ಯೆಹೋವನೊಂದಿಗೆ ಕೆಲಸಮಾಡುವ ಸುಯೋಗದಲ್ಲಿ ಸಂತೋಷಿಸಿ!
“ನಾವು ದೇವರ ಜೊತೆಕೆಲಸಗಾರರಾಗಿದ್ದೇವೆ.” —1 ಕೊರಿಂ. 3:9.
1. ಕೆಲಸದ ಬಗ್ಗೆ ಯೆಹೋವನ ಅಭಿಪ್ರಾಯವೇನು? ಹಾಗಾಗಿ ಆತನು ಏನು ಮಾಡುತ್ತಿದ್ದಾನೆ?
ಯೆಹೋವನು ಎಲ್ಲ ಕೆಲಸಗಳನ್ನು ಆನಂದದಿಂದ ಮಾಡುತ್ತಾನೆ. (ಕೀರ್ತ. 135:6; ಯೋಹಾ. 5:17) ದೇವದೂತರು, ಮನುಷ್ಯರು ಸಹ ತಾವು ಮಾಡುವ ಕೆಲಸವನ್ನು ಆನಂದಿಸಬೇಕೆನ್ನುವುದು ಆತನ ಆಸೆ. ಹಾಗಾಗಿಯೇ ಸಂತೋಷ ಸಂತೃಪ್ತಿ ಕೊಡುವ ಕೆಲಸಗಳನ್ನು ಅವರಿಗೆ ಕೊಡುತ್ತಾನೆ. ಉದಾಹರಣೆಗೆ, ಸೃಷ್ಟಿ ಕೆಲಸದಲ್ಲಿ ತನ್ನ ಜ್ಯೇಷ್ಠಪುತ್ರನಾದ ಯೇಸುವನ್ನು ಜೊತೆಗೂಡಿಸಿಕೊಂಡನು. (ಕೊಲೊಸ್ಸೆ 1:15,16 ಓದಿ.) ಯೇಸು ಭೂಮಿಗೆ ಬರುವದಕ್ಕೆ ಮುಂಚೆ ಸ್ವರ್ಗದಲ್ಲಿ ಯೆಹೋವನೊಂದಿಗೆ “ಶಿಲ್ಪಿಯಾಗಿದ್ದುಕೊಂಡು” ಆನಂದದಿಂದ ಕೆಲಸಮಾಡಿದನು ಎನ್ನುತ್ತದೆ ಬೈಬಲ್.—ಜ್ಞಾನೋ. 8:30.
2. ದೇವದೂತರಿಗೆ ಸಂತೃಪ್ತಿ ತರುವ ಪ್ರಾಮುಖ್ಯ ಕೆಲಸಗಳಿವೆ ಎಂದು ನಾವು ಹೇಗೆ ಹೇಳಬಹುದು?
2 ಆದಿಕಾಂಡದಿಂದ ಪ್ರಕಟನೆಯ ವರೆಗೆ ನೋಡುವುದಾದರೆ ಯೆಹೋವನು ದೇವದೂತರಿಗೆ ಯಾವಾಗಲೂ ಕೆಲಸಗಳನ್ನು ಕೊಟ್ಟಿರುವುದು ಗೊತ್ತಾಗುತ್ತದೆ. ದೇವರು ಆದಾಮಹವ್ವರನ್ನು ಏದೆನ್ ತೋಟದಿಂದ ಹೊರಹಾಕಿದಾಗ ದೇವದೂತರಿಗೆ ಕೊಟ್ಟ ಒಂದು ನೇಮಕದ ಕುರಿತು ಆದಿಕಾಂಡದಲ್ಲಿ ನಾವು ಹೀಗೆ ಓದುತ್ತೇವೆ: “ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಆತನು ಏದೆನ್ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದನು.” (ಆದಿ. 3:24) ಪ್ರಕಟನೆಯಲ್ಲಿ ಸಹ ತಿಳಿಸಿದಂತೆ ಯೆಹೋವನು “ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸಲು ತನ್ನ ದೂತನನ್ನು ಕಳುಹಿಸಿಕೊಟ್ಟನು.” ಇದರಿಂದ, ಭವಿಷ್ಯವನ್ನು ತಿಳಿಸುವ ನೇಮಕ ದೇವದೂತರಿಗಿದೆ ಎಂದು ಗೊತ್ತಾಗುತ್ತದೆ. —ಪ್ರಕ. 22:6.
ಮನುಷ್ಯರಿಗೆ ಕೊಟ್ಟ ಕೆಲಸಗಳು
3. ಯೇಸು ಭೂಮಿಯಲ್ಲಿದ್ದಾಗ ತನ್ನ ತಂದೆಯನ್ನು ಹೇಗೆ ಅನುಕರಿಸಿದನು?
3 ಯೇಸು ಭೂಮಿಯಲ್ಲಿದ್ದಾಗ ತನಗೆ ಯೆಹೋವನು ಕೊಟ್ಟ ಕೆಲಸವನ್ನು ಆನಂದದಿಂದ ಮಾಡಿದನು. ತನಗೆ ಯೆಹೋವನು ಪ್ರಮುಖ ಕೆಲಸ ಕೊಟ್ಟಂತೆಯೇ ಯೇಸು ಸಹ ತನ್ನ ಶಿಷ್ಯರಿಗೆ ಪ್ರಮುಖ ಕೆಲಸವೊಂದನ್ನು ಕೊಟ್ಟನು. ಅವನು ಹೀಗಂದನು: “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನಲ್ಲಿ ನಂಬಿಕೆಯಿಡುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು ಮತ್ತು ಅವುಗಳಿಗಿಂತಲೂ ಮಹತ್ತಾದ ಕ್ರಿಯೆಗಳನ್ನು ನಡಿಸುವನು, ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ.” ಯೇಸು ಈ ಮಾತುಗಳನ್ನು ಹೇಳುವ ಮೂಲಕ ಅವರು ಮಾಡಲಿರುವ ಕೆಲಸದ ಬಗ್ಗೆ ಅವರಲ್ಲಿ ಕೂತೂಹಲ ಹೆಚ್ಚಿಸಿದನು. (ಯೋಹಾ. 14:12) ಅವರು ಆ ಕೆಲಸವನ್ನು ಬೇಗನೆ ಮಾಡಬೇಕಾಗಿದೆ ಎನ್ನುವುದನ್ನು ಮನವರಿಕೆ ಮಾಡಲಿಕ್ಕಾಗಿ ಅವರಿಗೆ ಹೀಗೆ ಹೇಳಿದನು: “ಹಗಲಿರುವಾಗಲೇ ನನ್ನನ್ನು ಕಳುಹಿಸಿದಾತನ ಕ್ರಿಯೆಗಳನ್ನು ನಾವು ಮಾಡಬೇಕು; ರಾತ್ರಿ ಬರುತ್ತದೆ, ಆಗ ಯಾವ ಮನುಷ್ಯನಿಂದಲೂ ಕೆಲಸಮಾಡಲಿಕ್ಕಾಗದು.”—ಯೋಹಾ. 9:4.
