ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮನಸ್ಸನ್ನು ಬದಲಾಯಿಸುತ್ತೀರಾ?

ನಿಮ್ಮ ಮನಸ್ಸನ್ನು ಬದಲಾಯಿಸುತ್ತೀರಾ?

ಯುವ ಕ್ರೈಸ್ತರ ಗುಂಪೊಂದು ಸಿನಿಮಾ ನೋಡಲು ನಿರ್ಧರಿಸಿ, ಥಿಯೇಟರ್‌ಗೆ ಹೋದಾಗ ಅಲ್ಲಿನ ಪೋಸ್ಟರ್‌ಗಳಲ್ಲಿ ಮಾರಕ ಶಸ್ತ್ರಾಸ್ತ್ರಗಳನ್ನು, ಅರೆಬರೆ ಬಟ್ಟೆ ಧರಿಸಿರುವ ಸ್ತ್ರೀಯರ ಚಿತ್ರಗಳನ್ನು ಕಂಡರು. ಈಗಾಗಲೇ ಸಿನಿಮಾ ನೋಡಿದ ಅವರ ಸಹಪಾಠಿಗಳು ಅದು ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು. ಈಗ ಅವರೇನು ಮಾಡುತ್ತಾರೆ? ಹೇಗೂ ಇಲ್ಲಿವರೆಗೂ ಬಂದಿದ್ದೇವೆ ಸಿನಿಮಾ ನೋಡೋಣ ಎಂದು ಥಿಯೇಟರ್‌ ಒಳಗೆ ಹೋಗುತ್ತಾರಾ?

ನಾವು ಜೀವನದಲ್ಲಿ ಅನೇಕ ನಿರ್ಧಾರಗಳನ್ನು ಮಾಡಬೇಕಾಗುತ್ತದೆ ಎನ್ನುವುದಕ್ಕೆ ಈ ಸನ್ನಿವೇಶ ಒಂದು ಉದಾಹರಣೆ. ನಾವು ಮಾಡುವ ನಿರ್ಧಾರಗಳು ನಮ್ಮ ಆಧ್ಯಾತ್ಮಿಕತೆಯ ಮತ್ತು ಯೆಹೋವ ದೇವರೊಂದಿಗಿನ ನಮ್ಮ ಸಂಬಂಧದ ಮೇಲೆ ಒಳ್ಳೆ ಇಲ್ಲವೇ ಕೆಟ್ಟ ಪರಿಣಾಮ ಬೀರುತ್ತವೆ. ಕೆಲವೊಮ್ಮೆ, ನಾವು ಏನೋ ಮಾಡಬೇಕು ಅಂತ ಮನಸ್ಸು ಮಾಡಿರುತ್ತೇವೆ. ಆದರೆ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಮನಸ್ಸು ಬದಲಾಗಿ ಅದನ್ನು ಮಾಡುವುದಿಲ್ಲ. ಇದರರ್ಥ ನಮ್ಮ ಮನಸ್ಸು ಚಂಚಲ ಅಂತನಾ? ಅಥವಾ ಹಾಗೇ ಮಾಡಿದ್ದು ಸರಿನಾ?

ಮನಸ್ಸನ್ನು ಬದಲಾಯಿಸಲೇಬಾರದಂಥ ಸಂದರ್ಭಗಳು

ಯೆಹೋವ ದೇವರ ಮೇಲಿನ ಪ್ರೀತಿ ನಾವು ಆತನಿಗೆ ಸಮರ್ಪಣೆ ಮಾಡಿಕೊಂಡು, ದೀಕ್ಷಾಸ್ನಾನ ಪಡೆಯುವಂತೆ ನಮ್ಮನ್ನು ಪ್ರಚೋದಿಸಿತು. ದೇವರಿಗೆ ಸದಾ ನಿಷ್ಠರಾಗಿರಬೇಕೆನ್ನುವುದೇ ನಮ್ಮ ಮನದಾಳದ ಬಯಕೆ. ಆದರೆ ನಮ್ಮ ಸಮಗ್ರತೆಯನ್ನು ಮುರಿಯಲು ನಮ್ಮ ವೈರಿಯಾಗಿರುವ ಸೈತಾನನು ಶತ ಪ್ರಯತ್ನ ಮಾಡುತ್ತಿದ್ದಾನೆ. (ಪ್ರಕ. 12:17) ನಾವು ಯೆಹೋವನನ್ನು ಆರಾಧಿಸಬೇಕು ಮತ್ತು ಆತನ ಆಜ್ಞೆಗಳ ಪ್ರಕಾರ ನಡೆಯಬೇಕು ಎಂದು ದೃಢ ಮನಸ್ಸು ಮಾಡಿದ್ದೇವೆ. ಈ ವಿಚಾರದಲ್ಲಿ ನಮ್ಮ ಮನಸ್ಸನ್ನು ಬದಲಾಯಿಸುವುದು ಎಷ್ಟು ದುಃಖಕರ ಸಂಗತಿಯಾಗಿದೆ. ಹಾಗೆ ಬದಲಾಯಿಸುವುದು ನಮ್ಮ ಜೀವಕ್ಕೆ ಕುತ್ತು ತರುತ್ತದೆ.

