ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವೇನನ್ನು ಪಡೆದಿದ್ದೀರಿ ಅದಕ್ಕೆ ಬೆಲೆಕೊಡುತ್ತೀರಾ?

ನೀವೇನನ್ನು ಪಡೆದಿದ್ದೀರಿ ಅದಕ್ಕೆ ಬೆಲೆಕೊಡುತ್ತೀರಾ?

“ನಾವು . . . ದೇವರಿಂದ ಬರುವ ಆತ್ಮವನ್ನು ಪಡೆದುಕೊಂಡಿದ್ದೇವೆ; ಹೀಗೆ ದೇವರು ನಮಗೆ ದಯೆಯಿಂದ ನೀಡಿರುವಂಥ ವಿಷಯಗಳನ್ನು ನಾವು ಅರ್ಥಮಾಡಿಕೊಳ್ಳುವಂತಾಗುವುದು.” —1 ಕೊರಿಂ. 2:12.

1. ಯಾವ ಮಾತನ್ನು ಜನ ಸಾಮಾನ್ಯವಾಗಿ ಹೇಳುತ್ತಾರೆ?

‘ಇದ್ದಾಗ ಬೆಲೆ ಗೊತ್ತಾಗಲ್ಲ; ಕಳೆದುಕೊಂಡಾಗಲೇ ಗೊತ್ತಾಗುತ್ತದೆ’ ಎಂಬ ಮಾತನ್ನು ಸಾಮಾನ್ಯವಾಗಿ ಜನರು ಹೇಳುತ್ತಾರೆ. ನಿಮಗೂ ಒಮ್ಮೊಮ್ಮೆ ಹಾಗನಿಸಿದೆಯಾ? ಚಿಕ್ಕ ವಯಸ್ಸಿನಿಂದಲೇ ಬೇಕಾಗಿದ್ದೆಲ್ಲ ಪಡೆದವರು ಅವುಗಳಿಗೆ ಬೆಲೆಕೊಡುವುದು ಕಡಿಮೆ. ಉದಾಹರಣೆಗೆ, ಶ್ರೀಮಂತ ಕುಟುಂಬದಲ್ಲಿ ಬೆಳೆದಿರುವ ಒಬ್ಬನು ತನ್ನ ಬಳಿಯಿರುವ ಅನೇಕ ವಿಷಯಗಳಿಗೆ ಬೆಲೆಕೊಡುವುದಿಲ್ಲ, ಅವೆಲ್ಲ ಅವನಿಗೆ ಮಾಮೂಲು. ಅನುಭವ ಇಲ್ಲದ ಯುವಜನರ ವಿಷಯದಲ್ಲಂತೂ ಈ ಮಾತು ಸತ್ಯ. ಅವರಿಗೆ ಜೀವನದಲ್ಲಿ ಯಾವುದು ಪ್ರಾಮುಖ್ಯ ಎಂದೇ ಗೊತ್ತಿರುವುದಿಲ್ಲ.

2, 3. (ಎ) ಏನಾಗುವುದನ್ನು ತಡೆಯಲು ಕ್ರೈಸ್ತ ಯುವಜನರು ಹುಷಾರಾಗಿರಬೇಕು? (ಬಿ) ನಮ್ಮ ಬಳಿ ಏನಿದೆಯೊ ಅದಕ್ಕೆ ಬೆಲೆಕೊಡಲು ಯಾವುದು ಸಹಾಯ ಮಾಡುವುದು?

2 ನೀವು ಹದಿವಯಸ್ಸಿನ ಅಥವಾ 20-23ರೊಳಗಿನ ಪ್ರಾಯದ ಯುವ ವ್ಯಕ್ತಿನಾ? ನಿಮಗೆ ಯಾವುದು ಪ್ರಾಮುಖ್ಯ? ಲೋಕದ ಅನೇಕ ಯುವ ವ್ಯಕ್ತಿಗಳ ಜೀವನ ವಸ್ತು ವ್ಯಾಮೋಹದಿಂದ ತುಂಬಿರುತ್ತದೆ. ಅವರಿಗೆ ಒಳ್ಳೇ ಸಂಬಳ, ಚೆನ್ನಾಗಿರುವ ಮನೆ ಅಥವಾ ನವನವೀನ ತಂತ್ರಜ್ಞಾನವಿರುವ ಸಾಧನಗಳಿದ್ದರೆ ಸಾಕು. ಇದು ನಮ್ಮ ವಿಷಯದಲ್ಲೂ ಸತ್ಯವಾಗಿದ್ದರೆ ನಮ್ಮ ಜೀವನದಲ್ಲಿ ತುಂಬ ಮಹತ್ವದ ವಿಷಯವೊಂದರ ಕೊರತೆಯಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದೇನು? ಆಧ್ಯಾತ್ಮಿಕ ಸಂಪತ್ತು. ಇಂದು ಮಿಲ್ಯಾಂತರ ಜನರು ಇದರ ಬಗ್ಗೆ ಕಿಂಚಿತ್ತೂ ಆಸಕ್ತಿ ವಹಿಸುವುದಿಲ್ಲ ಎಂಬುದು ದುಃಖಕರ ಸಂಗತಿ. ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಟ್ಟಿರುವ ಯುವಜನರೇ, ಆಧ್ಯಾತ್ಮಿಕ ಸ್ವಾಸ್ತ್ಯವಾಗಿ ಏನನ್ನು ಪಡೆದಿದ್ದೀರೊ ಅದರ ಮೌಲ್ಯವನ್ನು ಎಂದಿಗೂ ಕಡೆಗಣಿಸದಂತೆ ಹುಷಾರಾಗಿರಿ. (ಮತ್ತಾ. 5:3) ಕಡೆಗಣಿಸಿದರೆ ನಿಮ್ಮ ಇಡೀ ಬದುಕಿನ ಮೇಲೆ ಅದು ದುಃಖಕರ ಪರಿಣಾಮ ಬೀರಬಹುದು.