4-6. (ಎ) ನೋಹ ಮತ್ತು ಮೋಶೆ ಯೆಹೋವನು ಹೇಳಿದಂತೆಯೇ ಮಾಡಿದ್ದರಿಂದ ನಮಗೆ ಯಾವ ಒಳಿತಾಗಿದೆ? (ಬಿ) ಯೆಹೋವನು ನೇಮಿಸಿರುವ ಕೆಲಸವನ್ನು ಮಾಡುವುದರಿಂದ ಯಾವ ಎರಡು ಪ್ರಯೋಜನಗಳಿವೆ?
4 ಯೇಸು ಭೂಮಿಗೆ ಬರುವ ಎಷ್ಟೋ ಸಮಯದ ಮುಂಚೆಯೇ ಯೆಹೋವನು ಮನುಷ್ಯರಿಗೆ ಕೆಲಸಗಳನ್ನು ನೇಮಿಸಿದ್ದನು. ಆದಾಮಹವ್ವರಿಗೆ ಮಾಡಲು ಸಂತೃಪ್ತಿಕರ ಕೆಲಸವನ್ನು ಕೊಟ್ಟನು. (ಆದಿ. 1:28) ಆದರೆ ಅವರದನ್ನು ಮಾಡಲಿಲ್ಲ. ಅನಂತರ ಇತರ ಜನರು ತಮಗೆ ಯೆಹೋವನು ಕೊಟ್ಟ ಕೆಲಸಗಳನ್ನು ಚೆನ್ನಾಗಿ ಮಾಡಿಮುಗಿಸಿದರು. ಉದಾಹರಣೆಗೆ, ನೋಹ ಮತ್ತವನ ಕುಟುಂಬ ಜಲಪ್ರಳಯದಿಂದ ಪಾರಾಗಲಿಕ್ಕಾಗಿ ನಾವೆ ಕಟ್ಟುವಂತೆ ಯೆಹೋವನು ನೋಹನಿಗೆ ಹೇಳಿದನು. ಯೆಹೋವನು ಹೇಳಿದ್ದೆಲ್ಲವನ್ನು ಅವನು ಚಾಚೂತಪ್ಪದೆ ಮಾಡಿದನು. ಆವತ್ತು ನೋಹ ಹಾಗೆ ಮಾಡಿದ್ದರಿಂದಲೇ ಇವತ್ತು ನಾವು ಬದುಕಿದ್ದೇವೆ.—ಆದಿ. 6:14-16, 22; 2 ಪೇತ್ರ 2:5.
5 ಮೋಶೆಗೆ ಕೂಡ ಯೆಹೋವನು ಒಂದು ಕೆಲಸ ಕೊಟ್ಟನು. ದೇವದರ್ಶನ ಗುಡಾರ ಕಟ್ಟಲು ಮತ್ತು ಯಾಜಕವರ್ಗವನ್ನು ಸಂಘಟಿಸಲು ಹೇಳಿದನು. ಅದನ್ನು ಹೇಗೆ ಮಾಡಬೇಕೆಂದು ಬಿಡಿಬಿಡಿಯಾಗಿ ವಿವರಿಸಿದನು. ಮೋಶೆ ಎಲ್ಲವನ್ನೂ ಯೆಹೋವನು ಹೇಳಿದಂತೆಯೇ ಮಾಡಿದನು. (ವಿಮೋ. 39:32; 40:12-16) ಮೋಶೆ ಅಂದು ಮಾಡಿದ ಆ ಪರಿಶ್ರಮದ ಕೆಲಸದಿಂದ ಇಂದು ಸಹ ನಮಗೆ ಪ್ರಯೋಜನವಾಗುತ್ತಿದೆ. ಹೇಗೆ? ಅಪೊಸ್ತಲ ಪೌಲ ವಿವರಿಸಿದಂತೆ “ಬರಲಿರುವ ಒಳ್ಳೆಯ ವಿಷಯಗಳ” ಕುರಿತು ನಾವು ಆ ದೇವದರ್ಶನ ಗುಡಾರ ಮತ್ತು ಯಾಜಕವರ್ಗದಿಂದ ತಿಳಿದುಕೊಳ್ಳಲು ಸಾಧ್ಯವಾಗಿದೆ.—ಇಬ್ರಿ 9:1-5, 9; 10:1.