ಸುಮಾರು 2600 ವರ್ಷಗಳ ಹಿಂದೆ, ಬಾಬೆಲಿನ ರಾಜನಾಗಿದ್ದ ನೆಬೂಕದ್ನೆಚ್ಚರನು ಬಂಗಾರದ ದೊಡ್ಡ ಪ್ರತಿಮೆಯನ್ನು ನಿಲ್ಲಿಸಿ ಎಲ್ಲರೂ ಅದಕ್ಕೆ ಅಡ್ಡಬೀಳಬೇಕೆಂಬ ರಾಜಾಜ್ಞೆ ಹೊರಡಿಸಿದ. ಈ ಆಜ್ಞೆ ಮೀರುವವರನ್ನು ಬೆಂಕಿಯ ಕೂಪಕ್ಕೆ ತಳ್ಳಲಾಗುವುದೆಂದು ಸಾರಿದನು. ಯೆಹೋವನ ಆರಾಧಕರಾಗಿದ್ದ ದೇವಭಯವುಳ್ಳ ಶದ್ರಕ್‌, ಮೆಶಕ್‌ ಮತ್ತು ಅಬೇದ್‍ನೆಗೋ ಎಂಬ ಯುವಕರು ಆ ಪ್ರತಿಮೆಗೆ ಅಡ್ಡಬೀಳದಿರಲು ಮನಸ್ಸು ಮಾಡಿದರು. ಹಾಗಾಗಿ ಅವರನ್ನು ಉರಿಯುವ ಬೆಂಕಿಗೆ ಹಾಕಲಾಯಿತು. ಆದರೆ ಅದ್ಭುತಕರವಾಗಿ ಯೆಹೋವನು ಅವರನ್ನು ಕಾಪಾಡಿದನು. ಕಾರಣ, ಅವರು ತಮ್ಮ ಜೀವವನ್ನು ಅಪಾಯಕ್ಕೊಡ್ಡಲು ಸಿದ್ಧರಿದ್ದರೇ ಹೊರತು, ದೇವರ ಸೇವೆಯನ್ನು ಮಾಡುವ ತಮ್ಮ ನಿರ್ಧಾರವನ್ನು ಬದಲಾಯಿಸಲು ಸಿದ್ಧರಿರಲಿಲ್ಲ.—ದಾನಿ. 3:1-27.

ನಂತರದ ದಿನಗಳಲ್ಲಿ ಪ್ರವಾದಿಯಾದ ದಾನಿಯೇಲನಿಗೂ ಇಂಥದ್ದೇ ಒಂದು ಪರೀಕ್ಷೆ ಎದುರಾಯಿತು. ದಿನಕ್ಕೆ ಮೂರು ಬಾರಿ ಯೆಹೋವನಿಗೆ ಪ್ರಾರ್ಥಿಸುವ ರೂಢಿ ದಾನಿಯೇಲನಿಗಿತ್ತು. ಆದರೆ, ರಾಜನನ್ನು ಬಿಟ್ಟು ಬೇರೆ ಯಾರಿಗೂ ಪ್ರಾರ್ಥಿಸಬಾರದೆಂದು, ಪ್ರಾರ್ಥಿಸಿದರೆ ಸಿಂಹದ ಗವಿಗೆ ಹಾಕಲಾಗುವುದೆಂದು ರಾಜಾಜ್ಞೆಯಾಯಿತು. ದಾನಿಯೇಲನು ಇದ್ಯಾವುದಕ್ಕೂ ಜಗ್ಗದೆ ಯಥಾ ಪ್ರಕಾರ ಪ್ರಾರ್ಥಿಸುತ್ತಾ ಹೋದನು. ಅವನು ತನ್ನ ದೃಢ ನಿರ್ಧಾರವನ್ನು ಬದಲಾಯಿಸಲಿಲ್ಲ. ಪರಿಣಾಮ, ದಾನಿಯೇಲನು “ಸಿಂಹಗಳ ಕೈಯಿಂದ” ರಕ್ಷಿಸಲ್ಪಟ್ಟನು.—ದಾನಿ. 6:1-27.

