ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೂರ್ಣಸಮಯದ ಸೇವಕರನ್ನು ಮನಸ್ಸಿನಲ್ಲಿಟ್ಟುಕೊಳ್ಳಿ

ಪೂರ್ಣಸಮಯದ ಸೇವಕರನ್ನು ಮನಸ್ಸಿನಲ್ಲಿಟ್ಟುಕೊಳ್ಳಿ

“ನಿಮ್ಮ ನಂಬಿಗಸ್ತ ಕ್ರಿಯೆಯನ್ನು, ನಿಮ್ಮ ಪ್ರೀತಿಪೂರ್ವಕ ಪ್ರಯಾಸವನ್ನು . . . ಎಡೆಬಿಡದೆ ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ.”—1 ಥೆಸ. 1:3.

1. ಶ್ರಮಪಟ್ಟು ಯೆಹೋವನ ಸೇವೆಮಾಡಿದವರ ಬಗ್ಗೆ ಪೌಲನಿಗೆ ಯಾವ ಅಭಿಪ್ರಾಯವಿತ್ತು?

ಸುವಾರ್ತೆ ಸಾರುವುದರಲ್ಲಿ ಶ್ರಮಪಟ್ಟು ಕೆಲಸಮಾಡಿದವರನ್ನು ಅಪೊಸ್ತಲ ಪೌಲ ಮರೆಯಲಿಲ್ಲ. ಅವನು ಬರೆದದ್ದು: “ನಿಮ್ಮ ನಂಬಿಗಸ್ತ ಕ್ರಿಯೆಯನ್ನು, ನಿಮ್ಮ ಪ್ರೀತಿಪೂರ್ವಕ ಪ್ರಯಾಸವನ್ನು ಮತ್ತು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ನಿಮಗಿರುವ ನಿರೀಕ್ಷೆಯಿಂದ ಉಂಟಾದ ನಿಮ್ಮ ತಾಳ್ಮೆಯನ್ನು ನಾವು ನಮ್ಮ ದೇವರೂ ತಂದೆಯೂ ಆಗಿರುವಾತನ ಮುಂದೆ ಎಡೆಬಿಡದೆ ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ.” (1 ಥೆಸ. 1:3) ಯೆಹೋವನು ಕೂಡ ತನ್ನ ನಂಬಿಗಸ್ತ ಸೇವಕರು ಪ್ರೀತಿಯಿಂದ ಮಾಡುವ ಕೆಲಸವನ್ನು ಮರೆಯುವುದಿಲ್ಲ. ಜಾಸ್ತಿಯೋ ಕಡಿಮೆಯೋ ಅವರು ತಮ್ಮ ಪರಿಸ್ಥಿತಿಗೆ ತಕ್ಕಂತೆ ಮಾಡುವ ಸೇವೆ ಆತನಿಗೆ ಅಮೂಲ್ಯ.—ಇಬ್ರಿ. 6:10.

2. ಈ ಲೇಖನದಲ್ಲಿ ನಾವು ಏನನ್ನೆಲ್ಲ ಚರ್ಚಿಸಲಿದ್ದೇವೆ?

2 ಯೆಹೋವನ ಸೇವಕರಲ್ಲಿ ಅನೇಕರು ಪೂರ್ಣಸಮಯದ ಸೇವೆಮಾಡಲು ದೊಡ್ಡ ದೊಡ್ಡ ತ್ಯಾಗಗಳನ್ನು ಹಿಂದೆಯೂ ಮಾಡಿದ್ದಾರೆ. ಇಂದೂ ಮಾಡಿದವರಿದ್ದಾರೆ. ಒಂದನೇ ಶತಮಾನದಲ್ಲಿದ್ದವರು ಹೇಗೆ ಪೂರ್ಣಸಮಯದ ಸೇವೆಮಾಡಿದರು ಎಂಬುದರ ಬಗ್ಗೆ ಕಿರುನೋಟ ಬೀರೋಣ. ಇಂದು ಯಾವ್ಯಾವ ರೀತಿಯಲ್ಲಿ ಪೂರ್ಣಸಮಯದ ಸೇವೆಮಾಡುವ ಅವಕಾಶಗಳಿವೆ ಎಂದು ಸಹ ನೋಡೋಣ. ಈ ವಿಶೇಷ ರೀತಿಯಲ್ಲಿ ಯೆಹೋವನ ಸೇವೆಮಾಡಲು ತಮ್ಮ ಬದುಕನ್ನೇ ಅರ್ಪಿಸಿಕೊಂಡವರನ್ನು ನಾವು ಹೇಗೆ ಮನಸ್ಸಲ್ಲಿಟ್ಟುಕೊಳ್ಳಬಲ್ಲೆವು ಎಂದೂ ಕಲಿಯೋಣ.

ಒಂದನೇ ಶತಮಾನದ ಕ್ರೈಸ್ತರು

3, 4. (ಎ) ಒಂದನೇ ಶತಮಾನದ ಕೆಲವು ಕ್ರೈಸ್ತರು ಯಾವೆಲ್ಲ ವಿಧದಲ್ಲಿ ಸೇವೆಮಾಡಿದರು? (ಬಿ) ಅವರು ತಮ್ಮ ಖರ್ಚುವೆಚ್ಚಗಳನ್ನು ಹೇಗೆ ನಿಭಾಯಿಸಿದರು?

3 ಯೇಸು ದೀಕ್ಷಾಸ್ನಾನ ಪಡೆದ ಸ್ವಲ್ಪ ಸಮಯದಲ್ಲೇ ಒಂದು ಕೆಲಸವನ್ನು ಆರಂಭಿಸಿದನು.  ಅದು ಇಡೀ ಪ್ರಪಂಚಕ್ಕೆ ವಿಸ್ತರಣೆಯಾಗಲಿತ್ತು. (ಲೂಕ 3:21-23; 4:14, 15, 43) ಆತನ ಮರಣದ ನಂತರ ಈ ಸಾರುವ ಕೆಲಸವನ್ನು ವಿಸ್ತರಿಸುವುದರಲ್ಲಿ ಆತನ ಅಪೊಸ್ತಲರು ನೇತೃತ್ವವಹಿಸಿದರು. (ಅ. ಕಾ. 5:42; 6:7) ಫಿಲಿಪ್ಪನಂತೆ ಕೆಲವು ಕ್ರೈಸ್ತರು ಪ್ಯಾಲಸ್ತೀನಿನಲ್ಲಿ ಸೌವಾರ್ತಿಕರಾಗಿ ಮತ್ತು ಮಿಷನರಿಗಳಾಗಿ ಸೇವೆಮಾಡಿದರು. (ಅ. ಕಾ. 8:5, 40; 21:8) ಪೌಲ ಮತ್ತು ಇತರರು ಬಹಳ ದೂರದೂರದ ಸ್ಥಳಗಳಿಗೆ ಹೋಗಿ ಸೇವೆಮಾಡಿದರು. (ಅ. ಕಾ. 13:2-4; 14:26; 2 ಕೊರಿಂ. 1:19) ಸಿಲ್ವಾನ (ಸೀಲ), ಮಾರ್ಕ ಮತ್ತು ಲೂಕ ಕಾರ್ಯದರ್ಶಿಗಳಾಗಿ ಅಥವಾ ಲೇಖಕರಾಗಿ ಕೆಲಸಮಾಡಿದರು. (1 ಪೇತ್ರ 5:12) ಇಂಥ ನಂಬಿಗಸ್ತ ಸಹೋದರರೊಂದಿಗೆ ಕ್ರೈಸ್ತ ಸಹೋದರಿಯರು ಕೂಡ ಶ್ರಮಿಸಿದರು. (ಅ. ಕಾ. 18:26; ರೋಮ. 16:1, 2) ಇಂಥವರ ರೋಚಕ ಅನುಭವಗಳಿಂದ ತುಂಬಿರುವ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳನ್ನು ಓದುವಾಗ ಮೈನವಿರೇಳುತ್ತದೆ. ಅಷ್ಟೇ ಅಲ್ಲ ಯೆಹೋವನು ತನ್ನ ಸೇವಕರನ್ನು ಮರೆಯುವುದಿಲ್ಲ ಎಂದೂ ಅವು ತೋರಿಸುತ್ತವೆ.

