ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು “ಎಟುಕಿಸಿಕೊಳ್ಳಲು” ಪ್ರಯತ್ನಿಸುತ್ತಿದ್ದೀರೊ?

ನೀವು “ಎಟುಕಿಸಿಕೊಳ್ಳಲು” ಪ್ರಯತ್ನಿಸುತ್ತಿದ್ದೀರೊ?

ಫ್ರಾನ್ಸಿಸ್‌ * ಗಾಬರಿಗೊಂಡಿದ್ದ, ಹೃದಯ ಡವಡವ ಎನ್ನುತ್ತಿತ್ತು. ಇಬ್ಬರು ಹಿರಿಯರು ಅವನ ಜೊತೆ ಮಾತಾಡಬೇಕೆಂದು ಹೇಳಿದ್ದರು. ಇತ್ತೀಚೆಗೆ ಈ ಹಿರಿಯರು ಸರ್ಕಿಟ್‌ ಮೇಲ್ವಿಚಾರಕರು ಸಭೆಗೆ ಬಂದು ಹೋದಾಗೆಲ್ಲ ಫ್ರಾನ್ಸಿಸ್‍ನೊಟ್ಟಿಗೆ ಮಾತಾಡುತ್ತಿದ್ದರು. ಸಭೆಯಲ್ಲಿ ಹೆಚ್ಚಿನ ಸುಯೋಗಗಳಿಗಾಗಿ ಅರ್ಹನಾಗಲು ಅವನು ಏನೇನು ಮಾಡಬೇಕೆಂದು ವಿವರಿಸುತ್ತಿದ್ದರು. ಆದರೆ ಇದು ತುಂಬ ಸಮಯದಿಂದ ನಡೆಯುತ್ತಿರುವುದರಿಂದ ತನ್ನನ್ನು ಹಿರಿಯನಾಗಿ ಮಾಡುತ್ತಾರೊ ಇಲ್ಲವೊ ಎಂದು ಫ್ರಾನ್ಸಿಸ್‌ಗೆ ಸಂಶಯ ಹುಟ್ಟಿತು. ಈಗ ಪುನಃ ಒಮ್ಮೆ ಸರ್ಕಿಟ್‌ ಮೇಲ್ವಿಚಾರಕರ ಭೇಟಿ ನಡೆದಿತ್ತು. ಈ ಸಲ ಹಿರಿಯರು ಏನು ಹೇಳುವರು ಎಂಬ ಚಿಂತೆ ಅವನನ್ನು ಕಾಡತೊಡಗಿತು.

ಹಿರಿಯರಲ್ಲೊಬ್ಬನು ಮಾತಾಡುತ್ತಿದ್ದಾಗ ಫ್ರಾನ್ಸಿಸ್‌ ಗಮನಕೊಟ್ಟು ಕೇಳಿದನು. ಆ ಸಹೋದರನು 1 ತಿಮೊಥೆಯ 3:1ಕ್ಕೆ ಸೂಚಿಸಿದನು. ನಂತರ, ಫ್ರಾನ್ಸಿಸ್‌ ಹಿರಿಯನಾಗಿ ನೇಮಕಗೊಂಡಿರುವ ಪತ್ರ ಹಿರಿಯ ಮಂಡಲಿಗೆ ಸಿಕ್ಕಿದೆಯೆಂದು ಹೇಳಿದನು. ಫ್ರಾನ್ಸಿಸ್‌ ಚಕಿತನಾಗಿ ತಟ್ಟನೆ ನೆಟ್ಟಗೆ ಕೂತು, “ಏನು ಹೇಳಿದಿರಿ?” ಎಂದು ಕೇಳಿದ. ಆ ಸಹೋದರ ಆ ಮಾತನ್ನು ಪುನಃ ಹೇಳಿದ. ಫ್ರಾನ್ಸಿಸ್‌ಗೆ ಖುಷಿ ಆಯಿತು, ಮುಖದಲ್ಲಿ ಮಂದಹಾಸ ಮೂಡಿತು. ತದನಂತರ, ಅವನು ಹಿರಿಯನಾಗಿ ನೇಮಕಗೊಂಡದ್ದರ ಬಗ್ಗೆ ಸಭೆಯಲ್ಲಿ ಪ್ರಕಟಣೆಯಾದಾಗ ಅಲ್ಲಿದ್ದವರ ಮುಖದಲ್ಲೂ ಸಂತೋಷ ಕಂಡುಬರುತ್ತಿತ್ತು.