ಆಧುನಿಕ ದಿನಗಳಲ್ಲೂ ದೇವಸೇವಕರು ತಮ್ಮ ಸಮರ್ಪಣೆಗನುಸಾರ ಜೀವಿಸುತ್ತಿದ್ದಾರೆ. ಆಫ್ರಿಕದ ಒಂದು ಶಾಲೆಯಲ್ಲಿ ರಾಷ್ಟ್ರೀಯ ಚಿಹ್ನೆಯನ್ನು ಆರಾಧಿಸಲಿಕ್ಕಾಗಿ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಯೆಹೋವನ ಸಾಕ್ಷಿಗಳಾಗಿದ್ದ ವಿದ್ಯಾರ್ಥಿಗಳ ಗುಂಪೊಂದು ಅದರಲ್ಲಿ ಪಾಲ್ಗೊಳ್ಳಲಿಲ್ಲ. ಇತರ ವಿದ್ಯಾರ್ಥಿಗಳೊಂದಿಗೆ ಸಮಾರಂಭದಲ್ಲಿ ಭಾಗವಹಿಸದಿದ್ದರೆ ಅವರನ್ನು ಶಾಲೆಯಿಂದ ಹೊರಹಾಕಲಾಗುವುದೆಂದು ಬೆದರಿಸಲಾಯಿತು. ಸ್ವಲ್ಪದರಲ್ಲೇ ಆ ನಗರಕ್ಕೆ ಭೇಟಿ ನೀಡಿದ ಶಿಕ್ಷಣ ಮಂತ್ರಿಗಳು ಯುವ ಸಾಕ್ಷಿಗಳೊಂದಿಗೆ ಮಾತಾಡಿದರು. ಆಗ ಯುವ ಸಾಕ್ಷಿಗಳು ಸೌಜನ್ಯದಿಂದ, ಧೈರ್ಯದಿಂದ ತಮ್ಮ ನಿಲುವನ್ನು ವಿವರಿಸಿದರು. ಅಂದಿನಿಂದ ಯಾರೂ ಆ ವಿವಾದದ ಚಕಾರವನ್ನೇ ಎತ್ತಲಿಲ್ಲ. ಇದರಿಂದಾಗಿ, ಯುವ ಸಹೋದರ ಸಹೋದರಿಯರು ಯೆಹೋವನೊಂದಿಗಿನ ತಮ್ಮ ಸಂಬಂಧವನ್ನು ರಾಜಿಮಾಡಿಕೊಳ್ಳುವಂಥ ಯಾವುದೇ ಒತ್ತಡವಿಲ್ಲದೆ ಶಾಲೆಗೆ ಹೋಗಲು ಸಾಧ್ಯವಾಗಿದೆ.

ಜೋಸೆಫ್‌ ಎಂಬವನ ಹೆಂಡತಿ ಕ್ಯಾನ್ಸರ್‌ನಿಂದ ಬಳಲಿ ಸ್ವಲ್ಪ ಸಮಯದಲ್ಲೇ ಅಸುನೀಗಿದಳು. ಜೋಸೆಫ್‍ನ ಕುಟುಂಬ ಸದಸ್ಯರು ಶವಸಂಸ್ಕಾರದ ವಿಚಾರದಲ್ಲಿ ಆತನಿಗಿದ್ದ ನೋಟವನ್ನು ಅರ್ಥಮಾಡಿಕೊಂಡರು ಮತ್ತು ಅವನ ನಿರ್ಣಯವನ್ನು ಗೌರವಿಸಿದರು. ಆದರೆ ಸತ್ಯದಲ್ಲಿರದ ಆತನ ಹೆಂಡತಿಯ ಕುಟುಂಬದವರು ದೇವರನ್ನು ಅಸಂತೋಷಗೊಳಿಸುವಂತಹ ಕೆಲವು ವಿಧಿವಿಧಾನಗಳನ್ನು ಮಾಡಬೇಕೆಂದು ಬಯಸಿದರು. ಜೋಸೆಫ್‌ ಹೇಳುವುದು: “ಈ ವಿಷಯದಲ್ಲಿ ನನ್ನ ಮನಸ್ಸು ಬದಲಾಗಲ್ಲ ಎಂದು ತಿಳಿದಾಗ, ಅವರು ನನ್ನ ಮಕ್ಕಳ ಮೇಲೆ ಒತ್ತಡ ಹಾಕಲು ಪ್ರಯತ್ನಿಸಿದರು. ಆದರೆ ಅವರ ಈ ಪ್ರಯತ್ನ ಕೈಗೂಡಲಿಲ್ಲ. ಇದು ಸಾಲದೂ ಅಂತ ನೆಂಟರೆಲ್ಲಾ ನಮ್ಮ ಮನೆಯಲ್ಲಿ ರಾತ್ರಿ ಇಡೀ ಎಚ್ಚರ ಇದ್ದು ಮೃತ ದೇಹವನ್ನು ಕಾಯುತ್ತಾ ಜಾಗರಣೆ ಮಾಡಬೇಕೆಂದು ಯೋಚನೆ ಮಾಡಿದ್ರು. ನಮ್ಮ ಮನೆಯಲ್ಲಿ ಜಾಗರಣೆ ಮಾಡಲು ಯಾವುದೇ ಕಾರಣಕ್ಕೂ ನಾನು ಅನುಮತಿಯನ್ನು ಕೊಡುವುದಿಲ್ಲ ಎಂದು ತಿಳಿಸಿದೆ. ಜಾಗರಣೆ ಮಾಡುವುದು ನನ್ನ ಮತ್ತು ನನ್ನ ಹೆಂಡತಿಗಿದ್ದ ನಂಬಿಕೆಗೆ ವಿರುದ್ಧವಾಗಿದೆ ಎಂದು ಅವರಿಗೆ ತಿಳಿದಿತ್ತು. ಕೊನೆಗೆ ಅವರು ಬೇರೊಂದು ಸ್ಥಳದಲ್ಲಿ ಜಾಗರಣೆ ಮಾಡಿದರು.”

