ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಿದ್ಧಮನಸ್ಸನ್ನು ಯೆಹೋವನು ಸಮೃದ್ಧವಾಗಿ ಆಶೀರ್ವದಿಸುತ್ತಾನೆ

ಸಿದ್ಧಮನಸ್ಸನ್ನು ಯೆಹೋವನು ಸಮೃದ್ಧವಾಗಿ ಆಶೀರ್ವದಿಸುತ್ತಾನೆ

ನಮ್ಮ ಸೃಷ್ಟಿಕರ್ತನು ಮನುಷ್ಯರಿಗೆ ಇಚ್ಛಾಸ್ವಾತಂತ್ರ್ಯ ಎಂಬ ಬೆಲೆಕಟ್ಟಲಾಗದ ವರ ಕೊಟ್ಟು ಗೌರವಿಸಿದ್ದಾನೆ. ಸತ್ಯಾರಾಧನೆ ಪ್ರವರ್ಧಿಸಲಿಕ್ಕಾಗಿ ಯಾರು ಇಚ್ಛಾಸ್ವಾತಂತ್ರ್ಯವನ್ನು ನಿಸ್ವಾರ್ಥ ಭಾವದಿಂದ ಬಳಸುತ್ತಾರೊ ಅವರನ್ನು ಆತನು ಸಮೃದ್ಧವಾಗಿ ಆಶೀರ್ವದಿಸುತ್ತಾನೆ. ತನ್ನ ಪರಿಶುದ್ಧ ನಾಮವನ್ನು ಪವಿತ್ರೀಕರಿಸಲು ಮತ್ತು ತನ್ನ ಭವ್ಯ ಉದ್ದೇಶವನ್ನು ಬೆಂಬಲಿಸಲು ತಮ್ಮಿಂದಾದದ್ದನ್ನು ಮಾಡುವವರನ್ನೂ ಸಮೃದ್ಧವಾಗಿ ಆಶೀರ್ವದಿಸುತ್ತಾನೆ. ಒಲ್ಲದ ಮನಸ್ಸಿ೦ದ ತೋರಿಸಲಾಗುವ ವಿಧೇಯತೆ ಯೆಹೋವನಿಗೆ ಇಷ್ಟವಾಗುವುದಿಲ್ಲ. ಬೆದರಿಕೆ, ಬಲವಂತದಿಂದಾಗಿ ತೋರಿಸಲಾಗುವ ವಿಧೇಯತೆಯನ್ನೂ ಆತನು ಬಯಸುವುದಿಲ್ಲ. ಬದಲಾಗಿ ನಿಜವಾದ ಪ್ರೀತಿ ಹಾಗೂ ಗಾಢವಾದ ಕೃತಜ್ಞತಾಭಾವದಿಂದ ಉಕ್ಕುವ ಸಿದ್ಧಮನಸ್ಸಿನ ಭಕ್ತಿಗೆ ತುಂಬ ಬೆಲೆಕೊಡುತ್ತಾನೆ.

ಉದಾಹರಣೆಗೆ, ಇಸ್ರಾಯೇಲ್ಯರು ಸೀನಾಯಿ ಅರಣ್ಯದಲ್ಲಿದ್ದಾಗ ಏನಾಯಿತೆಂದು ಗಮನಿಸಿ. ಆರಾಧನೆಗಾಗಿ ಒಂದು ಆಲಯ ಕಟ್ಟುವಂತೆ ಯೆಹೋವನು ಅವರಿಗೆ ಆದೇಶಿಸಿದನು. ಅವನಂದದ್ದು: “ನಿಮ್ಮನಿಮ್ಮೊಳಗೆ ಯೆಹೋವನಿಗೆ ಕಾಣಿಕೆಯನ್ನು ಎತ್ತಿ ಕೊಡಬೇಕು; ಮನಃಪೂರ್ವಕವಾಗಿ ಕಾಣಿಕೆಯನ್ನು ಕೊಡುವವರೇ ತರಬೇಕು.” (ವಿಮೋ. 35:5) ಪ್ರತಿಯೊಬ್ಬ ಇಸ್ರಾಯೇಲ್ಯನೂ ತನ್ನಿಂದೇನು ಸಾಧ್ಯವೊ ಅದನ್ನು ಕೊಡಬೇಕಿತ್ತು. ಸ್ವಯಂಪ್ರೇರಣೆಯಿಂದ ಕೊಡಲಾದ ಪ್ರತಿಯೊಂದು ಕಾಣಿಕೆಯನ್ನು, ಅದೇನೇ ಆಗಿರಲಿ, ಎಷ್ಟೇ ಆಗಿರಲಿ ಆಲಯ ಕಟ್ಟುವಂಥ ದೈವಿಕ ಉದ್ದೇಶ ಪೂರೈಸಲಿಕ್ಕಾಗಿ ಸೂಕ್ತ ವಿಧದಲ್ಲಿ ಬಳಸಬಹುದಿತ್ತು. ಈ ಮಾತಿಗೆ ಇಸ್ರಾಯೇಲ್ಯರ ಪ್ರತಿಕ್ರಿಯೆ ಏನಾಗಿತ್ತು?

“ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ” ಯೆಹೋವನಿಗೆ ಕಾಣಿಕೆಗಳನ್ನು ತಂದರು. ಗಂಡಸರೂ ಹೆಂಗಸರೂ ಯೆಹೋವನ ಕೆಲಸಕ್ಕೆ ಕಡಗ, ಮೂಗುತಿ, ಮುದ್ರೆಯುಂಗುರ, ಕಂಠಮಾಲೆ, ಚಿನ್ನ, ಬೆಳ್ಳಿ, ತಾಮ್ರ, ನೀಲಿ ಧೂಮ್ರ ರಕ್ತವರ್ಣಗಳುಳ್ಳ ದಾರಗಳು, ನಾರು ಬಟ್ಟೆ, ಆಡುಕೂದಲಿನ ಬಟ್ಟೆ, ಹದಮಾಡಿದ ಕೆಂಪುಬಣ್ಣದ ಕುರಿದೊಗಲುಗಳು, ಕಡಲುಹಂದಿಯ ತೊಗಲುಗಳು, ಜಾಲೀಮರ, ಗೋಮೇಧಕ ರತ್ನಗಳು, ಎಣ್ಣೆ ಮತ್ತು ತೈಲವನ್ನು “ಮನಃಪೂರ್ವಕವಾಗಿ” ತಂದುಕೊಟ್ಟರು. ಕಟ್ಟಕಡೆಗೆ “ಕೆಲಸವನ್ನೆಲ್ಲಾ ಮಾಡುವದಕ್ಕೆ ಸಾಕಾಗುವದಕ್ಕಿಂತಲೂ ಹೆಚ್ಚಾದ ಸಾಮಗ್ರಿಯಿತ್ತು.”—ವಿಮೋ. 35:21-24, 27-29; 36:7.

ಯೆಹೋವನಿಗೆ ಅತ್ಯಂತ ಹೆಚ್ಚಿನ ಸಂತೋಷವನ್ನು ತಂದ ಸಂಗತಿ ಆ ಭೌತಿಕ ಕಾಣಿಕೆಗಳಲ್ಲ. ಬದಲಾಗಿ ಕಾಣಿಕೆಗಳ ಮೂಲಕ ಶುದ್ಧಾರಾಧನೆಯನ್ನು ಬೆಂಬಲಿಸಿದವರ ಸಿದ್ಧಮನಸ್ಸೇ. ಈ ಜನರು ತಮ್ಮ ಸಮಯ ಹಾಗೂ ಶ್ರಮವನ್ನೂ ಯೆಹೋವನಿಗೆ ಸಂತೋಷದಿಂದ ಸಮರ್ಪಿಸಿದರು. “ಜಾಣೆಯರಾದ ಸ್ತ್ರೀಯರು ತಮ್ಮ ಕೈಗಳಿಂದ . . . ನೂಲನ್ನೂ ನೂತು ಆ ನೂಲನ್ನು ತಂದುಕೊಟ್ಟರು.” “ಬೇರೆ ಜಾಣೆಯರಾದ ಸ್ತ್ರೀಯರು” ಅಥವಾ ನೂತನ ಲೋಕ ಭಾಷಾಂತರ ತಿಳಿಸುವಂತೆ ಹೃದಯದಾಳದಿಂದ ಪ್ರೇರಿಸಲ್ಪಟ್ಟ ಸ್ತ್ರೀಯರು “ಆಡಿನ ಕೂದಲುಗಳನ್ನು ನೂತು ತಂದುಕೊಟ್ಟರು.” ಅಷ್ಟುಮಾತ್ರವಲ್ಲ ಯೆಹೋವನು ಬೆಚಲೇಲನಿಗೆ “ಬೇಕಾದ ಜ್ಞಾನವಿದ್ಯಾವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ” ಅನುಗ್ರಹಿಸಿದನು. ನೇಮಿಸಲಾದ ಎಲ್ಲ ಕೆಲಸವನ್ನು ಮಾಡಲು ಅಗತ್ಯವಿರುವ ಕೌಶಲವನ್ನು ದೇವರು ಬೆಚಲೇಲ ಹಾಗೂ ಒಹೊಲೀಯಾಬರಿಗೆ ದಯಪಾಲಿಸಿದನು.—ವಿಮೋ. 35:25, 26, 30-35.