ಸಭೆಯಲ್ಲಿ ಸುಯೋಗಗಳನ್ನು ಅಪೇಕ್ಷಿಸುವುದು ತಪ್ಪಾ? ಖಂಡಿತ ಇಲ್ಲ. 1 ತಿಮೊಥೆಯ 3:1ಕ್ಕನುಸಾರ “ಯಾವನಾದರೂ ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ ಅವನು ಒಳ್ಳೇ ಕಾರ್ಯವನ್ನು ಅಪೇಕ್ಷಿಸುವವನಾಗಿದ್ದಾನೆ.” ಈ ಪ್ರೋತ್ಸಾಹಕರ ಮಾತುಗಳನ್ನು ಅನೇಕ ಕ್ರೈಸ್ತ ಪುರುಷರು ಅನ್ವಯಿಸಿಕೊಂಡು, ಆಧ್ಯಾತ್ಮಿಕ ಪ್ರಗತಿ ಮಾಡಿ ಸಭೆಯಲ್ಲಿ ಸುಯೋಗಗಳಿಗಾಗಿ ಅರ್ಹರಾಗುತ್ತಾರೆ. ಫಲಿತಾಂಶವಾಗಿ ದೇವಜನರ ಮಧ್ಯೆ ಸಾವಿರಾರು ಮಂದಿ ಅರ್ಹ ಹಿರಿಯರು ಮತ್ತು ಶುಶ್ರೂಷಾ ಸೇವಕರು ಇದ್ದಾರೆ. ಆದರೆ ಸಭೆಗಳು ವೃದ್ಧಿಯಾಗುತ್ತಿರುವುದರಿಂದ ಇನ್ನಷ್ಟು ಮಂದಿ ಸಹೋದರರು ಎಟುಕಿಸಿಕೊಳ್ಳುವ ಅಗತ್ಯವಿದೆ. ಇದನ್ನು ಮಾಡುವ ಯೋಗ್ಯ ವಿಧ ಯಾವುದು? ಮೇಲ್ವಿಚಾರಕರಾಗಲು ಬಯಸುವವರು ಫ್ರಾನ್ಸಿಸ್‍ನ೦ತೆ ಅದರ ಬಗ್ಗೆಯೇ ಚಿಂತಿಸುತ್ತಾ ಇರಬೇಕಾ?

“ಎಟುಕಿಸಿಕೊಳ್ಳಲು ಪ್ರಯತ್ನಿಸು” ಅಂದರೆ ಅರ್ಥವೇನು?

ಬೈಬಲಿನಲ್ಲಿರುವ “ಎಟುಕಿಸಿಕೊಳ್ಳಲು ಪ್ರಯತ್ನಿಸು” ಎಂಬ ಪದಗುಚ್ಛವನ್ನು ಒಂದು ಗ್ರೀಕ್‌ ಕ್ರಿಯಾಪದದಿಂದ ಭಾಷಾಂತರಿಸಲಾಗಿದೆ. ಅದರ ಅರ್ಥ ಕಟ್ಟಾಸಕ್ತಿಯಿಂದ ಆಶಿಸು, ಕೈಚಾಚು ಎಂದಾಗಿದೆ. ಇದು, ಒಬ್ಬ ವ್ಯಕ್ತಿ ಮರದಿಂದ ರಸವತ್ತಾದ ಹಣ್ಣು ಕೀಳಲು ಕೈಚಾಚಿ ಪ್ರಯತ್ನಿಸುತ್ತಿರುವ ಚಿತ್ರವನ್ನು ಮನಸ್ಸಿಗೆ ತರುತ್ತದೆ. ಆದರೆ ಎಟುಕಿಸಿಕೊಳ್ಳಲು ಪ್ರಯತ್ನಿಸುವುದರ ಅರ್ಥ ಮೇಲ್ವಿಚಾರಕನಾಗಲು ದುರಾಶೆಯಿಂದ ಪ್ರಯತ್ನಿಸಬೇಕು  ಎಂದಲ್ಲ. ಯಾಕೆ? ಯಾಕೆಂದರೆ ಹಿರಿಯನಾಗಲು ಯಥಾರ್ಥವಾಗಿ ಆಸಕ್ತರಾಗಿರುವವರ ಗುರಿ ಹುದ್ದೆ ಗಿಟ್ಟಿಸಿಕೊಳ್ಳುವುದು ಅಲ್ಲ ಬದಲಾಗಿ “ಒಳ್ಳೇ ಕಾರ್ಯ” ಮಾಡುವುದೇ ಆಗಿರಬೇಕು.

