ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕವ್ಯಾಪಕವಾಗಿ ಸುವಾರ್ತೆ ಸಾರಲು ಯೆಹೋವನು ಮಾಡುತ್ತಿರುವ ಸಹಾಯ

ಲೋಕವ್ಯಾಪಕವಾಗಿ ಸುವಾರ್ತೆ ಸಾರಲು ಯೆಹೋವನು ಮಾಡುತ್ತಿರುವ ಸಹಾಯ

“ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾ. 48:17.

1. ಯೆಹೋವನ ಜನರು ಸುವಾರ್ತೆ ಸಾರಲು ಆರಂಭಿಸಿದಾಗ ಯಾವೆಲ್ಲ ಕಷ್ಟಗಳನ್ನು ಎದುರಿಸಿದರು?

ಸುಮಾರು 130 ವರ್ಷಗಳ ಹಿಂದೆ ಯೆಹೋವನ ಜನರು * ಸುವಾರ್ತೆ ಸಾರಲು ಆರಂಭಿಸಿದಾಗ ಅನೇಕ ಕಷ್ಟಗಳನ್ನು ಎದುರಿಸಿದರು. ಪ್ರಥಮ ಶತಮಾನದ ಕ್ರೈಸ್ತರಂತೆ ಇವರ ಸಂಖ್ಯೆ ಸಹ ಕಡಿಮೆಯಿತ್ತು. ಇವರು ಸಾರುತ್ತಿದ್ದ ವಿಷಯವು ಸಹ ಹೆಚ್ಚಿನ ಜನರಿಗೆ ಇಷ್ಟವಾಗುತ್ತಿರಲಿಲ್ಲ. ಕೆಲವರಂತೂ ‘ಈ ಜನರು ಅಷ್ಟೇನೂ ಓದಿದವರಲ್ಲ’ ಎಂದು ಭಾವಿಸುತ್ತಿದ್ದರು. ಸ್ವಲ್ಪ ಸಮಯದಲ್ಲೇ, ಸೈತಾನನನ್ನು ಭೂಮಿಗೆ ದೊಬ್ಬಿದಾಗ ಈ ಕ್ರೈಸ್ತರು ಹಿಂಸೆಯನ್ನೂ ಎದುರಿಸಿದರು. (ಪ್ರಕ. 12:12) ಜೊತೆಗೆ, ಆಗಿನಿಂದ ಅವರು “ನಿಭಾಯಿಸಲು ಕಷ್ಟಕರವಾದ” “ಕಡೇ ದಿವಸಗಳಲ್ಲಿ” ಸುವಾರ್ತೆ ಸಾರಬೇಕಾಯಿತು.—2 ತಿಮೊ. 3:1.

2. ಸುವಾರ್ತೆ ಸಾರಲು ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಿದ್ದಾನೆ?

2 ಆದರೆ ಸುವಾರ್ತೆ ಸಾರಲು ಯೆಹೋವ ದೇವರು ತನ್ನ ಜನರಿಗೆ ಸಹಾಯ ಮಾಡುತ್ತಿದ್ದಾನೆ. ತನ್ನ ಜನರು ಭೂಮಿಯಲ್ಲಿರುವ ಎಲ್ಲರಿಗೆ ಸುವಾರ್ತೆ ಸಾರಬೇಕೆನ್ನುವುದೇ ಆತನ ಬಯಕೆ. ಸಾರುವ ಕೆಲಸಕ್ಕೆ ಯಾವುದೂ ಅಡ್ಡಿ ಬರದಂತೆ ಆತನು ನೋಡಿಕೊಳ್ಳುತ್ತಿದ್ದಾನೆ. ಹಿಂದೆ, ಇಸ್ರಾಯೇಲ್ಯರನ್ನು ಬಾಬೆಲಿನಿಂದ ಬಿಡುಗಡೆ ಮಾಡಿದಂತೆ, ಇಂದು ತನ್ನ ಆರಾಧಕರು “ಮಹಾ ಬಾಬೆಲ್‌” ಆಗಿರುವ ಸುಳ್ಳು ಧರ್ಮದಿಂದ ಹೊರಬರಲು ಅವರಿಗೆ ಸಹಾಯ ಮಾಡಿದ್ದಾನೆ. (ಪ್ರಕ. 18:1-4) ನಮ್ಮ ಪ್ರಯೋಜನಕ್ಕಾಗಿಯೇ ಆತನು ನಮಗೆ ಬೋಧಿಸುತ್ತಿದ್ದಾನೆ. ನಾವು ಒಬ್ಬರೊಂದಿಗೊಬ್ಬರು ಶಾಂತಿ-ಸಮಾಧಾನದಿಂದಿರಲು ನಮಗೆ ನೆರವು ನೀಡುತ್ತಿದ್ದಾನೆ. ಆತನ ಬಗ್ಗೆ ಇತರರಿಗೆ ತಿಳಿಸಲು ನಮಗೆ ತರಬೇತಿಯನ್ನೂ ಕೊಡುತ್ತಿದ್ದಾನೆ. (ಯೆಶಾಯ 48:16-18 ಓದಿ.) ಯೆಹೋವನು ನಮಗೆ ಸುವಾರ್ತೆ ಸಾರಲು ಸಹಾಯ ಮಾಡುತ್ತಿದ್ದಾನೆ ಅಂದ ಮಾತ್ರಕ್ಕೆ ಸುವಾರ್ತೆ ಸಾರಲು ನಮಗೆ ಅನುಕೂಲ ಆಗುವಂಥ ರೀತಿಯಲ್ಲಿ ಯಾವಾಗಲೂ ಲೋಕದ ಪರಿಸ್ಥಿತಿಗಳನ್ನು ಬದಲಾಯಿಸುತ್ತಿರುತ್ತಾನೆ ಎಂದರ್ಥವಲ್ಲ. ಲೋಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಸುಲಭ ರೀತಿಯಲ್ಲಿ ನಮ್ಮ ಸುವಾರ್ತಾ ಕೆಲಸವನ್ನು ಪೂರೈಸಲು ಸಹಾಯ ಮಾಡುತ್ತಿವೆ ಎನ್ನುವುದೇನೋ ನಿಜ. ಆದರೆ ಈ ಲೋಕವನ್ನು ಸೈತಾನನು ಆಳುತ್ತಿರುವುದರಿಂದ ಹಿಂಸೆಗಳು ಮತ್ತು ಇತರ ಸಮಸ್ಯೆಗಳು ಬರುತ್ತಲೇ ಇವೆ. ಇಂಥ ಸಮಸ್ಯೆಗಳ ಮಧ್ಯೆಯೂ ನಾವು ಸುವಾರ್ತೆ ಸಾರುತ್ತಿದ್ದೇವೆಂದರೆ ಅದಕ್ಕೆ ಯೆಹೋವನ ಸಹಾಯವೇ ಕಾರಣ.—ಯೆಶಾ. 41:13; 1 ಯೋಹಾ. 5:19.

