ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ‘ಅರ್ಥವನ್ನು ಗ್ರಹಿಸುತ್ತೀರೋ?’

ನೀವು ‘ಅರ್ಥವನ್ನು ಗ್ರಹಿಸುತ್ತೀರೋ?’

‘ಅವನು ಶಾಸ್ತ್ರಗ್ರಂಥದ ಅರ್ಥವನ್ನು ಗ್ರಹಿಸುವಂತೆ ಅವರ ಮನಸ್ಸುಗಳನ್ನು ಪೂರ್ಣವಾಗಿ ತೆರೆದನು.’—ಲೂಕ 24:45.

1, 2. ಪುನರುತ್ಥಾನವಾದ ದಿನದಂದು ಯೇಸು ತನ್ನ ಶಿಷ್ಯರನ್ನು ಬಲಪಡಿಸಿದ್ದು ಹೇಗೆ?

ಯೇಸುವಿನ ಪುನರುತ್ಥಾನವಾದ ದಿನ. ಅವನ ಇಬ್ಬರು ಶಿಷ್ಯರು ಯೆರೂಸಲೇಮಿನಿಂದ ಸುಮಾರು 11.2 ಕಿ.ಮಿ. ದೂರದಲ್ಲಿರುವ ಹಳ್ಳಿಗೆ ನಡೆದುಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ನಡೆದ ಘಟನೆಗಳಿಂದ ಅವರ ಹೃದಯ ಭಾರವಾಗಿತ್ತು. ಯೇಸುವಿಗೆ ಪುನರುತ್ಥಾನವಾಗಿರುವ ವಿಷಯ ಅವರಿಗೆ ಇನ್ನೂ ಗೊತ್ತಿರಲಿಲ್ಲ. ಆದರೆ ಇದ್ದಕ್ಕಿದಂತೆ ಯೇಸು ಕಾಣಿಸಿಕೊಂಡು ಶಿಷ್ಯರೊಂದಿಗೆ ನಡೆಯಲು ಶುರುಮಾಡಿದನು. ಅವನು ತನ್ನ ಶಿಷ್ಯರಿಗೆ ಸಾಂತ್ವನ ಕೊಟ್ಟನು. ಹೇಗೆ? “ಮೋಶೆಯ ಮತ್ತು ಎಲ್ಲ ಪ್ರವಾದಿಗಳ ಗ್ರಂಥದಿಂದ ಆರಂಭಿಸಿ, ಶಾಸ್ತ್ರಗ್ರಂಥದಾದ್ಯಂತ ತನ್ನ ಕುರಿತು ತಿಳಿಸಲ್ಪಟ್ಟಿರುವ ವಿಷಯಗಳನ್ನು ಅವರಿಗೆ ವಿವರಿಸಿದನು.” (ಲೂಕ 24:13-15, 27) ಅದನ್ನು ಕೇಳಿಸಿಕೊಂಡಾಗ ಅವರ ಹೃದಯ ಕುದಿಯಲು ಆರಂಭಿಸಿತು. ಯಾಕೆಂದರೆ ಯೇಸು ಅವರಿಗೆ ಶಾಸ್ತ್ರವಚನಗಳನ್ನು ‘ಸಂಪೂರ್ಣವಾಗಿ ವಿವರಿಸಿದನು.’—ಲೂಕ 24:32.

2 ಅದೇ ಸಾಯಂಕಾಲ ಈ ಇಬ್ಬರು ಶಿಷ್ಯರು ಯೆರೂಸಲೇಮಿಗೆ ವಾಪಸ್ಸು ಹೋದರು. ಅಲ್ಲಿ ಅವರು ಇತರ ಅಪೊಸ್ತಲರಿಗೆ ನಡೆದ ಸಂಗತಿಯನ್ನೆಲ್ಲಾ ಹೇಳಿದರು. ಅವರು ಮಾತಾಡುತ್ತಿದ್ದಾಗ ಯೇಸು ಅವರೆಲ್ಲರಿಗೆ ಕಾಣಿಸಿಕೊಂಡನು. ಅಪೊಸ್ತಲರು ಆಗ ಬೆಚ್ಚಿಬಿದ್ದರು. ಅವರಲ್ಲಿ ಸಂಶಯಗಳು ಹುಟ್ಟಿಕೊಂಡವು. ಆದರೆ ಯೇಸು ಅವರನ್ನು ಬಲಪಡಿಸಿದ್ದು ಹೇಗೆ? ‘ಶಾಸ್ತ್ರಗ್ರಂಥದ ಅರ್ಥವನ್ನು ಗ್ರಹಿಸುವಂತೆ ಅವರ ಮನಸ್ಸುಗಳನ್ನು ಪೂರ್ಣವಾಗಿ ತೆರೆದನು’ ಎನ್ನುತ್ತದೆ ಬೈಬಲ್‌.—ಲೂಕ 24:45.

3. (ಎ) ನಮಗೆ ಯಾವ ಸವಾಲುಗಳು ಎದುರಾಗಬಹುದು? (ಬಿ) ಸೇವೆಯಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಲು ಯಾವುದು ಸಹಾಯ ಮಾಡಬಲ್ಲದು?