6 ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸುತ್ತಾ ಹೋದಂತೆ ತನ್ನ ಜನರಿಗೆ ಬೇರೆಬೇರೆ ಕೆಲಸಗಳನ್ನು ಕೊಡುತ್ತಾ ಬಂದಿದ್ದಾನೆ. ಅವರಿಗಿದ್ದ ನೇಮಕಗಳು ಬೇರೆಬೇರೆಯಾಗಿದ್ದರೂ ಎಲ್ಲವೂ ಯೆಹೋವನನ್ನು ಮಹಿಮೆಪಡಿಸಿದವು ಮತ್ತು ಮಾನವರಿಗೆ ಪ್ರಯೋಜನಗಳನ್ನು ತಂದವು. ಭೂಮಿಗೆ ಬರುವುದಕ್ಕೆ ಮುಂಚೆ ಯೇಸು ಮಾಡಿದ ಕೆಲಸ ಮತ್ತು ಭೂಮಿಯಲ್ಲಿದ್ದಾಗ ಅವನು ಮಾಡಿದ ಕೆಲಸವನ್ನು ನೋಡುವುದಾದರೆ ಅದು ಎಷ್ಟು ನಿಜ ಎಂದು ಗೊತ್ತಾಗುತ್ತದೆ. (ಯೋಹಾ. 4:34; 17:4) ಇಂದು ಸಹ ಯೆಹೋವನು ನಮಗೆ ಯಾವುದೇ ಕೆಲಸ ಕೊಟ್ಟಿರಲಿ ಅದನ್ನು ನಾವು ಮಾಡಬೇಕು. ಏಕೆಂದರೆ ಆ ಕೆಲಸ ಆತನನ್ನು ಮಹಿಮೆಪಡಿಸುತ್ತದೆ. (ಮತ್ತಾ. 5:16; 1 ಕೊರಿಂಥ 15:58 ಓದಿ.) ಅದು ಹೇಗೆಂದು ನೋಡೋಣ.
ನಮ್ಮ ನೇಮಕಗಳ ಕಡೆಗೆ ಸರಿಯಾದ ನೋಟ
7, 8. (ಎ) ಇಂದು ಎಲ್ಲ ಕ್ರೈಸ್ತರಿಗಿರುವ ಸುಯೋಗ ಯಾವುದು? (ಬಿ) ಯೆಹೋವನಿಂದ ನಿರ್ದೇಶನ ಸಿಗುವಾಗ ನಾವೇನು ಮಾಡಬೇಕು?
7 ಯೆಹೋವ ದೇವರು ಅಪರಿಪೂರ್ಣ ಮಾನವರನ್ನು ತನ್ನ ಜೊತೆ ಕೆಲಸಗಾರರಾಗಿ ಕೆಲಸಮಾಡುವಂತೆ ಬಯಸುತ್ತಾನೆ. ಹೀಗೆ ಆತನು ನಮ್ಮನ್ನು ಗೌರವಿಸುತ್ತಾನೆ. (1 ಕೊರಿಂ. 3:9) ಕೆಲವರು ನೋಹ, ಮೋಶೆಯಂತೆ ಕಟ್ಟುವ ಕೆಲಸದಲ್ಲಿ ಭಾಗವಹಿಸುತ್ತಾರೆ. ಸಮ್ಮೇಳನ ಕಟ್ಟಡಗಳನ್ನು, ರಾಜ್ಯ ಸಭಾಗೃಹಗಳನ್ನು ಹಾಗೂ ಬ್ರಾಂಚ್ ಆಫೀಸ್‌ಗಳನ್ನು ಕಟ್ಟುವುದರಲ್ಲಿ ನೆರವು ನೀಡುತ್ತಾರೆ. ನೀವು ನಿಮ್ಮ ರಾಜ್ಯ ಸಭಾಗೃಹವನ್ನು ನವೀಕರಿಸುವುದರಲ್ಲಿ ನೆರವು ನೀಡುತ್ತಿರಲಿ ನ್ಯೂಯಾರ್ಕ್‍ನ ವಾರ್ವಿಕ್ ನಗರದಲ್ಲಿ ಕಟ್ಟಲಾಗುತ್ತಿರುವ ಮುಖ್ಯಕಾರ್ಯಾಲಯದ ನಿರ್ಮಾಣಕಾರ್ಯದಲ್ಲಿ ನೆರವು ನೀಡುತ್ತಿರಲಿ ಅವೆರಡೂ ಪವಿತ್ರ ಸೇವೆಯೇ! ಅದನ್ನು ಅಮೂಲ್ಯವೆಂದಣಿಸಿ! (ಲೇಖನದ ಆರಂಭದಲ್ಲಿ ಕೊಟ್ಟಿರುವ ಹೊಸ ಮುಖ್ಯ ಕಾರ್ಯಾಲಯದ ಮಾದರಿ ಚಿತ್ರವನ್ನು ನೋಡಿ.) ಎಲ್ಲರಿಗೂ ಈ ರೀತಿ ಕಟ್ಟಡ ನಿರ್ಮಾಣ ಕೆಲಸಮಾಡಲು ಆಗಲಿಕ್ಕಿಲ್ಲ. ಹಾಗಿದ್ದರೂ ಎಲ್ಲ ಕ್ರೈಸ್ತರು ಮಾಡಲು ಆಗುವಂಥ ನಿರ್ಮಾಣಕಾರ್ಯ ಒಂದಿದೆ. ಅದು ಆಧ್ಯಾತ್ಮಿಕ ಕಟ್ಟಡ ನಿರ್ಮಾಣಕಾರ್ಯ ಅಂದರೆ ಸುವಾರ್ತೆ ಸಾರುವ ಕೆಲಸ. ಅದು ಯೆಹೋವನಿಗೆ ಮಹಿಮೆ ತರುತ್ತದೆ ಮತ್ತು ಜನರಿಗೆ ಪ್ರಯೋಜನ ತರುತ್ತದೆ. (ಅ. ಕಾ. 13:47-49) ಈ ಸಾರುವ ಕೆಲಸವನ್ನು ಮಾರ್ಗದರ್ಶಿಸುತ್ತಿರುವುದು ದೇವರ ಸಂಘಟನೆ. ಹಾಗಾಗಿ ಕೆಲವೊಮ್ಮೆ ನಮಗೆ ಹೊಸ ನೇಮಕಗಳೂ ಸಿಗಬಹುದು.