4 ಒಂದನೇ ಶತಮಾನದಲ್ಲಿದ್ದ ಪೂರ್ಣಸಮಯದ ಸೇವಕರಿಗೆ ತಮ್ಮ ಖರ್ಚುವೆಚ್ಚಗಳನ್ನು ನಿಭಾಯಿಸಲು ಯಾವ ಸಹಾಯ ಸಿಕ್ಕಿತು? ಕೆಲವೊಮ್ಮೆ ಜೊತೆ ಕ್ರೈಸ್ತರು ಅತಿಥಿಸತ್ಕಾರವನ್ನು, ಇತರ ಸಹಾಯವನ್ನು ಮಾಡುತ್ತಿದ್ದರು. ಆದರೆ ಅಂಥ ಸಹಾಯವನ್ನು ಕೊಡಲೇಬೇಕೆಂದು ಪೂರ್ಣಸಮಯದ ಸೇವಕರು ಯಾರ ಮೇಲೂ ಅಧಿಕಾರ ಚಲಾಯಿಸಲಿಲ್ಲ. (1 ಕೊರಿಂ. 9:11-15) ಕ್ರೈಸ್ತರು ವೈಯಕ್ತಿಕವಾಗಿ ಮತ್ತು ಸಭೆಯಾಗಿ ಮನಸಾರೆ ಸಹಾಯಮಾಡಿದರು. (ಅಪೊಸ್ತಲರ ಕಾರ್ಯಗಳು 16:14, 15; ಫಿಲಿಪ್ಪಿ 4:15-18 ಓದಿ.) ಪೌಲ ಮತ್ತವನ ಸಂಚರಣಾ ಸಂಗಡಿಗರು ತಮ್ಮ ಖರ್ಚುವೆಚ್ಚಗಳನ್ನು ನಿಭಾಯಿಸಲು ಅರೆಕಾಲಿಕ ಕೆಲಸವನ್ನೂ ಮಾಡುತ್ತಿದ್ದರು.

ಆಧುನಿಕ ದಿನದ ಪೂರ್ಣಸಮಯದ ಸೇವಕರು

5. ಒಂದು ದಂಪತಿ ತಮ್ಮ ಪೂರ್ಣಸಮಯದ ಸೇವೆಯ ಬಗ್ಗೆ ಏನು ಹೇಳುತ್ತಾರೆ?

5 ಇಂದು ಕೂಡ ಅನೇಕರು ಪೂರ್ಣಸಮಯದ ಸೇವೆಯ ನಾನಾ ಕ್ಷೇತ್ರಗಳಲ್ಲಿ ಶ್ರಮಪಟ್ಟು ದುಡಿಯುತ್ತಿದ್ದಾರೆ. (“ಪೂರ್ಣಸಮಯದ ಸೇವೆಯ ನಾನಾ ಕ್ಷೇತ್ರಗಳು” ಚೌಕ ನೋಡಿ.) ಅವರು ಆರಿಸಿಕೊಂಡಿರುವ ಈ ಜೀವನವೃತ್ತಿಯ ಬಗ್ಗೆ ಅವರಿಗೆ ಹೇಗನಿಸುತ್ತದೆ? ನೀವು ಅವರಿಗೇ ಈ ಪ್ರಶ್ನೆ ಕೇಳಿದರೆ ನಿಮಗೆ ಪ್ರೋತ್ಸಾಹ ತುಂಬುವ ಉತ್ತರ ಸಿಗಬಹುದು. ಒಬ್ಬ ಸಹೋದರನ ಉದಾಹರಣೆ ಗಮನಿಸಿ. ಅವರು ರೆಗ್ಯುಲರ್‌ ಪಯನೀಯರರಾಗಿ, ವಿಶೇಷ ಪಯನೀಯರರಾಗಿ, ಮಿಷನರಿಯಾಗಿ ಸೇವೆಮಾಡಿದ್ದಾರೆ. ಈಗ ಬೇರೊಂದು ದೇಶದಲ್ಲಿ ಬೆತೆಲ್‌ ಸೇವೆ ಮಾಡುತ್ತಿದ್ದಾರೆ. ಅವರನ್ನುವುದು: “ನಾನು 18ನೇ ಪ್ರಾಯದವನಾಗಿದ್ದಾಗ ಒಂದು ಗೊಂದಲದಲ್ಲಿದ್ದೆ. ವಿಶ್ವವಿದ್ಯಾನಿಲಯದ ತರಬೇತಿ ಪಡೆಯುವುದಾ? ಪೂರ್ಣಕಾಲಿಕ ಉದ್ಯೋಗ ಮಾಡುವುದಾ? ಪಯನೀಯರ್‌ ಸೇವೆ ಮಾಡುವುದಾ? ಒಂದೂ ಗೊತ್ತಾಗುತ್ತಿರಲಿಲ್ಲ. ಪೂರ್ಣಸಮಯದ ಸೇವೆಯನ್ನು ಆರಿಸಿಕೊಂಡೆ. ಇದು ನಾನು ಜೀವನದಲ್ಲಿ ಮಾಡಿದ ಅತ್ಯುತ್ತಮ ನಿರ್ಣಯ. ಅನುಭವದಿಂದ ಹೇಳಬಲ್ಲೆ ಏನೆಂದರೆ, ಪೂರ್ಣಸಮಯ ಸೇವೆಮಾಡಲು ನಾವು ಮಾಡುವ ತ್ಯಾಗಗಳನ್ನು ಯೆಹೋವನು ಖಂಡಿತ ಮರೆಯುವುದಿಲ್ಲ. ಆತನು ನನಗೆ ಕೊಟ್ಟ ಪ್ರತಿಭೆ, ಸಾಮರ್ಥ್ಯಗಳನ್ನು ಈ ಸೇವೆಯಲ್ಲಿ ಅತ್ಯುತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗಿದೆ. ಒಂದುವೇಳೆ ಲೋಕದ ಜೀವನವೃತ್ತಿ ಆರಿಸಿಕೊಂಡಿದ್ದಿದ್ದರೆ ಖಂಡಿತ ಇದು ಸಾಧ್ಯವಾಗುತ್ತಿರಲಿಲ್ಲ.” ಅವರ ಪತ್ನಿ ಹೇಳುವುದು: “ಪ್ರತಿಯೊಂದು ನೇಮಕ ನನ್ನ ವ್ಯಕ್ತಿತ್ವವನ್ನು ಇನ್ನಷ್ಟು ಉತ್ತಮಗೊಳಿಸಲು ಸಹಾಯಮಾಡಿದೆ. ನಾವು ಪದೇ ಪದೇ ಯೆಹೋವನ ಸಂರಕ್ಷಣೆ ಮತ್ತು ಮಾರ್ಗದರ್ಶನವನ್ನು ಅನುಭವಿಸಿದ್ದೇವೆ. ನಮಗೆ ಏನು ಅನುಕೂಲ, ಸುಲಭವೋ ಅದನ್ನು ಮಾಡುವುದರಲ್ಲೇ ನಾವು ತೃಪ್ತರಾಗಿರುತ್ತಿದ್ದರೆ ಖಂಡಿತ ಇದನ್ನು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ. ಪೂರ್ಣಸಮಯದ ಸೇವೆಮಾಡಲು ಯೆಹೋವನು ನಮಗೆ ಕೊಟ್ಟಿರುವ ಅವಕಾಶಕ್ಕಾಗಿ ನಾವು ಪ್ರತಿದಿನ ಆತನಿಗೆ ಧನ್ಯವಾದ ಹೇಳುತ್ತೇವೆ.” ನಿಮ್ಮ ಜೀವನ ಕೂಡ ಹೀಗಿರಬೇಕು ಎಂದು ನೀವು ಬಯಸುತ್ತೀರಾ?

