ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಹೆಚ್ಚು ತೃಪ್ತಿ ತರುವ ಉದ್ಯೋಗವನ್ನು ಕಂಡುಕೊಂಡೆವು

ಹೆಚ್ಚು ತೃಪ್ತಿ ತರುವ ಉದ್ಯೋಗವನ್ನು ಕಂಡುಕೊಂಡೆವು

ಐದು ವರ್ಷ ಪ್ರಾಯದಿಂದ ನಾನು ಮತ್ತು ಗ್ವೆನ್‌ ಡ್ಯಾನ್ಸ್‌ ಕಲಿಯಲು ಶುರುಮಾಡಿದೆವು. ಆಗ ಇನ್ನೂ ನಮ್ಮಿಬ್ಬರ ಪರಿಚಯ ಆಗಿರಲಿಲ್ಲ. ಆದರೆ ದೊಡ್ಡವರಾಗುತ್ತಾ ನಾವಿಬ್ಬರು ಬ್ಯಾಲೆ ಡ್ಯಾನ್ಸ್‌ ಅನ್ನು ಜೀವನದ ಉದ್ಯೋಗವನ್ನಾಗಿ ಮಾಡಿಕೊಳ್ಳುವ ನಿರ್ಣಯ ಮಾಡಿದೆವು. ಈ ಉದ್ಯೋಗದಲ್ಲಿ ತುಂಬ ಯಶಸ್ಸನ್ನು ಪಡೆಯುತ್ತಿರುವಾಗಲೇ ಅದನ್ನು ಬಿಟ್ಟುಬಿಟ್ಟೆವು. ಯಾಕೆಂದು ಹೇಳುತ್ತೇವೆ ಕೇಳಿ.

ಡೇವಿಡ್: ನಾನು 1945ರಲ್ಲಿ ಇಂಗ್ಲಂಡ್‍ನ ಶ್ರೊಪ್‌ಶೀರ್‌ನಲ್ಲಿ ಹುಟ್ಟಿದೆ. ಅದರ ಗ್ರಾಮಾಂತರ ಪ್ರದೇಶದಲ್ಲಿ ಅಪ್ಪನಿಗೆ ಫಾರ್ಮ್‌ ಇತ್ತು. ಅಲ್ಲಿ ಕೆಲಸ ಮಾಡುವುದೆಂದರೆ ನನಗೆ ತುಂಬ ಇಷ್ಟ. ಶಾಲೆಯಿಂದ ಬಂದ ಕೂಡಲೇ ಕೋಳಿಗಳಿಗೆ ತೀನಿ ಹಾಕಿ ಮೊಟ್ಟೆಗಳನ್ನು ಸಂಗ್ರಹಿಸುತ್ತಿದ್ದೆ, ಆಹಾರಕ್ಕೆಂದೇ ಸಾಕಲಾಗುತ್ತಿದ್ದ ದನ ಕುರಿಗಳನ್ನು ನೋಡಿಕೊಳ್ಳುತ್ತಿದ್ದೆ. ಶಾಲೆಗೆ ರಜೆ ಸಿಕ್ಕಿದಾಗ ಕಟಾವು ಕೆಲಸದಲ್ಲಿ ಸಹಾಯ ಮಾಡುತ್ತಿದ್ದೆ. ಕೆಲವೊಮ್ಮೆ ಟ್ರ್ಯಾಕ್ಟರ್‌ ಓಡಿಸುತ್ತಿದ್ದೆ.

ಆದರೆ ನನ್ನ ಜೀವನದಲ್ಲಿ ಇನ್ನೊಂದು ವಿಷಯದ ಬಗ್ಗೆ ಆಸಕ್ತಿ ಬೆಳೆಯಲು ಶುರುವಾಯಿತು. ಚಿಕ್ಕಂದಿನಿಂದ ಯಾವುದೇ ಸಂಗೀತ ನನ್ನ ಕಿವಿಗೆ ಬಿದ್ದ ಕೊಡಲೇ ನಾನು ಕುಣಿಯುತ್ತಿದ್ದದನ್ನು ಅಪ್ಪ ಗಮನಿಸಿದ್ದರು. ಐದು ವರ್ಷದವನಾಗಿದ್ದಾಗ ನನ್ನನ್ನು ಊರಲ್ಲಿದ್ದ ಟ್ಯಾಪ್‌ ಡ್ಯಾನ್ಸ್‌ ಕ್ಲಾಸಿಗೆ ಸೇರಿಸುವಂತೆ ಅಮ್ಮನಿಗೆ ಅಪ್ಪ ಹೇಳಿದರು. ಆದರೆ ಅಲ್ಲಿದ್ದ ಶಿಕ್ಷಕನಿಗೆ ನಾನೊಬ್ಬ ಒಳ್ಳೇ ಬ್ಯಾಲೆ ಡ್ಯಾನ್ಸರ್‌ ಆಗಬಹುದೆಂದು ಅನಿಸಿತು. ಆದ್ದರಿಂದ ಟ್ಯಾಪ್‌ ಡ್ಯಾನ್ಸ್‌ ಜೊತೆ ಅವರು ಬ್ಯಾಲೆ ಡ್ಯಾನ್ಸನ್ನೂ ಕಲಿಸಿದರು. ನನಗೆ 15 ವರ್ಷ ಆದಾಗ ಲಂಡನಿನ ಪ್ರಸಿದ್ಧ ರಾಯಲ್‌ ಬ್ಯಾಲೆ ಶಾಲೆಗೆ ಸೇರಲು ವಿದ್ಯಾರ್ಥಿವೇತನ ಸಿಕ್ಕಿತು. ಗ್ವೆನ್‍ಳ ಪರಿಚಯವಾದದ್ದು ಅಲ್ಲೇ. ಅವಳು ಬ್ಯಾಲೆ ಡ್ಯಾನ್ಸ್‌ನಲ್ಲಿ ನನಗೆ ಜೋಡಿಯಾದಳು.