8 ಯೆಹೋವನ ನಂಬಿಗಸ್ತ ಸೇವಕರು ಯಾವಾಗಲೂ ಆತನ ನಿರ್ದೇಶನಗಳನ್ನು ಅತ್ಯಾಸಕ್ತಿಯಿಂದ ಪಾಲಿಸಿದ್ದಾರೆ. (ಇಬ್ರಿಯ 13:7, 17 ಓದಿ.) ಒಂದುವೇಳೆ ನಮಗೆ ಹೊಸ ನೇಮಕ ಸಿಕ್ಕಿದರೆ ಆಗೇನು? ನಮ್ಮ ನೇಮಕ ಯಾಕೆ ಬದಲಾಯಿತು, ಯಾಕೆ ಹೊಸ ನಿರ್ದೇಶನ ಕೊಡಲಾಯಿತು ಎನ್ನುವುದು ಕೆಲವೊಮ್ಮೆ ಪೂರ್ತಿ ಅರ್ಥವಾಗದಿದ್ದರೂ ನಾವು ಅದನ್ನು ಸ್ವೀಕರಿಸುತ್ತೇವೆ. ಯಾಕೆಂದರೆ ನಮಗೆ ಗೊತ್ತು ಅದು ಯೆಹೋವನು ಕೊಟ್ಟ ನೇಮಕ ಮತ್ತು ಅದಕ್ಕೆ ಬೆಂಬಲ ನೀಡುವಾಗ ಒಳ್ಳೇ ಫಲಿತಾಂಶ ಖಂಡಿತ ಸಿಕ್ಕೇ ಸಿಗುತ್ತದೆ!
9. ಸಭೆಯಲ್ಲಿ ಹಿರಿಯರು ಯಾವ ಉತ್ತಮ ಮಾದರಿಯನ್ನು ಇಟ್ಟಿದ್ದಾರೆ?
9 ಹಿರಿಯರು ಸಹ ಯೆಹೋವನ ಕೆಲಸ ಮಾಡುವುದರಲ್ಲಿ ಆನಂದಿಸುತ್ತಾರೆ. ಯೆಹೋವನ ಚಿತ್ತ ಮಾಡಲು ಅವರಿಗೆ ತೀವ್ರ ಹಂಬಲ ಇದೆ ಎನ್ನುವುದನ್ನು ಅವರು ಸಭೆಯನ್ನು ನೋಡಿಕೊಳ್ಳುವ ರೀತಿಯಿಂದ ತೋರಿಸಿಕೊಡುತ್ತಾರೆ. (2 ಕೊರಿಂ. 1:24; 1 ಥೆಸ. 5:12, 13) ಅವರು ಪ್ರಯಾಸಪಟ್ಟು ಕೆಲಸ ಮಾಡುತ್ತಾರೆ. ತಮಗೆ ಸಿಗುವ ನಿರ್ದೇಶನಗಳನ್ನೆಲ್ಲ ಪಾಲಿಸುತ್ತಾರೆ. ಸುವಾರ್ತೆ ಸಾರುವ ಹೊಸ ವಿಧಾನಗಳನ್ನು ಬೇಗನೆ ಕಲಿಯುತ್ತಾರೆ. ಉದಾಹರಣೆಗೆ ಟೆಲಿಫೋನ್ ಸಾಕ್ಷಿಕಾರ್ಯ, ಬಂದರಿನಲ್ಲಿ ಸಾಕ್ಷಿಕಾರ್ಯ ಹಾಗೂ ಸಾರ್ವಜನಿಕ ಸಾಕ್ಷಿಕಾರ್ಯದ ಕುರಿತು ತಿಳಿಸಲ್ಪಟ್ಟಾಗ ‘ನಮ್ಮ ಕ್ಷೇತ್ರಕ್ಕೆ ಇದು ಸರಿಯಾಗುತ್ತದಾ’ ಎಂಬ ಸಂದೇಹ ಕೆಲವು ಹಿರಿಯರಲ್ಲಿದ್ದರೂ ನಿರ್ದೇಶನವನ್ನು ಪಾಲಿಸಿದರು. ಅದರಿಂದ ಒಳ್ಳೇ ಫಲಿತಾಂಶಗಳನ್ನು ಪಡೆದರು. ಜರ್ಮನಿ ದೇಶದ ಒಂದು ಅನುಭವ ಗಮನಿಸಿ. ಅಲ್ಲಿನ ನಾಲ್ಕು ಪಯನೀಯರರು ಒಂದು ವ್ಯಾಪಾರ ಕ್ಷೇತ್ರದಲ್ಲಿ ಸುವಾರ್ತೆ ಸಾರಲು ಹೋದರು. ಈ ಕ್ಷೇತ್ರದಲ್ಲಿ ಸಾರದೆ ಮತ್ತು ಈ ವಿಧಾನದಲ್ಲಿ ಸೇವೆಮಾಡದೆ ಅನೇಕ ವರ್ಷಗಳೇ ಕಳೆದಿತ್ತು. ಹಾಗಾಗಿ ಅವರಿಗೆ ತುಂಬ ಹೆದರಿಕೆ ಆಯಿತೆಂದು ಅವರಲ್ಲಿ ಒಬ್ಬರಾದ ಮೈಕಲ್ ಹೇಳಿದರು. ಸಭಾ ಹಿರಿಯರಾಗಿರುವ ಅವರು ಹೀಗೆ ಹೇಳುತ್ತಾರೆ: “ನಾವು ಹೆದರುತ್ತಿದ್ದೇವೆಂದು ಯೆಹೋವನಿಗೆ ಗೊತ್ತಾಗಿರಬೇಕು, ಹಾಗಾಗಿಯೇ ಆತನು ಆವತ್ತು ಬೆಳಗ್ಗೆ ನಮ್ಮ ಸೇವೆಯನ್ನು ಆಶೀರ್ವದಿಸಿದನು. ಸೇವೆ ತುಂಬ ಚೆನ್ನಾಗಾಯಿತು. ಆ ದಿನವನ್ನು ಮರೆಯಕ್ಕೇ ಆಗೋದಿಲ್ಲ. ನಮ್ಮ ರಾಜ್ಯ ಸೇವೆಯಲ್ಲಿ ಬಂದ ನಿರ್ದೇಶನವನ್ನು ಪಾಲಿಸಿದ್ದಕ್ಕೆ ಮತ್ತು ಬೆಂಬಲಕ್ಕಾಗಿ ಯೆಹೋವನ ಮೇಲೆ ಆತುಕೊಂಡಿದ್ದಕ್ಕೆ ನಮಗೆ ತುಂಬ ಖುಷಿಯಾಯಿತು.” ಹಾಗಾದರೆ ನೀವೂ ಸುವಾರ್ತೆ ಸಾರುವ ಹೊಸ ವಿಧಾನಗಳನ್ನು ಕೂಡಲೇ ಪ್ರಯತ್ನಿಸಿ ನೋಡುತ್ತೀರಾ?