6. ನಾವು ಮಾಡುವ ಸೇವೆಯ ಬಗ್ಗೆ ಯೆಹೋವನಿಗೆ ಯಾವ ಭಾವನೆಯಿದೆ ಎಂಬ ಭರವಸೆ ನಮಗಿರಬಲ್ಲದು?

6 ಕೆಲವರಿಗೆ ತಮ್ಮ ಪರಿಸ್ಥಿತಿಗಳಿಂದಾಗಿ ಪೂರ್ಣಸಮಯದ ಸೇವೆಮಾಡಲು ಆಗದೇ ಇರಬಹುದು. ಆದರೆ ಅವರ ಪೂರ್ಣಪ್ರಾಣದ ಸೇವೆಯನ್ನು ಯೆಹೋವನು ಅಮೂಲ್ಯವೆಂದು ಎಣಿಸುತ್ತಾನೆ ಎಂಬ ಭರವಸೆ ನಮಗಿದೆ. ಫಿಲೆಮೋನನಿಗೆ ಬರೆದ ಪತ್ರದಲ್ಲಿ ಪೌಲನು ಕೊಲೊಸ್ಸೆ ಸಭೆಯ ಕೆಲವರನ್ನು ಹೆಸರಿಸಿದ್ದಾನೆ. (ಫಿಲೆಮೋನ 1-3 ಓದಿ.) ಇವರ ಮತ್ತು ಸಭೆಯ ಉಳಿದವರ ಬಗ್ಗೆ ಸ್ವಲ್ಪ ಯೋಚಿಸಿ. ಅವರ ಸೇವೆಯನ್ನು ಪೌಲನು ಮಾನ್ಯಮಾಡಿದನು. ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನು ಕೂಡ ಮಾನ್ಯಮಾಡಿದನು. ನಿಮ್ಮ ಸೇವೆಯನ್ನು ಕೂಡ ಆತನು ಮಾನ್ಯಮಾಡುತ್ತಾನೆ. ನಿಮಗೆ ಪೂರ್ಣಸಮಯದ ಸೇವೆ ಮಾಡಲಾಗದಿದ್ದರೂ ಪೂರ್ಣಸಮಯದ ಸೇವಕರನ್ನು ಬೆಂಬಲಿಸಲು ನೀವೇನು ಮಾಡಬಲ್ಲಿರಿ?

ಪಯನೀಯರರಿಗೆ ಸಹಾಯ

7, 8. (ಎ) ಪಯನೀಯರರ ಸೇವೆಯಲ್ಲಿ ಏನೆಲ್ಲ ಒಳಗೂಡಿದೆ? (ಬಿ) ಪಯನೀಯರರಿಗೆ ಸಭೆಯವರು ಹೇಗೆ ನೆರವಾಗಬಲ್ಲರು?

7 ಒಂದನೇ ಶತಮಾನದ ಸೌವಾರ್ತಿಕರಂತೆ ಇಂದಿನ ಹುರುಪಿನ ಪಯನೀಯರರು ಸಹ ಸಭೆಗೆ ಪ್ರೋತ್ಸಾಹದ ಚಿಲುಮೆಯಾಗಿದ್ದಾರೆ. ಹೆಚ್ಚಿನವರು ಪ್ರತಿ ತಿಂಗಳು 70 ತಾಸುಗಳನ್ನು ಸೇವೆಯಲ್ಲಿ ಕಳೆಯುತ್ತಾರೆ. ನೀವು ಅವರಿಗೆ ಹೇಗೆ ಸಹಾಯಮಾಡಬಲ್ಲಿರಿ?