“ಇಂಥ ಶೋಕದ ಪರಿಸ್ಥಿತಿಯಲ್ಲೂ ನಿನ್ನ ನಿಯಮಗಳನ್ನು ಮುರಿಯದಂತೆ ನನಗೂ ನನ್ನ ಮಕ್ಕಳಿಗೂ ಸಹಾಯಮಾಡು ಎಂದು ಯೆಹೋವನಲ್ಲಿ ಬಿನ್ನೈಸಿದೆನು. ಆತನು ನನ್ನ ಪ್ರಾರ್ಥನೆಯನ್ನು ಕೇಳಿ, ಒತ್ತಡದ ಸಮಯದಲ್ಲೂ ಸ್ಥಿರವಾಗಿ ನಿಲ್ಲಲು ನಮಗೆ ಸಹಾಯ ಮಾಡಿದನು.” ಹೀಗೆ ಆರಾಧನೆಯ ವಿಷಯಕ್ಕೆ ಬರುವಾಗ ಮನಸ್ಸನ್ನು ಬದಲಾಯಿಸಬೇಕಾ ಬೇಡವಾ ಅನ್ನೋ ಪ್ರಶ್ನೆನೇ ಬರುವುದಿಲ್ಲವೆಂದು ಜೋಸೆಫ್‌ ಮತ್ತು ಅವನ ಮಕ್ಕಳು ನಡೆದುಕೊಂಡಂಥ ರೀತಿಯಿಂದ ತಿಳಿದುಬರುತ್ತದೆ.

ಮನಸ್ಸನ್ನು ಬದಲಾಯಿಸಬೇಕಾ, ಬೇಡವಾ ಎಂಬ ಆಯ್ಕೆ ಮಾಡಬೇಕಾಗಿರುವ ಸಂದರ್ಭಗಳು

ಕ್ರಿ.ಶ. 32ರ ಪಸ್ಕ ಹಬ್ಬದ ಸ್ವಲ್ಪ ಸಮಯದಲ್ಲೇ ಯೇಸು ಕ್ರಿಸ್ತ ಸೀದೋನ್‌ ಪ್ರಾಂತಗಳಿಗೆ ಹೋದನು. ಆಗ ಫೊಯಿನಿಕೆ ಪ್ರಾಂತಕ್ಕೆ ಸೇರಿದ ಒಬ್ಬ ಸ್ತ್ರೀ ಆತನ ಬಳಿಗೆ ಬಂದು ತನ್ನ ಮಗಳಿಗೆ ಹಿಡಿದಿದ್ದ ದೆವ್ವದಿಂದ ಅವಳನ್ನು ಮುಕ್ತಗೊಳಿಸಬೇಕೆಂದು ಯೇಸುವನ್ನು ಪದೇ ಪದೇ ಬೇಡಿಕೊಂಡಳು. ಪ್ರಾರಂಭದಲ್ಲಿ, ಯೇಸು ಆಕೆಯ ಮಾತಿಗೆ ಏನೂ ಉತ್ತರಿಸದೆ ತನ್ನ ಶಿಷ್ಯರಿಗೆ: “ನಾನು ಇಸ್ರಾಯೇಲ್‌ ಮನೆತನದ ತಪ್ಪಿಹೋದ ಕುರಿಗಳ ಬಳಿಗೇ ಹೊರತು ಇನ್ನಾರ ಬಳಿಗೂ ಕಳುಹಿಸಲ್ಪಟ್ಟವನಲ್ಲ” ಎಂದು ಹೇಳಿದನು. ಆದರೆ ಅವಳು ಅಷ್ಟಕ್ಕೆ ಸುಮ್ಮನಾಗದೆ ಪಟ್ಟುಹಿಡಿದಿದ್ದರಿಂದ ಯೇಸು ಆಕೆಗೆ: “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಅಂದನು. ಆಗ ಬಲವಾದ ನಂಬಿಕೆಯನ್ನು ತೋರಿಸುತ್ತಾ: “ಕರ್ತನೇ, ಅದು ನಿಜ. ಆದರೆ ನಾಯಿಮರಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ತುಣುಕುಗಳನ್ನು ತಿನ್ನುತ್ತವಲ್ಲಾ” ಎಂದಳು. ಇಂತಹ ನಂಬಿಕೆಯನ್ನು ಕಂಡ ಯೇಸು ಆಕೆಯ ಬೇಡಿಕೆಗೆ ಮಣಿದು ಆಕೆಯ ಮಗಳನ್ನು ಗುಣಪಡಿಸಿದನು.—ಮತ್ತಾ. 15:21-28.