3. ದಾನಿಯೇಲನ ಪ್ರವಾದನೆ ಹೇಗೆ ನೆರವೇರುತ್ತಿದೆ?

3 ಅಂತ್ಯಕಾಲದಲ್ಲಿ ಅನೇಕ ಜನರು ಬೈಬಲ್‍ನಲ್ಲಿರುವ ಸತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರ “ತಿಳುವಳಿಕೆಯು” ಹೆಚ್ಚಾಗುತ್ತದೆ ಎಂದು ದಾನಿಯೇಲನು ಪ್ರವಾದಿಸಿದ್ದನು. (ದಾನಿಯೇಲ 12:4 ಓದಿ.) “ಅಂತ್ಯಕಾಲ” ಪ್ರಾರಂಭವಾಗುವ ಸ್ವಲ್ಪ ಸಮಯದ ಮುಂಚೆ ಬೈಬಲ್‍ನಲ್ಲಿರುವ ಪ್ರಾಮುಖ್ಯ ಸತ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಚರ್ಚಿನ ಸುಳ್ಳು ಬೋಧನೆಗಳನ್ನು ತಿರಸ್ಕರಿಸಲು ತನ್ನ ಜನರಿಗೆ ಯೆಹೋವನು ಸಹಾಯ ಮಾಡಿದನು. ಇಂದು ಭೂಮಿಯಾದ್ಯಂತ ಬೈಬಲ್‌ ಸತ್ಯಗಳನ್ನು ಇತರರಿಗೆ ಕಲಿಸಲು ಯೆಹೋವನು ತನ್ನ ಜನರನ್ನು ಉಪಯೋಗಿಸುತ್ತಿದ್ದಾನೆ. ಅವರ ಸಂಖ್ಯೆ ಈಗ ಸುಮಾರು 80 ಲಕ್ಷ. ಅವರು ತಾವು ಕಲಿತ ಸತ್ಯವನ್ನು ಇತರ ಜನರಿಗೂ ಕಲಿಸುತ್ತಿದ್ದಾರೆ. ಹೀಗೆ ದಾನಿಯೇಲನ ಪ್ರವಾದನೆ ನೆರವೇರುತ್ತಿದೆ. ಆದರೆ ಇಷ್ಟೊಂದು ವ್ಯಾಪಕವಾಗಿ ಸುವಾರ್ತೆ ಸಾರಲು ಯೆಹೋವನ ಜನರಿಗೆ ಯಾವೆಲ್ಲ ವಿಷಯಗಳು ಸಹಾಯ ಮಾಡುತ್ತಿವೆ?

ಬೈಬಲ್‌ ಭಾಷಾಂತರ

4. 1900ರೊಳಗೆ ಎಷ್ಟು ಭಾಷೆಗಳಲ್ಲಿ ಬೈಬಲನ್ನು ಭಾಷಾಂತರಿಸಲಾಯಿತು?

4 ಇಂದು ಅನೇಕ ಜನರ ಹತ್ತಿರ ಬೈಬಲ್‌ ಇರುವುದರಿಂದ ಸುವಾರ್ತೆ ಸಾರುವುದು ತುಂಬ ಸುಲಭ. ಆದರೆ ಹಿಂದೆ ಹೀಗಿರಲಿಲ್ಲ. ನೂರಾರು ವರ್ಷಗಳವರೆಗೆ, ಚರ್ಚಿನ ಪಾದ್ರಿಗಳು ಜನರಿಗೆ ಬೈಬಲನ್ನು ಓದಲು ಬಿಡುತ್ತಿರಲಿಲ್ಲ. ಯಾರು ಬೈಬಲನ್ನು ಓದುತ್ತಿದ್ದರೋ ಅವರನ್ನು ಹಿಂಸಿಸುತ್ತಿದ್ದರು. ಬೈಬಲ್‌ ಭಾಷಾಂತರ ಮಾಡಿದವರಲ್ಲಿ ಕೆಲವರನ್ನು ಸಾಯಿಸಿದರು. ಆದರೆ 19ನೇ ಶತಮಾನದಲ್ಲಿ ಕೆಲವೊಂದು ಸಂಸ್ಥೆಗಳು ಬೈಬಲನ್ನು ಅಥವಾ ಅದರ ಕೆಲವು ಪುಸ್ತಕಗಳನ್ನು ಸುಮಾರು 400 ಭಾಷೆಗಳಲ್ಲಿ ಭಾಷಾಂತರ ಮಾಡಿದವು ಅಥವಾ ಮುದ್ರಿಸಿದವು. 1900ರೊಳಗೆ, ಅನೇಕ ಜನರ ಹತ್ತಿರ ಬೈಬಲ್‌ ಇತ್ತು. ಆದರೆ ಅದರಲ್ಲಿರುವ ಬೋಧನೆಗಳು ಅವರಿಗೆ ಅರ್ಥ ಆಗಿರಲಿಲ್ಲ.

5. ಬೈಬಲ್‌ ಭಾಷಾಂತರ ಕೆಲಸದಲ್ಲಿ ಯೆಹೋವನ ಸಾಕ್ಷಿಗಳು ಏನನ್ನು ಸಾಧಿಸಿದ್ದಾರೆ?