ಈ ಒಳ್ಳೇ ಕಾರ್ಯಕ್ಕೆ ಸಂಬಂಧಪಟ್ಟ ಆವಶ್ಯಕತೆಗಳಲ್ಲಿ ಹೆಚ್ಚಿನವುಗಳು 1 ತಿಮೊಥೆಯ 3:2-7 ಮತ್ತು ತೀತ 1:5-9ರಲ್ಲಿದೆ. ಈ ವಚನಗಳಲ್ಲಿರುವ ಉನ್ನತ ಮಟ್ಟಗಳ ಬಗ್ಗೆ ತುಂಬ ಸಮಯದಿಂದ ಹಿರಿಯನಾಗಿರುವ ರೇಮಂಡ್ ಎಂಬವರು ವಿವರಿಸುವುದು: “ನಾನು ಆಂತರ್ಯದಲ್ಲಿ ಏನಾಗಿದ್ದೇನೊ ಅದು ನನಗೆ ಪ್ರಾಮುಖ್ಯ. ಭಾಷಣಕೊಡುವುದು, ಬೋಧಿಸುವುದು ಇವೆಲ್ಲ ಮುಖ್ಯ ಹೌದು. ಅಂದಮಾತ್ರಕ್ಕೆ ನಾನು ಮಿತಸ್ವಭಾವ, ಸ್ವಸ್ಥಬುದ್ಧಿ, ಅತಿಥಿಸತ್ಕಾರ, ನ್ಯಾಯಸಮ್ಮತತೆ ಇದೆಲ್ಲವನ್ನು ಅಲಕ್ಷಿಸಬಹುದೆಂದಲ್ಲ. ಅಥವಾ ನನ್ನ ಮೇಲೆ ಯಾವುದೇ ದೋಷಾರೋಪಣೆಯಿಲ್ಲದಂತೆ ನೋಡಿಕೊಳ್ಳುವುದು, ವ್ಯವಸ್ಥಿತನಾಗಿರುವುದು ಅಗತ್ಯವಿಲ್ಲ ಎಂದರ್ಥವಲ್ಲ. ಇವೆಲ್ಲವೂ ಬೇಕು.”

ಸಭೆಯಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ಕೈಜೋಡಿಸುವ ಮೂಲಕ “ಎಟುಕಿಸಿಕೊಳ್ಳಲು” ಪ್ರಯತ್ನಿಸಿ

ಒಳ್ಳೇ ಉದ್ದೇಶದಿಂದ ಎಟುಕಿಸಿಕೊಳ್ಳುತ್ತಿರುವ ಸಹೋದರನೊಬ್ಬನು ಯಾವುದೇ ರೀತಿಯ ಅಪ್ರಾಮಾಣಿಕತೆ ಹಾಗೂ ಅಶುದ್ಧ ನಡತೆಯಿಂದ ದೂರವಿರುವ ಮೂಲಕ ದೋಷಾರೋಪಣೆ ಇಲ್ಲದವನಾಗಿರುತ್ತಾನೆ. ಅವನು ಮಿತಸ್ವಭಾವದವನು, ಸ್ವಸ್ಥಬುದ್ಧಿಯುಳ್ಳವನು, ವ್ಯವಸ್ಥಿತನು, ನ್ಯಾಯಸಮ್ಮತನು ಆಗಿರುತ್ತಾನೆ. ಹಾಗಾಗಿ ಅವನು ಸಭೆಯಲ್ಲಿ ನಿರ್ದೇಶನ ಕೊಡುವಾಗ ಮತ್ತು ಜೊತೆ ಆರಾಧಕರ ಸಮಸ್ಯೆಗಳ ವಿಷಯದಲ್ಲಿ ಸಹಾಯ ಮಾಡುವಾಗ ಅವರು ಭರವಸೆಯಿಡುತ್ತಾರೆ. ಅವನು ಅತಿಥಿಸತ್ಕಾರ ತೋರಿಸುವುದರಿಂದ ಯುವ ಜನರಿಗೆ ಮತ್ತು ಸತ್ಯದಲ್ಲಿ ಹೊಸಬರಿಗೆ ಪ್ರೋತ್ಸಾಹ ಸಿಗುತ್ತದೆ. ಒಳ್ಳೇತನವನ್ನು ಪ್ರೀತಿಸುವುದರಿಂದ ಅಸ್ವಸ್ಥರಿಗೆ ಮತ್ತು ವೃದ್ಧರಿಗೆ ಸಾಂತ್ವನ, ನೆರವು ಕೊಡುತ್ತಾನೆ. ಈ ಗುಣಗಳನ್ನು ಆತನು ಬೆಳೆಸಿಕೊಳ್ಳುವುದು ಬೇರೆಯವರಿಗೆ ಪ್ರಯೋಜನವಾಗಲೆಂದೇ, ಬೇಗ ಹಿರಿಯನಾಗಬೇಕೆಂಬ ಕಾರಣಕ್ಕಲ್ಲ. *

ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಗೆ ಹಿರಿಯರ ಮಂಡಲಿ ಬೇಕಾದ ಸಲಹೆ, ಪ್ರೋತ್ಸಾಹವನ್ನು ಸಂತೋಷದಿಂದ ಕೊಡುತ್ತದೆ. ಆದರೆ ಶಾಸ್ತ್ರಾಧಾರಿತ ಅರ್ಹತೆಗಳನ್ನು ತಲಪುವ ಕೆಲಸವನ್ನು ಸ್ವತಃ ಆ ವ್ಯಕ್ತಿಯೇ ಮಾಡಬೇಕು. ಅನುಭವೀ ಹಿರಿಯರಾದ ಹೆನ್ರಿ ಹೇಳುವುದು: “ನೀವು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ ಮೇಲ್ವಿಚಾರಕರಾಗಲು ಅರ್ಹರಾಗಿದ್ದೀರೆಂದು ತೋರಿಸಲು ಶ್ರಮಿಸಿ.” ಪ್ರಸಂಗಿ 9:10ಕ್ಕೆ ಸೂಚಿಸುತ್ತಾ ಅವರು ವಿವರಿಸುವುದು: “‘ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು.’ ಹಿರಿಯರು ನಿಮಗೆ ಯಾವುದೇ ನೇಮಕ ಕೊಡಲಿ ಎಲ್ಲ ಪ್ರಯತ್ನ ಹಾಕಿ ಅದನ್ನು ಪೂರೈಸಿ. ಸಭೆಯಲ್ಲಿ ನಿಮಗೆ ಕೊಡಲಾಗುವ ಎಲ್ಲ ಕೆಲಸವನ್ನು ಮನಃಪೂರ್ವಕವಾಗಿ ಮಾಡಿ. ಅದು ಕಸ ಗುಡಿಸುವ ಕೆಲಸವೇ ಆಗಿರಲಿ ಮನಃಪೂರ್ವಕವಾಗಿ ಮಾಡಿ. ಒಂದಲ್ಲ ಒಂದು ದಿನ ನಿಮ್ಮ ಕೆಲಸ ಹಾಗೂ ಶ್ರಮಕ್ಕೆ ಪ್ರತಿಫಲ ಸಿಗುವುದು.” ಒಬ್ಬ ಹಿರಿಯನಾಗಿ ಸೇವೆಮಾಡಬೇಕೆಂಬ ಆಸೆ ನಿಮಗಿರುವಲ್ಲಿ ಪವಿತ್ರ ಸೇವೆಯ ಎಲ್ಲ ಕ್ಷೇತ್ರಗಳಲ್ಲಿ ಶ್ರಮಜೀವಿಗಳೂ, ಭರವಸಾರ್ಹರೂ ಆಗಿರಿ. ಅಹಂಕಾರ ತುಂಬಿದ ಮಹತ್ವಾಕಾಂಕ್ಷೆ ಅಲ್ಲ ಬದಲಾಗಿ ದೀನತೆ ನಿಮ್ಮ ಇಡೀ ಬದುಕಲ್ಲಿ ಎದ್ದುಕಾಣಬೇಕು.—ಮತ್ತಾ. 23:8-12.

 ತಪ್ಪಾದ ಯೋಚನೆ ಮತ್ತು ಕ್ರಿಯೆಗಳನ್ನು ತಿರಸ್ಕರಿಸಿ

ಸಭೆಯಲ್ಲಿ ಸುಯೋಗಗಳನ್ನು ಅಪೇಕ್ಷಿಸುವ ಕೆಲವರು ತಮಗೆ ಹಿರಿಯರಾಗುವ ಆಸೆ ಇದೆಯೆಂದು ಪರೋಕ್ಷವಾಗಿ ಹೇಳುತ್ತಾರೆ ಇಲ್ಲವೆ ತಮ್ಮ ಸಭೆಯ ಹಿರಿಯರನ್ನು ಪ್ರಭಾವಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ ಅವರ ಮುಖಸ್ತುತಿ ಮಾಡುತ್ತಾರೆ. ಇನ್ನಿತರರು ಹಿರಿಯರಿಂದ ಸಲಹೆ ಪಡೆದಾಗ ಸಿಟ್ಟುಮಾಡಿಕೊಳ್ಳುತ್ತಾರೆ. ಇಂಥವರು ‘ನಾನು ನನ್ನ ಸ್ವಂತ ಅಭಿರುಚಿಗಳ ಕಡೆಗೆ ಮಾತ್ರ ಗಮನಕೊಡುತ್ತಿದ್ದೇನಾ? ಅಥವಾ ಯೆಹೋವನ ಕುರಿಗಳನ್ನು ದೀನತೆಯಿಂದ ನೋಡಿಕೊಳ್ಳಲು ಬಯಸುತ್ತಿದ್ದೇನಾ?’ ಎಂದು ತಮ್ಮನ್ನೇ ಕೇಳಿಕೊಳ್ಳಬೇಕು.