ಹೀಗೆ ಮಾಡುವ ಮೂಲಕ ಯೇಸು ಒಂದು ಗಮನಾರ್ಹ ವಿಷಯವನ್ನು ತೋರಿಸಿದನು. ಅದೇನೆಂದರೆ, ಸನ್ನಿವೇಶಕ್ಕೆ ಸೂಕ್ತವಾಗಿರುವಾಗ ಮನಸ್ಸನ್ನು ಬದಲಾಯಿಸುವುದು ಸರಿ. ಈ ವಿಷಯದಲ್ಲಿ ಆತನು ತನ್ನ ತಂದೆಯಾದ ಯೆಹೋವನನ್ನು ಅನುಕರಿಸುತ್ತಿದ್ದನು. ಉದಾಹರಣೆಗೆ, ಇಸ್ರಾಯೇಲ್ಯರು ಚಿನ್ನದ ಬಸವನನ್ನು ಮಾಡಿದಾಗ ಅವರನ್ನು ನಾಶಮಾಡಬೇಕೆಂದು ದೇವರು ನಿರ್ಧರಿಸಿದ್ದನು. ಈ ನಿರ್ಧಾರದ ಬಗ್ಗೆ ಪುನಃ ಯೋಚಿಸುವಂತೆ ಮೋಶೆಯು ದೇವರಲ್ಲಿ ವಿನಂತಿಸಿಕೊಂಡನು. ಆಗ ದೇವರು ತನ್ನ ನಿರ್ಧಾರವನ್ನು ಬದಲಾಯಿಸಿಕೊಳ್ಳಲು ಮನಸ್ಸು ಮಾಡಿದನು.—ವಿಮೋ. 32:7-14.

ಈ ವಿಚಾರದಲ್ಲಿ ಅಪೊಸ್ತಲ ಪೌಲನು ಯೆಹೋವ ದೇವರನ್ನು ಮತ್ತು ಯೇಸು ಕ್ರಿಸ್ತನನ್ನು ಅನುಕರಿಸಿದನು. ಒಮ್ಮೆ, ತನ್ನ ಮಿಷನೆರಿ ಪ್ರಯಾಣಗಳಿಗಾಗಿ ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಕರೆದುಕೊಂಡು ಹೋಗುವುದು ಸೂಕ್ತವಲ್ಲ ಎಂದು ಪೌಲನಿಗನಿಸಿತು. ಕಾರಣ ಮಾರ್ಕನು ಮೊದಲ ಮಿಷನೆರಿ ಪ್ರಯಾಣದಲ್ಲಿ ಪೌಲ ಮತ್ತು ಬಾರ್ನಬನನ್ನು ಬಿಟ್ಟುಹೋಗಿದ್ದನು. ಇದಾದ ನಂತರ, ಮಾರ್ಕನು ಬದಲಾಗಿದ್ದಾನೆ ಮತ್ತು ತನ್ನ ನೇಮಕಗಳನ್ನು ನಿಷ್ಠೆಯಿಂದ ಮಾಡುತ್ತಿದ್ದಾನೆಂದು ತಿಳಿದ ಪೌಲನು ತನ್ನ ಸೇವೆಗೆ ಆತನು ಅವಶ್ಯಕ ಎಂಬುದನ್ನು ಮನಗಂಡನು. ಹಾಗಾಗಿ ಪೌಲನು ತಿಮೊಥೆಯನಿಗೆ: “ಮಾರ್ಕನನ್ನು ನಿನ್ನೊಂದಿಗೆ ಕರೆದುಕೊಂಡು ಬಾ, ಏಕೆಂದರೆ ಶುಶ್ರೂಷೆಯ ಕೆಲಸದಲ್ಲಿ ಅವನು ನನಗೆ ಉಪಯುಕ್ತನಾಗಿದ್ದಾನೆ” ಎಂದು ತಿಳಿಸಿದನು.—2 ತಿಮೊ. 4:11.