 8 ಶಾರಿ ಎಂಬ ಪಯನೀಯರ್‌ ಸಹೋದರಿಯ ಮಾತು ಹೀಗಿದೆ: “ಪಯನೀಯರರು ಪ್ರತಿದಿನ ಸೇವೆಗೆ ಹೋಗುತ್ತಾರೆ, ಅವರಿಗೆ ತುಂಬ ಮನೋಸ್ಥೈರ್ಯ ಇದೆ ಎಂದಮಾತ್ರಕ್ಕೆ ಅವರಿಗೆ ಪ್ರೋತ್ಸಾಹದ ಅಗತ್ಯವಿಲ್ಲ ಎಂದಲ್ಲ. ಅವರಿಗೂ ಪ್ರೋತ್ಸಾಹ ಬೇಕು.” (ರೋಮ. 1:11, 12) ಕೆಲವು ವರ್ಷ ಪಯನೀಯರ್‌ ಸೇವೆಮಾಡಿದ ಇನ್ನೊಬ್ಬ ಸಹೋದರಿ ತಮ್ಮ ಸಭೆಯಲ್ಲಿರುವ ಪಯನೀಯರರ ಬಗ್ಗೆ ಹೀಗನ್ನುತ್ತಾರೆ: “ಅವರು ಯಾವಾಗಲೂ ಶ್ರಮಪಟ್ಟು ಸೇವೆಮಾಡುತ್ತಾರೆ. ಇತರರು ತಮ್ಮ ಕಾರಿನಲ್ಲಿ ಸೇವೆಗೆ ಕರೆದುಕೊಂಡುಹೋದರೆ, ಊಟಕ್ಕೆ ಕರೆದರೆ, ಪೆಟ್ರೋಲ್‌ ಖರ್ಚಿಗೆಂದು ಸ್ವಲ್ಪ ಹಣ ಕೊಟ್ಟರೆ ಅಥವಾ ಇನ್ನಿತರ ವಿಧದ ಹಣಸಹಾಯ ಮಾಡಿದರೆ ಸಂತೋಷದಿಂದ ಸ್ವೀಕರಿಸುತ್ತಾರೆ. ಹೀಗೆ ಸಹಾಯ ಮಾಡುವುದರಿಂದ ಅವರ ಬಗ್ಗೆ ನಿಮಗೆ ನಿಜವಾಗಲೂ ಕಾಳಜಿ ಇದೆಯೆಂದು ತೋರಿಸುತ್ತೀರಿ.”

9, 10. ತಮ್ಮ ಸಭೆಯಲ್ಲಿರುವ ಪಯನೀಯರರಿಗೆ ಕೆಲವರು ಹೇಗೆ ಸಹಾಯ ನೀಡಿದ್ದಾರೆ?

9 ಪಯನೀಯರರ ಜೊತೆ ಸೇವೆಮಾಡಿ ಅವರಿಗೆ ಸಹಾಯ ಮಾಡಲು ಬಯಸುತ್ತೀರಾ? ಬಾಬೀ ಎಂಬ ಹೆಸರಿನ ಪಯನೀಯರ್‌ ಸಹೋದರಿ “ನಮಗೆ ವಾರ ಮಧ್ಯದ ದಿನಗಳಲ್ಲಿ ಸೇವೆಗೆ ಸಂಗಡಿಗರು ಬೇಕು” ಎಂದು ತುಂಬ ವಿನಂತಿಸಿಕೊಂಡರು. ಅದೇ ಸಭೆಯ ಇನ್ನೊಬ್ಬ ಸಹೋದರಿ “ಮಧ್ಯಾಹ್ನದ ನಂತರ ಸೇವೆಗೆ ಹೋಗಲು ಯಾರೂ ಸಿಗುವುದಿಲ್ಲ” ಎನ್ನುತ್ತಾರೆ. ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆಸಲ್ಲಿಸುತ್ತಿರುವ ಸಹೋದರಿಯೊಬ್ಬರು ತಮ್ಮ ಪಯನೀಯರ್‌ ಸೇವೆಯ ನೆನಪಿನ ಬುತ್ತಿ ಬಿಚ್ಚಿಡುತ್ತಾ ಹೀಗೆ ಹೇಳುತ್ತಾರೆ: “ಕಾರ್‌ ಇದ್ದ ಒಬ್ಬ ಸಹೋದರಿ ನನಗೆ ‘ನಿನ್ನ ಜೊತೆ ಸೇವೆಗೆ ಹೋಗಲು ಯಾರೂ ಇಲ್ಲದಿದ್ದರೆ ನನಗೊಂದು ಫೋನ್‌ ಮಾಡು. ಯಾವಾಗ ಬೇಕಾದರೂ ನಿನ್ನ ಜೊತೆ ಬರುತ್ತೇನೆ’ ಎಂದು ಹೇಳಿದ್ದರು. ಅವರ ಈ ಸಹಾಯ ನನಗೆ ಪಯನೀಯರ್‌ ಸೇವೆ ಮುಂದುವರಿಸಿಕೊಂಡು ಹೋಗಲು ತುಂಬ ಸಹಾಯಮಾಡಿತು.” ಶಾರಿ ಎಂಬ ಸಹೋದರಿಯ ಗಮನಕ್ಕೆ ಬಂದ ಒಂದು ವಿಷಯದ ಬಗ್ಗೆ ಹೀಗನ್ನುತ್ತಾರೆ: “ಅವಿವಾಹಿತರಾದ ಮತ್ತು ವಿವಾಹ ಸಂಗಾತಿಗಳಿಲ್ಲದ ಪಯನೀಯರರು ಸೇವೆ ಮುಗಿದ ಮೇಲೆ ಒಂಟಿಯಾಗಿರುತ್ತಾರೆ. ಅಂಥ ಸಹೋದರ ಸಹೋದರಿಯರನ್ನು ಆಗಾಗ್ಗೆ ನಿಮ್ಮ ಕುಟುಂಬ ಆರಾಧನೆಗೆ ಕರೆಯಬಹುದು. ಅವರನ್ನು ಇತರ ಚಟುವಟಿಕೆಗಳಲ್ಲಿ ಸೇರಿಸಿ. ಇದೆಲ್ಲ ಅವರಿಗೆ ತಮ್ಮ ಮನೋಸ್ಥೈರ್ಯ ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.”

10 ಸುಮಾರು 50 ವರ್ಷಗಳಿಂದ ಪೂರ್ಣಸಮಯದ ಸೇವೆಯಲ್ಲಿರುವ ಸಹೋದರಿಯೊಬ್ಬರು ಇತರ ಒಂಟಿ ಸಹೋದರಿಯರೊಟ್ಟಿಗೆ ಪಯನೀಯರ್‌ ಸೇವೆಮಾಡಿದ ತಮ್ಮ ಅನುಭವವನ್ನು ಮೆಲುಕುಹಾಕುತ್ತಾ ಹೀಗನ್ನುತ್ತಾರೆ: “ನಮ್ಮ ಹಿರಿಯರು ಕೆಲವು ತಿಂಗಳಿಗೊಮ್ಮೆ ಪಯನೀಯರರನ್ನು ಭೇಟಿ ಮಾಡುತ್ತಿದ್ದರು. ನಮ್ಮ ಆರೋಗ್ಯದ ಬಗ್ಗೆ, ಉದ್ಯೋಗದ ಬಗ್ಗೆ ವಿಚಾರಿಸುತ್ತಿದ್ದರು. ಏನಾದರೂ ಸಮಸ್ಯೆ ಇದೆಯಾ ಎಂದು ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರಿಗೆ ನಿಜವಾಗಲೂ ನಮ್ಮ ಮೇಲೆ ತುಂಬ ಕಾಳಜಿ ಇತ್ತು. ನಮಗೆ ಯಾವ ಸಹಾಯದ ಅಗತ್ಯವಿದೆ ಎಂದು ತಿಳಿದುಕೊಳ್ಳಲು ನಾವಿರುವ ಅಪಾರ್ಟ್‍ಮೆಂಟ್‌ಗೇ ಖುದ್ದಾಗಿ ಬಂದು ಭೇಟಿಯಾಗುತ್ತಿದ್ದರು.” ಈ ಹಿರಿಯರು ಪೌಲನಿಗೆ ಎಫೆಸದಲ್ಲಿ ಸಹಾಯಮಾಡಿದ ಕುಟುಂಬದ ಯಜಮಾನನಂತಿದ್ದಾರೆ.  ಅವನ ಸಹಾಯವನ್ನು ಪೌಲನು ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಂಡನು.—2 ತಿಮೊ. 1:18.