ಈ ಸುಯೋಗಕ್ಕಾಗಿ ಎಟುಕಿಸಿಕೊಳ್ಳುವವರು “ಮಂದೆಗೆ ಮಾದರಿಗಳಾಗಿರಿ” ಎಂದು ಹಿರಿಯರಿಗಿರುವ ಇನ್ನೊಂದು ಆವಶ್ಯಕತೆಯನ್ನು ಮರೆಯಬಾರದು. (1 ಪೇತ್ರ 5:1-3) ಸಭೆಗೆ ಮಾದರಿಯಾಗಿರುವ ವ್ಯಕ್ತಿ ಮೋಸಕರ ಯೋಚನೆ ಮತ್ತು ಕ್ರಿಯೆಗಳಿಗೆ ಮೊರೆಹೋಗುವ ಮೂಲಕ ಹಿರಿಯನಾಗಲು ಯತ್ನಿಸುವುದಿಲ್ಲ. ಹಿರಿಯನಾಗುವ ನೇಮಕ ಅವನಿಗೆ ಸದ್ಯಕ್ಕೆ ಸಿಗಲಿ ಸಿಗದಿರಲಿ ತಾಳ್ಮೆಯಿಂದಿರುತ್ತಾನೆ. ಒಬ್ಬನು ಹಿರಿಯನಾದ ಕೂಡಲೇ ಅವನಲ್ಲಿರುವ ಎಲ್ಲ ಕುಂದುಕೊರತೆಗಳು ಚಮತ್ಕಾರದಿಂದ ಮಾಯವಾಗುವುದಿಲ್ಲ. (ಅರ. 12:3; ಕೀರ್ತ. 106:32, 33) ಅಷ್ಟುಮಾತ್ರವಲ್ಲ, ಒಬ್ಬ ವ್ಯಕ್ತಿಗೆ ತನ್ನಲ್ಲೇ ಇರುವ “ದೋಷ” ಅಥವಾ ಕುಂದುಕೊರತೆಗಳು ತೋರಲಿಕ್ಕಿಲ್ಲ. (1 ಕೊರಿಂ. 4:4, ಸತ್ಯವೇದ ಭಾಷಾಂತರ) ಆದರೆ ಬೇರೆಯವರಿಗೆ ಅದು ಗೊತ್ತಿದ್ದು ಆ ವ್ಯಕ್ತಿಯ ಬಗ್ಗೆ ಅಷ್ಟೇನೂ ಒಳ್ಳೇ ಅಭಿಪ್ರಾಯವಿರಲಿಕ್ಕಿಲ್ಲ. ಆದ್ದರಿಂದ ಹಿರಿಯರು ನಿಮಗೇನಾದರೂ ಯಥಾರ್ಥವಾದ ಬೈಬಲಾಧರಿತ ಸಲಹೆ ಕೊಟ್ಟರೆ ಸಿಟ್ಟುಮಾಡಿಕೊಳ್ಳದೆ ಕಿವಿಗೊಡಲು ಪ್ರಯತ್ನಿಸಿ. ಅವರ ಸಲಹೆಯನ್ನು ಕಾರ್ಯರೂಪಕ್ಕಿಳಿಸಿ.

ಕಾಯುವ ಅವಧಿ ತೀರ ಉದ್ದವಾಗಿದ್ದರೆ?

ಹಿರಿಯರಾಗಲು ತುಂಬ ದೀರ್ಘ ಸಮಯ ಕಾಯಬೇಕಾಯಿತೆಂದು ಹಲವಾರು ಸಹೋದರರಿಗೆ ಅನಿಸುತ್ತದೆ. ನೀವು ಹಲವಾರು ವರ್ಷಗಳಿಂದ “ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ” ಒಮ್ಮೊಮ್ಮೆ ಚಿಂತಿತರಾಗುತ್ತೀರೊ? “ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು” ಎಂಬ ಪ್ರೇರಿತ ಮಾತುಗಳನ್ನು ಗಮನಿಸಿ.—ಜ್ಞಾನೋ. 13:12.

ಒಬ್ಬ ವ್ಯಕ್ತಿ ತುಂಬ ಆಸೆಪಟ್ಟು, ತಲಪಲು ಪ್ರಯತ್ನಿಸುತ್ತಿರುವ ಒಂದು ಗುರಿ ಕೈಗೆಟುಕುವುದಿಲ್ಲ ಎಂಬಂತೆ ತೋರುವಾಗ ಅವನಿಗೆ ಬೇಜಾರಾಗಬಹುದು. ಅಬ್ರಹಾಮನಿಗೂ ಹಾಗನಿಸಿತು. ಯೆಹೋವನು ಅವನಿಗೆ ಒಬ್ಬ ಪುತ್ರನನ್ನು ಕೊಡುವುದಾಗಿ ಮಾತುಕೊಟ್ಟಿದ್ದನು. ಆದರೆ ಹಲವಾರು ವರ್ಷಗಳು ದಾಟಿದವು, ಅವನಿಗೂ ಸಾರಳಿಗೂ ಮಕ್ಕಳಾಗಲಿಲ್ಲ. (ಆದಿ. 12:1-3, 7) ಅಬ್ರಹಾಮನು ತನ್ನ ಇಳಿವಯಸ್ಸಿನಲ್ಲಿ ಹೀಗೆ ಮೊರೆಯಿಟ್ಟನು: “ಕರ್ತನಾದ ಯೆಹೋವನೇ, ನನಗೆ ಏನು ಕೊಟ್ಟರೇನು? . . . ನೀನು ನನಗೆ ಸಂತಾನಕೊಡಲಿಲ್ಲ.” ಪುತ್ರಸಂತಾನದ ಕುರಿತ ತನ್ನ ವಾಗ್ದಾನ ಖಂಡಿತ ಸತ್ಯವಾಗುವುದೆಂದು ಯೆಹೋವನು ಅವನಿಗೆ ಪುನಃ ಆಶ್ವಾಸನೆ ನೀಡಿದನು. ಆದರೆ ಯೆಹೋವನು ತನ್ನ ಈ ಮಾತನ್ನು ನೆರವೇರಿಸಿದ್ದು 14ಕ್ಕೂ ಹೆಚ್ಚು ವರ್ಷಗಳ ಬಳಿಕವೇ.—ಆದಿ. 15:2-4; 16:16; 21:5.