3 ಹಾಗಾಗದಂತೆ ನೀವು ತಡೆಯಬಹುದು. ನಿಮ್ಮ ಆಧ್ಯಾತ್ಮಿಕ ಸ್ವಾಸ್ತ್ಯಕ್ಕೆ ಬೆಲೆಕೊಡಲು ಸಹಾಯ ಮಾಡುವ ಕೆಲವು ಬೈಬಲ್‌ ಉದಾಹರಣೆಗಳನ್ನು ನೋಡೋಣ. ಯುವ ಜನರು ಮಾತ್ರ ಅಲ್ಲ ಪ್ರತಿಯೊಬ್ಬ ಕ್ರೈಸ್ತನೂ ತನ್ನ ಬಳಿ ಇರುವ ಆಧ್ಯಾತ್ಮಿಕ ನಿಧಿಯನ್ನು ಬೆಲೆಯುಳ್ಳದ್ದಾಗಿ ಪರಿಗಣಿಸಬೇಕೆಂದು ಈ ಉದಾಹರಣೆಗಳು ಕಲಿಸುತ್ತವೆ.

ಅವರು ಬೆಲೆಕೊಡಲಿಲ್ಲ

4. ಸಮುವೇಲನ ಪುತ್ರರ ಬಗ್ಗೆ 1 ಸಮುವೇಲ 8:1-5ರಲ್ಲಿರುವ ವಿಷಯದಿಂದ ಏನು ಗೊತ್ತಾಗುತ್ತದೆ?

4 ಸಮೃದ್ಧವಾದ ಆಧ್ಯಾತ್ಮಿಕ ಪರಂಪರೆ ಪಡೆದಿದ್ದರೂ ಅದಕ್ಕೆ ಬೆಲೆಕೊಡದಿದ್ದ ಕೆಲವರ ಉದಾಹರಣೆ ಬೈಬಲ್‍ನಲ್ಲಿದೆ. ಪ್ರವಾದಿ ಸಮುವೇಲನ ಕುಟುಂಬದಲ್ಲಿ ಈ ಮಾತು ಸತ್ಯ. ಅವನು ಬಾಲ್ಯದಿಂದಲೇ ಯೆಹೋವನ ಸೇವೆ ಮಾಡುತ್ತಾ ಬಂದಿದ್ದ. ಆತನಿಗೆ ನಿಷ್ಠನಾಗಿ ಉಳಿದಿದ್ದ. (1 ಸಮು. 12:1-5) ಮುಂದೆ ತನ್ನ ಪುತ್ರರಾದ ಯೋವೇಲ್‌ ಮತ್ತು ಅಬೀಯರಿಗೂ ಒಳ್ಳೇ ಮಾದರಿಯಾಗಿದ್ದ. ಆದರೆ ಅವರು ಆ ಮಾದರಿಯನ್ನು ಅನುಕರಿಸದೆ ಕೆಟ್ಟವರಾಗಿಬಿಟ್ಟರು. ಅವರ ತಂದೆಯಂತಿರದೆ “ನ್ಯಾಯವಿರುದ್ಧವಾದ ತೀರ್ಪು” ಮಾಡುತ್ತಿದ್ದರು ಎಂದು ಬೈಬಲ್‌ ತಿಳಿಸುತ್ತದೆ.—1 ಸಮುವೇಲ 8:1-5 ಓದಿ.

5, 6. ಯೋಷೀಯನ ಪುತ್ರರು ಮತ್ತು ಮೊಮ್ಮಗ ಏನು ಮಾಡಿದರು?

5 ರಾಜ ಯೋಷೀಯನ ಪುತ್ರರ ಕಥೆಯೂ ಇದೆ. ಯೆಹೋವನನ್ನು ಆರಾಧಿಸುವುದರಲ್ಲಿ ಯೋಷೀಯ ಒಳ್ಳೇ ಮಾದರಿ ಇಟ್ಟಿದ್ದ. ದೇವರ ಧರ್ಮೋಪದೇಶಗ್ರಂಥ ಸಿಕ್ಕಿದಾಗ ಅದನ್ನು ಓದಿಸಿ ಯೆಹೋವನು ಕೊಟ್ಟಿದ್ದ ನಿರ್ದೇಶನಗಳನ್ನು ಪಾಲಿಸಲು ಶತಪ್ರಯತ್ನ ಮಾಡಿದ. ವಿಗ್ರಹಾರಾಧನೆ, ಪ್ರೇತವ್ಯವಹಾರವನ್ನು ದೇಶದಿಂದ ತೆಗೆದು ಹಾಕಿದ. ಜನರೆಲ್ಲರೂ ಯೆಹೋವನಿಗೆ ವಿಧೇಯರಾಗಿರಬೇಕು ಎಂದು ಪ್ರೋತ್ಸಾಹಿಸಿದ. (2 ಅರ. 22:8; 23:2, 3, 12-15, 24, 25) ಅವನ ಪುತ್ರರು ಎಂಥ ಅದ್ಭುತ ಆಧ್ಯಾತ್ಮಿಕ ಸ್ವಾಸ್ತ್ಯ ಪಡೆದಿದ್ದರು! ಮುಂದೆ ಅವರಲ್ಲಿ ಮೂವರು ಪುತ್ರರು ಮತ್ತು ಒಬ್ಬ ಮೊಮ್ಮಗ ರಾಜ ಪಟ್ಟವನ್ನು ಅಲಂಕರಿಸಿದರು. ಆದರೆ ಯೋಷೀಯನಿಂದ ಅವರು ಪಡೆದಿದ್ದ ಸ್ವಾಸ್ಥ್ಯಕ್ಕೆ ಅವರಲ್ಲಿ ಒಬ್ಬರೂ ಬೆಲೆಕೊಡಲಿಲ್ಲ.