10. ಇತ್ತೀಚಿನ ವರ್ಷಗಳಲ್ಲಿ ಸಂಘಟನೆಯಲ್ಲಿ ಯಾವ ಬದಲಾವಣೆಗಳಾಗಿವೆ?
10 ಬೆತೆಲ್‌ಗಳಲ್ಲಿ ಸಹ ಕೆಲವೊಮ್ಮೆ ಬದಲಾವಣೆಗಳಾಗುತ್ತವೆ. ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ಅನೇಕ ಚಿಕ್ಕಚಿಕ್ಕ ಬ್ರಾಂಚ್ ಆಫೀಸ್‌ಗಳನ್ನು ದೊಡ್ಡ ಬ್ರಾಂಚ್ ಆಫೀಸ್‌ಗಳ ಜೊತೆಗೂಡಿಸಲಾಯಿತು. ಇದರಿಂದಾಗಿ ಬೆತೆಲಿನಲ್ಲಿರುವವರು ಬೇರೆ ಬ್ರಾಂಚ್‌ಗೆ ಹೋಗಿ ಸೇವೆಮಾಡಬೇಕಾಯಿತು. ಅದಕ್ಕಾಗಿ ಅವರು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು. ಆದರೆ ನಂತರ ತುಂಬ ಪ್ರಯೋಜನಗಳನ್ನು ಅವರು ಪಡೆದರು. (ಪ್ರಸಂ. 7:8) ಸಿದ್ಧಮನಸ್ಸಿನ ಈ ಎಲ್ಲ ಸಹೋದರ-ಸಹೋದರಿಯರು ಆಧುನಿಕ ಸಮಯದಲ್ಲಿ ಯೆಹೋವನ ಜನರು ಮಾಡುತ್ತಿರುವ ಕೆಲಸದಲ್ಲಿ ತಮಗೂ ಒಂದು ಪಾಲು ಇರುವುದಕ್ಕಾಗಿ ತುಂಬ ಸಂತೋಷಿಸುತ್ತಾರೆ!
11-13. ಸಂಘಟನೆಯಲ್ಲಾದ ಬದಲಾವಣೆಗಳಿಂದಾಗಿ ಕೆಲವರು ಯಾವ ಹೊಂದಾಣಿಕೆಗಳನ್ನು ಮಾಡಬೇಕಾಯಿತು?
11 ಈ ಸಹೋದರ-ಸಹೋದರಿಯರಿಂದ ನಾವು ಏನು ಕಲಿಯುತ್ತೇವೆ? ಅವರಲ್ಲಿ ಅನೇಕರು ಮುಂಚಿನ ಬ್ರಾಂಚ್‌ಗಳಲ್ಲಿ ತುಂಬ ವರ್ಷಗಳಿಂದ ಸೇವೆಮಾಡಿದ್ದರು. ಸಹೋದರ ರೊಕೆಲ್ಯೊ ಮತ್ತವರ ಹೆಂಡತಿ ಒಂದು ಚಿಕ್ಕ ಬ್ರಾಂಚ್‌ನಿಂದ ಮೆಕ್ಸಿಕೊದಲ್ಲಿದ್ದ ದೊಡ್ಡ ಬ್ರಾಂಚ್‌ಗೆ ಹೋಗಬೇಕಾಯಿತು. ಆ ಬ್ರಾಂಚ್‌ನಲ್ಲಿದ್ದವರ ಸಂಖ್ಯೆ ಇವರಿದ್ದ ಬ್ರಾಂಚ್‌ನಲ್ಲಿ ಇದ್ದವರಿಗಿಂತ 30 ಪಟ್ಟು ಹೆಚ್ಚು. ರೊಕೆಲ್ಯೊ ಹೀಗೆ ಹೇಳುತ್ತಾರೆ: “ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಬಿಟ್ಟುಬರಲು ತುಂಬ ಕಷ್ಟವಾಯಿತು.” ಕ್ವಾನ್ ಎಂಬ ಇನ್ನೊಬ್ಬ ಸಹೋದರರನ್ನು ಸಹ ಮೆಕ್ಸಿಕೊ ಬ್ರಾಂಚ್‌ಗೆ ಹೋಗುವಂತೆ ಹೇಳಲಾಯಿತು. ಅಲ್ಲಿ ಪುನಃ ಹೊಸದಾಗಿ ಜೀವನವನ್ನು ಆರಂಭಿಸಿದಂತೆ ಅವರಿಗೆ ಅನಿಸಿತು. ಅವರು ಹೇಳಿದ್ದು: “ಇಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳಬೇಕಾಯಿತು. ಇಲ್ಲಿನ ಸಂಸ್ಕೃತಿಗೆ ಒಗ್ಗಿಕೊಳ್ಳಬೇಕಾಯಿತು. ಯೋಚಿಸುವ ವಿಧವನ್ನೂ ಬದಲಾಯಿಸಬೇಕಾಯಿತು.”