ಅಬ್ರಹಾಮನು ಇಷ್ಟು ವರ್ಷ ಕಾಯುತ್ತಿದ್ದಾಗ ಯೆಹೋವನ ಸೇವೆ ಮಾಡುವುದರಲ್ಲಿ ಆನಂದ ಕಳೆದುಕೊಂಡನಾ? ಇಲ್ಲ. ಅವನಿಗೆ ದೇವರ ವಾಗ್ದಾನದ ಬಗ್ಗೆ ಎಳ್ಳಷ್ಟೂ ಸಂಶಯವಿರಲಿಲ್ಲ. ಒಳ್ಳೇ ಪ್ರತಿಫಲಕ್ಕಾಗಿ ಎದುರುನೋಡುತ್ತಾ ಇದ್ದನು. ಅಪೊಸ್ತಲ ಪೌಲನು ಬರೆದದ್ದು: “ಅಬ್ರಹಾಮನು ತಾಳ್ಮೆಯನ್ನು ತೋರಿಸಿದ ಬಳಿಕ ಈ ವಾಗ್ದಾನವನ್ನು ಪಡೆದುಕೊಂಡನು.” (ಇಬ್ರಿ. 6:15) ಆದರೆ ಕೊನೆಯಲ್ಲಿ ಸರ್ವಶಕ್ತ ದೇವರು ಆ ನಂಬಿಗಸ್ತ ಮನುಷ್ಯನನ್ನು ಆಶೀರ್ವದಿಸಿದನು. ಅಬ್ರಹಾಮನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಆಶೀರ್ವದಿಸಿದನು. ಅವನಿಂದ ನೀವೇನು ಕಲಿಯಬಲ್ಲಿರಿ?

ನೀವು ಹಿರಿಯನಾಗಿ ಸೇವೆಸಲ್ಲಿಸಲು ಅನೇಕ ವರ್ಷಗಳಿಂದ ಆಸೆಪಟ್ಟರೂ ಆ ಆಸೆ ಕೈಗೂಡದೇ ಹೋಗಿರುವಲ್ಲಿ ಯೆಹೋವನ ಮೇಲೆ ಭರವಸೆ ಕಳಕೊಳ್ಳಬೇಡಿ. ಆತನ ಸೇವೆಯಲ್ಲಿ ಸಿಗುವ ಆನಂದವನ್ನು ಕಳೆದುಕೊಳ್ಳಬೇಡಿ. ಯಾಕೆ? ಇದನ್ನು ವಾರೆನ್‌ ಎಂಬವರ ಮಾತುಗಳಿಂದ ತಿಳಿದುಕೊಳ್ಳಿ. ಆಧ್ಯಾತ್ಮಿಕ ಪ್ರಗತಿ ಮಾಡಲು ಅನೇಕ ಸಹೋದರರಿಗೆ ನೆರವಾದ ಅವರನ್ನುವುದು: “ಹಿರಿಯನಾಗಲು ಅರ್ಹನಾಗುವ ಪ್ರಕ್ರಿಯೆಗೆ ಸಮಯ ಹಿಡಿಯುತ್ತದೆ. ಒಬ್ಬ ಸಹೋದರನು ನಡೆದುಕೊಳ್ಳುವ ರೀತಿ, ತನ್ನ ನೇಮಕಗಳನ್ನು ನಿರ್ವಹಿಸುವ ರೀತಿಯಿಂದ ಅವನಿಗಿರುವ ಸಾಮರ್ಥ್ಯಗಳು ಮತ್ತು ಮನೋಭಾವವು ಸ್ವಲ್ಪಸ್ವಲ್ಪವಾಗಿ ಗೊತ್ತಾಗುತ್ತದೆ. ಇದಕ್ಕೆ ಸಮಯ ಹಿಡಿಯುತ್ತದೆ. ಈ ಸುಯೋಗ ಸಿಕ್ಕಿದರೆ ಅಂದರೆ ಹಿರಿಯನಾಗಿ ನೇಮಕಗೊಂಡರೆ ಮಾತ್ರ ತಾವು ಯಶಸ್ವಿಗಳು  ಎಂದು ಕೆಲವರು ನಂಬುತ್ತಾರೆ. ಈ ಯೋಚನಾಧಾಟಿ ತಪ್ಪು. ಇದೊಂದು ಗೀಳಾಗಿಬಿಡಬಹುದು. ಯೆಹೋವನ ಸೇವೆಯನ್ನು ನೀವು ಎಲ್ಲೇ ಮಾಡುತ್ತಿರಲಿ, ಯಾವುದೇ ರೂಪದಲ್ಲಿ ಮಾಡುತ್ತಿರಲಿ ಅದನ್ನು ನಂಬಿಗಸ್ತಿಕೆಯಿಂದ ಮಾಡಿದರೆ ನೀವು ಯಶಸ್ವಿಗಳೇ.”