3 ಯೇಸುವಿನ ಶಿಷ್ಯರಂತೆ ನಮಗೂ ಕೆಲವೊಮ್ಮೆ ದುಃಖ ಆಗಬಹುದು. ನಾವು ಯೆಹೋವನ ಸೇವೆಯಲ್ಲಿ ತುಂಬ ಸಮಯ ಕಳೆಯುತ್ತಿದ್ದರೂ ಒಳ್ಳೇ ಫಲಿತಾಂಶ ಸಿಗದಿರುವ ಕಾರಣ ನಿರುತ್ತೇಜಿತರಾಗಿರಬಹುದು. (1 ಕೊರಿಂ. 15:58) ಅಥವಾ ನಮ್ಮ ಬೈಬಲ್‌ ವಿದ್ಯಾರ್ಥಿಗಳು ಹೆಚ್ಚು ಪ್ರಗತಿ ಮಾಡುತ್ತಿಲ್ಲ ಎಂದನಿಸಬಹುದು. ಇನ್ನೂ ಕೆಲವು ವಿದ್ಯಾರ್ಥಿಗಳು ಯೆಹೋವನಿಗೆ ಬೆನ್ನುಹಾಕಬಹುದು. ಇಂಥ ಸಂದರ್ಭಗಳಲ್ಲಿ ನಾವು ಸೇವೆಯಲ್ಲಿ ಸಂತೋಷವನ್ನು ಕಾಪಾಡಿಕೊಳ್ಳುವುದು ಹೇಗೆ? ನಮಗೆ ಸಹಾಯ ಮಾಡಬಲ್ಲ ಒಂದು ವಿಷಯ ಏನೆಂದರೆ ಬೈಬಲಿನಲ್ಲಿ ದಾಖಲಾಗಿರುವ ಯೇಸುವಿನ ದೃಷ್ಟಾಂತಗಳ ಅರ್ಥವನ್ನು ಪೂರ್ಣವಾಗಿ ಗ್ರಹಿಸುವುದು. ಅವನು ಕೊಟ್ಟ ಮೂರು ದೃಷ್ಟಾಂತಗಳನ್ನು ನಾವೀಗ ಚರ್ಚಿಸಿ ಅವುಗಳಿಂದ ಏನನ್ನು ಕಲಿಯಬಹುದು ಎಂದು ತಿಳಿಯೋಣ.

ನಿದ್ದೆ ಮಾಡಿದ ಬಿತ್ತನೆಗಾರ

4. ನಿದ್ದೆ ಮಾಡಿದ ಬಿತ್ತನೆಗಾರನ ಕುರಿತು ಯೇಸು ಹೇಳಿದ ದೃಷ್ಟಾಂತದ ಅರ್ಥವೇನು?

4 ಮಾರ್ಕ 4:26-29 ಓದಿ. ನಿದ್ದೆ ಮಾಡಿದ ಬಿತ್ತನೆಗಾರನ ಕುರಿತು ಯೇಸು ಹೇಳಿದ ದೃಷ್ಟಾಂತದ ಅರ್ಥವೇನು? ದೃಷ್ಟಾಂತದಲ್ಲಿ ತಿಳಿಸಲಾಗಿರುವ ಮನುಷ್ಯ ಪ್ರತಿಯೊಬ್ಬ ರಾಜ್ಯ ಪ್ರಚಾರಕನನ್ನು ಚಿತ್ರಿಸುತ್ತಾನೆ. ಬೀಜವು ಪ್ರಾಮಾಣಿಕ ಹೃದಯದ ಜನರಿಗೆ ಸಾರಲಾಗುವ ರಾಜ್ಯದ ಸುವಾರ್ತೆಯಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ಮಾಡುವ ನಿತ್ಯದ ಕೆಲಸಗಳನ್ನೇ ಬಿತ್ತನೆಗಾರ ಮಾಡಿದನು. ಅಂದರೆ ‘ರಾತ್ರಿ ಮಲಗುತ್ತಿದ್ದನು, ಹಗಲು ಎದ್ದಿರುತ್ತಿದ್ದನು.’ ಬೀಜವನ್ನು ಬಿತ್ತಿದಂದಿನಿಂದ ಕೊಯ್ಲಿನ ವರೆಗೆ ಬೆಳೆಯುವ ಪ್ರಕ್ರಿಯೆ ನಡೆಯುತ್ತದೆ. ಈ ಸಮಯದಲ್ಲಿ “ಬೀಜವು ಮೊಳೆತು ಎತ್ತರವಾಗಿ ಬೆಳೆಯುತ್ತದೆ.” ಈ ಬೆಳವಣಿಗೆ ತನ್ನಿಂದ “ತಾನೇ” ಕ್ರಮೇಣವಾಗಿ, ಹಂತಹಂತವಾಗಿ ನಡೆಯುತ್ತದೆ. ಅದೇ ರೀತಿ ಆಧ್ಯಾತ್ಮಿಕ ಬೆಳವಣಿಗೆ ಕೂಡ ಕ್ರಮೇಣವಾಗಿ, ಹಂತಹಂತವಾಗಿ ನಡೆಯುತ್ತದೆ. ದೇವರ ಸೇವೆಮಾಡಬೇಕು ಎಂಬ ಆಸೆ ಅವನಲ್ಲಿ ಉಂಟಾಗುವ ಹಂತದ ವರೆಗೆ ಅವನು ಪ್ರಗತಿಮಾಡಿದಾಗ ಯೆಹೋವನಿಗೆ ತನ್ನನ್ನೇ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯುತ್ತಾನೆ. ಈ ಅರ್ಥದಲ್ಲಿ ಫಲ ಕೊಡುತ್ತಾನೆ.

5. ನಿದ್ದೆ ಮಾಡಿದ ಬಿತ್ತನೆಗಾರನ ದೃಷ್ಟಾಂತವನ್ನು ಯೇಸು ಏಕೆ ಕೊಟ್ಟನು?