6 ಯೋಷೀಯನ ನಂತರ ರಾಜನಾದ ಅವನ ಮಗ ಯೆಹೋವಾಜ “ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು” ಅಥವಾ ಕೆಟ್ಟದ್ದನ್ನು ಮಾಡಿದನು. ಅವನು ರಾಜನಾದ ಮೂರು ತಿಂಗಳಲ್ಲೇ ಐಗುಪ್ತದ ಫರೋಹ ಬಂದು ಅವನನ್ನು ಸೆರೆಹಿಡಿದ. ಕೊನೆಗೆ ಬಂದಿಯಾಗಿಯೇ ಸತ್ತ. (2 ಅರ. 23:31-34) ಇದಾದ ನಂತರ ಯೆಹೋವಾಜನ ಅಣ್ಣ ಯೆಹೋಯಾಕೀಮ ರಾಜನಾದ. 11 ವರ್ಷ ಆಳಿದ. ತಂದೆಯಿಂದ ಬಂದ ಆಧ್ಯಾತ್ಮಿಕ ಸ್ವಾಸ್ತ್ಯವನ್ನು ಇವನೂ ತಾತ್ಸಾರ ಮಾಡಿದ. ಎಷ್ಟು ಕೆಟ್ಟವನಾಗಿದ್ದ ಅಂದರೆ “ಇವನನ್ನು . . . ಯೆರೂಸಲೇಮಿನ ಬಾಗಿಲುಗಳ ಹೊರಗೆ ಕತ್ತೆಯಂತೆ ಎಳೆದು ಬಿಸಾಟು ಮಣ್ಣುಪಾಲುಮಾಡುವರು” ಎಂದು ಯೆರೆಮೀಯ ಪ್ರವಾದಿಸಿದನು. (ಯೆರೆ. 22:17-19) ಯೋಷೀಯನ ಇನ್ನೊಬ್ಬ ಮಗ ಚಿದ್ಕೀಯ ಮತ್ತು ಮೊಮ್ಮಗ ಯೆಹೋಯಾಖೀನರೂ ಏನು ಕಡಿಮೆಯಿರಲಿಲ್ಲ. ಯೋಷೀಯನಂತಿರದೆ ಇವರೂ ಸರಿಯಾದ ಮಾರ್ಗದಲ್ಲಿ ನಡೆಯಲಿಲ್ಲ.—2 ಅರ. 24:8, 9, 18, 19.

7, 8. (ಎ) ಸೊಲೊಮೋನ ತನ್ನ ಆಧ್ಯಾತ್ಮಿಕ ಪರಂಪರೆಯನ್ನು ಕಡೆಗಣಿಸಿದ್ದು ಹೇಗೆ? (ಬಿ) ತಮ್ಮ ಆಧ್ಯಾತ್ಮಿಕ ಪರಂಪರೆಯನ್ನು ತಾತ್ಸಾರ ಮಾಡಿದವರ ಬೈಬಲ್‌ ಉದಾಹರಣೆಗಳಿಂದ ನಾವೇನು ಕಲಿಯಬಲ್ಲೆವು?

7 ಸೊಲೊಮೋನ ಸಹ ಅವನ ತಂದೆ ದಾವೀದನಿಂದ ಆಧ್ಯಾತ್ಮಿಕ ಸ್ವಾಸ್ತ್ಯವನ್ನು ಪಡೆದಿದ್ದ. ಅವನ ಆಧ್ಯಾತ್ಮಿಕ ಹಿನ್ನೆಲೆ ತುಂಬ ಚೆನ್ನಾಗಿತ್ತು. ಆರಂಭದಲ್ಲಿ ಅವನು ಅದಕ್ಕೆ ಬೆಲೆಕೊಟ್ಟನಾದರೂ ವರ್ಷಗಳಾನಂತರ ಅದರ ಕಡೆಗಿನ ಮೆಚ್ಚುಗೆ ಕಡಿಮೆಯಾಯಿತು. ಸೊಲೊಮೋನನು ವೃದ್ಧನಾದಾಗ ಅವನ ಹೆಂಡತಿಯರು “ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಯಥಾರ್ಥಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡಿಯಲಿಲ್ಲ.” (1 ಅರ. 11:4) ಫಲಿತಾಂಶವಾಗಿ ಸೊಲೊಮೋನ ಯೆಹೋವನ ಕೃಪೆ ಕಳೆದುಕೊಂಡ.

8 ಇಷ್ಟು ಒಳ್ಳೇ ಹಿನ್ನೆಲೆಯಿದ್ದ ಈ ಪುರುಷರು ಸರಿಯಾದದ್ದನ್ನು ಮಾಡುವ ಅವಕಾಶ ಕೈಜಾರಿ ಹೋಗುವಂತೆ ಬಿಟ್ಟುಕೊಟ್ಟರು. ಎಂಥ ದುಃಖದ ಸಂಗತಿ! ಆದರೆ ಬೈಬಲ್‌ ಕಾಲದಲ್ಲಿದ್ದ ಎಲ್ಲಾ ಯುವಜನರು ಹೀಗೇ ಮಾಡಿದರು ಎಂದು ಇದರ ಅರ್ಥವಲ್ಲ. ಯುವ ಕ್ರೈಸ್ತರು ಅನುಕರಿಸಬಹುದಾದಂಥ ಕೆಲವು ಒಳ್ಳೇ ಉದಾಹರಣೆಗಳನ್ನು ಈಗ ನೋಡೋಣ.

ಅವರೇನನ್ನು ಪಡೆದಿದ್ದರೋ ಅದಕ್ಕೆ ಬೆಲೆಕೊಟ್ಟರು

9. ನೋಹನ ಪುತ್ರರು ಹೇಗೆ ಒಳ್ಳೇ ಮಾದರಿಯಿಟ್ಟರು? (ಶೀರ್ಷಿಕೆ ಚಿತ್ರ ನೋಡಿ.)

9 ನೋಹನ ಪುತ್ರರಿಟ್ಟ ಒಳ್ಳೇ ಮಾದರಿ ನೋಡಿ. ಅವರ ತಂದೆಗೆ ನಾವೆ ಕಟ್ಟಿ ಮನೆಯವರನ್ನೆಲ್ಲಾ ಅದರೊಳಗೆ ಸೇರಿಸುವ ನೇಮಕ ಕೊಡಲಾಗಿತ್ತು. ಅವರು ಯೆಹೋವನ ಚಿತ್ತವನ್ನು ಮಾಡುವುದು ಅಗತ್ಯವೆಂದು ಮನಗಂಡರು. ತಂದೆಯೊಂದಿಗೆ ಕೈಜೋಡಿಸಿ ನಾವೆ ಕಟ್ಟಿದರು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಅವರೂ ನಾವೆಯೊಳಗೆ ಹೋದರು. (ಆದಿ. 7:1, 7) ಇದರ ಉದ್ದೇಶವೇನಾಗಿತ್ತು? ಆದಿಕಾಂಡ 7:3ರಲ್ಲಿ ಅವರು ಪ್ರಾಣಿಪಕ್ಷಿಗಳನ್ನು ನಾವೆಯೊಳಕ್ಕೆ ಸೇರಿಸಿದ್ದು ‘ಆಯಾ ಜಾತಿಯನ್ನು ಭೂಮಿಯ ಮೇಲೆ ಉಳಿಸಿ ಕಾಪಾಡುವುದಕ್ಕೆ’ ಎಂದು ಇದೆ. ಮಾನವರನ್ನೂ ಕಾಪಾಡಲಾಯಿತು. ನೋಹನ ಪುತ್ರರು ತಂದೆಯಿಂದ ಏನನ್ನು ಪಡೆದಿದ್ದರೊ ಅದಕ್ಕೆ ಬೆಲೆಕೊಟ್ಟರು. ಈ ಕಾರಣದಿಂದಾಗಿ ಶುಚಿಗೊಂಡಿರುವ ಭೂಮಿಯಲ್ಲಿ ಮಾನವ ವಂಶವನ್ನು ಮುಂದುವರಿಸುವ, ಸತ್ಯಾರಾಧನೆಯನ್ನು ಪುನಃ ಸ್ಥಾಪಿಸುವ ಸುಯೋಗ ಪಡೆದರು.—ಆದಿ. 8:20; 9:18, 19.