ನಮ್ಮ ಕುರಿತೇನು? ನಮಗೂ ನಮ್ಮ ಮನಸ್ಸನ್ನು ಬದಲಾಯಿಸಲು ಸೂಕ್ತವಾಗಿರುವಂಥ ಕೆಲವು ಸನ್ನಿವೇಶಗಳು ಎದುರಾಗಬಹುದು. ಅಂಥ ಸನ್ನಿವೇಶಗಳಲ್ಲಿ ನಾವು ಕನಿಕರ, ತಾಳ್ಮೆ ಮತ್ತು ಪ್ರೀತಿಯ ಸ್ವರ್ಗೀಯ ತಂದೆಯಾದ ಯೆಹೋವನನ್ನು ಅನುಕರಿಸಬೇಕು. ಅದರಲ್ಲಿ ಒಂದು, ಇತರರ ಕಡೆಗಿನ ನಮ್ಮ ಅಭಿಪ್ರಾಯವನ್ನು ಸರಿಪಡಿಸಿಕೊಳ್ಳುವುದು. ಯೆಹೋವ ಮತ್ತು ಯೇಸು ಪರಿಪೂರ್ಣರು. ಅವರೇ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಲು ಸಿದ್ಧರಿರುವಾಗ, ನಾವು ಬೇರೆಯವರ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸಿ ಅವರ ಕಡೆಗೆ ನಮಗಿರುವ ಮನೋಭಾವವನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲವೇ?

ದೇವಪ್ರಭುತ್ವಾತ್ಮಕ ಗುರಿಗಳ ವಿಷಯದಲ್ಲಿ ನಮ್ಮ ಮನಸ್ಸನ್ನು ಬದಲಾಯಿಸುವುದು ಒಳ್ಳೇದು. ಬೈಬಲ್‌ ಅಧ್ಯಯನ ಮಾಡುತ್ತಿರುವ ಮತ್ತು ಸ್ವಲ್ಪ ಸಮಯದಿಂದ ಸಭಾ ಕೂಟಗಳಿಗೆ ಹಾಜರಾಗುತ್ತಿರುವ ಕೆಲವರು ದೀಕ್ಷಾಸ್ನಾನ ಪಡೆದುಕೊಳ್ಳುವುದನ್ನು ಮುಂದೂಡುತ್ತಿರಬಹುದು. ಪಯನೀಯರ್‌ ಸೇವೆಯ ಮೂಲಕ ತಮ್ಮ ಸೇವೆಯನ್ನು ಹೆಚ್ಚು ಮಾಡಬಹುದಾದಂಥ ಪರಿಸ್ಥಿತಿಯಲ್ಲಿದ್ದರೂ ಕೆಲವು ಸಹೋದರರು ಪಯನೀಯರ್‌ ಸೇವೆ ಮಾಡಲು ಹಿಂಜರಿಯಬಹುದು. ಇನ್ನೂ ಕೆಲವು ಸಹೋದರರಿಗೆ ಸಭಾ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಒಲವಿಲ್ಲದಿರಬಹುದು. (1 ತಿಮೊ. 3:1) ನಿಮಗೂ ಹೀಗೆ ಅನಿಸಿದೆಯಾ? ಇಂತಹ ಸುಯೋಗಗಳನ್ನು ನೀವು ಅನುಭವಿಸುವಂತೆ ಸ್ವತಃ ಯೆಹೋವನೇ ಪ್ರೀತಿಯಿಂದ ಆಮಂತ್ರಿಸುತ್ತಿದ್ದಾನೆ. ಹಾಗಾಗಿ ದೇವರಿಗೆ ಮತ್ತು ಇತರರಿಗೆ ನಿಮ್ಮನ್ನೇ ನೀಡಿಕೊಳ್ಳುವುದರಿಂದ ಸಿಗುವ ಸಂತೋಷವನ್ನು ಪಡೆಯಲು ನೀವೇಕೆ ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬಾರದು?