5 ಯೇಸು ಈ ದೃಷ್ಟಾಂತವನ್ನು ಏಕೆ ಕೊಟ್ಟನು? ‘ಯೋಗ್ಯ ಮನೋಭಾವದ’ ಜನರ ಹೃದಯದಲ್ಲಿ ಸತ್ಯ ಬೆಳೆಯುವಂತೆ ಮಾಡುವವನು ಯೆಹೋವನೆಂದು ಅರ್ಥಮಾಡಿಕೊಳ್ಳಲು ಯೇಸು ಸಹಾಯಮಾಡುತ್ತಾನೆ. (ಅ. ಕಾ. 13:48; 1 ಕೊರಿಂ. 3:7) ನಾವು ಬೀಜ ಬಿತ್ತಿ ನೀರು ಹಾಕಬಹುದು. ಆದರೆ ಅದರ ಬೆಳವಣಿಗೆ ನಮ್ಮ ಕೈಯಲಿಲ್ಲ. ಬೆಳೆಯುವಂತೆ ಬಲವಂತಪಡಿಸಲು ಸಾಧ್ಯವಿಲ್ಲ. ಬೇಗ ಬೆಳೆಯುವಂತೆ ಮಾಡಲೂ ಸಾಧ್ಯವಿಲ್ಲ. ಬೀಜ ಹೇಗೆ ಬೆಳೆಯುತ್ತದೆ ಎನ್ನುವುದು ದೃಷ್ಟಾಂತದಲ್ಲಿ ತಿಳಿಸಲಾದ ಮನುಷ್ಯನಂತೆ ನಮಗೂ ಗೊತ್ತಾಗುವುದಿಲ್ಲ. ಪ್ರತಿದಿನದ ಕೆಲಸಗಳಲ್ಲಿ ನಾವು ಮಗ್ನರಾಗಿರುವಾಗ ಬೀಜದ ಬೆಳವಣಿಗೆ ನಮ್ಮ ಗಮನಕ್ಕೆ ಬರಲಿಕ್ಕಿಲ್ಲ. ಆದರೆ ತಕ್ಕ ಸಮಯದಲ್ಲಿ ರಾಜ್ಯದ ಬೀಜ ಫಲ ಕೊಡಬಹುದು. ನಂತರ ಈ ಹೊಸ ಶಿಷ್ಯನು ನಮ್ಮೊಂದಿಗೆ ಕೊಯ್ಲಿನ ಕೆಲಸದಲ್ಲಿ ಭಾಗವಹಿಸುತ್ತಾನೆ. ಹೀಗೆ ಈ ಕೆಲಸದಲ್ಲಿ ನಮ್ಮೊಂದಿಗೆ ಕೈಜೋಡಿಸುತ್ತಾನೆ.—ಯೋಹಾ. 4:36-38.

6. ಆಧ್ಯಾತ್ಮಿಕ ಬೆಳವಣಿಗೆಯ ಕುರಿತು ನಾವೇನನ್ನು ಒಪ್ಪಿಕೊಳ್ಳಬೇಕು?

6 ಈ ದೃಷ್ಟಾಂತದಿಂದ ನಾವೇನು ಕಲಿಯಬಹುದು? ಮೊದಲನೇದಾಗಿ, ಬೈಬಲ್‌ ವಿದ್ಯಾರ್ಥಿಯ ಆಧ್ಯಾತ್ಮಿಕ ಬೆಳವಣಿಗೆ ನಮ್ಮ ಕೈಯಲಿಲ್ಲ ಎಂದು ಒಪ್ಪಿಕೊಳ್ಳಬೇಕು. ಈ ಇತಿಮಿತಿಯನ್ನು ಮನಸ್ಸಿನಲ್ಲಿಟ್ಟರೆ ನಾವು ವಿದ್ಯಾರ್ಥಿಗೆ ದೀಕ್ಷಾಸ್ನಾನ ಪಡೆಯುವಂತೆ ಒತ್ತಡ ಹಾಕುವುದಿಲ್ಲ ಅಥವಾ ಒತ್ತಾಯ ಮಾಡುವುದಿಲ್ಲ. ಆಧ್ಯಾತ್ಮಿಕವಾದ ಎಲ್ಲ ಸಹಾಯ, ಬೆಂಬಲ ಕೊಡುತ್ತೇವಾದರೂ ಸಮರ್ಪಣೆ ಮಾಡಿಕೊಳ್ಳುವ ನಿರ್ಧಾರ ಅವರಿಗೇ ಬಿಟ್ಟದ್ದು ಎಂದು ದೀನತೆಯಿಂದ ಒಪ್ಪಿಕೊಳ್ಳುತ್ತೇವೆ. ಒಬ್ಬ ವ್ಯಕ್ತಿ ಯೆಹೋವನ ಮೇಲೆ ನಿಜವಾದ ಪ್ರೀತಿಯಿಂದ ಸಮರ್ಪಣೆ ಮಾಡಿದರೆ ಮಾತ್ರ ಆತನು ಅದನ್ನು ಅಂಗೀಕರಿಸುತ್ತಾನೆ.—ಕೀರ್ತ. 51:12; 54:7; 110:3.

7, 8. (ಎ) ನಿದ್ದೆಮಾಡಿದ ಬಿತ್ತನೆಗಾರನ ಕುರಿತು ಯೇಸು ಕೊಟ್ಟ ದೃಷ್ಟಾಂತದಿಂದ ಇನ್ನೂ ಯಾವ ಪಾಠಗಳನ್ನು ಕಲಿಯಬಹುದು? ಉದಾಹರಣೆ ಕೊಡಿ. (ಬಿ) ಇದು ಯೆಹೋವ ಮತ್ತು ಯೇಸುವಿನ ಬಗ್ಗೆ ಏನು ಕಲಿಸುತ್ತದೆ?

7 ಎರಡನೇದಾಗಿ, ನಮ್ಮ ಕೆಲಸಕ್ಕೆ ಮೊದಮೊದಲು ಯಾವುದೇ ಫಲಿತಾಂಶ ಸಿಗುತ್ತಿಲ್ಲ ಎಂದು ನಮಗನಿಸಿದರೂ ನಿರಾಶೆಗೊಳ್ಳದಿರಲು ಈ ದೃಷ್ಟಾಂತದಿಂದ ಕಲಿತ ಪಾಠ ನಮಗೆ ಸಹಾಯ ಮಾಡುತ್ತದೆ. ನಾವು ತಾಳ್ಮೆಯಿಂದಿರಬೇಕು. (ಯಾಕೋ. 5:7, 8) ವಿದ್ಯಾರ್ಥಿಗೆ ಸಹಾಯ ಮಾಡಲು ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿದ ಮೇಲೂ ಬೀಜ ಫಲ ಕೊಡಲಿಲ್ಲ ಎಂದಮಾತ್ರಕ್ಕೆ ನಾವು ಒಳ್ಳೇ ಬೋಧಕರಲ್ಲ ಎಂದು ನೆನಸಬಾರದು. ಬದಲಾವಣೆಗಳನ್ನು ಮಾಡಲು ಸಿದ್ಧವಿರುವ ದೀನ ಹೃದಯದಲ್ಲಿ ಮಾತ್ರ ಸತ್ಯ ಬೆಳೆಯುವಂತೆ ಯೆಹೋವನು ಅನುಮತಿಸುತ್ತಾನೆ. (ಮತ್ತಾ. 13:23) ಆದ್ದರಿಂದ ನಮ್ಮ ಸೇವೆ ಪರಿಣಾಮಕಾರಿ ಆಗಿದೆಯಾ ಇಲ್ಲವಾ ಎನ್ನುವುದು ಕೇವಲ ಫಲಿತಾಂಶಗಳಿಂದ ನಿರ್ಧರಿಸಬಾರದು. ಯೆಹೋವನು ನಮ್ಮ ವಿದ್ಯಾರ್ಥಿಯ ಪ್ರತಿಕ್ರಿಯೆಯಿಂದ ಮಾತ್ರ ನಮ್ಮ ಸೇವೆಯ ಯಶಸ್ಸನ್ನು ಅಳೆಯುವುದಿಲ್ಲ. ಬದಲಾಗಿ ಫಲಿತಾಂಶಗಳನ್ನು ಲೆಕ್ಕಿಸದೆ ನಾವು ನಂಬಿಗಸ್ತಿಕೆಯಿಂದ ಮಾಡುವ ಪ್ರಯತ್ನಗಳನ್ನು ಅಮೂಲ್ಯವೆಂದೆಣಿಸುತ್ತಾನೆ.—ಲೂಕ 10:17-20; 1 ಕೊರಿಂಥ 3:8 ಓದಿ.