5 ಬೈಬಲಿನ ಬೋಧನೆಗಳನ್ನು ಇತರರಿಗೆ ಕಲಿಸಬೇಕೆಂದು ಯೆಹೋವನ ಜನರು ತಿಳಿದುಕೊಂಡರು ಮತ್ತು ಈ ಕೆಲಸವನ್ನು ಮಾಡಲು ಸಾಕಷ್ಟು ಶ್ರಮವಹಿಸಿದರು. ಮೊದಮೊದಲು, ಆಗ ಲಭ್ಯವಿದ್ದ ಬೈಬಲ್‌ ಭಾಷಾಂತರಗಳನ್ನೇ ಉಪಯೋಗಿಸುತ್ತಿದ್ದರು ಮತ್ತು ಜನರಿಗೂ ಆ ಬೈಬಲ್‌ಗಳನ್ನೇ ಕೊಡುತ್ತಿದ್ದರು. ಆದರೆ 1950ರಿಂದ ಪವಿತ್ರ ಶಾಸ್ತ್ರಗ್ರಂಥಗಳ ನೂತನ ಲೋಕ ಭಾಷಾಂತರವನ್ನು ಪೂರ್ತಿಯಾಗಿ ಅಥವಾ ಅದರ ಕೆಲವು ಪುಸ್ತಕಗಳನ್ನು ಸುಮಾರು 120 ಭಾಷೆಗಳಲ್ಲಿ ಅವರು ಪ್ರಕಾಶಿಸಿದರು. 2013ರಲ್ಲಿ ನೂತನ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯನ್ನು ಹೊರತಂದರು. ಈ ಪರಿಷ್ಕೃತ ಆವೃತ್ತಿ ಓದಿದ ತಕ್ಷಣ ಅರ್ಥವಾಗುವಷ್ಟು ಸರಳವಾಗಿದೆ ಮತ್ತು ಬೇರೆ ಭಾಷೆಗಳಿಗೆ ಭಾಷಾಂತರಿಸಲು ಸುಲಭವಾಗಿದೆ. ನಾವು ಉಪಯೋಗಿಸುವ ಬೈಬಲ್‌ ಜನರಿಗೆ ಓದಿದ ತಕ್ಷಣ ಅರ್ಥವಾಗುವಂತಿದ್ದರೆ, ಅದರಿಂದ ಅವರಿಗೆ ಸತ್ಯವನ್ನು ಕಲಿಸುವುದು ಸುಲಭವಾಗಿರುತ್ತದೆ.

ಶಾಂತಿಯುತ ಪರಿಸ್ಥಿತಿಗಳು

6, 7. (ಎ) ಕಳೆದ ನೂರು ವರ್ಷಗಳಲ್ಲಿ ಯಾವೆಲ್ಲ ಯುದ್ಧಗಳು ನಡೆದಿವೆ? (ಬಿ) ಅನೇಕ ದೇಶಗಳಲ್ಲಿದ್ದ ಶಾಂತಿಯುತ ಪರಿಸ್ಥಿತಿಯಿಂದ ಯೆಹೋವನ ಸಾಕ್ಷಿಗಳಿಗೆ ಯಾವ ಅನುಕೂಲವಾಯಿತು?

6 ಕಳೆದ ನೂರು ವರ್ಷಗಳಲ್ಲಿ, ಎರಡು ಮಹಾಯುದ್ಧಗಳಲ್ಲದೆ ಇನ್ನೂ ಅನೇಕ ಯುದ್ಧಗಳಾಗಿವೆ. ಈ ಯುದ್ಧಗಳಲ್ಲಿ ಲಕ್ಷಾಂತರ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾದರೆ, ಇಷ್ಟು ಯುದ್ಧಗಳು ನಡೆಯುತ್ತಿರುವಾಗ ಶಾಂತಿಯುತ ಪರಿಸ್ಥಿತಿ ಎಲ್ಲಿತ್ತು? ಎಂಬ ಯೋಚನೆ ಬರಬಹುದು. ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ, ಸಹೋದರ ನೇತನ್‌ ನಾರ್‌ ಯೆಹೋವನ ಸಾಕ್ಷಿಗಳ ಮುಂದಾಳತ್ವ ವಹಿಸುತ್ತಿದ್ದರು. ಅವರು 1942ರಲ್ಲಿ ನಡೆದ ಒಂದು ಅಧಿವೇಶನದಲ್ಲಿ “ಶಾಂತಿ-ಬಾಳುವುದೋ?” ಎಂಬ ಭಾಷಣವನ್ನು ಕೊಟ್ಟರು. ಆ ಭಾಷಣದಲ್ಲಿ ಪ್ರಕಟಣೆ ಪುಸ್ತಕದ ಅಧ್ಯಾಯ 17ರಲ್ಲಿರುವ ಪ್ರವಾದನೆಯನ್ನು ವಿವರಿಸಿದರು ಮತ್ತು ಆ ಪ್ರವಾದನೆಯ ಆಧಾರದ ಮೇಲೆ ‘ಅರ್ಮಗೆದ್ದೋನ್‌ ಯುದ್ಧಕ್ಕೆ ಇನ್ನೂ ಸಮಯವಿದೆ, ಅದು ಈಗಲೇ ಬರುವುದಿಲ್ಲ. ಆದರೆ ಈಗ ನಡೆಯುತ್ತಿರುವ ಯುದ್ಧಗಳ ನಂತರ ಶಾಂತಿಯುತ ಪರಿಸ್ಥಿತಿ ಬರುತ್ತದೆ’ ಎಂದು ಹೇಳಿದರು.—ಪ್ರಕ. 17:3, 11.