ಗ್ವೆನ್‌: ಗಿಜಿಗುಟ್ಟುವ ನಗರವಾದ ಲಂಡನ್‍ನಲ್ಲಿ ನಾನು 1944ರಲ್ಲಿ ಹುಟ್ಟಿದೆ. ಚಿಕ್ಕ ಹುಡುಗಿಯಾಗಿದ್ದಾಗಲೇ ನನಗೆ ದೇವರ ಮೇಲೆ ತುಂಬ ನಂಬಿಕೆ. ಬೈಬಲನ್ನು ಓದಲು ಪ್ರಯತ್ನಿಸಿದರೂ ಅರ್ಥ ಆಗುತ್ತಿರಲಿಲ್ಲ. ಆದರೆ 5 ವರ್ಷ ಪ್ರಾಯದಲ್ಲೇ ಡ್ಯಾನ್ಸ್‌ ಕ್ಲಾಸುಗಳಿಗೆ ಹೋಗುತ್ತಿದ್ದೆ. 6 ವರ್ಷಗಳ ನಂತರ ಇಡೀ ಬ್ರಿಟನ್‌ಗೆ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಗೆದ್ದೆ. ಬಹುಮಾನವಾಗಿ ನನಗೆ ಲಂಡನ್‍ನ ಹೊರವಲಯದಲ್ಲಿದ್ದ ರಾಯಲ್‌ ಬ್ಯಾಲೆ ಶಾಲೆಯಲ್ಲಿ ಸೀಟು ಸಿಕ್ಕಿತು. ಈ ಶಾಲೆ ರಿಚ್‌ಮಂಡ್ ಪಾರ್ಕ್‍ನ ಒಂದು ಸುಂದರವಾದ ದೊಡ್ಡ ಬಂಗಲೆಯಾದ ವೈಟ್‌ ಲಾಜ್‍ನಲ್ಲಿದೆ. ಅಲ್ಲಿದ್ದ ತುಂಬ ಒಳ್ಳೇ ಶಿಕ್ಷಕರಿಂದ ವಿದ್ಯಾಭ್ಯಾಸ ಪಡೆದೆ, ಬ್ಯಾಲೆ ಡ್ಯಾನ್ಸ್‌ ಅನ್ನೂ ಕಲಿತೆ. ಲಂಡನ್‍ನ ಮಧ್ಯ ಭಾಗದಲ್ಲಿದ್ದ ರಾಯಲ್‌ ಬ್ಯಾಲೆ ಶಾಲೆಯಲ್ಲಿ 16 ವರ್ಷ ಪ್ರಾಯದಲ್ಲಿ ಹಿರಿಯ ವಿದ್ಯಾರ್ಥಿಯಾದೆ. ಅಲ್ಲೇ ನನಗೆ ಡೇವಿಡ್‍ನ ಪರಿಚಯ ಆಯಿತು. ಕೆಲವೇ ತಿಂಗಳುಗಳಲ್ಲಿ ನಾವಿಬ್ಬರು ಲಂಡನ್‍ನ ಕವೆಂಟ್‌ ಗಾರ್ಡನ್‍ನಲ್ಲಿರುವ ರಾಯಲ್‌ ಆಪರ ಹೌಸ್‍ನಲ್ಲಿ ನಡೆಯುತ್ತಿದ್ದ ಸಂಗೀತಪ್ರಧಾನ ನಾಟಕಗಳಲ್ಲಿ ಜೊತೆಯಾಗಿ ಬ್ಯಾಲೆ ಡ್ಯಾನ್ಸ್‌ ಶುರುಮಾಡಿದೆವು.

ಬ್ಯಾಲೆ ಡ್ಯಾನ್ಸ್‌ ಮಾಡುತ್ತಿದ್ದ ಜಗತ್ತಿನ ಬೇರೆಬೇರೆ ರಂಗಮಂದಿರಗಳಲ್ಲಿ ನಾವು ಡ್ಯಾನ್ಸ್‌ ಮಾಡಿದ್ದೇವೆ

ಡೇವಿಡ್: ಗ್ವೆನ್‌ ಹೇಳಿದಂತೆ ಪ್ರಸಿದ್ಧವಾದ ರಾಯಲ್‌ ಆಪರ ಹೌಸ್‍ನಲ್ಲಿ ಹಾಗೂ ಲಂಡನ್‍ನ ಫೆಸ್ಟಿವಲ್‌ ಬ್ಯಾಲೆ (ಈಗ ಇಂಗ್ಲಿಷ್‌ ನ್ಯಾಷನಲ್‌ ಬ್ಯಾಲೆ) ಎಂಬ ಕಂಪನಿಗಾಗಿ ಡ್ಯಾನ್ಸ್‌ ಮಾಡುತ್ತಿದ್ದೆವು. ರಾಯಲ್‌ ಬ್ಯಾಲೆ ಶಾಲೆಯ ನೃತ್ಯ ಯೋಜಕರೊಬ್ಬರು ಜರ್ಮನಿಯ ವಪರ್‌ಟಲ್‍ನಲ್ಲಿ ಅಂತಾರಾಷ್ಟ್ರೀಯ ಡ್ಯಾನ್ಸ್‌ ಕಂಪನಿಯೊಂದನ್ನು ಸ್ಥಾಪಿಸಿದ್ದರು. ಒಂಟಿ ನೃತ್ಯ ಪ್ರದರ್ಶನಗಳಿಗಾಗಿ ಅವರು ನಮ್ಮಿಬ್ಬರನ್ನು ಆಯ್ಕೆಮಾಡಿದರು. ಈ ಉದ್ಯೋಗದ ಕಾರಣ ನಾವು ಜಗತ್ತಿನ ಬೇರೆಬೇರೆ ರಂಗಮಂದಿರಗಳಲ್ಲಿ ಹಾಗೂ ಪ್ರಸಿದ್ಧ ನೃತ್ಯಗಾರರಾದ ಮಾರ್ಗೋ ಫಾನ್‌ಟೇನ್‌, ರುಡಾಲ್ಫ್ ನುರೆಯೆವ್‌ ಜೊತೆ ಡ್ಯಾನ್ಸ್‌ ಮಾಡಿದೆವು. ಈ ಪೈಪೋಟಿಯ ಜೀವನವು ನಮ್ಮಲ್ಲಿ ಜಂಬ ಹುಟ್ಟಿಸಿತು ಮತ್ತು ಈ ಉದ್ಯೋಗಕ್ಕೆ ನಮ್ಮನ್ನೇ ಪೂರ್ತಿಯಾಗಿ ನೀಡಿಕೊಂಡೆವು.