8 ಮೂರನೇದಾಗಿ, ವ್ಯಕ್ತಿಯಲ್ಲಾಗುವ ಬದಲಾವಣೆಗಳನ್ನು ನಾವು ಯಾವಾಗಲೂ ನೋಡಲು ಸಾಧ್ಯವಿಲ್ಲ. ಉದಾಹರಣೆಗೆ, ಮಿಷನರಿಯೊಬ್ಬರು ಒಂದು ದಂಪತಿಯೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದರು. ಅವರು ಒಮ್ಮೆ ಮಿಷನರಿ ಬಳಿ ಬಂದು ನಾವು ಅಸ್ನಾನಿತ ಪ್ರಚಾರಕರಾಗಲು ಇಷ್ಟಪಡುತ್ತೇವೆ ಎಂದರು. ಆಗ ಮಿಷನರಿ ನೀವು ಪ್ರಚಾರಕರಾಗಬೇಕಾದರೆ ಧೂಮಪಾನ ನಿಲ್ಲಿಸಬೇಕು ಎಂದು ಹೇಳಿದರು. ಅದಕ್ಕವರು ನಾವು ಧೂಮಪಾನ ನಿಲ್ಲಿಸಿ ಹಲವು ತಿಂಗಳುಗಳಾದವು ಎಂದರು. ಇದನ್ನು ಕೇಳಿ ಮಿಷನರಿಗೆ ತುಂಬ ಆಶ್ಚರ್ಯ ಆಯಿತು. ಆ ದಂಪತಿ ಧೂಮಪಾನ ನಿಲ್ಲಿಸಿದ್ದೇಕೆ? ಧೂಮಪಾನ ಮಾಡುವುದನ್ನು ಯಾರು ನೋಡದಿದ್ದರೂ ಯೆಹೋವನು ನೋಡುತ್ತಾನೆ, ಆತನು ಕಪಟಿಗಳನ್ನು ದ್ವೇಷಿಸುತ್ತಾನೆ ಎಂದವರು ಗ್ರಹಿಸಿದ್ದರಿಂದಲೇ. ಆದ್ದರಿಂದ ಅವರ ಹೃದಯ ಈ ಒಂದು ನಿರ್ಣಯ ಮಾಡಲು ಪ್ರಚೋದಿಸಿತು. ಅದೇನೆಂದರೆ ಧೂಮಪಾನ ಮಾಡಿದರೆ ಮಿಷನರಿ ಮುಂದೆಯೂ ಮಾಡಬೇಕು ಇಲ್ಲದಿದ್ದರೆ ಸಂಪೂರ್ಣವಾಗಿ ನಿಲ್ಲಿಸಿಬಿಡಬೇಕು. ಯೆಹೋವನ ಮೇಲೆ ಅವರು ಹೊಸದಾಗಿ ಬೆಳೆಸಿಕೊಂಡಿದ್ದ ಪ್ರೀತಿ ಸರಿಯಾದ ನಿರ್ಣಯಮಾಡಲು ಸಹಾಯ ಮಾಡಿತ್ತು. ಆ ದಂಪತಿ ಆಧ್ಯಾತ್ಮಿಕವಾಗಿ ಬೆಳೆದಿದ್ದರು. ಆದರೆ ಮಿಷನರಿಗೆ ಅವರಲ್ಲಾದ ಬದಲಾವಣೆ ಗೊತ್ತೇ ಆಗಿರಲಿಲ್ಲ.

ಸೆಳೆಬಲೆ

9. ಸೆಳೆಬಲೆಯ ಕುರಿತು ಯೇಸು ಹೇಳಿದ ದೃಷ್ಟಾಂತದ ಅರ್ಥವೇನು?