10. ಬಾಬೆಲ್‍ನಲ್ಲಿದ್ದ 4 ಇಬ್ರಿಯ ಯುವಕರು ತಾವು ಕಲಿತಿದ್ದ ಸತ್ಯಗಳಿಗೆ ಬೆಲೆಕೊಟ್ಟರೆಂದು ಹೇಗೆ ತೋರಿಸಿದರು?

10 ಕೆಲವು ಶತಮಾನಗಳ ನಂತರ 4 ಇಬ್ರಿಯ ಯುವಕರಿಟ್ಟ ಮಾದರಿಯನ್ನು ತಕ್ಕೊಳ್ಳಿ. ಜೀವನದಲ್ಲಿ ಯಾವುದು ಪ್ರಾಮುಖ್ಯವಾಗಿತ್ತೊ ಅದನ್ನವರು ಕಲಿತಿದ್ದರೆಂದು ತೋರಿಸಿಕೊಟ್ಟರು. ಕ್ರಿ.ಪೂ. 617ರಲ್ಲಿ ಈ ಯುವಕರಾದ ಹನನ್ಯ, ಮೀಶಾಯೇಲ, ಅಜರ್ಯ, ದಾನಿಯೇಲರನ್ನು ಬಾಬೆಲಿಗೆ ಬಂದಿವಾಸಿಗಳಾಗಿ ಕರಕೊಂಡು ಹೋಗಲಾಯಿತು. ಅವರು ನೋಡಲು ಚೆನ್ನಾಗಿದ್ದರು, ಬುದ್ಧಿವಂತರಾಗಿದ್ದರು. ಬಾಬೆಲ್‌ ಜನರ ಜೀವನಶೈಲಿಯನ್ನು ಸುಲಭವಾಗಿ ಅನುಸರಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ! ತಾವೇನು ಕಲಿತಿದ್ದರೊ ಅದನ್ನು ಮರೆತಿರಲಿಲ್ಲ ಎಂದು ತಮ್ಮ ಕೃತ್ಯಗಳಿಂದ ತೋರಿಸಿಕೊಟ್ಟರು. ತಮ್ಮ ಆಧ್ಯಾತ್ಮಿಕ ಪರಂಪರೆಯನ್ನು ಅವರು ಮರೆಯಲಿಲ್ಲ. ಚಿಕ್ಕವರಾಗಿದ್ದಾಗ ಕಲಿತ ಆಧ್ಯಾತ್ಮಿಕ ಪಾಠಗಳಿಗೆ ಅನುಸಾರವಾಗಿ ನಡೆದದ್ದರಿಂದ ಈ 4 ಯುವಕರಿಗೆ ಹೇರಳ ಆಶೀರ್ವಾದ ದೊರೆಯಿತು.—ದಾನಿಯೇಲ 1:8, 11-15, 20 ಓದಿ.

11. ಯೇಸುವಿನ ಆಧ್ಯಾತ್ಮಿಕ ಹಿನ್ನೆಲೆಯಿಂದ ಇತರರಿಗೆ ಹೇಗೆ ಪ್ರಯೋಜನವಾಯಿತು?

11 ಒಳ್ಳೇ ಮಾದರಿಗಳನ್ನು ಪರಿಗಣಿಸುತ್ತಿರುವಾಗ ದೇವರ ಮಗನಾದ ಯೇಸುವಿನ ಅತ್ಯುತ್ತಮ ಮಾದರಿಯನ್ನು ಪರಿಗಣಿಸದೇ ಇರಲು ಆಗುತ್ತದಾ? ತನ್ನ ತಂದೆಯಿಂದ ಬಹಳಷ್ಟನ್ನು ಪಡೆದಿದ್ದ ಯೇಸು ಅದಕ್ಕೆ ತುಂಬ ಬೆಲೆಕೊಟ್ಟ. ಇದು ಅವನ ಮಾತುಗಳಲ್ಲೇ ಗೊತ್ತಾಗುತ್ತದೆ ನೋಡಿ: “ತಂದೆಯು ಕಲಿಸಿಕೊಟ್ಟಂತೆಯೇ ಈ ಎಲ್ಲ ವಿಷಯಗಳನ್ನು ಮಾತಾಡುತ್ತೇನೆ.” (ಯೋಹಾ. 8:28) ತಾನು ಏನನ್ನು ಪಡೆದಿದ್ದನೋ ಅದನ್ನು ಬೇರೆಯವರೂ ಕಲಿಯಬೇಕು ಎಂದು ಯೇಸು ಬಯಸಿದ. ಜನರ ಗುಂಪುಗಳಿಗೆ “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದು ಹೇಳಿದನು. (ಲೂಕ 4:18, 43) ಆದರೆ ಸಾಮಾನ್ಯವಾಗಿ ಲೋಕದ ಜನರಿಗೆ ಆಧ್ಯಾತ್ಮಿಕ ವಿಷಯ ಎಂದರೆ ಅಷ್ಟಕ್ಕಷ್ಟೇ. ಹಾಗಾಗಿ ‘ಲೋಕದ ಭಾಗವಾಗಿರದೇ’ ಇರಬೇಕೆಂದು ಅವನ ಕೇಳುಗರಿಗೆ ಕಲಿಸಿದನು.—ಯೋಹಾ. 15:19.

ನೀವೇನನ್ನು ಪಡೆದಿದ್ದೀರೋ ಅದಕ್ಕೆ ಬೆಲೆಕೊಡಿ

12. (ಎ) ಇಂದಿನ ಅನೇಕ ಯುವಜನರಿಗೆ 2 ತಿಮೊಥೆಯ 3:14-17 ಹೇಗೆ ಅನ್ವಯಿಸುತ್ತದೆ? (ಬಿ) ಕ್ರೈಸ್ತ ಯುವಜನರು ಇಂದು ಯಾವ ಪ್ರಶ್ನೆಗಳನ್ನು ಪರಿಗಣಿಸಬೇಕು?