12 ಯೂರೋಪಿನ ಅನೇಕ ಬ್ರಾಂಚ್‌ಗಳನ್ನು ಒಟ್ಟುಗೂಡಿಸಿದಾಗ ಅನೇಕ ಬೆತೆಲಿಗರನ್ನು ಜರ್ಮನಿಯಲ್ಲಿರುವ ಬ್ರಾಂಚ್‌ಗೆ ಹೋಗುವಂತೆ ಹೇಳಲಾಯಿತು. ಅವರಿಗೂ ಸಹ ಇದು ಕಷ್ಟವಾಯಿತು. ಯಾಕೆಂದರೆ ತಮ್ಮ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗುವುದು ಸುಲಭವಾಗಿರಲಿಲ್ಲ. ಸ್ವಿಟ್ಜರ್ಲೆಂಡನ್ನು ಬಿಟ್ಟು ಬಂದವರಿಗೆ ಅಲ್ಲಿನ ಸುಂದರ ಪರ್ವತಗಳು, ಆಸ್ಟ್ರಿಯದಿಂದ ಹೋದವರಿಗೆ ಚಿಕ್ಕ ಬೆತೆಲ್ ಕುಟುಂಬದೊಂದಿಗೆ ಕಳೆದ ಸಮಯ ಈಗ ನೆನಪು ಮಾತ್ರ.
13 ಬೇರೆ ದೇಶದ ಬ್ರಾಂಚ್‌ಗೆ ಹೋದ ಸಹೋದರ-ಸಹೋದರಿಯರು ಅನೇಕ ಬದಲಾವಣೆಗಳನ್ನು ಮಾಡಬೇಕಾಗಿ ಬರುತ್ತದೆ. ಹೊಸ ಜಾಗ, ಹೊಸ ಸಹೋದ್ಯೋಗಿಗಳು, ಕೆಲವೊಮ್ಮೆ ನೇಮಕ ಕೂಡ ಹೊಸದಾಗಿರಬಹುದು ಎಲ್ಲದಕ್ಕೂ ಹೊಂದಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲದೆ ಸಭೆ ಹೊಸದು, ಟೆರಿಟೊರಿ ಹೊಸದು ಪ್ರಾಯಶಃ ಹೊಸ ಭಾಷೆಯನ್ನೂ ಕಲಿಯಬೇಕು. ಇಂಥ ಬದಲಾವಣೆಗಳನ್ನು ಮಾಡುವುದು ಅಷ್ಟು ಸುಲಭವಲ್ಲ. ಆದರೆ ಅನೇಕ ಬೆತೆಲಿಗರು ಸಂತೋಷದಿಂದ ಇದನ್ನು ಮಾಡಿದ್ದಾರೆ. ಯಾಕೆ? ಅವರಲ್ಲಿ ಕೆಲವರು ಈ ಬಗ್ಗೆ ಹೇಳುವುದನ್ನು ಗಮನಿಸಿ.
14, 15. (ಎ) ಯೆಹೋವನೊಂದಿಗೆ ಕೆಲಸ ಮಾಡುವ ಸುಯೋಗವನ್ನು ಗಣ್ಯಮಾಡುತ್ತೇವೆಂದು ಅನೇಕರು ಹೇಗೆ ತೋರಿಸಿದ್ದಾರೆ? (ಬಿ) ಅವರಿಂದ ನಾವೇನು ಕಲಿಯುತ್ತೇವೆ?
14 ಸಹೋದರಿ ಗ್ರೆಟಲ್ ಹೇಳುತ್ತಾರೆ: “ಹೊಸ ನೇಮಕ ಪಡೆದಾಗ ಅದನ್ನು ನಾನು ಸ್ವೀಕರಿಸಿದೆ. ಯಾಕೆಂದರೆ ನಾನು ಯೆಹೋವನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಆತನಿಗೆ ತೋರಿಸಲು ಬಯಸಿದೆ. ನಾನು ಆತನನ್ನು ಪ್ರೀತಿಸುವುದು ದೇಶ, ಕಟ್ಟಡ ಅಥವಾ ಸುಯೋಗ ನೋಡಿ ಅಲ್ಲ.” ಸಹೋದರಿ ಡಾಈಸ್ಕಾ ಹೇಳುವುದನ್ನು ಗಮನಿಸಿ: “ಈ ಆಮಂತ್ರಣ ಬಂದಿರುವುದು ಯೆಹೋವನಿಂದ ಎಂದು ಮನಸ್ಸಿನಲ್ಲಿಟ್ಟೆ. ಹಾಗಾಗಿ ಅದನ್ನು ಸಂತೋಷದಿಂದ ಸ್ವೀಕರಿಸಿದೆ.” ಆಂಡ್ರೇ ಮತ್ತವನ ಹೆಂಡತಿ ಗಾಬ್ರೀಯೆಲಾ ಹೇಳುತ್ತಾರೆ: “ನಮಗೇನು ಇಷ್ಟವೋ ಅದರ ಬಗ್ಗೆ ಯೋಚಿಸದೆ ಯೆಹೋವನ ಸೇವೆಮಾಡಲು ಇದು ಇನ್ನೊಂದು ಅವಕಾಶವಾಗಿ ನೆನಸಿದೆವು.” ಯೆಹೋವನ ಸಂಘಟನೆ ಹೊಸ ನೇಮಕಗಳನ್ನು ಕೊಟ್ಟಾಗ ಅದನ್ನು ನಿರಾಕರಿಸದೆ ಸಂತೋಷದಿಂದ ಸ್ವೀಕರಿಸುವುದರಿಂದ ಒಳ್ಳೇದೇ ಆಗುತ್ತದೆ ಎನ್ನುವುದನ್ನು ಆ ದಂಪತಿ ಮನಸ್ಸಿನಲ್ಲಿಟ್ಟರು.