ಗ್ವೆನ್‌: ನನ್ನ ಇಡೀ ತನುಮನವನ್ನು ಡ್ಯಾನ್ಸ್‌ಗಾಗಿ ಮುಡಿಪಾಗಿಟ್ಟೆ. ಬ್ಯಾಲೆ ಡ್ಯಾನ್ಸ್‌ನಲ್ಲಿ ಎಲ್ಲರಿಗಿಂತ ಮೇಲಿನ ಸ್ಥಾನಕ್ಕೆ ಹೋಗಬೇಕೆಂಬ ಹೆಬ್ಬಯಕೆ ನಮಗಿಬ್ಬರಿಗೂ ಇತ್ತು. ಆಟೋಗ್ರಾಫ್‌ ಕೊಡುವುದು, ಹೂವುಗಳನ್ನು ಸ್ವೀಕರಿಸುವುದು, ಸಭಿಕರ ಚಪ್ಪಾಳೆ ಇವೆಲ್ಲ ನನಗೆ ತುಂಬ ಇಷ್ಟ ಆಗುತ್ತಿತ್ತು. ನಾಟಕ ಕ್ಷೇತ್ರದಲ್ಲಿ ನನ್ನ ಸುತ್ತಲೂ ಅನೈತಿಕ ಜೀವನ ನಡೆಸುತ್ತಿದ್ದ, ಧೂಮಪಾನ ಮಾಡುತ್ತಿದ್ದ, ಕುಡಿಯುತ್ತಿದ್ದ ಜನರೇ ಇದ್ದರು. ಈ ಕ್ಷೇತ್ರದಲ್ಲಿರುವವರಂತೆ ನಾನೂ ಅದೃಷ್ಟ ತಾಯಿತಿಗಳನ್ನು ನಂಬುತ್ತಿದ್ದೆ.

ನಮ್ಮ ಜೀವನವೇ ಬದಲಾಯಿತು

ನಮ್ಮ ಮದುವೆ ದಿನ

ಡೇವಿಡ್: ಈ ಉದ್ಯೋಗದಲ್ಲಿ ತುಂಬ ವರ್ಷ ಪ್ರಯಾಣ ಮಾಡಿಮಾಡಿ ಬೇಸತ್ತು ಹೋದೆ. ಫಾರ್ಮ್‌ ವಾತಾವರಣದಲ್ಲಿ ಬೆಳೆದು ಬಂದಿದ್ದ ನನಗೆ ಹಳ್ಳಿಯ ಸರಳ ಜೀವನದ ಕಡೆಗೆ ಮನಸ್ಸು ವಾಲಿತು. ಆದ್ದರಿಂದ 1967ರಲ್ಲಿ ನನ್ನ ಉದ್ಯೋಗವನ್ನು ಬಿಟ್ಟು ಅಪ್ಪಅಮ್ಮನ ಮನೆ ಹತ್ತಿರ ಇದ್ದ ದೊಡ್ಡ ಫಾರ್ಮ್‌ ಒಂದರಲ್ಲಿ ಕೆಲಸಮಾಡಲು ಶುರುಮಾಡಿದೆ. ಒಂದು ಸಣ್ಣ ಮನೆಯನ್ನು ಧಣಿ ಬಾಡಿಗೆಗೆ ಕೊಟ್ಟರು. ನಂತರ ನಾನು ರಂಗಮಂದಿರದಲ್ಲಿ ಕೆಲಸಮಾಡುತ್ತಿದ್ದ ಗ್ವೆನ್‌ಗೆ ಫೋನ್‌ ಮಾಡಿ ‘ನನ್ನನ್ನು ಮದುವೆ ಆಗುತ್ತೀಯಾ?’ ಎಂದು ಕೇಳಿದೆ. ಆಗ ಒಂಟಿ ನೃತ್ಯ ಪ್ರದರ್ಶನ ಮಾಡುತ್ತಿದ್ದ ಆಕೆ ಉದ್ಯೋಗದಲ್ಲಿ ಚೆನ್ನಾಗಿ ಮೇಲೇರುತ್ತಿದ್ದಳು. ಆದ್ದರಿಂದ ಈ ನಿರ್ಣಯ ಮಾಡುವುದು ಸುಲಭ ಆಗಿರಲಿಲ್ಲ. ಆದರೂ ನನ್ನನ್ನು ಮದುವೆಯಾಗಲು ಒಪ್ಪಿಕೊಂಡಳು. ಹಳ್ಳಿ ಜೀವನ ಏನು ಅಂಥ ಹೆಚ್ಚು ಗೊತ್ತಿಲ್ಲದಿದ್ದರೂ ಮದುವೆಯಾದಳು.