12 ನಾವು ನೋಡಿದ ಉದಾಹರಣೆಗಳಲ್ಲಿನ ಯುವಜನರಂತೆ ನಿಮ್ಮನ್ನೂ ಯೆಹೋವನ ಆರಾಧಕರಾದ ಹೆತ್ತವರು ಬೆಳೆಸಿರಬಹುದು. ಹಾಗಿದ್ದಲ್ಲಿ ಬೈಬಲ್‌ ತಿಮೊಥೆಯನ ಬಗ್ಗೆ ಏನು ಹೇಳುತ್ತದೊ ಅದು ನಿಮಗೂ ಅನ್ವಯ. (2 ತಿಮೊಥೆಯ 3:14-17 ಓದಿ.) ಸತ್ಯ ದೇವರ ಬಗ್ಗೆ ಮತ್ತು ಆತನನ್ನು ಹೇಗೆ ಮೆಚ್ಚಿಸಬೇಕು ಎನ್ನುವುದರ ಬಗ್ಗೆ ‘ನೀವು ಕಲಿತದ್ದು’ ನಿಮ್ಮ ಹೆತ್ತವರಿಂದಲೇ. ಅವರು ನಿಮಗೆ ಶೈಶವದಿಂದಲೇ ಕಲಿಸಲು ಶುರುಮಾಡಿರಬಹುದು. ಹೀಗೆ ನಿಮ್ಮನ್ನು ‘ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಗಾಗಿ ವಿವೇಕಿಗಳನ್ನಾಗಿ’ ಮಾಡುವದರಲ್ಲಿ ಹೆತ್ತವರ ಪಾತ್ರ ಇದೆ. ಇದು ನಿಮ್ಮನ್ನು ದೇವರ ಸೇವೆಗಾಗಿ ‘ಸಂಪೂರ್ಣವಾಗಿ ಸನ್ನದ್ಧರಾಗಲು’ ಬಹಳಷ್ಟು ಸಹಾಯಮಾಡಿದೆ. ಈಗ ನಿಮ್ಮ ಮುಂದಿರುವ ಪ್ರಾಮುಖ್ಯ ಪ್ರಶ್ನೆ ಇದು: ನೀವೇನನ್ನು ಪಡೆದಿದ್ದೀರೋ ಅದಕ್ಕೆ ಬೆಲೆಕೊಡುತ್ತಿದ್ದೀರಾ? ಉತ್ತರಕ್ಕೆ ನೀವು ಸ್ವಪರಿಶೀಲನೆ ಮಾಡಬೇಕಾದೀತು. ಈ ಪ್ರಶ್ನೆಗಳನ್ನು ಪರಿಗಣಿಸಿ: ‘ನಂಬಿಗಸ್ತ ಸಾಕ್ಷಿಗಳ ಉದ್ದದ ಸಾಲಿನಲ್ಲಿ ನಾನಿದ್ದೇನೆ ಎಂಬದರ ಬಗ್ಗೆ ನನಗೇನನಿಸುತ್ತದೆ? ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರಲು ನನಗೆ ಹೆಮ್ಮೆ ಅನಿಸುತ್ತದಾ? ದೇವರು ತನ್ನ ಸ್ನೇಹಿತರು ಎಂದು ಕರೆಯುವ ಕೆಲವೇ ಜನರಲ್ಲಿ ನಾನೂ ಒಬ್ಬನಾಗಿರುವುದರ ಬಗ್ಗೆ ಹೇಗನಿಸುತ್ತದೆ? ಸತ್ಯವನ್ನು ಪಡೆದಿರುವುದು ಅಪೂರ್ವ ಮತ್ತು ಶ್ರೇಷ್ಠವಾದ ಸುಯೋಗವೆಂದು ಬೆಲೆಕೊಡುತ್ತೇನಾ?’

ನಂಬಿಗಸ್ತ ಸಾಕ್ಷಿಗಳ ಉದ್ದದ ಸಾಲಿನಲ್ಲಿ ಒಬ್ಬರಾಗಿರಲು ನಿಮಗೆ ಹೇಗನಿಸುತ್ತದೆ? (ಪ್ಯಾರ 9, 10 ಮತ್ತು 12 ನೋಡಿ)

13, 14. (ಎ) ಕೆಲವು ಕ್ರೈಸ್ತ ಯುವಜನರಿಗೆ ಯಾವ ಪ್ರಲೋಭನೆ ಎದುರಾಗುತ್ತದೆ? (ಬಿ) ಅದಕ್ಕೆ ಬಲಿಯಾಗುವುದು ಅವಿವೇಕತನ ಯಾಕೆ? ಉದಾಹರಣೆ ಕೊಡಿ.

13 ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಟ್ಟ ಕೆಲವು ಯುವಜನರಿಗೆ ಈಗಿರುವ ಆಧ್ಯಾತ್ಮಿಕ ಪರದೈಸ್‌ ಮತ್ತು ಸೈತಾನನ ಕತ್ತಲು ತುಂಬಿರುವ ಲೋಕದ ನಡುವಿನ ಸ್ಪಷ್ಟ ವ್ಯತ್ಯಾಸ ಕಾಣುವುದಿಲ್ಲ. ಕೆಲವರಂತೂ ಲೋಕದ ಜೀವನ ಹೇಗಿರುತ್ತದೆ ನೋಡಿಯೇ ಬಿಡೋಣ ಎಂಬ ಪ್ರಲೋಭನೆಗೆ ಬಲಿಯಾಗಿದ್ದಾರೆ. ನೆನಸಿ, ಒಂದು ಕಾರ್‌ ಎದುರಿನಿಂದ ನಿಮ್ಮೆಡೆಗೆ ವೇಗವಾಗಿ ಬರುತ್ತಿದೆ. ಅದು ಡಿಕ್ಕಿ ಹೊಡೆದರೆ ನೋವಾಗಬಹುದಾ, ಸಾಯುತ್ತೇನಾ ನೋಡೋಣ ಎಂದು ಅದರ ಮುಂದೆ ಹೋಗಿ ನಿಲ್ಲುವಿರಾ? ಇಲ್ಲ ತಾನೇ? ಹಾಗೇ ಈ ಲೋಕದ “ಕೀಳ್ಮಟ್ಟದ ಪಟಿಂಗತನ”ದಿಂದ ಬರುವ ನೋವು ಹೇಗಿರುತ್ತದೆಂದು ತಿಳಿಯಲು ಅದನ್ನು ಅನುಭವಿಸಿ ನೋಡುವ ಮೂರ್ಖ ಕೆಲಸಕ್ಕೆ ನಾವು ಕೈಹಾಕಬಾರದು.—1 ಪೇತ್ರ 4:4.