9 ಮತ್ತಾಯ 13:47-50 ಓದಿ. ಸೆಳೆಬಲೆಯ ಕುರಿತು ಯೇಸು ಹೇಳಿದ ದೃಷ್ಟಾಂತದ ಅರ್ಥವೇನು? ಮಾನವಕುಲಕ್ಕೆ ಸಾರಲಾಗುವ ರಾಜ್ಯದ ಸುವಾರ್ತೆಯನ್ನು ಸಮುದ್ರಕ್ಕೆ ಎಸೆಯುವ ದೊಡ್ಡ ಸೆಳೆಬಲೆಗೆ ಯೇಸು ಹೋಲಿಸುತ್ತಾನೆ. ಆ ಸೆಳೆಬಲೆಯಲ್ಲಿ ‘ಎಲ್ಲ ರೀತಿಯ ಮೀನುಗಳನ್ನು’ ದೊಡ್ಡ ಪ್ರಮಾಣದಲ್ಲಿ ಹಿಡಿಯಬಹುದು. ಹಾಗೆಯೇ ಸಾರುವ ಕೆಲಸ ಬೇರೆಬೇರೆ ರೀತಿಯ ಮಿಲ್ಯಾಂತರ ಜನರನ್ನು ಆಕರ್ಷಿಸುತ್ತದೆ. (ಯೆಶಾ. 60:5) ಪ್ರತಿ ವರ್ಷ ಅಧಿವೇಶನಕ್ಕೆ ಹಾಗೂ ಸ್ಮರಣೆಗೆ ಹಾಜರಾಗುವವರ ದೊಡ್ಡ ಸಂಖ್ಯೆ ಇದಕ್ಕೆ ಸಾಕ್ಷಿ. ಈ ಜನರಲ್ಲಿ ಕೆಲವರು ‘ಒಳ್ಳೆಯ ಮೀನು’ಗಳಂತಿದ್ದಾರೆ. ಇವರು ನಮ್ಮ ಕ್ರೈಸ್ತ ಸಭೆಯ ಭಾಗವಾಗುತ್ತಾರೆ. ಇನ್ನೂ ಕೆಲವರು ‘ಉಪಯೋಗಕ್ಕೆ ಬಾರದ ಮೀನು’ಗಳಂತಿದ್ದಾರೆ. ಇವರು ಯೆಹೋವನ ಅಂಗೀಕಾರವನ್ನು ಪಡೆಯುವುದಿಲ್ಲ.

ಮತ್ತಾಯ 13:47-50 ಓದಿದ ಮೇಲೆ . . .

10. ಯೇಸು ಸೆಳೆಬಲೆಯ ದೃಷ್ಟಾಂತ ಕೊಟ್ಟದ್ದೇಕೆ?

10 ಈ ದೃಷ್ಟಾಂತದಿಂದ ನಾವೇನು ಕಲಿಯಬಹುದು? ಮೀನುಗಳ ಸಾಂಕೇತಿಕ ಬೇರ್ಪಡಿಸುವಿಕೆ ಮಹಾ ಸಂಕಟದ ಸಮಯದಲ್ಲಾಗುವ ಕೊನೆಯ ನ್ಯಾಯತೀರ್ಪು ಅಲ್ಲ. ಬದಲಾಗಿ ಅದು ದುಷ್ಟ ವ್ಯವಸ್ಥೆಯ ಕಡೇ ದಿವಸಗಳಲ್ಲಿ ನಡೆಯುವಂಥದ್ದು. ಸತ್ಯದ ಕಡೆಗೆ ಆಕರ್ಷಿತರಾದ ಎಲ್ಲರೂ ಯೆಹೋವನ ಪಕ್ಷ ವಹಿಸುವುದಿಲ್ಲ ಎಂದು ಯೇಸು ತೋರಿಸಿಕೊಟ್ಟನು. ಅನೇಕರು ನಮ್ಮ ಕೂಟಗಳಿಗೆ ಬಂದಿದ್ದಾರೆ. ಇತರರು ಬೈಬಲ್‌ ಅಧ್ಯಯನ ಮಾಡಿದ್ದಾರೆ. ಆದರೆ ದೀಕ್ಷಾಸ್ನಾನ ಪಡೆಯಲು ಸಿದ್ಧರಿಲ್ಲ. (1 ಅರ. 18:21) ಮತ್ತಿತರರು ಕ್ರೈಸ್ತ ಸಭೆಯೊಂದಿಗಿನ ಒಡನಾಟವನ್ನು ನಿಲ್ಲಿಸಿಬಿಟ್ಟಿದ್ದಾರೆ. ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಟ್ಟ ಕೆಲವು ಯುವಜನರಿಗೆ ಯೆಹೋವನ ಮಟ್ಟಗಳಿಗಾಗಿ ಪ್ರೀತಿಯಿಲ್ಲ. ವಿಷಯ ಏನೇ ಇರಲಿ ಯೇಸು ಒತ್ತಿಹೇಳಿದಂತೆ ಪ್ರತಿಯೊಬ್ಬರು ಸ್ವಂತ ನಿರ್ಣಯ ಮಾಡಬೇಕು. ಆಗ ಯೆಹೋವನು ಅವರನ್ನು ‘ಸಮಸ್ತಜನಾಂಗಗಳ ಇಷ್ಟವಸ್ತುಗಳನ್ನಾಗಿ’ ನೋಡುವನು.—ಹಗ್ಗಾ. 2:7.

. . . ಅದರ ಆಧುನಿಕ ಅನ್ವಯ ಪರಿಗಣಿಸಿ

11, 12. (ಎ) ಸೆಳೆಬಲೆಯ ದೃಷ್ಟಾಂತದಿಂದ ನಮಗೇನು ಪ್ರಯೋಜನ? (ಬಿ) ಇದು ಯೆಹೋವ ಮತ್ತು ಯೇಸುವಿನ ಬಗ್ಗೆ ಏನು ಕಲಿಸುತ್ತದೆ?

11 ಸೆಳೆಬಲೆಯ ದೃಷ್ಟಾಂತದಲ್ಲಿ ಯೇಸು ಏನನ್ನು ಕಲಿಸಿದನೊ ಅದರಿಂದ ನಮಗೇನು ಪ್ರಯೋಜನ? ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿದ ಮೇಲೂ ನಮ್ಮ ಬೈಬಲ್‌ ವಿದ್ಯಾರ್ಥಿ ಅಥವಾ ನಮ್ಮ ಮಕ್ಕಳು ಸತ್ಯವನ್ನು ತಮ್ಮದಾಗಿಸಿಕೊಳ್ಳದಿರುವ ಸಾಧ್ಯತೆ ಇದೆ. ಆಗ ನಾವು ಅತಿಯಾಗಿ ನಿರಾಶೆಗೊಳ್ಳದಿರಲು ಯೇಸು ಕೊಟ್ಟ ಈ ದೃಷ್ಟಾಂತದಲ್ಲಿನ ಪಾಠ ಸಹಾಯಮಾಡುವುದು. ಒಬ್ಬನು ಸಾಕ್ಷಿಗಳೊಟ್ಟಿಗೆ ಬೈಬಲ್‌ ಅಧ್ಯಯನ ಮಾಡಿದ್ದಾನೆ ಅಥವಾ ಸಾಕ್ಷಿ ಕುಟುಂಬದಲ್ಲಿ ಬೆಳೆದಿದ್ದಾನೆ ಎಂದಮಾತ್ರಕ್ಕೆ ಅವನಿಗೆ ಯೆಹೋವನೊಟ್ಟಿಗೆ ಬಲವಾದ ಸಂಬಂಧ ತನ್ನಿಂದ ತಾನೇ ಬೆಳೆಯುವುದಿಲ್ಲ. ಅಲ್ಲದೆ ಯಾರು ಯೆಹೋವನ ಅಧಿಕಾರಕ್ಕೆ ಅಧೀನರಾಗಲು ನಿರಾಕರಿಸುತ್ತಾರೊ ಅವರನ್ನು ದೇವಜನರಿಂದ ಪ್ರತ್ಯೇಕಿಸಲಾಗುತ್ತದೆ.