7 ಅದರರ್ಥ, ಎರಡನೇ ಮಹಾಯುದ್ಧ ಮುಗಿದ ನಂತರ ಎಲ್ಲ ಕಡೆಯೂ ಶಾಂತಿ ನೆಲೆಸಿತ್ತು ಎಂದಲ್ಲ. ಏಕೆಂದರೆ, ಆ ಯುದ್ಧವಾದ ನಂತರ ಇನ್ನೂ ಅನೇಕ ಯುದ್ಧಗಳು ನಡೆದವು ಮತ್ತು ಜನರು ಸಾವಿಗೀಡಾದರು. ಆದರೆ ಅನೇಕ ದೇಶಗಳಲ್ಲಿ ಶಾಂತಿಯುತ ಪರಿಸ್ಥಿತಿ ಇತ್ತು ಮತ್ತು ಇದರಿಂದ ಸುವಾರ್ತೆ ಸಾರಲು ಯೆಹೋವನ ಸಾಕ್ಷಿಗಳಿಗೆ ಅನುಕೂಲವಾಯಿತು. ಫಲಿತಾಂಶ? ಎರಡನೇ ಮಹಾಯುದ್ಧದ ಸಮಯದಲ್ಲಿ ಒಂದು ಲಕ್ಷ ಹತ್ತು ಸಾವಿರಕ್ಕಿಂತ ಕಡಿಮೆ ಇದ್ದ ಯೆಹೋವನ ಸಾಕ್ಷಿಗಳ ಸಂಖ್ಯೆ ಇವತ್ತು ಸುಮಾರು ಎಂಬತ್ತು ಲಕ್ಷಕ್ಕೇರಿದೆ! (ಯೆಶಾಯ 60:22 ಓದಿ.) ಶಾಂತಿಯುತ ಪರಿಸ್ಥಿತಿಯಲ್ಲಿ ಹೆಚ್ಚಿನ ಜನರಿಗೆ ಸುವಾರ್ತೆ ಸಾರಬಹುದು ಎಂದು ಇದರಿಂದ ತಿಳಿದುಬರುತ್ತದೆ.

ಸಾರಿಗೆ ವ್ಯವಸ್ಥೆಯಲ್ಲಾದ ಅಭಿವೃದ್ಧಿ

8, 9. ಸಾರಿಗೆ ವ್ಯವಸ್ಥೆಯಲ್ಲಿ ಯಾವ ಅಭಿವೃದ್ಧಿಗಳಾಗಿವೆ ಮತ್ತು ಇವುಗಳಿಂದ ನಮ್ಮ ಕೆಲಸಕ್ಕೆ ಹೇಗೆ ಸಹಾಯವಾಗುತ್ತಿದೆ?

8 ಅಮೆರಿಕದಲ್ಲಿ ಯೆಹೋವನ ಸಾಕ್ಷಿಗಳು ಸಾರುವ ಕೆಲಸವನ್ನು ಪ್ರಾರಂಭಿಸಿದಾಗ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣ ಮಾಡಿ ಸುವಾರ್ತೆ ಸಾರಲು ಕಷ್ಟವಾಗುತ್ತಿತ್ತು. ಕಾವಲಿನಬುರುಜು ಪತ್ರಿಕೆಯ ಮೊದಲ ಸಂಚಿಕೆ ಮುದ್ರಣಗೊಂಡು 21 ವರ್ಷಗಳಾದ ಮೇಲೆ ಅಂದರೆ 1900ರಲ್ಲಿ ಆ ದೇಶದಲ್ಲಿ ಕೇವಲ 8,000 ಕಾರುಗಳಿದ್ದವು ಮತ್ತು ವಾಹನಗಳನ್ನು ಚಲಾಯಿಸಲು ಕೆಲವೇ ರಸ್ತೆಗಳು ಯೋಗ್ಯವಾಗಿದ್ದವು. ಆದರೆ ಇಂದು, ಇಡೀ ಪ್ರಪಂಚದಲ್ಲಿ ಸುಮಾರು 150 ಕೋಟಿ ಕಾರುಗಳಿವೆ ಮತ್ತು ವಾಹನಗಳನ್ನು ಚಲಾಯಿಸಲು ಯೋಗ್ಯವಾದ ಅನೇಕ ರಸ್ತೆಗಳಿವೆ. ಆದ್ದರಿಂದ, ನಗರಗಳಿಂದ ತುಂಬ ದೂರವಿರುವ ಸ್ಥಳಗಳಿಗೂ ಅಥವಾ ಹಳ್ಳಿಗಳಿಗೂ ಕಾರುಗಳಲ್ಲಿ ಹೋಗಿ ಅಲ್ಲಿರುವ ಜನರಿಗೆ ಸುವಾರ್ತೆ ಸಾರಬಹುದು. ಒಂದು ವೇಳೆ, ನಾವು ಇರುವಂಥ ಸ್ಥಳಗಳಲ್ಲಿ ಒಳ್ಳೆಯ ಸಾರಿಗೆ ವ್ಯವಸ್ಥೆ ಇಲ್ಲದಿದ್ದರೂ, ನಡೆದುಕೊಂಡೇ ಹೋಗಿ ಸುವಾರ್ತೆ ಸಾರುತ್ತೇವೆ. ಹೀಗೆ ಜನರು ಎಲ್ಲೆಲ್ಲಿ ಸಿಗುತ್ತಾರೋ ಅಲ್ಲೆಲ್ಲ ಹೋಗಿ ಸುವಾರ್ತೆ ಸಾರಲು ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ.—ಮತ್ತಾ. 28:19, 20.

9 ಇನ್ನಿತರ ಸಾರಿಗೆ ವ್ಯವಸ್ಥೆಗಳನ್ನೂ ನಮ್ಮ ಸಾರುವ ಕೆಲಸಕ್ಕೆ ಉಪಯೋಗಿಸುತ್ತಿದ್ದೇವೆ. ಉದಾಹರಣೆಗೆ, ಲಾರಿ, ಹಡಗು ಮತ್ತು ರೈಲುಗಳ ಮೂಲಕ ಬೈಬಲನ್ನು ಮತ್ತು ಇತರ ಸಾಹಿತ್ಯಗಳನ್ನು ಸಾಗಿಸುತ್ತಿದ್ದೇವೆ. ಹೀಗೆ ಒಂದೇ ವಾರದೊಳಗೆ ತುಂಬ ದೂರದ ಊರುಗಳಲ್ಲಿರುವ ಸಹೋದರ-ಸಹೋದರಿಯರಿಗೂ ನಮ್ಮ ಸಾಹಿತ್ಯಗಳನ್ನು ತಲುಪಿಸಲು ಸಾಧ್ಯವಾಗುತ್ತಿದೆ. ಸರ್ಕಿಟ್‌ ಮೇಲ್ವಿಚಾರಕರು, ಬ್ರಾಂಚ್‌ ಕಮಿಟಿಯ ಸದಸ್ಯರು, ಮಿಷನರಿಗಳು ಮತ್ತು ಇತರರು ವಿಮಾನಗಳಲ್ಲಿ ಪ್ರಯಾಣಿಸುವ ಮೂಲಕ ಬೇಗನೇ ತಲುಪಿ, ಸಭೆಗಳಿಗೆ ಸಹಾಯ ಮಾಡಲು ಅಥವಾ ಅಧಿವೇಶನಗಳಲ್ಲಿ ಭಾಷಣ ಕೊಡಲು ಸಾಧ್ಯವಾಗಿದೆ. ನಮ್ಮ ಮುಖ್ಯ ಕಾರ್ಯಾಲಯದಲ್ಲಿರುವ ಆಡಳಿತ ಮಂಡಲಿಯ ಸದಸ್ಯರು ಮತ್ತು ಇತರ ಸಹೋದರರು ಸಹ ಅನೇಕ ದೇಶಗಳಿಗೆ ಶೀಘ್ರವಾಗಿ ತಲುಪಿ ಅಲ್ಲಿರುವ ಸಹೋದರರಿಗೆ ಪ್ರೋತ್ಸಾಹ ಮತ್ತು ತರಬೇತಿಯನ್ನು ಕೊಡಲು ಸಾಧ್ಯವಾಗಿದೆ. ಈ ಎಲ್ಲ ಸಾರಿಗೆ ವ್ಯವಸ್ಥೆಗಳು ಯೆಹೋವನ ಜನರು ಒಗ್ಗಟ್ಟಿನಿಂದಿರಲು ಸಹಾಯ ಮಾಡಿವೆ.—ಕೀರ್ತ. 133:1-3.