ಒಬ್ಬ ಸಹೋದರನು ಹಿರಿಯನಾಗಿ ನೇಮಕಗೊಳ್ಳುವ ಮುಂಚೆ ಒಂದು ದಶಕಕ್ಕಿಂತಲೂ ಹೆಚ್ಚು ಸಮಯ ಕಾಯಬೇಕಾಯಿತು. ಯೆಹೆಜ್ಕೇಲ 1ನೇ ಅಧ್ಯಾಯದಲ್ಲಿರುವ ಸುಪರಿಚಿತ ವರ್ಣನೆಗೆ ಸೂಚಿಸುತ್ತಾ ಅದರಿಂದ ಕಲಿತ ಪಾಠಗಳನ್ನು ಅವನು ತಿಳಿಸುತ್ತಾನೆ: “ತನ್ನ ರಥ ಅಂದರೆ ತನ್ನ ಸಂಘಟನೆಯನ್ನು ಯೆಹೋವನು ತನಗೆ ಬೇಕಾದ ವೇಗದಲ್ಲಿ ಓಡಿಸುತ್ತಾನೆ. ಆದ್ದರಿಂದ ಇಲ್ಲಿ ಮುಖ್ಯವಾಗಿರುವುದು ನಾವು ಬಯಸಿದಂಥ ಸಮಯದಲ್ಲಿ ವಿಷಯಗಳು ನಡೆಯಬೇಕು ಎಂಬದಲ್ಲ ಬದಲಾಗಿ ಯೆಹೋವನ ಸಮಯದಲ್ಲಿ ಅದು ನಡೆಯಬೇಕೆನ್ನುವುದೇ. ಹಿರಿಯನಾಗಬೇಕೆಂಬ ನನ್ನ ಬಯಕೆಯ ಬಗ್ಗೆ ಹೇಳುವುದಾದರೆ ನನಗೇನು ಬೇಕು, ನಾನೇನು ಆಗಬೇಕೆಂದು ಆಸೆಪಟ್ಟೆನೋ ಅದು ಮುಖ್ಯವಲ್ಲ. ನಾನೇನು ಬಯಸಿದೆನೊ ಅದು ನನಗೆ ಆಗ ಅಗತ್ಯವಿರಲಿಲ್ಲ ಎಂದು ಯೆಹೋವನಿಗೆ ಅನಿಸಿರಬೇಕು.”

ನೀವು ಮುಂದೊಂದು ದಿನ ಕ್ರೈಸ್ತ ಮೇಲ್ವಿಚಾರಕನಾಗಿ ಒಳ್ಳೇ ಕಾರ್ಯ ಮಾಡಲು ಕಾಯುತ್ತಿರಬಹುದು. ಹಾಗಿದ್ದರೆ ಸಭೆಯ ಸಂತೋಷವನ್ನು ಹೆಚ್ಚಿಸಲು ಈಗಲೇ ನಿಮ್ಮಿಂದಾದದ್ದೆಲ್ಲವನ್ನು ಮಾಡುವ ಮೂಲಕ ಎಟುಕಿಸಿಕೊಳ್ಳಿ. ಕಾಯುವುದರಲ್ಲೇ ತುಂಬ ಸಮಯ ಹೋಗುತ್ತಿದೆಯೆಂದು ನಿಮಗನಿಸುತ್ತಿರುವಲ್ಲಿ, ಚಿಂತೆ ಮತ್ತು ಅಸಹನೆಯ ಭಾವನೆಗಳನ್ನು ಮೆಟ್ಟಿನಿಲ್ಲಿ. ಈ ಲೇಖನದಲ್ಲಿ ಹಿಂದೆ ತಿಳಿಸಲಾದ ರೇಮಂಡ್ ಹೀಗನ್ನುತ್ತಾರೆ: “ಮಹತ್ವಾಕಾಂಕ್ಷೆ ಸಂತೃಪ್ತಿಯ ಶತ್ರು. ಯಾವಾಗ ಹಿರಿಯನಾಗುತ್ತೇನೊ ಎಂದು ಸದಾ ಚಿಂತೆ ಮಾಡುತ್ತಿರುವವರಿಗೆ ಯೆಹೋವನ ಸೇವೆಯಲ್ಲಿ ಈಗ ಸಿಗುತ್ತಿರುವ ಸಮೃದ್ಧ ಆನಂದ ಕೈಜಾರಿ ಹೋಗುತ್ತದೆ.” ಪವಿತ್ರಾತ್ಮದ ಫಲವನ್ನು, ವಿಶೇಷವಾಗಿ ತಾಳ್ಮೆಯನ್ನು ಇನ್ನಷ್ಟು ಬೆಳೆಸಿಕೊಳ್ಳಿ. ಬೈಬಲಿನ ಅಧ್ಯಯನದ ಮೂಲಕ ನಿಮ್ಮ ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು ಪ್ರಯತ್ನಹಾಕಿ. ಸುವಾರ್ತೆ ಸಾರುವುದನ್ನು, ಆಸಕ್ತರೊಂದಿಗೆ ಬೈಬಲ್‌ ಅಧ್ಯಯನ ನಡೆಸುವುದನ್ನು ಹೆಚ್ಚಿಸಿ. ಆಧ್ಯಾತ್ಮಿಕ ಚಟುವಟಿಕೆಗಳು ಮತ್ತು ಕುಟುಂಬ ಆರಾಧನೆ ಮಾಡಲು ನಿಮ್ಮ ಕುಟುಂಬದಲ್ಲಿ ಮುಂದಾಳತ್ವ ವಹಿಸಿ. ನಿಮ್ಮ ಸಹೋದರ ಸಹೋದರಿಯರೊಂದಿಗೆ ಇರಲು ಸಿಗುವ ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿ ಆನಂದಿಸಿ. ಹೀಗೆ, ನಿಮ್ಮ ಗುರಿಯತ್ತ ಸಾಗುತ್ತಾ ಹೋದಂತೆ ಯೆಹೋವನ ಸೇವೆಯಲ್ಲಿ ಆನಂದಿಸುವಿರಿ.