ಸತ್ಯದ ಕಡೆ ಆಕರ್ಷಿಸಲ್ಪಟ್ಟವರಲ್ಲಿ ಕೆಲವರು ಯೆಹೋವನ ಪಕ್ಷ ವಹಿಸುತ್ತಾರೆ (ಪ್ಯಾರ 9-12 ನೋಡಿ)

12 ಇದರರ್ಥ ಸತ್ಯ ಬಿಟ್ಟು ಹೋದವರು ಪುನಃ ಸಭೆಗೆ ಹಿಂದಿರುಗಲು ಸಾಧ್ಯವೇ ಇಲ್ಲ ಎಂದಾ? ಅಥವಾ ಒಬ್ಬನು ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಳ್ಳದಿದ್ದಲ್ಲಿ ಅವನನ್ನು ‘ಉಪಯೋಗಕ್ಕೆ ಬಾರದವನೆಂದು’ ಸದಾ ಪರಿಗಣಿಸಲಾಗುತ್ತದಾ? ಇಲ್ಲ. ಮಹಾ ಸಂಕಟ ಬರುವುದರೊಳಗೆ ಅಂಥವರು ಯೆಹೋವನ ಸ್ನೇಹಿತರಾಗಲು ಅವಕಾಶವಿದೆ. ಇದು ಯೆಹೋವನೇ ಅವರನ್ನು ಸ್ವತಃ ಹೀಗೆ ಕರೆದಂತಿದೆ: “ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು.” (ಮಲಾ. 3:7) ಈ ನಿಜಾಂಶವನ್ನು ಯೇಸು ಕೊಟ್ಟ ಇನ್ನೊಂದು ದೃಷ್ಟಾಂತದಲ್ಲಿ ಒತ್ತಿಹೇಳಲಾಗಿದೆ. ಅದು ಪೋಲಿಹೋದ ಮಗನ ದೃಷ್ಟಾಂತ.—ಲೂಕ 15:11-32 ಓದಿ.

ಪೋಲಿಹೋದ ಮಗ

13. ಪೋಲಿಹೋದ ಮಗನ ಕುರಿತ ದೃಷ್ಟಾಂತದ ಅರ್ಥವೇನು?

13 ಪೋಲಿಹೋದ ಮಗನ ಕುರಿತು ಯೇಸು ಹೇಳಿದ ದೃಷ್ಟಾಂತದ ಅರ್ಥವೇನು? ಈ ದೃಷ್ಟಾಂತದಲ್ಲಿ ತಿಳಿಸಲಾಗಿರುವ ಕರುಣಾಳು ತಂದೆ ಪ್ರೀತಿಯ ಸ್ವರ್ಗೀಯ ತಂದೆ ಯೆಹೋವನನ್ನು ಚಿತ್ರಿಸುತ್ತಾನೆ. ತನ್ನ ಪಾಲಿನ ಆಸ್ತಿಯನ್ನು ಕೇಳಿ ಪಡೆದು ಪೋಲುಮಾಡಿದ ಮಗನು ಸಭೆಯನ್ನು ಬಿಟ್ಟು ಹೋಗಿರುವವರನ್ನು ಚಿತ್ರಿಸುತ್ತಾನೆ. ಅವರು ಸಭೆ ಬಿಟ್ಟು ಹೋಗುವ ಮೂಲಕ “ದೂರದೇಶಕ್ಕೆ” ಅಂದರೆ ಯೆಹೋವನಿಂದ ದೂರ ಸರಿದಿರುವ ಸೈತಾನನ ಲೋಕಕ್ಕೆ ಹೋಗುತ್ತಾರೆ. (ಎಫೆ. 4:18; ಕೊಲೊ. 1:21) ಇಂಥವರಲ್ಲಿ ಕೆಲವರಿಗೆ ತಮ್ಮ ತಪ್ಪಿನ ಅರಿವಾಗಿ ಬುದ್ಧಿ ಬಂದ ಮೇಲೆ ಯೆಹೋವನ ಸಂಘಟನೆಗೆ ವಾಪಸ್ಸು ಬರುತ್ತಾರೆ. ಇದು ಸುಲಭವಲ್ಲ. ಆದರೆ ಈ ದೀನರು ಪಶ್ಚಾತ್ತಾಪಪಟ್ಟು ವಾಪಸ್‌ ಬಂದಿರುವುದರಿಂದ ಕ್ಷಮಿಸಲು ಸದಾ ಸಿದ್ಧನಿರುವ ನಮ್ಮ ತಂದೆ ಅವರನ್ನು ಸಂತೋಷದಿಂದ ಸ್ವಾಗತಿಸುತ್ತಾನೆ.—ಯೆಶಾ. 44:22; 1 ಪೇತ್ರ 2:25.

14. ಪೋಲಿಹೋದ ಮಗನ ದೃಷ್ಟಾಂತವನ್ನು ಯೇಸು ಏಕೆ ಕೊಟ್ಟನು?