ಗ್ವೆನ್‌: ಹೌದು, ಫಾರ್ಮ್‌ ಜೀವನಕ್ಕೆ ಹೊಂದಿಕೊಳ್ಳಲು ನನಗೆ ಕಷ್ಟ ಆಯಿತು. ಹವಾಮಾನ ಹೇಗೇ ಇರಲಿ ಹಸುಗಳ ಹಾಲು ಕರೆಯಬೇಕಿತ್ತು, ಹಂದಿಗಳಿಗೆ ಮೇವು, ಕೋಳಿಗಳಿಗೆ ತೀನಿ ಹಾಕಬೇಕಿತ್ತು. ಇದೆಲ್ಲ ನನಗೆ ಹೊಸ ವಿಷಯ. ಪ್ರಾಣಿ ಸಾಕಣೆ ಬಗ್ಗೆ ಹೊಸಹೊಸ ವಿಧಾನಗಳನ್ನು ಕಲಿಯಲು ಡೇವಿಡ್ ಆ ತರಬೇತಿ ಕೊಡುವ ಕಾಲೇಜು ಸೇರಿದರು. ಅದು ಒಂಬತ್ತು ತಿಂಗಳ ತರಬೇತಿ ಆಗಿತ್ತು. ಅವರು ರಾತ್ರಿ ವಾಪಸ್ಸು ಮನೆಗೆ ಬರುವ ತನಕ ಒಬ್ಬಳೇ ಇರುತ್ತಿದ್ದೆ. ಇಷ್ಟರೊಳಗೆ ನಮ್ಮ ಮೊದಲ ಮಗಳು ಗಿಲಿ ಹುಟ್ಟಿದ್ದಳು. ಡೇವಿಡ್‍ನ ಸಲಹೆಯಂತೆ ಕಾರು ಓಡಿಸಲು ಕಲಿತೆ. ಒಂದು ದಿನ ಪಕ್ಕದ ಒಂದು ಪಟ್ಟಣಕ್ಕೆ ಹೋದಾಗ ಗೇಲ್‌ ಸಿಕ್ಕಿದಳು. ಅವಳು ಮುಂಚೆ ನಮ್ಮೂರಿನ ಒಂದು ಅಂಗಡಿಯಲ್ಲಿ ಕೆಲಸಮಾಡುತ್ತಿದ್ದಾಗ ಅವಳ ಹತ್ತಿರ ಮಾತಾಡಿದ ನೆನಪಿತ್ತು.

ಮದುವೆಯಾದ ಹೊಸದರಲ್ಲಿ ನಾವಿಬ್ಬರು ಫಾರ್ಮ್‌ನಲ್ಲಿ ಕೆಲಸಮಾಡುತ್ತಿರುವುದು

‘ಬಾ, ಟೀ ಕುಡಿದುಕೊಂಡು ಹೋಗು’ ಎಂದು ಗೇಲ್‌ ಪ್ರೀತಿಯಿಂದ ಮನೆಗೆ ಕರೆದಳು. ಅಲ್ಲಿ ನಾವಿಬ್ಬರು ನಮ್ಮನಮ್ಮ ಮದುವೆ ಫೋಟೋಗಳನ್ನು ನೋಡಿದೆವು. ಅವಳು ತೋರಿಸಿದ ಒಂದು ಫೋಟೋದಲ್ಲಿ ಗುಂಪೊಂದು ‘ರಾಜ್ಯ ಸಭಾಗೃಹ’ ಎಂದು ಬರೆಯಲಾಗಿದ್ದ ಕಟ್ಟಡದ ಮುಂದೆ ನಿಂತಿತ್ತು. ‘ಇದು ಯಾವ ಚರ್ಚು?’ ಎಂದು ಕೇಳಿದೆ. ಅದಕ್ಕವಳು ‘ನಾನು ಮತ್ತು ನನ್ನ ಗಂಡ ಯೆಹೋವನ ಸಾಕ್ಷಿಗಳು’ ಎಂದು ಹೇಳಿದಾಗ ನನಗೆ ತುಂಬ ಖುಷಿಯಾಯಿತು. ಯಾಕೆಂದರೆ ನನ್ನ ಅಪ್ಪನ ಸಹೋದರಿಯರಲ್ಲಿ ಒಬ್ಬರು ಯೆಹೋವನ ಸಾಕ್ಷಿ ಆಗಿದ್ದರೆಂದು ಆಗ ನೆನಪಾಯಿತು. ಅಪ್ಪನಿಗೆ ಅವರ ಮೇಲೆ ಎಷ್ಟು ಸಿಟ್ಟಿತ್ತೆಂದರೆ ಒಂದು ಸಾರಿ ಅವರು ಕೊಟ್ಟಿದ್ದ ಸಾಹಿತ್ಯವನ್ನು ಕಸದ ಬುಟ್ಟಿಗೆ ಎಸೆದಿದ್ದೂ ನೆನಪಾಯಿತು. ತುಂಬ ಸ್ನೇಹಭಾವದ ನನ್ನ ಅಪ್ಪ ಅಷ್ಟು ಒಳ್ಳೆಯವರಾದ ಅವರ ಸಹೋದರಿ ಮೇಲೆ ಯಾಕಷ್ಟು ಕೋಪ ಮಾಡಿಕೊಂಡರು ಅಂತ ಆಗೆಲ್ಲ ಯೋಚಿಸುತ್ತಿದ್ದೆ.

