಾಗುವುದು, ಅಮರತ್ವವನ್ನಲ್ಲ. ಅಮರತ್ವ ಮತ್ತು ನಿತ್ಯಜೀವದ ವ್ಯತ್ಯಾಸ ತಿಳಿಯಲು ಮೇ 1, 1985ರ ಕಾವಲಿನಬುರುಜು ಪುಟ 30-31 ನೋಡಿ.