14 ಯೇಸು ಈ ದೃಷ್ಟಾಂತವನ್ನು ಏಕೆ ಕೊಟ್ಟನು? ತನ್ನನ್ನು ಬಿಟ್ಟುಹೋದವರು ತನ್ನ ಬಳಿ ಹಿಂದಿರುಗುವಂತೆ ಯೆಹೋವನು ಬಯಸುತ್ತಾನೆಂದು ಯೇಸು ಈ ದೃಷ್ಟಾಂತದಲ್ಲಿ ಮನಮುಟ್ಟುವ ಹಾಗೆ ತೋರಿಸಿಕೊಟ್ಟನು. ಅದರಲ್ಲಿ ತಿಳಿಸಲಾಗಿರುವ ತಂದೆ ತನ್ನ ಮಗನು ಒಂದಲ್ಲ ಒಂದು ದಿನ ಬಂದೇ ಬರುತ್ತಾನೆಂದು ದಾರಿ ನೋಡುತ್ತಾ ಇದ್ದನು. ಮಗನು ಹಿಂತಿರುಗುವುದನ್ನು ನೋಡಿ “ಅವನು ಇನ್ನೂ ತುಂಬ ದೂರದಲ್ಲಿರುವಾಗಲೇ” ಸ್ವಾಗತಿಸಲು ಅವನ ಬಳಿ ಓಡಿಹೋದನು. ಸತ್ಯ ಬಿಟ್ಟು ಹೋದವರು ಯೆಹೋವನ ಬಳಿ ಹಿಂತಿರುಗಲು ಇದು ಎಂಥ ಬಲವಾದ ಉತ್ತೇಜನ ಅಲ್ಲವೇ! ಅವರು ಆಧ್ಯಾತ್ಮಿಕವಾಗಿ ದಣಿದಿರಬಹುದು. ವಾಪಸ್ಸು ಬರಲು ಅವರಿಗೆ ಮುಜುಗರ ಹಾಗೂ ಕಷ್ಟವಾಗುತ್ತಿರಬಹುದು. ಆದರೆ ಹಿಂದಿರುಗಲು ಅವರು ಮಾಡುವ ಪ್ರಯತ್ನ ಸಾರ್ಥಕ. ಯಾಕೆಂದರೆ ಅವರು ಹಿಂದಿರುಗುವಾಗ ಸ್ವರ್ಗದಲ್ಲೂ ಸಂತೋಷ ಉಂಟಾಗುತ್ತದೆ.—ಲೂಕ 15:7.

15, 16. (ಎ) ಪೋಲಿಹೋದ ಮಗನ ಕುರಿತು ಯೇಸು ಕೊಟ್ಟ ದೃಷ್ಟಾಂತದಿಂದ ನಾವೇನು ಕಲಿಯಬಹುದು? ಉದಾಹರಣೆಗಳನ್ನು ಕೊಡಿ. (ಬಿ) ಇದು ಯೆಹೋವ ಮತ್ತು ಯೇಸುವಿನ ಬಗ್ಗೆ ಏನು ಕಲಿಸುತ್ತದೆ?

15 ಪೋಲಿಹೋದ ಮಗನ ದೃಷ್ಟಾಂತದಿಂದ ನಮಗೇನು ಪ್ರಯೋಜನ? ನಾವು ಯೆಹೋವನ ಮಾದರಿಯನ್ನು ಅನುಸರಿಸಬೇಕು. ಪಶ್ಚಾತ್ತಾಪಪಟ್ಟಿರುವ ಪಾಪಿಗಳನ್ನು ಸ್ವಾಗತಿಸಬೇಕು. ಹಾಗೆ ಮಾಡದಿದ್ದರೆ ನಾವು ‘ಅತೀ ನೀತಿವಂತರು’ ಆಗುತ್ತೇವೆ, ಜೊತೆಗೆ ಅದು ನಮ್ಮನ್ನು ಆಧ್ಯಾತ್ಮಿಕ ‘ನಾಶಕ್ಕೆ’ ನಡೆಸುತ್ತದೆ. (ಪ್ರಸಂ. 7:16, ಪವಿತ್ರ ಗ್ರಂಥ ಭಾಷಾಂತರ) ಇನ್ನೊಂದು ಪಾಠ ಸಹ ಕಲಿಯಬಹುದು. ಅದೇನೆಂದರೆ ಸಭೆ ಬಿಟ್ಟುಹೋದವರನ್ನು ನಾವು “ತಪ್ಪಿಹೋದ ಕುರಿಯಂತೆ” ವೀಕ್ಷಿಸಬೇಕು. ಅವರು ವಾಪಸ್ಸು ಬರುವ ಸಾಧ್ಯತೆ ಇದೆ. (ಕೀರ್ತ. 119:176) ಸಭೆಯಿಂದ ದೂರಸರಿದಿರುವ ಯಾರಾದರನ್ನು ನಾವು ಭೇಟಿಯಾದರೆ ಅವರು ಪುನಃ ಸಭೆಗೆ ಹಿಂತಿರುಗುವಂತೆ ಪ್ರೀತಿಯಿಂದ ಪ್ರಾಯೋಗಿಕ ಸಹಾಯ ನೀಡುತ್ತೇವಾ? ಅವರನ್ನು ಭೇಟಿಯಾದ ಬಗ್ಗೆ ಸಭೆಯ ಹಿರಿಯರಿಗೆ ಕೂಡಲೇ ತಿಳಿಸುತ್ತೇವಾ? ಆಗ ಹಿರಿಯರು ಅವರಿಗೆ ಸೂಕ್ತ ಸಹಾಯ ಕೊಡುವರು. ಪೋಲಿಹೋದ ಮಗನ ಕುರಿತು ಯೇಸು ಕೊಟ್ಟ ದೃಷ್ಟಾಂತದ ಪಾಠವನ್ನು ನಾವು ಅನ್ವಯಿಸುವುದಾದರೆ ಇದನ್ನು ಮಾಡುವೆವು.