ನನ್ನ ಅಪ್ಪನ ಸಹೋದರಿಯ ನಂಬಿಕೆಗಳು ಚರ್ಚು ಬೋಧನೆಗಳಿಗಿಂತ ಹೇಗೆ ಭಿನ್ನವಾಗಿದ್ದವು ಅಂತ ತಿಳಿಯಲು ಈಗ ಅವಕಾಶ ಸಿಕ್ಕಿತು. ಬೈಬಲ್‌ ನಿಜವಾಗಿ ಏನನ್ನು ಕಲಿಸುತ್ತದೆ ಎಂದು ಗೇಲ್‌ ನನಗೆ ತೋರಿಸಿದಳು. ತ್ರಿಯೇಕ, ಅಮರ ಆತ್ಮ ಮತ್ತು ಇತರ ಚರ್ಚು ಬೋಧನೆಗಳು ಬೈಬಲ್‌ ಬೋಧನೆಗಳಲ್ಲ ಎಂದು ಗೊತ್ತಾದಾಗ ತುಂಬ ಆಶ್ಚರ್ಯ ಆಯಿತು. (ಪ್ರಸಂ. 9:5, 10; ಯೋಹಾ. 14:28; 17:3) ದೇವರ ಹೆಸರು ಯೆಹೋವ ಅಂತ ಮೊದಲ ಸಾರಿ ಬೈಬಲ್‍ನಲ್ಲಿ ನೋಡಿದ್ದು ಅವತ್ತೇ.—ವಿಮೋ. 6:3.

ಡೇವಿಡ್: ಗ್ವೆನ್‌ ಕಲಿಯುತ್ತಿದ್ದ ವಿಷಯಗಳನ್ನು ನನಗೆ ಹೇಳಿದಳು. ನಾನು ಚಿಕ್ಕವನಿದ್ದಾಗ ಅಪ್ಪ ನನಗೆ ಬೈಬಲ್‌ ಓದಲು ಹೇಳುತ್ತಿದ್ದದ್ದು ನೆನಪಾಯಿತು. ಆದ್ದರಿಂದ ಗೇಲ್‌ ಮತ್ತವರ ಗಂಡ ಡೆರಿಕ್‌ ನಮ್ಮೊಟ್ಟಿಗೆ ಬೈಬಲ್‌ ಅಧ್ಯಯನ ಮಾಡಲು ಒಪ್ಪಿಕೊಂಡೆವು. ಆರು ತಿಂಗಳ ನಂತರ ಶ್ರೊಪ್‌ಶೀರ್‌ನಲ್ಲಿರುವ ಆಸ್‌ವೆಸ್ಟ್ರಿ ಎಂಬಲ್ಲಿಗೆ ಸ್ಥಳಾಂತರಿಸಿದೆವು. ಯಾಕೆಂದರೆ ಅಲ್ಲಿ ನಮಗೆ ಒಂದು ಚಿಕ್ಕ ಫಾರ್ಮ್‌ ಬಾಡಿಗೆಗೆ ಸಿಕ್ಕಿತು. ಆ ಊರಿನಲ್ಲಿದ್ದ ಡರ್‌ಡ್ರೆ ಎಂಬ ಸಹೋದರಿ ತುಂಬ ತಾಳ್ಮೆಯಿಂದ ನಮಗೆ ಬೈಬಲನ್ನು ಕಲಿಸಿದರು. ನಾವು ಫಾರ್ಮ್‌ ಕೆಲಸದಲ್ಲೇ ಮುಳುಗಿದ್ದರಿಂದ ಬೇಗ ಪ್ರಗತಿ ಮಾಡಲಿಲ್ಲ. ಆದರೆ ಸಮಯ ಕಳೆದಂತೆ ಸತ್ಯ ನಮ್ಮ ಹೃದಯದಲ್ಲಿ ನಾಟಿತು.

ಗ್ವೆನ್‌: ನನಗೆ ತುಂಬ ಮೂಢನಂಬಿಕೆ ಇತ್ತು. ಅದನ್ನು ಬಿಟ್ಟುಬಿಡುವುದೇ ನನಗಿದ್ದ ದೊಡ್ಡ ಸಮಸ್ಯೆ. ‘ಶುಭದಾಯಕದೇವತೆಗೆ ಔತಣವನ್ನು ಅಣಿಮಾಡುವವರ’ ಬಗ್ಗೆ ಯೆಹೋವನ ನೋಟವೇನು ಅಂತ ಯೆಶಾಯ 65:11 ಓದುವಾಗ ಗೊತ್ತಾಯಿತು. ನನ್ನ ಹತ್ತಿರ ಇದ್ದ ಅದೃಷ್ಟ ತಾಯಿತಿಗಳನ್ನೆಲ್ಲ ಬಿಸಾಡಲು ಸಮಯ ಹಿಡಿಯಿತು. ತುಂಬ ಪ್ರಾರ್ಥನೆ ಕೂಡ ಮಾಡಿದೆ. “ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಎನ್ನುವ ವಚನದಿಂದ ಯೆಹೋವನು ಎಂಥವರನ್ನು ಇಷ್ಟಪಡುತ್ತಾನೆ ಅಂತ ಗೊತ್ತಾಯಿತು. (ಮತ್ತಾ. 23:12) ತನ್ನ ಪ್ರೀತಿಯ ಪುತ್ರನನ್ನೇ ನಮಗೆ ವಿಮೋಚನಾ ಮೌಲ್ಯವಾಗಿ ಕೊಟ್ಟ ದೇವರನ್ನು ಆರಾಧಿಸಲು ಬಯಸಿದೆ. ಇಷ್ಟರೊಳಗೆ ನಮಗೆ ಇನ್ನೊಂದು ಮಗಳು ಹುಟ್ಟಿದ್ದಳು. ನಮ್ಮ ಇಡೀ ಕುಟುಂಬ ಪರದೈಸಿನಲ್ಲಿ ಸಾವಿಲ್ಲದೇ ಬದುಕಬಹುದು ಎಂದು ಕಲಿತಾಗ ನನಗೆ ತುಂಬ ಖುಷಿಯಾಯಿತು.