ಯೆಹೋವನು ಇಸ್ರಾಯೇಲ್ಯರಿಗೆ ಕಾಣಿಕೆ ಕೊಡುವಂತೆ ಆಮಂತ್ರಿಸಿದಾಗ “ಯಾರಾರ ಮನಸ್ಸು ಸಿದ್ಧವಾಗಿ”ದೆಯೊ ಅವರೆಲ್ಲರೂ ಸತ್ಯಾರಾಧನೆಯನ್ನು ಬೆಂಬಲಿಸುವರೆಂದು ಆತನಿಗೆ ಪೂರ್ಣ ಭರವಸೆಯಿತ್ತು. ಅವರು ತೋರಿಸಿದ ಸಿದ್ಧಮನಸ್ಸಿಗೆ ಪ್ರತಿಫಲವಾಗಿ ಆತನು ಅವರಿಗೆ ಮಾರ್ಗದರ್ಶನ ಹಾಗೂ ಅಪರಿಮಿತ ಆನಂದ ಕೊಟ್ಟು ಉದಾರವಾಗಿ ಆಶೀರ್ವದಿಸಿದನು. ಹೀಗೆ ಯೆಹೋವನು ಈ ಸಂಗತಿಯನ್ನು ತೋರಿಸಿಕೊಟ್ಟನು: ತನ್ನ ಸೇವಕರ ಸಿದ್ಧಮನಸ್ಸನ್ನು ತಾನು ಆಶೀರ್ವದಿಸುವಾಗ ತನ್ನ ಕೆಲಸವನ್ನು ಪೂರೈಸಲಿಕ್ಕಾಗಿ ಸಂಪನ್ಮೂಲ ಇಲ್ಲವೆ ಕೌಶಲದ ಕೊರತೆಯಾಗುವುದಿಲ್ಲ. (ಕೀರ್ತ. 34:9) ನೀವು ನಿಸ್ವಾರ್ಥದಿಂದ ಯೆಹೋವನ ಸೇವೆಮಾಡುವಾಗ ಆತನು ಖಂಡಿತವಾಗಿ ನಿಮ್ಮ ಸಿದ್ಧಮನಸ್ಸನ್ನು ಆಶೀರ್ವದಿಸುವನು.

^ ಪ್ಯಾರ. 9 ಭಾರತದಲ್ಲಾದರೆ, “Jehovah’s Witnesses of India”ಗೆ ಸಂದಾಯವಾಗಬೇಕೆಂದು ನಮೂದಿಸಿ.

^ ಪ್ಯಾರ. 11 ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು jwindiagift.org. ವೆಬ್‌ಸೈಟ್‌ ಬಳಸಬಹುದು.

^ ಪ್ಯಾರ. 16 ಅಂತಿಮ ನಿರ್ಣಯ ಮಾಡುವ ಮುಂಚೆ ದಯವಿಟ್ಟು ಸ್ಥಳೀಯ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿ.

^ ಪ್ಯಾರ. 24 ‘ನಿಮ್ಮ ಅಮೂಲ್ಯ ವಸ್ತುಗಳಿಂದ ಯೆಹೋವನನ್ನು ಸನ್ಮಾನಿಸಿರಿ’ ಎಂಬ ಡಾಕ್ಯುಮೆಂಟ್‌ ಭಾರತದಲ್ಲಿ ಇಂಗ್ಲಿಷ್‌, ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಲಭ್ಯ.