11. ವಿಶೇಷ ಪಯನೀಯರ್‌ ಸೇವೆಯಲ್ಲಿ ಏನು ಒಳಗೂಡಿದೆ?

11 ಕೆಲವೊಂದು ಸಭೆಗಳಲ್ಲಿ ವಿಶೇಷ ಪಯನೀಯರರಿದ್ದಾರೆ. ಇವರು ಆ ಸಭೆಗಳಿಗೆ ವರದಾನ ಎಂದೇ ಹೇಳಬಹುದು. ಇವರಲ್ಲಿ ಹೆಚ್ಚಿನವರು ಪ್ರತಿ ತಿಂಗಳು 130 ತಾಸುಗಳನ್ನು ಸೇವೆಯಲ್ಲಿ ಕಳೆಯುತ್ತಾರೆ. ಸೇವೆ ಮತ್ತು ಬೇರೆಬೇರೆ ರೀತಿಯಲ್ಲಿ ಇತರರಿಗೆ ಸಹಾಯ ಮಾಡುವುದರಲ್ಲಿ ಇವರು ಸಮಯ ವ್ಯಯಿಸುವುದರಿಂದ ಉದ್ಯೋಗಕ್ಕೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಇವರು ತಮ್ಮ ಸೇವೆಯ ಮೇಲೆ ಹೆಚ್ಚು ಗಮನಹರಿಸಲು ಸಾಧ್ಯವಾಗುವಂತೆ ಬ್ರಾಂಚ್‌ ಆಫೀಸ್‌ ಚಿಕ್ಕ ಮೊತ್ತದ ಭತ್ಯ ನೀಡುತ್ತದೆ.

12. ವಿಶೇಷ ಪಯನೀಯರರಿಗೆ ಹಿರಿಯರು ಮತ್ತು ಇತರರು ಹೇಗೆ ಸಹಾಯ ಮಾಡಬಲ್ಲರು?

12 ವಿಶೇಷ ಪಯನೀಯರರಿಗೆ ಹೇಗೆ ಸಹಾಯಮಾಡಬಲ್ಲೆವು? ಅನೇಕ ಪಯನೀಯರರ ಸಂಪರ್ಕದಲ್ಲಿರುವ ಬ್ರಾಂಚ್‌ ಆಫೀಸೊಂದರ ಹಿರಿಯರೊಬ್ಬರು ಹೇಳುವುದು: “ಹಿರಿಯರು ಪಯನೀಯರರ ಹತ್ತಿರ ಮಾತಾಡಿ ಅವರ ಸ್ಥಿತಿಗತಿಗಳನ್ನು ತಿಳಿದುಕೊಂಡು ಅವರಿಗೆ ಹೇಗೆ ಸಹಾಯ ಮಾಡಬೇಕೆಂದು ನಿರ್ಧರಿಸಬೇಕು. ವಿಶೇಷ ಪಯನೀಯರರಿಗೆ ಭತ್ಯ ಸಿಗುವುದರಿಂದ ಅವರಿಗೆ ಎಲ್ಲಾ ಅನುಕೂಲತೆ ಇದೆ ಎಂದು ಕೆಲವು ಸಾಕ್ಷಿಗಳು ನೆನಸುತ್ತಾರೆ. ಆದರೆ ನಿಜ ಸಂಗತಿಯೇನೆಂದರೆ ಅವರಿಗೆ ಅನೇಕ ವಿಧಗಳಲ್ಲಿ ನೆರವಿನ ಅಗತ್ಯವಿದೆ. ಇದನ್ನು ಸ್ಥಳೀಯ ಸಹೋದರರು ನೀಡಬಹುದು.” ರೆಗ್ಯುಲರ್‌ ಪಯನೀಯರರ ಹಾಗೇ ವಿಶೇಷ ಪಯನೀಯರರಿಗೂ ಸೇವೆಗೆ ಹೋಗಲು ಸಂಗಡಿಗರು ಬೇಕಾಗುತ್ತಾರೆ. ಆ ವಿಧದಲ್ಲೂ ನೀವು ಸಹಾಯಮಾಡಬಹುದಾ?

ಸರ್ಕಿಟ್‌ ಮೇಲ್ವಿಚಾರಕರಿಗೆ ಸಹಾಯ

13, 14. (ಎ) ಸರ್ಕಿಟ್‌ ಮೇಲ್ವಿಚಾರಕರ ವಿಷಯದಲ್ಲಿ ನಾವೇನನ್ನು ಮನಸ್ಸಿನಲ್ಲಿಡಬೇಕು? (ಬಿ) ಸರ್ಕಿಟ್‌ ಕೆಲಸದಲ್ಲಿರುವವರಿಗೆ ನೆರವಾಗಲು ನೀವೇನು ಮಾಡಬಹುದೆಂದು ನೆನಸುತ್ತೀರಿ?

13 ಸರ್ಕಿಟ್‌ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು ಆಧ್ಯಾತ್ಮಿಕವಾಗಿ ಬಲಿಷ್ಠರು, ಪ್ರೋತ್ಸಾಹ ನೀಡುವವರು ಎಂದೇ ಎಣಿಸಲಾಗುತ್ತದೆ. ಇದು ನಿಜ. ಆದರೆ ಅವರಿಗೂ ಪ್ರೋತ್ಸಾಹ, ಸೇವೆಗೆ ಸಂಗಡಿಗರು, ಹಿತಮಿತವಾದ ವಿನೋದವಿಹಾರ ಬೇಕು. ಅವರು ಕಾಯಿಲೆಬೀಳಬಹುದು ಅಥವಾ ಆಸ್ಪತ್ರೆಗೆ ಸೇರುವ ಪರಿಸ್ಥಿತಿ ಬರಬಹುದು. ಬಹುಶಃ ಶಸ್ತ್ರಚಿಕಿತ್ಸೆ ಅಥವಾ ಇನ್ಯಾವುದೋ ದೈಹಿಕ ಚಿಕಿತ್ಸೆಯ ಅಗತ್ಯಬೀಳಬಹುದು. ಆಗ ಸ್ಥಳೀಯ ಸಭೆಯ ಸಹೋದರ ಸಹೋದರಿಯರು ಅವರಿಗೆ ಬೇಕಾದ ಸಹಾಯ ನೀಡಿದರೆ ಮತ್ತು ವೈಯಕ್ತಿಕ ಆಸಕ್ತಿ ತೋರಿಸಿದರೆ ಅವರಿಗೆ ಖುಷಿ ಆಗುತ್ತದೆ. ಪೌಲ ಮತ್ತು ಅವನ ಸಂಚರಣಾ ಸಂಗಡಿಗರಿಗೆ “ಪ್ರಿಯ ವೈದ್ಯನಾದ ಲೂಕ” (ಅಪೊಸ್ತಲರ ಕಾರ್ಯಗಳು ಪುಸ್ತಕದ ಲೇಖಕ) ತೋರಿಸಿದ ಕಾಳಜಿಯ ಬಗ್ಗೆ ಸ್ವಲ್ಪ ಯೋಚಿಸಿ.—ಕೊಲೊ. 4:14; ಅ. ಕಾ. 20:5–21:18.