ಡೇವಿಡ್: ಮತ್ತಾಯ 24ನೇ ಅಧ್ಯಾಯ ಹಾಗೂ ದಾನಿಯೇಲ ಪುಸ್ತಕದಲ್ಲಿರುವ ಪ್ರವಾದನೆಗಳಲ್ಲದೆ ಬೈಬಲಿನ ಬೇರೆ ಪ್ರವಾದನೆಗಳು ಹೇಗೆ ನೆರವೇರಿವೆ ಎಂದು ಕಲಿತಾಗ ಇದೇ ಸತ್ಯ ಅಂತ ಮನವರಿಕೆ ಆಯಿತು. ಯೆಹೋವನೊಂದಿಗಿನ ಒಳ್ಳೇ ಸಂಬಂಧಕ್ಕಿಂತ ಈ ಲೋಕದಲ್ಲಿ ಯಾವುದೂ ದೊಡ್ಡದಲ್ಲ ಎಂದು ಅರ್ಥಮಾಡಿಕೊಂಡೆ. ಆದ್ದರಿಂದ ನನಗಿದ್ದ ಹೆಬ್ಬಯಕೆ ಕಡಿಮೆಯಾಯಿತು. ನನ್ನಷ್ಟೇ ನನ್ನ ಹೆಂಡತಿ ಮಕ್ಕಳೂ ಮುಖ್ಯ ಅಂತ ಅರ್ಥಮಾಡಿಕೊಂಡೆ. ಬರೀ ನನ್ನ ಬಗ್ಗೆ, ದೊಡ್ಡ ಫಾರ್ಮ್‌ ಕೊಂಡುಕೊಳ್ಳಬೇಕೆಂಬ ನನ್ನ ಆಸೆ ಬಗ್ಗೆ ಮಾತ್ರ ಯೋಚಿಸಬಾರದೆಂದು ಫಿಲಿಪ್ಪಿ 2:4ರಿಂದ ಕಲಿತೆ. ಇದರ ಬದಲು ನನ್ನ ಜೀವನದಲ್ಲಿ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಲು ಪ್ರಯತ್ನಿಸಿದೆ. ಸಿಗರೇಟ್‌ ಸೇದುವುದನ್ನೂ ನಿಲ್ಲಿಸಿಬಿಟ್ಟೆ. ಶನಿವಾರ ಎಲ್ಲ ಕೆಲಸ ಮುಗಿಸಿ 10 ಕಿ.ಮಿ. ದೂರದಲ್ಲಿ ಸಾಯಂಕಾಲ ನಡೆಯುತ್ತಿದ್ದ ಕೂಟಗಳಿಗೆ ಹೋಗುವುದು ಸುಲಭ ಆಗಿರಲಿಲ್ಲ. ಯಾಕೆಂದರೆ ಹೆಚ್ಚುಕಡಿಮೆ ಅದೇ ಸಮಯಕ್ಕೆ ಹಸುಗಳ ಹಾಲು ಕರೆಯಬೇಕಿತ್ತು. ಆದರೆ ಗ್ವೆನ್‌ ಸಹಕಾರದಿಂದ ನಾವು ಒಂದೂ ಕೂಟವನ್ನು ತಪ್ಪಿಸಲಿಲ್ಲ. ಅಷ್ಟುಮಾತ್ರವಲ್ಲ ಪ್ರತಿ ಭಾನುವಾರ ಬೆಳಗ್ಗೆ ಹಸುಗಳ ಹಾಲು ಕರೆದು ಮಕ್ಕಳೊಂದಿಗೆ ತಪ್ಪದೆ ಸೇವೆಗೆ ಸಹ ಹೋಗುತ್ತಿದ್ದೆವು.

ನಾವು ಮಾಡಿದ ಬದಲಾವಣೆಗಳನ್ನು ನಮ್ಮ ನೆಂಟರು ಇಷ್ಟಪಡಲಿಲ್ಲ. ಗ್ವೆನ್‍ಳ ಅಪ್ಪ ಅವಳೊಟ್ಟಿಗೆ ಆರು ವರ್ಷ ಮಾತಾಡಲಿಲ್ಲ. ನನ್ನ ಅಪ್ಪಅಮ್ಮ ಕೂಡ ಸಾಕ್ಷಿಗಳೊಂದಿಗಿನ ನಮ್ಮ ಸಹವಾಸ ನಿಲ್ಲಿಸಲು ಪ್ರಯತ್ನಿಸಿದರು.

ಗ್ವೆನ್‌: ಈ ಎಲ್ಲಾ ಸವಾಲುಗಳನ್ನು ಎದುರಿಸಲು ಯೆಹೋವನು ನಮಗೆ ಸಹಾಯ ಮಾಡಿದನು. ಸಮಯ ಕಳೆದಂತೆ ಆಸ್‌ವೆಸ್ಟ್ರಿ ಸಭೆಯಲ್ಲಿದ್ದ ಸಹೋದರ ಸಹೋದರಿಯರು ನಮ್ಮ ಹೊಸ ಕುಟುಂಬವಾದರು. ಕಷ್ಟದಲ್ಲಿದ್ದಾಗ ಪ್ರೀತಿಯ ಬೆಂಬಲ ಕೊಟ್ಟರು. (ಲೂಕ 18:29, 30) ನಾವಿಬ್ಬರು ಯೆಹೋವನಿಗೆ ಸಮರ್ಪಣೆ ಮಾಡಿಕೊಂಡು 1972ರಲ್ಲಿ ದೀಕ್ಷಾಸ್ನಾನ ಪಡೆದೆವು. ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸತ್ಯದ ಬಗ್ಗೆ ತಿಳಿಸಲು ತುಂಬ ಶ್ರಮಿಸಬೇಕೆಂಬ ಆಸೆ ನನ್ನಲ್ಲಿತ್ತು. ಆದ್ದರಿಂದ ಪಯನೀಯರ್‌ ಸೇವೆ ಶುರುಮಾಡಿದೆ.