ನೀವು ಮನಸ್ಸನ್ನು ಬದಲಾಯಿಸುವುದು ನಿಮಗೆ ಆಶೀರ್ವಾದಕರವಾಗಿರಬಹುದು

ಆಫ್ರಿಕದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಏಲಾ ಎಂಬ ಸಹೋದರಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತಮ್ಮ ಸೇವೆಯ ಕುರಿತು ಹೇಳುವುದು: “ನಾನು ಬೆತೆಲ್‌ಗೆ ಬಂದ ಪ್ರಾರಂಭದಲ್ಲಿ ಇಲ್ಲಿ ಹೆಚ್ಚು ದಿನ ಇರುವುದಿಲ್ಲವೆಂದು ನೆನೆಸಿದ್ದೆ. ಯೆಹೋವನನ್ನು ಪೂರ್ಣ ಹೃದಯದಿಂದ ಸೇವೆ ಮಾಡಬೇಕೆಂಬ ಬಯಕೆ ನನಗಿತ್ತು. ಆದರೆ ನನಗೆ ನನ್ನ ಕುಟುಂಬದವರನ್ನು ಬಿಟ್ಟಿರುವುದಕ್ಕೆ ಕಷ್ಟವಾಗುತ್ತಿತ್ತು. ಆರಂಭದಲ್ಲಿ ಕುಟುಂಬದವರೆಲ್ಲಾ ತುಂಬಾ ನೆನಪಾಗುತ್ತಿದ್ದರು. ಆಗ ನನ್ನ ರೂ೦ಮೇಟ್‌ ಆಗಿದ್ದ ಸಹೋದರಿ ನನ್ನನ್ನು ಪ್ರೋತ್ಸಾಹಿಸಿದರು ಮತ್ತು ಆ ಪ್ರೋತ್ಸಾಹದಿಂದ ನಾನು ಬೆತೆಲ್‌ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದೆ. ಈಗ ನಾನು ಬೆತೆಲಿಗೆ ಬಂದು ಹತ್ತು ವರ್ಷಗಳು ಕಳೆದಿವೆ. ಈ ಬೆತೆಲ್‌ ಸೇವೆಯನ್ನು ನನಗೆ ಎಲ್ಲಿಯವರೆಗೆ ಆಗುತ್ತದೋ ಅಲ್ಲಿಯವರೆಗೆ ಮುಂದುವರಿಸುತ್ತಾ ನಮ್ಮ ಸಹೋದರ ಸಹೋದರಿಯರಿಗಾಗಿ ಸೇವೆ ಮಾಡಲು ನಾನು ಬಯಸುತ್ತೇನೆ.”

ಮನಸ್ಸನ್ನು ಬದಲಾಯಿಸಲೇಬೇಕಾದ ಸಂದರ್ಭಗಳು

ಕಾಯಿನನು ತನ್ನ ತಮ್ಮನ ಮೇಲೆ ಹೊಟ್ಟೆಕಿಚ್ಚು ಪಟ್ಟು ಕೋಪದಿಂದ ಕೆಂಡಕಾರಿದನು. ಇದರಿಂದ ಅವನಿಗೆ ಏನಾಯಿತು ಎಂದು ನಿಮಗೆ ನೆನಪಿದೆಯಾ? ಮನಸ್ಸಿನಲ್ಲಿ ಅಸಮಾಧಾನ ತುಂಬಿಕೊಂಡಿರುವ ವ್ಯಕ್ತಿಯಾಗಿದ್ದ ಕಾಯಿನನು ಒಳ್ಳೆಯ ಕೆಲಸ ಮಾಡುವುದಾದರೆ ಪುನಃ ತನ್ನ ಮೆಚ್ಚಿಕೆಗೆ ಪಾತ್ರನಾಗಬಹುದೆಂದು ದೇವರು ತಿಳಿಸಿದ್ದನು. ಕಾಯಿನನನ್ನು ಹಿಡಿಯಲೆಂದೇ “ಬಾಗಲಲ್ಲಿ ಹೊಂಚಿಕೊಂಡಿರುವ” ಪಾಪಮಯ ಬಯಕೆಗಳ ಮೇಲೆ ಹಿಡಿತ ಸಾಧಿಸುವಂತೆ ದೇವರು ಅವನಿಗೆ ಸಲಹೆ ಕೊಟ್ಟನು. ಆದರೆ ಕಾಯಿನನು ತನ್ನ ಮನೋಭಾವ ಮತ್ತು ಮನಸ್ಸನ್ನು ಬದಲಾಯಿಸಕೊಳ್ಳದೇ ದೇವರ ಸಲಹೆಯನ್ನು ನಿರಾಕರಿಸಿದನು. ಹೀಗೆ ಮಾಡಿ ಕಾಯಿನನು ತನ್ನ ತಮ್ಮನನ್ನು ಕೊಂದು ಮೊದಲ ಮಾನವ ಕೊಲೆಗಾರನಾದನು. ಇದು ಎಂತಹ ದುಃಖಕರ ವಿಷಯವಲ್ಲವೇ?—ಆದಿ. 4:2-8.

ಕಾಯಿನನು ತನ್ನ ಮನಸ್ಸನ್ನು ಬದಲಾಯಿಸಿಕೊಂಡಿದ್ದರೆ ಏನಾಗಿರುತ್ತಿತ್ತು?