14 ಸರ್ಕಿಟ್‌ ಮೇಲ್ವಿಚಾರಕರಿಗೆ ಮತ್ತು ಅವರ ಪತ್ನಿಯರಿಗೆ ಆಪ್ತ ಸ್ನೇಹಿತರ ಅಗತ್ಯವಿದೆ. ಇಂಥ ಆಪ್ತ ಸ್ನೇಹಕ್ಕೆ ಬೆಲೆಕೊಡುತ್ತಾರೆ ಸಹ. ಸರ್ಕಿಟ್‌ ಮೇಲ್ವಿಚಾರಕರೊಬ್ಬರು ಹೀಗೆ ಬರೆದರು: “ನನಗೆ ಯಾವಾಗ ಪ್ರೋತ್ಸಾಹದ ಅಗತ್ಯವಿದೆ ಎನ್ನುವುದು ನನ್ನ ಸ್ನೇಹಿತರಿಗೆ ಗೊತ್ತಾಗಿಬಿಡುತ್ತದೆ. ತುಂಬ ವಿವೇಚನೆಯಿಂದ ಪ್ರಶ್ನೆಗಳನ್ನು ಕೇಳುತ್ತಾರೆ. ಇದರಿಂದ ನನಗಿರುವ ಚಿಂತೆಗಳ ಬಗ್ಗೆ ಮನಬಿಚ್ಚಿ ಮಾತಾಡಲು ಸಹಾಯವಾಗುತ್ತದೆ. ನಾನು ಮಾತಾಡುವಾಗ ಕಿವಿಗೊಡುತ್ತಾರೆ. ಅದೇ ನನಗೆ ದೊಡ್ಡ ಸಹಾಯ.” ಸಹೋದರ ಸಹೋದರಿಯರು ತೋರಿಸುವ ವೈಯಕ್ತಿಕ ಆಸಕ್ತಿಯನ್ನು ಸರ್ಕಿಟ್‌ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು ತುಂಬ ಮಾನ್ಯಮಾಡುತ್ತಾರೆ.

ಬೆತೆಲ್‌ ಕುಟುಂಬ ಸದಸ್ಯರಿಗೆ ಬೆಂಬಲ

15, 16. (ಎ) ಬೆತೆಲ್‌ ಕುಟುಂಬ ಸದಸ್ಯರು ಬೆತೆಲಿನಲ್ಲಿ ಮಾಡುವ ಸೇವೆ ಯಾವುದಕ್ಕೆ ಬೆಂಬಲ ನೀಡುತ್ತದೆ? (ಬಿ) ಅವರಿಗೆ ನಾವು ಹೇಗೆ ಬೆಂಬಲ ನೀಡಬಹುದು?

15 ಬೆತೆಲಿನಲ್ಲಿ ಸೇವೆಮಾಡುತ್ತಿರುವವರು ತಮ್ಮ ಬ್ರಾಂಚ್‌ ಆಫೀಸಿನ ಉಸ್ತುವಾರಿಯಲ್ಲಿರುವ ದೇಶಗಳಲ್ಲಿನ ರಾಜ್ಯದ ಕೆಲಸಕ್ಕೆ ಮಹತ್ವದ ಬೆಂಬಲ ನೀಡುತ್ತಾರೆ. ನಿಮ್ಮ ಸಭೆಯಲ್ಲಿ ಅಥವಾ ಸರ್ಕಿಟ್‍ನಲ್ಲಿ ಬೆತೆಲಿಗರು ಇರುವುದಾದರೆ ನೀವು ಅವರನ್ನು ಮನಸ್ಸಿನಲ್ಲಿಟ್ಟಿದ್ದೀರಿ ಎಂದು ಹೇಗೆ ತೋರಿಸುವಿರಿ?

16 ಅವರು ಕುಟುಂಬ ಮತ್ತು ಆಪ್ತಮಿತ್ರರನ್ನು ಬಿಟ್ಟು ಬೆತೆಲಿಗೆ ಬರುವುದರಿಂದ ಮನೆನೆನಪು ಕಾಡಬಹುದು. ಇಂಥ ಸಂದರ್ಭದಲ್ಲಿ ಇತರ ಬೆತೆಲಿಗರು ಮತ್ತು ಹೊಸ ಸಭೆಯಲ್ಲಿದ್ದವರು ಸ್ನೇಹಭಾವ ತೋರಿಸುವಾಗ ಅವರಿಗೆ ನೆಮ್ಮದಿ, ಖುಷಿ ತರುತ್ತದೆ. (ಮಾರ್ಕ 10:29, 30) ಸಾಮಾನ್ಯವಾಗಿ ಅವರ ಕೆಲಸದ ಕಾರ್ಯತಖ್ತೆಯಿಂದಾಗಿ ಪ್ರತಿವಾರ ಸಭಾಕೂಟಗಳನ್ನು ಹಾಜರಾಗಲು ಮತ್ತು ಕ್ಷೇತ್ರಸೇವೆಗೆ ಹೋಗಲು ಬಿಡುವು ಸಿಗುತ್ತದೆ. ಆದರೆ ಆಗಿಂದಾಗ್ಗೆ ಅವರಿಗೆ ಬೆತೆಲಿನಲ್ಲಿ ಹೆಚ್ಚಿನ ಕೆಲಸಗಳನ್ನು ನೇಮಿಸಲಾಗುತ್ತದೆ. ಇದನ್ನು ಸಭೆ ಅರ್ಥಮಾಡಿಕೊಂಡಾಗ ಮತ್ತು ಬೆತೆಲಿಗರನ್ನು, ಅವರ ಕೆಲಸವನ್ನು ಮಾನ್ಯಮಾಡುತ್ತಾರೆಂದು ತೋರಿಸುವಾಗ ಎಲ್ಲರಿಗೂ ಪ್ರಯೋಜನವಾಗುವುದು.—1 ಥೆಸಲೊನೀಕ 2:9 ಓದಿ.

ವಿದೇಶೀ ಕ್ಷೇತ್ರದಲ್ಲಿರುವ ಪೂರ್ಣಸಮಯದ ಸೇವಕರಿಗೆ ಸಹಾಯ

17, 18. ವಿದೇಶದಲ್ಲಿ ಸೇವೆಮಾಡುವವರಿಗೆ ಯಾವೆಲ್ಲ ನೇಮಕಗಳು ಸಿಗುತ್ತವೆ?