ಭಾಷೆ ಮತ್ತು ಭಾಷಾಂತರ

10. ಇಂಗ್ಲಿಷ್‌ ಭಾಷೆಯನ್ನು ಅಂತರರಾಷ್ಟ್ರೀಯ ಭಾಷೆ ಎಂದು ಯಾಕೆ ಹೇಳಬಹುದು?

10 ಪ್ರಥಮ ಶತಮಾನದಲ್ಲಿ, ರೋಮನ್‌ ಸಾಮ್ರಾಜ್ಯದಲ್ಲಿದ್ದ ಅನೇಕ ಜನರು ಗ್ರೀಕ್‌ ಭಾಷೆ ಮಾತಾಡುತ್ತಿದ್ದರು. ಇಂದು ಭೂಮಿಯಾದ್ಯಂತ ಅನೇಕ ಜನರು ಇಂಗ್ಲಿಷ್‌ ಭಾಷೆ ಮಾತಾಡುತ್ತಾರೆ. ಇಂಗ್ಲಿಷ್‌ ಆ್ಯಸ್‌ ಎ ಗ್ಲೋಬಲ್‌ ಲಾಂಗ್ವೇಜ್‌ ಎಂಬ ಪುಸ್ತಕ, ಪ್ರಪಂಚದಲ್ಲಿರುವ 25 ಪ್ರತಿಶತ ಜನರು ಇಂಗ್ಲಿಷ್‌ ಭಾಷೆಯನ್ನು ಮಾತಾಡುತ್ತಾರೆ ಅಥವಾ ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳುತ್ತದೆ. ವಾಣಿಜ್ಯ, ರಾಜಕೀಯ, ವೈಜ್ಞಾನಿಕ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಇಂಗ್ಲಿಷ್‌ ಭಾಷೆಯನ್ನು ಹೆಚ್ಚಾಗಿ ಬಳಸುವುದರಿಂದ ಅನೇಕ ಜನರು ಈ ಭಾಷೆಯನ್ನು ಕಲಿತಿದ್ದಾರೆ.

11. ನಮ್ಮ ಸಾರುವ ಕೆಲಸಕ್ಕೆ ಇಂಗ್ಲಿಷ್‌ ಭಾಷೆಯಿಂದ ಹೇಗೆ ನೆರವಾಗುತ್ತಿದೆ?

11 ಇಂಗ್ಲಿಷ್‌ ಭಾಷೆ ಅನೇಕರಿಗೆ ಗೊತ್ತಿರುವುದು ನಮ್ಮ ಸಾರುವ ಕೆಲಸಕ್ಕೆ ದೊಡ್ಡ ನೆರವಾಗಿದೆ. ಮುಂಚೆ, ನಮ್ಮ ಎಲ್ಲ ಸಾಹಿತ್ಯಗಳನ್ನು ಮೊದಲು ಇಂಗ್ಲಿಷ್‍ನಲ್ಲಿ ಬಿಡುಗಡೆ ಮಾಡುತ್ತಿದ್ದೆವು. ಎಲ್ಲ ಕಡೆ ಇಂಗ್ಲಿಷ್‌ ಭಾಷೆ ಬಳಸುತ್ತಿದ್ದ ಕಾರಣ ಅನೇಕ ಜನರು ಈ ಸಾಹಿತ್ಯಗಳನ್ನು ಓದುತ್ತಿದ್ದರು. ನಮ್ಮ ಮುಖ್ಯ ಕಾರ್ಯಾಲದಲ್ಲಿಯೂ ಇಂಗ್ಲಿಷ್‌ ಭಾಷೆಯನ್ನೇ ಬಳಸಲಾಗುತ್ತದೆ. ನ್ಯೂಯಾರ್ಕಿನ ಪ್ಯಾಟರ್‌ಸನ್‍ನಲ್ಲಿ ನಡೆಯುವ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಇಂಗ್ಲಿಷ್‌ ಭಾಷೆಯನ್ನು ಬಳಸುತ್ತೇವೆ.

12. ಯೆಹೋವನ ಸಾಕ್ಷಿಗಳು ಬೈಬಲಾಧಾರಿತ ಸಾಹಿತ್ಯಗಳನ್ನು ಎಷ್ಟು ಭಾಷೆಗಳಲ್ಲಿ ಭಾಷಾಂತರಿಸಿದ್ದಾರೆ? ಇದನ್ನು ಮಾಡಲು ಅವರಿಗೆ ಈಗಿನ ತಂತ್ರಜ್ಞಾನ ಹೇಗೆ ಸಹಾಯ ಮಾಡಿದೆ?