14 ಏಷ್ಯದಲ್ಲಿ ಜೀವಿಸುತ್ತಿರುವ ಜೆನೆರ್‌ ಎಂಬ ಯುವ ವ್ಯಕ್ತಿಯ ಉದಾಹರಣೆ ತಕ್ಕೊಳ್ಳಿ. ಅವನು ಬೆಳೆದದ್ದು ಕ್ರೈಸ್ತ ಕುಟುಂಬದಲ್ಲಿ. 12ನೇ ವಯಸ್ಸಲ್ಲಿ ದೀಕ್ಷಾಸ್ನಾನ ಪಡೆದ. ಹದಿವಯಸ್ಸಿನಲ್ಲಿ ಇವನು ಲೋಕದ ಜೀವನಶೈಲಿಗೆ ಮರುಳಾದ. ಅವನನ್ನುವುದು: “ಲೋಕದಲ್ಲಿ ಸಿಗುವ ‘ಸ್ವಾತಂತ್ರ್ಯ’ ನನಗೆ ಬೇಕಿತ್ತು.” ಜೆನೆರ್‌ ಇಬ್ಬಗೆಯ ಜೀವನ ನಡೆಸಲು ಶುರುಮಾಡಿದ. 15ರ ಪ್ರಾಯದಲ್ಲಿ ಅವನು ತನ್ನ ಕೆಟ್ಟ ಗೆಳೆಯರಂತೆ ಬದುಕಲು ಆರಂಭಿಸಿದ. ತುಂಬ ಕುಡಿಯುತ್ತಿದ್ದ, ಕೆಟ್ಟಕೆಟ್ಟ ಮಾತು ಆಡುತ್ತಿದ್ದ. ತನ್ನ ಸ್ನೇಹಿತರೊಂದಿಗೆ ಕ್ರೂರತನ ತುಂಬಿರುವ ಕಂಪ್ಯೂಟರ್‌ ಗೇಮ್ಸ್ ಆಡಿ ತಡವಾಗಿ ಮನೆಗೆ ಬರುತ್ತಿದ್ದ. ಆದರೆ ಸಮಯ ಕಳೆದಂತೆ ಲೋಕದ ಈ ಸಂಗತಿಗಳಿಂದ ನಿಜ ಸಂತೃಪ್ತಿ ಸಿಗುತ್ತಿಲ್ಲ ಎಂದು ಜೆನೆರ್‌ಗೆ ಮನವರಿಕೆಯಾಗುತ್ತಾ ಬಂತು. ಜೀವನ ಖಾಲಿ ಅನಿಸಲು ಶುರುವಾಯಿತು. ಸಭೆಯೊಂದಿಗೆ ಪುನಃ ಸಹವಾಸ ಮಾಡಲು ಆರಂಭಿಸಿದ. ಅವನನ್ನುವುದು: “ಈಗಲೂ ನನಗೆ ತುಂಬ ಸವಾಲುಗಳು ಎದುರಾಗುತ್ತವೆ. ಆದರೆ ಯೆಹೋವನು ನನಗೆ ಕೊಟ್ಟಿರುವ ಆಶೀರ್ವಾದಗಳ ಮುಂದೆ ಆ ಸವಾಲುಗಳು ಏನೂ ಅಲ್ಲ.”

15. ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಟ್ಟಿರದ ಯುವಜನರು ಸಹ ಯಾವುದರ ಬಗ್ಗೆ ಯೋಚಿಸಬೇಕು?

15 ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಟ್ಟಿರದ ಯುವಜನರು ಸಹ ಸಭೆಯಲ್ಲಿರುತ್ತಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ ಈಗ ನಿಮಗೆ ಸೃಷ್ಟಿಕರ್ತ ಯಾರೆಂದು ಗೊತ್ತಿರುವುದು ಮತ್ತು ಆತನನ್ನು ಆರಾಧಿಸುತ್ತಿರುವುದು ಎಂಥ ಅಮೂಲ್ಯ ಸುಯೋಗ! ಭೂಮಿಯಲ್ಲಿರುವ ಕೋಟಿಗಟ್ಟಲೆ ಜನರ ಪೈಕಿ ಯೆಹೋವನು ನಿಮ್ಮನ್ನು ತನ್ನ ಕಡೆಗೆ ಸೆಳೆದು ಬೈಬಲ್‌ ಸತ್ಯವನ್ನು ನಿಮಗೆ ತಿಳಿಯಪಡಿಸಿದ್ದಾನೆ. ಇದೆಂಥಾ ದೊಡ್ಡ ಆಶೀರ್ವಾದವಲ್ಲವೇ? (ಯೋಹಾ. 6:44, 45) ಇಂದು ಲೋಕದಲ್ಲಿ ಬದುಕಿರುವವರಲ್ಲಿ ಪ್ರತಿ 1,000 ಮಂದಿಯಲ್ಲಿ 1 ವ್ಯಕ್ತಿಗೆ ಸತ್ಯದ ನಿಷ್ಕೃಷ್ಟ ಜ್ಞಾನ ಇದೆ. ಅವರಲ್ಲಿ ನೀವೂ ಒಬ್ಬರು. ನಾವು ಸತ್ಯವನ್ನು ಹೇಗೇ ಕಲಿತಿರಲಿ ಆನಂದಪಡಲು ಈ ಒಂದು ಕಾರಣ ಸಾಕಲ್ಲವೇ? (1 ಕೊರಿಂಥ 2:12 ಓದಿ.) ಜೆನೆರ್‌ ಹೇಳುವುದು: “ಇಡೀ ವಿಶ್ವದ ಒಡೆಯ ಯೆಹೋವನು ನನ್ನನ್ನು ತಿಳಿದುಕೊಂಡಿರಲು, ಗುರುತಿಸಲು ನಾನೆಷ್ಟರವನು? ನಾನ್ಯಾರೂ ಅಲ್ಲ! . . . ಇದರ ಬಗ್ಗೆ ನೆನಸಿದಾಗೆಲ್ಲ ಮೈ ಜು೦ ಎನ್ನುತ್ತದೆ.” (ಕೀರ್ತ. 8:4) ಅದೇ ಕ್ಷೇತ್ರದಲ್ಲಿ ಜೀವಿಸುತ್ತಿರುವ ಇನ್ನೊಬ್ಬ ಕ್ರೈಸ್ತ ಸಹೋದರಿ ಹೀಗನ್ನುತ್ತಾರೆ: “ಶಿಕ್ಷಕನೊಬ್ಬನು ತನ್ನ ವಿದ್ಯಾರ್ಥಿಯನ್ನು ಗುರುತುಹಿಡಿದಾಗ ಆ ವಿದ್ಯಾರ್ಥಿಗೆ ಎಷ್ಟು ಖುಷಿಯಾಗುತ್ತೆ ಅಲ್ಲವಾ? ಮಹಾನ್‌ ಬೋಧಕನಾದ ಯೆಹೋವನಿಗೆ ನಮ್ಮ ಪರಿಚಯ ಇದೆ ಎಂದರೆ ಇದಕ್ಕಿಂತ ದೊಡ್ಡ ಸುಯೋಗ ಇದೆಯಾ!”