ಸಭಾ ಸುಯೋಗಗಳಿಗಾಗಿ ಅರ್ಹರಾಗಲು ಶ್ರಮಿಸುವುದು ಯೆಹೋವನಿಂದ ಬಂದಿರುವ ಒಂದು ಆಶೀರ್ವಾದ. ಈ ಸುಯೋಗಕ್ಕಾಗಿ ಎಟುಕಿಸಿಕೊಳ್ಳುವವರು ಹತಾಶರಾಗಿ ಆತನ ಸೇವೆಯಲ್ಲಿ ದುಃಖಿತರಾಗಬೇಕೆಂದು ಯೆಹೋವನಾಗಲಿ ಆತನ ಸಂಘಟನೆಯಾಗಲಿ ಬಯಸುವುದಿಲ್ಲ. ಶುದ್ಧ ಮನಸ್ಸಿನಿಂದ ತನ್ನ ಸೇವೆಮಾಡುವವರೆಲ್ಲರಿಗೂ ಆತನು ಬೆಂಬಲ, ಆಶೀರ್ವಾದ ಕೊಡುತ್ತಾನೆ. ಆತನು ಕೊಡುವ ಯಾವುದೇ ಆಶೀರ್ವಾದ “ವ್ಯಸನವನ್ನು ಸೇರಿಸದು.”—ಜ್ಞಾನೋ. 10:22.

ನೀವು ಈ ಸುಯೋಗಕ್ಕಾಗಿ ತುಂಬ ಸಮಯದಿಂದ ಎಟುಕಿಸಿಕೊಳ್ಳುತ್ತಾ ಇದ್ದರೂ ಇನ್ನಷ್ಟು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಬಲ್ಲಿರಿ. ಅಗತ್ಯವಿರುವ ಗುಣಗಳನ್ನು ಬೆಳೆಸಿಕೊಳ್ಳಲು ಶ್ರಮಿಸಿರಿ. ನಿಮ್ಮ ಕುಟುಂಬವನ್ನು ಅಲಕ್ಷಿಸದೆ ಸಭೆಯಲ್ಲಿ ಕಷ್ಟಪಟ್ಟು ದುಡಿಯಿರಿ. ನಿಮ್ಮ ಈ ಸೇವಾ ದಾಖಲೆಯನ್ನು ಯೆಹೋವನು ಎಂದಿಗೂ ಮರೆಯನು. ನಿಮಗೆ ಯಾವುದೇ ನೇಮಕಗಳು ಸಿಗಲಿ ಯೆಹೋವನ ಸೇವೆ ನಿಮಗೆ ಯಾವಾಗಲೂ ಹರ್ಷತರಲಿ.

^ ಪ್ಯಾರ. 2 ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 8 ಈ ಲೇಖನದಲ್ಲಿ ಕೊಡಲಾಗಿರುವ ತತ್ವಗಳು ಶುಶ್ರೂಷಾ ಸೇವಕರಾಗಲು ಪ್ರಯತ್ನಿಸುವವರಿಗೂ ಅನ್ವಯ. ಅವರಿಗಿರಬೇಕಾದ ಅರ್ಹತೆಗಳನ್ನು 1 ತಿಮೊಥೆಯ 3:8-10, 12, 13ರಲ್ಲಿ ಕೊಡಲಾಗಿದೆ.