15 ಬ್ರಾಂಚ್‌ಗಳನ್ನು ಜೊತೆಗೂಡಿಸಿದಾಗ ಕೆಲವು ಬೆತೆಲಿಗರನ್ನು ಪಯನೀಯರರಾಗಿ ನೇಮಿಸಲಾಯಿತು. ಉದಾಹರಣೆಗೆ ಡೆನ್ಮಾರ್ಕ್, ನಾರ್ವೆ, ಸ್ವೀಡನ್‍ನಲ್ಲಿದ್ದ ಬ್ರಾಂಚ್‌ಗಳನ್ನು ಒಟ್ಟುಸೇರಿಸಿ ಸ್ಕಾ೦ಡಿನೇವಿಯಾ ಬ್ರಾಂಚನ್ನು ಆರಂಭಿಸಿದಾಗ ಅನೇಕ ಬೆತಲಿಗರಿಗೆ ಇದರ ಅನುಭವವಾಯಿತು. ಈ ಬಗ್ಗೆ ಫ್ಲಾರೀಯನ್ ಮತ್ತವರ ಪತ್ನಿ ಆನ್ಯಾ ಹೇಳುತ್ತಾರೆ: “ನಮಗೆ ಸಿಕ್ಕಿರುವ ಹೊಸ ನೇಮಕ ತುಂಬ ಆಸಕ್ತಿಕರ ಎಂದು ಗೊತ್ತು, ಅದೇ ಸಮಯದಲ್ಲಿ ಅದೊಂದು ಸವಾಲೂ ಆಗಿದೆಯೆಂದು ಒಪ್ಪಿಕೊಂಡೆವು. ನಾವು ಎಲ್ಲೇ ಇದ್ದುಕೊಂಡು ಸೇವೆ ಮಾಡಿದರೂ ನಮ್ಮನ್ನು ಉಪಯೋಗಿಸುತ್ತಿರುವುದು ಯೆಹೋವನೇ ಅಲ್ಲವಾ? ಇದನ್ನು ನೆನಸುವಾಗ ತುಂಬ ಖುಷಿಯಾಗುತ್ತದೆ. ನಿಜಕ್ಕೂ ಯೆಹೋವನು ನಮ್ಮ ಮೇಲೆ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸಿದ್ದಾನೆ!” ಎಲ್ಲರೂ ಇದೇ ಸನ್ನಿವೇಶದಲ್ಲಿ ಇರುವುದಿಲ್ಲ ನಿಜ. ಆದರೂ ನಾವು ಯಾವುದೇ ನೇಮಕವನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸಬೇಕು ಮತ್ತು ದೇವರ ರಾಜ್ಯಕ್ಕೆ ಪ್ರಥಮ ಸ್ಥಾನ ಕೊಡಬೇಕು ಎಂದು ಈ ಸಹೋದರ ಸಹೋದರಿಯರಿಂದ ಕಲಿಯುತ್ತೇವೆ. (ಯೆಶಾ. 6:8) ನಾವು ಎಲ್ಲೇ ಸೇವೆ ಮಾಡಲಿ, ಯೆಹೋವನೊಂದಿಗೆ ಕೆಲಸ ಮಾಡುವ ಸುಯೋಗವನ್ನು ಅಮೂಲ್ಯವಾಗಿ ಕಾಣುವಲ್ಲಿ ಆತನು ನಮ್ಮನ್ನು ಖಂಡಿತ ಆಶೀರ್ವದಿಸುತ್ತಾನೆ!
ಯೆಹೋವನೊಂದಿಗೆ ಕೆಲಸ ಮಾಡುವ ಸುಯೋಗದಲ್ಲಿ ಆನಂದಿಸುತ್ತಾ ಇರಿ!
16. (ಎ) ಗಲಾತ್ಯ 6:4 ನಾವೇನು ಮಾಡಬೇಕೆಂದು ಹೇಳುತ್ತದೆ? (ಬಿ) ನಮ್ಮೆಲ್ಲರಿಗೆ ಇರುವ ಮಹಾನ್ ಸುಯೋಗ ಯಾವುದು?
16 ನಾವು ಅಪರಿಪೂರ್ಣರಾಗಿರುವುದರಿಂದ ಅನೇಕ ಸಲ ನಮ್ಮನ್ನು ಇತರರಿಗೆ ಹೋಲಿಸಿ ನೋಡುತ್ತೇವೆ. ಆದರೆ, ನಮ್ಮಿಂದ ಏನು ಮಾಡಲು ಆಗುತ್ತದೋ ಅದಕ್ಕೆ ಗಮನಕೊಡಬೇಕು ಎನ್ನುತ್ತದೆ ಬೈಬಲ್. (ಗಲಾತ್ಯ 6:4 ಓದಿ.) ನಮ್ಮೆಲ್ಲರಿಗೂ ಹಿರಿಯರಾಗಿ, ಪಯನೀಯರರಾಗಿ, ಮಿಷನರಿಗಳಾಗಿ ಹಾಗೂ ಬೆತೆಲಿಗರಾಗಿ ಸೇವೆ ಸಲ್ಲಿಸಲು ಆಗದಿರಬಹುದು. ಅವೆಲ್ಲವೂ ಉತ್ತಮ ಸುಯೋಗಗಳು ನಿಜ. ಆದರೆ ಅವೆಲ್ಲದ್ದಕ್ಕಿಂತಲೂ ಮಹಾನ್ ಸುಯೋಗವೊಂದು ನಮ್ಮೆಲ್ಲರಿಗಿದೆ. ಅದು ಯೆಹೋವನ ಜೊತೆಕೆಲಸಗಾರರಾಗಿ ಸುವಾರ್ತೆ ಸಾರುವುದೇ! ಆ ಸುಯೋಗವನ್ನು ಅಮೂಲ್ಯವಾಗಿ ಕಾಣೋಣ. ಅದರಲ್ಲಿ ಆನಂದಿಸೋಣ!
17. (ಎ) ನಾವು ಯಾವ ಸತ್ಯಾಂಶವನ್ನು ಒಪ್ಪಿಕೊಳ್ಳಬೇಕು? (ಬಿ) ಆದರೆ ನಾವು ಯಾಕೆ ನಿರುತ್ತೇಜನಗೊಳ್ಳಬಾರದು?