16 ಇಂದು ಪೋಲಿಹೋದ ಮಗನಂತಿರುವವರು ಯೆಹೋವನು ತೋರಿಸಿರುವ ಕರುಣೆ ಹಾಗೂ ಸಭೆಯವರು ಕೊಟ್ಟ ಪ್ರೀತಿ, ಬೆಂಬಲದ ಕುರಿತು ತಮ್ಮ ಗಣ್ಯತೆಯನ್ನು ಹೇಗೆ ವ್ಯಕ್ತಪಡಿಸುತ್ತಾರೆಂದು ನೋಡಿ. 25 ವರ್ಷಗಳ ವರೆಗೆ ಸಭೆಯಿಂದ ಬಹಿಷ್ಕಾರವಾಗಿದ್ದ ಸಹೋದರರೊಬ್ಬರು ಹೇಳುವುದು: “ಸಭೆಗೆ ಪುನಸ್ಥಾಪನೆಯಾದಾಗಿನಿಂದ ನನ್ನ ಸಂತೋಷ ಹೆಚ್ಚಾಗುತ್ತಾ ಇದೆ. ಯಾಕೆಂದರೆ ಯೆಹೋವನಿಂದ ಬರುವ ‘ಚೈತನ್ಯದಾಯಕ ಸಮಯಗಳನ್ನು’ ಆನಂದಿಸುತ್ತಿದ್ದೇನೆ. (ಅ. ಕಾ. 3:19) ಎಲ್ಲರೂ ತುಂಬ ಸಹಕಾರ, ಪ್ರೀತಿ ತೋರಿಸುತ್ತಾರೆ. ನನಗೀಗ ಉತ್ತಮ ಆಧ್ಯಾತ್ಮಿಕ ಕುಟುಂಬವಿದೆ.” ಯೆಹೋವನಿಂದ ದೂರ ಸರಿದು 5 ವರ್ಷಗಳ ವರೆಗೆ ಸಭೆ ಬಿಟ್ಟು ಹೋಗಿದ್ದ ಒಬ್ಬ ಯುವ ಸಹೋದರಿ ಹೀಗನ್ನುತ್ತಾಳೆ: “ಯೇಸು ಯಾವ ಪ್ರೀತಿಯ ಬಗ್ಗೆ ಮಾತಾಡಿದನೊ ಅದನ್ನು ಸಹೋದರಸಹೋದರಿಯರು ನನಗೆ ತೋರಿಸಿದಾಗ ಹೇಗನಿಸಿತೆಂದು ಮಾತಲ್ಲಿ ವಿವರಿಸಲು ಆಗುವುದಿಲ್ಲ. ಯೆಹೋವನ ಸಂಘಟನೆಯ ಭಾಗವಾಗಿರುವುದಕ್ಕೆ ಬೆಲೆಕಟ್ಟಲಾಗುವುದಿಲ್ಲ!”

17, 18. (ಎ) ಈ ಮೂರು ದೃಷ್ಟಾಂತಗಳಿಂದ ನಾವು ಯಾವ ಪ್ರಾಯೋಗಿಕ ಪಾಠಗಳನ್ನು ಕಲಿತಿದ್ದೇವೆ? (ಬಿ) ನಮ್ಮ ದೃಢನಿರ್ಧಾರ ಏನಾಗಿರಬೇಕು?

17 ಈ ಮೂರು ದೃಷ್ಟಾಂತಗಳಿಂದ ನಾವು ಯಾವ ಪ್ರಾಯೋಗಿಕ ಪಾಠಗಳನ್ನು ಕಲಿತಿದ್ದೇವೆ? ಮೊದಲನೇದಾಗಿ, ಆಧ್ಯಾತ್ಮಿಕ ಬೆಳವಣಿಗೆ ನಮ್ಮ ಕೈಯಲಿಲ್ಲ ಯೆಹೋವನ ಕೈಯಲ್ಲಿದೆ ಎಂದು ಒಪ್ಪಿಕೊಳ್ಳಬೇಕು. ಎರಡನೇದಾಗಿ, ಕ್ರೈಸ್ತ ಸಭೆಯೊಂದಿಗೆ ಒಡನಾಟ ಮಾಡುವವರು ಹಾಗೂ ಬೈಬಲ್‌ ಅಧ್ಯಯನ ಮಾಡುವವರೆಲ್ಲರೂ ಯೆಹೋವನ ಸೇವಕರಾಗುತ್ತಾರೆಂದು ನಿರೀಕ್ಷಿಸಲಾಗುವುದಿಲ್ಲ. ಕೊನೇದಾಗಿ, ಕೆಲವರು ಸತ್ಯವನ್ನು ಬಿಟ್ಟು ಯೆಹೋವನಿಗೆ ಬೆನ್ನು ಹಾಕಿದ್ದರೂ ಅವರು ಹಿಂದಿರುಗುತ್ತಾರೆಂಬ ನಿರೀಕ್ಷೆಯನ್ನು ಬಿಟ್ಟುಬಿಡದಿರೋಣ. ಅವರು ಹಿಂದಿರುಗಿದರೆ ಅವರನ್ನು ಸ್ವಾಗತಿಸೋಣ. ಹೀಗೆ ಯೆಹೋವನ ಪ್ರೀತಿಯನ್ನು ಪ್ರತಿಬಿಂಬಿಸೋಣ.

18 ನಮ್ಮಲ್ಲಿ ಪ್ರತಿಯೊಬ್ಬರು ಜ್ಞಾನ, ತಿಳುವಳಿಕೆ ಹಾಗೂ ವಿವೇಕವನ್ನು ಪಡೆಯುವ ಪ್ರಯತ್ನ ಮುಂದುವರಿಸೋಣ. ಯೇಸುವಿನ ದೃಷ್ಟಾಂತಗಳನ್ನು ಓದುವಾಗ ಇದರ ಅರ್ಥವೇನು, ಇದನ್ನು ಬೈಬಲಿನಲ್ಲಿ ಯಾಕೆ ದಾಖಲಿಸಲಾಗಿದೆ, ಇದರಿಂದ ಕಲಿತ ಪಾಠಗಳನ್ನು ಹೇಗೆ ಅನ್ವಯಿಸುವುದು ಮತ್ತು ಇದು ಯೆಹೋವ ಹಾಗೂ ಯೇಸುವಿನ ಬಗ್ಗೆ ಏನು ಕಲಿಸುತ್ತದೆ ಎಂದು ನಮ್ಮನ್ನೇ ಕೇಳಿಕೊಳ್ಳೋಣ. ಹೀಗೆ ಮಾಡುವಾಗ ನಾವು ಯೇಸುವಿನ ಮಾತುಗಳ ಅರ್ಥವನ್ನು ಗ್ರಹಿಸುತ್ತೇವೆಂದು ತೋರಿಸುವೆವು.