ನೀವೇನು ಮಾಡುತ್ತೀರಾ?

16. ಇಂದು ಯುವ ಕ್ರೈಸ್ತರ ಮುಂದಿರುವ ವಿವೇಕಭರಿತ ಆಯ್ಕೆ ಯಾವುದು?

16 ನಿಮಗಿರುವ ಅದ್ಭುತ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಯೋಚಿಸಿ. ಯೆಹೋವನನ್ನೇ ಆರಾಧಿಸುವ ಗುರಿಯಿಡಿ. ಗತಕಾಲದ ನಂಬಿಗಸ್ತ ಜನರ ಮಾದರಿಯನ್ನು ಅನುಕರಿಸಿ. ನಾಶನದತ್ತ ಸಾಗುತ್ತಿರುವ ಈ ಲೋಕದೊಟ್ಟಿಗೆ ಹೆಜ್ಜೆಹಾಕುತ್ತಿರುವ ಬಹುಪಾಲು ಯುವಜನರನ್ನು ಹಿಂಬಾಲಿಸುತ್ತಾ ನಿಮ್ಮ ಜೀವನ ಪೋಲುಮಾಡಬೇಡಿ.—2 ಕೊರಿಂ. 4:3, 4.

17-19. ಲೋಕದಿಂದ ಭಿನ್ನರಾಗಿರುವುದರ ಬಗ್ಗೆ ಸಮತೋಲನದ ನೋಟ ಹೊಂದಲು ನಿಮಗೆ ಯಾವುದು ಸಹಾಯ ಮಾಡುವುದು?

17 ಹಾಗೆಂದ ಮಾತ್ರಕ್ಕೆ ಲೋಕದಿಂದ ಭಿನ್ನವಾಗಿರುವುದು ಹೇಳಿದಷ್ಟು ಸುಲಭವೇನಲ್ಲ. ಆದರೆ ಅದೇ ಜಾಣತನ! ಒಬ್ಬ ಒಲಿಂಪಿಕ್‌ ಕ್ರೀಡಾಪಟುವಿನ ಬಗ್ಗೆ ಯೋಚಿಸಿ. ಆ ಮಟ್ಟಕ್ಕೆ ತಲುಪಲು ಅವನು ಬೇರೆಯವರಿಗಿಂತ ಭಿನ್ನನಾಗಿದ್ದಿರಬೇಕು. ತನ್ನ ಸಮಯ, ಗಮನವನ್ನು ಕಸಿದುಕೊಳ್ಳುವಂಥ ಎಷ್ಟೋ ವಿಷಯಗಳನ್ನು ತ್ಯಜಿಸಿದ್ದನು. ಇಲ್ಲದಿದ್ದರೆ ಅವನಿಗೆ ಹೆಚ್ಚು ತಾಲೀಮು ಮಾಡಲು ಆಗುತ್ತಿರಲಿಲ್ಲ. ಆದರೆ ಅವನು ತನ್ನ ಸಮವಯಸ್ಕರಿಗಿಂತ ಭಿನ್ನನಾಗಿರಲು ಸಿದ್ಧನಿದ್ದದರಿಂದ ಹೆಚ್ಚು ತಾಲೀಮು ಮಾಡಿ ತನ್ನ ಗುರಿ ಮುಟ್ಟಲು ಸಾಧ್ಯವಾಯಿತು.

18 ಲೋಕದ ಅನೇಕರು ತಮ್ಮ ಕೃತ್ಯಗಳಿಂದಾಗುವ ಕೆಟ್ಟ ಫಲಿತಾಂಶದ ಬಗ್ಗೆ ಯೋಚಿಸುವುದಿಲ್ಲ. ಆದರೆ ಯೆಹೋವನ ಸೇವಕರಾದ ನಾವು ಅದರ ಬಗ್ಗೆ ಯೋಚಿಸಬೇಕು. ಲೋಕದ ನೈತಿಕ ಮತ್ತು ಆಧ್ಯಾತ್ಮಿಕವಾದ ವಿನಾಶಕಾರಿ ಚಟುವಟಿಕೆಗಳಿಂದ ದೂರವಿರುವ ಮೂಲಕ ನಾವು ಭಿನ್ನರಾಗಿರಬೇಕು. ಹೀಗೆ “ವಾಸ್ತವವಾದ ಜೀವನವನ್ನು ಭದ್ರವಾಗಿ ಹಿಡಿಯುವಂತಾಗಲು” ಸಾಧ್ಯವಾಗುತ್ತದೆ. (1 ತಿಮೊ. 6:19) ಈ ಹಿಂದೆ ತಿಳಿಸಲಾದ ಸಹೋದರಿ ಹೀಗನ್ನುತ್ತಾರೆ: “ನೀವೇನನ್ನು ನಂಬುತ್ತೀರೊ ಅದರ ಪಕ್ಷದಲ್ಲಿ ದೃಢವಾಗಿ ನಿಂತಾಗ ದಿನದ ಕೊನೆಯಲ್ಲಿ ನಿಮಗೆ ನಿಜವಾಗಿಯೂ ತುಂಬ ಖುಷಿಯಾಗುತ್ತದೆ. ಸೈತಾನನ ಲೋಕದ ಪ್ರವಾಹದ ವಿರುದ್ಧ ಸಾಗಲು ನಿಮಗೆ ಬಲ ಇದೆ ಎಂದು ಅದು ತೋರಿಸುತ್ತದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಯೆಹೋವನಿಗೆ ನಿಮ್ಮ ಬಗ್ಗೆ ಹೆಮ್ಮೆಯೆನಿಸಿ ಪ್ರಸನ್ನತೆಯ ಮುಗುಳ್ನಗೆ ಬೀರುತ್ತಿದ್ದಾನೆ ಎಂದನಿಸುತ್ತದೆ! ಬೇರೆಲ್ಲರಿಗಿಂತ ಭಿನ್ನರಾಗಿ ಇದ್ದದಕ್ಕೆ ನಿಮಗೆ ಸಂತೋಷವಾಗುವುದು ಆಗಲೇ!”