17 ಸೈತಾನನ ಈ ಲೋಕದಲ್ಲಿ ನಾವು ಇಷ್ಟಪಡುವಂಥ ರೀತಿಯಲ್ಲಿ ಯೆಹೋವನ ಸೇವೆ ಮಾಡಲು ಆಗದಿರಬಹುದು. ಕುಟುಂಬದ ಜವಾಬ್ದಾರಿ, ಆರೋಗ್ಯ ಸಮಸ್ಯೆ ಅಥವಾ ಬೇರೆ ಕೆಲವೊಂದು ವಿಷಯಗಳು ನಮ್ಮ ಕೈಯಲ್ಲಿಲ್ಲ. ಆದರೆ ನಾವು ಕುಗ್ಗಿಹೋಗಬಾರದು. ನಮಗೆ ಏನೇ ಸಮಸ್ಯೆಗಳಿರಲಿ ಯೆಹೋವನ ಹೆಸರು ಮತ್ತು ಆತನ ರಾಜ್ಯದ ಕುರಿತು ಇತರರಿಗೆ ಸಾರಲು ನಮ್ಮಿಂದ ಯಾವಾಗಲೂ ಆಗುತ್ತದೆ. ಯೆಹೋವನಿಗಾಗಿ ನಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಸೇವೆಮಾಡುವುದೇ ಪ್ರಾಮುಖ್ಯ ವಿಷಯ. ಅದೇ ಸಮಯದಲ್ಲಿ, ನಮಗಿಂತ ಹೆಚ್ಚು ಸೇವೆಮಾಡುತ್ತಿರುವ ಸಹೋದರ-ಸಹೋದರಿಯರಿಗೆ ಸಹಾಯಮಾಡುವಂತೆ ಯೆಹೋವನಲ್ಲಿ ಪ್ರಾರ್ಥಿಸಬೇಕು. ಯೆಹೋವನ ಹೆಸರನ್ನು ಸ್ತುತಿಸುವ ಪ್ರತಿಯೊಬ್ಬನೂ ಆತನಿಗೆ ಅತ್ಯಮೂಲ್ಯನು ಎನ್ನುವದನ್ನು ಯಾವತ್ತೂ ಮರೆಯಬೇಡಿ.
18. (ಎ) ಯಾವ ಸಮಯಕ್ಕಾಗಿ ನಾವು ಕಾಯುತ್ತಾ ಇದ್ದೇವೆ? (ಬಿ) ಆದರೂ ಈಗ ನಮಗೆ ಯಾವ ಮಹಾ ಸುಯೋಗ ಇದೆ?
18 ಯೆಹೋವನು ಎಷ್ಟು ಒಳ್ಳೆಯವನು! ನಾವು ಅಪರಿಪೂರ್ಣರಾಗಿದ್ದರೂ ಆತನೊಟ್ಟಿಗೆ ಕೆಲಸ ಮಾಡಲು ನಮಗೆ ಅವಕಾಶ ನೀಡಿದ್ದಾನೆ. ಈ ಕಡೇ ದಿನಗಳಲ್ಲಿ ನಮ್ಮ ದೇವರ ಜೊತೆಯಲ್ಲಿ ಕೆಲಸ ಮಾಡುವ ಸುಯೋಗಕ್ಕಿಂತ ದೊಡ್ಡ ಸುಯೋಗ ಇನ್ನೇನಿದೆ? ಮುಂದೊಂದು ದಿನ ಬರುತ್ತದೆ, ಆಗ “ವಾಸ್ತವವಾದ ಜೀವನ” ನಮ್ಮದಾಗಿರುತ್ತದೆ. ಈಗ ನಮ್ಮಿಂದ ಮಾಡಲಾಗದ ವಿಷಯಗಳನ್ನು ಆಗ ನಾವು ಮಾಡಿ ಆನಂದಿಸುವೆವು. ಅತೀ ಬೇಗನೆ ಯೆಹೋವನು ನಮ್ಮೆಲ್ಲರಿಗೆ ನಿತ್ಯಜೀವವನ್ನು ಕೊಟ್ಟು ಆಶೀರ್ವದಿಸಿ ನಮ್ಮ ಜೀವನದಲ್ಲಿ ನೆಮ್ಮದಿ, ಸಂತೋಷವನ್ನು ತುಂಬುವನು!—1 ತಿಮೊ. 6:18, 19.
19. ಯೆಹೋವನು ಭವಿಷ್ಯತ್ತಿಗಾಗಿ ನಮಗೆ ಏನು ಮಾತುಕೊಟ್ಟಿದ್ದಾನೆ?
19 ದೇವರು ವಾಗ್ದಾನಿಸಿರುವ ಹೊಸ ಲೋಕ ಇನ್ನು ಸ್ವಲ್ಪ ಸಮಯದಲ್ಲೇ ಬರಲಿದೆ. ಇಸ್ರಾಯೇಲ್ಯರು ವಾಗ್ದಾತ್ತ ದೇಶಕ್ಕೆ ಇನ್ನೇನು ಕಾಲಿಡುವ ಮುಂಚೆ ಮೋಶೆ ಅವರಿಗೆ ಹೇಳಿದ ಮಾತನ್ನು ನಾವು ನೆನಪಿಸಿಕೊಳ್ಳೋಣ. “ನಿಮ್ಮ ದೇವರಾದ ಯೆಹೋವನು . . . ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಪಡಿಸಿ ನಿಮಗೆ ಮೇಲನ್ನುಂಟು ಮಾಡುವನು.” (ಧರ್ಮೋ. 30:9) ಅರ್ಮಗೆದ್ದೋನಿನ ನಂತರ ಯೆಹೋವನು ತಾನು ಮಾತುಕೊಟ್ಟಂತೆಯೇ ತನ್ನೊಂದಿಗೆ ಕೆಲಸಮಾಡುತ್ತಾ ಬಂದವರಿಗೆ ಈ ಭೂಮಿಯನ್ನು ಕೊಡುತ್ತಾನೆ. ಆಗ ನಮಗೆಲ್ಲರಿಗೆ ಒಂದು ಹೊಸ ಕೆಲಸ ಇರುತ್ತದೆ. ಅದು ಭೂಮಿಯನ್ನು ಸುಂದರ ತೋಟವಾಗಿ ಮಾಡುವುದೇ!