ಹೆಚ್ಚು ತೃಪ್ತಿ ಕೊಡುವ ಹೊಸ ಉದ್ಯೋಗ

ಡೇವಿಡ್: ಫಾರ್ಮ್‌ನಲ್ಲಿ ಕೆಲಸಮಾಡುತ್ತಿದ್ದ ವರ್ಷಗಳಲ್ಲಿ ದೈಹಿಕ ಕೆಲಸ ತುಂಬ ಇರುತ್ತಿತ್ತು. ಆದರೂ ಯೆಹೋವನ ಆರಾಧನೆ ಮಾಡುವ ವಿಷಯದಲ್ಲಿ ನಮ್ಮ ಮಕ್ಕಳಿಗೆ ಒಳ್ಳೇ ಮಾದರಿ ಇಡಲು ಪ್ರಯತ್ನಿಸಿದೆವು. ಕಾಲಾನಂತರ ಸರ್ಕಾರದಿಂದ ಸಿಗುವ ಸಹಾಯ ಕಡಿಮೆಯಾದದ್ದರಿಂದ ಫಾರ್ಮ್‌ ಅನ್ನು ವಾಪಸ್ಸು ಕೊಟ್ಟೆವು. ನಮಗಾಗ ಮನೆ ಇರಲಿಲ್ಲ, ಕೆಲಸ ಇರಲಿಲ್ಲ. ನಮ್ಮ ಮೂರನೇ ಮಗಳಿಗೆ ಆಗಷ್ಟೇ ಒಂದು ವರ್ಷ ತುಂಬಿತ್ತು. ಯೆಹೋವನ ಸಹಾಯ ಮತ್ತು ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿದೆವು. ಕುಟುಂಬವನ್ನು ನೋಡಿಕೊಳ್ಳಲು ನಮಗಿದ್ದ ಪ್ರತಿಭೆಯನ್ನು ಬಳಸಲು ನಿರ್ಣಯಿಸಿದೆವು. ಅದಕ್ಕಾಗಿ ಒಂದು ಡ್ಯಾನ್ಸ್‌ ಶಾಲೆ ಆರಂಭಿಸಿದೆವು. ಯೆಹೋವನ ಆರಾಧನೆಗೆ ಮೊದಲ ಸ್ಥಾನ ಕೊಡಲು ನಾವು ಮಾಡಿದ್ದ ದೃಢ ನಿರ್ಧಾರ ಫಲಕೊಟ್ಟಿತು. ನಮ್ಮ ಮೂವರೂ ಹೆಣ್ಮಕ್ಕಳು ಶಾಲಾ ಶಿಕ್ಷಣ ಮುಗಿಸಿದ ಕೂಡಲೆ ಪಯನೀಯರ್‌ ಸೇವೆ ಶುರುಮಾಡಿದ್ದು ಸಂತೋಷದ ವಿಷಯ. ಗ್ವೆನ್‌ ಸಹ ಪಯನೀಯರ್‌ ಆಗಿದ್ದರಿಂದ ನಮ್ಮ ಮಕ್ಕಳಿಗೆ ಪ್ರತಿದಿನ ಬೆಂಬಲ ಕೊಡುತ್ತಿದ್ದಳು.

ನಮ್ಮ ಇಬ್ಬರು ಹಿರಿಯ ಹೆಣ್ಮಕ್ಕಳಾದ ಗಿಲಿ ಮತ್ತು ಡೆನೀಸ್‌ಗೆ ಮದುವೆಯಾದ ಮೇಲೆ ನಮ್ಮ ಡ್ಯಾನ್ಸ್‌ ಶಾಲೆಯನ್ನು ಮುಚ್ಚಿಬಿಟ್ಟೆವು. ನಮ್ಮ ಸಹಾಯ ಎಲ್ಲಿ ಬೇಕಾಗಿದೆ ಎಂದು ತಿಳಿಯಲು ಬ್ರಾಂಚ್‌ ಆಫೀಸಿಗೆ ಪತ್ರ ಬರೆದೆವು. ಇಂಗ್ಲೆಂಡಿನ ದಕ್ಷಿಣ-ಪೂರ್ವ ದಿಕ್ಕಿನಲ್ಲಿರುವ ಪಟ್ಟಣಗಳಲ್ಲಿ ಸೇವೆಮಾಡಲು ನಮಗೆ ತಿಳಿಸಿದರು. ಆಗ ನಮ್ಮ ಜೊತೆ ಕೊನೆ ಮಗಳು ಡೆಬಿ ಮಾತ್ರ ಇದ್ದದರಿಂದ ನಾನೂ ಪಯನೀಯರ್‌ ಸೇವೆ ಶುರುಮಾಡಿದೆ. ಐದು ವರ್ಷಗಳ ನಂತರ ನಮಗೆ ಉತ್ತರ ದಿಕ್ಕಿನತ್ತ ಇದ್ದ ಸಭೆಗಳಿಗೆ ಹೋಗಿ ಸಹಾಯ ಮಾಡುವಂತೆ ತಿಳಿಸಲಾಯಿತು. ಡೆಬಿಗೆ ಮದುವೆಯಾದ ಮೇಲೆ ನಮಗೆ ಜಿಂಬಾಬ್ವೆ, ಮಾಲ್ಡೋವ, ಹಂಗೇರಿ ಹಾಗೂ ಐವರಿ ಕೋಸ್ಟ್‌ನಂಥ ಸ್ಥಳಗಳಲ್ಲಿ ಹತ್ತು ವರ್ಷ ಅಂತಾರಾಷ್ಟ್ರೀಯ ಕಟ್ಟಡ ನಿರ್ಮಾಣ ಕೆಲಸ ಮಾಡುವ ಸುಯೋಗ ಸಿಕ್ಕಿತು. ಆಮೇಲೆ ಲಂಡನ್‌ ಬೆತೆಲ್‌ ನಿರ್ಮಾಣ ಕೆಲಸದಲ್ಲಿ ಸಹಾಯಮಾಡಲು ಇಂಗ್ಲೆಂಡಿಗೆ ವಾಪಸ್ಸು ಬಂದೆವು. ನನಗೆ ಫಾರ್ಮ್‌ ಕೆಲಸದಲ್ಲಿ ಅನುಭವ ಇದ್ದದರಿಂದ ಆಗ ಇದ್ದ ಬೆತೆಲ್‌ ಫಾರ್ಮ್‌ನಲ್ಲಿ ಸಹಾಯ ಮಾಡಲು ಕೇಳಿಕೊಂಡರು. ಸದ್ಯಕ್ಕೆ ನಾವು ಇಂಗ್ಲೆಂಡಿನ ಉತ್ತರ-ಪಶ್ಚಿಮ ಪ್ರದೇಶದಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ದೇವೆ.