12 ಆದರೆ ನಮ್ಮ ಮುಖ್ಯ ಜವಾಬ್ದಾರಿ, ಪ್ರಪಂಚದಲ್ಲಿರುವ ಎಲ್ಲ ಭಾಷೆಯ ಜನರಿಗೂ ಸುವಾರ್ತೆ ಸಾರುವುದೇ ಆಗಿದೆ. ಆದ್ದರಿಂದ ನಮ್ಮ ಸಾಹಿತ್ಯಗಳನ್ನು 700ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಮಾಡುತ್ತಿದ್ದೇವೆ. ಇಷ್ಟೊಂದು ಭಾಷೆಗಳಲ್ಲಿ ಭಾಷಾಂತರ ಮಾಡಲು ಕಂಪ್ಯೂಟರ್‌ ಮತ್ತು ಕಂಪ್ಯೂಟರ್‌ ಪ್ರೋಗ್ರ್ಯಾಮ್‌ಗಳು ನೆರವು ನೀಡುತ್ತಿವೆ. ಉದಾಹರಣೆಗೆ, ಮೆಪ್ಸ್‌ (ಮಲ್ಟಿಲ್ಯಾಂಗ್ವೇಜ್‌ ಎಲೆಕ್ಟ್ರಾನಿಕ್‌ ಪಬ್ಲಿಷಿಂಗ್‌ ಸಿಸ್ಟಮ್‌) ಎಂಬ ಕಂಪ್ಯೂಟರ್‌ ಪ್ರೋಗ್ರ್ಯಾಮ್‍ನಿಂದ ತುಂಬ ಸಹಾಯವಾಗುತ್ತಿದೆ. ಇದರ ಫಲಿತಾಂಶ, ಇಂದು ಪ್ರಪಂಚದ ಎಲ್ಲಾ ಕಡೆಗಳಲ್ಲಿರುವ ಯೆಹೋವನ ಸಾಕ್ಷಿಗಳು ಬೈಬಲ್‌ ಸತ್ಯದ ಶುದ್ಧ ಭಾಷೆಯನ್ನು ಕಲಿತಿದ್ದಾರೆ ಮತ್ತು ಐಕ್ಯರಾಗಿದ್ದಾರೆ.ಚೆಫನ್ಯ 3:9 ಓದಿ.

ಕಾನೂನು ಮತ್ತು ನ್ಯಾಯಾಲಯದ ತೀರ್ಪುಗಳು

13, 14. ಕಾನೂನು ಮತ್ತು ನ್ಯಾಯಾಲಯದ ತೀರ್ಪುಗಳು ನಮಗೆ ಹೇಗೆ ಸಹಾಯ ಮಾಡಿವೆ?

13 ಪ್ರಥಮ ಶತಮಾನದಲ್ಲಿ ಸುವಾರ್ತೆ ಸಾರಲು ಆಗ ಇದ್ದ ಕ್ರೈಸ್ತರಿಗೆ ರೋಮನ್‌ ಕಾನೂನು ಅನೇಕ ರೀತಿಯಲ್ಲಿ ಸಹಾಯ ಮಾಡಿತು. ಇಂದಿನ ಕಾನೂನು ವ್ಯವಸ್ಥೆ ಸಹ ಸುವಾರ್ತೆ ಸಾರಲು ನಮಗೆ ಸಹಾಯ ಮಾಡುತ್ತಿದೆ. ಉದಾಹರಣೆಗೆ, ಅಮೆರಿಕದ ಕಾನೂನು, ಜನರಿಗೆ ತಮಗಿಷ್ಟವಾದ ಧರ್ಮವನ್ನು ಅನುಸರಿಸುವ, ತಮ್ಮ ನಂಬಿಕೆಗಳ ಕುರಿತು ಇತರರಿಗೆ ತಿಳಿಸುವ ಮತ್ತು ಜೊತೆ ಸೇರಿ ಆರಾಧಿಸುವ ಹಕ್ಕನ್ನು ಕೊಟ್ಟಿದೆ. ಇದರಿಂದ ಅಲ್ಲಿನ ಯೆಹೋವನ ಸಾಕ್ಷಿಗಳಿಗೆ ಯಾವುದೇ ಅಡ್ಡಿ ಇಲ್ಲದೆ ನಿರಾತಂಕವಾಗಿ ಕೂಟಗಳನ್ನು ನಡೆಸುವ ಮತ್ತು ಸುವಾರ್ತೆ ಸಾರುವ ಸ್ವಾತಂತ್ರ್ಯವಿದೆ. ಅಷ್ಟೇ ಅಲ್ಲದೆ, ಇಡೀ ಪ್ರಪಂಚದಲ್ಲಿ ನಡೆಯುವ ಸಾರುವ ಕೆಲಸಕ್ಕೆ ಯೋಜನೆಗಳನ್ನು ಮಾಡುವ ಸ್ವಾತಂತ್ರ್ಯವಿದೆ. ಆದರೂ ಕೆಲವೊಮ್ಮೆ, ಸುವಾರ್ತೆ ಸಾರುವುದರಲ್ಲಿ ಅಡ್ಡಿಗಳು ಬಂದಿವೆ. ಆಗ ನಮ್ಮ ಹಕ್ಕಿಗಾಗಿ ನ್ಯಾಯಾಲಯದ ಮೊರೆಹೋಗಿದ್ದೇವೆ. (ಫಿಲಿ. 1:7) ಅಲ್ಲಿನ ನ್ಯಾಯಾಧೀಶರು ನಮ್ಮ ಹಕ್ಕನ್ನು ರದ್ದು ಮಾಡಲು ಪ್ರಯತ್ನಿಸಿದಾಗ ನಾವು ಉನ್ನತ ನ್ಯಾಯಾಲಯಗಳ ಮೊರೆಹೋಗಿ ಎಷ್ಟೋ ಬಾರಿ ಅಲ್ಲಿ ನಮ್ಮ ಪರವಾಗಿ ತೀರ್ಪನ್ನು ಪಡೆದಿದ್ದೇವೆ.

14 ಅಮೆರಿಕದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲೂ ಯೆಹೋವನನ್ನು ಆರಾಧಿಸುವ ಮತ್ತು ಸಾರುವ ನಮ್ಮ ಹಕ್ಕಿಗಾಗಿ ಅಲ್ಲಿನ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಅಲ್ಲಿ ನಮ್ಮ ವಿರುದ್ಧವಾಗಿ ತೀರ್ಪು ಬಂದಾಗ ನಾವು ಅಂತರರಾಷ್ಟ್ರೀಯ ನ್ಯಾಯಾಲಯಗಳಿಗೂ ಹೋಗಿದ್ದೇವೆ. ಇಂಥ ನ್ಯಾಯಾಲಯಗಳಲ್ಲಿ ಒಂದು, ಮಾನವ ಹಕ್ಕುಗಳ ಯುರೋಪಿಯನ್‌ ನ್ಯಾಯಾಲಯ. 2014ರ ಜೂನ್‌ ತಿಂಗಳವರೆಗೆ ಈ ನ್ಯಾಯಾಲಯದಲ್ಲಿ ನಾವು ಒಟ್ಟು 57 ಕೇಸುಗಳನ್ನು ಗೆದ್ದಿದ್ದೇವೆ. ಈ ನ್ಯಾಯಾಲಯ ನೀಡಿದ ತೀರ್ಪುಗಳು ಯುರೋಪಿನ ಹೆಚ್ಚಿನ ದೇಶಗಳಿಗೆ ಅನ್ವಯಿಸುತ್ತವೆ. ನಾವು ‘ಎಲ್ಲ ಜನಾಂಗಗಳ ದ್ವೇಷಕ್ಕೆ ಗುರಿಯಾಗಿದ್ದರೂ’ ಕೆಲವೊಂದು ದೇಶಗಳ ಕಾನೂನುಗಳು ಯೆಹೋವನನ್ನು ಸ್ವತಂತ್ರವಾಗಿ ಆರಾಧಿಸಲು ಸಹಾಯ ಮಾಡಿವೆ.—ಮತ್ತಾ. 24:9.

ಇನ್ನಿತರ ಸಹಾಯಕಗಳು

ನಾವು ಅನೇಕ ಭಾಷೆಗಳಲ್ಲಿ ಬೈಬಲ್‌ ಸಾಹಿತ್ಯಗಳನ್ನು ಕೊಡುತ್ತೇವೆ

15. ಮುದ್ರಣ ವಿಧಾನಗಳಲ್ಲಿ ಯಾವೆಲ್ಲ ಅಭಿವೃದ್ಧಿಗಳಾಗಿವೆ ಮತ್ತು ಇವು ನಮಗೆ ಹೇಗೆ ನೆರವಾಗಿವೆ?

15 ಹೊಸ ಹೊಸ ಮುದ್ರಣ ವಿಧಾನಗಳಿಂದ ಲೋಕವ್ಯಾಪಕವಾಗಿ ಸುವಾರ್ತೆ ಸಾರಲು ಸಹಾಯವಾಗಿದೆ. 1450ರಲ್ಲಿ ಜೋಹಾನಸ್‌ ಗುಟನ್‌ಬರ್ಗ್‌ ಕಂಡುಹಿಡಿದ ಮುದ್ರಣ ವಿಧಾನವನ್ನು ಅನೇಕ ವರ್ಷಗಳವರೆಗೆ ಜನರು ಉಪಯೋಗಿಸುತ್ತಾ ಬಂದಿದ್ದರು. ಆದರೆ, ಕಳೆದ ಇನ್ನೂರು ವರ್ಷಗಳಲ್ಲಿ, ಮುದ್ರಣ ವಿಧಾನಗಳಲ್ಲಿ ಅನೇಕ ಅಭಿವೃದ್ಧಿಗಳಾಗಿವೆ. ಉದಾಹರಣೆಗೆ, ಆಫ್‌ಸೆಟ್‌ ಮುದ್ರಣವನ್ನು ಕಂಡುಹಿಡಿದ ನಂತರ ಮುದ್ರಣದ ಕೆಲಸ ಇನ್ನೂ ತ್ವರಿತಗತಿಯಲ್ಲಿ ನಡೆಯುತ್ತಿದೆ ಮತ್ತು ಗುಣಮಟ್ಟವೂ ಉತ್ತಮವಾಗಿದೆ. ಜೊತೆಗೆ, ಪೇಪರ್‌ಗಳ ತಯಾರಿಕೆ ಮತ್ತು ಪುಸ್ತಕಗಳಿಗೆ ರಟ್ಟನ್ನು ಹಾಕುವ ಕೆಲಸವನ್ನು ಕಡಿಮೆ ದುಡ್ಡಿನಲ್ಲೇ ಮಾಡಿ ಮುಗಿಸಬಹುದು. ಈ ಎಲ್ಲ ವಿಷಯಗಳಿಂದ ನಮಗೇನಾದರೂ ನೆರವಾಗಿದೆಯಾ? 1879ರಲ್ಲಿ ಮುದ್ರಿಸಿದ ಕಾವಲಿನಬುರುಜು ಪತ್ರಿಕೆಯ ಮೊದಲ ಸಂಚಿಕೆ ಕೇವಲ ಇಂಗ್ಲಿಷ್‌ ಭಾಷೆಯಲ್ಲಿತ್ತು. ಅದರಲ್ಲಿ ಯಾವುದೇ ಚಿತ್ರಗಳಿರಲಿಲ್ಲ ಮತ್ತು 6,000 ಪ್ರತಿಗಳನ್ನು ಮಾತ್ರ ಮುದ್ರಿಸಲಾಯಿತು. ಆದರೆ ಇಂದು, ಕಾವಲಿನಬುರುಜು ಪತ್ರಿಕೆಯನ್ನು 200ಕ್ಕೂ ಹೆಚ್ಚು ಭಾಷೆಗಳಲ್ಲಿ ಮುದ್ರಿಸಲಾಗುತ್ತಿದೆ. ಈ ಪತ್ರಿಕೆಯಲ್ಲಿ ಬಣ್ಣಬಣ್ಣದ ಸುಂದರ ಚಿತ್ರಗಳಿವೆ. 5 ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರತಿ ಸಂಚಿಕೆಯನ್ನು ಮುದ್ರಿಸಲಾಗುತ್ತಿದೆ.

16. ಯಾವ ಆವಿಷ್ಕಾರಗಳಿಂದ ಲೋಕವ್ಯಾಪಕವಾಗಿ ಸುವಾರ್ತೆ ಸಾರಲು ನಮಗೆ ನೆರವಾಗಿದೆ? (ಲೇಖನದ ಆರಂಭದ ಚಿತ್ರ ನೋಡಿ.)