17 ವಿದೇಶದಲ್ಲಿ ಸೇವೆಮಾಡುವ ನೇಮಕವನ್ನು ಸ್ವೀಕರಿಸುವವರಿಗೆ ಅಲ್ಲಿನ ಆಹಾರಪದ್ಧತಿ, ಭಾಷೆ, ಆಚಾರವಿಚಾರ,  ಪರಿಸ್ಥಿತಿ ಇವೆಲ್ಲ ಅವರ ದೇಶದಲ್ಲಿದ್ದದಕ್ಕಿಂತ ತೀರ ಭಿನ್ನವಾಗಿರುತ್ತದೆ. ವಿದೇಶದಲ್ಲಿ ಸೇವೆಮಾಡುವವರಿಗೆ ಯಾವ ರೀತಿಯ ನೇಮಕಗಳಿರುತ್ತವೆ?

18 ಇವರಲ್ಲಿ ಕೆಲವರು ಮಿಷನರಿಗಳು. ವಿಶೇಷ ತರಬೇತಿ ಪಡೆದಿರುವ ಇವರು ಮುಖ್ಯವಾಗಿ ಸಾರುವ ಕೆಲಸದಲ್ಲಿ ತೊಡಗಿರುವುದರಿಂದ ಅನೇಕರು ಪ್ರಯೋಜನ ಪಡೆಯುತ್ತಾರೆ. ಮಿಷನರಿಗಳಿಗೆ ಬ್ರಾಂಚ್‌ ಆಫೀಸ್‌ ಸರಳ ವಸತಿವ್ಯವಸ್ಥೆಯ ಏರ್ಪಾಡು ಮಾಡುತ್ತದೆ ಮತ್ತು ಮೂಲಭೂತ ಅಗತ್ಯಗಳ ಖರ್ಚಿಗಾಗಿ ಭತ್ಯ ನೀಡುತ್ತದೆ. ವಿದೇಶದಲ್ಲಿ ಸೇವೆಮಾಡಲು ಹೋಗುವ ಇನ್ನು ಕೆಲವರಿಗೆ ಅಲ್ಲಿನ ಬ್ರಾಂಚ್‌ ಆಫೀಸಿನಲ್ಲಿ ಸೇವೆಸಲ್ಲಿಸುವ ನೇಮಕ ಸಿಗುತ್ತದೆ. ಅಥವಾ ಬ್ರಾಂಚ್‌ ಆಫೀಸ್‌ಗಳು, ಪ್ರಾದೇಶಿಕ ಭಾಷಾಂತರ ಕಛೇರಿಗಳು, ಸಮ್ಮೇಳನ ಹಾಲ್‌ಗಳು, ರಾಜ್ಯ ಸಭಾಗೃಹಗಳ ನಿರ್ಮಾಣದಲ್ಲಿ ನೆರವಾಗುವ ನೇಮಕ ಸಿಗುತ್ತದೆ. ಇವರಿಗೆ ಊಟ, ಸರಳ ವಸತಿವ್ಯವಸ್ಥೆ ಮತ್ತು ಇತರ ಸೌಕರ್ಯಗಳ ಏರ್ಪಾಡು ಮಾಡಿಕೊಡಲಾಗುತ್ತದೆ. ಬೆತೆಲ್‌ ಕುಟುಂಬ ಸದಸ್ಯರಂತೆ ಇವರು ಕೂಡ ನಿಯಮಿತವಾಗಿ ಕೂಟಗಳಿಗೆ ಹಾಜರಾಗುತ್ತಾರೆ ಮತ್ತು ಸೇವೆಗೆ ಹೋಗುತ್ತಾರೆ. ಹಾಗಾಗಿ ಅವರು ಹೋಗುವ ಸಭೆಗಳು ಬಹಳಷ್ಟು ಪ್ರಯೋಜನ ಪಡೆಯುತ್ತವೆ.

19. ವಿದೇಶೀ ಕ್ಷೇತ್ರದಲ್ಲಿ ಸೇವೆಮಾಡುವವರ ವಿಷಯದಲ್ಲಿ ನಾವೇನನ್ನು ಮನಸ್ಸಿನಲ್ಲಿಡಬೇಕು?

19 ಈ ಪೂರ್ಣಸಮಯದ ಸೇವಕರನ್ನು ನೀವು ಹೇಗೆ ಮನಸ್ಸಲ್ಲಿಟ್ಟುಕೊಳ್ಳಬಲ್ಲಿರಿ? ಸ್ಥಳೀಯ ಆಹಾರದ ರೂಢಿಯಿಲ್ಲದೇ ಇರುವುದರಿಂದ ಅವರಿಗೆ ಒಗ್ಗಿಕೊಳ್ಳಲು ಆರಂಭದಲ್ಲಿ ಕಷ್ಟವಾಗಬಹುದು. ಅವರನ್ನು ಊಟಕ್ಕೆ ಕರೆಯುವಾಗ ಇದನ್ನು ನೆನಪಿನಲ್ಲಿಡಿ. ಮೊದಲೇ ಅವರಿಗೆ ಯಾವ ರೀತಿಯ ಆಹಾರ ಒಗ್ಗುತ್ತದೆಂದು ಕೇಳಿ ಅಥವಾ ‘ಈ ಅಡುಗೆ ಮಾಡಿದರೆ ತಿನ್ನುತ್ತೀರಾ?’ ಅಂತ ಕೇಳಿ. ಅವರು ಸ್ಥಳೀಯ ಭಾಷೆ, ಆಚಾರವಿಚಾರಗಳನ್ನು ಕಲಿಯುವಾಗ ತಾಳ್ಮೆ ತೋರಿಸಿ. ನೀವು ಅವರೊಟ್ಟಿಗೆ ಮಾತಾಡುವಾಗ ಹೇಳಿದ್ದೆಲ್ಲ ಅವರಿಗೆ ಕೂಡಲೇ ಅರ್ಥ ಆಗದಿರಬಹುದು. ಅವರ ಉಚ್ಚಾರಣೆಯನ್ನು ಪ್ರೀತಿಯಿಂದ ತಿದ್ದಿರಿ. ಇದರಿಂದ ಅವರಿಗೆ ಬೇಜಾರಾಗುವುದಿಲ್ಲ. ಏಕೆಂದರೆ ಅವರಿಗೆ ಕಲಿಯುವ ಮನಸ್ಸಿರುತ್ತದೆ.

20. ನಾವು ಪೂರ್ಣಸಮಯದ ಸೇವಕರನ್ನು ಮತ್ತು ಅವರ ಹೆತ್ತವರನ್ನು ಮನಸ್ಸಲ್ಲಿಡುವ ಒಂದು ಅತ್ಯುತ್ತಮ ವಿಧ ಯಾವುದು?