ಅಂತಾರಾಷ್ಟ್ರೀಯ ಕಟ್ಟಡ ನಿರ್ಮಾಣ ಕೆಲಸದಲ್ಲಿ ನಾವು ತುಂಬ ಆನಂದಿಸಿದೆವು

ಗ್ವೆನ್‌: ನಾವು ಮೊದಲು ಬ್ಯಾಲೆ ಡ್ಯಾನ್ಸ್‌ಗಾಗಿ ನಮ್ಮನ್ನೇ ಸಮರ್ಪಿಸಿಕೊಂಡಿದ್ದೆವು. ಅದರಿಂದ ಖುಷಿ ಸಿಗುತ್ತಿತ್ತು ಆದರೆ ಅದು ಕ್ಷಣಿಕ. ನಂತರ ಯೆಹೋವನಿಗೆ ನಮ್ಮನ್ನೇ ಸಮರ್ಪಿಸಿಕೊಂಡೆವು. ಇದರಿಂದ ತುಂಬ ಖುಷಿ ಸಿಕ್ಕಿತು ಮತ್ತು ಇದು ಶಾಶ್ವತವಾದದ್ದು. ನಾವಿಬ್ಬರು ಇನ್ನೂ ಜೋಡಿಗಳೇ. ಡ್ಯಾನ್ಸ್‌ ಜೋಡಿಗಳಲ್ಲ ಬದಲಿಗೆ ಪಯನೀಯರ್‌ ಜೋಡಿ. ಜೀವರಕ್ಷಕ ಅಮೂಲ್ಯ ಸತ್ಯವನ್ನು ತಿಳಿದುಕೊಳ್ಳಲು ಬೇರೆಯವರಿಗೆ ಸಹಾಯಮಾಡುವುದು ಹೇಳಲಾಗದಷ್ಟು ಸಂತೋಷವನ್ನು ಕೊಟ್ಟಿದೆ. ಈ “ಶಿಫಾರಸ್ಸು ಪತ್ರಗಳು” ಲೋಕದಲ್ಲಿ ಹೆಸರು ಪಡೆಯುವುದಕ್ಕಿಂತ ಎಷ್ಟೋ ಶ್ರೇಷ್ಠ. (2 ಕೊರಿಂ. 3:1, 2) ನಮಗೆ ಸತ್ಯ ಸಿಕ್ಕಿರಲಿಲ್ಲ ಎಂದಿರುತ್ತಿದ್ದರೆ ಇವತ್ತು ನಮ್ಮ ಹತ್ತಿರ ಬರೀ ನಾವು ಮಾಡುತ್ತಿದ್ದ ಉದ್ಯೋಗದ ನೆನಪುಗಳು, ಹಳೇ ಫೋಟೋಗಳು ಮತ್ತು ರಂಗಮಂದಿರದ ಪ್ರೋಗ್ರಾಮ್‌ ಪಟ್ಟಿಗಳು ಮಾತ್ರ ಇರುತ್ತಿದ್ದವು.

ಡೇವಿಡ್: ಯೆಹೋವನ ಸೇವೆಯನ್ನು ಜೀವನದ ಉದ್ಯೋಗವನ್ನಾಗಿ ಮಾಡಿಕೊಂಡದ್ದು ನಮ್ಮ ಬದುಕನ್ನೇ ಬದಲಾಯಿಸಿದೆ. ಇದು ನಾನೊಬ್ಬ ಒಳ್ಳೇ ಗಂಡ ಹಾಗೂ ತಂದೆಯಾಗಿರಲು ಸಹಾಯ ಮಾಡಿದೆ. ಮಿರ್ಯಾಮಳು, ರಾಜ ದಾವೀದ ಹಾಗೂ ಇತರರು ತಮ್ಮ ಸಂತೋಷವನ್ನು ನರ್ತಿಸುವ ಮೂಲಕ ವ್ಯಕ್ತಪಡಿಸಿದರು ಅಂತ ಬೈಬಲ್‌ ಹೇಳುತ್ತದೆ. ಬೇರೆಯವರ ಹಾಗೇ ನಾವಿಬ್ಬರು ಸಹ ಇದೇ ರೀತಿ ಹೊಸ ಲೋಕದಲ್ಲಿ ಡ್ಯಾನ್ಸ್‌ ಮೂಲಕ ಸಂತೋಷ ವ್ಯಕ್ತಪಡಿಸಲು ಕಾತುರದಿಂದ ಕಾಯುತ್ತಾ ಇದ್ದೇವೆ.—ವಿಮೋ. 15:20; 2 ಸಮು. 6:14.