16 ಕಳೆದ ಇನ್ನೂರು ವರ್ಷಗಳಲ್ಲಾಗಿರುವ ಆವಿಷ್ಕಾರಗಳಿಂದ ಸುವಾರ್ತೆ ಸಾರಲು ನಮಗೆ ತುಂಬ ನೆರವಾಗಿದೆ. ಅವುಗಳಲ್ಲಿ ರೈಲು, ಕಾರು ಮತ್ತು ವಿಮಾನಗಳ ಬಗ್ಗೆ ನಾವೀಗಾಗಲೇ ನೋಡಿದೆವು. ಇವುಗಳ ಜೊತೆ ಇನ್ನೂ ಕೆಲವು ಸಾಧನಗಳ ಆವಿಷ್ಕಾರವಾಗಿದೆ. ಉದಾಹರಣೆಗೆ, ಸೈಕಲ್‌, ಟೈಪ್‌ರೈಟರ್‌, ಬ್ರೈಲ್‌ ಲಿಪಿಗಾಗಿ ಬಳಸುವ ಸಾಧನ, ಟೆಲಿಗ್ರಾಫ್‌, ಟೆಲಿಫೋನ್‌, ಕ್ಯಾಮೆರಾ, ಆಡಿಯೋ ರೆಕಾರ್ಡರ್‌, ವಿಡಿಯೋ ರೆಕಾರ್ಡರ್‌, ರೇಡಿಯೋ, ಟಿ.ವಿ, ಚಲನಚಿತ್ರ, ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌. ಈ ಎಲ್ಲ ಸಾಧನಗಳನ್ನು ನಾವು ಕಂಡುಹಿಡಿಯದೇ ಇದ್ದರೂ ಅವುಗಳನ್ನು ಬಳಸುತ್ತ ಬೈಬಲ್‌ ಮತ್ತು ಇತರ ಸಾಹಿತ್ಯಗಳನ್ನು ಅನೇಕ ಭಾಷೆಗಳಲ್ಲಿ ತಯಾರಿಸುತ್ತಿದ್ದೇವೆ ಮತ್ತು ಲೋಕವ್ಯಾಪಕವಾಗಿ ಸುವಾರ್ತೆ ಸಾರುತ್ತಿದ್ದೇವೆ. ಹೀಗೆ ನಾವು ಈ ಆವಿಷ್ಕಾರಗಳಿಂದ ಸಹಾಯ ಪಡೆಯುತ್ತಾ ‘ಜನಾಂಗಗಳ ಮೊಲೆಕೂಸಾಗುವಿರಿ’ ಎಂಬ ಬೈಬಲ್‌ ಪ್ರವಾದನೆಯನ್ನು ನೆರವೇರಿಸುತ್ತಿದ್ದೇವೆ.—ಯೆಶಾಯ 60:16 ಓದಿ.

17. (ಎ) ಸುವಾರ್ತೆ ಸಾರುವ ಕೆಲಸ ಯಾರ ಮಾರ್ಗದರ್ಶನದಿಂದ ನಡೆಯುತ್ತಿದೆ? (ಬಿ) ಸುವಾರ್ತೆ ಸಾರುವ ಕೆಲಸವನ್ನು ಯೆಹೋವನು ನಮಗೇಕೆ ಕೊಟ್ಟಿದ್ದಾನೆ?

17 ಯೆಹೋವನ ಮಾರ್ಗದರ್ಶನದಿಂದಲೇ ನಮ್ಮ ಸಾರುವ ಕೆಲಸ ನಡೆಯುತ್ತಿದೆ ಎನ್ನುವುದಂತೂ ಸುಸ್ಪಷ್ಟ. ಸುವಾರ್ತೆ ಸಾರುವ ಕೆಲಸವನ್ನು ಯೆಹೋವನು ನಮಗೇಕೆ ಕೊಟ್ಟಿದ್ದಾನೆ? ನಮ್ಮ ಸಹಾಯ ಇಲ್ಲದೆ ಆತನೊಬ್ಬನೇ ಅದನ್ನು ಮಾಡಲು ಸಾಧ್ಯವಿಲ್ಲ ಎಂದಾ? ಅಲ್ಲ, ಆತನು ನಮ್ಮನ್ನು ಪ್ರೀತಿಸುತ್ತಿರುವುದರಿಂದ ಮತ್ತು ನಾವು ಆತನ ಜೊತೆ ಕೆಲಸ ಮಾಡಬೇಕೆಂದು ಬಯಸುವುದರಿಂದ ಈ ಕೆಲಸವನ್ನು ನಮಗೆ ಕೊಟ್ಟಿದ್ದಾನೆ. ನಾವು ಸುವಾರ್ತೆ ಸಾರುವುದರಿಂದ ಯೆಹೋವನನ್ನು ಮತ್ತು ಇತರರನ್ನು ಪ್ರೀತಿಸುತ್ತೇವೆಂದು ತೋರಿಸಿಕೊಡುತ್ತೇವೆ. (1 ಕೊರಿಂ. 3:9; ಮಾರ್ಕ 12:28-31) ಈ ಕೆಲಸದಲ್ಲಿ ನಮಗೆ ಯೆಹೋವನು ಸಹಾಯ ಮಾಡುತ್ತಿರುವುದರಿಂದ ಆತನಿಗೆ ನಾವು ಚಿರಋಣಿಗಳಾಗಿದ್ದೇವೆ. ಆದ್ದರಿಂದ ಯೆಹೋವನ ಬಗ್ಗೆ ಮತ್ತು ಆತನ ರಾಜ್ಯದ ಬಗ್ಗೆ ಸುವಾರ್ತೆ ಸಾರುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸಿಕೊಳ್ಳೋಣ.

^ ಪ್ಯಾರ. 1 1870ರ ವರ್ಷಗಳಲ್ಲಿ ಯೆಹೋವನ ಜನರನ್ನು “ಬೈಬಲ್‌ ವಿದ್ಯಾರ್ಥಿಗಳು” ಎಂದು ಕರೆಯಲಾಗುತ್ತಿತ್ತು. ಆದರೆ 1931ರಲ್ಲಿ “ಯೆಹೋವನ ಸಾಕ್ಷಿಗಳು” ಎಂಬ ಹೆಸರನ್ನು ಪಡೆದುಕೊಂಡರು.—ಯೆಶಾ. 43:10.