20 ವರ್ಷಗಳು ಉರುಳಿದಂತೆ ಪೂರ್ಣಸಮಯದ ಸೇವಕರಿಗೂ ವಯಸ್ಸಾಗುತ್ತಾ ಹೋಗುತ್ತದೆ. ಅವರ ಹೆತ್ತವರಿಗೂ ವಯಸ್ಸಾಗುತ್ತಾ ಹೋಗುತ್ತದೆ. ಈ ಹೆತ್ತವರು ಒಂದುವೇಳೆ ಸಾಕ್ಷಿಗಳಾಗಿರುವಲ್ಲಿ ತಮ್ಮ ಮಕ್ಕಳು ಪೂರ್ಣಸಮಯದ ಸೇವೆಯನ್ನು ಬಿಡಬಾರದು ಎನ್ನುವುದೇ ಅವರ ಮನದಾಳದ ಆಸೆಯಾಗಿರುತ್ತದೆ. (3 ಯೋಹಾ. 4) ತಮ್ಮ ಹೆತ್ತವರ ಆರೈಕೆಮಾಡಬೇಕಾಗಿ ಬಂದಾಗ ಪೂರ್ಣಸಮಯದ ಸೇವಕರು ತಮ್ಮಿಂದಾದ ಎಲ್ಲವನ್ನೂ ಮಾಡುತ್ತಾರೆ ಮತ್ತು ಅವರಿಗೆ ಬೇಕಾದ ಸಹಾಯ ನೀಡಲು ಆದಷ್ಟು ಬಾರಿ ಅವರಿದ್ದಲ್ಲಿಗೆ ಹೋಗುತ್ತಾರೆ. ಆದರೂ ಮನೆಮಂದಿ ಈ ವೃದ್ಧ ಹೆತ್ತವರ ಆರೈಕೆ ಮಾಡುವ ಮೂಲಕ ಪೂರ್ಣಸಮಯದ ಸೇವಕರಿಗೆ ಬೆಂಬಲ ನೀಡಬಹುದು. ಪ್ರಪಂಚದಲ್ಲೇ ಅತೀ ಪ್ರಾಮುಖ್ಯ ಕೆಲಸದಲ್ಲಿ ಪೂರ್ಣಸಮಯದ ಸೇವಕರಿಗೆ ಮಹತ್ವದ ಜವಾಬ್ದಾರಿಗಳಿವೆ ಎನ್ನುವುದನ್ನು ನೆನಪಿನಲ್ಲಿಡಿ. (ಮತ್ತಾ. 28:19, 20) ಇಂಥ ಪೂರ್ಣಸಮಯದ ಸೇವಕರ ಹೆತ್ತವರಿಗೆ ಸಹಾಯದ ಅಗತ್ಯಬಿದ್ದರೆ ನೀವು ಅಥವಾ ನಿಮ್ಮ ಸಭೆ ಆ ಸಹಾಯ ಕೊಡಬಹುದಾ?

21. ಬೇರೆಯವರು ಕೊಡುವ ಸಹಾಯ ಮತ್ತು ಪ್ರೋತ್ಸಾಹದ ಬಗ್ಗೆ ಪೂರ್ಣಸಮಯದ ಸೇವಕರಿಗೆ ಹೇಗನಿಸುತ್ತದೆ?

21 ಪೂರ್ಣಸಮಯದ ಸೇವೆಯನ್ನು ಆರಿಸಿಕೊಳ್ಳುವವರು ಅದನ್ನು ಆರ್ಥಿಕ ಲಾಭಕ್ಕಾಗಿ ಅಲ್ಲ ಬದಲಾಗಿ ತಮ್ಮ ಸಮಯ, ಶಕ್ತಿಯನ್ನು ಯೆಹೋವನಿಗಾಗಿ ಮತ್ತು ಇತರರಿಗಾಗಿ ಕೊಡುವ ಉದ್ದೇಶದಿಂದ ಆರಿಸಿಕೊಳ್ಳುತ್ತಾರೆ. ನೀವು ಕೊಡುವ ಯಾವುದೇ ಸಹಾಯಕ್ಕೆ ಅವರು ಕೃತಜ್ಞರಾಗಿರುತ್ತಾರೆ. ವಿದೇಶದಲ್ಲಿ ಸೇವೆಮಾಡುತ್ತಿರುವ ಸಹೋದರಿಯೊಬ್ಬಳು ಹೀಗನ್ನುತ್ತಾಳೆ: “ಮೆಚ್ಚುಗೆ ಸೂಚಿಸುವ ಒಂದು ಚಿಕ್ಕ ಚೀಟಿಯಾದರೂ ಸರಿ, ಇತರರು ನಮ್ಮ ಬಗ್ಗೆ ಯೋಚಿಸುತ್ತಾರೆ ಮತ್ತು ನಾವು ಮಾಡುವ ಸೇವೆಯನ್ನು ನೋಡಿ ಸಂತೋಷಪಡುತ್ತಾರೆ ಎಂದು ಅದು ತೋರಿಸುತ್ತದೆ.” ಇಂಥದ್ದೇ ಕೃತಜ್ಞತಾಭಾವ ಅನೇಕ ಪೂರ್ಣಸಮಯದ ಸೇವಕರಿಗಿದೆ.

22. ಪೂರ್ಣಸಮಯದ ಸೇವೆಯ ಬಗ್ಗೆ ನಿಮಗೆ ಹೇಗನಿಸುತ್ತದೆ?

22 ಪೂರ್ಣಸಮಯದ ಸೇವೆ ತುಂಬ ಪ್ರತಿಫಲ ತರುವ ಜೀವನರೀತಿ. ಇದರಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ, ಇದು ಅನೇಕ ಸಂಗತಿಗಳನ್ನು ಕಲಿಸಿಕೊಡುತ್ತದೆ, ಸಂತೃಪ್ತಿ ನೀಡುತ್ತದೆ. ಮಾತ್ರವಲ್ಲ ನಿತ್ಯನಿರಂತರವಾಗಿ ಸಂತೋಷದಿಂದ ಮಾಡಬಹುದಾದ ಯೆಹೋವನ ಸೇವೆಗೆ ಇದು ಪೂರ್ವಸಿದ್ಧತೆ. ಇಂಥ ಸೇವೆ ದೇವರ ರಾಜ್ಯದಲ್ಲಿ ಯೆಹೋವನ ನಂಬಿಗಸ್ತ ಸೇವಕರೆಲ್ಲರ ಮುಂದಿದೆ. ನಾವೆಲ್ಲರೂ ಪೂರ್ಣಸಮಯದ ಸೇವಕರ ‘ನಂಬಿಗಸ್ತ ಕ್ರಿಯೆಯನ್ನು, ಪ್ರೀತಿಪೂರ್ವಕ ಪ್ರಯಾಸವನ್ನು ಎಡೆಬಿಡದೆ ಮನಸ್ಸಿನಲ್ಲಿಟ್ಟುಕೊಳ್ಳೋಣ.’—1 ಥೆಸ. 1:3.