ರಾಜ ಉಜ್ಜೀಯನ ಉದಾಹರಣೆಯನ್ನು ಪರಿಗಣಿಸೋಣ. ಆರಂಭದಲ್ಲಿ ಅವನು ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿಯಾಗಿತ್ತೋ ಅದನ್ನೇ ಮಾಡುತ್ತಿದ್ದನು ಮತ್ತು ದೇವರನ್ನೇ ಅವಲಂಬಿಸಿದ್ದನು. ದುಃಖಕರ ಸಂಗತಿಯೇನೆಂದರೆ ಕಾಲಕ್ರಮೇಣ ಉಜ್ಜೀಯನು ಗರ್ವಿಷ್ಠನಾಗಿ ದೇವರೊಂದಿಗೆ ತನಗಿದ್ದ ಒಳ್ಳೆಯ ಹೆಸರನ್ನು ಹಾಳು ಮಾಡಿಕೊಂಡನು. ಯಾಜಕನಲ್ಲದಿದ್ದರೂ ಧೂಪಹಾಕಲು ದೇವಾಲಯವನ್ನು ಪ್ರವೇಶಿಸಿದನು. ಇಂತಹ ದುರಭಿಮಾನದ ಕೆಲಸ ಮಾಡದಂತೆ ಯಾಜಕರು ಅವನನ್ನು ಎಚ್ಚರಿಸಿದಾಗ ಅವನು ತನ್ನ ಮನಸ್ಸನ್ನು ಬದಲಾಯಿಸಿಕೊಂಡನೇ? ಇಲ್ಲ. ಉಜ್ಜೀಯನು ‘ಕೋಪಗೊಂಡು’ ಅವರ ಎಚ್ಚರಿಕೆಯನ್ನು ಅಸಡ್ಡೆ ಮಾಡಿದನು. ಇದರ ಪರಿಣಾಮವಾಗಿ ಯೆಹೋವನು ಅವನನ್ನು ಕುಷ್ಠದಿಂದ ಬಾಧಿಸಿದನು.—2 ಪೂರ್ವ. 26:3-5, 16-20.

ಹೌದು, ಕೆಲವೊಂದು ಸಂದರ್ಭಗಳಲ್ಲಿ ನಾವು ನಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಲೇಬೇಕು. ಉದಾಹರಣೆಗೆ, ನಮ್ಮೀ ದಿನಗಳಲ್ಲಿ ನಡೆದ ಒಂದು ಘಟನೆಯನ್ನು ನೋಡೋಣ. ಜಾಕೆಮ್‌ ಎಂಬಾತನಿಗೆ 1955ರಲ್ಲಿ ದೀಕ್ಷಾಸ್ನಾನವಾಯಿತು. ಆದರೆ 1978ರಲ್ಲಿ ಅವನು ಬಹಿಷ್ಕರಿಸಲ್ಪಟ್ಟನು. ಇದಾದ 20 ವರ್ಷಗಳ ನಂತರ ಅವನು ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟ ಕಾರಣ ಅವನನ್ನು ಒಬ್ಬ ಯೆಹೋವನ ಸಾಕ್ಷಿಯಾಗಿ ಪುನಸ್ಸ್ಥಾಪಿಸಲಾಯಿತು. ಇತ್ತೀಚೆಗೆ, ಸಭಾ ಹಿರಿಯನೊಬ್ಬನು ಜಾಕೆಮ್ನನ್ನು ಸಭೆಗೆ ವಾಪಸ್ಸಾಗಲು ಅಷ್ಟು ವರ್ಷಗಳನ್ನು ತೆಗೆದುಕೊಂಡದ್ದು ಯಾಕೆಂದು ಕೇಳಿದಾಗ: “ಯೆಹೋವನ ಸಾಕ್ಷಿಗಳು ಹೇಳಿಕೊಟ್ಟಿದ್ದು ಸತ್ಯ ಎನ್ನುವುದು ನನಗೆ ಬಹಿಷ್ಕಾರವಾಗಿದ್ದ ಸಮಯದಲ್ಲೂ ಗೊತ್ತಿತ್ತು. ಆದರೆ ಆಗ ನನ್ನಲ್ಲಿದ್ದ ಕೋಪ ಮತ್ತು ಅಹಂಕಾರ ನಾನು ತಿರುಗಿ ಸಭೆಗೆ ಮರಳದಂತೆ ತಡೆದಿದ್ದವು. ಅದಕ್ಕಾಗಿ ನಾನು ಪರಿತಪಿಸುತ್ತೇನೆ” ಎಂದನು. ಈ ಉದಾಹರಣೆಯಿಂದ ನಾವು ತಿಳಿದುಕೊಳ್ಳುವುದೇನೆಂದರೆ, ಯಾವಾಗ ಅವನು ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಪಶ್ಚಾತ್ತಾಪ ಪಟ್ಟನೋ, ಆಗಲೇ ಅವನು ಸಭೆಗೆ ಹಿಂದಿರುಗಲು ಸಾಧ್ಯಾವಾದದ್ದು.

ನಮ್ಮ ಮನಸ್ಸನ್ನು ಮತ್ತು ಆಯ್ಕೆಯನ್ನು ಬದಲಾಯಿಸಲೇಬೇಕಾದಂಥ ಸಂದರ್ಭಗಳು ನಮಗೆದುರಾಗಬಹುದು. ಅಂಥ ಸಂದರ್ಭಗಳಲ್ಲಿ ಯೆಹೋವನ ದೃಷ್ಟಿಗೆ ಸರಿಯಾದದ್ದನ್ನು ಮಾಡಲು ನಾವು ಮನಸ್ಸು ಮಾಡೋಣ.—ಕೀರ್ತ. 34:8.