19 ‘ನನಗೆ ಈಗ ಏನು ಸಿಗುತ್ತದೆ?’ ಎಂಬುದರ ಮೇಲೆಯೇ ಗಮನ ನೆಟ್ಟಿರುವ ವ್ಯಕ್ತಿಯ ಬದುಕು ವ್ಯರ್ಥ. (ಪ್ರಸಂ. 9:2, 10) ನೀವೊಬ್ಬ ಯುವ ವ್ಯಕ್ತಿಯಾಗಿದ್ದು ಜೀವನದ ಉದ್ದೇಶದ ಬಗ್ಗೆ ಮತ್ತು ನೀವೆಷ್ಟು ಕಾಲ ಬದುಕಬಹುದು ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸುವವರಾದರೆ “ಅನ್ಯಜನಾಂಗಗಳು . . . ನಡೆಯುವಂತೆ” ನಡೆಯದೆ ನಿಜವಾದ ಅರ್ಥಭರಿತ ಜೀವನ ನಡೆಸುವುದು ಜಾಣತನ ಅಲ್ಲವೇ?—ಎಫೆ. 4:17; ಮಲಾ. 3:18.

20, 21. (ಎ) ಸರಿಯಾದ ನಿರ್ಣಯಗಳನ್ನು ಮಾಡಿದರೆ ಏನನ್ನು ಪಡೆಯುವ ಸಾಲಿನಲ್ಲಿರುತ್ತೇವೆ? (ಬಿ) ನಮ್ಮಿಂದ ಏನನ್ನು ಕೇಳಿಕೊಳ್ಳಲಾಗಿದೆ?

20 ನಾವು ಸರಿಯಾದ ನಿರ್ಣಯಗಳನ್ನು ಮಾಡಿದರೆ ಈಗ ನಮ್ಮ ಜೀವನದಲ್ಲಿ ಸಂತೃಪ್ತಿ ಇರುತ್ತದೆ. ಅಲ್ಲದೆ ಅನಂತಜೀವನ ಪಡೆಯಲು ‘ಭೂಮಿಗೆ ಬಾಧ್ಯರಾಗುವವರ’ ಸಾಲಿನಲ್ಲಿ ಇರುತ್ತೇವೆ ಸಹ. ನಮ್ಮಿಂದ ಊಹಿಸಲೂ ಆಗದಷ್ಟು ಎಷ್ಟೋ ಸುಂದರ ಆಶೀರ್ವಾದಗಳನ್ನು ನಾವಿನ್ನೂ ಅನುಭವಿಸಲಿಕ್ಕಿದೆ. (ಮತ್ತಾ. 5:5; 19:29; 25:34) ದೇವರು ನಮಗೆ ಎಲ್ಲಾ ಆಶೀರ್ವಾದಗಳನ್ನು ಹಾಗೇ ಸುಮ್ಮನೆ ಕೊಡುವುದಿಲ್ಲ. ಆತನು ನಮ್ಮಿಂದಲೂ ಏನನ್ನೊ ಕೇಳಿಕೊಳ್ಳುತ್ತಾನೆ. ಅದೇನು? ವಿಧೇಯತೆ. (1 ಯೋಹಾನ 5:3, 4 ಓದಿ.) ಈಗ ನಾವು ನಂಬಿಗಸ್ತರಾಗಿ ಆತನ ಸೇವೆ ಮಾಡುವುದು ಖಂಡಿತ ಸಾರ್ಥಕ.

21 ಯೆಹೋವನ ವಾಕ್ಯದ ನಿಷ್ಕೃಷ್ಟ ಜ್ಞಾನ ನಮಗಿದೆ, ಆತನ ಮತ್ತು ಆತನ ಉದ್ದೇಶಗಳ ಕುರಿತ ಸತ್ಯದ ಸ್ಪಷ್ಟ ತಿಳುವಳಿಕೆ ನಮಗಿದೆ, ಆತನ ನಾಮಧಾರಿಗಳಾಗಿದ್ದು ಆತನ ಸಾಕ್ಷಿಗಳಾಗಿರುವ ಸುಯೋಗ ನಮಗಿದೆ. ದೇವರಿಂದ ನಾವು ಇಷ್ಟೆಲ್ಲಾ ಪಡೆದಿರುವುದು ಎಂಥಾ ಮಹಾ ಸುಯೋಗವಲ್ಲವೇ! ಆತನು ಯಾವಾಗಲೂ ನಮ್ಮ ಸಹಾಯಕನಾಗಿ ಇರುತ್ತಾನೆಂದು ಮಾತು ಕೊಟ್ಟಿದ್ದಾನೆ. (ಕೀರ್ತ. 118:7) ನಾವು ಯುವಜನರಾಗಿರಲಿ ವೃದ್ಧರಾಗಿರಲಿ ಏನನ್ನು ಪಡೆದಿದ್ದೇವೋ ಅದಕ್ಕೆ ಬೆಲೆಕೊಡೋಣ. ಯೆಹೋವನಿಗೆ “ನಿತ್ಯಕ್ಕೂ ಮಹಿಮೆ” ಸಲ್ಲಿಸುವ ಮನದಾಳದ ಬಯಕೆಯನ್ನು ತೋರಿಸುವಂಥ ರೀತಿಯಲ್ಲಿ ಬದುಕುವ ಮೂಲಕ ಇದನ್ನು ಮಾಡೋಣ!—ರೋಮ. 11:33-36; ಕೀರ್ತ. 33:12.